ರಂಗಕರ್ಮಿ ರಾಜಶೇಖರ ನಿಲೋಗಲಮಠರವರಿಗೆ ರಂಗ ಶ್ರದ್ಧಾಂಜಲಿ :
ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದಿನ ನಡುರಾತ್ರಿ ನನ್ನ ಮೊಬೈಲ್ ರಿಂಗಣಿಸಿತು. ಅತ್ತನಿಂದ ಮಾತಾಡಿದ ವ್ಯಕ್ತಿಯ ಮಾತಲ್ಲಿ ದಮ್ಮೇ ಇರಲಿಲ್ಲ. ದ್ವನಿ ನಡುಗುತ್ತಿತ್ತು. ಶಬ್ದಗಳಲ್ಲಿ ಸ್ಪಷ್ಟತೆ ಇರಲಿಲ್ಲ. ಬಹುಶಃ ಗುಂಡಾಕಿರಬಹುದು ಎಂದುಕೊಂಡಿದ್ದೆ, ಆದರೆ ಅಂದು ಆತ ಕುಡಿದಿರಲಿಲ್ಲ. ಆತನ ಬದುಕೆಂಬೋ ಹಚ್ಚಿಟ್ಟ ಹಣತೆಯ ಎಣ್ಣೆ ಮುಗಿಯುತ್ತಾ ಬಂದಿತ್ತಾ, ಇಲ್ಲಾ ಪ್ರಾಣವೆಂಬ ದೀಪ ಬೆಳಗಲು ಗಾಳಿಯ ಕೊರತೆಯಾಗಿತ್ತಾ, ಇಲ್ಲವೇ ದೀಪಕ್ಕೆ ಆಧಾರವಾದ ಬತ್ತಿಯೇ ಬತ್ತತೊಡಗಿತ್ತಾ... ಗೊತ್ತಿಲ್ಲ. ಆದರೆ.... ಆತನ ನಿಸ್ತೇಜ ನೀರಸ ದ್ವನಿಯಲ್ಲೂ ಎಲ್ಲೋ ಇನ್ನೂ ಬದುಕಲೇ ಬೇಕೆಂಬ ಬಯಕೆ ಪುಟಿದುಕ್ಕುತ್ತಿತ್ತು. ಅಂದು ಆತ ತುಂಬಾ ಶ್ರಮಪಟ್ಟು ಹೇಳಿದ್ದಿಷ್ಟೇ....“ಶಶಿ ಏನಾದರೂ ಮಾಡಲೇ ಬೇಕು ಕಣೋ, ಈ ಸಂಕಟಗಳಿಂದ ಹೊರಬರಬೇಕು, ಏನಾದರೂ ಸಹಾಯ ಮಾಡಲು ನಿನ್ನಿಂದ ಆಗುತ್ತಾ..?” ಇದನ್ನು ಕೇಳಿ ನನಗೆ ನಿಜಕ್ಕೂ ಆತಂಕವಾಯಿತು.
ಆತ ಹಿಂದಿನ ದಿನದ ಸಂಜೆ ಸಿಕ್ಕಿದ್ದ. ಕೆ.ಹೆಚ್.ಕಲಾಸೌಧದಲ್ಲಿ ಅಭಿನಯ ತರಂಗದ ‘ಚಿರೆಬಂದೆವಾಡೆ’ ನಾಟಕದ ಪ್ರದರ್ಶನದ ನಂತರ ಈ ಜಂಗಮನ ದರ್ಶನವಾಗಿತ್ತು. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ತೊಂಬತ್ತು ವರ್ಷದ ವಯೋವೃದ್ದನ ಹಾಗೆ ಗುಡಾಣದಂತಹ ಮೈಹೊತ್ತು ಬರುತ್ತಿದ್ದವನನ್ನು ನೋಡಿ ಒಂದು ಕ್ಷಣ ದಿಗಿಲಾಗಿದ್ದಂತೂ ಸತ್ಯ. ಇರುವ ನಾಲ್ಕಾರು ಮೆಟ್ಟಿಲುಗಳನ್ನೂ ಇಳಿಯಲು ಸಾಧ್ಯವಾಗಲಿಲ್ಲ. “ಏನಾಯ್ತೋ ಜಂಗಮ ಹಿಂಗ್ಯಾಕಾಗಿಯಲೇ?’ ಎಂದು ಕೈಹಿಡಿದು ಮೆಟ್ಟಲಿಳಿಯಲು ಸಹಾಯ ಮಾಡುತ್ತಾ ಕೇಳಿದೆ. “ಏನಿಲ್ಲಾ ಬಿಡೋ, ಯಾಕೊ ಇತ್ತೀಚೆಗೆ ಮೈಯಲ್ಲಿ ಹುಷಾರಿಲ್ಲ, ಒಂದಿಷ್ಟು ಸುಸ್ತು. ಅದು ಬಿಡು ನೀನೇಗಿದ್ದೀಯಾ?” ಆತನ ಮಾತು ಕೇಳಿ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಶಿಥಿಲಗೊಂಡು ಯಾವಾಗ ಬೇಕಾದರೂ ಕುಸಿದು ಬೀಳುವಂತಿರುವ ಕಟ್ಟಡವೊಂದು ಗಟ್ಟಿಮುಟ್ಟಾದ ಸ್ಥಂಭಕ್ಕೆ ಹೇಗಿದ್ದೀಯಾ? ಎಂದು ಪ್ರಶ್ನಿಸಿದಂತಾಯಿತು. “ನಂದು ಬಿಡಲೇ ನಿಂದು ಹೇಳು, ಹೆಂಗಿದ್ದಾವಾ ಹಿಂಗ್ಯಾಕಾದಿ?’ ಎಂದು ಕೇಳಿದರೂ ಏನೊಂದೂ ಹೇಳಲಿಲ್ಲ. ‘ಚಿರೆಬಂದೇವಾಡೆ ನಾಟಕ ನೋಡಿದೆಯಲ್ಲಾ ಹೆಚ್ಚು ಕಡಿಮೆ ನಂದೂ ಆ ವಾಡೇದಂತಾದ್ದೇ ಬದುಕು ಆಗೇತಿ. ಹೋಗಲಿ ಬಿಡು ಅದನ್ನೆಲ್ಲಾ ತಗೊಂಡು ಏನು ಮಾಡತೀ ಇನ್ನೊಮ್ಮೆ ಸಿಕ್ಕಾಗ ಮಾತಾಡೂಣಂತಾ’ ಎಂದು ಹೇಳಿದವನೇ ನಿಟ್ಟುಸಿರು ಬಿಟ್ಟು ಏದುಸಿರು ಬಿಡುತ್ತಾ ಹೊರಟೇ ಬಿಟ್ಟ.
ಈತ ಒಂದಾನೊಂದು ಕಾಲಕ್ಕೆ ಅಂದರೆ ಎರಡೂ ಕಾಲು ದಶಕದ ಹಿಂದೆ ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರಿಂದ ಬದುಕು ಕಟ್ಟಿಕೊಳ್ಳಬೇಕೆಂದು ಬೆಂಗಳೂರಿಗೆ ಬಂದ ಹುಡುಗ. ಹೆಚ್ಚು ಕಡಿಮೆ ನನ್ನದೇ ವಯಸ್ಸು. ಮೊಟ್ಟ ಮೊದಲು ಅವನನ್ನು ನೋಡಿದ್ದೇ ಎ.ಎಸ್.ಮೂರ್ತಿಯವರ ರಂಗಶಾಲೆ ‘ಅಭಿನಯ ತರಂಗ’ದಲ್ಲಿ. ತನ್ನ ದೊಡ್ಡದಾದ ತಾರಕ ದ್ವನಿಯಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದ. ಯಾರು ಏನೇ ಕೇಳಲಿ ಹಿಂದೆ ಮುಂದೆ ಆಲೋಚನೆ ಮಾಡದೇ ನೇರವಾಗಿ ಉತ್ತರಿಸುತ್ತಿದ್ದ. ಆತನ ನೇರವಂತಿಕೆ ಹಾಗೂ ತಾರಕ ಸ್ವರ ಎ.ಎಸ್.ಮೂರ್ತಿಯವರಿಗೆ ಇಷ್ಟವಾದಂತೆ ನನಗೂ ತುಂಬಾ ಇಂಪ್ರೆಸ್ ಮಾಡಿತ್ತು. ಮೊದಲು ನಾನೇ ಹೋಗಿ ಅವನನ್ನು ಪರಿಚಯಿಸಿಕೊಂಡೆ. ‘ನಾನು ರಾಜಶೇಖರ, ಇದು ಅರ್ಧ ಹೆಸರು, ನನ್ನ ಪೂರ್ಣ ಹೆಸರು ರಾಜಶೇಖರ ನಿಲೋಗಲ್ಮಠ’ ಎಂದು ಹಿಡಿದ ಮುಂಗೈಯನ್ನು ಜೋರಾಗಿ ಅದುಮಿ ಆತ ಹೇಳಿದಾಗ ಅವನ ಮಾತಿನ ಶೈಲಿ ಹಾಗೂ ಭಾವನೆಗಳು ನನಗೆ ವಿಚಿತ್ರ ವ್ಯಕ್ತಿಯನ್ನು ನೋಡಿದಂತೆ ಭಾಸವಾಯಿತು. ಬರುಬರುತ್ತಾ ನನ್ನ ಅಂತರಂಗದ ಸ್ನೇಹಿತನಾದ. ಅವನದೊಂದು ವಿಶೇಷತೆ ಏನೆಂದರೆ ತಾನು ಅದೆಷ್ಟೇ ತೊಂದರೆಯಲ್ಲಿರಲಿ, ನೋವಿನಲ್ಲಿರಲಿ ಅದನ್ನು ಯಾರಿಗೂ ಹೇಳಿಕೊಳ್ಳದಷ್ಟು ಸ್ವಾಭಿಮಾನಿ.
ಈ ಸ್ವಾಭಿಮಾನ ಎನ್ನುವುದು ಅದೆಷ್ಟಿತ್ತೆಂದರೆ ಆತ ಒಂದೆರಡು ದಿನಗಳ ಕಾಲ ಊಟ ಮಾಡಿರುತ್ತಿರಲಿಲ್ಲವಾದರೂ ನಮಗ್ಯಾರಿಗೂ ಅದರ ಸುಳಿವೂ ಸಿಗದಂತೆ ನೋಡಿಕೊಳ್ಳುತ್ತಿದ್ದ. ಇನ್ನೊಬ್ಬ ಗೆಳೆಯ ಜಗದೀಶ್ ಕೆಂಗನಾಳ ಇದನ್ನು ಹೇಗೋ ಪತ್ತೆ ಹಚ್ಚಿ ನನಗೆ ತಿಳಿಸಿದಾಗ ನೋವಾಗಿತ್ತು. ನಂತರ ಆತನ ವಿಚಾರವಾಗಿ ಒಂದೊಂದೇ ಕೆದಕಿದಾಗ ಗೊತ್ತಾಗಿದ್ದು ‘ಆತ ನಿರುದ್ಯೋಗಿಯಾಗಿರುವುದು, ನಾಟಕದ ಹುಚ್ಚಿನಿಂದ ಯಾವುದೇ ಕೆಲಸವನ್ನೂ ನೆಟ್ಟಗೆ ಮಾಡಲು ಸಾಧ್ಯವಾಗದೇ ಹೋಗಿದ್ದು, ಇರಲೊಂದು ಜಾಗವೂ ಇಲ್ಲದೇ ಅಭಿನಯ ತರಂಗದಲ್ಲೇ ಮಲಗುತ್ತಿರುವುದು....’, ಇದೆಲ್ಲಾ ಗೊತ್ತಾದ ಮೇಲೆ ಪ್ರತಿ ಭಾನುವಾರ ಆತನನ್ನು ಒತ್ತಾಯಿಸಿ ನಮ್ಮ ಜೊತೆಗೆ ಕರೆದುಕೊಂಡು ಹೋಗಿ ಆತನಿಗೆ ಊಟ ಮಾಡಿಸುವುದೇ ನಮಗೆ ಹರಸಾಹಸವಾಗಿತ್ತು. ‘ಇವರಿಗ್ಯಾಕೆ ತೊಂದರೆ ಕೊಡಬೇಕು’ ಎಂದುಕೊಂಡು ಜೊತೆ ಬರಲು ಹಿಂಜರಿಯುತ್ತಿದ್ದ. ಕೆಲವೊಮ್ಮೆ ಊಟದ ಸಮಯಕ್ಕೆ ತಲೆತಪ್ಪಿಸಿಕೊಳ್ಳುತ್ತಿದ್ದ. ಆದರೆ ನಾವು ಎಲ್ಲಿದ್ದರೂ ಬಿಡದೇ ಹುಡುಕಿ ಊಟಕ್ಕೆಳೆದುಕೊಂಡು ಹೋಗುತ್ತಿದ್ದೆವು. ಆತ ಹೇಳದಿದ್ದರೂ ಆತನ ಕಷ್ಟವನ್ನು ಅರ್ಥಮಾಡಿಕೊಂಡು ಒತ್ತಾಯದಿಂದ ನೂರು ರೂಪಾಯಿಯ ನೋಟನ್ನು ಆತನ ಜೇಬಿಗೆ ಬಲವಂತದಿಂದ ತುರುಕಿದಾಗ ತಲ್ಲಣಿಸಿಬಿಡುತ್ತಿದ್ದ. ಬದುಕಲು ಹಣದ ಅಗತ್ಯವಿದ್ದರೂ ಅದನ್ನು ತೆಗೆದುಕೊಳ್ಳಲು ಆತನ ಸ್ವಾಭಿಮಾನಿ ಮನಸ್ಸು ಒಪ್ಪುತ್ತಿರಲಿಲ್ಲ. ನಾನು ಬಿಡುತ್ತಿರಲಿಲ್ಲ. ನಾಟಕ, ಬೀದಿನಾಟಕಗಳನ್ನು ಮಾಡುತ್ತಲೇ ಪರಸ್ಪರ ಹತ್ತಿರವಾದೆವು. ನಿಜ ಹೇಳಬೇಕೆಂದರೆ ಆತ ನಿಜಕ್ಕೂ ಉತ್ತಮ ನಟನಾಗಿದ್ದ, ಒಳ್ಳೆಯ ಮಾತುಗಾರನೂ ಆಗಿದ್ದ. ನಾಟಕದಲ್ಲಿ ಆತನಿಗೆ ಸಿಗಬೇಕಾಗಿದ್ದ ಪ್ರಮುಖ ಪಾತ್ರವನ್ನು ನಾನು ಮತ್ತು ಜಗದೀಶ್ ಕೆಂಗನಾಳ ಇಬ್ಬರೂ ಅದು ಹೇಗೋ ಮಾಡಿ ಗಿಟ್ಟಿಸಿಕೊಳ್ಳುತ್ತಿದ್ದೆವು. ಇದು ಗೊತ್ತಿದ್ದರೂ ಆತ ಸುಮ್ಮನಿದ್ದು ಸಿಕ್ಕ ಚಿಕ್ಕಪುಟ್ಟ ಪಾತ್ರಗಳಿಗೂ ಜೀವತುಂಬುತ್ತಿದ್ದ. ಆತನಿಗೆ ನಾವೆಲ್ಲಾ ಇಟ್ಟ ಹೆಸರು ಜಂಗಮ ಅಂತ. ಯಾಕೆಂದರೆ ಆತ ಜಾತಿಯಿಂದ ಮಾತ್ರವಲ್ಲ ಬದುಕಿನಲ್ಲೂ ಜಂಗಮತ್ವವನ್ನು ರೂಢಿಸಿಕೊಂಡಿದ್ದ.
“ಏನಾದರೂ ಸಹಾಯ ಮಾಡಲು ನಿನ್ನಿಂದ ಆಗುತ್ತಾ..?” ಮತ್ತೊಮ್ಮೆ ಆತ ಪುನರುಚ್ಚರಿಸಿದ. ಪ್ಲಾಶ್ಬ್ಯಾಕ್ಗೆ ಹೋಗಿದ್ದ ನನ್ನನ್ನು ಎಚ್ಚರಿಸಿದ. ‘ಏನು ಬೇಕೋ ಜಂಗಮಾ ಹೇಳೋ, ಏನಾಗಿದೆ ನಿನಗೆ... ಯಾಕೆ ಹೀಗಾದೆ....ಏನಾಯ್ತು ಅದನ್ನಾದರೂ ನೆಟ್ಟಗೆ ಹೇಳಲೇ?‘ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುತ್ತಿದ್ದ ನನ್ನನ್ನು ತಡೆದು “ಏನು ಹೇಳಲಿ ಮಾರಾಯಾ...
ಕಳೆದ ಒಂದು ವರ್ಷದಿಂದ ಕೆಲಸ ಇಲ್ಲಾ. ಯಾವುದೇ ಸೀರಿಯಲ್ನವರೂ ಬರೆಯೋಕೆ ಕರೀತಿಲ್ಲಾ, ಬದುಕೋದು ಕಷ್ಟಾ ಅನ್ನಿಸ್ತಿದೆ, ಅದಕ್ಕೆ ನೀನೇನಾದರೂ ಹೆಲ್ಪ ಮಾಡೋಕೆ ಆಗುತ್ತಾ?’ ತುಂಬಾ ಆರ್ಧತೆಯಿಂದ ಕೇಳಿಕೊಂಡ. ಕೇಳಿಕೊಂಡ ಎನ್ನುವುದಕ್ಕಿಂತಲೂ ಬೇಡಿಕೊಂಡ ಎನ್ನುವುದೇ ಸೂಕ್ತ. ಆತ ಎಂದೂ ಹೀಗೆ ದೀನನಾಗಿ ಕೇಳಿದವನಲ್ಲ. ಅಷ್ಟೊಂದು ವಿಪರೀತ ಸ್ವಾಭಿಮಾನಿ. ತನ್ನೆಲ್ಲಾ ಸ್ವಾಭಿಮಾನವನ್ನು ಪಕ್ಕಕ್ಕಿಟ್ಟು ಕೇಳುತ್ತಿದ್ದಾನೆಂದರೆ ಆತ ನಿಜಕ್ಕೂ ತೊಂದರೆಯಲ್ಲಿದ್ದಾನೆಂದುಕೊಂಡೆ. ಬಹುಷಃ ಒಂದಿಷ್ಟು ಹಣ ಕೇಳಬಹುದು ಕೊಟ್ಟರಾಯಿತು ಎಂದು ನನ್ನೊಳಗಿನ ವ್ಯವಹಾರಿಕ ಮನಸ್ಸು ಹೇಳಿತು. “ಹೇಳು ಸ್ವಾಮಿ ನನ್ನಿಂದೇನಾಗಬೇಕು, ಎಷ್ಟು ಹಣಬೇಕು ಹೇಳು ಕೊಡುತ್ತೇನೆ, ಮೊದಲು ನಿನ್ನ ಆರೋಗ್ಯ...” ಇನ್ನೂ ನನ್ನ ಮಾತು ಪೂರ್ಣಗೊಂಡಿರಲಿಲ್ಲ. “ಯಾರಿಗೆ ಬೇಕೋ ರೊಕ್ಕ, ನನಗೆ ಹಣಕ್ಕಿಂತ ಹಣವನ್ನು ಸಂಪಾದನೆ ಮಾಡೋದು ಮುಖ್ಯವಾಗಿದೆ, ಅದಕ್ಕೊಂದಿಷ್ಟು ನಿನ್ನ ಸಹಾಯ ಬೇಕಾಗಿದೆ’. ‘ಅಲಲಾ ಜಂಗಮಾ, ವಿಪರೀತ ಕಷ್ಟದಲ್ಲಿದ್ದರೂ ಕಾಸು ಕೊಡ್ತೀನಂದ್ರೂ ಬೇಡಾ ಅಂತಾನಲ್ಲಾ ಅದೆಷ್ಟಿರಬೇಕು ಸ್ವಾಭಿಮಾನ ಇವನಿಗೆ...’ ಎಂದು ನನ್ನ ಒಳಮನಸ್ಸು ಹೇಳತೊಡಗಿತು. ‘ಸರಿ ಆಯ್ತು ಮಾರಾಯ ಬಾ ನನ್ನ ಭಾನುವಾರದ ಅಭಿನಯ ತರಬೇತಿ ಸಂಸ್ಥೆಯಲ್ಲಿ ಪಾಠ ಮಾಡು ನಿನಗೂ ಆರ್ಥಿಕವಾಗಿ ಒಂದಿಷ್ಟು ಸಹಾಯ ಆಗಬಹುದು’ ಎಂದು ಹಣ ಸಹಾಯಕ್ಕೆ ಪರ್ಯಾಯವಾಗಿ ಕೆಲಸದ ಆಮಿಷ ಒಡ್ಡಿದೆ. ‘ಎಂದೂ ಒಬ್ಬರ ಕೆಳಗೆ ಕೆಲಸಾ ಮಾಡಿ ನನಗೆ ಅಭ್ಯಾಸ ಇಲ್ಲ, ನನಗೆ ನನ್ನದೇ ಸ್ವಂತ ಆಕ್ಟಿಂಗ್ ಶಾಲೆ ಮಾಡಬೇಕು ಅಂದಕೊಂಡಿದ್ದೀನಿ, ಅದನ್ನ ಹೇಗೆ ಮಾಡೋದು, ಎಲ್ಲಿ ರೆಜಿಸ್ಟ್ರೇಶನ್ ಮಾಡಿಸೋದು ಅನ್ನೋದೆಲ್ಲಾ ಗೊತ್ತಿಲ್ಲ, ಒಂದಿಷ್ಟು ಗೈಡ್ ಮಾಡು ಸಾಕು.. ಮುಂದಿಂದು ನಾನೇ ನೋಡ್ಕೋಳ್ತೇನೆ’....
ರಾಜಶೇಖರ ಹೇಳಿದ್ದರಲ್ಲಿ ಅತಿಶಯೋಕ್ತಿ ಏನಿರಲಿಲ್ಲ. ಆತ ಎಂದೂ ಯಾರ ಕೈಕೆಳಗೂ ಕೆಲಸ ಮಾಡಿದವನೂ ಅಲ್ಲ. ಅಂತಾ ವಿಪರೀತ ಸ್ವಾಭಿಮಾನಿಯನ್ನು ನಾನು ನೋಡೇ ಇರಲಿಲ್ಲ. ನಾಟಕವೇ ಆತನ ಉಸಿರು, ವೃತ್ತಿ, ಬದುಕು ಎಲ್ಲಾ ಆಗಿತ್ತು. ಸ್ವಾಭಿಮಾನ ಎನ್ನುವುದು ಅವನ ಶಕ್ತಿ ಹಾಗೂ ದೌರ್ಬಲ್ಯವೂ ಆಗಿತ್ತು. ಆಗ ನಾವು ‘ಅಭಿನಯ ತರಂಗ’ದಲ್ಲಿ ಒಂದು ವರ್ಷ ರಂಗಭೂಮಿ ಕುರಿತು ಡಿಪ್ಲೋಮಾ ಮಾಡಿದ ನಂತರ ನಾನು ‘ಇಪ್ಟಾ’ ಸಾಂಸ್ಕೃತಿಕ ಸಂಘಟನೆಯ ನೇತೃತ್ವ ವಹಿಸಿಕೊಂಡು ಬೀದಿನಾಟಕ, ಸಂಘಟನೆ ಎಂದು ಅಲೆದಾಡತೊಡಗಿ ಒಂದು ರೀತಿಯಲ್ಲಿ ಜಂಗಮನೇ ಆಗಿದ್ದೆ. ಆದರೆ ಆ ನಿಜ ಜಂಗಮ ರಾಜಶೇಖರ್ ಮಾತ್ರ ನಾಟಕದ ಖಯಾಲಿ ಹೆಚ್ಚಿಸಿಕೊಂಡು ಅದನ್ನೇ ಬದುಕನ್ನಾಗಿಸಿಕೊಂಡ. ಕೆಲವಾರು ರಂಗತಂಡಗಳಲ್ಲಿ ಸಕ್ರೀಯ ನಟನಾದ. ‘ಚಿತ್ರಾ’ ತಂಡದ ಸಾವಿರಾರು ಬೀದಿನಾಟಕ ಪ್ರದರ್ಶನಗಳಲ್ಲಿ ಅಭಿನಯಿಸಿದ. ಶೋಕಚಕ್ರ, ಚಂದ್ರಹಾಸ, ಬರ, ಕೇಳು ಜನಮೇಜಯ, ಶಸ್ತ್ರಪರ್ವ, ಪ್ರತಿಬಿಂಬಗಳು... ಸಂಕ್ರಾತಿ, ಚಿದಂಬರ ರಹಸ್ಯ, ಕೋರಿಯೋಲೀನಸ್... ಹೀಗೆ ಹಲವಾರು ನಾಟಕಗಳಲ್ಲಿ ನಟಿಸಿ ತನ್ನ ಅಭಿನಯ ಪ್ರತಿಭೆಯನ್ನು ಸಾಬೀತುಪಡಿಸಿದ. ಹಲವಾರು ಬೀದಿನಾಟಕಗಳನ್ನು ಸ್ವತಃ ರಚಿಸಿ ನಿರ್ದೇಶಿಸಿದ. ನೇಪತ್ಯದಲ್ಲಿ ನಟರಿಗೆ ಮೇಕಪ್ ಅಗತ್ಯಬಿದ್ದಾಗ ಮೇಕಪ್ ಮಾಡಿದ, ಬ್ಯಾಕ್ಸ್ಟೇಜ್ನಲ್ಲಿ ಕೆಲಸ ಮಾಡಿದ...ಹೆಚ್ಚೂ ಕಡಿಮೆ ರಂಗನಿರ್ಮಿತಿಯಲ್ಲಿ ಆಲ್ರೌಂಡರ್ ಆಗಿ ತನ್ನನ್ನು ತಾನು ತೊಡಗಿಸಿಕೊಂಡ. ಈತನ ಬಹುಮುಖಿ ಪ್ರತಿಭೆ ಅತ್ಯಂತ ಶ್ಲಾಘನೀಯವಾಗಿತ್ತೆಂಬುದರಲ್ಲಿ ಎರಡು ಮಾತಿರಲಿಲ್ಲ.
ಈ ಜಂಗಮನೊಳಗೆ ರಂಗಪ್ರತಿಭೆಯ ಜೊತೆಗೆ ಬರವಣಿಗೆಯ ಟ್ಯಾಲೆಂಟ್ ಎನ್ನುವುದೂ ಸಹ ಸೇರಿಕೊಂಡಿತ್ತು. ನ್ಯೂಸ್ ಪೇಪರ್ನಲ್ಲಿ ಬಂದ ಯಾವುದೋ ಘಟನೆಯನ್ನೋ ಇಲ್ಲವೇ ಟೀವಿಯಲ್ಲಿ ನೋಡಿದ ಸನ್ನಿವೇಶವನ್ನೋ ಆಧರಿಸಿ ಒಂದೆರಡು ಗಂಟೆಯೊಳಗಾಗಿ ಬೀದಿನಾಟಕ ರೂಪದಲ್ಲಿ ಸ್ಕ್ರಿಪ್ಟ್ ಬರೆಯುವ ತಾಕತ್ತು ರಾಜಶೇಖರನಿಗೆ ಸಿದ್ಧಿಸಿತ್ತು. ತನಗೆ ಕಾಡಿದ ವಸ್ತು ವಿಷಯವನ್ನು ಗ್ರಹಿಸಿ ಇನ್ಸ್ಟಂಟ್ ನಾಟಕಗಳನ್ನು ಬರೆದು ತಂದು ಗೌರಿದತ್ತುರವರನ್ನು ಒತ್ತಾಯಿಸಿ ಅಭಿನಯ ತರಂಗದ ವಿದ್ಯಾರ್ಥಿಗಳಿಗೆ ಸ್ವಯಂ ಆಸಕ್ತಿಯಿಂದ ಬೀದಿನಾಟಕವಾಗಿ ನಿರ್ದೇಶಿಸಿ ಹಲವಾರು ಪ್ರದರ್ಶನಗಳನ್ನು ಮಾಡಿಸುತ್ತಿದ್ದ. ರಾಜಶೇಖರ್ ಒಂದು ರೀತಿಯಲ್ಲಿ ಏಕಲವ್ಯ ಪ್ರತಿಭೆ. ಉದಾಹರಣೆಗೆ ಟಿವಿಯಲ್ಲಿ ಬರುತ್ತಿರುವ ಪುನರ್ಜನ್ಮ ಕುರಿತ ದಾರಾವಾಹಿ ಜನರನ್ನು ಮೋಸಗೊಳಿಸಿ ಮೂಢನಂಬಿಕೆಯನ್ನು ಹರಡುತ್ತಿದೆ ಎಂಬುದು ಗೊತ್ತಾದಾಗ ಆ ಜನವಿರೋಧಿ ದಾರಾವಾಹಿಯ ಹಿಂದಿನ ಶಡ್ಯಂತ್ರವನ್ನು ಬೀದಿನಾಟಕ ರೂಪದಲ್ಲಿ ಬರೆದು ನಾಟಕವಾಡಿಸಿ ಜನರಲ್ಲಿ ಜಾಗೃತಿಯನ್ನುಂಟುಮಾಡಿದ. ತನ್ನ ರಂಗಗುರು ಎ.ಎಸ್.ಮೂರ್ತಿಯವರಂತೆ ಪ್ರಸ್ತುತ ವಿಚಾರಗಳಿಗೆ ಇದ್ದಕ್ಕಿದ್ದಂತೆ ಸ್ಪಂದಿಸಿ ಸತ್ಯವನ್ನು ನಾಟಕ ಮಾಧ್ಯಮ ಮೂಲಕ ತೋರಿಸಿಕೊಡುವ ಮೂಲಕ ರಾಜಶೇಖರ ಜನಮುಖಿ ಕೆಲಸ ಮಾಡಿದ್ದು ನಿಜಕ್ಕೂ ಅಭಿನಂದನೀಯ.
“ಏನಾಯಿತು ಯಾಕೆ ಸುಮ್ಮನಾದೆ, ಏನಾದರೂ ಗೈಡ್ ಮಾಡು ಮಾರಾಯಾ, ನಾನೂ ನಿಮ್ಮ ಹಾಗೆಯೇ ಒಂದು ಅಭಿನಯ ತರಬೇತಿ ಸಂಸ್ಥೆ ಆರಂಭಿಸಬೇಕು, ಆಂಕ್ಟಿಂಗ್ ವರ್ಕಶಾಪ್ ಮಾಡಬೇಕು, ರಂಗತಂಡಕಟ್ಟಬೇಕು, ನಿರಂತರ ನಾಟಕ ಮಾಡಿಸಬೇಕು... ಅಂತಾ ಬಯಕೆ ಇದೆ....ಇದಕ್ಕೆ ಏನು ಮಾಡಬೇಕು ಅದನ್ನು ಹೇಳು.....” ಹೀಗೆಂದು ಪದೆ ಪದೇ ಪೋನಲಿ ತೊದಲಿಸುತ್ತಾ ನಡುಗುವ ದ್ವನಿಯಲ್ಲಿ ರಾಜಶೇಖರ್ ಕೇಳುತ್ತಿದ್ದಾಗ ನೆನಪಿನ ಲೋಕದಿಂದ ಹೊರಬಂದು ಆತನಿಗೆ ಹೇಗೆ ಸ್ಪಂದಿಸಬೇಕೆಂದು ಒಂದು ಕ್ಷಣ ಆಲೋಚನೆಗೆ ಬಿದ್ದೆ. ಇದೇ ಮಾತನ್ನು ಆತ ಐದತ್ತು ವರ್ಷಗಳ ಹಿಂದೆ ಕೇಳಿದ್ದರೆ ಉಮೇದಿನಿಂದ ಉತ್ತರಿಸಬಹುದಾಗಿತ್ತು. ರಂಗಸಂಸ್ಥೆಯೊಂದನ್ನು ಕಟ್ಟಿ ನಿಲ್ಲಿಸಬಹುದಾದ ಎಲ್ಲಾ ತಾಕತ್ತೂ ಆಗ ಅವನಿಗಿತ್ತು. ಆದರೆ....
ಈಗ..... ಮೈತುಂಬಾ ಅನಾರೋಗ್ಯವನ್ನಿಟ್ಟುಕೊಂಡು.... ನೆಟ್ಟಗೆ ನಡೆಯಲೂ ಬಾರದ.....
ಸ್ಪಷ್ಟವಾಗಿ ಮಾತಾಡಲೂ ಬಾರದ ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಸಂಸ್ಥೆ ಕಟ್ಟಬೇಕು ಎನ್ನುವ ಅದಮ್ಯ ಆಸೆ ಇಟ್ಟುಕೊಂಡಿದ್ದು ನೋಡಿ ವಿಸ್ಮಯಗೊಂಡೆ. ದೀಪ ಆರುವಾಗ ಹೆಚ್ಚು ಪ್ರಕಾಶಮಾನವಾಗುತ್ತದಂತೆ....
ಹಾಗೆಯೇ ನಮ್ಮ ರಾಜಶೇಖರ ಬದುಕಿನ ಕೊನೆಯ ಹಂತದಲ್ಲಿ ಮತ್ತೆ ಕ್ರಿಯಾಶೀಲವಾಗಬೇಕು...
ಹೇಗಾದರೂ ಬದುಕನ್ನು ಮರಳಿ ಕಟ್ಟಿಕೊಳ್ಳಬೇಕು ಎಂದು ಹಠಕ್ಕೆ ಬಿದ್ದು ಪ್ರಯತ್ನಿಸುತ್ತಿದ್ದಂತೆನಿಸಿತು.
“ಇದಕ್ಕೆ ಯಾಕಿಷ್ಟು ಲೇಟ್ ಮಾಡಿದೆ ಕಣಯ್ಯಾ, ಸಂಸ್ಥೆಯೊಂದನ್ನು ಮೂರು ವರ್ಷ ಮೊದಲೇ ರೆಜಿಸ್ಟ್ರೇಶನ್ ಮಾಡಿಸಿದ್ದರೆ ಅದಕ್ಕೆ ಈಗ ಸಂಸ್ಕೃತಿ ಇಲಾಖೆಯಿಂದ ಧನಸಹಾಯ ಪಡೆಯಬಹುದಾಗಿತ್ತು. ಯಾವುದೇ ಸಂಸ್ಥೆ ನೋಂದಣಿಯಾದ ಮೂರು ವರ್ಷಗಳ ನಂತರವೇ ಅನುದಾನವನ್ನು ಇಲಾಖೆ ಸಾಂಸ್ಕೃತಿಕ ಕೆಲಸಗಳಿಗೆ ಕೊಡುತ್ತದೆ. ಈಗ ನೀನು ನೋಂದಣಿ ಮಾಡಿಸಿದರೂ ಸಹ ನಿನ್ನ ಕೆಲಸಗಳಿಗೆ ಹಣಕಾಸಿನ ಸಹಾಯ ಬೇಕೆಂದರೂ ಇನ್ನೂ ಮೂರು ವರ್ಷ ಕಾಯಬೇಕಾಗುತ್ತದೆ... ಏನು ಮಾಡ್ತೀಯಾ ಹೇಳು?” ಹೀಗೆ ಪ್ರಶ್ನಿಸಿ ಸುಮ್ಮನಾದೆ. ಆತನೂ ಕೆಲ ನಿಮಿಷ ಮೌನವಾದ.
ಈ ರಾಜಶೇಖರ ರಂಗಭೂಮಿಯಲ್ಲಿ ನಾಟಕ ಚಟುವಟಿಕೆಗಳಿಗೆ ತನ್ನ ಬದುಕನ್ನು ಮೀಸಲಾಗಿರಿಸಿದಷ್ಟೂ ಕಾಲ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿದ್ದ. ರಂಗಭೂಮಿಯಲ್ಲಿ ಏನಾದರೂ ಸಾಧಿಸಬೇಕು ಎಂದು ಸತತವಾಗಿ ಎಲ್ಲಾ ಆಯಾಮಗಳಲ್ಲೂ ಪ್ರಯತ್ನಿಸುತ್ತಲೇ ಇದ್ದ. ನಾಟಕ ಕ್ಷೇತ್ರದಲ್ಲಿ ಹೆಸರು ಮಾಡಬಹುದು, ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು ಆದರೆ ಹಣ ಮಾಡಲು ಅವಕಾಶ ತುಂಬಾ ಕಡಿಮೆ. ಈ ಸತ್ಯ ಗೊತ್ತಾದಾಗ ಈತನಿಗೂ ಎಲ್ಲರಂತೆ ಹಣ ಮಾಡಬೇಕು, ತನ್ನ ವ್ಯಯಕ್ತಿಕ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವ ಸಹಜ ಅಭಿಲಾಷೆ ಶುರುವಾಯಿತು. ರಂಗಭೂಮಿಯಲ್ಲೇ ಒಂದಿಷ್ಟು ವ್ಯವಹಾರಿಕ ಪ್ರಜ್ಞೆ ಇದ್ದಿದ್ದರೆ ಅದನ್ನೂ ಕೂಡಾ ಸಾಧಿಸಬಹುದಾಗಿತ್ತು. ಆದರೆ ಆರ್ಥಿಕ ಸ್ಥಿರತೆಗೆ ಬಹುತೇಕ ರಂಗಕರ್ಮಿಗಳಂತೆ ರಾಜಶೇಖರ್ ಕೂಡಾ ಹೋಗಿ ಸೇರಿದ್ದು ಟಿವಿ ಲೋಕವನ್ನು. ಹೇಗೂ ಬೀದಿನಾಟಕದ ಸ್ಟ್ರಿಪ್ಟ್ ಬರೆದು ಬರವಣೆಗೆಯನ್ನು ರೂಢಿಸಿಕೊಂಡಿದ್ದ ರಾಜಶೇಖರನಿಗೆ ದಾರಾವಾಹಿಗಳಿಗೆ ಚಿತ್ರಕಥೆ ಬರೆಯುವುದು ಅತ್ಯಂತ ಸುಲಭವಾಗಿತ್ತು. ಬೇರೆ ಬರಹಗಾರರಂತೆ ಆಲೋಚಿಸಿ ಸಮಯ ತೆಗೆದುಕೊಂಡು ಬರೆಯುವುದು ಈತನ ಜಾಯಮಾನವಾಗಿರಲಿಲ್ಲ. ಎಲ್ಲಿ ಬೇಕಾದಲ್ಲಿ, ಯಾವಾಗ ಬೇಕಾದಾಗ ಇದ್ದಕ್ಕಿದ್ದಂತೆ ಬರೆಯುವ ತತ್ಕಾಲ್ ಮಾದರಿಯ ಇನ್ಸ್ಟಂಟ್ ಬರವಣಿಗೆಯ ಆಶುಪ್ರತಿಭೆ ಇದ್ದುದರಿಂದ ಬಹುಬೇಗ ಟಿವಿ ದಾರಾವಾಹಿಗಳ ಸ್ಕ್ರಿಪ್ಟ್ ರೈಟರ್ ಆಗಿ ರಾಜಶೇಖರ ಜನಪ್ರೀಯನಾದ. ಬೆಳದಿಂಗಳಾಗಿ ದಾರವಾಹಿಯಿಂದ ಶುರುವಾದ ಸ್ಕ್ರಿಪ್ಟ್ ಬರವಣಿಗೆ ರಥಸಪ್ತಮಿ ಧಾರಾವಾಹಿಯವರೆಗೂ ಮುಂದುವರೆಯಿತು. ಏಕಕಾಲಕ್ಕೆ ಎರಡು ಮೂರು ಸೀರಿಯಲ್ಗಳಿಗೆ ಸ್ಕ್ರಿಪ್ಟ್ ಬರೆಯಲು ಬೇಡಿಕೆ ಬರತೊಡಗಿತು. ಬಂದ ಎಲ್ಲಾ ಅವಕಾಶಗಳನ್ನೂ ಆತ ಸಮರ್ಥವಾಗಿ ಉಪಯೋಗಿಸಿಕೊಂಡ. ಆರ್ಥಿಕ ಸಭಲತೆ ಬಂದ ತಕ್ಷಣ ಮದುವೆಯೂ ಆದ. ಅದು ಹೇಗೋ ಹಣ ಹೊಂದಿಸಿಕೊಂಡು ಬೆಂಗಳೂರಿನಲ್ಲಿ ಒಂದು ನಿವೇಶನವನ್ನು ಖರೀದಿಸಿ ಖುಷಿಪಟ್ಟ. ಸಧ್ಯ ನಮ್ಮ ಗೆಳೆಯನೊಬ್ಬ ಲೈಪಲ್ಲಿ ಸೆಟಲ್ ಆದನಲ್ಲಾ ಎಂದು ಆತನ ಸ್ನೇಹಿತರಾದ ನಾವೂ ಸಂಭ್ರಮಿಸಿದೆವು. ಸಿಕ್ಕಾಗೆಲ್ಲಾ ಸಂತಸ ಹಂಚಿಕೊಂಡೆವು.
ಆದರೆ ಈ ಜಂಗಮನಿಗೆ ಹಣ ಬಂದಂತೆಲ್ಲಾ ಸ್ಥಾವರವಾಗತೊಡಗಿದ. ಹಳೆಯ ಗೆಳೆಯರನ್ನು ಅವೈಡ್ ಮಾಡತೊಡಗಿದ. ನಾನು ಅಪರೂಪಕ್ಕೆ ಸಿಕ್ಕಾಗಲೂ ಒಂದೆರಡು ದೇಶಾವರಿ ಮಾತು ಮಾತಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದ. ತೆರೆದ ಪುಸ್ತಕದಂತಿದ್ದವ ಮುಚ್ಚಿಟ್ಟ ಗ್ರಂಥವಾದ. ನೇರಾನೇರ ಮಾತಾಡುತ್ತಿದ್ದವ ಮುಗುಮ್ಮಾಗಿ ಮಾತಾಡತೊಡಗಿದ. ಯಾವಾಗಲೂ ಅದೆಂತುಹುದೋ ದಾವಂತದಲ್ಲಿದ್ದವರಂತೆ ಕಾಣುತ್ತಿದ್ದ. ‘ಬಹುಷಃ ಜಂಗಮನಿಗೆ ಹಣದ ಮದ ತಲೆಗೇರಿದೆ’ ಎಂದು ನಮಗೆ ನಾವೇ ಸಮಾಧಾನ ಮಾಡಿಕೊಂಡೆವು. ಆದರೆ.... ಇತ್ತೀಚೆಗೆ ತಿಳಿದು ಬಂದ ಮಾಹಿತಿಗಳ ಪ್ರಕಾರ ರಾಜಶೇಖರನ ಬದಲಾದ ವರ್ತನೆಗೆ ಬೇರೆಯೇ ಕಾರಣಗಳಿದ್ದವು. ಅದರಲ್ಲಿ ಪ್ರಮುಖವಾದದ್ದು ಕುಡಿತ ಹಾಗೂ ಇನ್ನೊಂದು ಕೌಟುಂಬಿಕ ಸಮಸ್ಯೆ. ಆತನ ಪ್ಯಾಮಲಿ ಸಮಸ್ಯೆಯಿಂದ ಕುಡಿತ ಆರಂಭವಾಯಿತೋ ಇಲ್ಲವೇ ಕುಡಿತದಿಂದ ಕೌಟುಂಬಿಕ ಬಿಕ್ಕಟ್ಟು ಪ್ರಾರಂಭವಾಯಿತೋ ಎಂದು ಗೆಳೆಯರೆಲ್ಲಾ ಸೇರಿದಾಗ ಚರ್ಚೆಮಾಡಿದೆವು. ಇವೆರಡೂ ಕಾರಣಗಳ ಜೊತೆಗೆ ಅಗತ್ಯಕ್ಕಿಂತ ಹೆಚ್ಚಿಗೆ ಬರತೊಡಗಿದ ಬರವಣಿಗೆಯ ಆದಾಯ ಹಾಗೂ ಟಿವಿ ಚಾನೆಲ್ಗಳಲ್ಲಿ ಸಿಕ್ಕ ಗುಂಡೋಧರರ ಸಹವಾಸಗಳೂ ಸಹ ಜಂಗಮನನ್ನು ನಿತ್ಯ ತೀರ್ಥಂಕರನನ್ನಾಗಿ ಬದಲಾಯಿಸಿಬಿಟ್ಟಿದ್ದವು. ಜೊತೆಗೆ ಗುಟ್ಕಾ ತಂಬಾಕು ಅಗಿಯುವ ದುರಭ್ಯಾಸ ಬೇರೆ ಶುರು ಮಾಡಿಕೊಂಡು ಬಿಟ್ಟ. ಎಲ್ಲಿ ತನ್ನ ಹಳೆಯ ಸ್ನೇಹಿತರಿಗೆ ತನ್ನ ಹೊಸ ಅವತಾರ ಗೊತ್ತಾಗುತ್ತದೋ ಎನ್ನುವ ಕಾರಣದಿಂದ ಸಾಧ್ಯವಾದಷ್ಟೂ ನಮ್ಮಿಂದ ದೂರವಿರತೊಡಗಿದ. ತನ್ನ ದೌರ್ಬಲ್ಯವನ್ನು ತೋರಿಸಿಕೊಡದಂತೆ ಮುಚ್ಚಿಟ್ಟುಕೊಳ್ಳತೊಡಗಿದೆ.
ಎಷ್ಟು ದಿನಾ ಅಂತಾ ಗುಟ್ಟು ಮುಚ್ಚಿಡಲು ಸಾಧ್ಯ? ಬಲೂನಿನ ಹಾಗೆ ಊದಿದ ಅವನ ದೇಹವೇ ಅವನ ದೌರ್ಬಲ್ಯಗಳನ್ನು ಸಾರ್ವತ್ರಿಕಗೊಳಿಸತೊಡಗಿತು. ತೊದಲಿಸುವ ನಾಲಿಗೆ, ನಡುಗುವ ಕೈಕಾಲುಗಳು ಈ ಜಂಗಮನ ಅಮಲಿನ ಅಸಲಿ ರಹಸ್ಯವನ್ನು ಬಯಲುಗೊಳಿಸತೊಡಗಿದವು. ವಿಪರೀತವಾಗಿ ಸೇವಿಸಿದ ಅಲ್ಕೋಹಾಲ್ ಎನ್ನುವ ಹಾಲಾಹಲ ಮೈಮನದುಂಬಿ ಮುಖದಲ್ಲಿ ಕಾಣಿಸುವಷ್ಟು ಪಸರಿಸಿಕೊಂಡುಬಿಟ್ಟಿತು. ಖುಷಿಗೆಂದೋ, ಸಹವಾಸ ದೋಷದಿಂದಲೋ ಶುರುವಾದ ಕುಡಿತ ಬರುಬರುತ್ತಾ ಆತನ ಬದುಕಿನ ಅವಿಭಾಜ್ಯ ಅಂಗವೇ ಆಗಿಬಿಟ್ಟಿತು. ಹಣಬೇಕೆಂದವನಿಗೆ ಬೇಕಾದಷ್ಟು ಹಣವೇನೋ ಸಿಕ್ಕಿತು ಆದರೆ ಅದರ ಜೊತೆಗೆ ದುರಭ್ಯಾಸವೂ ದಕ್ಕಿತು. ಯಶಸ್ಸು ಬೇಕೆಂದವನಿಗೆ ಒಂದು ಮಟ್ಟಿಗೆ ಯಶಸ್ಸೂ ದೊರೆಯಿತು, ಆದರೆ ಆ ಯಶಸ್ಸನ್ನು ಅನುಭವಿಸಿ ಉಳಿಸಿಕೊಳ್ಳುವ ತಾಳ್ಮೆ ಹಾಗೂ ತಾಕತ್ತು ಇಲ್ಲವಾಯಿತು. ಅಶಿಸ್ತಿನ ಬದುಕು ಬೇಜವಾಬ್ದಾರಿತನವನ್ನು ಹೆಚ್ಚಿಸಿತು. ಬರವಣಿಗೆಯ ವೃತ್ತಿಯಲ್ಲಿ ಮೊದಲಿನ ಬದ್ಧತೆ ಇಲ್ಲವಾಯಿತು. ಒಂದೊಂದೇ ದಾರಾವಾಹಿಗಳು ಕೈಬಿಟ್ಟವು. ಆದಾಯದ ಮೂಲ ಬರಿದಾದಂತೆ ಅದರ ಕೊರತೆಯನ್ನು ಹೆಂಡ ತುಂಬತೊಡಗಿತು. ಅತ್ತ ಕೆಲಸವಿಲ್ಲ. ಕೂಡಿಟ್ಟ ಹಣ ಹೆಚ್ಚು ದಿನ ಉಳಿಯಲಿಲ್ಲ. ಸುಂದರವಾದ ಮನೆ ಕಟ್ಟಿ ಹೆಮ್ಮೆಯಿಂದ ಬಾಳಬೇಕು ಎಂದು ತುಂಬಾ ಕನಸುಗಳನ್ನು ಕಂಡು ಕೊಂಡುಕೊಂಡ ನಿವೇಶನವನ್ನೂ ಸಹ ಅನಿವಾರ್ಯವಾಗಿ ಮಾರಬೇಕಾಯಿತು. ಕಳೆದ ಒಂದೂಕಾಲು ವರ್ಷದಿಂದ ರಾಜಶೇಖರ ಅಕ್ಷರಶಃ ನಿರುದ್ಯೋಗಿ. ಈ ನಿರುದ್ಯೋಗ ಪರ್ವವನ್ನು ನಿಭಾಯಿಸಲಾಗದೇ ಕುಡಿತವನ್ನೇ ಉದ್ಯೋಗ ಮಾಡಿಕೊಂಡವನಿಗೆ ಅದೆಲ್ಲಿಂದ ಹಣ ಬರಲು ಸಾಧ್ಯ? ಕೆಲಸ ಸಿಗಲು ಸಾಧ್ಯ? ಸ್ವಂತ ಪರಿಶ್ರಮದಿಂದ ಗಳಿಸಿದ ಹಣ, ಯಶಸ್ಸು, ಗೌರವ, ಪ್ರತಿಭೆ.... ಎಲ್ಲವನ್ನೂ ಕುಡಿತವೆಂಬ ಮಾಯಾಂಗಿನಿ ನುಂಗಿ ನೀರು ಕುಡಿಯಿತು. ಜಂಗಮ ದಿನದಿಂದ ದಿನಕ್ಕೆ ದೈಹಿಕವಾಗಿ ಉಬ್ಬತೊಡಗಿದ ಜೊತೆಗೆ ಮಾನಸಿಕವಾಗಿ ಕುಗ್ಗತೊಡಗಿದ. ಆದರೂ ಎಲ್ಲಕ್ಕಿಂತ ಸ್ವಾಭಿಮಾನ ದೊಡ್ಡದು ಎಂದುಕೊಂಡವ ಅದನ್ನೊಂದನ್ನು ಮಾತ್ರ ಕೊನೆವರೆಗೂ ಕಾಪಾಡಿಕೊಂಡು ಬಂದ. ಯಾರ ಮುಂದೆಯೂ ಕೈಯೊಡ್ಡಲಿಲ್ಲ, ಸಾಲ ಮಾಡಲಿಲ್ಲ... ತನ್ನ ಸಂಕಟಗಳನ್ನು ಸಿಕ್ಕ ಸಿಕ್ಕವರಲ್ಲಿ ಹೇಳಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳಲಿಲ್ಲ. ಬಾಯಿಬಿಟ್ಟು ಕೇಳಿದ್ದರೆ ಸಹಾಯ ಮಾಡುವಷ್ಟು ಗೆಳೆಯರು ರಂಗಭೂಮಿಯಲ್ಲಿದ್ದರು. ಆದರೆ ಆತ ತನ್ನ ಹಾಗೂ ಸ್ನೇಹಿತರ ನಡುವೆ ಸ್ವಾಭಿಮಾನದ ಅಡ್ಡಗೋಡೆಯನ್ನು ಕಟ್ಟಿಕೊಂಡಿದ್ದ. ಒಂಟಿಯಾಗಿ ಒಳಗೊಳಗೆ ನೊಂದುಕೊಂಡಿದ್ದ. ಹೊರಗೆ ಮಾತ್ರ ಏನೂ ಆಗೇ ಇಲ್ಲಾ, ಚೆನ್ನಾಗಿದ್ದೇನೆಂದು ತೋರಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಲೇ ಇದ್ದ. ಸ್ವಾಭಿಮಾನದ ಗಮಲು ಹಾಗೂ ಕುಡಿತದ ಅಮಲು ಎರಡೂ ಸೇರಿ ಜಂಗಮನ ಜಂಗಾಬಲವನ್ನೇ ಉಡುಗಿಸಿಬಿಟ್ಟಿದ್ದವು.
“ಆಯ್ತು ಮೂರು ವರ್ಷ ಕಾಯೋನಂತೆ, ಸಂಸ್ಥೆ ನೋಂದಣಿ ಮಾಡೋದಾದರೂ ಹೇಗೆ ಅನ್ನೋದನ್ನಾದರೂ ಹೇಳೊ, ಸಂಸ್ಥೆ ಮಾಡಿ ಬೇಕಾದಷ್ಟು ಜನ ಸರಕಾರದಿಂದ ಹಣ ಪಡೀತಿದ್ದಾರೆ. ಕೆಲವರಂತೂ ಕಾರ್ಯಕ್ರಮಗಳನ್ನು ಮಾಡದೇ ಇಲಾಖೆಯಿಂದ ಕಾಸು ಲೂಟಿ ಮಾಡ್ತಿದ್ದಾರಂತೆ. ನನಗೆ ಸಂಸ್ಥೆ ಕಟ್ಟಲು ಹಣ ಬೇಕು, ಒಂದಿಷ್ಟು ಕಾಸು ಸಿಕ್ಕರೆ ರಂಗಸಂಸ್ಥೆಯೊಂದನ್ನು ನಡೆಸಿ ತೋರಿಸ್ತೇನೆ...
ಅದಕ್ಕೇನು ಮಾಡಬೇಕು ಹೇಳು ಮಾರಾಯಾ..” ಆ ಕಡೆಯಿಂದ ಫೋನಿನಲ್ಲಿ ಗೆಳೆಯ ಅವಲತ್ತುಕೊಳ್ಳತೊಡಗಿದ್ದ.
ಮೂರು ವರ್ಷ ಇರಲಿ ಅವನ ಜೀವವೇ ಆತನ ಶಿಥಿಲಗೊಂಡ ದೇಹದಲ್ಲಿ ಇನ್ನೂ ಮೂರು ತಿಂಗಳು ಇರುತ್ತದೆನ್ನುವುದಕ್ಕೆ ಖಾತ್ರಿ ಇರಲಿಲ್ಲ. ಯಾಕೆಂದರೆ ಆತನನ್ನು ಪರೀಕ್ಷಿಸಿದ ವೈದ್ಯರು ‘ಕುಡಿದು ಕುಡಿದು ಕರುಳುಗಳೆಲ್ಲಾ ಕರಕಲಾಗಿವೆ, ಕುಡಿತ ನಿಲ್ಲಿಸಿದರೆ ಇನ್ನೊಂದಿಷ್ಟು ದಿನ ಬದುಕಬಹುದು, ಇಲ್ಲವಾದರೆ ಕುಡಿದಿದ್ದೆಲ್ಲಾ ವಿಷವಾಗಿ ಸಾವು ಸಂಭವಿಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವೇ ಇಲ್ಲಾ’ ಎಂದು ಹೇಳಿಯಾಗಿತ್ತು. ಜೊತೆಗೆ ಕಾಮಾಲೆ ರೋಗ ಬೇರೆ ಸದ್ದಿಲ್ಲದೇ ಬಂದು ಸೇರಿಕೊಂಡಿತ್ತು. ನಿಜವಾಗಿಯೂ ರಾಜಶೇಖರನಿಗೆ ಬದುಕುವ ಆಸೆ ಅದಮ್ಯವಾಗಿತ್ತು. ಅದಕ್ಕಾಗಿಯೇ ಆತ ‘ರಂಗಶಾಲೆ ಮಾಡಬೇಕು, ಅದಕ್ಕೆ ಪ್ರಿನ್ಸಿಪಾಲ್ ಆಗಬೇಕು, ನಾಟಕ ತಂಡ ಕಟ್ಟಿ ನಾಟಕ ಮಾಡಬೇಕು...’ ಹೀಗೆ ಇನ್ನೂ ಅನೇಕ ಆಸೆ ಕನಸುಗಳನ್ನು ಕಟ್ಟಿಕೊಂಡಿದ್ದ. ಆದರೆ ದಾರಿ ಗೊತ್ತಿರಲಿಲ್ಲ. ನಾನೇನಾದರೂ ಒಂದು ದಾರಿ ದಿಕ್ಕು ತೋರಿಸುತ್ತೇನೇನೋ ಎಂಬ ಆಸೆಯಿಂದ ಪೋನ್ ಮಾಡಿ ಆ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲು ಕೇಳಿಕೊಂಡಿದ್ದ. ಆತನ ಅದಮ್ಯ ಚೇತನ ಸಾವಿನ ಸೋಪಾನದ ಮೇಲೆ ಮಲಗಿಯೂ ಏನನ್ನಾದರೂ ಮಾಡಬೇಕು ಎಂದು ಹಂಬಲಿಸುತ್ತಿತ್ತು. ಆದರೆ... ಅವನ ದೇಹ ಆತನ ಮನಸ್ಸಿನ ನಿಯಂತ್ರಣವನ್ನೂ ಮೀರಿ ‘ಹೆಂಡ ಬೇಕು’ ಎಂದು ಕೇಳುತ್ತಿತ್ತು. ಸಾಧನೆಯ ದಾವಂತ ಮತ್ತು ವೇದನೆಯ ದೌರ್ಬಲ್ಯಗಳ ನಡುವಿನ ಸಂಘರ್ಷದಲ್ಲಿ ರಾಜಶೇಖರ ದುರಂತದ ಅಂಚಿಗೆ ಬಂದು ನಿಂತಿದ್ದ. ತನ್ನ ಮನಸಿನ ಸುತ್ತಲೂ ಆವರಿಸಿಕೊಂಡ ಕತ್ತಲನ್ನು ಹೊಡೆದು ಹಾಕಲು ಬೆಳಕಿನ ಆಶಾಕಿರಣವೊಂದು ಕಾಣಬಹುದೇನೋ ಎಂದು ಹಂಬಲಿಸತೊಡಗಿದ. ಆತನ ಎಲ್ಲಾ ಆಲೋಚನೆಗಳಿಗೆ ಕುಡಿತದ ಗೀಳು ಅಡ್ಡಗಾಲು ಹಾಕುತ್ತಲೇ ಬಂದಿತು. ಅನಾರೋಗ್ಯ ಆತನನ್ನು ಕಂತು ಕಂತಲ್ಲಿ ಹಿಂಡಿಹಾಕಿತು.
ಆರು ತಿಂಗಳ ಹಿಂದೆ ಅದೇನಾಯಿತೋ ಕುಟಂಬದಲ್ಲಿ ಏನೋ ಏರುಪೇರಾಗಿ ಮನೆ ತೊರೆದು ‘ಅಭಿನಯ ತರಂಗ’ ರಂಗಶಾಲೆಯಲ್ಲೇ ಜಂಗಮ ಬಂದು ಇರತೊಡಗಿದ. ಆ ಶಾಲೆಯ ಪ್ರಾಂಶುಪಾಲರಾದ ಗೌರಿದತ್ತುರವರದು ಮಾತೃಹೃದಯ. ಯಾರೇ ಬಂದರೂ ಆಶ್ರಯ ಕೊಡುವಂತಹ ದೊಡ್ಡ ಗುಣ. ಇನ್ನು ಅಭಿನಯ ತರಂಗದ ಸಾಕು ಮಗನಂತೇ ಇದ್ದವನು ಬಂದು ಇಲ್ಲಿಯೇ ಇರುತ್ತೇನೆಂದರೆ ಅದು ಹೇಗೆ ನಿರಾಕರಿಸಲು ಸಾಧ್ಯ?. ಆದರೆ ಬರುಬರುತ್ತಾ ಈತನ ಕುಡಿತದಾಟ ಹಾಗೂ ಗುಟ್ಕಾ ಚಟ ಎರಡರಿಂದಲೂ ಬೇಸತ್ತ ಗೌರಿಯವರು ಬೇಕಾದಷ್ಟು ಬುದ್ದಿ ಹೇಳಿ ಇನ್ನು ಮೇಲೆ ಕುಡಿಯುವುದಿಲ್ಲಾ ಎಂದು ತಮ್ಮ ತಲೆ ಮೇಲೆ ಆತನ ಕೈ ಇರಿಸಿಕೊಂಡು ಆಣೆ ಪ್ರಮಾಣ ಮಾಡಿಸಿಕೊಂಡರು. ಹಾಗೆ ಪ್ರಮಾಣ ಮಾಡಿದವನು ರಾಜಶೇಖರನಾಗಿದ್ದರೂ ಆತನೊಳಗಿನ ಹೆಂಡರಾಕ್ಷಸ ಕೇಳಬೇಕಲ್ಲಾ. ಅದು ಪ್ರತಿದಿನ ದುಃಖ ಶಮನಕ್ಕೆ ಹವಿಸ್ಸು ಬೇಕೆ ಬೇಕೆಂದಿತು. ಅದೊಂದು ದಿನ ಕೊಟ್ಟ ಮಾತು ಮುರಿದು ಬೆಳ್ಳಂಬೆಳಿಗ್ಗೆ ಕುಡಿದು ಬಂದ ರಾಜಶೇಖರನನ್ನು ಗೌರಿ ಮೇಡಂ ತರಾಟೆಗೆ ತೆಗೆದುಕೊಂಡು ‘ಕುಡಿಯುವಂತಿದ್ದರೆ ಇಲ್ಲಿ ಇರಲು ಅವಕಾಶವಿಲ್ಲ’ ಎಂದು ತುಂಬಾ ಸಂಕಟಪಟ್ಟು ಹೇಳಿದರು. ಅದನ್ನೇ ಬಹಳಾ ಸೀರಿಯಸ್ ಆಗಿ ತೆಗೆದುಕೊಂಡ ಸ್ವಾಭಿಮಾನಿ ಪ್ರವೀಣ ಜಂಗಮ ಈ ರಂಗಮಠ ಬಿಟ್ಟು ಮತ್ತೆ ಮನೆ ಸೇರಿಕೊಂಡವ ಕೊನೆಯವರೆಗೂ ಅಲ್ಲಿಗೆ ಬರಲೇ ಇಲ್ಲ. ಗೌರಿಯವರು ತಪ್ಪೇನು ಹೇಳಿರಲಿಲ್ಲ. ಅವರ ಜಾಗದಲ್ಲಿ ಆತನ ತಾಯಿ ಇದ್ದರೂ ಇದೇ ಮಾತನ್ನು ಹೇಳುತ್ತಿದ್ದರು. ಆದರೆ ಅವರ ಮಾತು ಆತನ ಕೆಟ್ಟ ಸ್ವಾಭಿಮಾನಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿತ್ತು. ಬೇರನ್ನು ಬೇರ್ಪಡಿಸಿದ ಗಿಡದಂತೆ ಆತ ಅರೆಜೀವವಾಗಿ ಹೋದ. ಕಾಲು ಶತಮಾನಗಳ ಕಾಲ ಅಭಿನಯ ತರಂಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿ ರಂಗಚಟುವಟಿಕೆಗಳಲ್ಲಿ ನಿರಂತರ ಭಾಗವಹಿಸಿದ ರಾಜಶೇಖರನಿಗೆ ಈಗ ಇದ್ದಕ್ಕಿದ್ದಂತೆ ಅಲ್ಲಿಂದ ಹೊರಹೋಗಬೇಕಾದಂತಹ ಪರಿಸ್ಥಿತಿಯನ್ನು ಅರಗಿಸಿಕೊಳ್ಳಲಾರದೇ ತಲ್ಲಣಿಸಿಹೋದ. ಗುರುಮಾತೆ ಗೌರಿಯವರಿಗೆ ಮಾತು ಕೊಟ್ಟಂತೆ ಕುಡಿತ ಬಿಡಲೂ ಸಾಧ್ಯವಾಗದೇ, ದೊಡ್ಡ ನಿಧಿಯಂತೆ ಬದುಕು ಪೂರಾ ಕಾಪಾಡಿಕೊಂಡುಬಂದ ಸ್ವಾಭಿಮಾನವನ್ನು ಬಿಟ್ಟು ಮರಳಿ ಅಭಿನಯ ತರಂಗದ ಅಂಗಳಕ್ಕೆ ಹೋಗಲೂ ಸಾಧ್ಯವಾಗದೇ, ಮಾಡಲು ಬೇರೇನೂ ಕೆಲಸವಿಲ್ಲದೇ ರಾಜಶೇಖರ ತಳಮಳಿಸಿದ. ಇಂತಹ ಅತೀವ ಸಂಕಟದ ಸಂದರ್ಭದಲ್ಲಿ ಕ್ಷಣಿಕ ಸಾಂತ್ವನವನ್ನು ಕೊಟ್ಟಿದ್ದು ಮತ್ತದೇ ಜೀವಹಂತಕ ಹೆಂಡ. ಹತ್ತು ಮಾರು ಜೋರಾಗಿ ಹೆಜ್ಜೆ ಹಾಕಲು ಸಾಧ್ಯವಿಲ್ಲದಂತಹ, ಹತ್ತು ಶಬ್ದಗಳನ್ನು ನೆಟ್ಟಗೆ ಆಡಲಾಗದಂತಹ ತೀವ್ರ ಅನಾರೋಗ್ಯದಲ್ಲೂ ಸಹ ಮತ್ತೆ ಬದುಕನ್ನು ಮರಳಿ ಕಟ್ಟಬೇಕು ಎನ್ನುವ ಅದಮ್ಯ ಚೇತನವನ್ನು ಕೊಟ್ಟಿದ್ದು ಮತ್ತದೇ ಸ್ವಾಭಿಮಾನ. ದೌರ್ಬಲ್ಯ ಸಾವಿನತ್ತೆಳೆದರೆ ಸ್ವಾಭಿಮಾನ ಬದುಕಿನತ್ತೆಳೆಯುತ್ತಾ ಈ ಎರಡರ ಎಳೆತ ಸೆಳೆತಗಳ ನಡುವೆ ಜಂಗಮನ ಬದುಕು ಜರ್ಜರಿತವಾಗಿದ್ದಂತೂ ಸತ್ಯ.
“ಸಂಸ್ಥೆಯನ್ನು ಎಲ್ಲಿ ಹೇಗೆ ನೋಂದಣಿ ಮಾಡಬೇಕು ಹೇಳು...” ಆ ಕಡೆಯಿಂದ ಗೆಳೆಯ ಪೋನಲ್ಲಿ ಒತ್ತಾಯಿಸ ತೊಡಗಿದ. “ನೀನಿರುವ ಅನಾರೋಗ್ಯದ ಪರಿಸ್ಥಿತಿಯಲ್ಲಿ ನೋಂದಣಿಗಾಗಿ ಸರಕಾರಿ ಕಛೇರಿಗಳಿಗೆ ಅಲೆದಾಡುವುದು ಸಾಧ್ಯವಿಲ್ಲ ಗೆಳೆಯಾ, ನೀನೊಂದು ಕೆಲಸ ಮಾಡು ನಾನು ಶರಣಪ್ಪ ಎನ್ನುವ ದಲ್ಲಾಳಿಯ ಮೊಬೈಲ್ ನಂಬರ್ ಮೆಸೇಜ್ ಮಾಡ್ತೇನೆ. ಆತನಿಗೆ ಪೋನ್ ಮಾಡಿ ಬರಹೇಳು. ಒಟ್ಟು ಮೂರುಸಾವಿರದಷ್ಟು ಹಣ ಖರ್ಚಾಗಬಹುದು. ನಿನ್ನ ಸಂಸ್ಥೆ ನೋಂದಣಿ ಮಾಡಿಸು. ಅದಕ್ಕೆ ಬೇಕಾದ ನಡಾವಳಿಗಳ ಅಗ್ರೀಮೆಂಟ್ ಪ್ರತಿ ನನ್ನ ಹತ್ತಿರವಿದೆ ನಿನಗೆ ಕೊಡುತ್ತೇನೆ...
ಆಗಬಹುದಾ...?” ಎಂದು ಕೇಳಿದೆ. ‘ಬೇಕಾದಷ್ಟಾಯಿತು, ಈಗಲೇ ಪೋನ್ ಮಾಡ್ತೇನೆ. ನೋಂದಣಿಯಾದ ಮೇಲೆ ಮೂರು ವರ್ಷ ಕಾಯೋಣ. ಆಮೇಲೆ ನೀನು ನನಗೆ ಅನುದಾನ ಕೊಡಿಸಲು ಹೆಲ್ಪ ಮಾಡಲೇಬೇಕು, ಇಲ್ಲಾ ಅನ್ನಬಾರದು....’ ಎಂದು ರಾಜಶೇಖರ ಮಯೋವೃದ್ದರ ಹಾಗೇ ಹೇಳಿದ್ದನ್ನೇ ಮತ್ತೆ ಮತ್ತೆ ಒತ್ತಿ ಹೇಳತೊಡಗಿದ. ‘ಅದೆಲ್ಲಾ ಆಮೇಲಿನ ಮಾತು ಮೊದಲು ನಿನ್ನ ಆರೋಗ್ಯವನ್ನು ಸರಿಯಾಗಿ ನೋಡಿಕೋ ಮಾರಾಯಾ, ಕುಡಿತಾ ಬಿಡು, ಬದುಕೋದನ್ನು ಕಲಿ...” ಎಂದು ಕೋಣನ ಮುಂದೆ ಕಿನ್ನುರಿ ಬಾರಿಸತೊಡಗಿದೆ. ಕೇಳುವಷ್ಟು ಕೇಳಿ “ ಆಯ್ತು, ಈ ಉಪದೇಶ ಸಾಕು ಬಿಡು, ನಾನು ನಿನ್ನ ಸಂಸ್ಥೆಯ ಹಾಗೆ, ಅಭಿನಯ ತರಂಗದ ಹಾಗೆ ಅಭಿನಯ ಶಾಲೆ ಮಾಡಿ ತೋರಿಸ್ತೇನೆ ನೋಡ್ತಾ ಇರು.....” ಎಂದು ಏದುಸಿರು ಬಿಡುತ್ತಾ ಹೇಳಿ ಮೊಬೈಲ್ ಕಟ್ ಮಾಡಿದ. ಅದ್ಯಾಕೋ ನನಗೆ ಸಮಾಧಾನ ಎನ್ನಿಸಲಿಲ್ಲ. ಮರಳಿ ಪೋನ್ ಮಾಡಿದರೆ ಆತನ ಪೋನ್ ಸ್ವಿಚ್ಆಪ್. ಅವನಿಗೂ ಉಪದೇಶ ಕೇಳಿ ಕೇಳಿ ಸಾಕಾಗಿತ್ತೋ, ನಾನೇ ಅವನಿಗೆ ಹರ್ಟ ಮಾಡಿದೆನೋ, ಆಗ ಸಿಟ್ಟಿಗೆದ್ದು ಪೋನನ್ನೆತ್ತಿ ಬಿಸಾಕಿದನೋ.. ಗೊತ್ತಿಲ್ಲ. ಆದರೆ ಆತನಿಗೆ ನನ್ನಿಂದ ಮಾಹಿತಿ ಮಾತ್ರ ಬೇಕಾಗಿತ್ತೇ ಹೊರತು ಉಪದೇಶವಲ್ಲ. ಬೇರೆಯವರು ಉಪದೇಶ ಕೊಡುವುದು, ಬುದ್ದಿವಾದ ಹೇಳುವುದು ಅತನ ಸ್ವಾಭಿಮಾನವನ್ನು ಕೆರಳಿಸುತ್ತಿತ್ತು.
ಆ ನಂತರ ಆ ಜಂಗಮನ ಜಂಗಮವಾಣಿ ಬಹುತೇಕ ಸ್ಥಬ್ದವಾಗಿತ್ತು. ರಿಂಗಣಿಸಿದರೂ ಎತ್ತುವವರಿರಲಿಲ್ಲ. ಆನಂತರ ತಿಳಿದಿದ್ದೇನೆಂದರೆ ರಾಜಶೇಖರನ ಅನಾರೋಗ್ಯ ಉಲ್ಬಣಿಸಿ ಆಸ್ಪತ್ರೆಗೆ ದಾಖಲಿಸಿದ್ದು. ಕರುಳುಗಳು ರಿಪೇರಿ ಮಾಡಲಾಗದಷ್ಟು ಡ್ಯಾಮ್ಯಾಜ್ ಆಗಿದ್ದು, ಜಾಂಡೀಸ್ ಕೊನೆಯ ಸ್ಟೇಜ್ನಲ್ಲಿದ್ದಿದ್ದು, ಡಾಕ್ಟರ್ಗಳು ‘ಟ್ರೀಟಮೆಂಟ್ ಕೊಡುವುದು ವ್ಯರ್ಥ, ಬದುಕುಳಿಯುವುದು ಅಸಾಧ್ಯ ಮನೆಗೆ ಕರೆದುಕೊಂಡು ಹೋಗಿ’ ಎಂದು ಡಿಸ್ಚಾರ್ಜ ಮಾಡಿ ಕಳುಹಿಸಿದ್ದು...ಇವೆಲ್ಲಾ ಕೇಳಿದವರಿಗೆ ಕರುಳು ಹಿಂಡುವಂತೆ ಮಾಡುವ ಸುದ್ದಿಗಳು.
ಇವೆಲ್ಲವುಕ್ಕಿಂತಲೂ ರಾಜಶೇಖರನ ಅಂತಿಮ ಕ್ಷಣಗಳು ಮಾತ್ರ ಆತನ ಕೆಟ್ಟ ಸ್ವಾಭಿಮಾನಕ್ಕೆ ಹಿಡಿದ ಕನ್ನಡಿಯಾಗಿದ್ದವು. ಅಂದು 2015,
ಮೇ 27, ಬೆಳಿಗ್ಗೆ ಮಲಬಾಧೆ. ಅರ್ಜೆಂಟಾಗಿ ಟೈಲೆಟ್ಗೆ ಹೋಗಬೇಕಾಗಿದೆ. ಮೇಲಕ್ಕೇಳಲಾಗುತ್ತಿಲ್ಲ. ಹೆಂಡತಿ ಬಂದು ‘ಹಾಸಿಗೆಯಲ್ಲೇ ಕೂತು ಮಾಡಿ’ ಎಂದು ಅದೆಷ್ಟೇ ಹೇಳಿದರು ಆತನ ಮನಸ್ಸು ಒಪ್ಪುತ್ತಿಲ್ಲ. ಅದು ಹೇಗೋ ಕಷ್ಟಪಟ್ಟು ಹತ್ತಡಿ ದೂರದ ಟೈಲೆಟ್ಟಗೆ ಒಂದೊಂದೇ ಹೆಜ್ಜೆ ಇಟ್ಟು ಹೊರಟೇ ಬಿಟ್ಟ. ಆದರೆ ಇನ್ನೂ ನಾಲ್ಕಾರು ಹೆಜ್ಜೆ ಇಟ್ಟಿರಲಿಲ್ಲ ಕುಸಿದು ಕುಳಿತು ಬಿಟ್ಟ. ‘ನಿಮ್ಮ ಕೈಲಾಗುವುದಿಲ್ಲ ಇಲ್ಲೇ ಗೋಡೆಗೆ ಒರಗಿ ಮಾಡಿಬಿಡಿ ಎಂದು ಪತ್ನಿ ಒತ್ತಾಯಿಸಿದಳು. ಅಸಹಾಯಕ ಸ್ಥಿತಿಯಲಿ ರಾಜಶೇಖರ ತಳಮಳಿಸಿ ಹೋದ. ಆತನ ಸ್ವಾಭಿಮಾನಕ್ಕೆ ಅಂತಿಮ ಹೊಡೆತ ಬಿದ್ದಾಗಿತ್ತು. ನಲವತ್ತಾರು ವಯಸ್ಸಿಗೇ ಹೆಂಡತಿಯಿಂದ ಇಂತಾ ಕೆಲಸ ಮಾಡಿಸಿಕೊಳ್ಳುವಷ್ಟು ಹೀನಾಯ ಸ್ಥಿತಿಗೆ ಬಂದಿದ್ದು ಆತನನ್ನು ಮಾನಸಿಕವಾಗಿ ದುರ್ಬಲ ಗೊಳಿಸಿಬಿಟ್ಟಿತ್ತು. ತನ್ನ ಮುಂದೆಯೇ ತನ್ನ ಹೆಂಡತಿ ತನ್ನ ಮಲ-ಮೂತ್ರಾದಿಗಳನ್ನು ಸ್ವಚ್ಚಗೊಳಿಸಿದ್ದು ನೋಡಿ ಕುಗ್ಗಿಹೋದ. ಕಣ್ಣಲ್ಲಿ ನೀರು ಮಡುಗಟ್ಟಿತ್ತು. ಎದೆಯಲ್ಲಿ ಅವಮಾನ ಹೆಪ್ಪುಗಟ್ಟಿತ್ತು. ಬದುಕಿನಾದ್ಯಂತ ಕಾಪಾಡಿಕೊಂಡು ಬಂದಿದ್ದ ಸ್ವಾಭಿಮಾನ ತನ್ನ ಕಣ್ಣ ಮುಂದೆಯೇ ಚೂರುಚೂರಾದಂತೆ ಭಾಸವಾಯಿತು. ಕಣ್ಣಿನ ಮುಂದೆ ಕತ್ತಲು ಕವಿಯಿತು. ಹೃದಯದ ಬಡಿತ ನಿಧಾನವಾಯಿತು... ಕೌಂಟ್ ಡೌನ್ ಶುರುವಾಯಿತು. ಟೆನ್....ಸಿಕ್ಸ್......
ಥ್ರೀ.....ಟು....ಒನ್ ಅಷ್ಟೇ ಎಲ್ಲಾ ಮುಗಿಯಿತು. ಜಂಗಮ ಬಯಲಲಿ ಬಯಲಾಗಿ ಬಿಟ್ಟ. ಸ್ವಾಭಿಮಾನಿಯೊಬ್ಬನ ಸ್ವಯಂಕೃತಅಪರಾಧ ಆತನನ್ನು ಸರ್ವನಾಶಮಾಡಿಬಿಟ್ಟಿತು. ಈಗ ರಾಜಶೇಖರ ಆತ್ಮೀಯರೆದೆಯಲ್ಲಿ ಬರೀ ನೆನಪು ಮಾತ್ರ.
-ಶಶಿಕಾಂತ ಯಡಹಳ್ಳಿ
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ