ಮಂಗಳವಾರ, ಜೂನ್ 2, 2015

ಸ್ಟಾರ್‌ಗಳು ರಿಯಾಲಿಟಿ ಶೋಗೆ : ನಿರ್ಮಾಪಕರು ಬೀದಿಗೆ; ಕನ್ನಡ ಸಿನೆಮಾರಂಗ ಅಧೋಗತಿಗೆ.....

ಫಿಲಂ ಚೆಂಬರ್ಧ ಮುಂದೆ ಧರಣಿ ನಿರತ ನಿರ್ಮಾಪಕರುಗಳು

ಕೊನೆಗೂ ಕನ್ನಡ ಚಲನಚಿತ್ರ ನಿರ್ಮಾಪಕರಿಗೆ ಜ್ಞಾನೋದಯವಾಗುವ ಸಮಯ ಬಂದಿದೆ. ಯಾವಾಗ ತಾವು ಹೂಡಿದ ಹಣಕ್ಕೆ ಬದಲಾಗಿ ಲಾಭ ಹೋಗಲಿ ಅಸಲೇ ವಾಪಸ್ ಬರದಾಯಿತೋ ಆಗ ಲಾಸ್ ನಿರ್ಮಾಪಕರೆಲ್ಲಾ ತಮ್ಮ ಸಂಘದ ಬಳಗವನ್ನು ಸೇರಿಸಿಕೊಂಡು ಫಿಲಂ ಚೆಂಬರ್ ಮುಂದೆ ಜೂನ್ ಒಂದರಿಂದ ಹತ್ತು ದಿನಗಳ ಕಾಲ ಸಾಮೂಹಿಕ ಹರತಾಳ ಮಾಡತೊಡಗಿದ್ದಾರೆ. ಹಾಗೂ ತಮ್ಮ ಸಿನೆಮಾಗಳ ಸೋಲಿಗೆ ಹಾಗೂ ಅದರಿಂದ ಅನುಭವಿಸಿದ ನಷ್ಟಕ್ಕೆ ಸ್ಟಾರ್ ನಟರುಗಳನ್ನು ಮತ್ತು ಟಿವಿ ರಿಯಾಲಿಟಿ ಶೋಗಳನ್ನು ಹೊಣೆಗಾರರನ್ನಾಗಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ನಿರ್ಮಾಪಕರ ವಲಯದ ರಾಜೇಂದ್ರಸಿಂಗ್ ಬಾಬು ಹಾಗೂ ಜಯಸಿಂಹ ಮುಸರಿಯವರ ನೇತೃತ್ವದಲ್ಲಿ ಶುರುವಾದ ಧರಣಿ ಒಂಚೂರು ಸುದ್ದಿ ಮಾಡಿತು. ತಮ್ಮ ಸಮಸ್ಯೆ ಬಗೆ ಹರಿಯುವವರೆಗೂ ಹೊಸ ಚಿತ್ರ ನಿರ್ಮಾಣ ಸ್ಥಗಿತಗೊಳಿಸುವ ನಿರ್ಣಯವನ್ನೂ ತೆಗೆದುಕೊಳ್ಳಲಾಯಿತು. ನಿರ್ಮಾಪಕರುಗಳು ಮೂರು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಬಿದಿಗಿಳಿದಿದ್ದಾರೆ. ಒಂದು ಸ್ಟಾರ್ಗಳು ಕಿರುತೆರೆಯ ರಿಯಾಲಿಟಿ ಶೋನಲ್ಲಿ ಭಾಗವಹಿಸಕೂಡದು ಹಾಗೂ ಇನ್ನೊಂದು ಅವರೆಲ್ಲಾ ತಮ್ಮ ಸಂಭಾವನೆಗಳನ್ನು ಇಳಿಸಬೇಕು. ಹಾಗೂ ಚಿತ್ರಮಂದಿರದ ಮಾಲೀಕರುಗಳು ಸಿನೆಮಾ ಪ್ರದರ್ಶನಕ್ಕೆ ಬಾಡಿಗೆ ಬದಲು ಪರ್ಸಂಟೇಜ್ ತೆಗೆದುಕೊಳ್ಳಬೇಕು. ಮೊದಲ ಎರಡು ಡಿಮ್ಯಾಂಡ್ ಕುರಿತು ಆಲೋಚಿಸಿದರೆ, ಅರೆ... ಇದೆಂತಾ ವಿಚಿತ್ರ ಬೇಡಿಕೆ ಎಂದು ಮೇಲ್ನೋಟಕ್ಕೆ ಅನ್ನಿಸದೇ ಇರದು. ಯಾಕೆಂದರೆ ಕಮರ್ಸಿಯಲ್ ಕಲಾವಿದನಾದವನು ಸಿನೆಮಾದಲ್ಲೋ, ಟೀವಿಯಲ್ಲೋ ಇಲ್ಲವೇ ಜಾಹಿರಾತಿನಲ್ಲೋ ತನಗಿಷ್ಟ ಬಂದಲ್ಲಿ ನಟಿಸುವ ಹಕ್ಕನ್ನು ಹೊಂದಿದ್ದಾನೆ ಹಾಗೂ ತನ್ನ ಕೆಲಸಕ್ಕೆ ಬೇಕಾದ ಹಣವನ್ನು ಡಿಮ್ಯಾಂಡ್ ಮಾಡುತ್ತಾನೆ. ಇದರಲ್ಲೇನಿದೆ ತಪ್ಪು?


ಅಸಲಿಗೆ ಸಮಸ್ಯೆ ಇರೋದೇ ಇಲ್ಲಿ. ವೀಕ್ಷಕರು ಸಿನೆಮಾ ಸ್ಟಾರ್ಗಳ ಜೊತೆಗೆ ಒಂದು ರೀತಿಯ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಅವರನ್ನು ನೋಡಲು ಹಾತೊರೆಯುತ್ತಾರೆ. ಸಿನೆಮಾದಲ್ಲಿ ಮಾತ್ರ ಕಾಣಸಿಗುತ್ತಿದ್ದ ತಮ್ಮ ಮೆಚ್ಚಿನ ನಾಯಕ ನಟ-ನಟಿಯರು  ಈಗ ಪ್ರತಿನಿತ್ಯ ತಮ್ಮ ಮನೆಯ ಟೀವಿಯಲ್ಲೇ ಪ್ರತ್ಯಕ್ಷರಾಗುವುದರಿಂದ ಮತ್ಯಾಕೆ ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ನೋಡಬೇಕು ಎಂದುಕೊಂಡಿದ್ದರಿಂದ ಸಿನೆಮಾ ಮಂದಿರದಲ್ಲಿ ಕಲೆಕ್ಷನ್ ಕಡಿಮೆಯಾಗಿ ಸಿನೆಮಾಗಳು ತೋಪಾಗತೊಡಗಿದ್ದಾವೆ ಎನ್ನುವುದು ನಿರ್ಮಾಪಕರ ವಿತಂಡವಾದ. ಅದಕ್ಕೆ ಪೂರಕವಾಗಿ... ಚಾನೆಲ್ನವರು ಟಿವಿಯಲ್ಲಿ ಪ್ರದರ್ಶಿಸುವುದಕ್ಕಾಗಿ ಸಿನೆಮಾಗಳನ್ನು ನಾಯಕ ನಟನ ಮಾರ್ಕೆಟ್ ವ್ಯಾಲ್ಯೂ ನೋಡಿ ಹಣ ಕೊಟ್ಟು ಕೊಂಡುಕೊಳ್ಳುತ್ತಿದ್ದರು. ಆದರೆ ಈಗ ಚಾನೆಲ್ನವರು ಸಿನೆಮಾ ಬದಲಾಗಿ ಸಿನೆಮಾ ಸ್ಟಾರ್ಗಳನ್ನೇ ಹಣ ಕೊಟ್ಟು ರಿಯಾಲಿಟಿ ಶೋಗಳಲ್ಲಿ ಆಂಕರಿಂಗ್ ಮಾಡಲು ಬುಕ್ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಚಲನಚಿತ್ರಗಳ ಪ್ರದರ್ಶನ ಹಕ್ಕುಗಳನ್ನು ಖರೀದಿಸುವುದನ್ನು ಕಡಿಮೆ ಗೊಳಿಸಿದ್ದಾರೆ. ಇದು ನಿರ್ಮಾಪಕರಿಗೆ ನುಂಗಲಾರದ ತುತ್ತಾಗಿದೆ. ಯಾವಾಗ ಪ್ರೇಕ್ಷಕರು ಚಲನಚಿತ್ರ ಮಂದಿರದತ್ತ ಬೆನ್ನು ತೋರಿಸತೊಡಗಿದರೋ ಆಗ ನಿರ್ಮಾಪಕರುಗಳು ನಾಯಕ ನಟರಿಗೆ ಸಂಭಾವನೆ ಕಡಿತಗೊಳಿಸಲು ದುಂಬಾಲು ಬೀಳತೊಡಗಿದರು.

 ಆದರೆ... ಸಿನೆಮಾ ನಿರ್ಮಾಪಕರು ಕೊಡುವುದಕ್ಕಿಂದ ಹೆಚ್ಚು ಹಣವನ್ನು ರಿಯಾಲಿಟಿ ಶೋ ನಿರ್ಮಾತೃಗಳು ಕೊಡುವುದರಿಂದ ಸುದೀಪ್, ರವಿಚಂದ್ರನ್, ಗಣೇಶ್, ರಮೇಶ್... ಮುಂತಾದ ಕನ್ನಡ ಸಿನೆಮಾ ಸ್ಟಾರ್ಗಳು ಟಿವಿ ಶೋಗಳತ್ತ ಒಲಿದರು. ತಮ್ಮ ಸ್ಟಾರ್ ವ್ಯಾಲ್ಯೂಗೆ ಹೊಸ ಮಾರುಕಟ್ಟೆಯನ್ನು ಹುಡುಕಿಕೊಂಡರು. ಸಿನೆಮಾದಲ್ಲಿ ಮಳೆ, ಚಳಿ, ಬಿಸಿಲಿನಲ್ಲಿ ಮೈಯೊಡ್ಡಿ, ಪೈಟಿಂಗ್- ಡಾನ್ಸಿಂಗ್ ರಿಸ್ಕ್ ತೆಗೆದುಕೊಂಡು ದಿನಕ್ಕೆಂಟು ಗಂಟೆ ಮೀರಿ ಶೂಟಿಂಗ್ನಲ್ಲಿ ಭಾಗವಹಿಸುವುದಕ್ಕಿಂತಲೂ ತಣ್ಣನೆಯ ಎಸಿ ಸೆಟ್ನಲ್ಲಿ ಆಡಾಡುತ್ತಲೇ ಕಮಾಂಡ್ ಮಾಡುತ್ತಾ ಆಂಕರಿಂಗ್ ಮಾಡಿಕೊಂಡು ಹಣ ಹಾಗೂ ಜನಪ್ರೀಯತೆ ಎರಡನ್ನೂ ಸಂಪಾದಿಸಬಹುದಾದ ಅವಕಾಶವನ್ನು ಯಾಕೆ ನಾಯಕ ನಟರುಗಳು  ಬಿಟ್ಟುಕೊಡುತ್ತಾರೆ. ಚಾನೆಲ್ಗಳಿಗೆ ಟಿಆರ್ಪಿ ಹೆಚ್ಚಿಸಿಕೊಳ್ಳಬೇಕಾಗಿತ್ತು. ಟಿಆರ್ಪಿ ಹೆಚ್ಚಿಸಿಕೊಳ್ಳಲು ಜನರನ್ನು ಆಕರ್ಷಿಸಬೇಕಾಗಿತ್ತು. ಸ್ಟಾರ್ ನಟರನ್ನು ತಮ್ಮ ಸ್ಟುಡಿಯೋಗೆ ಕರೆಸಿಕೊಂಡು ರಿಯಾಲಿಟಿ ಶೋಗಳ ಮೂಲಕ ಟಿಆರ್ಪಿ ಹೈಪ್ ಮಾಡಿಕೊಳ್ಳುವ ಯೋಜನೆಯನ್ನು ಚಾನೆಲ್ಗಳು ಶುರುಮಾಡಿದವು. ಯಾವಾಗ ಟಿಆರ್ಪಿ ಹೆಚ್ಚಿತೋ ಆಗ ಬಂಡವಾಳಶಾಹಿಗಳ ಜಾಹೀರಾತುಗಳು ಹಣವನ್ನು ಹರಿಸಿದವು. ಹೆಚ್ಚು ಹಣ ಕೊಟ್ಟು ತೋಪು ಸಿನೆಮಾಗಳನ್ನು ಕೊಂಡುಕೊಂಡು ಟಿವಿಯಲ್ಲಿ ಪ್ರದರ್ಶನಗೊಳಿಸಿದಾಗ ಬರುವ ಜಾಹೀರಾತುಗಳಿಗಿಂತ ಮೂರ್ನಾಲ್ಕು ಪಟ್ಟು ಹಣ ರಿಯಾಲಿಟಿ ಶೋಗಳಿಂದ ಬಂದಾಗ ಚಾನೆಲ್ಗಳು ಪೈಪೋಟಿಗೆ ಬಿದ್ದು ರಿಯಾಲಿಟಿ ಶೋಗಳನ್ನು ಶುರು ಮಾಡಿದವು. ಸ್ಟಾರ್ಡಮ್ ನಟರನ್ನು ಬುಕ್ ಮಾಡಿ ಲಾಭ ಮಾಡಿಕೊಂಡವು. ಇದೆಲ್ಲವೂ ವಾಸ್ತವ. ಆದರೆ... ನಿರ್ಮಾಪಕರ ಗೋಳು ಮಾತ್ರ ಸ್ವಯಂಕೃತ ಸೃಷ್ಟಿ.


ಒಬ್ಬ ನಟನ ಸಿನೆಮಾ ಅದು ಹೇಗೋ ಒಂದಿಷ್ಟು ದಿನ ಓಡಿ ಹಣ ಮಾಡಿತೆಂದರೆ ಸಾಕು ನಿರ್ಮಾಪಕರುಗಳು ನಟನನ್ನೇ ಹಾಕಿಕೊಂಡು ಸಿನೆಮಾ ಮಾಡಿದರೆ ಹಾಕಿದ ಹಣ ನೂರ್ಮಡಿಯಾಗುತ್ತದೆ ಎಂದು ಅತಿಆಸೆಗೆ ಬಿದ್ದು ಪೈಪೋಟಿಯ ಮೇಲೆ ಸಂಭಾವನೆಯನ್ನು ಕೊಡಲು ಸಿದ್ದರಾಗುತ್ತಾರೆ. ಒಮ್ಮೆ ನಟನ ಸಂಭಾವನೆ ಏರಿಕೆಯಾದರೆ ಅದು ಮತ್ತೆ ಇಳಿಯುವುದು ಕಷ್ಟ ಎಂಬುದು ಗೊತ್ತಿದ್ದೂ ನಿರ್ಮಾಪಕರುಗಳು ಗಾಳಿ ಬಿಟ್ಟಾಗ ತೂರಿಕೊಳ್ಳೋಣ, ಮುಂದೆ ಬರುವುದನ್ನು ಮುಂದೆ ನೋಡಿಕೊಳ್ಳೋಣ ಎಂದು ಆತುರತೆ ಪ್ರದರ್ಶಿಸುತ್ತಾರೆ. ಒಂದು ಸಿನೆಮಾದ ಯಶಸ್ಸು ಮುಂದಿನ ಹತ್ತಾರು ನಿರ್ಮಾಪಕರ ಸಿನೆಮಾವನ್ನು ಬಲಿತೆಗೆದುಕೊಂಡಿದ್ದು ಕಣ್ಮುಂದೆಯೇ ಇದೆ. ಮುಂಗಾರು ಮಳೆಯ ಯಶಸ್ಸಿನ ನಂತರ ಬಂದ ಅದೇ ಮಾದರಿಯ ಸಿನೆಮಾಗಳು ನೆಲಕಚ್ಚಿದ್ದು ಇದಕ್ಕೆ ಉದಾಹರಣೆ. ಆದರೂ ಬಹುತೇಕ ನಿರ್ಮಾಪಕರು ಪ್ರಭಾವಶಾಲಿ ಕಲಾಮಾಧ್ಯಮವನ್ನು ವ್ಯಾಪಾರೋಧ್ಯಮ ಮಾಡಿಕೊಂಡು ಹಣಸಂಪಾದನೆಯೊಂದನ್ನೇ ಗುರಿಯಾಗಿಸಿಕೊಂಡಾಗ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ನಾಯಕ ನಟರುಗಳ ಸಂಭಾವನೆಯನ್ನು ಯದ್ವಾತದ್ವಾ ಏರಿಸಿದ ಇದೇ ನಿರ್ಮಾಪಕರು ಈಗ ಸಂಭಾವನೆಯನ್ನು ಇಳಿಸಿ ಎಂದು ಅವಲತ್ತುಕೊಳ್ಳುತ್ತಿದ್ದಾರೆ.

ಸ್ಟಾರ್ಗಳನ್ನಿಟ್ಟುಕೊಂಡು ಸಿನೆಮಾ ಮಾಡಿ ಕೈಸುಟ್ಟುಕೊಂಡಾಗಲಾದರೂ ಅಂತಹ ನಿರ್ಮಾಪಕ ಮಹನೀಯರು ಪಾಠ ಕಲಿತು ಸ್ಟಾರ್ಗಳ ಸಹವಾಸ ಬಿಟ್ಟು ಪ್ರತಿಭಾನ್ವಿತ ಕಲಾವಿದರನ್ನು ಹಾಕಿಕೊಂಡು ಯಾಕೆ ತಮ್ಮ ಸಿನೆಮಾ ಮಾಡುವುದಿಲ್ಲ? ಐದಾರು ಕೋಟಿಗಳನ್ನು ಹಾಕಿ ಹತ್ತಿಪ್ಪತ್ತು ಕೋಟಿಗಳನ್ನು ಮೂರ್ನಾಲ್ಕು ತಿಂಗಳಲ್ಲಿ ಸಂಪಾದಿಸಿಬಿಡುವ ತರಾತುರಿಗಿಂತ ಕಡಿಮೆ ಬಜೆಟ್ಟಿನ ಹೊಸ ಕಲಾವಿದರ ಸಿನೆಮಾಗಳನ್ನು ಮಾಡಲು ಮನಸ್ಸು ಮಾಡುವುದಿಲ್ಲ. ಮಲಿಯಾಳಂ ಸಿನೆಮಾಗಳನ್ನಾದರೂ ನೋಡಿ ಯಾಕೆ ಕಡಿಮೆ ಬಜೆಟ್ಟಿನಲ್ಲಿ ಉತ್ತಮ ಸಿನೆಮಾ ಮಾಡಿ ಹಣ ಹಾಗೂ ಹೆಸರು ಗಳಿಸುವುದನ್ನು ಕಲಿಯಬಾರದು? ಇರಾಣಿ, ಕೋರಿಯನ್ ಸಿನೆಮಾಗಳು ಕಡಿಮೆ ಬಜೆಟಲ್ಲಿ ಸ್ಟಾರ್ ನಟರುಗಳಿಲ್ಲದೇ ಜಗತ್ತಿನಾದ್ಯಂತ ಹೆಸರು ಹಣ ಮಾಡುತ್ತಿವೆಯಲ್ಲಾ ಅವುಗಳ್ಯಾಕೆ ನಮ್ಮ ನಿರ್ಮಾಪಕರಿಗೆ ಮಾದರಿ ಯಾಗುವುದಿಲ್ಲ? ಇದೆಲ್ಲಾ ಅವರಿಗೆ ಬೇಕಾಗಿಲ್ಲ. ನಮ್ಮ ನಿರ್ಮಾಪಕರುಗಳ ಲಕ್ಷ ಇರುವುದೆಲ್ಲಾ ತೆಲುಗು ತಮಿಳು ಸಿನೆಮಾಗಳತ್ತ. ಅಲ್ಲಿ ಐವತ್ತು ಕೋಟಿ ಹಾಕಿ ನೂರು ಕೋಟಿ ಬಾಚಿಕೊಳ್ಳುವುದನ್ನು ಕಾಪಿ ಮಾಡಲು ಹೋಗಿ ಕೈಸುಟ್ಟುಕೊಂಡ ನಿರ್ಮಾಪಕರಲ್ಲಿ ಕೆಲವರು ಮನೆ ಮಠ ಮಾರಿಕೊಂಡಿರುವುದು ನಮ್ಮ ಕಣ್ಮುಂದಿನ ಸತ್ಯ.

ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದು ಹಳೆಯ ಗಾದೆ, ಹಾಗೂ ಕಾಲಿದ್ದಷ್ಟು ಹಾಸಿಗೆ ಹಾಸು ಎನ್ನುವುದು ಮಾಡರ್ನ ಗಾದೆ. ಇವೆರಡಕ್ಕೂ ತದ್ವಿರುದ್ದ ನಮ್ಮ ನಿರ್ಮಾಪಕ ವಲಯ. ಡಿಮ್ಯಾಂಡ್ ನೋಡಿಕೊಂಡು ಪ್ರಾಡಕ್ಟ್ ತಯಾರಿಸೋದು ಮಾರುಕಟ್ಟೆ ನೀತಿ. ಆದರೆ ಸಿನೆಮಾ ರಂಗದಲ್ಲಿ ಡಿಮ್ಯಾಂಡನ್ನು ಊಹಿಸಿಕೊಂಡು ಸಿನೆಮಾ ತಯಾರಿಸುತ್ತಾರೆ. ಊಹೆ ತಲೆಕೆಳಗಾದರೆ ಹೀಗೆ ಇನ್ಯಾರದೋ ಮೇಲೆ ಗೂಬೆ ಕೂಡಿಸಿ ಬೀದಿಗಿಳಿಯುತ್ತಾರೆ. ಕರ್ನಾಟಕದ ಸಿನೆಮಾದ ಎವರೇಜ್ ಮಾರುಕಟ್ಟೆ ತೆಲುಗು ತಮಿಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಾಸಿಗೆ ಇದ್ದಷ್ಟು ಅಂದರೆ ಮಾರುಕಟ್ಟೆ ಇದ್ದಷ್ಟು ಖರ್ಚು ಮಾಡಿ ಉತ್ತಮ ಸಿನೆಮಾ ತೆಗೆದರೆ ನಷ್ಟವೆಂಬುದಿಲ್ಲ. ಹೋಗಲಿ ಕಾಲಿದ್ದಷ್ಟಾದರೂ ಹಾಸಿಗೆ ಹಾಸಿಕೊಳ್ಳುತ್ತಾರಾ ಅದೂಇಲ್ಲಅಂದರೆ ಮಾರುಕಟ್ಟೆ ಮೀರಿಸುವಷ್ಟು ಅದ್ಬುತವಾದ ಸಿನೆಮಾ ತೆಗೆದು ಲಾಭ ಮಾಡಿಕೊಳ್ಳುತ್ತಾರಾ ಅಂದರೆ ಉತ್ತರವಿಲ್ಲ. ಅಂದರೆ ನಿರ್ಮಾಪಕರು ಯಾವ ಸಮಸ್ಯೆ ಇಟ್ಟುಕೊಂಡು ಈಗ ಬೀದಿಗಿಳಿದು ಬಾಯಿಬಡಿದುಕೊಳ್ಳುತ್ತಿದ್ದಾರೋ ಸಮಸ್ಯೆಗೆ ಕಾರಣೀಕರ್ತರೂ ಅವರೇ ಹಾಗೂ ಅದರ ಪರಿಹಾರ ಇರುವುದೂ ಅವರ ಕೈಯಲ್ಲೇ. ರೋಗಪೀಡಿತರೂ ಅವರೇ ಹಾಗೂ ರೋಗಶಮನಕ್ಕೆ ಮದ್ದು ಮಾಡಬೇಕಾದರವರೂ ಅವರೇ ಆಗಿದ್ದಾರೆ. ಲಾಸ್ ಆಗಿದೆ ಎಂದು ಎಲ್ಲರೂ ಒಂದಾಗಿ ಸಂಘಟಿತರಾಗಿ ಧರಣಿ ಮಾಡುವ ಇವರೇ ಲಾಭಕ್ಕಾಗಿ ಕಚ್ಚಾಡಿರುವುದಕ್ಕೆ ಕನ್ನಡ ನಾಡಿನ ಜನರೇ ಸಾಕ್ಷಿಯಾಗಿದ್ದಾರೆ.

ಸ್ಟಾರ್ನಟರ ಕಾಲ್ಶೀಟ್ ಸಿಕ್ಕಿತೆಂದಕೂಡಲೇ ಸಾಲಸೋಲ ಮಾಡಿ ಹಣ ತಂದು ಸಾಕಷ್ಟು ಪೂರ್ವ ಯೋಜನೆ ಹಾಗೂ ಪೂರ್ವ ತಯಾರಿ ಇಲ್ಲದೇ ಸಂತೆ ಹೊತ್ತಿಗೆ ನಾಲ್ಕು ಮೊಳ ನೇಯ್ದವರಂತೆ ತರಾತುರಿಯಲ್ಲಿ ರೀಲು ಸುತ್ತಿ ಇದು ಅದ್ಬುತ ಸಿನೆಮಾ ನೋಡಿ ಎಂದರೆ ಯಾರು ತಾನೇ ಹಣ ಕೊಟ್ಟು ಬಂದು ಕೆಟ್ಟ ಸಿನೆಮಾ ನೋಡಲು ಸಾಧ್ಯ. ಕೆಲವೊಂದು ಸಿನೆಮಾಗಳಂತೂ ಪುಕ್ಕಟೆ ತೋರಿಸುತ್ತೇವೆ ನೋಡ ಬನ್ನಿ ಎಂದರೂ ನೋಡಲು ಜನ ಬರುವುದಿಲ್ಲ ಅಷ್ಟೊಂದು ಕೆಟ್ಟದಾಗಿರುತ್ತವೆ. ಕೆಲವು ಯುವ ನಿರ್ದೇಶಕರುಗಳು ತುಂಬಾ ಉತ್ತಮ ಕಥೆ ಚಿತ್ರಕಥೆ ಮಾಡಿದ್ದರೂ ನಿರ್ದೇಶಕನ ಕೆಲಸದಲ್ಲೂ ಆರಂಭದಿಂದ ಅಂತ್ಯದವರೆಗೂ ಮೂಗು ತೂರಿಸಿ ಉತ್ತಮ ಸಿನೆಮಾವನ್ನು ತೋಪು ಸಿನೆಮಾವನ್ನಾಗಿ ಮಾಡಿದ ನಿರ್ಮಾಪಕರಿಗೇನೂ ಕೊರತೆ ಇಲ್ಲಾ.

ಒಳ್ಳೆಯ ಸಿನೆಮಾ ಮಾಡಿ ಹೂಡಿದ ಹಣ ವಾಪಸ್ ಪಡೆಯಬೇಕೆಂಬ ಇರಾದೆಗಿಂತಲೂ ಹೇಗಾದರೂ ಮಾಡಿ ಹಾಕಿದ ಹಣ ವಾಪಸ್ ಬಂದುಬಿಡಬೇಕು ಎನ್ನುವ ವ್ಯಾಪಾರಿ ಮನೋಭಾವವೇ ಇಂದು ನಮ್ಮ ನಿರ್ಮಾಪಕರನ್ನು ಬೀದಿಗೆ ತಂದಿರುವುದು. ಯಾರು ಹೇಳಿದ್ದು ಇವರಿಗೆ ಸ್ಟಾರ್ನಟರ ಹಿಂದೆ ಬೀಳು ಎಂದು. ಪ್ರತಿಭಾವಂತ ಕಲಾವಿದರಿಗೇನು ನಮ್ಮಲ್ಲಿ ಬರವಿದೆಯಾ. ನಟಿಸಿದ ಮೊಟ್ಟ ಮೊದಲ ಸಿನೆಮಾದಲ್ಲೇ ಅತ್ಯುತ್ತಮ ನಟನಾಗಿ ರಾಷ್ಟ್ರ ಪ್ರಶಸ್ಸಿ ಪಡೆದ ಸಂಚಾರಿ ವಿಜಯ್ ರಂತಹ ಹಲವಾರು ಯುವ ಕಲಾವಿದರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅಂತವರ ಪ್ರತಿಭೆಯನ್ನು ಗುರುತಿಸಿ ಅವಕಾಶ ಕೊಟ್ಟು ಉತ್ತಮ ಸಿನೆಮಾಗಳನ್ನು ಕಡಿಮೆ ಬಜೆಟ್ಟಿನಲ್ಲಿ ತಯಾರಿಸಿದರೆ  ಹೀಗೆ ಸ್ಟಾರ್ಗಳ ಮೇಲೆ ಆರೋಪ ಮಾಡಿಕೊಂಡು ಫಿಲಂ ಚೆಂಬರ್ ಮುಂದೆ ಸಮಸ್ಯೆ ಇತ್ಯರ್ಥಕ್ಕಾಗಿ ಅಸಂವಿಧಾನಿಕ ರೀತಿಯಲ್ಲಿ ಧರಣಿ ಕೂಡುವ ಅಗತ್ಯತೆ ಯಾವ ನಿರ್ಮಾಪಕನಿಗೂ ಬರುತ್ತಿರಲಿಲ್ಲ.


ಯಾಕೆ ನಿರ್ಮಾಪಕರ ಆಗ್ರಹ ಅಸಂವಿಧಾನಿಕ ಎಂದರೆ... ಸ್ಟಾರ್ ನಟರು ತಮ್ಮ ಸಂಭಾವನೆ ಇಳಿಸಬೇಕು ಎಂದು ಒತ್ತಾಯಿಸುವುದು ಹೇಗೆ ಸರಿ. ಒಬ್ಬ ನಟ ತನಗೆ ಬೇಕಾದಷ್ಟು ಸಂಭಾವನೆಯನ್ನು ನಿರ್ಧರಿಸುವ ಸಂವಿಧಾನಿಕ ಹಕ್ಕನ್ನು ಹೊಂದಿದ್ದಾನೆ. ಹಾಗೂ ತಾನು ಪಡೆದಿದ್ದಕ್ಕೆ ಪ್ರತಿಯಾಗಿ ಸರಕಾರಕ್ಕೆ ತೆರಿಗೆ ಪಾವತಿಸುತ್ತೇನೆ ಎನ್ನುತ್ತಾನೆ. ಇನ್ನು ಸ್ಟಾರ್ ನಟರು ರಿಯಾಲಿಟಿ ಶೋಗಳಲ್ಲಿ ನಟಿಸಲೇ ಬಾರದು ಎನ್ನುವುದಂತೂ ಸರ್ವಾಧಿಕಾರಿ ಮನೋಭಾವನೆಯಾಗಿದೆ. ಒಬ್ಬ ನಟ ತನಗಿಷ್ಟ ಬಂದಿಲ್ಲಿ ನಟಿಸುವ ಅಧಿಕಾರ ಹೊಂದಿರುತ್ತಾನೆ. ಅಲ್ಲಿ ಬೇಡ ಇಲ್ಲೇ ನಟಿಸಿ ಎಂದು ಗುಂಪು ಕಟ್ಟಿಕೊಂಡು ಬಂದು ಒತ್ತಡ ಹೇರುವುದು ಪಕ್ಕಾ ಡಿಕ್ಟೇರಶಿಪ್ ಮನೋಭಾವವೇ ಆಗಿದೆಇದು ಕಾರ್ಯಸಾಧುವಲ್ಲ. ಮೊದಲು ನಿರ್ಮಾಪಕರುಗಳು ಕಮರ್ಸಿಯಲ್ ಮೌಲ್ಯಗಳಿಗಿಂತಲೂ ನಿಜವಾದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಅವಕಾಶ ಕೊಟ್ಟು ಹೊಸಬರನ್ನೂ ಬೆಳೆಸಿ ತಾವೂ ಬೆಳೆಯುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಆದರೆ ಯಾವಾಗ ಉತ್ತಮ ಸಿನೆಮಾ ಕಥೆಯನ್ನು ವರ್ಷಗಳ ಕಾಲ ಬರೆದು ತೆಗೆದುಕೊಂಡು ಬಂದು ತೋರಿಸುವ ಯುವಕರನ್ನು ಕಡೆಗಣಿಸಿ ಅನ್ಯ ಭಾಷೆಯ ಸಿನೆಮಾಗಳನ್ನು ಸೇರಿಸಿ ಕಿಚಡಿ ಸಿನೆಮಾ ಮಾಡುವ ಕ್ರಿಯಾಶೀಲತೆ ಕಳೆದುಕೊಂಡ ನಿರ್ದೇಶಕರುಗಳಿಗೆ ನಿರ್ಮಾಪಕರುಗಳು ಮಣೆ ಹಾಕುತ್ತಾರೋ ಅಲ್ಲಿವರೆಗೂ ನಮ್ಮ ಸಿನೆಮಾರಂಗ ಉದ್ದಾರವಾಗುವುದಿಲ್ಲ, ನಿರ್ಮಾಪಕರ ಗೋಳು ತಪ್ಪಿದ್ದಲ್ಲ. ಉದಾಹರಣೆಗೆ, ಸುನಿ ಎನ್ನುವ ಯುವಕ ನಾಲ್ಕಾರು ವರ್ಷ ಕೂತು ಸಿನೆಮಾ ಕಥೆ ಮಾಡಿಕೊಂಡು ಎಂಬತ್ತಕ್ಕೂ ಹೆಚ್ಚು ನಿರ್ಮಾಪಕರ ಹತ್ತಿರ ಹೋಗಿ ಸಿನೆಮಾ ಮಾಡುತ್ತೇನೆ ಹಣ ಹಾಕಿ ಎಂದು ಅವಲತ್ತುಕೊಂಡಾಗ ಎಲ್ಲರೂ ನಿರಾಕರಿಸಿದರು. ಕೊನೆಗೆ ಅದು ಹೇಗೋ ತಾನೇ ಹಣ ಹೊಂದಿಸಿ ಹೊಸ ನಟವರ್ಗವನ್ನು ಹಾಕಿಕೊಂಡು ಅತ್ಯಂತ ಕಡಿಮೆ ಬಜೆಟ್ಟಲ್ಲ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಸಿನೆಮಾ ನಿರ್ದೇಶಿಸಿದರು. ಹಾಕಿದ ಬಂಡವಾಳಕ್ಕಿಂತ ಹತ್ತಾರು ಪಟ್ಟು ಹಣವನ್ನು ಸಿನೆಮಾ ಸಂಪಾದಿಸಿತು. ಲೂಸಿಯಾ ಸಿನೆಮಾ ಸಹ ಇದೇ ಮಾದರಿಯದ್ದು. ಯಾಕೆ ನಮ್ಮ ನಿರ್ಮಾಪಕರು ಹೆಚ್ಚು ರಿಸ್ಕ್ ತೆಗೆದುಕೊಂಡು ಸ್ಟಾರ್ ಡೈರೆಕ್ಟರ್, ಸ್ಟಾರ್ ಹೀರೊಗಳ ಬೆನ್ನತ್ತಿ ಲಾಸ್ ಆಗುತ್ತಾರೆ? ಸೋಲುಗಳಿಂದ ಪಾಠ ಕಲಿತು ಕಡಿಮೆ ರಿಸ್ಕ್ ತೆಗೆದುಕೊಂಡು ಕ್ರಿಯಾಶೀಲ ಯುವಕರಿಗೆ ಯಾಕೆ ಅವಕಾಶಕೊಟ್ಟು ನೋಡುವುದಿಲ್ಲ?. ತಮ್ಮ ಸಿನೆಮಾ ಹಿಟ್ ಆಗಬೇಕೆಂದರೆ ನಿರ್ಮಾಪಕರು ಮೊದಲು ಮಾಡಬೇಕಾದ ಕೆಲಸವೇನೆಂದರೆ ಉತ್ತಮ ಚಿತ್ರಕಥೆ, ಯುವ ನಿರ್ದೇಶಕರ ಕ್ರಿಯಾಶೀಲತೆ ಹಾಗೂ ಹೊಸ ಪ್ರತಿಭಾವಂತ ಕಲಾವಿದರ ಆಯ್ಕೆಯಲ್ಲಿ ಮುತುವರ್ಜಿವಹಿಸಿ ಸಿನೆಮಾ ಮಾಡಿದರೆ ಅಂದುಕೊಂಡಷ್ಟು ಲಾಭವಾಗದೇ ಇದ್ದರೂ ನಷ್ಟವಂತೂ ಆಗುವುದಿಲ್ಲ. ಕನಿಷ್ಟ ತಿಳುವಳಿಕೆ ನಿರ್ಮಾಪಕರನ್ನು ಸೋಲಿನ ಸರಮಾಲೆಗಳಿಂದ ಪಾರುಮಾಡಬಹುದು ಹಾಗೂ ಹೊಸ ಪ್ರತಿಭೆಗಳು ಬೆಳಕಿಗೆ ಬರಲು ಕಾರಣವೂ ಆಗಬಲ್ಲುದು.

ಮೊದಲೆಲ್ಲಾ ಸಿನೆಮಾಗಳ ಯಶಸ್ಸು ಹಾಗೂ ಅದು ತರುವ ಲಾಭ ಪ್ರೇಕ್ಷಕರನ್ನೇ ಅವಲಂಬಿಸಿರುತ್ತಿದ್ದವು. ಆದರೆ ಯಾವಾಗ   ಖಾಸಗಿ ಟಿವಿ ಚಾನೆಲ್ಗಳು ಆರಂಭವಾದವೋ ಆಗ ಸಿನೆಮಾದ ಆದಾಯದ ಮೂಲ ಪ್ರೇಕ್ಷಕರಿಂದ ಚಾನೆಲ್ಗಳಿಗೆ ವರ್ಗಾವಣೆಯಾಯಿತು. ಜನರ ಸಿನೆಮಾ ಮೋಹವನ್ನು ಟಿಆರ್ಪಿಯಾಗಿ ಬದಲಾಯಿಸಲು ಚಾನೆಲ್ಗಳು ಸಿನೆಮಾ ಪ್ರದರ್ಶನದ ಹಕ್ಕುಗಳನ್ನು ಖರೀದಿಸಿ ಟಿವಿಯಲ್ಲಿ ಪ್ರಸಾರಮಾಡತೊಡಗಿದವು. ತತ್ಕ್ಷಣದ ಲಾಭಕ್ಕೆ ಖುಷಿಗೊಂಡ ನಿರ್ಮಾಪಕ ಸಿನೆಮಾ ಹಕ್ಕುಗಳನ್ನು ಟಿವಿಯವರಿಗೆ ಮಾಡಿಕೊಂಡ. ಆದರೆ ಅದರ ದುಷ್ಪರಿಣಾಮ ಇಡೀ ಸಿನೆಮೋದ್ಯಮದ ಮೇಲಾಯಿತು. ಸಿನೆಮಾ ಬಿಡುಗಡೆಯಾಗಿ ಇನ್ನೂ ಒಂದು ತಿಂಗಳು ಕಳೆದಿರುವುದಿಲ್ಲ ಅಷ್ಟರಲ್ಲೇ ಅದು ಟಿವಿಯಲ್ಲಿ ಬರುವುದು ಖಾತ್ರಿಯಾದಾಗ ಬಹುತೇಕ ಜನರು ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ನೋಡುವುದನ್ನೇ ಬಿಟ್ಟು ಟಿವಿಯಲ್ಲಿ ಬರುವುದನ್ನು ಎದುರುನೋಡತೊಡಗಿದರು. ಹೀಗಾಗಿ ಬಹುತೇಕ ಸಿನೆಮಾಗಳಿಗೆ ಪ್ರೇಕ್ಷಕರ ಕೊರತೆ ಉಂಟಾಗಿ ಸಿನೆಮಾಗಳು ಒಂದರ ನಂತರ ಒಂದು ನೆಲಕಚ್ಚತೊಡಗಿದವು. ವರ್ಷಕ್ಕೆ ನೂರಿಪ್ಪತ್ತು ಸಿನೆಮಾಗಳು ಬಿಡುಗಡೆಯಾದರೆ ನೂರು ಸಿನೆಮಾಗಳು ಬಾಕ್ಸಾಫೀಸಿನಲ್ಲಿ ಸೋತು ಡಬ್ಬಾ ಸೇರಿದವು. ನೂರಾರು ಜನ ನಿರ್ಮಾಪಕರು ಹಣ ಕಳೆದುಕೊಂಡರುಕೆಟ್ಟ ಸಿನೆಮಾಗಳು ಹಾಳಾಗಲಿ ಆದರೆ ಕೆಲವು ಉತ್ತಮ ಅಭಿರುಚಿಯ ಸಿನೆಮಾಗಳಿಗೂ ಇದೇ ದುರ್ಗತಿ ಪ್ರಾಪ್ತವಾಯಿತು. ಯಾವಾಗ ಪ್ರೇಕ್ಷಕರು ಕೈಕೊಟ್ಟರೋ ಆಗ ಅನಿವಾರ್ಯವಾಗಿ ನಿರ್ಮಾಪಕರುಗಳು ಸೆಟಲೈಟ್ ಹಕ್ಕಿನಿಂದ ಬರುವ ಲಾಭವನ್ನೇ ನಂಬಿಕೊಂಡು ಸಿನೆಮಾ ಮಾಡತೊಡಗಿದರು. ಆದರೆ ಚಾನೆಲ್ನವರು ಮುಖ ನೋಡಿ ಮಣೆ ಹಾಕತೊಡಗಿದರು. ಟಿಆರ್ಪಿ ಗಳಿಕೆಗೆ ಅದು ಅನಿವಾರ್ಯವೂ ಆಗಿತ್ತು.

ಅದು ಹೇಗೆಂದರೆ... ಸ್ಟಾರ್ ನಟರ ಜನಪ್ರೀಯತೆಯನ್ನಾಧರಿಸಿ ಸಿನೆಮಾ ಹಕ್ಕುಗಳ ಬೆಲೆ ನಿರ್ಧರಿಸಲ್ಪಡುತ್ತಿತ್ತು. ಇದೂ ಸಹ ನಿರ್ಮಾಪಕರನ್ನು ಸ್ಟಾರ್ ನಟರ ಹಿಂದೆ ಬೀಳುವಂತೆ ಮಾಡಿತು. ಯಾಕೆಂದರೆ ಜನಪ್ರೀಯ ನಟರ ಹೆಸರಿನಿಂದ ಸಿನೆಮಾ ಓಡದಿದ್ದರೂ ಟಿವಿ ರೈಟ್ಸ್ನಿಂದ ಹಣ ಬರತೊಡಗಿದತುಅರ್ಧ ಕೋಟಿ, ಒಂದು ಕೋಟಿ, ಕೆಲವೊಮ್ಮೆ ಮೂರ್ನಾಲ್ಕು ಕೋಟಿ ರೂಪಾಯಿಗಳ ಮೊತ್ತಕ್ಕೆ ಸಿನೆಮಾ ಹಕ್ಕು ಬಿಕರಿಯಾಗತೊಡಗಿದ್ದು ನಿರ್ಮಾಪಕರಿಗೆ ವರದಾನವಾಗಿ ಬಂದಿತು. ಆದರೆ ಖುಷಿಯೂ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಯಾಕೆಂದರೆ ಸ್ಟಾರ್ ನಟರು ಟಿವಿ ಹಕ್ಕುಗಳಿಂದ ಬಂದ ಹಣದಲ್ಲಿ ಪಾಲನ್ನಲ್ಲಾ ಪೂರಾ ಹಣವನ್ನು ಸಂಭಾವನೆ ರೂಪದಲ್ಲಿ ಡಿಮ್ಯಾಂಡ್ ಮಾಡತೊಡಗಿದರು. ಎಲ್ಲಾ ನಿರ್ಮಾಪಕರಿಗೆ ಬೇಡಿಕೆ ನುಂಗಲಾರದ ತುತ್ತಾದರೂ ಒಂದಿಷ್ಟು ಹಣವುಳ್ಳ ಕುಳಗಳು ಒಪ್ಪಿಕೊಂಡರು. ಇದೇ ಟ್ರೆಂಡ್ ಮುಂದಿವರೆಯಿತು. ನನ್ನ ಪೇಸ್ ವ್ಯಾಲ್ಯೂನಿಂದ ಬಂದ ಸೆಟಲೈಟ್ ಹಣ ನನಗೇ ಬೇಕು ಎನ್ನುವ ಸ್ಟಾರ್ ಗಳ ಲೆಕ್ಕಾಚಾರದಲ್ಲಿ ಅವರದೇ ಆದ ಲಾಜಿಕ್ ಇತ್ತು. ನಿರ್ಮಾಪಕ ಅತಿಆಸೆಗೆ ಬಿದ್ದು ಸೆಟಲೈಟ್ ನಿಂದ ಬಂದಿರುವುದನ್ನು ನಾಯಕ ನಟ ನಟಿಯರಿಗೆ ಕೊಟ್ಟು ಮತ್ತೆ ಚಿತ್ರಮಂದಿರಕ್ಕೆ ಬರಬಹುದಾದ ಪ್ರೇಕ್ಷಕರತ್ತಲೇ ಮುಖಮಾಡುವುದು ಅನಿವಾರ್ಯವಾಯಿತು. ಸಧ್ಯ ತನ್ನ ಕೈಯಿಂದ ಸ್ಟಾರ್ಗಳಿಗೆ ಸಂಭಾವನೆ ಕೊಡುವುದಾದರೂ ತಪ್ಪಿತಲ್ಲಾ, ಅದನ್ನು ಚಾನೆಲ್ನವರೇ ಕೊಡ್ತಾರಲ್ಲಾ ಎನ್ನುವ ಅನಿವಾರ್ಯ ತೃಪ್ತಿಯನ್ನು ನಿರ್ಮಾಪಕ ಪಡೆದು ಕೃತಾರ್ಥರಾಗಬೇಕಾಯಿತು.

ನಿರ್ಮಾಪಕರುಗಳು ಚಾಪೆಯ ಕೆಳಗೆ ತೂರಿದರೆ ಚಾನೆಲ್ನವರು ರಂಗೋಲಿ ಕೆಳಗೆ ತೂರುವಷ್ಟು ವ್ಯವಹಾರಿಕ ಜಾಣ್ಮೆಯುಳ್ಳವರು. ಸಿನೆಮಾಗಿಂತಲೂ ಸಿನೆಮಾ ಸ್ಟಾರ್ಗಳ ಫೇಸ್ವ್ಯಾಲ್ಯೂ ಮಾತ್ರ ಟಿಆರ್ಪಿ ತರಬಲ್ಲುದು ಎಂದು ತಿಳಿದಾಕ್ಷಣ ಸಿನೆಮಾಗಳನ್ನು ಕೈಬಿಟ್ಟು ರಿಯಾಲಿಟಿ ಶೋಗಳಿಗಾಗಿ ಸ್ಟಾರ್ ಕಲಾವಿದರನ್ನು ನೇರವಾಗಿ ಹೆಚ್ಚು ಸಂಭಾವನೆ ಕೊಟ್ಟು ಬುಕ್ ಮಾಡಿಕೊಂಡು ಬಿಟ್ಟರು. ಇದರಿಂದ ಚಾನೆಲ್ಗಳ ಟಿಆರ್ಪಿ ಹೆಚ್ಚಿ ಜಾಹಿರಾತು ಹರಿದು ಬರತೊಡಗಿತು. ಆದರೆ ನಿರ್ಮಾಪಕ ಮಾತ್ರ ಅತ್ತ ಸೆಟಲೈಟ್ ರೈಟ್ಸ್ ಹಣವೂ ಇಲ್ಲದೇ ಇತ್ತ ಯದ್ವಾತದ್ವಾ ಏರಿಕೆಯಾದ ಸ್ಟಾರ್ಗಳ ಸಂಭಾವನೆ ಕೊಡಲು ಆಗದೇ ಪರದಾಡತೊಡಗಿದರು. ಹೇಗೋ ಹಣ ಹೊಂದಿಸಿ ಸ್ಟಾರ್ ನಟರನ್ನೇ ಹಾಕಿ ನಿರ್ಮಿಸಿದ ಭಾರೀ ಬಜೆಟ್ಟಿನ ಸಿನೆಮಾಗಳು ನೆಲಕಚ್ಚತೊಡಗಿದಾಗ ನಿರ್ಮಾಪಕರ ವಲಯ ತಲ್ಲಣಿಸಿಹೋಯಿತು. ನಿರ್ಮಾಪಕರುಗಳು ತಮ್ಮ ಸ್ವಾರ್ಥಕ್ಕಾಗಿ ಮಾಡಿದ ಯಡವಟ್ಟುಗಳಿಂದಾಗಿ ಅತ್ತ ಪ್ರೇಕ್ಷಕವರ್ಗವನ್ನು ಕಳೆದುಕೊಂಡು, ಇತ್ತ ಸೆಟಲೈಟ್ ಹಕ್ಕುಗಳಿಂದಲೂ ವಂಚಿತರಾಗಿ ತಾವೇ ಬೆಳೆಸಿದ ಸ್ಟಾರ್ಗಳು ಕೈಗೆ ಸಿಗದಂತಾಗಿ.. ಎಲ್ಲಾ ಕಡೆಯಿಂದಲೂ ತೀವ್ರ ಸಮಸ್ಯೆಗಳನ್ನು ಎದುರಿಸತೊಡಗಿದರು. ಈಗ ಅವರಿಗೆ ಬೀದಿಗಿಳಿಯದೇ ಬೇರೆ ದಾರಿಯೇ ಇಲ್ಲವಾದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ನಿರ್ಮಾಪಕರು ಸಂಘಟಿತರಾಗಿ ಚೇಂಬರ್ ಮುಂದೆ ಧರಣಿ ಕುಳಿತಿದ್ದಾರೆ. ಎಲ್ಲರ ಸಹಕಾರ ಹಾಗೂ ಸಾಂತ್ವನವನ್ನು ಬಯಸುತ್ತಿದ್ದಾರೆ. ನಿರ್ಮಾಪಕರು ಮಾಡಿಕೊಂಡ ಸ್ವಯಂಕೃತಪರಾಧಕ್ಕೆ ಅವರೇ ಹೊಣೆಗಾರರಾಗುತ್ತಾರೆಯೇ ಹೊರತು ಬೇರೆಯವರಲ್ಲ. ಹಾಗೂ ಇದು ಸುಲಭಕ್ಕೆ ಪರಿಹಾರವಾಗುವ ಸಮಸ್ಯೆಯೂ ಅಲ್ಲ. ಯಾರು ಎಷ್ಟೇ ಬಾಯಿಬಡೆದುಕೊಂಡರೂ ಕಲಾವಿದರನ್ನು ಬೇರೆ ಮಾಧ್ಯಮಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಲಂತೂ ಸಾಧ್ಯವಿಲ್ಲ. ಚಾನೆಲ್ ನವರೇ ಸಿನೆಮಾದವರಿಗಿಂತ ಹೆಚ್ಚು ಹಣ ಕೊಡುವುದರಿಂದ ಎಸ್ಟಾಬ್ಲಿಷ್ ಸ್ಟಾರ್ಗಳು ತಮ್ಮ ಏರಿದ ಸಂಭಾವನೆಯನ್ನು ಇನ್ನಷ್ಟು ಏರಿಸಿಕೊಳ್ಳುತ್ತಾರೆಯೇ ಹೊರತು ಕಡಿತಗೊಳಿಸುವ ಮಾತಿಲ್ಲ.

ಈಗ ನಿರ್ಮಾಪಕರ ಮುಂದಿರುವುದು ಎರಡೇ ದಾರಿ. ಸಿನೆಮಾ ನಿರ್ಮಾಣಕ್ಕೆ ಗುಡ್ ಬೈ ಹೇಳಿ ಬೇರೆ ವ್ಯಾಪಾರೋದ್ಯಮದಲ್ಲಿ ಹಣ ತೊಡಗಿಸುವುದು. ಹಲವಾರು ನಿರ್ಮಾಪಕರು ಈಗಾಗಲೇ ದಾರಿಯನ್ನು ತಮ್ಮದಾಗಿಸಿಕೊಂಡಿದ್ದಾರೆಇಲ್ಲವೇ ಸಿನೆಮಾ ನಿರ್ಮಾಣದಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವುದು. ಅದು ಹೇಗೆಂದರೆ.... ಸ್ಟಾರ್ ಕೇಂದ್ರಿತ ಸಿನೆಮಾಗಳಿಗಿಂತ ಮಲಯಾಳಿ, ಇರಾಣಿ, ಕೋರಿಯನ್ ಮಾದರಿಯಲ್ಲಿ ವಿಭಿನ್ನ ಕಥಾ ಕೇಂದ್ರಿತ ಸಿನೆಮಾಗಳನ್ನು ನಿರ್ಮಿಸುವುದಕ್ಕೆ ಪ್ರಾಮುಖ್ಯತೆ ಕೊಡುವುದು ಉತ್ತಮ. ಸಿದ್ಧ ಸೂತ್ರಕ್ಕೆ ಬದ್ಧವಾಗಿ ಸಿನೆಮಾ ನಿರ್ದೇಶಿಸುವ ಸೀಜನ್ಡ್ ನಿರ್ದೇಶಕರನ್ನು ಬದಿಗಿರಿಸಿ ಕ್ರಿಯಾಶೀಲತೆ ಹಾಗೂ ಪ್ರತಿಭೆ ಇರುವಂತಹ ಹೊಸ ಆಲೋಚನೆಯ ಯುವ ನಿರ್ದೇಶಕರಿಗೆ ಅವಕಾಶ ಮಾಡಿಕೊಡುವುದರಿಂದ ಉತ್ತಮ ಪ್ರಯೋಗಶೀಲ ಸಿನೆಮಾಗಳು ಮೂಡಿಬರುವುದರಲ್ಲಿ ಸಂದೇಹವಿಲ್ಲ. ಹಾಗೂ  ಕಳೆದ ಮೂರು ವರ್ಷಗಳಲ್ಲಿ ಬಂದ ಸುನಿ, ಪವನ್ಕುಮಾರ, ಗಿರಿರಾಜ್, ಪವನ್ ವಡೆಯರ್, ಜಯತೀರ್ಥ.... ಮುಂತಾದ ಹೊಸ ತಲೆಮಾರಿನ ಯುವ ನಿರ್ದೇಶಕರುಗಳು ತಮ್ಮ ಪ್ರತಿಭೆಂiiನ್ನು ತಮ್ಮ ಸಿನೆಮಾಗಳ ಮೂಲಕ ಸಾಬೀತು ಪಡಿಸಿದ್ದಾರೆ. ಜೊತೆಗೆ ಸ್ಟಾರ್ಗಳ ಹಿಂದೆ ಮುಂದೆ ಅಲೆಯುವ ಬದಲು ಹೊಸ ಪ್ರತಿಭೆಗಳಿಗೆ ಅವಕಾಶವನ್ನು ಕೊಟ್ಟು ಅವರಲ್ಲಿರುವ ಟ್ಯಾಂಲೆಂಟನ್ನು ಬಳಸಿಕೊಂಡರೆ ನಿಜಕ್ಕೂ ಉತ್ತಮ ಸಿನೆಮಾಗಳನ್ನು ನಿರ್ಮಿಸಲು ಸಾಧ್ಯವಿದೆ. ಇದೆಲ್ಲದಕ್ಕಿಂತಲೂ ಮುಖ್ಯವಾಗಿ ಮಾರುಕಟ್ಟೆ ಮಿತಿಯನ್ನು ಮೀರಿದ ಬಜೆಟ್ಟಿನ ಸಿನೆಮಾಗಳ ನಿರ್ಮಾಣಗಳನ್ನು ಕೈಬಿಡಬೇಕಾಗಿದೆ. ಸಿನೆಮಾ ಕಥೆಗೆ ಸಂಬಂಧವಿಲ್ಲದಿದ್ದರೂ ದೇಶ ವಿದೇಶಗಳಲ್ಲಿ ಹಾಡು ಪೈಟು ಮತ್ತೊಂದು ಚಿತ್ರೀಕರಣ ಮಾಡಿ ವ್ಯರ್ಥ ಖರ್ಚು ಮಾಡುವ ಬದಲಾಗಿ ಕಥೆಗೆ ತಕ್ಕಂತೆ ಸ್ಥಳೀಯ ಲೊಕೇಶನ್ಗಳನ್ನು ಸಮರ್ಥವಾಗಿ ಬಳಸಿಕೊಂಡು  ಕಡಿಮೆ ಬಜೆಟ್ಟಿನಲ್ಲಿ ಉತ್ತಮ ಸಿನೆಮಾವನ್ನು ಮಾಡಬಹುದಾದ ಸಾಧ್ಯತೆಯನ್ನು ಬಳಸಿಕೊಂಡರೆ ನಿರ್ಮಾಪಕ ನಿಜಕ್ಕೂ ಸೇಪ್ ಆಗುತ್ತಾನೆ. ಅಕಸ್ಮಾತ್ ಸಿನೆಮಾ ಓಡದೇ ನಷ್ಟ ಆದರೂ ಅದನ್ನು ಇನ್ನೊಂದು ಚಿತ್ರ ಮಾಡುವ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ.

ಇಂತಹ ಸಾಧ್ಯತೆಗಳನ್ನೆಲ್ಲಾ ಬಿಟ್ಟು ಸ್ಟಾರ್ ಗಳು ಸಂಭಾವನೆ ಕಡಿಮೆ ಮಾಡಬೇಕು, ಬೇರೆ ಕಡೆ ನಟಿಸಬಾರದು ಎನ್ನುವ ವಿತಂಡವಾದವನ್ನು ಮುಂದಿಟ್ಟು ಬಿದಿಗಿಳಿದು ದಿಕ್ಕಾರ ಕೂಗಿದರೆ ಏನೇನೂ ಪ್ರಯೋಜನವಾಗಲಾರದು. ಜನ ಮತ್ತೆ ಸ್ಟಾರ್ ನಟರನ್ನೇ ಬೆಂಬಲಿಸುತ್ತಾರೆಯೇ ಹೊರತು ನಿರ್ಮಾಪಕರನ್ನಲ್ಲ ಎನ್ನುವ ಸತ್ಯ ಅರಿಯಲೇ ಬೇಕಿದೆ. ರೀತಿಯ ಅಸಂವಿಧಾನಿಕ ಒತ್ತಡಗಳಿಗೆ ಯಾವ ಸರಕಾರವೂ ಮಣಿಯದು ಹಾಗೂ ಜನರ ಸಿಂಪಥೀಯೂ ಸಿಗದು. ನಿರ್ಮಾಪಕರು ಹಾಗೂ ನಿರ್ಮಾಪಕ ಸಂಘದ ಪದಾಧಿಕಾರಿಗಳು ಮೊದಲು ಸಿಂಹಾವಲೋಕನ ಮಾಡಿಕೊಂಡು ತಾವೇ ಸೃಷ್ಟಿಸಿಕೊಂಡ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳುವುದುತ್ತಮ. ಎಲ್ಲಕ್ಕಿಂತ ಹೆಚ್ಚಾಗಿ ಸ್ಟಾರ್ ಕಲ್ಚರ್ನ್ನ ಪ್ರಮೋಟ್ ಮಾಡುವುದನ್ನು ಬಿಡಬೇಕು. ಇದರಿಂದ ಒಂದಿಬ್ಬರು ನಿರ್ಮಾಪಕರಿಗೆ ಲಾಭವಾಗಬಹುದಾದರೂ ಬಹುತೇಕ ನಿರ್ಮಾಪಕರು ತೊಂದರೆ ಅನುಭವಿಸುತ್ತಾರೆ. ಎಲ್ಲಿವರೆಗೂ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುವುದಿಲ್ಲವೋ ಅಲ್ಲಿವರೆಗೆ ಕನ್ನಡ ಸಿನೆಮಾ ನಿಂತ ನೀರಾಗುವುದರಲ್ಲಿ ಸಂದೇಹವೇ ಇಲ್ಲಾ. ಈಗ ಆಗಿದ್ದೂ ಸಹ ಹಾಗೆಯೇ. ಎಲ್ಲಿ  ಚಲನಶೀತೆ ಇದೆಯೋ ಅಲ್ಲಿ ಯಶಸ್ಸಿದೆ. ಎಲ್ಲಿ ಪ್ರಯೋಗಶೀಲತೆ ಇದೆಯೋ ಅಲ್ಲಿ ಗೆಲುವಿದೆ. ಕನ್ನಡ ಸಿನೆಮಾಗಳು ಕನ್ನಡ ನಾಡಲ್ಲೇ ಅನಾಥವಾಗಿವೆ. ಪ್ರೇಕ್ಷಕ ಸೂತ್ರಬದ್ದ ಕೆಟ್ಟ ಸಿನೆಮಾಗಳನ್ನು ತಿರಸ್ಕರಿಸಿ ಯಾವ ಭಾಷೆಯಲ್ಲಿ ಉತ್ತಮ ಎನಿಸುವ ಸಿನೆಮಾ ಬರುತ್ತದೋ ಸಿನೆಮಾವನ್ನು ನೋಡುತ್ತಾನೆ. ಹಾಗೂ ಅದು ಅವನ ಹಕ್ಕೂ ಸಹ. ಉತ್ತಮ ಸದಭಿರುಚಿಯ ಸಿನೆಮಾವನ್ನು ಯಾವತ್ತೂ ಕನ್ನಡದ ಪ್ರೇಕ್ಷಕ ತಿರಸ್ಕರಿಸಿಲ್ಲ. ನಾಲ್ಕು ದಶಕಗಳ ನಂತರ ಇತ್ತೀಚೆಗೆ ಮತ್ತೊಮ್ಮೆ ಕಲರ್ನಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ಎನ್ನುವ ಹಳೆಯ ಸಿನೆಮಾವನ್ನೂ ಸಹ ಮತ್ತೆ ಜನ ಚಿತ್ರಮಂದಿರಕ್ಕೆ ಹೋಗಿ ನೋಡಿ ಗೆಲ್ಲಿಸಿದರು. ಯಾವುದೇ ವ್ಯಾಪಾರ ನಷ್ಟ ಹೊಂದಬೇಕಾದರೆ ಅದಕ್ಕಿ ಮೂಲ ಕಾರಣ ಅದರ ನಿರ್ಮಾಪಕರೇ ಆಗಿರುತ್ತಾರೆ. ಮಾಲೀಕರ ವಿವೇಚನಾ ರಹಿತ ನಿರ್ಧಾರಗಳೇ ನಷ್ಟದ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ.

ಹೀಗಾಗಿ.... ಸಿನೆಮಾ ತಯಾರಕರು ತಮ್ಮ ಸೋಲಿಗೆ, ತಮ್ಮ ನಷ್ಟಕ್ಕೆ ಕಲಾವಿದರನ್ನು, ಚಾನೆಲ್ನವರನ್ನು, ಪ್ರೇಕ್ಷಕರನ್ನು ಹೊಣೆಗಾರರನ್ನಾಗಿಸುವ ಬದಲು ತಮ್ಮ ಬೇಜವಾಬ್ದಾರಿತನದ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಿದೆ. ಎಲ್ಲಿವರೆಗೂ ನಿರ್ಮಾಪಕ ಕೇವಲ ಜನಪ್ರೀಯತೆ ಹಾಗೂ ಹಣದ ಹಿಂದೆ ಬಿದ್ದು ಕಲೆ, ಪ್ರತಿಭೆ, ಕ್ರಿಯಾಶೀಲತೆ ಹಾಗೂ ಪ್ರೇಕ್ಷಕವರ್ಗವನ್ನು  ಕಡೆಗನಿಸುತ್ತಾನೋ ಅಲ್ಲಿವರೆಗೂ ಬಹುಕಾಲ ಜನಮಾನಸದಲ್ಲಿ ಇರುವಂತಹ ಸಿನೆಮಾ ತಯಾರಿಸಲು ಸಾಧ್ಯವೇ ಇಲ್ಲ. ಕೇವಲ ಗಿಮಿಕ್ಗಳು ಬಹುಕಾಲ ಬಾಳುವುದಿಲ್ಲ. ಇದು ಎಲ್ಲಾ ನಿರ್ಮಾಪಕರಿಗೆ ಚಿಂತನ ಮಂಥನ ನಡೆಸುವ ಕಾಲ. ಬೇರೆಯವರ ಮೇಲೆ ಆರೋಪ ಹೊರಿಸುವ ಪಲಾಯಣವಾದಿಯಾಗುವ ಬದಲಾಗಿ ತಮ್ಮನ್ನು ತಾವು ಪ್ರಶ್ನಿಸಿಕೊಂಡು ಆದ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವ ಕಾಲ. ಸದಭಿರುಚಿಯ ನಿರ್ಮಾಪಕ ಮಾತ್ರ ಉತ್ತಮ ಅಭಿರುಚಿಯ ಸಿನೆಮಾಗಳನ್ನು ನಿರ್ಮಿಸಲು ಸಾಧ್ಯ. ಹೀಗಾಗಿ ಮೊದಲು ನಿರ್ಮಾಪಕ ಬಳಗ ತಮ್ಮ ದಿಡೀರ್ ಲಾಭದ ರುಚಿಯನ್ನು ಪಕ್ಕಕ್ಕಿಟ್ಟು ಕಲಾಭಿರುಚಿಯನ್ನು ಬೆಳೆಸಿಕೊಂಡು ದೇಶಕ್ಕೆ ಮಾದರಿಯಾಗುವಂತಹ ಸಿನೆಮಾಗಳನ್ನು ತಯಾರಿಸಿ ತಮ್ಮ ಸಾಮರ್ಥ್ಯವನ್ನು ತೋರಿಸಲಿ ಎನ್ನುವುದೊಂದೆ ಕನ್ನಡಿಗರ ಆಶಯವಾಗಿದೆಜನರ ಆಶಯಕ್ಕೆ ಪೂರಕವಾಗಿ ಸ್ಪಂದಿಸುವುದು ನಿರ್ಮಾಪಕರ ಆದ್ಯತೆಯೂ ಆಗಿದೆ.    

                     -  ಶಶಿಕಾಂತ ಯಡಹಳ್ಳಿ  
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ