ಪ್ರತಿಭೆಯ
ಕಣಜ ಗೋಪಾಲ ವಾಜಪೇಯಿಯವರು 2016, ಸೆಪ್ಟಂಬರ್ 20ರಂದು ಬದುಕಿನ
ನೇಪತ್ಯಕ್ಕೆ ಸೇರಿದರು. ಪತ್ರಿಕೋದ್ಯಮದಲ್ಲಿ ಪತ್ರಕರ್ತರಾಗಿ, ಸಂಪಾದಕರಾಗಿ
ದುಡಿದು. ರಂಗಭೂಮಿಯಲ್ಲಿ ನಟ, ನಿರ್ದೇಶಕ,
ರಂಗಸಂಘಟಕ, ನಾಟಕಕಾರರಾಗಿ ಗುರುತಿಸಿಕೊಂಡು,
ಸಿನೆಮಾ ಕ್ಷೇತ್ರದಲ್ಲಿ ನಟ, ಗೀತರಚನೆಕಾರ,
ಸಂಭಾಷಣೆ ಬರಹಗಾರರಾಗಿ ತಮ್ಮನ್ನು
ತೀವ್ರವಾಗಿ ತೊಡಗಿಸಿಕೊಂಡಿದ್ದ ವಾಜಪೇಯಿ
ಕಾಕಾ ಅನಿರೀಕ್ಷಿತವಾಗಿ ಕಾಲನ
ಮನೆಗೆ ಸೇರಿಬಿಟ್ಟರು. ವಾಜಪೇಯಿಯವರೆಂದರೆ ಸ್ನೇಹಪರ ವ್ಯಕ್ತಿತ್ವ,
ನೇರವಾದ ಮಾತುಗಾರಿಕೆ ಹಾಗೂ
ಖಡಕ್ ನಿರ್ಣಯಗಳಿಗೆ ಇನ್ನೊಂದು
ಹೆಸರಾಗಿದ್ದರು. ಅನ್ಯಾಯವೆನ್ನುವುದನ್ನು ಗಟ್ಟಿಯಾಗಿ
ನಿಂತು ದಿಟ್ಟವಾಗಿ ಎದುರಿಸುತ್ತಿದ್ದರು. ಗಿರೀಶ್ ಕಾರ್ನಾಡರಂತವರ
ಮೇಲೆಯೇ ಕೇಸ್ ಹಾಕಿ
ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿದ್ದರು.
ವಾಜಪೇಯಿಯವರ ನೆನಪಿನಲ್ಲಿ ಕಾರ್ನಾಡರ
ಕಟಕಟೆ ವೃತ್ತಾಂತವನ್ನು ಇಲ್ಲಿ
ಹೇಳುವ ಮೂಲಕ ಗೋಪಾಲ
ವಾಜಪೇಯಿಯವರಿಗೆ ರಂಗನಮನವನ್ನು ಸಲ್ಲಿಸುವೆ.
“ಮಾಯಾದೋ ಮನದ ಭಾರ
ತೆಗೆದಾಂಗ ಎಲ್ಲ ದ್ವಾರ
ಏನ ಏನಿದು ಎಂಥಾ ಬೆರಗ..”
ಇದು ಗಿರೀಶ ಕಾರ್ನಾಡ್ರವರಿಂದ ವಿರಚಿತ ‘ನಾಗಮಂಡಲ’ ನಾಟಕದಲ್ಲಿ ಬಳಕೆಯಾದ ಗೀತೆ. ಈ ನಾಟಕ ಹಾಗೂ ಸಿನೆಮಾ ನೋಡಿದ ಪ್ರೇಕ್ಷಕರಿಗೆ ಮೋಡಿ ಮಾಡಿದ ಹಾಡಿದು. ತನ್ನ ಜಾನಪದೀಯ ಲಯಗಾರಿಕೆಯಿಂದಾಗಿ ಜನಪ್ರೀಯತೆಯನ್ನು ಪಡೆದ ಇದೇ ಹಾಡು ಈಗ ನಮ್ಮ ಜ್ಞಾನಪೀಠಿ ಕಾರ್ನಾಡರನ್ನು ಬೆಂಬಿಡದ ಭೂತದಂತೆ ಕಾಡುತ್ತಿದೆ. ಕೋರ್ಟಿನ ಕಟಕಟೆಯಲ್ಲಿ ಓಡಿ ಬಂದು ನಿಲ್ಲುವಂತೆ ಮಾಡಿದೆ. ಬಂಧನವನ್ನು ತಪ್ಪಿಸಿಕೊಳ್ಳಲು ಜಾಮೀನು ಪಡೆದು ಹೊರಬರುವಂತಹ ಪರಿಸ್ಥಿತಿಯನ್ನುಂಟುಮಾಡಿದೆ.
ಎಲ್ಲರೂ ಮೆಚ್ಚಿಕೊಂಡಾಡಿದ ಒಂದು ಹಾಡಿಗೆ ಇಂತಹ ಶಕ್ತಿಯಿದೆಯಾ? ನಾಟಕದಲ್ಲಿ ಬಳಸಲಾದ ಹಾಡೊಂದು ನಾಟಕ ಬರೆದವರನ್ನೇ ಸುತ್ತಿ ಬಳಸಿ ಬಲೆಯಲ್ಲಿ ಸಿಲುಕಿಸಿ ನಿದ್ದೆ ಕೆಡಿಸುತ್ತಿದೆಯಾ? ತನಗಿಂತ ಮೇಧಾವಿಗಳ ಕುರಿತು ವಿವಾದಾತ್ಮಕ ಹೇಳಿಕೆ ಕೊಡುತ್ತಾ ಸದಾ ಚಾಲ್ತಿಯಲ್ಲಿರಬಯಸುವ ಕಾರ್ನಾಡರನ್ನು ಹಾಡೊಂದು ಹಣಿದು ಹಾಕಿದೆಯಾ? ಹೌದು! ಕಾರ್ನಾಡರೊಳಗಿರುವ ಅಸಾಧ್ಯವಾದ ದುರಹಂಕಾರವನ್ನು ಎಳೆತಂದು ಕಟಕಟೆಗೆಳೆದು ನಿಲ್ಲಿಸಿದ್ದು ಇದೇ ಹಾಡು. ಈ ನೆಲದ ಕಾನೂನಿಗೂ ಬೆಲೆಕೊಡದ ಕಾರ್ನಾಡರನ್ನು ಕೋರ್ಟಿಗೆ ಎಳೆತಂದಿದ್ದು ಇದೇ ಹಾಡು. ಇನ್ನೊಂಚೂರು ನಿರ್ಲಕ್ಷ ಮಾಡಿದ್ದರೆ ಜೈಲಿಗೆ ಕಳುಹಿಸಲು ಸಿದ್ದವಾಗಿದ್ದೂ ಇದೇ ಹಾಡು. ಅಂದಹಾಗೆ ಏನಿದೆ ಈ ಹಾಡಲ್ಲಿ ಅಂತಾ ಬೆರಗು? ಈ ಗುಟ್ಟನ್ನು ಅರಿಯಬೇಕೆಂದರೆ ಒಂದಿಷ್ಟು ಹಿನ್ನಲೆಯನ್ನು ತಿಳಿಯಲೇ ಬೇಕು.
ಅದು 1989 ರ ಇಸ್ವಿ. ಅದೇ ತಾನೆ ಗಿರೀಶ ಕಾರ್ನಾಡರು ‘ನಾಗಮಂಡಲ’ ನಾಟಕ ಬರೆದಿದ್ದರು. ಶಂಕರನಾಗ್ರವರು ತಮ್ಮ ಸಂಕೇತ ರಂಗತಂಡಕ್ಕೆ ಈ ನಾಟಕವನ್ನು ಆಡಿಸಲು ಮುಂದಾದರು. ಇಡೀ ನಾಟಕ ಜಾನಪದೀಯ ಅಂಶಗಳುಳ್ಳ ಪ್ಯಾಂಟಸಿ ಕಥಾನಕವಾಗಿತ್ತು. ಹೆಣ್ಣಿನ ಲೈಗಿಕ ಪ್ರತಿನಿಧೀಕರಣ ಈ ನಾಟಕದ ವಸ್ತುವಾಗಿತ್ತು. ಆದರೆ ಇಡೀ ನಾಟಕದಲ್ಲಿ ಕಾರ್ನಾಡರು ಬರೆದಿದ್ದು ಒಂದೇ ಹಾಡು. ಅದೂ ಸಹ ನಾಟಕಕ್ಕೆ ಸೂಕ್ತವೆನ್ನಿಸುತ್ತಿರಲಿಲ್ಲ. ಶಂಕರನಾಗರವರಿಗೂ ಆ ಹಾಡು ಇಷ್ಟವಾಗಲಿಲ್ಲ. ಶಂಕರನಾಗರವರಿಗೆ ಈ ನಾಟಕವನ್ನು ಮ್ಯೂಸಿಕಲ್ ಪ್ಲೇ ಮಾಡಬೇಕು ಎಂಬ ಬಯಕೆಯಾಗಿತ್ತು. ಸರಿ ಈ ನಾಟಕಕ್ಕೆ ಸೂಕ್ತವೆನ್ನಿಸಬಹುದಾದ ಜಾನಪದ ಶೈಲಿಯ ಹಾಡುಗಳಿಗಾಗಿ ಕರ್ನಾಟಕದಾದ್ಯಂತ ಶಂಕರನಾಗ್ ಹುಡುಕಾಡಿದರು. ಬೀದರ್ ಗುಲಬರ್ಗಾ ಎಂದೆಲ್ಲಾ ಓಡಾಡಿದರು. ಜಾನಪದ ತಜ್ಞ ಮುದೇನೂರು ಸಂಗಣ್ಣನವರನ್ನೂ ಬೇಟಿಯಾಗಿ ಚರ್ಚಿಸಿದರು. ಆದರೆ ಯಾವ ಹಾಡುಗಳು ಈ ನಾಟಕಕ್ಕೆ ಸೂಕ್ತವೆನ್ನಿಸಲೇ ಇಲ್ಲ. ಯಾವುದಕ್ಕೂ ರಾಜಿಆಗದ ಮನೋಭಾವದ ಶಂಕರನಾಗ್ರವರು ನಾಟಕಕ್ಕೆ ಹೊಂದಾಣಿಕೆಯಾಗುವ ಸೂಕ್ತ ಹಾಡಿಗಾಗಿ ಹುಡುಕಾಟದ ಪ್ರಯತ್ನ ಬಿಡಲಿಲ್ಲ. ಜೊತೆಗೆ ಚಿತ್ರಕಲಾ ಪರಿಷತ್ತಿನಲ್ಲಿ ‘ನಾಗಮಂಡಲ’ ನಾಟಕದ ತಾಲಿಂ ಶುರುಮಾಡಿದರು. ಈ ನಾಟಕಕ್ಕೆ ಅಗತ್ಯವಾದ ಹಾಡನ್ನು ಬರೆಸಬೇಕು ಎಂದುಕೊಂಡಾಗ ಸಿ.ಅಶ್ವತ್ರವರು ಸೂಚಿಸಿದ್ದೇ ಗೋಪಾಲ್ ವಾಜಪೇಯಿರವರ ಹೆಸರನ್ನು.
ಆಗ ತಾನೇ ಬೆಂಗಳೂರಿನ ಸಂಯುಕ್ತ ಕರ್ನಾಟಕದ ‘ಕಸ್ತೂರಿ’ ಮ್ಯಾಗಜಿನ್ ವಿಭಾಗಕ್ಕೆ ಪತ್ರಕರ್ತರಾಗಿ ಬೆಂಗಳೂರಿಗೆ ವರ್ಗವಾಗಿ ಬಂದಿದ್ದ ವಾಜಪೇಯಿರವರಿಗೆ ಕರೆ ಕಳುಹಿಸಿದ ಶಂಕರನಾಗ್ ನಾಟಕದ ಸನ್ನಿವೇಶಗಳನ್ನು ವಿವರಿಸಿ ಹಾಡುಗಳನ್ನು ಬರೆಯಲು ಕೇಳಿಕೊಂಡರು. ಶಂಕರನಾಗರವರ ಕೋರಿಕೆಯಂತೆ ಒಟ್ಟು ಹತ್ತು ಹಾಡುಗಳನ್ನು ವಾಜಪೇಯಿರವರು ಬರೆದುಕೊಟ್ಟರು. ಎಲ್ಲಾ ಹಾಡುಗಳೂ ಶಂಕರನಾಗರವರಿಗೆ ತುಂಬಾ ಇಷ್ಟವಾದವು ಹಾಗೂ ನಾಟಕದ ಸನ್ನಿವೇಶಗಳಿಗೆ ಸರಿಯಾಗಿ ಹೊಂದಾಣಿಕೆಯಾದವು. ಶಂಕರನಾಗ್ ಹಾಗೂ ಸುರೇಂದ್ರನಾಥ ಇಬ್ಬರೂ ಸೇರಿ ಮೊಟ್ಟಮೊದಲಬಾರಿಗೆ ‘ನಾಗಮಂಡಲ’ ನಾಟಕವನ್ನು ಜಂಟಿಯಾಗಿ ನಿರ್ದೇಶಿಸಿದರು. ಈ ಎಲ್ಲಾ ಹಾಡುಗಳಿಗೆ ಸಿ.ಅಶ್ವತ್ ಸೊಗಸಾಗಿ ಸಂಗೀತ ನಿರ್ದೇಶನ ಮಾಡಿದರು. ನಾಟಕ ಸುಪರ್ ಹಿಟ್ ಆಗಿಹೋಯಿತು. ನಾಟಕ ನೋಡಿ ಹೊರಬಂದವರು ಅದರೊಳಗಿನ ಹಾಡುಗಳನ್ನು ಗುಣಿಗುಣಿಸುತ್ತಾ ಹೊರಬಂದರು. ಎಲ್ಲಾ ಹಾಡೂಗಳೂ ಪ್ರೇಕ್ಷಕರ ಮನಸೂರೆಗೊಂಡವು. ಅದರಲ್ಲೂ ‘ಮಾಯಾದ ಮನದ ಭಾರ...’ ಹಾಡು ಅದ್ಬುತವೆನಿಸಿತು. ಈ ಹಾಡುಗಳಿಂದಾಗಿ ಗೋಪಾಲ್ ವಾಜಪೇಯರವ ಕಾವ್ಯ ಪ್ರತಿಭೆ ಬೆಂಗಳೂರಿನ ರಂಗಕರ್ಮಿಗಳಿಗೆ ಅರಿವಾಯ್ತು. ಶಂಕರನಾಗರವರಂತೂ ಅತ್ಯಂತ ಆನಂದತುಲಿತರಾದರು. ಹಾದರದ ನಾಟಕಕ್ಕೆ ಹಾಡಿನ ಮೆರಗು ರಮ್ಯತೆಯನ್ನು ತಂದುಕೊಟ್ಟಿತ್ತು. ಎಂದೂ ಯಾರನ್ನೂ ಅನಗತ್ಯವಾಗಿ ಹೊಗಳದ ಗಿರೀಶ್ ಕಾರ್ನಾಡರೂ ಸಹ ವಾಜಪೇಯಿಯವರನ್ನು ಅವರ ಹಾಡುಗಳಿಗಾಗಿ ಶ್ಲಾಘಿಸಿದರು.
‘ನಾಗಮಂಡಲ’ ನಾಟಕದ ಹಾಡುಗಳು ಅದೆಷ್ಟು ಪ್ರಸಿದ್ಧಿಯಾದವೆಂದರೆ 1992ರಲ್ಲಿ ಈ ನಾಟಕದ ಎಲ್ಲಾ ಹಾಡುಗಳನ್ನೂ ಸೇರಿಸಿ ಆಕಾಶ್ ಆಡಿಯೋದವರು ಆಡಿಯೋ ಕ್ಯಾಸಟ್ಟನ್ನು ಹೊರತಂದರು. ಕ್ಯಾಸೆಟ್ಗಳೂ ಸಹ ಭರದಿಂದ ಬಿಕರಿಯಾದವು. ಹಾಡುಗಳು ಅದೆಷ್ಟು ಜನಪ್ರೀಯವಾಗಿದ್ದವೆಂದರೆ ಮೂರ್ನಾಲ್ಕು ಆವೃತ್ತಿಗಳನ್ನು ಈ ಕ್ಯಾಸೆಟ್ ಕಂಡಿತು. ನಾಟಕದ ಯಶಸ್ಸು ಹಾಗೂ ನಾಟಕದೊಳಗಿನ ಹಾಡುಗಳು ಮಾಡಿದ ಮೋಡಿಯಿಂದ ಆಕರ್ಷಿತರಾದ ನಾಗಾಭರಣರು 1997ರಲ್ಲಿ ‘ನಾಗಮಂಡಲ’ ಹೆಸರಿನಲ್ಲಿ ಸಿನೆಮಾ ಮಾಡಿದರು. ಈ ಸಿನೆಮಾದಲ್ಲೂ ಸಹ ವಾಜಪೇಯಿಯವರ ಅನುಮತಿ ಪಡೆದು ಅವರ ಹಾಡುಗಳನ್ನು ಬಳಸಿಕೊಂಡರು. ಹಾಗೂ ಇನ್ನೂ ಕೆಲವು ಹಾಡುಗಳನ್ನು ಅವರಿಂದಲೇ ಬರೆಸಿದರು. ಮತ್ತದೇ ‘ಮಾಯಾದೋ ಮನದ ಭಾರ...’ ಹಾಡು ‘ನಾಗಮಂಡಲ’ ಸಿನೆಮಾದ ಹೈಲೈಟ್ ಹಾಡಾಯಿತು. ಚಿತ್ರರಸಿಕರಿಗೆ ಹುಚ್ಚೆಬ್ಬಿಸಿತು. ಈಗಲೂ ಸಹ ಆ ಹಾಡನ್ನು ಕೇಳಿದರೆ ಮೈಮನ ಮರೆಯುವಂತೆ ಭಾಸವಾಗುವುದರಲ್ಲಿ ಸಂದೇಹವಿಲ್ಲ.
2004ರಲ್ಲಿ ಅದೊಂದು ದಿನ ಹೈದರಾಬಾದ್ನಲ್ಲಿ ‘ಈ ಟಿವಿ‘ ಯಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ್ ವಾಜಪೇಯಿಯವರಿಗೆ ಗಿರೀಶ್ ಕಾರ್ನಾಡರು ಪೋನ್ ಮಾಡಿದರು. ನಿಮ್ಮ ‘ಮಾಯಾದೋ...’ ಹಾಡನ್ನು ನಾಟಕ ಪುಸ್ತಕದ 2005ರ ಆವೃತ್ತಿಯಲ್ಲಿ ಬಳಸಿಕೊಳ್ಳಲು ಅನುಮತಿ ಬೇಕೆಂದು ಕೇಳಿಕೊಂಡರು. ಗಿರೀಶ್ ಕಾರ್ನಾಡರಂತಹ ಲೇಖಕರೆ ಕೇಳುತ್ತಿದ್ದಾರೆಂದ ಮೇಲೆ ಇಲ್ಲಾ ಎನ್ನಲು ವಾಜಪೇಯಿಯವರಿಗೆ ಮನಸ್ಸಾಗಲಿಲ್ಲ. “ಸರಿ ಆಯ್ತು ನನ್ನದೇನೂ ಅಭ್ಯಂತರ ಇಲ್ಲಾ” ಎಂದು ವಾಜಪೇಯಿರವರು ಹೇಳಿದಾಗ, ‘ನಾಟಕ ಪುಸ್ತಕದ ಎಲ್ಲಾ ಎಡಿಶನ್ಗಳಲ್ಲೂ ಇದನ್ನು ಬಳಸಿಕೊಳ್ಳುತ್ತೇನೆ ಅದಕ್ಕಾಗಿ ಒಂದಿಷ್ಟು ರಾಯಲ್ಟಿ ಹಣ ಕೊಡುತ್ತೇನೆ ಅನುಮತಿಸಬೇಕು’ ಎಂದು ಕಾರ್ನಾಡರು ಮತ್ತೆ ಕೇಳಿಕೊಂಡರು. ಅನುಮತಿಗಾಗಿ ಒಂದು ಪತ್ರವನ್ನೂ ಬರೆದ ಕಾರ್ನಾಡರು ‘ಪುಸ್ತಕದಲ್ಲಿ ನಿಮ್ಮ ಹೆಸರನ್ನು ನಮೂದಿಸಲಾಗುವುದು’ ಎಂದೂ ಮಾತುಕೊಟ್ಟಿದ್ದರು. ಮೊದಲೇ ಕೊಂಕಣಿ ಸಾರಸ್ವತ ಬ್ರಾಹ್ಮಣರಾದ ಕಾರ್ನಾಡರಿಗೆ ವ್ಯವಹಾರ ಹೇಗೆ ಮಾಡಬೇಕು ಎಂದು ಚೆನ್ನಾಗಿಯೇ ಗೊತ್ತಿತ್ತು. ಅಮಾಯಕರಾದ ಗೋಪಾಲ ವಾಜಪೇಯಿರವರು ಲಿಖಿತವಾಗಿಯೇ ಅನುಮತಿ ಪತ್ರ ಬರೆದು ಕಳುಹಿಸಿಕೊಟ್ಟರು. ‘ ಆ ಹಾಡು ಬರೆದವನು ನಾನು ಎಂದು ಹೆಸರನ್ನು ನಮೂದಿಸಬೇಕು’ ಎನ್ನುವ ಕೋರಿಕೆಯನ್ನೂ ಸಹ ವಾಜಪೇಯಿಯವರು ಅನುಮತಿ ಪತ್ರದಲ್ಲಿ ನಮೂದಿಸಿದ್ದರು. ಸರಿ, ಎಲ್ಲವೂ ಸುಸೂತ್ರವಾಯಿತು. ‘ನಾಗಮಂಡಲ’ ನಾಟಕವೂ ಸಹ ಧಾರವಾಡದ ‘ಮನೋಹರ ಗ್ರಂಥ ಮಾಲಾ’ ದಿಂದ ಪುಸ್ತಕ ರೂಪದಲ್ಲಿ ಮರುಮುದ್ರಣಗೊಂಡು ಪ್ರಕಟಗೊಂಡಿತು. ಗೋಪಾಲ್ ವಾಜಪೇಯಿಯವರು ಬರೆದ ಹಾಡು ಎಂದೂ 2005ರ 5ನೇ ಆವೃತ್ತಿಯ ಪುಸ್ತಕದಲ್ಲಿ ನಮೂದಾಯಿತು. ಮೊದಲ ನಾಲ್ಕು ಆವೃತ್ತಿಯವರೆಗೂ ಕಾರ್ನಾಡರೇ ಬರೆದ ಹಾಡು ಪ್ರಕಟಗೊಂಡಿತ್ತು. ಆದರೆ ಅದು ನಾಟಕಕ್ಕೆ ಹೊಂದಾಣಿಕೆ ಆಗದ್ದರಿಂದ ವಾಜಪೇಯಯವರ ಜನಪ್ರೀಯತೆ ಗಳಿಸಿದ ಹಾಡೇ ಸೂಕ್ತವೆಂದು ಕಾರ್ನಾಡರು ತಮ್ಮ ಹಾಡನ್ನು ತೆಗೆದು ಹಾಕಿ ‘ಮಾಯಾದ..’ ಹಾಡನ್ನು ನಾಟಕ ಪುಸ್ತಕದಲ್ಲಿ ಬಳಸಿಕೊಂಡರು.
ಆದರೆ.. ಆ ನಂತರ ಗಿರೀಶ್ ಕಾರ್ನಾಡರಿಗೆ ಆ ಅಂದದ ಹಾಡಿನ ಮೇಲೆ ಮೋಹ ಬೆಳೆಯಿತಾ? ಆ ಚೆಂದದ ಹಾಡನ್ನು ತನ್ನದನ್ನಾಗಿಸಿಕೊಳ್ಳಬೇಕೆಂಬ ದುರಾಸೆ ಬಂದಿತಾ? ಗೊತ್ತಿಲ್ಲ. ತದನಂತರ ಈ ‘ನಾಗಮಂಡಲ’ ನಾಟಕದ ರೀಪ್ರಿಂಟ್ ಆವೃತ್ತಿಯಲ್ಲಿ ಗೋಪಾಲ ವಾಜಪೇಯಿರವರ ಹಾಡು ಇತ್ತು ಆದರೆ ಅವರ ಹೆಸರು ಕಾಣೆಯಾಗಿತ್ತು. ‘ಹೈದರಾಬಾದನಲ್ಲಿರುವ ಹಾಡು ಬರೆದವನಿಗೆ ಇದೆಲ್ಲಾ ಹೇಗೆ ಗೊತ್ತಾಗಬೇಕು’ ಎನ್ನುವ ನಿರ್ಲಕ್ಷವೋ ಅಥವಾ ತಾನು ಬರೆದ ನಾಟಕದ ಪುಸ್ತಕದಲ್ಲಿ ಕೇವಲ ಒಂದು ಹಾಡು ಬರೆದವನ ಹೆಸರೇಕೆ ಎನ್ನುವ ನಿರಾಸಕ್ತಿಯೋ, ಒಟ್ಟಾರೆ ಹಾಡಿನ ರಚನೆಕಾರನ ಹೆಸರನ್ನೇ ಕಾರ್ನಾಡರು ನುಂಗಿ ನೀರುಕುಡಿದುಬಿಟ್ಟಿದ್ದರು.
‘ನಿಮ್ಮ ಹೆಸರನ್ನು ನಾಟಕದ ಪುಸ್ತಕದಲ್ಲಿ ಸ್ಮರಿಸಲಾಗುವುದು ಎಂದು ಲಿಖಿತವಾಗಿ ಪತ್ರದ ಮೂಲಕ ಕೊಟ್ಟ ಮಾತನ್ನು ಕಾರ್ನಾಡರು ಮುರಿದಿದ್ದರು. ಯಾರೋ ಹೆತ್ತ ಮಗುವಿಗೆ ಅವರೇ ತಂದೆಯಾಗಿಬಿಟ್ಟಿದ್ದರು. ಮರುಮುದ್ರಣಗೊಂಡ ಆವೃತ್ತಿ ಅದು ಹೇಗೋ ವಾಜಪೇಯಿಯವರಿಗೆ ದೊರಕಿತು. ತೆರೆದು ನೋಡಿದಾಗ ಆಘಾತವೆನಿಸಿತು. ‘ಅರೇ ನಾನು ಬರೆದ ಹಾಡಿದೆ ಆದರೆ ನನ್ನ ಹೆಸರೇ ಇಲ್ಲವಲ್ಲಾ’ ಎಂದು ಗೋಪಾಲರವರಿಗೆ ಕಳವಳವಾಯಿತು. ‘ಆಕಸ್ಮಿಕವಾಗಿ ಹೆಸರು ಕೈಬಿಟ್ಟಿರಬಹುದು ಮುಂದಿನ ಆವೃತ್ತಿಯಲ್ಲಿ ಸರಿಮಾಡಬಹುದೇನೋ’ ಎಂದು ವಾಜಪೇಯಿಯವರು ನಜರ್ ಅಂದಾಜ್ ಮಾಡಿ ಸುಮ್ಮನಾದರು.
ತದನಂತರ 2008ರಲ್ಲಿ ಬಂದ ಕಾರ್ನಾಡರ ಸಮಗ್ರ ನಾಟಕಗಳ ಸಂಪುಟದಲ್ಲಿದ್ದ ‘ನಾಗಮಂಡಲ’ ನಾಟಕದಲ್ಲೂ ಸಹ ಗೋಪಾಲ ವಾಜಪೇಯಿಯವರ ಹೆಸರು ಇರಲೇ ಇಲ್ಲ. ವಾಜಪೇಯಿಯವರಿಗೆ ಆತಂಕ ಶುರುವಾಯಿತು.
ಹೀಗೆ ಸುಮ್ಮನಿದ್ದರೆ ಮುಂದಿನ ತಲೆಮಾರಿನವರು ಈ ಹಾಡು ಬರೆದಿದ್ದು ಕಾರ್ನಾಡರೇ ಎಂದು ಕೊಳ್ಳುವ ಸಾಧ್ಯತೆಗಳ ಅರಿವಾಯಿತು. ಕೊಟ್ಟ ಮಾತನ್ನು ಮುರಿದ ಕಾರ್ನಾಡರ ಮೇಲೆ ಬೇಸರವೂ ಆಯಿತು. ಕಾರ್ನಾಡರಿಗೆ ಒಂದು ಪತ್ರವನ್ನು ಬರೆದ ವಾಜಪೇಯಿರವರು “ನೀವು ಕೊಟ್ಟ ಮಾತನ್ನು ಮುರಿದಿದ್ದೀರಿ, ನನ್ನ ಹೆಸರನ್ನೇ ಕೈಬಿಟ್ಟಿದ್ದೀರಿ ಆದ್ದರಿಂದ ಹಾಡನ್ನು ಬಳಸಿಕೊಳ್ಳಲು ನಿಮಗೆ ಕೊಟ್ಟ ಅನುಮತಿಯನ್ನು ನಾನು ಹಿಂಪಡೆಯುತ್ತೇನೆ’ ಎಂದು ಲಿಖಿತವಾಗಿಯೇ ತಮ್ಮ ಅಸಹನೆಯನ್ನು ತೋರಿಸಿದರು. ಅದಕ್ಕೆ ಕಾರ್ನಾಡರು ‘‘ಹಾಗೇನಿಲ್ಲಾ, ಬೇಸರ ಮಾಡ್ಕೋಬೇಡಿ, ಕಣ್ತಪ್ಪಿನಿಂದ ಆಗಿದೆ, ನೀವು ಅನುಮತಿ ಹಿಂಪಡೆದಿದ್ದರಿಂದ ನಾಟಕದ ಮುಂದಿನ ಆವೃತ್ತಿಯಿಂದ ನಾನು ನಿಮ್ಮ ಹಾಡನ್ನು ಬಳಸುವುದಿಲ್ಲ ಎಂದು ಪ್ರಾಮಿಸ್ ಮಾಡ್ತೇನೆ’’ ಎಂದು ಉತ್ತರಿಸಿ ಪತ್ರ ಬರೆದರು. ಆಯ್ತು ಎಂದು ವಾಜಪೇಯಿಯವರೂ ಸುಮ್ಮನಾದರು. ಈ ಟಿವಿ ಯ ಬಿಡುವಿಲ್ಲದ ಕೆಲಸಗಳಲ್ಲಿ ಹೈದರಾಬಾದನಲ್ಲಿಯೇ ಉಳಿದರು.
ಆದರೆ ಯಾವಾಗ ಬೆಂಗಳೂರಿಗೆ ವಾಜಪೇಯಿಯವರು ಬಂದರೋ ಆಗ ಅವರ ಅರಿವಿಗೆ ಬಂದಿತು ‘ನಾಗಮಂಡಲ’ ನಾಟಕದ ಮುಂದಿನ ಎಲ್ಲಾ ಮೂರು ಆವೃತ್ತಿಗಳಲ್ಲೂ ಸಹ ಅವರ ಹಾಡು ಪ್ರಿಂಟ್ ಆಗಿತ್ತು ಹಾಗೂ ಯಥಾಪ್ರಕಾರ ಗೀತರಚನೆಕಾರನ ಹೆಸರು ನಾಪತ್ತೆಯಾಗಿತ್ತು.
ಎರಡನೇ ಬಾರಿಗೆ ಜ್ಞಾನಪೀಠಿಗಳು ತಾವು ಕೊಟ್ಟ ಮಾತನ್ನು ಮುರಿದಿದ್ದರು. ಬಳಸಿಕೊಂಡ ಹಾಡಿಗೆ ನೀವೇ ವಾರಸದಾರರು ಎಂದು ಕೊಟ್ಟ ಮಾತನ್ನು ಮರೆತು, ಗೀತರಚನೆಕಾರನ ಹೆಸರನ್ನೇ ತೆಗೆದು ಹಾಕಿ ತಾವೇ ಆ ಹಾಡಿಗೆ ವಾರಸುದಾರಾಗಿದ್ದರು. ಈಗ ಮತ್ತೆ ಹಾಡನ್ನೇ ಬಳಸುವುದಿಲ್ಲ ಎಂದು ಮಾತುಕೊಟ್ಟು ಹಾಡನ್ನು ಉಳಿಸಿಕೊಂಡೇ ಮರುಮುದ್ರಣ ಮಾಡಲಾಗಿತ್ತು. ಇದು ಗೊತ್ತಾಗಿದ್ದೇ ವಾಜಪೇಯಿರವರ ಎದೆ ದಸಕ್ಕ ಎಂದಿತು. ಉತ್ತರ ಕರ್ನಾಟಕದ ಲಕ್ಷ್ಮೇಶ್ವರದ ವಾಜಪೇಯಿರವರಿಗೆ ಸಿಟ್ಟು ನೆತ್ತಿಗೇರಿತು. ಕೊಟ್ಟ ಮಾತನ್ನು ಮುರಿದ ಜ್ಞಾನಪೀಠಕ್ಕೆ ಪಾಠ ಕಲಿಸಬೇಕೆಂದು ನಿರ್ಧರಿಸಿದರು.
ವಾಜಪೇಯಿರವರಿಗೆ ಬೇರೆ ದಾರಿ ಕಾಣದೇ ಹಾಡಿನ ಮೇಲಿನ ತಮ್ಮ ಹಕ್ಕನ್ನು ಪಡೆಯಲು ನಿರ್ಧರಿಸಿದರು. ಲಾಯರ್ ಮೂಲಕ ಕಾರ್ನಾಡರಿಗೆ ಹಾಗೂ ಮನೋಹರ ಗ್ರಂಥ ಮಾಲಾದ ಪ್ರಕಾಶಕರಾದ ರಮಾಕಾಂತ ಜ್ಯೋಷಿರವರಿಗೆ ನೋಟಿಸ್ ಜಾರಿ ಮಾಡಿದರು. ಆಗಲೂ ಸಹ ಕಾರ್ನಾಡರು ನಿರ್ಲಕ್ಷ ದೋರಣೆ ತಾಳಿದರು. ಕನಿಷ್ಟ ಪಕ್ಷ ನೋಟೀಸಿಗೆ ಉತ್ತರಿಸುವ ಗೋಜಿಗೂ ಹೋಗಲಿಲ್ಲ. ಅವರ ದಿವ್ಯ ಮೌನ ‘ಏನು ಬೇಕಾದರೂ ಮಾಡಿಕೋ ಹೋಗು’ ಎನ್ನುವ ಸಂದೇಶವನ್ನು ಕೊಟ್ಟಿತು. ವಾಜಪೇಯಿಯವರ ಸಹನೆ ಮಿತಿ ಮೀರಿತು. ಸಿವಿಲ್ ಕೋರ್ಟನಲ್ಲಿ ‘ಕಾಫಿ ರೈಟ್ ಉಲ್ಲಂಘನೆ’ ಕೇಸ್ ದಾಖಲಿಸಿದರು. ಹಾಡನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಹತ್ತು ಲಕ್ಷ ರೂಪಾಯಿ ಪರಿಹಾರವನ್ನು ಕೊಡಿಸಿಕೊಡಬೇಕು ಎಂದೂ ಕೋರ್ಟಲ್ಲಿ ದಾವೆ ಹೂಡಿದರು. ಅದಕ್ಕೂ ಗಿರೀಶ್ ಕಾರ್ನಾಡರು ಕ್ಯಾರೇ ಎನ್ನದಿರುವಾಗ ವಾಜಪೇಯಿರವರು ಕ್ರಿಮಿನಲ್ ಕೋರ್ಟಲ್ಲಿ ದೂರನ್ನು ದಾಖಲಿಸಿ ಮೊಕದ್ದಮೆ ಶುರುಮಾಡಿದರು. ಜ್ಞಾನದ ಪೀಠವನ್ನೇ ಹತ್ತಿ ಕುಳಿತ ಕಾರ್ನಾಡರಿಗೆ ಕಾನೂನಿಗೆ ಗೌರವ ಕೊಡಬೇಕು ಎನ್ನುವುದು ಅದ್ಯಾಕೆ ಗೊತ್ತಾಗಲಿಲ್ಲವೋ ಏನೋ? ನ್ಯಾಯಪೀಠಕ್ಕಿಂತ ಜ್ಞಾನಪೀಠ ದೊಡ್ಡದೆಂದು ತಿಳಿದುಕೊಂಡಿದ್ದರೋ ಎನೋ? ಕೋರ್ಟಿನ ನೊಟೀಸಿಗೂ ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ. ಲಾಯರ್ ಮೂಲಕವಾದರೂ ಉತ್ತರಿಸುವ ಸೌಜನ್ಯವನ್ನೂ ತೋರಲಿಲ್ಲ. ಮೂರು ಬಾರಿ ಕೋರ್ಟಗೆ ಬರಲು ನ್ಯಾಯಾಧೀಶರು ಸೂಚಿಸಿದರೂ ಕಾರ್ನಾಡರು ನಿರ್ಲಕ್ಷಿಸಿದರು. ಇದರಿಂದ ಕೆರಳಿದ ನ್ಯಾಯಾಧೀಶರು ಕಾರ್ನಾಡರಿಗೆ ಪೈನಲ್ ಸಮನ್ಸ್ ಜಾರಿ ಮಾಡಿದರು. ಆಗ ಕಾರ್ನಾಡರಿಗೆ ಬಿಸಿ ಮುಟ್ಟಿತು. ಪೀಠ ಅಲ್ಲಾಡತೊಡಗಿತು. ಇನ್ನೇನು ಆರೆಸ್ಟ್ ವಾರೆಂಟ್ ಬಂದುಬಿಡುತ್ತದೆ ಎಂಬುದು ಖಾತ್ರಿಯಾಯಿತು. 2014, ಸೆಪ್ಟೆಂಬರ್ 22 ರಂದು ಓಡಿ ಬಂದ ಕಾರ್ನಾಡರು, ಮನೋಹರ ಗ್ರಂಥ ಮಾಲಾದ ರಮಾಕಾಂತ್ ಜ್ಯೋಷಿ ಹಾಗೂ ಅವರ ಮಗ ಸಮೀರ್ ಜ್ಯೋಷಿಯವರೊಂದಿಗೆ ಕಟಕಟೆಯಲ್ಲಿ ನಿಂತರು. ಜಾಮೀನು ಪಡೆಯದಿದ್ದರೆ ಬಂಧಿಸಬೇಕಾಗುತ್ತದೆಂದು ನ್ಯಾಯಾಧೀಶರು ಹೇಳಿದಾಗಲೇ ಕಾನೂನಿನ ಗಂಭೀರತೆ ಅರಿವಿಗೆ ಬಂದಿತು. ಯಾರಾದರೂ ಗಣ್ಯವ್ಯಕ್ತಿಗಳು ಜಾಮೀನು ಕೊಟ್ಟರೆ ಮಾತ್ರ ಬೇಲ್ ಕೊಡಲಾಗುವುದೆಂದು ಕೋರ್ಟು ಆದೇಶಿಸಿತು. ಆಗ ಜಾಮೀನುದಾರರಾಗಿ ಬಂದವರು ಕಾರ್ನಾಡರ ಹಿತೈಷಿಗಳಾದ ಡಾ.ಕೆ.ಮರುಳಸಿದ್ದಪ್ಪನವರು.
“ನಮ್ಮ ಪುಸ್ತಕವನ್ನು ನಮ್ಮ ಪ್ರಕಾಶನದಿಂದ ಪ್ರಕಟಿಸುತ್ತೇವೆ, ಆದ ಲೋಪಕ್ಕೆ ಐದತ್ತು ಸಾವಿರ ಹಣವನ್ನೂ ಕೊಡುತ್ತೇವೆ, ದಯವಿಟ್ಟು ಕೇಸ್ ವಾಪಸ್ ತೆಗೆದುಕೊಳ್ಳಿ, ಆದ ತಪ್ಪನ್ನು ತಿದ್ದಿಕೊಳ್ಳುತ್ತೇವೆ..” ಎಂದು ರಮಾಕಾಂತ ಜ್ಯೋಷಿಯವರು ಗೋಪಾಲ ವಾಜಪೇಯಿರವರಿಗೆ ಕೇಳಿಕೊಂಡರು, ಬೇಡಿಕೊಂಡರು, ಆಸೆ ಆಮಿಷ ತೋರಿದರು. ಆದರೆ ವಾಜಪೇಯಿ ಜಪ್ಪಯ್ಯಾ ಅಂದರೂ ಜಗ್ಗಲಿಲ್ಲ. ಆಮಿಷಗಳಿಗೆ ಬಲಿಯಾಗಲಿಲ್ಲ, ನಯಗಾರಿಕೆಯ ಮಾತಿಗೆ ಮರುಳಾಗಲಿಲ್ಲ. ಅವರದು ಒಂದೇ ಮಾತು... ‘ಇದೇ ಮಾತನ್ನು ಗಿರೀಶ್ ಕಾರ್ನಾಡರ ಬಾಯಲ್ಲಿ ಹೇಳಿಸಿ, ಅವರು ಮಾಡಿಕೊಂಡ ಪ್ರಮಾದಕ್ಕೆ ಪ್ರತಿಯಾಗಿ ಕ್ಷಮೆ ಕೇಳಿದರೆ ಕೇಸ್ ವಾಪಸ್ ಪಡೆಯುತ್ತೇನೆ’ ಎಂಬುದು. ‘ಬಿದ್ದರೂ ಮೀಸೆ ಮಣ್ಣಾಗಿಲ್ಲ’ ಎನ್ನುವ ಜಿಗುಟು ಸ್ವಾಭಾವದ ಕಾರ್ನಾಡರು ಇಂತಹುದಕ್ಕೆಲ್ಲಾ ಒಪ್ಪಲು ಸಾಧ್ಯವಾ? ಸಾಧ್ಯವೇ ಇಲ್ಲ ಎನ್ನುವುದನ್ನು ಕಾರ್ನಾಡರ ದುರಭಿಮಾನ ಸಾಬೀತು ಪಡಿಸಿತು. ವಾಜಪೇಯಿಯವರ ಸ್ವಾಭಿಮಾನ ಕೆರಳಿನಿಂತಿತ್ತು. ವಿಳಂಬತನಕ್ಕೆ ಹೆಸರಾದ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ಕೇಸು ಕೋರ್ಟಲ್ಲಿ ನಿರಂತರವಾಗಿ ಸಾಗಿತ್ತಲೆ ಇದೆ. ಆದರೆ.. ತೀರ್ಪು ಬರುವ ಮುನ್ನವೇ ಪಿರ್ಯಾದಿದಾರರು
ಕಾಲವಶರಾದರು. ಗಿರೀಶ್ ಕಾರ್ನಾಡರು ಈಗ ನಿರಾಳರಾದರು.
ಇದು ವಾಜಪೇಯಿಯವರ ತಾಕತ್ತು. ಹಣ ಎನ್ನುವುದು ಅವರ ನಿರ್ದಾರವನ್ನು ಎಂದೂ ಬದಲಿಸಲಿಲ್ಲ. ಅನ್ಯಾಯ ಆಗಿದೆ ಅಂದಾಗ ವಂಚನೆ ಮಾಡಿದವರು ಎಷ್ಟೇ ದೊಡ್ಡವರಾಗಿರಲಿ, ಅದೆಷ್ಟೇ ಪ್ರಭಾವಶಾಲಿಗಳಾಗಿರಲಿ ಅವರನ್ನು ವಿರೋಧಿಸದೇ ಬಿಡುತ್ತಿರಲಿಲ್ಲ. ವಾಜಪೇಯಿಯವರ ಸೌಜನ್ಯವನ್ನು ದೌರ್ಬಲ್ಯ ಎಂದುಕೊಂಡು ದುರುಪಯೋಗ ಮಾಡಿಕೊಳ್ಳ ಬಯಸಿದವರನ್ನು ಗೋಪಾಲರವರು ಎಂದೂ ಕ್ಷಮಿಸಲಿಲ್ಲ. ಅದಕ್ಕೆ ಬಲು ದೊಡ್ಡ ಉದಾಹರಣೆ ಎಂದರೆ ಗಿರೀಶ್ ಕಾರ್ನಾಡರ ಗರ್ವಭಂಗಮಾಡಿ ಬೆಂಬತ್ತಿ ಬುದ್ದಿಕಲಿಸಿದ್ದು. ಕಾರ್ನಾಡರಂತಹ ಜ್ಯಾನಪೀಠಿಗಳು ಒಂದು ಪೋನ್ ಮಾಡಿದರೆ ಜೀಹುಜೂರ್ ಎನ್ನುವವರೇ ಹೆಚ್ಚಾಗಿರುವಾಗ ಯಾರ ಒತ್ತಾಯ ಒತ್ತಡಕ್ಕೆ ಮಣಿಯದೇ ನ್ಯಾಯಕ್ಕಾಗಿ ನೆಲಕಚ್ಚಿನಿಂತು ಹೋರಾಡಿದ ಗೋಪಾಲ ವಾಜಪೇಯಿಯವರು ಬದ್ದತೆ ಮತ್ತು ನಿಷ್ಠೂರತೆಗೆ ಮಾದರಿಯಾದವರು. ಇಂತಹ ಮಹಾಚೇತನ ಈಗ ಕೇವಲ ನೆನಪಷ್ಟೇ. ಆದರೆ ವಾಜಪೇಯಿಯವರ ಜೀವನೋತ್ಸಾಹ, ಅನ್ಯಾಯದ ವಿರುದ್ದ ಎದೆಸೆಟೆದು ನಿಲ್ಲುವ ಗುಣ ಹಾಗೂ ನಿರಂತರ ಕ್ರಿಯಾಶೀಲತೆ ಮುಂದಿನ ತಲೆಮಾರಿಗೆ ಆದರ್ಶವಾಗಿದೆ.
ಪ್ರತಿದಿನ
ಏನನ್ನಾದರೂ ಬರೆಯುತ್ತಲೇ ಇದ್ದ
ಕ್ರಿಯಾಶೀಲ ಹಿರಿಯ ಜೀವವು
ಜೀವಹಿಂಡುತ್ತಿದ್ದ ಅನಾರೋಗ್ಯದ
ನೋವಿನಿಂದ ಖಾಯಂ ಆಗಿ
ಮುಕ್ತಿಹೊಂದಿ ಚಿರನಿದ್ರೆಗೆ ಜಾರಿತು.
ಹೋಗಿ ಬಾ
ಕಾಕಾ.. ನಿಮ್ಮ ನೆನಪು
ಬದುಕಿದ್ದವರ ಮನದಂಗಳದಲ್ಲಿ ಸದಾ
ಹಸಿರು. ನೀವು ಕಲೆ,
ಸಾಹಿತ್ಯ, ಪತ್ರಿಕೋದ್ಯಮಕ್ಕೆ ಕೊಟ್ಟ
ಕೊಡುಗೆ ಮುಂದಿನ ತಲೆಮಾರಿಗೆ
ದಾರಿದೀಪ. ಅಂತಃಕರಣದ ರಂಗಕರ್ಮಿ
ನಿನಗಿದೋ ಅಂತಿಮ ನಮನಗಳು.
-ಶಶಿಕಾಂತ ಯಡಹಳ್ಳಿ
ಎಷ್ಟೆಲ್ಲ ವಿಚಾರ ಇವೆ ಸಾರ್. ಚೆನ್ನಾಗಿದೆ ವಿವರಣೆ. ವಾಜಪೇಯಿ ಕಾಕಾರನ್ನ ಮಿಸ್ ಮಾಡ್ಕೊತೆವೆ...
ಪ್ರತ್ಯುತ್ತರಅಳಿಸಿ