ಎಲ್ಲಾ ಕಲೆಗಳು ಮೂಲಭೂತವಾಗಿ ಕಲಾವಿದರಿಂದ ಕಲಾಸಕ್ತರಿಗಾಗಿಯೇ
ಸೃಷ್ಟಿಗೊಳ್ಳುತ್ತವೆ. ಕಲೆಯ ಅಂತಿಮ ಗುರಿ ಆಸಕ್ತ ಜನರನ್ನು ತಲುಪುವುದೇ ಆಗಿದೆ. ಇದಕ್ಕೆ ರಂಗಭೂಮಿಯೂ
ಹೊರತಲ್ಲ. ಕಲೆಗಾಗಿ ಕಲೆ ಎನ್ನುವ ಪುರೋಹಿತಶಾಹಿ ಪರಿಕಲ್ಪನೆಯನ್ನು ಪ್ರತಿರೋಧಿಸಿ ಜನರಿಗಾಗಿ ಕಲೆ ಎನ್ನುವುದನ್ನು ರಂಗಭೂಮಿ
ಸಾಬೀತುಪಡಿಸುತ್ತಲೇ ಬಂದಿದೆ. ಇಪ್ಟಾ- ಸಮುದಾಯದಂತಹ ಸಾಂಸ್ಕೃತಿಕ ಸಂಘಟನೆಗಳು ಇನ್ನೂ ಒಂದು ಹೆಜ್ಜೆ
ಮುಂದೆ ಹೋಗಿ ಬದುಕಿಗಾಗಿ ಕಲೆ, ಪ್ರತಿಭಟನೆಗಾಗಿ ಕಲೆ ಎಂಬುದನ್ನು ತಮ್ಮ ಸಾಂಸ್ಕೃತಿಕ ಚಳುವಳಿಗಳ ಮೂಲಕ
ತೋರಿಸಿಕೊಟ್ಟಿದ್ದಾರೆ. ರಂಗಕಲೆಯೆಂಬುದನ್ನು ಜನರ ಬದುಕಿನ ಭಾಗವಾಗಿಸುವತ್ತ ರಂಗಭೂಮಿ ಸಾಗಬೇಕಿದೆ.
ಆದರೆ... ಟಿವಿ ಹಾಗೂ ಸಿನೆಮಾಗಳ ಪ್ರಭಾವ ಜನರ ಮೇಲೆ ಅದೆಷ್ಟು ಮೋಡಿ
ಮಾಡಿದೆ ಎಂದರೆ... ಅಗತ್ಯ ಇರಲಿ ಬಿಡಲಿ ಅವುಗಳು ಈಗ ಬಹುತೇಕ ಜನತೆಯ ಬದುಕಿನ ಭಾಗವಾಗಿ ಹೋಗಿವೆ. ಜನಮಾನಸದಲ್ಲಿ
ಟಿವಿ ಮೋಹ ಎನ್ನುವುದು ವ್ಯಸನವಾಗಿದೆ. ಟಿವಿಯ ಏಕತಾನತೆಯ ಕಾರ್ಯಕ್ರಮಗಳೂ ಹಾಗೂ ನಿಧಾನಗತಿಯ ಧಾರವಾಹಿಗಳಿಂದ
ಜನತೆ ಬೇಸತ್ತಿದ್ದರೂ ಪರ್ಯಾಯ ಮನರಂಜನಾ ಸಾಧನಗಳು ಇಲ್ಲವಾಗಿದ್ದರಿಂದ ಅನಿವಾರ್ಯವಾಗಿ ಟಿವಿಗೆ ಅಡಿಕ್ಟ್
ಆಗಿದ್ದಾರೆ. ಟಿವಿ ಮಾಧ್ಯಮದ ಶುಷ್ಕತೆ ಹಾಗೂ ಅತಿರೇಕದ ರಂಜನೆಗಳಿಂದ ಬೇಸತ್ತ ಜನರನ್ನು ರಂಗಭೂಮಿಯತ್ತ
ಸೆಳೆಯುವ ಪ್ರಯತ್ನವನ್ನು ರಂಗಭೂಮಿ ಮಾಡಬೇಕಾಗಿದೆ.
ಆದರೆ.. ಅಂತಹ ಪ್ರಯತ್ನಗಳು ನಿರಂತರವಾಗಿ ಆಗದೇ
ಕೇವಲ ಬಿಡಿ ಬಿಡಿ ನಾಟಕ ಚಟುವಟಿಕೆಗಳು ಅನಿಯಮಿತವಾಗಿ ಆಗುತ್ತಿದ್ದು ಜನರನ್ನು ರಂಗಮಂದಿರದತ್ತ ಸೆಳೆಯುವ
ಯತ್ನಗಳು ಆಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ರಂಗಾಸಕ್ತ ಪ್ರೇಕ್ಷಕರಿದ್ದಾರಾದರೂ ಅಲ್ಲಿ
ನಾಟಕಗಳ ಪ್ರದರ್ಶನಗಳು ಅಪರೂಪವಾಗಿವೆ. ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ನಾಟಕ ಚಟುವಟಿಕೆಗಳು ಹೆಚ್ಚುತ್ತಿವೆ,
ಆದರೆ ಪ್ರೇಕ್ಷಕರ ಕೊರತೆ ಅತಿಯಾಗಿದೆ. ಲಕ್ಷಾಂತರ
ರೂಪಾಯಿ ಖರ್ಚು ಮಾಡಿ ನಾಟಕೋತ್ಸವ, ರಾಷ್ಟ್ರೀಯ ರಂಗೋತ್ಸವಗಳನ್ನು ಆಯೋಜಿಸಲಾಗುತ್ತದೆ. ಆದರೆ.. ಯಾರಿಗಾಗಿ
ನಾಟಕ ಮಾಡುತ್ತಿದ್ದಾರೋ ಅವರೇ ರಂಗಭೂಮಿಯತ್ತ ತಲೆ ಹಾಕುತ್ತಿಲ್ಲ. ಬೆಂಗಳೂರಿನಲ್ಲಿ ನಾಟಕವನ್ನು ನೋಡುಗರಿಗಿಂತ
ಮಾಡುವವರೇ ಹೆಚ್ಚಿದ್ದಾರೆನ್ನುವುದು ನಗರ ಕೇಂದ್ರಿತ ರಂಗಭೂಮಿಯ ಶಕ್ತಿಯೂ ಹೌದು ದೌರ್ಬಲ್ಯವೂ ಹೌದು.
ಇತ್ತೀಚೆಗೆ ನಡೆದ ಎರಡು ನಾಟಕೋತ್ಸವಗಳ ಉದಾಹರಣೆಯನ್ನು
ತೆಗೆದುಕೊಂಡರೆ ರಂಗಭೂಮಿಯವರ ಆಸಕ್ತಿ ಹಾಗೂ ಪ್ರೇಕ್ಷಕರ ನಿರಾಸಕ್ತಿ ಎರಡನ್ನೂ ನೋಡಬಹುದಾಗಿದೆ. ಕಳೆದ
ಮೂರು ವರ್ಷದಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವವನ್ನು ಅಂದಾಜು ಇಪ್ಪತ್ತು ಲಕ್ಷ ರೂಪಾಯಿ ಖರ್ಚು ಮಾಡಿ
ರಂಗನಿರಂತರವು ಆಯೋಜಿಸುತ್ತಾ ಬಂದಿದೆ. ಆದರೆ.. ವರ್ಷದಿಂದ ವರ್ಷಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಲೆ
ಬರುತ್ತಿದೆ. ಈ ವರ್ಷವಂತೂ ಕೆಲವು ನಾಟಕಗಳಿಗೆ ಪ್ರೇಕ್ಷಕರ ಕೊರತೆ ಅತಿಯಾಗಿ ಕಾಡಿದ್ದಂತೂ ಸುಳ್ಳಲ್ಲ.
ಹಾಗೆಯೇ ಎಪ್ರಿಲ್ ೨೦ ರಿಂದ ೧೦ ದಿನಗಳ ಕಾಲ ರಾಷ್ಟ್ರೀಯ ನಾಟಕ ಶಾಲೆ ಆಯೋಜಿಸಿದ ದಕ್ಷಿಣ ಭಾರತ ರಂಗೋತ್ಸವಕ್ಕೂ
ಸಹ ಪ್ರೇಕ್ಷಕರು ಮುಖ ತಿರುಗಿಸಿದರು. ಮೂವತ್ತು ಲಕ್ಷ ಖರ್ಚು ಮಾಡಿ ಮಾಡಲಾದ ಈ ನಾಟಕೋತ್ಸವಕ್ಕೆ ಹತ್ತೂ
ದಿನಗಳ ಎವರೇಜ್‌ನಲ್ಲಿ ಕನಿಷ್ಟ ಒಂದೂವರೆ ಸಾವಿರ ಜನರೂ ನೋಡಲಿಲ್ಲವೆಂದರೆ ನಾಟಕೋತ್ಸವ ಮಾಡೋದಾದರೂ
ಯಾರಿಗಾಗಿ ಎನ್ನುವ ಪ್ರಶ್ನೆ ಹುಟ್ಟುತ್ತದೆ.
ಹಾಗೆ ನೋಡಿದರೆ ನಾಟಕ ಮಾಡುವವರಿಗೆ ಹಾಗೂ ಮಾಡಿಸುವವರಿಗೆ
ಈಗ ಪ್ರೇಕ್ಷಕರ ಉಪಸ್ತಿತಿ ಅತಿಯಾಗಿ ಕಾಡುತ್ತಿಲ್ಲ. ಯಾಕೆಂದರೆ ಬಹುತೇಕ ತಂಡಗಳು ಕೈಯಿಂದ ಹಣ ಹಾಕಿ
ನಾಟಕ ಮಾಡುತ್ತಿಲ್ಲ. ಟಿಕೆಟ್‌ನಿಂದಲೂ ಹಣ ಬರುತ್ತಿಲ್ಲ. ಹಾಗಾದರೆ ನಾಟಕ ಹೇಗೆ ಮಾಡುತ್ತಾರೆ...?
ಹಣ ಎಲ್ಲಿಂದ ಬರುತ್ತದೆ? ಎನ್ನುವುದಕ್ಕೆ ಉತ್ತರ ಒಂದೇ, ಅದೇ ರಾಜಾಶ್ರಯ. ಅಂದರೆ ಸರಕಾರಿ ಕೃಪಾಪೋಷಿತ
ರಂಗಪ್ರಯೋಗಗಳು ಹೆಚ್ಚುತ್ತಿವೆ. ಯಾವಾಗ ರಂಗತಂಡವೊಂದು
ಜನಾಶ್ರಿತವಾಗಿ ನಾಟಕವನ್ನು ಮಾಡುತ್ತಿತ್ತೋ ಆಗ ಜನರನ್ನು ನಾಟಕದತ್ತ ಸೆಳೆಯುವ ಅಗತ್ಯವಿರುತ್ತಿತ್ತು.
ಜನರಿಗೆ ಮನರಂಜನೆಯನ್ನು ಕೊಟ್ಟು ಪ್ರತಿಫಲವಾಗಿ ಹಣವನ್ನು ಪಡೆಯುವ ಜರೂರತ್ತು ಇರುತ್ತಿತ್ತು. ಆದರೆ..
ನಾಟಕ ಮಾಡುವ ತಂಡಗಳಿಗೆ ಯಾವಾಗ ಸರಕಾರಿ ಇಲಾಖೆ, ಅಕಾಡೆಮಿ ಅಷ್ಟೇ ಅಲ್ಲ ಕೇಂದ್ರ ಸರಕಾರದ ಮಾನವ ಸಂಪನ್ಮೂಲ
ಇಲಾಖೆ ಪಂಡಿಂಗ್ ಮಾಡಲು ಶುರುಮಾಡಿತೋ ಆಗ ಹಣ ಹರಿದು ಬರತೊಡಗಿತು. ನಾಟಕ ಅಕಾಡೆಮಿ ಪ್ರದರ್ಶನವೊಂದಕ್ಕೆ ಕಾಲು ಲಕ್ಷ ಕೊಟ್ಟರೆ, ಸಂಸ್ಕೃತಿ ಇಲಾಖೆ ಅರ್ಧ ಲಕ್ಷ ಕೊಡುತ್ತದೆ.
ಕೇಂದ್ರ ಸರಕಾರದಿಂದಲೂ ಎರಡರಿಂದ ಐದು ಲಕ್ಷದವರೆಗೂ ಹಣ ತೆಗೆದುಕೊಳ್ಳುವವರೂ ಇದ್ದಾರೆ. ಆದರೆ ಈ ಹಣ
ಕೇಳಿದವರಿಗೆಲ್ಲಾ ಸಿಗದಿದ್ದರೂ .. ಇದನ್ನು ದೊರಕಿಸಿಕೊಂಡು ನಾಟಕ ನಿರ್ಮಿಸಿ ಪ್ರದರ್ಶಿಸುವ ಹಲವಾರು
ತಂಡಗಳು ಸಕ್ರೀಯವಾಗಿವೆ. ಕೆಲವು ಪ್ರಾಡ್ ಸಂಘಟಕರು ಕಾರ್ಯಕ್ರಮಗಳನ್ನು ನೆಟ್ಟಗೆ ಮಾಡದೇ ಹಣವನ್ನು
ಪಡೆಯುವುದನ್ನೇ ದಂದೆ ಮಾಡಿಕೊಂಡಿರುವುದನ್ನೂ ಕಾಣಬಹುದಾಗಿದೆ. ಸರಕಾರಿ ಸಂಸ್ಥೆಗಳಿಂದ ಹಣ ಪಡೆದಿದ್ದಕ್ಕೆ
ಪ್ರತಿಯಾಗಿ ಸಾಕ್ಷಿಕೊಡಲು ಪೊಟೋಗಳು ಇಂತವರಿಗೆ ಅಗತ್ಯವಾಗುತ್ತವೆಯೇ ಹೊರತು ಪ್ರೇಕ್ಷಕರಲ್ಲ. ಹೀಗಾಗಿ
ಪ್ರೇಕ್ಷಕರಿಗಾಗಿಯೋ, ಕಲೆಗಾಗಿಯೋ ನಾಟಕ ಮಾಡುವುದಕ್ಕಿಂತಾ ಸರಕಾರಿ ಕಾಸನ್ನು ಪಡೆಯುವುದಕ್ಕೆ ತಮ್ಮ ಪ್ರತಿಭೆ ಶ್ರಮಗಳನ್ನು ಬಳಸುವ
ಒಂದು ದಲ್ಲಾಳಿ ವರ್ಗ ಹುಟ್ಟಿಕೊಂಡಿದ್ದು ರಂಗಭೂಮಿಗೆ ಮಾರಕವಾಗಿದೆ.
ರಂಗಭೂಮಿ ಚಟುವಟಿಕೆಗಳಿಗೆ ಬೆಂಬಲವಾಗಿ ಸರಕಾರ ಹಣ
ಕೊಟ್ಟರೆ ತಪ್ಪೇನಿಲ್ಲ. ಪಡೆದುಕೊಂಡವರು ಬಂದ ಹಣವನ್ನು ತೆಗೆದುಕೊಂಡ ಉದ್ದೇಶಕ್ಕೆ ಬಳಸಿದರೆ ಇನ್ನೂ
ಉತ್ತಮ. ಆದರೆ.. ಸರಕಾರಿ ಇಲಾಖೆಗಳಿಂದ ಹಣವನ್ನು ತೆಗೆದುಕೊಳ್ಳುವುದಕ್ಕೆ ಹಾಕುವ ಶ್ರಮ, ನಾಟಕವೊಂದನ್ನು
ಕಟ್ಟಲು ತೆಗೆದುಕೊಳ್ಳುವ ಪರಿಶ್ರಮವು ಪ್ರೇಕ್ಷಕರನ್ನು ನಾಟಕಕ್ಕೆ ಕರೆತರುವಲ್ಲಿ ಯಾಕೆ ಇಲ್ಲಾ...?
ಯಾಕೆಂದರೆ ಪ್ರೇಕ್ಷಕರು ಈಗ ಹಣದ ಮೂಲವಾಗಿ ಉಳಿದಿಲ್ಲ. ನಾಟಕ ಮಾಡಬೇಕು... ಅದರ ಪೊಟೋಗಳನ್ನು ಹಾಗೂ
ಇತರ ದಾಖಲೆಗಳನ್ನು ಲಗತ್ತಿಸಬೇಕು ಹಾಗೂ ಸರಕಾರಿ ಸಂಸ್ಥೆಗಳಿಂದ ಹಣ ಪಡೆಯಬೇಕು. ಇಲ್ಲಿ ನಾಟಕವನ್ನು
ಮಾಡುವ ತೀವ್ರತೆ ಹಾಗೂ ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವ ಜಾಣ್ಮೆ ಎರಡೂ ಇರುವ ರಂಗ
ಸಂಘಟಕರಿಗೆ ಯಾರಿಗಾಗಿ ನಾಟಕ ಮಾಡುತ್ತಿದ್ದೇವೆ ಎನ್ನುವುದೇ ಮರೆತಂತಿದೆ. ಯಾವಾಗ ಪ್ರೇಕ್ಷಕರನ್ನು
ನಿರ್ಲಕ್ಷಿಸಿ ನಾಟಕವನ್ನು ಮಾಡಲಾಗುತ್ತದೋ ಆಗ ಅದು ಜನತೆಗಾಗಿ ನಾಟಕವಾಗದೇ ಕೇವಲ ತಮಗಾಗಿ ಹಾಗೂ ಅನುದಾನಕ್ಕಾಗಿ
ನಾಟಕ ಮಾಡಿದಂತಾಗುತ್ತದೆ. ಇದರಿಂದಾಗಿ ಜನರಿಗಾಗಿ ಕಲೆ ಎನ್ನುವ ನಾಟಕದ ಆಶಯವೇ ಬುಡಮೇಲಾದಂತಾಗಿದೆ.ಇತ್ತ
ಕಲೆಗಾಗಿ ಕಲೆಯೂ ಅಲ್ಲಾ, ಅತ್ತ ಜನರಿಗಾಗಿಯೂ ಕಲೆಯಲ್ಲ.. ಕೇವಲ ಆರ್ಥಿಕ ಲಾಭಕ್ಕಾಗಿ ಕಲೆ ಎನ್ನುವಂತಾಗಿದೆ.
ಎಲ್ಲಾ ರಂಗತಂಡಗಳೂ ಹೀಗೆ ಎಂದು ಹೇಳಲಾಗುವುದಿಲ್ಲ.
ಅನುದಾನ ಸಿಗಲಿ ಬಿಡಲಿ ತಮ್ಮ ಪಾಡಿಗೆ ತಾವು ನಾಟಕ ಮಾಡುವಂತಹ ತಂಡಗಳೂ ಇವೆಯಾದರೂ ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟಿವೆ.
ಬಹುತೇಕ ಸರಕಾರಿ ಕೃಪಾ ಪೋಷಿತ ರಂಗತಂಡಗಳು ಪ್ರೇಕ್ಷಕರನ್ನು ಕಡೆಗಣಿಸಿ ಪ್ರದರ್ಶನಗಳನ್ನು ಮಾಡುತ್ತಿರುವುದರಲ್ಲಿ
ಸುಳ್ಳಿಲ್ಲ. ಹೆಚ್ಚಾಗಿ ರಂಗಸಂಘಟಕರು ಸರಕಾರಿ ಹಣದ ಹಿಂದೆ ಬಿದ್ದು ಅದಕ್ಕಾಗಿಯೇ ನಾಟಕ ಹಾಗೂ ನಾಟಕೋತ್ಸವ
ಮಾಡುತ್ತಿರುವುದರಲ್ಲಿ ಅತಿಶಯವಿಲ್ಲ. ಹೀಗಾಗಿ ನಗರ ಕೇಂದ್ರಿತ ರಂಗಭೂಮಿ ಜನಾಶ್ರಿತವಾಗಿರದೇ ಸರಕಾರಾಶ್ರಿತವಾಗಿದ್ದು
ರಂಗಭೂಮಿಯ ಸಕಾರಾತ್ಮಕ ಬೆಳವಣಿಗೆಯ ನಿಟ್ಟಿನಲ್ಲಿ ಮಾರಕವಾದದ್ದಾಗಿದೆ. ಇದರರ್ಥ ಸರಕಾರಿ ಸಂಸ್ಥೆಗಳಿಂದ
ಹಣ ಪಡೆಯುವುದು ತಪ್ಪು ಎಂದಲ್ಲಾ. ಪಡೆದ ಹಣವನ್ನು ಪಡೆದ ಉದ್ದೇಶಕ್ಕೆ ಬಳಸಬೇಕೆಂಬುದು ನ್ಯಾಯಸಮ್ಮತವಾದದ್ದು.
ನಾಟಕಕ್ಕಾಗಿ ನಾಟಕ ಮಾಡದೇ, ಸಿಗುವ ಅನುದಾನಕ್ಕಾಗಿ ನಾಟಕ ಮಾಡದೇ, ಪ್ರೇಕ್ಷಕರಿಗಾಗಿ ನಾಟಕ ಮಾಡುವ
ಟ್ರೆಂಡ್ ಹುಟ್ಟಿಕೊಂಡರೆ ನಿಜಕ್ಕೂ ರಂಗಭೂಮಿಯ ಉದ್ದೇಶ ಈಡೇರಿದಂತಾಗುತ್ತದೆ.
ಎಪ್ಪತ್ತು ಎಂಬತ್ತರ ದಶಕದಲ್ಲಿ ನಾಟಕವೊಂದನ್ನು
ನಿರ್ಮಿಸಿದ ನಂತರ ಪ್ರದರ್ಶಿಸುವ ದಿನ ಗೊತ್ತಾದರೆ ಸಾಕು, ಪ್ರದರ್ಶನಕ್ಕಿಂತ ಮೂರು ದಿನ ಮುಂಚೆ ನಗರದ
ಗೋಡೆಗಳ ಮೇಲೆ ನಾಟಕದ ಪೋಸ್ಟರ್‌ಗಳು ಮಿಂಚುತ್ತಿದ್ದವು. ಬೆನಕದ ನಾಗಾಭರಣ, ಚಂಕುಸಿಂಗ್, ರಂಗಸಂಪದದ
ಲೊಕೇಶ್, ಆರ್.ನಾಗೇಶರಂತಹ ರಂಗಕರ್ಮಿಗಳು ಕಿರಿಯರನ್ನು ಜೊತೆಗಿಟ್ಟುಕೊಂಡು ನಡುರಾತ್ರಿ ರಸ್ತೆಯ ಮೇಲೆ
ನಾಟಕದ ಪೋಸ್ಟರನ್ನು ಉಲ್ಟಾ ಮಲಗಿಸಿ ಗೊಂದು ಹಾಕಿಸಿ ಖಾಲಿ ಗೋಡೆಗಳ ಮೇಲೆ ಅಂಟಿಸಿದ್ದಕ್ಕೆ ರಂಗಭೂಮಿ
ಸಾಕ್ಷಿಯಾಗಿದೆ. ಯಾವುದೇ ಸರಕಾರಿ ಸವಲತ್ತುಗಳಿಲ್ಲದೇ, ಪ್ರಚಾರ ಮಾಧ್ಯಮಗಳ ಸಹಕಾರಗಳಿಲ್ಲದೇ ರಂಗ ತಂಡಗಳು ಪೈಪೋಟಿಯ ಮೇಲೆ ತಮ್ಮ ನಾಟಕದ ಪ್ರಚಾರವನ್ನು
ಮಾಡುತ್ತಾ ಪ್ರೇಕ್ಷಕರನ್ನು ಸೆಳೆಯುತ್ತಿದ್ದರು. ಬೆನಕ,
ರಂಗಸಂಪದ, ಕಲಾಗಂಗೋತ್ರಿ, ನಟರಂಗ.. ಮುಂತಾದ ರಂಗತಂಡಗಳ ನಾಟಕಗಳಿಗೆ ಪ್ರೇಕ್ಷಕರು ಸಾಲುಗಟ್ಟಿ ನಿಂತು
ಟಿಕೆಟ್ ಪಡೆಯುತ್ತಿದ್ದರು. ಎಷ್ಟೋ ಸಲ ಟಿಕೆಟ್ ಸಿಗದೇ
ಗಲಾಟೆಗಳೂ ಆಗುತ್ತಿದ್ದವು. ನಾಟಕದ ಯಶಸ್ಸು ನಾಟಕದ
ಪ್ರದರ್ಶನಕ್ಕಿಂತಲೂ ಎಷ್ಟು ಜನ ಪ್ರೇಕ್ಷಕರು ಬಂದಿದ್ದರು ಎಂಬುದರ ಮೇಲೆ ನಿರ್ಧಾರವಾಗುತ್ತಿತ್ತು.
ಉತ್ತಮ ನಾಟಕಕ್ಕೆ ಜನತೆ ಎಲ್ಲಿದ್ದರೂ ಓಡಿ ಬರುತ್ತಿದ್ದರು. ಪ್ರೇಕ್ಷಕರನ್ನು ಸೇರಿಸಿ.. ಜನರಿಂದಲೇ
ಹಣವನ್ನು ಪಡೆದು ನಾಟಕವನ್ನು ಪೈಪೋಟಿಯ ಮೇಲೆ ಪ್ರದರ್ಶಿಸುವುದೇ ಒಂದು ಸಂಭ್ರಮವಾಗಿತ್ತು. ಪ್ರೇಕ್ಷಕರಿಗೆ
ಪೋಸ್ಟರ್, ಕರಪತ್ರಗಳ ಮೂಲಕ ತಿಳಿಸಿ ಅವರನ್ನು ರಂಗಮಂದಿರದತ್ತ ಬರುವಂತೆ ಮಾಡುವುದೂ ಸಹ ರಂಗತಂಡದ ನಾಟಕ
ನಿರ್ಮಿತಿಯ ಭಾಗವೂ ಆಗಿತ್ತು.
ಆದರೆ ಈಗ ನಾಟಕದ ಪೋಸ್ಟರ್ ಸಂಸ್ಕೃತಿ ಎನ್ನುವುದು
ಕಾಲನ ಗರ್ಭ ಸೇರಿದೆ. ಕರಪತ್ರಗಳು ಕಲಾಕ್ಷೇತ್ರದ ಕ್ಯಾಂಟೀನಿಗೆ ಸೀಮಿತವಾಗಿವೆ. ಆಟೋಗಳಲ್ಲಿ ಟಾಂಗಾಗಳಲ್ಲಿ
ನಾಟಕದ ಕುರಿತು ಪ್ರಚಾರ ಮಾಡುತ್ತಿದ್ದ ಕಾಲ ಎಂದೋ ಹಿಂದೆ ಸರಿದಿದೆ. ನಾಟಕಕ್ಕೆ ಪ್ರೇಕ್ಷಕರನ್ನು ಸೇರಿಸುವುದು
ನಾಟಕದ ಅವಿಭಾಜ್ಯ ಅಂಗವೆನ್ನುವುದೇ ಬಹುತೇಕ ರಂಗಸಂಘಟಕರಿಗೆ ಮರೆತೇ ಹೋಗಿದೆ. ಜೊತೆಗೆ ಬೆಂಗಳೂರು ನಗರವೂ
ಅಗಾಧವಾಗಿ ಬೆಳೆದಿದೆ. ಅಡಿಗಡಿಗೆ ಅಡ್ಡವಾಗುವ ಟ್ರಾಫಿಕ್
ಎನ್ನುವ ಅಡೆತಡೆಗಳನ್ನು ದಾಟಿ ಬರುವದೇ ರಂಗಾಸಕ್ತರಿಗೆ ದುಸ್ತರವಾಗಿದೆ. ಆದರೆ.. ಉತ್ತಮ ನಾಟಕವಾದರೆ
ಜನ ಎಲ್ಲಿದ್ದರೂ ಬರುತ್ತಾರೆ ಎನ್ನುವ ನಂಬಿಕೆ ಆಗಾಗ ಸಾಬೀತಾಗಿದೆಯಾದರೂ ಉತ್ತಮ ನಾಟಕ ಪ್ರದರ್ಶನವಿದೆ
ಎಂದು ಪ್ರೇಕ್ಷಕರಿಗೆ ತಿಳಿಸಿ ಆಕರ್ಷಿಸುವಲ್ಲಿ ರಂಗಸಂಘಟಕರು ಇನ್ನೂ ಹೆಚ್ಚು ಕೆಲಸ ಮಾಡಬೇಕಿದೆ. ಸಿಜಿಕೆ
ರಾಷ್ಟ್ರೀಯ ರಂಗೋತ್ಸವದಲ್ಲಿ ಹಾಗೂ ಎನ್‌ಎಸ್‌ಡಿ ಫೇಸ್ಟಿವಲ್ ನಲ್ಲಿ ಕೆಲವು ನಾಟಕಗಳು ಅಪರೂಪದವಾಗಿದ್ದವು.
ಅದು ಪ್ರೇಕ್ಷಕರ ಅರಿವಿಗೆ ಬರಲೇ ಇಲ್ಲ. ಹೀಗಾಗಿ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ರಂಗಮಂದಿರಕ್ಕೆ
ಬರಲೇ ಇಲ್ಲ. ದೂರದೂರದ ರಾಜ್ಯದಿಂದ ಉತ್ಸಾಹದಿಂದ ಬಂದು ನಾಟಕ ಪ್ರದರ್ಶಿಸುವ ಕಲಾವಿದರು ಹಾಗೂ ರಂಗತಂಡಕ್ಕೆ
ಕಡಿಮೆ ಪ್ರೇಕ್ಷಕರ ಸಂಖ್ಯೆ ನೋಡಿ ನಿರಾಶೆಯಾಗಿದ್ದಂತೂ ಸುಳ್ಳಲ್ಲ.
ಹಾಗಾದರೆ ಮೊದಲು ಪ್ರೇಕ್ಷಕರ ನಿರಾಸಕ್ತಿಗೆ ಕಾರಣಗಳೇನು
ಎನ್ನುವುದನ್ನು ಹುಡುಕಿ ಮತ್ತೆ ಪ್ರೇಕ್ಷಕರನ್ನು ರಂಗಭೂಮಿಯತ್ತ ಆಕರ್ಷಿಸುವ ಕೆಲಸವನ್ನು ಎಲ್ಲಾ ರಂಗಕರ್ಮಿಗಳು
ಅತ್ಯಗತ್ಯವಾಗಿ ಮಾಡಲೇಬೇಕಿದೆ. ಈ ನಿಟ್ಟಿನಲ್ಲಿ ಕೆಲವು ಕಾರಣ ಹಾಗೂ ಪರಿಹಾರಗಳು ಹೀಗಿವೆ.
ಟ್ರಾಫಿಕ್ ಸಮಸ್ಯೆಗೆ ಪರ್ಯಾಯ : ಎಪ್ಪತ್ತರ ದಶಕದಲ್ಲಿ ಟ್ರಾಫಿಕ್ ಸಮಸ್ಯೆ ಇಷ್ಟೊಂದು
ಹದಗೆಟ್ಟಿರಲಿಲ್ಲ ಹಾಗೂ ಬೆಂಗಳೂರೆಂಬ ಬೆಂಗಳೂರು ಹೀಗೆ ಬ್ರಹದಾಕಾರವಾಗಿ ಬೆಳೆದಿರಲಿಲ್ಲ. ಆದರೆ ಈಗ
ನಾಟಕ ನೋಡಬೇಕೆಂದುಕೊಂಡರೂ ಟ್ರಾಫಿಕ್ ದಾಟಿ ಹೋಗುವುದೇ
ರಂಗಾಸಕ್ತರಿಗೆ ಬಲು ದೊಡ್ಡ ತೊಂದರೆಯಾಗಿದೆ. ಟ್ರಾಫಿಕ್ಕನ್ನಂತೂ ನಿಲ್ಲಿಸಲು ಸಾಧ್ಯವಿಲ್ಲ. ಆದರೆ..
ಜನರಿರುವತ್ತಲೇ ನಾಟಕವನ್ನು ತೆಗೆದುಕೊಂಡು ಹೋಗಬಹುದಾಗಿದೆ. ಅಂದರೆ.. ಬಡಾವಣೆಗಳಲ್ಲಿ ರಂಗಭೂಮಿ ಚಟುವಟಿಕೆಗಳನ್ನು
ಹೆಚ್ಚಿಸಬೇಕಾಗಿದೆ. ಈಗ ಇದು ಒಂದಿಷ್ಟು ಯಶಸ್ವಿಯೂ ಆಗುತ್ತಿದೆ. ಹನುಮಂತನಗರದ ಕೆ.ಹೆಚ್.ಕಲಾಸೌಧ,
ಮಲ್ಲತ್ತಳ್ಳಿಯ ಕಲಾಗ್ರಾಮಗಳಲ್ಲಿ ಅಕ್ಕಪಕ್ಕದ ಬಡಾವಣೆಯವರು ಟಿಕೆಟ್ ಕೊಟ್ಟು ನಾಟಕಗಳನ್ನು ನೋಡಲು ಬರುತ್ತಿದ್ದಾರೆಂಬುದು ಸಕಾರಾತ್ಮಕ
ಬೆಳವಣಿಗೆಯಾಗಿದೆ. ಇದೇ ಮಾದರಿಯನ್ನು ಬೆಂಗಳೂರಿನ ಇತರ ಭಾಗಗಳಿಗೂ ವಿಸ್ತರಿಸಬೇಕಿದೆ. ಸರಕಾರದ ಮೇಲೆ
ರಂಗಕರ್ಮಿಗಳು ಒತ್ತಡ ತಂದು ಕನಿಷ್ಟ ವಾರ್ಡಿಗೊಂದಾದರೂ ಇನ್ನೂರು ಮುನ್ನೂರು ಜನ ಕೂಡಬಹುದಾದ ರಂಗಮಂದಿರ
ನಿರ್ಮಾಣಕ್ಕೆ ಒತ್ತಾಯಿಸಬೇಕಿದೆ.
ಕ್ವಾಲಿಟಿ ನಾಟಕಗಳ ನಿರ್ಮಾಣ : ಆಗ ಹವ್ಯಾಸಿ ರಂಗಭೂಮಿಯಲ್ಲಿ ಹಣಕ್ಕಾಗಿ ನಾಟಕಗಳು
ನಿರ್ಮಾಣವಾಗದೇ ಖುಷಿಗಾಗಿ, ಕಲೆಗಾಗಿ, ಪ್ರೇಕ್ಷಕರಿಗಾಗಿ ತಯಾರಾಗುತ್ತಿದ್ದವು. ಆದರೆ.. ಈಗ ನಾಟಕಗಳ
ಬೆಳೆ ಬೇಕಾದಷ್ಟಾಗುತ್ತಿದೆಯಾದರೂ ಅವುಗಳಲ್ಲಿ ಕಾಳಿಗಿಂತ ಜೊಳ್ಳೆ ಹೆಚ್ಚಿವೆ. ಅದೆಷ್ಟೋ ದೂರದಿಂದ
ಕಷ್ಟ ಪಟ್ಟು ಬಂದ ಪ್ರೇಕ್ಷಕ ಕಳಪೆ ನಾಟಕ ನೋಡಿದಾಗ ಬೇಸರಗೊಂಡು ಮುಂದೆ ನಾಟಕ ನೋಡಲು ಬಾರದೇ ಹೋಗಬಹುದಾದ
ಸಾಧ್ಯತೆಯೂ ಇದೆ. ಆದ್ದರಿಂದ.. ನಾಟಕಗಳನ್ನು ನಿರ್ಮಿಸುವ ರಂಗತಂಡಗಳು ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು
ಉತ್ತಮ ರಂಗಪಠ್ಯವನ್ನು ಆಯ್ದುಕೊಂಡು ರಂಗಬದ್ಧತೆಯಿಂದ ನಾಟಕವನ್ನು ಕಟ್ಟಬೇಕಿದೆ. ಕನಿಷ್ಟ ಐವತ್ತು
ರೂಪಾಯಿ ಕೊಟ್ಟು ನಾಟಕ ನೋಡಲು ಬರುವ ಪ್ರೇಕ್ಷಕನಿಗೆ ನಿರಾಸೆಯಾಗದ ಹಾಗೆ ನಾಟಕವನ್ನು ನಿರ್ಮಿಸಬೇಕಿದೆ.
ಕನಿಷ್ಟ ಖರ್ಚಿನಲ್ಲಿ ಅದ್ಬುತ ಎನ್ನುವ ನಾಟಕಗಳನ್ನು ನಿರ್ಮಿಸುವ ಮಲಯಾಳಿ ರಂಗಭೂಮಿ ಈ ನಿಟ್ಟಿನಲ್ಲಿ
ಮಾದರಿಯಾಗಬಹುದಾಗಿದೆ.
ನಿರಂತರತೆ : ಎಲ್ಲಿ ಯಾವಾಗ ಯಾವ ನಾಟಕಗಳು ನಡೆಯುತ್ತವೆ ಎನ್ನುವ
ಸೂಕ್ತ ಮಾಹಿತಿ ಬೇಕಾಗಿದೆ. ಒಂದು ರಂಗಮಂದಿರದಲ್ಲಿ ನಿರಂತರವಾಗಿ ನಾಟಕಗಳು ನಡೆದು ಅದರ ಕುರಿತು ಮಾಹಿತಿಯನ್ನು
ಒಂದು ತಿಂಗಳ ಮೊದಲೇ ಮುದ್ರಿಸಿ ಕೊಡುವುದು ಸೂಕ್ತ . ರಂಗಶಂಕರವು ಈ ಕೆಲಸವನ್ನು ಶಿಸ್ತಿನಿಂದಾ ಮಾಡುತ್ತಾ
ಬಂದಿದೆ. ರಂಗಭೂಮಿ ಕಾರ್ಪೋರೇಟಿಕರಣವಾಗದೇ ಕಾಪೋರೆಟ್ ಶಿಸ್ತನ್ನು ರೂಢಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ.
ರಂಗಶಂಕರದ ಈ ಪ್ರಚಾರದ ಶಿಸ್ತನ್ನು ಎಲ್ಲಾ ರಂಗಮಂದಿರಗಳು ಅಳವಡಿಸಿಕೊಂಡರೆ ಉತ್ತಮ.. ಒಂದು ನಾಟಕ ನೋಡಲು
ಬಂದವರ ಕೈಗೆ ಒಂದು ತಿಂಗಳ ನಾಟಕಗಳ ವಿವರದ ಪಾಂಪ್ಲೆಟ್ ಕೊಟ್ಟರೆ ಮುಂದಿನ ನಾಟಕಗಳನ್ನು ಪ್ಲಾನ್ ಮಾಡಿಕೊಂಡು
ನೋಡಲು ಬರಲು ಪ್ರೇಕ್ಷಕರಿಗೆ ಅನುಕೂಲವಾಗುತ್ತದೆ. ಸರಕಾರಿ ನಿಯಂತ್ರಣದಲ್ಲಿರುವ ರಂಗಮಂದಿರಗಳಾದರೂ
ಈ ಕೆಲಸವನ್ನು ಮಾಡಬೇಕಿದೆ. ಖಾಸಗಿ ರಂಗಮಂದಿರದ ಮಾಲೀಕತ್ವಕ್ಕೂ ಈ ಮಾದರಿಯ ಅಗತ್ಯತೆಯ ಕುರಿತು ಮನವರಿಕೆ
ಮಾಡಿಕೊಡಬೇಕಾಗಿದೆ.
ಪ್ರಚಾರದ ಕೊರತೆ : ಸತ್ಯ ಏನೆಂದರೆ.. ಈಗಲೂ ವಿಶಿಷ್ಟ ನಾಟಕಗಳನ್ನು ನಿರ್ಮಿಸಿ ಅಗತ್ಯವಾದ ಪ್ರಚಾರವನ್ನು ಕೊಟ್ಟು ರಂಗಾಸಕ್ತರಲ್ಲಿ
ಆಸಕ್ತಿ ಹುಟ್ಟಿಸಿದರೆ ಜನರು ರಂಗಮಂದಿರಕ್ಕೆ ಬಂದೇ ಬರುತ್ತಾರೆಂಬುದು ಹಲವಾರು ಬಾರಿ ಸಾಬೀತಾಗಿದೆ.
ಕೆಲವು ತಂಡಗಳು ನಿಜಕ್ಕೂ ಶ್ರದ್ದೆಯಿಟ್ಟು ನಾಟಕವನ್ನು ಮಾಡುತ್ತಿವೆ.. ಆದರೆ ಹೇಗೆ ಪ್ರಚಾರವನ್ನು
ಕೊಟ್ಟು ಪ್ರೇಕ್ಷಕರನ್ನು ರಂಗಮಂದಿರದತ್ತ ಕರೆತರಬೇಕು ಎನ್ನುವುದು ತಿಳಿಯುತ್ತಿಲ್ಲ. ದಿನಪತ್ರಿಕೆಗಳ
ನಗರ ಕಾರ್ಯಕ್ರಮದಲ್ಲಿ ಬರುವ ಪುಟ್ಟ ಮಾಹಿತಿ ಎಲ್ಲರಿಗೂ ತಲುಪುವಂತಿಲ್ಲ. ನಾಟಕಕ್ಕೆ ನಿರ್ದೇಶಕ, ವ್ಯವಸ್ಥಾಪಕರು
ಇರುವಂತೆ ಪ್ರಚಾರಕ್ಕಾಗಿಯೇ ತಂಡದ ಒಂದಿಬ್ಬರಿಗೆ ಜವಾಬ್ದಾರಿ ವಹಿಸುವುದು ಸೂಕ್ತವಾಗಿದೆ. ಈಗಂತೂ ಜನರನ್ನು
ನೇರವಾಗಿ ತಲುಪಲು ಸಾಮಾಜಿಕ ಜಾಲತಾಣಗಳು ಮುಂಚೂಣಿಯಲ್ಲಿವೆ. ಅವುಗಳನ್ನು ಸಮರ್ಥವಾಗಿ ಬಳಸಿಕೊಂಡು ರಂಗಾಸಕ್ತರಿಗೆ
ಮಾಹಿತಿಗಳನ್ನು ಕಳಿಸುತ್ತಾ ಜನರನ್ನು ಸೆಳೆಯುವ ಪ್ರಯತ್ನವನ್ನು ಮಾಡಬಹುದಾಗಿದೆ.
ನಾಟಕ ಪ್ರದರ್ಶನಗಳಿಗೆ ಬರುತ್ತಿರುವವರ ಹೆಸರು ಹಾಗೂ
ಸಂಪರ್ಕ ಸಂಖ್ಯೆ ಮತ್ತು ಈಮೇಲ್‌ಗಳನ್ನು ಪ್ರತಿ ಪ್ರದರ್ಶನದ ನಂತರ ಒಂದು ಪೀಡ್‌ಬ್ಯಾಕ್ ಪಾರಂನಲ್ಲಿ
ಬರೆಸಿಕೊಂಡು ಪ್ರೇಕ್ಷಕರದೇ ಆದ ಡಾಟಾಬೇಸ್ ಸಿದ್ದಪಡಿಸಿಕೊಳ್ಳಬೇಕು. ಈ ವಿವರಗಳನ್ನು ರಂಗತಂಡಗಳು ಪರಸ್ಪರ
ವಿನಿಮಯ ಮಾಡಿಕೊಳ್ಳಬೇಕು. ನಾಟಕದ ಪ್ರದರ್ಶನಕ್ಕಿಂತ ಒಂದು ವಾರದ ಮುಂಚೆ ರಂಗಾಸಕ್ತರಿಗಿಲ್ಲಾ ಎಸ್.ಎಂ.ಎಸ್,
ವಾಟ್ಸಾಪ್, ಫೇಸ್‌ಬುಕ್ ಹಾಗೂ ಈಮೇಲ್‌ಗಳ ಮೂಲಕ ಪ್ರತಿ ದಿನ ನಾಟಕದ ಕುರಿತು ಮಾಹಿತಿಗಳನ್ನು ರವಾಣಿಸುತ್ತಲೆ
ಇರಬೇಕು. ಆಧುನಿಕ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಂಡು ನಾಟಕದ ಆಹ್ವಾನ ಪತ್ರಿಕೆ, ಬ್ರೋಷರ್,
ಪೊಟೋಗಳು, ಪತ್ರಿಕೆಯಲ್ಲಿ ಬಂದ ವಿಮರ್ಶೆ ಹಾಗೂ ವರದಿಗಳನ್ನೂ ಸಹ ರಂಗಾಸಕ್ತರಿಗೆ ಕಳುಹಿಸಿ ನಾಟಕದ
ಬಗ್ಗೆ ಒಂದು ರೀತಿಯ ಕುತೂಹಲವನ್ನು ಮೂಡಿಸುತ್ತಾ ಹೋಗಬೇಕು. ಸಿನೆಮಾದವರು ಮಾಡುವ ಹಾಗೆಯೇ ನಾಟಕದ ಕುರಿತು
ಟೀಸರ್‌ಗಳನ್ನು, ಟ್ರೈಲರ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಮುಟ್ಟಿಸಿ ಕುತೂಹಲವನ್ನು
ಹುಟ್ಟಿಸಿ ರಂಗಾಸಕ್ತರನ್ನು ನಾಟಕದತ್ತ ಆಕರ್ಷಿಸುವ ಮೂಲಕ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಬಹುದಾಗಿದೆ.
ಪಿಆರ್‌ಓ ಅಗತ್ಯತೆ : ಬಹುತೇಕ ರಂಗತಂಡಗಳು ಏಕವ್ಯಕ್ತಿ ಯಜಮಾನಿಕೆಯನ್ನು
ಹೊಂದಿವೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ತಂಡವೊಂದರ ಪ್ರಮುಖ ರಂಗಸಂಘಟಕರು ತಮ್ಮ ಹೊಣೆಗಾರಿಕೆಯನ್ನು
ಮಿಕ್ಕವರಿಗೂ ಹಂಚಿಕೊಡುವುದುತ್ತಮ. ಇದ್ದುದರಲ್ಲೇ ಜಾಲತಾಣಗಳ ನಿರ್ವಹಣೆ ಗೊತ್ತಿರುವವರಿಗೆ ತಂಡದ ನಾಟಕದ
ಕುರಿತು ಪ್ರಚಾರ ಕೆಲಸವನ್ನು ವಹಿಸಿಕೊಟ್ಟು ಅವರನ್ನು ಆ ರಂಗತಂಡದ ಪಿಆರ್‌ಓ ಅಂದರೆ ಪಬ್ಲಿಸಿಟಿ ರಿಲೇಶನ್ಸ್
ಆಫೀಸರ್ ಆಗಿ ನಿಯಮಿಸಿದರೆ ಸೂಕ್ತವಾದ ಪ್ರಚಾರಕ್ಕೆ ಹಾಗೂ ಮಾಧ್ಯಮಗಳ ಸಮರ್ಥ ಬಳಕೆಗೆ ಪ್ರಯೋಜನವಾಗುತ್ತದೆ.
ಚಲಚಚಿತ್ರ ರಂಗದಲ್ಲಿ ಈ ಪಿಆರ್‌ಓ ಬಹಳ ಪ್ರಮುಖವಾದ ವ್ಯಕ್ತಿಯಾಗಿದ್ದು ಸಿನೆಮಾದ ಪ್ರಚಾರಕ್ಕೆ ಮುಖ್ಯ
ಕಾರಣೀಕರ್ತನಾಗಿದ್ದಾನೆ. ಇದೇ ಮಾದರಿಯನ್ನು ನಾಟಕರಂಗದಲ್ಲೂ ಬಳಸಿ ನೋಡಬಹುದಾಗಿದೆ.
ಪ್ರಚಾರ ತರಬೇತಿ : ಆಧುನಿಕ ಸಂವಹನ ಮಾಧ್ಯಮಗಳನ್ನು ಬಳಸಿ ನಾಟಕವನ್ನು
ಹೇಗೆಲ್ಲಾ ಪ್ರಮೋಟ್ ಮಾಡಬಹುದು ಎನ್ನುವುದನ್ನು ರಂಗತಂಡಗಳ ರೂವಾರಿಗಳಿಗೆ ಕಲಿಸಿ ಕೊಡಬೇಕಾಗಿದೆ. ಸಂಸ್ಕೃತಿ
ಇಲಾಖೆ ಅಥವಾ ನಾಟಕ ಅಕಾಡೆಮಿಯು ಕಾಲಕಾಲಕ್ಕೆ ಎರಡು
ಮೂರು ದಿನಗಳ ‘ಪ್ರಚಾರ ತಂತ್ರಗಳ’ ಕುರಿತು ಕಾರ್ಯಾಗಾರವನ್ನು ಏರ್ಪಡಿಸಿ ಪ್ರೇಕ್ಷಕರನ್ನು
ಮರಳಿ ರಂಗಭೂಮಿಯತ್ತ ಸೆಳೆಯಲು ಬೇಕಾದ ಪಬ್ಲಿಸಿಟಿ ಸಾಧ್ಯತೆಗಳ ಕುರಿತು ಪ್ರಾಯೋಗಿಕ ಮಾಹಿತಿಗಳನ್ನು
ಕೊಡಬೇಕಿದೆ. ಅದಕ್ಕಿಂತಾ ಹೆಚ್ಚಾಗಿ ನಾಟಕ ಅಕಾಡೆಮಿಯು ಕಲಾವಿದರ, ರಂಗತಂಡಗಳ ಸವಿವರ ಡಾಟಾ ಬೇಸ್ ಜೊತೆಗೆ
ರಂಗಾಸಕ್ತ ಪ್ರೇಕ್ಷಕರ ಸಂಪರ್ಕ ವಿವರಗಳ ಡಾಟಾಬೇಸನ್ನೂ ಸಹ ಕಲೆಕ್ಟ್ ಮಾಡಿ ಅಕಾಡೆಮಿಯ ವೆಬ್‌ಸೈಟ್‌ಗೆ
ಅಪ್‌ಲೋಡ್ ಮಾಡಿದರೆ ಯಾರು ಬೇಕಾದರೂ ಅದನ್ನು ಬಳಸಿ ತಮ್ಮ ನಾಟಕಗಳ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳುವ
ಅವಕಾಶವನ್ನು ಮುಕ್ತವಾಗಿಡಬೇಕಿದೆ.
ರಂಗಕರ್ಮಿಗಳ ಹೊಣೆಗಾರಿಕೆ : ಪ್ರೇಕ್ಷಕರು ಅಂದರೆ ಕೇವಲ ರಂಗಾಸಕ್ತರು ಮಾತ್ರ
ಅಲ್ಲ. ಯಾಕೆಂದರೆ ನಾಟಕವೊಂದನ್ನು ಮೊದಲು ನೋಡಿ ಪ್ರೋತ್ಸಾಹಿಸಬೇಕಾದದ್ದು ರಂಗಕರ್ಮಿಗಳೆಲ್ಲರ ಹೊಣೆಗಾರಿಕೆ.
ಆದರೆ ನಾಟಕ ಮಾಡುವ ಹಾಗೂ ಮಾಡಿಸುವ ಅದೆಷ್ಟೋ ರಂಗಕರ್ಮಿ ಕಲಾವಿದರುಗಳು ಬೇರೆಯವರ ನಾಟಕವನ್ನು ನೋಡುವುದಕ್ಕೆ
ಅಷ್ಟೊಂದು ಆಸಕ್ತಿ ವಹಿಸುವುದಿಲ್ಲ. ತಮ್ಮ ನಾಟಕವನ್ನು ಎಲ್ಲರೂ ಬಂದು ನೋಡಬೇಕು. ಬೇರೆಯವರ ನಾಟಕ ನಾವ್ಯಾಕೆ
ನೋಡಬೇಕು’ ಎನ್ನುವ ಅಘೋಷಿತ ತೀರ್ಮಾನವನ್ನು ಯಾರಾದರೂ ತೆಗೆದುಕೊಂಡಿದ್ದರೆ
ಇದನ್ನು ಮೊದಲು ಮುರಿಯಬೇಕಿದೆ. ಎಲ್ಲರೂ ಎಲ್ಲರ ನಾಟಕಗಳನ್ನು ನೋಡಬೇಕು. ನಾಟಕವೊಂದನ್ನು ನಾಟಕದವರೇ
ನೋಡದಿದ್ದರೆ ರಂಗಭೂಮಿ ಬೆಳೆದೀತು ಹೇಗೆ?. ಇನ್ನು ಕೆಲವರಿದ್ದಾರೆ.. ಒಂದಿಷ್ಟು ಸಾಹಿತ್ಯಕ ಸಾಂಸ್ಕೃತಿಕ
ರಾಜಕೀಯ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ಅಂತವರಲ್ಲಿ ಹಲವರನ್ನು ಅತಿಥಿಯಾಗಿಯೋ, ಸನ್ಮಾನಕ್ಕೋ
ಕರೆದರೆ ಬರುತ್ತಾರೆ. ಕಾರ್ಯಕ್ರಮ ಮುಗಿದ ನಂತರ ನಾಟಕವನ್ನೂ ನೋಡದೇ ತುರ್ತು ಕೆಲಸದ ನೆಪದಲ್ಲಿ ಹೋಗುವವರಿದ್ದಾರೆ.
ಇದು ಎಂದೂ ಅನುಕರಣೀಯವಲ್ಲ. ನಾಟಕವನ್ನು ಪ್ರದರ್ಶಿಸುವ ರಂಗತಂಡ ಮೊದಲು ಮಾಡಬೇಕಾದ ಕೆಲಸವೇನೆಂದರೆ..
ಸಕ್ರೀಯವಾಗಿರುವ ರಂಗತಂಡಗಳನ್ನು ನಾಟಕ ನೋಡಲು ಆಹ್ವಾನಿಸಬೇಕು. ಒಂದು ರಂಗತಂಡ ಅಂದಮೇಲೆ ಕನಿಷ್ಟ ಹತ್ತು
ಜನ ಕಲಾವಿದರಾದರೂ ಇದ್ದೇ ಇರುತ್ತಾರೆ, ಇರಬೇಕು. ಅದರಲ್ಲಿ ಐದು ಜನರಾದರೂ ಮತ್ತೊಂದು ತಂಡದ ನಾಟಕ ನೋಡಬೇಕು.
ಹೀಗೆ ಕೊಡುಕೊಳ್ಳುವ ರೀತಿಯಲ್ಲಿ ಒಂದು ತಂಡದ ನಾಟಕವನ್ನು
ಬೇರೆ ತಂಡದವರು ನೋಡುವುದನ್ನು ರೂಢಿಸಿಕೊಂಡರೆ ಪ್ರೇಕ್ಷಕರ ಕೊರತೆ ನೀಗುತ್ತದೆ. ಪರಸ್ಪರ ಅರಿವಿನ ಹರಿವು
ವಿಸ್ತರಿಸುತ್ತದೆ.
ಪತ್ರಿಕೆಗಳ ನಿರಾಸಕ್ತಿ : ಮುದ್ರಣ ಮಾಧ್ಯಮಗಳಿಗೆ ಟಿವಿ ಹಾಗೂ ಸಿನೆಮಾ ಕ್ಷೇತ್ರದ
ಮೇಲಿರುವ ಆಸಕ್ತಿ ರಂಗಭೂಮಿಯ ಮೇಲಿರುವುದಿಲ್ಲ. ಯಾಕೆಂದರೆ ನಾಟಕ ಎನ್ನುವುದು ಅನುತ್ಪಾದಕ ಕ್ಷೇತ್ರ
ಎಂದು ತಿಳಿದುಕೊಂಡಿರುತ್ತಾರೆ. ರಂಗಭೂಮಿಯವರಿಂದ ಯಾವುದೇ ಜಾಹಿರಾತು ಆದಾಯ ಸಿಗುವುದಿಲ್ಲ ಎಂದು ಅವರಿಗೆ
ಗೊತ್ತಿರುತ್ತದೆ. ಲಾಭ ಇಲ್ಲದೆ ಏನನ್ನೂ ಮಾಡದಂತಹ ಸ್ಥಿತಿಗೆ ಬಹುತೇಕ ಬಂಡವಾಳಶಾಹಿಗಳ ಪತ್ರಿಕೆಗಳು
ಹಾಗೂ ವಾಹಿನಿಗಳು ಬಂದಿವೆ. ರಂಗಕ್ರಿಯೆಗಳ ಕುರಿತು ಪೂರ್ವಭಾವಿ ಸಮೀಕ್ಷಾ ಲೇಖನ, ಸಂಕ್ಷಿಪ್ತ ವಿವರ,
ಸಂಪೂರ್ಣ ವರದಿ ಹಾಗೂ ವಿಮರ್ಶೆಗಳನ್ನು ಕಾಲಕಾಲಕ್ಕೆ ಪ್ರಕಟಿಸಲು ಪತ್ರಿಕಾ ಸಂಪಾದಕರುಗಳನ್ನು ರಂಗಕರ್ಮಿಗಳು
ಒತ್ತಾಯಿಸಬೇಕಾಗಿದೆ. ನಾಟಕ ಅಕಾಡೆಮಿ ಮಾಡಬೇಕಾದ ಕೆಲಸವಿದು. ಪ್ರಮುಖ ರಂಗಕರ್ಮಿಗಳ ಆಯೋಗವೊಂದನ್ನು ಮಾಡಿಕೊಂಡು ಪ್ರತಿ ದಿನಪತ್ರಿಕೆ ಹಾಗೂ ವಾಹಿನಿಗಳ ಸಂಪಾದಕರುಗಳನ್ನು
ಬೇಟಿಯಾಗಿ ರಂಗಭೂಮಿಗೆ ಹೆಚ್ಚು ಪ್ರಚಾರ ಕೊಡಲು ವಿನಂತಿಸಬಹುದಾಗಿದೆ.
ವಿದ್ಯಾರ್ಥಿಯುವ ಸಮೂಹ : ಶಾಲೆ ಕಾಲೇಜುಗಳ ವಿದ್ಯಾರ್ಥಿಗಳನ್ನು ಪ್ರೇಕ್ಷಕರಾಗಿಸುವತ್ತ
ಹೆಚ್ಚು ಪ್ರಯತ್ನಗಳು ನಡೆಯದೇ ಒಂದು ಪ್ರಮುಖ ಯುವ ಸಮುದಾಯವನ್ನು ರಂಗಭೂಮಿ ನಿರ್ಲಕ್ಷಿಸಿದಂತಿದೆ. ಕಾಲೇಜು ನಾಟಕೋತ್ಸವವನ್ನು
ಹೊರತು ಪಡಿಸಿಯೂ ವಿದ್ಯಾರ್ಥಿಗಳನ್ನು ರಂಗಭೂಮಿಯತ್ತ ಸೆಳೆಯಬೇಕಾಗಿದೆ. ರಂಗತಂಡವೊಂದು ಅಕ್ಕಪಕ್ಕದ
ಕಾಲೇಜುಗಳಿಗೆ ಬೇಟಿಕೊಟ್ಟು ಅಲ್ಲಿಯ ಪ್ರಮುಖರ ಮನವಲಿಸಿ ಕಾಲೇಜಿನ ನಂತರ ವಿದ್ಯಾರ್ಥಿಗಳನ್ನು ರಂಗಮಂದಿರಕ್ಕೆ
ಕಳುಹಿಸಿಕೊಡಲು ವಿನಂತಿಸಿಕೊಳ್ಳಬೇಕಿದೆ. ಅಗತ್ಯಬಿದ್ದರೆ ಮೊದಮೊದಲು ಪಾಸ್ ಗಳನ್ನು ಕೊಟ್ಟು ಯುವಕರಿಗೆ
ನಾಟಕದ ಹುಚ್ಚು ಹಿಡಿಸುವುದು ಅಗತ್ಯವಾಗಿದೆ. ಶಾಲೆ ಕಾಲೇಜುಗಳ ನೋಟೀಸ್ ಬೋರ್ಡಗಳಲ್ಲಿ ನಾಟಕದ ಪೋಸ್ಟರ್‌ಗಳನ್ನು
ಅಂಟಿಸುವ ಮೂಲಕ ಪ್ರಚಾರವನ್ನೂ ಮಾಡಬಹುದಾಗಿದೆ. ಉದಾ. ರವೀಂದ್ರ ಕಲಾಕ್ಷೇತ್ರದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ
ಐದಾರು ಕಾಲೇಜುಗಳಿವೆ. ಕಲಾಕ್ಷೇತ್ರದ ಹಿಂದಿನ ಗೇಟಿನ ಮುಂದೆಯೇ ಜೈನ್ ಕಾಲೇಜು ಇದೆ. ಆದರೆ ಇದುವರೆಗೂ
ಯಾರೂ ಈ ಕಾಲೇಜುಗಳಲ್ಲಿ ತಮ್ಮ ನಾಟಕದ ಗ್ಗೆ ಪ್ರಚಾರ ಮಾಡಿ ಯುವಕ ಯುವತಿಯರನ್ನು ರಂಗಮಂದಿರದತ್ತ ಕರೆತಂದ
ಮಾಹಿತಿಯಿಲ್ಲ. ಎಲ್ಲಾ ನಗರ ಪ್ರದೇಶಗಳಲ್ಲೂ ರಂಗತಂಡಗಳು ಸತತವಾಗಿ ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ರಂಗಭೂಮಿಗೆ ಹೊಸ ತಲೆಮಾರಿನ ಪ್ರವೇಶ ಸಾಧ್ಯವಾಗುತ್ತದೆ.
ಇವತ್ತು ಪ್ರೇಕ್ಷಕರಾಗಿ ಬಂದ ಯುವಕರು ನಾಳೆ ನಾಟಕದ ಭಾಗವಾಗಲೂಬಹುದು. ಇದರ ಜೊತೆಗೆ ಬೆಂಗಳೂರಿನಂತಹ
ಮೆಟ್ರೋ ನಗರದಲ್ಲಿ ಅನೇಕಾನೇಕ ರಂಗಭೂಮಿ ಹಾಗೂ ಸಿನೆಮಾ ಕುರಿತು ತರಬೇತಿ ಕೊಡುವ ಸಂಸ್ಥೆಗಳಿವೆ. ಅಲ್ಲಿ
ಕಲಾಸಕ್ತ ಯುವಕರು ಬಂದಿರುತ್ತಾರೆ. ಆ ಸಂಸ್ಥೆಗಳನ್ನು ಸಂಪರ್ಕಿಸಿ ಪಾಠದ ಭಾಗವಾಗಿಯೇ ವಿದ್ಯಾರ್ಥಿಗಳನ್ನು
ನಾಟಕ ನೋಡಲು ಕಳುಹಿಸಿಕೊಡಲು ವಿನಂತಿಸಿಕೊಂಡರೆ ಇನ್ನೊಂದಿಷ್ಟು ಯುವ ಪ್ರೇಕ್ಷಕರು ರಂಗಭೂಮಿಗೆ ದಕ್ಕುತ್ತಾರೆ.
ಸರಕಾರಿ
ಕೃಪಾ ಪೋಷಿತ ನಗರ ಕೇಂದ್ರಿತ ರಂಗಭೂಮಿಯ ಪರಿಸ್ಥಿತಿ ಹೀಗಿದ್ದರೆ, ಇನ್ನು ಗ್ರಾಮೀಣ ಪ್ರದೇಶಗಳ
ಪರಿಸ್ಥಿತಿ ಭಿನ್ನವಾಗಿದೆ. ನಾಟಕವೊಂದು ಇದೆಯೆಂದರೆ ಬಯಲಿಗೆ ಬಯಲೇ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬುವಷ್ಟು
ಜನ ಹಳ್ಳಿಗಳಲ್ಲಿ ಸೇರುತ್ತಾರೆ. ಗ್ರಾಮದೊಳಗಿನ ಹವ್ಯಾಸಿ ಕಲಾವಿದರು ಗ್ರಾಮಸ್ಥರ ಸಹಕಾರದೊಂದಿಗೆ ಜಾತ್ರೆಗೋ
ಇಲ್ಲವೇ ಊರಿನ ಪ್ರಮುಖ ಕಾರ್ಯಕ್ಕೋ ನಾಟಕವನ್ನು ಕಟ್ಟುತ್ತಿದ್ದರು. ಅದನ್ನು ನೋಡಲು ಅಕ್ಕಪಕ್ಕದ ಹಳ್ಳಿಯ
ಜನ ಬರುತ್ತಿದ್ದರು. ಗ್ರಾಮೀಣ ಕಲಾವಿದರು, ಕಲಾಪೋಷಕರು, ಊರ ಮುಖಂಡರು ನಾಟಕಕ್ಕೆ ಹಣ ಹಾಕಿ ಊರಿನ ಗೌರವ
ಉಳಿಸಿಕೊಳ್ಳಲು ವರ್ಷಕ್ಕೆ ಒಂದೋ ಎರಡೋ ನಾಟಕಗಳನ್ನು ಮಾಡಿಸುತ್ತಾ ಬಂದಿದ್ದರು. ಈಗ ಕೆಲವೊಂದು ಊರು
ಹಾಗೂ ಪುಟ್ಟ ಪಟ್ಟಣಗಳಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ವಿದ್ಯಾವಂತ ಯುವಕರು ಕೆಲಸ ಹುಡುಕಿ
ನಗರಗಳಿಗೆ ವಲಸೆ ಹೋಗಿದ್ದಾರೆ. ಹೀಗಾಗಿ ನಾಟಕ ಮಾಡಲೂ ಕಲಾವಿದರ ಅಭಾವ. ಇದರಿಂದಾಗಿ ನಾಟಕವನ್ನೂ ಹೊರಗುತ್ತಿಗೆ
ಕೊಡುವ ಪದ್ದತಿ ಕೆಲವು ಕಡೆಗೆ ಜಾರಿಯಲ್ಲಿದೆ. ಅದೇ ರೆಪರ್ಟರಿ ನಾಟಕಗಳು. ನೀನಾಸಂ, ಸಾಣೇಹಳ್ಳಿ, ಜಮುರಾ..
ಮುಂತಾದ ಕೆಲವು ರೆಪರ್ಟರಿ ನಾಟಕಗಳನ್ನು ಕರೆಸಿ ಪ್ರದರ್ಶಿಸುವ ಏರ್ಪಾಡು ಮಾಡಲಾಗುತ್ತದೆ. ರೆಪರ್ಟರಿಯವರೇ
ಬೆಳಕು, ಪರದೆ, ಸಂಗೀತ ಪರಿಕರಗಳ ಸಮೇತ ಬಂದು ಹತ್ತು ಹದಿನೈದು ಸಾವಿರ ರೂಪಾಯಿಗಳಿಗೆ ನಾಟಕ ಮಾಡಿ ಹೋಗುತ್ತಾರೆಂದ
ಮೇಲೆ ನಾಟಕ ನಿರ್ಮಿಸುವುದಕ್ಕಿಂತಲೂ ಹೊರಗುತ್ತಿಗೆ ಆಧಾರದಲ್ಲಿ ನಾಟಕ ಮಾಡುವುದು ಅತೀ ಸುಲಭವಾಗಿದೆ.
ಇದರಿಂದಾಗಿ ಹಳ್ಳಿಯಲ್ಲಿರುವ ಸ್ಥಳೀಯ ಕಲಾವಿದರುಗಳು ಚಲ್ಲಾಪಿಲ್ಲಿಯಾಗಿದ್ದಾರೆ. ನಾಟಕದ ನಿರ್ಮಾಣ
ಕಾರ್ಯ ಕೆಲವಾರು ಹಳ್ಳಿಗಳಲ್ಲಿ ಹಿನ್ನಡೆಗೆ ಸರಿದಿದೆ. ನಾಟಕ ಯಾವುದೇ ಇದ್ದರೂ ಪ್ರೇಕ್ಷಕರ ಉತ್ಸಾಹಕ್ಕಂತೂ
ಗ್ರಾಮೀಣ ಪ್ರದೇಶದಲ್ಲಿ ಕೊರತೆಯಿಲ್ಲ.
ಗ್ರಾಮೀಣ ರಂಗಭೂಮಿಯ ಉಳಿವು ಸ್ಥಳೀಯ ಕಲಾವಿದರನ್ನು
ಹಾಗೂ ರಂಗಪೋಷಕರನ್ನು ಆಧರಿಸಿದರೆ, ನಗರ ಕೇಂದ್ರಿತ ರಂಗಭೂಮಿಯ ಉಳಿವು ಪ್ರೇಕ್ಷಕರನ್ನು ಅವಲಂಬಿಸಿದೆ.
ಹಳ್ಳಿಗಳಲ್ಲಿ ಹೊರಗುತ್ತಿಗೆ ಆಧಾರಿತ ನಾಟಕಗಳನ್ನು ಅದೆಷ್ಟು ಕಾಲ ಮಾಡಿಸಲು ಸಾಧ್ಯ. ಅದೇ ರೀತಿ ಪಟ್ಟಣಗಳಲ್ಲಿ ಪ್ರೇಕ್ಷಕರನ್ನು ನಿರ್ಲಕ್ಷಿಸಿ ಸರಕಾರಿ ಕೃಪೆಯಿಂದ ಅದೆಷ್ಟು
ವರ್ಷಗಳ ಕಾಲ ರಂಗಭೂಮಿಯನ್ನು ಜೀವಂತವಾಗಿಡಲು ಸಾಧ್ಯ? ನಗರ ಕೇಂದ್ರಿತ ರಂಗಭೂಮಿಯ ಉಳಿವು ಹಾಗೂ ಬೆಳವಣಿಗೆಯ
ನಿಟ್ಟಿನಲ್ಲಿ ಪ್ರೇಕ್ಷಕರನ್ನು ರಂಗಕ್ರಿಯೆಯ ಪ್ರಮುಖ ಅಂಗ ಎಂದು ಪರಿಗಣಿಸಿ ರಂಗಾಸಕ್ತರನ್ನು ರಂಗಭೂಮಿಯತ್ತ
ಆಕರ್ಷಿಸುವ ಕೆಲಸವನ್ನು ಎಲ್ಲಾ ರಂಗತಂಡಗಳು, ರಂಗಕರ್ಮಿಗಳು ಹಾಗೂ ಅಕಾಡೆಮಿಗಳು ರಂಗಬದ್ದತೆಯಿಂದ ಮಾಡಲೇಬೇಕಿದೆ.
ಪ್ರೇಕ್ಷಕರೇ ಇಲ್ಲವಾದರೆ ನಾಟಕಗಳ ಪ್ರದರ್ಶನಗಳಿಗೆ ಬೆಲೆಯಿಲ್ಲ. ಪ್ರೇಕ್ಷಕರ ಅನುಪಸ್ಥಿತಿ ಹೆಚ್ಚಾದರೆ
ರಂಗಭೂಮಿಗೆ ನೆಲೆಯೂ ಇಲ್ಲ.
- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ