ಶುಕ್ರವಾರ, ನವೆಂಬರ್ 20, 2015

ಕಪ್ಪಣ್ಣನೆಂಬ ಕುಂಟನೂ ಸಂಸ ಎನ್ನುವ ಕುರುಡನೂ....

ರಂಗಾನುಭವ :



ಸಂಸಸುರೇಶ್ ಪ್ರತಿ ವರ್ಷ ಮಕ್ಕಳ ದಿನಾಚರಣೆಯಂದು ಸ್ಪರ್ಶಳ ನೆನಪಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಾ ಬಂದಿದ್ದಾರೆ. ಸುರೇಶರವರ ಸಹೋದರಿಯ ಮಗು ಸ್ಪರ್ಶ ಆಕಸ್ಮಿಕ ಅವಘಡದಲ್ಲಿ ತೀರಿಕೊಂಡು ಐದು ವರ್ಷಗಳಾಗಿ ಹೋದವು. ಅವಳ ನೆನಪಿನಲ್ಲಿ ಸ್ಪರ್ಶ ಮಕ್ಕಳ ಕೇಂದ್ರ ಸಂಸ್ಥೆಯನ್ನು ಹುಟ್ಟುಹಾಕಿ ಅದೇ ನೆಪದಲ್ಲಿ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡಿದ ಆಯ್ದ ಸಾಧಕರನ್ನು ಕರೆಸಿ ಸನ್ಮಾನಿಸುವ ಸ್ತುತ್ಯಾರ್ಹ ಕೆಲಸವನ್ನು ಸುರೇಶ್ ಪ್ರತಿವರ್ಷ ಮಾಡುತ್ತಾ ಬಂದಿದ್ದಾರೆ. ಸಲವೂ ನವೆಂಬರ್ 13 ರಂದು ನಯನ ರಂಗಮಂದಿರದಲ್ಲಿ ಸ್ಪರ್ಶ ನೆನಪಿನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಿಂಬ ಮಕ್ಕಳ ಕೇಂದ್ರದ ಶೋಭಾ ವೆಂಕಟೇಶ್ ಹಾಗೂ ಮಕ್ಕಳ ನಾಟಕಗಳ ನಿರ್ದೇಶಕ ರಾಮಕೃಷ್ಣ ಬೆಳ್ತೂರು ಇಬ್ಬರನ್ನೂ ಕರೆಸಿ ಸನ್ಮಾನಿಸಿ ಗೌರವಿಸಿದ್ದು ಸೂಕ್ತವಾಗಿತ್ತು. ಜೊತೆಗೆ ಕೇಂದ್ರ ಸಂಗೀತ ಹಾಗೂ ನಾಟಕ ಅಕಾಡೆಮಿಯ ಭಿಸ್ಮಿಲ್ಲಾಖಾನ್ ಯುವ ಪ್ರಶಸ್ತಿ ಪುರಸ್ಕೃತರಾದ ದಾಕ್ಷಾಯಿಣಿ ಭಟ್ರವರನ್ನೂ ಸಹ ಸನ್ಮಾನಿಸಿ ಗೌರವಿಸಿದ್ದು ಇಡೀ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿತು.

ತಾತ ಕಪ್ಪಣ್ಣ  ಮೊಮ್ಮಗ ಚಿರಾಯು
ಒಟ್ಟಾರೆ ಕಾರ್ಯಕ್ರಮವನ್ನು ಗಮನಿಸಿದಾಗಿ ಎಲ್ಲವೂ ಕಪ್ಪಣ್ಣಮಯವಾಗಿದ್ದನ್ನು ಅವಲೋಕಿಸಬಹುದಾಗಿದೆ. ಮೊದಲ ಬಾರಿಗೆ ಕಪ್ಪಣ್ಣ ಸಾಹೇಬರು ಕುಟುಂಬ ಪರಿವಾರ ಸಮೇತರಾಗಿ ರಂಗ ಕಾರ್ಯಕ್ರಮವೊಂದಕ್ಕೆ ಆಗಮಿಸಿ ಆರಂಭದಿಂದ ಕೊನೆಯವರೆಗೂ ಸಹನೆಯಿಂದ ಭಾಗವಹಿಸಿದ್ದು ಬಹುಷಃ ಇದೊಂದೆ  ಕಾರ್ಯಕ್ರಮ ಇದ್ದೀತು. ಇದಕ್ಕೆ ಮುಖ್ಯ ಕಾರಣ ಕಪ್ಪಣ್ಣನವರು ಮೊಮ್ಮಗ ಚಿರಾಯು ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದ್ದು. ಒಂದು ಮಗು ಇಡೀ ಕುಟುಂಬವನ್ನು ರಂಗಕಾರ್ಯಕ್ರಮಕ್ಕೆ ಕರೆದುಕೊಂಡು ಬರುತ್ತದೆನ್ನುವುದಕ್ಕೆ ಇದೊಂದು ಸಾಕ್ಷಿತನ್ನದೇ ಮುಗ್ದತೆಯೊಂದಿಗೆ ಮಗು ಚೆನ್ನಾಗಿಯೇ ಮಾತಾಡಿತು. ಎಂದಿನ ಎಡವಟ್ಟು ಶೈಲಿಯಲ್ಲಿ ಮಾತಾಡಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮಾನ್ ಕಪ್ಪಣ್ಣನವರು ಮಾತ್ರ. ಕಪ್ಪಣ್ಣ ಎಲ್ಲಿ ಇರುತ್ತಾರೋ ಅಲ್ಲಿ ಯಾವ ಪರಿ ಆವರಿಸಿಕೊಳ್ಳುತ್ತಾರೆಂಬುದು ಅವರನ್ನು ಬಲ್ಲವರಿಗೆ ಚೆನ್ನಾಗಿ ಗೊತ್ತು. ಸುಮ್ಮನಿದ್ದಾಗ ತಮ್ಮ ಘನಗಾಂಭೀರ್ಯತೆಯಿಂದ ಎಲ್ಲರ ಗಮನ ಸೆಳೆಯುವ ಕಪ್ಪಣ್ಣ ಮಾತಾಡಲು ಶುರುಮಾಡಿದರೆ ಹಾಸ್ಯ ಪ್ರಜ್ಞೆಯಿಂದ ಜೊತೆಗೆ ಅಪಹಾಸ್ಯ ಪದ್ಧತಿಯಿಂದ ಕೇಳುಗರನ್ನು ಗಮನ ಅಪಹರಿಸುತ್ತಾರೆ.



ಕಪ್ಪಣ್ಣ ಸಾಹೇಬರು ಮಾತಾಡುವ ಮೊದಲೇ ಶ್ರೇಷ್ಠತೆಯೆಂಬ ಮೋಹಿನಿಯನ್ನು ಆಹ್ವಾನಿಸಿಕೊಳ್ಳುತ್ತಾರೆ... ತದನಂತರ ಯಾರ ಕುರಿತು ಮಾತಾಡುತ್ತಾರೋ ಅವರ ತಲೆಮೇಲೆ ಕೈಯಿಟ್ಟು ತಮ್ಮ ವಿಚಿತ್ರ ವಿಡಂಬಣಾ ಶೈಲಿಯಿಂದ ಕಾಲೆಳೆಯುತ್ತಾರೆ. ಎಲ್ಲರೂ ಮುಗಿದ ಮೇಲೆ ತಮ್ಮ ತಲೆಯಮೇಲೆ ತಾವೇ ಕೈಯಿಟ್ಟುಕೊಂಡು ತಮ್ಮ ಕಾಲನ್ನೂ ತಾವೇ ಎಳೆದುಕೊಂಡು, ತಮ್ಮನ್ನು ತಾವೇ ಲೇವಡಿ ಮಾಡಿಕೊಂಡು, ತಮ್ಮ ಗಾಂಭೀರ್ಯವನ್ನು ತಾವೇ ನಾಶಮಾಡಿಕೊಳ್ಳುತ್ತಾರೆ. ಇಲ್ಲೂ ಹಾಗೇ ಆಯಿತು. ಇಸ್ಮೈಲ್ ಗೋನಾಳರಂತಹ ಅಪರೂಪದ ಸಂಗೀತ ನಿರ್ದೇಶಕರಿಗೆ ಓದಿದ್ದು ಎಂಎಸ್ಸಿ ಎಂದು ಹೇಳುವ ಗೋನಾಳರನ್ನು ನೋಡಿದರೆ ಎಸ್ಎಸ್ಎಲ್ಸಿ ಪಾಸಾದವರಂತೆ ಕಾಣುತ್ತಾರೆಂದು ಗೋಳುಹೊಯ್ದುಕೊಂಡರು. ಶೋಭಾ ವೆಂಕಟೇಶರವರ ಕುರಿತು ಮಾತಾಡುತ್ತಾ ಅವರ ತಂದೆ ದಿ..ಎಸ್.ಮೂರ್ತಿಯವರ ಕುರಿತು ಲೇವಡಿ ಮಾಡತೊಡಗಿದರು. ಕಪ್ಪಣ್ಣ ಯಾರ ಕುರಿತು ಮಾತಾಡುತ್ತಾರೋ ಅವರನ್ನು ನಿಂದಿಸುತ್ತಾರೋ ವಂದಿಸುತ್ತಾರೋ .... ಹೊಗಳುತ್ತಾರೋ ತೆಗಳುತ್ತಾರೋ.... ಒಂದೂ ಅರ್ಥವಾಗದಂತೆ ಕೇಳುಗರನ್ನು ಕನ್ಪೂಸ್ ಮಾಡುತ್ತಾ ಮಾತಾಡತೊಡಗುವುದನ್ನು ನೋಡುವುದೇ ಒಂದು ರೀತಿಯ ಚೆಂದ. ವೇದಿಕೆಯ ಮೇಲಿರುವ ಹಾಗೂ ಅವರಿಗೆ ಸಂಬಂಧಿಸಿದವರ ಮೇಲೆ ಒಂದು ಸುತ್ತು ವ್ಯಂಗ್ಯಾಸ್ತ್ರ ಪ್ರಹಾರ ಪ್ರಯೋಗ ಮಾಡಿದ ಮೇಲೆ ವಿಷಯಕ್ಕೆ ಬರುತ್ತಾರೆ. ಅವರು ಮಾತಾಡುವ ಯಾವುದೇ ವಿಷಯದಲ್ಲೂ ವೈಚಾರಿಕತೆಯನ್ನು ಹುಡುಕುವುದು ಮೈಸೂರು ಪಾಕಿನಲ್ಲಿ ಮೈಸೂರು ಹುಡುಕಿದಂತೆ. ಕ್ಷಣಕ್ಕೆ ಅವರಿಗೇನನ್ನಿಸುತ್ತದೋ ಅದನ್ನು ಮಾತಾಡುತ್ತಾ, ಕೇಳುಗರನ್ನು ದಿಕ್ಕುತಪ್ಪಿಸುತ್ತಾ ಕೆಲಮೊಮ್ಮೆ ತಾವೇ ದಿಕ್ಕುದೆಸೆ ಇಲ್ಲದೆ ಮಾತಾಡುತ್ತಾ ಸಾಗುವ ಕಪ್ಪಣ್ಣನವರ ನುಡಿಮುತ್ತುಗಳನ್ನು ಕೇಳಬಹುದೇ ಹೊರತು ಆಲೋಚನೆ ಮಾಡಲು ಸಾಧ್ಯವೇ ಇಲ್ಲ.

'ಕುಂಟಾ ಕುಂಟಾ ಕುರವತ್ತಿ ' ನಾಟಕದ ದೃಶ್ಯ

ಸ್ಪರ್ಶಳ  ನೆನಪಿನ ಕಾರ್ಯಕ್ರಮದ ಕೊನೆಯಲ್ಲಿ ನಾನು ನಿರ್ದೇಶಿಸಿದ ಚಂಪಾರವರು ಬರೆದ ಕುಂಟಾ ಕುಂಟಾ ಕುರವತ್ತಿ ನಾಟಕದ ಪ್ರದರ್ಶನವಿತ್ತು. ಇದೊಂದು ಅಸಂಗತ ನಾಟಕ. ಆದರೆ ಕಪ್ಪಣ್ಣನವರ ಮಾತುಗಳೇ ನಾಟಕಕ್ಕಿಂತ ಅಸಂಗತವೂ ಹಾಸ್ಯಾಸ್ಪದವೂ ಆಗಿದ್ದರಿಂದ ನಾಟಕ ನೋಡುವುದಕ್ಕಿಂತ ಕಪ್ಪಣ್ಣನವರ ಮಾತು ಕೇಳಿಯೇ ಪ್ರೇಕ್ಷಕ ಪ್ರಭುಗಳು ಆನಂದ ಪಡಬಹುದೇನೋ...   ನಾಟಕಕ್ಕೂ ಕಾರ್ಯಕ್ರಮಕ್ಕೂ ಬಾಹ್ಯದಲ್ಲಿ ಏನೂ ಸಂಬಂಧವಿಲ್ಲವಾದರೂ ಆಂತರ್ಯದಲ್ಲಿ ಏನೇನೋ ಅನುಬಂಧಗಳಿವೆ ಎಂದೆನಿಸುತ್ತದೆ. ಯಾಕೆಂದರೆ ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಕ್ಕಳಿಂದ ಮಕ್ಕಳ ನಾಟಕ ಮಾಡಿಸಿದ್ದರೆ ಸೂಕ್ತವಾಗುತ್ತಿತ್ತೇನೋ. ಆದರೆ... ದೊಡ್ಡವರ ನಾಟಕ ಮಾಡಿಸಲಾಯಿತು. ಹೋಗಲಿ ಬಿಡಿ ನಾಟಕಕ್ಕೆ ಮಕ್ಕಳಿಂದ ಮುದುಕರವರೆಗೂ ಮನರಂಜಿಸುವ ತಾಕತ್ತಿದೆ. ಆದರೆ ನಾಟಕದಲ್ಲಿ ಬರುವುದು ಮೂರೇ ಪಾತ್ರಗಳು. ಒಬ್ಬ ಕುಂಟ, ಇನ್ನೊಬ್ಬ ಕುರುಡ ಹಾಗೂ ಮತ್ತೊಮ್ಮ ಕಿವುಡ. ಪಾತ್ರಗಳು ನಾಟಕದಲ್ಲಿ ಮಾತ್ರವಲ್ಲ ಹೊರಗೂ ಇದ್ದದ್ದನ್ನು ಕಾಣಬಹುದಾಗಿತ್ತು.   ಕಾರ್ಯಕ್ರಮದ ಆಯೋಜಕರಾದ ಸುರೇಶರವರಿಗೆ ಯಾವ ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸಬೇಕು ಎನ್ನುವುದು ಅರಿವಿಲ್ಲದೇ ಮಕ್ಕಳ ರಂಗಭೂಮಿಯಲ್ಲಿ ಏನೂ ಕೆಲಸ ಮಾಡಿರದ ಕಪ್ಪಣ್ಣನವರನ್ನು ಮಕ್ಕಳ ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ಕರೆದಿದ್ದೇ ಅವರ ಮೇಲಿನ ಕುರುಡು ವ್ಯಾಮೋಹ ಮತ್ತು ಅಂಧಶೃದ್ದೆಯಿಂದಾಗಿ. ಹೀಗಾಗಿ ಸುರೇಶ ಕುರುಡನಾದರೆ ಸುರೇಶ ಬೆನ್ನಮೇಲೆ ಸವಾರಿ ಮಾಡುತ್ತಿರುವ ಕಪ್ಪಣ್ಣ ಕುಂಟನ ಪಾತ್ರದ ಪಡಿಯಚ್ಚಾಗಿರುವಂತೆನಿಸಿತು.

ಕಪ್ಪಣ್ಣ ತಮ್ಮ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಯಾವುಯಾವುದೋ ರೀತಿಯಲ್ಲಿ ಬಳಿಸಿಕೊಳ್ಳುತ್ತಲೇ ಬೆಳೆದು ಬಂದಿದ್ದು ಈಗ ಇತಿಹಾಸ. ಮಾರ್ಗದರ್ಶನ ಮಾಡುವ ನೆಪದಲ್ಲಿ  ಸಂಸ ಸುರೇಶನಂತಹ ಯುವ ಸಂಘಟಕರ ಬೆನ್ನ ಮೇಲೆ ಸವಾರಿ ಮಾಡುತ್ತಲೇ ತಮಗೆ ಬೇಕಾದ ದಿಕ್ಕಿನತ್ತ ನಡೆದು ಗುರಿಮುಟ್ಟುವುದು ಕಪ್ಪಣ್ಣನವರಿಗೆ ಹೇಳಿಕೊಡಬೇಕಾಗಿಲ್ಲ.... ಅದನ್ನು ಅವರೇ ರೂಢಿಸಿಕೊಂಡಿದ್ದಾರೆ. ಸ್ವತಃ ನಡೆಯಲು ಓಡಲು ಆಗದಿದ್ದರೂ ಓಡುವ ಕುದುರೆಗಳನ್ನು ಪಳಗಿಸಿ ಅದರ ಮೇಲೆ ಹೇಗೆ ಸವಾರಿ ಮಾಡಿ ಹೆಸರು ಹಣ ಮಾಡಿಕೊಳ್ಳಬೇಕು ಎನ್ನುವುದು ಕಪ್ಪಣ್ಣನವರಿಗೆ ಚೆನ್ನಾಗಿ ಗೊತ್ತಿದೆ. ಹೊಸದಾಗಿ ಹುಟ್ಟಿಕೊಂಡ ರಂಗಸಂಘಟಕರನ್ನು ಮೊದಲು ಗುರುತಿಸುವ ಕಪ್ಪಣ್ಣ ಅಂತವರಿಗೆ ಮಾರ್ಗದರ್ಶನ ಮಾಡುವ ನೆಪದಲ್ಲಿ ಒಂದಿಷ್ಟು ಸಹಾಯ ಸಹಕಾರವನ್ನೂ ಮಾಡುವುದರಲ್ಲಿ ಬಲು ದಾರಾಳಿ. ತದನಂತರ ಯಾವಾಗ ಯುವಕರು ಕಪ್ಪಣ್ಣನವರನ್ನು ತಮ್ಮ ನಿಜವಾದ ಮಾರ್ಗದರ್ಶಕರು ಎಂಬ ಕುರುಡು ನಂಬಿಕೆಯನ್ನು ಹೊಂದುತ್ತಾರೋ ಆಗ ಕಪ್ಪಣ್ಣ ಮೊದಲು ಬೆನ್ನೇರಿ ನಂತರ ಹೆಗಲೇರಿ ತದನಂತರ ತಲೆಮೇಲೇರಿ ಕುಳಿತುಕೊಂಡು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುವ ಪರಿಗೆ ಬಹುಪರಾಕ್ ಹೇಳಲೇಬೇಕು. ಸುರೇಶನಂತಹ ಹಲವಾರು ಅಂಧರು ಕಪ್ಪಣ್ಣನವರ ಪ್ರಯೋಗಶಾಲೆಯಲ್ಲಿದ್ದಾರೆ. ಅಂತವರೆಲ್ಲಾ ಕಪ್ಪಣ್ಣನವರನ್ನು ಬಳಸಿಕೊಂಡು ಬೆಳೆಯುತ್ತೇವೆ ಎಂಬ ಮೌಡ್ಯದಲ್ಲಿರುವಾಗಲೇ ಸ್ವತಃ ಓಡಲಾಗದ ಕುಂಟನಂತಹ ಕಪ್ಪಣ್ಣನ ಸವಾರಿ ಆರಂಭವಾಗುತ್ತದೆ. ಕುರುಡನೇ ಕರೆದು ಕುಂಟನನ್ನು ಬೆನ್ನ ಮೇಲೆ ಕೂರಿಸಿಕೊಂಡು ಮಾರ್ಗದರ್ಶನ ಮಾಡು ಎಂದು ಕರೆಯುವ ಹಾಗೇ ಕಪ್ಪಣ್ಣ ಮಾಡುತ್ತಾರೆ... ನಾಟಕದಲ್ಲೂ ನಡೆಯುವುದೂ ಸಹ ಅದೇ ಆಗಿದೆ. ಕಾರ್ಯಕ್ರಮದ ಉದಾಹರಣೆಯನ್ನೇ ತೆಗೆದುಕೊಂಡರೇ ಕುರುಡು ನಂಬಿಕೆಯ ಸುರೇಶ್ ತನ್ನೆಲ್ಲಾ ಶಕ್ತಿ ಸಾಮರ್ಥ್ಯ ಹಣ ಸಮಯ ಬಳಸಿ ಕಾರ್ಯಕ್ರಮವನ್ನು ರೂಪಿಸಿದರೆ ಅಲ್ಲಿ ಮೆರೆದಿದ್ದು ಮತ್ತೆ ನಮ್ಮ ಕಪ್ಪಣ್ಣನೆಂಬ ಕುಂಟನೇ....


ಇಲ್ಲಿ ಇನ್ನೊಂದು ಪಾತ್ರ ಬರುತ್ತದೆ ಅದು ಕಿವುಡನದು. ಯಾರು ಏನೇ ಮಾಡಲಿ, ಯಾರು ಯಾರ ಮೇಲಾದರೂ ಸವಾರಿ ಮಾಡಲಿ ತನ್ನದೇ ಆದ ಕಲಾಲೋಕದಲ್ಲಿ ವಿವರಿಸುವ ಪಾತ್ರವದು. ಇಲ್ಲಿ ನಾಟಕದ ನಿರ್ದೇಶಕ ಅಂದರೆ ಸ್ವತಃ ನಾನೇ ಕೆಪ್ಪನಂತೆ ಬೆಪ್ಪನಾಗಿ ಎಲ್ಲವನ್ನೂ ನೋಡುತ್ತಾ ಕೂಡಬೇಕಾದದ್ದೊಂದು ವಿಪರ್ಯಾಸ. ಸಂಜೆ ಏಳು ಗಂಟೆಗೆ ಶುರುವಾಗಬೇಕಿದ್ದ ನಾಟಕ ಎಂಟು ಗಂಟೆಯಾದರೂ ಭಾಷಣಗಳ ಭರಾಟೆಯಲ್ಲೇ ಮುಂದುವರೆದಿತ್ತು. ಅಂತೂ ಇಂತೂ ಕಲಾವಿದರ ಸಹನೆ ಮುಗಿಯುವ ಮುನ್ನ ನಾಟಕ ಆರಂಭಗೊಂಡು ಮುಗೀತು... ನಾಟಕದ ನಂತರ ಪಾತ್ರ ಪರಿಚಯ ಮಾಡಲು ನಿರ್ದೇಶಕರನ್ನು ವೇದಿಕೆಗೆ ಆಹ್ವಾನಿಸುವುದು ಎಲ್ಲಾ ಆಯೋಜಕರು ಮಾಡುವ ಮೊಟ್ಟಮೊದಲ ಕೆಲಸ. ಆದರೆ.... ನಮ್ಮ ಕುರುಡ ಸಂಸಸುರೇಶ್ ಸಂಪ್ರದಾಯವನ್ನು ಮುರಿದು ತಮ್ಮ ಅಂಧಶ್ರದ್ದೆಯನ್ನು ಸಾಬೀತುಪಡಿಸುವಂತೆ ನಾಟಕ ಮುಗಿದ ತಕ್ಷಣ ವೇದಿಕೆಗೆ ಆಹ್ವಾನಿಸಿದ್ದು ಹೆಳವನನ್ನು.... ಅಂದರೆ ಕಪ್ಪಣ್ಣನವರನ್ನು. ನಾಟಕ ಪಾತ್ರದಾರಿಗಳ ಕುರಿತು ಪರಿಚಯವೇ ಇಲ್ಲದ ಶ್ರೀಮಾನ್ ಕಪ್ಪಣ್ಣನವರೇ ವೇದಿಕೆಗೆ ಬಂದು ಕಲಾವಿದರ ಪರಿಚಯ ಮಾಡಿಕೊಡಲಾಗದೇ ಕಕ್ಕಾಬಿಕ್ಕಿಯಾಗಿ ನಟರಿಗೇ ಹೆಸರು ಹೇಳಲು ತಿಳಿಸಿದರು. ಇದೆಲ್ಲವನ್ನೂ ನೋಡುತ್ತಾ ಇದ್ದ ಕೆಪ್ಪನಂತ ನಾನು ಕಣ್ಣು ಪಿಳಿಪಿಳಿಕಿಸುತ್ತಿದ್ದೆ. ಕೊನೆಗೂ ಕುರುಡನಿಗೆ ಕೆಪ್ಪನ ನೆನಪಾಗಿ ಕರೆದಾಗ ವೇದಿಕೆಗೆ ಹೋಗಿದ್ದೆನಾದರೂ ನಟರ ಪರಿಚಯ ಮುಗಿದಿದ್ದರಿಂದ ಅಲ್ಲಿ ಹೋಗಿ ಮಾಡಬೇಕಾದದ್ದು ಏನಿರಲಿಲ್ಲ. ಸಂಗೀತ ಸಂಯೋಜಕರ ಹೆಸರೇಳಿ ಕುರುಡ ಕುಂಟನ ಕೈಯಿಂದ ಕೊಡಿಸಿದ ಪುಸ್ತಕದ ಕೊಡುಗೆಯನ್ನು ಸ್ವೀಕರಿಸಿ ಕೆಳಗೆ ನಿರ್ಗಮಿಸಿದೆ.

ನಾಟಕದ ನಿರ್ದೇಶಕನಾದ ನಾನು ಇಡೀ ಕಾರ್ಯಕ್ರಮ ಎನ್ನುವ ನಾಟಕದಲ್ಲಿ ನನಗರಿವಿಲ್ಲದಂತೆ ಪಾತ್ರವಾಗಿದ್ದು ಅರಿತು ನಗಬೇಕೆನಿಸಿತು.... ನಕ್ಕುಬಿಟ್ಟೆ. ಕಲೆಯನ್ನೇ ಬದುಕಾಗಿಸಿಕೊಂಡು ತಮ್ಮದೇ ಆದ ಪ್ರಪಂಚವನ್ನು ಸೃಷ್ಟಿಸಿಕೊಂಡ ಕೆಪ್ಪನಂತಹ ಕಲಾವಿದರುಗಳು ಹಾಗೂ ರಂಗನಿರ್ದೇಶಕರುಗಳು ಅದು ಹೇಗೆ ಕರುಡ ಹಾಗೂ ಕುಂಟನಂತಹ ರಂಗಸಂಘಟಕರಿಂದ ನಿರ್ಲಕ್ಷಿಸಲ್ಪಡುತ್ತಾರೆ ಎನ್ನುವುದಕ್ಕೆ ಇದೊಂದು ಪುಟ್ಟ ಉದಾಹರಣೆಯಾಗಿದೆ. ಇಲ್ಲಿ ನಾಟಕ ಹಾಗೂ ಕಲೆಯೆನ್ನುವುದು ಕೇವಲ ಮಾಧ್ಯಮವಾಗಿ ರಂಗಸಂಘಟನೆ ಎನ್ನುವುದು ಉದ್ಯಮವಾಗಿರುವಾಗ ಅದಕ್ಕೂ ನಮಗೂ ಸಂಬಂಧವೇ ಇಲ್ಲವೆಂದುಕೊಂಡ ಕಿವುಡರು ರಂಗಭೂಮಿಯನ್ನು ಗೆದ್ದಲಿನ ಹಾಗೆ ಹುತ್ತದಂತೆ ಕಟ್ಟುತ್ತಲೇ ಇರುತ್ತಾರೆ. ಹುತ್ತ ಸೇರಿದ ಹಾವುಗಳು ತಮ್ಮದೇ ಪಾರುಪತ್ಯ ಮೆರೆದು ಹುತ್ತ ಬೆಳೆದಿದ್ದೆ ತಮ್ಮಿಂದ ಎಂಬ ಭ್ರಮೆಯನ್ನು ಹುಟ್ಟಿಸುತ್ತಾರೆ. ನಾಟಕದಲ್ಲಿ ಬಳಸಿದ ಹಾಡೊಂದು ನಾಟಕದಾಚೆ ನಡೆಯುವ ರಂಗಸಂಘಟಕರ ನಾಟಕಕ್ಕೂ ಚೆನ್ನಾಗಿ ಹೊಂದಿಕೊಳ್ಳುವಂತಿದೆ. ಹಾಡಿನ ಸಾಲನ್ನು ಓದುತ್ತಾ ಇರಿ... ಇಲ್ಲಿಗೆ ಬರಹ ನಿಲ್ಲಿಸುತ್ತೇನೆ.... ಹೇಳುವುದಿನ್ನೂ ಬಾಕಿ ಇದೆ.......

                                      ಕುರುಡನ ಮೇಲೆ ಕುಂಟಾ
                                      ಹತ್ತಿ ಕುಂತು ಹೊಂಟಾ....
                                      ಯಾರದೋ ಬೆನ್ನು ಇನ್ಯಾರದೋ ಸವಾರಿ
                                      ಯಾರದೋ ಕಾಲು ಮತ್ಯಾರೋ ರೂವಾರಿ......    

                         -ಶಶಿಕಾಂತ ಯಡಹಳ್ಳಿ