ಮಂಗಳವಾರ, ಸೆಪ್ಟೆಂಬರ್ 6, 2016

ಕಾಲನ ಕಿಂಕರರಿಗೆ ಕರುಣೆಯಿಲ್ಲ : ಈ ಸಾವು ನ್ಯಾಯವೇ ?


ಎಂದೂ ಯಾರಿಗೂ ಕಾಯದ ಕಾಲ
ಕಲಾವಿದರಿಗೆ ಹಾಕಿದಂತಿದೆ ಗಾಳ..
ಪಕ್ಕಾಗಿ ಹಣ್ಣು ಉದುರುವ ಮುನ್ನ
ಕಿತ್ತೊಯ್ಯುವುದೆಂತಾ ನ್ಯಾಯ…?


ಕಾಲಕ್ಕೆ ಯಾಕಿಂತಾ ವೇಗ. ಒಬ್ಬರಾದ ಮೇಲೊಬ್ಬರಂತೆ ಕ್ರಿಯಾಶೀಲ ಕಲಾವಿದರು ಖಾಲಿಮಾಡುತ್ತಿದ್ದಾರೆ ಜಾಗ.  ಆಗಸ್ಟ್ 6 ರಂದು ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಸಂಕೇತ್ ಕಾಶಿಯವರು ಇನ್ನೂ 50ವರ್ಷದ ಹರೆಯದಲ್ಲಿ ಹೃದಯಾಘಾತದಿಂದ ಕಾಲವಶರಾದರು. 115ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಪ್ರಶಂಸೆಗೆ ಪಾತ್ರವಾಗಿದ್ದ ಕಾಶಿಯವರು ತಮ್ಮ ಸರಳತೆ ಸಜ್ಜನಿಕೆ ಹಾಗೂ ಹ್ಯೂಮರಸ್ ಸ್ವಭಾವದಿಂದಾಗಿ ಆತ್ಮೀಯ ವಲಯದಲ್ಲಿ ಪ್ರೀತಿಪಾತ್ರದವರಾಗಿದ್ದರು. ಇದು ಆ ಕಾಲನ ಕಿಂಕರರಿಗೆ ಅಸೂಯೆ ಹುಟ್ಟಿಸಿ ಕಾಶಿ ಭೌತಿಕವಾಗಿ ಇನ್ನಿಲ್ಲವಾಗಿ ಬರೀ ನೆನಪಾಗುಳಿದರು.


ಸೆಪ್ಟಂಬರ್ 3 ರಂದು  ಪ್ರಸಿದ್ದ ರಂಗನಿರ್ದೇಶಕರಾಗಿದ್ದ  ಇಸ್ಮೈಲ್ ಗೋನಾಳ್ ರವರು (65 ವರ್ಷ) ಹೃದಯಸಂಬಂಧಿ ಸಮಸ್ಯೆ ಉಲ್ಬಣಿಸಿ ನಿಧನರಾದರು. ನೂರಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನವನ್ನು ಸಂಯೋಜಿಸಿದ ಗೊನಾಳ್ ರವರು ಕೊನೆಯವರೆಗೂ ಅವಿವಾಹಿತರಾಗಿಯೇ ಉಳಿದು ಸಂಗೀತವನ್ನೇ ಉಸಿರು ಬದುಕಾಗಿಸಿಕೊಂಡು ಬದುಕಿದವರು. ಅವಲಕ್ಕಿ ಸೇರಿದಂತೆ ಕೆಲವು ಸಿನೆಮಾಗಳಿಗೂ ಸಹ ಸಂಗೀತ ನಿರ್ದೇಶನ ಮಾಡಿಕೊಟ್ಟಿದ್ದಾರೆ. ಎಂಬತ್ತರ ದಶಕದಲ್ಲಿ ಜಾನಪದಗೀತೆಗಳು ಕ್ಯಾಸೆಟ್ ರೂಪದಲ್ಲಿ ಬರಲು ಆರಂಭಿಸಿದಾಗ ಆಧುನಿಕ ಜಾನಪದ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿ ರಾಜ್ಯಾದ್ಯಂತ ಪ್ರಸಿದ್ದಗೊಳಿಸಿದ್ದೇ ಇಸ್ಮೈಲ್ ಗೋನಾಳರವರು. ಗುರುರಾಜ ಹೊಸಕೋಟಿಯವರು ಹಾಡಿದ ಜಾನಪದ ಮಾದರಿ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿ ಜನಪ್ರೀಯಗೊಳಿಸಿದ್ದೇ ಗೋನಾಳರವರು. ಇನ್ನೂ ಕೆಲವಾರು ವರ್ಷ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ತಾಕತ್ತಿದ್ದ ಗೋನಾಳರವರು ಸಣ್ಣ ಸುಳಿವೂ ಕೊಡದೇ ನಿರ್ಗಮಿಸಿದ್ದು ಸಂಗೀತ ನಿರ್ದೇಶಕರ ಕೊರತೆಯನ್ನು ಅನುಭವಿಸುತ್ತಿರುವ ರಂಗಭೂಮಿಗೆ ಬಹುದೊಡ್ಡ ಕೊರತೆಯಾಗಿದೆ.


ಸೆಪ್ಟಂಬರ್ 6 ರಂದು ಕಿರುತೆರೆಯ ದಾರಾವಾಹಿಗಳಲ್ಲಿ ತನ್ನ ಅಭಿನಯದ ಮೂಲಕ ಗಮನಸೆಳೆದಿದ್ದ ಯುವನಟ ಹರೀಶ್ ಡೆಂಗ್ಯೂಜ್ವರದಿಂದ ಬಳಲಿ ಅಕಾಲಿಕವಾಗಿ ತೀರಿಕೊಂಡರು. ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದು ತುಂಬಾಪರಿಶ್ರಮದಿಂದ ದಾರಾವಾಹಿಗಳಲ್ಲಿ ಅವಕಾಶವನ್ನು ಪಡೆದು ಸುವರ್ಣ ವಾಹಿನಿಯ ‘ಅರಗಿಣಿ’ ಧಾರಾವಾಹಿ ಹಾಗೂ ಕಲರ್ಸ ಕನ್ನಡ ವಾಹಿನಿಯ ‘ಓಂ ಶಾಂತಿ ಓಂ ಶಾಂತಿ; ಧಾರಾವಾಹಿಯಲ್ಲಿ ಪ್ರಮುಖಪಾತ್ರ ವಹಿಸದ ಹರೀಶ್ ಕಲಾ ಬದುಕು ಈಗ ತಾನೆ ಅರುಳುತ್ತಿತ್ತು. ಆದರೆ ಅರಳಿ ಪರಿಮಳಬೀರುವ ಮುನ್ನವೇ ಕಲಾಕುಸುಮವೊಂದು ನಿಶಿಸಿಹೋಗಿದ್ದು ತುಂಬಾನೇ ನೋವಿನ ಸಂಗತಿ.



ಈ ಮೂರು ಅಮೂಲ್ಯ ಕಲಾಜೀವಗಳು ಒಂದು ತಿಂಗಳ ಅವಧಿಯೊಳಗೆ ಅಕಾಲಿವಾಗಿ ಅಗಲಿದುವಲ್ಲಾ ಎಂದು ಆತಂಕಪಡುವಷ್ಟರಲ್ಲೇ ಸೆಪ್ಟಂಬರ್ 6ರಂದು ಕನ್ನಡ ಸಾಹಿತ್ಯವನ್ನು ತಮ್ಮ ವಿಶಿಷ್ಟ ಕಥೆಗಳಿಂದ ವಿಸ್ತರಿಸಿದ ಕವಿ ಕಥೆಗಾರ ವಿಮರ್ಶಕ ಪ್ರಹ್ಲಾದ ಅಗಸನಕಟ್ಟೆಯವರು ಹೃದಯಾಘಾತದಿಂದ ಕೊನೆಯುಸಿರೆಳೆದ ಸುದ್ದಿ ತಲ್ಲಣವನ್ನು ಹುಟ್ಟಿಸಿತು. ಕಿಮ್ಸ್ ನಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದ ಪ್ರಹ್ಲಾದರವರು ಕಥಾಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದರು. ಐದು ಕವನ ಸಂಕಲನ, ಎರಡು ಕಾದಂಬರಿ, ಆರು  ಕಥಾಸಂಕಲನ, ಎರಡು ವಿಮರ್ಶಾ ಸಂಕಲನ ಹಾಗೂ  ದಲಿತ ಬಂಡಾಯ ಕಾವ್ಯ ಹಾಗೂ ವಿಚಾರವಾದ ಕುರಿತ ಮಹಾಪ್ರಬಂಧವನ್ನೂ ರಚಿಸಿದ್ದರು. 60 ವರ್ಷ ಸಾಯುವ ವಯಸ್ಸಂತೂ ಖಂಡಿತ ಅಲ್ಲ. ಆದರೇನು ಮಾಡುವುದು ಕಾಲನ ಕಿಂಕರರಿಗೆ ಕರುಣೆ ಎಂಬುದಿಲ್ಲ.

ಇನ್ನೂ ಕಲೆ ಸಾಹಿತ್ಯ ಸಂಗೀತ ಕ್ಷೇತ್ರಗಳಲ್ಲಿ ಕೃಷಿ ಮಾಡುವ ಕಸುವನ್ನು ಹೊಂದಿದ ಕ್ರಿಯಾಶೀಲರು ಇದ್ದಕ್ಕಿದ್ದಂತೆ ಎದ್ದು ಹೋದರೆ ಇದ್ದವರಿಗೆ ಬಾಧಿಸದೇ ಇದ್ದೀತೆ.  ಈ ನಾಲ್ಕೂ ಜನರ ಸಾವು ಕಲೆ ಹಾಗೂ ಸಾಹಿತ್ಯ ಲೋಕದ ಸಂಗಾತಿಗಳಲ್ಲಿ ತಳಮಳ ಹುಟ್ಟಿಸುವಂತಹದು. ಸಾವಂತೂ ಯಾರ ಕೈಯಲ್ಲೂ ಇಲ್ಲ. ಆದರೆ ಆರೋಗ್ಯದ ಕಡೆಗೆ ಕಾಳಜಿ ವಹಿಸಿದರೆ ಸಾವನ್ನೂ ಮುಂದೂಡಬಹುದಾದ ಸಾಧ್ಯತೆಗಳಂತೂ ಇದೆ. ಆದರೇನು ಮಾಡುವುದು ಈ ಕ್ರಿಯಾಶೀಲ ಜನ ಕಲೆ ಸಾಹಿತ್ಯ ಸಂಗೀತಕ್ಕೆ ಕೊಟ್ಟಷ್ಟು ಮಹತ್ವವನ್ನು ತಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ ಕೊಡುವುದಿರುವುದೇ ಈ  ಅಕಾಲಿಕ ಸಾವಿಗೆ ಕಾರಣವೂ ಆಗಿದೆ.ವೃತ್ತಿ ಪ್ರವೃತ್ತಿ ಕಲೆ ಸಾಹಿತ್ಯ ಎಲ್ಲದಕ್ಕಿಂತಲೂ ಪ್ರಮುಖವಾದದ್ದು ಆರೋಗ್ಯ ಹಾಗೂ ನೆಮ್ಮದಿಯ ಬದುಕು. ಆದರೆ ಇವನ್ನು ಕಡೆಗಣಿಸಿ ಕೇವಲ ವೃತ್ತಿಪ್ರವೃತ್ತಿಯ ಆತಂಕಗಳನ್ನು ಮೈಮೇಲೆಳೆದುಕೊಂಡು ಆರೋಗ್ಯವನ್ನು ನಿರ್ಲಕ್ಷಿಸಿದರೆ ಆರೋಗ್ಯವೆನ್ನುವುದು ಅಕಾಲಿಕವಾಗಿ ಕೈಕೊಡುತ್ತದೆ. ಕಲೆ ಸಾಹಿತ್ಯ ಲೋಕದ ಪ್ರತಿಭಾವಂತರ ಬಹುತೇಕ ಸಾವುಗಳು ಅಕಾಲಿಕವಾಗುವುದಕ್ಕೆ ವ್ಯಕ್ತಿಗತ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕುರಿತು ತೋರುವ ಅಸಡ್ಡೆಯೇ ಪ್ರಮುಖ ಕಾರಣವಾಗಿದ್ದು ಬಹುತೇಕ ಸಂದರ್ಭದಲ್ಲಿ ಸಾಬೀತಾಗಿದೆ.

ಇಂತಹ ಹಲವಾರು ದುರಂತಗಳಿಂದ ಉಳಿದವರಾದರೂ ಪಾಠ ಕಲಿತು ತಮ್ಮ ಆರೋಗ್ಯಕ್ಕೆ ಮೊದಲ ಆಧ್ಯತೆ ಕೊಟ್ಟು ಆತಂಕ ರಹಿತ ಬದುಕನ್ನು ಕಟ್ಟಿಕೊಂಡು ಆಮೇಲೆ ಕಲೆ ಸಾಹಿತ್ಯದಂತಹ  ಸೃಜನಶೀಲ ಕ್ಷೇತ್ರಗಳ ಕೃಷಿಯಲ್ಲಿ ತೊಡಗುವ ಅಗತ್ಯವಿದೆ. ಸಾವಿಗೆ ಹೆದರುವ ಅಗತ್ಯವಿಲ್ಲ. ಆದರೆ ಅದು ಬರುವ ಮುಂಚೆಯೇ ಯಾರೂ ಆಹ್ವಾನಿಸಿಕೊಳ್ಳಬೇಕಿಲ್ಲ. ಏನೇ ಆದರೂ ಅಗಲಿದವರ ನೆನೆದು ಇದ್ದವರ ಮನಸ್ಸಲ್ಲಿ ಹುಟ್ಟುವ ಒಂದೇ ಪ್ರಶ್ನೆ ಈ ಸಾವುಗಳು ನ್ಯಾಯವೇ?


                                                                                                - ಶಶಿಕಾಂತ ಯಡಹಳ್ಳಿ   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ