ಶುಕ್ರವಾರ, ಮೇ 27, 2016

ಹೊತ್ತಿ ಉರಿಯುತ್ತಿರುವ ರಂಗಾಯಣ ಮನೆಯ ಗಳ ಹಿರಿಯುವವರು :


ಸರಕಾರಕ್ಕೆ ಚೆಲ್ಲಾಟ; ರಂಗಾಯಣಕ್ಕೆ ಪ್ರಾಣಸಂಕಟ : 



ಕಲಬುರ್ಗಿ ರಂಗಾಯಣಕ್ಕೆ ಸದ್ಯಕ್ಕಂತೂ ಶಾಪ ವಿಮೋಚನೆ ಆಗುವಂತೆ ಕಾಣುತ್ತಿಲ್ಲ. ರಂಗಾಯಣದ ಹಾಲಿ ನಿರ್ದೇಶಕರ ಬಂಡಾಟ, ಕಲಾವಿದರುಗಳು ಮೊಂಡಾಟ ಹಾಗೂ ಸರಕಾರದ ರಾಜಕೀಯದಾಟದ ನಡುವೆ ಇತ್ತಿಚೆಗೆ ತಾನೆ ಅಸ್ತಿತ್ವಕ್ಕೆ ಬಂದಿದ್ದ ರಂಗಾಯಣ ಮುಳುಗುತ್ತಿರುವ ಹಡುಗಾಗಿದೆ. ಹಾವೂ ಸಾಯುತ್ತಿಲ್ಲ, ಕೋಲೂ ಮುರಿಯುತ್ತಿಲ್ಲ. ನಾಟಕದವರ ಆಟ ದಿನಕ್ಕೊಂದು ತಿರುವು ಪಡೆಯುತ್ತಾ ಕಲಬುರ್ಗಿ ಜನರಲ್ಲಿ ರೇಜಿಗೆ ಹುಟ್ಟಿಸುತ್ತಿದೆ.

ಪ್ರಸ್ತುತ ರಂಗಾಯಣದ ನಿರ್ದೇಶಕರಾದ ಪ್ರೊ.ಆರ್.ಕೆ.ಹುಡುಗಿಯವರ ಮೇಲೆ ಜಾತಿನಿಂದನೆ ಹಾಗೂ ಲೈಂಗಿಕ ಕಿರುಕುಳ ಗಳಂತಹ ಗಂಭೀರ ಆರೋಪ ಮಾಡಿದ ರಂಗಾಯಣದ ಕಲಾವಿದರುಗಳು ಹುಡುಗಿ ಹಟಾವೋ ರಂಗಾಯಣ ಬಚಾವೋ ಪ್ರತಿಭಟನೆಯನ್ನು ವಿವಿಧ ರೀತಿಯಲ್ಲಿ ಕಳೆದ ಮೂರು ತಿಂಗಳಿಂದ ಮಾಡುತ್ತಲೇ ಬಂದಿದ್ದಾರೆ. ಪೋಲೀಸ್ ಕಂಪ್ಲೆಂಟ್ ಆಗಿದೆ. ಪೊಲೀಸ್ ಅಧಿಕಾರಿಗಳಿಂದ ತನಿಖೆಯಾಗಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ರಂಗಸಮಾಜದ ಕಮಿಟಿಯೂ ಸಹ ಹುಡುಗಿ ಮಾಸ್ತರರ ಹುಡುಗಾಟವನ್ನು ವಿವರವಾಗಿ ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಜೊತೆಗೆ ಸ್ವಯಂಪ್ರೇರಿತರಾಗಿ ಬಂದ ರಾಜ್ಯ ಮಹಿಳಾ ಆಯೋಗವೂ ಸಹ  ವಿಚಾರಣೆ ಮಾಡಿ ತನ್ನದೇ ಆದ ವರದಿಯನ್ನು ಸಲ್ಲಿಸಿದೆ. ಆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಇಲ್ಲಿವರೆಗೂ ಯಾವುದೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಆಗದೇ ವಿಳಂಬ ನೀತಿಯನ್ನು ಅನುಸರಿಸುತ್ತಿದೆ.

ಇದರ ನಡುವೆ ಉರಿಯುತ್ತಿರುವ ಕಲಬುರ್ಗಿ ರಂಗಾಯಣದ ಮನೆಯ ಗಳಗಳನ್ನು ಹಿರಿಯುವ ಕೆಲಸವನ್ನು ಕೆಲವರು ನಿಷ್ಟೆಯಿಂದ ಮಾಡುತ್ತಲೇ ಬಂದಿದ್ದಾರೆ. ಸಮಸ್ಯೆಯನ್ನು ಶಮನ ಮಾಡುವ ಬದಲು ಇನ್ನಷ್ಟು ಉಲ್ಬಣಗೊಳಿಸುವ ಕೈಂಕರ್ಯಕ್ಕೆ ಕಟಿಬದ್ದರಾಗಿದ್ದಾರೆ. ಇದರಲ್ಲಿ ಹುಡುಗಿ ಮಾಸ್ತರರ ವಿರೋಧಿಗಳು, ಕೆಲವು ಪೀತ ಪತ್ರಕರ್ತರು ಹಾಗೂ ರಂಗಕರ್ಮಿಗಳೂ ಶಾಮೀಲಾಗಿದ್ದಾರೆ.  ಇಂತವರಿಗೆ ರಂಗಾಯಣದ ಉಳಿವುಗಿಂತಲೂ ತಮ್ಮ ಸಾಂಸ್ಕೃತಿಕ ರಾಜಕಾರಣವೇ ಬಹುಮುಖ್ಯವಾಗಿದ್ದೊಂದು ವಿಪರ್ಯಾಸ. ಕಲಬುರ್ಗಿಯ ವಿಜಯವಾಣಿ ಹಾಗೂ ವಿಶ್ವವಾಣಿ ಈ ಎರಡೂ ಪುರೋಹಿತಶಾಹಿ ಮನಸ್ಥಿತಿಯ ಪತ್ರಿಕೆಗಳು ರಂಗಾಯಣದ ಕುರಿತು ಆಗಾಗ ವಿಕ್ಷಿಪ್ತ ವರದಿಗಳನ್ನು ಹಾಗೂ ಊಹಾಪೋಹಗಳನ್ನು ಹರಿಬಿಟ್ಟು ಸಮಸ್ಯೆಯನ್ನು ಜೀವಂತವಾಗಿಟ್ಟು ಆಟವಾಡತೊಡಗಿವೆ. ಇದಕ್ಕೆ ಉದಾಹರಣೆ ಎಂದರೆ ಕಲಬುರ್ಗಿ ರಂಗಾಯಣ ವನ್ನು ಸರಕಾರ ರಾಯಚೂರಿಗೆ ವರ್ಗಾಯಿಸುತ್ತದೆ ಎಂದು ವಿಶ್ವವಾಣಿಯಲ್ಲಿ ಗಾಸಿಪ್ ವರದಿ ಪ್ರಕಟಿಸಲಾಯಿತು. ಇದನ್ನು ನಿಜವೆಂದು ನಂಬಿದ ಶಂಕರಯ್ಯ ಗಂಟಿ ಹಾಗೂ ಕೆಲವು ಸ್ನೇಹಿತರು ಪ್ರತಿಭಟನೆ ಹಮ್ಮಿಕೊಳ್ಳಲು ಸಿದ್ದತೆ ನಡೆಸಿದರು. ಕೊನೆಗೆ ಮನವಿ ಪತ್ರವೊಂದನ್ನು ತಯಾರಿಸಿ ಮೂವತ್ತಕ್ಕೂ ಹೆಚ್ಚು ಜನರ ಸಹಿ ಹಾಕಿಸಿ ಸಂಬಂಧಿಸಿದ ಸರಕಾರಿ ಸಂಸ್ಥೆಗಳಿಗೆ ರವಾನಿಸಿದರು. ಅಲ್ಲಿಗೆ ಈ ವಿಷಯ ತಣ್ಣಗಾಯಿತು. ವಿಜಯವಾಣಿಯ ಬ್ಯೂರೋ ಮುಖ್ಯಸ್ತ ಮಹಿಪಾಲರೆಡ್ಡಿ ಮುನ್ನೂರು ಸಹ ಹುಡುಗಿಯವರ ವಿರುದ್ಧ ಪತ್ರಿಕಾ ಸಮರ ಸಾರಿದರು.


ಈ ಪತ್ರಿಕೆಗಳಿಗೇನಾಯಿತು? ರಂಗಾಯಣದ ಸಮಸ್ಯೆ ಬಗೆಹರಿಸುವ ಬದಲು ಯಾಕೆ ಉಲ್ಪಣಗೊಳಿಸುತ್ತಿದ್ದಾರೆ?. ಯಾಕೆಂದರೆ ಮೊದಲಿನಿಂದಲೂ ಒಬ್ಬ ಎಡಪಂಥೀಯ ಹಾಗೂ ಅಬ್ರಾಹ್ಮಣ ರಂಗಾಯಣಕ್ಕೆ ನಿರ್ದೇಶಕರಾಗಿದ್ದು ಈ ಬಲಪಂಥೀಯ ಮನಸುಗಳಿಗೆ ಒಪ್ಪಿಗೆಯಾಗಿರಲಿಲ್ಲ. ಹೇಗಾದರೂ ಮಾಡಿ ಹುಡುಗಿಯವರನ್ನು ತೆಗೆದು ಹಾಕಬೇಕು ಹಾಗೂ ಅಲ್ಲಿ ತಮ್ಮ ಮನಸ್ಥಿತಿಗೆ ಒಗ್ಗುವಂತಹ ವ್ಯಕ್ತಿಯನ್ನು ಪ್ರತಿಷ್ಟಾಪಿಸಬೇಕು ಎನ್ನುವುದು ಹುಡುಗಿ ವಿರೋಧಿ ಬಣದ ಹಿಡನ್ ಅಜೆಂಡಾ ಆಗಿತ್ತು. ಇದಕ್ಕೊಂದು ಲೇಟೆಸ್ಟ್ ಉದಾಹರಣೆ ಹೀಗಿದೆ. ಕೇರಳದಲ್ಲಿ ಎಡಪಂಥೀಯ ಪಕ್ಷ ಅಧಿಕಾರಕ್ಕೆ ಬಂದ ಸಂಭ್ರಮವನ್ನು ಆಚರಿಸಲು ಕಲಬುರ್ಗಿಯಲ್ಲಿ ಸಿಪಿಎಂ ಪಕ್ಷ ವಿಜಯೋತ್ಸವವನ್ನು ಮೇ 19 ರಂದು ಆಯೋಜಿಸಿತ್ತು. ಸಿಪಿಎಂ ಪಕ್ಷದ ಸದಸ್ಯರಾಗಿರುವ ಆರ್.ಕೆ.ಹುಡುಗಿಯವರು ಸಹಜವಾಗಿ ಇದರಲ್ಲಿ ಭಾಗವಹಿಸಿದರು. ಇದನ್ನೇ ಬಹುದೊಡ್ಡ ಅಪರಾಧವೆನ್ನುವಂತೆ ವಿಶ್ವವಾಣಿ ಪತ್ರಿಕೆಯಲ್ಲಿ ಬರೆಯಲಾಯಿತು. ಬಚ್ಚಿಟ್ಟುಕೊಂಡ ಹುಡುಗಿ ಎಂದು ಕುಹಕವಾಡಿದರು. ಕಾಂಗ್ರೆಸ್ ಸರಕಾರ ಹುಡುಗಿಯವರನ್ನು ರಂಗಾಯಣಕ್ಕೆ ನಿಯಮಿಸಿದ್ದರಿಂದ ಎಡಪಂಥೀಯ ಪಕ್ಷದ ಕಾರ್ಯಕ್ರಮಕ್ಕೆ ಅವರು ಹೋಗಿದ್ದು ಮಹಾಪರಾಧ ಎನ್ನುವಂತೆ ವರದಿ ಮುದ್ರಿಸಿಕೊಂಡರು. ಇಬ್ಬರು ನಾಮಧಾರಿಗಳ ಬೈಟ್ ತೆಗೆದುಕೊಂಡು ಬರೆದ ಈ ವರದಿ ಹುಡುಗಿಯವರನ್ನು ಟಾರ್ಗೆಟ್ ಮಾಡಿ ಬರೆದಿದ್ದಕ್ಕೆ ಸಾಕ್ಷಿಯಾಗಿದೆ. ಒಂದು ಸರಕಾರದ ಅವಧಿಯಲ್ಲಿ ಅಧಿಕಾರ ಸಿಕ್ಕರೆ ಆ ಪಕ್ಷಕ್ಕೆ ನಿಷ್ಟರಾಗಿರಬೇಕು ಎನ್ನುವ ಅತಾರ್ಕಿಕ ವಾದವನ್ನು ಈ ಪತ್ರಕರ್ತರು ಪ್ರತಿಪಾದಿಸಿದ್ದಾರೆ.

ಈ ಪೀತಪೀಡಿತ ಪತ್ರಕರ್ತರಿಗೆ ಇಂಬು ಕೊಡುವಂತೆಯೇ ಹುಡುಗಿ ಮಾಸ್ತರರು ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು ಅವರ ವಿರೋಧಿ ಗುಂಪುಗಳಿಗೆ ಎಲೆಯಡಿಕೆ ಹಾಕಿಕೊಟ್ಟಂತಾಗಿದೆ. ಆರ್.ಕೆ.ಹುಡುಗಿಯವರು ಸ್ಥಳೀಯ ಕಲಾವಿದರನ್ನು ಹಾಗೂ ರಂಗಕರ್ಮಿಗಳನ್ನು ನಿರ್ಲಕ್ಷಿಸಿದ್ದು, ರಂಗಾಯಣದ ಕಲಾವಿದರನ್ನು ಉಡಾಫೆಯಿಂದ ನೋಡಿ ಜಾತಿನಿಂದನೆ ಮಾಡಿದ್ದು, ಕಲಾವಿದೆಯರೊಂದಿಗೆ ಅತೀ ಸಲುಗೆಯಿಂದ ವರ್ತಿಸಿದ್ದು, ರಂಗಾಯಣದೊಳಗೆ ಗುಂಪುಗಾರಿಕೆಯನ್ನು ಹುಟ್ಟುಹಾಕಿದ್ದು ಹಾಗೂ ಆಂತರಿಕ ಸಮಸ್ಯೆಯನ್ನು ಶಮನ ಮಾಡದೇ ನಿರ್ಲಕ್ಷವಹಿಸಿದ್ದು... ಮತ್ತು ಸರ್ವಾಧಿಕಾರಿ ಮನೋಭಾವನೆ ತೋರಿದ್ದು... ಅವರ ವಿರೋಧಿಗಳಿಗೆ ಅಸ್ತ್ರವನ್ನೊದಗಿಸಿದಂತಾಯಿತು. ಸ್ವಲ್ಪ ಮುತುವರ್ಜಿ ವಹಿಸಿದ್ದರೆ ತಣ್ಣಗಾಗಬಹುದಾದ ರಂಗಾಯಣದೊಳಗಿನ ಕಿಡಿಗೆ ಗಾಳಿ ಹಾಕಿ ಬೆಂಕಿಯನ್ನಾಗಿ ಉರಿಸುವಲ್ಲಿ ಹುಡುಗಿ ವಿರೋಧಿ ಪಡೆ ಯಶಸ್ವಿಯಾಯಿತು.

ರಂಗಾಯಣದ ಪ್ರಸ್ತುತ ಸಮಸ್ಯೆಗೆ ಹುಡುಗಿ ಮಾಸ್ತರರಷ್ಟೇ ಅಲ್ಲಿಯ ಕಲಾವಿದರುಗಳ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ. ನಿರ್ದೇಶಕರುಗಳಿಗೆ ಹಾಗೂ ಕಲಾವಿದರುಗಳಿಗೆ ರಂಗಾಯಣದ ಗೌರವವನ್ನು ಉಳಿಸಬೇಕೆಂಬ ಆಶಯವಿದ್ದಿದ್ದರೆ ಈ ದುಸ್ತಿತಿ ಇವರಿಗೆಲ್ಲಾ ಬರುತ್ತಿರಲಿಲ್ಲ. ಪ್ರತಿಷ್ಠೆ ಎನ್ನುವುದು ಇಲ್ಲಿ ಬಹುದೊಡ್ಡ ಅವಿವೇಕದ ಕೆಲಸ ಮಾಡಿತು. ಹುಡುಗಿ ಮಾಸ್ತರರಿಗೆ ಕಲಾವಿದರುಗಳು ತಾವು ಹೇಳಿದ್ದನ್ನು ಕೇಳಬೇಕು ಎನ್ನುವ ಹಠ. ಕೇಳುವುದನ್ನು ಕೇಳುತ್ತೇವೆ ಆದರೆ ಈ ಒಡೆದಾಳುವ ನೀತಿಯನ್ನು ಧಿಕ್ಕರಿಸುತ್ತೇವೆ, ನಮಗೆ ಹೇಳಲು ಇವರ‍್ಯಾರು, ಇವರಿಗೆ ರಂಗಭೂಮಿಯ ಅನುಭವ ಏನಿದೆ' ಎನ್ನುವುದು ಕಲಾವಿದರುಗಳ ಮನೋಭಾವ. ಈಗ ಮಕ್ಕಳೇ ಹೆತ್ತವರ ಮಾತನ್ನು ಕೇಳುವುದಿಲ್ಲ.. ಅಂತಹುದರಲ್ಲಿ ಬೇರೆಯವರ ಮಕ್ಕಳನ್ನು ಅವಮಾನಕಾರಿಯಾಗಿ ನೋಡಿಕೊಂಡರೆ ಯಾರು ಸಹಿಸುತ್ತಾರೆ?. ಹೀಗೆ ರಂಗಾಯಣವೆನ್ನುವ ಕುಟುಂಬದಲ್ಲಿ ಗುಂಪುಗಾರಿಕೆ ಹೆಚ್ಚಾಗಿ, ಹೊಂದಾಣಿಕೆ ಎನ್ನುವುದು ಸರ್ವನಾಶವಾಗಿ, ಅಹಮಿಕೆ ವಿಜ್ರಂಭಿಸಿದ್ದರಿಂದಾಗಿ ರಂಗಾಯಣದ ಮಾನ ಮರ್ಯಾದೆ ಹಾದಿ ಬೀದಿಯ ಮಾತಾಯಿತು. ಇವರೆಲ್ಲರಿಗೂ ರಂಗಾಯಣದ ಗೌರವಕ್ಕಿಂತ ತಮ್ಮ ವ್ಯಯಕ್ತಿಕ ಅಹಮಿಕೆಯೇ ಹೆಚ್ಚಾಗಿದ್ದೊಂದು ದುರಂತ. ಯಾವಾಗ ರಂಗಾಯಣದೊಳಗೆ ಒಡಕು ಮೂಡಿತೋ ಆಗ ಹೊರಗಿನ ಶಕ್ತಿಗಳು ಕ್ರಿಯಾಶೀಲಗೊಂಡವು. ಕೆಲವು ಸಂಘಟನೆಗಳು ಹಾಗೂ ರಾಜಕಾರಣಿಗಳು ಹುಡುಗಿ ಮಾಸ್ತರರ ಪರವಾಗಿ ನಿಂತು ಅವರನ್ನು ಜೈಲು ಪಾಲಾಗುವುದನ್ನು ತಡೆದರೆ, ಇನ್ನು ಕೆಲವು ಶಕ್ತಿಗಳು ಕಲಾವಿದರ ಪರವಾಗಿ ನಿಂತು ಪ್ರತಿಭಟನೆಗೆ ಪ್ರಚೋದನೆಯನ್ನು ಕೊಟ್ಟವು. ಹೀಗಾಗಿ ಇಡೀ ರಂಗಾಯಣದಲ್ಲಿ ಅರಾಜಕತೆ ಮೇರೆ ಮೀರಿ ನಾಟಕದ ಕೆಲಸಗಳು ನೇಪತ್ಯ ಸೇರಿದವು. 


ರಂಗಾಯಣದಲ್ಲಾದ ಅಹಮಿಕೆ ರೋಗಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚಿಕಿತ್ಸೆ ಕೊಡುವುದನ್ನು ಬಿಟ್ಟು ನಿರ್ಲಕ್ಷಿಸಲಾಯಿತು. ಕಲಾವಿದರೆಲ್ಲಾ ಡಿಸಿ ಕಛೇರಿಯ ಮುಂದೆ ಮಾರ್ಚ 11 ರಿಂದ ಅನಿರ್ಧಿಷ್ಟ ಕಾಲ ಸತ್ಯಾಗ್ರಹ ಕೂತು 14 ದಿನಗಳಾಗಿದ್ದಾಗ ರೋಗ ಶಮನಕ್ಕೆ ಸಚಿವೆ ಉಮಾಶ್ರೀವರೇ ಖುದ್ದಾಗಿ ಬಂದು ಒಂದು ವಾರದೊಳಗೆ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದೆಂದು ಭರವಸೆ ಕೊಟ್ಟು ಧರಣಿಗೆ ಅಂತ್ಯ ಹಾಡಿದರು. ಮಾರ್ಚ 25 ರಂದು ಬೆಂಗಳೂರಿನ ಕನ್ನಡ ಭವನದಲ್ಲಿ ರಂಗಸಮಾಜ ಹಾಗೂ ಅಧಿಕಾರಿಗಳ ಸಭೆ ಕರೆದರಾದರೂ ಬರೀ ಚರ್ಚೆಗಳಾದವೇ ಹೊರತು ವ್ಯಾಧಿಗೆ ಮದ್ದರೆಯಲಿಲ್ಲ. ಇನ್ನೊಂದು ವಾರದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವ ಭರವಸೆ ಹೊರಬಿತ್ತು. ಆದರೆ ಆ ಒಂದು ವಾರ ಹೋಗಿ ಎಂಟು ವಾರಗಳಾದರೂ ಸರಕಾರದ ನಿರ್ಣಯ ಹೊರಗೆ ಬರಲೇ ಇಲ್ಲ.

ಇದರ ಮಧ್ಯೆ ಇನ್ನೊಂದು ಹೈ ಡ್ರಾಮಾ ನಡೆದುಹೋಯಿತು. ಅದು ತುಳಜಾರಾಂ ಠಾಕೂರನ ಆತ್ಮಹತ್ಯೆ ಪ್ರಹಸನ. ಈ ಠಾಕೂರ್ ಬಗ್ಗೆ ಒಂದಿಷ್ಟು ಹೇಳಲೇಬೇಕಿದೆ. ಯಾಕೆಂದರೆ ಇಡೀ ರಂಗಾಯಣದ ಪ್ರಹಸನದ ಖಳನಾಯಕ ಪಾತ್ರಧಾರಿ ಈತ. ಕಲಾವಿದರ ಆಯ್ಕೆ ಸಂದರ್ಭದಲ್ಲಿ ಕಲಬುರ್ಗಿಯ ತುಳಜಾರಾಂನನ್ನು ಆಯ್ಕೆ ಮಾಡಿಕೊಳ್ಳಲೇಬೇಕೆಂದು ಹುಡುಗಿ ಮಾಸ್ತರರು ರಂಗಸಮಾಜದ ಸದಸ್ಯರುಗಳ ಮೇಲೆ ಒತ್ತಡ ತಂದಿದ್ದರು. ಇನ್ನೂ ಕೆಲವು ಪ್ರತಿಭಾವಂತ ಯುವಕರು ಸಂದರ್ಶನಕ್ಕೆ ಬಂದಿದ್ದರಾದರೂ ಹುಡುಗಿಯವರ ಒತ್ತಾಯದ ಮೇರೆಗೆ ತುಳಾಜಾರಾಂನನ್ನು ಲೈಟಿಂಗ್ ತಂತ್ರಜ್ಞ ಎಂದು ಆಯ್ಕೆ ಮಾಡಿಕೊಳ್ಳಲಾಯಿತು. ತನ್ನನ್ನು ಆಯ್ಕೆ ಮಾಡಿಸಿದ ಹುಡುಗಿಯವರ ಮೇಲೆ ಈ  ತುಳಜಾರಾಂ ಅಪಾರ ನಿಷ್ಟೆಯನ್ನು ಇಟ್ಟುಕೊಂಡಿದ್ದಂತೂ ಸತ್ಯ.  ಆತ ಇತರೇ ಕಲಾವಿದರುಗಳ ಖಾಸಗಿ ಮಾತು ಕತೆಗಳಿಗೆ ಒಗ್ಗರಣೆ ಹಾಕಿ  ಹುಡುಗಿ ಮಾಸ್ತರರ ಕಂಚಿನ ಕಿವಿ ತುಂಬತೊಡಗಿದ್ದ. ಹುಡುಗಿಯವರ ಎಡಗೈ ಹಾಗೂ ಬಲಗೈಯಾಗಿ ಲಕ್ಷ್ಮೀ ಕರೋಜಿ ಹಾಗೂ ತುಳಜಾರಾಂ ಠಾಕೂರರು ಮೆರೆದಾಡತೊಡಗಿದರು. ಇದು ಬೇರೆ ಕಲಾವಿದರಿಗೆ ಸಹಿಸಲಸಾಧ್ಯವಾಯಿತು. ಗುಂಪುಗಾರಿಕೆ ಶುರುವಾಯಿತು. ಆ ಮೂರು ಜನರದ್ದೊಂದು ಆಳುವ ಗುಂಪಾದರೆ ಉಳಿದವರದಿನ್ನೊಂದು ವಿರೋಧಿ ಗುಂಪಾಯಿತು. ಈ ಎರಡೂ ಗುಂಪಿನ ನಡುವೆ ಠಾಕೂರನ ಕೊಂಡಿಮಂಚಣ್ಣ ಕೆಲಸ ನಿರಾತಂಕವಾಯಿತು.

ಒಂದೆರಡು ಸಿನೆಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿದ ಠಾಕೂರ್ ತಾನೊಬ್ಬ ಸಿನೆಮಾ ನಟ ಎನ್ನುವ ಭ್ರಮೆಯಲ್ಲೇ ಬೀಗತೊಡಗಿದ. ರಂಗಾಯಣದ ಕಲಾವಿದೆ ಮೀನಾಕ್ಷಿ ಜೊತೆಗೆ ಸಲುಗೆ ಬೆಳೆಸಿದ. ಸ್ನೇಹ ಪ್ರೀತಿಗೆ ತಿರುಗಿತು. ಹುಡುಗಿ ಮಾಸ್ತರರ ಮೇಲೆ ಕಲಾವಿದರೆಲ್ಲಾ ಸೇರಿ ಅಟ್ರಾಸಿಟಿ ಕೇಸ್ ಹಾಕಿ ಹೈರಾಣು ಮಾಡಿದಾಗಲೂ ಸಹ ಠಾಕೂರ್ ನಿರ್ಲಿಪ್ತವಾಗಿಯೇ ಉಳಿದ. ಕಲಾವಿದೆಯರಿಗೆ ಹುಡುಗಿಯವರು ಲೈಂಗಿಕ ಕಿರುಕುಳ ಕೊಟ್ಟರೆಂದು ಆರೋಪ ಕೇಳಿಬಂದಾಗಲೂ ಮೌನವಾಗಿದ್ದ. ಆದರೆ... ಯಾವಾಗ ತನಗೂ ಹುಡುಗಿ ಮಾಸ್ತರರು ಲೈಂಗಿಕ ಕಿರುಕುಳ ಕೊಟ್ಟರು ಎಂದು ಗೆಳತಿ ಮೀನಾಕ್ಷಿ ಬಾಯಿಬಿಟ್ಟಳೋ ಆಗ ಠಾಕೂರ್ ಕೆಂಡಾಮಂಡಲವಾಗಿ ಆಕೆಯ ಕೆನ್ನೆಗೆ ಬಾರಿಸಿ ಹುಡುಗಿ  ಮಾಸ್ತರನ ಮೇಲೆ ತಿರುಗಿಬಿದ್ದನೆಂದು ರಂಗಾಯಣದ ಮೂಲಗಳು ಹೇಳುತ್ತಿವೆ. ತಾನೇ ಬೆಳೆಸಿದ ಬೆಕ್ಕು ತನಗೇ ಮೀಯಾಂ ಎನ್ನುವುದರ ಸುಳಿವು ಗೊತ್ತಾದ ಹುಡುಗಿ ಮಾಸ್ತರರು ಹುಷಾರಾದರು. ಮೀನಾಕ್ಷಿಯನ್ನು ಬೆಂಗಳೂರಿನ ಸಂಬಂಧಿಕರ ಮನೆಗೆ ತೆರಳುವಂತೆ ಒತ್ತಾಯಿಸಿ ಕಳುಹಿಸಿದರಂತೆ. ಆಕೆ ಠಾಕೂರನ ಜೊತೆಗೆ ಮುನಿಸಿಕೊಂಡು ಎಲ್ಲಾ ಸಂಪರ್ಕವನ್ನು ಕಡೆದುಕೊಂಡಳು. ಇದರಿಂದ ತೀವ್ರವಾಗಿ ಮನನೊಂದ ತುಳಜಾರಾಂ ಅದೊಂದು ದಿನ ವಿಷ ಕುಡಿಸು ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ದಾಖಲಾದ. ಸಾಯುತ್ತಿದ್ದರೂ ತನ್ನನ್ನು ವಿಚಾರಿಸಿಕೊಳ್ಳಲು ಬರದ ಹುಡುಗಿ ಮಾಸ್ತರರ ಮೇಲೆ ಕೆಂಡಕಾರತೊಡಗಿದ.

ಇಷ್ಟರಲ್ಲಾಗಲೇ ಧರಣಿ ಸತ್ಯಾಗ್ರಹ ಮಾಡಿ ತಣ್ಣಗಾದ ಬೇರೆ ಕಲಾವಿದರನ್ನು ಸಂಪರ್ಕಿಸಿ ಹುಡುಗಿ ಮಾಸ್ತರರ ಮೇಲೆ ತನ್ನ ಅಸಹನೆ ತೋಡಿಕೊಂಡು ಕಲಾವಿದರ ಏಕತೆಗಾಗಿ ತಾನೂ ಹೋರಾಡಲು ಸಿದ್ದ ಎಂದು ಘೋಷಿಸಿದ ಠಾಕೂರ್ ಅಮರಣಾಂತ ಉಪವಾಸ ಕೂಡುವುದಾಗಿ ಹೇಳಿದ. ಹುಡುಗಿ ಮಾಸ್ತರರ ಎಜೆಂಟ್ ಎಂಬ ಆಪಾದನೆಯಿಂದ ಮೂಲೆಗುಂಪಾಗಿದ್ದ ಠಾಕೂರ್ ಹೊಸ ಗೆಟಪ್‌ನಲ್ಲಿ ಹುಡುಗಿಯವರ ಆಜನ್ಮ ವಿರೋಧಿಯಾಗಿ ಬದಲಾಗಿ ಹೋರಾಟದ ನಾಯಕತ್ವ ವಹಿಸಿಕೊಳ್ಳಲು ಮುಂದಾದ. ಹುಡುಗಿ ಮಾಸ್ತರರನ್ನು ಶತಾಯ ಗತಾಯ ರಂಗಾಯಣದಿಂದ ತೆಗೆದು ಹಾಕುವ ಏಕೈಕ ಉದ್ದೇಶ ಹೊಂದಿರುವ ರಂಗಾಯಣದ ಕಲಾವಿದರುಗಳು ಈ ಹಿಂದೆ ಠಾಕೂರ ಮಾಡಿದ ಡಬಲ್‌ಗೇಮ್‌ಗಳನ್ನೆಲ್ಲಾ ಬದಿಗಿರಿಸಿ ಆತನ ನಾಯಕತ್ವವನ್ನು ಒಪ್ಪಿಕೊಂಡರು. ಶತ್ರುವಿನ ಶತ್ರು ಮಿತ್ರ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಯಿತು. ರಂಗಾಯಣದ ಕಲಾವಿದರುಗಳಲ್ಲಿ ತುಳಜಾರಾಂ ಠಾಕೂರ್, ಲಕ್ಷ್ಮಣ್, ವಿಜಯಲಕ್ಷ್ಮೀ ಹಾಗೂ ಮಹೇಶ್ ಭರಮರೆಡ್ಡಿ ಈ ನಾಲ್ವರು ಹುಡುಗಿ ಹಠಾವೋ ಎನ್ನುತ್ತಾ ಮೇ 24ರಿಂದ ರಂಗಾಯಣದ ಆವರಣದಲ್ಲಿ ಅಮರಣಾಂತ ಉಪವಾಸಕ್ಕೆ ಕುಳಿತುಕೊಂಡರು. ಉಳಿದ ಕಲಾವಿದರು ಅವರ ಬೆಂಬಲಕ್ಕೆ ನಿಂತರು.

ರಂಗಸಮಾಜದ ಸದಸ್ಯ ಡಾ.ಕೆ.ವೈ.ನಾರಾಯಣಸ್ವಾಮಿಯಾದಿಯಾಗಿ ಹಲವಾರು ಜನ ಮೇ 27ಕ್ಕೆ ಸಚಿವೆಯವರ ಅಧ್ಯಕ್ಷತೆಯಲ್ಲಿ ರಂಗಾಯಣದ ಕುರಿತು ಸಭೆ ಕರೆಯಲಾಗಿದೆ. ಅಲ್ಲಿವರೆಗಾದರೂ ಸುಮ್ಮನಿರಿ ಎಂದು ಕಲಾವಿದರುಗಳಿಗೆ ಕೇಳಿಕೊಂಡರು. ಆದರೆ.. ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಕಲಾವಿದರಿರಲಿಲ್ಲ. ತಮ್ಮ ಕೊರಳಿಗೆ ತಾವೇ ಬಲಿಪಶುವಿನಂತೆ ಹಾರ ಹಾಕಿಕೊಂಡು, ತಲೆಗೆ ಕಪ್ಪುಬಟ್ಟೆ ಸುತ್ತಿಕೊಂಡು ಅಮರಣಾಂತ ಉಪವಾಸವೆಂಬ ಪ್ರಹಸನ ಶುರುಮಾಡಿದರು. ಮೂರು ದಿನದೊಳಗಾಗಿ ನಿತ್ರಾಣಗೊಂಡು ಒಬ್ಬೊಬ್ಬರೇ ಆಸ್ಪತ್ರೆಯಲ್ಲಿ ದಾಖಲಾಗತೊಡಗಿದರು. ಕಲಾವಿದರಿಗೆ ಅನ್ಯಾಯವಾಗಿದ್ದರೆ ಉಪವಾಸ ಸತ್ಯಾಗ್ರಹ ಕುಳಿತುಕೊಂಡು ದಪ್ಪ ಚರ್ಮದ ಸರಕಾರಕ್ಕೆ ಸಮಸ್ಯೆಯ ಅರಿವು ಮಾಡಿಕೊಡುವುದರಲ್ಲಿ ತಪ್ಪೇನಿಲ್ಲ. ಆದರೆ ಇನ್ನು ಮೂರೇ ದಿನದ ನಂತರದಲ್ಲಿ ನಡೆಯುತ್ತಿರುವ ಸಭೆಯ ನಿರ್ಧಾರವನ್ನು ತಿಳಿದುಕೊಂಡಾದರೂ ಈ ಅತಿರೇಕದ ತೀರ್ಮಾಣ ತೆಗೆದುಕೊಳ್ಳಬೇಕಾಗಿತ್ತು. ಇಲ್ಲಿವರೆಗೂ ರಂಗಾಯಣದ ಕಲಾವಿದರುಗಳ ಮೇಲೆ ಕಲಬುರ್ಗಿಯ ರಂಗಕರ್ಮಿಗಳಲ್ಲಿ ಹಾಗೂ ರಂಗಸಮಾಜದ ಸದಸ್ಯರುಗಳಲ್ಲಿ ಒಂದು ರೀತಿಯ ಸಹಾನುಭೂತಿ ಇತ್ತು. ಆದರೆ.. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಎಲ್ಲರ ವಿರೋಧ ಕಟ್ಟಿಕೊಂಡ ಕಲಾವಿದರುಗಳು ಇದ್ದಕ್ಕಿದ್ದಂತೆ ಅಮರಣಾಂತ ಉಪವಾಸ ಕುಳಿತುಕೊಂಡಿದ್ದು ಎಲ್ಲರ ವಿರೋಧಕ್ಕೂ ಕಾರಣವಾಗತೊಡಗಿತು. ಸಹಾನುಭೂತಿ ಅಸಹನೆಯಾಗಿ ಪರಿವರ್ತನೆಯಾಯಿತು. ಇದರ ಪ್ರತಿದ್ವನಿ ಮೇ 27 ರ ಸಭೆಯಲ್ಲಾಯಿತು.


ಮೊದಲು ಹುಡುಗಿಯವರನ್ನು ಮಾತ್ರ ಬದಲಾಯಿಸಬೇಕೆಂಬ ಆಶಯ ರಂಗಸಮಾಜದ ಬಹುತೇಕ ಸದಸ್ಯರದ್ದಾಗಿತ್ತು. ಆದರೆ... ಈ ಕಲಾವಿದರುಗಳ ಅತಿರೇಕದ ಸತ್ಯಾಗ್ರಹದಿಂದಾಗಿ ಬಹುತೇಕ ರಂಗಸಮಾಜದ ಸದಸ್ಯರುಗಳು ಕಲಾವಿದರನ್ನೂ ಸಹ ತೆಗೆದು ಹಾಕುವುದು ಸೂಕ್ತವೆನ್ನುವ ನಿರ್ಧಾರಕ್ಕೆಕ್ಕೆ ಬಂದಿದ್ದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಸಚಿವೆ ಉಮಾಶ್ರೀಯವರವರೆಗೆ ಎಲ್ಲರೂ ಕಲಾವಿದರ ನಿರ್ಧಾರದಿಂದ ಬೇಸರಗೊಂಡಿದ್ದಂತೂ ಸತ್ಯ. ನಿರ್ದೇಶಕರ ಜೊತೆಗೆ ಕಲಾವಿದರನ್ನೂ ಸಹ ಮನೆಗೆ ಕಳುಹಿಸಿ ಕಲಬುರ್ಗಿ ರಂಗಾಯಣವನ್ನು ಹೊಸದಾಗಿ ಕಟ್ಟುವತ್ತ ಎಲ್ಲರ ಚಿತ್ತ ಕೆಲಸಮಾಡತೊಡಗಿದ್ದರೆ ಅದಕ್ಕೆ ಕಲಾವಿದರ ಆವೇಶದ ತೀರ್ಮಾನವೇ ಕಾರಣ.  ರಂಗಸಮಾಜದವರ ಮಾತನ್ನೂ ಮೀರಿ ಕಲಾವಿದರುಗಳು ಹೀಗೆಲ್ಲಾ ವರ್ತಿಸಿ ರಂಗಾಯಣಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ಮುಂದೆ ಬೇರೆ ನಿರ್ದೇಶಕರನ್ನು ಕಳುಹಿಸಿದರೂ ಈ ಕಲಾವಿದರುಗಳು ಹೀಗೆ ದುಂಡಾವರ್ತಿ ತೋರಿ ರಂಗಾಯಣದ ಕಾರ್ಯಕಲಾಪಗಳಾಗದಂತೆ ಮಾಡಿದರೆ ಹೇಗೆ?’’ ಎಂಬುದು ರಂಗಸಮಾಜದವರ ಹಾಗೂ ಇಲಾಖೆಯವರ ಆತಂಕವಾಗಿದೆ. ಯಾರಿಗೂ ಮತ್ತೆ ಮತ್ತೆ ರಂಗಾಯಣದಲ್ಲಿ ಈ ಅನಪೇಕ್ಷಿತ ಫಟನೆಗಳು ಮರುಕಳಿಸುವುದು ಬೇಕಾಗಿಲ್ಲ. ಹೀಗಾಗಿ ಕಲಾವಿದರು ಹಾಗೂ ನಿರ್ದೇಶಕರ ಹೋಲ್‌ಸೇಲ್ ಬದಲಾವಣೆ ಮಾಡುವತ್ತ ಸಭೆಯಲ್ಲಿ ಬಾಗಿಯಾದ ಬಹುತೇಕರ ಅಭಿಪ್ರಾಯವಾಗಿದ್ದರೆ ಅದರಲ್ಲಿ ತಪ್ಪಿಲ್ಲ. ತಮ್ಮ ಕಾಲಮೇಲೆ ತಾವೇ ಕಲ್ಲು ಹಾಕಿಕೊಂಡ ಕಲಾವಿದರುಗಳು ಮುಂದೆ ಪರಿತಪಿಸುವುದಂತೂ ಗ್ಯಾರಂಟಿ. ಹುಡುಗಿ ಮಾಸ್ತರರಿಗೆ ಇನ್ನೂ ಸ್ವಲ್ಪ ದಿನ ಆಟವಾಡಲು ರಾಜಕೀಯದ ಬೆಂಬಲವಾದರೂ ಇದೆ. ಆದರೆ.. ಈ ಕಲಾವಿದರುಗಳಿಗೆ ಅದೂ ಇಲ್ಲ. ಇದ್ದ ಜನಗಳ ಸಿಂಪಥಿಯನ್ನೂ ಸಹ ಕಳೆದುಕೊಳ್ಳುವಂತೆ ವರ್ತಿಸುತ್ತಿದ್ದಾರೆ. ಯಾರ ಮಾತಿಗೂ ಗೌರವ ಕೊಡದೇ ಬ್ಲಾಕ್ ಮೇಲ್ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. 

ಇಷ್ಟಕ್ಕೂ ಈ ಸಭೆಯಲ್ಲಾದರೂ ರಂಗಾಯಣದ ಪ್ರಸ್ತುತ ಸಮಸ್ಯೆಗೆ ಪರಿಹಾರ ಸಿಗುತ್ತದೆಂದು ಎಲ್ಲರೂ ನಿರೀಕ್ಷಿಸಿದ್ದರು. ರಂಗಸಮಾಜದ ಸದಸ್ಯರೆಲ್ಲಾ ಕಾತುರದಿಂದ ಕಾದಿದ್ದರು. ಕಲಬುರ್ಗಿಯ ರಂಗಕರ್ಮಿ ಕಲಾವಿದರುಗಳೂ ಸಹ ಸಮಸ್ಯೆ ಬಗೆಹರಿಯುತ್ತದೆಂಬ ಭರವಸೆ ಇಟ್ಟುಕೊಂಡಿದ್ದರು. ವ್ಯಾಧಿ ಇಷ್ಟೊಂದು ಉಲ್ಬಣಗೊಂಡಿದ್ದರಿಂದ ಚಿಕಿತ್ಸೆ ದೊರೆಯಬಹುದೆಂದೇ ಎಲ್ಲರೂ ಆಶಿಸಿದ್ದರು. ಆದರೆ.. ಅಂತಹುದೇನೂ ಸಭೆಯಲ್ಲಿ ಆಗಲೆ ಇಲ್ಲ. ಯಾವುದೇ ತೀರ್ಮಾನವನ್ನೂ ಸಚಿವೆ ಉಮಾಶ್ರೀಯವರು ತೆಗೆದುಕೊಳ್ಳಲೇ ಇಲ್ಲಾ. ಎಲ್ಲರ ಅಭಿಪ್ರಾಯವನ್ನು ಮತ್ತೊಮ್ಮೆ ಪಡೆದು ಇನ್ನೊಂದು ವಾರದೊಳಗೆ ನಿರ್ಧಾರವನ್ನು ಪ್ರಕಟಿಸುವುದಾಗಿ ಉಮಾಶ್ರೀಯವರು ಹೇಳಿದ್ದಾರೆ.  ಅರೆ.. ಅಲ್ಲಿ ಕಲಾವಿದರುಗಳು ಉಪವಾಸ ಕೂತು ಸಾಯುತ್ತಿದ್ದಾರೆ.. ಇತ್ತ ಪತ್ರಕರ್ತರುಗಳು ರಂಗಸಮಾಜದವರ ನೆಮ್ಮದಿ ಹಾಳುಮಾಡಿದ್ದಾರೆ. ಇಡೀ ಕರ್ನಾಟಕದ ರಂಗಭೂಮಿ ರಂಗಾಯಣದ ದುರಂತ ಕಂಡು ಮರುಗುತ್ತಿದೆ. ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸಹನೆ ಕಳೆದುಕೊಂಡಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಯಾವುದೇ ತೀರ್ಮಾನಕ್ಕೆ ಬರದೇ ಉಲ್ಬಣಗೊಂಡ ಸಮಸ್ಯೆಯನ್ನು ಮತ್ತಷ್ಟು ತೀವ್ರವಾಗುವಂತೆ ಮಾಡುವುದರ ಹಿಂದೆ ಅದೆಂತಾ ರಾಜಕಾರಣ ಇರಬಹುದು?

ಹೌದು.. ಇದೆಲ್ಲದರ ಹಿಂದೆ ರಾಜಕಾರಣ ಇದೆ. ಯಾಕೆಂದರೆ ಉಮಾಶ್ರೀಯವರೂ ಸಹ ಇಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ಅಸಹಾಯಕರಾಗಿದ್ದಾರೆ. ರೋಗಕ್ಕೆ ತುರ್ತಾಗಿ ಸರ್ಜರಿ ಮಾಡುವ ಮನಸ್ಸು ಅವರಿಗಿದ್ದರೂ ಆಗುತ್ತಿಲ್ಲ. ಯಾಕೆಂದರೆ ಹುಡುಗಿ ಮಾಸ್ತರರ ಹಿಂದೆ ಕಾಂಗ್ರೆಸ್‌ನ ಅತಿರಥ ಮಹಾರಥರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್‌ರವರು ನಿಂತಿದ್ದಾರೆ. ಖರ್ಗೆ ಧರಂನಂತವರು ನನ್ನ ಪಾಕೆಟಲ್ಲಿದ್ದಾರೆಂದು ಹುಡುಗಿ ಮಾಸ್ತರ್ ಹೇಳಿಕೊಂಡು ತಿರುಗುತ್ತಿದ್ದಾರೆ. ಮೇ 27 ರ ಸಭೆಯಲ್ಲೂ ಸಹ ಹುಡುಗಿ ಮಾಸ್ತರರು ಸಚಿವೆಯ ಉಪಸ್ಥಿತಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಬಾಯಿಗೆ ಬಂದಂತೆ ಕೂಗಾಡಿದ್ದಾರೆ. ಕಲಾವಿದರನ್ನು ತನ್ನ ವಿರುದ್ಧ ಎತ್ತಿಕಟ್ಟುವಲ್ಲಿ ಡಿ.ಎಸ್.ಚೌಗಲೆ ಹಾಗೂ ಕೆ.ವೈ.ನಾರಾಯಣಸ್ವಾಮಿಯವರೇ ಕಾರಣವೆಂದು ನೇರವಾಗಿ ಆರೋಪಿಸಿ ಕೆವೈಎನ್ ಜೊತೆಗೆ ಜಗಳಕ್ಕಿಳಿದ್ದಿದ್ದಾರೆ. ಎಲ್ಲರನ್ನೂ ಎದುರು ಹಾಕಿಕೊಳ್ಳುವಂತಹ ಬಂಡ ದೈರ್ಯ ಈ ಹುಡುಗಿ ತಾತನಿಗೆ ಎಲ್ಲಿಂದ ಬಂತು?. ಅದು ರಾಜಕೀಯ ಬೆಂಬಲದಿಂದ. ಇದು ಉಮಾಶ್ರೀಯವಂತವರಿಗೂ ಬಿಸಿ ತುಪ್ಪವಾಗಿದೆ. ಕೇಂದ್ರ ಸರಕಾರದ ವಿರೋಧ ಪಕ್ಷದ ನಾಯಕರಾಗಿರುವ ಖರ್ಗೆಯವರನ್ನು ಎದುರು ಹಾಕಿಕೊಳ್ಳಲು ಸಿಎಂ ಸಿದ್ದರಾಮಯ್ಯನವರಿಗೇ ಸಾಧ್ಯವಿಲ್ಲ. ಅಂತಹುದರಲ್ಲಿ ಸಚಿವೆ ಉಮಾಶ್ರೀಯವರು ಅದು ಹೇಗೆ ಎದುರು ಹಾಕಿಕೊಳ್ಳಲು ಸಾಧ್ಯ?. ಹೀಗಾಗಿ ಮತ್ತೆ ರಂಗಾಯಣದ ಸಮಸ್ಯೆ ಪರಿಹಾರ ಕಾಣದೇ ಸಮಸ್ಯೆಯಾಗಿಯೇ ಉಳಿದಿದೆ. ರೋಗಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ವ್ಯಾಧಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಕಲಾವಿದರುಗಳು ಅವರಿವರ ಚಿತಾವಣೆಗೊಳಗಾಗಿ ಅತಿರೇಕದ ನಿರ್ಧಾರ ತೆಗೆದುಕೊಂಡು ಸಾವಿಗೂ ಸಿದ್ಧರಾಗಿ ಕೂತಿದ್ದಾರೆ. ಇಡೀ ಕಲಬುರ್ಗಿ ರಂಗಾಯಣ ಸೂತಕದ ಮನೆಯಾಗಿದೆ. ಬೆಂಕಿ ಬಿದ್ದ ಮನೆಗೆ ನೀರು ಹೊಯ್ದು ತಣ್ಣಗಾಗಿಸುವ ಸರಕಾರಿ ಪೈರ್‌ಬ್ರಿಗೇಡ್ ಮೌನವಾಗಿದೆ. ಬೆಂಕಿ ಹತ್ತಿದ ಮನೆಯ ಗಳ ಹಿರಿದು ಪೆಟ್ರೋಲ್ ಹಾಕುವವರು ಕ್ರಿಯಾಶೀಲರಾಗಿದ್ದಾರೆ. ರಂಗಾಯಣ ಹತ್ತಿ ಉರಿಯುತ್ತಿದೆ. ಶಮನಗೊಳಿಸುವ ಸಾಧ್ಯತೆಗಳು ಮುಂದೂಡಲ್ಪಟಿವೆ.

-                                                                                                                                                                          - ಶಶಿಕಾಂತ ಯಡಹಳ್ಳಿ         
   






ಗುರುವಾರ, ಮೇ 12, 2016

ಗಮನ ಸೆಳೆಯದೆ ವಿಫಲವಾದ ಎನ್‌ಎಸ್‌ಡಿ ದ.ಭಾ ರಂಗೋತ್ಸವ :


ದಕ್ಷಿಣ ಭಾರತ ರಂಗೋತ್ಸವದ  ಉದ್ಘಾಟನೆ

ಆಧುನಿಕ ಭಾರತೀಯ ರಂಗಭೂಮಿಯಲ್ಲಿ ಹೊಸತನವನ್ನು ತರುವುದರಲ್ಲಿ ಹಾಗೂ ಸೃಜನಶೀಲ ರಂಗತಂತ್ರಗಳ ಬಳಕೆಯಲ್ಲಿ ರಾಷ್ಟ್ರೀಯ ರಂಗಶಾಲೆಯ (ಎನ್‌ಎಸ್‌ಡಿ) ಕೊಡುಗೆ ಆಪಾರವಾಗಿದೆ. ಜಾಗತಿಕ ರಂಗತರಬೇತಿ ಸಂಸ್ಥೆಗಳಲ್ಲಿ ರಾಷ್ಟ್ರೀಯ ನಾಟಕ ಶಾಲೆಗೆ ತನ್ನದೇ ಆದ ಮಹತ್ವವಿದೆ. ರಂಗಶಿಕ್ಷಣ ಹಾಗೂ ಪ್ರದರ್ಶನದಲ್ಲಿ 1959 ರಿಂದ ಮುಂಚೂಣಿಯಲ್ಲಿರುವ ಕೇಂದ್ರ ಸರಕಾರ ಪೋಷಿತ ರಾಷ್ಟ್ರೀಯ ರಂಗಶಾಲೆಯು ಭಾರತೀಯ ರಂಗಭೂಮಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಈ ನಾಟಕ ಶಾಲೆಯಿಂದಾಗಿ ಭಾರತೀಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಬಿ.ವಿ.ಕಾರಂತರಾದಿಯಾಗಿ ಅನೇಕಾನೇಕ ಪ್ರತಿಭೆಗಳು ದೊರಕಿವೆ. ದೆಹಲಿಗೆ ಹಾಗೂ ಹಿಂದಿ ಭಾಷೆಗೆ ಮಾತ್ರ ಸೀಮಿತವಾಗಿ ಕೇಂದ್ರೀಕೃತವಾಗಿದ್ದ ಎನ್‌ಎಸ್‌ಡಿಯನ್ನು ವಿಕೇಂದ್ರಿಕರಿಸಿ ಪ್ರಾದೇಶಿಕ ರಾಜ್ಯಗಳಿಗೂ ವಿಸ್ತರಿಸಬೇಕು ಎಂದು ಪ್ರಸನ್ನರಾದಿಯಾಗಿ ಅನೇಕಾನೇಕ ಕನ್ನಡ ರಂಗಕರ್ಮಿಗಳು ಹೋರಾಡುತ್ತಲೇ ಬಂದಿದ್ದಾರೆ. ಅವರೆಲ್ಲರ ಒತ್ತಡದ ಫಲವಾಗಿ ದಕ್ಷಿಣ ಭಾರತವನ್ನು ಪ್ರತಿನಿಧಿಸುವ ಎನ್‌ಎಸ್‌ಡಿ ಬೆಂಗಳೂರು ಕೇಂದ್ರ ಕರ್ನಾಟಕದ ರಾಜಧಾನಿಯಲ್ಲಿ ಆರಂಭವಾಯಿತು. ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ರಾಷ್ಟ್ರೀಯ ನಾಟಕ ಶಾಲೆ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿ ಪೂರ್ಣ ಪ್ರಮಾಣದ ನಾಟಕ ಶಾಲೆಯಾಗಿ ಅನುಷ್ಟಾನಗೊಂಡಿತು. ಬಿ.ಬಸವಲಿಂಗಯ್ಯನವರನ್ನು ನಿರ್ದೇಶಕರನ್ನಾಗಿ ಆಯ್ಕೆಮಾಡಲಾಯಿತು. ಕರ್ನಾಟಕ ಸರಕಾರವು ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಎನ್‌ಎಸ್‌ಡಿಗಾಗಿ ಮೂರು ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಹಾಗೂ ಕನ್ನಿಂಗ್‌ಹ್ಯಾಮ್ ರೋಡ್ ಪಕ್ಕ ಇರುವ ಗುರುನಾನಕ ಭವನವನ್ನು ರಂಗಪ್ರದರ್ಶನಗಳಿಗಾಗಿ ಬಿಟ್ಟು ಕೊಟ್ಟಿದೆ. ಇತ್ತೀಚೆಗೆ ಸ್ವಂತ ಕಟ್ಟಡ ಕಟ್ಟಲು ಕಲಾಗ್ರಾಮದಲ್ಲಿ ಶಿಲಾನ್ಯಾಸವನ್ನೂ ಮಾಡಲಾಗಿದೆ.

ದಕ್ಷಿಣ ಭಾರತದಿಂದಾಯ್ದ 20 ಕಲಾವಿದರಿಗೆ ಒಂದು ವರ್ಷದ ರಂಗತರಬೇತಿ, ರಂಗಪ್ರದರ್ಶನ ಹಾಗೂ ರಂಗೋತ್ಸವಗಳು ಕಳೆದ ಒಂದೂವರೆ ವರ್ಷಗಳಿಂದ ಶುರುವಾದವು. ಈಗಾಗಲೇ ಕುವೆಂಪುರವರ ಮಲೆಗಳಲಿ ಮದುಮಗಳ ಹಾಗೂ ನಾ.ದಾರವರ ಸಿರಿ ನಾಟಕಗಳನ್ನು ನಿರ್ಮಿಸಿ ಪ್ರದರ್ಶಿಸಲಾಗಿದೆ. ಕಳೆದ ವರ್ಷ ಪೌರ್ವಾತ್ಯ ರಾಜ್ಯಗಳ ರಂಗೋತ್ಸವ ಆಯೋಜಿಸಿ ಮೇಘಾಲಯ, ಸಿಕ್ಕಿಂ, ಮಣಿಪುರಿ, ಆಸ್ಸಾಮಿ ಹಾಗೂ ತ್ರಿಪುರದ ನಾಟಕಗಳನ್ನು ಪ್ರದರ್ಶಿಸಲಾಗಿತ್ತು. ಈ ವರ್ಷ ದಕ್ಷಿಣ ಭಾರತದ ದ್ವಾವಿಡ ಭಾಷೆಗಳಾದ ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡದ ಜೊತೆಗೆ ಹಲವು ಹಿಂದಿ ಭಾಷೆಯ ನಾಟಕಗಳನ್ನು ಆಹ್ವಾನಿಸಿದ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು ಎಪ್ರಿಲ್ 20 ರಿಂದ 29ರ ವರೆಗೆ ಹತ್ತು ದಿನಗಳ ದಕ್ಷಿಣ ಭಾರತ ರಂಗೋತ್ಸವವನ್ನು ಬೆಂಗಳೂರಿನ ಗುರುನಾನಕ್ ಭವನದಲ್ಲಿ ಆಯೋಜಿಸಿತ್ತು. ಈ ನಾಟಕೋತ್ಸವದ ಸಾಧಕ ಬಾಧಕಗಳನ್ನು ವಿಶ್ಲೇಷಿಸುವ ಪ್ರಯತ್ನವೇ ಈ ಲೇಖನ.


ಈ ನಾಟಕೋತ್ಸವವನ್ನು ಆಯೋಜಿಸುವ ಯೋಜನೇ ಏನೂ ಇರಲಿಲ್ಲ. ಇದಕ್ಕೆ ಮೂಲ ಕಾರಣೀಕರ್ತರಾದವರು ಬಿ.ಜಯಶ್ರೀಯವರು. ಬಿ.ಜಯಶ್ರಿಯವರು ತಮ್ಮ ಪೂರ್ವಜರ ಊರಾದ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ತಮ್ಮ ತಾತ ಗುಬ್ಬಿ ವೀರಣ್ಣನವರ ನೆನಪಿನಲ್ಲಿ ಗುಬ್ಬಿ ವೀರಣ್ಣ ರಂಗಮಂದಿರವನ್ನು ತಮ್ಮ ಸಂಸದರ ನಿಧಿಯಿಂದ ಕಟ್ಟಿಸಿದ್ದಾರೆ. ಈ ರಂಗಮಂದಿರದ ಉದ್ಘಾಟನೆಯನ್ನು ರಾಷ್ಟ್ರೀಯ ನಾಟಕೋತ್ಸವದೊಂದಿಗೆ ಮಾಡಬೇಕು ಎನ್ನುವುದು ಅವರ ಬಯಕೆಯಾಗಿತ್ತು. ಹೀಗಾಗಿ ಜಯಶ್ರೀಯವರ ಮಾತೃಸಂಸ್ಥೆಯಾದ ದೆಹಲಿಯ ರಾಷ್ಟ್ರೀಯ ರಂಗ ಶಾಲೆಯ ನಿರ್ದೇಶಕರಾದ ವಾಮನ ಕೇಂದ್ರೆಯವರನ್ನು ನಾಟಕೋತ್ಸವಕ್ಕೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡಲು ಕೇಳಿಕೊಂಡರು. ಸಂಸದೆಯ ಮಾತನ್ನು ಇಲ್ಲವೆನ್ನಲಾಗದ ಕೇಂದ್ರೆಯವರು ಗುಬ್ಬಿ ರಂಗೋತ್ಸವದ ಜೊತೆಗೆ ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ನಾಟಕೋತ್ಸವವನ್ನು ಜಂಟಿಯಾಗಿ ಆಯೋಜಿಸುವ ಯೋಜನೆ ಹಾಕಿಕೊಂಡರು. ಗುಬ್ಬಿಯಲ್ಲಿ ಪ್ರದರ್ಶನಗೊಳ್ಳುವ ಕೆಲವು ನಾಟಕಗಳನ್ನು ಎನ್‌ಎಸ್‌ಡಿ ಬೆಂಗಳೂರು ನಾಟಕೋತ್ಸವದಲ್ಲೂ ಪ್ರದರ್ಶಿಸುವುದೆಂದು ನಿರ್ಧರಿಸಲಾಯಿತು. ಹೀಗಾಗಿ ಗುಬ್ಬಿಯಲ್ಲಿ  ರಾಷ್ಟ್ರೀಯ ನಾಟಕೋತ್ಸವದ ಜೊತೆಗೆ ಬೆಂಗಳೂರಿನಲ್ಲಿ ದಕ್ಷಿಣ ಭಾರತ ರಂಗೋತ್ಸವವೂ ಸಹ ನಡೆದುಹೋಯಿತು. ಈ ನಾಟಕೋತ್ಸವವಾಗಲು ಮೂಲ ಕಾರಣೀಕರ್ತರಾದ ಬಿ.ಜಯಶ್ರೀಯವರನ್ನು ಅಭಿನಂದಿಸಲೇಬೇಕು.

ಹೊರ ರಾಜ್ಯಗಳ, ವಿಭಿನ್ನ ಭಾಷೆಗಳ ನಾಟಕಗಳು ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಬೆಂಗಳೂರಿನ ರಂಗಾಸಕ್ತ ಪ್ರೇಕ್ಷಕರಿಗೆ ಸಂತಸದ ಸಂಗತಿ. ಬೇರೆ ಶೈಲಿಯ, ವಿಭಿನ್ನ ಸಂಸ್ಕೃತಿಯ, ವಿಶಿಷ್ಟ ರಂಗತಂತ್ರಗಳ ನಾಟಕಗಳು ಪ್ರದರ್ಶನಗೊಳ್ಳುವುದನ್ನು ನೋಡುವುದೇ ಭಾಗ್ಯ. ಕಲೆಗೆ ಭಾಷೆಯ ಹಂಗೇ ಇಲ್ಲವಾದ್ದರಿಂದ ಯಾವ ಭಾಷೆಯ ನಾಟಕವಾದರೂ ಅದು ನೋಡುಗರಲ್ಲಿ ಅನುಭೂತಿಯನ್ನು ಕೊಡುತ್ತವೆ. ಹೀಗಾಗಿ ಬೇರೆ ಭಾಷೆಯ ರಂಗೋತ್ಸವ ಅಂದರೆ ಕೆಲವರಿಗೆ ಕುತೂಹಲ ಇದ್ದೇ ಇರುತ್ತದೆ. ಯುವ ರಂಗಕರ್ಮಿಗಳಿಗೆ ರಂಗವೈವಿದ್ಯತೆಗಳನ್ನು ನೋಡಿ ಹೊಸದನ್ನು ಕಲಿಯಲು ಅನುಕೂಲವೂ ಆಗುತ್ತದೆ. ಹೀಗಾಗಿ ಅಪರೂಪದ ನಾಟಕಗಳ ನಿರೀಕ್ಷೆಯಲ್ಲಿ ಕನ್ನಡ ರಂಗಾಸಕ್ತರು ಹಾಗೂ ರಂಗಕರ್ಮಿಗಳಿದ್ದರು. ಆದರೆ ಈ ನಿರೀಕ್ಷೆ ನಿರಾಸೆಯಾಗಿದ್ದೊಂದು ವಿಪರ್ಯಾಸ. ಯಾಕೆಂದರೆ ಅಸಾಧಾರಣ ನಾಟಕಗಳನ್ನು ನಿರೀಕ್ಷಿಸಿದವರಿಗೆ ಬಹುತೇಕ ಸಾಧಾರಣ ಹಾಗೂ ಕಳಪೆ ನಾಟಕಗಳು ಪ್ರದರ್ಶನಗೊಂಡಿದ್ದು ನೋಡಿ ಬೇಸರವಾಗಿದ್ದಂತೂ  ಸತ್ಯ. ಇದಕ್ಕೆಲ್ಲಾ ಕಾರಣವಾಗಿದ್ದು ನಾಟಕಗಳ ಆಯ್ಕೆಯಲ್ಲಾದ ಅವಘಡ.

ರಂಗೋತ್ಸವಕ್ಕೆ ಇಟ್ಟಿರುವ ಹೆಸರು ದಕ್ಷಿಣ ಭಾರತ ರಂಗೋತ್ಸವ ವೆಂದು  ದ್ರಾವಿಡ ಭಾಷಾ ನಾಟಕಗಳ ಪ್ರದರ್ಶವೆಂದು ಹೇಳಿ ಬಹುತೇಕ ನಾಟಕಗಳು ಹಿಂದಿಯ ಭಾಷೆಯಲ್ಲಿಯೇ ಇದ್ದವು. ಮೂರು ಕನ್ನಡ, ತಲಾ ಒಂದೊಂದು ತಮಿಳು, ತೆಲುಗು ಹಾಗೂ ಮಲಯಾಳಂ ನಾಟಕಗಳಿದ್ದರೆ ನಾಲ್ಕು ಹಿಂದಿ ಭಾಷೆಯ ನಾಟಕಗಳಿದ್ದವು. ಉತ್ತರ ಭಾರತದ ಹಿಂದಿ ಪ್ರಾಭಲ್ಯವನ್ನು ಪ್ರತಿರೋಧಿಸಿಯೇ ದಕ್ಷಿಣ ಭಾರತಕ್ಕೆ ರಾಷ್ಟ್ರೀಯ ರಂಗಶಾಲೆ ಬೇಕೆಂದು ಹಠ ಹಿಡಿದು ತರಲಾಗಿದ್ದು ಈಗ ಇತಿಹಾಸ. ದಕ್ಷಿಣ ಭಾರತದ ಕೋಟಾದಲ್ಲೂ ಈ ಹಿಂದಿ ಭಾಷೆಯವರೇ ಪ್ರಮುಖ ಪಾಲನ್ನು ಪಡೆದುಕೊಳ್ಳುತ್ತಿರುವುದು ಸಮರ್ಥನೀಯವಲ್ಲವೇ ಅಲ್ಲ. ಹತ್ತರಲ್ಲಿ ಒಂದು ಹಿಂದಿ ಭಾಷೆಯ ನಾಟಕವಾಗಿದ್ದರೆ ಆಕ್ಷೇಪಣೆ ಇರಲಿಲ್ಲ. ಆದರೆ ನಾಲ್ಕು ನಾಟಕಗಳು ಹಿಂದಿಯವರದೇ ಆಗಿದ್ದರಿಂದ ಒಂದಿಷ್ಟು ಅಸಮಾಧಾನ ಆಗಿದ್ದಂತೂ ಸುಳ್ಳಲ್ಲ.

ತುಕ್ಕೆ ಪೆ ತುಕ್ಕೆ ನಾಟಕದ ದೃಶ್ಯ
ಹೋಗಲಿ ಹಿಂದಿಯವರು ಅತ್ಯದ್ಬುತ ರೀತಿಯಲ್ಲಿ ನಾಟಕ ಮಾಡುತ್ತಾರೆ. ಅವುಗಳನ್ನು ನೋಡಿ ಬೆಂಗಳೂರಿಗರು ಧನ್ಯರಾಗಲಿ ಎಂಬುದು ಉದ್ದೇಶವಿದ್ದಲ್ಲಿ ಅದೂ ಕೂಡಾ ನೆರವೇರಲಿಲ್ಲ. ಯಾಕೆಂದರೆ  ತುಕ್ಕೆ ಪೆ ತುಕ್ಕ ಎನ್ನುವ ನಾಟಕ ಅತ್ಯಂತ ಬಾಲಿಷವಾಗಿದ್ದರೆ, ಚತುಷ್ ಕೋನ್ ನಾಟಕವನ್ನು ನಾಟಕ ಎಂದು ಹೇಳುವುದೇ ಅನುಮಾನ ಎನ್ನುವಂತಿದೆ. ತಾವೂಸ್ ಚಮನ್ ಕಿ ಮೈನಾ ಪರವಾಗಿಲ್ಲ ಎನ್ನುವ ನಾಟಕವಾದರೆ ಮೋಹೆ ಪಿಯಾ ನಾಟಕ ಮಾತ್ರ ಉತ್ತಮ ಎನ್ನುಬಹುದಾದ ಪ್ರಯೋಗವಾಗಿತ್ತು. ಎನ್‌ಎಸ್‌ಡಿ ನಾಟಕೋತ್ಸವಗಳಲ್ಲಿ  ನಾಟಕಗಳ ಆಯ್ಕೆಯ ಮಾನದಂಡಕ್ಕೆ ಏನೇನು ತೆರೆಮರೆಯ ಪ್ರಯತ್ನಗಳು ನಡೆಯುತ್ತವೋ ಗೊತ್ತಿಲ್ಲ. ಆದರೆ ಈ ದಕ್ಷಿಣ ಭಾರತ ರಂಗೋತ್ಸವದಲ್ಲಿ ಪ್ರದರ್ಶನಗೊಂಡ ಬಹುತೇಕ ನಾಟಕಗಳು ಇಂತಹ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲು ಅರ್ಹವಾಗಿರಲಿಲ್ಲ. ಎನ್‌ಎಸ್‌ಡಿ ಸಂಸ್ಥೆಯ  ನಿರ್ದೇಶಕ ಪ್ರೊ.ವಾಮನ್ ಕೇಂದ್ರೆಯವರ ನಿರ್ದೇಶನದ ಮೋಹೆ ಪೀಯಾ ನಿಜಕ್ಕೂ ಅದ್ಭುತವಾದ ನಾಟಕ ಆದರೆ ಕಳೆದ ವರ್ಷ ಇದೇ ಗುರುನಾನಕ ಭವನದಲ್ಲಿ ನಡೆದ ರಂಗಭಾರತಿ ರಾಷ್ಟ್ರಿಯ ನಾಟಕೋತ್ಸವದಲ್ಲಿ ಇದು ಈಗಾಗಲೇ ಪ್ರದರ್ಶನಗೊಂಡಿದ್ದು ಅನೇಕ ರಂಗಾಸಕ್ತರು ನೋಡಿದ್ದರು. ಈಗ ಮತ್ತೆ ಇದೇ ನಾಟಕವನ್ನು ಮರುಪ್ರದರ್ಶನಗೊಳಿಸಿದ್ದು ವಾಮನ್ ಕೇಂದ್ರೆಯವರ ನಾಟಕವೆಂಬುದಕ್ಕೆ ಎನ್ನುವುದು ನಿರ್ವಿವಾದ. ತಾವೇ ಮುಖ್ಯಸ್ತರಾದ ಸಂಸ್ಥೆಯ ನಾಟಕೋತ್ಸವದಲ್ಲಿ ತಮ್ಮದೇ ನಾಟಕವನ್ನು ಪ್ರದರ್ಶಿಸಲು ತಾವೇ ಅವಕಾಶ ಮಾಡಿಕೊಳ್ಳುವುದು ಸ್ವಾರ್ಥಹಿತಾಸಕ್ತಿಯಾಗಿದೆಯಾದರೂ ನಾಟಕ ತುಂಬಾ ಚೆನ್ನಾಗಿರುವುದರಿಂದ ಈ ಆಪಾದನೆ ಡೈಲ್ಯೂಟ್ ಆಗುವಂತಿದೆ.


ಆಗಮನ ನಾಟಕದ ದೃಶ್ಯ
ಅದ್ಯಾಕೋ ಎನ್‌ಎಸ್‌ಡಿ ಅಂದರೆ ಅದು ಎನ್‌ಎಸ್‌ಡಿಯವರ ಹಿತಾಸಕ್ತಿಗಾಗಿ ಮಾತ್ರ ಇದೆ ಎನ್ನುವುದು ಬಹುತೇಕ ಸಂದರ್ಭದಲ್ಲಿ ಸಾಬೀತಾಗಿದೆ.  ಈಗಲೂ ಸಹ ಈ ನಾಟಕೋತ್ಸವದ ಹತ್ತು ನಾಟಕಗಳಲ್ಲಿ ಏಳು ನಾಟಕಗಳು ಎನ್‌ಎಸ್‌ಡಿ ಪದವೀಧರರೇ ನಿರ್ದೇಶನ ಮಾಡಿದ್ದಾಗಿವೆ. ಜನರ ದುಡ್ಡಲ್ಲಿ ನಡೆಯುವ ಸಂಸ್ಥೆಯೊಂದು ಭಾರತದ ಸಮಗ್ರ ರಂಗಭೂಮಿಯನ್ನು ಪ್ರತಿನಿಧಿಸುವಂತಿರಬೇಕು ಎನ್ನುವುದು  ಸಾರ್ವಜನಿಕರ ಅಪೇಕ್ಷೆಯಾಗಿದೆ. ಆದರೆ.. ಎನ್‌ಎಸ್‌ಡಿ ಇರುವುದೇ ಅಲ್ಲಿ ತರಬೇತಾಗಿ ಬಂದ ಪದವೀಧರರ ಅನುಕೂಲಕ್ಕಾಗಿ ಎಂದುಕೊಂಡಿದ್ದು ರಾಷ್ಟ್ರೀಯ ನಾಟಕ ಶಾಲೆಯ ಪದಾಧಿಕಾರಿಯಾದವರ ಅಘೋಷಿತ ನಂಬಿಕೆಯಾಗಿದೆ. ಹೀಗಾಗಿ ಬಹುತೇಕ ಎನ್‌ಎಸ್‌ಡಿ ನಾಟಕೋತ್ಸವದಲ್ಲಿ ಹೆಚ್ಚಿನ ಪಾಲನ್ನು ಪಡೆಯುವುದು ಎನ್‌ಎಸ್‌ಡಿ ಪದವೀದರರೇ ಆಗಿದ್ದಾರೆ. ಇದರಿಂದಾಗಿ ಎನ್‌ಎಸ್‌ಡಿ ಎನ್ನುವುದು ಮೊದಲಿನಿಂದ ಸಮಗ್ರ ರಂಗಭೂಮಿಯ ಭಾಗವಾಗದೇ ತನ್ನದೇ ಪ್ರತ್ಯೇಕ ಸಾಮ್ರಾಜ್ಯವನ್ನು ಕಟ್ಟಿಕೊಂಡು ದ್ವೀಪದಂತಾಗಿದೆ. ಯಾವಾಗ ಎನ್‌ಎಸ್‌ಡಿ ಯೇತರ ರಂಗಕರ್ಮಿಗಳನ್ನು ಎನ್‌ಎಸ್‌ಡಿ ನಿರ್ಲಕ್ಷಿಸುವುದೋ  ಆಗ ಬೇರೆ ರಂಗಕರ್ಮಿಗಳು ಎನ್‌ಎಸ್‌ಡಿಯನ್ನು ದೂರವೇ ಇಟ್ಟಿದ್ದಾರೆ. ಈ ಎನ್‌ಎಸ್‌ಡಿ ಮತ್ತು ನಾನ್ ಎನ್‌ಎಸ್‌ಡಿಗಳ ನಡುವಿನ ಅಂತರ ಮೊದಲಿನಿಂದಲೂ ಹೆಚ್ಚುತ್ತಲೇ ಇದೆ. ಇದರ ಪರಿಣಾಮವನ್ನು ಈ ನಾಟಕೋತ್ಸವದಲ್ಲೂ ಕಾಣಬಹುದಾಗಿದೆ. ಬೆಂಗಳೂರಿನ ಬಹುತೇಕ ರಂಗಕರ್ಮಿ ಕಲಾವಿದರುಗಳು ಈ ನಾಟಕೋತ್ಸವಕ್ಕೆ ಅಘೋಷಿತ ನಿರ್ಲಕ್ಷತೋರಿ ರಂಗೋತ್ಸವದಿಂದ ದೂರವೇ ಉಳಿದಿದ್ದರಿಂದ ನಾಟಕೋತ್ಸವದಾದ್ಯಂತ ಪ್ರೇಕ್ಷಕರ ಕೊರತೆ ಎದ್ದು ಕಾಣುವಂತಿತ್ತು.

ಕುದುರೆ ಮೊಟ್ಟೈ  ತಮಿಳು ನಾಟಕದ ದೃಶ್ಯ
ದ್ರಾವಿಡ ಭಾಷೆಯ ನಾಟಕಗಳ ಆಯ್ಕೆಯಲ್ಲೂ ಸಹ ಮುತುವರ್ಜಿ ವಹಿಸಲಾಗಿಲ್ಲ. ಮಲಯಾಳಿ ನಾಟಕ ಹಾಗೂ ಕನ್ನಡದ ಮುಖ್ಯಮಂತ್ರಿ ನಾಟಕ ಹೊರತು ಪಡಿಸಿದರೆ ಮಿಕ್ಕ ನಾಟಕಗಳಿಗೆ ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ಅರ್ಹತೆಯ ಬಗ್ಗೆ ಅನುಮಾನಗಳಿವೆ. ತೆಲುಗು ತಮಿಳು ನಾಟಕಗಳಂತೂ ಇನ್ನೂ ಆಧುನಿಕ ರಂಗಭೂಮಿಯ ವಸ್ತು ವಿನ್ಯಾಸ ವ್ಯಾಕರಣಗಳಿಗಿಂತ ಹಿಂದುಳಿದಂತೆ ಕಂಡುಬರುತ್ತವೆ. ನಾಟಕವೊಂದರ ಕೊನೆಗೆ ವೇದಿಕೆಯ ಮೇಲೆ ಮಾತಾಡುತ್ತಾ ನಾಟಕಕಾರ ರಾಜಪ್ಪ ದಳವಾಯಿಯವರು ಈ ನಾಟಕೋತ್ಸವದಲ್ಲಿ ಮೂರ್ಖತನದ ನಾಟಕಗಳ ಸೀರಿಯಲ್ ಪ್ರದರ್ಶನಗೊಂಡಂತಿದೆ ಎಂದು ಒಂದೇ ವಾಖ್ಯದಲ್ಲಿ ತಮ್ಮ ವಿಮರ್ಶೆಯನ್ನು ಹೇಳಿದರು. ಅವರು ಹೇಳಿದ್ದರಲ್ಲೂ ಸತ್ಯವಿತ್ತು. ತುಕೆ ಪೆ ತುಕ್ಕ, ತಮಾಶ, ಆಗಮನ, ಕುದಿರೈ ಮುಟ್ಟೈ.. ಈ ನಾಲ್ಕೂ ನಾಟಕಗಳೂ ಮೂರ್ಖತನದ ಪ್ರದರ್ಶನವನ್ನೇ ನಾಟಕದ ವಸ್ತುವಾಗಿ ಆಯ್ಕೆ ಮಾಡಿಕೊಂಡಿದ್ದವು. ಹೀಗಾಗಿ ಇಡೀ ನಾಟಕೋತ್ಸವ ಅಳಿದುಳಿದ ನೋಡುಗರ ಗಮನ ಸೆಳೆಯುವಲ್ಲಿ ವಿಫಲವಾಯಿತು. ಕೊಟ್ಟ ಕಡೆಯ ದಿನ ಪ್ರದರ್ಶನಗೊಂಡ ಚರಿತ್ರಪುಸ್ತಕತಿಲೆಕ್ಕು ಒರೇಡು ನಾಟಕ ಮಾತ್ರ ತನ್ನ ಅದ್ಬುತವಾದ ಪ್ರೆಜಂಟೇಶನ್ನಿನಿಂದಾಗಿ ಗಮನ ಸೆಳೆಯಿತು.

ಧಾರವಾಡ ರಂಗಾಯಣದ ತಮಾಶ ನಾಟಕದ ದೃಶ್ಯ
ಸರಕಾರಿ ಅನುದಾನಿತ ಸಂಸ್ಥೆಗಳಿಗೆ ಸಾಮಾಜಿಕ ಬದ್ಧತೆ ಎನ್ನುವುದು ಇರಲೇಬೇಕು. ಎನ್‌ಎಸ್‌ಡಿ ಯಂತಹ ಕೇಂದ್ರ ಸರಕಾರ ಪ್ರಾಯೋಜಿತ ಸಂಸ್ಥೆಯು ನಾಟಕೋತ್ಸವ ಮಾಡುತ್ತದೆ ಎಂದರೆ ಅದರಲ್ಲಿ ಪ್ರದರ್ಶನಗೊಳ್ಳುವ ನಾಟಕಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಇರಬೇಕಾದದ್ದು ಅಪೇಕ್ಷಣೀಯ. ಆದರೆ.. ಈ ನಾಟಕೋತ್ಸವದಲ್ಲಿ ಆಯ್ಕೆಯಾದ ಕೆಲವು ನಾಟಕಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವಂತಿದ್ದದ್ದು ವಿಪರ್ಯಾಸಕರ. ಉದಾಹರಣೆಗೆ. ಧಾರವಾಡ ರಂಗಾಯಣ ನಿರ್ಮಿಸಿದ ತಮಾಶ ನಾಟಕ. ಇಡೀ ನಾಟಕದಲ್ಲಿ ಕಥೆ ನಾಟಕೀಯತೆ ಏನೂ ಇಲ್ಲದೇ ಕೇವಲ ದ್ವಂದ್ವಾರ್ಥ ಸಂಭಾಷಣೆ ಹಾಗೂ ಡಬಲ್ ಮೀನಿಂಗ ಇರುವ ದೃಶ್ಯಗಳನ್ನು ಕಟ್ ಆಂಡ್ ಪೇಸ್ಟ್ ಮಾಡಿ ನಾಟಕವೆಂದು ಕಟ್ಟಿಕೊಟ್ಟಿದ್ದಾರೆ. ಪ್ರೇಕ್ಷಕರ ಮನದಾಳದಲ್ಲಿರಬಹುದಾದ ವಿಕೃತಿಯನ್ನು ಉದ್ದೀಪನಗೊಳಿಸುವ ಕೆಲಸವನ್ನು ಮಾಡುವ ಈ ನಾಟಕವು ಮನರಂಜನೆಯ ಹೆಸರಲ್ಲಿ ನೋಡುಗರ ಮನಸ್ಸಿನ ಸ್ವಾಸ್ಥ್ಯವನ್ನು ಹಾಳುಮಾಡುವಂತಿದೆ. ಇದೇ ರೀತಿ ಸುರೇಶ್ ಆನಗಳ್ಳಿ ನಿರ್ದೇಶನದ ಆಗಮನ ನಾಟಕವೂ ಸಹ ಸೌಹಾರ್ಧತೆಗೆ ವ್ಯತಿರಿಕ್ತವಾದ ಸೇಡಿಗೆ ಸೇಡು ಎನ್ನುವ ನಕಾರಾತ್ಮಕ ಸಂದೇಶವನ್ನು ಹೇಳುವಂತಿದೆ. ಯುವತಿಯೊಬ್ಬಳು ತಮ್ಮ ಮೇಲಾದ ದೌರ್ಜನ್ಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಹಣಬಲದಿಂದ ಇಡೀ ಊರನ್ನೇ ಭ್ರಷ್ಟಗೊಳಿಸುವ ಕೆಲಸವನ್ನು ನಿಷ್ಟೆಯಿಂದ ಮಾಡುತ್ತಾಳೆ. ಊರಿನ ಸೌಹಾರ್ಧ ಸಂಬಂಧಗಳನ್ನು ಹಾಳು ಮಾಡುತ್ತಾಳೆ. ಇಂತಹ ನಕಾರಾತ್ಮಕ ಸಂದೇಶ ಸಾರುವಂತಹ ದ್ವೇಷಮಯ ನಾಟಕವು ಸರಕಾರಿ ಸಂಸ್ಥೆಯೊಂದು ಪ್ರಾಯೋಜಿಸಿದ ನಾಟಕೋತ್ಸವದಲ್ಲಿ ಪ್ರದರ್ಶಿಸುವುದು ಸೂಕ್ತವಲ್ಲವೇ ಅಲ್ಲ. ಇನ್ನೊಂದು ತುಕ್ಕೆ ಪೆ ತುಕ್ಕ ಎನ್ನುವ ಹಿಂದಿ ನಾಟಕದಾದ್ಯಂತ ವಿದೂಷಕರಾಟವೇ ಅನಾವರಣಗೊಂಡಿದೆ. ಹಾಸ್ಯಕ್ಕಾಗಿಯೇ ಹಾಸ್ಯ ಎನ್ನುವಂತಹ ಅಪಹಾಸ್ಯದ ನಾಟಕವನ್ನು ಈ ನಾಟಕೋತ್ಸವದಲ್ಲಿ ಪ್ರದರ್ಶಿಸಲು ಯಾರು ಅವಕಾಶ ಕೊಟ್ಟರೋ ಗೊತ್ತಿಲ್ಲ.


ಚತುಷ್ಕೋನ  ಹಿಂದಿ ನಾಟಕದ ದೃಶ್ಯ
ಚತುಷ್‌ಕೊನ್ ಎನ್ನುವ ಇನ್ನೊಂದು ಹಿಂದಿ ನಾಟಕದಾದ್ಯಂತ ಬರೀ ಹೆಂಡ ಮತ್ತು ಹಾದರವೇ ತುಂಬಿದೆ. ನಾಟಕದ ಮುಕ್ಕಾಲು ಪಾಲು ದೃಶ್ಯಗಳಲ್ಲಿ ಕುಡಿತವೇ ಖಾಯಂ ಆಗಿದೆ. ವೇದಿಕೆ ಮೇಲೆ ಬಾರ್‌ಕೌಂmರ್ ಓಪನ್ ಮಾಡಲಾಗಿದ್ದು ಮಧ್ಯಪ್ರೀಯರಿಗೆ ಆನಂದವನ್ನುಂಟು ಮಾಡುವಂತಿದೆ. ಜೊತೆಗೆ ಮಹಿಳೆಯೊಬ್ಬಳು ಆಸ್ತಿಗಾಗಿ ತನ್ನ ಯೌವನವನ್ನು ಬಳಸಿಕೊಂಡು ಮತ್ತೊಬ್ಬನಿಂದ ಗಂಡನ ಕೊಲೆ ಮಾಡಿಸುವುದೇ ಈ  ನಾಟಕದ ವಸ್ತುವಾಗಿದೆ. ಸಂಚು ವಂಚನೆ ಕುಡಿತ ಹಾದರಗಳ ಆಡಂಬೋಲವಾದ ಈ ನಾಟಕ ನೋಡುಗರ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವಂತಿದ್ದು ಸರಕಾರಿ ಸಂಸ್ಥೆಯೊಂದರ ನಾಟಕೋತ್ಸವದಲ್ಲಿ ಅದು ಹೇಗೆ ಅವಕಾಶ ಪಡೆಯಿತು ತನ್ನುವುದೇ ಯಕ್ಷಪ್ರಶ್ನೆ. ತಮಿಳಿನ ಕುದುರೆ ಮೊಟ್ಟೈ ನಾಟಕ ಅದೆಷ್ಟು ಬಾಲಿಷವಾಗಿತ್ತೆಂದರೆ ನೋಡುಗರು ತೂಕಡಿಸುವಷ್ಟು. ದ್ವಾರಕೀಶ ಅಭಿನಯದ ಗುರುಶಿಷ್ಯರು ಸಿನೆಮಾವನ್ನೇ ಹೋಲುವಂತಹ, ಕನ್ನಡದ ಗಾಂಪರ ಗುಂಪು ಕಥೆಯನ್ನೇ ವೇದಿಕೆಯ ಮೇಲೆ ಯಥಾವತ್ತಾಗಿ ತಂದಿದ್ದಾರೆ. ಗುರು ಶಿಷ್ಯರ ಮೂರ್ಖತನವನ್ನೇ ಹೇಳುವ ಈ ನಾಟಕ ಸಮಾಜಕ್ಕೆ ಕೊಡುವ ಕೊಡುಗೆ ಮಾತ್ರ ಶೂನ್ಯ. ತೆಲುಗಿನ ನಾಯಕುರಾಲು ನಾಗಮ್ಮ ನಾಟಕ ಹೊಡೆಸಿದಷ್ಟು ಬೋರು ಬೇರೆ ಯಾವುದೇ ನಾಟಕವೂ ಹೊಡೆಸಲಿಲ್ಲ. ಅದ್ಯಾರು ಇಂತಹ ನಾಟಕಗಳನ್ನು ಆಯ್ಕೆ ಮಾಡಿದರೋ ಗೊತ್ತಿಲ್ಲ. ಆದರೆ ಇಡೀ ನಾಟಕೋತ್ಸವದ ಆಶಯ ಇಂತಹ ನಕಾರಾತ್ಮಕ ಸಂದೇಶಗಳ ನಾಟಕಗಳಿಂದಾಗಿ ಹಾಳಾಗಿಹೋಗಿದ್ದಂತೂ ಸುಳ್ಳಲ್ಲ.


ಖಾಲಿ ಖಾಲಿ ಸಭಾಂಗಣ
ಬೆಂಗಳೂರಿನ ಪ್ರೇಕ್ಷಕರು ಬಲು ಪ್ರಜ್ಞಾವಂತರು. ಉತ್ತಮವಾದ ನಾಟಕಗಳಿಗೆ ಬಲು ಬೇಗ ಸ್ಪಂದಿಸುತ್ತಾರೆ. ನಾಟಕ ಹಿಡಿಸದಿದ್ದರೆ ರಂಗಮಂದಿರದಿಂದಲೇ ದೂರಾಗುತ್ತಾರೆ. ಹೀಗಾಗಿ ನಾಟಕಗಳು ಸೊರಗುತ್ತಿದ್ದಂತೆ ದಿನದಿಂದ ದಿನಕ್ಕೆ ಪ್ರೇಕ್ಷಕರು ಕರಗತೊಡಗಿದರು. ಮೂವತ್ತು ಲಕ್ಷ ರೂಪಾಯಿಯ ನಾಟಕೋತ್ಸವ ಎಂದ ಮೇಲೆ ಪ್ರಚಾರವನ್ನೂ ಹೆಚ್ಚೇ ಕೊಡಬೇಕಾಗಿತ್ತು. ಅಂದಾಜು ಮೂರು ಲಕ್ಷ ರೂಪಾಯಿ ಖರ್ಚಿನ ಒಂದೊಂದು ನಾಟಕಕ್ಕೂ ಕನಿಷ್ಟ ಇನ್ನೂರು ಜನರೂ ಬಂದು ನೋಡಲಿಲ್ಲ ಎಂದರೆ ಯಾರಿಗೋಸ್ಕರ ಈ ನಾಟಕೋತ್ಸವ ಎನ್ನುವ ಪ್ರಶ್ನೆ ಏಳುತ್ತದೆ. ಫೇಸ್‌ಬುಕ್ ವಾಟ್ಸಾಪ್‌ಗಳನ್ನೇ ನಂಬಿಕೊಂಡ ಬಸವಲಿಂಗಯ್ಯನವರು ಬೇರೆ ಪ್ರಚಾರ ತಂತ್ರಗಳಿಗೆ ಅಷ್ಟೊಂದು ಮಹತ್ವ ಕೊಡಲೇ ಇಲ್ಲ. ಕೆಲವು  ಆಯ್ದ ರಂಗಕರ್ಮಿಗಳಿಗೆ ಆಹ್ವಾನ ಪತ್ರಗಳನ್ನು ಪೋಸ್ಟ್ ಮೂಲಕ ಕಳುಹಿಸಿದರಾದರೂ ಅವು ಬಹುತೇಕರಿಗೆ ತಲುಪಿದ್ದು ನಾಟಕೋತ್ಸವ ಅರ್ಧ ಮುಗಿದ ನಂತರ. ಕಳೆದ ಸಲದ ನಾಟಕೋತ್ಸವದಲ್ಲಿ ಸಿ.ಬಸವಲಿಂಗಯ್ಯನವರು ಹೆಚ್ಚು ಆಸಕ್ತಿ ವಹಿಸಿ.. ಬಹುತೇಕರಿಗೆ ಪರ್ಸನಲ್ ಆಗಿ ಪೋನ್ ಮಾಡಿ ಆಹ್ವಾನಿಸಿದ್ದರಿಂದ ಪ್ರೇಕ್ಷಕರು ಕಿಕ್ಕಿರಿದಿದ್ದರು. ತೆಲುಗಿನ ಸುರಭಿ ತಂಡದ ಮಾಯಾಬಜಾರ್ ನಾಟಕಕ್ಕಂತೂ ಜನ ಕಿಕ್ಕಿರಿದು ಕೂಡಲೂ ಜಾಗವಿರಲಿಲ್ಲ. ಆದರೆ... ಈ ಸಲ ಸಿ.ಬಸವಲಿಂಗಯ್ಯನವರು ಸಿನೆಮಾ, ಸೀರಿಯಲ್‌ಗಳಲ್ಲಿ ಅಭಿನಯಿಸುವುದಕ್ಕೆ ತಮ್ಮ ಸಮಯವನ್ನು ಕೊಟ್ಟಿದ್ದರಿಂದಲೋ.. ಇಲ್ಲವೇ ಅರಸು ರಂಗೋತ್ಸವ ಎನ್ನುವ ಸರಕಾರಿ ಪ್ರಾಜೆಕ್ಟಿನ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷತೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದರಿಂದಲೋ ತಮ್ಮ ದಕ್ಷಿಣ ಭಾರತ  ಎನ್‌ಎಸ್‌ಡಿ ನಾಟಕೋತ್ಸವಕ್ಕೆ ರಂಗಾಸಕ್ತರನ್ನು ಮೊಬಲೈಸ್ ಮಾಡಲು ಸಾಧ್ಯವಾಗಲೇ ಇಲ್ಲ. ತಮ್ಮ ಮೇಲಿನ ಹೊಣೆಗಾರಿಕೆಯನ್ನು ಹೊರಗುತ್ತಿಗೆ ಕೊಡುವ ಮೂಲಕ ಕನ್ನಡ ರಂಗಭೂಮಿಯಲ್ಲಿ ಅಪಾಯಕಾರಿ ಪ್ರವೃತ್ತಿಗೆ ಚಾಲನೆಯನ್ನಿತ್ತರು.

ಹೊರಗುತ್ತಿಗೆ ಎನ್ನುವುದು ಕಾರ್ಪೊರೇಟ್ ಸಂಸ್ಕೃತಿಯಾಗಿದ್ದು.. ಒಂದು ಕಂಪನಿ ತನ್ನ ಹೆಚ್ಚುವರಿ ಕೆಲಸವನ್ನು ಬೇರೆಯವರಿಗೆ ಗುತ್ತಿಗೆ ಕೊಡುವ ಮೂಲಕ ಮಾಡಿಸುವಂತಹುದ್ದಾಗಿದೆ. ಇದಕ್ಕೆ ಔಟ್ ಸೋರ್ಸಿಂಗ್ ಅಂದರೆ ಹೊರಗುತ್ತಿಗೆ ಎನ್ನುತ್ತಾರೆ. ರಂಗಭೂಮಿಯಲ್ಲೂ ಸಹ ಈ ಅನಿಷ್ಟ ಹೊರಗುತ್ತಿಗೆ ವ್ಯವಹಾರವನ್ನು ಸಿ.ಬಸವಲಿಂಗಯ್ಯನವರು ಆರಂಭಿಸಿ ತಮ್ಮ ಮೇಲಿನ ಭಾರವನ್ನು ಕಡಿಮೆ ಮಾಡಿಕೊಳ್ಳಲು ನೋಡಿದರು. ಇಡೀ ನಾಟಕೋತ್ಸವ ಕುರಿತ ಮುದ್ರಣ, ಪ್ರಸರಣ ಮತ್ತು ಪ್ರಚಾರವನ್ನು ಬೇರೆಯವರಿಗೆ ಗುತ್ತಿಗೆ ಕೊಟ್ಟರು. ಆದರೆ ಗುತ್ತಿಗೆ ಪಡೆದವರ ಕಾರ್ಯತತ್ಪರತೆಯನ್ನು ಮಾನಿಟರ್ ಮಾಡುವ ಹಾಗೂ ನಿಯಂತ್ರಿಸುವಷ್ಟು ಸಮಯ ಬಸವಲಿಂಗಯ್ಯನವರಿಗಿರಲಿಲ್ಲ. ಹೀಗಾಗಿ ಪೋಸ್ಟ್ ಮಾಡಿದ ಕಾರ್ಯಕ್ರಮಗಳ ವಿವರದ ಆಹ್ವಾನ ಪತ್ರಗಳು ನಾಟಕೋತ್ಸವ ಆರಂಭಗೊಂಡು ಮೂರ‍್ನಾಲ್ಕು ದಿನಗಳಾದ ಮೇಲೆ ತಲುಪಿದವು. ಎಲ್ಲಾ ನಾಟಕಗಳ ವಿವರಗಳಿರುವ ಬ್ರೋಷರ್ ಮುದ್ರಣಗೊಂಡು ಪ್ರೇಕ್ಷಕರಿಗೆ ಹಂಚಿಕೆಯಾಗಿದ್ದು ನಾಟಕೋತ್ಸವ ಆರಂಭವಾಗಿ ನಾಲ್ಕು ದಿನಗಳ ಮೇಲೆ. ಈ ರೀತಿಯ ಹೊರಗುತ್ತಿಗೆ ಬೇಕಿತ್ತಾ?.  ಎನ್‌ಎಸ್‌ಡಿ ಬೆಂಗಳೂರು ಕೇಂದ್ರದಲ್ಲಿ ದಿನದಿಪ್ಪತ್ತನಾಲ್ಕು ಗಂಟೆಯೂ ಸಿಗುವ ೨೦ ವಿದ್ಯಾರ್ಥಿಗಳಿದ್ದಾರೆ. ಜೊತೆಗೆ ಈ ನಾಟಕೋತ್ಸವಕಾಗಿಯೇ ಸಂಬಳ ಕೊಟ್ಟು ನಿಯಮಿಸಿಕೊಂಡ ವಾಲೆಂಟರುಗಳೂ ಇದ್ದಾರೆ. ಇವರ ನೆರವನ್ನು ಪಡೆದು ವಿಳಾಸ ಬರೆದು ಸಕಾಲಕ್ಕೆ ಪೋಸ್ಟ್ ಮಾಡುವುದು ಅಂತಹ ದೊಡ್ಡ ಕೆಲಸವೇ ಅಲ್ಲ. ಆದರೆ ದೊಡ್ಡ ಪ್ರಮಾಣದ ಹಣದ ಖರ್ಚು ತೋರಿಸಬೇಕಲ್ಲಾ. ಅದಕ್ಕಾಗಿ ಈ ಹೊರಗುತ್ತಿಗೆ ವ್ಯಾಪಾರ ಎಂಬುದು ಕೆಲವು ರಂಗಕರ್ಮಿಗಳ ಆರೋಪವೂ ಆಗಿದೆ. ಸೆಟ್ ಪ್ರಾಪರ್ಟಿಗಳ ತಯಾರಿಯಿಂದ ಹಿಡಿದು ಪ್ರಚಾರದವರೆಗೆ ನಾಟಕೋತ್ಸವದ ಬಹುತೇಕ ಕೆಲಸಗಳನ್ನು ಹೊರಗುತ್ತಿಗೆ ಕೊಡಲಾಗಿದೆ. ಈ ಕೆಲಸವನ್ನು ರಂಗಭೂಮಿಯಲ್ಲಿರುವವರಿಗೆ ಕೊಟ್ಟಿದ್ದರೆ, ಕೆಲವರಿಗೆ ಒಂದಿಷ್ಟು ಕೆಲಸವಾದರೂ ಸಿಗುತ್ತಿತ್ತು. ಗುತ್ತಿಗೆದಾರರ ಬದಲು ರಂಗಜೀವಿಗಳಿಗೆ ಒಂದಿಷ್ಟು ಕೇಂದ್ರ ಸರಕಾರದ ಹಣವಾದರೂ ದಕ್ಕುತ್ತಿತ್ತು. ಕೇಂದ್ರ ಸರಕಾರದ ಹಣದಲ್ಲಿ ಕೇವಲ ಎನ್ ಎಸ್ ಡಿಯವರು ಹಾಗೂ ಗುತ್ತಿಗೆದಾರರು ಮಾತ್ರ ಬದುಕಬೇಕೆಂದರೆ ಕನ್ನಡ ರಂಗಭೂಮಿಯವರು ಏನು ಮಾಡಬೇಕು?


ಬಸವಲಿಂಗಯ್ಯನವರಿಗೆ ಸಂಘಟನಾತ್ಮಕ ಸಾಮರ್ಥ್ಯ ಬೇಕಾದಷ್ಟಿದೆ. ಎರಡು ವರ್ಷಗಳ ಹಿಂದೆ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದ ನಿರ್ದೇಶಕರಾಗಿ ಯಶಸ್ವಿಗೊಳಿಸಿದ್ದರು. ಮಲೆಗಳಲಿ ಮದುಮಗಳು ಎನ್ನುವ ಮೆಘಾ ನಾಟಕದ ಮೂರು ಅವತರಣಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕಳೆದ ಸಲವೂ ಸಹ ಎನ್‌ಎಸ್‌ಡಿ ಪೌರ್ವಾತ್ಯ ರಂಗೋತ್ಸವವನ್ನೂ ಸಹ ಉತ್ತಮ ರೀತಿಯಲ್ಲಿ ಆಯೋಜಿಸಿದ್ದರು. ಆದರೆ.. ಈ ಸಲ ಅದ್ಯಾಕೆ ನಾಟಕಗಳ ಆಯ್ಕೆ ಹಾಗೂ ನಾಟಕೋತ್ಸವದ ಆಯೋಜನೆಯಲ್ಲಿ ವಿಫಲರಾದರು ಎನ್ನುವುದು ಅರ್ಥವಾಗುತ್ತಿಲ್ಲ. ಮಿತಿಮೀರಿದ ಕೆಲಸಗಳ ಭಾರವನ್ನು ಹೊತ್ತಿದ್ದರಿಂದಾಗಿ ಯಾವುದಕ್ಕೂ ಸಂಪೂರ್ಣ ನ್ಯಾಯ ಸಲ್ಲಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಜೊತೆಗೆ ಡಿ.ಎಸ್.ಚೌಗಲೆ ಹಾಗೂ ಪ್ರಕಾಶ ಗರೂಡರಂತವರನ್ನು ಜೊತೆಗೆ ಇಟ್ಟುಕೊಂಡಿದ್ದರಿಂದ ದಿಕ್ಕು ತಪ್ಪಿದಂತಾಗಿದ್ದಾರೆ. ಹೆಸರಿಗೆ ಮಾತ್ರ ಡಾ.ಕೆ.ಮರುಳಸಿದ್ದಪ್ಪನವರನ್ನು ಈ ನಾಟಕೋತ್ಸವದ ಅಧ್ಯಕ್ಷರನ್ನಾಗಿಸಿದ್ದಾರಾದರೂ ಅವರಿಗೆ ಯಾವುದೇ ನೀತಿ ನಿರ್ಧಾರಗಳಲ್ಲಿ ನಿಯಂತ್ರಣವಿಲ್ಲ. ಹೀಗಾಗಿ ಬಸವಲಿಂಗಯ್ಯನವರು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆಗಳ ನಿರ್ದೇಶಕರುಗಳ ಸಹಕಾರ ಪಡೆದುಕೊಂಡಂತೆ ಕನ್ನಡ ರಂಗಭೂಮಿಯ  ಕ್ರಿಯಾಶೀಲ ರಂಗತಂಡಗಳನ್ನು ಹಾಗೂ ರಂಗಕರ್ಮಿ ಕಲಾವಿದರನ್ನು ಒಳಗೊಂಡಂತೆ ಎನ್‌ಎಸ್‌ಡಿಯನ್ನು ಕಟ್ಟಿದರೆ  ಎನ್‌ಎಸ್‌ಡಿ ಹಾಗೂ ನಾನ್ ಎನ್‌ಎಸ್‌ಡಿಗಳ ನಡುವಿರುವ ಅಂತರವನ್ನು ಕಡಿಮೆಮಾಡಿ ಸೌಹಾರ್ಧಯುತವಾದ ವಾತಾವರಣವನ್ನು ನಿರ್ಮಿಸಬಹುದಾಗಿದೆ. ಎನ್‌ಎಸ್‌ಡಿ ಎನ್ನುವ ದ್ವೀಪವನ್ನು  ಕನ್ನಡ ರಂಗಭೂಮಿ ಎನ್ನುವ ಕಡಲಲ್ಲಿ ಒಂದಾಗಿಸಬೇಕಿದೆ. ಜೊತೆಗೆ ದಿನಪತ್ರಿಕೆಗಳಲ್ಲಿ ಬಂದರೆ ಮಾತ್ರ ಪ್ರಚಾರ ಎನ್ನುವ ಭ್ರಮೆಯನ್ನು ಬಿಟ್ಟು ರಂಗಭೂಮಿಗೆ ಮೀಸಲಾದ ಪತ್ರಿಕೆಗಳಿಗೂ ಪ್ರಾಮುಖ್ಯತೆ ಕೊಡುವ ಅಗತ್ಯವಿದೆ. ಯಾಕೆಂದರೆ ಈ ಎಲ್ಲಾ ನಾಟಕೋತ್ಸವಗಳನ್ನು ದಾಖಲಿಸುವ ಕೆಲಸವನ್ನು ರಂಗಪತ್ರಿಕೆಗಳು ಮಾಡುತ್ತವೆ. ದಿನಪತ್ರಿಕೆಗಳಲಿ ಬರುವ ಪುಟ್ಟ ವರದಿಗಳಿಗಿಂತಾ ರಂಗಪತ್ರಿಕೆಗಳಲಿ ಬರುವ ಲೇಖನ ಹಾಗೂ ವಿಮರ್ಶೆಗಳು ರಂಗದಾಖಲೆಯಲ್ಲಿ ಬಹುದೊಡ್ಡ ಕೆಲಸವನ್ನು ಮಾಡುತ್ತವೆ ಎನ್ನುವ ಅರಿವು ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ರೂವಾರಿಗಳಿಗೆ ಇರಬೇಕಾಗಿದೆ.  


ಮುಖ್ಯಮಂತ್ರಿ ನಾಟಕದ ದೃಶ್ಯ
ಈ ನಾಟಕೋತ್ಸವದ ವಿಫಲತೆಯಿಂದ ಎನ್‌ಎಸ್‌ಡಿಯ ರೂವಾರಿಗಳು ಪಾಠ ಕಲಿಯಬೇಕಿದೆ. ಯಾಕೆಂದರೆ.. 2018ರಲ್ಲಿ ಎನ್‌ಎಸ್‌ಡಿ ದೆಹಲಿಯು ಅಂತರಾಷ್ಟ್ರೀಯ ಮಟ್ಟದ ರಂಗಭೂಮಿ ಓಲಂಪಿಕ್ಸ್ ನಡೆಸುವ ಬ್ರಹತ್ ಯೋಜನೆ ರೂಪಿಸಿದೆ. ಬೆಂಗಳೂರಿನಲ್ಲೂ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಆಗಲೂ ಹೀಗೆ ಅನಿಯಂತ್ರಿತ ಹೊರಗುತ್ತಿಗೆ ವ್ಯವಹಾರ ಮುಂದುವರೆಸಿದರೆ, ಪ್ರೇಕ್ಷಕರ ಕೊರತೆ ಕಾಡಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ಮಾನ ಹರಾಜಾಗುತ್ತದೆ. ಆದ್ದರಿಂದ ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ನಿರ್ದೇಶಕರಾದ ಸಿ.ಬಸವಲಿಂಗಯ್ಯನವರ ಮೇಲೆ ಬೇಕಾದಷ್ಟು ಹೊಣೆಗಾರಿಕೆ ಇದೆ. ಬೇರೆ ಸರಕಾರಿ ಪ್ರಾಜೆಕ್ಟಗಳ ನೇತೃತ್ವವನ್ನು ವಹಿಸುವುದು ಬಿಟ್ಟು, ಹಲವಾರು ಎನ್‌ಎಸ್‌ಡಿಯೇತರ ಜವಾಬ್ದಾರಿಗಳ ಭಾರವನ್ನು ಹೊರುವುದು ಬಿಟ್ಟು, ಎನ್‌ಎಸ್‌ಡಿಯನ್ನು ಹೇಗೆ ಇನ್ನೂ ಸದೃಢ ಗೊಳಿಸಬೇಕು, ಎನ್‌ಎಸ್‌ಡಿ ನಾಟಕ ಹಾಗೂ ನಾಟಕೋತ್ಸವಗಳಲ್ಲಿ ಎನ್‌ಎಸ್‌ಡಿಯೇತರ ರಂಗಕರ್ಮಿಗಳನ್ನು ಹೇಗೆ ಭಾಗಿಯಾಗಿಸಿಕೊಳ್ಳಬೇಕು ಎನ್ನವ ನಿಟ್ಟಿನಲ್ಲಿ ಆಲೋಚಿಸಿ ಕಾರ್ಯತತ್ಪರವಾದರೆ ಹಲವರ ಹೋರಾಟದ ಫಲದಿಂದ ಎನ್‌ಎಸ್‌ಡಿ ಬೆಂಗಳೂರು ಕೇಂದ್ರವಾಗಿದ್ದಕ್ಕೂ ಸಾರ್ಥಕವಾಗುತ್ತದೆ. ಇಲ್ಲವಾದರೆ ಕನ್ನಡ ರಂಗಭೂಮಿಯಲ್ಲಿ ಎನ್‌ಎಸ್‌ಡಿ ಒಂದು ದ್ವೀಪವಾಗಿಯೇ ಉಳಿಯುತ್ತದೆ.  ಹಾಗಾಗದಿರಲೆಂಬುದೇ ರಂಗಕರ್ಮಿಗಳೆಲ್ಲರ ಆಶಯವಾಗಿದೆ.

                        - ಶಶಿಕಾಂತ ಯಡಹಳ್ಳಿ
  





ಶನಿವಾರ, ಮೇ 7, 2016

ಕಲಬುರ್ಗಿ ರಂಗಾಯಣದ ಕರ್ಮಕಾಂಡ :


ಹುಡುಗಿ ಹಠಾವೋ, ರಂಗಾಯಣ ಬಚಾವೋ...

ಧರಣಿ ನಿರತ ರಂಗಾಯಣದ ಕಲಾವಿದರುಗಳು

ಕನ್ನಡಿಗರ ಹೆಮ್ಮೆಯ ರಂಗಸಂಸ್ಥೆಯಾಗಿ ರಂಗಾಯಣ ಬೆಳೆಯಬೇಕು, ಕರ್ನಾಟಕದ ನಾಲ್ಕು ಪ್ರಮುಖ ಪ್ರಾಂತ್ಯಗಳಲ್ಲಿ ತನ್ನ ಶಾಖೆಯನ್ನು ಹೊಂದಿ ರಂಗಭೂಮಿಯನ್ನು ಅದು ಶ್ರೀಮಂತಗೊಳಿಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ರಂಗದಿಗ್ಗಜರಾದ ಬಿ.ವಿ.ಕಾರಂತರು ಹೊಂದಿದ್ದರು.  1989ರಲ್ಲಿ ಮೈಸೂರಲ್ಲಿ ರಾಜ್ಯ ಸರಕಾರದ ಮೊದಲ ವೃತ್ತಿಪರ ರೆಪರ್ಟರಿಯಾಗಿ ರಂಗಾಯಣ ಅಸ್ತಿತ್ವಕ್ಕೆ ಬಂದಿತು. ಕರ್ನಾಟಕ ಸರಕಾರವೂ ಸಹ ಕೊಟ್ಯಾಂತರ ರೂಪಾಯಿ ಹಣವನ್ನು ರಂಗಾಯಣಕ್ಕೆ ಕೊಡಮಾಡುತ್ತಲೇ ಬಂದಿತು. ಕಾರಂತರಿದ್ದಾಗ ಅವರ ನಿರ್ದೇಶಕತ್ವದಲ್ಲಿ  ಮೈಸೂರಿನಲ್ಲಿ ರಂಗಾಯಣವು ಅಸ್ಥಿತ್ವಕ್ಕೆ ಬಂದು ಅನೇಕಾನೇಕ ವಿಶಿಷ್ಟ ರಂಗಪ್ರಯೋಗಗಳನ್ನು  ಮಾಡಿತು. ಕಾರಂತರ ಕಾಲಾನಂತರ ರಂಗಕರ್ಮಿಗಳ ಒತ್ತಾಯಕ್ಕೆ ಮಣಿದ ಸರಕಾರವು ಶಿವಮೊಗ್ಗ, ಧಾರವಾಡ ಹಾಗೂ ಕಲಬುರ್ಗಿಯಲ್ಲಿ ರಂಗಾಯಣವನ್ನು ಆರಂಭಿಸಲು ಅನುಮತಿಯನ್ನಿತ್ತು ಬೇಕಾದಷ್ಟು ಅನುದಾನವನ್ನು ಬಿಡುಗಡೆ ಮಾಡಿ ಸಾಕಷ್ಟು ವಿಳಂಬದ ನಂತರ ಪ್ರತಿಯೊಂದು ರಂಗಾಯಣಕ್ಕೂ ನಿರ್ದೇಶಕರನ್ನು ನಿಯಮಿಸಿತು. ಈ ಎಲ್ಲಾ ರಂಗಾಯಣದ ಆರ್ಥಿಕತೆಯ ನಿಯಂತ್ರಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಹಿಸಿಕೊಂಡಿತು. ಆಡಳಿತಾತ್ಮಕ ನೀತಿ ನಿರ್ಧಾರವನ್ನು ತೆಗೆದುಕೊಳ್ಳುವ ಹೊಣೆಗಾರಿಕೆಯನ್ನು ನಿರ್ವಹಿಸಲು 1994 ರಲ್ಲಿ ರಂಗಸಮಾಜವನ್ನು ಹುಟ್ಟುಹಾಕಲಾಯಿತು.


ರಂಗದಿಗ್ಗಜ ಬಿ.ವಿ.ಕಾರಂತ
ಅಂತರಾಷ್ಟ್ರೀಯ ಮಟ್ಟದಲ್ಲಿ ರಂಗಾಯಣವನ್ನು ಕಟ್ಟಿ ಬೆಳೆಸುವ ಬಿ.ವಿ.ಕಾರಂತರ ಮಹತ್ವಾಂಕಾಂಕ್ಷೆ ಈಡೇರಿತಾ...? ಕರ್ನಾಟಕದ ರಂಗಾಸಕ್ತರು ಕಂಡ ಕನಸು ನನಸಾಯಿತಾ...? ಸಮಸ್ತ ಜನತೆಯ ತೆರಿಗೆ ಹಣ ಸಾರ್ಥಕವಾಗಿ ಉಪಯೋಗವಾಯಿತಾ..? ವಿಶಿಷ್ಟ ರಂಗಚಟುವಟಿಕೆಗಳಿಗೆ ರಂಗಾಯಣಗಳು ದೇಶಕ್ಕೆ ಮಾದರಿಯಾದವಾ..? ಎಂದು ಪ್ರಶ್ನಿಸಿಕೊಂಡರೆ ಉತ್ತರ ಮಾತ್ರ ನಕಾರಾತ್ಮಕವಾಗಿಯೇ ಇರುವುದು ವಿಪರ್ಯಾಸಕರವಾಗಿದೆ. ಇಡೀ ದೇಶಕ್ಕೆ ತನ್ನ ರಂಗಕ್ರಿಯೆಗಳಿಂದ ಮಾದರಿಯಾಗಬೇಕಿದ್ದ ರಂಗಾಯಣವು ಯಾವಾಗಲೂ ವಾದ ವಿವಾದ ಹಗರಣಗಳ ಕೇಂದ್ರವಾಗುತ್ತಿರುವುದು ರೇಜಿಗೆ ಹುಟ್ಟಿಸುವಂತಿದೆ. ಮೊದಲು ಇದ್ದ ಒಂದೇ ರಂಗಾಯಣದಲ್ಲೇ ಕಲಾವಿದರ ಅಸಹಕಾರ, ನಿರ್ದೇಶಕರುಗಳ ಅಸಹಾಯಕತೆ, ರಂಗಸಮಾಜದ ನಿರ್ಲಿಪ್ತತೆ,  ಸರಕಾರಿ ಅಧಿಕಾರಿಗಳ ಸರ್ವಾಧಿಕಾರಿ ಮನೋಭಾವಗಳಿಂದಾಗಿ ಮೈಸೂರು ರಂಗಾಯಣ ಕಾಲಕಾಲಕ್ಕೆ ನಕಾರಾತ್ಮಕವಾಗಿ ಸುದ್ದಿ ಮಾಡುತ್ತಲೇ ಬಂದಿದೆ. ನಾಟಕದ ಕ್ರಿಯೆಗಳಿಗಿಂತಾ ನಾಟಕೇತರ ಅಂಶಗಳೇ ರಂಗಾಯಣದಲ್ಲಿ ಮಹತ್ವ ಪಡೆಯುತ್ತಾ ಜನರ ಸಹನೆಯನ್ನು ಕೆಣಕುತ್ತಲೇ ಬಂದಿವೆ. ಇಡೀ  ಕರ್ನಾಟಕವನ್ನು ಪ್ರತಿನಿಧಿಸಿಬೇಕಿದ್ದ ರಂಗಾಯಣವು ಕೊನೆಗೆ ಮೈಸೂರಿಗಷ್ಟೇ ಸೀಮಿತವಾದಾಗ ಕನ್ನಡ ರಂಗಕರ್ಮಿಗಳಿಗೆ ಅಪಾರ ನಿರಾಶೆಯೂ ಆಗಿದೆ.

ರಂಗಾಯಣ ಕೇವಲ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಬಾರದು, ಅದು ಕರ್ನಾಟಕದ ಇನ್ನೂ ಮೂರು ಪ್ರಾಂತ್ಯಗಳಲ್ಲಿ ಕೂಡಾ ಅಸ್ತಿತ್ವಕ್ಕೆ ಬರಬೇಕು ಎನ್ನುವ ಕಾರಂತರ ಆಶಯದಂತೆ ಮೈಸೂರು ರಂಗಾಯಣ (ಮೈಸೂರು), ಕರಾವಳಿ ರಂಗಾಯಣ (ಧಾರವಾಡ) ಮಲೆನಾಡು ರಂಗಾಯಣ (ಶಿವಮೊಗ್ಗ) ಹಾಗೂ ಹೈದರಾಬಾದ್ ಕರ್ನಾಟಕ ರಂಗಾಯಣ (ಕಲಬುರಗಿ) ಗಳನ್ನು ಕರ್ನಾಟಕ ಸರಕಾರ ಸ್ಥಾಪಿಸಿತು. ಈ ಇನ್ನೂ ಮೂರು ರಂಗಾಯಣಗಳು ಅಸ್ತಿತ್ವಕ್ಕೆ ಬಂದಾಗಲಾದರೂ ಪ್ರಾದೇಶಿಕ ರಂಗಚಟುವಟಿಕೆಗಳು ಗರಿಗೆದರಬಹುದು ಎನ್ನುವ ನಿರೀಕ್ಷೆಯೂ ಈಗ ಹುಸಿಯಾಗುತ್ತಾ ಬಂದಿದೆ.  ಶಿವಮೊಗ್ಗ ರಂಗಾಯಣ ಬಹುತೇಕ ಬೇಸಿಗೆ ಶಿಬಿರಗಳಲ್ಲಿ ಸಾರ್ಥಕತೆ ಕಂಡುಕೊಳ್ಳುತ್ತಿದೆ. ಧಾರವಾಡ ರಂಗಾಯಣ ತಮಾಶದಂತಹ ಡಬಲ್‌ಮೀನಿಂಗ್ ನಾಟಕವನ್ನು ಮಾಡುತ್ತಾ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ. ಇನ್ನು ಕಲಬುರ್ಗಿ ರಂಗಾಯಣವಂತೂ ರಂಗಾಯಣದ ಇತಿಹಾಸದಲ್ಲೇ ಆಗಿರದಂತಹಾ ಎಡವಟ್ಟನ್ನು ಮಾಡಿಕೊಂಡು ವಿವಾದಗ್ರಸ್ಥವಾಗಿ ಸಂಪೂರ್ಣ ನಿಷ್ಕ್ರೀಯವಾಗಿದೆ.

ರಂಗಾಯಣದ ಇತಿಹಾಸವನ್ನು ಕೆದಕಿದರೆ ಬೇಕಾದಷ್ಟು ಆಂತರಿಕ ಹಾಗೂ ಬಾಹ್ಯ ಬಂಡಾಯಗಳು ನಡೆದು ಹೋಗಿವೆ.  ರಂಗಾಯಣದೊಳಗಿನ ಗುಂಪುಗಾರಿಕೆ ಹಾಗೂ ವ್ಯಕ್ತಿ ಪ್ರತಿಷ್ಟೆಗಳು ಆಗಾಗ ಬಯಲಿಗೆ ಬಿದ್ದಿವೆ. ಕಲಾವಿದರ ಹಾಗೂ ನಿರ್ದೇಶಕರುಗಳ ನಡುವಿನ ಸಂಘರ್ಷ, ನಿರ್ದೇಶಕರು ಹಾಗೂ ಸರಕಾರಿ  ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟಗಳು ರಂಗಾಯಣದ ಆವರಣ ಬಿಟ್ಟು ನಾಡಿನಾದ್ಯಂತ ಹರಿದಾಡಿವೆ. ಆದರೆ.. ಎಂದೂ ಜಾತಿಯತೆ ಎನ್ನುವುದು ರಂಗಾಯಣದಲ್ಲಿ ಸ್ಪೋಟಗೊಂಡಿರಲಿಲ್ಲ. ಎಲ್ಲಾ ರೀತಿಯ ಭಿನ್ನಾಭಿಪ್ರಾಯಗಳ ನಡುವೆಯೂ ಜಾತಿ  ಸಾಮರಸ್ಯವನ್ನು ರಂಗಭೂಮಿ ಕಾಪಾಡಿಕೊಂಡು ಬಂದಂತೆ ರಂಗಾಯಣವೂ ಕಾಪಿಟ್ಟುಕೊಂಡೇ ಇಲ್ಲಿವರೆಗೂ ಬಂದಿತ್ತು. ಆದರೆ.. ಕಲಬುರ್ಗಿ ರಂಗಾಯಣ ಈಗ ಜಾತಿಯತೆಯ ಗುಂಪುಗಾರಿಕೆಯ ಆಡಂಬೋಲವಾಗಿ ಆಡಿಕೊಳ್ಳುವವರ ಬಾಯಿಗೆ ಎಲೆಯಡಿಕೆಯಾಗಿ ಹೋಯಿತು. ಜಾತಿಯತೆಯ ಜಾಢ್ಯವು ರಂಗಭೂಮಿಗೂ ಮೆತ್ತಿಕೊಂಡು ಕಲಬುರ್ಗಿ ರಂಗಾಯಣವನ್ನು ರೋಗಗ್ರಸ್ಥವಾಗಿಸಿತು.


ಪ್ರೊ.. ಆರ್.ಕೆ.ಹುಡುಗಿ
ಕಲಬುರಗಿ ರಂಗಾಯಣದ ಕಥೆ ಮತ್ತು ವ್ಯಥೆ ಸ್ವಾರಸ್ಯಕರವಾಗಿರುವಷ್ಟೇ ದುರಂತಮಯವೂ ಆಗಿದೆ. ಅದೆಲ್ಲವನ್ನೂ ವಿವರವಾಗಿ ಚರ್ಚಿಸುವುದೇ ಈ ಲೇಖನದ ಆಶಯವೂ ಆಗಿದೆ. ಯಾವಾಗ 2013 ಸೆಪ್ಟೆಂಬರ್ 4 ರಂದು ಕಲಬುರ್ಗಿಗೆ ರಂಗಾಯಣ ಮಂಜೂರಾಯಿತೋ ಆಗ ಅದರ ನಿರ್ದೇಶಕರು ಯಾರಾಗಬೇಕೆಂಬ ಚರ್ಚೆ ಶುರುವಾಯಿತು. ಸಮುದಾಯದ ಹಾಲಿ ಅಧ್ಯಕ್ಷರಾಗಿರುವ ಪ್ರೊ.ಆರ್.ಕೆ.ಹುಡುಗಿ, ನಾಟಕದಾರ ಎಲ್ಬಿಕೆ ಆಲ್ದಾಳ್, ಪ್ರಭಾಕರ್ ಸಾತಕೇಡ್ ಹಾಗೂ ಶಂಕರಯ್ಯ ಗಂಟಿರವರ ಹೆಸರುಗಳನ್ನು ರಂಗಸಮಾಜ ಸರಕಾರಕ್ಕೆ ರೆಕಮೆಂಡ್ ಮಾಡಲಾಗಿತ್ತು ಹಾಗೂ ಹುಡುಗಿಯವರೇ ನಿರ್ದೇಶಕರಾಗುವಂತೆ ನೋಡಿಕೊಳ್ಳಲಾಯಿತು. 2014ರ ನವೆಂಬರ್ 29 ರಂದು ಪ್ರೊ.ಹುಡುಗಿಯವರು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.   ಮಾಜಿ ಸಿ.ಎಂ ಧರ್ಮಸಿಂಗ್‌ರವರ ಕೃಪಾಕಟಾಕ್ಷವೂ ಹುಡುಗಿಯವರ ಮೇಲಿತ್ತು.  ಆರಂಭದ ಹಂತದಲ್ಲೇ ಆಯ್ಕೆ ವಿಚಾರದಲ್ಲಿ ಸರಕಾರ ತಪ್ಪು ನಿರ್ಧಾರ ತೆಗೆದುಕೊಂಡಿದ್ದರ ಫಲವೇ ಈಗಿನ ಕಲಬುರಗಿ ರಂಗಾಯಣದ ಬಿಕ್ಕಟ್ಟಿಗೆ ಕಾರಣವಾಯಿತು. ಯಾಕೆಂದರೆ ಹುಡುಗಿ ಮಾಸ್ತರರಿಗೆ ರಂಗಭೂಮಿಯ ಅನುಭವ ಸಾಲದು. ಸಮುದಾಯ ಸಂಘಟನೆಯಲ್ಲಿ ಹೆಸರಿಗೆ ಪದಾಧಿಕಾರಿಯಾದರೂ ಐದಾರು ನಾಟಕ ಹಾಗೂ ಮೂರ‍್ನಾಲ್ಕು ಬೀದಿನಾಟಕ ರಚನೆಯನ್ನು ಹೊರತು ಪಡಿಸಿ ರಂಗಭೂಮಿಗೆ ಹುಡುಗಿಯವರ ನೇರವಾದ ಕೊಡುಗೆ ಹೇಳಿಕೊಳ್ಳುವಂತಹುದೇನಿಲ್ಲ. ಎಂದೂ ಪ್ರ್ಯಾಕ್ಟಿಕಲ್ ಆಗಿ ನಾಟಕಗಳನ್ನು ಕಟ್ಟಿದವರಲ್ಲ. ಸಾಹಿತ್ಯದಲ್ಲಿ ಅದರಲ್ಲೂ ಅನುವಾದ ಕ್ಷೇತ್ರದಲ್ಲಿ ಕೆಲಸ ಮಾಡಿದ ಹುಡುಗಿಯವರು ರಂಗಾಯಣದ ನಿರ್ದೇಶಕರಾಗಲು ಬೇಕಾದ ಅರ್ಹತೆ ಬಗ್ಗೆ ಹಲವರಿಗೆ ಗುಮಾನಿ ಇತ್ತು. ಅದು ಈಗ ನಿಜವೆನಿಸತೊಡಗಿದೆ. ರಂಗಭೂಮಿಯ ಒಳಹೊರಗು ಗೊತ್ತಿಲ್ಲದ ಅನನುಭವಿ ಸಾಹಿತಿಗೆ ರಂಗಾಯಣದಂತಾ ಸಂಸ್ಥೆ ಕಟ್ಟುವ ಹೊಣೆಗಾರಿಕೆ ಕೊಟ್ಟರೆ ಏನಾಗಬಹುದೋ ಅದೇ ಆಗಿತ್ತು.

ರಂಗಾಯಣ ಶುರುವಾಗಿ ಇನ್ನೇನು ಕಾರ್ಯಾರಂಭವಾಗುವಾಗ ಹುಡುಗಿಯವರ ವಿರುದ್ಧ ಮೊದಲ ಪ್ರತಿರೋಧ ಶುರುವಾಗಿದ್ದೇ ಸ್ಥಳೀಯ ಕಲಾವಿದರು ಹಾಗೂ ರಂಗತಂಡಗಳಿಂದ. ಯಾಕೆಂದರೆ ಕಲಬುರಗಿ ರಂಗಾಯಣ ಪ್ರತಿನಿಧಿಸುವ ಆರು ಜಿಲ್ಲೆಗಳ ರಂಗತಂಡಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ 2015 ಡಿಸೆಂಬರ್ 22 ರಂದು ಬೆಂಗಳೂರಿನಿಂದ ಸಿ.ಲಕ್ಷ್ಮಣ್‌ರವರ ರಂಗಕಹಳೆ ತಂಡವನ್ನು ಆಹ್ವಾನಿಸಿ 7 ದಿನಗಳ ಕುವೆಂಪು ನಾಟಕೋತ್ಸವವನ್ನು ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. ಕಲಬುರಗಿ ರಂಗಾಯಣಕ್ಕೆ ಮಂಜೂರಾದ ಹಣ ಬೆಂಗಳೂರಿನ ಸಂಘಟಕರ ಪಾಲಾಗಿದ್ದರಿಂದ ಅಸಮಾಧಾನಗೊಂಡ ವಿಶ್ವರಂಗ ತಂಡ, ಲೋಹಿಯಾ ಕಲಾತಂಡ, ಸಂಚಿಸಾರಂಗ, ದರ್ಪಣ, ರಂಗಮಾಧ್ಯಮ ಸೇರಿದಂತೆ ಹತ್ತು ಸ್ಥಳೀಯ ತಂಡಗಳ ಕಲಾವಿದರುಗಳು ನಾಟಕೋತ್ಸವದ ಉದ್ಘಾಟನೆಯಂದು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಿದರು. ರಂಗಚಟುವಟಿಕೆಗಳ  ಕುರಿತ ಅನುಭವ ಹಾಗೂ ಆಳವಾದ ಅಧ್ಯಯನ ಇಲ್ಲದ ಹುಡುಗಿಯವರು ನಿರ್ದೇಶಕರಾಗಲು ಯೋಗ್ಯರಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದರು. ಈ  ಘಟನೆಯಿಂದಲಾದರೂ ಹುಡುಗಿಯವರು ಪಾಠ ಕಲಿತು ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬಹುದಾಗಿತ್ತು. ಆದರೆ.. ತಮ್ಮ ಮಾಸ್ತರಿಕೆಯ ಗತ್ತು ಗೈರತ್ತು ತೋರಲು ಹೋಗಿ ತಾವೂ ಮುಳುಗಿದರು.. ರಂಗಾಯಣದ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಮಾಡಿದರು.

ಅಭ್ಯಾಸ ನಿರತ ರಂಗಾಯಣದ ಕಲಾವಿದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಆವರಣದಲ್ಲಿ ಕೊಟ್ಟ ಪುಟ್ಟ ಸಭಾಂಗಣದಲ್ಲಿ ರಂಗಾಯಣ ಕಾರ್ಯಾರಂಭ ಮಾಡಿತು. ಕಲಬುರಗಿ ರಂಗಾಯಣದ ರೆಪರ್ಟರಿಗೆ ಒಟ್ಟು 12 ಜನ ಕಲಾವಿದರು ಹಾಗೂ ಮೂವರು ತಂತ್ರಜ್ಞರನ್ನು ಗುತ್ತಿಗೆ ಆಧಾರದಲ್ಲಿ ಆಯ್ಕೆ ಮಾಡಲಾಯಿತು. 12 ಜನ ಕಲಾವಿದರಲ್ಲಿ  ಐವರು ಮಹಿಳೆಯರು. ತಾಂತ್ರಿಕ ವರ್ಗದವರಿಗೆ ತಿಂಗಳಿಗೆ 15 ಸಾವಿರ ರೂಪಾಯಿ ಹಾಗೂ ಕಲಾವಿದರಿಗೆ 12 ಸಾವಿರ ರೂಪಾಯಿಗಳ ಸಂಬಳವನ್ನು ಗೊತ್ತುಪಡಿಸಲಾಯಿತು. ರಂಗಾಯಣದ ನಿರ್ದೇಶಕರಿಗೆ ತಿಂಗಳಿಗೆ ಕಾಲು ಲಕ್ಷ ರೂಪಾಯಿ ಸಂದಾಯವಾಗುತ್ತಿದೆ. ಮೊದಲ ಅಸಮಾಧಾನ ಶುರುವಾಗಿದ್ದೇ ಈ ತಾರತಮ್ಯದ ವೇತನ ಶ್ರೇಣಿಯಿಂದಾಗಿ. ನೇಪತ್ಯದವರಿಗಿಂತಾ ನಾವು ಹೆಚ್ಚು ಪರಿಶ್ರಮ ಪಡುತ್ತೇವೆಯಾದರೂ ನಮಗ್ಯಾಕೆ ಕಡಿಮೆ ಸಂಬಳ ಎಂದು ಕಲಾವಿದರು ಬೇಸರಿಸಿಕೊಂಡರು. ಜೊತೆಗೆ ನಾಟಕದ ಗಂಧ ಗಾಳಿ ಗೊತ್ತಿಲ್ಲದೇ ಇರುವ ನಿರ್ದೇಶಕರಿಗೆ ಯಾಕೆ ನಮಗಿಂತ ಡಬಲ್ ಸಂಬಳ ಎನ್ನುವುದು ಕಲಾವಿದರ ಅಸಹನೆಗೆ ಕಾರಣವಾಯ್ತು. ಇದು ಸರಕಾರದ ನಿರ್ಣಯವಾಗಿದ್ದರಿಂದ ಯಾರೂ ಏನೂ ಮಾಡುವ ಹಾಗಿಲ್ಲವಾದ್ದರಿಂದ ಕಲಾವಿದರು ತಮ್ಮ ತಮ್ಮಲ್ಲೆ ಮಾತಾಡತೊಡಗಿದ್ದರು. ಕಲಾವಿದರೊಳಗೆ ಅಸಹನೆ ಇದ್ದರೆ ಅದನ್ನು ಅರಿತು ಕನ್ವೀಯನ್ಸ್ ಮಾಡಬೇಕಾದದ್ದು ನಿರ್ದೇಶಕರಾದವರ ಕರ್ತವ್ಯವಾಗಿತ್ತು. ಹಾಗೆ ಮಾಡದೇ ಕಲಾವಿದರನ್ನೇ ಒಡೆದು ಆಳುವ ಅಪಾಯಕಾರಿ ಕೆಲಸಕ್ಕೆ ಹುಡುಗಿಯವರು ಕೈಹಾಕಿದರು. ಜಾತಿಯನ್ನು ಇದಕ್ಕಾಗಿ ದಾಳವಾಗಿ ಬಳಸಿಕೊಂಡರು ಎನ್ನುವುದು ಅವರ ಮೇಲಿರುವ ಗುರುತರವಾದ ಆರೋಪ. ಕಲಾವಿದರ ನೇಮಕವಾಗಿ ಒಂಬತ್ತು ತಿಂಗಳು ತುಂಬಿದ ಸಂದರ್ಭಕ್ಕೆ ಸರಿಯಾಗಿ ರಂಗಾಯಣದಲ್ಲಿ ಜಾತಿ ವೈಷಮ್ಯ, ನಿಂದನೆ ಹಾಗೂ ದೌರ್ಜನ್ಯದ ಹೆರಿಗೆಯಾಗಿದ್ದೊಂದು ವಿಸ್ಮಯ.

ಲಕ್ಷ್ಮೀ ಕರೋಜಿ
ಕಲಾವಿದರಲ್ಲಿ ಬಹುತೇಕರು ದಲಿತ ಹಾಗೂ ಹಿಂದುಳಿದ ವರ್ಗಗಳಿಂದ ಬಂದವರಾಗಿದ್ದರು. ಲಕ್ಷ್ಮೀ ಕರೋಜಿ ಎನ್ನುವ ಕಲಾವಿದೆಗೆ ಹುಡುಗಿಯವರು ಅತೀ ಹೆಚ್ಚು ಸದರ ಕೊಟ್ಟಿದ್ದರು. ಇದಕ್ಕೆ ಪ್ರಮುಖ ಕಾರಣವೇನೆಂದರೆ ಆಕೆ ಹುಡುಗಿಯವರ ಲಿಂಗಾಯತ ಕೋಮಿಗೆ ಸೇರಿದವಳಾಗಿದ್ದಳು. ಇನ್ನೊಂದು ಕಾರಣವೇನೆಂದರೆ ಹುಡುಗಿ ಸಾಹೇಬರ ಸಾಹಿತ್ಯಾನುವಾದದ ಕೆಲಸಕ್ಕೆ ಲಕ್ಷ್ಮೀ ನೆರವಾಗುತ್ತಿದ್ದರು.  ಇವರಿಬ್ಬರ ನಡುವೆ ವ್ಯಯಕ್ತಿಕ ಸಂಬಂಧಗಳೂ ಇದೆಯೆಂಬ ಆರೋಪವೂ ಇದೆ. ಹೀಗಾಗಿ ನಾಟಕದ ಕೆಲಸಕ್ಕಿಂತ ಹುಡುಗಿರವರ ಚೇಂಬರಿನಲ್ಲೇ ಹೆಚ್ಚು ಹೊತ್ತು ಕಳೆಯುತ್ತಾ ನಿರ್ದೇಶಕರು ಎನ್ನುವ ಗೌರವವನ್ನೂ ಕೊಡದೇ ಏಕವಚನದಲ್ಲಿ ಕರೆಯುತ್ತಿರುವ ಕಲಾವಿದೆ ಲಕ್ಷ್ಮೀ ಕುರಿತು ಇತರೇ ಕಲಾವಿದರಲ್ಲಿ ಒಂದು ರೀತಿಯ ಅಸಮಾಧಾನ ಬೆಳೆಯಿತು. ಹುಡುಗಿಯವರು ತಮ್ಮ ಚೇಂಬರಿನಲ್ಲಿ ಈ ಲಕ್ಷ್ಮೀಎಂಬಾಕೆಯ ಜೊತೆಗೆ ಗಂಟೆ ಗಂಟಲೇ ಏಕಾಂತದಲ್ಲಿ ಇದ್ದುದನ್ನು ದಿನವೂ ನೋಡಿದ ಬಾಕಿ ಕಲಾವಿದರಿಗೆ ಮುಜುಗರವಾಗತೊಡಗಿತು. ಎಲ್ಲಾ ಕಲಾವಿದರ ಮಾತುಕತೆಯ ವಿವರಗಳು ಲಕ್ಷ್ಮೀಯವರ ಮೂಲಕ ಹುಡುಗಿ ಸಾಹೇಬರ ಕಿವಿ ತುಂಬತೊಡಗಿತು. ಹುಡುಗಿಯವರಿಗೆ ಈ ಮಹಿಳೆ ಅದ್ಯಾವಪರಿ ಮೋಡಿ ಮಾಡಿದ್ದಳೆಂದರೆ ಆಕೆ ಹಾಕಿದ ಗೆರೆಯನ್ನು ನಿರ್ದೇಶಕರು ದಾಟದಂತಾದರು. ಹೀಗಾಗಿ ಕೆಳ ಜಾತಿಯ ಕಲಾವಿದರ ಬಗ್ಗೆ ಹುಡುಗಿಯವರು ಅಸಹನೀಯ ಅಸಮಾಧಾನ ತೋರಿಸತೊಡಗಿ ಜಾತಿ ನಿಂದನೆ ಮಾಡತೊಡಗಿದರೆಂದು ಬಹುತೇಕ ಕಲಾವಿದರು ದೂರತೊಡಗಿದರು. ಲಕ್ಷ್ಮೀಯವರು ಅವಕಾಶ ಸಿಕ್ಕಾಗಲೆಲ್ಲಾ ಕೆಳಜಾತಿಯವರೆಂದು ನಿಂದಿಸಿ ಮಾನಸಿಕವಾಗಿ ದಲಿತ ಕಲಾವಿದರಿಗೆ  ಅವಮಾನ ಮಾಡಿದ್ದಾರೆ ಹಾಗೂ ಈ ಕುರಿತು ನಿರ್ದೇಶಕರಿಗೆ ಕಂಪ್ಲೇಂಟ್ ಮಾಡಿದಾಗ ಹುಡುಗಿಯವರು  ಇದ್ದದ್ದು ಇದ್ದಂತೆ ಹೇಳಿದರೆ ತಪ್ಪೇನು ಎಂದು ಲಕ್ಷ್ಮೀಯನ್ನು ಸಮರ್ಥಿಸಿಕೊಂಡು ಜಾತಿ ನಿಂದನೆಯನ್ನು ಮಾಡಿದರು ಎಂದು ಒಂಬತ್ತು ಜನ ಕಲಾವಿದರು ಆರೋಪ ಮಾಡುತ್ತಿದ್ದಾರೆ. ಇದರ ಮಧ್ಯೆ ಈ ಜಾತಿ ರಾಜಕೀಯದಿಂದ ಬೇಸತ್ತು ಇಬ್ಬರು ಕಲಾವಿದರು ಹಾಗೂ ಒಬ್ಬ ತಂತ್ರಜ್ಞ ರಾಜೀನಾಮೆ ಕೊಟ್ಟು ರಂಗಾಯಣ ಬಿಟ್ಟು ಹೊರಬಿದ್ದರು. 

ಶಾಮರಾಜ್ ದೇಸಾಯ
ಅವತ್ತು 2016 ಜನವರಿ 28 ರಂದು ರಾಷ್ಟ್ರೀಯ ರಂಗೋತ್ಸವದ ಪೂರ್ವಭಾವಿ ತಯಾರಿಗಾಗಿ ಕಲವಿದರೆಲ್ಲಾ ಸಭೆ ಸೇರಿದ್ದರು.  ಹುಡುಗಿಯವರ ಸಂಪೂರ್ಣ ಬೆಂಬಲವನ್ನು ಬಳಸಿಕೊಂಡು ಯಾವಾಗ ಬೇಕೆಂದಾಗ ನಾಟಕದ ತಾಲಿಂಗೆ ಬರುತ್ತಿದ್ದ ಲಕ್ಷ್ಮೀಯನ್ನು ಉಳಿದ ಕಲಾವಿದರು ತರಾಟೆಗೆ ತೆಗೆದುಕೊಂಡಿದ್ದಾರೆ. ಅವತ್ತೇ ರಾತ್ರಿ ಲಕ್ಷ್ಮೀ ಗಂಡ ಶಾಮರಾಜ್ ದೇಸಾಯಿ ಪೋನ್ ಮಾಡಿ ಕಲಾವಿದರಿಗೆ ತುಂಬಾ ಕೆಟ್ಟದಾಗಿ ಅಶ್ಲೀಲವಾಗಿ ದಮಕಿ ಹಾಕಿ ಜಾತಿನಿಂದನೆ ಮಾಡಿದ್ದಾನೆ. ಆತನ ಹೊಲಸು ಮಾತುಗಳನ್ನೆಲ್ಲಾ ಕಲಾವಿದರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಹೊರಗಿನ ಶಕ್ತಿಯೊಂದು ತಮ್ಮ ಕಲಾವಿದರಿಗೆ ಧಮಕಿ ಹಾಕಿದ್ದನ್ನು ಖಂಡಿಸಿ ಕಲಾವಿದರಿಗೆ ನೈತಿಕ ಸ್ತೈರ್ಯ ಹೇಳಬೇಕಾಗಿದ್ದ ಹುಡುಗಿ ಸಾಹೇಬರು ಲಕ್ಷ್ಮೀ ಪರವಾಗಿಯೇ ಮಾತಾಡಿದ್ದಾರೆ.  ಈ ಜಾತಿ ಸಂಘರ್ಷದ ಮುಸುಕಿನ ಗುದ್ದಾಟ ಒಳಗಿಂದೊಳಗೆ ಶುರುವಾಗಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳತೊಡಗಿದೆ. ಅದು ಸ್ಪೋಟಗೊಳ್ಳಲು ಕಾರಣವಾಗಿದ್ದು ಒಂದು ಸೆಲ್ಪಿ. ಅವತ್ತು ಕಲಾವಿದ ಮಹೇಶ್ ತನ್ನ ಮೊಬೈಲ್‌ನಲ್ಲಿ ಸೆಲ್ಪಿ ತೆಗೆದುಕೊಳ್ಳುತ್ತಿರುವಾಗ ಲಕ್ಷ್ಮೀ ಸಹ ಓಡಿ ಬಂದು ನಿಂತಿದ್ದಾಳೆ. ಆ ಫೊಟೋವನ್ನು ಮಹೇಶ್ ವಾಟ್ಸಾಪ್ ಮೂಲಕ ಗೆಳೆಯರಿಗೆ ಕಳುಹಿಸಿದ್ದಾನೆ. ಇದು ಲಕ್ಷ್ಮೀ ಗಂಡನಿಗೆ ಗೊತ್ತಾಗಿ ಕೆರಳಿದ ಆತ  ಫೆಬ್ರವರಿ 9 ರಂದು ಹೊರಗಿನಿಂದ ಹತ್ತು ಜನ ಲೋಕಲ್ ರೌಡಿಗಳನ್ನು ಕರೆತಂದು ಕಲಾವಿದರನ್ನೆಲ್ಲಾ ನಿಂದಿಸಿ ಮಹೇಶ್ ಮೇಲೆ ದೈಹಿಕ ಹಲ್ಲೆ ಮಾಡಿ ಕಲಾವಿದರಿಗೆ ಜೀವಬೆದರಿಕೆ ಹಾಕಿದಾಗ ಕಲಾವಿದರೆಲ್ಲಾ ತಲ್ಲಣಿಸಿ ಹೋದರು. ಆ ನಂತರವೂ ಕಲಾವಿದರ ಮೇಲೆ ಹಲ್ಲೆ ಮಾಡಲು ರೌಡಿ ಗ್ಯಾಂಗ್ ಸಮಯಸಾಧಿಸುತ್ತಲೇ ಇದೆ. ಇದರಿಂದಾಗಿ ಕಲಾವಿದರಿಗೆ ಜೀವಭಯ ಶುರುವಾಗಿದೆ.  ಈಗಲಾದರೂ ಎಚ್ಚೆತ್ತು ಹುಡುಗಿಯವರು ಹೊರಗಿನಿಂದ ಬಂದು ತನ್ನ ಕಲಾವಿದರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಪೊಲೀಸ್ ದೂರು ನೀಡಬೇಕಿತ್ತು. ಹಾಗೆ ಮಾಡದೇ ರಾಷ್ಟ್ರೀಯ ನಾಟಕೋತ್ಸವ ಮುಗಿದ ಮೇಲೆ ವಿಚಾರಣೆ ಮಾಡುವೆ ಅಲ್ಲಿವರೆಗೂ ಹೊರಗಿನವರಿಗೆ ಈ ವಿಷಯ ತಿಳಿಸಬೇಡಿ ಎಂದು ಆದೇಶಿಸಿ ಸಮಸ್ಯೆಯನ್ನು ಮುಂದೂಡತೊಡಗಿದರು.

ನಂತರ ವಿಚಾರಣೆ ಮಾಡುವ ನೆಪದಲ್ಲಿ ಲಕ್ಷ್ಮೀಯವರನ್ನು ತಮ್ಮ ಚೇಂಬರಿನಲ್ಲಿ ಕೂಡಿಸಿ, ಮಹೇಶಕುಮಾರ್ ಎನ್ನುವ ಕಲಾವಿದನನ್ನು ಕರೆಸಿ ರಾಜೀನಾಮೆ ಬರೆದು ಕೊಡದೇ ಹೋದರೆ ನಿನ್ನ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ಬುಕ್ ಮಾಡಲಾಗುವುದು ಎಂದು ಒತ್ತಡ ಹೇರಿದರಂತೆ. ಒಬ್ಬೊಬ್ಬರನ್ನಾಗಿ ರಂಗಾಯಣದಿಂದ ರಾಜೀನಾಮೆ ಬರೆಸಿಕೊಂಡು ಹೊರಗೆ ಹಾಕುವ ತಂತ್ರಗಾರಿಕೆ ನಡೆಯುತ್ತಿದೆ ಎಂದು ಅರಿವಾದ ತಕ್ಷಣ ಒಂಬತ್ತೂ ಜನ ಕಲಾವಿದರೆಲ್ಲಾ ಫೆಬ್ರವರಿ 24 ರಂದು ಪೊಲೀಸ್ ಠಾಣೆಗೆ ಹೋಗಿ ನಡೆದಿದ್ದನ್ನೆಲ್ಲಾ ವಿವರಿಸಿ ಹುಡುಗಿಯವರು ಹಾಗೂ ಲಕ್ಷ್ಮೀ ದಂಪತಿಗಳ ಮೇಲೆ  ದೂರು ದಾಖಲಿಸಿದ್ದಾರೆ. ಆದರೂ ಹುಡುಗಿಯವರ ಹಿಂದಿನ ಪ್ರಭಾವಿಗಳ ಬಗ್ಗೆ ಗೊತ್ತಿದ್ದ ಪೊಲೀಸರು ಮೇಲಾಧಿಕಾರಿಗಳ ಮಾತಿನಂತೆ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದಾಗ ಕಲಾವಿದರೆಲ್ಲಾ ಸ್ಟೇಶನ್ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ನಂತರ ಫೆ.25 ರಂದು ಎಪ್‌ಐಆರ್ ದಾಖಲಾಯಿತು. ಅದೂ ಅಂತಿಂತಾ ದೂರಲ್ಲಾ. ಅಟ್ರಾಸಿಟಿ ಕೇಸ್.. ಅಂದರೆ ಜಾತಿ ನಿಂದನೆಯ ದೂರು.  ಆಗಲೇ ತಾವೇ ತೋಡಿಕೊಂಡ ಗುಂಡಿಯಲ್ಲಿ ಹುಡುಗಿಯವರು ಬಿದ್ದು ಒದ್ದಾಡಿದ್ದು. ಪೊಲೀಸರು ಠಾಣೆಗೆ ಕರೆಸಿ ರಾತ್ರಿಯಲ್ಲಾ ಕೂಡಿಸಿ ವಿಚಾರಣೆ ಶುರು ಮಾಡಿದರು. ಬೇರೆ ಯಾರ ಮೇಲಾದರೂ ಈ ಕೇಸ್ ಹಾಕಿದ್ದರೆ ಈಗಾಗಲೇ ಈ ನಾನ್ ಬೇಲೆಬಲ್ ಕೇಸಲ್ಲಿ ಕಂಬಿ ಎಣಿಸುತ್ತಿದ್ದರು. ಆದರೆ ಹುಡುಗಿಯವರು ತಮ್ಮೆಲ್ಲಾ ಕಾಂಟ್ಯಾಕ್ಟ್ ಬಳಸಿ ಹಲವಾರು ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿ ಅವರಿವರಿಂದ ಎಸ್ಪಿ ಮೇಲೆ ಒತ್ತಡವನ್ನು ತಂದು ಠಾಣೆಯಿಂದ ಹೊರಗೆ ಬಂದಿದ್ದಾರೆ. ಜಾತಿ ದೌರ್ಜನ್ಯದ ಕಾಯಿದೆಯಲ್ಲಿರುವ ಸಣ್ಣ ಲೂಪ್‌ಹೋಲನ್ನು ಬಳಸಿಕೊಂಡು ಪೊಲೀಸ್ ಉನ್ನತಾಧಿಕಾರಿಗಳು ಹುಡುಗಿಯವರನ್ನು ಮುಕ್ತವಾಗಿ ಹೋಗಲು ಬಿಟ್ಟಿದ್ದಾರೆ.  ಇದೆಲ್ಲದರಿಂದಾಗಿ ಹುಡುಗಿಯವರ ಮರ್ಯಾದೆ ಹೋಗಲಿ, ರಂಗಾಯಣದ ಮಾನ ಮರ್ಯಾದೆ ಬೀದಿಗೆ ಬಂದು ಬಿದ್ದಿತು. ರಂಗಾಯಣದ ಇತಿಹಾಸದಲ್ಲಿ ಹುಡುಗಿ ಪ್ರಕರಣ ಕಪ್ಪು ಚುಕ್ಕೆಯಾಗಿ ಹೋಯಿತು.

ಕಲಾವಿದರುಗಳ ಉಪವಾಸ ಸತ್ಯಾಗ್ರಹ
ಇದು ಗೊತ್ತಾದ ತಕ್ಷಣ ತಲ್ಲಣಿಸಿ ಹೋಗಿದ್ದು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು. ಇಲಾಖೆಯ ಆಗ್ರಹದ ಮೇರೆಗೆ ನಾಲ್ಕು ಜನರ ವಿಚಾರಣಾ ಕಮಿಟಿ ಮಾಡಿಕೊಂಡು ಫೆಬ್ರವರಿ 26 ರಂದು ಎದ್ದು ಬಿದ್ದು ಕಲಬುರುಗಿ ರಂಗಾಯಣಕ್ಕೆ ಓಡಿ ಬಂದ ರಂಗ ಸಮಾಜದ ಸದಸ್ಯರಾದ ಶಶಿಧರ್ ಅಡಪ, ಡಿ.ಎಸ್.ಚೌಗಲೆ, ಸುಜಾತಾ ಜಂಗಮಶೆಟ್ಟಿ  ಹಾಗೂ ಸಂಸ್ಕೃತಿ ಇಲಾಖೆಯ ಅಶೋಕ ಚಲುವಾದಿಯವರು ವಿಚಾರಣೆ ಶುರು ಮಾಡಿದರು. ಪ್ರತಿಯೊಬ್ಬ ಕಲಾವಿದರನ್ನೂ ಪ್ರತ್ಯೇಕವಾಗಿ ಕರೆದು ಕೂಡಿಸಿ ವಿಚಾರಣೆ ಮಾಡಲಾಯಿತು. ಆದರೆ ಹುಡುಗಿಯವರು ವಿಚಾರಣೆಗೆ ಬರಲೇ ಇಲ್ಲ.. ಕಮಿಟಿಯವರಿಗೂ ಸಿಗಲಿಲ್ಲ. ಹುಡುಗಿಯವರನ್ನು ರಂಗಾಯಣಕ್ಕೆ ಬರುವುದನ್ನೇ ಜಿಲ್ಲಾಧಿಕಾರಿಗಳು ನಿರ್ಬಂಧಿಸಿದರು. ನೊಂದ ಕಲಾವಿದರುಗಳು ನ್ಯಾಯಕ್ಕಾಗಿ ಆಗ್ರಹಿಸಿ ಮಾರ್ಚ 8 ರಂದು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ಮಾಡಿ ತಮ್ಮ ಪ್ರತಿಭಟನೆಯನ್ನು ತೋರಿದರು. ಇದರಿಂದ ಏನೂ ಆಗದಿದ್ದಾಗ ಮಾರ್ಚ್ 11 ರಿಂದ ಅನಿರ್ದಿಷ್ಟ ಕಾಲಾವಧಿಯ ಸತ್ಯಾಗ್ರಹವನ್ನು ಘೋಷಿಸಿ ಡಿಸಿ ಕಛೇರಿಯ ಮುಂದೆ ಕಲಾವಿದರು ಸತ್ಯಾಗ್ರಹ ಕುಳಿತುಕೊಂಡರು. ಈ ಸತ್ಯಾಗ್ರಹ 14 ದಿನಗಳ ಕಾಲ ನಡೆಯಿತು. ಈ ಕಲಾವಿದರಿಗೆ ಬೆಂಬಲವಾಗಿ ಹುಡುಗಿ ಹಠಾವೋ, ರಂಗಾಯಣ ಬಚಾವೋ ಎನ್ನುವ ಘೋಷಣೆಯೊಂದಿಗೆ ಕಲಬುರಗಿಯಲ್ಲಿ ಪ್ರತಿಭಟನೆಗಳ ಸರಣಿಯೇ ನಡೆದು ಹೋಯಿತು.  ಈ ವಿಷಯ ಗೊತ್ತಾಗಿ ಸಚಿವೆ ಉಮಾಶ್ರೀಯವರು ರಂಗಾಯಣದ ಅಂಗಳಕೆ ಬೇಟಿ ಕೊಟ್ಟು ರಂಗಸಮಾಜದ ಕಮಿಟಿಯ ವರದಿಯನ್ನು ಆದಷ್ಟು ಬೇಗ ಪರಿಶೀಲಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸತ್ಯಾಗ್ರಹ ನಿರತರಿಗೆ ಭರವಸೆ ಕೊಟ್ಟರು. ಸಚಿವೆಯ ಮಾತನ್ನು ನಂಬಿದ ಕಲಾವಿದರುಗಳು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ಸಾಂಕೇತಿಕವಾಗಿ ಕಪ್ಪುಬಟ್ಟೆಯನ್ನು ಕಟ್ಟಿಕೊಂಡು ರಂಗಾಯಣದೊಳಗೆ ಹೋಗಿ ಕೆಲಸಕ್ಕೆ ಸೇರಿದ್ದಾರಾದರೂ ಅಲ್ಲಿ ಮಾಡಲು ಕೆಲಸ ಏನಿಲ್ಲ. ಕೆಲಸ ಹೇಳುವವರೂ ಯಾರಿಲ್ಲ.


ಮಾರ್ಚ 25 ರಂದು ಉಮಾಶ್ರೀಯವರ ಅಧ್ಯಕ್ಷತೆಯಲ್ಲಿ  ಸಂಸ್ಕೃತಿ ಇಲಾಖೆಯಲ್ಲಿ ಕಲಬುರಗಿ ರಂಗಾಯಣದ ಕುರಿತು ವಿಚಾರಣೆಗಾಗಿಯೇ ಸಭೆ ಕರೆಯಲಾಯಿತು. ರಂಗಾಯಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ರಂಗಸಮಾಜದ ಎಲ್ಲಾ ಸದಸ್ಯರುಗಳು ಸೇರಿ ಚರ್ಚಿಸಿದರು. ರಂಗಸಮಾಜದ ಕಮಿಟಿಯು ತನ್ನ ವಿಚಾರಣಾ ವರದಿಯನ್ನು ಮಂಡಿಸಿ ಹುಡುಗಿಯವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತು. ಅದಕ್ಕೆ ಉಮಾಶ್ರೀಯವರು ಕಲಬುರಗಿ ಜಿಲ್ಲಾಧಿಕಾರಿಗಳ ಹಾಗೂ ರಂಗಾಯಣದ ಆಡಳಿತಾಧಿಕಾರಿಗಳ ವರದಿ ಬಂದ ನಂತರ ತೀರ್ಮಾಣ ತೆಗೆದುಕೊಳ್ಳುವುದಾಗಿ ಹೇಳಿದರು. ಇದರಿಂದ ಕೆರಳಿದ ರಂಗಸಮಾಜದ ಹಿರಿಯ ಸದಸ್ಯರಾದ ಜಿ.ಕೆ.ಗೋವಿಂದರಾವ್‌ರವರು ಈ ಕೂಡಲೇ ತೀರ್ಮಾಣ ತೆಗದು ಕೊಳ್ಳದಿದ್ದರೆ ನಾನು ರಂಗಸಮಾಜಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿ ತಕ್ಷಣ ರಾಜೀನಾಮೆ ಪತ್ರ ಬರೆದು ಕೊಟ್ಟರು. ಅವರ ಮಾತಿಗೆ ಮಂಡ್ಯ ರಮೇಶರವರು ಜೊತೆಗೂಡಿದರು. ಎಲ್ಲರ ಒತ್ತಾಯಕ್ಕೆ ಮಣಿದ ಉಮಾಶ್ರೀಯವರು ಒಂದು ವಾರದೊಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆಂದು ಹೇಳಿ ರಂಗಸಮಾಜದ ಸದಸ್ಯರುಗಳನ್ನು ಸಮಾಧಾನಗೊಳಿಸಿ ಸಭೆ ಬರಕಾಸ್ತುಗೊಳಿಸಿದರು. ಈ ಹುಡುಗಿ ಮಾಸ್ತರನ್ನು ಉದ್ದೇಶಪೂರ್ವಕವಾಗಿ ಸಭೆಯಿಂದ ಹೊರಗಿಡಲಾಯಿತು. ಸಭೆ ಮುಗಿದು ಒಂದು ವಾರವಲ್ಲ ಆರು ವಾರಗಳೇ ಕಳೆದು ಹೋದರೂ ಇನ್ನೂ ಮಾನ್ಯ ಸಚಿವೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳದೇ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ.  ಅಲ್ಲಿ ನಡೆದದ್ದೇನು ಎಂದು ವಿಚಾರಣಾ ಕಮಿಟಿ ಹಾಗೂ ಮಹಿಳಾ ಆಯೋಗ ತನ್ನ ವರದಿಯಲ್ಲಿ ವಿವರಿಸಿದ್ದರೂ ಹುಡುಗಿಯವರನ್ನು ಇನ್ನೂ ತೆರವುಗೊಳಿಸಲು ಸ್ವತಃ ಉಮಾಶ್ರೀರವರಿಗೂ ಸಾಧ್ಯವಾಗಿಲ್ಲ.

ಆಗಲೂ ಸುಮ್ಮನಿರದ ಹುಡುಗಿ ಮಾಸ್ತರರು "ವಿಚಾರಣಾ ಕಮಿಟಿಯ ಎಲ್ಲರ ವರದಿಯನ್ನೂ ನಾನು ಒಪ್ಪಿಕೊಳ್ಳುತ್ತೇನೆ, ಆದರೆ ಡಿ.ಎಸ್.ಚೌಗಲೆಯವರ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ" ಎಂದು ಮಹಾಸಭೆಯ ಆರಂಭಕ್ಕೆ ಮುನ್ನ ಹೇಳಿದರು. ಅರೆ.. ಅದ್ಯಾಕೆ ಚೌಗಲೆಯವರ ಮೇಲೆ ಹುಡುಗಿ ಹರಿಹಾಯ್ದರು?. ಅದಕ್ಕೆ ಕಾರಣವೂ ಇದೆ. ಕಲಬುರ್ಗಿ ರಂಗಾಯಣಕ್ಕೆ ವಿಚಾರಣಾ ಕಮಿಟಿಯ ಸದಸ್ಯರಾಗಿ ಹೋದ ಚೌಗಲೆಯವರು ಹೋದ ಕೆಲಸ ಮುಗಿಸಿಕೊಂಡು ಬೇರೆ ಸದಸ್ಯರ ಹಾಗೆ ವಾಪಸ್ ಬಂದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ.. ವಿಚಾರಣೆಯ ನಂತರ ... ಹುಡುಗಿಯವರು ತಮ್ಮ ವಿರೋಧಿಯೆಂದು ತಿಳಿದುಕೊಂಡಿರುವ ಶಂಕರಯ್ಯ ಗಂಟಿಯವರ ಆಹ್ವಾನದ ಮೇರೆಗೆ ಗಂಟಿಯವರ ಜೊತೆ ರಾತ್ರಿ ಮೇಜುವಾಣಿಗೆ ಚೌಗಲೆ ಹೋದರೋ ಆಗ ಹುಡುಗಿಯವರು ಸಿಟ್ಟಿಗೆದ್ದರು. ಗಂಟಿಯವರ ಜೊತೆ ಸೇರಿ ನನ್ನ ವಿರುದ್ದ ಶಡ್ಯಂತ್ರ ಮಾಡುತ್ತಿದ್ದಾರೆಂದು ಊಹಿಸಿಕೊಂಡ ಹುಡುಗಿಯವರು ಅದೇ ಅಸಮಾಧಾನವನ್ನು ಸಭೆಯಲ್ಲಿ ಹೊರಹಾಕಿದರು. ಚೌಗಲೆಯವರು ಯಾರ ಜೊತೆ ಬೇಕಾದರೂ ಹೋಗುವ ಸ್ವಾತಂತ್ರ್ಯ ಹೊಂದಿದ್ದಾರೆ. ಆದರೆ.. ಈ ಸಂದರ್ಭದಲ್ಲಿ ಹೋಗಬಾರದಿತ್ತು. ಯಾಕೆಂದರೆ ಅವರು ಸರಕಾರದ  ಪರವಾಗಿ ಹೋಗಿದ್ದು  ಹುಡುಗಿಯವರ ಮೇಲೆ ಇರುವ ಆರೋಪಗಳ ವಿಚಾರಣೆಗೆ. ವಿಚಾರಣೆಯ ನಂತರ ಹುಡುಗಿಯವರ ವಿರೋಧಿಗಳ ಜೊತೆಗೆ ಸೇರಿಕೊಂಡು ಊಟ ಮತ್ತೊಂದು ಮಾಡಿದ್ದು ಸಮರ್ಥನೀಯವಲ್ಲ. ಇದರಿಂದಾಗಿ ಚೌಗಲೆಯವರ ಮೇಲೆ ಹುಡುಗಿಯವರಿಗೆ ಗುಮಾನಿ ಬಂದಿದ್ದರಲ್ಲಿ ತಪ್ಪೇನಿಲ್ಲ. ಚೌಗಲೆ ಸಾಹೇಬರು ಸಮಯ ಸಂದರ್ಭಗಳನ್ನು ಅರಿತುಕೊಂಡು ನಡೆದಿದ್ದರೆ ಈ ಸಮಸ್ಯೆಯೇ ಉದ್ಬವಿಸುತ್ತಿರಲಿಲ್ಲ.  

ಹುಡುಗಿ ಮೇಷ್ಟ್ರು
ರಂಗಸಮಾಜದ ಕಮಿಟಿಯವರು ನಡೆಸಿದ ವಿಚಾರಣೆಯಲ್ಲಿ ಕಲಾವಿದರುಗಳು ಹುಡುಗಿಯವರ ಜ್ಯಾತ್ಯಾತೀತತೆಯ ಮುಖವಾಡವನ್ನು ಬಿಚ್ಚಿಟ್ಟು  ಅವರ ಜಾತೀಯತೆಯ ದರ್ಶನ ಮಾಡಿಸಿದರು. ಕಲಾವಿದೆಯರು ಹುಡುಗಿಯವರ ಇನ್ನೊಂದು ಮುಖವನ್ನು ಅತ್ಯಂತ ನೋವಿನಿಂದ ತೆರೆದಿಟ್ಟರು. ಅದು ಮಹಿಳೆಯರೊಂದಿಗೆ ಹುಡುಗಿಯವರ ತೆವಲಿನಾಟ. ಅಂದರೆ.. ಅವಕಾಶ ಸಿಕ್ಕಾಗಲೆಲ್ಲಾ ಹುಡುಗಿಯವರು ಕಲಾವಿದೆಯರ ಮೈಕೈ ಮುಟ್ಟುವುದನ್ನು ಮಾಡುತ್ತಿದ್ದರಂತೆ. ಇದರಿಂದ ಮುಜುಗರಕ್ಕೊಳಗಾದರೂ ಕಲಾವಿದೆಯರು ತಡೆದುಕೊಂಡಿದ್ದರು. ವಿಚಾರಣಾ ಕಮಿಟಿಯ ಮುಂದೆ ತಮ್ಮ ಗೋಳನ್ನು ಹೇಳಿಕೊಂಡು ನಾಲ್ಕೂ ಕಲಾವಿದೆಯರೂ ಕಣ್ಣೀರಾದರು. ನಿರ್ದೇಶಕರಿಂದ ಲೈಂಗಿಕ ಕಿರುಕುಳಕ್ಕೆ  ಗುರಿಯಾಗಿದ್ದು ತಮ್ಮ ಕುಟುಂಬಸ್ತರಿಗೆ ಗೊತ್ತಾದರೆ ಮಾರ್ಯಾದೆ ಹೋಗುತ್ತದೆಂದು ಅವಲತ್ತುಕೊಂಡರು. ಎಲ್ಲಿ ರಂಗಾಯಣದಿಂದ ಹೊರಹಾಕುತ್ತಾರೋ ಎಂಬ ಭಯದಿಂದ ಇಲ್ಲಿವರೆಗೂ ಬಾಯಿ ಬಿಟ್ಟಿಲ್ಲವೆಂದು ತಳಮಳ ತೋಡಿಕೊಂಡರು. ಇದೂ ಸಹ ವಿಚಾರಣಾ ಕಮಿಟಿಯ ವರದಿಯಲ್ಲಿ ದಾಖಲಾಗಿದೆ. ಒಬ್ಬ ಮಹಿಳೆಯಾಗಿ, ಕಲಾವಿದೆಯಾಗಿ ಹಾಗೂ ಮಹಿಳೆ ಮತ್ತು ಮಕ್ಕಳ ಇಲಾಖೆಯ ಸಚಿವೆಯೂ ಆದ ಉಮಾಶ್ರೀಯವರು ರಂಗಾಯಣದ ಮಹಿಳಾ ಕಲಾವಿದರ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ತಿಳಿದೂ ಸುಮ್ಮನಾದರು.. ಯಾಕೆಂದು ಗೊತ್ತಿಲ್ಲ. ಆದರೆ ಮಹಿಳಾ ಆಯೋಗ ಸುಮ್ಮನಿರಲಿಲ್ಲ. ರಾಜ್ಯ ಮಹಿಳಾ ಆಯೋಗದವರು ಸ್ವಯಂಪ್ರೇರಿತರಾಗಿ ರಂಗಾಯಣಕ್ಕೆ ಬಂದು ವಿಚಾರಣೆ ಮಾಡಿ ತಮ್ಮ ವರದಿಯನ್ನು ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಿದರು. ಸಮಸ್ಯೆ ಬಗೆಹರಿಸದಿದ್ದರೆ ಕೇಂದ್ರ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿಯೂ ತಿಳಿಸಿದ್ದಾರಂತೆ.

ಅನೇಕ ಸಂಘ ಸಂಸ್ಥೆಗಳು ಧರಣಿ, ಮೆರವಣಿಗೆ ಮಾಡಿ ಹುಡುಗಿ ಹಠಾವೋ ಎಂದು ಒತ್ತಾಯಿಸಿದ್ದಾರೆ. ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಕಲಾವಿದರನ್ನು ಬೆಂಬಲಿಸಿ ಡಿಸಿ ಕಛೇರಿಯ ಎದುರು ಧರಣಿ ಮಾಡಿದ್ದಾರೆ. ಕೆಲವು ಮಠಾಧೀಶರುಗಳು ಸಹ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಪೊಲೀಸ್ ಠಾಣೆಯಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಎಲ್ಲಾ ಕಡೆಯಿಂದಲೂ ಹುಡುಗಿಯವರನ್ನು ತೆಗೆದುಹಾಕಿ ರಂಗಾಯಣವನ್ನು ಉಳಿಸಲು ಬೇಕಾದಷ್ಟು ಒತ್ತಡಗಳು ಬರುತ್ತಿವೆ. ಎಲ್ಲಾ ಪತ್ರಿಕೆಗಳಲ್ಲೂ ಸಹ ವರದಿ ಲೇಖನಗಳು ಬಂದಿವೆ. ರಂಗಸಮಾಜದ ವಿಚಾರಣಾ ವರದಿ, ಮಹಿಳಾ ಆಯೋಗದ ತನಿಖಾ ವರದಿ ಹಾಗೂ ಕಲಬುರಗಿಯ ಎಸ್ಪಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳು ಕೊಟ್ಟ ವರದಿಗಳೆಲ್ಲಾ ಸಂಸ್ಕೃತಿ ಇಲಾಖೆಯ ನಿರ್ದೇಶಕರು ಹಾಗೂ ಸಚಿವೆ ಉಮಾಶ್ರೀಯವರಿಗೆ ತಲುಪಿವೆ. ಎಲ್ಲಾ ವರದಿಗಳಲ್ಲೂ ಹುಡುಗಿಯವರ ವೈಪಲ್ಯಗಳೇ ನಮೂದಾಗಿದೆ. ರಂಗಸಮಾಜದ ಬಹುತೇಕ ಸದಸ್ಯರಂತೂ ಹುಡುಗಿಯವರ ವಜಾಕ್ಕೆ ಆಗ್ರಹಿಸಿಯೂ ಆಗಿದೆ. 
 
ಆದರೂ... ಹುಡುಗಿಯವರನ್ನು ಕಾಪಾಡುತ್ತಿರುವ ಶಕ್ತಿಯಾದರೂ ಯಾವುದು? ಎಂದು ಹುಡುಕಿದರೆ ಅದು ಹೋಗಿ ನಿಲ್ಲುವುದು ಖರ್ಗೆ ಹಾಗೂ ಧರ್ಮಸಿಂಗ್‌ರವರ ಅಖಾಡದಲ್ಲಿ. ಕಳೆದ ಸಲ ಎಂಪಿ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಪರವಾಗಿ ಕೆಲಸ ಮಾಡಿದ ಹುಡುಗಿಯವರು ಕೇಂದ್ರ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಗಳ ಸಾಧನೆಗಳ ಕುರಿತು ಕೈಪಿಡಿ ಪುಸ್ತಕವನ್ನು ತಯಾರಿಸಿ ಕೊಟ್ಟರು. ಈ ಸಾಧನಾ ಪಟ್ಟಿಯ ಬುಕ್‌ಲೆಟ್ ಬಿಡುಗಡೆಯ ಸಮಾರಂಭದಲ್ಲಿ ಮುಂಚೂಣಿಯಲ್ಲಿದ್ದದ್ದೂ ಸಹ ಹುಡುಗಿಯವರೇ. ಇದರಿಂದಾಗಿ ಹುಡುಗಿಯವರಿಗೆ ಬೆಂಬಲವಾಗಿ ಖರ್ಗೆ ನಿಂತಿದ್ದಾರೆ. ಜೊತೆಗೆ ಧರ್ಮಸಿಂಗ್‌ರವರು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವೆ ಉಮಾಶ್ರೀಯವರ ಮೇಲೆ ಒತ್ತಡ ತಂದು ಹುಡುಗಿರವರನ್ನು ರಂಗಾಯಣದ ನಿರ್ದೇಶಕರನ್ನಾಗಿಸಿದ್ದಾರೆಂಬುದೂ ಸಹ ಓಪನ್ ಸಿಕ್ರೆಟ್. ಈಗ ಸ್ವಯಂಕೃತ ಅಪರಾಧದಿಂದಾಗಿ ಸಂಕಷ್ಟದಲ್ಲಿರುವ ಹುಡುಗಿಯವರ ಬೆನ್ನ ಹಿಂದೆ ನಿಂತು ಕಾಪಾಡುತ್ತಿರುವುದು ಕಲಬುರುಗಿ ಪ್ರಾಂತ್ಯದ ರಾಜಕೀಯ ಶಕ್ತಿ ಕೇಂದ್ರಗಳಾದ ಖರ್ಗೆ ಮತ್ತು ಧರಂಸಿಂಗ್‌ರವರು. ಹುಡುಗಿಯವರ ಹುಡುಗಾಟದ ಕುರಿತು ಸಂಪೂರ್ಣ ಅರಿವಿದ್ದೂ ಉಮಾಶ್ರೀಯವರು ಅಸಹಾಯಕರಾಗಿದ್ದಾರೆ. ಕೇಂದ್ರ ಸರಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಖರ್ಗೆಯವರನ್ನು ಎದುರು ಹಾಕಿಕೊಳ್ಳುವ ತಾಕತ್ತು ಸಿಎಂ ಸಿದ್ದರಾಮಯ್ಯನವರಿಗಾಗಲೀ ಇಲ್ಲವೆ ಸಚಿವ ಉಮಾಶ್ರೀಯವರಿಗಾಗಲೀ ಈ ಸದ್ಯಕ್ಕಂತೂ ಇಲ್ಲವಾಗಿದೆ. ರಾಜಕೀಯ ಕಾರಣಕ್ಕಾಗಿ ಜಿಲ್ಲಾಡಳಿತವೇ ಹುಡುಗಿಯವರನ್ನು ರಕ್ಷಿಸುತ್ತಿದೆ. ಹಾಗೆಯೆ ಕಲಬುರ್ಗಿಯ ಲಿಂಗಾಯತ ಲಾಬಿಯೂ ಸಹ ಜಾತಿಕಾರಣದಿಂದಾಗಿ ಹುಡುಗಿಯವರ ಹಿಂದೆ ಪರೋಕ್ಷವಾಗಿ ನಿಂತಿದೆ.


ಈ ಶಕ್ತ ರಾಜಕಾರಣ ಹಾಗೂ ಜಾತಿ ರಾಜಕೀಯದ ನಡುವೆ ಅತಂತ್ರವಾಗಿರೋದು ಮಾತ್ರ ರಂಗಾಯಣ ಹಾಗೂ ಅಲ್ಲಿಯ ಕಲಾವಿದರುಗಳು. ಈ ಜಾತಿ ರಗಳೆ ಆಗುವವರೆಗೂ ಅದು ಹೇಗೋ ಕುಂಟುತ್ತಾ ತೆವಳುತ್ತಾ ರಂಗಚಟುವಟಿಕೆಗಳು ರಂಗಾಯಣದಲ್ಲಿ ನಡೆಯುತ್ತಿದ್ದವು. ರಂಜಾನ್ ಉಳ್ಳಾಗಡ್ಡಿಯವರ ನಿರ್ದೇಶನದಲ್ಲಿ ಅತ್ಯಂತ ಬಾಲಿಶವಾದ ನಾಟಕವೊಂದನ್ನು ಮಾಡಿಸಲಾಗಿತ್ತು. ತದನಂತರ ಮಹಾದೇವ್ ಹಡಪದರವರ ನಿರ್ದೇಶನದಲ್ಲಿ ನಾಟಕದ ತಯಾರಿ ನಡೆದು ಅಂತಿಮ ಹಂತಕ್ಕೆ ಬಂದಿತ್ತು ಆದರೆ ರಂಗ ನಿರ್ದೇಶಕರು ಕೇಳಿದ ರಂಗಪರಿಕರಗಳನ್ನು ಒದಗಿಸಲು ಹುಡುಗಿಯರವರು ನಿರಾಕರಿಸಿದ ಮೇಲೆ ಹಡಪದರವರು ನಿರ್ದೇಶನದ ಉಸಾಬರಿಯೇ ಬೇಡವೆಂದು ನೋವಿನಿಂದ ಮರಳಿದರು. ಅಷ್ಟರಲ್ಲಿ ಈ ಎಲ್ಲಾ ಅನಿರೀಕ್ಷಿತ ಘಟನೆಗಳು ನಡೆದವು. ಕಲಾವಿದರು ಬೀದಿಯಲ್ಲಿ ಕೂತು ನ್ಯಾಯಕ್ಕಾಗಿ ಪ್ರತಿಭಟಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಈಗ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ರಂಗಾಯಣದೊಳಗೆ ಕಲಾವಿದರೆಲ್ಲಾ ಹೋಗಿ ಕೂತಿದ್ದು ಬರುತ್ತಿದ್ದಾರೆ. ಅಲ್ಲಿ ಮಾಡಲು ಅವರಿಗೇನೂ ಕೆಲಸವಿಲ್ಲ. ಮಾಡಿಸಬೇಕಾದವರೆ ವಿವಾದಗಳಿಗೆ ಸಿಕ್ಕು ವಿಲಿವಿಲಿಗುಟ್ಟುತ್ತಿದ್ದಾರೆ. ಪರ್ಯಾಯವಾಗಿ ಆಡಳಿತಾಧಿಕಾರಿಗಳ ಮೂಲಕವಾದರೂ ನಾಟಕ ಕಟ್ಟುವ ಕೆಲಸ ಮಾಡಬೇಕಾದ ಸಂಸ್ಕೃತಿ ಇಲಾಖೆ ಕಾದು ನೋಡುವ ತೀರ್ಮಾಣ ತೆಗೆದುಕೊಂಡಿದೆ. ಒಂದು ವಾರದಲ್ಲಿ ತೀರ್ಮಾಣ ತೆಗೆದುಕೊಳ್ಳದಿದ್ದರೆ ರಾಜೀನಾಮೆ ಕೊಡುತ್ತೇವೆಂದು ಜಿ.ಕೆ.ಗೋವಿಂದರಾವ್ ರವರ ಮುಂದಾಳತ್ವದಲ್ಲಿ ಸಭೆಯಲ್ಲಿ ಒತ್ತಾಯಿಸಿದ್ದ ರಂಗಸಮಾಜದ ಸರ್ವ ಸದಸ್ಯರುಗಳೂ ಮೌನಕ್ಕೆ ಶರಣಾಗಿದ್ದಾರೆ. ಇನ್ನು ಈ ಕಲಾವಿದರುಗಳ ಗೋಳು ಕೇಳುವವರಾದರೂ ಯಾರು? ಕಳೆದ ತಿಂಗಳು ಕಲಾವಿದರಿಗೆ ಕೊಡಬೇಕಾಗಿದ್ದ ಸಂಬಳದಲ್ಲೂ ಅರ್ಧದಷ್ಟನ್ನು ಸರಕಾರ ತಡೆಹಿಡಿದಿದೆ. ರಂಗಾಯಣದಂತೆಯೇ ಅಲ್ಲಿಯ ಕಲಾವಿದರ ಬದುಕೂ ಅತಂತ್ರವಾಗಿದೆ.
 
ಒಂದೆರಡು ತಿಂಗಳು ಪೊಲೀಸ್ ಅಧಿಕಾರಿಗಳ ಒತ್ತಡಕ್ಕೆ ಮಣಿದು ಮನೆಯೊಳಗೆ ಇದ್ದ ಹುಡುಗಿ ಮಾಸ್ತರರು ಇತ್ತೀಚೆಗೆ ಪತ್ರಿಕಾ ಗೋಷ್ಟಿ ಕರೆದು ಅವಲತ್ತುಕೊಂಡಿದ್ದಾರೆ. ರಂಗಕರ್ಮಿ ಶಂಕರಯ್ಯ ಗಂಟಿ, ನೀನಾಸಂ ಪದವೀಧರ ವಿಶ್ವನಾಥ, ಸುನಿಲ್ ಮಾನ್ಪಡೆ.. ಮುಂತಾದವರು ಸೇರಿಕೊಂಡು ಕಲಾವಿದರ ಮನಸ್ಸನ್ನು ಕೆಡಿಸಿ ನನ್ನ ವಿರುದ್ಧ ಮಸಲತ್ತು ನಡೆಸುತ್ತಿದ್ದಾರೆ.. ಎಂದು ಕಣ್ಣೀರಿಟ್ಟಿದ್ದಾರೆ. ಈ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾ. ರಂಗಾಯಣದೊಳಗಿನ ಸಮಸ್ಯೆಗಳನ್ನು ಮೊಳೆತಾಗಲೇ ನಿವಾರಿಸಿ, ಜಾತಿ ಸಂಘರ್ಷ ನಿಲ್ಲಿಸಿ ಸೌಹಾರ್ಧಯುತ ವಾತಾವರಣವೊಂದನ್ನು ಅನಾವರಣಗೊಳಿಸಿದ್ದರೆ ಇಷ್ಟೊಂದು ಅತಿರೀಕಕ್ಕೆ ಹೋಗಲು ಸಾಧ್ಯವಿತ್ತಾ? ಉಗುಳಿಗೆ ಹೋಗುವುದನ್ನು ಕೆರೆಕೆರೆದು ಹುಣ್ಣು ಮಾಡಿಕೊಂಡರೆ ಆಗುವುದು ಹೀಗೇನೇ... ಹೊರಗಿನವರು ಹೇಳಿದಂತೆ ಕೇಳಲು ಅಲ್ಲಿಯ ಕಲಾವಿದರೇನು ಪುಟ್ಟ ಮಕ್ಕಳೇ. ಕೇಳಿದರೆಂದೇ ತಿಳಿದುಕೊಳ್ಳೋಣ.. ಅವರ ಮೇಲೆ ಹಲ್ಲೆ ಆದಾಗ ಹುಡುಗಿ ಮಾಸ್ತರರ ಸಾಕ್ಷೀ ಪ್ರಜ್ಞೆ ಯಾಕೆ ರಜೆಯ ಮೇಲೆ ಹೋಗಿತ್ತು. ಒಬ್ಬಿಬ್ಬರಲ್ಲ ಬಹುತೇಕ ಎಲ್ಲಾ ಕಲಾವಿದರೂ ನಿರ್ದೇಶಕರ ಜಾತಿ ತಾರತಮ್ಯದ ವಿರುದ್ಧ ಸಿಡಿದೇಳಬೇಕಾದರೆ ಇದರಲ್ಲಿ ಹೊರಗಿನವರ ಶಡ್ಯಂತ್ರವಿದೆಯೆಂದು  ಹೇಗೆ ನಂಬುವುದು. ಇದೆಲ್ಲಾ ಗೊತ್ತಾಗಿಯೇ ಸಮುದಾಯದಂತಹ ಹೋರಾಟಪರ ಸಾಂಸ್ಕೃತಿಕ ಸಂಘಟನೆಯು ತನ್ನ ಅಧ್ಯಕ್ಷರ ಸಮರ್ಥನೆಗಿಳಿಯದೇ ದಿವ್ಯ ಮೌನಕ್ಕೆ ಶರಣಾಗಿದೆ. ಏಕಾಂಗಿಯಾಗಿ ಹುಡುಗಿ ಮಾಸ್ತರರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ವಿರೋಧಿಗಳು ಕಾರಣವೆಂದು ಹೇಳಿ ದಿಕ್ಕುತಪ್ಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕೊನೆಗೂ ಹುಡುಗಿ ಮಾಸ್ತರರ ಹುಡುಗಾಟದಿಂದಾಗಿ ರಂಗಾಯಣದ ಗೌರವ ಮಣ್ಣು ಪಾಲಾಗಿದೆ.

ಇಷ್ಟೆಲ್ಲಾ ರಂಪಾ ರಾದ್ದಾಂತ ಆದ ಮೇಲೆಯೂ ಸಮುದಾಯದಂತಹ ಎಡಪಂಥೀಯ ಸಾಂಸ್ಕೃತಿಕ ಸಂಘಟನೆಗೆ ಕಳೆದ ಮೂರು ಅವಧಿಯಿಂದ ಅಧ್ಯಕ್ಷರಾಗಿರುವ ಪ್ರೊ.ಆರ್.ಕೆ.ಹುಡುಗಿಯವರು ರಂಗಾಯಣಕ್ಕೆ ರಾಜೀನಾಮೆ ಕೊಟ್ಟು ವಿಚಾರಣೆಗೆ ಸಹಕರಿಸಿದ್ದರೆ ಅವರ ಗೌರವ ಅಬಾಧಿತವಾಗಿರುತ್ತಿತ್ತು. ತಪ್ಪು ಮಾಡದೇ ಇದ್ದಲ್ಲಿ ಕನಿಷ್ಟ ರಂಗಸಮಾಜದ ಕಮಿಟಿಯ ವಿಚಾರಣೆಗಾದರೂ ಉತ್ತರಿಸಬೇಕಿತ್ತು. ತಮ್ಮದೇ ಕಲಾವಿದರ ಮೇಲೆ ಜಾತಿನಿಂದನೆ ಹಾಗೂ ಹಲ್ಲೆಯಾದಾಗ ನೊಂದವರ ಪರ ನಿಲ್ಲಬೇಕಾಗಿತ್ತು ಎಂದು ಹೇಳಿಕೆಯನ್ನಾದರೂ ಕೊಡಬಹುದಾಗಿತ್ತು. ತಮ್ಮಿಂದಾದ ನ್ಯೂನ್ಯತೆಗಳನ್ನು ಸಮರ್ಥಿಸಿಕೊಳ್ಳದೇ ಒಪ್ಪಿಕೊಂಡು ಸರಿಪಡಿಸಿಕೊಳ್ಳುವ ಭರವಸೆಯನ್ನಾದರೂ ನೀಡಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದೇ ಯಾವಾಗ ಹಠಮಾರಿ  ಧೋರಣೆಗೆ ಹುಡುಗಿಯವರು ಅಂಟಿಕೊಂಡರೋ ಆಗ ಅವರ ಮೇಲಿನ ಗುಮಾನಿ ಇನ್ನೂ ಹೆಚ್ಚಾಗತೊಡಗಿತು. ಇಷ್ಟು ದಿನಗಳ ಕಾಲ ಸಾಹಿತ್ಯ ಕ್ಷೇತ್ರ ಹಾಗೂ ಸಮುದಾಯ ಸಂಘಟನೆಗಳಲ್ಲಿ ಉಳಿಸಿ ಬೆಳೆಸಿಕೊಂಡು ಬಂದಿದ್ದ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜಾಗಿಬಿಟ್ಟಿತು. ಈಗಲೂ ಕಾಲ ಮಿಂಚಿಲ್ಲ... ಅವರಿವರ ಮೇಲೆ ಆರೋಪ ಮಾಡುವುದನ್ನು ಬಿಟ್ಟು. ರಂಗಾಯಣಕ್ಕೆ ರಾಜೀನಾಮೆ ಕೊಟ್ಟು ತನಿಖೆಯನ್ನು ದಿಟ್ಟವಾಗಿ ಎದುರಿಸಿದರೆ ಅಳಿದುಳಿದ ಗೌರವವಾದರೂ ಉಳಿಯುತ್ತದೆ. ಹೀಗೆಯೇ ಹಠಕ್ಕೆ ಬಿದ್ದರೆ ಇಂದಿಲ್ಲಾ ನಾಳೆ ಸರಕಾರದಿಂದ ವಜಾಗೊಂಡು ತೊಂದರೆಯನ್ನೂ ಅನುಭವಿಸಬೇಕಾಗುತ್ತದೆ. ಇದನ್ನು ಹುಡುಗಿಯಂತಹ ಹಿರಿಯರಿಗೆ ಹೇಳುವವರು ಯಾರು? ಹೇಳಿದರೂ ಕೇಳುವ ಮನಸ್ಥಿತಿಯಲ್ಲಿ ಹುಡುಗಿಯವರು ಇಲ್ಲವೆನ್ನುವುದೇ ಪ್ರಸ್ತುತ ಪ್ರಾಬ್ಲೆಂ. ಹುಡುಗಿಯವರನ್ನು ಈ ದುಸ್ತಿತಿಗೆ ತಂದಿದ್ದು ಅವರ ಉಡಾಫೆ ಮಾತುಗಳು ಹಾಗೂ ನಿರ್ಲಕ್ಷ ಧೋರಣೆಗಳು. ಇವೆರಡನ್ನೂ ನಿಯಂತ್ರಣದಲ್ಲಿಟ್ಟಿದ್ದರೆ ಕಲಬುರಗಿ ರಂಗಾಯಣ ಇನ್ನೂ ಆರಂಭದಲ್ಲೇ ಹೀಗೆ ಆಡಿಕೊಳ್ಳುವವರ ಬಾಯಿಗೆ ಎಲೆಯಡಿಕೆ ಆಗುತ್ತಿರಲಿಲ್ಲ.

ಇಷ್ಟೆಲ್ಲಾ ಆದರೂ ರಂಗಕರ್ಮಿಗಳು ಯಾಕೆ ಬಾಯಿ ಬಿಡುತ್ತಿಲ್ಲ. ತಮಗಾದ ಅನ್ಯಾಯದ ವಿರುದ್ದ ಕಲಾವಿದರುಗಳೇ ಎಲ್ಲಾ ರೀತಿಯ ಪ್ರತಿಭಟನೆಗಳನ್ನು ಮಾಡುತ್ತಿದ್ದರೂ, ಅನೇಕಾನೇಕ ಸಂಘ ಸಂಸ್ಥೆಗಳು ಕಲಾವಿದರ ಹೋರಾಟಕ್ಕೆ ಬೆಂಬಲಿಸಿ ಮೆರವಣಿಗೆ ಧರಣಿಗಳನ್ನು ಮಾಡುತ್ತಿದ್ದರೂ ಬೆಂಗಳೂರು ಕೇಂದ್ರದ ರಂಗಕಲಾವಿದರುಗಳು ಹಾಗೂ ರಂಗಭೂಮಿಯ ಹಿರಿಯರು ಯಾಕೆ ವಿರೋಧಿಸುವ ಇಲ್ಲವೇ ಸಮರ್ಥಿಸುವ ಹೇಳಿಕೆ ಕೊಡುತ್ತಿಲ್ಲ. ಯಾಕೆಂದರೆ ಕೆಲವು ರಂಗಕರ್ಮಿಗಳಿಗೆ ಸರಕಾರದ ವಿರುದ್ಧ, ಸಂಸ್ಕೃತಿ ಇಲಾಖೆಯ ವಿರುದ್ಧ ಮಾತಾಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅವರು ಯಾವುಯಾವುದೋ ರೀತಿಯಲ್ಲಿ ಫಲಾನುಭವಿಗಳಾಗಿದ್ದಾರೆ ಇಲ್ಲವೇ ಪ್ರಶಸ್ತಿ ಪದವಿಯ ನಿರೀಕ್ಷೆಗಳಲ್ಲಿದ್ದಾರೆ. ಯಾರೋ ಹತ್ತು ಜನ ಕಲಾವಿದರಿಗಾಗಿ ಯಾಕೆ ಸರಕಾರದ ಕೆಂಗೆಣ್ಣಿಗೆ ಗುರಿಯಾಗಬೇಕು ಎನ್ನುವು ಧೋರಣೆಗೆ ಅಂಟಿಕೊಂಡಿದ್ದಾರೆ. ಇನ್ನು ಕೆಲವು ರಂಗಬದ್ದತೆ ಉಳ್ಳವರೂ ಇದ್ದಾರೆ.. ಅವರೂ ಸುಮ್ಮನಿದ್ದಾರೆ. ಸರಕಾರ ಇದೇ ನೆಪವನ್ನು ಹೇಳಿ ಅದೆಲ್ಲಿ ರಂಗಾಯಣವನ್ನೇ ಮುಚ್ಚಿ ಬಿಡುತ್ತದೋ ಎನ್ನುವ ಚಿಂತೆ ಅವರದು.

ಯಾಕೆಂದರೆ ಕಲಬುರಗಿ ರಂಗಾಯಣಕ್ಕೆ ವಾರ್ಷಿಕ ಒಂದು ಕೋಟಿ ರೂಪಾಯಿ ಅನುದಾನವನ್ನು ಹೊರತು ಪಡಿಸಿ ತನ್ನದೇ ಎನ್ನುವ ಯಾವ ಸ್ವಂತ ಅಸ್ತಿತ್ವವೂ ಈ ಸಧ್ಯಕ್ಕೆ ಇಲ್ಲ. ಅದು ನಡೆಯುತ್ತಿರುವ ಕಟ್ಟಡ ಸಂಸ್ಕೃತಿ ಇಲಾಖೆಯದ್ದು. ತಾಲಿಂ ನಡೆಸುವ ಜಾಗ ಅರ್ಧ ಕಟ್ಟಿ ಬಿಟ್ಟ ಸರಕಾರಿ ರಂಗಮಂದಿರದ್ದು. ಯಾವುದೇ ಸ್ವಂತ ಕಟ್ಟಡವಿಲ್ಲದೇ, ಇನ್ನೂ ಗಟ್ಟಿಯಾಗಿ ಬೇರೂರದೇ ಅತಂತ್ರವಾಗೇ ಇರುವ ರಂಗಾಯಣವನ್ನು ಮುಚ್ಚಿ ಬಿಡುವುದು ಸರಕಾರಕ್ಕೆ ಬಹಳ ಸುಲಭವಾದ ಸಂಗತಿ. ಅದೆಷ್ಟೋ ದಿನ ಅದೆಷ್ಟೋ ಜನ ಕಲಬುರಗಿಯ ರಂಗಾಸಕ್ತರು ಸರಕಾರದ ಮೇಲೆ ಒತ್ತಡ ಹೇರಿ ಮಂಜೂರು ಮಾಡಿಸಿಕೊಂಡ ರಂಗಾಯಣವು ಹೀಗೆ ವಿವಾದಕ್ಕೊಳಗಾಗಿ ವಿನಾಶಗೊಳ್ಳುವುದು ಬೇಕಾಗಿಲ್ಲ. ಆದರೆ.. ರಂಗನಿಷ್ಠೆ ಇರುವ ರಂಗಕರ್ಮಿಗಳು ಸರಕಾರವನ್ನು ನೇರವಾಗಿ ವಿರೋಧಿಸಲಾಗದಿದ್ದರೆ ಸಮಸ್ಯೆಯನ್ನಾದರೂ ಶೀಘ್ರವಾಗಿ ಪರಿಹರಿಸಲು ಒತ್ತಾಯಿಸಬಹುದಾಗಿತ್ತು. ಹುಡುಗಿಯವರ ಮೇಲೆ ಜಾತಿ ನಿಂದನೆ ಹಾಗೂ ಲೈಂಗಿಕ ಕಿರುಕುಳದಂತಹ ಗುರುತರ ಆರೋಪ ಬಂದಾಗ ಅವರನ್ನು ಅಮಾನತುಗೊಳಿಸಿ ತಾತ್ಕಾಲಿಕವಾಗಿ ಆಡಳಿತಾಧಿಕಾರಿಗಳ ಮೂಲಕವಾದರೂ ರಂಗಭೂಮಿ ಚಟುವಟಿಕೆ ನಡೆಯಲು ಅನುವು ಮಾಡಿಕೊಡಲು ಸಂಸ್ಕೃತಿ ಇಲಾಖೆಯನ್ನು ಒತ್ತಾಯಿಸಬಹುದಾಗಿತ್ತು. ಆದರೆ.. ರಂಗಕರ್ಮಿಗಳದ್ದು  ದಿವ್ಯ ಮೌನವಾದರೆ .. ಕಲಬುರಗಿ ರಂಗಾಯಣದಲ್ಲೀಗ ಸ್ಮಶಾನ ಮೌನ. ಸಮಸ್ಯೆಯನ್ನು ವಿಳಂಬಗೊಳಿಸಿದಷ್ಟೂ ಅದು ಉಲ್ಬಣಗೊಳ್ಳುತ್ತದೆ. ಅದನ್ನು ಸಚಿವೆ ಉಮಾಶ್ರೀಯವರು ಆದಷ್ಟು ಬೇಗ ಬಗೆಹರಿಸಿ ಇನ್ನೊಬ್ಬ ಬದ್ಧತೆಯಿರುವ ರಂಗಕರ್ಮಿಗೆ ಕಲಬುರಗಿ ರಂಗಾಯಣವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ವಹಿಸಿಕೊಡುವಂತಹ ಸಕಾರಾತ್ಮಕ ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿದೆ. 

ಆದರೆ.... ಈಗಾಗಲೇ ಸಂಸ್ಕೃತಿ ಇಲಾಖೆ ಬೇರೆಯದೇ ಆದ ತಂತ್ರಗಾರಿಕೆಯನ್ನು ಹೊಸೆಯುತ್ತಿದೆಯಂತೆ. ಕಲಬುರಗಿ ರಂಗಾಯಣವನ್ನು ರದ್ದು ಮಾಡಬೇಕು ಇಲ್ಲವೇ ರಾಯಚೂರಿಗೆ ವರ್ಗಾಯಿಸಬೇಕು ಎನ್ನುವ ಮಾತುಕತೆಗಳು ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದೆ. ಅದಕ್ಕಾಗಿಯೇ ಯಾವುದೇ ರಂಗಚಟುವಟಕೆಗಳು ನಡೆಯುವುದನ್ನು ನಿರ್ಬಂಧಿಸಲಾಗಿದೆ. ಕಲಬುರಗಿ ರಂಗಾಯಣದಲ್ಲಿ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಈಗ ಸರಕಾರದ ಮುಂದೆ ಎರಡು ಆಯ್ಕೆಗಳಿವೆ. ಒಂದು ವಿವಾದದ ಕೇಂದ್ರಬಿಂದುವಾದ ಆರ್.ಕೆ.ಹುಡುಗಿಯವರನ್ನು ವಜಾಗೊಳಿಸಬೇಕು ಇಲ್ಲವೇ ಈಗಿರುವ ಕಲಾವಿದರನ್ನು ಮನೆಗೆ ಕಳಿಸಿ ಹೊಸ ಕಲಾವಿದರನ್ನು ನೇಮಕ ಮಾಡಿಕೊಳ್ಳಬೇಕು. ಆದರೆ ಇದರಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಅಸಮಾಧಾನ ಬುಗಿಲೆದ್ದು ಹೋರಾಟ ಅರಂಭವಾಗುತ್ತದೆ. ಸಮಸ್ಯೆ ಇನ್ನೂ ತೀವ್ರವಾಗುತ್ತದೆ. ಯಾಕೆಂದರೆ ಹುಡುಗಿಯವರಿಗೆ ಪ್ರಮುಖ ರಾಜಕೀಯ ಶಕ್ತಿಗಳ ಬೆಂಬಲವಿದ್ದರೆ.. ಕಲಾವಿದರಿಗೆ ಲೋಕಲ್ ಸಂಘ ಸಂಸ್ಥೆಗಳ ಬೆಂಬಲವಿದೆ. ಈ ಅಪಾಯವನ್ನು ಮನಗಂಡ ಸಂಸ್ಕೃತಿ ಇಲಾಖೆ ಕಲಬುರ್ಗಿ ರಂಗಾಯಣವನ್ನೇ ರದ್ದು ಮಾಡಲು ಯೋಚಿಸುತ್ತಿದೆ. ಹಾಗೆ ಮಾಡಿದರೂ ವಿರೋಧ ತಪ್ಪಿದ್ದಲ್ಲ. ಹೀಗಾಗಿ ಹೈದರಾಬಾದ್ ಕರ್ನಾಟಕದ ಇನ್ನೊಂದು ಪ್ರಮುಖ ಜಿಲ್ಲೆಯಾಗಿರುವ ರಾಯಚೂರಿಗೆ ರಂಗಾಯಣವನ್ನು ಸ್ಥಳಾಂತರ ಮಾಡವ ಸಾಧ್ಯತೆಗಳನ್ನು ಆಡಳಿತಾಂಗ ಪರಿಶೀಲಿಸುತ್ತಿದೆ. ರಾಯಚೂರಿನಲ್ಲಿ ಹೊಸದಾಗಿ ರಂಗಾಯಣದ ಘಟಕ ಆರಂಭಿಸಿ ಅದಕ್ಕೆ ಹೊಸ ನಿರ್ದೇಶಕರು ಹಾಗೂ ಕಲಾವಿದರನ್ನು ಆಯ್ಕೆ ಮಾಡಬೇಕೆಂಬ ಚರ್ಚೆ ಇಲಾಖೆಯ ಅಧಿಕಾರಿಗಳಲ್ಲಿ ಶುರುವಾಗಿದ್ದು ಇದನ್ನು ಸಚಿವೆ ಉಮಾಶ್ರೀಯವರಿಗೂ ಮುಟ್ಟಿಸಲಾಗಿದೆ. ಆದರೆ ಉಮಾಶ್ರೀಯವರು ಕಾಯ್ದು ನೋಡುವ ತಂತ್ರಕ್ಕೆ ಬದ್ಧರಾಗಿದ್ದಾರೆ.  ಸರಕಾರ ಹಾಲಿ ಕಲಬುರಗಿ ರಂಗಾಯಣವನ್ನು ಮುಚ್ಚಲಿ ಇಲ್ಲವೇ ಸ್ಥಳಾಂತರಿಸಲಿ ಇವೆರಡೂ ಉತ್ತಮ ನಿರ್ದಾರಗಳಲ್ಲ. ಯಾಕೆಂದರೆ ನೆಗಡಿಯಾಗಿದೆಯೆಂದು ಯಾರೂ ಮೂಗನ್ನು ಕೊಯ್ದುಕೊಳ್ಳುವುದಿಲ್ಲ.. ಇಲ್ಲವೇ ಬಾಯಲ್ಲಿ ಉಸಿರಾಡಿ ಬದುಕುತ್ತೇವೆನ್ನುವುದಿಲ್ಲ. ರೋಗಕ್ಕೆ ಸರಿಯಾದ ಚಿಕಿತ್ಸೆ ನೀಡಿ ಆರೋಗ್ಯವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದೇ ಸರಿಯಾದ ಮಾರ್ಗವಾಗಿದೆ. ಈಗ ಉಲ್ಬಣಗೊಂಡ ಸಮಸ್ಯೆಗೆ ಈ ರೀತಿಯ ಪರಿಹಾರ ಕಂಡುಕೊಳ್ಳಬಹುದಾಗಿದೆ. ಒಂದು.. ರಂಗಸಮಾಜದ ಮುಂದಾಳತ್ವದಲ್ಲಿ ಕಲಾವಿದರು ಹಾಗೂ ನಿರ್ದೇಶಕ ಹುಡುಗಿಯವರನ್ನು ಮುಖಾ ಮುಖಿ ಕೂಡಿಸಿ, ಆದ ತಪ್ಪುಗಳನ್ನು ತಿಳಿಯಪಡಿಸಿ ಪರಸ್ಪರ ರಾಜಿಮಾಡಿಸಿ ರಂಗಾಯಣದ ಕಾರ್ಯಚಟುವಟಿಕೆಗಳು ಮುಂದುವರೆಯುವಂತೆ ಮಾಡುವುದು. ಆದರೆ... ಇದು ಸಧ್ಯದ ಪರಿಸ್ಥಿತಿಯಲ್ಲಿ ಕಷ್ಟಕರ. ಎರಡನೇಯದ್ದು.. ರಾಜೀನಾಮೆ ಕೊಡದೆ ಹಠಕ್ಕೆ ಬಿದ್ದ ಹುಡುಗಿಯವರನ್ನು ವಜಾಗೊಳಿಸಿ ಅವರ ಹಿಂದಿರುವ ಶಕ್ತಿಗಳಿಗೆ ಸಮಸ್ಯೆಯ ತೀವ್ರತೆಯನ್ನು ತಿಳಿಸಬೇಕು. ಮೂರನೆಯದಾಗಿ ಕಲಾವಿದರು ಹೀಗೆ ಗುಂಪುಗಾರಿಕೆಯನ್ನು ಮುಂದುವರೆಸಿದರೆ, ರಂಗಚಟುವಟಿಕೆ ಬಿಟ್ಟು ಇತರೆ ಕೆಲಸಗಳಿಗೆ ಕೈಹಾಕಿದರೆ ಮನೆಗೆ ಕಳುಹಿಸುವುದಾಗಿ ಎಚ್ಚರಿಕೆ ಕೊಡಬೇಕು. ನಾಲ್ಕನೆಯದಾಗಿ ರಂಗಭೂಮಿಯಲ್ಲಿ ಪುಲ್‌ಟೈಮ್ ಆಗಿ ತೊಡಗಿಸಕೊಂಡು ರಂಗಬದ್ಧತೆ ಇದ್ದು ರಂಗಸಂಘಟನೆಯಲ್ಲಿ ಪಳಗಿದ ರಂಗಕರ್ಮಿಯನ್ನು ನಿರ್ದೇಶಕರಾಗಿ ನಿಯಮಿಸಬೇಕು. ಏನಾದರಾಗಲಿ ರಂಗಾಯಣ ಮುಚ್ಚುವ ಇಲ್ಲವೇ ಸ್ಥಳಾಂತರಿಸುವ ಯೋಚನೆ ಬಿಟ್ಟು, ವಿಳಂಬ ರಾಜಕೀಯವನ್ನು ಬದಿಗಿಟ್ಟು ಶೀಘ್ರದಲ್ಲಿ ಯಾವುದಾದರೊಂದು ನಿರ್ಣಯವನ್ನು ತೆಗೆದುಕೊಂಡು ಕಲಬುರಗಿ ರಂಗಾಯಣವನ್ನು ರಂಗಚಟುವಟಿಕೆಗಳ ಕೇಂದ್ರವಾಗಿ ಮಾಡುವತ್ತ ಇಲಾಖೆಯ ಅಧಿಕಾರಿಗಳು, ರಂಗಸಮಾಜದ ಸದಸ್ಯರುಗಳು, ಹಾಗೂ ಸರಕಾರಿ ಸಚಿವರುಗಳು ಕಾರ್ಯಪ್ರವೃತ್ತರಾಗಬೇಕಿದೆ. ಒಟ್ಟಾರೆಯಾಗಿ ಬಿ.ವಿ.ಕಾರಂತರ ಆಶಯದಂತೆ ರಂಗಾಯಣವು ವೃತ್ತಿಪರ ರೆಪರ್ಟರಿಯಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಬೇಕಿದೆ. ಕಾರಂತರು ಕಂಡ ಸದೃಡ, ಸಮೃದ್ದ ರಂಗಾಯಣದ ಕನಸು ನನಸಾಗಲೇಬೇಕಿದೆ.

                  -  ಶಶಿಕಾಂತ ಯಡಹಳ್ಳಿ


ರಂಗಭೂಮಿಯು ಜಾತಿ ಕೋಮುಗಳನ್ನು ಮೀರಿ ಬೆಳೆದಿದೆ. ಆದರೆ ಕಲಬುರಗಿ ರಂಗಾಯಣದಲ್ಲಿ ಈ ಜಾತಿಯತೆಯ ಸಮಸ್ಯೆ ಉಲ್ಬಣಗೊಂಡಿದ್ದು ತೀರಾ ನೋವು ತರುವಂತಹ ಸಂಗತಿಯಾಗಿದೆ. ನಮ್ಮ ಗುರುಗಳಾದ ಬಿ.ವಿ.ಕಾರಂತರ ಆಶಯಕ್ಕೆ ವಿರೋಧಿಯಾದ ಕೆಲಸಗಳನ್ನು ಎಲ್ಲರೂ ವಿರೋಧಿಸಲೇಬೇಕಿದೆ. ಹೀಗಾಗಿ ರಂಗಸಾಮಾಜದ ವರದಿಯನ್ನು ಸರಕಾರ ಜಾರಿಗೆ ತರಲು ಹಿಂಜರಿದಾಗ ರಂಗಸಮಾಜದ ನಾವೆಲ್ಲಾ ರಾಜೀನಾಮೆ ಕೊಡಬೇಕಾಗುತ್ತದೆಂದು ಹೇಳಬೇಕಾಯಿತು. ಒಟ್ಟಾರೆಯಾಗಿ ರಂಗಾಯಣವನ್ನು ಉಳಿಸಿ ಬೆಳೆಸುವ ಕೆಲಸ ಈಗ ಆಗಬೇಕಿದೆ.    
- ಮಂಡ್ಯ ರಮೇಶ್.   ರಂಗಸಮಾಜದ ಸದಸ್ಯರು



ಕಲಬುರ್ಗಿ ರಂಗಾಯಣದಲ್ಲಾದ ಪ್ರಸ್ತುತ ಅನಿರೀಕ್ಷಿತ ಘಟನೆಗಳು ತುಂಬಾ ಆತಂಕಕಾರಿಯಾಗಿವೆ. ವಿಷಯ ಗೊತ್ತದ ಕೂಡಲೇ ರಂಗಾಯಣಕ್ಕೆ ಹೋಗಿ ಪ್ರತಿಯೊಬ್ಬ ಕಲಾವಿದರನ್ನೂ ಬೇಟಿಯಾಗಿ ಸಾಂತ್ವನ ಹೇಳಿದ್ದೇನೆ. ಆದರೂ ಅದ್ಯಾಕೋ ನನ್ನನ್ನು ಕಲಾವಿದರ ವಿರೋಧಿ ಎನ್ನುವ ಹಾಗೆ ಕೆಲವರು ಪೋಕಸ್ ಮಾಡುತ್ತಿದ್ದಾರೆ. ಆದರೆ.. ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆಯೂ  ರಂಗಾಯಣವು ರಂಗಭೂಮಿಯ ಚಟುವಟಿಕೆಗಳ ಕೇಂದ್ರವಾಗಬೇಕು ಎನ್ನುವುದೇ ನಮ್ಮ ಆಶಯವಾಗಿದೆ. 
-ಸುಜಾತಾ ಜಂಗಮಶೆಟ್ಟಿ. ರಂಗಸಮಾಜದ ಸದಸ್ಯರು    

ಸ್ಥಳೀಯ ಕಲಾವಿದೆಯೊಬ್ಬಳು ತನ್ನ ಸಹಕಲಾವಿದರ ಮೇಲೆ ದೌರ್ಜನ್ಯ ಎಸಗಿದ್ದಾರೆ. ದಲಿತ ಕಲಾವಿದರಿಗೆ ಜಾತಿ ನಿಂದನೆ ಮಾಡಿ ನಿಮ್ಮೊಂದಿಗೆ ನಟಿಸುವುದಿಲ್ಲವೆಂದು ದಮಕಿ ಹಾಕಿದ್ದಾರೆ. ದೌರ್ಜನ್ಯ ನಡೆಸಿದ ಕಲಾವಿದೆ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬದಲಿಗೆ ಸ್ವತಃ ರಂಗಾಯಣದ ನಿರ್ದೇಶಕರೇ ಅವಳ ಪರವಾಗಿ ವಾದಿಸುತ್ತಿದ್ದಾರೆ. ಗೂಂಡಾಗಳನ್ನು ಕರೆಸಿ ಕಲಾವಿದರುಗಳ ಮೇಲೆ ಹಲ್ಲೆ ಮಾಡಿಸಿದ್ದಾರೆ. ನಿರ್ದೇಶಕರ ಜೊತೆಗೆ ಲಕ್ಷ್ಮೀ ಕರೋಜಿಯನ್ನೂ ರಂಗಾಯಣದಿಂದ ವಜಾ ಮಾಡಬೇಕು. ಕಲಾವಿದರಿಗೆ ಪೊಲೀಸ್ ರಕ್ಷಣೆ  ಕೊಡಬೇಕು.
-      - ಸುನೀಲ್ ಮಾನ್ಪಡೆ.  ಸಾಮಾಜಿಕ ಹೋರಾಟಗಾರ.

ರಂಗಭೂಮಿಗೆ ಸಂಬಂಧಿಸಿದಂತೆ ರಂಗಾಯಣದಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಹೊರಗಿನಿಂದ ತಂಡಗಳನ್ನು ಕರೆಸಿ ನಾಟಕಗಳನ್ನು ಆಯೋಜಿಸುವುದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಏನು ಮಾಡಬೇಕು ಎನ್ನುವ ಕನಿಷ್ಟ ಪರಿಜ್ಞಾನವೂ ರಂಗಾಯಣದ ನಿರ್ದೇಶಕರಿಗಿಲ್ಲ. ಅರೇಳು ತಿಂಗಳಾದರೂ ಕಲಾವಿದರುಗಳಿಗೆ ಯಾವುದೇ ತರಬೇತಿ ನೀಡಲಾಗಿಲ್ಲ. ಹುಡುಗಿಯವರು ತಮ್ಮ ಸ್ವಪ್ರತಿಷ್ಟೆಗೆ ರಂಗಾಯಣವನ್ನು ಬಲಿಕೊಡುತ್ತಿದ್ದಾರೆ.  
-       -ರವಿಕುಮಾರ  ಬಿಸರಳ್ಳಿ   ರಂಗಾಯಣದ  ಕಲಾವಿದ   
  
    ಕಲಬುರಗಿ ರಂಗಾಯಣದ ಬೆಳವಣಿಗೆಗಳ ಕುರಿತು ಈಗಾಗಲೇ ಸತ್ಯಶೋಧನಾ ಸಮಿತಿ ಸರಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಆ ವರದಿಯಲ್ಲಿ ಏನಿದೆ ಎಂಬುದನ್ನು ನೋಡಿ ಕ್ರಮ ಕೈಗೊಳ್ಳಬೇಕಾದ ಸರಕಾರ ಸುಮ್ಮನೆ ಕುಳಿತಿದೆ. ಒಬ್ಬ ವ್ಯಕ್ತಿ ಅರ್ಥವಾಗಬೇಕಾದರೆ ಆತನಿಗೆ ಹಣ ಮತ್ತು ಅಧಿಕಾರ ಕೊಟ್ಟು ನೋಡು ಎನ್ನುವ ಮಾತಿದೆ. ಕೇವಲ ಭಾಷಣ ಕೇಳುವುದರಿಂದ ಆ ವ್ಯಕ್ತಿಯನ್ನು ತೂಗಿ ನೋಡಲು ಸಾಧ್ಯವಿಲ್ಲ..
-      -ಡಿ.ಜಿ.ಸಾಗರ್   ಡಿಎಸ್‌ಎಸ್ ರಾಜ್ಯ ಸಂಚಾಲಕ

   ಕಲಬುರುಗಿ ರಂಗಾಯಣ ಕನ್ನಡ ರಂಗಭೂಮಿಗೆ ಒಂದು ಕಪ್ಪು ಚುಕ್ಕೆ ಇದ್ದಂತೆ. ವಿವಿಧ ಸಮಿತಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರಿಂದ ಶೀಘ್ರ ಕ್ರಮ ಕೈಗೊಳ್ಳಬೇಕು. ರಾಜಕೀಯ ಒತ್ತಡಕ್ಕೆ ಮಣಿದು ಕ್ರಮ ಕೈಗೊಳ್ಳಲು ಮೀನಮೇಷ ಎಣಿಸಿದರೆ ಅದರ ಪರಿಣಾಮ ಕಲಾವಿದರು ಹಾಗೂ ರಂಗಚಟುವಟಿಕೆಗಳ ಮೇಲೆ ಬೀರಲಿದೆ.
-      - ಡಾ.ಸ್ವಾಮಿರಾವ್ ಕುಲಕರ್ಣಿ  ಹಿರಿಯ ಸಾಹಿತಿಗಳು
    
     ರಂಗಾಯಣದ ಮೂಲಕ ಯಾವುದೇ ಸಾಂಸ್ಕೃತಿಕ ಚಟುವಟಿಕೆ ಬೇಡ ಎಂದು ಹಿರಿಯ ಅಧಿಕಾರಿಗಳು ಸೂಚಿಸಿದ್ದರಿಂದ ಈಗ ಯಾವುದೇ ಚಟುವಟಿಕೆ ಮಾಡುತ್ತಿಲ್ಲ. ಮಕ್ಕಳ ಬೇಸಿಗೆ ತರಬೇತಿ ಶಿಬಿರಕ್ಕಾಗಿ ಕ್ರಿಯಾಯೋಜನೆ ರೂಪಿಸಿ ಕಳುಹಿಸಲಾಗಿತ್ತು. ಮಾಡುವುದು ಬೇಡ ಎಂದು ಸೂಚನೆ ಬಂದಿದ್ದರಿಂದ ಕೈಬಿಡಲಾಗಿದೆ. ಹೀಗಾಗಿ ಕಲಾವಿದರು ಸುಮ್ಮನೆ ಸಹಿ ಹಾಕಿ ಕೂಡುತ್ತಿದ್ದಾರೆ. ಹಾಜರಾತಿ ಇದ್ದದವರಿಗೆ ಸಂಬಳ ಪಾವತಿಸಲಾಗುತ್ತಿದೆ. ಗೈರು ಹಾಜರಾದ ಕಲಾವಿದರ ಸಂಬಳ ತಡೆ ಹಿಡಿಯಲಾಗಿದೆ.
-     -ಜಗದೀಶ್ವರಿ ಶಿವಕೇರಿ   ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕಲಬುರಗಿ.

  ಕೆಲವು ಕುತ್ಸಿತಮತಿಗಳ ಕುಮ್ಮಕ್ಕಿನಿಂದ ಮತ್ತು ಕಲಾವಿದರ ತಪ್ಪು ಕಲ್ಪನೆಯಿಂದ ರಂಗಾಯಣದಲ್ಲಿ ಅಹಿತಕರ ಸಂಗತಿಗಲಾಗಿವೆ. ರಂಗಾಯಣದ ಕ್ರಿಯೆ ಮುಂದುವರೆಸಲು ಸರಕಾರ ಮಧ್ಯ ಪ್ರವೇಶಿಸಬೇಕು.
-   -ಪ್ರೊ. ಆರ್.ಕೆ.ಹುಡುಗಿ  ಕಲಬುರಗಿ ರಂಗಾಯಣದ ನಿರ್ದೇಶಕರು

   ಕಲಾವಿದರನ್ನು ಗೌರವಿಸಬೇಕು. ರಂಗಾಯಣದಲ್ಲಿ ರಂಗ ಚಟುವಟಿಕೆಗಳೇ ಇಲ್ಲ ಎಂದರೆ ಖೇದ ಉಂಟಾಗುತ್ತದೆ. ಜಾತಿ ನಿಂದನೆ ಮಾಡಿರುವ ಪ್ರೊ.ಹುಡುಗಿ ಅವರನ್ನು ನಿರ್ದೇಶಕರ ಸ್ಥಾನದಿಂದ ತೆಗೆಯುವವರೆಗೂ ಸತ್ಯಾಗ್ರಹ ಮಾಡಲಿದ್ದೇವೆ.
-   - ವಿಜಯಲಕ್ಷ್ಮೀ ಮತ್ತು ಲಕ್ಷ್ಮಣ್.. ರಂಗಾಯಣ ಕಲಾವಿದರು.

    ಕಲಬುರಗಿ ಹಿಂದುಳಿದಿದೆ ಎಂಬ ಮಾತಿಗೆ ರಂಗಾಯಣದ ಕಲಹಗಳು ಇಂಬು ನೀಡುತ್ತಿವೆ. ಬೇರೆ ಮೂರೂ ರಂಗಾಯಣಗಳಲ್ಲಿ ಬೇಸಿಗೆ ಶಿಬಿರ, ನಾಟಕಗಳನ್ನು ಮಾಡಿಸುತ್ತಿದ್ದಾರೆ. ಆದರೆ ಕಲಬುರುಗಿ ರಂಗಾಯಣದಲ್ಲಿ ಕಲಾವಿದರ ಶ್ರಮ, ಸಂಬಳ, ಆಡಳಿತಾತ್ಮಕ ಕೆಲಸಗಳೆಲ್ಲ ನಿಷ್ಕ್ರೀಯವಾಗಿವೆ. ಯಾರದೋ ತಪ್ಪಿನಿಂದ ರಂಗಾಯಣ ಹಾಳಾಗುತ್ತಿರುವುದು ಸರಿಯಲ್ಲ. ಸರಕಾರ ವಿಳಂಬ ಮಾಡದೇ ಇದಕ್ಕೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಬೇಕಿದೆ.
-    - ಶಂಕರಯ್ಯ ಘಂಟಿ  ರಂಗಕರ್ಮಿಗಳು.