ಸೋಮವಾರ, ನವೆಂಬರ್ 2, 2015

ರಂಗಸಂತನಿಗೆ ಶ್ರದ್ದಾಂಜಲಿ :

     
ರಂಗಕಾಯಕಯೋಗಿ ಮಹಾಲೆಯವರಿಗೆ ರಂಗನಮನ :


ಕನ್ನಡ ರಂಗಭೂಮಿ ಹಿಂದೆಂದೂ ಇಂತಹ ಕಾಯಕ ಜೀವಿಯನ್ನು ನೋಡಿರಲಿಕ್ಕಿಲ್ಲ. ರಂಗಕಾಯಕವನ್ನೇ ಬದುಕಿನ ಧರ್ಮ ಎಂದು ನಂಬಿಕೊಂಡು ಏಳು ದಶಕಗಳ ಕಾಲ ನಿರಂತರ ರಂಗಸೇವೆಯನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡಿದಂತಹ ಇನ್ನೊಬ್ಬ ನೇಪತ್ಯ ರಂಗಕರ್ಮಿ ಇದ್ದಿರಲಿಕ್ಕಿಲ್ಲ. ಬಹುಷಃ ಮುಂದೆಂದೂ ಇಷ್ಟೊಂದು ರಂಗಬದ್ಧತೆ ಇರುವ ಇನ್ನೊಬ್ಬ ರಂಗಕರ್ಮಿ ಹುಟ್ಟಿ ಬರಲಿಕ್ಕಿಲ್ಲ.... ಹೌದು ಅವರು ಒನ್ ಆಂಡ್ ಓನ್ಲಿ ನೇಪತ್ಯ ಕಲಾವಿದ ಗಜಾನನ ಮಹಾಲೆಯವರು. ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ಮಹಾಲೆಯವರ ಕರಚಳಕವಿಲ್ಲದೇ ನಾಟಕಗಳೇ ಇಲ್ಲವೆನ್ನುವಷ್ಟು ಚಿರಪರಿಚಿತ ಹೆಸರು. ಮಕ್ಕಳಿಂದ ಮುದುಕರವರೆಗೆ ಮಹಾಲೆಯವರಿಂದ ಮುಖಕ್ಕೆ ಬಣ್ಣ ಹಚ್ಚದ ರಂಗ ಕಲಾವಿದರೇ ಉತ್ತರ ಕರ್ನಾಟಕ ಭಾಗದಲ್ಲಿಲ್ಲ ಎನ್ನುವಷ್ಟು ಮಹಾಲೆ ಬಣ್ಣದ ಕಾಯಕ ಯೋಗಿ. ವ್ಯಕ್ತಿಗಳನ್ನು ಪಾತ್ರಗಳನ್ನಾಗಿ ಬದಲಾಯಿಸುವ ಪ್ರಸಾಧನ ತಜ್ಞ ಗಜಾನನ ಮಹಾಲೆ ಇನ್ನಿಲ್ಲ. ಈಗ ಇಡೀ ಉತ್ತರ ಕರ್ನಾಟಕ ಬಣ್ಣದ ಗಾರುಡಿಗನನ್ನು ಕಳೆದುಕೊಂಡು ಒಂದು ರೀತಿಯಲ್ಲಿ ಅನಾಥವಾದಂತಾಗಿದೆ ಎಂದರೆ ಸುಳ್ಳಲ್ಲ. ಯಾಕೆಂದರೆ ಮಹಾಲೆಯಂತಹ ಇನ್ನೊಬ್ಬ ವೃತ್ತಿನಿರತ ನಿಸ್ವಾರ್ಥಿ ಪ್ರಸಾದನ ಕಲಾವಿದರು ಇಡೀ ಉತ್ತರ ಕರ್ನಾಟಕದಲ್ಲಿ ಇಲ್ಲವೇ ಇಲ್ಲ. ಬರೀ ಬಾಯಿಮಾತಿಗಲ್ಲ ನಿಜವಾಗಿಯೂ ಪ್ರಾಂತ್ಯದ ರಂಗಭೂಮಿ ಒಂದು ರೀತಿಯ ಶೂನ್ಯತೆಯನ್ನು ಇನ್ನು ಹಲವಾರು ವರ್ಷಗಳ ಕಾಲ ಅನುಭವಿಸುವುದರಲ್ಲಿ ಅತಿಶಯವಿಲ್ಲ.

ಶರಣರ ಜೀವನ ಮರಣದಲಿ ಕಾಣು ಎಂಬ ಶಿವಶರಣರ ಬಯಕೆ ಮಹಾಲೆಯವರಿಗೆ ಸೂಕ್ತವಾಗಿ ಅನ್ವಯಿಸುವಂತಿದೆ. ಮಹಾಲೆ ಶರಣ ಅಲ್ಲಾ ಆದರೆ ಕಾಲದ ಶರಣರನ್ನು ಮೀರಿಸಿದ ಕಾಯಕಜೀವಿ. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ಕಾಯಕ ಸಿದ್ಧಾಂತದ ಅರಿವಿಲ್ಲದೇ ಅದಕ್ಕೆ ಬದ್ಧವಾದ ಸರಳ ಸಜ್ಜನ ಕಾಯಕಯೋಗಿ. ಮೂಲತಃ ಮಹಾಲೆಯವರ ಕುಲಕಸಬು ಕ್ಷೌರಿಕ ವೃತ್ತಿ. ವೃತ್ತಿಯ ಜೊತೆಗೆ ಮಹಾಲೆಯವರ ತಂದೆ ಹರಿಕೃಷ್ಣ ಮಹಾಲೆ ಹಾಗೂ ಚಿಕ್ಕಪ್ಪ  ಪುಂಡಲೀಕ ಮಹಾಲೆಯವರು ನಾಟಕದ ಆಕರ್ಷಣೆಗೆ ಬಿದ್ದು ಪ್ರಸಾಧನವನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದರು. ಮುಂದೆ ಗಜಾನನರವರೂ ಸಹ ಅದನ್ನೇ ಮುಂದುವರೆಸಿದರು. ಈಗವರಿಗೆ ೮೪ ವರ್ಷವಾಗಿತ್ತು. ಅವಿರತವಾಗಿ ದುಡಿದ ದೇಹ ಸಂಪೂರ್ಣ ವಿಶ್ರಾಂತಿಯನ್ನು ಬಯಸುವ ವಯಸ್ಸು. ಆದರೆ ಇಂತಹ ಇಳಿವಯಸ್ಸಿನಲ್ಲಿಯೂ ಯುವಕರನ್ನು ಮೆಚ್ಚಿಸುವಂತೆ ಮಹಾಲೆ ಚಟುವಟಿಕೆಯಿಂದಿದ್ದರು. ಪ್ರತಿ ದಿನ ಬೆಳಿಗ್ಗೆ ಆರು ಗಂಟೆಗೆ ಸಿದ್ಧರಾಗಿ ಬೇರೆಯವರ ಕ್ಷೌರಿಕ ಅಂಗಡಿಗೆ ಹೋಗಿ ಮೂರು ಗಂಟೆಗಳ ಕಾಲ ವೃತ್ತಿಯನ್ನು ಮಾಡುತ್ತಿದ್ದರು. ಕೆಲವು ಪರಿಚಯಿತಸ್ತರ ಕರೆಯ ಮೇರೆಗೆ ಅವರ ಮನೆಗೇ ಹೋಗಿ ಕ್ಷೌರ ಮಾಡಿ ಬರುತ್ತಿದ್ದರು. ತದನಂತರ ಉಳ್ಳವನ ಮನೆಯ ಆವರಣದಲ್ಲಿರುವ ಗಾರ್ಡನ್ ಪೋಷಣೆ ಹಾಗೂ ಗಿಡಗಳಿಗೆ ನೀರು ಹಾಯಿಸುವ ಕೆಲಸ. ಸಂಜೆ ಆದರೆ ಯಾವುದಾದರೊಂದು ನಾಟಕ ಪ್ರದರ್ಶನದ ಸಂಭ್ರಮದಲ್ಲಿ ಕಲಾವಿದರಿಗೆ ಮೇಕಪ್ ಮಾಡುವ ಕಾಯಕ. ನಡುವೆ ಬಿಡುವಿದ್ದರೆ ಪುಟ್ಟ ಮಕ್ಕಳಿಗೆ ಸಂಗೀತಾಭ್ಯಾಸ. ಇದೆಲ್ಲವನ್ನೂ ಅವರೆಂದೂ ಹಣಕ್ಕಾಗಿ ಮಾಡಿದವರಲ್ಲ ಎಂಬುದಿಲ್ಲಿ ವಿಸ್ಮಯದ ಸಂಗತಿ. ಕೆಲಸ ಮಾಡಿ ಕೊಟ್ಟಷ್ಟು ತೆಗೆದುಕೊಂಡು ಬಂದು, ತಂದಿದ್ದೆಲ್ಲವನ್ನೂ ತಮ್ಮ ಹೆಂಡಗಿಯ ಕೈಗಿತ್ತು ನಿರಾಳರಾಗಿ ಮತ್ತೆ ಕಾಯಕಯೋಗಿಯಾಗಿ ಕೆಲಸಮಾಡುವುದಷ್ಟೇ ಮಹಾಲೆಯವರ ಬದುಕಾಗಿತ್ತುಇದು ಒಂದೆರಡು ದಿನದ ಕಾಯಕವಲ್ಲ... ದಶಕಗಳಿಂದ ಮಹಾಲೆಯವರು ಬಿಡುವರಿಯದೇ ಮಾಡಿದ ನಿರಂತರ ಚಟುವಟಿಕೆ. ವಯಸ್ಸಿನ ಆಯಾಸವನ್ನು ಮೀರುವ ಶಕ್ತಿಯನ್ನು ಅವರ ಕಾಯಕ ಅವರಿಗೆ ಕೊಡಮಾಡಿತ್ತು. ಅದರಿಂದಾಗಿ ೮೪ರ ವಯದಲ್ಲೂ ಪಂಚೇಂದ್ರಿಯಗಳು ಕ್ರಿಯಾಶೀಲವಾಗಿದ್ದವುಕೊನೆಯ ಉಸಿರಿರುವವರೆಗೂ ಗಜಾನನರವರು ವೃತ್ತಿ ಪ್ರವೃತ್ತಿಗಳ ಬೇಧವಿಲ್ಲದೇ ಮಾಡುವ ಎಲ್ಲವನ್ನು ವೃತ್ತಿಪರತೆಯಿಂತಲೇ ಮಾಡುತ್ತಲೇ ಬದುಕಿನ ಪಯಣ ಮುಗಿಸಿದರು.

ಅಂದೂ ಕೂಡಾ ಹೀಗೆ ಆಗಿತ್ತು. ಧಾರವಾಡದ ರಂಗಾಯಣದಲ್ಲಿ ಬಿ.ವಿ.ಕಾರಂತ ನೆನಪಿನ ನವರಾತ್ರಿ ರಂಗೋತ್ಸವ’’ ಆಯೋಜನೆಗೊಂಡಿತ್ತು. ಅಕ್ಪೋಬರ್ 13 ರಿಂದ 21 ರವರೆಗೆ ಪ್ರದರ್ಶನಗೊಂಡ ಒಟ್ಟು 9 ನಾಟಕಗಳ ಕಲಾವಿದರಿಗೆಲ್ಲಾ ಬಣ್ಣ ಹಚ್ಚುವ ಕೆಲಸ ಮಹಾಲೆಯವರದ್ದಾಗಿತ್ತು. 19ನೇ ತಾರೀಕಿನವರೆಗೂ ಪ್ರತಿದಿನ ಮೇಕಪ್ ಮಾಡಿದ ಮಹಾಲೆಯವರು ಧಾರವಾಡ ಸಮುದಾಯದ ತಂಡದ ನಾಟಕ ಪ್ರದರ್ಶನ ಬೆಂಗಳೂರಿನ ರಂಗಶಂಕರದಲ್ಲಿದ್ದಿದ್ದರಿಂದ ತಂಡದ ಜೊತೆಗೆ ಬೆಂಗಳೂರಿಗೆ ನಡೆದರು. ಮನೆಯವರು ಹೋಗುವುದು ಬೇಡವೆಂದರು. ಬೇಕಾದರೆ ಮಗ ಸಂತೋಷನನ್ನು ಕಳುಹಿಸಲು ಕೇಳಿಕೊಂಡರು. ಯಾರ ಮಾತನ್ನೂ ಕೇಳದ ಮಹಾಲೆ  ಮರುಪ್ರದರ್ಶನಗಳಿಗೆ ಬಣ್ಣ ಹಚ್ಚುವುದು ನನ್ನ ಕರ್ತವ್ಯ, ನಾನು ಹೋಗದಿದ್ದರೆ ರಂಗತಂಡದವರಿಗೆ ತೊಂದರೆಯಾಗುವುದು ಎಂದು ಹೇಳಿ ತಂಡದ ಕಲಾವಿದರೊಂದಿಗೆ ಬಸ್ ಹತ್ತಿದರು. ಬೆಂಗಳೂರಲ್ಲಿ ಅಕ್ಟೋಬರ್ 20 ರಾತ್ರಿ ಸಮುದಾಯದ ಬುದ್ಧ ಪ್ರಬುದ್ಧ ನಾಟಕದ ಪಾತ್ರಗಳಿಗೆಲ್ಲಾ ಪ್ರಸಾಧನ ಮಾಡಿದರು. ಪ್ರದರ್ಶನದ ನಂತರ ರಾತ್ರಿ ಊಟ ಮಾಡಿಕೊಂಡು ತಂಡದ ಬಸ್ಸಿನಲ್ಲಿ ಬೆಂಗಳೂರು ಬಿಟ್ಟು .21 ಬೆಳಗಿನ ಜಾವ ಹರಿಹರದ ಹತ್ತಿರ ಬಸ್ ಬಂದಾಗ ಮಹಾಲೆಯವರಿಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿತು. ರಂಗತಂಡದವರು ಪ್ರಯತ್ನ ಪಟ್ಟು ಹಾವೇರಿಯ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಹೃದಯವಂತನ ಹೃದಯ ಆಘಾತದಿಂದ ನಿಂತೇ ಹೋಗಿತ್ತು. ಬಣ್ಣದ ಕಾಯಕಮುಗಿಸಿ ಬರುವಾಗ ಬಣ್ಣಗಾರನ ಸಾರ್ಥಕ ಬದುಕು ಅಂತ್ಯವಾಯಿತು. ಧಾರವಾಡದಲ್ಲಿಯೇ ಇದ್ದರೆ ಇನ್ನೂ ಕೆಲವು ವರ್ಷ ರಂಗಸೇವೆ ಮಾಡಿಕೊಂಡು ಮಹಾಲೆ ಬದುಕಿರಬಹುದಾಗಿತ್ತೇನೋ. ಆದರೆ ಮಹಾಲೆಯವರ ರಂಗಪ್ರೀತಿ ಹಾಗೂ ತಮ್ಮ ಆರೋಗ್ಯದ ಬಗ್ಗೆ ತೋರಿದ ನಿಷ್ಕಾಳಜಿಗಳು ಅವರ ಸಾವನ್ನು ಆಹ್ವಾನಿಸಿದವು.

ಯಾಕೆಂದರೆ... ಮೂರು ವರ್ಷಗಳ ಹಿಂದೆ ಮಹಾಲೆಯವರ ಹೃದಯದಲ್ಲಿ ತೂತಾಗಿದೆ ಎಂದು ಬೈಪಾಸ್ ಸರ್ಜರಿ ಮಾಡಲಾಗಿತ್ತುಎದೆಯ ಭಾಗದಲ್ಲಿ ಯಂತ್ರವನ್ನು ಅಳವಡಿಸಲಾಗಿತ್ತು. ಊರು ಬಿಟ್ಟು ಎಲ್ಲೂ ಪ್ರಯಾಣ ಮಾಡಬಾರದು ಹಾಗೂ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸೂಚಿಸಿದ್ದರು. ಆದರೆ... ಕಾಯಕ ಜೀವಿ ಉಸಿರು ಹೋದರೂ ಪರವಾಗಿಲ್ಲ ಕಾಯಕ ಬಿಡಲಾರೆ ಎನ್ನುವ ಛಲದವರಾಗಿದ್ದರಿಂದ ವೈದ್ಯರ ಮಾತು ಧಿಕ್ಕರಿಸಿದರು. ಧಾರವಾಡದಿಂದ ಬೆಂಗಳೂರಿಗೆ ಪ್ರಯಾಣಿಸಿ ಅದೇ ದಿನ ನಾಟಕ ಪ್ರದರ್ಶನವಾದ ಕೂಡಲೇ ವಿಶ್ರಾಂತಿ ಸಹ ಪಡೆಯದೇ ಮತ್ತೆ ಧಾರವಾಡಕ್ಕೆ ಮರಳಿದಿರು. ಪ್ರಯಾಣದ ಆಯಾಸದ ಒತ್ತಡವನ್ನು ದುರ್ಭಲವಾದ ಹೃದಯ ತಾಳಿಕೊಳ್ಳದೇ ನಿಂತೇ ಹೋಯಿತು. ವೈದ್ಯರ ಸಲಹೆಯನ್ನು ಹಾಗೂ ಕುಟಂಬದವರ ಮಾತನ್ನು ಮೀರಿ ಕಾಯಕ ನಿಷ್ಟೆ ಹಾಗೂ ರಂಗಬದ್ಧತೆಯಲ್ಲಿ ತೊಡಗಿಕೊಂಡಿದ್ದಕ್ಕೆ ಗಜಾನನ ಮಹಾಲೆ ತಮ್ಮ ಪ್ರಾಣವನ್ನೇ ಬಲಿಕೊಡಬೇಕಾಯಿತು. ಉತ್ತರ ಕರ್ನಾಟಕದ ರಂಗಭೂಮಿಯ ನೇಪತ್ಯದ ಪ್ರಸಾಧನ ಕ್ಷೇತ್ರದಲ್ಲಿ ಶೂನ್ಯವೊಂದು ಸೃಷ್ಟಿಯಾಯಿತು. ಧಾರವಾಡ ಜಿಲ್ಲಾ ರಂಗಭೂಮಿಯಂತೂ ಇನ್ನು  ಮೇಲೆ ವೃತ್ತಿಪರ ಮೇಕಪ್ ಕಲಾವಿದರಿಲ್ಲದೇ ತತ್ತರಿಸುವಂತಾಯಿತು. ಅಂತಹುದೊಂದು ಅನಿವಾರ್ಯತೆಯನ್ನು ಸೃಷ್ಟಿಸಿಯೇ ಮಹಾಲೆಯವರು ಹೋಗಿದ್ದಾರೆ. ಇಲ್ಲಿವರೆಗೂ ಆರು ಸಾವಿರಕ್ಕೂ ಹೆಚ್ಚು ನಾಟಕಗಳಿಗೆ ಪ್ರಸಾಧನವನ್ನು ಮಾಡಿದ್ದಾರೆ. ಲಕ್ಷಾಂತರ ನಟರಿಗೆ ಮೇಕಪ್ ಮಾಡಿದ್ದಾರೆ.
ಗಜಾನನ ಮಹಾಲೆಯವರ ಪರಿವಾರ
ಯಾಕೆಂದರೆ... ಯಾವುದೇ ಶಾಲೆ ಕಾಲೇಜಿನ ವಾರ್ಷಿಕೋತ್ಸವಗಳಿರಲಿ, ಯಾವುದೇ ಪ್ರಕಾರದ ನೃತ್ಯ ಕಾರ್ಯಕ್ರಮಗಳಾಗಿರಲಿ, ಕಂಪನಿ ಶೈಲಿಯ ಗ್ರಾಮೀಣ ಹವ್ಯಾಸಿ ನಾಟಕ ಚಟುವಟಿಕೆಗಳಿರಲಿ, ಆಧುನಿಕ ಹವ್ಯಾಸಿ ರಂಗಭೂಮಿಯ ರಂಗಪ್ರಯೋಗಗಳಿರಲಿ...ಯಾವುದೇ ನಾಟಕೋತ್ಸವಗಳಿರಲಿ, ಕೊನೆಗೆ ಜಾನಪದ ರಂಗಭೂಮಿಯ ಬಯಲಾಟಗಳಿರಲಿ... ಅಲ್ಲೆಲ್ಲಾ ಗಜಾನನ ಮಹಾಲೆಯವರು ಕಲಾವಿದರುಗಳಿಗೆ ಮೇಕಪ್ ಮಾಡಲು ಅತೀ ಅನಿವಾರ್ಯ ಹಾಗೂ ಅಗತ್ಯವಾಗಿತ್ತು. ಯಾಕೆ ಭಾಗದಲ್ಲಿ ಬೇರೆ ವೃತ್ತಿಪರ ಪ್ರಸಾಧನ ಕಲಾವಿದರು ಬೆಳೆಯಲಿಲ್ಲ ಎಂದರೆ... ಮಹಾಲೆಯವರೇ ಎಲ್ಲಾ ರಂಗತಂಡಗಳ ಮೊದಲ ಆಯ್ಕೆಯಾಗಿದ್ದರು. ಪ್ರತಿ ವರ್ಷಕ್ಕೆ ಕನಿಷ್ಠ ಎಂದರೂ ಎಪ್ಪತ್ತರಿಂದ ಎಂಬತ್ತು ನಾಟಕಗಳಿಗೆ ಪ್ರಸಾಧನ ಮಾಡುತ್ತಿದ್ದರು. ಪ್ರತಿಫಲಾಪೇಕ್ಷೆ ಇಲ್ಲದೇ, ಯಾವುದನ್ನೂ ಡಿಮಾಂಡ್ ಮಾಡದೇ, ಒಮ್ಮೆ ಒಪ್ಪಿಕೊಂಡರೆ ಬಂದು ನಿಷ್ಟೆಯಿಂದ ಮೇಕಪ್ ಮಾಡುವ ಮಹಾಲೆಯವರು ಎಲ್ಲರ ಅಚ್ಚುಮೆಚ್ಚಿನ ಹಾಗೂ ನಂಬಿಗಸ್ತ ರಂಗಕರ್ಮಿಯಾಗಿದ್ದರು. ಒಂದು ನಾಟಕದಲ್ಲಿ ನಾಲ್ಕೇ ಜನ ಕಲಾವಿದರಿರಲಿ ಇಲ್ಲವೇ ನಲವತ್ತು ಜನ ನಟರಿರಲಿ ತಲೆ ಎಣಿಸಿ ಹಣ ಕೇಳುವ ಜಾಯಮಾನವೇ ಇಲ್ಲದ ಮಹಾಲೆಯವರು ಕೊಟ್ಟಷ್ಟು ತೆಗೆದುಕೊಂಡು ಮನೆಗೆ ಹೋಗುತ್ತಿದ್ದುದರಿಂದ ಅವರಿಗೆ ಬೇಡಿಕೆ ಅಪಾರವಾಗಿತ್ತು. ಕೆಲವು ತಂಡಗಳು ಮೂವತ್ತು ನಲವತ್ತು ಜನರಿಗೆ ಮೇಕಪ್ ಮಾಡಿಸಿ ನಾನೂರು ಇಲ್ಲವೇ ಐನೂರು ರೂಪಾಯಿ ಕೊಡುತ್ತಿದ್ದರು. ಕೆಲವೊಮ್ಮೆ ಕೆಲವರು ಕೆಲಸ ತೆಗೆದುಕೊಂಡು ಆಮೇಲೆ ಕೊಡುತ್ತೇನೆಂದು ಕಳುಹಿಸುತ್ತಿದ್ದರು. ಆಮೇಲೆ ಮಹಾಲೆಯವರು ಕೇಳುತ್ತಲೂ ಇರಲಿಲ್ಲ... ಕೊಡಬೇಕಾದವರು ಕೊಡುತ್ತಲೂ ಇರಲಿಲ್ಲ. ಯಾಕೆ ಹೀಗೆಂದು ಮಹಾಲೆಯವರನ್ನು ಕೇಳಿದಾಗ ನಾನು ಹಣಕ್ಕಾಗಿ ಇದನ್ನೆಲ್ಲಾ ಮಾಡುತ್ತಿಲ್ಲ... ಕಲಾವಿದರಿಗೆ ಬಣ್ಣ ಹಚ್ಚುವುದರಲ್ಲಿ ನನಗೆ ಖುಷಿ ಇದೆ... ತೃಪ್ತಿ ಇದೆ... ಹಣ ಕೊಟ್ಟವರು ಕೊಡಲು ಬಿಟ್ಟವರು ಬಿಡಲಿ.. ನನ್ನ ಕಾಯಕ ನಿರಂತರವಾಗಿರಲಿ... ಎಂದು ಸಂತನಂತೆ ಮಾತಾಡುತ್ತಿದ್ದರು.   ಕೊನೆವರೆಗೂ ವ್ಯಾಮೋಹರಹಿತ ಸಂತನಂತೆಯೇ ಬದುಕಿದರು. ಕಾಯಕ ನಿಷ್ಟೆ ಅಂದರೆ ಇದೇನಾ....?

ಕೊನೆಯವರೆಗೂ ಗಜಾನನ ಮಹಾಲೆಯವರನ್ನೊಂದು ಕೊರಗು ಕಾಡುತ್ತಲೇ ಇತ್ತು. ತನ್ನೊಳಗಿನ ನಿಜವಾದ ಪ್ರತಿಭೆಯನ್ನು ರಂಗಭೂಮಿ ಗುರುತಿಸಲಿಲ್ಲ ಎನ್ನುವ ಕೊರಗಾಗಿತ್ತು. ಯಾಕೆಂದರೆ ಮಹಾಲೆಯವರಿಗೆ ಸಂಗೀತದ ಮೇಲೆ ಅಪಾರವಾದ ಪ್ರೀತಿ ಮತ್ತು ಆಸಕ್ತಿ ಇತ್ತು. ಹಾಡುತ್ತಿದ್ದರು, ಹಾರ್ಮೊನಿಯಂ ಬಾರಿಸುತ್ತಿದ್ದರು, ತಬಲಾ ಸಹ ನುಡಿಸುತ್ತಿದ್ದರು....ಬಸವರಾಜ ರಾಜಗುರುರವರ ಸಂಗೀತ ಕಛೇರಿಯಲ್ಲಿ ಹಾರ್ಮೋನಿಯಂ ನುಡಿಸಿದ್ದರು. ಪಂಡಿತ ಚಂದ್ರಶೇಖರ್ ಪುರಾಣಿಕಮಠ ರವರಿಂದ ಹಾರ್ಮೋನಿಯಂ ನುಡಿಸುವ ತರಬೇತಿಯನ್ನು ಪಡೆದಿದ್ದರು. ಅವರು ಬದುಕಿನಾದ್ಯಂತ ಇಷ್ಟಪಟ್ಟು ಸಂಪಾದಿಸಿದ ಆಸ್ತಿ ಏನಾದರೂ ಇದ್ದರೆ ಅದು ಹಾರ್ಮೋನಿಯಂ ಪೆಟ್ಟಿಗೆ ಮಾತ್ರಆದರೆ ನಾಟಕ ಕ್ಷೇತ್ರದವರು ಮಹಾಲೆಯವರ ಪ್ರಸಾಧನ ಕಲೆಯನ್ನು ಗುರುತಿಸಿ ಬಳಸಿಕೊಂಡ ಹಾಗೆ ಅವರ ಸಂಗೀತದ ಪ್ರತಿಭೆಯನ್ನು ಗುರುತಿಸಲೂ ಇಲ್ಲಾ, ಬಳಸಿಕೊಳ್ಳಲೂ ಇಲ್ಲ. ಕೊರತೆಯನ್ನು ತುಂಬಿಕೊಳ್ಳಲು ಪುಟ್ಟ ಮಕ್ಕಳಿಗೆ ತಮ್ಮ ಮೊಮ್ಮಕ್ಕಳಿಗೆ ಸಂಗೀತವನ್ನು ಹೇಳಿಕೊಡುವುದರಲ್ಲಿ ಒಂದಿಷ್ಟು ತೃಪ್ತಿ ಕಾಣುತ್ತಿದ್ದ ಮಹಾಲೆ ಅಜ್ಜ ನೃತ್ಯ ತರಬೇತಿ ಸಂಸ್ಥೆಗೆ ಹೋಗಿ ಹಾರ್ಮೋನಿಯಂ ಬಾರಿಸುತ್ತಿದ್ದರು. ಯಾವಾಗಲೂ ಯಾವುದಾದರೊಂದು ರಂಗಗೀತೆಯನ್ನೋ ಇಲ್ಲವೇ ಸಂಗೀತ ಸ್ವರಗಳನ್ನೋ ಗುಣಿಗುನಿಸುತ್ತಾ ತಮ್ಮದೇ ಆದ ಸಂಗೀತ ಲೋಕದಲ್ಲಿ ಮಹಾಲೆ ತಾತ ಮೈಮರೆಯುತ್ತಿದ್ದರು

ಮೊಮ್ಮಗನೊಂದಿಗೆ ಮಹಾಲೆ ಅಜ್ಜ
ಇವರ ಸಂಗೀತದ ಬಯಕೆಗೆ ಮನೆಯ ಒಳಗೂ ಹಾಗೂ ಹೊರಗೂ ಪ್ರೋತ್ಸಾಹ ದೊರೆಯಲಿಲ್ಲ ಎನ್ನುವ ಕೊರಗು ಮಹಾಲೆಯವರನ್ನು ಕೊನೆಯವರೆಗೂ ಕಾಡದೇ ಬಿಡಲಿಲ್ಲ. ಸಂಗೀತ ಗೊತ್ತಿದ್ದರೂ ಕ್ಷೇತ್ರದಲ್ಲಿ ಏನೂ ಮಾಡಲು ಸಾಧ್ಯವಾಗಲೇ ಇಲ್ಲ ಎನ್ನುವ ನೋವು  ಮಹಾಲೆಯವರಲ್ಲಿ ಅತೃಪ್ತಿಯನ್ನು ಹುಟ್ಟಿಹಾಕಿತ್ತು. ಕಾಯಕ ಸಂತನಿಗೆ ಹಾರ್ಮೋನಿಯಂ ಮೇಲಿನ ಪ್ರೀತಿ ಎಷ್ಟಿತ್ತೆಂಬುದಕ್ಕೆ ಒಂದು ಉದಾಹರಣೆ ಹೀಗಿದೆ. ಮೂರು ವರ್ಷಗಳ ಹಿಂದೆ ರಂಗಕರ್ಮಿ ವಿಜಯೇಂದ್ರ ಅರ್ಚಕರವರು ಮಹಾಲೆಯವರನ್ನು ತಮ್ಮ ಬೈಕಿನಲ್ಲಿ ಅವರ ಹಾರ್ಮೋನಿಯಂ ಪೆಟ್ಟಿಗೆಯ ಸಮೇತ ಕರೆದುಕೊಂಡು ಹೋಗುತ್ತಿದ್ದಾಗ ಧಾರವಾಡದ ಎಲ್ಐಸಿ ಬಳಿ ಅಪಘಾತಕ್ಕೊಳಗಾಗಿ ಇಬ್ಬರೂ ಬೈಕಿನಿಂದ ಕೆಳಗೆ ಬಿದ್ದರು. ಮಹಾಲೆಯವರ ಕಾಲು ಪ್ಯಾಕ್ಚರ್ ಆಗಿ ತಾಳಲಾದರ ನೋವು ಅನುಭವಿಸಿದರೂ ಕೂಡಲೇ ಕುಂಟುತ್ತಾ ಎದ್ದು ಓಡಿ ಹೋಗಿ ದೂರದಲ್ಲೆಲ್ಲೋ ಬಿದ್ದಿದ್ದ ಹಾರ್ಮೋನಿಯಂ ಪೆಟ್ಟಿಗೆಯನ್ನು ನೆಲಕ್ಕೆ ಮುಗ್ಗರಿಸಿ ಬಿದ್ದ ಮಗುವನ್ನು ತಾಯಿ ಎತ್ತಿಕೊಂಡಂತೆ ಹಿಡಿದೆತ್ತಿ ಧೂಳುವರೆಸತೊಡಗಿದರು. ಮುರಿದ ಕಾಲಿನ ನೋವಿಗಿಂತಲೂ ಹೆಚ್ಚು ಕಾಳಜಿಯನ್ನು ತಾವು ಬದುಕಿನಾದ್ಯಂತ ಪ್ರೀತಿಸಿದ ಸಂಗೀತದ ಪೆಟ್ಟಿಗೆಗೆ ತೋರಿದ್ದು ನೋಡಿದ ಜನರ ಕಣ್ಣಲ್ಲಿ ನೀರು ಹನಿಗೂಡಿದವಂತೆ. ಅಜ್ಜನವರ ಸಂಗೀತ ಪ್ರೀತಿಗೆ ಮತ್ತು ಅದರ ರೀತಿಗೆ ಇದಕ್ಕಿಂತ ದೊಡ್ಡ ಸಮರ್ಥನೆ ಯಾವುದಿದೆ.

ಅವರೊಳಗೆ ಒಬ್ಬ ನಟ ಕೂಡಾ ಇದ್ದದ್ದು ಬಹುತೇಕರ ಗಮನಕ್ಕೆ ಬರಲೇ ಇಲ್ಲಸುರೇಶ್ ಹೆಬ್ಳಿಕರ್ ರವರ ಚಮತ್ಕಾರ ಹಾಗೂ ನಾಗಾಭರಣರವರ ಸಿಂಗಾರೆವ್ವ... ಸಿನೆಮಾಗಳಲ್ಲಿ ಮಹಾಲೆಯವರು ನಟಿಸಿದ್ದಾರೆ. ಮುತೈದೆ, ಕುಂಕುಮ, ವಿಜಯಕಂಕಣ... ಮುಂತಾದ ದಾರಾವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಅಭಿನಯಿಸಿದ ಮಹಾಲೆಯವರು ಮೇಕಪ್ ಸಹ ಮಾಡಿ ಟಿವಿ ಕ್ಷೇತ್ರದಲ್ಲೂ ತಮ್ಮ ಕೊಡುಗೆ ಕೊಟ್ಟಿದ್ದಾರೆಮಹಾಲೆಯವರ ಮನೆಯ ಪಕ್ಕದಲ್ಲೇ ಮನೆಮಾಡಿರುವ ರಂಗನಿರ್ದೇಶಕಿ ಪದ್ಮಾಕೊಡಗುರವರ ಮನೆಗೆ ಬಂದು ತಮ್ಮ ಸುಪ್ತ ಪ್ರತಿಭೆಯನ್ನು ವ್ಯಕ್ತಪಡಿಸಲು ಅಜ್ಜನವರು ಪ್ರಯತ್ನಿಸುತ್ತಿದ್ದರು. ತಮ್ಮ ಮನೆಯ ಸದಸ್ಯರು ಸಂಗೀತಾಬ್ಯಾಸ ಬೇಡವೆಂದಾಗ ಪದ್ಮಾರವರ ಮನೆಗೆ ಹಾರ್ಮೋನಿಯಂ ಪೆಟ್ಟಿಗೆಯ ಸಮೇತ ಬಂದು ಸಂಗೀತಾಲಾಪದ ಅಭ್ಯಾಸವನ್ನು ಇಳಿವಯಸ್ಸಿನಲ್ಲೂ ಮಾಡುತ್ತಿದ್ದರು. ಮೂಡ ಬಂದಾಗ ನಾಟಕದ ಡೈಲಾಗ್ ಹೇಳುವುದು, ಏಕಪಾತ್ರಾಭಿನಯ ಮಾಡುವುದು ಹಾಗೂ ಶ್ರೀರಂಗರು, ಗುಡಗೇರಿ ಬಸವರಾಜರಂತಹ ಅನೇಕ ರಂಗಕರ್ಮಿಗಳ ನಟನೆಯನ್ನು ಅನುಕರಣೆ ಮಾಡುವುದನ್ನು ಮಾಡುತ್ತಲೇ ತಮ್ಮೊಳಗಿರುವ ನಟನಾಸಕ್ತಿಯನ್ನು ಹೊರಹಾಕುತ್ತಿದ್ದರಂತೆ. ಚಿತ್ರ ಕಲೆಯಲ್ಲೂ ಮಹಾಲೆಯವರಿಗೆ ಮಹದಾಸಕ್ತಿ. ಯುವಕರಾಗಿದ್ದಾಗೆ ಕೆಲವು ನಾಟಕಗಳಲ್ಲಿ ನಟನೆ ಮಾಡಿದ್ದರಂತೆ.. ಆದರೆ ರಂಗಭೂಮಿಯವರು ಮಹಾಲೆಯವರನ್ನು ನಟನೆ ಹಾಗೂ ಸಂಗೀತದ ಬದಲು ಮೇಕಪ್ ಕೆಲಸಕ್ಕೆ ಸೀಮಿತಗೊಳಿಸಿದ್ದರಿಂದ ಅವರೊಳಗಿನ ನಟ ಹಾಗೂ ಸಂಗೀತಗಾರನಿಗೆ ಹಿನ್ನಡೆಯಾಗಿ ಮೇಕಪ್ ಕಲೆ ಮಾತ್ರ ಮುನ್ನಲೆಗೆ ಬಂದಿತು. ಏನಾದರೂ ನಟನೆ ಹಾಗೂ ಸಂಗೀತದಲ್ಲಿ ಮಾಡಬೇಕು ಎನ್ನುವ ಅಜ್ಜನ ಕನಸು ನನಸಾಗಲೇ ಇಲ್ಲ.

ಮಹಾಲೆಯಲ್ಲಿರುವ ಇನ್ನೊಂದು ಕಲಾಪ್ರತಿಭೆ  ಧಾರವಾಡೇತರರಿಗೆ ತಿಳಿದಿಲ್ಲ. ಅದೆಂದರೆ ಪ್ರತಿ ವರ್ಷ ಗಣಪತಿ ಹಬ್ಬದಲ್ಲಿ ಗಣಪತಿಯ ಮೂರ್ತಿಯನ್ನು ತಾವೇ ತಯಾರಿಸುತ್ತಿದ್ದರು. ಇದರಲ್ಲೇನಿದೆ ವಿಶೇಷ ಎಂದರೆ ಅವರು ತಯಾರಿಸುವ ಮಣ್ಣಿನ ಮೂರ್ತಿಗಳಿಗೆ ಬಣ್ಣವನ್ನೆಂದೂ ಹಚ್ಚುತ್ತಿರಲಿಲ್ಲ. ರಾಸಾಯನಿಕ ಬಣ್ಣಗಳಿಂದ ಪರಿಸರ ಹಾಳಾಗುತ್ತದೆ ಎಂದು ಮಹಾಲೆ ನಂಬಿದ್ದರು. ಅದರಲ್ಲೂ ಕಾರವಾರ ಶೈಲಿಯ ಮಣ್ಣಿನ ಗಣಪತಿ ತಯಾರಿಸುವುದರಲ್ಲಿ ಮಹಾಲೆ ಸಿದ್ಧಹಸ್ತರಾಗಿದ್ದರು. ಮೂರ್ತಿ ತಯಾರಿಸುವುದನ್ನೂ ಸಹ ಅವರು ತಮ್ಮ ಆತ್ಮತೃಪ್ತಿಗಾಗಿ ಮಾಡುತ್ತಿದ್ದರೇ ಹೊರತು ಹಣಕ್ಕಾಗಿ ಅಲ್ಲ. ಪ್ರತಿ ವರ್ಷ ಇನ್ನೂರಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ತಾವೇ ಮಣ್ಣು ತಂದು ಹದಹಾಕಿ ಶ್ರಮವಹಿಸಿ ಮಾಡುತ್ತಿದ್ದ ಮಹಾಲೆಯವರು ತಾವು ತಯಾರಿಸಿದ ಯಾವುದೇ ಮೂರ್ತಿಗೆ ಎಂದು ಬೆಲೆ ಕಟ್ಟಿ ಹೇಳಿದವರೇ ಅಲ್ಲ. ಕೊಂಡುಕೊಳ್ಳಲು ಬರುವವರಿಗೆ ನಿಮಗಿಷ್ಟವಾದಷ್ಟು ಕೊಡಿ ಎಂದು ಹೇಳಿ ಅವುಗಳ ಬೆಲೆ ನಿರ್ಧರಿಸಿ ಹಣ ಕೊಡುವ ಜವಾಬ್ದಾರಿಯನ್ನೂ ಗ್ರಾಹಕರಿಗೆ ವಹಿಸುತ್ತಿರುವುದನ್ನು ಕಾಲದಲ್ಲಿ ಎಂದೂ ಎಲ್ಲೂ ಯಾರೂ ಕೇಳಲು ನೋಡಲು ಸಾಧ್ಯವೇ ಇಲ್ಲ. ಕೆಲವೊಮ್ಮೆ ತಯಾರಿಕಾ ವೆಚ್ಚಕ್ಕಿಂತಲೂ ಮೂರ್ತಿಗೆ ಹಣ ಕಡಿಮೆ ಬಂದಾಗಲೂ ಮಹಾಲೆ ನೊಂದುಕೊಂಡವರಲ್ಲ. ಹೆಚ್ಚಿಗೆ ಹಣ ಬೇಡಿದವರಲ್ಲ. ಇಂತಹ ಕಾಯಕ ನಿಷ್ಟೆಯನ್ನು ಬಸವಣ್ಣನವರ ಶರಣ ಸಂಸ್ಕೃತಿಯ ಕಾಯಕ ಸಿದ್ದಾಂತದ ಪ್ರತಿರೂಪವೆನ್ನಬಹುದಾಗಿದೆ. ಕನಿಷ್ಟ ವ್ಯವಹಾರದ ರೀತಿ ರಿವಾಜುಗಳನ್ನರಿಯದ ಮಗುವಿನಂತಹ ಮುಗ್ಧ ಮನಸಿನ ಕಲಾವಿದರಾಗಿದ್ದ ಗಜಾನನ ಮಹಾಲೆ ಈಗಿನ ಕಾಲದ ವ್ಯವಹಾರಿಕ ಬದುಕಿನ ಸಮಾಜದಲ್ಲಿ ಒಂದು ರೀತಿಯ ಸೋಜಿಗದ ವ್ಯಕ್ತಿಯಾಗಿದ್ದರು. ಹಲವಾರು ಜನ ಅವರ ಮುಗ್ಧತೆಯನ್ನು ಬಳಸಿಕೊಂಡು ತಮ್ಮ ಕೆಲಸ ಸಾಧಿಸಿದರು. ಮಹಾಲೆಯವರು ಮಾತ್ರ ಕಡು ಬಡತನದಲ್ಲೂ ತಮ್ಮದೇ ಆದ ರೀತಿಯಲ್ಲಿ ಶ್ರೀಮಂತ ಬದುಕನ್ನು ಬದುಕಿದರು.


ಮಹಾಲೆಯವರ ಮಡದಿ  ಮಕ್ಕಳು ಪ್ರಸಾಧನ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ನಿ ಜಯಾರವರು ಮಹಾಲೆಯವರ ಮೇಕಪ್ ಕೆಲಸದಲ್ಲಿ ಸಹಾಯಕಿಯಾಗಿದ್ದರೆ. ಮಗಳು ಭಾರತಿ ಸಹ ಪ್ರಸಾಧನ ಕಲೆಯಲ್ಲಿ ಪಳಗಿದ್ದಾರೆ. ಹಿರಿಯ ಮಗ ಕಿರಣ್ ಮಾತ್ರ ಮೇಕಪ್ ಕೆಲಸದಿಂದ ದೂರವಾಗಿದ್ದರೂ ಕಿರಿಯ ಮಗ ಸಂತೋಷ್ ಪ್ರಸಾಧನ ಮಾತ್ರವಲ್ಲ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಂ. ಓದಿದ ಸಂತೋಷ್ ಕಳೆದ 13 ವರ್ಷದಿಂದ ಕೃಷಿ ವಿಶ್ವವಿದ್ಯಾಲಯದಲ್ಲಿ ನಾಲ್ಕೈದು ಸಾವಿರ ಸಂಬಳಕ್ಕೆ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದು ಇಲ್ಲಿವರೆಗೂ ಖಾಯಂ ಆಗುವ ಯಾವ ಲಕ್ಷಣಗಳೂ ಇಲ್ಲ. ಆಗಾಗ ಕೆಲಸದಿಂದ ತೆಗೆದು ಹಾಕಲಾಗುತ್ತಿದ್ದು ಅವರ ಬದುಕೇ ಅತಂತ್ರವಾಗಿದೆ. ತಂದೆಯವರಿಂದ ಬಂದ ಪ್ರಸಾಧನ ವೃತ್ತಿಯನ್ನೇ ಮಗ ಸಂತೋಷ್ ಮುಂದುವರೆಸಿದ್ದಾರಾದರೂ ಅದರಲ್ಲಿ ಕುಟುಂಬ ನಿರ್ವಹಣೆ ಅಸಾಧ್ಯವಾಗಿದೆ. ಪ್ರಸಾಧನಕ್ಕಾಗಿಯೇ ಸಂತೋಷ್ 2007-8ರಲ್ಲಿ ನಾಟಕ ಅಕಾಡೆಮಿಯ ಪ್ರಶಸಿ ದೊರಕಿದ್ದು ಕೆಲವು ನಾಟಕ ಸ್ಪರ್ಧೆಗಳಲ್ಲಿ ಪ್ರಸಾಧನಕ್ಕಾಗಿ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ವಯೋವೃದ್ದ ಮಹಾಲೆಯವರಿಗೆ ಯಾರಾದರೂ ವಯಸ್ಸಿನಲ್ಲಿ ಯಾಕಜ್ಜಾ ಬೆಳಿಗ್ಗೆಯಿಂದಾ ರಾತ್ರಿವರೆಗೂ ಕತ್ತೆ ಹಾಗೆ ದುಡೀತಿಯಾ ಎಂದು ಕೇಳಿದರೆ ನನ್ನ ಮಕ್ಕಳು ಮೊಮ್ಮಕ್ಕಳಿಗಾದರೂ ಒಂದಿಷ್ಟು ದುಡಿಬೇಕಲ್ಲಾ ಎಂದು ನಗುತ್ತಾ ನುಡಿಯುತ್ತಿದ್ದರಂತೆ. ಈಗ ಮನೆಯ ದುಡಿಮೆಯ ಆಧಾರ ಸ್ಥಂಬವೇ ನೆಲಕ್ಕುರುಳಿ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿದೆ. ಸಹಾಯ ಮಾಡಬಹುದಾದ ಸರಕಾರ ಜಾಣಕುರುಡಾಗಿದೆ.
  
ಮಹಾಲೆಯವರು ಕರೆದಾಗ ಹೋಗಿ ಕೆಲವು ಪ್ರಸಾಧನ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಮೇಕಪ್ ಕಲೆಯ ಬಗ್ಗೆ ತರಬೇತಿಯನ್ನೂ ಯುವಜನರಿಗೆ ಕೊಡುತ್ತಿದ್ದರು. ಅವರಿಗೆ ಥೇಯರಿ ರೀತಿಯಲ್ಲಿ ವಿವರಿಸಲು ಬರುತ್ತಿದ್ದಿಲ್ಲವಾದರೂ ಪ್ರಾಯೋಗಿಕವಾಗಿ ಮೇಕಪ್ ಹೇಳಿಕೊಡುತ್ತಿದ್ದರು. ಪ್ರತಿಯೊಂದು ನಾಟಕ ಪ್ರದರ್ಶನ ಆರಂಭವಾಗುವುದಕ್ಕಿಂತ ಮೊದಲು ತಾವು ಮೇಕಪ್ ಮಾಡಿದ ಪ್ರತಿ ನಟರ ಕೈಕುಲುಕಿ ವೇಷದಲ್ಲಿ ಚೆನ್ನಾಗಿ ಕಾಣುತ್ತಿರುವೆ... ಪಾತ್ರವೇ ನೀನಾಗಿರುವೆ...ಚೆನ್ನಾಗಿ ಅಭಿನಯಿಸು... ಎಂದು ನಗುಮೊಗದಿಂದ ಶುಭಹಾರೈಸಿ ನಟರನ್ನು ರಂಗವೇದಿಕೆಗೆ ಕಳುಹಿಸಿಕೊಡುತ್ತಿದ್ದ ಮಮತೆಯ ಪರಿ ಮಹಾಲೆಯವರಿಂದ ಬಣ್ಣ ಹಚ್ಚಿಸಿಕೊಂಡ ಕಲಾವಿದರಿಗೆ ಗೊತ್ತು. ರಂಗನಟರನ್ನು ಕಂಡರೆ ಮಹಾಲೆಯೊಳಗಿದ್ದ ಮಾತೃಹೃದಯ ಮಿಡಿಯುತ್ತಿತ್ತು. ಮಾನವೀಯತೆ ತುಡಿಯುತ್ತಿತ್ತು. ಅವರ ಬದುಕಿನಲ್ಲೇ ಎಂದೂ ಯಾರಿಗೂ ಮಹಾಲೆಯವರು ಎದುರಾಡಿದ ಇಲ್ಲವೇ ಕೋಪದಿಂದ ಮಾತಾಡಿದ ಅಥವಾ ಅಸಹನೆ ಅಸಹಕಾರ ತೋರಿದ ಉದಾಹರಣೆಗಳೇ ಇಲ್ಲ. ರಾಗದ್ವೇಶ ಅಹಮಿಕೆಗಳೇ ಇಲ್ಲದ ವ್ಯಕ್ತಿ ಯಾರಾದರೂ ಇದ್ದರೆ ಅದು ಮಹಾಲೆ ಎಂಬುದು ಅವರ ಒಡನಾಟದಲ್ಲಿರುವ ಎಲ್ಲರಿಗೂ ಗೊತ್ತಿರುವ ಸಂಗತಿಎಲ್ಲರಿಗೂ ಬೇಕಾದ ಸಜ್ಜನ ವ್ಯಕ್ತಿತ್ವವನ್ನು ಬದುಕಿನ ಭಾಗವಾಗಿಸಿಕೊಂಡಿದ್ದ ಮಹಾಲೆಯವರಿಗೆ ಎಪ್ಪತ್ತೈದು ವರ್ಷ ತುಂಬಿದ್ದಾಗ ಧಾರವಾಡದ ರಂಗಕರ್ಮಿಗಳು ಹಾಗೂ ಸಾಹಿತಿಗಳು ಅವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿ ಸಂಭ್ರಮಿಸಿದ್ದರುಒಂದೂವರೆ ಲಕ್ಷದಷ್ಟು ಹಣವನ್ನು ಕೂಡಿಸಿ ಕೊಟ್ಟಿದ್ದರು. ರಂಗಬದ್ಧತೆಯ ಕಾಯಕಯೋಗಿಗೆ ಗೌರವವನ್ನು ತೋರಿಸಿದರು.

ವಿಶೇಷ ಏನೆಂದರೆ ಮಹಾಲೆಯವರು ಇಂತಹ ಯಾವುದೇ ಅಭಿನಂದನೆ ಅಥವಾ ಗೌರವವನ್ನು ಎಂದೂ ಅಪೇಕ್ಷಿಸಿದವರಲ್ಲ. ಎಂದೂ ಪ್ರಶಸ್ತಿ ಪದವಿ ಪುರಸ್ಕಾರಗಳಿಗೆ ಆಸೆ ಪಟ್ಟವರೇ ಅಲ್ಲ. ಆದರೂ ಅವರ ಕಾಯಕನಿಷ್ಠೆ ಅವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ತಂದು ಕೊಟ್ಟಿತು. 1987-88 ರಲ್ಲಿ  ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಕೊಟ್ಟು ಗೌರವಿಸಿತು. 2013-14 ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿಕೊಂಡಿತು2004-05ರಲ್ಲಿ ರಾಷ್ಟ್ರಮಟ್ಟದ ಉತ್ಯುತ್ತಮ ಪ್ರಸಾಧನ ಪ್ರಶಸ್ತಿಯನ್ನು ಆಂದ್ರದ ಮುಖ್ಯಮಂತ್ರಿಗಳಾಗಿದ್ದ ರಾಜಶೇಖರ್ ರೆಡ್ಡಿಯವರು ಪ್ರಧಾನ ಮಾಡಿದ್ದರು. ಅನೇಕ ಸಂಘ ಸಂಸ್ಥೆಗಳು, ರಂಗತಂಡಗಳು ಮಹಾಲೆಯವರ ರಂಗಬದ್ಧತೆಯನ್ನು ಗುರುತಿಸಿ ಅವಾರ್ಡಗಳನ್ನು ಕೊಟ್ಟು ಸನ್ಮಾನಿಸಿ ಗೌರವಿಸಿವೆ. ಇವೆಲ್ಲವೂ ಮಹಾಲೆಯವರಿಗೆ ಬಯಸದೇ ಬಂದ ಭಾಗ್ಯಗಳಾಗಿವೆ. ಆದರೆ... ಯಾವ ಭಾಗ್ಯವೂ ಅವರ ಬಡತನದ ಬದುಕಿನ ಭಾಗ್ಯವನ್ನು ಬೆಳಗಲಿಲ್ಲ. ಸಾಯುವವರೆಗೂ ಅವರು ಪುಟ್ಟ ಹೆಂಚಿನ ಗುಡಿಸಲಿನಲ್ಲಿ ಇರುವುದನ್ನು ತಪ್ಪಿಸಲಿಲ್ಲ.

ಧಾರವಾಡದಲ್ಲಿರುವ ಮಹಿಷಿ ಕಂಪೌಂಡ್ ಎನ್ನುವ ಒಂದು ಪುರಾತನ ಚಾಳ ಇದೆ. ಇದರ ಮಾಲೀಕರು ಚಾಳದ ನಿರ್ವಹಣೆಮಾಡಲು ಮಹಾಲೆಯವರ ಕುಟುಂಬಕ್ಕೆ ಒಂದು ಔಟ್ಹೌಸ್ ಮಾದರಿಯ ಪುಟ್ಟ ಹೆಂಚಿನ ಮನೆಯನ್ನು ಕಂಪೌಂಡಿನೊಳಗೆ ಕೊಟ್ಟಿದ್ದಾರೆ. ಮೊದಲು ತಿಂಗಳಿಗೆ 5 ರೂಪಾಯಿ ಇದ್ದ ಬಾಡಿಗೆ ಈಗ ತಿಂಗಳಿಗೆ 180 ರೂಪಾಯಿ ಇದೆ. ಅದೆಷ್ಟೋ ದಶಕಗಳಿಂದ ಮಹಾಲೆಯವರು ತಮ್ಮ ಹೆಂಡತಿ ಹಾಗೂ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳೊಂದಿಗೆ ಇಲ್ಲಿಯೇ ಸಂಸಾರವನ್ನು ಮಾಡುತ್ತಿದ್ದಾರೆ. ಈಗ ಸೊಸೆಯಂದಿರು ಬಂದು ಮೊಮ್ಮಕ್ಕಳು ಹುಟ್ಟಿದರೂ ಸಹ ಅದೇ ಮಳೆ ಬಂದಾಗ ಸೋರುವ ಗುಡಿಸಲೇ ಮಹಾಲೆ ಕುಟುಂಬಕ್ಕೆ ಆಶ್ರಯತಾಣ. ಅನೇಕರು ಬಾಯಿ ಮಾತಲ್ಲಿ ಮಹಾಲೆಯವರಿಗೊಂದು ಮನೆ ಕಟ್ಟಿಸಿ ಕೊಡಬೇಕು ಎಂದು ಹೇಳುತ್ತಲೇ ಬಂದಿದ್ದಾರೆ.. ಯಾರೂ ಇಲ್ಲಿವರೆಗೂ ಕಟ್ಟಿಸಿಕೊಡಲಿಲ್ಲ. ಜಗಧೀಶ ಶೆಟ್ಟರರಂತಹ ಮಂತ್ರಿಗಳಾಗಿದ್ದವರೂ ಸಹ ನಿವೇಶನ ಮಂಜೂರು ಮಾಡಲಾಗುತ್ತದೆ ಎಂದು ಭರವಸೆ ಕೊಟ್ಟು ಹೋಗಿ ವರ್ಷಗಳೇ ಉರುಳಿವೆ. ರಾಜಕಾರಣಿಗಳ ಮಾತನ್ನು ನಂಬಿ ಮಹಾಲೆಯವರ ಮಕ್ಕಳು ಸರಕಾರಕ್ಕೆ ಅರ್ಜಿ ಗುಜರಾಯಿಸಿಯೂ ಆಗಿದೆ. ಇಲ್ಲಿವರೆಗೂ ಒಂದಿಂಚೂ ಭೂಮಿಯೂ ಮಂಜೂರಾಗಿಲ್ಲ. ಅಗಣಿತ ಸಂಖ್ಯೆಯ ಕಲಾವಿದರುಗಳಿಗೆ ಬಣ್ಣ ಹಚ್ಚಿದ ಮಹಾಲೆ ಸುಣ್ಣ ಬಣ್ಣ ಕಾಣದ ಗುಡಿಸಲಿನಲ್ಲಿ ಬದುಕು ದೂಡುತ್ತಿರುವುದು ಇಡೀ ವ್ಯವಸ್ಥೆಗೆ ಅವಮಾನ. ಅಸಮಾನ ವ್ಯವಸ್ಥೆಯಲ್ಲಿ ಇದನ್ನೆಲ್ಲಾ ಕೇಳುವವರಾರು. ಅದರಲ್ಲೂ ಎಂದೂ ಯಾರಲ್ಲಿಯೂ ಏನನ್ನೂ ಬೇಡದ ಬಾಯಿ ಸತ್ತ ಮುದುಕನ ಸಂಕಟಕ್ಕೆ ಸ್ಪಂದಿಸುವವರಾದರೂ ಯಾರು? ಎಲ್ಲರೂ ನಿವೇಶನ ಕೊಡಬೇಕು, ಮನೆ ಕಟ್ಟಿಸಿಕೊಡಬೇಕು ಎಂದು ಹೇಳುವವರೇ ಇದ್ದಾರೆಯೇ ಹೊರತು ಜವಾಬ್ದಾರಿ ಹೊತ್ತು ಕೊಡಿಸುವವರು, ಕಟ್ಟಿಸಿಕೊಡುವವರು ಯಾರೂ ಇಲ್ಲವೇ ಇಲ್ಲ. ಇದು ಮಹಾಲೆಯಂತಹ ಸಂಕಷ್ಟದಲ್ಲಿರುವ ಅನೇಕರ ಗೋಳೂ ಆಗಿದೆ. ದುರಂತ ಹೇಗಿದೆ ನೋಡಿ. ಮಹಾಲೆಯವರಿಗೆ ದೊರೆತ ಪ್ರಶಸ್ತಿ ಪತ್ರ ಫಲಕಗಳನ್ನು ಇಡಲು ಅವರ ಗುಡಿಸಲಿನಲ್ಲಿ ಜಾಗವೇ ಇಲ್ಲವಾಗಿದೆ. ಬಹುತೇಕ ಮೊಮೆಂಟೋಗಳನ್ನು ಹಳೆಯ ಗೋಣಿ ಚೀಲದಲ್ಲಿ  ಕಟ್ಟಿಡಲಾಗಿದೆ. ಎಪ್ಪತ್ತು ವರ್ಷಗಳ ಕಾಲ ರಂಗಸೇವೆಯನ್ನು ಯಾವುದೇ ನಿರೀಕ್ಷೆ ಇಲ್ಲದೇ ಮಾಡಿದ ರಂಗನಿಷ್ಟ ಕಲಾವಿದನಿಗೆ ಒದಗಿ ಬಂದ ದುಸ್ಥಿತಿಗೆ ಇಡೀ ರಂಗಭೂಮಿ ತಲೆತಗ್ಗಿಸಬೇಕಿದೆ. ೮೪ ವಯೋಮಾನದ ವೃದ್ಧ ಕಲಾವಿದ ದಿನನಿತ್ಯದ ಬದುಕಿಗಾಗಿ ಕ್ಷೌರಿಕವೃತ್ತಿ ಮಾಡುತ್ತಾ ಜೀವನ ಸಾಗಿಸುವಂತಹ ವ್ಯವಸ್ಥೆಯನ್ನು ಹೊಂದಿದ್ದಕ್ಕಾಗಿ  ನಮ್ಮ ಆಳುವ ಸರಕಾರಿಗಳು ಪಶ್ಚಾತ್ತಾಪ ಪಡಬೇಕಿದೆ. ತಳಸಮುದಾಯದ ಪ್ರತಿಭಾನ್ವಿತ ಕಾಯಕಯೋಗಿಯ ಪರಿಕರಗಳು ಹಾಗೂ ಪ್ರಶಸ್ತಿಗಳನ್ನೆಲ್ಲಾ ಸಂಗ್ರಹಿಸಿ ಮುಂದಿನ ತಲೆಮಾರಿಗೆ ತಲುಪಿಸಲು ಸಂಗ್ರಹಾಲಯವೊಂದನ್ನು ಸ್ಥಾಪಿಸುವ ಮೂಲಕ ಸರಕಾರಿ ಇಲಾಖೆಗಳು ತಮ್ಮ ಪಾಪ ಪರಿಹಾರ ಮಾಡಿಕೊಳ್ಳಬಹುದಾಗಿದೆ.

ಮಹಾಲೆ ದಂಪತಿಗಳು ಮೊಮ್ಮಗನೊಂದಿಗೆ

ಯಾರಿಂದಲೂ ಏನನ್ನೂ ಬಯಸದ ಮಹಾಲೆ ಮಾತ್ರ  ಏನೂ ಇಲ್ಲ ಎಂದು ಯಾವತ್ತು ಕೊರಗಿದವರಲ್ಲ. ಅರ್ಜಿ ಹಿಡಿದು ಯಾರ ಮರ್ಜಿಗಾಗಿ ಕಾಯ್ದು ಕಲೆಯನ್ನು ಎಂದೂ ಮಾರಿಕೊಂಡವರಲ್ಲ. ಆದರೆ... ಬದುಕಿನ ಸಂಧ್ಯಾಕಾಲದಲ್ಲೂ ಜೀವನೋತ್ಸಾಹದ ಚಿಲುಮೆಯಾಗಿದ್ದ ಮಹಾಲೆ ಅಜ್ಜನ ಕುಸಿದು ಹೋಗಿದ್ದು ತಮ್ಮ ಮಡದಿಯ ಅಗಲಿಕೆಯಿಂದ. ಆರೇಳು ದಶಕಗಳಿಂದ ಮಹಾಲೆಯವರ ಬದುಕಿನ ಭಾಗವೇ ಆಗಿದ್ದ ಜಯಮ್ಮರವರು ಮೂರು ವರ್ಷಗಳ ಹಿಂದೆ ತೀರಿಕೊಂಡರು. ಅಂದಿನಿಂದಲೂ ಮಹಾಲೆಯವರು ದೈಹಿಕವಾಗಿ ಹಾಗೂ ಮಾನಸಿಕವಾಗಿ  ಕುಗ್ಗಿಹೋದರು. ಮಹಾಲೆಯವರ ದಾಂಪತ್ಯ ಅನುರೂಪದಲ್ಲಿ ಅನುರೂಪವಾಗಿತ್ತು. ಹೊಂದಾಣಿಕೆ ಎನ್ನುವುದು ಅವರ ದಾಂಪತ್ಯದ ಭಾಗವೇ ಆಗಿತ್ತು. ಕಾಡುವ ಕಡು ಬಡತನದಲ್ಲೂ ಅವರಿಬ್ಬರ ಬಾಳು ನೆಮ್ಮದಿಯಾಗಿತ್ತುಹೆಂಡತಿ ಅಂದ್ರೆ ಜಯಾಳ ಹಾಗಿರಬೇಕು ಎಂದು ಮಹಾಲೆಯವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಮಹಾಲೆಯವರ ಪ್ರತಿಯೊಂದು ಕೆಲಸದಲ್ಲೂ ಹೆಗಲಿಗೆ ಹೆಗಲು ಕೊಟ್ಟು ಬಾಳ ಬಂಡಿಯನ್ನು ಎಳೆಯುತ್ತಿದ್ದ ಜಯಮ್ಮನವರು ತನ್ನ ಗಂಡನಿಗೆ ಯಾವುದೇ ಪ್ರಶಸ್ತಿ ಬಂದಾಗಲೂ ಸಂಭ್ರಮಿಸುವ ಪರಿಗೆ ಪತಿಯೇ ಬೆರಗಾಗಿದ್ದುಂಟು. ಗಂಡ ಮೇಕಪ್ ಮಾಡಲು ಹೊರಟರೆ ಅವರ ಮೇಕಪ್ ಕಿಟ್ನ್ನು ಸಿದ್ದಗೊಳಿಸುವುದು, ಅಗತ್ಯ ಬಣ್ಣಗಳನ್ನು ತಯಾರಿಸುವುದು ಜಯಮ್ಮನವರ ಕೆಲಸವಾಗಿತ್ತು. ಅದೆಷ್ಟೋ ಸಲ ಗಂಡನ ಜೊತೆಗೆ ಹೋಗಿ ನಾಟಕದ ಪ್ರಸಾಧನ ಕೆಲಸಗಳಲ್ಲಿ ಸಹಾಯ ಮಾಡಿದ್ದಿದೆ. ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತ ಜಯಮ್ಮನವರು ಪತಿಯ ಕೆಲಸಗಳಿಗೆ ಸಾಧ್ಯವಾದಷ್ಟೂ ಪ್ರೋತ್ಸಾಹವನ್ನು ಕೊಡುತ್ತಲೇ ಬಂದರು. ಪತ್ನಿ ಬದುಕಿರುವವರೆಗೂ ಮಹಾಲೆಯವರು ತಾವು ಸಂಪಾದಿಸಿದ ಎಲ್ಲವನ್ನೂ ತಂದು ಹೆಂಡತಿಯ ಕೈಗೆ ಕೊಟ್ಟು ನಿರಾಳವಾಗಿರುತ್ತಿದ್ದರು. ಉಳಿದೆಲ್ಲವನ್ನೂ ಜಯಮ್ಮನವರೇ ನಿಭಾಯಿಸುತ್ತಿದ್ದರು. ಇಂತಹ ಅನುರೂಪದ ಪತ್ನಿಯ ಅಗಲಿಕೆಯಿಂದ ಅಪಾರವಾಗಿ ನೊಂದ ಗಜಾನನ ಮಹಾಲೆಯವರು ತದನಂತರ ಅಂತರ್ಮುಖಿಯಾದರು. ಮೊದಲಿನ ಜೀವನೋತ್ಸಾಹ ಇರಲೇ ಇಲ್ಲ. ಒಬ್ಬ ಮಗ ಬೇರೆ ಮನೆ ಮಾಡಿದ. ಬಂದ ಸೊಸೆಯಂದಿರು ಹೊಂದಾಣಿಕೆಯಾಗಲಿಲ್ಲ. ಕೌಟುಂಬಿಕ ತಾಪತ್ರಯಗಳನ್ನು ನಿಭಾಯಿಸುತ್ತಿದ್ದ ಪತ್ನಿ ಜೊತೆಯಲ್ಲಿರಲಿಲ್ಲ. ಹೀಗಾಗಿ ಮಹಾಲೆ ಅಜ್ಜ ಆದಷ್ಟೂ ಮನೆಯಿಂದ ಹೊರಗೇ ಇರಲು ಬಯಸತೊಡಗಿದರು. ಏನೇ ಆದರೂ ಕೊಟ್ಟ ಕೊನೆಯ ಉಸಿರಿರುವವರೆಗೂ ತಮ್ಮ ಕಾಯಕವನ್ನು ಬಿಡಲಿಲ್ಲ. ಕೊನೆಗೂ ರಂಗಕೈಂಕರ್ಯದಲ್ಲಿದ್ದಾಗಲೇ ಉಸಿರು ನಿಲ್ಲಿಸಿದರು. ಮಹಾಲೆಯವರ ಸಾವಿನ ಸುದ್ಧಿ ತಿಳಿದವರ ಕಣ್ಣಲ್ಲಿ ನೀರಾದರು.

ಇಡೀ ಉತ್ತರ ಕರ್ನಾಟಕದ ರಂಗಭೂಮಿಯೇ ಮಹಾಲೆಯವರ ಅಗಲಿಕೆಯಿಂದ ತಳಮಳಗೊಂಡಿತು. ಅವರಿಂದ ಬಣ್ಣ ಹಚ್ಚಿಸಿಕೊಂಡು ರಂಗವೇದಿಕೆ ಏರಿದ ಕಲಾವಿದರಿಗೆಲ್ಲಾ ಮಹಾಲೆಯ ಅಗಲಿಕೆ ನೋವನ್ನು ತಂದು ಕೊಟ್ಟಿತುಆದರೆ... ರಂಗಭೂಮಿಯನ್ನು ಪ್ರತಿನಿಧಿಸುವ ಸರಕಾರಿ ಕೃಪಾ ಪೋಷಿತ ಸಂಸ್ಥೆಗಳು ಮೌನವಹಿಸಿದವು. ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶೇಖ ಮಾಸ್ತರರು ಮಹಾಲೆಯವರ ಅಂತಿಮ ನಮನಕ್ಕೆ ಹೋಗಲಿ ಆನಂತರ ಸಾಂತ್ವನ ಹೇಳಲೂ ಬರಲಿಲ್ಲ. ಧಾರವಾಡ ಜಿಲ್ಲಾ ಸಂಸ್ಕೃತಿ ಇಲಾಖೆ ಅಂತಾ ಒಂದಿದೆ.. ಆದರೆ ಒಬ್ಬನೇ ಒಬ್ಬ ಅಧಿಕಾರಿ ಇಲ್ಲಿವರೆಗೂ ಮಹಾಲೆಯವರ ಮನೆಯತ್ತ ತಲೆ ಹಾಕಲಿಲ್ಲ. ಜನಪ್ರತಿ ನಿಧಿ ಶಾಸಕರುಗಳು ಕಲಾವಿದನ ಮನೆಗೆ ಬರಲಿಲ್ಲ. ಹೋಗಲಿ ಅತೀ ಸಂಕಷ್ಟಗಳನ್ನು ಅನುಭವಿಸಿ ರಂಗಭೂಮಿಯನ್ನೇ ಮೆಟ್ಟಲು ಮಾಡಿಕೊಂಡು ಬೆಳೆದು ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಣಿಯಾಗಿರುವ ಉಮಾಶ್ರೀ ಮೇಡಂ ಅಂತ್ಯಕ್ರಿಯೆಗೂ ಬರಲಿಲ್ಲ... ನಂತರ ಸಂತ್ವನ ಹೇಳಲೂ ಬರಲಿಲ್ಲ. ಮಹಾಲೆಯವರು ತೀರಿಕೊಂಡ ಮರುದಿನ ಉಮಾಶ್ರೀಯವರು ಕಿತ್ತೂರಿನ ಉತ್ಸವದಲ್ಲಿ ಭಾಗವಹಿಸಲು ಬಂದಿದ್ದರು. ಅವರು ಮಹಾಲೆಯವರ ಮನೆಗೆ ಬರುತ್ತಾರೆ ಎಂಬುದು ಧಾರವಾಡದ ರಂಗಕರ್ಮಿಗಳ ನಿರೀಕ್ಷೆಯೂ ಆಗಿದ್ತುಆದರೆ.. ಕಿತ್ತೂರಿನಿಂದ ನಲವತ್ತು ಕಿಲೋಮೀಟರ್ ದೂರದಲ್ಲಿರುವ ಧಾರವಾಡಕ್ಕೆ ಬಂದು ದುಃಖದಲ್ಲಿರುವ ಮಹಾಲೆ ಕುಟುಂಬ ಪರಿವಾರವನ್ನು ಸಂತೈಸುವ ಮನಸ್ಸು ಮಾಡಲಿಲ್ಲ. ನಮ್ಮ ಮಂತ್ರಿಣಿ ಉಮಾಶ್ರೀರವರೂ ಸಹ ಇದೇ ಮಹಾಲೆಯವರಿಂದ ಹಿಂದೊಮ್ಮೆ ಬಣ್ಣ ಹಚ್ಚಿಕೊಂಡಿದ್ದರೆಂಬುದೂ ಸಹ ಅವರ ನೆನಪಿಗೆ ಬರಲಿಲ್ಲರಾಜ್ಯ-ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಬದುಕು ಪೂರಾ ರಂಗಭೂಮಿಗಾಗಿಯೇ ಸವೆಸಿದ, ಲಕ್ಷಾಂತರ ನಟರಿಗೆ ಪ್ರಸಾಧನ ಮಾಡಿದ ಹಿರಿಯ ಕಲಾವಿದ ಅಗಲಿದಾಗ ಸ್ಪಂದಿಸಬೇಕೆಂಬ ಕನಿಷ್ಟ ಮಾನವೀಯತೆಯೂ ಇಲ್ಲದ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಹಾಗೂ ಮಂತ್ರಿಗಳು ಮತ್ತು ನಾಟಕ ಅಕಾಡೆಮಿಯ ಅಧ್ಯಕ್ಷರು ಇರುವ ಪ್ರಸ್ತುತ ಸನ್ನಿವೇಶದಲ್ಲಿ ಇಂತಹ ಅಕಾಡೆಮಿಗಳು, ಇಲಾಖೆಗಳು, ಇಲಾಖೆಗೊಬ್ಬ ಮಂತ್ರಿಗಳು ಬೇಕಾ ಎನ್ನುವುದೇ ಪ್ರಶ್ನಾರ್ಹವೆನಿಸುತ್ತದೆ. ಚಿತ್ರನಟ ಶಿವರಾಜಕುಮಾರರವರು ಇತ್ತೀಚೆಗೆ ಸುಸ್ತಾಗಿ ಆಸ್ಪತ್ರೆಗೆ ಎಡ್ಮಿಟ್ ಆಗಿದ್ದಾಗ ಮುಖ್ಯಮಂತ್ರಿಯಿಂದ ಹಿಡಿದು ಇಡೀ  ಆಡಳಿತಾಂಗವೇ ಆಸ್ಪತ್ರೆಗೆ ಆತಂಕದಿಂದ ಓಡಿ ಹೋಗಿತ್ತು. ಆದರೆ... ಸುದೀರ್ಘ ಕಾಲ ರಂಗಭೂಮಿಯಲ್ಲಿ ಬದ್ಧತೆಯಿಂದ ದುಡಿದು ಬದುಕನ್ನೇ ಸವೆಸಿದ ಗಜಾನನ ಮಹಾಲೆಯಂತಹ ಕಾಯಕಯೋಗಿ ಮರಣ ಹೊಂದಿದಾಗ ಸರಕಾರಿ ವ್ಯವಸ್ಥೆ ಕನಿಷ್ಟ ಸ್ಪಂದನೆಯನ್ನು ತೋರಿಸಲು ಅಸಾಧ್ಯವೆನ್ನುವುದಾದಾಗ ಆಳುವ ವ್ಯವಸ್ಥೆ ಯಾರ ಪರವಾಗಿದೆ ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ. ಕಲಾವಿದರಲ್ಲಿ ತಾರತಮ್ಯ ಮಾಡುವ ಇಂತಹ ಅಸಮಾನ ವ್ಯವಸ್ಥೆಯ ವ್ಯವಹಾರಿಕ ಮನೋಭಾವ ಜನರ ಕಣ್ಣಲ್ಲಿ ಬೆತ್ತಲಾಗುತ್ತದೆ.

ಆದರೆ.. ಯಾವ ಸರಕಾರ ಹಾಗೂ ಸರಕಾರಿ ಸಂಸ್ಥೆಗಳು ಮಾಡಲಾಗದ ಕೆಲಸವನ್ನು ಧಾರವಾಡದ ರಂಗಕರ್ಮಿಗಳು ಮಾಡಿದ್ದಾರೆ. ಈಗಾಗಲೇ ಒಂದಿಷ್ಟು ಹಣ ಸಂಗ್ರಹಿಸಿ ಬ್ಯಾಂಕಿನಲ್ಲಿ ಇಟ್ಟು ಬರುವ ಬಡ್ಡಿಯಲ್ಲಿ  ಗಜಾನನ ಮಹಾಲೆ ಹೆಸರಲ್ಲಿ ದತ್ತಿ ನಿಧಿಯೊಂದನ್ನು ಸ್ಥಾಪಿಸಿ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಾರ್ಷಿಕ ರಂಗಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಇನ್ನೊಂದಿಷ್ಟು ಹಣವನ್ನು ಸಂಗ್ರಹಿಸಿ ಮಹಾಲೆ ಹೆಸರಲ್ಲಿ ಒಂದು ಟ್ರಸ್ಟ್ ಮಾಡಬೇಕು ಹಾಗೂ ಮಹಾಲೆಯವರ ಹೆಸರಲ್ಲಿ ಪ್ರಸಾಧನ ಕಲಾವಿದರಿಗೆ ಪ್ರತಿ ವರ್ಷ ಪ್ರಶಸ್ತಿಯನ್ನು ಕೊಡಬೇಕು ಎನ್ನುವ ನಿರ್ಣಯವನ್ನು ಮಹಾಲೆಯವರ ಶ್ರದ್ಧಾಂಜಲಿ ಸಭೆಯಲ್ಲಿ ಸೇರಿದ ರಂಗಕರ್ಮಿ ಕಲಾವಿದರುಗಳು ಹಾಗೂ ಸಾಹಿತಿಗಳು ತೆಗೆದುಕೊಂಡಿದ್ದಾರೆ. ಶ್ರದ್ದಾಂಜಲಿ ಸಲ್ಲಿಸಲಾದ ದಿನವೇ ಕೆಲಸಕ್ಕೆ ಮೂವತ್ತು ಸಾವಿರಕ್ಕೂ ಹೆಚ್ಚು ಹಣ ಸಂಗ್ರಹ ಗೊಂಡಿದೆ. ಮಹಾಲೆಯವರಿಂದ ಬಣ್ಣ ಹಚ್ಚಿಸಿಕೊಂಡ ನಟರುಗಳೆಲ್ಲಾ ಗುರುಕಾಣಿಕೆಯ ನೆಪದಲ್ಲಿ ಒಂದಿಷ್ಟು ಹಣವನ್ನು ಟ್ರಸ್ಟಿಗೆ ಕೊಡಬೇಕೆಂದು ಮನವಿ ಮಾಡಿಕೊಳ್ಳಬೇಕಾಗಿದೆ. ಮಹಾಲೆಯವರ ಹೆಸರನ್ನು ಉಳಿಸುವ ಒಂದು ಸಾರ್ಥಕ ಕೆಲಸಕ್ಕೆ ಸಹಾಯ ಮಾಡಲಿಚ್ಚಿಸುವವರು ಶಂಕರ ಹಲಗತ್ತಿ (ಮೊಬೈಲ್ ಸಂಖ್ಯೆ : 9448022950) ಯವರನ್ನು ಸಂಪರ್ಕಿಸಬಹುದಾಗಿದೆ. ಯಾವ ಕೆಲಸವನ್ನು ಸರಕಾರಿ ಕೃಪಾ ಪೋಷಿತ ಇಲಾಖೆಗಳು ಮಾಡಬೇಕಾಗಿತ್ತೋ ಅದನ್ನು ಮಾಡಲು ಅವು ಅಸಮರ್ಥರಾದಾಗ ಜನರೇ ಕೆಲಸಕ್ಕೆ ಮುಂದಾಗುವುದು ಅನೇಕ ಸಂದರ್ಭದಲ್ಲಿ ಸಾಬೀತಾಗಿದೆ. ಅದೇ ರೀತಿ ಈಗ ಮಹಾಲೆಯವರ ಹೆಸರನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಹಾಗೂ ಅವರ ನಂತರವೂ ಅವರ ಹೆಸರಲ್ಲಿ ರಂಗಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಮಾಡುವಲ್ಲಿ ರಂಗಕರ್ಮಿ ಕಲಾವಿದರುಗಳು ಶ್ರಮಿಸಬೇಕಿದೆ. ಏನೇ ಆಗಲಿ ಗಜಾನನ ಮಹಾಲೆಯವರಂತಹ ಅಪರೂಪದ ನಿಸ್ವಾರ್ಥಿ ರಂಗಕಾಯಕಯೋಗಿ ಮುಂದಿನ ಜನಾಂಗಕ್ಕೆ ಆದರ್ಶವಾಗಬೇಕಿದೆ. ಮಹಾಲೆಯಂತಹ ರಂಗಸಂತನ ಸಂತತಿ ಸಾವಿರವಾಗಲಿ. ಮಹಾಲೆಯವರ ಹೆಸರು ಚಿರಾಯುವಾಗಲಿ ಎಂದು ಪತ್ರಿಕೆ ಆಶಿಸುತ್ತಾ ಹಿರಿಯ ರಂಗಚೇತನಕ್ಕೆ ಭಾವಪೂರ್ಣ ರಂಗನಮನಗಳನ್ನು ಸಲ್ಲಿಸುತ್ತದೆ

                                  -ಶಶಿಕಾಂತ ಯಡಹಳ್ಳಿ                  
          







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ