ಶನಿವಾರ, ಜೂನ್ 13, 2015

'ವೇಷ' : ಕನ್ನಡ ರಂಗಭೂಮಿಯಲ್ಲೊಂದು ಪ್ರಯೋಗಶೀಲ ನಾಟಕ

ವೇಷದಲ್ಲಿ ಸ್ತ್ರೀ-ಪುರುಷ ತುಮುಲಗಳ ಅನಾವರಣ :




ಆಧುನಿಕ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಬೇಕಾದಷ್ಟು ನಾಟಕಗಳು ಕಾಲಕಾಲಕ್ಕೆ ಬಂದಿವೆ. ಬದುಕಿನ ಭಾವ ಬಣ್ಣಗಳನ್ನು ರಂಗದಂಗಳದಲ್ಲಿ ಪ್ರತಿಬಿಂಬಿಸಿವೆ. ಆದರೆ ಮೊಟ್ಟಮೊದಲ ಬಾರಿಗೆ ರಂಗನೇಪತ್ಯವನ್ನೇ ಮುಖ್ಯಭೂಮಿಕೆಯಾಗಿಸಿಕೊಂಡು ಕಲಾವಿದರ ತಲ್ಲಣಗಳನ್ನು ತೋರಿಸುವ ಸಾರ್ಥಕ ಪ್ರಯತ್ನವನ್ನು ವೇಷ ನಾಟಕ ಮಾಡಿದೆ. ವಿಕಾಸ ನೇಗಿಲೋಣಿಯವರು ರಚಿಸಿದ ವೇಷ ನಾಟಕವನ್ನು ರಂಗವರ್ತುಲ ರಂಗತಂಡ ನಿರ್ಮಿಸಿದ್ದು ನಿತೀಶ್ ಶ್ರೀಧರರವರು ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ. 2015, ಜೂನ್ 12 ರಂದು ಕೆ.ಹೆಚ್.ಕಲಾಸೌಧದಲ್ಲಿ ವೇಷ ಪ್ರದರ್ಶನಗೊಂಡು ನೋಡುಗರಲ್ಲಿ ವಿಶೇಷ ವಿಸ್ಮಯವನ್ನು ಹುಟ್ಟಿಸಿತು.

ಯಕ್ಷಗಾನ ಕಲಾ ಮಾಧ್ಯಮವನ್ನು ಬಳಿಸಿಕೊಂಡು ಯಕ್ಷಗಾನದ ನೇಪತ್ಯವಾದ ಚೌಕಿಮನೆಯಲ್ಲಿ ನಡೆಯಬಹುದಾದ ವಿದ್ಯಮಾನವನ್ನು ರಂಗ ಮಾಧ್ಯಮಕ್ಕೆ ಅಳವಡಿಸಿದ್ದೇ ಹೊಸತನದಿಂದ ಕೂಡಿದೆ. ಸಾಂಪ್ರದಾಯಿಕವಾದ ನಾಟಕ ನಿರ್ಮಿತಿ ಸೂತ್ರಗಳನ್ನೆಲ್ಲಾ ಬದಿಗಿಟ್ಟು ಪ್ರಯೋಗಶೀಲವಾಗಿ ನಾಟಕ ಕಟ್ಟಿಕೊಡಲಾಗಿದೆ. ಇತ್ತ ಪೂರ್ತಿ ಯಕ್ಷಗಾನವೂ ಅಲ್ಲ, ಆತ್ತ ರಂಗನಾಟಕವೂ ಅಲ್ಲ. ಇವೆರಡನ್ನೂ ಬ್ಲೆಂಡ್ ಮಾಡಿ ಯಕ್ಷಗಾನದ ಚೌಕಿಮನೆಯಲ್ಲಿ ನಡೆಯುವ ಗಂಡು ಹೆಣ್ಣು ವೇಷಧಾರಿಗಳ ಆಂತರಂಗದ ತಳಮಳಗಳನ್ನು ಬಹಿರಂಗವಾಗಿ ಅನಾವರಣಗೊಳಿಸುವ ಪ್ರಯತ್ನ ಕನ್ನಡ ರಂಗಭೂಮಿಯಲ್ಲೇ ವಿಶಿಷ್ಟವಾಗಿದೆ.

ತುಂಬಾ ಸಂಕೀರ್ಣವೆನಿಸುವ ಗಂಡು ಹೆಣ್ಣಿನ ನಡುವಿನ ಮನೋರಂಗದ ವಿದ್ಯಮಾನಗಳ ಕುರಿತು ನಾಟಕವು ಸಂವಾದಿಸುತ್ತದೆ. ರಂಗದ ಮೇಲೆ ಗಂಡು ಹೆಣ್ಣಾಗುವ, ಹೆಣ್ಣು ಗಂಡಾಗುವಂತಹ ವೇಷಗಾರಿಕೆ-ಅಭಿನಯ ಸಾಮಾನ್ಯವಾದದ್ದು. ಆದರೆ ಸ್ತ್ರೀವೇಷಧಾರಿಯಾದ ಗಂಡಿನ ಹಾಗೂ ಪುರುಷ ವೇಷಧಾರಿಯಾದ ಹೆಣ್ಣಿನ ಅಂತರಂಗದ ಆತಂಕ ಮತ್ತು ಅನುಭೂತಿಯನ್ನು ನಾಟಕದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾತ್ರ ಅಸಾಮಾನ್ಯವಾದದ್ದು. ನಾಟಕದಲ್ಲಿ ಹೇಳಿಕೊಳ್ಳುವಂತ ಕಥೆಯೇನಿಲ್ಲ. ನಟರ ತುಮುಲವನ್ನು ತೋರಿಸುವ ಉದ್ಧೇಶದ ನಾಟಕಕ್ಕೆ ಕಥೆಯ ಚೌಕಟ್ಟಿನ ಹಂಗೂ ಇಲ್ಲ. ಯಕ್ಷಗಾನ ಪ್ರಸಂಗಗಳಿಗಿರುವಂತೆ ಭಾಗವತರ ಹಿಮ್ಮೇಳದ ನಿರೂಪನೆಯ ಅಗತ್ಯವೂ ಇಲ್ಲ. ಮುಖ್ಯವಾಗಿ ಎರಡು ಪಾತ್ರಗಳು ತಮ್ಮ ಪಾತ್ರಗಳ ವಿರೋಧಾಬಾಸ ಹಾಗೂ ಅದರಿಂದ ಉಂಟಾದ ಪರಿಣಾಮಗಳ ಬಗ್ಗೆ ಚರ್ಚಿಸುತ್ತಾ ಸಾಗುತ್ತವೆ.



ಅವಳ ಹೆಸರು ವತ್ಸಲಾ. ಹಲವಾರು ವರ್ಷಗಳಿಂದ ಯಕ್ಷಗಾನದ ಮೇಳದಲ್ಲಿ ಪುರುಷ ಪಾತ್ರವನ್ನೇ ಮಾಡುತ್ತಿರುತ್ತಾಳೆ. ಅವನು ರಾಧಾಕೃಷ್ಣ ಜೋಯಿಸ... ದಶಕಗಳ ಕಾಲದಿಂದ ಯಕ್ಷಪ್ರಸಂಗಗಳಲ್ಲಿ ಸ್ತ್ರೀ ವೇಷದ ಅಭಿನಯಕ್ಕಾಗಿಯೇ ಜನಪ್ರೀಯನಾಗಿರುತ್ತಾನೆ. ಇಬ್ಬರೂ ಒಂದೇ ಯಕ್ಷಮೇಳದ ಕಲಾವಿದರು. ರಾಧಾಕೃಷ್ಣ ಪ್ರೀತಿಸಿದ ಹುಡುಗಿ ಆತನ ಸ್ತ್ರೀವೇಷದಿಂದ ಅಸಮಾಧಾನ ಹೊಂದಿ ದೂರವಾಗಿರುತ್ತಾಳೆ. ಇದರಿಂದ ಜರ್ಜರಿತನಾದ ರಾಧಾಕೃಷ್ಣ ವಿವಾಹಿತೆಯಾಗಿದ್ದ ಸಹಪಾತ್ರಧಾರಿ ವತ್ಸಲಾಳನ್ನು ಮದುವೆಯಾಗು ಎಂದು ದುಂಬಾಲು ಬೀಳುತ್ತಾನೆ. ತನ್ನದೇ ಆದ ಆಂತರಿಕ ಹಾಗೂ ಸಾಮಾಜಿಕ ಕಾರಣಗಳಿಗೆ ಅವಳೂ ನಿರಾಕರಿಸುತ್ತಾಳೆ. ಅವನನ್ನು ಸಂಪೂರ್ಣ ಪುರುಷನೆಂದು ಒಪ್ಪಿಕೊಳ್ಳಲು ಅವಳಿಂದ ಸಾಧ್ಯವಾಗುವುದೇ ಇಲ್ಲ. ಇದರಿಂದಾಗಿ ತಾನು ಹಾಕುವ ಸ್ತ್ರೀವೇಷದ ಮೇಲೆಯೇ ಜಿಗುಪ್ಸೆ ಹೊಂದಿದ ರಾಧಾಕೃಷ್ಣ ಕೊಟ್ಟ ಕೊನೆಗೆ ಯಕ್ಷಪ್ರಸಂಗದಲ್ಲಿಯೇ ತನ್ನ ಸ್ತ್ರೀ ವೇಷವನ್ನು ಸಾರ್ವಜನಿಕವಾಗಿ ವಿಸರ್ಜಿಸಿ ಸಂಪೂರ್ಣ ಪುರುಷನಾದ ತೃಪ್ತಿಯನ್ನು ಪಡೆಯುತ್ತಾನೆ. ನಾಟಕದ ಎಳೆ ಇಷ್ಟೇ ಆದರೂ ಅದು ಹೊರಹೊಮ್ಮಿಸುವ ಅರ್ಥಗಳು ಹಲವಾರಿವೆ.

ಪುರುಷ ಪ್ರಧಾನ ವ್ಯವಸ್ಥೆಯ ಪಾಳೇಗಾರಿಕೆ ಮನೋಭಾವ ಹಾಗೂ ಪುರುಷ ಶ್ರೇಷ್ಠತೆ ಸಾರುವ ಬ್ರಾಹ್ಮಣ್ಯದ ಮನುವಾದಿ ಪ್ರಭಾವ ನಾಟಕದ ಪ್ರತಿ ಪಾತ್ರ, ಸನ್ನಿವೇಶ ಹಾಗೂ ಉದ್ದೇಶದ ಮೇಲೆ ಗಾಢವಾಗಿ ಆವರಿಸಿಕೊಂಡಂತಿದೆ. ವತ್ಸಲಾ ಹುಟ್ಟಿನಿಂದ ಹೆಣ್ಣಾಗಿದ್ದರೂ ಗಂಡು ವೇಷ ಧರಿಸಿದಾಗ ಸ್ವಾತಂತ್ರ್ಯವನ್ನು ಅನುಭವಿಸಿ ಧನ್ಯತೆಯನ್ನು ಪಡೆಯಲು ನೋಡುತ್ತಾಳೆ. ಸಿಗರೇಟ್ ಸೇದುವುದರಿಂದ ಹಿಡಿದು ಸಾರ್ವಜನಿಕವಾಗಿ ಮೂತ್ರಿಸುವವರೆಗೂ ಗಂಡಸರನ್ನೇ ಅನುಕರಿಸುತ್ತಾಳೆ. ತಾನು ರಂಗಸ್ಥಳದಲ್ಲಿ, ನೇಪತ್ಯದಲ್ಲಿ ಗಂಡಸಾಗಿ ಮೆರೆಯುತ್ತಾ ಪುರುಷಹಂಕಾರಿಯಾದ ತನ್ನ ಗಂಡನಿಗೆ ಪಾಠ ಕಲಿಸಿದೆ ಎಂಬ ಭ್ರಮೆಯಲ್ಲೇ ಸಂಭ್ರಮಿಸುತ್ತಾಳೆ. ಪುರುಷ ಶ್ರೇಷ್ಠತೆಯನ್ನು ಒಪ್ಪಿ ಅಪ್ಪಿ ಅನುಕರಿಸುವ ಪಾತ್ರ ಪಕ್ಕಾ ಪುರುಷ ಪ್ರಾಧಾನ್ಯತೆಯನ್ನು ಬೆಂಬಲಿಸುವಂತೆ ಮೂಡಿಬಂದಿದೆ. ಗಂಡಸರ ಅಹಂಕಾರವನ್ನು ಮೆಟ್ಟಿನಿಲ್ಲಲು ಹೆಣ್ಣು ಗಂಡಸಾಗಿಯೇ ತನ್ನ ವರ್ತನೆಯ ಮೂಲಕ ಉತ್ತರಿಸಬೇಕೆ? ಎನ್ನುವ ಪ್ರಶ್ನೆಯನ್ನು ಪ್ರೇಕ್ಷಕರಲ್ಲಿ ಮೂಡಿಸುತ್ತಾಳೆ.

ಆಕೆ ಪುರುಷ ಪಾತ್ರದಲ್ಲಿ ಮೇಲರಮೆಯನ್ನು ಅನುಭವಿಸಿದರೆ, ಅದಕ್ಕೆ ತದ್ವಿರುದ್ಧವಾಗಿ ಆತ ಸ್ತ್ರೀ ಪಾತ್ರದಲ್ಲಿ ಸದಾ ಕೀಳರಮೆಯ ಆತಂಕವನ್ನು ಎದುರಿಸುತ್ತಿರುತ್ತಾನೆ. ತಾನು ಪ್ರೀತಿಸಿದ ಹೆಣ್ಣುಗಳ ನಿರಾಕರಣೆಗೆ ಸ್ತ್ರೀ ಪಾತ್ರವೇ ಪ್ರಮುಖ ಕಾರಣವೆಂದು ನಂಬಿರುತ್ತಾನೆ. ಆದ್ದರಿಂದ ಸ್ತ್ರೀ ವೇಷದಿಂದ ಮುಕ್ತಿಹೊಂದಲು ಸದಾ ತಹಸಹಿಸುತ್ತಾನೆ ಹಾಗೂ ಕೊನೆಗೊಮ್ಮೆ ಸ್ತ್ರೀ ವೇಷ ಕಳಚಿ ಹಾಕಿ ಸಂಪೂರ್ಣ ಗಂಡಸಾದ ಧನ್ಯತೆಯನ್ನು ಅನುಭವಿಸುತ್ತಾನೆ. ಪಾತ್ರವೂ ಸಹ ಮತ್ತೆ ಪುರುಷ ಶ್ರೇಷ್ಠತೆಯತ್ತಲೇ ತುಡಿಯುತ್ತದೆ. ಹೆಣ್ಣಾಗಲಿ ಇಲ್ಲವೇ ಹೆಣ್ಣು ವೇಷವಾಗಲಿ ತನ್ನ ಪೌರುಷಕ್ಕೆ ಕಳಂಕ, ತನ್ನ ಗಂಡಸುತನವನ್ನು ಬೇರೆಯವರು ಶಂಕಿಸುವಷ್ಟು ಅಪಾಯಕಾರಿ ಎಂದೇ ಭಾವಿಸುವ ರಾಧಾಕೃಷ್ಣ ಪಾತ್ರ ತನಗೆ ಅಪಾರ ಹೆಸರು ಕೀರ್ತಿಯನ್ನು ತಂದುಕೊಟ್ಟು ಕಲಾವಿದನನ್ನಾಗಿ ಬೆಳೆಸಿದ ಸ್ತ್ರೀವೇಷಕ್ಕೆ ತಿಲಾಂಜಲಿಯನ್ನೀಯುವ ಮೂಲಕ ಕಲೆಗಿಂತಲೂ ಗಂಡಸುತನ ದೊಡ್ಡದು ಎನ್ನುವುದನ್ನು ಪರೋಕ್ಷವಾಗಿ ಸಾಬೀತುಪಡಿಸುವ ಪ್ರಯತ್ನಮಾಡುತ್ತದೆ.
 
ಪುರುಷ ಪ್ರಧಾನ ಸಮಾಜವೂ ಸಹ ಮಹಿಳೆಯನ್ನು ಅಥವಾ ಸ್ತ್ರೀ ಪಾತ್ರಧಾರಿಯನ್ನು ನೋಡುವ ದೃಷ್ಟಿಕೋನವೇ ಅಸಹಜವೆನಿಸುವಂತಿದೆ. ವಿಕಾರ ಮನೋಭಾವದ ಅಡ್ಡಪರಿಣಾಮವಾಗಿ ಹೆಣ್ಣು ಪುರುಷ ವೇಷದಲ್ಲಿ ಕ್ಷಣಿಕ ವಿಮೋಚನೆಯನ್ನು ಅನುಭವಿಸಿದರೆ, ಗಂಡು ಸ್ತ್ರೀ ವೇಷದಲ್ಲಿ ವಿಪರೀತ ಕೀಳರಮೆಯನ್ನು ಅನುಭವಿಸುವಂತಾಗಿದೆ. ನಾಟಕದ ಎರಡೂ ಅಸ್ವಾಭಾವಿಕ ಪಾತ್ರಗಳ ವೈರುದ್ಯಗಳು ಪುರುಷ ಕೇಂದ್ರಿತ ಸಮಾಜ ಹೇರಿದ ಬಳುವಳಿಯೇ ಆಗಿದೆ. ಪಿತೃಪ್ರಧಾನ ಸಮಾಜದ ಲಿಂಗತಾರತಮ್ಯದ ದುಷ್ಪರಿಣಾಮದ ಸಂಕೇತಗಳಾಗಿ ಎರಡೂ ಪಾತ್ರಗಳು ನಾಟಕದಲ್ಲಿ ಮೂಡಿಬಂದಿವೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀ ಹಾಗೂ ಸ್ತ್ರೀ ವೇಷದ ಕುರಿತು ಇರುವ ಕೀಳರಮೆಯನ್ನು ಪಾತ್ರಗಳ ಮೂಲಕ ಸಶಕ್ತವಾಗಿ ಹೇಳುವ ನಾಟಕವು ಲಿಂಗ ಅಸಮಾನತೆಗೆ ಸಶಕ್ತ ಕಾರಣವನ್ನಾಗಲೀ ಪರಿಹಾರವನ್ನಾಗಲೀ ಹೇಳಲು ಹೋಗುವುದಿಲ್ಲಇದರಿಂದಾಗಿ ನಾಟಕ ನೋಡಿದ ಮಹಿಳಾ ಪ್ರೇಕ್ಷಕರು ಪುರುಷರಾದರೆ ವಿಮೋಚನೆ ದೊರೆಯುತ್ತದೆ ಎಂದೂ, ಪುರುಷ ಪ್ರೇಕ್ಷಕರು ಪುರುಷತ್ವವೇ ಶ್ರೇಷ್ಠವಾದುದು ಎಂದು ತಪ್ಪಾಗಿ  ವ್ಯಾಖ್ಯಾನಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ಪ್ರಸ್ತುತ ನಾಗರೀಕ ಸಮಾಜದಲ್ಲೂ ಸಹ ನಾಟಕದೊಳಗಿನ ಪುರುಷ ಪ್ರಧಾನ ಮನೋಭಾವವನ್ನು ಗಮನಿಸಬಹುದಾಗಿದೆ. ಆಧುನಿಕ ಮಹಿಳೆಯರು ಈಗ ಗಂಡಸರು ತೊಡುವಂತಹ ಉಡುಪುಗಳನ್ನು (ಜೀನ್ಸ್ ಪ್ಯಾಂಟು, ಟೀ-ಶರ್ಟು ಇತ್ಯಾದಿತಮ್ಮ ವಿಮೋಚನೆಯ ಸಂಕೇತವಾಗಿ ಪರಿಭಾವಿಸಿಕೊಂಡು ವ್ಯಾಪಕವಾಗಿ ಬಳಸುತ್ತಿದ್ದರೆ, ಯಾವೊಬ್ಬ ಗಂಡೂ ಸಹ ಹೆಣ್ಣು ಮಕ್ಕಳು ತೊಡುವಂತಹ ಉಡುಪುಗಳನ್ನು ತೊಡದೇ ಇರುವುದನ್ನು ಕಾಣಬಹುದಾಗಿದೆ. ಅಂದರೆ ಗಂಡಸರನ್ನು ಅನುಕರಿಸುವುದು ವಿಮೋಚನೆಯ ಸಂಕೇತವಾಗಿ ಹೆಣ್ಣುಮಕ್ಕಳಿಗೆ ಕಂಡರೆ, ಸ್ತ್ರೀಯರ ವೇಷಭೂಷಣ ಇಲ್ಲವೇ ನಡೆ ನುಡಿಯನ್ನು ಅನುಕರಿಸುವುದೂ ಸಹ ಅವಮಾನಕಾರಿಯಾಗಿ ಗಂಡಸರಿಗೆ ಗೋಚರಿಸುತ್ತದೆ. ಇದೇ ಮನೋಭಾವದ ಪ್ರತಿಬಿಂಬವಾಗಿ ನಾಟಕ ಮೂಡಿಬಂದಿದೆ. ಆದರೆ ಮನೋಭಾವ ಬದಲಾಗಬೇಕೆಂಬುದು ಲಿಂಗ ಸಮಾನತೆಯನ್ನು ಪ್ರತಿಪಾದಿಸುವವರ ಬಯಕೆಯಾಗಿದೆ. ಸಾಂಕೇತಿಕವಾಗಿಯಾದರೂ   ನಾಟಕದಲ್ಲಿ ಲಿಂಗಸಮಾನತೆಯ ಕುರಿತು, ಸ್ತ್ರೀವೇಷಧಾರಿ ತನ್ನ ಕೀಳರಮೆಯನ್ನು ಮೆಟ್ಟಿ ನಿಲ್ಲುವುದರ ಕುರಿತು ಪ್ರಸ್ತಾಪ ಮಾಡಿದ್ದರೆ ನಾಟಕ ವಾಸ್ತವದ ಪ್ರಸ್ತುತಿಯ ಜೊತೆಯಲ್ಲಿ ಸಾರ್ವಕಾಲಿಕ ಆದರ್ಶದ ಹಂತವನ್ನು  ಮುಟ್ಟಬಹುದಾಗಿತ್ತು. ಸ್ತ್ರೀಯರನ್ನು ಸ್ವಾಭಿಮಾನಿಯನ್ನಾಗಿ ಮಾಡುವ ಹಾಗೂ ಮಹಿಳೆ ಕೀಳರಮೆಯನ್ನು ತೊರೆದು ಪುರುಷ ಶ್ರೇಷ್ಠತೆಯ ಪ್ರಾಬಲ್ಯದಿಂದ ಹೊರಬಂದು ತಮ್ಮದೇ ಆದ ಸ್ವಂತಿಕೆ, ಘನತೆ, ಗೌರವವನ್ನು ಉಳಿಸಿಕೊಳ್ಳುವಂತೆ ಪ್ರೇರೇಪಿಸುವ ನಾಟಕಗಳು ಈಗಿನ ಲಿಂಗತಾರತಮ್ಯದ ಅಸಮಾನ ಸಮಾಜದಲ್ಲಿ ಅಗತ್ಯವಾಗಿವೆ. ಸೂಕ್ಷ್ಮ ಪ್ರಜ್ಞೆಯ ಬರಹಗಾರರಾದ ವಿಕಾಸ್ ನೇಗಿಲೋನಿಯವರ ನಾಟಕದಲ್ಲಿ ಇಂತಹ ಲಿಂಗಸಮಾನತೆಯ ಪರಿಕಲ್ಪನೆ ಯಾವುದೋ ರೂಪದಲ್ಲಿ ಅಪೇಕ್ಷಣೀಯವಾಗಿದೆ.



ನಾಟಕದ ವಸ್ತುವಿಷಯದ ಕುರಿತ ವಿಶ್ಲೇಷಣೆಯನ್ನು ಪಕ್ಕಕ್ಕಿಟ್ಟು ನಾಟಕದ ಪ್ರಯೋಗ ಸಾಧ್ಯತೆಗಳತ್ತ ನೋಡಿದರೆ ಎರಡು ಮಾತಿಲ್ಲ. ಎರಡೇ ಪ್ರಮುಖ ಪಾತ್ರಗಳನ್ನಿಟ್ಟುಕೊಂಡು ಒಂದು ಗಂಟೆಗಳ ಕಾಲ ಇಡೀ ನಾಟಕವನ್ನು ಶಿಸ್ಸುಬದ್ಧವಾಗಿ ನಿರ್ಮಿಸಿದ್ದನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ನಿತಿನ್ ಶ್ರೀಧರ್ರವರು ನಾಟಕದಲ್ಲಿ ರಾಧಾಕೃಷ್ಣ ಎನ್ನವ ಪ್ರಮುಖ ಪಾತ್ರವನ್ನು ಅಭಿನಯಿಸುತ್ತಲೇ ಕ್ಲಿಷ್ಟಕರ ನಾಟಕವನ್ನು ಸಮಚಿತ್ತತೆಯಿಂದ ನಿರ್ದೇಶಿಸಿರುವುದು ಅಭಿನಂದನಾರ್ಹ. ಬೇರೆಯವರನ್ನು ನಿರ್ದೇಶಿಸುವುದು ಸುಲಭ, ಆದರೆ ತಮ್ಮ ಪಾತ್ರವನ್ನು ತಾವೇ ನಿರ್ದೇಶಿಸಿಕೊಳ್ಳುತ್ತಲೇ ಇಡೀ ನಾಟಕವನ್ನು ಕಟ್ಟಿಕೊಡುವುದು ಒಂದಿಷ್ಟು ಸವಾಲಿನ ಕೆಲಸ. ಅದರಲ್ಲೂ ಯಕ್ಷಗಾನದಂತಹ ಸುಲಭಸಾಧ್ಯವಲ್ಲದ ನೃತ್ಯ ಕಲೆಯನ್ನು ಹತ್ತೇ ದಿನಗಳಲ್ಲಿ ಶ್ರೀನಿವಾಸ ಶಾಸ್ತಾನ್ರವರ ಮಾರ್ಗದರ್ಶನದಲ್ಲಿ ಪ್ರಮುಖ ನಟ-ನಟಿ ಇಬ್ಬರೂ ಕಲಿತು ವೃತ್ತಿಪರ ಯಕ್ಷಕಲಾವಿದರಂತೆ ಪ್ರಸ್ತುತ ಪಡಿಸಿದ್ದಂತೂ ಸ್ಮರಣಾರ್ಹ. ವತ್ಸಲ ಪಾತ್ರದ ನಂದಿನಿ ಮೂರ್ತಿ ಹಾಗೂ ರಾಧಾಕೃಷ್ಣ ಪಾತ್ರದಲ್ಲಿ ನಿತೀಶ್ ಶ್ರೀಧರ್ ಇಬ್ಬರೂ ಪೈಪೋಟಿಯ ಮೇಲೆ ಅಭಿನಯಿಸಿದ್ದಾರೆ. ಅದೂ ತಮ್ಮದಲ್ಲದ ವೈರುಧ್ಯದ ಪಾತ್ರಗಳನ್ನು. ಆದರೂ ಶ್ರೀಧರವರು ಇನ್ನೂ ಸ್ವಲ್ಪ ಮಹಿಳೆಯರಂತೆ ನಡೆನುಡಿಗಳನ್ನು ರೂಢಿಸಿಕೊಳ್ಳಬೇಕಾಗಿದೆಪಾತ್ರದ ಚಲನೆ ಹಾಗೂ ಬ್ಲಾಕಿಂಗ್ಗಳು ಸೊಗಸಾಗಿ ಸಂಯೋಜನೆಗೊಂಡಿವೆ.

ಬಣ್ಣ ಬಣ್ಣದ ಯಕ್ಷ ಪಾತ್ರದ ವೇಷ ಭೂಷಣಗಳು ವೇಷ ನಾಟಕದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಪಾತ್ರವನ್ನೂ ಹೊರತು ಪಡಿಸಿ ಯಕ್ಷಕಲೆಯ ಚಿತ್ತಾರದ ಕಾಸ್ಟೂಮ್ಸ್ ಹಾಗೂ ಪರಿಕರಗಳನ್ನು ರಂಗದ ಮೇಲೆ ಜೋಡಿಸಿದ್ದು ನೋಡುಗರ ನೋಟವನ್ನು ಹಿಡಿದಿಡುವಂತಿದೆ.   ಚೌಕಿಮನೆ ಮಾದರಿಯ ರಂಗಸಜ್ಜಿಕೆಯನ್ನು ನೋಡುವುದೇ ಒಂದು ಸೊಗಸು. ರಂಗಸ್ಥಳದ ಹಿಂಭಾಗದಲ್ಲಿ ಆಳೆತ್ತರದ ಪಾರದರ್ಶಕ ಗಾಜನ್ನು ಕನ್ನಡಿ ಮಾದರಿಯಲ್ಲಿ ಸ್ಥಾಪಿಸಲಾಗಿದೆ. ಪಾತ್ರದ ಅಂತರಾಳದ ಪ್ರತಿಪಾತ್ರ ಗಾಜಿನ ಮೂಲಕ ಹೊರಬಂದು ಸಂವಹನ ಮಾಡುವಂತಹ ದೃಶ್ಯ ಸಾಂಕೇತಿಕವಾಗಿ ಹಾಗೂ ಮಾರ್ಮಿಕವಾಗಿ ಮೂಡಿಬಂದಿದೆ. ಆದರೆ... ಗಾಜಿನ ಹಿಂದೆ ಯಕ್ಷಪಾತ್ರಧಾರಿಯನ್ನು ಆರಂಭದಿಂದಲೂ ನಿಲ್ಲಿಸಿದ್ದು ಹಾಗೂ ಅದು ಪ್ರೇಕ್ಷಕರಿಗೆ ಕಾಣುವಂತಿರುವುದು ಬೇಕಿರಲಿಲ್ಲ. ಹಾಗೂ ರಂಗವೇದಿಕೆಯ ನೆಲಮಟ್ಟದಲ್ಲಿ ಗಾಜನ್ನು ಇಟ್ಟಿರುವುದರಿಂದ ಪುಟ್ಲೈಟ್ಸ್ ಅದರ ಮೇಲೆ ಬಿದ್ದಾಗಲೆಲ್ಲಾ ಬೆಳಕು ರಿಪ್ಲೆಕ್ಟ್ ಆಗಿ ಪ್ರೇಕ್ಷಕರ ಕಣ್ಣನ್ನು ಕುಕ್ಕುವುದನ್ನು ತಪ್ಪಿಸಲೇ ಬೇಕಿದೆ. ಒಂದೆರಡು ಅಡಿ ಎತ್ತರದಲ್ಲಿ ಕನ್ನಡಿಯನ್ನು ಇಟ್ಟರೆ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ. ಮಂಜು ನಾರಾಯಣರವರ ಬೆಳಕಿನ ವಿನ್ಯಾಸ ನಾಟಕದ ಪಾತ್ರಗಳ ಮೂಡಿಗೆ ತಕ್ಕಂತೆ ಬದಲಾಗುತ್ತಾ ಪ್ರೇಕ್ಷಕರಲ್ಲಿ ರಾಂಗಾನುಭೂತಿಯನ್ನು ಕಟ್ಟಿಕೊಟ್ಟಿತು. ನಟನೆಯ ನಡುವೆ ಯಕ್ಷನೃತ್ಯದ ಹೆಜ್ಜೆಗಳು, ಹಿನ್ನೆಲೆಯಲ್ಲಿ ಚಂಡೆ ಮದ್ದಲೆ ತಾಳಗಳು ಜೊತೆಗೆ ಭಾಗವತ ಸುಬ್ರಾಯ್ ಹೆಬ್ಬಾರರ ಆಲಾಪಗಳು ನಾಟಕವನ್ನು ನೃತ್ಯಸಂಗೀತಮಯಗೊಳಿಸಿ ನೋಡುಗರನ್ನು ವಿಸ್ಮಯಗೊಳಿಸಿದವು.



ನಾಟಕದಲ್ಲಿ ಬಳಸಿದ ಕಾವ್ಯಾತ್ಮಕ ಮಾರ್ಮಿಕ ಸಂಭಾಷಣೆಗಳು ಇಡೀ ನಾಟಕಕ್ಕೆ ಅರ್ಥಗಾಂಭೀರ್ಯತೆಯನ್ನು ತಂದಿವೆ. ವಿಕಾಸರವರು ಪ್ರವೃತ್ತಿಯಲ್ಲಿ ಧಾರಾವಾಹಿಗಳ ಚಿತ್ರಕಥೆ ಬರಹಗಾರರಾಗಿದ್ದರಿಂದ ತಮ್ಮ ಸಂಭಾಷಣೆ ಕಟ್ಟುವ ಕೌಶಲ್ಯವನ್ನು ನಾಟಕದಲ್ಲಿ ತೋರಿಸಿದ್ದಾರೆ. ಪ್ರಕೃತಿ ದುಮ್ಮಿಕ್ಕುತ್ತೆ, ಪುರುಷ ಹತ್ತಿಕ್ಕುತ್ತಾನೆ, ಆಗಲೇ ಪ್ರಕೃತಿ ಪುರುಷ ಸಮ್ಮಿಲನವಾಗುತ್ತದೆ.....ಕೊರಗು ಸಾವಿನ ತರ ಹೆದರಿಕೊಂಡಷ್ಟು ಹತ್ತಿರ ರುತ್ತದೆ....... ಸ್ತ್ರೀ ವೇಷ ಅಂಟಿಸಿಕೊಂಡರ ಮೈಕೈಗೆ ಅಂಟಂಟಾಗುತ್ತದೆ... ಬಿಡಿಸ್ಕೊಂಡ್ರ ಕೆಸರಲ್ಲಿ ಸಿಕ್ಕಾಕಿಕೊಂಡಂಗಾಗುತ್ತೆ....  ಹೀಗೆ... ಹಲವಾರು ಸಂಭಾಷಣೆಗಳು ಅರ್ಥವಂತಿಕೆಯಿಂದಾಗಿ ಗಮನ ಸೆಳೆಯುತ್ತವೆ. ಅದರಲ್ಲೂ ಹೆಣ್ಣು ಗಂಡು ಸಂಬಂಧವನ್ನು ಹುಲಿ ಹಾಗೂ ಜಿಂಕೆಗೆ ಹೋಲಿಸಿದ್ದು ಹಾಗೂ ಎರಡೂ ಅದಲು ಬದಲು ಮಾಡಿಕೊಳ್ಳಲು ಬಯಸುವ ರೂಪಕವನ್ನು ನಾಟಕದಲ್ಲಿ ಅಳವಡಿಸಿದ್ದು ವಿಕಾಸರವರ ನಾಟಕ ರಚನಾ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. ಮೊಟ್ಟ ಮೊದಲ ನಾಟಕದಲ್ಲೇ ನಾಟಕಕಾರನಾಗುವ ಎಲ್ಲಾ ಸಾಧ್ಯತೆಗಳನ್ನು ವಿಕಾಸ ವ್ಯಕ್ತಪಡಿಸಿದ್ದಾರೆ. ನಾಟಕಗಳ ಕೊರತೆಯನ್ನು ಅನುಭವಿಸುತ್ತಿರುವ ಕನ್ನಡ ರಂಗಭೂಮಿಗೆ ವೇಷ ನಾಟಕದ ಮೂಲಕ ಒಬ್ಬ ಯುವ ನಾಟಕಕಾರ ದಕ್ಕಿದಂತಾಗಿದೆ.

ಚೌಕಿಮನೆಯನ್ನು ನೋಡದ ಬೆಂಗಳೂರಿಗರಿಗೆ ಹಾಗೂ ಚೌಕಿಮನೆಯ ವಿದ್ಯಮಾನಗಳನ್ನು ಅರಿಯದ ಪ್ರೇಕ್ಷಕರಿಗೆ ಒಂದು ಹೊಸ ಲೋಕವನ್ನು ನಾಟಕ ತೋರಿಸಿದ್ದಂತೂ ಸುಳ್ಳಲ್ಲ. ಯಕ್ಷಗಾನಾಸಕ್ತರು ಹಾಗೂ ರಂಗಾಸಕ್ತರನ್ನು ಏಕಕಾಲಕ್ಕೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ವೇಷ ನಾಟಕವು ವೇಷಗಾರರ ಬಣ್ಣದ ಹಿಂದಿನ ಬದುಕಿನ ಆಂತರಿಕ ತಲ್ಲಣ ತುಮುಲಗಳನ್ನು ಕಲಾತ್ಮಕವಾಗಿ ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ. ಯಶಸ್ಸನ್ನು ನಾಲ್ಕು ಪಾಲು ಮಾಡಿ ನಾಟಕಕಾರರಿಗೆ, ನಿರ್ದೇಶಕರಿಗೆ, ನಟರಿಗೆ ಹಾಗೂ ಮೇಳದವರಿಗೆ ಸರಿಸಮನಾಗಿ ಒಂದೊಂದು ಪಾಲು ಹಂಚಿಕೊಡಬಹುದಾದಷ್ಟು ಸೊಗಸಾಗಿ ಇಡೀ ನಾಟಕ ಮೂಡಿಬಂದಿದೆ. ಕನ್ನಡ ರಂಗಭೂಮಿ ಪ್ರಯೋಗಶೀಲತೆಗೆ ದೇಶದಲ್ಲೇ ಹೆಸರಾಗಿದೆ. ಅಂತಹ ಪ್ರಯೋಗಶೀಲ ರಂಗಭೂಮಿಗೆ ಇನ್ನೊಂದು ವಿಭಿನ್ನ ಕೊಡುಗೆಯಾಗಿ ವೇಷ ರಂಗಪ್ರಯೋಗ ಪ್ರಸ್ತುತಗೊಂಡಿದೆ.    

                      -ಶಶಿಕಾಂತ ಯಡಹಳ್ಳಿ    


                



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ