ಸೋಮವಾರ, ಜೂನ್ 15, 2015

ಪೂನಾ ಫಿಲಂ ಸಂಸ್ಥೆಯ ಮೇಲೆ ರಾಜಕೀಯ ಕರಿನೆರಳು, ತಿರುಗಿ ಬಿದ್ದ ವಿದ್ಯಾರ್ಥಿಗಳು....




ಪುಣೆಯಲ್ಲಿರುವ ಸರಕಾರಿ ಸಾಮ್ಯದ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ( FTIIಬೆಂಕಿ ಬಿದ್ದ ಮನೆಯಂತಾಗಿದೆ. ಅಲ್ಲಿ ಕಲಿಯುತ್ತಿರುವ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳೆಲ್ಲಾ ಕೇಂದ್ರ ಸರಕಾರದ ಅವಿವೇಕತನದ ನಿರ್ಧಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ತರಗತಿಗಳನ್ನು ಬಹಿಷ್ಕರಿಸಿ ಜೂನ್ 12 ರಿಂದ ಬೀದಿಗಿಳಿದಿದ್ದಾರೆ. ಸಂಸ್ಥೆಯ ಇತಿಹಾಸದಲ್ಲೇ ಎಂದೂ ವ್ಯಕ್ತವಾಗದ ಪ್ರತಿರೋಧ ಪ್ರಬಲವಾಗಿಯೇ ಅಭಿವ್ಯಕ್ತಿಗೊಳ್ಳುತ್ತಿದೆ.

ಇದಕ್ಕೆಲ್ಲಾ ಕಾರಣ ರಾಜಕೀಯ ಪ್ರೇರಿತ ನಿರ್ಧಾರ. ಕೇಂದ್ರ ಸರಕಾರವು ಬಿಜೆಪಿ ಪಕ್ಷದ ಸಕ್ರೀಯ ರಾಜಕಾರಣಿ ಗಜೇಂದ್ರ ಸಿಂಗ್ ಚೌಹಾಣ್ರವರನ್ನು  ಜೂನ್ 9 ರಂದು ಅಧ್ಯಕ್ಷರನ್ನಾಗಿಸಿ ಸಂಸ್ಥೆಯ ಮೇಲೆ ಹೇರಿದೆ. ಸುದ್ದಿ ತಿಳಿದ ತಕ್ಷಣ ಎಲ್ಲಾ ವಿದ್ಯಾರ್ಥಿಗಳು ತರಗತಿ ಬಿಟ್ಟು ಕ್ಯಾಂಪಸ್ನಲ್ಲಿ ಒಂದಾಗಿ ರಾಜಕೀಯ ಪ್ರೇರಿತ ನೇಮಕಾತಿಯನ್ನು ರದ್ದು ಪಡಿಸಬೇಕೆಂದು ಪ್ರತಿಭಟನೆಗಿಳಿದರು. ’ಮೋದಿಯವರೇ ನಿಮ್ಮ ಕೈಗೊಂಬೆ ವ್ಯಕ್ತಿ ನಮ್ಮ ಸಂಸ್ಥೆಗೆ ಬೇಕಾಗಿಲ್ಲ" ಎಂದು ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನವನ್ನು ತೀವ್ರವಾಗಿಯೇ ವ್ಯಕ್ತಪಡಿಸತೊಡಗಿದರು. ಕಿವುಡು ಸರಕಾರಕ್ಕೆ ವಿದ್ಯಾರ್ಥಿಗಳ ದ್ವನಿ ಕೇಳಲಿಲ್ಲವೋ, ಕೇಳಿದರೂ ನಿರ್ಲಕ್ಷ ಮಾಡಿದರೋ ಗೊತ್ತಿಲ್ಲ. ಯಾವಾಗ ಸರಕಾರ ತನ್ನ ನಿಲುವಿಗೆ ಬದ್ಧವಾಯಿತೋ ಆಗ ಕೆರಳಿದ ವಿದ್ಯಾರ್ಥಿಗಳು ಅಧ್ಯಕ್ಷರನ್ನು ಬದಲಾಯಿಸುವವರೆಗೂ ಹೋರಾಡಲು ಪಣತೊಟ್ಟರು. ಯಾವಾಗ ಬಿಜೆಪಿಯ ಸರ್ಕಾರ ನಾಲ್ಕಾರು ದಿನಗಳಿಂದ ಧರಣಿ ಕುಳಿತ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಲಿಲ್ಲವೊ ಆಗ ಎಲ್ಲಾ ತರಗತಿಗಳನ್ನು ಭಹಿಷ್ಕರಿಸಿ ಆಡಳಿತ ಕಛೇರಿಗೆ ಬೀಗ ಹಾಕಿ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಇದು ಕೇವಲ ಸಾಂಕೇತಿಕ ಪ್ರತಿಭಟನೆಯಾಗಿ ಮುಗಿಯದೇ ಅನಿರ್ಧಿಷ್ಟ ಕಾಲದ ಪ್ರತಿಭಟನೆಯಾಗಿ ಮುಂದುವರೆಯುತ್ತಿದೆ. ಬೆಚ್ಚಿ ಬೀಳಬೇಕಾದ ಸರಕಾರ ತಣ್ಣಗಿದೆ. ಧರಣಿ ನಿರತರು ಬೆಂಕಿಯಾಗಿದ್ದಾರೆ.

ಗಜೇಂದ್ರ ಸಿಂಗ್ ಚೌಹಾಣ್
ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಸಾರ ಖಾತೆಯು ಸರಕಾರದಲ್ಲಿ ಅಧಿಕಾರ ವಂಚಿತ ಬಿಜೆಪಿ ನಾಯಕ ಗಜೇಂದ್ರ ಸಿಂಗ್ ರವರಿಗೆ ಚಲನಚಿತ್ರ ತರಬೇತಿ ಸಂಸ್ಥೆಯ ಅಧ್ಯಕ್ಷಗಿರಿಯನ್ನು ಕೊಟ್ಟು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದೆ. ಆದರೆ  ಚಲನಚಿತ್ರ ಕ್ಷೇತ್ರದಲ್ಲಿ ಚಿಕ್ಕಪುಟ್ಟ ಪಾತ್ರಗಳ ನಟನೆ ಹೊರತುಪಡಿಸಿ ಯಾವುದೇ ಅನುಭವವಿಲ್ಲದ ಚೌಹಾಣ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಅನರ್ಹರಾದ್ದರಿಂದ ಅವರು ಬೇಕಾಗಿಲ್ಲ ಎನ್ನುವುದು ವಿದ್ಯಾರ್ಥಿಗಳ ಆಗ್ರಹವಾಗಿದೆ. ಚಲನಚಿತ್ರದಲ್ಲಿ ತೀವ್ರವಾಗಿ ತೊಡಗಿಸಿಕೊಂಡ ನಟಿ ವಿದ್ಯಾಬಾಲನ್, ಸಿನೆಮಾ ನಿರ್ದೇಶಕ ರಾಜಕುಮಾರ್ ಹಿರಾನಿ....ಯಂತಹ ಅನುಭವಸ್ತರನ್ನು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರನ್ನಾಗಿಸಿದ್ದು ಎಲ್ಲರಿಗೂ ಒಪ್ಪಿಗೆಯಾಗಿದ್ದರೂ ಚಿತ್ರ ನಿರ್ಮಾಣದ ಗಂಧ ಗಾಳಿ ಗೊತ್ತಿಲ್ಲದಂತಹ ರಾಜಕೀಯ ಹಿನ್ನೆಲೆಯ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನಿಯಮಿಸಿದ್ದು ಎಲ್ಲಾ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಶಾಮ್ ಬೆನಗಲ್, ಆಡೂರು ಗೋಪಾಲಕೃಷ್ಣನ್, ಗಿರೀಶ್ ಕಾರ್ನಾಡರಂತಹ ಪ್ರತಿಭಾವಂತರು   ತರಬೇತಿ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಅಂತವರು ಕೂತ ಜಾಗದಲ್ಲಿ ರಾಜಕೀಯ ಪ್ರೇರಿತ ವ್ಯಕ್ತಿ ಕೂಡುವುದನ್ನು ವಿದ್ಯಾರ್ಥಿಗಳಿಗೆ ಒಪ್ಪಲು ಸಾಧ್ಯವಾಗುತ್ತಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಯಾವುದೇ ಸರಕಾರ ಬಂದರೂ ಪುಣೆಯ ತರಬೇತಿ ಸಂಸ್ಥೆ ಮಾತ್ರ ಎಂದೂ ರಾಜಕೀಕರಣಗೊಂಡಿದ್ದಿಲ್ಲ. ಜಾತೀಯತೆಯ ಮೈಲಿಗೆಯನ್ನು ಅಂಟಿಸಿಕೊಂಡಿಲ್ಲ. ಕೋಮುವಾದೀಕರಣಗೊಂಡಿಲ್ಲ ಹಿಂದಿನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು  ಕಲೆಯನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು ಶ್ರಮಿಸಿದರು. ಆದರೆ.... ಇದಕ್ಕೆ ವಿರುದ್ಧವಾಗಿ ಸಂಸ್ಥೆಯ ಆಡಳಿತವನ್ನು ಕೋಮುವಾದಿ ಪಕ್ಷದ ರಾಜಕಾರಣಿಗೆ ವಹಿಸಿಕೊಡುವುದು ಕಲಾದ್ರೋಹದ ಕೆಲಸವಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ರಾಜಕಾರಣ ಎನ್ನುವುದು ಕಲಾಲೋಕದ ಮೇಲೆಯೂ ಕೂಡಾ ತನ್ನ ಹಿಡಿತವನ್ನು ಸ್ಥಾಪಿಸಲು ಹೊರಟಿದೆ. ಕೇಂದ್ರ ಸರಕಾರದಿಂದ ಸಂಸ್ಥೆಯ ನಿರ್ವಹಣೆಗೆ ಪ್ರತಿ ವರ್ಷ ಬರುವ ಕೊಟ್ಯಾಂತರ (ಹದಿನೈದು ಕೋಟಿಗೂ ಹೆಚ್ಚು) ಅನುದಾನದ ಹಣ ಎಲ್ಲಿ ಭ್ರಷ್ಟ ರಾಜಕೀಯದವರ ಪಾಲಾಗುತ್ತೋ ಎನ್ನುವ ಆತಂಕ ಸಂಸ್ಥೆಯ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಎಲ್ಲಿ ಸಂಸ್ಥೆಯಲ್ಲಿ ಜಾತಿವಾದ ಹಾಗೂ ಕೋಮುವಾದದ ವಿಷಬಳ್ಳಿ ಹಬ್ಬಿ ಅಲ್ಲಿರುವ ಸೌಹಾರ್ಧಯುತವಾದ ವಾತಾವರಣವನ್ನು ವಿಷಮಯಗೊಳಿಸುತ್ತದೋ ಎನ್ನುವ ಸಂಕಟ ವಿದ್ಯಾರ್ಥಿಗಳದ್ದಾಗಿದೆ.

ಎಪ್ಟಿಐಐ ಸಂಸ್ಥೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಆರ್ಯನ್ನಮ್ಮ ಸಂಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಗಜೇಂದ್ರರವರ ನೇಮಕಾತಿ ರದ್ದಾಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ" ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಸೆಂಟ್ರಲ್ ಬೋರ್ಡ ಆಪ್ ಫಿಲಂ ಸರ್ಟಿಫಿಕೇಶನ್ (ಸೆನ್ಸಾರ್ ಬೋರ್ಡ) ಸಂಸ್ಥೆಗೂ ಸಹ ಇದೇ ರೀತಿ ರಾಜಕೀಯದ ವ್ಯಕ್ತಿಯನ್ನು ಆಯ್ಕೆಮಾಡಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಿತು. ರೀತಿ ಆಗುವುದಕ್ಕೆ ನಮ್ಮ ಸಂಸ್ಥೆಯಲ್ಲಿ ನಾವು ಅವಕಾಶ ಕೊಡುವುದಿಲ್ಲ" ಎಂದು ವಿದ್ಯಾರ್ಥಿಗಳ ನಾಯಕ ಹರಿಶಂಕರ ನಚಿಮುತ್ತು ಕೆರಳಿ ನಿಂತಿದ್ದಾರೆ.

ಗಜೇಂದ್ರ ಸಿಂಗ್ ಚೌಹಾಣ್
ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಬಹುದಾದವರಲ್ಲಿ ಚಿತ್ರಸಾಹಿತಿ ಗುಲ್ಜಾರ್, ಚಿತ್ರ ನಿರ್ದೇಶಕ ಶಾಮ್ ಬೆನಗಲ್ ಹಾಗೂ ಆಡೂರ್ ಗೋಪಾಲಕೃಷ್ಣರವರಂತಹ ಚಲನಚಿತ್ರ ರಂಗದ ದಿಗ್ಗಜರ ಹೆಸರುಗಳಿದ್ದವು. ಆದರೆ ಎಲ್ಲಾ ಪ್ರತಿಭಾವಂತರನ್ನೂ ಹಿಂದಿಕ್ಕಿ ರಾಜಕೀಯ ಹಿತಾಸಕ್ತಿಗಾಗಿ ಗಜೇಂದ್ರ ಸಿಂಗ್ ರವರನ್ನು ಆಯ್ಕೆಮಾಡಿದ್ದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ಗಜೇಂದ್ರರವರು ಪಕ್ಕಾ ಕಟ್ಟರ್ ಆರ್ ಎಸ್ ಎಸ್ ಹಿನ್ನಲೆಯವರಾಗಿದ್ದೂ ಸಹ ಅವರ ಆಯ್ಕೆಯನ್ನು ಸುಲಭಗೊಳಿಸಿದೆ. ಇಷ್ಟಕ್ಕೂ ಗಜೇಂದ್ರ ಸಿಂಗ್ರವರದು ದೃಶ್ಯಮಾಧ್ಯಮದಲ್ಲಿರುವ ಅನುಭವ ಏನೆಂದರೆ ದೂರದರ್ಶನದಲ್ಲಿ ಪ್ರಸಾರವಾದ ಬಿ.ಆರ್.ಚೋಪ್ರಾ ನಿರ್ದೇಶನದಮಹಾಭಾರತಹಿಂದಿ ಧಾರವಾಹಿಯಲ್ಲಿ ಯುಧಿಷ್ಠಿರನ ಪಾತ್ರ ನಿರ್ವಹಿಸಿದ್ದು. ಹಾಗೂ ನೂರಕ್ಕೂ ಹೆಚ್ಚು ಸಿನೆಮಾಗಳಲ್ಲಿ ಚಿಕ್ಕಪುಟ್ಟ ಪೋಷಕ ಪಾತ್ರಗಳಲ್ಲಿ ನಟಿಸಿದ್ದು. ಗಜೇಂದ್ರರವರ ನೇಮಕಾತಿ ಅವರೊಬ್ಬ ನಟ ಎನ್ನುವ ಹಿನ್ನಲೆಯಲ್ಲಿ ನಡೆಯದೇ ಅವರೊಬ್ಬ ಕಟ್ಟಾ ಆರ್ ಎಸ್ ಎಸ್-ಬಿಜೆಪಿ ವ್ಯಕ್ತಿ ಎನ್ನುವುದರ ಮೇಲೆ ನಡೆದಿದ್ದೇ ಈಗ ವಿವಾದದ ಕೇಂದ್ರವಾಗಿದೆ. ಈಗ ಇಡೀ ಕೇಂದ್ರ ಸರಕಾರವೇ ಯುಧಿಷ್ಠಿರ ಪುತ್ರವ್ಯಾಮೋಹಿಯಾದಂತೆ ಗಂಜೇಂದ್ರ ವ್ಯಾಮೋಹಿಯಾಗಿ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತಿದೆ. ಸಂಸ್ಥೆಯ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಧರ್ಮಯುದ್ಧ ಸಾರಿದ್ದಾರೆಸಂಸ್ಥೆಯ ಕ್ಯಾಂಪಸ್ ತುಂಬಾಗಜೇಂದ್ರ ಗೋ ಬ್ಯಾಕ್ಸ್ಲೋಗನ್ ಮೊಳಗುತ್ತಿದೆ.

ವಿದ್ಯಾರ್ಥಿಗಳ ಆಕ್ರೋಶಕ್ಕೆ ಇನ್ನೊಂದು ಪ್ರಮುಖ ಕಾರಣವೂ ಇದೆ. ಎಪ್ಟಿಐಐ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಸರಕಾರವು ಚಿತ್ರ ನಿರ್ದೇಶಕ ಶೈಲೇಷ್ ಗುಪ್ತಾರವರನ್ನು ನಿಯಮಿಸಿದೆ. ಗುಪ್ತಾ ನರೇಂದ್ರ ಮೋದಿಯವರ ಸಾಧನೆಯನ್ನು ಹೊಗಳಿ ಕಿರುಚಿತ್ರವನ್ನು ನಿರ್ಮಿಸಿದವರುಮೋದಿಯ ಹೊಗಳುಬಟ್ಟರಿಗೆ ಆಡಳಿತ ಮಂಡಳಿ ಸದಸ್ಯತ್ವವನ್ನು ಕಾಣಿಕೆಯಾಗಿ ನೀಡಿದರೆ.... ಬಿಜೆಪಿ ಪಕ್ಷದ ಸಕ್ರೀಯ ನಾಯಕನಿಗೆ ಸಂಸ್ಥೆಯ ಅಧ್ಯಕ್ಷಗಿರಿಯನ್ನೇ ಪಕ್ಷನಿಷ್ಠೆಗೆ ಪ್ರತಿಫಲವಾಗಿ ಕೊಡಲಾಗಿದೆ. ಕಲೆ ಸಂಸ್ಕೃತಿ ಎನ್ನುವುದು ರಾಜಕೀಕರಣಗೊಳ್ಳುತ್ತಿರುವುದು ನಿಜಕ್ಕೂ ಅಕ್ಷಮ್ಯ. ಸ್ವಜನಪಕ್ಷಪಾತ ಹಾಗೂ ರಾಜಕೀಯ ಪ್ರೇರಿತ ನೇಮಕಾತಿಯ ವಿರುದ್ಧ ಸಂಸ್ಥೆಯ ವಿದ್ಯಾರ್ಥಿಗಳು ತಿರುಗಿ ಬಿದ್ದಿದ್ದಾರೆ. ವ್ಯವಸ್ಥೆಯನ್ನು ಆಳುವವರು ಏನು ಮಾಡಿದರೂ ನಡೆಯುತ್ತದೆ, ಆಳುವ ಶಕ್ತಿ ನಮ್ಮಲ್ಲಿದೆ ಎಂದು ಸರ್ವಾಧಿಕಾರಿ ಮನೋಭಾವ ಹೊಂದಿದವರಿಗೆ ವಿದ್ಯಾರ್ಥಿಗಳ ಪ್ರತಿಭಟನೆ ನುಂಗಲಾರದ ತುತ್ತಾಗಿದೆ. ತೆರೆಮರೆಯಲ್ಲಿ ವಿದ್ಯಾರ್ಥಿಗಳ ಒಕ್ಕಟ್ಟನ್ನು ಒಡೆದುಹಾಕುವ ಹಾಗೂ ಬಂಡಾಯವನ್ನು ಒತ್ತಡಗಳಿಂದ ಶಮನಗೊಳಿಸುವ ಹುನ್ನಾರಗಳೂ ಸಹ ಜಾರಿಯಲ್ಲಿವೆ. ಏನೇ ಆದರೂ ವಿದ್ಯಾರ್ಥಿಗಳ ನ್ಯಾಯಯುತವಾದ ಬೇಡಿಕೆಗೆ ಜಯದೊರೆಯಲೇಬೇಕಿದೆ. ಸರಕಾರದ ಕುತಂತ್ರಗಳಿಗೆ, ರಾಜಕೀಯ ಸ್ವಜನಪಕ್ಷಪಾತಕ್ಕೆ ಸೋಲಾಗಲೇಬೇಕಿದೆ. ಹೀಗಾದಾಗಲೇ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಇಲ್ಲವಾದರೆ ಜ್ಯಾತ್ಯಾತೀತ ನೆಲೆಯನ್ನು ಹೊಂದಿರುವ ಕಲೆ ಸಾಹಿತ್ಯ ಸಂಸ್ಕೃತಿಗಳ ಬೇರುಗಳು ಕೂಡಾ ಅತಂತ್ರಗೊಳ್ಳುತ್ತವೆ. ಜಾತೀಯತೆ, ಧರ್ಮಾಂಧತೆ ಹಾಗೂ ವಿವೇಚನಾರಹಿತ ರಾಜಕೀಯತೆಗಳು ಸಮಾಜದ ಏಕತೆಯನ್ನು ಛಿದ್ರಗೊಳಿಸುತ್ತದೆ.

ಗಜೇಂದ್ರ ಸಿಂಗ್ ಚೌಹಾಣ್ ಬಿಜೆಪಿ ಪರ ಪ್ರಚಾರದಲ್ಲಿ
ದೃಶ್ಯಮಾಧ್ಯಮ ಕುರಿತು ತರಬೇತಿಯನ್ನು ಕೊಡುತ್ತಿರುವ ಎಪ್ಟಿಐಐ ಸಂಸ್ಥೆಯು  1960 ರಲ್ಲಿ ಪೂನಾ ನಗರದಲ್ಲಿಫಿಲಂ ಇನ್ಸ್ಟಿಟ್ಯೂಟ್ ಆಪ್ ಇಂಡಿಯಾಹೆಸರಲ್ಲಿ ಆರಂಭವಾಯಿತು. ನಂತರ ಟಿವಿ ಮಾಧ್ಯಮ ಪ್ರಮರ್ಧಮಾನಕ್ಕೆ ಬಂದಾಗ ಸಿನೆಮಾ ಜೊತೆಗೆ ಟೀವಿ ಹೆಸರನ್ನೂ ಸೇರಿಸಲಾಯಿತು. ಡೆಲ್ಲಿಯಲ್ಲಿದ್ದ ಟೆಲಿವಿಜನ್ ವಿಂಗನ್ನು ಪೂನೆಯಲ್ಲಿದ್ದ ಫಿಲಂ ಇನ್ಸ್ಟಿಟ್ಯೂಟ್ ಆಪ್ ಇಂಡಿಯಾ ಸಂಸ್ಥೆಯ ಜೊತೆಗೆ ಸೇರಿಸಿ   1971 ರಲ್ಲಿದಿ ಫಿಲಂ ಆಂಡ್ ಟೆಲಿವಿಜನ್ ಇನ್ಸ್ಟಿಟ್ಯೂಟ್ ಆಪ್ ಇಂಡಿಯಾಎಂದು ಹೆಸರನ್ನು ಬದಲಾಯಿಸಲಾಯಿತು. ಸಿನೆಮಾ ಕೋರ್ಸಿನಂತೆಯೇ ಟೆಲಿವಿಜನ್ ಟ್ರೇನಿಂಗ್ ಕೋರ್ಸಗಳನ್ನು ಆರಂಭಿಸಲಾಯಿತು. ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸಿನೆಮಾ ಮಾಧ್ಯಮದಲ್ಲಿ ಬೇಡಿಕೆ ಇದೆ. ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿದ ಚಲನಚಿತ್ರ ಹಾಗೂ ಕಿರುಚಿತ್ರಗಳು ದೇಶ ವಿದೇಶಗಳ ಸಿನೆಮಾ ಉತ್ಸವಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿವೆ. ವೃತ್ತಿಪರ ತರಬೇತಿಗಳನ್ನು ಕೊಡಲಾಗುತ್ತದೆ. ದೇಶದಲ್ಲೇ ಹೆಸರುವಾಸಿಯಾಗಿರುವ ಸಂಸ್ಥೆಯ ಮೇಲೆ ಈಗ ರಾಜಕೀಯದವರ ಕಣ್ಣು ಬಿದ್ದಿದೆ. ಎಲ್ಲೆಲ್ಲಿ ಭ್ರಷ್ಟ ರಾಜಕೀಯತೆ ಪ್ರವೇಶಿಸಿದೆಯೋ ಅಲ್ಲೆಲ್ಲಾ ಅರಾಜಕತೆ ಸೃಷ್ಟಿಯಾಗಿ ಸಂಸ್ಥೆಗಳೇ ನಾಶವಾಗಿದ್ದಕ್ಕೆ  ಬೇಕಾದಷ್ಟು ಉದಾಹರಣೆಗಳಿವೆಸ್ವಾರ್ಥ ರಾಜಕಾರಣಿಗಳ ಕೈಗೆ ಸಿಕ್ಕು ಫಿಲಂ ಸಂಸ್ಥೆ ಕೂಡಾ ಹಾಳಾಗದಿರಲಿ, ತನ್ನ ಹೆಸರನ್ನು ಕೆಡಿಸಿಕೊಳ್ಳದಿರಲಿ ಎನ್ನುವ ಉದ್ದೇಶದಿಂದ ಈಗ ಅಲ್ಲಿಯ ವಿದ್ಯಾರ್ಥಿಗಳು ಸರಕಾರದೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. ಐದೂವರೆ ದಶಕಗಳಿಂದ ದೃಶ್ಯಮಾಧ್ಯಮ ತರಬೇತಿಯಲ್ಲಿ ಶ್ರಮಿಸುತ್ತಿರುವ ಹಾಗೂ ಗಿರೀಶ್ ಕಾಸರವಳ್ಳಿಯವರಂತಹ ಅನೇಕ ಪ್ರತಿಭಾವಂತರನ್ನು ರೂಪಿಸಿದಫಿಲಂ ಮತ್ತು ಟೆಲಿವಿಜನ್ ಸಂಸ್ಥೆಯು ತನ್ನ ಘನತೆಯನ್ನು ಉಳಿಸಿಕೊಳ್ಳಲಿ, ಯಾವುದೇ ಕಾರಣಕ್ಕೂ ರಾಜಕೀಯ ಹಿತಾಸಕ್ತಿಗಳಿಗೆ ಬಲಿಯಾಗದಿರಲಿ  ಎನ್ನುವುದೇ ಬಹುತೇಕರ ಆಶಯವಾಗಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ಚಲನಚಿತ್ರ ಹಾಗೂ ಟೆಲಿವಿಜನ್ ಉದ್ಯಮದ ಎಲ್ಲರೂ ಬೆಂಬಲ ಕೊಡಬೇಕಾಗಿದೆ. ಜನಸಂಸ್ಕೃತಿಯನ್ನು ಉಳಿಸಲು ಹೋರಾಡುತ್ತಿರುವ ಎಲ್ಲಾ ಸಂಘ ಸಂಸ್ಥೆಗಳೂ ಸಹ ಪ್ರತಿಭಟನೆಕಾರರ ಬೆನ್ನಿಗೆ ಬೆಂಗಾವಲಾಗಿ ನಿಲ್ಲಲೇಬೇಕಿದೆ. ಸ್ವಾರ್ಥಿ ರಾಜಕಾರಣಿಗಳ ಹುನ್ನಾರವನ್ನು ಸೋಲಿಸಲೇಬೇಕಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಯಶಸ್ವಿಯಾಗುವುದರ ಜೊತೆಗೆ ಭ್ರಷ್ಟ ರಾಜಕೀಯ ಹಿತಾಸಕ್ತಿ ಎಲ್ಲೆಲ್ಲಿ ಹಸ್ತಕ್ಷೇಪ ಮಾಡುತ್ತದೋ ಅಲ್ಲೆಲ್ಲಾ ಪ್ರತಿಭಟನೆಗಳು ತೀವ್ರಗೊಳ್ಳಲು ಪ್ರೇರೇಪಣೆ ನೀಡುವಂತಾಗಬೇಕಿದೆ

                               -  ಶಶಿಕಾಂತ ಯಡಹಳ್ಳಿ