ಶುಕ್ರವಾರ, ಮೇ 27, 2016

ಹೊತ್ತಿ ಉರಿಯುತ್ತಿರುವ ರಂಗಾಯಣ ಮನೆಯ ಗಳ ಹಿರಿಯುವವರು :


ಸರಕಾರಕ್ಕೆ ಚೆಲ್ಲಾಟ; ರಂಗಾಯಣಕ್ಕೆ ಪ್ರಾಣಸಂಕಟ : 



ಕಲಬುರ್ಗಿ ರಂಗಾಯಣಕ್ಕೆ ಸದ್ಯಕ್ಕಂತೂ ಶಾಪ ವಿಮೋಚನೆ ಆಗುವಂತೆ ಕಾಣುತ್ತಿಲ್ಲ. ರಂಗಾಯಣದ ಹಾಲಿ ನಿರ್ದೇಶಕರ ಬಂಡಾಟ, ಕಲಾವಿದರುಗಳು ಮೊಂಡಾಟ ಹಾಗೂ ಸರಕಾರದ ರಾಜಕೀಯದಾಟದ ನಡುವೆ ಇತ್ತಿಚೆಗೆ ತಾನೆ ಅಸ್ತಿತ್ವಕ್ಕೆ ಬಂದಿದ್ದ ರಂಗಾಯಣ ಮುಳುಗುತ್ತಿರುವ ಹಡುಗಾಗಿದೆ. ಹಾವೂ ಸಾಯುತ್ತಿಲ್ಲ, ಕೋಲೂ ಮುರಿಯುತ್ತಿಲ್ಲ. ನಾಟಕದವರ ಆಟ ದಿನಕ್ಕೊಂದು ತಿರುವು ಪಡೆಯುತ್ತಾ ಕಲಬುರ್ಗಿ ಜನರಲ್ಲಿ ರೇಜಿಗೆ ಹುಟ್ಟಿಸುತ್ತಿದೆ.

ಪ್ರಸ್ತುತ ರಂಗಾಯಣದ ನಿರ್ದೇಶಕರಾದ ಪ್ರೊ.ಆರ್.ಕೆ.ಹುಡುಗಿಯವರ ಮೇಲೆ ಜಾತಿನಿಂದನೆ ಹಾಗೂ ಲೈಂಗಿಕ ಕಿರುಕುಳ ಗಳಂತಹ ಗಂಭೀರ ಆರೋಪ ಮಾಡಿದ ರಂಗಾಯಣದ ಕಲಾವಿದರುಗಳು ಹುಡುಗಿ ಹಟಾವೋ ರಂಗಾಯಣ ಬಚಾವೋ ಪ್ರತಿಭಟನೆಯನ್ನು ವಿವಿಧ ರೀತಿಯಲ್ಲಿ ಕಳೆದ ಮೂರು ತಿಂಗಳಿಂದ ಮಾಡುತ್ತಲೇ ಬಂದಿದ್ದಾರೆ. ಪೋಲೀಸ್ ಕಂಪ್ಲೆಂಟ್ ಆಗಿದೆ. ಪೊಲೀಸ್ ಅಧಿಕಾರಿಗಳಿಂದ ತನಿಖೆಯಾಗಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ರಂಗಸಮಾಜದ ಕಮಿಟಿಯೂ ಸಹ ಹುಡುಗಿ ಮಾಸ್ತರರ ಹುಡುಗಾಟವನ್ನು ವಿವರವಾಗಿ ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಜೊತೆಗೆ ಸ್ವಯಂಪ್ರೇರಿತರಾಗಿ ಬಂದ ರಾಜ್ಯ ಮಹಿಳಾ ಆಯೋಗವೂ ಸಹ  ವಿಚಾರಣೆ ಮಾಡಿ ತನ್ನದೇ ಆದ ವರದಿಯನ್ನು ಸಲ್ಲಿಸಿದೆ. ಆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಇಲ್ಲಿವರೆಗೂ ಯಾವುದೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಆಗದೇ ವಿಳಂಬ ನೀತಿಯನ್ನು ಅನುಸರಿಸುತ್ತಿದೆ.

ಇದರ ನಡುವೆ ಉರಿಯುತ್ತಿರುವ ಕಲಬುರ್ಗಿ ರಂಗಾಯಣದ ಮನೆಯ ಗಳಗಳನ್ನು ಹಿರಿಯುವ ಕೆಲಸವನ್ನು ಕೆಲವರು ನಿಷ್ಟೆಯಿಂದ ಮಾಡುತ್ತಲೇ ಬಂದಿದ್ದಾರೆ. ಸಮಸ್ಯೆಯನ್ನು ಶಮನ ಮಾಡುವ ಬದಲು ಇನ್ನಷ್ಟು ಉಲ್ಬಣಗೊಳಿಸುವ ಕೈಂಕರ್ಯಕ್ಕೆ ಕಟಿಬದ್ದರಾಗಿದ್ದಾರೆ. ಇದರಲ್ಲಿ ಹುಡುಗಿ ಮಾಸ್ತರರ ವಿರೋಧಿಗಳು, ಕೆಲವು ಪೀತ ಪತ್ರಕರ್ತರು ಹಾಗೂ ರಂಗಕರ್ಮಿಗಳೂ ಶಾಮೀಲಾಗಿದ್ದಾರೆ.  ಇಂತವರಿಗೆ ರಂಗಾಯಣದ ಉಳಿವುಗಿಂತಲೂ ತಮ್ಮ ಸಾಂಸ್ಕೃತಿಕ ರಾಜಕಾರಣವೇ ಬಹುಮುಖ್ಯವಾಗಿದ್ದೊಂದು ವಿಪರ್ಯಾಸ. ಕಲಬುರ್ಗಿಯ ವಿಜಯವಾಣಿ ಹಾಗೂ ವಿಶ್ವವಾಣಿ ಈ ಎರಡೂ ಪುರೋಹಿತಶಾಹಿ ಮನಸ್ಥಿತಿಯ ಪತ್ರಿಕೆಗಳು ರಂಗಾಯಣದ ಕುರಿತು ಆಗಾಗ ವಿಕ್ಷಿಪ್ತ ವರದಿಗಳನ್ನು ಹಾಗೂ ಊಹಾಪೋಹಗಳನ್ನು ಹರಿಬಿಟ್ಟು ಸಮಸ್ಯೆಯನ್ನು ಜೀವಂತವಾಗಿಟ್ಟು ಆಟವಾಡತೊಡಗಿವೆ. ಇದಕ್ಕೆ ಉದಾಹರಣೆ ಎಂದರೆ ಕಲಬುರ್ಗಿ ರಂಗಾಯಣ ವನ್ನು ಸರಕಾರ ರಾಯಚೂರಿಗೆ ವರ್ಗಾಯಿಸುತ್ತದೆ ಎಂದು ವಿಶ್ವವಾಣಿಯಲ್ಲಿ ಗಾಸಿಪ್ ವರದಿ ಪ್ರಕಟಿಸಲಾಯಿತು. ಇದನ್ನು ನಿಜವೆಂದು ನಂಬಿದ ಶಂಕರಯ್ಯ ಗಂಟಿ ಹಾಗೂ ಕೆಲವು ಸ್ನೇಹಿತರು ಪ್ರತಿಭಟನೆ ಹಮ್ಮಿಕೊಳ್ಳಲು ಸಿದ್ದತೆ ನಡೆಸಿದರು. ಕೊನೆಗೆ ಮನವಿ ಪತ್ರವೊಂದನ್ನು ತಯಾರಿಸಿ ಮೂವತ್ತಕ್ಕೂ ಹೆಚ್ಚು ಜನರ ಸಹಿ ಹಾಕಿಸಿ ಸಂಬಂಧಿಸಿದ ಸರಕಾರಿ ಸಂಸ್ಥೆಗಳಿಗೆ ರವಾನಿಸಿದರು. ಅಲ್ಲಿಗೆ ಈ ವಿಷಯ ತಣ್ಣಗಾಯಿತು. ವಿಜಯವಾಣಿಯ ಬ್ಯೂರೋ ಮುಖ್ಯಸ್ತ ಮಹಿಪಾಲರೆಡ್ಡಿ ಮುನ್ನೂರು ಸಹ ಹುಡುಗಿಯವರ ವಿರುದ್ಧ ಪತ್ರಿಕಾ ಸಮರ ಸಾರಿದರು.


ಈ ಪತ್ರಿಕೆಗಳಿಗೇನಾಯಿತು? ರಂಗಾಯಣದ ಸಮಸ್ಯೆ ಬಗೆಹರಿಸುವ ಬದಲು ಯಾಕೆ ಉಲ್ಪಣಗೊಳಿಸುತ್ತಿದ್ದಾರೆ?. ಯಾಕೆಂದರೆ ಮೊದಲಿನಿಂದಲೂ ಒಬ್ಬ ಎಡಪಂಥೀಯ ಹಾಗೂ ಅಬ್ರಾಹ್ಮಣ ರಂಗಾಯಣಕ್ಕೆ ನಿರ್ದೇಶಕರಾಗಿದ್ದು ಈ ಬಲಪಂಥೀಯ ಮನಸುಗಳಿಗೆ ಒಪ್ಪಿಗೆಯಾಗಿರಲಿಲ್ಲ. ಹೇಗಾದರೂ ಮಾಡಿ ಹುಡುಗಿಯವರನ್ನು ತೆಗೆದು ಹಾಕಬೇಕು ಹಾಗೂ ಅಲ್ಲಿ ತಮ್ಮ ಮನಸ್ಥಿತಿಗೆ ಒಗ್ಗುವಂತಹ ವ್ಯಕ್ತಿಯನ್ನು ಪ್ರತಿಷ್ಟಾಪಿಸಬೇಕು ಎನ್ನುವುದು ಹುಡುಗಿ ವಿರೋಧಿ ಬಣದ ಹಿಡನ್ ಅಜೆಂಡಾ ಆಗಿತ್ತು. ಇದಕ್ಕೊಂದು ಲೇಟೆಸ್ಟ್ ಉದಾಹರಣೆ ಹೀಗಿದೆ. ಕೇರಳದಲ್ಲಿ ಎಡಪಂಥೀಯ ಪಕ್ಷ ಅಧಿಕಾರಕ್ಕೆ ಬಂದ ಸಂಭ್ರಮವನ್ನು ಆಚರಿಸಲು ಕಲಬುರ್ಗಿಯಲ್ಲಿ ಸಿಪಿಎಂ ಪಕ್ಷ ವಿಜಯೋತ್ಸವವನ್ನು ಮೇ 19 ರಂದು ಆಯೋಜಿಸಿತ್ತು. ಸಿಪಿಎಂ ಪಕ್ಷದ ಸದಸ್ಯರಾಗಿರುವ ಆರ್.ಕೆ.ಹುಡುಗಿಯವರು ಸಹಜವಾಗಿ ಇದರಲ್ಲಿ ಭಾಗವಹಿಸಿದರು. ಇದನ್ನೇ ಬಹುದೊಡ್ಡ ಅಪರಾಧವೆನ್ನುವಂತೆ ವಿಶ್ವವಾಣಿ ಪತ್ರಿಕೆಯಲ್ಲಿ ಬರೆಯಲಾಯಿತು. ಬಚ್ಚಿಟ್ಟುಕೊಂಡ ಹುಡುಗಿ ಎಂದು ಕುಹಕವಾಡಿದರು. ಕಾಂಗ್ರೆಸ್ ಸರಕಾರ ಹುಡುಗಿಯವರನ್ನು ರಂಗಾಯಣಕ್ಕೆ ನಿಯಮಿಸಿದ್ದರಿಂದ ಎಡಪಂಥೀಯ ಪಕ್ಷದ ಕಾರ್ಯಕ್ರಮಕ್ಕೆ ಅವರು ಹೋಗಿದ್ದು ಮಹಾಪರಾಧ ಎನ್ನುವಂತೆ ವರದಿ ಮುದ್ರಿಸಿಕೊಂಡರು. ಇಬ್ಬರು ನಾಮಧಾರಿಗಳ ಬೈಟ್ ತೆಗೆದುಕೊಂಡು ಬರೆದ ಈ ವರದಿ ಹುಡುಗಿಯವರನ್ನು ಟಾರ್ಗೆಟ್ ಮಾಡಿ ಬರೆದಿದ್ದಕ್ಕೆ ಸಾಕ್ಷಿಯಾಗಿದೆ. ಒಂದು ಸರಕಾರದ ಅವಧಿಯಲ್ಲಿ ಅಧಿಕಾರ ಸಿಕ್ಕರೆ ಆ ಪಕ್ಷಕ್ಕೆ ನಿಷ್ಟರಾಗಿರಬೇಕು ಎನ್ನುವ ಅತಾರ್ಕಿಕ ವಾದವನ್ನು ಈ ಪತ್ರಕರ್ತರು ಪ್ರತಿಪಾದಿಸಿದ್ದಾರೆ.

ಈ ಪೀತಪೀಡಿತ ಪತ್ರಕರ್ತರಿಗೆ ಇಂಬು ಕೊಡುವಂತೆಯೇ ಹುಡುಗಿ ಮಾಸ್ತರರು ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು ಅವರ ವಿರೋಧಿ ಗುಂಪುಗಳಿಗೆ ಎಲೆಯಡಿಕೆ ಹಾಕಿಕೊಟ್ಟಂತಾಗಿದೆ. ಆರ್.ಕೆ.ಹುಡುಗಿಯವರು ಸ್ಥಳೀಯ ಕಲಾವಿದರನ್ನು ಹಾಗೂ ರಂಗಕರ್ಮಿಗಳನ್ನು ನಿರ್ಲಕ್ಷಿಸಿದ್ದು, ರಂಗಾಯಣದ ಕಲಾವಿದರನ್ನು ಉಡಾಫೆಯಿಂದ ನೋಡಿ ಜಾತಿನಿಂದನೆ ಮಾಡಿದ್ದು, ಕಲಾವಿದೆಯರೊಂದಿಗೆ ಅತೀ ಸಲುಗೆಯಿಂದ ವರ್ತಿಸಿದ್ದು, ರಂಗಾಯಣದೊಳಗೆ ಗುಂಪುಗಾರಿಕೆಯನ್ನು ಹುಟ್ಟುಹಾಕಿದ್ದು ಹಾಗೂ ಆಂತರಿಕ ಸಮಸ್ಯೆಯನ್ನು ಶಮನ ಮಾಡದೇ ನಿರ್ಲಕ್ಷವಹಿಸಿದ್ದು... ಮತ್ತು ಸರ್ವಾಧಿಕಾರಿ ಮನೋಭಾವನೆ ತೋರಿದ್ದು... ಅವರ ವಿರೋಧಿಗಳಿಗೆ ಅಸ್ತ್ರವನ್ನೊದಗಿಸಿದಂತಾಯಿತು. ಸ್ವಲ್ಪ ಮುತುವರ್ಜಿ ವಹಿಸಿದ್ದರೆ ತಣ್ಣಗಾಗಬಹುದಾದ ರಂಗಾಯಣದೊಳಗಿನ ಕಿಡಿಗೆ ಗಾಳಿ ಹಾಕಿ ಬೆಂಕಿಯನ್ನಾಗಿ ಉರಿಸುವಲ್ಲಿ ಹುಡುಗಿ ವಿರೋಧಿ ಪಡೆ ಯಶಸ್ವಿಯಾಯಿತು.

ರಂಗಾಯಣದ ಪ್ರಸ್ತುತ ಸಮಸ್ಯೆಗೆ ಹುಡುಗಿ ಮಾಸ್ತರರಷ್ಟೇ ಅಲ್ಲಿಯ ಕಲಾವಿದರುಗಳ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ. ನಿರ್ದೇಶಕರುಗಳಿಗೆ ಹಾಗೂ ಕಲಾವಿದರುಗಳಿಗೆ ರಂಗಾಯಣದ ಗೌರವವನ್ನು ಉಳಿಸಬೇಕೆಂಬ ಆಶಯವಿದ್ದಿದ್ದರೆ ಈ ದುಸ್ತಿತಿ ಇವರಿಗೆಲ್ಲಾ ಬರುತ್ತಿರಲಿಲ್ಲ. ಪ್ರತಿಷ್ಠೆ ಎನ್ನುವುದು ಇಲ್ಲಿ ಬಹುದೊಡ್ಡ ಅವಿವೇಕದ ಕೆಲಸ ಮಾಡಿತು. ಹುಡುಗಿ ಮಾಸ್ತರರಿಗೆ ಕಲಾವಿದರುಗಳು ತಾವು ಹೇಳಿದ್ದನ್ನು ಕೇಳಬೇಕು ಎನ್ನುವ ಹಠ. ಕೇಳುವುದನ್ನು ಕೇಳುತ್ತೇವೆ ಆದರೆ ಈ ಒಡೆದಾಳುವ ನೀತಿಯನ್ನು ಧಿಕ್ಕರಿಸುತ್ತೇವೆ, ನಮಗೆ ಹೇಳಲು ಇವರ‍್ಯಾರು, ಇವರಿಗೆ ರಂಗಭೂಮಿಯ ಅನುಭವ ಏನಿದೆ' ಎನ್ನುವುದು ಕಲಾವಿದರುಗಳ ಮನೋಭಾವ. ಈಗ ಮಕ್ಕಳೇ ಹೆತ್ತವರ ಮಾತನ್ನು ಕೇಳುವುದಿಲ್ಲ.. ಅಂತಹುದರಲ್ಲಿ ಬೇರೆಯವರ ಮಕ್ಕಳನ್ನು ಅವಮಾನಕಾರಿಯಾಗಿ ನೋಡಿಕೊಂಡರೆ ಯಾರು ಸಹಿಸುತ್ತಾರೆ?. ಹೀಗೆ ರಂಗಾಯಣವೆನ್ನುವ ಕುಟುಂಬದಲ್ಲಿ ಗುಂಪುಗಾರಿಕೆ ಹೆಚ್ಚಾಗಿ, ಹೊಂದಾಣಿಕೆ ಎನ್ನುವುದು ಸರ್ವನಾಶವಾಗಿ, ಅಹಮಿಕೆ ವಿಜ್ರಂಭಿಸಿದ್ದರಿಂದಾಗಿ ರಂಗಾಯಣದ ಮಾನ ಮರ್ಯಾದೆ ಹಾದಿ ಬೀದಿಯ ಮಾತಾಯಿತು. ಇವರೆಲ್ಲರಿಗೂ ರಂಗಾಯಣದ ಗೌರವಕ್ಕಿಂತ ತಮ್ಮ ವ್ಯಯಕ್ತಿಕ ಅಹಮಿಕೆಯೇ ಹೆಚ್ಚಾಗಿದ್ದೊಂದು ದುರಂತ. ಯಾವಾಗ ರಂಗಾಯಣದೊಳಗೆ ಒಡಕು ಮೂಡಿತೋ ಆಗ ಹೊರಗಿನ ಶಕ್ತಿಗಳು ಕ್ರಿಯಾಶೀಲಗೊಂಡವು. ಕೆಲವು ಸಂಘಟನೆಗಳು ಹಾಗೂ ರಾಜಕಾರಣಿಗಳು ಹುಡುಗಿ ಮಾಸ್ತರರ ಪರವಾಗಿ ನಿಂತು ಅವರನ್ನು ಜೈಲು ಪಾಲಾಗುವುದನ್ನು ತಡೆದರೆ, ಇನ್ನು ಕೆಲವು ಶಕ್ತಿಗಳು ಕಲಾವಿದರ ಪರವಾಗಿ ನಿಂತು ಪ್ರತಿಭಟನೆಗೆ ಪ್ರಚೋದನೆಯನ್ನು ಕೊಟ್ಟವು. ಹೀಗಾಗಿ ಇಡೀ ರಂಗಾಯಣದಲ್ಲಿ ಅರಾಜಕತೆ ಮೇರೆ ಮೀರಿ ನಾಟಕದ ಕೆಲಸಗಳು ನೇಪತ್ಯ ಸೇರಿದವು. 


ರಂಗಾಯಣದಲ್ಲಾದ ಅಹಮಿಕೆ ರೋಗಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚಿಕಿತ್ಸೆ ಕೊಡುವುದನ್ನು ಬಿಟ್ಟು ನಿರ್ಲಕ್ಷಿಸಲಾಯಿತು. ಕಲಾವಿದರೆಲ್ಲಾ ಡಿಸಿ ಕಛೇರಿಯ ಮುಂದೆ ಮಾರ್ಚ 11 ರಿಂದ ಅನಿರ್ಧಿಷ್ಟ ಕಾಲ ಸತ್ಯಾಗ್ರಹ ಕೂತು 14 ದಿನಗಳಾಗಿದ್ದಾಗ ರೋಗ ಶಮನಕ್ಕೆ ಸಚಿವೆ ಉಮಾಶ್ರೀವರೇ ಖುದ್ದಾಗಿ ಬಂದು ಒಂದು ವಾರದೊಳಗೆ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದೆಂದು ಭರವಸೆ ಕೊಟ್ಟು ಧರಣಿಗೆ ಅಂತ್ಯ ಹಾಡಿದರು. ಮಾರ್ಚ 25 ರಂದು ಬೆಂಗಳೂರಿನ ಕನ್ನಡ ಭವನದಲ್ಲಿ ರಂಗಸಮಾಜ ಹಾಗೂ ಅಧಿಕಾರಿಗಳ ಸಭೆ ಕರೆದರಾದರೂ ಬರೀ ಚರ್ಚೆಗಳಾದವೇ ಹೊರತು ವ್ಯಾಧಿಗೆ ಮದ್ದರೆಯಲಿಲ್ಲ. ಇನ್ನೊಂದು ವಾರದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವ ಭರವಸೆ ಹೊರಬಿತ್ತು. ಆದರೆ ಆ ಒಂದು ವಾರ ಹೋಗಿ ಎಂಟು ವಾರಗಳಾದರೂ ಸರಕಾರದ ನಿರ್ಣಯ ಹೊರಗೆ ಬರಲೇ ಇಲ್ಲ.

ಇದರ ಮಧ್ಯೆ ಇನ್ನೊಂದು ಹೈ ಡ್ರಾಮಾ ನಡೆದುಹೋಯಿತು. ಅದು ತುಳಜಾರಾಂ ಠಾಕೂರನ ಆತ್ಮಹತ್ಯೆ ಪ್ರಹಸನ. ಈ ಠಾಕೂರ್ ಬಗ್ಗೆ ಒಂದಿಷ್ಟು ಹೇಳಲೇಬೇಕಿದೆ. ಯಾಕೆಂದರೆ ಇಡೀ ರಂಗಾಯಣದ ಪ್ರಹಸನದ ಖಳನಾಯಕ ಪಾತ್ರಧಾರಿ ಈತ. ಕಲಾವಿದರ ಆಯ್ಕೆ ಸಂದರ್ಭದಲ್ಲಿ ಕಲಬುರ್ಗಿಯ ತುಳಜಾರಾಂನನ್ನು ಆಯ್ಕೆ ಮಾಡಿಕೊಳ್ಳಲೇಬೇಕೆಂದು ಹುಡುಗಿ ಮಾಸ್ತರರು ರಂಗಸಮಾಜದ ಸದಸ್ಯರುಗಳ ಮೇಲೆ ಒತ್ತಡ ತಂದಿದ್ದರು. ಇನ್ನೂ ಕೆಲವು ಪ್ರತಿಭಾವಂತ ಯುವಕರು ಸಂದರ್ಶನಕ್ಕೆ ಬಂದಿದ್ದರಾದರೂ ಹುಡುಗಿಯವರ ಒತ್ತಾಯದ ಮೇರೆಗೆ ತುಳಾಜಾರಾಂನನ್ನು ಲೈಟಿಂಗ್ ತಂತ್ರಜ್ಞ ಎಂದು ಆಯ್ಕೆ ಮಾಡಿಕೊಳ್ಳಲಾಯಿತು. ತನ್ನನ್ನು ಆಯ್ಕೆ ಮಾಡಿಸಿದ ಹುಡುಗಿಯವರ ಮೇಲೆ ಈ  ತುಳಜಾರಾಂ ಅಪಾರ ನಿಷ್ಟೆಯನ್ನು ಇಟ್ಟುಕೊಂಡಿದ್ದಂತೂ ಸತ್ಯ.  ಆತ ಇತರೇ ಕಲಾವಿದರುಗಳ ಖಾಸಗಿ ಮಾತು ಕತೆಗಳಿಗೆ ಒಗ್ಗರಣೆ ಹಾಕಿ  ಹುಡುಗಿ ಮಾಸ್ತರರ ಕಂಚಿನ ಕಿವಿ ತುಂಬತೊಡಗಿದ್ದ. ಹುಡುಗಿಯವರ ಎಡಗೈ ಹಾಗೂ ಬಲಗೈಯಾಗಿ ಲಕ್ಷ್ಮೀ ಕರೋಜಿ ಹಾಗೂ ತುಳಜಾರಾಂ ಠಾಕೂರರು ಮೆರೆದಾಡತೊಡಗಿದರು. ಇದು ಬೇರೆ ಕಲಾವಿದರಿಗೆ ಸಹಿಸಲಸಾಧ್ಯವಾಯಿತು. ಗುಂಪುಗಾರಿಕೆ ಶುರುವಾಯಿತು. ಆ ಮೂರು ಜನರದ್ದೊಂದು ಆಳುವ ಗುಂಪಾದರೆ ಉಳಿದವರದಿನ್ನೊಂದು ವಿರೋಧಿ ಗುಂಪಾಯಿತು. ಈ ಎರಡೂ ಗುಂಪಿನ ನಡುವೆ ಠಾಕೂರನ ಕೊಂಡಿಮಂಚಣ್ಣ ಕೆಲಸ ನಿರಾತಂಕವಾಯಿತು.

ಒಂದೆರಡು ಸಿನೆಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿದ ಠಾಕೂರ್ ತಾನೊಬ್ಬ ಸಿನೆಮಾ ನಟ ಎನ್ನುವ ಭ್ರಮೆಯಲ್ಲೇ ಬೀಗತೊಡಗಿದ. ರಂಗಾಯಣದ ಕಲಾವಿದೆ ಮೀನಾಕ್ಷಿ ಜೊತೆಗೆ ಸಲುಗೆ ಬೆಳೆಸಿದ. ಸ್ನೇಹ ಪ್ರೀತಿಗೆ ತಿರುಗಿತು. ಹುಡುಗಿ ಮಾಸ್ತರರ ಮೇಲೆ ಕಲಾವಿದರೆಲ್ಲಾ ಸೇರಿ ಅಟ್ರಾಸಿಟಿ ಕೇಸ್ ಹಾಕಿ ಹೈರಾಣು ಮಾಡಿದಾಗಲೂ ಸಹ ಠಾಕೂರ್ ನಿರ್ಲಿಪ್ತವಾಗಿಯೇ ಉಳಿದ. ಕಲಾವಿದೆಯರಿಗೆ ಹುಡುಗಿಯವರು ಲೈಂಗಿಕ ಕಿರುಕುಳ ಕೊಟ್ಟರೆಂದು ಆರೋಪ ಕೇಳಿಬಂದಾಗಲೂ ಮೌನವಾಗಿದ್ದ. ಆದರೆ... ಯಾವಾಗ ತನಗೂ ಹುಡುಗಿ ಮಾಸ್ತರರು ಲೈಂಗಿಕ ಕಿರುಕುಳ ಕೊಟ್ಟರು ಎಂದು ಗೆಳತಿ ಮೀನಾಕ್ಷಿ ಬಾಯಿಬಿಟ್ಟಳೋ ಆಗ ಠಾಕೂರ್ ಕೆಂಡಾಮಂಡಲವಾಗಿ ಆಕೆಯ ಕೆನ್ನೆಗೆ ಬಾರಿಸಿ ಹುಡುಗಿ  ಮಾಸ್ತರನ ಮೇಲೆ ತಿರುಗಿಬಿದ್ದನೆಂದು ರಂಗಾಯಣದ ಮೂಲಗಳು ಹೇಳುತ್ತಿವೆ. ತಾನೇ ಬೆಳೆಸಿದ ಬೆಕ್ಕು ತನಗೇ ಮೀಯಾಂ ಎನ್ನುವುದರ ಸುಳಿವು ಗೊತ್ತಾದ ಹುಡುಗಿ ಮಾಸ್ತರರು ಹುಷಾರಾದರು. ಮೀನಾಕ್ಷಿಯನ್ನು ಬೆಂಗಳೂರಿನ ಸಂಬಂಧಿಕರ ಮನೆಗೆ ತೆರಳುವಂತೆ ಒತ್ತಾಯಿಸಿ ಕಳುಹಿಸಿದರಂತೆ. ಆಕೆ ಠಾಕೂರನ ಜೊತೆಗೆ ಮುನಿಸಿಕೊಂಡು ಎಲ್ಲಾ ಸಂಪರ್ಕವನ್ನು ಕಡೆದುಕೊಂಡಳು. ಇದರಿಂದ ತೀವ್ರವಾಗಿ ಮನನೊಂದ ತುಳಜಾರಾಂ ಅದೊಂದು ದಿನ ವಿಷ ಕುಡಿಸು ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ದಾಖಲಾದ. ಸಾಯುತ್ತಿದ್ದರೂ ತನ್ನನ್ನು ವಿಚಾರಿಸಿಕೊಳ್ಳಲು ಬರದ ಹುಡುಗಿ ಮಾಸ್ತರರ ಮೇಲೆ ಕೆಂಡಕಾರತೊಡಗಿದ.

ಇಷ್ಟರಲ್ಲಾಗಲೇ ಧರಣಿ ಸತ್ಯಾಗ್ರಹ ಮಾಡಿ ತಣ್ಣಗಾದ ಬೇರೆ ಕಲಾವಿದರನ್ನು ಸಂಪರ್ಕಿಸಿ ಹುಡುಗಿ ಮಾಸ್ತರರ ಮೇಲೆ ತನ್ನ ಅಸಹನೆ ತೋಡಿಕೊಂಡು ಕಲಾವಿದರ ಏಕತೆಗಾಗಿ ತಾನೂ ಹೋರಾಡಲು ಸಿದ್ದ ಎಂದು ಘೋಷಿಸಿದ ಠಾಕೂರ್ ಅಮರಣಾಂತ ಉಪವಾಸ ಕೂಡುವುದಾಗಿ ಹೇಳಿದ. ಹುಡುಗಿ ಮಾಸ್ತರರ ಎಜೆಂಟ್ ಎಂಬ ಆಪಾದನೆಯಿಂದ ಮೂಲೆಗುಂಪಾಗಿದ್ದ ಠಾಕೂರ್ ಹೊಸ ಗೆಟಪ್‌ನಲ್ಲಿ ಹುಡುಗಿಯವರ ಆಜನ್ಮ ವಿರೋಧಿಯಾಗಿ ಬದಲಾಗಿ ಹೋರಾಟದ ನಾಯಕತ್ವ ವಹಿಸಿಕೊಳ್ಳಲು ಮುಂದಾದ. ಹುಡುಗಿ ಮಾಸ್ತರರನ್ನು ಶತಾಯ ಗತಾಯ ರಂಗಾಯಣದಿಂದ ತೆಗೆದು ಹಾಕುವ ಏಕೈಕ ಉದ್ದೇಶ ಹೊಂದಿರುವ ರಂಗಾಯಣದ ಕಲಾವಿದರುಗಳು ಈ ಹಿಂದೆ ಠಾಕೂರ ಮಾಡಿದ ಡಬಲ್‌ಗೇಮ್‌ಗಳನ್ನೆಲ್ಲಾ ಬದಿಗಿರಿಸಿ ಆತನ ನಾಯಕತ್ವವನ್ನು ಒಪ್ಪಿಕೊಂಡರು. ಶತ್ರುವಿನ ಶತ್ರು ಮಿತ್ರ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಯಿತು. ರಂಗಾಯಣದ ಕಲಾವಿದರುಗಳಲ್ಲಿ ತುಳಜಾರಾಂ ಠಾಕೂರ್, ಲಕ್ಷ್ಮಣ್, ವಿಜಯಲಕ್ಷ್ಮೀ ಹಾಗೂ ಮಹೇಶ್ ಭರಮರೆಡ್ಡಿ ಈ ನಾಲ್ವರು ಹುಡುಗಿ ಹಠಾವೋ ಎನ್ನುತ್ತಾ ಮೇ 24ರಿಂದ ರಂಗಾಯಣದ ಆವರಣದಲ್ಲಿ ಅಮರಣಾಂತ ಉಪವಾಸಕ್ಕೆ ಕುಳಿತುಕೊಂಡರು. ಉಳಿದ ಕಲಾವಿದರು ಅವರ ಬೆಂಬಲಕ್ಕೆ ನಿಂತರು.

ರಂಗಸಮಾಜದ ಸದಸ್ಯ ಡಾ.ಕೆ.ವೈ.ನಾರಾಯಣಸ್ವಾಮಿಯಾದಿಯಾಗಿ ಹಲವಾರು ಜನ ಮೇ 27ಕ್ಕೆ ಸಚಿವೆಯವರ ಅಧ್ಯಕ್ಷತೆಯಲ್ಲಿ ರಂಗಾಯಣದ ಕುರಿತು ಸಭೆ ಕರೆಯಲಾಗಿದೆ. ಅಲ್ಲಿವರೆಗಾದರೂ ಸುಮ್ಮನಿರಿ ಎಂದು ಕಲಾವಿದರುಗಳಿಗೆ ಕೇಳಿಕೊಂಡರು. ಆದರೆ.. ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಕಲಾವಿದರಿರಲಿಲ್ಲ. ತಮ್ಮ ಕೊರಳಿಗೆ ತಾವೇ ಬಲಿಪಶುವಿನಂತೆ ಹಾರ ಹಾಕಿಕೊಂಡು, ತಲೆಗೆ ಕಪ್ಪುಬಟ್ಟೆ ಸುತ್ತಿಕೊಂಡು ಅಮರಣಾಂತ ಉಪವಾಸವೆಂಬ ಪ್ರಹಸನ ಶುರುಮಾಡಿದರು. ಮೂರು ದಿನದೊಳಗಾಗಿ ನಿತ್ರಾಣಗೊಂಡು ಒಬ್ಬೊಬ್ಬರೇ ಆಸ್ಪತ್ರೆಯಲ್ಲಿ ದಾಖಲಾಗತೊಡಗಿದರು. ಕಲಾವಿದರಿಗೆ ಅನ್ಯಾಯವಾಗಿದ್ದರೆ ಉಪವಾಸ ಸತ್ಯಾಗ್ರಹ ಕುಳಿತುಕೊಂಡು ದಪ್ಪ ಚರ್ಮದ ಸರಕಾರಕ್ಕೆ ಸಮಸ್ಯೆಯ ಅರಿವು ಮಾಡಿಕೊಡುವುದರಲ್ಲಿ ತಪ್ಪೇನಿಲ್ಲ. ಆದರೆ ಇನ್ನು ಮೂರೇ ದಿನದ ನಂತರದಲ್ಲಿ ನಡೆಯುತ್ತಿರುವ ಸಭೆಯ ನಿರ್ಧಾರವನ್ನು ತಿಳಿದುಕೊಂಡಾದರೂ ಈ ಅತಿರೇಕದ ತೀರ್ಮಾಣ ತೆಗೆದುಕೊಳ್ಳಬೇಕಾಗಿತ್ತು. ಇಲ್ಲಿವರೆಗೂ ರಂಗಾಯಣದ ಕಲಾವಿದರುಗಳ ಮೇಲೆ ಕಲಬುರ್ಗಿಯ ರಂಗಕರ್ಮಿಗಳಲ್ಲಿ ಹಾಗೂ ರಂಗಸಮಾಜದ ಸದಸ್ಯರುಗಳಲ್ಲಿ ಒಂದು ರೀತಿಯ ಸಹಾನುಭೂತಿ ಇತ್ತು. ಆದರೆ.. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಎಲ್ಲರ ವಿರೋಧ ಕಟ್ಟಿಕೊಂಡ ಕಲಾವಿದರುಗಳು ಇದ್ದಕ್ಕಿದ್ದಂತೆ ಅಮರಣಾಂತ ಉಪವಾಸ ಕುಳಿತುಕೊಂಡಿದ್ದು ಎಲ್ಲರ ವಿರೋಧಕ್ಕೂ ಕಾರಣವಾಗತೊಡಗಿತು. ಸಹಾನುಭೂತಿ ಅಸಹನೆಯಾಗಿ ಪರಿವರ್ತನೆಯಾಯಿತು. ಇದರ ಪ್ರತಿದ್ವನಿ ಮೇ 27 ರ ಸಭೆಯಲ್ಲಾಯಿತು.


ಮೊದಲು ಹುಡುಗಿಯವರನ್ನು ಮಾತ್ರ ಬದಲಾಯಿಸಬೇಕೆಂಬ ಆಶಯ ರಂಗಸಮಾಜದ ಬಹುತೇಕ ಸದಸ್ಯರದ್ದಾಗಿತ್ತು. ಆದರೆ... ಈ ಕಲಾವಿದರುಗಳ ಅತಿರೇಕದ ಸತ್ಯಾಗ್ರಹದಿಂದಾಗಿ ಬಹುತೇಕ ರಂಗಸಮಾಜದ ಸದಸ್ಯರುಗಳು ಕಲಾವಿದರನ್ನೂ ಸಹ ತೆಗೆದು ಹಾಕುವುದು ಸೂಕ್ತವೆನ್ನುವ ನಿರ್ಧಾರಕ್ಕೆಕ್ಕೆ ಬಂದಿದ್ದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಸಚಿವೆ ಉಮಾಶ್ರೀಯವರವರೆಗೆ ಎಲ್ಲರೂ ಕಲಾವಿದರ ನಿರ್ಧಾರದಿಂದ ಬೇಸರಗೊಂಡಿದ್ದಂತೂ ಸತ್ಯ. ನಿರ್ದೇಶಕರ ಜೊತೆಗೆ ಕಲಾವಿದರನ್ನೂ ಸಹ ಮನೆಗೆ ಕಳುಹಿಸಿ ಕಲಬುರ್ಗಿ ರಂಗಾಯಣವನ್ನು ಹೊಸದಾಗಿ ಕಟ್ಟುವತ್ತ ಎಲ್ಲರ ಚಿತ್ತ ಕೆಲಸಮಾಡತೊಡಗಿದ್ದರೆ ಅದಕ್ಕೆ ಕಲಾವಿದರ ಆವೇಶದ ತೀರ್ಮಾನವೇ ಕಾರಣ.  ರಂಗಸಮಾಜದವರ ಮಾತನ್ನೂ ಮೀರಿ ಕಲಾವಿದರುಗಳು ಹೀಗೆಲ್ಲಾ ವರ್ತಿಸಿ ರಂಗಾಯಣಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ಮುಂದೆ ಬೇರೆ ನಿರ್ದೇಶಕರನ್ನು ಕಳುಹಿಸಿದರೂ ಈ ಕಲಾವಿದರುಗಳು ಹೀಗೆ ದುಂಡಾವರ್ತಿ ತೋರಿ ರಂಗಾಯಣದ ಕಾರ್ಯಕಲಾಪಗಳಾಗದಂತೆ ಮಾಡಿದರೆ ಹೇಗೆ?’’ ಎಂಬುದು ರಂಗಸಮಾಜದವರ ಹಾಗೂ ಇಲಾಖೆಯವರ ಆತಂಕವಾಗಿದೆ. ಯಾರಿಗೂ ಮತ್ತೆ ಮತ್ತೆ ರಂಗಾಯಣದಲ್ಲಿ ಈ ಅನಪೇಕ್ಷಿತ ಫಟನೆಗಳು ಮರುಕಳಿಸುವುದು ಬೇಕಾಗಿಲ್ಲ. ಹೀಗಾಗಿ ಕಲಾವಿದರು ಹಾಗೂ ನಿರ್ದೇಶಕರ ಹೋಲ್‌ಸೇಲ್ ಬದಲಾವಣೆ ಮಾಡುವತ್ತ ಸಭೆಯಲ್ಲಿ ಬಾಗಿಯಾದ ಬಹುತೇಕರ ಅಭಿಪ್ರಾಯವಾಗಿದ್ದರೆ ಅದರಲ್ಲಿ ತಪ್ಪಿಲ್ಲ. ತಮ್ಮ ಕಾಲಮೇಲೆ ತಾವೇ ಕಲ್ಲು ಹಾಕಿಕೊಂಡ ಕಲಾವಿದರುಗಳು ಮುಂದೆ ಪರಿತಪಿಸುವುದಂತೂ ಗ್ಯಾರಂಟಿ. ಹುಡುಗಿ ಮಾಸ್ತರರಿಗೆ ಇನ್ನೂ ಸ್ವಲ್ಪ ದಿನ ಆಟವಾಡಲು ರಾಜಕೀಯದ ಬೆಂಬಲವಾದರೂ ಇದೆ. ಆದರೆ.. ಈ ಕಲಾವಿದರುಗಳಿಗೆ ಅದೂ ಇಲ್ಲ. ಇದ್ದ ಜನಗಳ ಸಿಂಪಥಿಯನ್ನೂ ಸಹ ಕಳೆದುಕೊಳ್ಳುವಂತೆ ವರ್ತಿಸುತ್ತಿದ್ದಾರೆ. ಯಾರ ಮಾತಿಗೂ ಗೌರವ ಕೊಡದೇ ಬ್ಲಾಕ್ ಮೇಲ್ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. 

ಇಷ್ಟಕ್ಕೂ ಈ ಸಭೆಯಲ್ಲಾದರೂ ರಂಗಾಯಣದ ಪ್ರಸ್ತುತ ಸಮಸ್ಯೆಗೆ ಪರಿಹಾರ ಸಿಗುತ್ತದೆಂದು ಎಲ್ಲರೂ ನಿರೀಕ್ಷಿಸಿದ್ದರು. ರಂಗಸಮಾಜದ ಸದಸ್ಯರೆಲ್ಲಾ ಕಾತುರದಿಂದ ಕಾದಿದ್ದರು. ಕಲಬುರ್ಗಿಯ ರಂಗಕರ್ಮಿ ಕಲಾವಿದರುಗಳೂ ಸಹ ಸಮಸ್ಯೆ ಬಗೆಹರಿಯುತ್ತದೆಂಬ ಭರವಸೆ ಇಟ್ಟುಕೊಂಡಿದ್ದರು. ವ್ಯಾಧಿ ಇಷ್ಟೊಂದು ಉಲ್ಬಣಗೊಂಡಿದ್ದರಿಂದ ಚಿಕಿತ್ಸೆ ದೊರೆಯಬಹುದೆಂದೇ ಎಲ್ಲರೂ ಆಶಿಸಿದ್ದರು. ಆದರೆ.. ಅಂತಹುದೇನೂ ಸಭೆಯಲ್ಲಿ ಆಗಲೆ ಇಲ್ಲ. ಯಾವುದೇ ತೀರ್ಮಾನವನ್ನೂ ಸಚಿವೆ ಉಮಾಶ್ರೀಯವರು ತೆಗೆದುಕೊಳ್ಳಲೇ ಇಲ್ಲಾ. ಎಲ್ಲರ ಅಭಿಪ್ರಾಯವನ್ನು ಮತ್ತೊಮ್ಮೆ ಪಡೆದು ಇನ್ನೊಂದು ವಾರದೊಳಗೆ ನಿರ್ಧಾರವನ್ನು ಪ್ರಕಟಿಸುವುದಾಗಿ ಉಮಾಶ್ರೀಯವರು ಹೇಳಿದ್ದಾರೆ.  ಅರೆ.. ಅಲ್ಲಿ ಕಲಾವಿದರುಗಳು ಉಪವಾಸ ಕೂತು ಸಾಯುತ್ತಿದ್ದಾರೆ.. ಇತ್ತ ಪತ್ರಕರ್ತರುಗಳು ರಂಗಸಮಾಜದವರ ನೆಮ್ಮದಿ ಹಾಳುಮಾಡಿದ್ದಾರೆ. ಇಡೀ ಕರ್ನಾಟಕದ ರಂಗಭೂಮಿ ರಂಗಾಯಣದ ದುರಂತ ಕಂಡು ಮರುಗುತ್ತಿದೆ. ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸಹನೆ ಕಳೆದುಕೊಂಡಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಯಾವುದೇ ತೀರ್ಮಾನಕ್ಕೆ ಬರದೇ ಉಲ್ಬಣಗೊಂಡ ಸಮಸ್ಯೆಯನ್ನು ಮತ್ತಷ್ಟು ತೀವ್ರವಾಗುವಂತೆ ಮಾಡುವುದರ ಹಿಂದೆ ಅದೆಂತಾ ರಾಜಕಾರಣ ಇರಬಹುದು?

ಹೌದು.. ಇದೆಲ್ಲದರ ಹಿಂದೆ ರಾಜಕಾರಣ ಇದೆ. ಯಾಕೆಂದರೆ ಉಮಾಶ್ರೀಯವರೂ ಸಹ ಇಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ಅಸಹಾಯಕರಾಗಿದ್ದಾರೆ. ರೋಗಕ್ಕೆ ತುರ್ತಾಗಿ ಸರ್ಜರಿ ಮಾಡುವ ಮನಸ್ಸು ಅವರಿಗಿದ್ದರೂ ಆಗುತ್ತಿಲ್ಲ. ಯಾಕೆಂದರೆ ಹುಡುಗಿ ಮಾಸ್ತರರ ಹಿಂದೆ ಕಾಂಗ್ರೆಸ್‌ನ ಅತಿರಥ ಮಹಾರಥರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್‌ರವರು ನಿಂತಿದ್ದಾರೆ. ಖರ್ಗೆ ಧರಂನಂತವರು ನನ್ನ ಪಾಕೆಟಲ್ಲಿದ್ದಾರೆಂದು ಹುಡುಗಿ ಮಾಸ್ತರ್ ಹೇಳಿಕೊಂಡು ತಿರುಗುತ್ತಿದ್ದಾರೆ. ಮೇ 27 ರ ಸಭೆಯಲ್ಲೂ ಸಹ ಹುಡುಗಿ ಮಾಸ್ತರರು ಸಚಿವೆಯ ಉಪಸ್ಥಿತಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಬಾಯಿಗೆ ಬಂದಂತೆ ಕೂಗಾಡಿದ್ದಾರೆ. ಕಲಾವಿದರನ್ನು ತನ್ನ ವಿರುದ್ಧ ಎತ್ತಿಕಟ್ಟುವಲ್ಲಿ ಡಿ.ಎಸ್.ಚೌಗಲೆ ಹಾಗೂ ಕೆ.ವೈ.ನಾರಾಯಣಸ್ವಾಮಿಯವರೇ ಕಾರಣವೆಂದು ನೇರವಾಗಿ ಆರೋಪಿಸಿ ಕೆವೈಎನ್ ಜೊತೆಗೆ ಜಗಳಕ್ಕಿಳಿದ್ದಿದ್ದಾರೆ. ಎಲ್ಲರನ್ನೂ ಎದುರು ಹಾಕಿಕೊಳ್ಳುವಂತಹ ಬಂಡ ದೈರ್ಯ ಈ ಹುಡುಗಿ ತಾತನಿಗೆ ಎಲ್ಲಿಂದ ಬಂತು?. ಅದು ರಾಜಕೀಯ ಬೆಂಬಲದಿಂದ. ಇದು ಉಮಾಶ್ರೀಯವಂತವರಿಗೂ ಬಿಸಿ ತುಪ್ಪವಾಗಿದೆ. ಕೇಂದ್ರ ಸರಕಾರದ ವಿರೋಧ ಪಕ್ಷದ ನಾಯಕರಾಗಿರುವ ಖರ್ಗೆಯವರನ್ನು ಎದುರು ಹಾಕಿಕೊಳ್ಳಲು ಸಿಎಂ ಸಿದ್ದರಾಮಯ್ಯನವರಿಗೇ ಸಾಧ್ಯವಿಲ್ಲ. ಅಂತಹುದರಲ್ಲಿ ಸಚಿವೆ ಉಮಾಶ್ರೀಯವರು ಅದು ಹೇಗೆ ಎದುರು ಹಾಕಿಕೊಳ್ಳಲು ಸಾಧ್ಯ?. ಹೀಗಾಗಿ ಮತ್ತೆ ರಂಗಾಯಣದ ಸಮಸ್ಯೆ ಪರಿಹಾರ ಕಾಣದೇ ಸಮಸ್ಯೆಯಾಗಿಯೇ ಉಳಿದಿದೆ. ರೋಗಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ವ್ಯಾಧಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಕಲಾವಿದರುಗಳು ಅವರಿವರ ಚಿತಾವಣೆಗೊಳಗಾಗಿ ಅತಿರೇಕದ ನಿರ್ಧಾರ ತೆಗೆದುಕೊಂಡು ಸಾವಿಗೂ ಸಿದ್ಧರಾಗಿ ಕೂತಿದ್ದಾರೆ. ಇಡೀ ಕಲಬುರ್ಗಿ ರಂಗಾಯಣ ಸೂತಕದ ಮನೆಯಾಗಿದೆ. ಬೆಂಕಿ ಬಿದ್ದ ಮನೆಗೆ ನೀರು ಹೊಯ್ದು ತಣ್ಣಗಾಗಿಸುವ ಸರಕಾರಿ ಪೈರ್‌ಬ್ರಿಗೇಡ್ ಮೌನವಾಗಿದೆ. ಬೆಂಕಿ ಹತ್ತಿದ ಮನೆಯ ಗಳ ಹಿರಿದು ಪೆಟ್ರೋಲ್ ಹಾಕುವವರು ಕ್ರಿಯಾಶೀಲರಾಗಿದ್ದಾರೆ. ರಂಗಾಯಣ ಹತ್ತಿ ಉರಿಯುತ್ತಿದೆ. ಶಮನಗೊಳಿಸುವ ಸಾಧ್ಯತೆಗಳು ಮುಂದೂಡಲ್ಪಟಿವೆ.

-                                                                                                                                                                          - ಶಶಿಕಾಂತ ಯಡಹಳ್ಳಿ         
   






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ