ಗುರುವಾರ, ಅಕ್ಟೋಬರ್ 29, 2015

ದಾಕ್ಷಾಯಿಣಿ ಭಟ್ ರವರಿಗೆ ಉಸ್ತಾದ್ ಭಿಸ್ಮಿಲ್ಲಾಖಾನ್ ಯುವ ಪುರಸ್ಕಾರ :

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಪ್ರಕಟ :
ದಾಕ್ಷಾಯಿಣಿ ಭಟ್ರಿಗೆ ಪ್ರಶಸ್ತಿ  ಕಿರೀಟ :





ಆಧುನಿಕ ಕನ್ನಡ ರಂಗಭೂಮಿಗೆ ಸಂತಸದ ಸುದ್ದಿಕೇಂದ್ರ ಸಂಗೀತ ನಾಟಕ ಅಕಾಡೆಮಿಯು 2013-14 ರ ಸಾಲಿನ ಉಸ್ತಾದ್ ಭಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಶಸ್ತಿಯನ್ನು  ಯುವ ರಂಗಕರ್ಮಿ ದಾಕ್ಷಾಯಿಣಿ ಭಟ್ರವರಿಗೆ ರಂಗನಿರ್ದೇಶನಕ್ಕಾಗಿ ನೀಡಲಾಗುವುದೆಂದು ಪ್ರಕಟಿಸಿದೆ. ಕರ್ನಾಟಕದ ಆಧುನಿಕ ರಂಗಭೂಮಿಯಲ್ಲಿ ರಂಗನಿರ್ದೇಶನವನ್ನು ವೃತ್ತಿಯಾಗಿ ತೆಗೆದುಕೊಂಡ ಮಹಿಳೆಯರು ತುಂಬಾ ಅಪರೂಪ. ಅಂತವರಲ್ಲಿ ದಾಕ್ಷಾಯಿಣಿ ಪ್ರಮುಖರಾದವರು. ರಂಗಭೂಮಿಯನ್ನೇ ಬದುಕಾಗಿಸಿಕೊಂಡು ನಾಟಕವನ್ನು ಉಸಿರಾಗಿಕೊಂಡಿರುವ ದಾಕ್ಷಾಯಿಣಿಯವರ ಪರಿಶ್ರಮ ಹಾಗೂ ಬದ್ದತೆಯನ್ನು ಗುರಿತಿಸಿ ಡೆಲ್ಲಿಯಲ್ಲಿರುವ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಪುರಸ್ಕರಿಸಲು ನಿರ್ಧರಿಸಿದ್ದು ಕನ್ನಡ ರಂಗಭೂಮಿಗೆ ಹೆಮ್ಮೆಯ ವಿಷಯ.

ಕನ್ನಡ ರಂಗಭೂಮಿಯಲ್ಲಿ ನಟಿಯರಾಗಿ ಹೆಸರು ಮಾಡಿದವರಿದ್ದಾರೆ, ನಿರ್ದೇಶಕಿಯಾಗಿ ನಾಟಕ ಕಟ್ಟಿದವರಿದ್ದಾರೆ, ವಸ್ತ್ರಾಲಂಕಾರ ಹಾಗೂ ವರ್ಣಾಲಂಕಾರಗಳಲ್ಲಿ ಕೆಲಸ ಮಾಡಿದ ಮಹಿಳೆಯರೂ ಕೆಲವರಿದ್ದಾರೆ. ಆದರೆ... ನಟಿಯಾಗಿ, ನಿರ್ದೇಶಕಿಯಾಗಿ, ನೃತ್ಯ ನಿರ್ದೇಶಕಿಯಾಗಿ, ರಂಗಸಜ್ಜಿಕೆ ವಿನ್ಯಾಸಕಿಯಾಗಿ, ವಸ್ತ್ರವಿನ್ಯಾಸಕಿಯಾಗಿ, ರಂಗಶಿಕ್ಷಕಿಯಾಗಿ, ಪ್ರಸಾದನ ಕಲಾವಿದೆಯಾಗಿ ಅಗತ್ಯ ಬಿದ್ದಾಗ ಬೆಳಕಿನ ವಿನ್ಯಾಸಕಿಯಾಗಿ.. ಹೀಗೆ ರಂಗಭೂಮಿಯಲ್ಲಿ ಆಲ್ರೌಂಡರ್ ಆಗಿ ತೊಡಗಿಸಿಕೊಂಡ ಮಹಿಳೆಯೆಂದರೆ ದಾಕ್ಷಾಯಿಣಿಯವರು ಮಾತ್ರ. 39 ವಯೋಮಾನದ ಚಿಕ್ಕ ವಯಸ್ಸಿನಲ್ಲಿ ದೊಡ್ಡದಾದ ಸಾಧನೆಯನ್ನು ಮಾಡಿದ ದಾಕ್ಷಾಯಿಣಿ ಭಟ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಯೋಗ್ಯವಾದ ಶ್ರಮಜೀವಿ ರಂಗಪ್ರತಿಭೆಯನ್ನು ಆಯ್ಕೆ ಮಾಡಿದ್ದಕ್ಕಾಗಿ ಪ್ರಶಸ್ತಿಗೂ ಒಂದು ಗೌರವ ಸಿಕ್ಕಂತಾಗಿದೆ.
 
'ಅಹಲ್ಯ' ನಾಟಕದಲ್ಲಿ ದಾಕ್ಷಾಯಿಣಿ ಭಟ್ ಅಹಲ್ಯೆಯಾಗಿ

ದಾಕ್ಷಾಯಿಣಿಯವರು ಹುಟ್ಟಿದ್ದು ಡಿಗ್ರಿ ಮುಗಿಸಿದ್ದು ಶಿಕಾರಿಪುರ, ಓದಿದ್ದು ಆಗುಂಬೆ ಮತ್ತು ಮೇಗರವಳ್ಳಿ. ನಾಟಕದ ಮೇಲಿನ ಆಸಕ್ತಿಯಿಂದ 1998-99 ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಡಿಪ್ಲೋಮಾ ಮಾಡಲು ಹೋದ ದಾಕ್ಷಾಯಿಣಿ ರಂಗಭೂಮಿಯತ್ತ ಆಕರ್ಷಿತರಾಗಿ ಮುಂದೆ ರಂಗಭೂಮಿಯನ್ನೇ ಬದುಕಾಗಿಸಿಕೊಂಡರು. ನೀನಾಸಂ ನಲ್ಲಿದ್ದಾಗ ಪರಿಚಿತರಾಗಿ ಸ್ನೇಹಿತರಾಗಿದ್ದ ಶ್ರೀಧರ್ ಹೆಗ್ಗೋಡರವರನ್ನು ವಿವಾಹವಾದರು. ಪತಿ ಶ್ರೀಧರ್ ಅಪಘಾತವೊಂದರಲ್ಲಿ ದೇಹದ ಮೇಲೆ ಸ್ವಾದೀನ ಕಳೆದುಕೊಂಡಾಗ ಅಧೀರರಾದರೂ ದೃತಿಗೆಡದ ದಾಕ್ಷಾಯಿಣಿ ತಮ್ಮ ರಂಗಕಾಯಕವನ್ನು ಒಂಟಿಯಾಗಿಯೇ ಮುನ್ನೆಡೆಸಿಕೊಂಡು ಬಂದಿದ್ದು ಅವರ ರಂಗಬದ್ಧತೆ ಮತ್ತು ರಂಗಪ್ರೀತಿಗೆ ಸಾಕ್ಷಿಯಾಗಿದೆ. ತದನಂತರ ಬೆಂಗಳೂರಿನ ರಂಗತಂಡಗಳಲ್ಲಿ ನಟಿಸುತ್ತಾ... ಬೇರೆ ಊರುಗಳಿಂದ ಆಹ್ವಾನ ಬಂದಾಗ ಅಲ್ಲಿ ಹೋಗಿ ರಂಗಕಾರ್ಯಾಗಾರಗಳನ್ನು ನಡೆಸುತ್ತಾ ರಂಗವೃತ್ತಿಯನ್ನು ಆರ್ಥಿಕ-ಸಾಮಾಜಿಕ ಸಂಕಷ್ಟದಲ್ಲೇ ಆರಂಭಿಸಿದ ದಾಕ್ಷಾಯಿಣಿಯವರೊಳಗಿನ ಓದಬೇಕೆಂಬ ಛಲ ಮಾತ್ರ ಕಡಿಮೆಯಾಗಲಿಲ್ಲ. ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ನಾಟಕದಲ್ಲೇ ಮಾಸ್ಟರ್ ಡಿಗ್ರಿ ಮಾಡಿದರು. ತದನಂತರ ಈಗ ಗಂಗೂಭಾಯಿ ಹಾನಗಲ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಓದುವ ಪ್ರಯತ್ನವನ್ನೂ  ಮಾಡುತ್ತಿದ್ದಾರೆ.

ಸುಮಾರು ಮೂವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿರುವ ದಾಕ್ಷಾಯಿಣಿಯವರು ಎಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅದರಲ್ಲಿ ಇಪ್ಪತ್ತು ಮಕ್ಕಳ ನಾಟಕಗಳಾದರೆ ಮಿಕ್ಕ ಐವತ್ತು ದೊಡ್ಡವರ ನಾಟಕಗಳು. ಬೆಂಗಳೂರು, ದಾವಣಗೆರೆ, ಧಾರವಾಡ, ಕುದುರೆಮುಖ, ಸಿರಿಗೆರೆ, ಸಾಣೆಹಳ್ಳಿ, ಹೆಚ್ಡಿ ಕೋಟೆ... ಹೀಗೆ ನಾಡಿನಾದ್ಯಂತ ಇಲ್ಲಿವರೆಗೂ ಐವತ್ತಕ್ಕೂ ಹೆಚ್ಚು ರಂಗಶಿಬಿರಗಳನ್ನು ನಿರ್ದೇಶಿಸಿ ಸಾವಿರಾರು ರಂಗಾಸಕ್ತರಿಗೆ ಅಭಿನಯವನ್ನು ಕಲಿಸಿಕೊಟ್ಟು ನಾಟಕಗಳನ್ನು ಮಾಡಿಸಿದ್ದಾರೆ. ಪ್ರತಿ ವರ್ಷ ಬೇಸಿಗೆಯಲ್ಲಿ ಯಾವುದಾದರೂ ಒಂದು ಊರಲ್ಲಿ ಮಕ್ಕಳ ಬೇಸಿಗೆ ತರಬೇತಿ ಶಿಬಿರದ ನಿರ್ದೇಶಕಿಯಾಗಿ ಆಹ್ವಾನಿತರಾಗಿ ಹೋಗುವ ಭಟ್ರವರು ಮಕ್ಕಳಿಗಾಗಿ ಒಂದು ತಿಂಗಳ ಥಯಿಟರ್ ವರ್ಕಶಾಪ್ ಮಾಡಿ ನಂತರ ಮಕ್ಕಳ ನಾಟಕವನ್ನು ನಿರ್ದೇಶಿಸುವುದನ್ನು ಕಾಯಕವನ್ನಾಗಿಸಿಕೊಂಡು ಮಕ್ಕಳ ರಂಗಭೂಮಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟಿದ್ದಾರೆ. ಪಂಚರಶಾಲೆ, ಹಕ್ಕಿಹಾಡು, ಅದಲು ಬದಲು ಕಂಚಿ ಕದಲು, ಮಲ್ಲಿಗೆ ರಾಜಕುಮಾರಿ, ಕತ್ತೆಬಾಲ ಕುದುರೆ ಜುಟ್ಟು, ಮಾಯವಾದ ಮೊಲ.... ಹೀಗೆ ಕೆಲವಾರು ನಾಟಕಗಳು ಬೇಸಿಗೆ ಶಿಬಿರಗಳಲ್ಲಿ ದಾಕ್ಷಾಯಿಣಿಯವರಿಂದ ನಿರ್ದೇಶಿಸಲ್ಪಟ್ಟಿವೆ. ಬಾಲಭವನದ ಕೋರಿಕೆಯ ಮೇರೆಗೆ ಮೂರು ವರ್ಷಗಳ ಕಾಲ ಬೇಸಿಗೆ ಮಕ್ಕಳ ರಂಗಕಾರ್ಯಾಗಾರಕ್ಕೆ ನಿರ್ದೇಶಕಿಯಾಗಿ ಹೋದ ದಾಕ್ಷಾಯಿಣಿಯವರು ಅಜ್ಜಿಕತೆ, ಹಕ್ಕಿಹಾಡು ಹಾಗೂ ಕತ್ತೆಬಾಲ ಕುದುರೆ ಜುಟ್ಟು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಚಿರಂಜೀವಿ  ಕಲಾಸಂಘದ ಮಕ್ಕಳಿಗೆ ಒಳ್ಳೇದು ಒಳ್ಳೇದು ನಾಟಕ ಹಾಗೂ ಕಾವೇರಿ ನಗರದ ಕೊಳಗೇರಿ ಮಕ್ಕಳಿಗೆ ಮನೆ ಆಳು ಮಗ ನಾಟಕ ಮತ್ತು ಕುರುಡು ಮಕ್ಕಳ ಶಾಲೆಗೆ ಮಾಯವಾದ ಮೊಲ.... ನಾಟಕಗಳನ್ನು ಕಲಿಸಿಕೊಟ್ಟು ನಿರ್ದೇಶಿಸಿ ಪ್ರದರ್ಶಿಸಿದ್ದಾರೆ.


2006ರಲ್ಲಿ ತಮ್ಮದೇ ಆದ ದೃಶ್ಯ ರಂಗತಂಡವನ್ನು ಹುಟ್ಟುಹಾಕಿ ಕಾಲೇಜಿನ ಯುವಕ ಯುವತಿಯರಿಗೆ ನಟನೆ ಕುರಿತು ತರಬೇತಿಯನ್ನು ಕೊಡುತ್ತಾ ನಿರಂತರವಾಗಿ ನಾಟಕಗಳನ್ನು ನಿರ್ದೇಶಿಸುತ್ತಿದ್ದಾರೆ. ದೇವರ ಹೆಸರಲ್ಲಿ, ಗಾಜಿಪುರದ ಹಜಾಮ, ಪ್ಲೊಟೋಸ್, ಸಪ್ನ ವಾಸವದತ್ತ, ಮರುಗಡಲು, ಕೆಂಪು ಕಣಗಿಲೆ, ಪೇಯಿಂಗ್ ಗೆಸ್ಟ್, ಕಂಬಳಿ ಸೇವೆ, ಚಾಳೇಶ, ಪೋಲಿಕಿಟ್ಟಿ, ಅಗ್ನಿವರ್ಣ, ಟೆಲ್ವ್ತ್ ನೈಟ್, ನಾನು ಮತ್ತು ಹೆಣ್ಣು, ಬಸ್ತಿ, ಕಾಮಧೇನು, ಸಮಾನತೆ... ಹೀಗೆ ಹದಿನೈದಕ್ಕೂ ಹೆಚ್ಚು ನಾಟಕಗಳನ್ನು ತಮ್ಮ ತಂಡಕ್ಕೆ ಕಳೆದೊಂದು ದಶಕದಲ್ಲಿ ನಿರ್ದೇಶಿಸಿ ರಂಗನಿರ್ದೇಶನದಲ್ಲಿ ವೃತಿಪರತೆಯನ್ನು ತೋರಿಸಿ ರಂಗಾಸಕ್ತರ ಗಮನ ಸೆಳೆದಿದ್ದಾರೆವಾರ್ತಾ ಮತ್ತು ಪ್ರಸಾರ ಇಲಾಖೆಗೆ ಜಾತಿಮಾಡಬೇಡ್ರಣ್ಣಾ ಎನ್ನುವ ಬೀದಿನಾಟಕವನ್ನೂ ನಿರ್ದೇಶಿಸಿ ಹಳ್ಳಿ ಹಳ್ಳಿಗಳಲ್ಲಿ ಪ್ರದರ್ಶನಗಳನ್ನು ಕೊಟ್ಟಿದ್ದಾರೆ.


ರಂಗಭೂಮಿಯನ್ನು ಅದರಲ್ಲೂ ಹವ್ಯಾಸಿ ರಂಗಭೂಮಿಯನ್ನು ನಂಬಿ ಅದನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಲು ಗುಂಡಿಗೆ ಗಟ್ಟಿ ಇರಬೇಕು. ಪುರಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯಾಗಿ ದಿಟ್ಟತನದಿಂದ ಅಡೆತಡೆಗಳನ್ನು ಛಲದಿಂದ ಎದುರಿಸಿ ರಂಗಭೂಮಿಯನ್ನು ವೃತ್ತಿಯಾಗಿ ತೆಗೆದುಕೊಂಡು ನಾಟಕವನ್ನೇ ಬದುಕಾಗಿಸಿಕೊಂಡ ದಾಕ್ಷಾಯಿಣಿಯವರಿಗೆ ಇಂತಹ ಅದೆಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟರೂ ಕಡಿಮೆಯೇ. ಇಂತಹ ಕ್ರಿಯಾಶೀಲ ರಂಗಕರ್ಮಿಗಳನ್ನು ಗುರುತಿಸಿ  ಪ್ರಶಸ್ತಿ ಗೌರವ ಕೊಟ್ಟರೆ ಇನ್ನೂ ಹೆಚ್ಚು ತೀವ್ರತೆಯಿಂದ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿದಂತಾಗುತ್ತದೆಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕರ್ನಾಟಕ ಸಂಸ್ಕೃತಿ ಇಲಾಖೆಗಳು ಇಂತಹ ರಂಗಕಾಯಕಜೀವಿ ಮಹಿಳೆಯನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರ ಕೊಟ್ಟು ಗೌರವಿಸಬೇಕಾಗಿತ್ತು ಅದಾಗಲಿಲ್ಲ. ಆದರೆ... ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ನಿಜವಾದ ಮಹಿಳಾ ರಂಗಕಾಯಕ ಜೀವಿಯ ಶ್ರಮ ಹಾಗೂ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ಕೊಟ್ಟು ಪುರಸ್ಕರಿಸುತ್ತಿರುವುದು ಇಡೀ ಕನ್ನಡ ರಂಗಭೂಮಿ ಸಂಭ್ರಮಿಸಬೇಕಾದ ಸಂಗತಿ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾದ ದಾಕ್ಷಾಯಿಣಿ ಭಟ್ರವರಿಗೆ   ಕನ್ನಡ ರಂಗಭೂಮಿಯ  ಪರವಾಗಿ ಅಭಿನಂದನೆಗಳು.

                                            ಶಶಿಕಾಂತ ಯಡಹಳ್ಳಿ


ಮಕ್ಕಳ ನಾಟಕದ ವರ್ಕಶಾಪ್


ಅಗ್ನಿವರ್ಣ ನಾಟಕದ ದೃಶ್ಯ


ಕುಣಿಕುಣಿ ನವಿಲೆ ಮಕ್ಕಳ ನಾಟಕ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ