ಗುರುವಾರ, ಮೇ 12, 2016

ಗಮನ ಸೆಳೆಯದೆ ವಿಫಲವಾದ ಎನ್‌ಎಸ್‌ಡಿ ದ.ಭಾ ರಂಗೋತ್ಸವ :


ದಕ್ಷಿಣ ಭಾರತ ರಂಗೋತ್ಸವದ  ಉದ್ಘಾಟನೆ

ಆಧುನಿಕ ಭಾರತೀಯ ರಂಗಭೂಮಿಯಲ್ಲಿ ಹೊಸತನವನ್ನು ತರುವುದರಲ್ಲಿ ಹಾಗೂ ಸೃಜನಶೀಲ ರಂಗತಂತ್ರಗಳ ಬಳಕೆಯಲ್ಲಿ ರಾಷ್ಟ್ರೀಯ ರಂಗಶಾಲೆಯ (ಎನ್‌ಎಸ್‌ಡಿ) ಕೊಡುಗೆ ಆಪಾರವಾಗಿದೆ. ಜಾಗತಿಕ ರಂಗತರಬೇತಿ ಸಂಸ್ಥೆಗಳಲ್ಲಿ ರಾಷ್ಟ್ರೀಯ ನಾಟಕ ಶಾಲೆಗೆ ತನ್ನದೇ ಆದ ಮಹತ್ವವಿದೆ. ರಂಗಶಿಕ್ಷಣ ಹಾಗೂ ಪ್ರದರ್ಶನದಲ್ಲಿ 1959 ರಿಂದ ಮುಂಚೂಣಿಯಲ್ಲಿರುವ ಕೇಂದ್ರ ಸರಕಾರ ಪೋಷಿತ ರಾಷ್ಟ್ರೀಯ ರಂಗಶಾಲೆಯು ಭಾರತೀಯ ರಂಗಭೂಮಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಈ ನಾಟಕ ಶಾಲೆಯಿಂದಾಗಿ ಭಾರತೀಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಬಿ.ವಿ.ಕಾರಂತರಾದಿಯಾಗಿ ಅನೇಕಾನೇಕ ಪ್ರತಿಭೆಗಳು ದೊರಕಿವೆ. ದೆಹಲಿಗೆ ಹಾಗೂ ಹಿಂದಿ ಭಾಷೆಗೆ ಮಾತ್ರ ಸೀಮಿತವಾಗಿ ಕೇಂದ್ರೀಕೃತವಾಗಿದ್ದ ಎನ್‌ಎಸ್‌ಡಿಯನ್ನು ವಿಕೇಂದ್ರಿಕರಿಸಿ ಪ್ರಾದೇಶಿಕ ರಾಜ್ಯಗಳಿಗೂ ವಿಸ್ತರಿಸಬೇಕು ಎಂದು ಪ್ರಸನ್ನರಾದಿಯಾಗಿ ಅನೇಕಾನೇಕ ಕನ್ನಡ ರಂಗಕರ್ಮಿಗಳು ಹೋರಾಡುತ್ತಲೇ ಬಂದಿದ್ದಾರೆ. ಅವರೆಲ್ಲರ ಒತ್ತಡದ ಫಲವಾಗಿ ದಕ್ಷಿಣ ಭಾರತವನ್ನು ಪ್ರತಿನಿಧಿಸುವ ಎನ್‌ಎಸ್‌ಡಿ ಬೆಂಗಳೂರು ಕೇಂದ್ರ ಕರ್ನಾಟಕದ ರಾಜಧಾನಿಯಲ್ಲಿ ಆರಂಭವಾಯಿತು. ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ರಾಷ್ಟ್ರೀಯ ನಾಟಕ ಶಾಲೆ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿ ಪೂರ್ಣ ಪ್ರಮಾಣದ ನಾಟಕ ಶಾಲೆಯಾಗಿ ಅನುಷ್ಟಾನಗೊಂಡಿತು. ಬಿ.ಬಸವಲಿಂಗಯ್ಯನವರನ್ನು ನಿರ್ದೇಶಕರನ್ನಾಗಿ ಆಯ್ಕೆಮಾಡಲಾಯಿತು. ಕರ್ನಾಟಕ ಸರಕಾರವು ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಎನ್‌ಎಸ್‌ಡಿಗಾಗಿ ಮೂರು ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಹಾಗೂ ಕನ್ನಿಂಗ್‌ಹ್ಯಾಮ್ ರೋಡ್ ಪಕ್ಕ ಇರುವ ಗುರುನಾನಕ ಭವನವನ್ನು ರಂಗಪ್ರದರ್ಶನಗಳಿಗಾಗಿ ಬಿಟ್ಟು ಕೊಟ್ಟಿದೆ. ಇತ್ತೀಚೆಗೆ ಸ್ವಂತ ಕಟ್ಟಡ ಕಟ್ಟಲು ಕಲಾಗ್ರಾಮದಲ್ಲಿ ಶಿಲಾನ್ಯಾಸವನ್ನೂ ಮಾಡಲಾಗಿದೆ.

ದಕ್ಷಿಣ ಭಾರತದಿಂದಾಯ್ದ 20 ಕಲಾವಿದರಿಗೆ ಒಂದು ವರ್ಷದ ರಂಗತರಬೇತಿ, ರಂಗಪ್ರದರ್ಶನ ಹಾಗೂ ರಂಗೋತ್ಸವಗಳು ಕಳೆದ ಒಂದೂವರೆ ವರ್ಷಗಳಿಂದ ಶುರುವಾದವು. ಈಗಾಗಲೇ ಕುವೆಂಪುರವರ ಮಲೆಗಳಲಿ ಮದುಮಗಳ ಹಾಗೂ ನಾ.ದಾರವರ ಸಿರಿ ನಾಟಕಗಳನ್ನು ನಿರ್ಮಿಸಿ ಪ್ರದರ್ಶಿಸಲಾಗಿದೆ. ಕಳೆದ ವರ್ಷ ಪೌರ್ವಾತ್ಯ ರಾಜ್ಯಗಳ ರಂಗೋತ್ಸವ ಆಯೋಜಿಸಿ ಮೇಘಾಲಯ, ಸಿಕ್ಕಿಂ, ಮಣಿಪುರಿ, ಆಸ್ಸಾಮಿ ಹಾಗೂ ತ್ರಿಪುರದ ನಾಟಕಗಳನ್ನು ಪ್ರದರ್ಶಿಸಲಾಗಿತ್ತು. ಈ ವರ್ಷ ದಕ್ಷಿಣ ಭಾರತದ ದ್ವಾವಿಡ ಭಾಷೆಗಳಾದ ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡದ ಜೊತೆಗೆ ಹಲವು ಹಿಂದಿ ಭಾಷೆಯ ನಾಟಕಗಳನ್ನು ಆಹ್ವಾನಿಸಿದ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು ಎಪ್ರಿಲ್ 20 ರಿಂದ 29ರ ವರೆಗೆ ಹತ್ತು ದಿನಗಳ ದಕ್ಷಿಣ ಭಾರತ ರಂಗೋತ್ಸವವನ್ನು ಬೆಂಗಳೂರಿನ ಗುರುನಾನಕ್ ಭವನದಲ್ಲಿ ಆಯೋಜಿಸಿತ್ತು. ಈ ನಾಟಕೋತ್ಸವದ ಸಾಧಕ ಬಾಧಕಗಳನ್ನು ವಿಶ್ಲೇಷಿಸುವ ಪ್ರಯತ್ನವೇ ಈ ಲೇಖನ.


ಈ ನಾಟಕೋತ್ಸವವನ್ನು ಆಯೋಜಿಸುವ ಯೋಜನೇ ಏನೂ ಇರಲಿಲ್ಲ. ಇದಕ್ಕೆ ಮೂಲ ಕಾರಣೀಕರ್ತರಾದವರು ಬಿ.ಜಯಶ್ರೀಯವರು. ಬಿ.ಜಯಶ್ರಿಯವರು ತಮ್ಮ ಪೂರ್ವಜರ ಊರಾದ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ತಮ್ಮ ತಾತ ಗುಬ್ಬಿ ವೀರಣ್ಣನವರ ನೆನಪಿನಲ್ಲಿ ಗುಬ್ಬಿ ವೀರಣ್ಣ ರಂಗಮಂದಿರವನ್ನು ತಮ್ಮ ಸಂಸದರ ನಿಧಿಯಿಂದ ಕಟ್ಟಿಸಿದ್ದಾರೆ. ಈ ರಂಗಮಂದಿರದ ಉದ್ಘಾಟನೆಯನ್ನು ರಾಷ್ಟ್ರೀಯ ನಾಟಕೋತ್ಸವದೊಂದಿಗೆ ಮಾಡಬೇಕು ಎನ್ನುವುದು ಅವರ ಬಯಕೆಯಾಗಿತ್ತು. ಹೀಗಾಗಿ ಜಯಶ್ರೀಯವರ ಮಾತೃಸಂಸ್ಥೆಯಾದ ದೆಹಲಿಯ ರಾಷ್ಟ್ರೀಯ ರಂಗ ಶಾಲೆಯ ನಿರ್ದೇಶಕರಾದ ವಾಮನ ಕೇಂದ್ರೆಯವರನ್ನು ನಾಟಕೋತ್ಸವಕ್ಕೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡಲು ಕೇಳಿಕೊಂಡರು. ಸಂಸದೆಯ ಮಾತನ್ನು ಇಲ್ಲವೆನ್ನಲಾಗದ ಕೇಂದ್ರೆಯವರು ಗುಬ್ಬಿ ರಂಗೋತ್ಸವದ ಜೊತೆಗೆ ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ನಾಟಕೋತ್ಸವವನ್ನು ಜಂಟಿಯಾಗಿ ಆಯೋಜಿಸುವ ಯೋಜನೆ ಹಾಕಿಕೊಂಡರು. ಗುಬ್ಬಿಯಲ್ಲಿ ಪ್ರದರ್ಶನಗೊಳ್ಳುವ ಕೆಲವು ನಾಟಕಗಳನ್ನು ಎನ್‌ಎಸ್‌ಡಿ ಬೆಂಗಳೂರು ನಾಟಕೋತ್ಸವದಲ್ಲೂ ಪ್ರದರ್ಶಿಸುವುದೆಂದು ನಿರ್ಧರಿಸಲಾಯಿತು. ಹೀಗಾಗಿ ಗುಬ್ಬಿಯಲ್ಲಿ  ರಾಷ್ಟ್ರೀಯ ನಾಟಕೋತ್ಸವದ ಜೊತೆಗೆ ಬೆಂಗಳೂರಿನಲ್ಲಿ ದಕ್ಷಿಣ ಭಾರತ ರಂಗೋತ್ಸವವೂ ಸಹ ನಡೆದುಹೋಯಿತು. ಈ ನಾಟಕೋತ್ಸವವಾಗಲು ಮೂಲ ಕಾರಣೀಕರ್ತರಾದ ಬಿ.ಜಯಶ್ರೀಯವರನ್ನು ಅಭಿನಂದಿಸಲೇಬೇಕು.

ಹೊರ ರಾಜ್ಯಗಳ, ವಿಭಿನ್ನ ಭಾಷೆಗಳ ನಾಟಕಗಳು ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಬೆಂಗಳೂರಿನ ರಂಗಾಸಕ್ತ ಪ್ರೇಕ್ಷಕರಿಗೆ ಸಂತಸದ ಸಂಗತಿ. ಬೇರೆ ಶೈಲಿಯ, ವಿಭಿನ್ನ ಸಂಸ್ಕೃತಿಯ, ವಿಶಿಷ್ಟ ರಂಗತಂತ್ರಗಳ ನಾಟಕಗಳು ಪ್ರದರ್ಶನಗೊಳ್ಳುವುದನ್ನು ನೋಡುವುದೇ ಭಾಗ್ಯ. ಕಲೆಗೆ ಭಾಷೆಯ ಹಂಗೇ ಇಲ್ಲವಾದ್ದರಿಂದ ಯಾವ ಭಾಷೆಯ ನಾಟಕವಾದರೂ ಅದು ನೋಡುಗರಲ್ಲಿ ಅನುಭೂತಿಯನ್ನು ಕೊಡುತ್ತವೆ. ಹೀಗಾಗಿ ಬೇರೆ ಭಾಷೆಯ ರಂಗೋತ್ಸವ ಅಂದರೆ ಕೆಲವರಿಗೆ ಕುತೂಹಲ ಇದ್ದೇ ಇರುತ್ತದೆ. ಯುವ ರಂಗಕರ್ಮಿಗಳಿಗೆ ರಂಗವೈವಿದ್ಯತೆಗಳನ್ನು ನೋಡಿ ಹೊಸದನ್ನು ಕಲಿಯಲು ಅನುಕೂಲವೂ ಆಗುತ್ತದೆ. ಹೀಗಾಗಿ ಅಪರೂಪದ ನಾಟಕಗಳ ನಿರೀಕ್ಷೆಯಲ್ಲಿ ಕನ್ನಡ ರಂಗಾಸಕ್ತರು ಹಾಗೂ ರಂಗಕರ್ಮಿಗಳಿದ್ದರು. ಆದರೆ ಈ ನಿರೀಕ್ಷೆ ನಿರಾಸೆಯಾಗಿದ್ದೊಂದು ವಿಪರ್ಯಾಸ. ಯಾಕೆಂದರೆ ಅಸಾಧಾರಣ ನಾಟಕಗಳನ್ನು ನಿರೀಕ್ಷಿಸಿದವರಿಗೆ ಬಹುತೇಕ ಸಾಧಾರಣ ಹಾಗೂ ಕಳಪೆ ನಾಟಕಗಳು ಪ್ರದರ್ಶನಗೊಂಡಿದ್ದು ನೋಡಿ ಬೇಸರವಾಗಿದ್ದಂತೂ  ಸತ್ಯ. ಇದಕ್ಕೆಲ್ಲಾ ಕಾರಣವಾಗಿದ್ದು ನಾಟಕಗಳ ಆಯ್ಕೆಯಲ್ಲಾದ ಅವಘಡ.

ರಂಗೋತ್ಸವಕ್ಕೆ ಇಟ್ಟಿರುವ ಹೆಸರು ದಕ್ಷಿಣ ಭಾರತ ರಂಗೋತ್ಸವ ವೆಂದು  ದ್ರಾವಿಡ ಭಾಷಾ ನಾಟಕಗಳ ಪ್ರದರ್ಶವೆಂದು ಹೇಳಿ ಬಹುತೇಕ ನಾಟಕಗಳು ಹಿಂದಿಯ ಭಾಷೆಯಲ್ಲಿಯೇ ಇದ್ದವು. ಮೂರು ಕನ್ನಡ, ತಲಾ ಒಂದೊಂದು ತಮಿಳು, ತೆಲುಗು ಹಾಗೂ ಮಲಯಾಳಂ ನಾಟಕಗಳಿದ್ದರೆ ನಾಲ್ಕು ಹಿಂದಿ ಭಾಷೆಯ ನಾಟಕಗಳಿದ್ದವು. ಉತ್ತರ ಭಾರತದ ಹಿಂದಿ ಪ್ರಾಭಲ್ಯವನ್ನು ಪ್ರತಿರೋಧಿಸಿಯೇ ದಕ್ಷಿಣ ಭಾರತಕ್ಕೆ ರಾಷ್ಟ್ರೀಯ ರಂಗಶಾಲೆ ಬೇಕೆಂದು ಹಠ ಹಿಡಿದು ತರಲಾಗಿದ್ದು ಈಗ ಇತಿಹಾಸ. ದಕ್ಷಿಣ ಭಾರತದ ಕೋಟಾದಲ್ಲೂ ಈ ಹಿಂದಿ ಭಾಷೆಯವರೇ ಪ್ರಮುಖ ಪಾಲನ್ನು ಪಡೆದುಕೊಳ್ಳುತ್ತಿರುವುದು ಸಮರ್ಥನೀಯವಲ್ಲವೇ ಅಲ್ಲ. ಹತ್ತರಲ್ಲಿ ಒಂದು ಹಿಂದಿ ಭಾಷೆಯ ನಾಟಕವಾಗಿದ್ದರೆ ಆಕ್ಷೇಪಣೆ ಇರಲಿಲ್ಲ. ಆದರೆ ನಾಲ್ಕು ನಾಟಕಗಳು ಹಿಂದಿಯವರದೇ ಆಗಿದ್ದರಿಂದ ಒಂದಿಷ್ಟು ಅಸಮಾಧಾನ ಆಗಿದ್ದಂತೂ ಸುಳ್ಳಲ್ಲ.

ತುಕ್ಕೆ ಪೆ ತುಕ್ಕೆ ನಾಟಕದ ದೃಶ್ಯ
ಹೋಗಲಿ ಹಿಂದಿಯವರು ಅತ್ಯದ್ಬುತ ರೀತಿಯಲ್ಲಿ ನಾಟಕ ಮಾಡುತ್ತಾರೆ. ಅವುಗಳನ್ನು ನೋಡಿ ಬೆಂಗಳೂರಿಗರು ಧನ್ಯರಾಗಲಿ ಎಂಬುದು ಉದ್ದೇಶವಿದ್ದಲ್ಲಿ ಅದೂ ಕೂಡಾ ನೆರವೇರಲಿಲ್ಲ. ಯಾಕೆಂದರೆ  ತುಕ್ಕೆ ಪೆ ತುಕ್ಕ ಎನ್ನುವ ನಾಟಕ ಅತ್ಯಂತ ಬಾಲಿಷವಾಗಿದ್ದರೆ, ಚತುಷ್ ಕೋನ್ ನಾಟಕವನ್ನು ನಾಟಕ ಎಂದು ಹೇಳುವುದೇ ಅನುಮಾನ ಎನ್ನುವಂತಿದೆ. ತಾವೂಸ್ ಚಮನ್ ಕಿ ಮೈನಾ ಪರವಾಗಿಲ್ಲ ಎನ್ನುವ ನಾಟಕವಾದರೆ ಮೋಹೆ ಪಿಯಾ ನಾಟಕ ಮಾತ್ರ ಉತ್ತಮ ಎನ್ನುಬಹುದಾದ ಪ್ರಯೋಗವಾಗಿತ್ತು. ಎನ್‌ಎಸ್‌ಡಿ ನಾಟಕೋತ್ಸವಗಳಲ್ಲಿ  ನಾಟಕಗಳ ಆಯ್ಕೆಯ ಮಾನದಂಡಕ್ಕೆ ಏನೇನು ತೆರೆಮರೆಯ ಪ್ರಯತ್ನಗಳು ನಡೆಯುತ್ತವೋ ಗೊತ್ತಿಲ್ಲ. ಆದರೆ ಈ ದಕ್ಷಿಣ ಭಾರತ ರಂಗೋತ್ಸವದಲ್ಲಿ ಪ್ರದರ್ಶನಗೊಂಡ ಬಹುತೇಕ ನಾಟಕಗಳು ಇಂತಹ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲು ಅರ್ಹವಾಗಿರಲಿಲ್ಲ. ಎನ್‌ಎಸ್‌ಡಿ ಸಂಸ್ಥೆಯ  ನಿರ್ದೇಶಕ ಪ್ರೊ.ವಾಮನ್ ಕೇಂದ್ರೆಯವರ ನಿರ್ದೇಶನದ ಮೋಹೆ ಪೀಯಾ ನಿಜಕ್ಕೂ ಅದ್ಭುತವಾದ ನಾಟಕ ಆದರೆ ಕಳೆದ ವರ್ಷ ಇದೇ ಗುರುನಾನಕ ಭವನದಲ್ಲಿ ನಡೆದ ರಂಗಭಾರತಿ ರಾಷ್ಟ್ರಿಯ ನಾಟಕೋತ್ಸವದಲ್ಲಿ ಇದು ಈಗಾಗಲೇ ಪ್ರದರ್ಶನಗೊಂಡಿದ್ದು ಅನೇಕ ರಂಗಾಸಕ್ತರು ನೋಡಿದ್ದರು. ಈಗ ಮತ್ತೆ ಇದೇ ನಾಟಕವನ್ನು ಮರುಪ್ರದರ್ಶನಗೊಳಿಸಿದ್ದು ವಾಮನ್ ಕೇಂದ್ರೆಯವರ ನಾಟಕವೆಂಬುದಕ್ಕೆ ಎನ್ನುವುದು ನಿರ್ವಿವಾದ. ತಾವೇ ಮುಖ್ಯಸ್ತರಾದ ಸಂಸ್ಥೆಯ ನಾಟಕೋತ್ಸವದಲ್ಲಿ ತಮ್ಮದೇ ನಾಟಕವನ್ನು ಪ್ರದರ್ಶಿಸಲು ತಾವೇ ಅವಕಾಶ ಮಾಡಿಕೊಳ್ಳುವುದು ಸ್ವಾರ್ಥಹಿತಾಸಕ್ತಿಯಾಗಿದೆಯಾದರೂ ನಾಟಕ ತುಂಬಾ ಚೆನ್ನಾಗಿರುವುದರಿಂದ ಈ ಆಪಾದನೆ ಡೈಲ್ಯೂಟ್ ಆಗುವಂತಿದೆ.


ಆಗಮನ ನಾಟಕದ ದೃಶ್ಯ
ಅದ್ಯಾಕೋ ಎನ್‌ಎಸ್‌ಡಿ ಅಂದರೆ ಅದು ಎನ್‌ಎಸ್‌ಡಿಯವರ ಹಿತಾಸಕ್ತಿಗಾಗಿ ಮಾತ್ರ ಇದೆ ಎನ್ನುವುದು ಬಹುತೇಕ ಸಂದರ್ಭದಲ್ಲಿ ಸಾಬೀತಾಗಿದೆ.  ಈಗಲೂ ಸಹ ಈ ನಾಟಕೋತ್ಸವದ ಹತ್ತು ನಾಟಕಗಳಲ್ಲಿ ಏಳು ನಾಟಕಗಳು ಎನ್‌ಎಸ್‌ಡಿ ಪದವೀಧರರೇ ನಿರ್ದೇಶನ ಮಾಡಿದ್ದಾಗಿವೆ. ಜನರ ದುಡ್ಡಲ್ಲಿ ನಡೆಯುವ ಸಂಸ್ಥೆಯೊಂದು ಭಾರತದ ಸಮಗ್ರ ರಂಗಭೂಮಿಯನ್ನು ಪ್ರತಿನಿಧಿಸುವಂತಿರಬೇಕು ಎನ್ನುವುದು  ಸಾರ್ವಜನಿಕರ ಅಪೇಕ್ಷೆಯಾಗಿದೆ. ಆದರೆ.. ಎನ್‌ಎಸ್‌ಡಿ ಇರುವುದೇ ಅಲ್ಲಿ ತರಬೇತಾಗಿ ಬಂದ ಪದವೀಧರರ ಅನುಕೂಲಕ್ಕಾಗಿ ಎಂದುಕೊಂಡಿದ್ದು ರಾಷ್ಟ್ರೀಯ ನಾಟಕ ಶಾಲೆಯ ಪದಾಧಿಕಾರಿಯಾದವರ ಅಘೋಷಿತ ನಂಬಿಕೆಯಾಗಿದೆ. ಹೀಗಾಗಿ ಬಹುತೇಕ ಎನ್‌ಎಸ್‌ಡಿ ನಾಟಕೋತ್ಸವದಲ್ಲಿ ಹೆಚ್ಚಿನ ಪಾಲನ್ನು ಪಡೆಯುವುದು ಎನ್‌ಎಸ್‌ಡಿ ಪದವೀದರರೇ ಆಗಿದ್ದಾರೆ. ಇದರಿಂದಾಗಿ ಎನ್‌ಎಸ್‌ಡಿ ಎನ್ನುವುದು ಮೊದಲಿನಿಂದ ಸಮಗ್ರ ರಂಗಭೂಮಿಯ ಭಾಗವಾಗದೇ ತನ್ನದೇ ಪ್ರತ್ಯೇಕ ಸಾಮ್ರಾಜ್ಯವನ್ನು ಕಟ್ಟಿಕೊಂಡು ದ್ವೀಪದಂತಾಗಿದೆ. ಯಾವಾಗ ಎನ್‌ಎಸ್‌ಡಿ ಯೇತರ ರಂಗಕರ್ಮಿಗಳನ್ನು ಎನ್‌ಎಸ್‌ಡಿ ನಿರ್ಲಕ್ಷಿಸುವುದೋ  ಆಗ ಬೇರೆ ರಂಗಕರ್ಮಿಗಳು ಎನ್‌ಎಸ್‌ಡಿಯನ್ನು ದೂರವೇ ಇಟ್ಟಿದ್ದಾರೆ. ಈ ಎನ್‌ಎಸ್‌ಡಿ ಮತ್ತು ನಾನ್ ಎನ್‌ಎಸ್‌ಡಿಗಳ ನಡುವಿನ ಅಂತರ ಮೊದಲಿನಿಂದಲೂ ಹೆಚ್ಚುತ್ತಲೇ ಇದೆ. ಇದರ ಪರಿಣಾಮವನ್ನು ಈ ನಾಟಕೋತ್ಸವದಲ್ಲೂ ಕಾಣಬಹುದಾಗಿದೆ. ಬೆಂಗಳೂರಿನ ಬಹುತೇಕ ರಂಗಕರ್ಮಿ ಕಲಾವಿದರುಗಳು ಈ ನಾಟಕೋತ್ಸವಕ್ಕೆ ಅಘೋಷಿತ ನಿರ್ಲಕ್ಷತೋರಿ ರಂಗೋತ್ಸವದಿಂದ ದೂರವೇ ಉಳಿದಿದ್ದರಿಂದ ನಾಟಕೋತ್ಸವದಾದ್ಯಂತ ಪ್ರೇಕ್ಷಕರ ಕೊರತೆ ಎದ್ದು ಕಾಣುವಂತಿತ್ತು.

ಕುದುರೆ ಮೊಟ್ಟೈ  ತಮಿಳು ನಾಟಕದ ದೃಶ್ಯ
ದ್ರಾವಿಡ ಭಾಷೆಯ ನಾಟಕಗಳ ಆಯ್ಕೆಯಲ್ಲೂ ಸಹ ಮುತುವರ್ಜಿ ವಹಿಸಲಾಗಿಲ್ಲ. ಮಲಯಾಳಿ ನಾಟಕ ಹಾಗೂ ಕನ್ನಡದ ಮುಖ್ಯಮಂತ್ರಿ ನಾಟಕ ಹೊರತು ಪಡಿಸಿದರೆ ಮಿಕ್ಕ ನಾಟಕಗಳಿಗೆ ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ಅರ್ಹತೆಯ ಬಗ್ಗೆ ಅನುಮಾನಗಳಿವೆ. ತೆಲುಗು ತಮಿಳು ನಾಟಕಗಳಂತೂ ಇನ್ನೂ ಆಧುನಿಕ ರಂಗಭೂಮಿಯ ವಸ್ತು ವಿನ್ಯಾಸ ವ್ಯಾಕರಣಗಳಿಗಿಂತ ಹಿಂದುಳಿದಂತೆ ಕಂಡುಬರುತ್ತವೆ. ನಾಟಕವೊಂದರ ಕೊನೆಗೆ ವೇದಿಕೆಯ ಮೇಲೆ ಮಾತಾಡುತ್ತಾ ನಾಟಕಕಾರ ರಾಜಪ್ಪ ದಳವಾಯಿಯವರು ಈ ನಾಟಕೋತ್ಸವದಲ್ಲಿ ಮೂರ್ಖತನದ ನಾಟಕಗಳ ಸೀರಿಯಲ್ ಪ್ರದರ್ಶನಗೊಂಡಂತಿದೆ ಎಂದು ಒಂದೇ ವಾಖ್ಯದಲ್ಲಿ ತಮ್ಮ ವಿಮರ್ಶೆಯನ್ನು ಹೇಳಿದರು. ಅವರು ಹೇಳಿದ್ದರಲ್ಲೂ ಸತ್ಯವಿತ್ತು. ತುಕೆ ಪೆ ತುಕ್ಕ, ತಮಾಶ, ಆಗಮನ, ಕುದಿರೈ ಮುಟ್ಟೈ.. ಈ ನಾಲ್ಕೂ ನಾಟಕಗಳೂ ಮೂರ್ಖತನದ ಪ್ರದರ್ಶನವನ್ನೇ ನಾಟಕದ ವಸ್ತುವಾಗಿ ಆಯ್ಕೆ ಮಾಡಿಕೊಂಡಿದ್ದವು. ಹೀಗಾಗಿ ಇಡೀ ನಾಟಕೋತ್ಸವ ಅಳಿದುಳಿದ ನೋಡುಗರ ಗಮನ ಸೆಳೆಯುವಲ್ಲಿ ವಿಫಲವಾಯಿತು. ಕೊಟ್ಟ ಕಡೆಯ ದಿನ ಪ್ರದರ್ಶನಗೊಂಡ ಚರಿತ್ರಪುಸ್ತಕತಿಲೆಕ್ಕು ಒರೇಡು ನಾಟಕ ಮಾತ್ರ ತನ್ನ ಅದ್ಬುತವಾದ ಪ್ರೆಜಂಟೇಶನ್ನಿನಿಂದಾಗಿ ಗಮನ ಸೆಳೆಯಿತು.

ಧಾರವಾಡ ರಂಗಾಯಣದ ತಮಾಶ ನಾಟಕದ ದೃಶ್ಯ
ಸರಕಾರಿ ಅನುದಾನಿತ ಸಂಸ್ಥೆಗಳಿಗೆ ಸಾಮಾಜಿಕ ಬದ್ಧತೆ ಎನ್ನುವುದು ಇರಲೇಬೇಕು. ಎನ್‌ಎಸ್‌ಡಿ ಯಂತಹ ಕೇಂದ್ರ ಸರಕಾರ ಪ್ರಾಯೋಜಿತ ಸಂಸ್ಥೆಯು ನಾಟಕೋತ್ಸವ ಮಾಡುತ್ತದೆ ಎಂದರೆ ಅದರಲ್ಲಿ ಪ್ರದರ್ಶನಗೊಳ್ಳುವ ನಾಟಕಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಇರಬೇಕಾದದ್ದು ಅಪೇಕ್ಷಣೀಯ. ಆದರೆ.. ಈ ನಾಟಕೋತ್ಸವದಲ್ಲಿ ಆಯ್ಕೆಯಾದ ಕೆಲವು ನಾಟಕಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವಂತಿದ್ದದ್ದು ವಿಪರ್ಯಾಸಕರ. ಉದಾಹರಣೆಗೆ. ಧಾರವಾಡ ರಂಗಾಯಣ ನಿರ್ಮಿಸಿದ ತಮಾಶ ನಾಟಕ. ಇಡೀ ನಾಟಕದಲ್ಲಿ ಕಥೆ ನಾಟಕೀಯತೆ ಏನೂ ಇಲ್ಲದೇ ಕೇವಲ ದ್ವಂದ್ವಾರ್ಥ ಸಂಭಾಷಣೆ ಹಾಗೂ ಡಬಲ್ ಮೀನಿಂಗ ಇರುವ ದೃಶ್ಯಗಳನ್ನು ಕಟ್ ಆಂಡ್ ಪೇಸ್ಟ್ ಮಾಡಿ ನಾಟಕವೆಂದು ಕಟ್ಟಿಕೊಟ್ಟಿದ್ದಾರೆ. ಪ್ರೇಕ್ಷಕರ ಮನದಾಳದಲ್ಲಿರಬಹುದಾದ ವಿಕೃತಿಯನ್ನು ಉದ್ದೀಪನಗೊಳಿಸುವ ಕೆಲಸವನ್ನು ಮಾಡುವ ಈ ನಾಟಕವು ಮನರಂಜನೆಯ ಹೆಸರಲ್ಲಿ ನೋಡುಗರ ಮನಸ್ಸಿನ ಸ್ವಾಸ್ಥ್ಯವನ್ನು ಹಾಳುಮಾಡುವಂತಿದೆ. ಇದೇ ರೀತಿ ಸುರೇಶ್ ಆನಗಳ್ಳಿ ನಿರ್ದೇಶನದ ಆಗಮನ ನಾಟಕವೂ ಸಹ ಸೌಹಾರ್ಧತೆಗೆ ವ್ಯತಿರಿಕ್ತವಾದ ಸೇಡಿಗೆ ಸೇಡು ಎನ್ನುವ ನಕಾರಾತ್ಮಕ ಸಂದೇಶವನ್ನು ಹೇಳುವಂತಿದೆ. ಯುವತಿಯೊಬ್ಬಳು ತಮ್ಮ ಮೇಲಾದ ದೌರ್ಜನ್ಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಹಣಬಲದಿಂದ ಇಡೀ ಊರನ್ನೇ ಭ್ರಷ್ಟಗೊಳಿಸುವ ಕೆಲಸವನ್ನು ನಿಷ್ಟೆಯಿಂದ ಮಾಡುತ್ತಾಳೆ. ಊರಿನ ಸೌಹಾರ್ಧ ಸಂಬಂಧಗಳನ್ನು ಹಾಳು ಮಾಡುತ್ತಾಳೆ. ಇಂತಹ ನಕಾರಾತ್ಮಕ ಸಂದೇಶ ಸಾರುವಂತಹ ದ್ವೇಷಮಯ ನಾಟಕವು ಸರಕಾರಿ ಸಂಸ್ಥೆಯೊಂದು ಪ್ರಾಯೋಜಿಸಿದ ನಾಟಕೋತ್ಸವದಲ್ಲಿ ಪ್ರದರ್ಶಿಸುವುದು ಸೂಕ್ತವಲ್ಲವೇ ಅಲ್ಲ. ಇನ್ನೊಂದು ತುಕ್ಕೆ ಪೆ ತುಕ್ಕ ಎನ್ನುವ ಹಿಂದಿ ನಾಟಕದಾದ್ಯಂತ ವಿದೂಷಕರಾಟವೇ ಅನಾವರಣಗೊಂಡಿದೆ. ಹಾಸ್ಯಕ್ಕಾಗಿಯೇ ಹಾಸ್ಯ ಎನ್ನುವಂತಹ ಅಪಹಾಸ್ಯದ ನಾಟಕವನ್ನು ಈ ನಾಟಕೋತ್ಸವದಲ್ಲಿ ಪ್ರದರ್ಶಿಸಲು ಯಾರು ಅವಕಾಶ ಕೊಟ್ಟರೋ ಗೊತ್ತಿಲ್ಲ.


ಚತುಷ್ಕೋನ  ಹಿಂದಿ ನಾಟಕದ ದೃಶ್ಯ
ಚತುಷ್‌ಕೊನ್ ಎನ್ನುವ ಇನ್ನೊಂದು ಹಿಂದಿ ನಾಟಕದಾದ್ಯಂತ ಬರೀ ಹೆಂಡ ಮತ್ತು ಹಾದರವೇ ತುಂಬಿದೆ. ನಾಟಕದ ಮುಕ್ಕಾಲು ಪಾಲು ದೃಶ್ಯಗಳಲ್ಲಿ ಕುಡಿತವೇ ಖಾಯಂ ಆಗಿದೆ. ವೇದಿಕೆ ಮೇಲೆ ಬಾರ್‌ಕೌಂmರ್ ಓಪನ್ ಮಾಡಲಾಗಿದ್ದು ಮಧ್ಯಪ್ರೀಯರಿಗೆ ಆನಂದವನ್ನುಂಟು ಮಾಡುವಂತಿದೆ. ಜೊತೆಗೆ ಮಹಿಳೆಯೊಬ್ಬಳು ಆಸ್ತಿಗಾಗಿ ತನ್ನ ಯೌವನವನ್ನು ಬಳಸಿಕೊಂಡು ಮತ್ತೊಬ್ಬನಿಂದ ಗಂಡನ ಕೊಲೆ ಮಾಡಿಸುವುದೇ ಈ  ನಾಟಕದ ವಸ್ತುವಾಗಿದೆ. ಸಂಚು ವಂಚನೆ ಕುಡಿತ ಹಾದರಗಳ ಆಡಂಬೋಲವಾದ ಈ ನಾಟಕ ನೋಡುಗರ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವಂತಿದ್ದು ಸರಕಾರಿ ಸಂಸ್ಥೆಯೊಂದರ ನಾಟಕೋತ್ಸವದಲ್ಲಿ ಅದು ಹೇಗೆ ಅವಕಾಶ ಪಡೆಯಿತು ತನ್ನುವುದೇ ಯಕ್ಷಪ್ರಶ್ನೆ. ತಮಿಳಿನ ಕುದುರೆ ಮೊಟ್ಟೈ ನಾಟಕ ಅದೆಷ್ಟು ಬಾಲಿಷವಾಗಿತ್ತೆಂದರೆ ನೋಡುಗರು ತೂಕಡಿಸುವಷ್ಟು. ದ್ವಾರಕೀಶ ಅಭಿನಯದ ಗುರುಶಿಷ್ಯರು ಸಿನೆಮಾವನ್ನೇ ಹೋಲುವಂತಹ, ಕನ್ನಡದ ಗಾಂಪರ ಗುಂಪು ಕಥೆಯನ್ನೇ ವೇದಿಕೆಯ ಮೇಲೆ ಯಥಾವತ್ತಾಗಿ ತಂದಿದ್ದಾರೆ. ಗುರು ಶಿಷ್ಯರ ಮೂರ್ಖತನವನ್ನೇ ಹೇಳುವ ಈ ನಾಟಕ ಸಮಾಜಕ್ಕೆ ಕೊಡುವ ಕೊಡುಗೆ ಮಾತ್ರ ಶೂನ್ಯ. ತೆಲುಗಿನ ನಾಯಕುರಾಲು ನಾಗಮ್ಮ ನಾಟಕ ಹೊಡೆಸಿದಷ್ಟು ಬೋರು ಬೇರೆ ಯಾವುದೇ ನಾಟಕವೂ ಹೊಡೆಸಲಿಲ್ಲ. ಅದ್ಯಾರು ಇಂತಹ ನಾಟಕಗಳನ್ನು ಆಯ್ಕೆ ಮಾಡಿದರೋ ಗೊತ್ತಿಲ್ಲ. ಆದರೆ ಇಡೀ ನಾಟಕೋತ್ಸವದ ಆಶಯ ಇಂತಹ ನಕಾರಾತ್ಮಕ ಸಂದೇಶಗಳ ನಾಟಕಗಳಿಂದಾಗಿ ಹಾಳಾಗಿಹೋಗಿದ್ದಂತೂ ಸುಳ್ಳಲ್ಲ.


ಖಾಲಿ ಖಾಲಿ ಸಭಾಂಗಣ
ಬೆಂಗಳೂರಿನ ಪ್ರೇಕ್ಷಕರು ಬಲು ಪ್ರಜ್ಞಾವಂತರು. ಉತ್ತಮವಾದ ನಾಟಕಗಳಿಗೆ ಬಲು ಬೇಗ ಸ್ಪಂದಿಸುತ್ತಾರೆ. ನಾಟಕ ಹಿಡಿಸದಿದ್ದರೆ ರಂಗಮಂದಿರದಿಂದಲೇ ದೂರಾಗುತ್ತಾರೆ. ಹೀಗಾಗಿ ನಾಟಕಗಳು ಸೊರಗುತ್ತಿದ್ದಂತೆ ದಿನದಿಂದ ದಿನಕ್ಕೆ ಪ್ರೇಕ್ಷಕರು ಕರಗತೊಡಗಿದರು. ಮೂವತ್ತು ಲಕ್ಷ ರೂಪಾಯಿಯ ನಾಟಕೋತ್ಸವ ಎಂದ ಮೇಲೆ ಪ್ರಚಾರವನ್ನೂ ಹೆಚ್ಚೇ ಕೊಡಬೇಕಾಗಿತ್ತು. ಅಂದಾಜು ಮೂರು ಲಕ್ಷ ರೂಪಾಯಿ ಖರ್ಚಿನ ಒಂದೊಂದು ನಾಟಕಕ್ಕೂ ಕನಿಷ್ಟ ಇನ್ನೂರು ಜನರೂ ಬಂದು ನೋಡಲಿಲ್ಲ ಎಂದರೆ ಯಾರಿಗೋಸ್ಕರ ಈ ನಾಟಕೋತ್ಸವ ಎನ್ನುವ ಪ್ರಶ್ನೆ ಏಳುತ್ತದೆ. ಫೇಸ್‌ಬುಕ್ ವಾಟ್ಸಾಪ್‌ಗಳನ್ನೇ ನಂಬಿಕೊಂಡ ಬಸವಲಿಂಗಯ್ಯನವರು ಬೇರೆ ಪ್ರಚಾರ ತಂತ್ರಗಳಿಗೆ ಅಷ್ಟೊಂದು ಮಹತ್ವ ಕೊಡಲೇ ಇಲ್ಲ. ಕೆಲವು  ಆಯ್ದ ರಂಗಕರ್ಮಿಗಳಿಗೆ ಆಹ್ವಾನ ಪತ್ರಗಳನ್ನು ಪೋಸ್ಟ್ ಮೂಲಕ ಕಳುಹಿಸಿದರಾದರೂ ಅವು ಬಹುತೇಕರಿಗೆ ತಲುಪಿದ್ದು ನಾಟಕೋತ್ಸವ ಅರ್ಧ ಮುಗಿದ ನಂತರ. ಕಳೆದ ಸಲದ ನಾಟಕೋತ್ಸವದಲ್ಲಿ ಸಿ.ಬಸವಲಿಂಗಯ್ಯನವರು ಹೆಚ್ಚು ಆಸಕ್ತಿ ವಹಿಸಿ.. ಬಹುತೇಕರಿಗೆ ಪರ್ಸನಲ್ ಆಗಿ ಪೋನ್ ಮಾಡಿ ಆಹ್ವಾನಿಸಿದ್ದರಿಂದ ಪ್ರೇಕ್ಷಕರು ಕಿಕ್ಕಿರಿದಿದ್ದರು. ತೆಲುಗಿನ ಸುರಭಿ ತಂಡದ ಮಾಯಾಬಜಾರ್ ನಾಟಕಕ್ಕಂತೂ ಜನ ಕಿಕ್ಕಿರಿದು ಕೂಡಲೂ ಜಾಗವಿರಲಿಲ್ಲ. ಆದರೆ... ಈ ಸಲ ಸಿ.ಬಸವಲಿಂಗಯ್ಯನವರು ಸಿನೆಮಾ, ಸೀರಿಯಲ್‌ಗಳಲ್ಲಿ ಅಭಿನಯಿಸುವುದಕ್ಕೆ ತಮ್ಮ ಸಮಯವನ್ನು ಕೊಟ್ಟಿದ್ದರಿಂದಲೋ.. ಇಲ್ಲವೇ ಅರಸು ರಂಗೋತ್ಸವ ಎನ್ನುವ ಸರಕಾರಿ ಪ್ರಾಜೆಕ್ಟಿನ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷತೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದರಿಂದಲೋ ತಮ್ಮ ದಕ್ಷಿಣ ಭಾರತ  ಎನ್‌ಎಸ್‌ಡಿ ನಾಟಕೋತ್ಸವಕ್ಕೆ ರಂಗಾಸಕ್ತರನ್ನು ಮೊಬಲೈಸ್ ಮಾಡಲು ಸಾಧ್ಯವಾಗಲೇ ಇಲ್ಲ. ತಮ್ಮ ಮೇಲಿನ ಹೊಣೆಗಾರಿಕೆಯನ್ನು ಹೊರಗುತ್ತಿಗೆ ಕೊಡುವ ಮೂಲಕ ಕನ್ನಡ ರಂಗಭೂಮಿಯಲ್ಲಿ ಅಪಾಯಕಾರಿ ಪ್ರವೃತ್ತಿಗೆ ಚಾಲನೆಯನ್ನಿತ್ತರು.

ಹೊರಗುತ್ತಿಗೆ ಎನ್ನುವುದು ಕಾರ್ಪೊರೇಟ್ ಸಂಸ್ಕೃತಿಯಾಗಿದ್ದು.. ಒಂದು ಕಂಪನಿ ತನ್ನ ಹೆಚ್ಚುವರಿ ಕೆಲಸವನ್ನು ಬೇರೆಯವರಿಗೆ ಗುತ್ತಿಗೆ ಕೊಡುವ ಮೂಲಕ ಮಾಡಿಸುವಂತಹುದ್ದಾಗಿದೆ. ಇದಕ್ಕೆ ಔಟ್ ಸೋರ್ಸಿಂಗ್ ಅಂದರೆ ಹೊರಗುತ್ತಿಗೆ ಎನ್ನುತ್ತಾರೆ. ರಂಗಭೂಮಿಯಲ್ಲೂ ಸಹ ಈ ಅನಿಷ್ಟ ಹೊರಗುತ್ತಿಗೆ ವ್ಯವಹಾರವನ್ನು ಸಿ.ಬಸವಲಿಂಗಯ್ಯನವರು ಆರಂಭಿಸಿ ತಮ್ಮ ಮೇಲಿನ ಭಾರವನ್ನು ಕಡಿಮೆ ಮಾಡಿಕೊಳ್ಳಲು ನೋಡಿದರು. ಇಡೀ ನಾಟಕೋತ್ಸವ ಕುರಿತ ಮುದ್ರಣ, ಪ್ರಸರಣ ಮತ್ತು ಪ್ರಚಾರವನ್ನು ಬೇರೆಯವರಿಗೆ ಗುತ್ತಿಗೆ ಕೊಟ್ಟರು. ಆದರೆ ಗುತ್ತಿಗೆ ಪಡೆದವರ ಕಾರ್ಯತತ್ಪರತೆಯನ್ನು ಮಾನಿಟರ್ ಮಾಡುವ ಹಾಗೂ ನಿಯಂತ್ರಿಸುವಷ್ಟು ಸಮಯ ಬಸವಲಿಂಗಯ್ಯನವರಿಗಿರಲಿಲ್ಲ. ಹೀಗಾಗಿ ಪೋಸ್ಟ್ ಮಾಡಿದ ಕಾರ್ಯಕ್ರಮಗಳ ವಿವರದ ಆಹ್ವಾನ ಪತ್ರಗಳು ನಾಟಕೋತ್ಸವ ಆರಂಭಗೊಂಡು ಮೂರ‍್ನಾಲ್ಕು ದಿನಗಳಾದ ಮೇಲೆ ತಲುಪಿದವು. ಎಲ್ಲಾ ನಾಟಕಗಳ ವಿವರಗಳಿರುವ ಬ್ರೋಷರ್ ಮುದ್ರಣಗೊಂಡು ಪ್ರೇಕ್ಷಕರಿಗೆ ಹಂಚಿಕೆಯಾಗಿದ್ದು ನಾಟಕೋತ್ಸವ ಆರಂಭವಾಗಿ ನಾಲ್ಕು ದಿನಗಳ ಮೇಲೆ. ಈ ರೀತಿಯ ಹೊರಗುತ್ತಿಗೆ ಬೇಕಿತ್ತಾ?.  ಎನ್‌ಎಸ್‌ಡಿ ಬೆಂಗಳೂರು ಕೇಂದ್ರದಲ್ಲಿ ದಿನದಿಪ್ಪತ್ತನಾಲ್ಕು ಗಂಟೆಯೂ ಸಿಗುವ ೨೦ ವಿದ್ಯಾರ್ಥಿಗಳಿದ್ದಾರೆ. ಜೊತೆಗೆ ಈ ನಾಟಕೋತ್ಸವಕಾಗಿಯೇ ಸಂಬಳ ಕೊಟ್ಟು ನಿಯಮಿಸಿಕೊಂಡ ವಾಲೆಂಟರುಗಳೂ ಇದ್ದಾರೆ. ಇವರ ನೆರವನ್ನು ಪಡೆದು ವಿಳಾಸ ಬರೆದು ಸಕಾಲಕ್ಕೆ ಪೋಸ್ಟ್ ಮಾಡುವುದು ಅಂತಹ ದೊಡ್ಡ ಕೆಲಸವೇ ಅಲ್ಲ. ಆದರೆ ದೊಡ್ಡ ಪ್ರಮಾಣದ ಹಣದ ಖರ್ಚು ತೋರಿಸಬೇಕಲ್ಲಾ. ಅದಕ್ಕಾಗಿ ಈ ಹೊರಗುತ್ತಿಗೆ ವ್ಯಾಪಾರ ಎಂಬುದು ಕೆಲವು ರಂಗಕರ್ಮಿಗಳ ಆರೋಪವೂ ಆಗಿದೆ. ಸೆಟ್ ಪ್ರಾಪರ್ಟಿಗಳ ತಯಾರಿಯಿಂದ ಹಿಡಿದು ಪ್ರಚಾರದವರೆಗೆ ನಾಟಕೋತ್ಸವದ ಬಹುತೇಕ ಕೆಲಸಗಳನ್ನು ಹೊರಗುತ್ತಿಗೆ ಕೊಡಲಾಗಿದೆ. ಈ ಕೆಲಸವನ್ನು ರಂಗಭೂಮಿಯಲ್ಲಿರುವವರಿಗೆ ಕೊಟ್ಟಿದ್ದರೆ, ಕೆಲವರಿಗೆ ಒಂದಿಷ್ಟು ಕೆಲಸವಾದರೂ ಸಿಗುತ್ತಿತ್ತು. ಗುತ್ತಿಗೆದಾರರ ಬದಲು ರಂಗಜೀವಿಗಳಿಗೆ ಒಂದಿಷ್ಟು ಕೇಂದ್ರ ಸರಕಾರದ ಹಣವಾದರೂ ದಕ್ಕುತ್ತಿತ್ತು. ಕೇಂದ್ರ ಸರಕಾರದ ಹಣದಲ್ಲಿ ಕೇವಲ ಎನ್ ಎಸ್ ಡಿಯವರು ಹಾಗೂ ಗುತ್ತಿಗೆದಾರರು ಮಾತ್ರ ಬದುಕಬೇಕೆಂದರೆ ಕನ್ನಡ ರಂಗಭೂಮಿಯವರು ಏನು ಮಾಡಬೇಕು?


ಬಸವಲಿಂಗಯ್ಯನವರಿಗೆ ಸಂಘಟನಾತ್ಮಕ ಸಾಮರ್ಥ್ಯ ಬೇಕಾದಷ್ಟಿದೆ. ಎರಡು ವರ್ಷಗಳ ಹಿಂದೆ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದ ನಿರ್ದೇಶಕರಾಗಿ ಯಶಸ್ವಿಗೊಳಿಸಿದ್ದರು. ಮಲೆಗಳಲಿ ಮದುಮಗಳು ಎನ್ನುವ ಮೆಘಾ ನಾಟಕದ ಮೂರು ಅವತರಣಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕಳೆದ ಸಲವೂ ಸಹ ಎನ್‌ಎಸ್‌ಡಿ ಪೌರ್ವಾತ್ಯ ರಂಗೋತ್ಸವವನ್ನೂ ಸಹ ಉತ್ತಮ ರೀತಿಯಲ್ಲಿ ಆಯೋಜಿಸಿದ್ದರು. ಆದರೆ.. ಈ ಸಲ ಅದ್ಯಾಕೆ ನಾಟಕಗಳ ಆಯ್ಕೆ ಹಾಗೂ ನಾಟಕೋತ್ಸವದ ಆಯೋಜನೆಯಲ್ಲಿ ವಿಫಲರಾದರು ಎನ್ನುವುದು ಅರ್ಥವಾಗುತ್ತಿಲ್ಲ. ಮಿತಿಮೀರಿದ ಕೆಲಸಗಳ ಭಾರವನ್ನು ಹೊತ್ತಿದ್ದರಿಂದಾಗಿ ಯಾವುದಕ್ಕೂ ಸಂಪೂರ್ಣ ನ್ಯಾಯ ಸಲ್ಲಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಜೊತೆಗೆ ಡಿ.ಎಸ್.ಚೌಗಲೆ ಹಾಗೂ ಪ್ರಕಾಶ ಗರೂಡರಂತವರನ್ನು ಜೊತೆಗೆ ಇಟ್ಟುಕೊಂಡಿದ್ದರಿಂದ ದಿಕ್ಕು ತಪ್ಪಿದಂತಾಗಿದ್ದಾರೆ. ಹೆಸರಿಗೆ ಮಾತ್ರ ಡಾ.ಕೆ.ಮರುಳಸಿದ್ದಪ್ಪನವರನ್ನು ಈ ನಾಟಕೋತ್ಸವದ ಅಧ್ಯಕ್ಷರನ್ನಾಗಿಸಿದ್ದಾರಾದರೂ ಅವರಿಗೆ ಯಾವುದೇ ನೀತಿ ನಿರ್ಧಾರಗಳಲ್ಲಿ ನಿಯಂತ್ರಣವಿಲ್ಲ. ಹೀಗಾಗಿ ಬಸವಲಿಂಗಯ್ಯನವರು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆಗಳ ನಿರ್ದೇಶಕರುಗಳ ಸಹಕಾರ ಪಡೆದುಕೊಂಡಂತೆ ಕನ್ನಡ ರಂಗಭೂಮಿಯ  ಕ್ರಿಯಾಶೀಲ ರಂಗತಂಡಗಳನ್ನು ಹಾಗೂ ರಂಗಕರ್ಮಿ ಕಲಾವಿದರನ್ನು ಒಳಗೊಂಡಂತೆ ಎನ್‌ಎಸ್‌ಡಿಯನ್ನು ಕಟ್ಟಿದರೆ  ಎನ್‌ಎಸ್‌ಡಿ ಹಾಗೂ ನಾನ್ ಎನ್‌ಎಸ್‌ಡಿಗಳ ನಡುವಿರುವ ಅಂತರವನ್ನು ಕಡಿಮೆಮಾಡಿ ಸೌಹಾರ್ಧಯುತವಾದ ವಾತಾವರಣವನ್ನು ನಿರ್ಮಿಸಬಹುದಾಗಿದೆ. ಎನ್‌ಎಸ್‌ಡಿ ಎನ್ನುವ ದ್ವೀಪವನ್ನು  ಕನ್ನಡ ರಂಗಭೂಮಿ ಎನ್ನುವ ಕಡಲಲ್ಲಿ ಒಂದಾಗಿಸಬೇಕಿದೆ. ಜೊತೆಗೆ ದಿನಪತ್ರಿಕೆಗಳಲ್ಲಿ ಬಂದರೆ ಮಾತ್ರ ಪ್ರಚಾರ ಎನ್ನುವ ಭ್ರಮೆಯನ್ನು ಬಿಟ್ಟು ರಂಗಭೂಮಿಗೆ ಮೀಸಲಾದ ಪತ್ರಿಕೆಗಳಿಗೂ ಪ್ರಾಮುಖ್ಯತೆ ಕೊಡುವ ಅಗತ್ಯವಿದೆ. ಯಾಕೆಂದರೆ ಈ ಎಲ್ಲಾ ನಾಟಕೋತ್ಸವಗಳನ್ನು ದಾಖಲಿಸುವ ಕೆಲಸವನ್ನು ರಂಗಪತ್ರಿಕೆಗಳು ಮಾಡುತ್ತವೆ. ದಿನಪತ್ರಿಕೆಗಳಲಿ ಬರುವ ಪುಟ್ಟ ವರದಿಗಳಿಗಿಂತಾ ರಂಗಪತ್ರಿಕೆಗಳಲಿ ಬರುವ ಲೇಖನ ಹಾಗೂ ವಿಮರ್ಶೆಗಳು ರಂಗದಾಖಲೆಯಲ್ಲಿ ಬಹುದೊಡ್ಡ ಕೆಲಸವನ್ನು ಮಾಡುತ್ತವೆ ಎನ್ನುವ ಅರಿವು ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ರೂವಾರಿಗಳಿಗೆ ಇರಬೇಕಾಗಿದೆ.  


ಮುಖ್ಯಮಂತ್ರಿ ನಾಟಕದ ದೃಶ್ಯ
ಈ ನಾಟಕೋತ್ಸವದ ವಿಫಲತೆಯಿಂದ ಎನ್‌ಎಸ್‌ಡಿಯ ರೂವಾರಿಗಳು ಪಾಠ ಕಲಿಯಬೇಕಿದೆ. ಯಾಕೆಂದರೆ.. 2018ರಲ್ಲಿ ಎನ್‌ಎಸ್‌ಡಿ ದೆಹಲಿಯು ಅಂತರಾಷ್ಟ್ರೀಯ ಮಟ್ಟದ ರಂಗಭೂಮಿ ಓಲಂಪಿಕ್ಸ್ ನಡೆಸುವ ಬ್ರಹತ್ ಯೋಜನೆ ರೂಪಿಸಿದೆ. ಬೆಂಗಳೂರಿನಲ್ಲೂ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಆಗಲೂ ಹೀಗೆ ಅನಿಯಂತ್ರಿತ ಹೊರಗುತ್ತಿಗೆ ವ್ಯವಹಾರ ಮುಂದುವರೆಸಿದರೆ, ಪ್ರೇಕ್ಷಕರ ಕೊರತೆ ಕಾಡಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ಮಾನ ಹರಾಜಾಗುತ್ತದೆ. ಆದ್ದರಿಂದ ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ನಿರ್ದೇಶಕರಾದ ಸಿ.ಬಸವಲಿಂಗಯ್ಯನವರ ಮೇಲೆ ಬೇಕಾದಷ್ಟು ಹೊಣೆಗಾರಿಕೆ ಇದೆ. ಬೇರೆ ಸರಕಾರಿ ಪ್ರಾಜೆಕ್ಟಗಳ ನೇತೃತ್ವವನ್ನು ವಹಿಸುವುದು ಬಿಟ್ಟು, ಹಲವಾರು ಎನ್‌ಎಸ್‌ಡಿಯೇತರ ಜವಾಬ್ದಾರಿಗಳ ಭಾರವನ್ನು ಹೊರುವುದು ಬಿಟ್ಟು, ಎನ್‌ಎಸ್‌ಡಿಯನ್ನು ಹೇಗೆ ಇನ್ನೂ ಸದೃಢ ಗೊಳಿಸಬೇಕು, ಎನ್‌ಎಸ್‌ಡಿ ನಾಟಕ ಹಾಗೂ ನಾಟಕೋತ್ಸವಗಳಲ್ಲಿ ಎನ್‌ಎಸ್‌ಡಿಯೇತರ ರಂಗಕರ್ಮಿಗಳನ್ನು ಹೇಗೆ ಭಾಗಿಯಾಗಿಸಿಕೊಳ್ಳಬೇಕು ಎನ್ನವ ನಿಟ್ಟಿನಲ್ಲಿ ಆಲೋಚಿಸಿ ಕಾರ್ಯತತ್ಪರವಾದರೆ ಹಲವರ ಹೋರಾಟದ ಫಲದಿಂದ ಎನ್‌ಎಸ್‌ಡಿ ಬೆಂಗಳೂರು ಕೇಂದ್ರವಾಗಿದ್ದಕ್ಕೂ ಸಾರ್ಥಕವಾಗುತ್ತದೆ. ಇಲ್ಲವಾದರೆ ಕನ್ನಡ ರಂಗಭೂಮಿಯಲ್ಲಿ ಎನ್‌ಎಸ್‌ಡಿ ಒಂದು ದ್ವೀಪವಾಗಿಯೇ ಉಳಿಯುತ್ತದೆ.  ಹಾಗಾಗದಿರಲೆಂಬುದೇ ರಂಗಕರ್ಮಿಗಳೆಲ್ಲರ ಆಶಯವಾಗಿದೆ.

                        - ಶಶಿಕಾಂತ ಯಡಹಳ್ಳಿ
  





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ