ಭಾನುವಾರ, ಡಿಸೆಂಬರ್ 21, 2014

ಪುರೋಹಿತಶಾಹಿಗಳಿಗೆ ಮರ್ಮಾಘಾತ ನೀಡುವ “ಘಾಶೀರಾಂ ಕೋತ್ವಾಲ್”:





ಎಪ್ಪತ್ತರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿ ದೇಶಾದ್ಯಂತ ಸುದ್ದಿಯಾದ ನಾಟಕ ಘಾಶೀರಾಂ ಕೋತ್ವಾಲ್. 1972 ರಲ್ಲಿ ವಿಜಯ ತೆಂಡೂಲ್ಕರ್ರವರು ಮರಾಠಿಯಲ್ಲಿ ನಾಟಕ ರಚಿಸಿದ್ದರು. 1973ರಲ್ಲಿ ಬಾಂಬೆಯ ಥೇಯಟರ್ ಅಕಾಡೆಮಿಯಿಂದ ಜಬ್ಬಾರ್ ಪಟೇಲ್ ನಿರ್ದೇಶನದಲ್ಲಿ 60 ಕಲಾವಿದರ ಕೋರಸ್ ಗುಂಪನ್ನು ಬಳಸಿಕೊಂಡು ಮೊದಲ ಬಾರಿಗೆ ನಾಟಕ ಪ್ರದರ್ಶನಗೊಂಡಾಗ ಕೋಲಾಹಲವನ್ನೇ ಸೃಷ್ಟಿಸಿತು. ನಾಟಕ ಬರೆದವರು ಬ್ರಾಹ್ಮಣರು ಹಾಗೂ ನಿರ್ದೇಶಕ ಮುಸ್ಲಿಂ ಆಗಿದ್ದರಿಂದ ಪುರೋಹಿತಶಾಹಿ ವರ್ಗಗಳ ಕೋಪಾಗ್ನಿಗೆ ತುಪ್ಪಸುರಿದಂತಾಗಿತ್ತು. ಹೀಗೊಂದು ನಾಟಕ ಶತಮಾನಗಳಿಂದ ಧರ್ಮದ ಹೆಸರಲ್ಲಿ ಮೋಜು ಮಾಡುತ್ತಾ ಬಂದಿರುವ ಶೋಷಕ ವರ್ಗವೊಂದನ್ನು ಕೆರಳಿಸುತ್ತದೆ ಎಂದರೆ... ರಾಜ್ಯಾದ್ಯಂತ ವಾದ ವಿವಾದಗಳನ್ನು ಸೃಷ್ಟಿಸುತ್ತದೆ ಎಂದರೆ.... ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಗೆ ದಿಗಿಲು ಹುಟ್ಟಿಸುತ್ತದೆ ಎಂದರೆ.... ನಾಟಕದ ಹೆಸರು ಕೇಳಿದರೆ ಈಗಲೂ ಮರಾಠಿ ಬ್ರಾಹ್ಮಣರು ಬೆಚ್ಚಿಬೀಳುತ್ತಾರೆಂದರೆ ಘಾಶೀರಾಂ ಕೋತ್ವಾಲ್ ನಾಟಕದಲ್ಲಿ ಅಂತಾದ್ದೇನಿರಬೇಕು.


ವೈದಿಕಶಾಹಿಗಳ ಸುಖಲೋಲುಪತೆಯನ್ನು, ಶ್ರೇಷ್ಠ ಕುಲದವರ ನೀಚತನಗಳನ್ನು, ಪೇಶ್ವೆಗಳ ಹೆಣ್ಣುಬಾಕತನ ಮತ್ತು ಕುತಂತ್ರಗಳನ್ನು, ಅಧಿಕಾರದಾಸೆಗೆ ಸ್ವಂತ ಮಗಳನ್ನೇ ತಲೆಹಿಡಿಯುವಂತಹ ಅವಕಾಶವಾದಿತನವನ್ನು, ಅಧಿಕಾರದ ಪಿತ್ತ ನೆತ್ತಿಗೇರಿದವರ ಸರ್ವಾಧಿಕಾರಿ ಕ್ರೌರ್ಯವನ್ನು ಘಾಶೀರಾಂ ಕೋತ್ವಾಲ್ ನಾಟಕ ಹಸಿಹಸಿಯಾಗಿ ರಂಗದಂಗಳದಲ್ಲಿ ಬಿಚ್ಚಿಡುತ್ತದೆ. ಪುಣೆ ನಗರದ ಪುರೋಹಿತಶಾಹಿಗಳು ಧರ್ಮಕ್ಕೂ ಭೋಗಕ್ಕೂ ಸಮಾನವಾದ ಅವಕಾಶವನ್ನು ಸೃಷ್ಟಿಸಿಕೊಂಡಿದ್ದರು. ಹಾರವರ ಹಲಾಲುಕೋರತನವನ್ನು ಅಧ್ಯಯನ ಮಾಡಿಯೇ ನಾಟಕವನ್ನು ತೆಂಡೂಲ್ಕರರು ರಚಿಸಿದರು. ಕಾಲದ ಬ್ರಾಹ್ಮಣರ ಹಾದರ, ಲಂಪಟತನ, ಹೊಟ್ಟೆಬಾಕತನ, ಅವಕಾಶವಾದಿತನ, ತಂತ್ರ-ಕುತಂತ್ರಗಳನ್ನೆಲ್ಲಾ ಘಾಶೀರಾಂ ಕೋತ್ವಾಲ್ ನಾಟಕದಲ್ಲಿ ಅನಾವರಣಗೊಳಿಸಿ ದ್ವಿಜರ ಜಾತಕವನ್ನು ಜಾಲಾಡಿದ್ದರಿಂದಲೇ ನಾಟಕ ಮಹಾರಾಷ್ಟ್ರದಲ್ಲಿ ತೀವ್ರ ವಿವಾದವನ್ನು ಹುಟ್ಟಿಹಾಕಿತ್ತು. ತೆಂಡೂಲ್ಕರರ ಪ್ರತಿಕೃತಿಯನ್ನು ಬೀದಿಬೀದಿಗಳಲ್ಲಿ ಸುಟ್ಟುಹಾಕಲಾಯಿತು. ರಂಗವೇದಿಕೆಗೆ ನುಗ್ಗಿ ನಾಟಕವನ್ನು ನಿಲ್ಲಿಸಲಾಯಿತು. ಬಾಳಾಠಾಕ್ರೆ ಎಂಬ ಉಗ್ರ ಹಿಂದೂವಾದಿ ನಾಯಕನ ನೇತೃತ್ವದಲ್ಲಿ ನಾಟಕಕಾರನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಹರಣ ಮಾಡುವ ಪ್ರಯತ್ನಗಳು ನಡೆದವು. ಕೊನೆಗೆ ಸರಕಾರ ನಾಟಕ ಪ್ರದರ್ಶನವನ್ನೇ ಬ್ಯಾನ್ ಮಾಡಿಬಿಟ್ಟಿತು. ನಾಟಕದ ಘಾಶೀರಾಂ ಪಾತ್ರದ ಸರ್ವಾಧಿಕಾರಿತನವನ್ನು ಇಂದಿರಾಗಾಂಧಿಯ ಎಮರ್ಜನ್ಸಿಯ ಸರ್ವಾಧಿಕಾರಕ್ಕೆ ಹೋಲಿಸಿಕೊಂಡ ಕಾಂಗ್ರೆಸ್ಸಿಗರು ನಾಟಕದ ವಿರುದ್ಧ ದೂರು ನೀಡಿದ್ದರು. ನಾಟಕದ ಕುರಿತು ವರದಿ ನೀಡಲು ಡಿಸಿ ಗೆ ಇಂದಿರಾಗಾಂಧಿ ಆದೇಶಿಸಿದ್ದರು. ಆದರೆ ಕೋಮುವಾದಿಗಳ ಹಾಗೂ ಆಳುವ ವರ್ಗಗಳ ವಿರೋಧವನ್ನು ದೈರ್ಯವಾಗಿ ಎದುರಿಸಿ ನಿಂತು ನಾಟಕ ಪ್ರದರ್ಶನ ಮುಂದುವರೆಸಿದ ಕೀರ್ತಿ ವಿಜಯ್ ತೆಂಡೂಲ್ಕರ್ ಮತ್ತು ಜಬ್ಬಾರ್ ಪಟೇಲ್ರವರಿಗೆ ಸಲ್ಲಬೇಕು.

1976ರಲ್ಲಿ ಘಾಶೀರಾಂ ಕೋತ್ವಾಲ್ ನಾಟಕ ಪ್ರದರ್ಶಿಸಲು ಜರ್ಮನಿಯಿಂದ ಆಹ್ವಾನ ಬಂದಿತ್ತು. ಜಬ್ಬಾರ್ ಪಟೇಲ್ ನಾಟಕದ ಸಿದ್ದತೆ ಮಾಡಿಕೊಂಡಿದ್ದರು. ಮತ್ತೊಮ್ಮೆ ಮಹಾರಾಷ್ಟ್ರದಾದ್ಯಂತ ಪ್ರತಿರೋಧ ಹುಟ್ಟುಹಾಕಲಾಯಿತು. ಮರಾಠಿ ಸಂಸ್ಕೃತಿಯನ್ನು ವಿಕೃತ ಗೊಳಿಸಲಾಗಿದೆ. ಮರಾಠಿಗರು ಹೆಮ್ಮೆ ಪಡುವ ಪೇಶ್ವೇಗಳನ್ನು ಲಂಪಟರನ್ನಾಗಿ ತೋರಿಸಲಾಗಿದೆ. ಹೊರದೇಶದವರು ಮರಾಠಿಗರ ಬಗ್ಗೆ ಕೆಟ್ಟದಾಗಿ ತಿಳಿಯುವ ಸಾಧ್ಯತೆ ಇದೆ.. ಎಂದೆಲ್ಲಾ ಆರೋಪಿಸಿ ಮರಾಠಿ ರಂಗಭೂಮಿಯ ದಿಗ್ಗಜರಾದ ಕಮಲಾಕರ ಸಆರಂಗ್, ಲಲನ್ ಸಾರಂಗ್, ಮಧುಕರ ತೋರಂಗ್, ಪ್ರಭಾಕರ್ ಘನಸೇಕರ್... ಮುಂತಾದವರು ಹಾಗೂ ಶಿವಸೇನೆಯವರು ತೀವ್ರವಾಗಿ ವಿರೋಧಿಸಿದರು. ಆದರೂ ತೆಂಡೂಲ್ಕರ್ ಹಾಗೂ ರಂಗತಂಡದವರು ದೃತಿಗೆಡಲಿಲ್ಲ. ಅಂತರಾಷ್ಟ್ರೀಯ ಆಹ್ವಾನವಾಗಿದ್ದರಿಂದ ಕೇಂದ್ರ ಸರಕಾರವೂ ಏನೂ ಮಾಡುವ ಹಾಗಿರಲಿಲ್ಲವಾದ್ದರಿಂದ ಅನುಮತಿ ದೊರೆಯಿತು. ವಿದೇಶದಲ್ಲಿ ಪ್ರದರ್ಶನವಾದಲ್ಲೆಲ್ಲಾ ಘಾಶೀರಾಂ ಕೋತ್ವಾಲ್ ನಾಟಕ ಯಶಸ್ವಿಯಾಯಿತು. ವಿರೋಧಿಗಳ ಆಕ್ರೋಶವೂ ತಣ್ಣಗಾಯಿತು. ವಿಜಯ್ ತೆಂಡೂಲ್ಕರರಿಗೆ ನಾಟಕದಿಂದ ಸಾಕಷ್ಟು ಪ್ರಸಿದ್ದಿಯೂ ದೊರೆಯಿತು. 1983ರಲ್ಲಿ ನಾಟಕವನ್ನು ಭೂಪಾಲಿನ ರಂಗಮಂಡಲಕ್ಕೆ ಬಿ.ವಿ.ಕಾರಂತರು ಹಿಂದಿ ಭಾಷೆಯಲ್ಲಿ ನಿರ್ದೇಶಿಸದ್ದರು. ಸಂಗೀತ ಮತ್ತು ಹಾಡುಗಳು ಅವರ ನಾಟಕದಲ್ಲಿ ವಿಜ್ರಂಭಿಸಿ ಅತ್ಯುತ್ತಮ ರಂಗಪ್ರಯೋಗವೆನಿಸಿಕೊಂಡಿತ್ತು.


  
ಘಾಶೀರಾಂ ಕೋತ್ವಾಲ್ ನಾಟಕವನ್ನು ಮುದೇನೂರು ಸಂಗಣ್ಣನವರು ಉತ್ತರ ಕರ್ನಾಟಕದ ಭಾಷಾ ಶೈಲಿಯಲ್ಲಿ ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದರು. ಕರ್ನಾಟಕದ ಹಲವಾರು ತಂಡಗಳು ನಾಟಕವನ್ನು ಪ್ರದರ್ಶಿಸಿದ್ದವು. ಪ್ರಮೋದ್ ಶಿಗ್ಗಾಂವರವರು ತುಮರಿಯ ಕಿನ್ನರ ಮೇಳ ರೆಪರ್ಟರಿಗೆ 2001ರಲ್ಲಿ ನಾಟಕವನ್ನು ನಿರ್ದೇಶಿಸಿದ್ದು ರಾಜ್ಯಾದ್ಯಂತ ಹಲವಾರು ಪ್ರಯೋಗಗಳಾಗಿದ್ದವು. ಕೃಷ್ಣಮೂರ್ತಿ ಕವತ್ತಾರರು ಬೆಳಗಾವಿಯ ರಂಗಸಂಪದ ತಂಡಕ್ಕೆ ನಾಟಕವನ್ನು ೨೦೦೩ರಲ್ಲಿ ನಿರ್ದೇಶಿಸಿದ್ದು ೨೫ಕ್ಕೂ ಹೆಚ್ಚು ಪ್ರದರ್ಶನಗಳಾದವು. ಬಿ.ಜಯಶ್ರೀರವರು  ತಮ್ಮ ಸ್ಪಂದನ ರಂಗತಂಡಕ್ಕೆ ನಾಟಕವನ್ನು ನಿರ್ದೇಶಿಸಿ ಪ್ರದರ್ಶಿಸಿದ್ದಾರೆ. ಬಹುದಿನಗಳ ನಂತರ ಈಗ ಬೆಂಗಳೂರಿನ ಸಮನ್ವಯ ರಂಗತಂಡವು ಮೈಕೋ ಶಿವಶಂಕರ್ರವರ ನಿರ್ದೇಶನದಲ್ಲಿ ವೆಂ.ಮು.ಜ್ಯೋಷಿರವರು ಕನ್ನಡಕ್ಕೆ ಅನುವಾದಿಸಿದ ಘಾಶೀರಾಂ ಕೋತ್ವಾಲ್ ನಾಟಕವನ್ನು ಸಿದ್ದಗೊಳಿಸಿದೆ. ನಾಟಕ ಬೆಂಗಳೂರು ಆಯೋಜಿಸಿದ ರಂಗೋತ್ಸವದಲ್ಲಿ 2014 ಡಿಸೆಂಬರ್ 15ರಂದು ಕಲಾಗ್ರಾಮದ ಕಲಾಭವನದಲ್ಲಿ  ಘಾಶೀರಾಂ ಕೋತ್ವಾಲ್ ನಾಟಕವು ಪ್ರದರ್ಶನಗೊಂಡು ನೋಡುಗರಲ್ಲಿ ಸಂಚಲನವನ್ನು ಸೃಷ್ಟಿಸಿತು.

ಘಾಶೀರಾಂ ಕೋತ್ವಾಲ್ ನಾಟಕದ ಸಂಕ್ಷಿಪ್ತ ಕಥೆ ಹೀಗಿದೆ. ಕನೌಜದಿಂದ ಪೂಣಾಕ್ಕೆ ಬದುಕು ಹುಡುಕಿಕೊಂಡು ಬಂದ ಬಡ ಬ್ರಾಹ್ಮಣ ಘಾಶೀರಾಂ ಬ್ರಾಹ್ಮಣರಿಂದಲೇ ಕಳ್ಳತನದ ಆರೋಪಕ್ಕೆ ಒಳಗಾಗಿ ಸಿಪಾಯಿಗಳಿಂದ ಹಲ್ಲೆಗೊಳಗಾಗಿ ಅವಮಾನಿತನಾಗುತ್ತಾನೆ. ಪ್ರತೀಕಾರ ತೀರಿಸಿಕೊಳ್ಳುವ ಛಲದಿಂದ ಪೇಶ್ವೆಯ ಪ್ರಧಾನಿ ನಾನಾ ಘಾಡನೀಸ್ಗೆ ಸ್ವಂತ ಮಗಳನ್ನೇ ಒಪ್ಪಿಸಿದ ಘಾಶೀರಾಂ ಪೂಣೆ ಪಟ್ಟಣದ ಕೋತ್ವಾಲನಾಗುತ್ತಾನೆ. ನಗರದಾದ್ಯಂತ ವಿಜ್ರಂಭಿಸುತ್ತಿದ್ದ ವಿಲಾಸಿ ಬ್ರಾಹ್ಮಣರ ಅಟ್ಟಹಾಸವನ್ನು ಮಟ್ಟಹಾಕಿ, ಹಾದರ, ಕಳ್ಳತನಗಳನ್ನೆಲ್ಲಾ ನಿರ್ಭಂಧಿಸಿ, ಕಾನೂನು ಭಂಜಕರನ್ನು ಶಿಕ್ಷಿಸುತ್ತಾ ಸರ್ವಾಧಿಕಾರಿಯೆನಿಸಿಕೊಂಡು ಮೆರೆಯುತ್ತಾನೆ. ಘಾಶೀರಾಂನ ಮಗಳು ಗೌರಿಗೆ ನಾನಾಸಾಹೇಬ್ ಗರ್ಭಪಾತ ಮಾಡಿಸುವಾಗ ಆಕೆ ಸಾಯುತ್ತಾಳೆ. ಆಗ ನಾನಾನ ವಿರುದ್ದ ಘಾಶೀರಾಂ ತಿರುಗಿ ಬಿಳುತ್ತಾನಾದರೂ ಅಧಿಕಾರದ ಆಸೆಗೋ, ನಾನಾನ ಕರ್ಮಸಿದ್ದಾಂತದ ಮಾತಿಗೋ ಮರುಳಾಗಿ ಕೋಪ ನುಂಗಿಕೊಂಡು ತನ್ನೆಲ್ಲಾ ಸಿಟ್ಟನ್ನು ಜನರ ಮೇಲೆ ಕ್ರೌರ್ಯವೆಸಗುವ ಮೂಲಕ ತೀರಿಸಿಕೊಳ್ಳುತ್ತಾನೆ. ಪೂಣೆ ನಗರ ಥರಗುಟ್ಟಿ ಹೋಗುತ್ತದೆ. ಬ್ರಾಹ್ಮಣರೆಲ್ಲಾ ಸೇರಿ ಪ್ರಧಾನಿ ನಾನಾನಿಗೆ ದೂರುಸಲ್ಲಿಸುತ್ತಾರೆ. ಜನ ಪ್ರತಿಭಟನೆಗಿಳಿಯುತ್ತಾರೆ. ಇದೇ ಸಂದರ್ಭಕ್ಕೆ ಕಾಯುತ್ತಿದ್ದ ಪ್ರಧಾನಿಯು ಘಾಶೀರಾಂನನ್ನು ಸಾರ್ವಜನಿಕವಾಗಿ ಹಿಂಸಿಸಿ ಕೊಲ್ಲಲು ಬ್ರಾಹ್ಮಣರಿಗೆ ಆಜ್ಞಾಪಿಸುತ್ತಾನೆ. ಹೀಗೆ ಸರ್ವಾಧಿಕಾರಿಯೊಬ್ಬನ ಅಂತ್ಯವಾಗುತ್ತದೆ.



ಹೊಟ್ಟೆ ಹಸಿವು ಕಳ್ಳರನ್ನು ಸುಳ್ಳರನ್ನು ಸೃಷ್ಟಿಸಿದರೆ, ಅವಮಾನವೆನ್ನುವುದು ಮನುಷ್ಯನನ್ನು ರಾಕ್ಷಸನನ್ನಾಗಿಸುತ್ತದೆ... ಎಂದು  ನಾಟಕದ ಸೂತ್ರದಾರ ಹೇಳುತ್ತಾನೆ. ಇದನ್ನು ಘಾಶೀರಾಂ ಪಾತ್ರ ಸಾಬೀತುಪಡಿಸುತ್ತದೆ. ಆತ ತನಗಾದ ಅವಮಾನದ ಸೇಡನ್ನು ಕ್ರೌರ್ಯದ ಮೂಲಕ ತೀರಿಸಿಕೊಳ್ಳುತ್ತಾನೆ. ಸೇಡಿನ ಮನೋಭಾವವೆನ್ನುವುದು ವ್ಯಕ್ತಿಯೊಳಗಿನ ವಿಕಾರತೆಗೆ ಪ್ರತಿರೂಪವಾಗಿ ಘಾಶೀರಾಂ ನಾಟಕದಲ್ಲಿ ಚಿತ್ರಿತನಾಗಿದ್ದಾನೆ. ಘಾಶೀರಾಂನಂತಹ ವಿವೇಕ ಕಳೆದುಕೊಂಡವರು ಆಳುವ ವ್ಯವಸ್ಥೆಗೆ ಅದು ಹೇಗೆ ಬಳಕೆಯಾಗಿ ನಾಶಹೊಂದುತ್ತಾರೆ ಎಂಬುದನ್ನು ನಾಟಕ ಹೇಳುತ್ತದೆ. ಇಲ್ಲಿ ಘಾಶೀರಾಂ ಕೇವಲ ಒಂದು ಪರಿಕರವಾಗಿ ಉಪಯೋಗಿಸಲ್ಪಟ್ಟಿದ್ದಾನೆ. ತನ್ನ ಹಿತಾಸಕ್ತಿಗಾಗಿ ಮನುಷ್ಯರೊಳಗಿನ ಅಸಹನೆಯನ್ನು ಬಳಸಿಕೊಂಡು ಅವರನ್ನು ಬೆಳೆಸುವುದು, ಅಸ್ತ್ರ ಅಧಿಕಾರವನ್ನು ಕೊಟ್ಟು ಸರ್ವಾಧಿಕಾರಿಯನ್ನಾಗಿಸುವುದು, ಕೊನೆಗೆ ಆತನಿಂದ ಅಪಾಯವಿದೆಯೆಂದಾಗ ಕುತಂತ್ರದಿಂದ ವಿನಾಶಗೊಳಿಸುವುದು ಪ್ರಭುತ್ವದ ರಾಜಕೀಯ ತಂತ್ರವಾಗಿದೆ. ಅಮೇರಿಕವು ತಾಲಿಬಾನಿಗಳಿಗೆ ಸಹಾಯ ಮಾಡಿ ಬೆಳೆಸಿ ನಂತರ ಅವರನ್ನು ನಾಶಗೊಳಿಸಿದ್ದು. ಇಂದಿರಾಗಾಂಧಿ ಪಂಜಾಬಿನಲ್ಲಿ ಬಿಂದ್ರನ್ ವಾಲೆನನ್ನು ಬೆಳೆಸಿ ಬಳಸಿ ಕೊನೆಗೆ ಬ್ಲೂಸ್ಟಾರ್ ಆಪರೇಶನಲ್ಲಿ ಕೊಂದ ರೀತಿಯಲ್ಲಿಯೇ ನಾಟಕದಲ್ಲಿ ನಾನಾ ಘಾಡನೀಸ್ ಸಹ ತನ್ನ ತೆವಲಿಗೆ ಘಾಶೀರಾಂನ ಮಗಳನ್ನು ಬಳಸಿಕೊಂಡು ಆತನ ಮೂಲಕ ವೈದಿಕರ ಅಟ್ಟಹಾಸವನ್ನು ಮಟ್ಟಹಾಕುತ್ತಾನೆ. ತನ್ನ ಕೆಲಸವಾದ ನಂತರ ವಿರೋಧಿಸಿದ ಘಾಶೀರಾಂನನ್ನು ಕೊಲ್ಲಿಸುತ್ತಾನೆ. ನಾಟಕವು ಪರೋಕ್ಷವಾಗಿ ಪ್ರಭುತ್ವದ ಕುತಂತ್ರಗಳನ್ನು ಬೆತ್ತಲಾಗಿಸುವಲ್ಲಿ ಯಶಸ್ವಿಯಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ನಾಟಕದ ಕೇಂದ್ರವಾಗಿರುವುದು ಅಧಿಕಾರದಾಹ. ಅಧಿಕಾರವನ್ನು ಪಡೆಯಲು ಹಾಗೂ ಅದನ್ನು ಕಾಪಾಡಿಕೊಳ್ಳಲು ಏನೆಲ್ಲಾ ಮಾಡಬೇಕಾಗುತ್ತದೆ ಎಂಬುದರ ಪ್ರಾತ್ಯಕ್ಷಿಕತೆಯೇ ನಾಟಕ. ಕೋತ್ವಾಲನ ಅಧಿಕಾರ ಪಡೆಯಲಿಕ್ಕೆ ತನ್ನ ಸ್ವಂತ ಮಗಳನ್ನೇ ತಲೆಹಿಡಿಯುವ ಘಾಶೀರಾಂ ತನ್ನ ಅಧಿಕಾರವನ್ನು ಖಾಯಂಗೊಳಿಸಿಕೊಳ್ಳಲು ಕ್ರೂರಿಯಾಗುತ್ತಾನೆ. ಅಧಿಕಾರಕ್ಕಾಗಿ ತನ್ನ ಮಗಳ ಹತ್ಯೆಮಾಡಿದವನೊಡನೇ ರಾಜಿಯಾಗುತ್ತಾನೆ. ಪ್ರಧಾನಿ ನಾನಾ ತನ್ನ ಅಧಿಕಾರ ಉಳಿಸಿಕೊಳ್ಳಲು ತಾನೇ ಬೆಳೆಸಿದ ಘಾಶೀರಾಂನ ಹತ್ಯೆ ಮಾಡಿಸುತ್ತಾನೆ. ಅಧಿಕಾರ ದಾಹದ ಮೇಲಾಟದಲ್ಲಿ ಅಮಾಯಕ ಜನತೆ ಹಿಂಸೆಗೆ ಬಲಿಯಾಗುತ್ತಾರೆ. ತಂತ್ರ ಕುತಂತ್ರ ಪ್ರತಿತಂತ್ರಗಳ ಒಟ್ಟಾರೆ ಮೊತ್ತವೇ ಅಧಿಕಾರವೆಂಬಂತಾಗಿ ಅಸಮಾನ ವ್ಯವಸ್ಥೆಯಲ್ಲಿ ಅಧಿಕಾರ ಸಿಕ್ಕವರೆಲ್ಲಾ ತಮ್ಮ ವ್ಯಪ್ತಿಯ ಒಳಗೆ ಸರ್ವಾಧಿಕಾರಿಯಂತೆಯೇ ವರ್ತಿಸುತ್ತಿರುವುದು ಮನುಷ್ಯನೊಳಗಿನ ಅಮಾನವೀಯ ಸ್ವಭಾವವಾಗಿದೆ. ಸೂಕ್ಷ್ಮವಾಗಿ ಅವಲೋಕಿಸಿದಾಗಿ ನಾನಾ-ಘಾಶೀರಾಂ- ಹಾರವರು ಹೀಗೆ ಎಲ್ಲರೂ ಪ್ರತಿ ವ್ಯಕ್ತಿಯಲ್ಲಿ ಅಡಗಿದ್ದಾರೆ. ಅವಕಾಶ ಸಿಕ್ಕರೆ, ನೈತಿಕತೆ ಮರೆತರೆ, ಮಾನವೀಯತೆಗೆ ತಿಲಾಂಜಲಿ ಇಟ್ಟರೆ ಇವರೆಲ್ಲಾ ಒಬ್ಬೊಬ್ಬರಾಗಿ ವ್ಯಕ್ತಿಯೊಳಗೆ ಅವತರಿಸುತ್ತಾರೆ. ಸರ್ವಾಧಿಕಾರಿ ಸೃಷ್ಟಿಯಾಗೋದೇ ಹೀಗೆ. ಇಂತಹ ಅನೇಕ ವಿಚಾರಗಳನ್ನು, ಮನಃಶಾಸ್ತ್ರದ ಹಲವಾರು ಆಯಾಮಗಳನ್ನು ತನ್ನೊಡಲಲ್ಲಿಟ್ಟುಕೊಂಡು ಪ್ರೇಕ್ಷಕರನ್ನು ಕಾಡುವಲ್ಲಿ ಘಾಶೀರಾಂ ಕೋತ್ವಾಲ್ ನಾಟಕ ಯಶಸ್ವಿಯಾಗಿದೆ.



ಘಾಶೀರಾಂ ಕೋತ್ವಾಲ್ ಬ್ರಾಹ್ಮಣರಿಂದ ಕಳ್ಳತನದ ಆರೋಪ ಹೊತ್ತು ಅವಮಾನಿತನಾದ ಘಾಶೀರಾಂ ಪಣತೊಟ್ಟು ಕೋತ್ವಾಲನಾಗಿ ತನ್ನ ಅವಮಾನಕ್ಕೆ ವೈದಿಕರ ವಿರುದ್ದ ಸೇಡು ತೀರಿಸಿಕೊಳ್ಳುತ್ತಾನೆ. ಆದರೆ ಬ್ರಾಹ್ಮಣರಿಗಿಂತ ಮೊದಲು ಘಾಶೀರಾಂನನ್ನು ಅವಮಾನಿಸಿ ಮನೆಯಿಂದ ಹೊರಗಟ್ಟಿದ್ದು ನೃತ್ಯಗಾತಿ ಗುಲಾಬಿ. ಆದರೆ ನಾಟಕದಲ್ಲೆಲ್ಲೂ ಆಮೇಲೆ ಗುಲಾಬಿಯ ಪ್ರಸ್ತಾಪವೇ ಬರುವುದಿಲ್ಲ. ಹಾಗೂ ಘಾಶೀರಾಂ ಅವಳ ತಂಟೆಗೆ ಹೋಗುವುದಿಲ್ಲ. ತಾರತಮ್ಯವನ್ನು ಗಮನಿಸಿದರೆ ಬ್ರಾಹ್ಮಣರನ್ನು ಟಾರ್ಗೆಟ್ ಮಾಡುವುದೇ ನಾಟಕದ ಉದ್ದೇಶವಾದಂತಿದೆ. ಇದಕ್ಕೆ ಪೂರಕವೆಂಬಂತೆ ನಾಟಕದಲ್ಲಿ ಪ್ರಧಾನಿ ಎಸೆಯುವ ಚಿಲ್ಲರೆ ಕಾಸುಗಳನ್ನು ಬಿಕ್ಷುಕರಂತೆ ಮುಗಿಬಿದ್ದು ಆಯ್ದುಕೊಳ್ಳುವಂತೆ ಬ್ರಾಹ್ಮಣರನ್ನು ಚಿತ್ರಿಸಿದ್ದು ಅತಿರೇಕವೆನಿಸುವಂತಿದೆ. ನಾಟಕದ ವಿಚಿತ್ರ ಜಾತಿ ಸಮೀಕರಣ ಸಹ ಹಾಗೇ ಇದೆ. ಘಾಶೀರಾಂ ಕೋತ್ವಾಲ್ ನಾಟಕ ಬರೆದವರು ಬ್ರಾಹ್ಮಣರಾದ ವಿಜಯ್ ತೆಂಡೂಲ್ಕರ್, ನಾಟಕದ ನಾಯಕ ಕಮ್ ಖಳನಾಯಕ ಘಾಶೀರಾಂ ಸಹ ಬ್ರಾಹ್ಮಣ, ಘಾಶೀರಾಂ ತನ್ನ ಕ್ರೌರ್ಯವನ್ನು ಮೆರೆಯುವುದೂ ಸಹ ಬ್ರಾಹ್ಮಣ ಸಮುದಾಯದ ಮೇಲೆಯೇ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕೃಷ್ಣಮೂರ್ತಿ ಕವತ್ತಾರರು ನಾಟಕವನ್ನು ಬೆಳಗಾವಿಯ ರಂಗಸಂಪದ ತಂಡಕ್ಕೆ ನಿರ್ದೇಶಿಸಿದ್ದಾಗ ನಾಟಕ ನೋಡಿದ ಕೆಲವರು ಬ್ರಾಹ್ಮಣನೇ ಬ್ರಾಹ್ಮಣನನ್ನು ಕೊಂದ ಎಂದು ಆಡಿಕೊಂಡರಂತೆ. ಪ್ರಸ್ತುತ ನಾಟಕವನ್ನು ಅನುವಾದಿಸಿದ್ದೂ ಸಹ ಬ್ರಾಹ್ಮಣರೇ ಆಗಿದ್ದಾರೆ. ಯಾರೇ ಏನೇ ಬರೆಯಲಿ, ನಾಟಕ ಮಾಡಲಿ... ಆದರೆ ವೈದಿಕ ವರ್ಗ ಮಾಡುವ ಶೋಷಣೆಯ ಆಯಾಮಗಳನ್ನು ಅನಾವರಣಗೊಳಿಸುವಲ್ಲಿ  ನಾಟಕ ಯಶಸ್ವಿಯಾಗಿದೆ.
     
ನಾಟಕವನ್ನು ಮೈಕೋ ಶಿವಶಂಕರ್ ಸೊಗಸಾಗಿ ಹಾಗೂ ರಂಗಪಠ್ಯ ನಿಷ್ಠರಾಗಿ ದೃಶ್ಯರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಇಡೀ ನಾಟಕ ಒಂದಿಷ್ಟೂ ಬೋರ್ ಹೊಡಿಸದೇ ನೋಡಿಸಿಕೊಂಡು ಹೋಗುತ್ತದೆ. ಗುಂಪು ಬಳಕೆಯನ್ನು ಸಮರ್ಥವಾಗಿ ನಿರ್ವಹಿಸಲಾಗಿದ್ದು, ಗುಂಪನ್ನೇ ಪಾತ್ರಗಳಾಗಿ ಹಾಗೂ ಪ್ರಾಪರ್ಟಿಗಳಾಗಿ ಉಪಯೋಗಿಸಿದ್ದು ಹಾಗೂ ಸೂತ್ರದಾರನನ್ನು ನಿರೂಪಕನನ್ನಾಗಿಯೂ ಹಾಗೂ ಪಾತ್ರಧಾರಿಯಾಗಿಯೂ ಬಳಸಿದ ರಂಗತಂತ್ರ ನಾಟಕದಲ್ಲಿ ಚೆನ್ನಾಗಿ ವರ್ಕಔಟ್ ಆಗಿದೆ. ವ್ಯಕ್ತಿಗಳನ್ನು ಪಾತ್ರವಾಗಿಸುವಲ್ಲಿ ನಿರ್ದೇಶಕನ ಶ್ರಮ ಸಾರ್ಥಕವಾಗಿದೆ. ನಾನಾ ಘಡ್ನವೀಸ್ ಪಾತ್ರದಲ್ಲಿ ಸೋಮಶೇಖರ್ ಹಾಗೂ ಘಾಶೀರಾಂ ಪಾತ್ರದ ದಿನೇಶ್ ಇಬ್ಬರೂ ಪೈಪೋಟಿಗೆ ಬಿದ್ದಂತೆ ಸೊಗಸಾಗಿ ನಟಿಸಿದ್ದಾರೆ. ಸೂತ್ರದಾರನಾಗಿ ದತ್ತಾತ್ರೇಯ ಇನ್ನೂ ಮಾತಿನಲ್ಲಿ ಪೋರ್ಸನ್ನು ಬೆಳೆಸಿಕೊಳ್ಳಬೇಕಿದೆ. ಗುಲಾಬಿ ಪಾತ್ರದ ಸಿತಾರಾ ರವರ ನೃತ್ಯವನ್ನು ನೋಡುವುದೇ ಒಂದು ಚಂದ.



ಹಾಡು ಮತ್ತು ಸಂಗೀತ ನಾಟಕದ ಆಕರ್ಷಣೆಯನ್ನು ಹೆಚ್ಚಿಸಿವೆ. ಹಾಡುಗಳಲ್ಲಿರುವ ವೈವಿದ್ಯತೆ ಕೇಳುಗರನ್ನು ಮುದಗೊಳಿಸುತ್ತದೆ. ಆದರೆ ವೇಶ್ಯೆಯೊಬ್ಬಳು ವಿಟಪುರುಷರ ನಡುವೆ ಮಾದಕ ನೃತ್ಯ ಮಾಡುವಾಗ ಸಖಿ ಮುರಳಿದರನೆಲ್ಲೆ... ಎಂದು ಕೃಷ್ಣನ ಕುರಿತು ಹೇಳುವಂತಹ ಹಾಡು ಸಂದರ್ಭಕ್ಕೆ ಸೂಕ್ತವೆನ್ನಿಸುವಂತಿಲ್ಲ. ಕೊಟ್ಟ ಕೊನೆಗೆ ಬಳಸಿದ ಕಬೀರದಾಸರ ಹಾರಿಹೋಗಿದೆ ಹಂಸ... ಹಾಡು  ಸಾವಿನ ಸಂದರ್ಭದಲ್ಲಿ ಸೂಕ್ತವಾಗಿದೆ. ರಾಮಚಂದ್ರ ಹಡಪದರವರ ಸಂಗೀತ ಸಂಯೋಜನೆ ಮತ್ತು ಹಾಡುಗಾರಿಕೆ ಅದ್ಬುತವಾಗಿ ಮೂಡಿಬಂದಿದೆ. ಆದರೆ... ಹಾಡುಗಳನ್ನು ಮೊದಲೇ ರಿಕಾರ್ಡ ಮಾಡಿದ್ದು ಅವುಗಳನ್ನು ನಿರ್ವಹಿಸುವಾಗಿ ಕೆಲವೊಮ್ಮೆ ಸರಿಯಾಗಿ ಸಿಂಕ್ ಆಗದೇ ಆಭಾಸ ಉಂಟಾಯಿತು. ಭಾವನಾತ್ಮಕ ದೃಶ್ಯಗಳಲ್ಲಿ ಆಲಾಪಗಳು ಮೂಡ್ ಸೃಷ್ಟಿಸುವಲ್ಲಿ ಸಹಕಾರಿಯಾಗಿವೆ. ಮಹದೇವಸ್ವಾಮಿಯವರ ಬೆಳಕು ವಿನ್ಯಾಸ ಅದ್ಯಾಕೋ ಆಗಾಗ ಅಸಮರ್ಪಕವಾಗಿ ದೃಶ್ಯಗಳನ್ನು ಬೆಳಗಿದೆ. ಕೆಲವೊಮ್ಮೆ ಲೈಟ್ ಏರಿಯಾವನ್ನು ಸರಿಯಾಗಿ ಬಳಸದೇ ಕಲಾವಿದರು ನೆರಳಲ್ಲಿ ನಿಂತಿರುವುದು ಸರಿಎನ್ನಿಸಲಿಲ್ಲ. ಕಲಾವಿದರಿಗೆ ಲೈಟಿಂಗ್ ರಿಹರ್ಸಲ್ ಕೊರತೆ ಇದ್ದಂತಿತ್ತು. ದೃಶ್ಯದ ಮೂಡಿಗೆ ತಕ್ಕಂತೆ ಸೈಕ್ ಪರದೆಯ ಬಳಕೆ ಮಾಡಿದ್ದರೆ ನಾಟಕ ಇನ್ನೂ ಚೆನ್ನಾಗಿ ಮೂಡಿ ಬರಬಹುದಾಗಿತ್ತು.

ನಾಟಕದಲ್ಲಿ ರಾಮಕೃಷ್ಣ ಬೆಳ್ತೂರರ ಕೈಚಳಕದಲ್ಲಿ ಎಲ್ಲಾ ಪಾತ್ರಗಳ ಕಾಸ್ಟೂಮ್ಸ್ ಮತ್ತು ಪ್ರಸಾದನ ತುಂಬಾ ರಿಚ್ ಆಗಿ ಮೂಡಿಬಂದಿವೆ. ಒಂದೇ ರೀತಿಯ ಕಾಸ್ಟೂಮನ್ನು ಗುಂಪಿನಲ್ಲಿರುವವರಿಗೆಲ್ಲಾ ಹಾಕಿಸಲಾಗಿದ್ದು ಏಕತಾನತೆಯನ್ನುಂಟು ಮಾಡುವಂತಿದೆ. ಕನಿಷ್ಟ ಸಾಂಕೇತಿಕ ಬದಲಾವಣೆ ಬೇಕಾಗಿತ್ತು. ವೇಶ್ಯೆ ಮನೆಯ ಕಾವಲಗಾರರ ಪಾತ್ರವನ್ನು ಸಹ ಬ್ರಾಹ್ಮಣ ವೇಷದಾರಿಗಳೇ ನಿಭಾಯಿಸಿದ್ದು ತಪ್ಪೆನಿಸುವಂತಿದೆ.   ರಂಗಸಜ್ಜಿಕೆಯೆಂಬುದೇನು ಇರಲಿಲ್ಲ. ಖಾಲಿ ರಂಗವೇದಿಕೆಯನ್ನು ಕಲಾವಿದರು ತುಂಬುವ ಬಗೆ ಮಾತ್ರ ವಿಶಿಷ್ಟವಾಗಿ ಮೂಡಿಬಂದಿದೆ.


      
 ಎರಡು ಗಂಟೆಯ ನಾಟಕವನ್ನು ಒಂದೂಕಾಲು ಗಂಟೆಗೆ ಮಿತಿಗೊಳಿಸಿದ್ದರಿಂದ ಕೆಲವು ಲಿಂಕ್ಗಳು ತಪ್ಪಿಹೊಂದಂತಿವೆ. ಕೊನೆಕೊನೆಗಂತೂ ನಾಟಕವನ್ನು ಗಡಿಬಿಡಿಯಲ್ಲಿ ಮುಗಿಸಿದಂತಿದೆ. ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಖುದ್ದು ಪ್ರಧಾನಿಯೇ ಪಾಲ್ಗೊಂಡರೂ ಗುಂಪಿನ ಜನ ನಿರ್ಲಕ್ಷಿಸಿದ್ದು ಆಭಾಸಕಾರಿಯಾಗಿದೆ. ಬಿ.ವಿ.ಕಾರಂತ, ಬಿ.ಜಯಶ್ರೀ, ಕವತ್ತಾರಂತವರು ನಿರ್ದೇಶಿಸಿದ್ದ ಘಾಶೀರಾಂ ಕೋತ್ವಾಲ್ ನಾಟಕವನ್ನು ಶಿವಶಂಕರರವರು ಆಯ್ಕೆಮಾಡಿಕೊಂಡಿದ್ದೇ ಸವಾಲಿನ ಕೆಲಸವಾಗಿದೆ. ಅದರಲ್ಲಿ ಒಂದಿಷ್ಟರ ಮಟ್ಟಿಗೆ ಯುವ ನಿರ್ದೇಶಕ ಯಶಸ್ವಿಯೂ ಆಗಿದ್ದಾರೆ. ಆದರೆ.....

ನಿರ್ದೇಶಕ ಮೈಕೋ ಶಿವಶಂಕರ್
ಘಾಶೀರಾಂ ಪಾತ್ರಕ್ಕೆ ನಾಟಕದಲ್ಲಿ ನಾಯಕನಾಗುವ ಎಲ್ಲಾ ಲಕ್ಷಣಗಳೂ ಇವೆ. ಆತನಿಗೆ ಛಲವಿದೆ, ಅನ್ಯಾಯದ ಕುರಿತು ಆಕ್ರೋಶವಿದೆ, ಯಾವುದೇ ದುರಬ್ಯಾಸ ಲಂಪಟತನಗಳಿಲ್ಲ, ನಗರ ಕಾಯಲು ಸ್ವತಃ ತಾನೇ ಸಿದ್ದನಾಗುತ್ತಾನೆ. ಅಕ್ರಮಗಳನ್ನು ನಿಲ್ಲಿಸುತ್ತಾನೆ. ನಿಬಂಧನೆಗಳನ್ನು ವಿಧಿಸುತ್ತಾನೆ. ವಿಲಾಸಿ ಹಾರವರನ್ನು ಹಾಗೂ ಲಂಪಟ ಪ್ರಧಾನಿ ನಾನಾನನ್ನು ಹೋಲಿಸಿದರೆ ನಿಜವಾದ ನಾಯಕ ಘಾಶೀರಾಂ. ಆದರೆ.... ಅದ್ಯಾಕೆ ನಾಟಕದಲ್ಲಿ ಅವನನ್ನು ಅಷ್ಟೊಂದು ಕ್ರೂರವಾಗಿ, ಸರ್ವಾಧಿಕಾರಿಯಾಗಿ ತೋರಿಸಲಾಗಿದೆ? ಘಾಶೀರಾಂ ಪಾತ್ರದಾರಿಯ ಬಾಡಿ ಲಾಂಗ್ವೇಜ್ ವಿಲನ್ ರೀತಿಯಲ್ಲೇ ಇದೆ. ಅವಮಾನದ ವಿರುದ್ದ, ತನಗಾದ ಅನ್ಯಾಯದ ವಿರುದ್ದ ಸಿಡಿದೆದ್ದು ಕೆಟ್ಟುಹೋದ ಸಮಾಜವನ್ನು ಸರಿಪಡಿಸಲು ತನ್ನದೇ ಆದ ಕಠಿಣವಾದ ರೀತಿಯಲ್ಲಿ ಪ್ರಯತ್ನಿಸುವ ಘಾಶೀರಾಂ ಕೊನೆಗೆ ಹತ್ಯೆಯಾದಾಗ ನೋಡುಗರಲ್ಲಿ ಒಂದಿಷ್ಟು ಅನುಕಂಪವೂ ಇಲ್ಲದಂತೆ ಪಾತ್ರವನ್ನು ಕ್ರೂರಿಯಾಗಿಸಿದ್ದು ಸರಿಯಾ? ಎನ್ನುವ ಪ್ರಶ್ನೆಯನ್ನು ನಾಟಕ ಹುಟ್ಟಿಹಾಕುತ್ತದೆ. ನಿರ್ದೇಶಕರು ತಮ್ಮದೇ ಆದ ಕ್ರಿಯಾಶೀಲವಾದ ಇಂಟರ್ಪ್ರಿಟೇಶನ್ ಕೊಟ್ಟು ನಾಟಕವನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟಿದ್ದರೆ ಅದ್ಭುತವೆನಿಸುತ್ತಿತ್ತು. ಈಗಾಗಲೇ ಯಾರೋ ಒಬ್ಬರು ಮಾಡಿದ್ದನ್ನೆ ಚಿಕ್ಕಪುಟ್ಟ ಬದಲಾವಣೆಗಳೊಂದಿಗೆ ಮತ್ತೆ ಮರು ನಿರ್ಮಾಣ ಮಾಡುವುದಕ್ಕಿಂತ ಹೊಸ ಹೊಳಹುಗಳನ್ನು ಹುಡುಕಿ, ವಿಶೇಷವಾಗಿ ಕಟ್ಟುವುದೇ ನಾಟಕವೆನಿಸಿಕೊಳ್ಳುತ್ತದೆ. ರಂಗಭೂಮಿಯ ಸೃಜನಶೀಲತೆ ಇರುವುದೇ ಇರುವುದನ್ನು ಮುರಿದು ಹೊಸದಾಗಿ ಕಟ್ಟುವುದರಲ್ಲಿ.   ನಿಟ್ಟಿನಲ್ಲಿ ಯುವ ನಿರ್ದೇಶಕ ಶಿವಶಂಕರ ಆಲೋಚಿಸಿದರೆ ಘಾಶೀರಾಂ ಕೋತ್ವಾಲನನ್ನು ಇನ್ನೂ ವಿಶಿಷ್ಟವಾಗಿ ಕಟ್ಟಬಹುದಾಗಿದೆ. 

                                                                                          -ಶಶಿಕಾಂತ ಯಡಹಳ್ಳಿ                  
               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ