ಮಂಗಳವಾರ, ಜೂನ್ 2, 2015

ಅಗಲಿದ ರಂಗಪ್ರತಿಭೆ ಅಬ್ದುಲ್‌ಸಾಬ್‌ರವರಿಗೆ ರಂಗನಮನ :



ಅದು 60 ದಶಕ, ವೃತ್ತಿ ಕಂಪನಿ ನಾಟಕಗಳ ಸುವರ್ಣ ದಿನಮಾನಗಳು. ಕಂಪನಿ ನಾಟಕಗಳು ನಾಡಿನಲ್ಲಿ  ಸಾಂಸ್ಕೃತಿಕ ಸಂಚಲನವನ್ನುಂಟು ಮಾಡುವ ಕಾಲವದು. ನಾಟಕಾಸಕ್ತಿ ಹಾಗೂ ಹೊಟ್ಟೆಪಾಡಿಗಾಗಿ ಗ್ರಾಮೀಣ ಪ್ರದೇಶದ ಪ್ರತಿಭೆಗಳು ಬಹುತೇಕ ನಾಟಕ ಕಂಪನಿಗಳಲ್ಲಿ ಸೇರಿಕೊಂಡಿದ್ದರು. ಗದಗ ಜಿಲ್ಲೆಯ ಮುಳುಗುಂದ ಊರಿನ ಅಬ್ದುಲ್ಸಾಬ್ ಅಣ್ಣಿಗೇರಿ ಎನ್ನುವ ಹದಿನೈದು ವರ್ಷ ವಯಸ್ಸಿನ ಬಾಲಕ ಬಣ್ಣದ ಲೋಕದತ್ತ ಆಕರ್ಷಿತನಾದ. ಬಾಲನಟನಾಗಿ ಕಂಪನಿ ನಾಟಕದಲ್ಲಿ 1954ರಲ್ಲಿ ಸೇರಿಕೊಂಡ ಅಬ್ದುಲ್ಸಾಬ್ಗೆ ರಂಗಭೂಮಿಯೇ ಮನೆಯಾಯಿತು, ಬದುಕಾಯಿತು, ಭವಿಷ್ಯವೂ ಆಯಿತು. ಗುಬ್ಬಿ ವೀರಣ್ಣನವರ ಕಣ್ಣಿಗೆ ಬಿದ್ದು ಗುಬ್ಬಿ ಕಂಪನಿಯಲ್ಲಿ ಹಲವಾರು ವರ್ಷಗಳ ಕಾಲ ನಟನಾಗಿ ತೊಡಗಿಸಿಕೊಂಡ ಅಬ್ದುಲ್ಸಾಬ್ ನಂತರ ಹಲವಾರು ವೃತ್ತಿ ಕಂಪನಿಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದರು. ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಅಭಿನಯಿಸುತ್ತಾ ಜನಪ್ರೀಯತೆಯನ್ನು ಪಡೆದರು. ಅಬ್ದುಲ್ಸಾಬ್ರವರು ಅತ್ಯಮೋಘವಾಗಿ ಅಭಿನಯಿಸಿದ ಅಲ್ಲಮಪ್ರಭು, ಸತ್ಯಹರಿಶ್ಚಂದ್ರ ಪಾತ್ರಗಳಂತೂ ಎಂದೂ ಮರೆಯಲಾಗದಂತಹವು. ಪರಷುರಾಮ ಹಾಗೂ ರಾಮನ ಪಾತ್ರಗಳನ್ನು ಅದ್ಭುತವಾಗಿ ನಟಿಸಿ ಪ್ರೇಕ್ಷಕರನ್ನು ಸಮ್ಮೋಹಿತರನ್ನಾಗಿಸಿದ್ದರು.  ಕಲೆ ಎನ್ನುವುದು ಧರ್ಮಾತೀತವಾದದ್ದು ಎನ್ನುವುದಕ್ಕೆ ಸಾಕ್ಷಿಯಂತಿದ್ದ ಅಬ್ದುಲ್ಸಾಬ್ರವರು ರಂಗಭೂಮಿಯಲ್ಲಿ ಕೋಮುಸೌಹಾರ್ಧದ ಪ್ರತೀಕವಾಗಿದ್ದರು.

ಅವರ ಪ್ರತಿಭೆ ಹಾಗೂ ಜನಪ್ರೀಯತೆಗಳು ಅವರನ್ನು ರಂಗಭೂಮಿಯ ಚೌಕಟ್ಟನ್ನು ದಾಟಿಸಿ ಚಲನಚಿತ್ರ ಕ್ಷೇತ್ರಕ್ಕೂ ಕರೆದೊಯ್ದಿತು. ಅಬ್ದುಲ್ ಸಾಬರವರು ನೋಡುವುದಕ್ಕೆ ತೆಲುಗಿನ ಸುಪ್ರಸಿದ್ದ ನಟ-ನಾಯಕ ಎನ್ ಟಿ ಆರ್ ರವರನ್ನೇ ಹೋಲುತ್ತಿದ್ದರು. ಗಾನಯೋಗಿ ಪಂಚಾಕ್ಷರಿ ಗವಾಯಿ, ಮಮತೆಯ ಮಡಿಲು.... ಸೇರಿದಂತೆ ಕೆಲವಾರು ಸಿನೆಮಾಗಳಲ್ಲೂ ತಮ್ಮ ಅಭಿನಯ ಚತುರತೆ ಮೆರೆದ ಅಬ್ದುಲ್ಸಾಬ್ರವರನ್ನು ಹಿಂದಿ ಚಲನಚಿತ್ರ ರಂಗವೂ ಕೈಬೀಸಿ ಕರೆಯಿತು. ದಸ್ತಾನೆ, ಮಜನೋ, ಮೈ ಚುಪ್ ನಹಿ ರಹೂಂಗಾ, ಜಂಗ್ ಸೇರಿದಂತೆ ಕೆಲವಾರು ಹಿಂದಿ ಸಿನೆಮಾಗಳಲ್ಲೂ ಸಹ ಅಬ್ದುಲ್ಸಾಬ್ ನಟಿಸಿದ್ದರು. ಕನ್ನಡ ಹಾಗೂ ಹಿಂದಿ ಭಾಷೆಯ ಮೇಲಿರುವ ಪ್ರಭುತ್ವ ಮತ್ತು ಅಭಿನಯ ಕಲೆಯಲ್ಲಿರುವ ಪ್ರತಿಭೆ ಎರಡೂ ಸೇರಿ ಅಬ್ದುಲ್ಸಾಬ್ರವರನ್ನು ಜನಪ್ರೀಯಗೊಳಿಸಿದ್ದರು. ತಮ್ಮ ಪತ್ನಿ ಪುಷ್ಪಮಾಲಾ ಅಣ್ಣಿಗೇರಿಯವರನ್ನೂ ಸಹ ರಂಗಭೂಮಿಯಲ್ಲಿ ನಟಿಸಲು ಪ್ರೋತ್ಸಾಹಿಸಿ ಅವರನ್ನೂ ಜನಪ್ರೀಯ ರಂಗನಟಿಯನ್ನಾಗಿ ರೂಪಗೊಳಿಸಿ ರಂಗಭೂಮಿಗೆ ಕೊಡುಗೆಯನ್ನಾಗಿ ಕೊಟ್ಟರು.

ಅಬ್ದುಲ್ಸಾಬ್ರವರ ಪ್ರತಿಭೆ ಹಾಗೂ ಕೊಡುಗೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ, ಹಾಗೆಯೇ ಕಳೆದ ವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರಕಾರ ಘೋಷಿಸಿತ್ತಾದರೂ ಅನಾರೋಗ್ಯದಿಂದ ಬೆಂಗಳೂರಿಗೆ ಬಂದು ಪ್ರಶಸ್ತಿ ಸ್ವೀಕರಿಸಲು ಅಬ್ದುಲ್ಸಾಬ್ರವರಿಗೆ ಸಾಧ್ಯವಾಗಲಿಲ್ಲ. ಆದರೆ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನವನ್ನು ಸರಕಾರ ಹಮ್ಮಿಕೊಂಡಿರುವಾಗ ಅಬ್ದುಲ್ಸಾಬ್ರವರನ್ನು ಆಹ್ವಾನಿಸಿ ಪ್ರಶಸ್ತಿಯನ್ನು ವಿಶೇಷವಾಗಿ ಕೊಡಮಾಡಿದ್ದು ದಾಖಲಾರ್ಹ ಸಂಗತಿಯಾಗಿದೆ ಹಾಗೂ ಕಲಾವಿದನೊಬ್ಬನಿಗೆ ಸರಕಾರ ಕೊಡಮಾಡಬಹುದಾದ ಗೌರವವೂ ಆಗಿದೆ. ಅದಕ್ಕೆ ಅಬ್ದುಲ್ಸಾಬ್ ಅತ್ಯಂತ ಯೋಗ್ಯರೂ ಆಗಿದ್ದಾರೆ. ವಯೋಸಹಜ ಆರೋಗ್ಯದ ಸಮಸ್ಯೆಗಳಿಂದ ಅನಾರೋಗ್ಯಕ್ಕೊಳಗಾದ ಅಬ್ದುಲ್ಸಾಬ್ರವರು ತಮ್ಮ ಎಪ್ಪತ್ತಾರನೇ ವಯಸ್ಸಿನಲ್ಲಿ 2015, ಜೂನ್ 1 ರಂದು ಹುಬ್ಬಳ್ಳಿಯ ಗಣೇಶಪೇಟೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ರಂಗಭೂಮಿಗಾಗಿ ಬದುಕು ಸವೆಸಿ ಐದು ದಶಕಗಳ ಕಾಲ ಅಪಾರವಾದ ಕೊಡುಗೆ ನೀಡಿದಂತಹ ಅಬ್ದುಲ್ಸಾಬ್ ಅಣ್ಣಿಗೇರಿರವರಿಗೆ ರಂಗನಮನಗಳು....

                             -ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ