ಬುಧವಾರ, ಸೆಪ್ಟೆಂಬರ್ 28, 2016

ರಂಗಾಯಣಕೆ ಲಾಭಿ ಶುರು; ಉತ್ತರಾಧಿಕಾರಿ ಯಾರು?

ರಂಗಾಯಣದ  ಉತ್ತರಾಧಿಕಾರಿ ಯಾರು?  ಹೇಗಿರಬೇಕು?



ಆಧುನಿಕ ಕನ್ನಡ ರಂಗಭೂಮಿಯಲ್ಲಿ ಸರಕಾರಿ ರೆಪರ್ಟರಿಯಾದ ರಂಗಾಯಣಕ್ಕೆ ತನ್ನದೇ ಆದ ಮಹತ್ವ ಇದೆ. 1989 ರಲ್ಲಿ ಬಿ.ವಿ.ಕಾರಂತರ ಪರಿಕಲ್ಪನೆಯಲ್ಲಿ ಮೈಸೂರಿನಲ್ಲಿ ಹುಟ್ಟಿ ಕರ್ನಾಟಕದಾದ್ಯಂತ ಬೆಳೆದು ಬಂದ ರಂಗಾಯಣವು ಕಾರಂತರ ನಂತರ ಹಲವಾರು ಏಳುಬೀಳುಗಳನ್ನು ಕಂಡಿದ್ದು ಇನ್ನೂ ಬದುಕಿ ರಂಗತಂಡವಾಗಿ ಉಸಿರಾಡುತ್ತಿದೆ. ಕಾರಂತರ ಆಶಯದಂತೆ ಕೇವಲ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ರಂಗಾಯಣವನ್ನು ಕರ್ನಾಟಕದ ಮೂರು ಪ್ರಮುಖ ಪ್ರಾಂತ್ಯಗಳಿಗೆ 2011 ರಲ್ಲಿ ವಿಸ್ತರಿಸಲಾಯಿತು. ಧಾರವಾಡ, ಶಿವಮೊಗ್ಗ ಹಾಗೂ ಕಲಬುರುಗಿಗಳಲ್ಲಿ ತಲಾ ಒಂದೊಂದು ರಂಗಾಯಣವನ್ನು ಆರಂಭಿಸಲಾಯಿತು. ಆದರೆ ಶಿವಮೊಗ್ಗ ಹಾಗೂ ಕಲಬುರಗಿ ರಂಗಾಯಣಗಳು ನಾಟಕ ಚಟುವಟಿಕೆಗಳಿಗಿಂತಾ ಆರಂಭದಿಂದಲೂ ಅಧಿಕಾರಿಗಳ ಅಸಹಕಾರ, ನಿರ್ದೇಶಕರುಗಳ ಅಹಂಕಾರ ಹಾಗೂ ಕಲಾವಿದರ ಒಳಜಗಳಗಳಿಂದಾಗಿ ಸುದ್ದಿಯಾದವು. ಆರ್ಥಿಕ ಅಶಿಸ್ತು ಹಾಗೂ ದುರಹಂಕಾರದ ವರ್ತನೆಯಿಂದಾಗಿ ಶಿವಮೊಗ್ಗ ರಂಗಾಯಣದ ನಿರ್ದೇಶಕ ಇಕ್ಬಾಲ್ ಅಹಮದ್‌ರವರನ್ನೂ ಹಾಗೂ ಜಾತಿನಿಂದನೆ, ಗುಂಪುಗಾರಿಕೆ ಮತ್ತು ಕಲಾವಿದೆಯರ ಮೇಲೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಕಲಬುರಗಿ ರಂಗಾಯಣದ ನಿರ್ದೇಶಕ ಪ್ರೊ.ಆರ್.ಕೆ.ಹುಡಗಿಯವರನ್ನು 2016 ಜುಲೈ 26 ರಂದು ಸರಕಾರ ವಜಾಗೊಳಿಸಿತು. ಜೊತೆಗೆ ಕಲಬುರುಗಿ ರಂಗಾಯಣದ ಕಲಾವಿದರನ್ನೂ ಸಹ ಮನೆಗೆ ಕಳುಹಿಸಿತು. ಈಗ ಈ ಎರಡೂ ರಂಗಾಯಣಗಳ ನಿರ್ದೇಶಕರ ಹುದ್ದೆ ಹಾಗೂ ಕಲಾವಿದರುಗಳ ಜಾಗ ಖಾಲಿಯಿದ್ದು ಸರಕಾರ ಈ ರಂಗಾಯಣದ ಸಹವಾಸವೇ ಬೇಡವೆಂದು ಸುಮ್ಮನಾಗಿದೆ.


ಜೊತೆಗೆ ಈಗ ಮೈಸೂರು ರಂಗಾಯಣದ ಹಾಲಿ ನಿರ್ದೇಶಕರಾದ ಹೆಚ್.ಜನಾರ್ಧನ್‌ರವರ ಅಧಿಕಾರವಧಿ ಸೆಪ್ಟಂಬರ್ 30ಕ್ಕೆ ಕೊನೆಗೊಳ್ಳುತ್ತದೆ. ಈಗಾಗಲೇ ರಾಜ್ಯಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಲಿ ನಿರ್ದೇಶಕ ದಯಾನಂದರವರಿಗೆ ಸೆ.೩೦ರಿಂದ ರಂಗಾಯಣದ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಜೊತೆಗೆ ಕಲಬುರುಗಿ ರಂಗಾಯಣದ ಹೊಣೆಗಾರಿಕೆಯನ್ನು ಸಂಸ್ಕೃತಿ ಇಲಾಖೆಯ ಜಂಟಿನಿರ್ದೇಶಕ ಕೆ.ಹೆಚ್.ಚೆನ್ನೂರರವರಿಗೆ ಹಾಗು ಶಿವಮೊಗ್ಗ ರಂಗಾಯಣದ ಜವಾಬ್ದಾರಿಂiiನ್ನು ಇಲಾಖೆಯ ಜೆಡಿ ಬಲವಂತರಾವ್ ಪಾಟೀಲರವರಿಗೆ ವಹಿಸಿ ಆದೇಶಿಸಲಾಗಿದೆ. ಅಂದರೆ ರಂಗಾಯಣಗಳಿಗೆ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತದೆ ಎಂಬುದೇ ಇದರ ಒಳಾರ್ಥ. ನಾಲ್ಕು ರಂಗಾಯಣಗಳಲ್ಲಿ ಖಾಲಿ ಇರುವ ಮೂರು ನಿರ್ದೇಶಕರ ಹುದ್ದೆಗಳಿಗೆ ಅರ್ಹರನ್ನು ಸರಕಾರ ಆದಷ್ಟು ಬೇಗ ಆಯ್ಕೆ ಮಾಡುವುದಂತೂ ಅನುಮಾನ. ಆಡಳಿತಾಧಿಕಾರಿಗಳ ಮೂಲಕವೇ ರಂಗಾಯಣವನ್ನು ಮುನ್ನಡೆಸಿ ಆದಷ್ಟು ದಿನಗಳ ಕಾಲ ನಿರ್ದೇಶಕರ ಆಯ್ಕೆಯನ್ನು ಮುಂದೆ ತಳ್ಳೋಣ ಎನ್ನುವ ವಿಳಂಬ ಧೋರಣೆಯನ್ನು ಸರಕಾರ ಅನುಸರಿಸುವುದು ನಿಚ್ಚಳವಾಗಿದೆ.

ಯಾಕೆ ರಂಗಾಯಣಕ್ಕೆ ನಿರ್ದೇಶಕರ ಆಯ್ಕೆ ಹೀಗೆ ವಿಳಂಬಮಾಡಲಾಗುತ್ತಿದೆ. ಶಿವಮೊಗ್ಗ ಹಾಗೂ ಕಲಬುರುಗಿ ರಂಗಾಯಣಗಳ ನಿರ್ದೇಶಕರ ಹುದ್ದೆ ಖಾಲಿಯಾಗಿ ಎರಡು ತಿಂಗಳಾದರೂ ಇನ್ನೂ ನಿರ್ದೇಶಕರನ್ನು ಆಯ್ಕೆ ಯಾಕೆ ಮಾಡಿಲ್ಲ? ಯಾಕೆಂದರೆ ನಮ್ಮ ಸಂಸ್ಕೃತಿ ಇಲಾಖೆಗೆ ಹಾಗೂ ರಂಗಸಮಾಜಕ್ಕೆ ಇನ್ನೂ ಅರ್ಹ ಅಭ್ಯರ್ಥಿಗಳೇ ಸಿಕ್ಕುತ್ತಿಲ್ಲ. ಕೆಲವರು ಆಕಾಂಕ್ಷಿಗಳಾಗಿದ್ದರೂ ಬೆಂಗಳೂರು ಬಿಟ್ಟು ಹೋಗಿ ದೂರದ ರಂಗಾಯಣ ಮುನ್ನಡೆಸಲು ಇಚ್ಚಿಸುತ್ತಿಲ್ಲ. ಇಂತವರ ಬೇರುಗಳು ಬೆಂಗಳೂರಲ್ಲಿ ಆಳವಾಗಿ ಬೇರೂರಿವೆ. ಅವರ ಏನೇನೋ ರಂಗವ್ಯವಹಾರಗಳು  ಬೆಂಗಳೂರಲ್ಲಿವೆ. ಇನ್ನು ಕೆಲವರು ಹೋಗಲು ಸಿದ್ದರಾದರೂ ಅದು ರಂಗಸಮಾಜದವರಿಗೆ ಒಪ್ಪಿಗೆ ಆಗುತ್ತಿಲ್ಲ. ಕಳೆದ ಎರಡು ತಿಂಗಳಿಂದಲೂ ಖಾಲಿ ಇದ್ದ ಹುದ್ದೆಗಳಿಗೆ ನಿರ್ದೇಶಕರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂದು ರಂಗಸಮಾಜದ ಒಂದಿಬ್ಬರು ಮುಂದಾಳುಗಳು ತಲೆ ಕೆರೆದುಕೊಳ್ಳುತ್ತಲೇ ಇದ್ದಾರಾದರೂ ಸೂಕ್ತ ವ್ಯಕ್ತಿಯನ್ನು ಹುಡುಕಲು ಸಾಧ್ಯವಾಗಿಲ್ಲ.  ಯಾಕೆಂದರೆ ಈಗಾಗಲೇ ಇದೇ ರಂಗಸಮಾಜದ ದೊಡ್ಡದ್ವನಿಯ ಸದಸ್ಯರುಗಳು ಈ ಹಿಂದೆ ಇಕ್ಬಾಲ್ ಹಾಗೂ ಹುಡುಗಿಯವರನ್ನು ಆಯ್ಕೆ ಮಾಡಿ ಸಾಕಷ್ಟು ಮುಖಬಂಗಕ್ಕೆ ಈಡಾಗಿದ್ದಾರೆ. ಈ  ಇಬ್ಬರ ಹೆಸರುಗಳನ್ನು ಪ್ರಸ್ತಾಪಿಸಿ ಆಯ್ಕೆಯಾಗುವಂತೆ ಮಾಡಿದವರ ಮೇಲೆಯೇ ಅಸಮರ್ಥರಿಗೆ ಮಣೆ ಹಾಕಿದ ಆರೋಪ ಬಂದಿದೆ. ಹೀಗಾಗಿ ಈ ಸಲವೂ ಆಯ್ಕೆಯಲ್ಲಿ ಯಡವಟ್ಟಾದರೆ ಇರುವ ಮಾನಮರ್ಯಾದೆಯೂ ಹೋಗುತ್ತದೆಂಬ ಭಯ ರಂಗಸಮಾಜದ ಸದಸ್ಯರನ್ನು ಕಾಡುತ್ತಿದೆ. ಹೀಗಾಗಿ ಯಾರೂ ಯಾರ ಹೆಸರನ್ನೂ ಸೂಚಿಸಲು ಮುಂದೆ ಬರುತ್ತಿಲ್ಲ. ಯಾರಾದರೂ ಯಾಕೆಂದು ಕೇಳಿದರೆ ನೀವೇ ಅರ್ಹ ವ್ಯಕ್ತಿಗಳ ಹೆಸರನ್ನು ಸೂಚಿಸಿ ಎನ್ನವ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ ಆ ಎರಡೂ ರಂಗಾಯಣಕ್ಕೆ ಮುಖ್ಯಸ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನೆನಗುದಿಗೆ ಬಿದ್ದಿದೆ. ಸರಕಾರವನ್ನು ಎಚ್ಚರಿಸಬೇಕಾದ ರಂಗಸಮಾಜ ನಿಷ್ಕ್ರೀಯವಾಗಿ ಮಲಗಿದೆ.

ಆದರೆ... ಮೈಸೂರು ರಂಗಾಯಣದ ವಿಷಯ ಹಾಗಲ್ಲ. ಬೆಂಗಳೂರಿಗೆ ಹತ್ತಿರವಿರುವುದರಿಂದ ಬೆಂಗಳೂರಿನ ತಮ್ಮ ವ್ಯವಹಾರಗಳನ್ನು ನೋಡಿಕೊಂಡೂ ಮೈಸೂರು ರಂಗಾಯಣವನ್ನೂ ನಿಭಾಯಿಸುವ ಆಸೆಯಿಂದ ಇನ್ನೂ ಹಾಲಿ ನಿರ್ದೇಶಕರುಗಳ ಅವಧಿ ಇರುವಾಗಲೇ ನಿರ್ದೇಶಕರಾಗಲು ಲಾಭಿ  ಈಗಾಗಲೇ ಶುರುವಾಗಿದೆ. ಶಿವಮೊಗ್ಗ ಹಾಗೂ ಕಲಬುರಗಿ ರಂಗಾಯಣದ ನಿರ್ದೇಶಕ ಹುದ್ದೆಗೆ ಇಲ್ಲದ ಕಾಂಪಿಟೇಶನ್ ಮೈಸೂರು ರಂಗಾಯಣಕ್ಕೆ ಶುರುವಾಗಿದೆ. ಮೈಸೂರು ರಂಗಾಯಣ ಈಗಾಗಲೇ ಎಸ್ಟಾಬ್ಲಿಷ್ ಆಗಿದ್ದು ನಿರ್ದೇಶಕರಾದವರಿಗೆ ಅಲ್ಲಿ ಹೆಚ್ಚಿನ ಕೆಲಸವಿಲ್ಲವಾಗಿದ್ದರಿಂದ ಹಾಗೂ ಸರಕಾರಿ ಅನುದಾನ ಬೇಕಾದಷ್ಟಿರುವುದರಿಂದ ಮತ್ತು ಬೆಂಗಳೂರಿನ ಪಕ್ಕದಲ್ಲಿರುವುದರಿಂದ ನಿರ್ದೇಶಕರಾಗಲು ತಾಮುಂದು ನೀಮುಂದು ಎನ್ನುತ್ತಿದ್ದಾರೆ.


ಮೈಸೂರು ರಂಗಾಯಣಕ್ಕೆ ನಿರ್ದೇಶಕರಾಗಲು ಪ್ರಮುಖ ಪೈಪೋಟಿ ಇರುವುದು ನಾಗಾಭರಣ ಹಾಗೂ ಕಪ್ಪಣ್ಣ ಈ ಇಬ್ಬರ ನಡುವೆ. ಒಂದು ಕಾಲದ ಗಳಸ್ಯ ಕಂಟಸ್ಯ ಗೆಳೆಯರಾದ ಈ ರಂಗೋಪಜೀವಿಗಳು ಈಗ ರಂಗಾಯಣದ ನಿರ್ದೇಶಕರಾಗಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ನಾಗಾಭರಣರವರು ಈಗಾಗಲೇ ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಹಾಗೂ ಕಳೆದ ಬಾರಿ ಎಂಪಿ ಚುಣಾವಣೆಯಲ್ಲಿ ಬಿಜೆಪಿ ಪಕ್ಷದ ಅನಂತಕುಮಾರ ಪರವಾಗಿ ಪ್ರಚಾರಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು. ಹಾಗೂ ತಮ್ಮ ಪಕ್ಷನಿಷ್ಟೆಯಿಂದಾಗಿ ಅಕಾಡೆಮಿ ಅಧ್ಯಕ್ಷತೆಯ ಫಲಾನುಭವಿಗಳೂ ಆದರು. ಯಾವಾಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದಿತೋ  ಆಗ ರಾಜಕೀಯದಿಂದ ನಿರ್ಲಪ್ತರಾದರು. ಈಗ ಕಾಂಗ್ರೆಸ್ ಸರಕಾರದಲ್ಲೂ ಸಹ ತಮ್ಮ ಅಳಿದುಳಿದ ವರ್ಚಸ್ಸನ್ನು ಬಳಸಿ ಮೈಸೂರು ರಂಗಾಯಣದ ನಿರ್ದೇಶಕರಾಗಲು ಪ್ರಯತ್ನಿಸುತ್ತಿದ್ದಾರೆ. ಹಾಗೂ ಈ ನಾಗಾಭರಣರಂತವರು ಪಕ್ಷ ನಿಷ್ಠೆಗಿಂತಾ ಅಧಿಕಾರದ ನಿಷ್ಟೆ ದೊಡ್ಡದು ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ರಾಜಕಾರಣವನ್ನೂ ಸಹ ತಮ್ಮ ಅಧಿಕಾರದ ಮೆಟ್ಟಲುಗಳನ್ನಾಗಿ ಮಾಡಿಕೊಳ್ಳಲು ಸದಾ ಹವಣಿಸುತ್ತಿದ್ದಾರೆ. ಬಿ.ಜಯಶ್ರೀಯವರು ರಂಗಾಯಣದ ನಿರ್ದೇಶಕರಾದಾಗ ಮೈಸೂರು ರಂಗಾಯಣದ ಜೊತೆಗೆ ತುಂಬಾನೇ ಒಡನಾಟ ಇಟ್ಟುಕೊಂಡಿದ್ದ ನಾಗಾಭರಣರವರು ಅಲ್ಲಿರುವ ಒಂದಿಬ್ಬರು ಕಲಾವಿದರುಗಳ ನಿಷ್ಟೆಯನ್ನು ತಮ್ಮ ಪರವಾಗಿಸಿಕೊಂಡಿದ್ದಾರೆ. ರಂಗಾಯಣದ ಒಳಗಿಂದಲೇ ನಾಗಾಭರಣವರ ಕುರಿತು ಒಳಒತ್ತಡ ತರುವ ಪ್ರಯತ್ನವೂ ಸಾಗಿದೆ. ಆದರೆ.. ಇವರ ಹಿಂದಿನ ಬಿಜೆಪಿ ನಿಷ್ಟೆ ಇವರ ಆಸೆಗೆ ಅಡ್ಡಗಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೂ ಪ್ರಯತ್ನವಂತೂ ಚಾಲ್ತಿಯಲ್ಲಿದೆ.

ಹಾಗೆಯೇ ಸಧ್ಯಕ್ಕೆ ಅಧಿಕೃತ ಅಧಿಕಾರವಿಲ್ಲದೇ ನಿರುದ್ಯೋಗಿಯಾಗಿರುವ ಕಲಾರತ್ನ ಕಪ್ಪಣ್ಣನವರೂ ಸಹ ಒಂದು ಕೈ ನೋಡೇ ಬಿಡೋಣವೆಂದು ಸಿದ್ದರಾಗಿದ್ದಾರೆ. ಕಪ್ಪಣ್ಣನವರಂತೂ ಎಂದೂ ಯಾವುದೇ ಪಕ್ಷಕ್ಕಾಗಲೀ  ಸಿದ್ದಾಂತಕ್ಕಾಗಲೀ ಬದ್ದರಾದವರಂತೂ ಅಲ್ಲವೇ ಅಲ್ಲ. ಯಾವ ಸರಕಾರ ಆಡಳಿತದಲ್ಲಿರುತ್ತದೆ ಆ ಸರಕಾರದ ಪರ ನಿಲುವನ್ನು ಹೊಂದಿರುವ ಪಕ್ಕಾ ರಂಗರಾಜಕಾರಣಿ. ಅವರಿಗೆ ಮುಖ್ಯವಾಗುವುದು ರಂಗನಿಷ್ಟೆಯೂ ಅಲ್ಲಾ, ಪಕ್ಷ ಬದ್ದತೆಯೂ ಅಲ್ಲಾ. ಕೇವಲ ಅಧಿಕಾರ, ಪದವಿ, ಪ್ರಶಸ್ತಿ ಹಾಗೂ ಇಲಾಖೆಯ ಗುತ್ತಿಗೆಗಳು ಮಾತ್ರ. ನಾಟಕ ಅಕಾಡೆಮಿಯ ಅಧ್ಯಕ್ಷರಾಗಲು ವಾರ್ತಾ ಇಲಾಖೆಯ ನೌಕರಿಗೆ ರಾಜೀನಾಮೆ ಕೊಟ್ಟು ಬಂದವರು. ಬಿಜೆಪಿ ಸರಕಾರ ಬಂದಾಗ ಕಾಂಗ್ರೆಸ್ ಸರಕಾರದಲ್ಲಿ ಆಯ್ಕೆಯಾದ ಅಕಾಡೆಮಿ ಅಧ್ಯಕ್ಷರೆಲ್ಲಾ ರಾಜೀನಾಮೆ ಕೊಡಬೇಕು ಎನ್ನುವ ಕೂಗೆದ್ದಾಗ ತಮ್ಮ ಖುರ್ಚಿಗೆ ಗಟ್ಟಿಯಾಗಿ ಅಂಟಿಕೊಂಡವರು. ಯಾರು ಏನೇ ಹೇಳಲಿ ಅವರ ಅಧಿಕಾರ ದಾಹ, ಪ್ರಶಸ್ತಿ ಮೋಹ ಹಾಗೂ ರಂಗವ್ಯವಹಾರದ ಕುರಿತ ಇರುವ ನಿಷ್ಟೆಯನ್ನು ಮೆಚ್ಚಿಕೊಳ್ಳಲೇ ಬೇಕು. ಸರಕಾರೀ ವ್ಯವಸ್ಥೆಯೊಳಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಲ್ಲಿಯಾದರೂ ಅವಕಾಶ ಇದ್ದರೆ ಅಲ್ಲಿ ಕಪ್ಪಣ್ಣ ಮೊದಲಿಗರಾಗಿರುತ್ತಾರೆಂದೇ ಅರ್ಥ. ಕಲಾಕ್ಷೇತ್ರ-50 ನೆನಪಿನೋಕಳಿ ಕಾರ್ಯಕ್ರಮದ ಉದ್ಘಾಟನೆಗೆ ಐನೂರು ಜನ ಕಲಾವಿದರನ್ನು ಕರೆಸಿ ಉಮಾಶ್ರೀಯವರ ಮೌಖಿಕ ಆದೇಶದ ಮೇರೆಗೆ ಕಾರ್ಯಕ್ರಮ ರದ್ದು ಮಾಡಿ ಅವಮಾನಕ್ಕೀಡಾದ ಕಪ್ಪಣ್ಣರವರು ಉಮಾಶ್ರೀ ಹೇಳಿದ ಸುಳ್ಳನ್ನೇ ಪತ್ರಿಕೆಯವರ ಮುಂದೆ ಹೇಳಿದರೇ ಹೊರತು ಇರುವ ಸತ್ಯವನ್ನಲ್ಲ. ಅವಮಾನ ಸಹಿಸಿಕೊಂಡು ಯಾಕೆ ಅಲ್ಲಿದ್ದೀರಿ. ಕಮಿಟಿ ಅಧ್ಯಕ್ಷತೆಗೆ ರಾಜೀನಾಮೆ ಕೊಟ್ಟು  ಹೊರಬರಬೇಕಲ್ಲವೇ ಎಂದು ಕಪ್ಪಣ್ಣನವರನ್ನು ಕೇಳಿದಾಗ ನಾನು ಹೊರಗೆ ಬಂದರೆ ಬೇರೆಯೊಬ್ಬರು ಅಲ್ಲಿ  ಬಂದು ಕುಳಿತುಕೊಳ್ಳುತ್ತಾರೆ, ಅದಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಹೇಳುವ ಮೂಲಕ ತಮ್ಮ ಅಧಿಕಾರದ ನಿಷ್ಟೆಯನ್ನು ಸಾಬೀತುಮಾಡಿದರು. ಕಲಾವಿದರಲ್ಲದ, ನಿರ್ದೇಶಕರಲ್ಲದ ರಂಗರಾಜಕಾರಣಿ ಕಪ್ಪಣ್ಣನವರು ರಂಗಾಯಣದ ನಿರ್ದೇಶಕರಾಗಲು ಅದ್ಯಾವ ಮಾನದಂಡ ಇಟ್ಟುಕೊಂಡು ಆಕಾಂಕ್ಷಿಯಾಗಿದ್ದಾರೋ ಗೊತ್ತಿಲ್ಲ. ಆದರೂ ಪ್ರಯತ್ನವಂತೂ ನಿಂತಿಲ್ಲ.     

ಇವರಿಬ್ಬರ ನಡುವೆ ಗೋಪಾಲಕೃಷ್ಣ ನಾಯರಿ ಸಾಹೇಬರು ಸಹ ತಮ್ಮ ಹೆಸರನ್ನು ಚಲಾವಣೆಗೆ ಬಿಟ್ಟಿದ್ದಾರೆ. ಈ ಹಿಂದೆ ಧಾರವಾಡ ರಂಗಾಯಣಕ್ಕೆ ನಿರ್ದೇಶಕರಾಗಲು ನಾಯರಿ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಅದು ಆಗದೇ ಇದ್ದಾಗ ಕೋರ್ಟಿಗೂ ಹೋಗಿ ಸೋತಿದ್ದರು. ಈಗ ಮತ್ತೆ ಮೈಸೂರು ರಂಗಾಯಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಮೈಸೂರು ರಂಗಾಯಣಕ್ಕೆ ಇಲ್ಲಿವರೆಗೂ ನಿರ್ದೇಶಕರಾದವರಲ್ಲಿ ಬಿ.ವಿ.ರಾಜಾರಾಂರವರನ್ನು ಹೊರತು ಪಡಿಸಿ ಎಲ್ಲರೂ ಎನ್ ಎಸ್ ಡಿ ಇಂದ ಕಲಿತುಬಂದವರೇ ಆಗಿದ್ದರು. ಕಾರಂತರಿಂದ ಮೊದಲ್ಗೊಂಡು ಪ್ರಸನ್ನ, ಬಸವಲಿಂಗಯ್ಯ, ಜಂಬೆ, ಜಯಶ್ರೀ ಹಾಗೂ ಜನ್ನಿ ಈ ಎಲ್ಲರೂ ಸಹ ರಾಷ್ಟ್ರೀಯ ರಂಗಶಾಲೆಯ ಪ್ರೊಡಕ್ಟ್ ಆಗಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ಆರೆಸ್ಸೆಸ್ಸ ಕಾರ್ಯಕರ್ತರಾದ ಬಿ.ವಿ.ರಾಜಾರಾಂರವರು ಅದು ಹೇಗೋ ಆರೆಸ್ಸೆಸ್ಸ ಪ್ರಮುಖ ಸಂತೋಷಜಿ ಯವರ ರೆಕಮೆಂಡೇಶನ್ ಮೇಲೆ ರಂಗಾಯಣಕ್ಕೆ ನಿರ್ದೇಶಕರಾಗಿದ್ದರೂ ತದನಂತರ ರಾಜೀನಾಮೆ ಕೊಟ್ಟಿದ್ದರು. ಹೀಗಾಗಿ ಎನ್ ಎಸ್ ಡಿ ಪದವಿಯ ಕೃಪಾಕಟಾಕ್ಷ ಹಾಗೂ ಹಿರಿಯನ ಮತ್ತು ಜಾತಿಯ ಆಧಾರದಲ್ಲಿ ತಾವು ಮೈಸೂರು ರಂಗಾಯಣದ ನಿರ್ದೇಶಕರಾಗಲು ಅರ್ಹತೆ ಇದೆ ಎಂದು ಗೋಪಾಲಕೃಷ್ಣ ನಾಯರಿಯವರು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ನಾಯರಿಯವರಿಗೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಅನುದಾನ ಸಮಿತಿಯ ಸದಸ್ಯರ ಗ್ಯಾಂಗ್ ಸಪೋರ್ಟಿಗೆ ನಿಂತಿದೆ. ನಾಯರಿಯವರ ಸಾಮರ್ಥ್ಯಕ್ಕಿಂತಲೂ ಅವರ ಸುತ್ತ ಇರುವ ಈ ಸರಕಾರಿ ಬೊಕ್ಕಸದ ಫಲಾನುಭವಿಗಳ ಸಂಘವೇ ಮುಳುವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಯಾಕೆಂದರೆ ಈ ಫಲಾನುಭವಿಗಳು ಪರ್ಸೆಂಟೇಸ್ ಫಿಕ್ಸ್ ಮಾಡಿ ಬಹುದೊಡ್ಡ ಮಟ್ಟದ ಲೂಟಿ ಮಾಡಿದ್ದನ್ನು ಕರ್ನಾಟಕದ ರಂಗಕರ್ಮಿಗಳು ಮರೆಯಲು ಸಾಧ್ಯವೇ ಇಲ್ಲ.

ಈ ಕಪ್ಪಣ್ಣ ಹಾಗೂ ನಾಗಾಭರಣ ಇಬ್ಬರನ್ನೂ ಸಚಿವೆ ಉಮಾಶ್ರೀಯವರು ಕಲಬುರಗಿ ಹಾಗೂ ಶಿವಮೊಗ್ಗದ ರಂಗಾಯಣಕ್ಕೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ಕಳುಹಿಸಿ ಅಲ್ಲಿಯೇ ಮೂರು ವರ್ಷ ಇದ್ದು ಆ ಪ್ರಾಂತೀಯ ರಂಗಾಯಣಗಳನ್ನು ಬೆಳೆಸಲು ಒತ್ತಾಯಿಸಿ ಅವಕಾಶ ಕೊಡಬೇಕು. ಇಂತಹುದೊಂದು ಆಪರ್ ಕೊಟ್ಟರೆ ಈ ರಂಗಾಯಣಗಳ ಸಹವಾಸವೇ ಬೇಡವೆಂದು ಈ ಇಬ್ಬರೂ ರೇಸ್‌ನಿಂದ ದೂರಾಗುವುದು ಖಚಿತ. ಯಾಕೆಂದರೆ ಇವರಿಗೆ ಬೆಂಗಳೂರಿನಲ್ಲಿರುವ ವ್ಯವಹಾರಗಳನ್ನು ಬಿಟ್ಟು ಹೋಗಿ ಶೂನ್ಯದಿಂದ ರಂಗಾಯಣವನ್ನು ಕಟ್ಟುವಂತಹ ವಯಸ್ಸಾಗಲೀ, ಮನಸ್ಸಾಗಲೀ ಇಲ್ಲವೇ ಇಲ್ಲ.


ಮೈಸೂರು ರಂಗಾಯಣಕ್ಕೆ ಈ ಸಲ ಹೊರಗಿನಿಂದ ಅಂದರೆ ಕನ್ನಡೇತರ ರಂಗನಿರ್ದೇಶಕರನ್ನು ಕರೆತಂದು ರಂಗಾಯಣದ ಹೊಣೆಗಾರಿಕೆ ವಹಿಸಿಕೊಡುವುದು ಸೂಕ್ತ.  ರಂಗಾಯಣದ ಒಳಿತಿಗಾಗಿ ಇದೊಂದು ಸಲ ಕನ್ನಡಿಗರು ಭಾಷಾಭಿಮಾನ ಪಕ್ಕಕ್ಕಿಟ್ಟು ರೆಪರ್ಟರಿ ಕಟ್ಟುವಲ್ಲಿ ಅನುಭವಸ್ತರಾದ ಹಾಗೂ ಈಗಾಗಲೇ ಅತ್ಯುತ್ತಮ ನಾಟಕಗಳನ್ನು ನಿರ್ದೇಶಿಸಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ರಂಗಕರ್ಮಿಯೊಬ್ಬರನ್ನು ಆಹ್ವಾನಿಸಿ ರಂಗಾಯಣದ ನಿರ್ದೇಶಕರನ್ನಾಗಿಸುವುದು ಸ್ವಾಗತಾರ್ಹ ಕ್ರಮ. ಕನ್ನಡಿಗರನ್ನು ಬಿಟ್ಟು ಬೇರೆಯವರನ್ನು ಸರಕಾರಿ ರಂಗರೆಪರ್ಟರಿಗೆ ಕರೆಸುವುದು ಕನ್ನಡವಿರೋಧಿತನ ಎನ್ನುವವರು ಗಮನಿಸಬೇಕಾದ ಒಂದು ಸತ್ಯವೇನೆಂದರೆ ನಮ್ಮ ಹೆಮ್ಮೆಯ ರಂಗನಿರ್ದೇಶಕ ಬಿ.ವಿ.ಕಾರಂತರನ್ನು ಮಧ್ಯಪ್ರದೇಶ ಸರಕಾರ ಭೂಪಾಲ ರಂಗಮಂಡಲ ರೆಪರ್ಟರಿಗೆ ನಿರ್ದೇಶಕರನ್ನಾಗಿ ನಿಯಮಿಸಿತ್ತು. ಅಲ್ಲಿ ನಿರ್ದೇಶಕರಾಗಿದ್ದಾಗ ಕಾರಂತರು ಕಟ್ಟಿಕೊಟ್ಟ ನಾಟಕಗಳನ್ನು ಇಡೀ ಭೂಪಾಲಿಗರಿಗೆ ಇಂದಿನವರೆಗೂ ಮರೆಯಲು ಸಾಧ್ಯವಾಗಿಲ್ಲ. ಈ ಸಲವಾದರೂ ಇಂತಹುದೊಂದು ಪ್ರಯೋಗಕ್ಕೆ ಸರಕಾರ ಮನಸ್ಸು ಮಾಡಬೇಕಿದೆ. ರಂಗಾಯಣದ ಹಿತಚಿಂತನೆಗಾಗಿಯೇ ಇರುವ ರಂಗಸಮಾಜದ ಸದಸ್ಯರುಗಳು ಈ ರೀತಿಯ ಪ್ರಪೋಸಲ್ ಅನ್ನು ಈ ಸಲ ಆಯ್ಕೆ ಸಭೆಯಲ್ಲಿ ಮಂಡಿಸುವ ಅಗತ್ಯವಿದೆ. ರಂಗಸಮಾಜದ ದುರಂತವೇನೆಂದರೆ ಮಂಡ್ಯರಮೇಶರವರನ್ನು ಹೊರತು ಪಡಿಸಿದರೆ ಅಲ್ಲಿ ಸಕ್ರೀಯ ರಂಗನಿರ್ದೇಶಕರು ಯಾರೂ ಇಲ್ಲವೇ ಇಲ್ಲ. ಅಲ್ಲಿರುವವರು ತಮ್ಮ ಅರಿವನ್ನು ವಿಸ್ತರಿಸಿಕೊಂಡು  ರಂಗಾಯಣದ ಒಳಿತಿಗಾಗಿ ಈ ಸಲ ಕನ್ನಡೇತರರಾದ ಸುಪ್ರಸಿದ್ದ ರಂಗಕರ್ಮಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಆಲೋಚಿಸಬೇಕಿದೆ. ಸಚಿವೆ ಉಮಾಶ್ರೀಯವರಿಗೆ ಮನದಟ್ಟು ಮಾಡಬೇಕಿದೆ. ಮತ್ತದೇ ಕಪ್ಪಣ್ಣ, ನಾಗಾಭರಣ, ನಾಯರಿಗಳು ಬಂದು ಕೂತರೆ ಮೈಸೂರು ರಂಗಾಯಣ ಎನ್ನುವುದು ಈಗಿದ್ದಂತೆ ವೀಕೆಂಡ್ ಪ್ರದರ್ಶನದ ರಂಗತಂಡವಾಗಿಯೇ ಇರುತ್ತದೆ. ಅಂತರಾಷ್ಟ್ರೀಯ ಖ್ಯಾತಿಯ ರಂಗಕರ್ಮಿಗಳು ರಂಗಾಯಣದ ಜವಾಬ್ದಾರಿಯನ್ನು ವಹಿಸಿಕೊಂಡರೆ ಮೈಸೂರಿನ ವೀಕೆಂಡ್ ರಂಗಾಯಣವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚೆಚ್ಚು ವಿಭಿನ್ನವಾದ ನಾಟಕಗಳನ್ನು ಪ್ರದರ್ಶಿಸಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಬಹುದಾಗಿದೆ.


ಯಾರು ಏನೇ ಹೇಳಲಿ ಮೈಸೂರು ರಂಗಾಯಣ ಬಹಳಷ್ಟು ವರ್ಷಗಳಿಂದ ನಿಂತಲ್ಲೇ ನಿಂತಿದೆ. ಅದೇ ಹಳೆಯ ನಾಟಕಗಳ ರಿಪೀಟ್ ಶೋಗಳನ್ನೇ ಮಾಡುತ್ತಾ ಸ್ಟ್ಯಾಂಡ್ ಹಾಕಿ  ಸೈಕಲ್ ಹೊಡೆಯುತ್ತಿದೆ. ಅಲ್ಲಿರುವ ಕೆಲವು ಕಲಾವಿದರೂ ಸಹ ರಂಗಾಯಣದಲ್ಲಿ ಯಾಂತ್ರಿಕವಾಗಿ ಸರಕಾರಿ ನೌಕರರಂತೆ ಕೆಲಸಮಾಡುತ್ತಾ ತಮ್ಮ ಕ್ರಿಯಾಶೀಲತೆಯನ್ನು ಹೊರಗೆ ತೋರಿಸುತ್ತಿದ್ದಾರೆ. ಬದಲಾವಣೆ ಎನ್ನುವುದು ರಂಗಾಯಣಕ್ಕೆ ಬೇಕಾಗಿದೆ. ಅಂತಹ ಬದಲಾವಣೆಗೆ ಸರಕಾರ ಅವಕಾಶಮಾಡಿಕೊಡಬೇಕಿದೆ. ಇಲ್ಲವಾದರೆ ಸರಕಾರದ ಮೂಲಕ ರಂಗಾಯಣಕ್ಕೆ ಸಂದಾಯವಾಗುವ ಜನರ ಕೊಟ್ಯಾಂತರ ಹಣ ವ್ಯರ್ಥವಾಗುತ್ತದೆ. ಕಾರಂತರ ಮಹತ್ವಾಂಕಾಂಕ್ಷೆ ಮಣ್ಣು ಸೇರುತ್ತದೆ. ರಂಗಾಯಣ ಎನ್ನುವುದು ಕನ್ನಡಿಗರು ಸಾಕಿದ ಬಿಳಿಯಾನೆಯಾಗಿ ಸರಕಾರಕ್ಕೆ ಹೊರೆಯಾಗುತ್ತದೆ.

ಇದೇ ಮಾನದಂಡವನ್ನು ಕಲಬುರಗಿ ಹಾಗೂ ಶಿವಮೊಗ್ಗ ರಂಗಾಯಣಗಳಿಗೂ ಅಪ್ಲೈ ಮಾಡುವುದು ಸೂಕ್ತ. ಈ ರಂಗಾಯಣಗಳನ್ನು ಮೊದಲಿನಿಂದ ಆರಂಭಿಸಿ ಕಟ್ಟಬೇಕಾಗಿದ್ದರಿಂದ ಅಲ್ಲಿಯ ಲೋಕಲ್ ರಂಗಕರ್ಮಿಗಳನ್ನು ಬಿಟ್ಟು ಬೇರೆ ಪ್ರಾಂತ್ಯದಿಂದ ರಂಗಬದ್ದತೆ ಇರುವ ರಂಗಕರ್ಮಿಯನ್ನು ಆಯ್ಕೆ ಮಾಡಿ ನಿರ್ದೇಶಕರನ್ನಾಗಿಸುವುದು ಸೂಕ್ತ. ಈಗಾಗಲೇ ಒಂದು ಸಲ ಸರಕಾರ ಆಯ್ಕೆ ಮಾಡಿ ಕೈಸುಟ್ಟುಕೊಂಡಿದೆ.  ಈಸಲ ಯಾರು ಮೂರು ವರ್ಷಗಳ ಅಧಿಕಾರದ ಅವಧಿಯಲ್ಲಿ ಕಲಬುರಗಿ ಅಥವಾ ಶಿವಮೊಗ್ಗಕ್ಕೆ ಹೋಗಿ ಅಲ್ಲಿಯೇ ವಾಸ್ತವ್ಯ ಹೂಡಿ ರಂಗಾಯಣವನ್ನು ಸವಾಲಾಗಿ ಸ್ವೀಕರಿಸಿ ಬೆಳೆಸುತ್ತಾರೋ ಅಂತವರನ್ನು ನಿರ್ದೇಶಕರಾಗಿ ಆಯ್ಕೆ  ಮಾಡುವುದು ಒಳಿತು. ಲೋಕಲ್ ಇರುವವರನ್ನು ಆಯ್ಕೆ ಮಾಡಿದರೆ ಅಲ್ಲಿರುವ ಹಲವಾರು ರಂಗರಾಜಕೀಯಗಳ ಗೋಜಲಿನಲ್ಲಿ ಅವರಿಗೆ ಕೆಲಸ ಮಾಡಲು ಮುಕ್ತ ಅವಕಾಶಗಳೇ ಇರುವುದಿಲ್ಲ. 

ಹೊರಗಿನವರು ಸೂಕ್ತವಾಗಿಲ್ಲ ಎನ್ನುವುದಾದರೆ ಒಳಗಿನವರೇ ಇದ್ದಾರಲ್ಲ. ರಂಗಾಯಣದ ಕಲಾವಿದರುಗಳು. ಬಹುಷಃ ಮೈಸೂರು ರಂಗಾಯಣದ ಕಲಾವಿದರಷ್ಟು ಅನುಭವಿ ನಟರು ಕರ್ನಾಟಕದಲ್ಲಿ ಬೇರೆ ಯಾರೂ ಇರಲಿಕ್ಕಿಲ್ಲ. ಅವರಲ್ಲೇ ಯಾರನ್ನಾದರೂ ಆಸಕ್ತಿ ಇರುವವರನ್ನು ಶಿವಮೊಗ್ಗ ಹಾಗೂ ಕಲಬುರಗಿ ರಂಗಾಯಣಕ್ಕೆ ನಿರ್ದೇಶಕರನ್ನಾಗಿ ಡೆಪ್ಯೂಟ್ ಮಾಡಿದರಾಯಿತು. ತಮ್ಮ ಎರಡೂವರೆ ದಶಕಗಳ ರಂಗಾಯಣದ  ಸುದೀರ್ಘ ಅನುಭವವನ್ನು ಪ್ರಾಂತೀಯ ರಂಗಾಯಣ ಕಟ್ಟುವಲ್ಲಿ ಬಳಸಿಕೊಳ್ಳಲಿ. ರಂಗಾಯಣದಲ್ಲಿರುವ ಪ್ರತಿಯೊಬ್ಬ ನಟ ನಟಿಯರ ಸಾಮರ್ಥ್ಯ ಬಲು ದೊಡ್ಡದು. ಆದರೆ ಅವರನ್ನು ಕೇವಲ ನಟನೆಗೆ ಮಾತ್ರ ಬಳಸಿಕೊಂಡು ಅವರಲ್ಲಿರುವ ಅಗಾದ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕಿದೆ. ನಟರಾಗಿ  ನಿರ್ದೇಶಕರಾಗಿ ವ್ಯವಸ್ಥಾಪಕರಾಗಿ ಇನ್ನೊಂದು ರಂಗಾಯಣ ಕಟ್ಟುವಲ್ಲಿ ಅವರ ಸೇವೆಯನ್ನೂ ಪಡೆಯುವುದು ಉತ್ತಮ. ಕೆಲವು ರಂಗಾಯಣಕ್ಕೆ ಮಾತ್ರ ಸೀಮಿತರಾಗಿದ್ದು ಅವರೂ ಸಹ ಹೊರಗಿನ ಜನರೊಂದಿಗೆ ಬೆರೆಯಲಿ.  ಸೇಪ್ ಜೋನಲ್ಲಿರುವ ಕಲಾವಿದರುಗಳಿಗೂ ರಂಗಸಂಘಟನೆಯ ಸುಖದುಃಖಗಳು ಅರ್ಥವಾಗಲಿ. ಕನಿಷ್ಟ ಒಂದೊಂದು ವರ್ಷಕ್ಕೆ ಒಬ್ಬೊಬ್ಬ ಕಲಾವಿದರನ್ನು ಒಂದೊಂದು ರಂಗಾಯಣಕ್ಕೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ಕಳುಹಿಸಿದರೆ ಅವರ ರಂಗಸಂಘಟನಾ ಸಾಮರ್ಥ್ಯ ರಂಗಭೂಮಿಯವರಿಗೂ ಗೊತ್ತಾಗಲಿ. ಒಂದು ತಾವು ಎಂತಹ ರಂಗಕೆಲಸಕ್ಕೂ ಸಲ್ಲುವವರು ಎಂದು ಅವರು ಸಾಬೀತುಪಡಿಸಲಿ ಇಲ್ಲವಾದರೆ ನಟನೆಯಷ್ಟೇ ನಮ್ಮ ಮಿತಿ ಎಂದು ಒಪ್ಪಿಕೊಳ್ಳಲಿ. ಸಚಿವೆ ಉಮಾಶ್ರೀಯವರು ರಂಗಸಮಾಜದ ಸದಸ್ಯರು ಹಾಗೂ ಇಲಾಖೆಯ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಪ್ರಯೋಗ ಮಾಡಿದರೆ ಏನಾದರೂ ಒಂದಿಷ್ಟು ಸಕಾರಾತ್ಮಕ  ಬದಲಾವಣೆಗಳಾದರೂ ಆಗಬಹುದು. 

ಹಾಗಾಗಿ ಆರಂಭದ ಹಂತದಲ್ಲಿರುವ ಈ ಎರಡೂ ರಂಗಾಯಣಗಳಿಗೆ ಒಬ್ಬ ಪೂರ್ಣಾವಧಿ ಸಕ್ರೀಯ ನಿರ್ದೇಶಕರ ಅಗತ್ಯವಿದೆ. ನಾಟಕ ನಿರ್ದೇಶನದಲ್ಲಿ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಅನುಭವ ಇದ್ದವರನ್ನು ಆಯ್ಕೆಮಾಡಬೇಕಿದೆ. ಈ ದೃಷ್ಟಿಯಿಂದ ಮೈಸೂರಿನ ಗಂಗಾಧರಸ್ವಾಮಿಯವರು ಇಲ್ಲವೇ ಎನ್‌ಎಸ್‌ಡಿಯ ವಾಲ್ಟರ್ ಡಿಸೋಜಾರವರು ನಿರ್ದೇಶಕರಾಗಲು ಅರ್ಹರಾಗಿದ್ದಾರೆ. ಯಾಕೆಂದರೆ ಗಂಗಾಧರಸ್ವಾಮಿಯವರು ಮೈಸೂರು ರಂಗಾಯಣದಲ್ಲೇ ಪಳಗಿದವರು ಹಾಗೂ ಧಾರವಾಡ ರಂಗಾಯಣವನ್ನೂ ಸಹ ಆರಂಭಕಾಲದಲ್ಲಿ ಮುನ್ನಡೆಸಿದವರು. ಹಾಗೂ ಸ್ವತಃ ಹವಾರು ನಾಟಕಗಳನ್ನು ನಿರ್ದೇಶಿಸಿದವರು. ಅವರಿಗೆ ಕಲಾವಿದರನ್ನು ಹಾಗೂ ಅಧಿಕಾರಿಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ತಂತ್ರಗಳು ಗೊತ್ತಿವೆ. ಅದೇ ರೀತಿ ವಾಲ್ಟರ್ ಡಿಸೋಜಾರವರು ಬಿಇಎಂಎಲ್ ಕಾರ್ಖಾನೆಯಲ್ಲಿ  ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದು ನಿವೃತ್ತರಾದವರು.  ಹಾಗೂ ನಿರಂತರವಾಗಿ ನಾಟಕಗಳನ್ನು ನಿರ್ದೇಶಿಸುತ್ತಲೇ ಬಂದವರು. ಜೊತೆಗೆ ಎನ್‌ಎಸ್‌ಡಿ ಪದವೀಧರರಾದವರು. ಇವರಿಗೂ ಸಹ ಕಲಾವಿದರನ್ನು  ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಅಧಿಕಾರಿಶಾಹಿಗಳ ಜೊತೆಗೆ ಹೇಗೆ ವರ್ತಿಸಬೇಕು ಎನ್ನುವ ಗುಟ್ಟುಗಳು ಗೊತ್ತಿವೆ. ಹೀಗಾಗಿ ಈಗಲೂ ಕ್ರಿಯಾಶೀಲವಾಗಿರುವ ಹಾಗೂ ಯಾವಾಗಲೂ ವಾದವಿವಾದಗಳಿಂದ ದೂರವಿರುವ ಈ  ಇಬ್ಬರನ್ನೂ ಕಲಬುರಗಿ ಹಾಗೂ ಶಿವಮೊಗ್ಗ ರಂಗಾಯಣಗಳಿಗೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದಲ್ಲಿ ಈಗಾಗಲೆ ತಪ್ಪು  ವ್ಯಕ್ತಿಗಳ ಆಯ್ಕೆಯಿಂದಾದ ಅವಮಾನ ಮರೆತು ಸರಕಾರ ನೆಮ್ಮದಿಯಾಗಿರಬಹುದು. ಹಾಗೂ ರಂಗಾಯಣದಲ್ಲಿ ಒಂದಿಷ್ಟು ಸಂಚಲನ ಸೃಷ್ಟಿಯಾಗಬಹುದು.

ಈ ನಿಟ್ಟಿನಲ್ಲಿ ರಂಗಸಮಾಜದ ಸದಸ್ಯರುಗಳು ಹಾಗೂ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಮತ್ತು ಇಲಾಖೆಯ ಸಚಿವೆ ಉಮಾಶ್ರೀಯವರು ಆಲೋಚನೆ ಮಾಡಿ ಸೂಕ್ತ ನಿರ್ಧಾರವನ್ನು ಕೈಗೊಂಡು ರಂಗಾಯಣವನ್ನು ವಿವಾದಾತೀತವಾಗಿ ಬೆಳೆಸಲು ಗಟ್ಟಿ ನಿರ್ದಾರವನ್ನು ತೆಗೆದುಕೊಳ್ಳಬೇಕಿದೆ. ಈ ರಂಗಾಯಣಗಳು ಕೇವಲ ಲೋಕಲ್ ರಂಗತಂಡಗಳ ರೀತಿಯಲ್ಲಿ ನಾಟಕ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೆ ಸಾಂಸ್ಕೃತಿಕ ಲೋಕವನ್ನು ಸೃಷ್ಟಿಸಬೇಕಿದೆ. ಹಲವಾರು ಕಲಾವಿದರುಗಳನ್ನು ಹುಟ್ಟಿಸಬೇಕಿದೆ. ಆಯಾ ಪ್ರಾಂತ್ಯಗಳಲ್ಲಿ ರಂಗಚಟುವಟಿಕೆಗಳ ಬದಲಾಗಿ ರಂಗಚಳುವಳಿಯನ್ನು ರೂಪಿಸಬೇಕಾಗಿದೆ. ಅಂತಹ ದೂರದೃಷ್ಟಿ, ಜಾಣ್ಮೆ ಹಾಗೂ ತಾಳ್ಮೆ  ಇರುವವರು ಈ ರಂಗಾಯಣಗಳ ಚುಕ್ಕಾಣಿ ಹಿಡಿಯಬೇಕಿದೆ. ಒಟ್ಟಿನ ಮೇಲೆ ರಂಗಾಯಣ ಎನ್ನುವುದು ದೇಶ ವಿದೇಶಗಳಲ್ಲಿ ಕನ್ನಡದ ಕೀರ್ತಿಯನ್ನು ಹೆಚ್ಚಿಸಬೇಕಿದೆ. ದೇಶದ ರಂಗಚರಿತ್ರೆಯಲ್ಲಿ ಮಾದರಿಯಾಗಬೇಕಿದೆ. ರಂಗಜಂಗಮ ಬಿ.ವಿ.ಕಾರಂತರ ಕನಸು ನನಸಾಗಬೇಕಿದೆ.

                                                                                           -ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ