ಕಪ್ಪು ಪಟ್ಟಿಗೆ ವಂಚಕ ಸಂಸ್ಥೆಗಳು : ದಿಗಿಲುಗೊಂಡ ಸಾಂಸ್ಕೃತಿಕ ದಲ್ಲಾಳಿಗಳು
ಸರಕಾರಿ ಇಲಾಖೆಗಳು ಎಂದರೆ ಮೇಯುವ ತಾಕತ್ತಿರುವವರಿಗೆ ಹುಲುಸಾದ ಹುಲ್ಲುಗಾವಲು ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಹೊರತಲ್ಲ. ಸುಮಾರು ಮುನ್ನೂರು ಕೋಟಿ ರೂಪಾಯಿ ವಾರ್ಷಿಕ ಬಜೆಟ್ ಇರುವ ಸಂಸ್ಕೃತಿ ಇಲಾಖೆಯು ಮೊದಲಿನಿಂದಲೂ ಸಾಂಸ್ಕೃತಿಕ ದಲ್ಲಾಳಿಗಳೆಂಬ ಹೆಗ್ಗಣಗಳ ಆಡಂಬೋಲವಾಗಿದೆ. ಹೊರಗಿನ ಹೆಗ್ಗಣಗಳ ಜೊತೆಗೆ ಒಳಗಿನ ಹೆಗ್ಗಣಗಳೂ ಸೇರಿ ಇಲಾಖೆಯ ಹಣ ಲೂಟಿಗೊಳ್ಳುತ್ತಲೇ ಬಂದಿದೆ. ಇಲಾಖೆಯ ಮೇಲೆ ಹಲವಾರು ಲೋಕಾಯುಕ್ತ ಕೇಸುಗಳಾಗಿವೆ, ಕಛೇರಿಗೆ ಲೆಕ್ಕ ಪರಿಶೀಲನಾಧಿಕಾರಿಗಳು ನುಗ್ಗಿಯಾಗಿದೆ...
ಏನೇ ಆದರೂ ಲೂಟಿ ಮಾತ್ರ ನಿರಂತರವಾಗಿದೆ. ಬೇಲಿಯೇ ಎದ್ದು ಕಳ್ಳರನ್ನು ಒಳಗೆ ಬಿಟ್ಟುಕೊಂಡು ಹೊಲ ಮೇಯುವುದು ಇಲಾಖೆಯೊಳಗಿನ ಅಘೋಷಿತ ಚಟುವಟಿಕೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ದಯಾನಂದರವರು ಬರುವವರೆಗೂ ಈ ಲೂಟಿ ಸಾಮ್ರಾಜ್ಯ ಸರಕಾರಿ ಹಾಗೂ ಸಾಂಸ್ಕೃತಿಕ ದಲ್ಲಾಳಿಗಳಿಂದ ನಿರಾತಂಕವಾಗಿ ನಡೆಯುತ್ತಲೇ ಬಂದಿತ್ತು. ಪರ್ಸೆಂಟೇಜ್ಗಳ ವ್ಯವಹಾರದಲ್ಲಿ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಚಪ್ರಾಸಿಯವರೆಗೂ ಯೋಗ್ಯತೆಗೆ ತಕ್ಕಂತೆ ಪಾಲುಗಾರಿಕೆ ದೊರೆಯುತ್ತಿತ್ತು.
ಆದರೆ... ಯಾವಾಗ ದಯಾನಂದ್ ಬಂದು ಇಲಾಖೆಯ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರೋ, ಕೊಬ್ಬಿ ಬಲಿತು ಹೋಗಿದ್ದ ದಲ್ಲಾಳಿ ಹೆಗ್ಗಣಗಳ ನಿಯಂತ್ರಣಕ್ಕೆ ಸಾವಕಾಶವಾಗಿ ಬಲೆಬೀಸತೊಡಗಿದರೋ ಆಗ ನಿಧಾನವಾಗಿ ಸಂಸ್ಕೃತಿ ಇಲಾಖೆಯಲ್ಲಿ ತಳಮಳ ಶುರುವಾಯಿತು. ಯಾವಾಗ ದಯಾನಂದರವರ ಹೆಗ್ಗಣ ನಿಯಂತ್ರಣ ಅಭಿಯಾನಕ್ಕೆ ಕನ್ನಡ ಮುತ್ತು ಸಂಸ್ಕೃತಿ ಇಲಾಖೆಯ ಮಂತ್ರಿಣಿ ಉಮಾಶ್ರೀಯವರ ಸಹಕಾರವೂ ದೊರೆಯಿತೋ ಆಗ ಸಂಸ್ಕೃತಿ ಇಲಾಖೆಯ ದಲ್ಲಾಳಿ ವರ್ಗದ ಬುಡಕ್ಕೆ ಬಿಸಿನೀರು ಕಾಯತೊಡಗಿತು. ಮೊಟ್ಟಮೊದಲು ಅತೀ ಹೆಚ್ಚು ಹಣ ಅಪಾತ್ರರಿಗೆ ದಕ್ಕುತ್ತಿರುವುದು ಹಾಗೂ ಅನಗತ್ಯವಾಗಿ ಸೋರಿಹೊಗುತ್ತಿರುವುದು ಇಲಾಖೆಯ ‘ಕ್ರಿಯಾಯೋಜನೆ’ ಕಾರ್ಯಕ್ರಮದಲ್ಲಿ ಎನ್ನುವುದನ್ನು ಅರಿತ ದಯಾನಂದರವರು ಉಮಾಶ್ರೀಯವರಿಗೆ ವರದಿ ಸಲ್ಲಿಸಿದರು. ಹಲವಾರು ವರ್ಷಗಳಿಂದ ಪ್ರಸಾದ ತಿನ್ನಿಸಿದವರಿಗೆಲ್ಲಾ ಬೇಕಾದಷ್ಟು ವರಕೊಡುತ್ತಿದ್ದ ಇಲಾಖೆಯೊಳಗಿನ ಪೂಜಾರಿಗಳ ನಿಯಮಿತ ಪರ್ಸೆಂಟೇಜ್ ಆದಾಯವನ್ನು ನಿಯಂತ್ರಿಸಲು ‘ಕ್ರಿಯಾಯೋಜನೆ’ ರದ್ದು ಪಡಿಸದೇ ಬೇರೆ ದಾರಿಯೇ ಇರಲಿಲ್ಲ. ಉಮಾಶ್ರೀಯವರ ಬೆಂಬಲದೊಂದಿಗೆ ಯಾವಾಗ ‘ಕ್ರಿಯಾಯೋಜನೆ’ ಎನ್ನುವ ಹುಲುಸಾದ ಹುಲ್ಲುಗಾವಲಿನ ಯೋಜನೆಯನ್ನು ರದ್ದುಮಾಡಲಾಯಿತು. ಅದರ ಬದಲಾಗಿ ಪ್ರತಿ ವರ್ಷ ಆಯಾ ಕ್ರೇತ್ರದ ಕುರಿತು ಅನುಭವ ಇರುವವರ ಸಮೀತಿಯನ್ನು ರಚಿಸಿ ನಿಜವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳನ್ನು ಎ, ಬಿ, ಸಿ ವಿಭಾಗಗಳಾಗಿ ಗುರುತಿಸಿ ಅನುದಾನವನ್ನು ಕೊಡುವ ಯೋಜನೆಯನ್ನು ಜಾರಿಗೆ ತಂದು ಇಲಾಖೆಯ ಹೊರಗಿರುವ ಹೆಗ್ಗಣಗಳಿಗೆ ಒಳಬರುವ ದಾರಿಯನ್ನು ಬಂದ್ ಮಾಡಲಾಯಿತು. ತದನಂತರ ಇಡೀ ಇಲಾಖೆಯನ್ನು ಕಾಗದರಹಿತಗೊಳಿಸಿ ಗಣಕೀಕರಣ ಮಾಡುವುದರ ಮೂಲಕ ಇಲಾಖೆಯ ಒಳಗಡೆ ಇರುವ ಹೆಗ್ಗಣಗಳ ಕೈಬಾಯಿ ಕಟ್ಟುವ ಪ್ರಯತ್ನ ಮಾಡಲಾಯಿತು.
ಕ.ಸಂ ಮಂತ್ರಿ ಉಮಾರ್ಶೀಯವರು |
ಆಸೆಬುರುಕ ಭ್ರಷ್ಟ ನೌಕರರಿಗೆ ಅಮೇದ್ಯ ತಿನ್ನಿಸಿ ಅನುದಾನವನ್ನು ಗಿಟ್ಟಿಸಿ, ಉದ್ದೇಶಿತ ಕಾರ್ಯಕ್ರಮಗಳನ್ನು ಮಾಡದೇ ನಕಲಿ ಪೊಟೋ ಹಾಗೂ ರಿಪೋರ್ಟ ನೀಡಿ ಲಕ್ಷಾಂತರ ಹಣವನ್ನು ಪಡೆಯುತ್ತಿದ್ದ ಕೆಲವಾರು ಸಾಂಸ್ಕೃತಿಕ ದಲ್ಲಾಳಿಗಳ ಬುಡಕ್ಕೆ ಬಾಂಬು ಸಿಡಿದಂತಾಯಿತು. ಅವರ ಅಕ್ರಮ ಆದಾಯದ ಮೂಲವೊಂದು ನಿಂತುಹೋಯಿತು ಎಂದು ಸಿಡಿದೆದ್ದರು. ಗುಂಪು ಕಟ್ಟಿಕೊಂಡು ಬಂದ ದಲ್ಲಾಳಿ ಪಡೆ ಉಮಾಶ್ರೀಯವರನ್ನು ಕಲಾಕ್ಷೇತ್ರದೊಳಗೇ ಘೇರಾವ್ ಹಾಕಿದರು. ಅನ್ಯಾಯ ಆಗಿದೆ ಎಂದು ಬೊಬ್ಬಿರಿದರು. ದಲ್ಲಾಳಿ ಗುಂಪಿನ ಆಟೋಟೋಪಕ್ಕೆ ಮಣಿದ ಉಮಾಶ್ರೀಯವರು ಎಲ್ಲವನ್ನೂ ಇನ್ನೊಮ್ಮೆ ಪರಿಷ್ಕರಿಸುವುದಾಗಿ ಮಾತುಕೊಟ್ಟರು. ಆದರೆ...
ದಯಾನಂದರವರು ತಮ್ಮ ಹೆಗ್ಗಣ ನಿಯಂತ್ರಣ ಅಭಿಯಾನವನ್ನು ಮುಂದುವರೆಸಿದರು. ಇದರಿಂದಾಗಿ ಎಲ್ಲಾ ಕಲಾವಿಭಾಗದ ದಲ್ಲಾಳಿಗಳಿಂದ ವಿಪರೀತ ವಿರೋಧ ಎದುರಾಯಿತು. ರಾಜಕೀಯ ಒತ್ತಡಗಳೂ ಹೆಚ್ಚಾದವು. ಆದರು ಈ ಯಾವ ಒತ್ತಡಕ್ಕೂ ಮಣಿಯದ ದಯಾನಂದರವರು ಸಮಿತಿ ಆಯ್ಕೆ ಮಾಡಿದ ಸಂಸ್ಥೆಗಳಿಗೆ ಮಾತ್ರ ಅನುದಾನವನ್ನು ಮಂಜೂರು ಮಾಡಿತೊಡಗಿದರು. ದಲ್ಲಾಳಿ ವರ್ಗವನ್ನು ಇಲಾಖೆಯಿಂದ ದೂರವಿಡಲು ತಂತ್ರಗಾರಿಕೆಯನ್ನು ಹೆಣೆಯತೊಡಗಿದರು. ಅದರ ಭಾಗವಾಗಿಯೇ ಸಾಮ ಬೇಧ ಹಾಗೂ ದಂಡ ಪ್ರಯೋಗಕ್ಕೆ ಮುಂದಾದರು....
ದಲ್ಲಾಳಿ ಪಡೆ ಅನುದಾನ ಪಡೆಯಲು ಅನುಸರಿಸಿದ ವಾಮಮಾರ್ಗಗಳನ್ನು ಅರಿತುಕೊಂಡು ಅವರನ್ನು ಕಾನೂನಿನ ಬಲೆಯಲ್ಲಿ ಸಿಲುಕಿಸಿ ಹಣಿದು ಹಾಕಲು ಪ್ಲಾನ್ ಸಿದ್ದಗೊಂಡಿತು.
ಕರ್ನಾಟಕದ ಕಲೆ-ಸಂಸ್ಕೃತಿ ಉಳಿಸಿ ಬೆಳೆಸಲು ಸರಕಾರ ಕೊಟ್ಯಾಂತರ ಹಣವನ್ನು ಪ್ರತಿವರ್ಷ ಸಾಂಸ್ಕೃತಿ ಇಲಾಖೆಗೆ ಬಿಡುಗಡೆ ಮಾಡುತ್ತದೆ. ಕಲೆ ಮತ್ತು ಸಂಸ್ಕೃತಿಯ ಹೆಸರಲ್ಲಿ ಸುಲಭದಲ್ಲಿ ಹಣ ಹೊಡೆಯಬಹುದು ಎನ್ನುವುದನ್ನು ಅರಿತುಕೊಂಡಿದ್ದ ಕೆಲವು ಧನದಾಹಿಗಳ ಗುಂಪು ಹಲವಾರು ಸಂಘ ಸಂಸ್ಥೆಗಳನ್ನು ಬೇನಾಮಿಯಾಗಿ ಸಹಕಾರಿ ಸಂಘಗಳ ಕಾನೂನಿನಡಿಯಲ್ಲಿ ನೋಂದಣಿ ಮಾಡಿಸಿದ್ದವು. ನೋಂದಣಿ ಆಗಿ ಮೂರು ವರ್ಷ ಆಗುತ್ತಿದ್ದಂತೆ ಸಂಸ್ಕೃತಿ ಇಲಾಖೆಯಲ್ಲಿ ಈಗಾಗಲೆ ಪಳಗಿದ ಅನುಭವಿ ದಲ್ಲಾಳಿಗಳನ್ನು ಹಿಡಿದುಕೊಂಡು ಅವರ ಮೂಲಕ ಇಲಾಖೆಯ ಅಧಿಕಾರಿಗಳ ವಿಶ್ವಾಸ ಗಿಟ್ಟಿಸಿಕೊಂಡು ಸರಕಾರಿ ಅನುದಾನವನ್ನು ಗಿಟ್ಟಿಸಿಕೊಂಡು ಹಣ ಲೂಟಿಮಾಡುವುದನ್ನು ವರ್ಷಾನುಗಂಟಲೇ ಮುಂದುವರೆಸಿಕೊಂಡೇ ಬಂದಿದ್ದವು. ಕೆಲವರಂತೂ ಬೇನಾಮಿಯಾಗಿ ನಕಲಿ ವಿಳಾಸಗಳನ್ನು ಕೊಟ್ಟು ಎರಡು ಮೂರು ಸಂಸ್ಥೆಗಳನ್ನು ಹೆಂಡತಿ ಮಕ್ಕಳ ಹೆಸರಲ್ಲಿ ನೋಂದಣಿ ಮಾಡಿಸಿ ಇಲಾಖೆಯ ಅನುದಾನಕ್ಕೆ ಕನ್ನ ಹಾಕತೊಡಗಿದರು. ಇಂತಹ ಕೆಲವಾರು ಸಂಸ್ಥೆಗಳಿಗೆ ಯಾವುದೇ ಅಸ್ತಿತ್ವ ಇಲ್ಲದೇ ಕೇವಲ ಲೆಟರ್ಹೆಡ್ಗಳ ಸಂಘಟನೆಗಳಾಗಿದ್ದವು. ಯಾವುದೇ ಕಾರ್ಯಕ್ರಮಗಳನ್ನು ಮಾಡದೇ ಇಲಾಖೆಯ ಅನುದಾನವನ್ನು ದುರ್ಬಳಿಕೆ ಮಾಡಿಕೊಡುವುದನ್ನೇ ಕಾಯಕವಾಗಿಸಿಕೊಂಡಿದ್ದವು. ಇನ್ನು ಕೆಲವು ಸಂಸ್ಥೆಗಳು ನಾಲ್ಕಾರು ಲಕ್ಷ ಹಣ ಪಡೆದು ನಾಮಕಾವಸ್ಥೆಯಾಗಿ ಸಾವಿರಾರು ರೂಪಾಯಿಗಳ ಖರ್ಚುಮಾಡಿ ನಕಲಿ ರಿಪೋರ್ಟ ತಯಾರಿಸಿಕೊಟ್ಟು ಇಲಾಖೆಯ ಅನುದಾನವನ್ನು ಪಡೆಯುವುದನ್ನೇ ರೂಢಿಮಾಡಿಕೊಂಡಿದ್ದವು. ಇದಕ್ಕಾಗಿ ರಾಜಕೀಯ ಪ್ರಭಾವವನ್ನೂ ಬಳಸಿಕೊಂಡು ಸರಕಾರದಿಂದಲೇ ಅನುದಾನ ಮಂಜೂರು ಮಾಡುವಂತೆ ಆದೇಶವನ್ನೂ ಪಡೆದುಕೊಂಡವರಿದ್ದರು. ಯಾರು ಯಾವಾಗ ಎಲ್ಲಿ ಯಾವ ಕಾರ್ಯಕ್ರಮಗಳನ್ನು ಹೇಗೆ ಮಾಡಿದರು ಎನ್ನುವುದನ್ನು ಪರಿಶೀಲಿಸುವ ಗೋಜಿಗೆ ಹೋಗದ ಇಲಾಖೆಯ ಅಧಿಕಾರಿಗಳು ತಮ್ಮ ಕಮಿಶನ್ ಪಡೆದು ಹಣವನ್ನು ಪ್ರತಿ ವರ್ಷ ಮಾರ್ಚ ಒಳಗೆ ಬಿಡುಗಡೆ ಮಾಡುತ್ತಲೇ ಬಂದಿದ್ದರು. ರಾಜಕೀಯ ಪ್ರಭಾವ ಹಾಗೂ ಹಣದಾಸೆಗಾಗಿ ತಮ್ಮ ನಿಯತ್ತನ್ನೇ ಮಾರಿಕೊಂಡ ಇಲಾಖೆಯ ನೌಕರರು ಹಾಗೂ ಅಧಿಕಾರಿಗಳು ಉಂಡ ಮನೆಗೆ ಕನ್ನ ಹಾಕಲು ಕಳ್ಳರಿಗೆ ಸಹಕಾರಿಯಾದರು. ಹೀಗಾಗಿ ಇಡೀ ಕನ್ನಡ ಭವನ ಎನ್ನುವುದು ಬಹುತೇಕ ಸಾಂಸ್ಕೃತಿಕ ದಲ್ಲಾಳಿಗಳಿಂದಲೇ ತುಂಬಿ ಹೋಗಿರುತ್ತಿತ್ತು. ಇಲಾಖೆಯ ಬಹುತೇಕ ಹಣ ಅಯೋಗ್ಯರಿಗೆ ಹರಿದು ಹೋಗುತ್ತಿದ್ದುದರಿಂದ ನಿಜವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಬಯಸುವವರು ಅನುದಾನ ಪಡೆಯಲು ಹರಸಾಹಸ ಪಡಬೇಕಾಗುತ್ತಿತ್ತು. ಎಷ್ಟೇ ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ಮಾಡಿದವರಿದ್ದರೂ ಇಲಾಖೆಯ ಆಯಕಟ್ಟಿನ ಪೂಜಾರಿಗಳಿಗೆ ಪ್ರಸಾದ ಕೊಡದಿದ್ದರೆ ಪೈಲುಗಳು ಮುಂದೆ ಹೋಗುವುದು ಸಾಧ್ಯವೇ ಇಲ್ಲವೆನ್ನುವುದು ಎಲ್ಲರಿಗೂ ಖಚಿತವಾಗಿತ್ತು. ಹೀಗಾಗಿ ಸ್ವಂತ ದುಡ್ಡು ಹಾಕಿ ನಿಜವಾಗಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದವರೂ ಸಹ ಲಂಚ ಕೊಟ್ಟೇ ಅನುದಾನದ ಚೆಕ್ನ್ನು ಪಡೆಯುವಂತಹ ಒಂದು ಭ್ರಷ್ಟ ವ್ಯವಸ್ಥೆ ಸಂಸ್ಕೃತಿ ಇಲಾಖೆಯ ನರನಾಡಿಗಳಲ್ಲಿ ರೂಪಗೊಂಡಿದ್ದಂತೂ ಸುಳ್ಳಲ್ಲ.
ಸಂಸ್ಕೃತಿ ಇಲಾಖೆ ನಿರ್ದೇಶಕ ದಯಾನಂದರವರು |
ಇಂತಹ ರಿಪೇರಿ ಮಾಡಲಾಗದಂತಹ ಭ್ರಷ್ಟಾತಿ ಭ್ರಷ್ಟ ವ್ಯವಸ್ಥೆಗೆ ಸರ್ಜರಿ ಮಾಡಲು ದಯಾನಂದರವರು ಮುಂದಾದರು. ಅವಸರಕ್ಕೆ ಬಿದ್ದು ಹುಂಬುತನದಿಂದ ಈ ದಲ್ಲಾಳಿ ಲಾಬಿಯನ್ನು ಮಟ್ಟ ಹಾಕಲು ಹೋಗಿ ಕೈಸುಟ್ಟುಕೊಳ್ಳುವ ಬದಲು ಹಂತಹಂತವಾಗಿ ಜಾಣತನದಿಂದ ಇಲಾಖೆಯ ಒಳ ಹಾಗೂ ಹೊರಗಿನ ಹೆಗ್ಗಣಗಳನ್ನು ನಿಯಂತ್ರಿಸುವ ಕೆಲಸವನ್ನು ದಯಾನಂದರವರು ಕಂತು ಕಂತಾಗಿ ಮಾಡತೊಡಗಿದರು. ರಾಜಕೀಯ ಬೆಂಬಲ ಇಲ್ಲದಿದ್ದರೆ ಈ ದಲ್ಲಾಳಿ ಪಡೆ ತಮ್ಮನ್ನು ಎತ್ತಂಗಡಿ ಮಾಡಿಸುವುದು ದಿಟ ಎನ್ನುವುದನ್ನು ಅರಿತ ನಿರ್ದೇಶಕ ದಯಾನಂದರವರು ತಾವು ಮಾಡುವ ಎಲ್ಲಾ ಸುಧಾರಣಾ ಕೆಲಸಗಳಿಗೆ ಮಂತ್ರಿಣಿ ಉಮಾಶ್ರೀಯವರ ಬೆಂಬಲವನ್ನು ಪಡೆಯುತ್ತಾ ಹುಷಾರಾಗಿ ಪ್ರತಿ ಹೆಜ್ಜೆಗಳನ್ನು ಲೆಕ್ಕಾಚಾರದಲ್ಲಿ ಇಡುತ್ತಾ ಸಾಗಿದ್ದು ಅಭಿನಂದನೀಯ. ಇಂತಹ ದಿಟ್ಟವಾದ ನಿರ್ಧಾರವನ್ನು ತೆಗೆದುಕೊಳ್ಳುವಂತಹ ಇಚ್ಚಾಶಕ್ತಿ ಇರುವ ಅಧಿಕಾರಿಗಾಗಿ ಇಡೀ ಸಂಸ್ಕೃತಿ ಇಲಾಖೆ ಇಲ್ಲಿವರೆಗೂ ಕಾಯುತ್ತಿತ್ತು. ಇಷ್ಟು ದಿನ ಸಾಮ ಬೇಧಗಳಿಗೆ ಬಗ್ಗದ ಇಲಾಖೆಯಲ್ಲಿ ಬೇರು ಬಿಟ್ಟ ಸಾಂಸ್ಕೃತಿಕ ದಲ್ಲಾಳಿ ಪಡೆಗಳ ಮೇಲೆ ದಂಡ ಪ್ರಯೋಗಕ್ಕೆ ದಯಾನಂದರವರು ಆದೇಶಿಸಿದ್ದಾರೆ. ಪಡೆದ ಅನುದಾನಕ್ಕೆ ಸರಿಯಾಗಿ ಲೆಕ್ಕ ಕೊಡದ ನಲವತ್ತಕ್ಕೂ ಹೆಚ್ಚು ಸಂಸ್ಥೆಗಳ ಮುಖ್ಯಸ್ತರುಗಳಿಗೆ ಲೆಕ್ಕ ಕೊಡದಿದ್ದರೆ ಬ್ಲಾಕ್ಲಿಸ್ಟ್ಗೆ ಸೇರಿಸಲಾಗುವುದೆಂದು ಆದೇಶಿಸಿದ್ದಾರೆ. ಅನುದಾನ ದುರುಪಯೋಗ ಪಡಿಸಿಕೊಂಡ ಸಂಸ್ಥೆಗಳ ವಿವರವನ್ನು ಕೊಡಲು ತಮ್ಮ ಆಧೀನಾಧಿಕಾರಿಗಳಿಗೆ ಆಜ್ಞಾಪಿಸಿದ್ದಾರೆ. ಅವರ ಆದೇಶದನುಸಾರ ಕಳೆದ ಐದು ವರ್ಷದಲ್ಲಿ ನಕಲಿ ವಿಳಾಸ ಕೊಟ್ಟು ಸರಕಾರದ ಅನುದಾನ ದುರುಪಯೋಗಪಡಿಸಿಕೊಂಡ ಐವತ್ತರಷ್ಟು ಬೇನಾಮಿ ಸಂಸ್ಥೆಗಳ ಸಮಗ್ರ ಮಾಹಿತಿ ದಯಾನಂದರವರ ಟೇಬಲ್ ಮೇಲಿದೆ. ಅನುದಾನ ಬಳಕೆ ಮಾಡಿಕೊಂಡಿರುವ ಕಾರ್ಯಕ್ರಮಗಳ ಅಸಲಿ ವಿವರಗಳನ್ನು ನಿಗಧಿತ ಅವಧಿಯೊಳಗೆ ಸಲ್ಲಿಸಬೇಕೆಂದು ಇನ್ನೂ ಅನೇಕ ಸಂಸ್ಥೆಗಳಿಗೆ ಎಚ್ಚರಿಕೆ ನೊಟೀಸ್ ಕೊಡಲಾಗಿತ್ತು. ಸಮರ್ಪಕ ಉತ್ತರ ಬಾರದ.. ಲೆಕ್ಕಪತ್ರಗಳನ್ನು ಕೊಡಲಾಗದ ಎಲ್ಲಾ ಸಂಸ್ಥೆಗಳನ್ನು ಪರಿಶೀಲನೆ ತೀವ್ರಗೊಳಿಸಲಾಗಿದ್ದು ವಂಚನೆ ಪತ್ತೆಕಾರ್ಯ ಭರದಿಂದ ನಡೆಯುತ್ತಿದೆ. ನಕಲಿ ವಿವರ ಹಾಗೂ ಸುಳ್ಳು ಲೆಕ್ಕ ಕೊಟ್ಟಿದ್ದು ಸಾಬೀತಾದರೆ ಅಂತಹ ಸಂಸ್ಥೆಗಳ ಮುಖ್ಯಸ್ತರ ಮೇಲೆ ಕ್ರಿಮಿನಲ್ ಕೇಸ್ ಹಾಕುವುದು ಖಚಿತವಾಗಿದೆ.
ಎಷ್ಟೇ ಸಲ ವಿವರ ಕೇಳಿದರೂ ಕೊಡದವರಿಗೆ ಬಿಸಿ ಮುಟ್ಟಿಸಲೆಂದೇ ಕಳೆದ ವಾರ ಎರಡು ನಕಲಿ ಸಂಸ್ಥೆಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಕಾಮಾಕ್ಷಿಪಾಳ್ಯದ ‘ಶ್ರೀ ಅಣ್ಣಮ್ಮ ದೇವಿ‘ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ರಾಜಾಜಿನಗರದ ‘ರಂಗೋತ್ರಿ ಮಕ್ಕಳ ಕಲಾಶಾಲೆ’ ಸಂಸ್ಥೆಗಳ ಮೇಲೆ ಎಸ್.ಜೆ.ಪಾರ್ಕ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಇನ್ನೂ ಹಲವಾರು ಹಲಾಲುಕೋರ ಸಂಸ್ಥೆಗಳ ತಲೆಯ ಮೇಲೆ ಕಾನೂನು ಕ್ರಮದ ತೂಗುಗತ್ತಿ ತೂಗುತ್ತಲಿದೆ. ಕೃಷ್ಣ ಮೂರ್ತಿ ಎನ್ನುವವರು ಅಣ್ಣಮ್ಮ ದೇವಿ ಕಲಾ ವೇದಿಕೆ ಹೆಸರಲ್ಲಿ ಎರಡು ವರ್ಷಗಳಲ್ಲಿ ಪಡೆದ ಅನುದಾನ ಎಂಟು ಲಕ್ಷ ರೂಪಾಯಿಗಳು. ಇದಕ್ಕೆ ಸುಳ್ಳು ಲೆಕ್ಕಪತ್ರಗಳ ಆಡಿಟ್ ಮಾಡಿಸಿ ಕೊಟ್ಟು ಹಣ ಪಡೆಯಲಾಗಿದೆ. ಇನ್ಯಾರೋ ಮಾಡಿದ ಕಾರ್ಯಕ್ರಮಗಳ ಪೊಟೋಗಳನ್ನು ಲಗತ್ತಿಸಲಾಗಿದೆ. ಈ ನಕಲಿ ಸಂಸ್ಥೆ ಕೊಟ್ಟ ಲೆಕ್ಕವನ್ನೇ ಕಣ್ಣು ಮುಚ್ಚಿ ನಂಬಿ ತಮ್ಮ ಪಾಳು ಪಡೆದು ಹಣ ಮಂಜೂರು ಮಾಡಲಾಗಿದೆ. ಈ ಕೃಷ್ಣಮೂರ್ತಿ ಎನ್ನುವ ನುಂಗಣ್ಣ ತನ್ನ ಬೇನಾಮಿ ಸಂಸ್ಥೆಗೆ ಅನುದಾನ ನೀಡಬೇಕೆಂದು ೨೦೧೩ ಫೆ.೭ ರಂದು ಸರಕಾರದಿಂದಲೇ ಆದೇಶವನ್ನು ತಂದಿದ್ದಾನೆ. ದಯಾನಂದರವರ ಆದೇಶಕ್ಕೆ ಮಣಿದು ಇಲಾಖೆಯ ಅಧಿಕಾರಿಗಳು ಆ ಸಂಸ್ಥೆಗೆ ಪತ್ರ ಬರೆದರೆ ಉತ್ತರ ಬರಲಿಲ್ಲ. ಹೋಗಿ ನೋಡಿದರೆ ಆ ವಿಳಾಸದಲ್ಲಿ ಅಂತಹ ಸಂಸ್ಥೆಯೇ ಇರಲಿಲ್ಲ. ಇದು ಇಲಾಖೆಯ ಅಧಿಕಾರಿಗಳ ಜಾಣ ನಿರ್ಲಕ್ಷಕ್ಕೆ ಅತಿ ದೊಡ್ಡ ಸಾಕ್ಷಿಯಾಗಿದೆ.
ಇನ್ನೊಬ್ಬ ರಾಜಕೀಯದ ವ್ಯಕ್ತಿ ಕೆ.ಎಚ್.ಕುಮಾರ್ ಎನ್ನುವ ಮಹಾಶಯ ರಾಜಾಜಿನಗರದ ರಾಂಮಂದಿರ ಆಟದ ಮೈದಾನದ ವಿಳಾಸ ನೀಡಿ ‘ರಂಗೋತ್ರಿ ಮಕ್ಕಳ ರಂಗಶಾಲೆ’ ಎಂಬ ಸಂಸ್ಥೆ ನೋಂದಣಿ ಮಾಡಿಸಿ ಲಕ್ಷಾಂತರ ಹಣ ಅನುದಾನ ಪಡೆದು ಗುಳುಂ ಮಾಡಿದ್ದು ಯಾವುದೇ ಕಾರ್ಯಕ್ರಮವನ್ನೂ ರೂಪಿಸಿಲ್ಲ ಎಂದು ಇಲಾಖೆ ಆರೋಪಿಸಿದೆ. ಅಸಲಿಗೆ ಆಟದ ಮೈದಾನದಲ್ಲಿ ಹುಡುಕಿದರೂ ಯಾವುದೇ ರಂಗಶಾಲೆಯೂ ಇಲ್ಲ. ಈ ಕುಮಾರ್ ಎನ್ನುವ ಕಿಲಾಡಿ ದಯಾನಂದರವರ ಮೇಲೆಯೇ ‘ಕಾಲೇಜು ರಂಗಭೂಮಿ’ ಪ್ರಾಜೆಕ್ಟನಲ್ಲಿ ಅಧಿಕಾರ ದುರುಪಯೋಗ ಎಂದು ಲೋಕಾಯುಕ್ತಕ್ಕೆ ದೂರು ಕೊಟ್ಟು ಕೇಸ್ ಹಾಕಿದ್ದು, ತನ್ನೆಲ್ಲಾ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಇಲಾಖೆಯ ನಿರ್ದೇಶಕರಿಗೆ ಬೆದರಿಕೆಯನ್ನು ಹಾಕಿದ್ದಾನಂತೆ.... ಗುಂಪು ಕಟ್ಟಿಕೊಂಡು ಬಂದು ಉಮಾಶ್ರೀಯವರನ್ನು ಘೇರಾವ್ ಹಾಕಿದ್ದೂ ಸಹ ಇದೇ ಕುಮಾರ್ ಕಂಠೀರವನೇ. ಇದೆಲ್ಲವನ್ನು ಸಹಿಸುವಷ್ಟು ದಿನ ಸಹಿಸಿದ ದಯಾನಂದ ಸಾಹೇಬರು ಈಗ ಕುಮಾರ್ ಎನ್ನುವವರ ಬೇನಾಮಿ ಸಂಸ್ಥೆಯ ಮೂಲವನ್ನು ಕಂಡು ಹಿಡಿದು ಬುಡಕ್ಕೆ ಬತ್ತಿ ಇಟ್ಟು ಸೇಡು ತೀರಿಸಿಕೊಂಡಿದ್ದಾರೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಆತನನ್ನು ಜೈಲಿಗೆ ಕಳುಹಿಸುವ ಸ್ಕೆಚ್ ಸಿದ್ದಗೊಳಿಸಿದ್ದಾರೆ.
ಇಷ್ಟು ದಿನ ದಯನಾಂದರವರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆದರಿಕೆ ಹಾಕುತ್ತಿದ್ದ ಹಾಗೂ ರಾಜಕೀಯ ಪ್ರಭಾವ ಬಳಸಿ ಇಲಾಖೆಯ ನಿರ್ದೇಶಕರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದ ಇಲಾಖೆಯ ಅನುದಾನ ನುಂಗಣ್ಣಗಳು ಈಗ ಹೌಹಾರಿ ಭೂಗತರಾಗತೊಡಗಿದ್ದಾರೆ. ಇಲಾಖೆಯೊಳಗಿನ ಸರಕಾರಿ ದಲ್ಲಾಳಿಗಳನ್ನು ಸಂಪರ್ಕಿಸಿ ಹೇಗಾದರೂ ಮಾಡಿ ತಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡಿ ಎಂದು ಗೋಗರೆಯತೊಡಗಿದ್ದಾರೆ. ಆದರೆ... ನಕಲಿಗಳಿಗೆ ಅನುದಾನವನ್ನು ಯಾವುದೇ ಪರಿಶೀಲನೆ ಇಲ್ಲದೇ ಮಂಜೂರು ಮಾಡಿದ ಅಧಿಕಾರಿಗಳೇ ದಯಾನಂದರವರ ಕ್ರಮಗಳಿಂದಾಗಿ ತಲ್ಲಣಗೊಂಡಿದ್ದಾರೆ. ಯಾವಾಗ ತಮ್ಮ ಬುಡಕ್ಕೆ ಮುಳುಗು ನೀರು ಬರುತ್ತದೋ ಎಂದು ದಿನಗಳನ್ನು ಆತಂಕದಿಂದ ಎದುರಿಸುತ್ತಿದ್ದಾರೆ. ಹೊರಗಿನ ಹೆಗ್ಗಣಗಳಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಈಗ ಒಳಗಿನ ಹೆಗ್ಗಣಗಳಿಲ್ಲದಂತಾಗಿ ತಮ್ಮ ನೌಕರಿ ಉಳಿಸಿಕೊಳ್ಳಲು ಹಾಗೂ ಈ ಯಾವುದೇ ವಂಚನೆಯಲ್ಲಿ ತಮ್ಮ ಪಾಲುದಾರಿಕೆ ಇಲ್ಲ ಎಂದು ಸಾಬೀತು ಪಡಿಸಲು ಕಲಿತ ವಿದ್ಯೆಯನ್ನೆಲ್ಲಾ ಬಳಸುತ್ತಿದ್ದಾರೆ. ಆದರೆ ದಯಾನಂದ ಸಾಹೇಬರು ದಿನಕ್ಕೊಂದು ಆದೇಶ ಹೊರಡಿಸುತ್ತಾ ಹೆಗ್ಗಣಗಳನ್ನು ಹಿಡಿಯಲು ಬೋನುಗಳನ್ನು ಸಿದ್ದಗೊಳಿಸುತ್ತಿದ್ದಾರೆ. ಕಾನೂನಿನ ಉರುಳಿನಲ್ಲಿ ನುಂಗಣ್ಣರನ್ನು ಸಿಲುಕಿಸಿ ಇಲಾಖೆಯನ್ನು ಹೆಗ್ಗಣಮುಕ್ತರನ್ನಾಗಿಸಲು ಹರಸಾಹಸ ಪಡುತ್ತಿದ್ದಾರೆ.
ಮನೆಯೊಳಗಿನ ಧನ ಧಾನ್ಯಗಳನ್ನು ಕಾಯಬೇಕಾದವರೇ ಕಳ್ಳರನ್ನು ಆಹ್ವಾನಿಸಿ ಲೂಟಿಗೆ ಅನುಕೂಲ ಮಾಡಿಕೊಟ್ಟಾಗ ಕಳ್ಳರನ್ನು ಹೇಗೆ ದೂರುವುದು. ಹಣದ ದುರಪಯೋಗ ತಡೆಯಬೇಕಾದರೆ ಮೊದಲು ಇಲಾಖೆಯೊಳಗಿನ ಹೆಗ್ಗಣಗಳನ್ನು ಮಟ್ಟಹಾಕಬೇಕಾಗಿದೆ. ಆದರೆ ಇದು ಅಷ್ಟೊಂದು ಸುಲಭದ ಕೆಲಸವಲ್ಲ. ಒಬ್ಬರಲ್ಲ ಹತ್ತಾರು ದಯಾನಂದಗಳು ಬಂದರೂ ಅಲ್ಲಿರುವ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲಾಗದಷ್ಟು ಹದಗೆಟ್ಟು ಹೋಗಿದೆ. ಅಲ್ಲಿರುವವರಿಗೆ ಪಾಲು ಕೊಡದೇ ಯಾವುದೇ ಚೆಕ್ಗಳು ಪಾಸ್ ಆದ ಉದಾಹರಣೆಗಳೇ ಇಲ್ಲಾ. ಅಕಸ್ಮಾತ್ ಕಾನೂನು ಪ್ರಕಾರ ಹೋರಾಡಿ ಒಂದು ಸಲ ಅನುದಾನ ಪಡೆದರೂ ಇನ್ನೊಂದು ಸಲಕ್ಕೆ ಅವರ ಯಾವುದೇ ಕಾರ್ಯಕ್ರಮಕ್ಕೆ ಅನುದಾನ ಮಂಜೂರಾಗದಂತೆ ನೋಡಿಕೊಳ್ಳುವ ತಂತ್ರಗಾರಿಕೆ ಈ ಸರಕಾರಿ ಅಧಿಕಾರಿ ವರ್ಗಕ್ಕೆ ಇದೆ. ದಯಾನಂದನಂತವರಿಗೆ ಹಾಗೂ ಉಮಾಶ್ರೀಯಂತವರಿಗೆ ನಿಜಕ್ಕೂ ಸಂಸ್ಕೃತಿ ಇಲಾಖೆಯ ಬಗ್ಗೆ ಕಾಳಜಿ ಇದ್ದರೆ...
ಕಲೆ ಸಾಹಿತ್ಯ ಸಂಸ್ಕೃತಿಯ ಬೆಳವಣೆಗೆ ಕುರಿತು ಕಳಕಳಿ ಇದ್ದರೆ ಸಂಸ್ಕೃತಿ ಇಲಾಖೆ ಹಾಗೂ ಅದರ ಆಧೀನದಲ್ಲಿರುವ ಎಲ್ಲಾ ಅಕಾಡೆಮಿ-ಪ್ರಾಧಿಕಾರಗಳಲ್ಲಿರುವ ಸರಕಾರಿ ನೌಕರರು ಹಾಗೂ ಅಧಿಕಾರಿಗಳ ಭ್ರಷ್ಟತೆಯನ್ನು ಮಟ್ಟಹಾಕಲೇಬೇಕಿದೆ. ಒಬ್ಬ ಖಡಕ್ ಅಧಿಕಾರಿ ಬಂದಾಗಿ ಮೆತ್ತಗಾದಂತೆ ತೋರುವ ಈ ನೌಕರಶಾಹಿ ಮತ್ತೆ ಇನ್ನೊಬ್ಬ ಬಂದಾಗ ತಮ್ಮ ಚಾಳಿಯನ್ನು ಮುಂದುವರೆಸುತ್ತಾರೆ.
ಆದರೆ.... ಈ ಇಲಾಖೆಯ ವಿಚಾರಣೆ ಹಾಗೂ ಮೊಕದ್ದಮೆಗಳಿಂದ ಇಲಾಖೆಯ ಹಣದ ದುರುಪಯೋಗ ನಿಂತು ಹೋಗುತ್ತದೆನ್ನುವುದು ಭ್ರಮೆಯಾಗಿದೆ. ಕಳೆದ ವರ್ಷ ಮೂರು ಸಂಸ್ಥೆಗಳ ಮೇಲೆ ವಂಚನೆ ಕೇಸ್ ದಾಖಲಿಸಿ ಎಪ್ಐಆರ್ ದಾಖಲಿಸಲಾಗಿತ್ತು. ತಮ್ಮ ಕಾರ್ಯಕ್ರಮಗಳಿಗಾಗಿ ಹಣ ಬಿಡುಗಡೆ ಮಾಡಲು ಒತ್ತಡ ತರಲು ಈ ಸಂಸ್ಥೆಯ ಮುಖ್ಯಸ್ತರುಗಳು ಶಾಸಕರ ಹಾಗೂ ಬಿಬಿಎಂಪಿ ಸದಸ್ಯರುಗಳ ಲೆಟರ್ಹೆಡ್ನ್ನು ನಕಲು ಮಾಡಿ ಅಕ್ರಮವಾಗಿ ಬಳಸಿಕೊಂಡಿದ್ದವು. ವಿಚಾರಣೆ ಮಂದಗತಿಯಲ್ಲಿ ಸಾಗುತ್ತಿದ್ದು ಇಲ್ಲಿವರೆಗೂ ವಂಚಕರಿಗೆ ಶಿಕ್ಷೆಯೂ ಆಗಿಲ್ಲ....
ನುಂಗಿದ ಹಣವನ್ನು ಕಕ್ಕಿಸಲೂ ಸಾಧ್ಯವಾಗಿಲ್ಲ. ಒಂದು ಕಡೆ ಸಿಕ್ಕಿ ಬಿದ್ದರೆ ಇನ್ನೊಂದು ಕಡೆಗೆ ಮತ್ತೆ ಬೇರೆಯವರ ಹೆಸರಲ್ಲಿ ಸಂಸ್ಥೆಯೊಂದನ್ನು ನೋಂದಾಯಿಸಿ ನಕಲಿ ವಿಳಾಸ ನೀಡಿ ಮತ್ತೆ ಅನುದಾನವನ್ನು ಹೇಗೆ ಪಡೆಯಬೇಕು ಎನ್ನುವುದನ್ನು ಈ ಸಾಂಸ್ಕೃತಿಕ ದಲ್ಲಾಳಿ ವರ್ಗಕ್ಕೆ ಹೇಳಿಕೊಡಬೇಕಿಲ್ಲ.
ಸಂಸ್ಕೃತಿ ಇಲಾಖೆಯ ವಾರ್ಷಿಕ ಧನಸಹಾಯ, ಪ್ರಾಯೋಜನೆ, ಚಿತ್ರಕಲಾ ಪ್ರದರ್ಶನ, ರಂಗಚಟುವಟಿಕೆಗಳು ಹಾಗೂ ವಾದ್ಯ ಪರಿಕರಗಳ ಖರೀದಿಗಾಗಿ ಪ್ರತಿ ವರ್ಷ ೧೫೦೦ ಕ್ಕೂ ಹೆಚ್ಚು ಸಂಸ್ಥೆಗಳು ಧನಸಹಾಯವನ್ನು ಪಡೆಯುತ್ತವೆ. ಇದರಲ್ಲಿ ಕಲೆಯ ಗಂಧ ಗಾಳಿ ಗೊತ್ತಿಲ್ಲದ ಅನೇಕ ಸಂಸ್ಥೆಗಳೂ ಸೇರಿವೆ.
ಯಾವುದೇ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಬೇಕೆಂದರೆ ಆ ಸಂಸ್ಥೆ ಹಿಂದಿನ ವರ್ಷ ಮಾಡಿದ ಕಾರ್ಯಕ್ರಮಗಳ ಆಧಾರದ ಮೇಲೆ ಎಷ್ಟು ಅನುದಾನ ಕೊಡಬೇಕು ಎನ್ನುವುದನ್ನು ಇಲಾಖೆಯ ಅಧಿಕಾರಿಗಳು ನಿರ್ಧರಿಸುತ್ತಾರೆ. ಕನಿಷ್ಟ ಇಪ್ಪತ್ತೈದು ಸಾವಿರದಿಂದ ಹಿಡಿದು ಇಪ್ಪತ್ತೈದು ಲಕ್ಷದವರೆಗೂ ಪ್ರತಿ ಸಂಸ್ಥೆಗೆ ಅನುದಾನವನ್ನು ಬಿಡುಗಡೆ ಮಾಡಿಲಾಗುತ್ತದೆ. ಕಾರ್ಯಕ್ರಮದ ಪ್ರಾಮುಖ್ಯತೆಯ ಆಧಾರದಲ್ಲಿ ಕನಿಷ್ಟ ಇಪ್ಪತ್ತು ಸಾವಿರದಿಂದ ಹದಿನೈದು ಲಕ್ಷದವರೆಗೂ ಪ್ರಾಯೋಜನೆ ಹಣ ಒದಗಿಸಲಾಗುತ್ತದೆ. ಈ ಸರಕಾರಿ ಹಣವನ್ನು ಪಡೆದು ಬದುಕುವುದನ್ನೇ ಕೆಲವಾರು ದಲ್ಲಾಳಿಗಳು ಕಾಯಕ ಮಾಡಿಕೊಂಡಿದ್ದಾರೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡದಿದ್ದರೂ ನಕಲಿ ದಾಖಲೆಗಳನ್ನು ಕೊಟ್ಟು ಹಣವನ್ನು ಲಪಟಾಯಿಸುತ್ತಿದ್ದಾರೆ. ಹಿಂದುಳಿದ ಜಾತಿ ವರ್ಗಗಳಿಗಾಗಿ ಮೀಸಲಿಟ್ಟ ಹಣವನ್ನೂ ಸಹ ನಕಲಿ ಜಾತಿಪತ್ರ ನೀಡಿ ದುರ್ಬಳಕೆ ಮಾಡಿಕೊಂಡವರೂ ಬೇಕಾದಷ್ಟಿದ್ದಾರೆ. ಇದೆಲ್ಲಾ ಗೊತ್ತಿದ್ದೂ ಇಲಾಖೆಯ ನೌಕರಶಾಹಿ ಇಂತಹ ಹಲಾಲುಕೋರರಿಗೆ ಸಹಾಯ ಮಾಡುತ್ತಾ ಪೋಷಿಸುತ್ತಿದೆ. ಸರಿಯಾಗಿ ಪ್ರತಿ ಸಂಸ್ಥೆಯ ವಿವರಗಳನ್ನು ಪರಿಶೀಲಿಸಿ ಕಾರ್ಯಕ್ರಮ ನಡೆದ ಬಗ್ಗೆ ವರದಿ ತರಿಸಿಕೊಂಡರೆ ಅರ್ಧಕ್ಕಿಂತಲೂ ಹೆಚ್ಚು ವಂಚಕ ಸಂಸ್ಥೆಗಳು ಬೆತ್ತಲಾಗುತ್ತವೆ. ಇವುಗಳನ್ನೆಲ್ಲಾ ಮೊದಲು ಬ್ಲಾಕ್ ಲಿಸ್ಟಿಗೆ ಸೇರಿಸಿ ಈ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿದ ಅಧಿಕಾರಿಯನ್ನು ಅಮಾನತುಗೊಳಿಸಿ ಇಲಾಖೆಗೆ ಆದ ನಷ್ಟವನ್ನು ಇವರುಗಳಿಂದ ವಸೂಲು ಮಾಡಲು ಸರಕಾರ ಹಾಗೂ ನ್ಯಾಯಾಂಗವನ್ನು ಕೇಳಿಕೊಳ್ಳುವುದರಿಂದ ಮುಂದಾಗಬಹುದಾದ ವಂಚನೆಯನ್ನು ತಪ್ಪಿಸಬಹುದಾಗಿದೆ.
ಇಡೀ ವ್ಯವಸ್ಥೆಯೇ ಭ್ರಷ್ಟವಾಗಿರುವಾಗ ಒಂದು ಇಲಾಖೆಯನ್ನು ನಿಂದಿಸಿ ಏನುಪಯೋಗ. ಆದರೂ... ಇದ್ದುದರಲ್ಲೇ ಹೆಗ್ಗಣಗಳ ಬಿಲಗಳನ್ನು ಬಂದ ಮಾಡುವಂತಹ....ಇಲಾಖೆಯ ಎಲ್ಲಾ ಚಟುವಟಿಕೆಗಳನ್ನು ಗಣಕೀಕರಣಗೊಳಿಸಿ ದಾಖಲಿಸುವಂತಹ ಹಾಗೂ ಎಲ್ಲಾ ಮಾಹಿತಿಗಳೂ ಸಾರ್ವಜನಿಕರಿಗೆ ಯಾವಾಗಲೂ ಇಲಾಖೆಯ ವೆಬ್ಸೈಟಿನಲ್ಲಿ ಲಭ್ಯವಾಗುವಂತಹ ಕ್ರಮಗಳನ್ನು ಕೈಗೊಂಡರೆ ಸರಕಾರಿ ಭ್ರಷ್ಟರ ಜೊತೆಗೆ ಸಾಂಸ್ಕೃತಿಕ ದಲ್ಲಾಳಿಗಳನ್ನು ಸಾಧ್ಯವಾದಷ್ಟೂ ನಿಯಂತ್ರಿಸಬಹುದಾಗಿದೆ. ಹಣ ಸಿಗುತ್ತದೆಂದರೆ ಕಳ್ಳರು ಅದಕ್ಕಾಗಿ ನೂರು ದಾರಿ ಕಂಡುಕೊಳ್ಳುತ್ತಾರೆ. ಆದರೆ ಕಾನೂನಿನ ಪ್ರಕಾರ ಸೂಕ್ತ ದಾಖಲೆಗಳಿಲ್ಲದೇ ಅನುದಾನವನ್ನು ಇಲಾಖೆ ಬಿಡುಗಡೆ ಮಾಡುವಂತೆಯೇ ಇಲ್ಲ. ಹಾಗೇನಾದರೂ ಪರಿಶೀಲನೆ ಮಾಡದೇ ಯಾರಾದರೂ ಇಲಾಖೆಯ ಅಧಿಕಾರಿಗಳು ಹಣ ಬಿಡುಗಡೆಗೆ ಆದೇಶಿಸಿದರೆ ಅಲ್ಲಿ ಆಗುವ ವಂಚನೆಗೆ ಅಂತಹ ಅಧಿಕಾರಿಯನ್ನೇ ಬೇಜವಾಬ್ದಾರಿ ಕಾರಣದ ಮೇಲೆ ಹೊಣೆಗಾರರನ್ನಾಗಿಸಿ ಅಮಾನತುಗೊಳಿಸುವುದನ್ನು ಮಾಡಿದರೆ ಇತರೆಲ್ಲಾ ನೌಕರರು ಹಾಗೂ ಅಧಿಕಾರಿಗಳು ಕಳ್ಳರ ಜೊತೆಗೆ ಶಾಮೀಲಾಗಿ ಇಲಾಖೆಯ ಹಣವನ್ನು ಬಿಂದಾಸಾಗಿ ಲೂಟಿಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಇದರ ಜೊತೆಗೆ ಯಾವುದೇ ಸಂಸ್ಥೆಗೆ ಹಣ ಬಿಡುಗಡೆ ಮಾಡಿದರೂ ಅದರ ಕುರಿತ ಸಂಪೂರ್ಣ ವಿವರವನ್ನು ಹಾಗೂ ಕಾರ್ಯಕ್ರಮದ ನಂತರ ಆ ಸಂಸ್ಥೆ ಕೊಡುವ ಎಲ್ಲಾ ಲೆಕ್ಕಪತ್ರ ದಾಖಲೆಗಳನ್ನೂ ಸಂಸ್ಕೃತಿ ಇಲಾಖೆಯ ವೆಬ್ಸೈಟ್ಗೆ ಆಕೂಡಲೇ ಅಪ್ ಲೋಡ್ ಮಾಡುವುದನ್ನು ಆದೇಶದ ಮೂಲಕ ಜಾರಿಗೆ ತಂದರೆ ಕನಿಷ್ಟ ಮುಕ್ಕಾಲು ಭಾಗ ಅನುದಾನದ ದುರ್ಬಳಕೆ ನಿಂತುಹೋಗುತ್ತದೆ. ಕಳೆದ ಹತ್ತು ವರ್ಷದಿಂದ ಇಲಾಖೆಯಿಂದ ಹಣ ಪಡೆದ ಎಲ್ಲಾ ಸಂಸ್ಥೆಗಳ ಕಾರ್ಯಕ್ರಮಗಳು ಹಾಗೂ ಲೆಕ್ಕಪತ್ರಗಳನ್ನು ಸ್ಕ್ಯಾನ್ ಮಾಡಿ ಇಲಾಖೆ ವೆಬ್ಸೈಟ್ನಲ್ಲಿ ಪ್ರಕಟಿಸಿದರೆ ಅವುಗಳ ಅಸಲಿಯತ್ತು ಸಾರ್ವಜನಿಕರಿಗೆ ಗೊತ್ತಾಗದೇ ಇರದು. ಆಗ ಇನ್ನಷ್ಟು ವಂಚಕ ಪ್ರಕರಣಗಳನ್ನು ಸಾರ್ವಜನಿಕರೇ ಹುಡುಕಿ ಕೊಟ್ಟಾರು. ಮೊದಲು ಸಂಪೂರ್ಣ ಪಾರದರ್ಶಕತೆಯನ್ನು ಇಲಾಖೆಯ ಪ್ರಥಮ ಆದ್ಯತೆಯನ್ನಾಗಿಸಿದರೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸಹ ಪ್ರಾಮಾಣಿಕವಾಗಿ ನಡೆಯುತ್ತಾ ಸರಕಾರದ ಉದ್ದೇಶ ಇಡೇರುತ್ತದೆ ಹಾಗೂ ರಾಜ್ಯಾದ್ಯಂತ ಕಲೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚುತ್ತವೆ. ಕಲಾಸಕ್ತಿ ಇಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುವ ಕಲಾವಿದರುಗಳು ಹಾಗೂ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅಗತ್ಯವಾದ ಹಣ ದೊರಕಿ ಸಾಂಸ್ಕೃತಿಕ ಆಂದೋಲನವೇ ರೂಪಗೊಳ್ಳಬಹುದಾಗಿದೆ. ಈ ನಿಟ್ಟಿನತ್ತ ದಯಾನಂದನಂತಹ ಅಧಿಕಾರಿಗಳು ಹಾಗೂ ಉಮಾಶ್ರೀಯವರಂತಹ ಮಂತ್ರಿಗಳು ಆಲೋಚಿಸುವುದುತ್ತಮ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ