ಶುಕ್ರವಾರ, ಸೆಪ್ಟೆಂಬರ್ 9, 2016

ಆಳುವವರಿಗೆ ಬಿಗುಮಾನ; ದಲಿತ ಕಲಾವಿದರಿಗೆ ಅವಮಾನ :

ಕಲಾವಿದರ ನಿರೀಕ್ಷೆಗಳನ್ನು ಕೊಂದ ಮಾಜಿ ಕಲಾವಿದೆ ಉಮಾಶ್ರೀ :


"ನಂದು ತಪ್ಪಾಯ್ತು ಕ್ಷಮಿಸಿ ಬಿಡಿ ಪ್ಲೀಸ್.. ಕಲಾವಿದರಿಗೆ ನನ್ನಿಂದ ತುಂಬಾನೆ ಅನ್ಯಾಯವಾಗಿದೆ... ಆದ್ದರಿಂದ ಎಲ್ಲರೆದುರಲ್ಲಿ ಕೈಮುಗಿದು ಕ್ಷಮಾಪಣೆ ಕೇಳ್ತಿದ್ದೇನೆ...ಮನ್ನಿಸಿ ಬಿಡಿ..." ಎಂದು ತರಳಬಾಳು ಕೇಂದ್ರದಲ್ಲಿ ಶ್ರೀಮಾನ್ ಕಪ್ಪಣ್ಣನವರು ಕೈಮುಗಿದು ಕ್ಷಮಾಪಣಾ ಪ್ರಹಸನವನ್ನು ಆರಂಭಿಸಿದರು. ಹಿಂದೆ ಮುಂದೆ ಏನೂ ಗೊತ್ತಿಲ್ಲದ ಪ್ರೇಕ್ಷಕರು ಕಕ್ಕಾಬಿಕ್ಕಿಯಾದರೆ ಕಲಾವಿದರ ಮುಖದಲ್ಲಿ ವಿಷಾದದ ಛಾಯೆ. ಪಂಡಿತಾರಾದ್ಯ ಸ್ವಾಮೀಜಿಗಳ ಮುಖದಲ್ಲಿ 'ನಿಮ್ಮನ್ನು ನಂಬಿ ಮೋಸಹೋದೆವು' ಎನ್ನುವಂತಹ ವಿಷಾದದ ನಗೆ.



ಇಷ್ಟಕ್ಕೂ ಆಗಿದ್ದಾದರೂ ಏನೆಂದರೆ.... ರಾಜ್ಯ ಸರಕಾರದ ಮುಖ್ಯಮಂತ್ರಿಗಳು ಸಲ ಅಮೇರಿಕದಲ್ಲಿ ನಡೆಯುವ 'ಅಕ್ಕ' ಸಮ್ಮೇಳನಕ್ಕೆ ನೂರು ಜನ ದಲಿತ ಕಲಾವಿದರನ್ನು ಕಳುಹಿಸಿ ಕೊಡಲು ಆಜ್ಞಾಪಿಸಿದ್ದರು. ಕಲಾವಿದರ ಖರ್ಚು ವೆಚ್ಚ ನಿಭಾಯಿಸಲು ಬೇಕಾದ ಹಣವನ್ನು  ಸಮಾಜ ಕಲ್ಯಾಣ ಇಲಾಖೆ ದಲಿತರ ಕೊಟಾದಲ್ಲಿ ಭರಿಸಬೇಕು ಹಾಗೂ ಕಲಾವಿದರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸಂಸ್ಕೃತಿ ಇಲಾಖೆ ನಿಭಾಯಿಸಬೇಕು ಎಂದು ಸಿಎಂ ಮೌಖಿಕವಾಗಿ ಆದೇಶಿಸಿದ್ದರು. ಇಲ್ಲೇ ಆಗಿದ್ದು ಮೊದಲ ಎಡವಟ್ಟು. ಯಾಕೆಂದರೆ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿ ಹೆಚ್. ಆಂಜನೇಯನವರಿಗೂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀರವರಿಗೂ ಮೊದಲಿನಿಂದಲೂ ಎಣ್ಣೆ ಸೀಗೇಕಾಯಿ ಸಂಬಂಧ. ದಲಿತ ಕಲಾವಿದರನ್ನು 'ಅಕ್ಕ' ಸಮ್ಮೇಳನಕ್ಕೆ ಕಳುಹಿಸಲು ಎರಡೂ ಇಲಾಖೆಗಳು ಜಂಟಿ ಕಾರ್ಯಾಚರಣೆ ಮಾಡಬೇಕಾದ ಅನಿವಾರ್ಯತೆ ಇತ್ತು. ಆದರೆ ಇಬ್ಬರೂ ಮಂತ್ರಿಗಳ ಪ್ರತಿಷ್ಟೆಯ ಮೇಲಾಟಕ್ಕೆ ಬಿದ್ದು ದಲಿತ ಕಲಾವಿದರ ಅಮೇರಿಕ ಪ್ರವಾಸದ ತಯಾರಿಯಲ್ಲಿ ಒಂದು ತಿಂಗಳು ಕಾಲ ಹರಣವಾಯಿತು.


ಅಷ್ಟರಲ್ಲಿ ಪ್ರತಿ ವರ್ಷ ಅಕ್ಕ ಸಮ್ಮೇಳನಕ್ಕೆ ಸಾಹಿತಿ ಕಲಾವಿದರುಗಳನ್ನು ಕರ್ನಾಟಕದಿಂದ ಆಯ್ಕೆ ಮಾಡಿ ಕಳುಹಿಸಿಕೊಡುವ ಕಪ್ಪಣ್ಣರವರಿಗೆ ದಲಿತ ಕಲಾವಿದರನ್ನು ಆಯ್ಕೆ ಮಾಡುವ ಕೆಲಸವನ್ನು ಸಂಸ್ಕೃತಿ ಇಲಾಖೆ ವಹಿಸಿತು. ಸರಕಾರದ ಅಧೀಕೃತ ಆದೇಶಕ್ಕಾಗಿ ಕಾಯದ ಆತುರಗೇಡಿ ಕಪ್ಪಣ್ಣರವರು ಮೌಖಿಕ ಆದೇಶವನ್ನು ನಂಬಿ ರಾಜ್ಯಾದ್ಯಂತ ಎಲ್ಲಾ ಕಲಾಪ್ರಕಾರಗಳ ದಲಿತ ಕಲಾವಿದರುಗಳನ್ನು ಆಯ್ಕೆ ಮಾಡತೊಡಗಿದರು. ಅದೇ ರೀತಿ 'ಅಕ್ಕ ಸಮ್ಮೇಳನಕ್ಕೆ ದಲಿತ ಕಲಾವಿದರಿಂದ ಎರಡು ನಾಟಕ ಸಿದ್ದ ಮಾಡಿಕೊಡಿ' ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಗಳಿಗೆ ಕಪ್ಪಣ್ಣ ವಿನಂತಿಸಿಕೊಂಡರು. ನಾಟಕದ ಖರ್ಚು ವೆಚ್ಚದ ಜೊತೆಗೆ ಅಮೇರಿಕಕ್ಕೆ ಹೋಗಿ ಬರುವ ಕಲಾವಿದರ ಖರ್ಚನ್ನೂ ಸರಕಾರ ಕೊಡುವುದಾಗಿ ಹೇಳಿದರು. ಹಿಂದೆಯೂ ಕಪ್ಪಣ್ಣನವರು ಭಾರತ ಸಂಚಾರ ಹಾಗೂ ಶಿವಲೋಕ ಸಂಚಾರ ಎನ್ನುವ ಎರಡು ಸರಕಾರಿ ಪ್ರಾಜೆಕ್ಟಗಳನ್ನು ಸಾಣೇಹಳ್ಳಿ ರೆಪರ್ಟರಿಗೆ ವಹಿಸಿ ಕೊಟ್ಟಿದ್ದು ಸ್ವಾಮೀಜಿಗಳು ಅವುಗಳನ್ನು ಯಶಸ್ವಿಯಾಗಿ ಮಾಡಿಸಿದ್ದರು. ಅದೇ ರೀತಿ  ದಲಿತ ಕಲಾವಿದರಿಂದ ನಾಟಕ ಮಾಡಿಸುವ ಸರಕಾರಿ ಇಲಾಖೆಯ ಆಹ್ವಾನವನ್ನು ಶ್ರೀಮಠ ಒಪ್ಪಿಕೊಂಡಿತು.

ಹನ್ನೆಡರು ಜನ ದಲಿತ ಯುವಕ ಯುವತಿಯರನ್ನು ಆಯ್ಕೆ ಮಾಡಿಕೊಂಡು.. ಅವರಿಗೆಲ್ಲಾ ಮಾಸಿಕ ಸಂಬಳ ಊಟೋಪಚಾರದ ಜೊತೆಗೆ ಅಮೇರಿಕಕ್ಕೆ ಕರೆದುಕೊಂಡು ಹೋಗುವುದಾಗಿ ಭರವಸೆ ಕೊಡಲಾಯಿತು. ಅಮೇರಿಕದ ಆಸೆಯಿಂದ ನಾಮುಂದು ತಾಮುಂದು ಎಂದು ಹಲವಾರು ದಲಿತ ಸಮುದಾಯದ ಕಲಾವಿದರುಗಳು ಮುಂದೆ ಬಂದರು. ಅದರಲ್ಲೇ ಅರ್ಹರಾದವರನ್ನು ಆಯ್ಕೆ ಮಾಡಿ ಶ್ರೀ ಶಿವಕುಮಾರ ಕಲಾ ಸಂಘದ ಮಾಸ್ಟರ್ ಪೀಸ್ ನಾಟಕಗಳಾದ ' ಮರಣವೇ ಮಹಾನವಮಿ' ಹಾಗೂ 'ಶರಣಪತಿ-ಲಿಂಗಸತಿ' ನಾಟಕಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಮೊದಲ ನಾಟಕವನ್ನು ಆರ್.ಜಗದೀಶ ನಿರ್ದೇಶಿಸಿದರೆ ಎರಡನೇ ನಾಟಕವನ್ನು ಮಾಲತೇಶ ಬಡಿಗೇರ್ ನಿರ್ದೇಶಿಸಿದರು. ಒಂದು ತಿಂಗಳುಗಳ ಕಾಲ ನಾಟಕದ ತಾಲಿಮು ಸಾಣೇಹಳ್ಳಿಯಲ್ಲಿ ಮಾಡಿಸಲಾಯಿತು. ಅಮೇರಿಕದಲ್ಲಿ ತಮ್ಮ ಅಭಿನಯ ಪ್ರತಿಭೆಯನ್ನು ಪ್ರದರ್ಶಿಸಲು ಕಲಾವಿದರುಗಳು ಉತ್ಸಾಹದಿಂದ ತೊಡಗಿಕೊಂಡರು. ಮೊದಲ ಬಾರಿಗೆ ತಮ್ಮ ತಂಡದ ನಾಟಕ ವಿದೇಶಿ ಸಂಚಾರಕ್ಕೆ ಹೋಗುತ್ತಿರುವುದಕ್ಕೆ ಸ್ವಾಮಿಗಳು ಥ್ರಿಲ್ ಆದರು. ಕೆಲವರು ಕಲಾವಿದರು ಅಮೇರಿಕಕ್ಕೆ ಹೋಗುವ ಅವಕಾಶದ ಬಯಕೆಯಿಂದ ಟಿವಿ ಸೀರಿಯಲ್ ನಟನೆಯನ್ನು ಬಿಟ್ಟು ಬಂದರೆ ಇನ್ನು ಕೆಲವರು ತಮ್ಮ ಕೆಲಸಗಳನ್ನು ಬಿಟ್ಟು ಎರಡು ತಿಂಗಳುಗಳ ಕಾಲ ಶ್ರಮಿಸಿದರು. ಮುಖ್ಯ ಪಾತ್ರ ಮಾಡಿದ ಯುವತಿ ಎಂಬಿಬಿಎಸ್ 3ನೇ ವರ್ಷ ಓದುತ್ತಿದ್ದು ಎರಡು ತಿಂಗಳ ಕಾಲ ಕಾಲೇಜು ಬಂಕ್ ಮಾಡಿ ಬಂದಿದ್ದಳು. ಈಗ ಇವರೆಲ್ಲರೂ ತಮ್ಮದಲ್ಲದ ಕಾರಣಕ್ಕೆ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವುದರಿಂದ ಅವಕಾಶವಂಚಿತರಾಗಿ ನೊಂದುಕೊಳ್ಳುತ್ತಿದ್ದಾರೆ. ಯಾಕಾದರೂ ಇದ್ದ ಕೆಲಸ ಓದನ್ನು ಬಿಟ್ಟು ಬಂದೆವೋ ಎಂದು ಪರಿತಪಿಸುತ್ತಿದ್ದಾರೆ. 

ಒಂದೊಂದು ನಾಟಕದ ನಿರ್ದೇಶಕರಿಗೆ ಮೂವತ್ತು ಸಾವಿರ ಸಂಭಾವನೆ ಕೊಟ್ಟು ಪ್ರತಿಯೊಬ್ಬ ಕಲಾವಿದರಿಗೂ ಊಟ ವಸತಿಗಳ ಜೊತೆಗೆ ಹತ್ತು ಸಾವಿರ ರೂಪಾಯಿಗಳ ಸಂಬಳ ಕೊಟ್ಟು, ಪ್ರೊಡಕ್ಷನ್ ಸಿದ್ದಗೊಳಿಸಲು ಲಕ್ಷರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಕಲಾವಿದರನ್ನು ಅಮೇರಿಕಕ್ಕೆ ಕಳುಹಿಸಿಲು ಬೇಕಾದ ಪಾಸಪೋರ್ಟ ಹಾಗೂ ವೀಸಾ ತಯಾರಿ ಖರ್ಚನ್ನೂ ಸಹ ಶಿವಕುಮಾರ ಕಲಾಸಂಘವೇ ಭರಿಸಿದೆ. ಒಟ್ಟು ಎರಡು ನಾಟಕಗಳ ನಿರ್ಮಾಣದಿಂದಾದ ಖರ್ಚು ಸರಿಸುಮಾರು ಐದು ಲಕ್ಷ ರೂಪಾಯಿಗಳು. ಕಲಾವಿದರ ಶ್ರಮ, ನಿರ್ದೇಶಕರುಗಳ ಪರಿಶ್ರಮ, ಸ್ವಾಮೀಜಿಯವರ ಸದುದ್ದೇಶ, ಶ್ರೀಮಠದ ಹಣ ಹಾಗೂ ಇವರೆಲ್ಲರ ಸಮಯ ವ್ಯರ್ಥವಾಗಿದ್ದೊಂದು ನೋವಿನ ಸಂಗತಿಯಾಗಿದೆ. 


ಆದರೆ...ಕಲಾವಿದರುಗಳನ್ನು ಅಮೇರಿಕಕ್ಕೆ ಕಳುಹಿಸುವ ಅಧೀಕೃತ ಆದೇಶ ಸರಕಾರದಿಂದ ಬಂದಿದ್ದು ಆಗಸ್ಟ್ 5ನೇ ತಾರೀಖಿನಂದು. ಅಕ್ಕ ಸಮ್ಮೇಳನ ಇರುವುದು ಸೆಪ್ಟಂಬರ್ 2 ರಂದು. ಮಿಕ್ಕುಳಿದದ್ದು ಕೇವಲ ಮೂರೇ ವಾರಗಳು. ಸಮಯದಕೊರತೆ ಇದ್ದರೂ 'ಕಲಾವಿದರಿಗೆ ಸಂಬಂಧಿಸಿದ ಪೈಲನ್ನು ಯಾರೂ ಮುಟ್ಟಬಾರದು' ಎಂದು ಸಚಿವೆ ಉಮಾಶ್ರೀಯವರ ಮೌಖಿಕ ಆದೇಶವಾಗಿತ್ತು. ಅವರಿಂದ ವೀಸಾ ತಯಾರಿಗೆ ಆದೇಶ ಬಂದಿದ್ದು ಆಗಸ್ಟ್ 22ರಂದು. ವೀಸಾ ಪಡೆಯಲು ಇನ್ನುಳಿದದ್ದು ಕೇವಲ ಒಂದು ವಾರಗಳು ಮಾತ್ರ. ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದರವರಿಗೆ ಹಾಗೂ ವ್ಯವಸ್ಥಾಪಕ ಕಪ್ಪಣ್ಣರವರಿಗೆ ಧರ್ಮಸಂಕಟ. ಯಾಕೆಂದರೆ ಅಷ್ಟೂ ಜನ ಕಲಾವಿದರಿಗೆ ಅರ್ಜೆಂಟಾಗಿ ವೀಸಾ ಮಾಡಿಸಬೇಕಾಗಿತ್ತು. ಎರಡೂ ಇಲಾಖೆಯ ಸಚಿವರ ಅಸಹಕಾರದಿಂದ ಪೈಲುಗಳು ಬೇಗ ಮೂವ್ ಆಗಲಿಲ್ಲ. ಹೇಗೋ ಕೆಲವರಿಗೆ ತತ್ಕಾಲ್ ಯೋಜನೆಯಲ್ಲಿ ಪಾಸಪೋರ್ಟ್ ಮಾಡಿಸಲಾಯಿತಾದರೂ ವೀಸಾಗೆ ಅರ್ಜಿ ಹಾಕಲು ವಿಳಂಬವಾಯಿತು. ಅಮೇರಿಕದ ವೀಸಾ ಅಧಿಕಾರಿಗಳು ಸಕಾಲದಲ್ಲಿ ಅರ್ಜಿ ಸಲ್ಲಿಸಿಲ್ಲವೆಂದು ಹೇಳಿ ಕಲಾವಿದರ ವೀಸಾ ಪರಿಶೀಲನೆಗೆ ದಿನಾಂಕವನ್ನೇ ಕೊಡಲಿಲ್ಲ. ಇಲ್ಲಿಗೆ ತಳ ಸಮುದಾಯದ ಕಲಾವಿದರ ಅಮೇರಿಕದ ಅದಮ್ಯ ಆಸೆಗೆ ತಣ್ಣೀರೆರಚಿದಂತಾಯಿತು. ತಮ್ಮ ಅಸಹಾಯಕತೆಯನ್ನು ನಿರ್ಭಾವುಕತೆಯಿಂದ ತಿಳಿಸಿದ ಕಪ್ಪಣ್ಣ ಕಲಾವಿದರಿಗೆ ಮಾಮೂಲಿನಂತೆ ಕ್ಷಮೆಕೋರಿ ತಣ್ಣಗಾದರು. ಇಲಾಖೆಯ ಅಧಿಕಾರಿಗಳು ಸಚಿವೆಯೊಂದಿಗೆ ಅಮೇರಿಕದ ಅಕ್ಕ ಸಮ್ಮೇಳನಕ್ಕೆ ಹೋಗಿ ಬಂದರು. 'ದಲಿತ ಕಲಾವಿದರಿಗೆ ವೀಸಾ ಸಿಗದಂತೆ ಮಾಡಿ ಅವರನ್ನು ಅವಕಾಶ ವಂಚಿತರನ್ನಾಗಿ ಮಾಡಿದ್ದಕ್ಕೆ ತಾವೂ ಅಮೇರಿಕಕ್ಕೆ ಹೋಗುವುದಿಲ್ಲ' ಎಂದ ಸಚಿವ ಆಂಜನೇಯರವರು ತಮ್ಮ ಪ್ರವಾಸ ರದ್ದುಗೊಳಿಸಿ ಕಲಾವಿದರ ಪರ ಬದ್ದತೆಯನ್ನು ತೋರಿಸಿದರು. 

ಅಕ್ಕ ಸಮ್ಮೇಳನಕ್ಕಾಗಿ ರಾಜ್ಯಾದ್ಯಂತ ಆಯ್ಕೆಯಾದ ತೊಂಬತ್ತು ಕಲಾವಿದರು ಅಪಾರ ಅವಮಾನ ಹಾಗೂ ನಿರಾಸೆಯನ್ನು ಅನುಭವಿಸಿದರು. ಸರಕಾರಿ ಇಲಾಖೆಯ ಬೇಜವಾಬ್ದಾರಿತನ ಹಾಗೂ ಎರಡೂ ಇಲಾಖೆಗಳ ಸಚಿವರುಗಳ ಮೇಲಾಟದಿಂದಾಗಿ ಅವಕಾಶ ವಂಚಿತರಾದ ತೊಂಬತ್ತಕ್ಕೂ ಹೆಚ್ಚು ದಲಿತ ಕಲಾವಿದರು ತುಂಬಾನೇ ನೊಂದುಕೊಂಡು ಸರಕಾರಕ್ಕೆ ಶಾಪ ಹಾಕಿ ತಮ್ಮ ಸಾತ್ವಿಕ ಆಕ್ರೋಶವನ್ನು ತಮ್ಮತಮ್ಮಲ್ಲೇ  ತೋರಿದರು. 


ಮರಣವೇ ಮಹಾನವಮಿ ನಾಟಕದ ದೃಶ್ಯ


ನಾಟಕ ಬೇರೆ ಕಲೆಯಂತಲ್ಲವಲ್ಲ ನಿಲ್ಲಿಸಲು. ಈಗಾಗಲೇ ಅಕ್ಕ ಸಮ್ಮೇಳನಕ್ಕೆಂದೇ ತಯಾರಾದ ನಾಟಕವನ್ನು ರದ್ದು ಗೊಳಿಸಲು ಸಾಣೇಹಳ್ಳಿಯ ಸ್ವಾಮೀಜಿಯವರಿಗೆ ಮನಸ್ಸು ಬರಲಿಲ್ಲ. ಹೇಗೂ ನಾಟಕ ಸಿದ್ದವಾಗಿವೆ ಎರಡೂ ನಾಟಕ ಸೇರಿ ಹತ್ತಾದರೂ ಪ್ರದರ್ಶನ ಮಾಡೇ ಬಿಡೋಣ ಎಂದು ನಿರ್ಧರಿಸಿ ಸಾಣೇಹಳ್ಳಿ, ಚಿತ್ರದುರ್ಗ, ದಾವಣಗೆರೆ, ಹೊಸದುರ್ಗ, ಮೈಸೂರು ಮತ್ತು ಬೆಂಗಳೂರಲ್ಲಿ ಪ್ರದರ್ಶನ ಮಾಡಿಸಿದರು. ಸೆಪ್ಟಂಬರ್ 9 ರಂದು ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ' ಮರಣವೇ ಮಹಾನವಮಿ' ನಾಟಕ ಪ್ರದರ್ಶನವಾದ ನಂತರ ಕಲಾರತ್ನ ಕಪ್ಪಣ್ಣರವರು ಪ್ರೇಕ್ಷಕರೆದುರು ಕೈಮುಗಿದು ಕಲಾವಿದರಲ್ಲಿ ಕ್ಷಮೆ ಕೇಳಿದ್ದು. ಸ್ವಾಮೀಜಿಗಳು ದೊಡ್ಡಮನಸ್ಸು ಮಾಡಿ  ಕ್ಷಮಿಸಿದರಾದರೂ ಕಲಾವಿದರು ಕ್ಷಮಿಸಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಅಪಾರವಾದ ನಿರಾಸೆ ಹಾಗೂ ಅವಮಾನವನ್ನು ಅನುಭವಿಸಿದವರು ಕಲಾವಿದರುಗಳು.

ಆತುರದಿಂದ ತಪ್ಪುಗಳನ್ನು ಮಾಡುವುದು ಹಾಗೂ ಎಡವಟ್ಟಾದಾಗ ಅಸಹಾಯಕತೆಯನ್ನು ವ್ಯಕ್ತಪಡಿಸಿ ಕ್ಷಮೆ ಕೇಳುವುದು ಕಪ್ಪಣ್ಣರವರ ಪುರಾತನ ತಂತ್ರಗಾರಿಕೆ ಎಂಬುದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತು. ಇವರು ಕೇಳುವ ಕ್ಷಮೆಯಿಂದ ಕಲಾವಿದರ ನಿರಾಸೆಯನ್ನು ತುಂಬಿ ಕೊಡಲು ಸಾಧ್ಯವಾ? ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಕಲಾವಿದರು ಹಾಗೂ ತಂತ್ರಜ್ಞರು ನಾಟಕ ತಯಾರಿಯಲ್ಲಿ ಪರಿಶ್ರಮ ಪಟ್ಟಿದ್ದಾರಲ್ಲ ಅದರ ತೂಕಕ್ಕೆ ಇವರ ಕ್ಷಮೆ ಸಾಟಿಯಾಗಲು ಸಾಧ್ಯವಾ? ತಮ್ಮ ಶ್ರೀಮಠದ ರಂಗತಂಡವು ಅಂತರಾಷ್ಟ್ರೀಯ ಲೇವಲ್ಲಲ್ಲಿ ಹೆಸರು ಮಾಡುತ್ತದೆ ಎಂದು ಕನಸು ಕಂಡ ಪಂಡಿತಾರಾದ್ಯ ಸ್ವಾಮಿಗಳ ನಿರಾಸೆಗೆ ಕಪ್ಪಣ್ಣನವರ ಕ್ಷಮೆ ಸರಿಸಾಟಿಯಾಗಬಲ್ಲುದೆಕಲಾವಿದರುಗಳಿಗೆ, ತಂತ್ರಜ್ಞರುಗಳಿಗೆ, ರಂಗ ಸಂಘಟಕರಿಗೆ ಆದ ಅಪಾರವಾದ ಅವಮಾನ ಹಾಗೂ ನಿರಾಸೆಗೆ ಬರೀ ಕಪ್ಪಣ್ಣ ಅಲ್ಲಾ.. ಇಡೀ ಸರಕಾರವೇ ಅಡ್ಡಡ್ಡ ಉದ್ದುದ್ದ ಬಿದ್ದರೂ ಸರಿಸಾಟಿ ಆಗಲಾರದು. ಇದು ಕಲೆಗೆ ಹಾಗೂ ಕಲಾವಿದರಿಗೆ ಮಾಡಿದ ನಂಬಿಕೆ ದ್ರೋಹವಾಗಿದೆ. 


"ಹೌದು...ದಲಿತ ಕಲಾವಿದರುಗಳಿಗೆ ವೀಸಾ ದಿನಾಂಕವೂ ದೊರೆಯಲಿಲ್ಲ. ಸರಿ... ಅದರೆ ಬೇರೆ ದಲಿತೇತರ ಕಲಾವಿದರಿಗೆ, ಅಧಿಕಾರಿಗಳಿಗೆ, ಸಾಹಿತಿಗಳಿಗೆ ಮತ್ತು ರಾಜಕಾರಣಿಗಳಿಗೆ ಸಮಯಕ್ಕೆ ಮುಂಚಿತವಾಗಿ ವೀಸಾ ಸಿಕ್ಕಿತಲ್ಲಾ ಪವಾಡಕ್ಕೇನು ಕಾರಣ..." ಎಂದು ನೇರವಾಗಿ ಕಪ್ಪಣ್ಣನವರನ್ನೇ ಕೇಳಿದೆ. "ಅಯ್ಯೋ ದಲಿತರಿಗೆ ಒಂದು ನೆಟ್ಟಗೆ ವಿಳಾಸ ಅನ್ನೋದಿರೋದಿಲ್ಲ, ಸರಿಯಾದ ದಾಖಲೆಗಳಿರೋದಿಲ್ಲ... ಹೀಗಾಗಿ ವೀಸಾ ಸಿಗೋದು ಕಷ್ಟವಿದೆ. ನಾವೂ ಬೇಕಾದಷ್ಟು ಪ್ರಯತ್ನ ಮಾಡಿದೆವಾದರೂ ಆಗಲಿಲ್ಲ..." ಎಂದು ಕಾಗೆ ಹಾರಿಸಲು ನೋಡಿದರು. ತಾವು ಮಾಡಿದ ತಪ್ಪಿಗೆ ದಲಿತ ಕಲಾವಿದರ ಮೇಲೆ ಗೂಬೆ ಕೂರಿಸಿ ಅವರ ಕಿವಿ ಮೇಲೆ ಲಾಲ್ಬಾಗ್ ಇಡುವ ಪ್ರಯತ್ನವನ್ನು ಕಪ್ಪಣ್ಣ ಮಾಡಿದ್ದಂತೂ ಸತ್ಯ. ಈಗ ದಲಿತರ ಮನೆಯ ಎಲ್ಲರಲ್ಲೂ ಆಧಾರ್ ಕಾರ್ಡಗಳಿವೆ. ಅನ್ನ ಭಾಗ್ಯ ಯೋಜನೆಯ ಪ್ರಯೋಜನ ಪಡೆಯಲು ಆಧಾರ್ ಖಡ್ಡಾಯವಾಗಿದ್ದರಿಂದ ತಳಸಮುದಾಯ ಆಧಾರ ಕಾರ್ಡ ಮಾಡಿಸದೇ ಇರೋದಿಲ್ಲ. ನಾಟಕದಲ್ಲಿ ನಟಿಸಿದ ಕಲಾವಿದರು ಅನಕ್ಷರಸ್ತರೇನಲ್ಲ ವಿದ್ಯಾವಂತರು. ಕೆಲವರಂತೂ ಡಿಗ್ರಿ ಹೋಲ್ಡರಗಳು. ಅವರ ಹತ್ತಿರ ವಿಳಾಸದ ಪ್ರೂಪಿಲ್ಲಾ... ಐಡಿ ಕಾರ್ಡಿಲ್ಲಾ ಅನ್ನೋದೇ ಮೂರ್ಖತನದ ಪರಮಾವಧಿ. ಇಷ್ಟಕ್ಕೂ ಇಲ್ಲಾ ಅಂತಾನೇ ಇಟ್ಕೊಳ್ಳೋಣ. ಅಮೇರಿಕಕ್ಕೆ  ಕಲಾಪ್ರದರ್ಶನಕ್ಕೆ ಕಳುಹಿಸಲೆಂದೇ ದಲಿತ ಕಲಾವಿದರನ್ನು ಆಯ್ಕೆ ಮಾಡಲಾಗಿತ್ತಲ್ಲ. ಹಾಗೆ ಆಯ್ಕೆ ಮಾಡಿಕೊಳ್ಳುವಾಗಲೇ ಪಾಸಪೋರ್ಟ್ ವೀಸಾಗೆ ಬೇಕಾದ ದಾಖಲೆಗಳಿವೆಯಾ ಎಂದು ಪರಿಶೀಲಿಸಬೇಕಲ್ವಾ? ಸರಕಾರದ ಅಧೀಕೃತ ಆದೇಶಕ್ಕಾಗಿ ಕಾಯುವ ಮುಂಚೆನೇ ಪೂರ್ವಭಾವಿಯಾಗಿ ಸಿದ್ದತೆಯನ್ನು ಮಾಡಿಕೊಳ್ಳಬೇಕಾಗಿತ್ತಲ್ವಾ? ಇಲಾಖೆಯ ಅಧಿಕಾರಿಗಳಾಗಲೀ ಇಲ್ಲವೇ ವ್ಯವಸ್ಥಾಪಕರಾದ ಕಪ್ಪಣ್ಣನವರಾಗಲಿ ಬೆಂಕಿ ಹತ್ತಿದಾಗ ಭಾವಿ ತೋಡುವ ಬದಲು ಪೂರ್ವಸಿದ್ದತೆಯನ್ನು ಬದ್ದತೆಯಿಂದ ಮಾಡಿದ್ದರೆ ಕಲಾವಿದರ ನಿರೀಕ್ಷೆ ಹಾಗೂ ಮುಖ್ಯಮಂತ್ರಿಯ ಅಪೇಕ್ಷೆ ಎರಡೂ ಈಡೇರಬಹುದಾಗಿತ್ತಲ್ಲ.


ಅವಘಡಕ್ಕೆಲ್ಲಾ ಮೂಲ ಕಾರಣ ಅಧಿಕಾರಿಗಳಾಗಲೀ ಕಪ್ಪಣ್ಣರವರಾಗಲೀ ಅಲ್ಲ. ಇವರೆಲ್ಲಾ ಇಲ್ಲಿ ಬರೀ ಪರಿಕರಗಳಷ್ಟೇ. ಆದರೆ ಎಲ್ಲದರ ಸೂತ್ರದಾರಿಗಳು ರಾಜಕಾರಣಿಗಳು. ದಲಿತ ಕಲಾವಿದರನ್ನು ಅಮೇರಿಕಕ್ಕೆ ಕಳುಹಿಸಲು ಮುಖ್ಯ ಮಂತ್ರಿಗಳ ಕಿವಿ ಊದಿದ್ದು ಸಚಿವ ಆಂಜನೇಯನವರೆಂದು ಉಮಾಶ್ರೀಯವರ ಗುಮಾನಿ. 'ಅಮೇರಿಕದ ಅಕ್ಕ ಸಮ್ಮೇಳನದ  ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿ ತನ್ನ ಇಲಾಖೆಯ ಜವಾಬ್ದಾರಿಯಾಗಿದ್ದು ಅದರಲ್ಲಿ ಮೂಗು ತೂರಿಸಲು ಆಂಜನಪ್ಪ ಯಾರು?' ಎನ್ನುವುದು ಉಮಾಶ್ರೀಯವರ ಅಸಮಾಧಾನಕ್ಕೆ ಕಾರಣವಾಯಿತು. ದಲಿತ ಕಲಾವಿದರನ್ನು ಕಳುಹಿಸಲು ಇಲಾಖೆಯಲ್ಲಿ ಹೆಚ್ಚುವರಿ ಹಣವಿಲ್ಲವೆಂದು ಹೇಳಿ ಆಂಜನೇಯನವರ ಪ್ರಸ್ತಾವನೆಯನ್ನು ವಿಫಲಗೊಳಿಸಲು ಉಮಾಶ್ರೀಯವರು ಪಟ್ಟು ಹಾಕಿದರು. ಅದಕ್ಕೆ ಪ್ರತಿಪಟ್ಟು ಹಾಕಿದ ಸಚಿವ ಆಂಜನೇಯರು ದಲಿತ ಕಲಾವಿದರಿಗಾಗುವ ಎಲ್ಲಾ ಖರ್ಚನ್ನೂ ತಮ್ಮ ಇಲಾಖೆಯಿಂದ ಭರಿಸುವೆನೆಂದು ಭರವಸೆ ಇತ್ತರು. ಅದಕ್ಕೆ ಸಿಎಂ ಸಮ್ಮತಿಸಿದರು. 'ದಲಿತ ಕಲಾವಿದರನ್ನು ತನ್ನ ಇಲಾಖೆ ವತಿಯಿಂದ ಕಳುಹಿಸಿದೆ' ಎಂದು ಆಂಜನೇಯ ಹೇಳಿಕೊಂಡು ಕ್ರೆಡಿಟ್ ತೆಗೆದುಕೊಳ್ಳುವುದು ಉಮಾಶ್ರೀಯವರ ಕಿವಿಗೆ ಬಿದ್ದಿದ್ದೇ ತಡ 'ಅದು ಹೇಗೆ ಕಳಿಸ್ತಾನೋ ನಾನು ನೋಡೇ ಬಿಡ್ತೀನಿ' ಎಂದು ಮನಸಲ್ಲೇ ನಿರ್ಧರಿಸಿದ ಸಚಿವೆ ವಿಳಂಬ ತಂತ್ರಗಾರಿಕೆಯನ್ನು ಅನುಸರಿಸಿದರು. ತನ್ನ ಅನುಮತಿ ಇಲ್ಲದೇ ಕಲಾವಿದರ ಪೈಲುಗಳನ್ನು ಯಾರೂ ಮುಟ್ಟಬಾರದು ಎಂದು ತನ್ನ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ಇನ್ನೇನು ಮಾಡಿದರೂ ಕಲಾವಿದರಿಗೆ ವೀಸಾ ದಿನಾಂಕ ಸಿಗಲು ಸಾಧ್ಯವಿಲ್ಲವೆಂದು ಗೊತ್ತು ಮಾಡಿಕೊಂಡ ಸಚಿವೆ ಲೇಟಾಗಿ ತೋರಿಕೆಗಾಗಿ ವೀಸಾ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳು ಪ್ರಯತ್ನಿಸಿದರೂ ಕೆಲಸವಾಗಲಿಲ್ಲ. ಇಬ್ಬರೂ ಸಚಿವರ ಆಂತರಿಕ ಸಂಘರ್ಷದಲ್ಲಿ ಉಮಾಶ್ರೀ ಗೆದ್ದರು. ಸೋತು ಅವಮಾನಿತರಾದ ಆಂಜನೇಯ ಅಮೇರಿಕದ ಅಕ್ಕ ಸಮ್ಮೇಳನಕ್ಕೆ ಹೋಗುವುದನ್ನೇ ರದ್ದು ಮಾಡಿ ತಮ್ಮ ಅಸಮಾಧಾನವನ್ನು ತೋರಿಸಿದರು.
 
ಇಬ್ಬರೂ ಸಚಿವರುಗಳ ಒಣ ಪ್ರತಿಷ್ಟೆಗೆ ದಲಿತ ಕಲಾವಿದರು ಬಲಿಯಾಗಬೇಕಾಯಿತು. ರಾಜಕೀಯದ ಮೇಲಾಟಕ್ಕೆ ತಳಸಮುದಾಯದ ಕಲಾವಿದರು ಅವಮಾನಿತರಾಗಬೇಕಾಯ್ತು. ಯಾವೊಬ್ಬ ಕಲಾವಿದರೂ ಬಂದು ನಮ್ಮನ್ನು ಅಮೇರಿಕಕ್ಕೆ ಕಳುಹಿಸಿ ಕೊಡಿ ಎಂದು ಅವಲತ್ತುಕೊಂಡಿರಲಿಲ್ಲ. ಸರಕಾರಿ ಇಲಾಖೆಯ ಪರವಾಗಿ ಕಪ್ಪಣ್ಣರವರೇ ದಲಿತ ಕಲಾವಿದರನ್ನು ಗುರುತಿಸಿ ಅಮೇರಿಕಕ್ಕೆ ಸರಕಾರಿ ಖರ್ಚಿನಲ್ಲಿ ಕಳುಹಿಸುವೆ ನಿಮ್ಮ ಕಲೆಯ ತಾಲೀಮು ಮಾಡಿಕೊಂಡು ಸಿದ್ದರಾಗಿ ಎಂದು  ಭರವಸೆಕೊಟ್ಟು ಇಲ್ಲದ ನಿರೀಕ್ಷೆಗಳನ್ನು ಹುಟ್ಟಿಸಿದ್ದರು. ರಾಜಕೀಯದವರ ಸ್ವಾರ್ಥ ಹಿತಾಸಕ್ತಿಯ ಕಿತ್ತಾಟದಲ್ಲಿ ಕಲಾವಿದರಷ್ಟೇ ಕಪ್ಪಣ್ಣರವರೂ ಕೂಡಾ ಬಲಿಪಶುವೇ... ಅಧಿಕಾರಿಗಳ ಪರಿಸ್ಥಿತಿಯೂ ಇದಕ್ಕಿಂತಾ ಭಿನ್ನವಾಗಿಲ್ಲ.

ತಮಗಾದ ಅನ್ಯಾಯದ ವಿರುದ್ದ ಹೋರಾಡಲು ಬಡ ಕಲಾವಿದರಲ್ಲಿ ಬಲವಿಲ್ಲ. ಕಲಾವಿದರ ಪರವಾಗಿ ಸರಕಾರದ ವಿರುದ್ದ ದ್ವನಿ ಎತ್ತುವ ತಾಕತ್ತು ಯಾವುದೇ ಅಕಾಡೆಮಿಯ ಅಧ್ಯಕ್ಷರುಗಳಿಗೂ ಇಲ್ಲ. ಯಾಕೆಂದರೆ ಅವರೆಲ್ಲಾ ಸರಕಾರಿ ಕೃಪಾ ಪೋಷಣೆಯಲ್ಲಿದ್ದು ತಮ್ಮ ಮಾಲೀಕರ ವಿರುದ್ದ ಕೆಮ್ಮಲೂ ಹೆದರಿಕೊಳ್ಳುತ್ತಾರೆ. ಇನ್ನು ರಂಗಭೂಮಿಯವರಾದರೂ ನೊಂದ ಕಲಾವಿದರ ಪರವಾಗಿ ನಿಲ್ಲುತ್ತಾರೆಂದರೆ ಅದರಲ್ಲಿ ನಗರ ಕೇಂದ್ರಿತವಾದ ಬಹುತೇಕರು ಸರಕಾರಿ ಅನುದಾನಗಳ ಫಲಾನುಭವಿಗಳು. ಪರಿಸ್ಥಿತಿ ಹೀಗಿದ್ದಾಗ ನಿರಾಸೆಯಿಂದ ನೊಂದುಕೊಂಡ ದಲಿತ ಕಲಾವಿದರ ಪರವಾಗಿ ದ್ವನಿ ಎತ್ತುವವರು ಯಾರು? ಸರಕಾರ ಹಾಗೂ ಸಂಸ್ಕೃತಿ ಇಲಾಖೆ ಕಲಾವಿದರುಗಳಿಗೆ ಮಾಡಿದ ನಂಬಿಕೆದ್ರೋಹವನ್ನು ಪ್ರಶ್ನಿಸುವವರು ಯಾರು? ಕಲೆ ಹಾಗೂ ಕಲಾವಿದರುಗಳ ಉಳಿವು ಹಾಗೂ ಬೆಳವಣಿಗೆಗಾಗಿ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಕಲಾವಿದರ ಆಸಕ್ತಿಯನ್ನು ನಾಶ ಮಾಡಿ ನಿರುತ್ಸಾಹಗೊಳಿಸಿ ಯುವಕರನ್ನು ಕಲೆಯಿಂದ ದೂರಾಗುವಂತೆ ಮಾಡುತ್ತಿರುವುದರ ವಿರುದ್ದ ಬಂಡೇಳುವುದಾದರೂ ಹೇಗೆ? ಸಮಸ್ಯೆ ಎಲ್ಲರಿಗೂ ಗೊತ್ತಿದೆ. ಇದು ಸಂಸ್ಕೃತಿ ರಕ್ಷಣಾ ಇಲಾಖೆಯಲ್ಲಾ ಹಣ ಭಕ್ಷಣಾ ಇಲಾಖೆಯೆಂದು ಎಲ್ಲರಿಗೂ ಗೊತ್ತಿತ್ತು. ಆದರೆ ಈಗ ಕಲಾವಿದರನ್ನೂ ಆಪೋಷಣ ತೆಗೆದುಕೊಳ್ಳುವ ಇಲಾಖೆ ಎಂಬುದು ಸಾಬೀತಾಗುತ್ತಿದೆ. ಜುಲೈ ತಿಂಗಳಲ್ಲಿ ಕಲಾಕ್ಷೇತ್ರದ ಸುವರ್ಣ ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ನಾಡಿನ ಮೂಲೆ ಮೂಲೆಯಿಂದ ಐನೂರಕ್ಕೂ ಹೆಚ್ಚು ಕಲಾವಿದರನ್ನು ಕರೆಯಿಸಿ ಕಲಾ ಪ್ರದರ್ಶನವನ್ನೇ ಇದ್ದಕ್ಕಿದ್ದಂತೆ ರದ್ದು ಮಾಡಿ ಕಲಾವಿದರನ್ನು ಅವಮಾನಿಸಿದ ಸಚಿವೆ ಉಮಾಶ್ರೀಯವರು ತದನಂತರ ಈಗ ದಲಿತ ಕಲಾವಿದರಿಗೆ ವೀಸಾ ಸಿಗದಂತೆ ತಂತ್ರಗಾರಿಕೆ ಮಾಡಿ ಅವಕಾಶ ವಂಚಿತರನ್ನಾಗಿ ಮಾಡಿದ್ದಂತೂ ಅಕ್ಷಮ್ಯ.

ಕಲೆಯ ಗಂಧ ಗಾಳಿ ಗೊತ್ತಿಲ್ಲದ ಮಂತ್ರಿಗಳು ಹೀಗೆಲ್ಲಾ ಕಲಾವಿದರಿಗೆ ಅನ್ಯಾಯ ಮಾಡಿದ್ದರೆ ಅವರ ಯೋಗ್ಯತೆಯೇ ಅಷ್ಟೆಂದು ನಿರ್ಲಕ್ಷಿಸಬಹುದಾಗಿತ್ತು. ಆದರೆ ಸ್ವತಃ ಕಲಾವಿದೆಯಾಗಿ ಬದುಕು ಕಟ್ಟಿಕೊಂಡ ಉಮಾಶ್ರೀ ಹೀಗೆ ಅಧಿಕಾರ ಸಿಕ್ಕ ಕೂಡಲೇ ಕಲಾವಿದರ ವಿರೋಧಿಯಾಗಬಹುದೆಂದು ಕನಸಲ್ಲೂ ಯಾರೂ ಊಹಿಸಿರಲಿಲ್ಲ. ತಾನು ಮೇಲೆ ಹತ್ತಿ ಹೋದ ಏಣಿಯನ್ನು ಒದ್ದು ವೃತ್ತಿಪರ ಸ್ವಾರ್ಥಿ ರಾಜಕಾರಣಿಯಂತೆ ಉಮಾಶ್ರೀ ಮೇಡಂ ಬದಲಾಗುತ್ತಾರೆಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಆದರೆ ಅಧಿಕಾರದ ಮದ ಎನ್ನುವುದು ಯಾರನ್ನೂ ಬಿಟ್ಟಿಲ್ಲ. ಇನ್ನು ಉಮಾಶ್ರೀಯವರ್ಯಾವ  ಲೆಕ್ಕ. 



ಆಗಸ್ಟ್  24 ರಂದು ನಡೆದ ಕಲಾಕ್ಷೇತ್ರ ಸುವರ್ಣ ವರ್ಷ ಸಂಭ್ರಮದ ಉದ್ಘಾಟನೆಯ ದಿನ ವೇದಿಕೆಯ ಮೇಲೆ ಮುಖ್ಯಮಂತ್ರಿ ಹಾಗೂ ಉಮಾಶ್ರೀಯವರ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವೆಯರಾದ ರಾಣಿ ಸತೀಶ್, ಲೀಲಾವತಿ ಪ್ರಸಾದ್, ಬಿ.ಟಿ.ಲಲಿತಾನಾಯಕರವರು ಕೊನೆಯಲ್ಲಿ ಮುದುರಿಕೊಂಡು ಚಲಾವಣೆಯಲ್ಲಿಲ್ಲದ ನಾಣ್ಯದಂತೆ ಕುಳಿತಿದ್ದರು. ವೇದಿಕೆ ಮೇಲೆ ಸಂಭ್ರಮದಿಂದ ಓಡಾಡುತ್ತಿದ್ದ ಉಮಾಶ್ರೀಯವರಿಗೆ ಮಾಜಿ ಸಚಿವೆಯರನ್ನು ನೋಡಿಯಾದರೂ ಅಧಿಕಾರ ಶಾಶ್ವತವಲ್ಲ ಎನ್ನುವ ವಾಸ್ತವದ  ಪಾಠ ಕಲಿಯಬೇಕಾಗಿತ್ತು. ಇಂದಿಲ್ಲಾ ನಾಳೆ ಈಗ ಮೆರೆಯುತ್ತಿರುವ ಉಮಾಶ್ರೀ ಕೂಡಾ ಮಾಜಿ ಆಗಲೇಬೇಕು. ಈಗ ಇವರ ಹಿಂದೆ ಮುಂದೆ ಬಕೀಟು ಹಿಡಿದುಕೊಂಡು ಓಡಾಡುವ ಅಧಿಕಾರಿಗಳು ಹಾಗೂ ಸಾಂಸ್ಕೃತಿಕ ದಲ್ಲಾಳಿಗಳು ಮುಂದಿನ ಸರಕಾರ ಬಂದಾಗ ಸಚಿವರಿಗೆ ಬಕೀಟು ಹಿಡಿಯಲು ಓಡಾಡುತ್ತಿರುತ್ತಾರೆಂಬುದು ಹಾಲಿ ಸಚಿವೆಗೆ ಗೊತ್ತಾಗಬೇಕು. ಅಧಿಕಾರ ಹೋದ ಮೇಲೆ ಯಾರೂ ಜೊತೆಗಿರುವುದಿಲ್ಲ ಎಂಬುದಕ್ಕೆ ದೇವರಾಜು ಅರಸರಂತಹ ದೈತ್ಯ ನಾಯಕರ ಅಂತಿಮ ಒಂಟಿತನದ  ದುರಂತ ಬದುಕೇ ಸಾಕ್ಷಿಯಾಗಿದೆ. ಯಾರಾದರೂ ಸತ್ಯಗಳನ್ನೆಲ್ಲಾ ಉಮಾಶ್ರೀಯವರಿಗೆ ತಿಳಿಸಿ ಹೇಳಬೇಕು. ಆದರೆ ಅಧಿಕಾರದ ಪಿತ್ತ ನೆತ್ತಿಗೇರಿದವರ ತಲೆಯೊಳಗೆ ಏನೂ ನಿಲ್ಲದುದಲಿತ ಕಲಾವಿದರ ನಿಟ್ಟುಸಿರಿನ ಪರಿತಾಪ ಒಂದಿಲ್ಲೊಮ್ಮೆ ಸಚಿವೆಗೆ ತಟ್ಟದೇ ಇರದು. ಕಾಲವೊಂದೇ ಇಂತವರಿಗೆ ಪಾಠ ಕಲಿಸಬಲ್ಲುದು.

ಈ 'ಮರಣವೇ ಮಹಾನವಮಿ' ನಾಟಕದಲ್ಲಿ ಶಿವಶರಣ ಹರಳಯ್ಯ "ನಾವು ಆಸೆಗಾಗಿ ಬದುಕಿದವರಲ್ಲ ಭಾಷೆಗಾಗಿ ಬದುಕಿದವರು" ಎನ್ನುವ ಮುತ್ತಿನಂತಾ ಮಾತನ್ನು ಹೇಳುತ್ತಾನೆ. ಈ ಮಾತಿನ ಅರ್ಥಕ್ಕೆ ವಿರುದ್ಧವಾಗಿ ಬದುಕುತ್ತಿರುವ ಈ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸಾಂಸ್ಕೃತಿಕ ಮಧ್ಯವರ್ತಿಗಳು ಕೊಟ್ಟ ಭಾಷೆಗಾಗಿ ಬದುಕಿದ್ದರೆ ಅದೆಷ್ಟು ಚೆಂದವಿತ್ತು. ಈಗ ನಮ್ಮ ದಲಿತ ಕಲಾವಿದ ಬಾಂಧವರು ಅಮೇರಿಕಕ್ಕೆ ಹೋಗಿ ತಮ್ಮ ಪ್ರತಿಭಾ ಪ್ರದರ್ಶನವನ್ನು ಮಾಡಿ ಕರ್ನಾಟಕದ ಕೀರ್ತಿಯನ್ನು ಬೆಳಗಿ ಹೆಮ್ಮೆಯಿಂದ ಹಿಂತಿರುಗಿ ಬರುತ್ತಿದ್ದರು. ಏನು ಮಾಡೋದು ದುರಾಸೆಗಾಗಿ ಬದುಕುವವರ ನಡುವೆ ಕಲಾವಿದರ ಹಿತರಕ್ಷಣೆ ಎಲ್ಲಿ?

ಕಾಲಾಯ ತಸ್ಮೈ ನಮಃ 

 - ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ