ಸೋಮವಾರ, ಅಕ್ಟೋಬರ್ 26, 2015

“ಚಾಮಚೆಲುವೆ” ; ಜನಪದರ ಜೀವನೋತ್ಸಾಹದ ಚಿಲುಮೆ :

'ಚಾಮಚೆಲುವೆ' ಜಾನಪದ ದೃಶ್ಯಕಾವ್ಯ ರಂಗಪ್ರಯೋಗ :




ಪೌರಾಣಿಕ ಪರಿಕಲ್ಪನೆಗಳನ್ನು ಪುರೋಹಿತಶಾಹಿಗಳು ಕಾಲಕಾಲಕ್ಕೆ ಕಟ್ಟಿಕೊಟ್ಟು ಜನತೆಯನ್ನು ನಂಬಿಸಿರುವುದಕ್ಕೂ ಹಾಗೂ ಅದೇ ಪುರಾಣ ಪಾತ್ರ-ಸನ್ನಿವೇಶಗಳನ್ನು ಜನಪದರು ತಮ್ಮ ಬದುಕಿನ ಭಾಗವಾಗಿ ಪರಿಭಾವಿಸಿ ಜನಪದ ಕಾವ್ಯಗಳಲ್ಲಿ ಅನಾವರಣ ಮಾಡಿರುವುದಕ್ಕೂ ಅಗಾಧವಾದ ವ್ಯತ್ಯಾಸಗಳಿವೆ. ಪಾತ್ರಗಳಲ್ಲಿ ಸಾಮ್ಯತೆಗಳಿವೆಯಾದರೂ ಸನ್ನಿವೇಶಗಳು ಹಾಗೂ ಕಥಾ ನಿರೂಪಣೆಗಳು ವಿಭಿನ್ನವಾಗಿವೆ. ಪುರೋಹಿತಶಾಹಿ ವರ್ಗವು ಸ್ವರ್ಗ ನರಕ ದೇವಲೋಕಗಳ ಅಲೌಖಿಕ ಪ್ರಪಂಚವೊಂದನ್ನು ಸೃಷ್ಟಿಸಿ ಅದಕ್ಕೆ ಪೂರಕವಾಗಿ ಕಥೆಗಳನ್ನು ಕಟ್ಟುತ್ತಾ ದೇವಾನು ದೇವತೆಗಳನ್ನು ಆರಾಧನಾ ಮೂರ್ತಿಗಳನ್ನಾಗಿ ಭಕ್ತಿ-ಭಯದ ಕೇಂದ್ರವಾಗಿಸಿ ವೈಭವೀಕರಿಸುತ್ತಾ ಬಂದಿದ್ದರೆ.... ಶ್ರಮಸಂಸ್ಕೃತಿಯ ಹರಿಕಾರರಾದ ಜನಪದರು ದೇವತೆಗಳನ್ನು ಅವುಗಳ ದಿವ್ಯ ಪಟ್ಟದಿಂದ ಕೆಳಗಿಳಿಸಿ ಸಾಮಾನ್ಯ ಮನುಷ್ಯನ ಪ್ರತಿರೂಪವನ್ನಾಗಿಸಿ ಕಥೆ ಕಾವ್ಯಗಳನ್ನು ಕಟ್ಟಿ ಜನಸಾಮಾನ್ಯರಿಗೆ ದೇವರನ್ನು ಹತ್ತಿರವಾಗಿಸಿದರು. ಮೇಲ್ವರ್ಗದವರ ಪುರಾಣ ಸೃಷ್ಟಿಗೆ ಪ್ರತಿಯಾಗಿ ತಳಸಮುದಾಯಗಳು ಸೃಷ್ಟಿಸಿದ ಮಿಥ್ಗಳು ಸಾಂಸ್ಕೃತಿಕ ಸಂಘರ್ಷದ ಭಾಗವಾಗಿಯೇ ಬೆಳೆದು ಬಂದವು. ಮಂಟೇಸ್ವಾಮಿ, ಕರಿಭಂಟ, ಜುಂಜಪ್ಪ, ಒಗ್ಗಕಥಾ, ಬುರ್ರಕಥಾದಂತಹ ತಳಸಮುದಾಯದ ಜನಪದ ಕಾವ್ಯಗಳು ತಮ್ಮ ಜಾತಿ ಅಸಮಾನತೆಯ ಸಂಕಷ್ಟಗಳನ್ನು ಮೀರಲು ಪ್ರಧಾನ ಸಂಸ್ಕೃತಿಯೆದುರು ತಮ್ಮದೇ ಆದ ಐಡೆಂಟಿಟಿಯನ್ನು ಕಟ್ಟಿಕೊಳ್ಳಲು ಗಟ್ಟಿಯಾದ ಕಾವ್ಯ ಪ್ರಕಾರಗಳನ್ನು ಮೌಖಿಕ ಪರಂಪರೆಯಲ್ಲಿ ತಲೆಮಾರಿನಿಂದ ತಲೆಮಾರಿಗೆ ಉಳಿಸಿ   ಬೆಳೆಸುತ್ತಲೇ ಬಂದರು. ಅಂತಹ ಜನಪದ ಕಾವ್ಯ ಪ್ರಕಾರಗಳಲ್ಲಿ ನಂಜುಂಡ-ಚಾಮುಂಡಿ ಕಥನ ಕಾವ್ಯವೂ ಒಂದು.

ಮಂಡ್ಯ ಮೈಸೂರು ಚಾಮರಾಜನಗರ ಮೂರು ಜಿಲ್ಲೆಗಳಲ್ಲಿ ಕಥನ ಕಾವ್ಯ ಪ್ರಸಿದ್ಧಿಯಾಗಿದೆ. ನೀಲಗಾರರು, ತಂಬೂರಿಯವರು, ಕಂಸಾಳೆಯವರು ಕಥನ ಕಾವ್ಯವನ್ನು ಈಗಲೂ ಹಾಡುತ್ತಾ ಪ್ರಧಾನ ಸಂಸ್ಕೃತಿಗೆ ಎದುರಾಗಿ ಪ್ರತಿಸಂಸ್ಕೃತಿಯೊಂದನ್ನು ಉಳಿಸುತ್ತಲೇ ಬಂದಿದ್ದಾರೆ. ಮೌಖಿಕ ಪರಂಪರೆಯ ನಂಜುಂಡ ಚಾಮುಂಡಿ ಕಥನಕಾವ್ಯವನ್ನು ಮೊದಲ ಬಾರಿಗೆ ಅರ್ಚಕ ಬಿ.ರಂಗಸ್ವಾಮಿಯವರು 1933 ರಲ್ಲಿ ನಂಜುಂಡ ಬಿಡೆ ಸೆರಗ ಎನ್ನುವ ಹೆಸರಲ್ಲಿ ಅಕ್ಷರ ಮಾಧ್ಯಮದಲ್ಲಿ ದಾಖಲಿಸಿದರು. ಕಥನ ಕಾವ್ಯದ ಕುರಿತು ೧೯೫೮ರಲ್ಲಿ ಪ್ರಜಾವಾಣಿಯಲ್ಲಿ ಲೇಖನ ಬಂದನಂತರ ನಾಡಿನ ಬೇರೆ ಭಾಗಗಳಲ್ಲೂ ಸಹ ಕಥನಕಾವ್ಯದ ಕುರಿತು ಅರಿವು ಮೂಡಿತು. ಡಾ.ಕೆ.ಮರುಳಸಿದ್ದಪ್ಪ, ಜಿ.ಶಂಪಾ, ಕ್ಯಾತನಹಳ್ಳಿ ರಾಮಣ್ಣ, ಪಿ.ಕೆ.ರಾಜಶೇಖರ, ಮತಿಗಟ್ಟೆ ಕೃಷ್ಣಮೂರ್ತಿ, ಕಾರಾಕೃ.... ಹೀಗೆ ಹತ್ತಕ್ಕೂ ಹೆಚ್ಚು ಜನರು ಬೇರೆ ಬೇರೆ ಗಾಯಕರುಗಳಿಂದ ಕಥನಕಾವ್ಯವನ್ನು ಸಂಗ್ರಹಿಸಿ ಬೇರೆ ಬೇರೆ ಶೀರ್ಷಿಕೆಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ಜನಪದ ಕಾವ್ಯವನ್ನು ಪ್ರಚಾರ ಪಡಿಸಿದರು. ಇವೆಲ್ಲವುಗಳನ್ನು ಅಧ್ಯಯನ ಮಾಡಿದ ಜಾನಪದ ತಜ್ಞೆ  ಡಾ.ಸುಜಾತಾ ಅಕ್ಕಿಯವರು ಚಾಮಚೆಲುವೆ ಹೆಸರಲ್ಲಿ (2012) ಜನಪದ ಕಥನಕಾವ್ಯವನ್ನು ರಂಗರೂಪಗೊಳಿಸಿದರು. ಮಂಡ್ಯ ರಮೇಶರವರು ತಮ್ಮ ನಟನಾ ತಂಡಕ್ಕೆ ಚಾಮಚೆಲುವೆಯನ್ನು ನಿರ್ದೇಶಿಸಿ ಕೆಲವಾರು ಅಡೆತಡಗಳ ನಡುವೆಯೂ 68 ಯಶಸ್ವಿ ಪ್ರದರ್ಶನಗಳನ್ನು ಮಾಡುತ್ತಾ ಮಂಡ್ಯ ಮೈಸೂರು ಚಾಮರಾಜಪೇಟೆ ಪ್ರಾಂತ್ಯಗಳಲ್ಲಿ ಮಾತ್ರ ಪ್ರಚಾರದಲ್ಲಿದ್ದ ಜನಪದ ಕಥನಕಾವ್ಯವನ್ನು ನಾಡಿನಾದ್ಯಂತ ನಾಟಕ ರೂಪದಲ್ಲಿ ಪರಿಚಯಿಸಿ ಯಶಸ್ವಿಯಾದರು.

ಮೈಸೂರಿನ ದಸರಾ ಹಬ್ಬದ ಪ್ರಯುಕ್ತ ನಟನಾ ರಂಗಶಾಲೆಯು ಮೂರು ನಾಟಕಗಳ ಪ್ರದರ್ಶನಗಳನ್ನು ಮೈಸೂರಿನ ನಟನಾ ರಂಗಮಂದಿರದಲ್ಲಿ ಅಕ್ಟೋಬರ್ 21 ರಿಂದ 23 ವರೆಗೆ ಆಯೋಜಿಸಿತ್ತು. 22 ಮತ್ತು 23 ರಂದು ಚಾಮಚೆಲುವೆ ನಾಟಕ ಹೌಸ್ಪುಲ್ ಪ್ರದರ್ಶನ ಕಂಡು ನೋಡುಗರನ್ನು ಜಾನಪದ ಕಥನಕಾವ್ಯದಲ್ಲಿ ಮುಳುಗಿಸಿ ನಗುವಿನಲೆಯಲ್ಲಿ ತೇಲಿಸುವಲ್ಲಿ ಸಫಲವಾಯಿತು.


ಚಾಮಚೆಲುವೆ ನಾಟಕದ ಸಂಕ್ಷಿಪ್ತ ಕಥೆ ಹೀಗಿದೆ. ಮಹಿಷಾಸುರ ಉಗ್ರ ತಪಸ್ಸು ಮಾಡಿ ಕನ್ಯೆಯನ್ನು ಹೊರತು ಪಡಿಸಿ ಯಾರಿಂದಲೂ ಸಾವು ಬರಬಾರದು ಹಾಗೂ ತನ್ನ ದೇಹದಿಂದ ಒಂದು ಹನಿ ರಕ್ತ ಬಿದ್ದರೂ ಅದರಿಂದ ತನ್ನಷ್ಟೇ ಬಲಶಾಲಿಗಳಾದ ಕೋಟಿ ರಕ್ಕಸರು ಹುಟ್ಟಿಬರಬೇಕು ಎಂಬ ವರಪಡೆದು ದೇವತೆಗಳನ್ನು ಭಯಭೀತರನ್ನಾಗಿಸುತ್ತಾನೆ. ಮಹಿಷನ ಸಂಹಾರಕ್ಕಾಗಿಯೇ ಹುಟ್ಟಿಬಂದ ಚಾಮುಂಡಿಯು  ಮಹಾಬಲಾದ್ರಿಗೆ ಬಂದು ತನ್ನ ಬೆವರು ಹನಿಯಿಂದ ಹುಟ್ಟಿದ ಉರಿಮಾರಿಯ ಸಹಾಯದಿಂದ ಮಹಿಷಾಸುರನನ್ನು ಸಾಯಿಸುತ್ತಾಳೆ. ಇಲ್ಲಿವರೆಗೂ ನಾಟಕ ರೌದ್ರ ವೀರ ರಸದಲ್ಲಿ ಗಂಭೀರವಾಗಿ ನಡೆಯುತ್ತಿದ್ದುದು ನಂಜನಗೂಡಿನ ನಂಜುಂಡ ದೇವರು ಚಾಮುಂಡಿಗೆ ಮರುಳಾಗುವುದರ ಮೂಲಕ ಶೃಂಗಾರ ಹಾಗೂ ಹಾಸ್ಯರಸದಲ್ಲಿ ಮುಂದುವರೆಯುತ್ತದೆ. ನೋಡುಗರಿಗೆ ಹಾಸ್ಯರಸದೌತನ ಉಣಬಡಿಸುತ್ತದೆ.

ಚಾಮುಂಡಿಯನ್ನು ಮೂರನೆಯ ಹೆಂಡತಿಯನ್ನಾಗಿ ಸ್ವೀಕರಿಸಿದ್ದು ಗೊತ್ತಾದ ನಂಜುಂಡನ ಹೆಂಡತಿಯರಾದ ದೇವೀರಿ ಹಾಗೂ ಪಾರ್ವತಿಯರು ತಮ್ಮ ಗಂಡನನ್ನು ಗೃಹಬಂಧನದಲ್ಲಿಟ್ಟು ತಮ್ಮಂದಿರನ್ನು ಕಾವಲಿಗಿಡುತ್ತಾರೆ. ಅದು ಹೇಗೋ ಮನೆಯಿಂದ ತಪ್ಪಿಸಿಕೊಂಡು ಚಾಮುಂಡಿಯ ಬಳಿ ಬಂದ ನಂಜುಂಡನನ್ನು ಬೆಂಬತ್ತಿ ಬಂದ ದೇವೀರಿಯು ಚಾಮುಂಡಿಯನ್ನು ನಿಂದಿಸಿ ಗಂಡನನ್ನು ಹಿಡಿದೆಳೆದುಕೊಂಡು ಹೋಗಿ ಮತ್ತೆ ಬಂಧಿಸಿಟ್ಟು ಕಾವಲಾಗುತ್ತಾರೆ. ವಿರಹವೇದನೆ ತಾಳದ ಚಾಮುಂಡಿಯು ಶ್ರೀರಂಗಪಟ್ಟಣದ ರಂಗನಾಥಸ್ವಾಮಿಯ ಸಹಾಯ ಕೇಳುತ್ತಾಳೆ. ರಂಗನಾಥಸ್ವಾಮಿಯ ಉಪಾಯದಂತೆ ನಂಜುಂಡನು ಖಾಯಿಲೆ ಬಂದು ಸತ್ತಂತೆ ನಟಿಸುತ್ತಾನೆ. ಕಣಿಯಮ್ಮನ ವೇಷದಲ್ಲಿ ಬರುವ ಚಾಮುಂಡಿಯು ನಂಜುಂಡಸ್ವಾಮಿಯ ಹಾಲಿ ಇರುವ ಹೆಂಡರಿಬ್ಬರೂ ಮೂರನೆಯವಳನ್ನೂ ಒಪ್ಪಿಕೊಂಡು ಆಕೆಯ ಬಳಿ  ಆರು ತಿಂಗಳು ಇರಲು ನಂಜುಂಡನನ್ನು ಕಳುಹಿಸುವ ನಿಬಂಧನೆಯ ಮೇರೆಗೆ ನಂಜುಂಡನನ್ನು ಬದುಕಿಸುವ ನಾಟಕ ಮಾಡುತ್ತಾಳೆ. ತದನಂತರ ಹೆಂಡತಿಯರಿಬ್ಬರೂ ಚಾಮುಂಡಿ ಹಾಗೂ ನಂಜುಂಡನನ್ನು ಒಂದು ಮಾಡುವುದರೊಂದಿಗೆ ನಾಟಕ ಸುಖಾಂತ್ಯವಾಗುತ್ತದೆ. ನಕ್ಕು ಸುಸ್ತಾದ ಪ್ರೇಕ್ಷಕರಿಗೊಂದಿಷ್ಟು ರಿಲೀಪ್ ದೊರೆಯುತ್ತದೆ.



ವಿವಾಹೇತರ ಸಂಬಂಧಗಳ ಸುಳಿಯಲ್ಲಿ ಸಿಕ್ಕು ಪರದಾಡುವ ಜನಸಾಮಾನ್ಯರ ಪರಿಪಾಟಲನ್ನು ದೇವಾನುದೇವತೆಗಳಿಗೆ ಹೋಲಿಸಿ ಕಾವ್ಯವಾಗಿಸುವ ಜನಪದರ ಕಥನಶಕ್ತಿ ಬಲು ವಿಶಿಷ್ಟವಾದದ್ದು. ಮನುಷ್ಯರಂತೆ  ದೇವರುಗಳೂ ಸಹ ಸಂಸಾರ ಸಮಸ್ಯೆಗಳಿಗೆ ಹಾಗೂ ಸಂಬಂಧಗಳ ತಾಪತ್ರಯಗಳಿಗೆ ಹೊರತಲ್ಲ ಎನ್ನುವುದನ್ನು ಜನಪದರ ಕಾವ್ಯಗಳು ಬಲು ಸೊಗಸಾಗಿ ಕಟ್ಟಿಕೊಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ತಾವು ಆರಾಧಿಸುವ ದೇವರುಗಳನ್ನು ವಿಡಂಬನಾತ್ಮವಾಗಿ ತೋರಿಸುವಲ್ಲಿ... ಅಗತ್ಯವಿದ್ದಾಗ ದೇಸಿ ಬೈಗಳುಗಳನ್ನು ಬಳಸಿ ನಿಂದಿಸುವಲ್ಲಿ ಜನಪದರು ತಮ್ಮ ಸೃಜನಶೀಲ ಸ್ವಾತಂತ್ರ್ಯವನ್ನು ಮೆರೆಯುತ್ತಾರೆ. .. ಅವಂಗ್ ಹಾವಾದ್ರೂ ಕಚ್ಚಬಾರ್ದಾ.. ನಾಲ್ಕಾರು ಜ್ವರ ಬಂದು ನರಳಾಡಿ  ಸಾಯಬಾರ‍ದಾ, ಕಳ್ಳ ಅವನ ಮನೆಯ ತೊಳಿಯಾ ಬರಲಿಲ್ಲ ತಂಗೆವ್ವಾ... ತಂದಾನಾ ತಾನನಾ....  ಎಂದು ಚಾಮುಂಡಿಯ ಮಾತಲ್ಲಿ ನಂಜುಂಡನನ್ನು ಇನ್ನಿಲ್ಲದಂತೆ ಹಾಡಿನಲ್ಲಿ ನಿಂದಿಸುವುದನ್ನು ಜನಪದರು ತಮ್ಮ ಕಾವ್ಯದಲ್ಲಿ ರೂಢಿಸಿಕೊಂಡಿದ್ದಾರೆ. ಜನಪದರ ಶಿವ ದೈವೀಕ ಪುರಷನಲ್ಲ... ಪಾರ್ವತಿ ಶಕ್ತಿದೇವತೆಯಲ್ಲ... ಅಸುರ ಸಂಹಾರಿಣಿ ಚಾಮುಂಡಿ ಅಧಿದೇವತೆಯಲ್ಲ... ಇವರೆಲ್ಲಾ ಜನಸಾಮಾನ್ಯರ ಪ್ರತಿನಿಧಿಗಳಾಗಿದ್ದಾರೆ. ಪರಸ್ತ್ರೀ ವ್ಯಾಮೋಹಿ ಗಂಡನನ್ನು ಹದ್ದುಬಸ್ತಿನಲ್ಲಿಡಲು ಗಯ್ಯಾಳಿಗಳಾಗಿ ಗಂಗೆ ಗೌರಿಯರು ತಮ್ಮದೇ ರೀತಿಯಲ್ಲಿ ಪ್ರತಿಭಟಿಸುತ್ತಾರೆ. ಇನ್ನೊಬ್ಬಳಿಗೆ ಗಂಡ ಮರುಳಾಗಿದ್ದು ತಿಳಿದು ಸವತಿ ಮತ್ಸರದಿಂದ ಅಬ್ಬರಿಸುತ್ತಾರೆ. ಹೆಂಡಿರುಗಳ ಆಟಾಟೋಪಕ್ಕೆ ನಂಜುಂಡ ಸಹ ಅಸಹಾಯಕನಾಗುತ್ತಾನೆ. ಇದೆಲ್ಲಾ ಬಹುತೇಕ ವಿವಾಹ ಬಾಹಿರ ಸಂಬಂಧಗಳ ಸಂದರ್ಭದಲ್ಲಿ ನಡೆಯುವಂತಹ ಘಟನೆಗಳು. ಇಂತಹ ಸನ್ನಿವೇಶವನ್ನು ದೇವರಿಗೆ ಆರೋಪಿಸಿ... ಸಂಬಂಧಗಳನ್ನು ಕಲ್ಪಿಸಿ... ಸಂಘರ್ಷಗಳನ್ನು ಹುಟ್ಟಿಸಿ.. ಅದಕ್ಕೊಂದು ಊಹಾತೀತ ಪರಿಹಾರವನ್ನೂ ಸೃಷ್ಟಿಸಿ... ಕಥನವನ್ನು ಕಟ್ಟಿ ಕಾವ್ಯದಲ್ಲಿ ಹಾಡುವ ಜನಪದ ಹಾಡುಗಾರರ ಪರಿಕಲ್ಪನೆಯನ್ನು ನಾಟಕದಲ್ಲಿ ನೋಡಿದವರು ಬೆರಗಾಗದೇ ಇರಲು ಸಾಧ್ಯವೇ ಇಲ್ಲ. ಪುರೋಹಿತ ಪುರಾಣಗಳಲ್ಲಿ ಅಸಮಾನ್ಯ ಶಕ್ತಿವಂತ ದೇವರು ಜನಪದರ ಕಾವ್ಯಗಳಲ್ಲಿ ಸಾಮಾನ್ಯ ಮನುಷ್ಯನ ರೂಪದಲ್ಲಿ ಅನಾವರಣಗೊಳ್ಳುವುದನ್ನು ಚಾಮಚಲುವೆ ನಾಟಕ ನೋಡಿಯೇ ಸವಿಯಬೇಕು. ಜನಪದರ ಪ್ರತಿಸೃಷ್ಟಿಗೆ ಬಹುಪರಾಕ್ ಹೇಳಲೇಬೇಕು.


ಚಾಮಚೆಲುವೆ ನಾಟಕವು ಹಾಸ್ಯರಸ ಪ್ರಧಾನವಾಗಿದ್ದರೂ ಅದರೊಳಗೆ ವರ್ಗಸಂಘರ್ಷ, ಜಾತಿ ತಾರತಮ್ಯ, ಆಹಾರ ಸಂಸ್ಕೃತಿಯ ಸಂಘರ್ಷ, ಸವತಿ ಮತ್ಸರ.... ಮುಂತಾದ ಸಾಮಾಜಿಕ ಅಂಶಗಳನ್ನು ಕುರಿತು ಚರ್ಚಿಸಲಾಗಿದೆ. ದೇವರುಗಳನ್ನು ಇಲ್ಲಿ ರೂಪಕವಾಗಿ ಬಳಸಿಕೊಂಡು ಸಮಾಜದ ವೈರುದ್ಯಗಳನ್ನು ವಿಡಂಬನಾತ್ಮಕವಾಗಿ ಹೇಳುವ ಪ್ರಯತ್ನವನ್ನು ನಾಟಕ ಪ್ರಜ್ಞಾಪೂರ್ವಕವಾಗಿಯೇ ಮಾಡುತ್ತದೆ. ದೇವೀರಿ ಹಾಗೂ ಪಾರ್ವತಿ ಇಬ್ಬರೂ ಉತ್ತಮ ಕುಲದ ಮೇಲ್ವರ್ಗಕ್ಕೆ ಸೇರಿದವರಾಗಿದ್ದು ಯಾವಾಗ ಅವರ ಗಂಡ ಕೆಳಜಾತಿಯ ಚಾಮುಂಡಿಯ ಜೊತೆ ಸಂಬಂಧ ಬೆಳೆಸುತ್ತಾನೋ ಆಗ ಸವತಿ ಮತ್ಸರ ಜಾತಿ ಮತ್ಸರವೂ ಆಗಿ ಬದಲಾಗುತ್ತದೆ. ಕೀಳು ಜಾತಿಯ ಕನ್ಯೆ ಮೇಲ್ಜಾತಿಯವನ ಜೊತೆ ಸೇರಿದ್ದರಿಂದ ಚಾಮುಂಡಿಯನ್ನು ನಿಂದಿಸಲಾಗುತ್ತದೆ ಜಾತಿಯ ತಾರತಮ್ಯದ ಜೊತೆಗೆ ಸಸ್ಯಾಹಾರ ಮತ್ತು ಮಾಂಸಾಹಾರದ ಸಂಘರ್ಷವೂ ಸೇರಿಬಿಡುತ್ತದೆ. ಕುರಿ ಕೋಳಿ ಕೋಣ ತಿನ್ನುವವಳು ಕೀಳೆಂದು ನಂಜುಂಡನ ಹೆಂಡರು ಕೆಳವರ್ಗದ ಪ್ರತಿನಿಧಿಯಾದ ಚಾಮುಂಡಿಯನ್ನು ನಿಂದಿಸುತ್ತಾರೆ. ಆಗಿನಿಂದ ಈಗಲೂ ಜಾತಿಯತೆಯ ಜೊತೆಗೆ ತಿನ್ನುವ ಆಹಾರವೂ ಸೇರಿಕೊಂಡು ಮಾಂಸ ಕೀಳುಕುಲದವರ ಆಹಾರ ಹಾಗೂ ಸಸ್ಯಜನ್ಯ ಆಹಾರ ಮೇಲ್ವರ್ಗದವರದು ಎಂಬಂತೆ ನಂಬಿಕೆಗಳು ಜಾತಿ ವ್ಯವಸ್ಥೆಯಲ್ಲಿ  ಗಟ್ಟಿಗೊಂಡಿವೆ. ಜಾತಿ ಹಾಗೂ ಆಹಾರಗಳ ತಾರತಮ್ಯವನ್ನು ಚಾಮಚಲುವೆ ನಾಟಕ ಪ್ರಶ್ನಿಸುತ್ತದೆ. ಪ್ರೀತಿ ಮುಖ್ಯವೇ ಹೊರತು ಜಾತಿಯಲ್ಲಾ... ಬದುಕಲು ಊಟ ಮುಖ್ಯವೇ ಹೊರತು ತಿನ್ನುವ ಆಹಾರದಲ್ಲಿ ತಾರತಮ್ಯ ಬೇಕಿಲ್ಲ ಎಂಬ ಸಾರ್ವಕಾಲಿಕ ಸತ್ಯವನ್ನು ಹೇಳುವಲ್ಲಿ ಚಾಮಚೆಲುವೆ ಸಫಲವಾಗಿದೆ.
  
ಜನಪದರು ಅದೆಷ್ಟೇ ಸಮಾನತೆಯ ಹರಿಕಾರರು ಎಂದರೂ ಸಹ ಪುರುಷ ಪ್ರಧಾನ ವ್ಯವಸ್ಥೆಯ ಭಾಗವಾಗಿಯೇ ಕಥೆ-ಕಾವ್ಯ-ಹಾಡುಗಳನ್ನು ಕಟ್ಟುತ್ತಾ ಬಂದಿದ್ದಾರೆ. ನಂಜುಂಡ-ಚಾಮುಂಡಿ ಪ್ರತಿಪುರಾಣದಲ್ಲೂ ಸಹ ಪಿತೃಪ್ರಧಾನ ವ್ಯವಸ್ಥೆಯ ಮೌಲ್ಯಗಳೇ ಬಿಂಬಿತವಾಗಿವೆನಂಜುಂಡನಿಗೆ ಇಬ್ಬರು ಹೆಂಡಿರಿದ್ದೂ ಮೂರನೆಯವಳನ್ನು ಇಟ್ಟುಕೊಂಡಿದ್ದು ಇಲ್ಲಿ ಅಪರಾಧವಾಗಿ ಕಾಣಿಸುವುದೇ ಇಲ್ಲ. ಆತನೇನೋ ಗಂಡಸು ಬೇಕಾದ್ದು ಮಾಡುತ್ತಾನೆ.. ನೀನು ಹೆಣ್ಣು ನಿನಗೆ ನಾಚಿಕೆ ಆಗುವುದಿಲ್ಲವೇ? ಎಂದು ದೇವೀರಿ ಚಾಮುಂಡಿಯನ್ನು ಪ್ರಶ್ನಿಸುತ್ತಾಳೆ. ಗಂಡಸಿಗೆ ಬೇಕಾದಷ್ಟು ರಿಯಾಯಿತಿಯನ್ನೂ ಮಹಿಳೆಯರಿಗೆ ನಿಬಂಧನೆಯನ್ನು ವಿಧಿಸಿರುವುದು ಮಾತುಗಳಿಂದಲೇ ಸಾಬೀತಾಗುತ್ತದೆಎಲ್ಲರೂ ಮಾಡುವುದನ್ನೇ ನಾನು ಮಾಡಿದ್ದೇನೆ.. ಎಂದು ನಂಜುಂಡ ತನ್ನ ಪರಸ್ತ್ರೀ ಮೋಹವನ್ನು ಸಮರ್ಥಿಸಿಕೊಳ್ಳುವುದರಲ್ಲೂ ಪುರುಷರು ಏನು ಮಾಡಿದರು ಸರಿ ಎನ್ನುವ ಭಾವನೆಯೇ ಇದೆ. ಗಂಡಸರು ಹಾದರ ಮಾಡಿದ್ರೂ ಮಡಿ, ಮಾಡದಿದ್ರೂ ಮಡಿ ಎನ್ನುವ ದೇವಿರೀ ಮಾತುಗಳು ಗಂಡಸರ ಅನೈತಿಕ ಸಂಬಂಧಗಳನ್ನು ಸಮರ್ಥಿಸುವಂತಿವೆ. ಕೊನೆಗೂ ನಾಟಕದಲ್ಲಿ ಮಹಿಳೆಯರನ್ನು ಖಳನಾಯಕಿರನ್ನಾಗಿ ಬಿಂಬಿಸಿ... ಹೆಂಡತಿಯರ ನಂಬಿಕೆಗೆ ಮೋಸಮಾಡಿದ ನಂಜುಂಡನನ್ನು ಅಸಹಾಯಕ ಅಮಾಯಕ ಎನ್ನುವಂತೆ ಚಿತ್ರಿಸುತ್ತಾ ನಂಜುಂಡನ ಮೇಲೆ ನೋಡುಗರು ಸಹಾನುಭೂತಿ ಸಿಗುವಂತೆ ಮಾಡಿದ್ದರಲ್ಲಿ ನಾಟಕದ ನಿರ್ದೇಶಕರಿಗಿಂತ ಜನಪದರ ಪುರುಷ ಪ್ರಧಾನತೆಯೂ ಕೆಲಸ ಮಾಡಿದೆ.


ಡಾ.ಸುಜಾತಾರವರು ತಮ್ಮ ರಂಗರೂಪದ ಕೊನೆಗೆ ನಂಜುಂಡೇಶ್ವರನಂತೆ ನೀವು ಮಾಡಬೇಡಿ... ಮಾಡಿದ್ರೆ ನಿಮಗೂ ಹೀಗೆ ಪರದಾಡುವ ಪರಿಸ್ಥಿತಿ ಬರುತ್ತದೆ... ಎಂಬ ಸಂದೇಶವನ್ನು ಮೇಳದ ನಾಯಕನ ಮಾತಲ್ಲಿ ಹೇಳಿಸುತ್ತಾ ಪರಸ್ತ್ರೀಮೋಹಿ ಪುರುಷರಿಗೆ ಎಚ್ಚರಿಕೆಯನ್ನು ಕೊಡುತ್ತಾರೆ. ಆದರೆ ನಾಟಕದ ನಿರ್ದೇಶಕರು  ನಾಟಕದಲ್ಲಿ ಸಂದೇಶವನ್ನು ಮರೆಮಾಚಿದ್ದರ ಹಿಂದೆ ಅವರ ಪುರುಷ ಶ್ರೇಷ್ಠ ಪ್ರೀತಿಯೂ ಕೆಲಸಮಾಡಿದೆಯಾ....? ಗೊತ್ತಿಲ್ಲ. ಸ್ತ್ರೀ ಪ್ರಧಾನ ನೆಲಗಟ್ಟಿನಿಂದ ಆರಂಭಗೊಂಡ ನಾಟಕ ನಂತರ ಬಹುತೇಕ ಪುರುಷ ಪರ ವ್ಯವಸ್ಥೆಯ ಪ್ರತಿಪಾದನೆಯನ್ನೇ ಮಾಡುತ್ತದೆ ಹಾಗೂ ಉದ್ದೇಶಕ್ಕೆ ಮಹಿಳೆಯರನ್ನೇ ಅಸ್ತ್ರಗಳನ್ನಾಗಿ ಬಳಕೆ ಮಾಡಿಕೊಂಡಂತಿದೆ. ಇಲ್ಲಿ  ಗಂಡು ಎಲ್ಲ ತಪ್ಪುಗಳನ್ನು ಮಾಡಿಯೂ ಆದರಣೀಯವಾದರೆ ತನ್ನ ಪಾಲುದಾರಿಕೆ ಬಿಟ್ಟು ಕೊಡಲು ನಿರಾಕರಿಸಿ ಗಯ್ಯಾಳಿಯಾದ ಹೆಂಡತಿಯರು ಇಲ್ಲಿ ಆರೋಪಿಗಳಂತಾಗಿದ್ದಾರೆ. ಅಪರಾಧಿ ಗಂಡಸನ್ನು ಬಲು ಜಾಣ್ಮೆಯಿಂದ ಖುಲಾಸೆಗೊಳಿಸಲಾಗಿದೆ. ಮಹಿಳೆಯನ್ನು ಮಹಿಳೆಯ ಮೇಲೆ ಎತ್ತಿಕಟ್ಟಿ  ಹೆಣ್ಣಿಗೆ ಹೆಣ್ಣೆ ಶತ್ರು ಎನ್ನುವಂತೆ ಚಿತ್ರಿಸಲಾಗಿದೆಕೊನೆಗೂ ಎಲ್ಲ ಅಸೂಯೆ, ಜಾತಿ, ಅಂತಸ್ತುಗಳ ಅಂತರವನ್ನು ಕಡಿಮೆಗೊಳಿಸಿ ಗಯ್ಯಾಳಿಗಳಾಗಿದ್ದ ಹೆಂಡತಿಯರನ್ನು ಅನಿವಾರ್ಯವಾಗಿ ರಾಜಿಗೆ ಒಪ್ಪಿಸಿದ್ದು ಮತ್ತದೇ ಪುರೋಹಿತಶಾಹಿ ಪರಿಕಲ್ಪನೆಯಾದ ಮುತೈದೆ ಭಾಗ್ಯ ಎನ್ನುವ ಹುಸಿ ಮೌಲ್ಯ. ಗಂಡ ಸತ್ತಿದ್ದಕ್ಕಿಂತಲೂ ತಮ್ಮ ಮುತೈದೆತನ ಹೋಯಿತಲ್ಲಾ... ಚಿನ್ನದ ಬಳೆಗಳನ್ನೊಡೆದು ಮುಂಡೆಯರಾಗಬೇಕಲ್ಲಾ ಎನ್ನುವ ಭಯವೇ ಪಾರ್ವತಿ ಹಾಗೂ ದೇವೀರಿಯರನ್ನು ಎಲ್ಲಾ ರೀತಿಯ ಹೊಂದಾಣಿಕೆಗೆ ಪ್ರೇರೇಪಿಸುತ್ತದೆ. ನಂಬಿಕೆ ದ್ರೋಹಿ ಗಂಡ ಬೇರೊಬ್ಬಳ ಪಾಲಾದರೂ ಚಿಂತೆಯಿಲ್ಲ ಮುತೈದೆತನ ಮಾತ್ರ ಉಳೀಯಬೇಕು ಎನ್ನುವ ನಂಬಿಕೆಯನ್ನು ಹುಟ್ಟಿಹಾಕಿದ್ದೂ ಸಹ ಇದೇ ಪಿತೃಪ್ರಧಾನ ವ್ಯವಸ್ಥೆಯೇ ಆಗಿದೆ. ಅದನ್ನೇ ಚಾಮಚೆಲುವೆ ನಾಟಕ ಪ್ರಸ್ತುತಪಡಿಸುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ಅದೆಷ್ಟೇ ಹೋರಾಡಿದರೂ ಹಾರಾಡಿದರೂ ಪುರುಷರು ತಂತ್ರ ಕುತಂತ್ರಗಳನ್ನು ಮಾಡಿ ತಾವು ಅಂದುಕೊಂಡ ಕಾರ್ಯವನ್ನು ಸಾಧಿಸುತ್ತಾರೆನ್ನುವ ಸತ್ಯವನ್ನು ನಾಟಕದಲ್ಲಿ ನೋಡಬಹುದಾಗಿದೆ.


ಜಾನಪದ ಪುರಾಣಗಳಲ್ಲಿ ತರ್ಕವನ್ನು ಹುಡುಕುವುದು ಅಸಾಧ್ಯವೆನಿಸುತ್ತದೆ. ಚಾಮಚೆಲುವೆಯಲ್ಲೂ ಸಹ ತರ್ಕಕ್ಕೆ ನಿಲುಕದ ಅನೇಕ ವಿಷಯಗಳಿವೆ. ಬಿಜ್ಜಳರಾಜನ ಕೊನೆಯ ಮಗಳು ಚಾಮುಂಡಿ ಎಂದು ಪ್ರಸ್ತಾಪಿಸುವ ನಾಟಕದಲ್ಲೇ ಚಾಮುಂಡಿ ಕೀಳುಜಾತಿಯ ಹೆಣ್ಣು ಎಂಬುದನ್ನು ಹೇಳಲಾಗುತ್ತದೆ. ರಾಜನ ಮಗಳು ಅದು ಹೇಗೆ ಕೀಳುಕುಲದವಳಾದಳು ಎನ್ನುವುದಕ್ಕೆ ಸಮರ್ಥನೆಗಳಿಲ್ಲಚಾಮುಂಡಿ ಕೀಳು ಕುಲದ ಹೆಣ್ಣೇ ಎಂದುಕೊಂಡರೂ ಮೇಲ್ಜಾತಿಯ ದೇವರು ರಂಗನಾಥಸ್ವಾಮಿ ಹೇಗೆ ಅವಳಿಗೆ ಅಣ್ಣನಾಗುತ್ತಾನೆ? ಗೊತ್ತಿಲ್ಲ....  ನಂಜುಂಡ ಅಂದರೆ ಶಿವನು ತಳಸಮುದಾಯದಿಂದ ಬಂದ ದೇವರು... ಅವನ ಹೆಂಡತಿಯರು ಮಾತ್ರ ಮೇಲ್ವರ್ಗ, ಜಾತಿ, ಅಂತಸ್ತು ಎಂದೆಲ್ಲಾ ಗರ್ವಪಡುತ್ತಾರೆ. ಕೆಳಸಮುದಾಯದ ವೈದ್ಯ ನಂಜುಂಡನಿಗೆ ಮೇಲ್ಜಾತಿಯವರು ಅದು ಹೇಗೆ ಹೆಂಡಿರಾದರು ಎಂಬುದಕ್ಕೆ ಸಮರ್ಪಕ ಉತ್ತರಗಳಿಲ್ಲ. ಪುರೋಹಿತಶಾಹಿಗಳು ವಿದ್ಯಾವಂತರಾಗಿದ್ದು ತಮ್ಮ ಹಿತಾಸಕ್ತಿಗೆ ತಕ್ಕಂತೆ ದೇವರುಗಳ ಸಂಬಂಧಗಳನ್ನು ಹೊಂದಾಣಿಕೆ ಮಾಡಿಕೊಂಡರು. ಆದರೆ ಅನಕ್ಷರಸ್ತರಾದ ಜನಪದರು ಎಲ್ಲಾ ಸಂಬಂಧಗಳ ತಾರ್ಕಿಕತೆಯ ಗೋಜಿಗೆ ಹೋಗದೇ ಕಥೆ ಕಾವ್ಯವನ್ನು ಕಟ್ಟುತ್ತಾ ಹೋದರು. ಇದರಿಂದಾಗಿ ನಂಜುಂಡ-ಚಾಮುಂಡಿ ಕಥನ ಕಾವ್ಯದಲ್ಲಿ ಹಾಗೂ ಅದನ್ನಾಧರಿಸಿದ ಚಾಮಚೆಲುವೆ ನಾಟಕದಲ್ಲಿ ತರ್ಕ ಹಾಗೂ ತಾತ್ವಿಕತೆಯನ್ನು ಹುಡುಕುವುದು ಸಾಧುವಲ್ಲ. ದೇವರುಗಳ ಅತಿಶಯದ ಆಟವನ್ನು ಹಾಗೂ ಅನೇಕ ಅತಿಮಾನುಷ ಪವಾಡಗಳನ್ನು ರೂಪಕಗಳು ಎಂದು ತಿಳಿದುಕೊಂಡು ಅದರಲ್ಲಿ ಸಮಾಜದ ಪ್ರತಿಬಿಂಬವನ್ನು ಕಾಣುವುದು ಸೂಕ್ತವೆನಿಸುತ್ತದೆ. ನಂಜನಗೂಡಿನ ನಂಜುಂಡಸ್ವಾಮಿ, ಮೈಸೂರಿನ ಚಾಮುಂಡೇಶ್ವರಿ ಹಾಗೂ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಮೂರೂ ದೇವತೆಗಳು ಪ್ರಭಲವಾದ ಭಕ್ತಿ ಹಾಗೂ ಶಕ್ತಿ ಕೇಂದ್ರಗಳು. ಮೂರು ದೇವರನ್ನು ಸೇರಿಸಿಕೊಂಡು ಒಂದು ಅನೂಹ್ಯವಾದ ಪ್ರತಿಪುರಾಣವನ್ನು ಕಟ್ಟಿ ಕಥನಕಾವ್ಯವನ್ನು ತಲೆಮಾರುಗಳಿಂದ ಪ್ರಚರಪಡಿಸುತ್ತಿರುವ ಜನಪದ ಗಾಯಕರ ಕಲ್ಪನಾಶೀಲತೆಗೆ ಹಾಗೂ ಕಾವ್ಯಸೃಷ್ಟಿಯ ಬೆರಗಿಗೆ ತಲೆದೂಗಲೇಬೇಕಿದೆ. ಅದಕ್ಕೆ ಸಾಕ್ಷಿಯಾಗಿ ಚಾಮಚೆಲುವೆ ನಾಟಕವನ್ನು ನೋಡಿ ಆನಂದಿಸಲೇಬೇಕು.


ನಾಟಕದ ಮೂಲ ವಸ್ತು-ವಿಷಯ ಏನೇ ಇರಲಿ. ಆದರೆ ಅದನ್ನು ದೃಶ್ಯರೂಪದಲ್ಲಿ ಅನನ್ಯವಾಗಿ ಕಟ್ಟಿಕೊಟ್ಟ ಮಂಡ್ಯ ರಮೇಶರವರ ನಿರೂಪಣಾ ಸಾಮರ್ಥ್ಯವನ್ನು ಹಾಗೂ ಪ್ರಯೋಗಶೀಲ ಪ್ರತಿಭೆಯನ್ನು ಅಭಿನಂದಿಸಲೇಬೇಕು. ಎರಡೂಕಾಲು ಗಂಟೆಯ ದೀರ್ಘ ಅವಧಿಯ ನಾಟಕವು ನೋಡುಗರಿಗೆ ಎಲ್ಲೂ ಒಂಚೂರೂ ಬೋರ್ ಹೊಡಿಸದೇ ಕುತೂಹಲದಿಂದ ನೋಡಿಸಿಕೊಂಡು  ಹೋಗುವಂತೆ ಮೂಡಿಬಂದಿದೆ. ಇದನ್ನು ನಾಟಕ ಎನ್ನುವುದಕ್ಕಿಂತಲೂ ನೃತ್ಯ ಸಂಗೀತ ರೂಪಕ ಎನ್ನುವುದರಲ್ಲಿ ತಪ್ಪೇನಿಲ್ಲ. ಜನಮಾನಸದಲ್ಲಿ ಉಳಿದ ಜನಪದ ಕಾವ್ಯಗಳನ್ನು ಮೇಳದವರ ಮೂಲಕ ಬಳಸಿ ಅದಕ್ಕೆ ಪೂರಕವಾಗಿ ದೃಶ್ಯಗಳನ್ನು ಸಂಯೋಜಿಸಲಾಗಿದ್ದು ನೋಡುಗರಲ್ಲಿ ವಿಶಿಷ್ಟ ಅನುಭೂತಿಯನ್ನು ಹುಟ್ಟಿಸುವಂತಿದೆ. ದೃಶ್ಯಗಳು ಹಾಗೂ ಮೇಳದ ನಿರೂಪಣೆ ಏಕಕಾಲಕ್ಕೆ ಕಥೆಯನ್ನು ಮುನ್ನಡೆಸುತ್ತಾ ಅದಕ್ಕೆ ಪೂರಕವಾಗಿ ಹಾಡು ಹೆಜ್ಜೆ ತಾಳಗಳು ಪ್ರೇಕ್ಷಕರಲ್ಲಿ ರೋಮಾಂಚನವನ್ನುಂಟುಮಾಡುತ್ತವೆ. ಶೈಲೀಕೃತ ಚಲನೆಗಳು, ರಾಗಬದ್ಧ ಸಂಭಾಷಣೆಗಳು ನಾಟಕದ ಕಾವ್ಯಾತ್ಮಕತೆಗೆ ಹೆಚ್ಚಿನ ಮೆರಗನ್ನು ತಂದುಕೊಟ್ಟಿವೆ. ಕಥನಕಾವ್ಯವನ್ನು ದೃಶ್ಯಕಾವ್ಯವಾಗಿಸುವಲ್ಲಿ ನಿರ್ದೇಶಕರ ಪರಿಶ್ರಮ ಪ್ರತಿಯೊಂದು ಹಂತದಲ್ಲೂ ಎದ್ದು ಕಾಣುತ್ತದೆ. ಪೌರಾಣಿಕ ಮಿಥ್ ಕಥನವನ್ನು ಸಮಕಾಲೀನಗೊಳಿಸಲು ನಿರ್ದೇಶಕರು ಸಾಧ್ಯವಾದಲ್ಲೆಲ್ಲಾ ಪ್ರಯತ್ನಿಸಿದ್ದಾರೆ. ನಮ್ಮ ನಮ್ಮ ಇಷ್ಟದಂಗೆ ನಾವ್ಯಾಕೆ ಬದುಕೋಗಾಗೊಲ್ಲಾ.. ಹರಿಯೋ ನೀರು ತಡೆಯೋದ್ಯಾಕೆ?  ಎಂದು ನಂಜುಂಡಸ್ವಾಮಿ ಅಸಹಾಯಕನಾಗಿ  ಪ್ರಶ್ನಿಸಿದಾಗ ಹರಿಯೋ ನೀರು ತಡೆಹಿಡಿಯದಿದ್ರೆ ಕುಡಿಯೋಕು ನೀರಿರೊಲ್ಲ... ಎಂದು ರಂಗನಾಥಸ್ವಾಮಿ ಮಾರ್ಮಿಕವಾಗಿ ಉತ್ತರಿಸುತ್ತಾನೆ. ಇದು ಕಾವೇರಿ ನೀರಿನ ಹಂಚಿಕೆಯ ಸಮಸ್ಯೆಯ ಸಾಂಕೇತಿಕ ಮಾತುಗಳು ಎನ್ನುವುದು ಎಲ್ಲಾ ಪ್ರೇಕ್ಷಕರಿಗೂ ಅರ್ಥವಾಗುತ್ತದೆ. ಇರುವುದನ್ನು ಮುರಿದು ಕಟ್ಟುವುದು ಕ್ರಿಯಾಶೀಲ ನಿರ್ದೇಶಕನ ಪ್ರತಿಭೆಗೆ ಸಾಕ್ಷಿಯಾಗಿದೆ. ಕೆಲಸವನ್ನು ಮಂಡ್ಯ ರಮೇಶ ನಾಟಕದಲ್ಲಿ ಸಾಧಿಸಿದ್ದಾರೆ.. ಇಡೀ ನಾಟಕವನ್ನು ಸಮಕಾಲೀನಗೊಳಿಸುವುದರ ಜೊತೆಗೆ ಸಾರ್ವಕಾಲೀನಗೊಳಿಸಲು ಪ್ರಯತ್ನಿಸಿದ್ದಾರೆ.

ರಂಗವೇದಿಕೆಯ ಎಡಬಲಕ್ಕೆ ಸರಳ ಸೆಟ್ ನಿರ್ಮಿಸಿ ನಡುಮಧ್ಯದಲ್ಲಿ ಕಲಾವಿದರಿಗೆ ಬೇಕಾದಷ್ಟು ಜಾಗವನ್ನು ಮಾಡಿಕೊಟ್ಟಿದ್ದರಿಂದ ನಟರ ಪ್ರತಿಯೊಂದು ನಡೆನುಡಿಯೂ ಪ್ರೇಕ್ಷಕರಿಗೆ ತಲುಪುವಂತಾಯಿತು. ಹಿಂದೆ ನಾಲಿಗೆ ಚಾಚಿದ ಉರಿಮಾರಿಯ ಬ್ರಹತ್ ಮುಖವಾಡ ಇಡೀ ರಂಗವೇದಿಕೆಗೆ ಸಾಂಕೇತಿಕ ಕಳೆ ತಂದುಕೊಟ್ಟಿದೆ. ರಂಗಸಜ್ಜಿಕೆ ವಿನ್ಯಾಸ ಹಾಗೂ ರಂಗಪರಿಕರಗಳಲ್ಲಿ ಶ್ರೀಮಂತಿಕೆಯನ್ನು ಕಾಣಬಹುದಾಗಿದೆ. ವಿಧವಿಧದ ಕೀಲುಕುದುರೆಗಳು ಹಾಗೂ ಗರುಡವಾಹನವನ್ನು ಬಳಸಿದ್ದು... ನಂಜುಂಡಸ್ವಾಮಿಯ ರಥವನ್ನೇ ರಂಗದಮೇಲೆ ತಂದಿದ್ದು... ಮನುಷ್ಯರೂಪದ ನಂದಿ ಹಾಗೂ ಆದಿಶೇಷನನ್ನು ಸೃಷ್ಟಿಸಿದ್ದು... ಮಹಿಷಾಸುರನ ರಕ್ತದ ಹನಿ ಬಿದ್ದಾಗ ಹಲವಾರು ರಾಕ್ಷಸರು ರಂಗದಂಗಳದ ಮೂಲೆ ಮೂಲೆಗಳಿಂದ ಎದ್ದು ಬರುವುದು.... ನೋಡುಗರಲ್ಲಿ ಸಂಚಲನವನ್ನು ಹುಟ್ಟಿಸಲು ಕಾರಣವಾದವು.


ನಾಟಕ ಎಂಬುದು ಎಲ್ಲಾ ಕಲೆಗಳ ಆಗರವೆಂಬುದನ್ನು ಚಾಮಚಲುವೆ ನಾಟಕ ಸಾಬೀತು ಪಡಿಸುವಂತಿದೆ. ಅಭಿನಯ ಕಲೆಯ ಜೊತೆಗೆ ಹಾಡುಗಾರಿಕೆ, ಸಂಗೀತಕಲೆ, ನೃತ್ಯಕಲೆ, ಚಿತ್ರಕಲೆ ಹಾಗೂ ರಂಗತಂತ್ರಗಳು ಒಟ್ಟು ಸೇರಿ ಪ್ರೇಕ್ಷಕರಿಗೆ ಎಂದೂ ಮರೆಯದ ಅನುಭವವನ್ನು ಕೊಡುವಂತೆ ನಾಟಕ ಮೂಡಿಬಂದಿದೆ. ಜೊತೆಗೆ ರೌದ್ರ, ವೀರ, ಭಯ, ಭೀಬತ್ಸ, ಶೃಂಗಾರ, ಹಾಸ್ಯರಸಗಳೆಲ್ಲಾ ನಾಟಕದಲ್ಲಿ ಮೈದಾಳಿವೆಯಾದರೂ ಎಲ್ಲಕ್ಕಿಂತ ಹೆಚ್ಚು ಹಾಸ್ಯರಸವೇ ಪ್ರಧಾನವಾಗಿ ಮನರಂಜನೆಯೇ ನಾಟಕದ ಅಂತಸ್ಸತ್ವವಾಗಿದೆ. ಕೆಲವೊಮ್ಮೆ ಹಾಸ್ಯವೇ ಅತಿಯಾಗಿ ಪಾತ್ರದ ಘನತೆಯನ್ನೂ ಮೀರಿ ನಿಂತು ನಗೆಹೊಮ್ಮಿಸಲಾಗಿದೆ. ವಿನೋದವೇ ಪ್ರಧಾನವಾಗಿದ್ದರಿಂದ ಭಾವಾಭಿವ್ಯಕ್ತಿಗೆ ಹಿನ್ನಡೆಯಾದಂತಿದೆ. ಆಂಗಿಕಾಭಿನಯ ವಾಚಿಕಾಭಿನಯ ಹಾಗೂ ಆಹಾರ್ಯಾಭಿನಯದಲ್ಲಿ ಗೆದ್ದ ನಾಟಕ ಸಾತ್ವಿಕಾಭಿನಯದಲ್ಲಿ ಸೋಲುತ್ತದೆ. ಪತಿ ಬೇರೊಬ್ಬಳ ಜೊತೆ ಹೋದಾಗ ಪತ್ನಿಯರು ತಮ್ಮಲ್ಲಿ ಆಗಬಹುದಾದ ತಲ್ಲಣ ತಳಮಳ ತೋರುವ ಬದಲಾಗಿ ಸೇಡಿನ ಮನೋಭಾವಕ್ಕೆ ಅತೀ ಹೆಚ್ಚು ಒತ್ತು ಕೊಡಲಾಗಿದೆ. ಇನ್ನೊಂದಿಷ್ಟು ಪಾತ್ರಗಳ ಭಾವಾಭಿನಯದ ಮೇಲೆ ನಿರ್ದೇಶಕರು ಕೆಲಸ ಮಾಡಿದ್ದರೆ ಖಂಡಿತಾ   ಚಾಮಚೆಲುವೆ ಪರಿಪೂರ್ಣ ನಾಟಕವಾಗುವುದರಲ್ಲಿ ಸಂದೇಹವೇ ಇಲ್ಲ.

ನಾಟಕದಲ್ಲಿ ಮೇಳದವರ ಮಾತು, ಹಾಡು, ಪಾದರಸದ ಚಲನೆಗಳು ಸೊಗಸಾಗಿ ಮೂಡಿಬಂದಿವೆ. ಆದರೆ....ನಾಟಕದಾದ್ಯಂತ ಮೇಳದವರೆಲ್ಲಾ ಯಾವಾಗಲೂ ಒಂದೇ ರೀತಿಯಲ್ಲಿ ಹೆಜ್ಜೆಹಾಕುವುದು ಏಕತಾನತೆಯನ್ನು ಸೃಷ್ಟಿಸಿದೆ. ಭಿನ್ನ ಭಿನ್ನವಾದ ಹಾಡುಗಳಿಗೆ ವಿಭಿನ್ನವಾದ ಹೆಜ್ಜೆಗಳನ್ನು ಸಂಯೋಜನೆ ಮಾಡಿದ್ದರೆ ಕಾವ್ಯಾತ್ಮಕ ನಾಟಕವನ್ನು ಇನ್ನೂ ಹೆಚ್ಚು ಆಕರ್ಷಣೀಯವಾಗಿ ಮಾಡಬಹುದಾಗಿತ್ತುನಾಟಕದ ಸಫಲತೆಯಲ್ಲಿ ಹೆಚ್ಚು ಪಾಲನ್ನು ಕೇಳುವುದು ಹಾಡು ಮತ್ತು ಸಂಗೀತ ಸಂಯೋಜನೆ. ಪಿಚ್ಚಳ್ಳಿ ಶ್ರೀನಿವಾಸರವರು ಮೂಲ ಜಾನಪದ ಹಾಡಿನ ಲಯ ಹಾಗೂ ಸಂಗೀತವನ್ನು ಬಲು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ನಾಟಕದ ನಿರ್ದೇಶಕರು ಯಾವುದೇ ಹಿಮ್ಮೇಳ ಮುಮ್ಮೇಳಗಳಿಲ್ಲದೇ ನೇರವಾಗಿ ವೇದಿಕೆಯ ಮೇಲೆ ಲೈವ್ ಹಾಡು ಹಾಗೂ ಸಂಗೀತವನ್ನು ತಂದು ಗೆದ್ದಿದ್ದಾರೆ. ಮಹಿಷಾಸುರನ ಕುಣಿತಕ್ಕೂ ಪೂರಕವಾದ ನೇಪತ್ಯದ ಸಂಗೀತಕ್ಕೂ ಹೊಂದಾಣಿಕೆ ಬೇಕಾಗಿತ್ತು.


ಮಂಡ್ಯ ರಮೇಶರವರು ನಟರ ಮೇಲೆ ಅತಿ ಹೆಚ್ಚು ಪ್ರಯೋಗಶೀಲರಾಗಿ ಕೆಲಸ ಮಾಡಿದ್ದಾರೆ. ನಟರ ಪ್ರತಿಯೊಂದು ಚಲನೆ ಹಾಗೂ ಪಂಚ್ ಸಂಭಾಷಣೆಗಳು ಪ್ರೇಕ್ಷಕರಲ್ಲಿ ಕಚಗುಳಿ ಇಡುವಂತೆ ಮೂಡಿಬಂದಿವೆ. ಹಾಸ್ಯ ನಾಟಕಗಳಿಗೆ ಡೈಲಾಗ್ ಡೆಲಿವರಿ ಟೈಮಿಂಗ್ ಕರಾರುವಕ್ಕಾಗಿರಬೇಕು. ಅದು ನಾಟಕದಲ್ಲಿ ಸರಿಯಾಗಿ ವರ್ಕಔಟ್ ಆಗಿದ್ದು... ಪ್ರತಿಯೊಂದು ಪಂಚ್ ಡೈಲಾಗ್ಗಳೂ ಕೇಳುಗರಲ್ಲಿ ನಗೆ ಹುಟ್ಟಿಸುವಲ್ಲಿ ಸಫಲವಾಗಿವೆ. ದೇವೀರಿ ಪಾತ್ರದಲ್ಲಿ ಕಾವ್ಯ ಹಾಗೂ ಪಾರ್ವತಿಯಾಗಿ ಛಾಯಶ್ರೀ ಇಬ್ಬರೂ ಪೈಪೋಟಿಯ ಮೇಲೆ ಗಯ್ಯಾಳಿ ಹೆಂಡತಿಯ ಪಾತ್ರವನ್ನು ನಿಭಾಯಿಸಿ ಗೆದ್ದಿದ್ದಾರೆ. ಇಬ್ಬರ ಅರ್ಭಟದಲ್ಲಿ ಚಾಮುಂಡಿ ಪಾತ್ರದ ಅಶ್ವಿನಿ ಒಂದಿಷ್ಟು ಸಪ್ಪೆ ಎನಿಸುತ್ತಾಳೆ ಮೂರೂ ಪ್ರಮುಖ ಸ್ರ್ತೀ ಪಾತ್ರಗಳು ಭಾವಾಭಿವ್ಯಕ್ತಿಯನ್ನು ರೂಢಿಸಿಕೊಳ್ಳಬೇಕಿದೆ. ನಾಟಕದಲ್ಲಿ ತಮ್ಮ ವಿಶಿಷ್ಟ ಅಭಿನಯದಿಂದ ಗಮನಸೆಳೆದಿದ್ದು ಕೊರವಂಜಿಯಾಗಿ ದಿಶಾ ರಮೇಶ್ ಹಾಗೂ ಉರಿಮಾರಿ ಪಾತ್ರದ ಸಂಜನಾ. ಇಬ್ಬರೂ ಕಲಾವಿದೆಯರು ಪಾತ್ರವೇ ತಾವಾಗಿ ನಾಟಕದಲ್ಲಿ ಸಂಚಲನ ಮೂಡಿಸಿದ್ದಂತೂ ಸುಳ್ಳಲ್ಲ. ನಾಟಕದೊಳಗಿನ ಎಲ್ಲಾ ಮಹಿಳಾ ಕಲಾವಿದರ ಅಭಿನಯದ ಮುಂದೆ ಪುರುಷ ನಟರೇ ಸಪ್ಪೆಯಾದಂತೆನಿಸಿತು. ನಂಜುಂಡಸ್ವಾಮಿಯಾಗಿ ರಾಗರಸರವರು ಅಸಹಾಯಕ ಗಂಡನ ಪಾತ್ರಕ್ಕೆ ಸಾಧ್ಯವಾದಷ್ಟೂ ನ್ಯಾಯವದಗಿಸಲು ಶ್ರಮಿಸಿದ್ದಾರೆ. ರಂಗನಾಥಸ್ವಾಮಿಯಾಗಿ ಮೇಘಾ ಸಮೀರ್ ಅಭಿನಯ ಸೊಗಸಾಗಿದೆಯಾದರೂ ಪಾತ್ರವನ್ನು ಅತಿಯಾಗಿಯೇ ಲೇವಡಿ ಮಾಡಿದಂತಿದೆ. ಮಹಿಷಾಸುರನಾಗಿ ರಾಮು ನಟನಾರವರ ನಟನೆ ಪಾತ್ರಕ್ಕೊಪ್ಪುವಹಾಗಿದೆ.  ಸರೋಜಾ ಹೆಗಡೆಯವರ ಪಾತ್ರೋಚಿತ ವಸ್ತ್ರವಿನ್ಯಾಸ ಪ್ರತಿ ಪಾತ್ರಗಳನ್ನೂ ಶ್ರೀಮಂತಗೊಳಿಸಿದರೆ, ಮುರಳಿ ಶೃಂಗೇಶರವರ ಪ್ರಸಾಧನ ವ್ಯಕ್ತಿಗಳನ್ನು ಪಾತ್ರವಾಗಿಸುವಲ್ಲಿ ಯಶಸ್ವಿಯಾಗಿದೆ. ಮಂಜು ಮಡಕೇರಿಯವರ ಬೆಳಕಿನ ವಿನ್ಯಾಸ ಹಾಗೂ ಮೂಡಿಗೆ ತಕ್ಕಂತೆ ಬಣ್ಣ ಬದಲಾಯಿಸಲಾದ ಸೈಕ್ ಬಳಕೆ ದೃಶ್ಯಗಳಿಗೆ ವಿಶೇಷ ಮೆರಗನ್ನು ತಂದಿದೆ.


ಮಂಡ್ಯ ರಮೇಶರವರು ಅತ್ಯಂತ ಮಹತ್ವಾಕಾಂಕ್ಷೆ ಹಾಗೂ ಅಪಾರ ಪರಿಶ್ರಮದಿಂದ ಮೈಸೂರಿನ ಹೊರವಲಯದಲ್ಲಿ ಕಟ್ಟಿಸಿದ ನಟನಾ ರಂಗಮಂದಿರದ ವಿಶೇಷತೆ ಎಂದರೆ ಯಾವುದೇ ಮೈಕ್ ಹಾಗೂ ದ್ವನಿವರ್ಧಕಗಳನ್ನು ಬಳಸದಿರುವುದು. ರಂಗವೇದಿಕೆಯಲ್ಲಿ ನಟರು ಮಾತಾಡಿದ ಪ್ರತಿ ಮಾತು ಸಭಾಂಗಣದಲ್ಲಿ ಕುಳಿತ ಎಲ್ಲಾ ಪ್ರೇಕ್ಷಕರನ್ನು ತಲುಪುವುದು ವಿಸ್ಮಯದ ಸಂಗತಿಯಾಗಿದೆ. ನಟನಾ ರಂಗಶಾಲೆಯೂ ಆಗಿದ್ದರಿಂದ ಅಲ್ಲಿ ತರಬೇತಾಗುವ ನಟರಿಗೆ ದ್ವನಿವರ್ಧಕಗಳ ಅಗತ್ಯವಿಲ್ಲದೇ ದ್ವನಿಯನ್ನು ಸ್ಪಷ್ಟವಾಗಿ ಪ್ರೇಕ್ಷಕರಿಗೆ ತಲುಪಿಸುವ ವಿಧಾನ ನಿಜಕ್ಕೂ ಮೆಚ್ಚುವಂತಹುದು. ಪ್ರೇಕ್ಷಕರಿಗಂತೂ ಅಲ್ಲಿ ಮೈಕ್ ಹಾಗೂ ಸ್ಪೀಕರ್ಗಳ ಕೊರತೆಯಂತೂ ಕಂಡುಬರಲಿಲ್ಲ. ಇನ್ನೊಂದು ವಿಶೇಷತೆ ಏನೆಂದರೆ ಎರಡೂ ದಿನಗಳ ಚಾಮಚೆಲುವೆ ಪ್ರದರ್ಶನಗಳು ಹೌಸಪುಲ್ ಆಗಿ ಪ್ರತಿ ದಿನ ನೂರಾರು ರಂಗಾಸಕ್ತರು ಟಿಕೆಟ್ ಸಿಗದೇ ವಾಪಸ್ ಹೋಗಿದ್ದು ಪ್ರಸ್ತುತ ರಂಗಭೂಮಿಯಲ್ಲಿ ಅಚ್ಚರಿ ಹುಟ್ಟಿಸುವಂತಹ ಬೆಳವಣಿಗೆಯಾಗಿದೆ. ನಾಟಕಗಳಿಗೆ ಪ್ರೇಕ್ಷಕರೇ ಇಲ್ಲ ಎನ್ನುವ ದಿನಮಾನಗಳಲ್ಲಿ ಜನರು ಮುಂಗಡವಾಗಿ ಟಿಕೇಟ್ ಬುಕ್ ಮಾಡಿಕೊಂಡು ಬಂದು ನಾಟಕ ನೋಡುತ್ತಿರುವುದು ನಟನಾ ವೃತ್ತಿಪರತೆ  ಹಾಗೂ ಮಂಡ್ಯ ರಮೇಶರವರ ನಾಟಕ ಕಟ್ಟುವ ಬದ್ಧತೆಗೆ ಸಾಕ್ಷಿಯಾಗಿದೆ. ನಟನಾ ಬಡಾವಣಾ ರಂಗಭೂಮಿಯ ಯಶಸ್ಸು ಮಾದರಿಯಾಗಿದೆ. ತಮ್ಮದೇ ರಂಗಮಂದಿರವನ್ನು ಕಟ್ಟಿ, ಅನೇಕ ನಟನಾಸಕ್ತ ಯುವಕರಿಗಾಗಿ ರಂಗಶಾಲೆಯನ್ನು ತೆರೆದು.. ತಮ್ಮ ಕುಟುಂಬದ ಸದಸ್ಯರನ್ನೂ ರಂಗಕ್ರಿಯೆಯಲ್ಲಿ ತೊಡಗಿಸಿಕೊಂಡು... ಹಲವಾರು ನಾಟಕಗಳನ್ನು ನಿರ್ದೇಶಿಸುತ್ತಾ ರಂಗಭೂಮಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಡುತ್ತಿರುವ ಮಂಡ್ಯರಮೇಶರವರಿಗೆ ಅಭಿನಂದನೆಗಳನ್ನು ಹೇಳಲೇಬೇಕಿದೆ.   

                          -ಶಶಿಕಾಂತ ಯಡಹಳ್ಳಿ                
                              


'ನಟನಾ' ರಂಗಮಂದಿರ ಮತ್ತು ರಂಗಶಾಲೆ

             



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ