ಮಂಗಳವಾರ, ಜನವರಿ 9, 2024

ಕಂಬಾರರ ‘ಋಷ್ಯಶೃಂಗ’ ನಾಟಕ ಕುರಿತು “ಹೇಳತೇನ ಕೇಳ”

ಕಂಬಾರರ ‘ಋಷ್ಯಶೃಂಗ’ ನಾಟಕ ಕುರಿತು “ಹೇಳತೇನ ಕೇಳ”

ಕವಿ, ಕಥೆಗಾರ, ನಾಟಕಕಾರ, ಕಾದಂಬರಿಕಾರ, ನಿರ್ದೇಶಕರಾಗಿ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ,ಚಂದ್ರಶೇಖರ್ ಕಂಬಾರರ 87ನೇ ಜನ್ಮದಿನದ ಅಂಗವಾಗಿ ಹಂಪಿ ವಿಶ್ವವಿದ್ಯಾಲಯದ ಡಾ.ವಿರೇಶ್ ಬಡಿಗೇರ್ ರವರು ತಮ್ಮ “ಹೇಳತೇನಿ ಕೇಳ” ಎನ್ನುವ ಆನ್ಲೈನ್ ಉಪನ್ಯಾಸ ಮಾಲಿಕೆಯಲ್ಲಿ ಕಂಬಾರರ ‘ಋಷ್ಯಶೃಂಗ’ ನಾಟಕದ ಕುರಿತು ಸಂವಾದವನ್ನು ಜನವರಿ 7ನೇ ತಾರೀಕಿನಂದು ಆಯೋಜಿಸಿದ್ದು ವಿಶೇಷವಾಗಿತ್ತು. 

ಈ ಸಂವಾದದಲ್ಲಿ ಹಿರಿಯರಾದ ಹರಿಹರದ ಲಿಂಗರಾಜ್ ಕಮ್ಮಾರರವರು ಕಂಬಾರರ ಬರಹ ಹಾಗೂ ಸಾಧನೆಗಳ ಬಗ್ಗೆ ಮತ್ತು ಋಷ್ಯಶೃಂಗ ನಾಟಕದ ಬಗ್ಗೆ ವಿವರವಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು. ಈ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ನಾನು ನನ್ನ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಿಪಡಿಸಿದ್ದೆ. ಆಡಿದ ಮಾತುಗಳ ವಿಸ್ತೃತ ರೂಪದ ಲೇಖನ ಇದಾಗಿದೆ.
ಇಪ್ಪತ್ತೈದು ನಾಟಕ, 10 ಕವನ ಸಂಕಲನ, 5 ಕಾದಂಬರಿ ಹಾಗೂ ಚಕೋರಿ ಎನ್ನುವ ಮಹಾಕಾವ್ಯವನ್ನು ರಚಿಸಿದ ಡಾ.ಚಂದ್ರಶೇಖರ್ ಕಂಬಾರರು ಕನ್ನಡ ನಾಡಿನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರು ಬರೆದ ನಾಟಕಗಳಲ್ಲಿ ಜೋಕುಮಾರಸ್ವಾಮಿ, ಸಂಗ್ಯಾಬಾಳ್ಯಾ, ಕಿಟ್ಟಿಯ ಕಥೆ, ಕಾಡುಕುದುರೆ, ಹರಕೆಯ ಕುರಿ ಮುಂತಾದವು ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿವೆ.

 ‘ಋಷ್ಯಶೃಂಗ’ವು ಕಂಬಾರರ ಮೂರನೇ ನಾಟಕವಾಗಿದ್ದು 1970ರಲ್ಲಿ ರಚನೆಗೊಂಡಿದೆ. ಈ ನಾಟಕ ಪೌರಾಣಿಕ ಮುನಿ ಋಷ್ಯಶೃಂಗನ ಹೆಸರು ಮತ್ತು ಬದುಕಿನ ಅಂಶಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸಿದ್ದರೂ ಸಂಪೂರ್ಣವಾಗಿ ಜಾನಪದೀಯ ಕಥಾನಕದ ವಿನ್ಯಾಸವನ್ನು ಒಳಗೊಂಡಿದೆ. ವಸ್ತು ಯಾವುದೇ ಆಗಿರಬಹುದು ಅದನ್ನು ಜಾನಪದದ ಚೌಕಟ್ಟಿಗೆ ಒಗ್ಗಿಸುವುದರಲ್ಲಿ ಕಂಬಾರರು ಸಿದ್ದಹಸ್ತರು. ಇದಕ್ಕೆ ಕಂಬಾರರ ಶೈಲಿ ಎಂದೇ ಹೆಸರು.

ಕಂಬಾರರ ಬಹುತೇಕ ನಾಟಕಗಳಂತೆ ‘ಋಷ್ಯಶೃಂಗ’ವು ಪ್ಯೂಡಲ್ ವ್ಯವಸ್ಥೆಯ ದಮನ ದೌರ್ಜನ್ಯ ಅತಿರೇಕಗಳನ್ನು ಅನಾವರಣಗೊಳಿಸುತ್ತದೆ. ಅಲ್ಲೊಬ್ಬ ಊರ ಗೌಡ. ಅವನಿಗೊಬ್ಬ ಮಗ ರಾಮಗೊಂಡ. ಒಂದು ದಿನ ಬೇಟೆಗೆ ಹೋಗಿ ಬರುವಾಗ ದೆವ್ವವೊಂದು ಈ ಇಬ್ಬರನ್ನೂ ಕೊಂದು ಹಾಳುಬಾವಿಗೆ ಎಸೆದು ಗೌಡನ ವೇಷದಲ್ಲಿ ಊರು ಸೇರಿ ದಮನ ಶುರುಮಾಡುತ್ತದೆ. ವೇಷದಾರಿ ಗೌಡ ಹಾಗೂ ಗೌಡತಿಗೆ ಹುಟ್ಟಿದ ಬಾಳಗೊಂಡ ಎನ್ನುವ ಮಗನನ್ನು ಊರಿನಿಂದ ಓದಲು ದೂರದೂರಿಗೆ ಕಳುಹಿಸಲಾಗುತ್ತದೆ. ಆ ಪ್ರಾಂತ್ಯಕ್ಕೆ ಬರ ಒಕ್ಕರಿಸಿ ಸಾವು ನೋವುಗಳು ನಿತ್ಯದ ಗೋಳಾಗುತ್ತದೆ. ಅತ್ತ ಬರದಿಂದ, ಇತ್ತ ಈ ವೇಷದಾರಿ ಗೌಡನ ದೌರ್ಜನ್ಯದಿಂದ ತತ್ತರಿಸಿದ ಊರ ಜನರು ದೇವಿಯ ಮೊರೆಹೋಗುತ್ತಾರೆ. ಪಾರಿಯ ಮೈಯಲ್ಲಿ ಬಂದ ದೇವಿ “ದೊಡ್ಡಗೌಡನ ಮಗ ಬಂದು ಅಗಸಿ ಬಾಗಿಲಲ್ಲಿ ಐದು ಹೆಜ್ಜೆ ಇಟ್ಟಾಗ ಮಳೆ ಬರುತ್ತದೆ” ಎಂದು ಭವಿಷ್ಯ ನುಡಿಯುತ್ತಾಳೆ. ಕೊನೆಗೂ ಬಾಳಗೊಂಡ ಕುದುರೆ ಏರಿ ಊರಿಗೆ ಬರುತ್ತಾನಾದರೂ ಮಳೆ ಬರುವುದಿಲ್ಲ. ಊರ ಜನ ಬಾಳಗೊಂಡ ಗೌಡನ ಮಗನೇ ಅಲ್ಲವೆಂದು ಸಂಶಯ ಪಡುತ್ತಾರೆ. ಭಾವಿಯಲ್ಲಿದ್ದ ಸತ್ತ ಗೌಡನ ಪ್ರೇತಾತ್ಮ ತನ್ನ ಹತ್ಯೆಯ ಕಥೆಯನ್ನು ಬಾಳನಿಗೆ ಹೇಳುತ್ತದೆ. ಯಕ್ಷಿಣಿಯೊಬ್ಬಳು ಬಾಳನಿಗೆ ಸಹಾಯ ಮಾಡುತ್ತಾಳೆ. ಪಾರಿ ಮಗಳು ಕಮಲಿಯ ಮೋಹಕ್ಕೆ ಒಳಗಾದ ಬಾಳಗೊಂಡ ಊರಲ್ಲೇ ಉಳಿಯುತ್ತಾನೆ. ಅದೊಂದು ದಿನ ಮಾಯಾವಿ ಗೌಡ ಬಾಳಗೊಂಡನ ವೇಷ ಧರಿಸಿ ಕಮಲಿ ಮನೆಗೆ ಹೋಗಿ ಅವಳನ್ನು ಮೋಸದಿಂದ ಕೂಡುತ್ತಾನೆ. ಅದು ಗೊತ್ತಾಗಿ ಸಿಟ್ಟಿಗೆದ್ದ ಬಾಳಗೊಂಡ ತಂದೆಯನ್ನು ಅಟ್ಟಾಡಿಸಿಕೊಂಡು ಹೋಗಿ ಕೊಂದು ಹಾಳುಬಾವಿಗೆ ಎಸೆಯುತ್ತಾನೆ. ಬಾಳಗೊಂಡ ಬಂದು ಕಮಲಿಯನ್ನು ಕೂಡಿದಾಗ ಮಳೆ ಸಮೃದ್ಧವಾಗಿ ಬರುತ್ತದೆ. ಬರ ನೀಗುತ್ತದೆ. ಇದು  ‘ಋಷ್ಯಶೃಂಗ’ ನಾಟಕದ ಸಂಕ್ಷಿಪ್ತ ಕಥೆ.

ಕಂಬಾರರ ಕೆಲವಾರು ನಾಟಕಗಳಲ್ಲಿರುವಂತೆ ಇಲ್ಲಿಯೂ ಒಂದು ಊರು. ಅದಕ್ಕೊಬ್ಬ ಖಳನಾಯಕನಾದ ಹೆಣ್ಣುಬಾಕ ಜಮೀನ್ದಾರ ಗೌಡ. ಗೌಡನನ್ನು ವಿರೋಧಿಸಿ ಮಟ್ಟಹಾಕಲು ಇನ್ನೊಬ್ಬ ನಾಯಕ. ಈ ಇಬ್ಬರ ಸಂಘರ್ಷದಲ್ಲಿ ಕಾಮದಹನಕ್ಕೆ ಈಡಾಗುವ ಮಹಿಳೆ. ಮುಖ್ಯವಾಗಿ ಈ ಮೂರು ಪಾತ್ರಗಳನ್ನು ಇಟ್ಟುಕೊಂಡೇ  ಋಷ್ಯಶೃಂಗ ನಾಟಕವೂ ರಚನೆಗೊಂಡಿದೆ. ವಸ್ತುವಿನಲ್ಲಿ ವಿಶೇಷ ಎನ್ನುವುದು ಇಲ್ಲದಿದ್ದರೂ ಅದನ್ನು ವಿನ್ಯಾಸಗೊಳಿಸಿದ ರೀತಿಯಲ್ಲಿ ಕಂಬಾರರು ಗೆಲ್ಲುತ್ತಾರೆ. ಅವರು ಬಳಸುವ ಉತ್ತರ ಕರ್ನಾಟಕದ ದೇಸಿ ಭಾಷೆಯ ಸೊಗಡು, ಅದರಲ್ಲಿರುವ ಕಾವ್ಯಾತ್ಮಕತೆ ಹಾಗೂ ಮನಮೋಹಕ ಹಾಡುಗಳು ಗದ್ಯ ನಾಟಕವನ್ನು ದೃಶ್ಯಕಾವ್ಯವನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಕಂಬಾರರ ಬಹುತೇಕ ನಾಟಕಗಳಲ್ಲಿ ಇರುವಂತೆ  ‘ಋಷ್ಯಶೃಂಗ’ ದಲ್ಲಿಯೂ ಪುರುಷಪ್ರಧಾನ ವ್ಯವಸ್ಥೆಯ ಭೋಗದ ಸರಕಾಗಿ ಹೆಣ್ಣು ಚಿತ್ರಿತವಾಗಿದ್ದಾಳೆ. ಯಜಮಾನ ಸಂಸ್ಕೃತಿಯ ಮೌಲ್ಯಗಳನ್ನೇ ಈ ನಾಟಕದಲ್ಲೂ ಪ್ರತಿಪಾದಿಸಲಾಗಿದೆ. ಪುರುಷರ ಕಾಮದ ದಾಹ ತಣೀಸಲೆಂದೇ ಸ್ತ್ರೀ ಪಾತ್ರ ಸೃಷ್ಟಿಮಾಡಲಾಗಿದೆಯೇನೋ ಎಂದು ಭಾಸವಾಗುತ್ತದೆ. ಹಾಗೂ ಹೆಣ್ಣಿಗಾಗಿಯೇ ಪ್ರಮುಖ ಪುರುಷ ಪಾತ್ರಗಳು ಸಂಘರ್ಷಕ್ಕೆ ಈಡಾಗಿ ಕೊನೆಗೆ ದುಷ್ಟ ಪಾತ್ರದ ಸಂಹಾರದಲ್ಲಿ ನಾಟಕ ಕೊನೆಯಾಗುವುದನ್ನು ಕಾಣಬಹುದಾಗಿದೆ.

ವೈದಿಕಶಾಹಿ ಪರಂಪರೆ ಸೃಷ್ಟಿಸಿದ ಈ ನೈತಿಕ ಅನೈತಿಕ, ಪವಿತ್ರ ಅಪವಿತ್ರ, ಶೀಲ ಅಶ್ಲೀಲ ಎನ್ನುವ ಪರಿಕಲ್ಪನೆಗಳೂ ಜನಪದ ಕಾವ್ಯ ಪರಂಪರೆಯಲ್ಲಿ ಪ್ರಮುಖವೆನ್ನಿಸುವುದಿಲ್ಲ. ಗಂಡು ಹೆಣ್ಣಿನ ನಡುವಿನ ಲೈಂಗಿಕ ಸಂಬಂಧದಲ್ಲಿ ಅನೈತಿಕತೆ ಎನ್ನುವುದು ಅಪ್ರಸ್ತುತ. ಹೆಣ್ಣು ಒಮ್ಮೆ ಒಬ್ಬನ ಜೊತೆ ಕೂಡಿದರೆ ಅವಳು ಅಪವಿತ್ರವಾದಳು, ಶೀಲಗೆಟ್ಟಳು ಎನ್ನುವುದೆಲ್ಲಾ ವೈದಿಕರು ಹೆಣ್ಣನ್ನು ಶೋಷಿಸಲು ಹುಟ್ಟು ಹಾಕಿದ ಕಟ್ಟುಪಾಡುಗಳಾಗಿವೆ. ಆದರೆ ಜನಪದರಿಗೆ ಅದರ ಹಂಗಿಲ್ಲ. ‘ಋಷ್ಯಶೃಂಗ’  ನಾಟಕದಲ್ಲೂ ಸಹ ತನ್ನ ತಂದೆ ಮಾಯಾವಿ ಗೌಡ ಬಂದು ಕಮಲಿಯನ್ನು ಕೂಡಿ ಹೋಗಿದ್ದು ಗೊತ್ತಿದ್ದರೂ ಮಗ ಬಾಳಗೊಂಡ ಅವಳನ್ನು ಒಪ್ಪಿಕೊಳ್ಳುತ್ತಾನೆ, ಅಪ್ಪಿಕೊಳ್ಳುತ್ತಾನೆ. ಒಂದಾಗುತ್ತಾನೆ. ಆಗಲೇ ಬರ ಕಳೆದು ಮಳೆ ಬರುತ್ತದೆ. ಯಾಕೆಂದರೆ ಇಲ್ಲಿ ಹೆಣ್ಣು ಪ್ರಕೃತಿಯಾದರೆ ಗಂಡು ಪುರುಷನಾಗಿದ್ದು, ಯಾವಾಗ ಪ್ರಕೃತಿ ಮತ್ತು ಪುರುಷ ಪ್ರೇಮದಿಂದ ಒಂದಾಗುತ್ತಾರೋ ಆಗ ಸಮೃದ್ಧಿ ಫಲವತ್ತತೆ ಸಾಧ್ಯವಾಗುತ್ತದೆ ಎನ್ನುವುದನ್ನು ಹೇಳುವುದೇ ಈ ನಾಟಕದ ಮೂಲ ಆಶಯವಾಗಿದೆ.

ಕಂಬಾರರು ತಮ್ಮ ಬಹುತೇಕ ನಾಟಕಗಳಲ್ಲಿ ಮಹಿಳೆಯರನ್ನು ಚಿತ್ರಿಸಿದ ರೀತಿ ಚರ್ಚಾಸ್ಪದವಾಗಿದೆ. ಲೈಂಗಿಕತೆಯೇ ಅವರ ನಾಟಕಗಳ ಕೇಂದ್ರಬಿಂದುವೇನೋ ಎನ್ನಿಸುವಂತಿದೆ. ಹೆಣ್ಣೆಂಬುದು ಗಂಡಿನ ಸುಖದ ಸರಕಾಗಿದ್ದು, ಹೆಣ್ಣನ್ನು ಪಡೆಯಲು ನಡೆಯುವ ಜಗಳ ಕದನ ಹೋರಾಟಗಳೇ ನಾಟಕದ ಅಂತಸತ್ವವಾದಂತಿವೆ. ಸಿಂಗಾರೆವ್ವ ನಂತಹ ನಾಟಕ ಹೊರತು ಪಡಿಸಿ ಬಹುತೇಕ ನಾಟಕಗಳ ಹೆಣ್ಣು ಪಾತ್ರಗಳು ಗಂಡಿನ ಶೋಷಣೆಯ ವಿರುದ್ದ ಬಂಡೇಳುವುದಿಲ್ಲ ಹಾಗೂ ಎಷ್ಟೋ ಸಲ ಪ್ರತಿರೋಧವನ್ನೂ ವ್ಯಕ್ತಪಡಿಸದೇ ಬಯಕೆಯ ಬೆಂಕಿಗೆ ಬಿದ್ದು ಬಲಿಯಾಗುತ್ತವೆ. ವ್ಯಕ್ತಿಗತ ಕಾಮನೆ ಬಯಕೆಗಳೇ ಕೇಂದ್ರವಾಗಿ ಅದರ ಸುತ್ತಲೂ ಆಸೆ ಅಸೂಯೆ ಅನಾಹುತಗಳೇ ಪರಿಭ್ರಮಿಸುತ್ತಿರುತ್ತವೆ. ಭಾವ-ಬಯಕೆಗಳ ಸಂಘರ್ಷಗಳಲ್ಲೇ ಮುಳುಗೇಳುವ ಕಂಬಾರರ ನಾಟಕದ ಪಾತ್ರಗಳು ಬದುಕಿನ ವಾಸ್ತವಗಳಿಗೆ ಮುಖಾಮುಖಿ ಆಗಿದ್ದೇ ಕಡಿಮೆ. ಪುರುಷ ಪ್ರಧಾನ ವ್ಯವಸ್ಥೆ ಹೆಣ್ಣನ್ನು ಹೇಗೆಲ್ಲಾ ಬಳಸಿಕೊಂಡಿತು, ಅದರಿಂದಾಗಿ ಪುರುಷರ ದುಸ್ಥಿತಿ ಏನಾಯಿತು. ಹೆಣ್ಣು ಹೇಗೆಲ್ಲಾ ಮಾಯವಾಗಿ ಕಾಡಿತು ಎನ್ನುವುದನ್ನು ಹೇಳುವುದಕ್ಕೇ ನಾಟಕ ಮಾಧ್ಯಮವನ್ನು ಕಂಬಾರರು ಬಳಸಿಕೊಂಡಿದ್ದಾರಾ ಎನ್ನುವ ಸಂದೇಹ ಕಾಡದೇ ಇರದು.   

ವೈದಿಕರು ಪುರಾಣಗಳನ್ನು ಕಟ್ಟಿ ಅದರಲ್ಲಿ ಮೌಢ್ಯಗಳ ಬೀಜಗಳನ್ನು ಬಿತ್ತಿದಂತೆ ಕಂಬಾರರೂ ಸಹ ಈ ರೀತಿಯ ನಾಟಕದ ಮೂಲಕ ಮೌಢ್ಯಗಳೇ ತುಂಬಿರುವ ಜಾನಪದ ಪುರಾಣವನ್ನು ಕಟ್ಟಿದ್ದಾರಾ ಎನ್ನುವ ಸಂದೇಹ ಕಾಡದಿರದು. ಈ ‘ಋಷ್ಯಶೃಂಗ’ ನಾಟಕದಲ್ಲಿ ಬರುವ ಮಾಯಾವೇಷದಾರಿ ದೆವ್ವ, ಮೈಮೇಲೆ ಬಂದು ಭವಿಷ್ಯ ಹೇಳುವ ದೈವ, ದೈವವಾಣಿವನ್ನು ನಂಬಿ ನಡೆಯುವ ಜನರು, ಗಂಡು ಹೆಣ್ಣಿನ ಸಂಯೋಗ ಸಂಬಂಧಗಳ ವಿದ್ಯಮಾನಗಳ ಮೇಲೆ ಮಳೆ ಅವಲಂಬಿಸಿರುವುದು, ಇವೆಲ್ಲವೂ ಸಹ ಮೌಢ್ಯದ ಭಾಗಗಳೇ ಆಗಿವೆ. ಇವುಗಳೆಲ್ಲಾ ಸುಳ್ಳು, ಇಂತಹುಗಳನ್ನೆಲ್ಲಾ ನಂಬಬಾರದು ಎಂದು ಹೇಳುವ ಒಂದೇ ಒಂದು ಎಚ್ಚರದ ದ್ವನಿ ಕೂಡಾ ನಾಟಕದಲ್ಲಿಲ್ಲವಾಗಿದೆ. ಮಿಥ್ ಅಂದರೆ ನಂಬಲಾಗದ ಕಟ್ಟುಕತೆಗಳನ್ನೇ ರೂಪಕತೆಗಳ ಮೂಲಕ ನಂಬಿಸುವ ಪ್ರಕ್ರಿಯೆ ಈ ನಾಟಕದಲ್ಲಿದೆ.

ಇದೆಲ್ಲವೂ ಮೇಲ್ನೋಟಕ್ಕೆ ಅನ್ನಿಸುವ ಸಂಗತಿಗಳಾದರೆ. ಈ ನಾಟಕಕ್ಕೆ ಇನ್ನೊಂದು ಆಯಾಮವನ್ನೂ ಗುರುತಿಸಬಹುದಾಗಿದೆ. ಅದು ಅನ್ಯ ಸಂಸ್ಕೃತಿಯ ಹೇರಿಕೆ. ಮೊದಲಿದ್ದ ಗೌಡ ಹಳ್ಳಿ ಸಂಸ್ಕೃತಿಯ ವ್ಯಕ್ತಿಯಾಗಿದ್ದರೆ ಅವನನ್ನು ಕೊಂದು ಗೌಡನ ವೇಷದಾರಿಯಾಗಿ ಬರುವ ದೆವ್ವವು ವಿನಾಶಕಾರಿ ದಮನ ಸಂಸ್ಕೃತಿಯನ್ನು ಗ್ರಾಮದಲ್ಲಿ ಜಾರಿಗೆ ತರುತ್ತದೆ. ತನ್ನಲ್ಲಿರುವ ಹಣ ಬಲದ ಅಧಿಕಾರ ಹಾಗೂ ಅತೀಂದ್ರೀಯ ಶಕ್ತಿಗಳಿಂದಾಗಿ ಇಡೀ ಗ್ರಾಮದ ಜನರನ್ನು ಭಯದಲ್ಲಿ ಬದುಕುವಂತೆ ಮಾಡಲಾಗುತ್ತದೆ. ದ್ರಾವಿಡ ನೆಲವನ್ನು ಆವರಿಸಿಕೊಂಡ ಆರ್ಯರು, ಹಿಂದುಸ್ಥಾನವನ್ನು ಆಕ್ರಮಿಸಿಕೊಂಡ ವಸಾಹತುಶಾಹಿಗಳಾದ ಆಂಗ್ಲರು, ಮೊಗಲರು ಮಾಡಿದ್ದೇ ಸಾಂಸ್ಕೃತಿಕ ಹೇರಿಕೆಯನ್ನು. ದ್ವಾವಿಡ ಸಂಸ್ಕೃತಿಯ ಮೇಲೆ ವೈದಿಕಶಾಹಿ ಆರ್ಯ ಸಂಸ್ಕೃತಿ ಹೇರಿದ್ದರಿಂದಾಗಿ ಇಡೀ ದೇಶ ಮೌಢ್ಯದ ನಾಡಾಯಿತು, ಅಸಮಾನತೆಯ ಬೀಡಾಯಿತು. ಹೊರಗಿನಿಂದ ಬಂದ ಮಾಯಾ ರಕ್ಕಸನು ನೆಲದ ಸಂಸ್ಕೃತಿಯನ್ನು ಕೊಂದು ತನ್ನದೇ ದಮನ ಸಂಸ್ಕೃತಿಯನ್ನು ಹೇರಲಾದ ಚಾರಿತ್ರಿಕ ವಿದ್ಯಮಾನಗಳ ರೂಪಕವಾಗಿ ಈ ‘ಋಷ್ಯಶೃಂಗ’  ನಾಟಕ ಮೂಡಿಬಂದಂತಿದೆ.

ಕಂಬಾರರು ತಮ್ಮ ನಾಟಕಗಳಲ್ಲಿ ರೂಪಕತೆಯ ಜೊತೆಗೆ ಅರ್ಥಲಯ ಮತ್ತು ನಾದಲಯಗಳನ್ನು ಹದವಾಗಿ ಬೆರೆಸಿ ಭಾಷೆಯನ್ನು ಸಮರ್ಥವಾಗಿ ಬಳಸಿದ್ದರಿಂದಾಗಿ ನಾಟಕ ಓದಿಸಿಕೊಂಡು ಇಲ್ಲವೇ ನೋಡಿಸಿಕೊಂಡು ಹೋಗುತ್ತದೆ. ‘ಋಷ್ಯಶೃಂಗ’  ನಾಟಕದ ಪ್ರಮುಖ ಆಕರ್ಷಣೆ ಇರುವುದೇ ಬಳಸಿದ ಹಾಡುಗಳಲ್ಲಿ ಹಾಗೂ ಹಾಡುಗಳಲ್ಲಿ ಇರುವ ಒಳಾರ್ಥಗಳಲ್ಲಿ. ಅಶ್ಲೀಲ ಎನ್ನಿಸಬಹುದಾದದ್ದನ್ನೂ ಸಹ ಶೃಂಗಾರರಸದಲ್ಲಿ ಹಾಡುಗಳನ್ನು ಕಟ್ಟಿಕೊಡುವ ರೀತಿಯಲ್ಲಿ ಕಂಬಾರರಿಗೆ ಕಂಬಾರರೇ ಸಾಟಿ.

ಹೌದು ಕಂಬಾರರ ಮೇಲೆ ಹಲವಾರು ಆರೋಪಗಳಿವೆ. ಮುದೇನೂರು ಸಂಗಣ್ಣನವರ ಸಂಗ್ರಹದ ಲಕ್ಷಾಧಿಪತಿ ರಾಜನ ಕಥೆಯನ್ನು ಕದ್ದು ನಾಟಕವಾಗಿಸಿದರು, ಪತ್ತಾರ ಮಾಸ್ತರರ ಕಥೆಯನ್ನು ಬಳಸಿ ಸಂಗ್ಯಾಬಾಳ್ಯಾ ರಚಿಸಿದರು, ಲಿಯೋ ಟಾಲಸ್ಟಾಯ್ ಕಥೆಯನ್ನು ಸಾಂಬಶಿವ ಪ್ರಹಸನವನ್ನಾಗಿಸಿದರು.. ಹೀಗೆ ಕೃತಿಚೌರ್ಯದ ಆರೋಪಗಳು ಬೇಕಾದಷ್ಟಿವೆ. ಯಾರು ಎಲ್ಲಿಂದ ಏನು ಕದ್ದರು ಅನ್ನುವುದು ನಾಟಕ ಕಟ್ಟುವ ಪ್ರಕ್ರಿಯೆಯಲ್ಲಿ ಅಮುಖ್ಯವೆನಿಸುತ್ತದೆ ಹಾಗೂ ನಾಟಕವೇ ಅಂತಿಮವಾಗುತ್ತದೆ. ಬಹುತೇಕ ನಾಟಕಕಾರರು ಪೌರಾಣಿಕ ಕಥೆಗಳಿಂದ ಇಲ್ಲವೇ ಐತಿಹಾಸಿಕ ಸನ್ನಿವೇಶಗಳಿಂದ ಪ್ರಭಾವಿತರಾಗಿ ನಾಟಕಗಳನ್ನು ಕಟ್ಟಿಕೊಟ್ಟಿದ್ದಿದೆ. ಗಿರೀಶ್ ಕಾರ್ನಾಡರ ಬಹುತೇಕ ನಾಟಕಗಳು ಪುರಾಣ ಪಾತ್ರ ಸನ್ನಿವೇಶಗಳನ್ನು ಆಧರಿಸಿದ್ದಾಗಿವೆ. ತುಘಲಕ್ ನಾಟಕ ಐತಿಹಾಸಿಕವಾಗಿದೆ. ಅಂದರೆ ಕಚ್ಚಾ ಪದಾರ್ಥಗಳನ್ನು ಎಲ್ಲಿಂದಲಾದರೂ ಹೆಕ್ಕಿ ತೆಗೆದು ಕ್ರಿಯಾಶೀಲತೆಯನ್ನು ಬಳಸಿ ಹೊಸ ರೂಪಕೊಡುವುದು ಇದೆಯಲ್ಲಾ ಅದೂ ಸಹ ಕಲೆ, ಅದೂ ಕೂಡಾ ಪ್ರತಿಭೆ. ಅದರಲ್ಲಿ ಕಂಬಾರರು ಎತ್ತಿದ ಕೈ. ನಾಟಕ ಕೃತಿಗಳಿಗೆ ಆಕರಗಳು ಯಾವುದಾದರೇನು? ಸಿಕ್ಕಿದ ವಸ್ತುವನ್ನು ದಕ್ಕಿಸಿಕೊಂಡು ಆಕರ್ಷನೀಯವಾಗಿ ವಿನ್ಯಾಸಗೊಳಿಸುವುದು ಅಷ್ಟು ಸುಲಭಸಾಧ್ಯವಲ್ಲ. ಆದರೆ ಕಂಬಾರರಂತಹ ಸೃಜನಶೀಲ ಬರಹಗಾರರಿಗೆ ಅದು ಅಸಾಧ್ಯವೇನಲ್ಲಾ. ಹೀಗಾಗಿ ಯಾವುದೇ ಯಶಸ್ವಿ ಕೃತಿಯ ಮೂಲವನ್ನು ಹುಡುಕುವ ಬದಲು ಕಣ್ಣ ಮುಂದಿರುವ ಆಕೃತಿಯ ಬಗ್ಗೆ ಚರ್ಚಿಸುವುದು ಇಂದಿನ ಅಗತ್ಯವಾಗಿದೆ.

ಅದ್ಯಾಕೋ ‘ಋಷ್ಯಶೃಂಗ’ ಸಿನೆಮಾ ಆಗಿ ವಿಫಲವಾಯಿತು. ನಾಟಕವೂ ಸಹ ಹೆಚ್ಚು ಪ್ರದರ್ಶನಗಳನ್ನು ಕಾಣಲಿಲ್ಲ. ಕಂಬಾರರ ಜೋಕುಮಾರಸ್ವಾಮಿ, ಸಂಗ್ಯಾಬಾಳ್ಯಾ, ಹರಕೆಯ ಕುರಿ ಯಂತಹ ನಾಟಕಗಳಿಗೆ ಸಿಕ್ಕಷ್ಟು ಯಶಸ್ಸು ಈ ನಾಟಕಕ್ಕೆ ದಕ್ಕಲಿಲ್ಲ. ಈಗಂತೂ ‘ಋಷ್ಯಶೃಂಗ’  ನಾಟಕದ ವಸ್ತು ಔಟ್ ಆಪ್ ಡೇಟೆಡ್ ಎನ್ನಿಸುವಂತಿದೆ. ಹೀಗಾಗಿ ಈ ನಾಟಕವನ್ನು ಬಹುತೇಕ ರಂಗಕರ್ಮಿಗಳೇ ಮರೆತಿದ್ದಾರೆ. ಆದರೂ ಈ ನಾಟಕದ ಹಾಡುಗಳು ಮಾತ್ರ ಜನಪ್ರೀಯವಾಗಿವೆ. ಈಗಲೂ ಜೀವಂತವಾಗಿವೆ.

ಕಂಬಾರರ ಕುರಿತು ಉಪನ್ಯಾಸವನ್ನು ಕೊಟ್ಟ ಲಿಂಗರಾಜ ಕಂಬಾರರನ್ನು ಬ್ರೊನಾಲ್ಟ್ ಬ್ರೆಕ್ಟ್ ಗೆ ಹೋಲಿಕೆ ಮಾಡಿದರು. ಈ ಹಿಂದೆ ಕಂಬಾರರಿಗೆ ಅಭಿನಂದನೆ ಹೇಳುವ ಆತುರದಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪನವರೂ ಸಹ ಕಂಬಾರರನ್ನು ಕನ್ನಡದ ಬ್ರೆಕ್ಟ್ ಎಂದು ಹೊಗಳಿ ಹೊನ್ನಶೂಲಕ್ಕೇರಿಸಿದ್ದರು. ಬರಗೂರರು ಕಂಬಾರರನ್ನು ಸಮರ್ಥಿಸಿಕೊಳ್ಳಬೇಕೆಂದಿದ್ದರೆ ಅವರ ನಾಟಕ ಸಾಹಿತ್ಯಗಳ ಅಂಶಗಳನ್ನು ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಬಹುದಾಗಿತ್ತು. ಅತ್ಯದ್ಬುತ ನಾಟಕಕಾರ ಎಂದು ಹೇಳಬಹುದಾಗಿತ್ತು. ಆದರೆ ಬ್ರೆಕ್ಟ್ ಗೆ ಹೋಲಿಸಿದ್ದು ಅನಗತ್ಯವಾಗಿತ್ತು. ಬ್ರೆಕ್ಟ್ ಮತ್ತು ಕಂಬಾರ ಈ ಇಬ್ಬರೂ ನಾಟಕಕಾರರು ಎನ್ನುವುದನ್ನು ಹೊರತು ಪಡಿಸಿ ಬೇರೆ ಯಾವುದೇ ರೀತಿಯ ಸಾಮ್ಯತೆಗಳೂ ಇಲ್ಲ. ಬ್ರೆಕ್ಟ್ ಒಬ್ಬ ಮಹಾನ್ ಮಾನವತಾವಾದಿಯಾಗಿದ್ದರೆ ಕಂಬಾರರೊಳಗೊಬ್ಬ ಮನುವಾದಿಯನ್ನು ಅವರ ನಾಟಕಗಳ ಮೂಲಕ ಗುರುತಿಸಬಹುದಾಗಿದೆ. ಬ್ರೆಕ್ಟ್ ಒಬ್ಬ ಎಡಪಂಥೀಯ ಪ್ರಗತಿಪರ ವಿಚಾರವಾದಿಯಾಗಿದ್ದರೆ ಕಂಬಾರರಿಗೆ ಅಂತಹ ಯಾವುದೇ ಪಂಥ ಸಿದ್ದಂತಗಳಿಲ್ಲ. ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕಂಬಾರರು “ ನಾನು ಎಡವೋ ಅಥವಾ ಬಲವೋ ಎಂದು ಈಗಲೂ ನನಗೆ ಗೊತ್ತಾಗಿಲ್ಲ. ನನಗೆ ಎರಡು ಕೈಗಳು ಇವೆಯಾದ್ದರಿಂದ ಎಡವೂ ಹೌದು, ಬಲನೂ ಹೌದು” ಎಂದು ಗೊಂದಲದ ಹೇಳಿಕೆ ಕೊಟ್ಟಿದ್ದರು. ಇತ್ತ ಎಡವೂ ಅಲ್ಲದ, ಅತ್ತ ಬಲವೂ ಅಲ್ಲದ, ಯಾವುದೇ ತತ್ವ ಸಿದ್ದಾಂತಗಳಿಗೆ ಅಂಟಿಕೊಳ್ಳದ ಕಂಬಾರರನ್ನು ಪ್ರಭುತ್ವ ವಿರೋಧಿ ವೈಚಾರಿಕ ನಾಟಕಕಾರ ಬ್ರೆಕ್ಟ್ ಗೆ ಹೋಲಿಸೋದೇ ಅನಗತ್ಯ.

ಕಂಬಾರರ ಜೊತೆಗೆ ಅನೇಕ ವಿಷಯಗಳಲ್ಲಿ ನನಗೆ ಭಿನ್ನಾಭಿಪ್ರಾಯಗಳಿವೆ. ಅವರ ನಾಟಕದ ವಸ್ತುವಿನ ಬಗ್ಗೆ ತಕರಾರಿದೆ. ಅವರ ನಾಟಕಗಳಲ್ಲಿ ಮಹಿಳೆಯನ್ನು ಚಿತ್ರಿಸಿದ ರೀತಿಯ ಬಗ್ಗೆ ಪ್ರಶ್ನೆಗಳಿವೆ, ಅವರ ಅವಕಾಶವಾದಿತನದ ಬಗ್ಗೆ ಬೇಕಾದಷ್ಟು ದೂರುಗಳಿವೆ. ಆದರೆ ಅವರ ಕತೃತ್ವ ಶಕ್ತಿಯ ಕುರಿತು, ಅವರ ಕಾವ್ಯಾತ್ಮಕತೆಯ ಕುರಿತು, ನಾಟಕದ ವಿನ್ಯಾಸಗಳ ಕುರಿತು ಮೆಚ್ಚುಗೆ ಇದೆ. ಭಾಷಾ ಬಳಕೆ ಹಾಗೂ ನಿರ್ವಹಣೆ ಬಗ್ಗೆ ಈಗಲೂ ಕುತೂಹಲವಿದೆ. ಅಪ್ಪಟ ದೇಸಿ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಹ ಅಪ್ರತಿಮ ಬರಹಗಾರ ಡಾ.ಚಂದ್ರಶೇಖರ್ ಕಂಬಾರರ 87 ನೇ ಜನ್ಮದಿನಾಚರಣೆಯ (ಜನವರಿ 2) ದಿನಕ್ಕಾಗಿ ಶುಭಕೋರುವೆ ಹಾಗೂ ಅವರ ನೂರನೇ ಜನ್ಮದಿನಾಚರಣೆಯನ್ನೂ ಸಂಭ್ರಮಿಸುವ ಭಾಗ್ಯ ಕನ್ನಡಿಕರಿಗೆ ದೊರಕಲಿ ಎಂದು ಆಶಿಸುವೆ.

- ಶಶಿಕಾಂತ ಯಡಹಳ್ಳಿ
 07-01-2023