ಕಾವೇರಿ ಹೋರಾಟದ ಸಾಗರಕೆ ಬೀದಿನಾಟಕದ ಸ್ಪಂದನೆ;
ಹೋರಾಟದ ಸಾಗರಕೆ ಸಾವಿರಾರು ನದಿಗಳು ಎನ್ನುವಂತೆ ಸೆಪ್ಟಂಬರ್ 9 ರಂದು ಕಾವೇರಿ ನೀರು ಹಂಚಿಕೆಯಲ್ಲಾದ ಅನ್ಯಾಯವನ್ನು ಪ್ರತಿಭಟಿಸಿ ‘ಕರ್ನಾಟಕ ಬಂದ್’ ಆಚರಿಸಲಾಯಿತು. ನಾಡಿನಾದ್ಯಂತ ಅನೇಕಾನೇಕ ಸಂಘಟನೆಗಳು ಹಾಗೂ ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಕಾವೇರಿ ಹೋರಾಟಕ್ಕೆ ತಮ್ಮ ತಮ್ಮದೇ ಆದ ರೀತಿಯಲ್ಲಿ ಬೆಂಬಲವನ್ನು ಪ್ರಕಟಿಸಿ ಆಳುವ ವರ್ಗಗಳ ಮೇಲೆ ಒತ್ತಡವನ್ನು ಹುಟ್ಟಿಸಲು ಪ್ರಯತ್ನಿಸಿದವು. ಇದೇ ಸಂದರ್ಭದಲ್ಲಿ ಕಲಾಕ್ಷೇತ್ರದಿಂದ ಕೆಆರ್ಎಸ್ ವರೆಗೆ ನೆಲ ಜಲ ಕುರಿತು ಏಕದಿನದ ಬೀದಿನಾಟಕ ಚಳವಳಿಯೊಂದನ್ನು ‘ಹಶ್ಮಿ ಥಿಯೇಟರ್ ಫೋರಂ’ ತಂಡದ ಕಲಾವಿದರು ಹಮ್ಮಿಕೊಂಡಿದ್ದರು. ಲವಕುಮಾರ್ ನಿರ್ದೇಶನದಲ್ಲಿ ‘ನೀರು ಮತ್ತು ನೆಲದ ಹಕ್ಕು’ ಬೀದಿ ನಾಟಕವು ಬೆಂಗಳೂರಿನ ಟೌನ್ಹಾಲ್ ಮುಂದೆ ಮೊದಲ ಪ್ರದರ್ಶನ ಶುರುಮಾಡಿತು. ತದನಂತರ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರು ಹಾಗೂ ಕೆಆರ್ಎಸ್..ವರೆಗೆ ಬಿರುಬಿಸಿಲಲ್ಲಿ ಪ್ರದರ್ಶನಗಳನ್ನು ನೀಡುತ್ತಾ ನೆಲ ಜಲದ ಕುರಿತು ಜನರನ್ನು ಜಾಗೃತಿ ಗೊಳಿಸುವ ಸ್ತುತ್ಯಾರ್ಹ ಕೆಲಸವನ್ನು ಯುವ ಕಲಾವಿದರು ಮಾಡಿ ಮಾದರಿಯಾದರು.
ಸರಿಯಾಗಿ ನೀರು ಸಿಗದೇ, ಬೆಳೆ ಬೆಳೆಯಲಾಗದೇ, ಬೆಳೆದ ಬೆಳೆಗೂ ಬೆಲೆ ಸಿಗದೇ ಸಾಲದ ಶೂಲದಲ್ಲಿ ಸಿಲುಕಿ ಕಂಗಾಲಾದ ರೈತ ತನ್ನ ಬೆಳೆಗೆ ಬೆಂಕಿ ಇಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರಿಂದ ರೊಚ್ಚಿಗೆದ್ದ ಜನ ‘ಬೆವರನು ಸುರಿಸಿ ದುಡಿಯುವ ಜನ ನಾವು ನಮ್ಮ ಬೆವರಿನ ಪಾಲನು ಕೇಳುವೆವು’ ಎಂದು ಹೋರಾಟಕ್ಕಿಳಿಯುತ್ತಾರೆ. ಕೊನೆಗೆ ‘ಕಾವೇರಿ ನೀರಿನ ಹಂಚಿಕೆ ಎನ್ನುವುದರಲ್ಲಿ ಭಾಷೆ ಗಡಿ ರಾಜಕೀಯಗಳ ಅಗತ್ಯವಿಲ್ಲ. ಕಾವೇರಿ ಎನ್ನುವುದು ಅದು ಹರಿಯುವ ದಾರಿಗುಂಟಾ ಇರುವ ರೈತರದ್ದಾಗಿದೆ. ಈ ರಾಜ್ಯ-ಕೇಂದ್ರ ಸರಕಾರಗಳು ಕಾವೇರಿಗೆ ಬೆಂಕಿ ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಕಾವೇರಿ ನದಿ ಪ್ರಾಂತ್ಯದ ರೈತರೆಲ್ಲಾ ಸೇರಿ ಮಾತುಕತೆಯ ಮೂಲಕ ನೀರಿನ ಹಂಚಿಕೆಯನ್ನು ಪರಸ್ಪರ ಸೌಹಾರ್ಧಯುತವಾಗಿ ಬಗೆಹರಿಸಿಕೊಂಡು ಸಮಸ್ಯೆಯನ್ನು ಪರಿಹರಿಸಬೇಕಾಗಿದೆ’ ಎಂಬುದನ್ನು ಹೇಳುವಲ್ಲಿ ಈ ಬೀದಿ ನಾಟಕ ಸಫಲವಾಗಿದೆ. ಕೇಂದ್ರ ಸರಕಾರದ ತಾರತಮ್ಯಪೀಡಿತ ಜಲ ನೀತಿಯ ವಿರುದ್ಧ ತನ್ನ ಆಕ್ರೋಶವನ್ನು ವ್ಯಕ್ತಪಡಿಸುವ ಈ ನಾಟಕವು ಆಳುವ ವರ್ಗಗಳ ಜನವಿರೋಧಿ ಮುಖವಾಡಗಳನ್ನು ನೋಡುಗರ ಮುಂದೆ ಅನಾವರಣಗೊಳಿಸಲು ಪ್ರಯತ್ನಿಸುತ್ತದೆ.
ಈ ಆಕ್ರೋಶಭರಿತ ಘೋಷಣೆಗಳು, ಭಾವಪ್ರಚೋದಕ ಭಾಷಣಗಳು ಮಾಡಲಾಗದ ಕೆಲಸವನ್ನು ಈ ಬೀದಿನಾಟಕ ಮಾಡುತ್ತದೆ. ರೈತರ ಪ್ರಸ್ತುತ ಸಮಸ್ಯೆಯನ್ನು ಚಿಕ್ಕಪುಟ್ಟ ದೃಶ್ಯಗಳ ಮೂಲಕ ಕಾಲಮಿತಿಯೊಳಗೆ ಬಿಡಿಸಿ ಹೇಳುತ್ತಾ, ಆ ಸಮಸ್ಯೆಗೆ ಕಾರಣಗಳೇನು ಹಾಗೂ ಪರಿಹಾರ ಹೇಗಿರಬೇಕು ಎನ್ನುವುದನ್ನು ಮನದಟ್ಟು ಮಾಡುವಂತೆ ಈ ನಾಟಕ ಮೂಡಿಬಂದಿದೆ. ಕನ್ನಡದ ಭೂತ ಮೆಟ್ಟಿಕೊಂಡವರಂತೆ ತಮಿಳರು, ತಮಿಳುನಾಡು ಹಾಗೂ ಜಯಲಲಿತಾ ವಿರುದ್ದ ಭಾವೇತಿರೇಕದಿಂದ ಭಾಷಣ ಘೋಷಣೆಗಳನ್ನು ಕೂಗುತ್ತಾ ಟೌನ್ಹಾಲ್ ಮುಂದೆ ನೆರೆದಿದ್ದ ಅನೇಕಾನೇಕ ಸಂಘಟನೆಗಳ ನಿಲುವುಗಳಿಗಿಂತ ಭಿನ್ನವಾದ ಹಾಗೂ ತಾರ್ಕಿಕವಾದ ನಿಲುವನ್ನು ಈ ಬೀದಿ ನಾಟಕ ಹೊಂದಿದೆ. “ಭಾಷಾಭಿಮಾನ, ಜನಾಂಗಾಭಿಮಾನ, ರಾಜ್ಯಾಭಿಮಾನಕ್ಕಿಂತಲೂ ರೈತರ ಬದುಕು ಮುಖ್ಯ. ರೈತರು ಯಾವುದೇ ಭಾಷಿಕರಾದರೂ ಅವರು ಮೂಲಭೂತವಾಗಿ ಬೆವರನು ಹರಿಸಿ ದುಡಿಯುವವರು. ಹೀಗಾಗಿ ರೈತರ ಸಮಸ್ಯೆಯನ್ನು ಎರಡೂ ರಾಜ್ಯದ ರೈತ ನಾಯಕರುಗಳೇ ಮಾತುಕತೆಯಿಂದ ಬಗೆಹರಿಸಿಕೊಳ್ಳಬೇಕು” ಎನ್ನುವ ತರ್ಕಬದ್ದ ಪರಿಹಾರವನ್ನು ಈ ನಾಟಕ ಕೊಡುತ್ತದೆ

ಆದರೆ ಭಾಷೆಯ ಮೇನಿಯಾ ಅನ್ನುವುದು ತಲೆಗೆ ಹೊಕ್ಕ ಜನಸಂದನಿಗೆ ಈ ನಾಟಕದ ಆಶಯವನ್ನು ತಿಳಿಸಿ ಹೇಳುವುದಾದರೂ ಹೇಗೆ. ಆದರೂ ತನ್ನದೇ ಆದ ರೀತಿಯಲ್ಲಿ ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಸೂಕ್ತ ಪರಿಹಾರ ಸಾಧ್ಯತೆಯನ್ನು ಹೇಳುವ ಮೂಲಕ ಈ ಬೀದಿ ನಾಟಕವು ಈ ನಾಡಿನ ನೆಲ ಜಲ ಕುರಿತ ಚಳುವಳಿಗೆ ಬಲು ದೊಡ್ಡ ಆಶಯವನ್ನು ಕಟ್ಟಿಕೊಟ್ಟಿದ್ದಂತೂ ಸತ್ಯ. ಮತ್ತೇರಿದವರ ಸಂತೆಯಲ್ಲಿ ಸಂತರ ಮಾತು ಕೇಳುವವರ್ಯಾರು? ಭಾಷಾಂಧತೆ ಭಾವಾತಿರೇಕವಾದಂತಹ ಸಂದರ್ಭದಲ್ಲಿ ಬೀದಿ ನಾಟಕದ ಆಶಯವನ್ನು ಅರ್ಥ ಮಾಡಿಕೊಳ್ಳುವವರಾದರೂ ಯಾರು? ಬಹುಷಃ ಈ ನಾಟಕದ ಉದ್ದೇಶವು ನಗರದ ಜನರಿಗೆ ತಿಳಿಯದಿದ್ದರೂ ರೈತಜನಸಮುದಾಯಕ್ಕೆ ಅರ್ಥವಾಗಬಹುದಾಗಿದೆ. ರೈತ ಸಮುದಾಯ ಇರುವಲ್ಲಿಯೇ ಹೋಗಿ ಈ ನಾಟಕವನ್ನು ಆಡಿದಷ್ಟೂ ನೆಲ ಜಲದ ಸಮಸ್ಯೆ ಪರಿಹಾರಕ್ಕೆ ಈ ಬೀದಿ ನಾಟಕದ ಕೊಡುಗೆ ಮಹತ್ತರ ಮೈಲುಗಲ್ಲಾಗಬಹುದಾಗಿದೆ.
ಬೀದಿನಾಟಕದ ತಂತ್ರಗಾರಿಕೆಯನ್ನು ಲವಕುಮಾರ್ ಹದವಾಗಿ ಬಳಸಿಕೊಂಡಿದ್ದಾರೆ. ಆದರೆ ಕಲಾವಿದರು ಇನ್ನೂ ಈ ಬೀದಿ ನಾಟಕದ ಏರುದ್ವನಿ ಬಳಕೆಗೆ ಸಿದ್ದರಾಗಬೇಕಿದೆ. ಸಿಕ್ಕಷ್ಟೇ ಜಾಗದಲ್ಲಿ ರೈತರ ಬಿಕ್ಕಟ್ಟುಗಳನ್ನು ಬಿಡಿಸಿ ಹೇಳುವ ಈ ನಾಟಕಕ್ಕೆ ಈಗಾಗಲೇ ಬೇರೆ ಬೀದಿನಾಟಕಗಳಲ್ಲಿ ಬಳಸಲಾದ ‘ನಾವು ಬೆವರನು ಸುರಿಸಿ..’ ಯಂತಹ ಹಾಡುಗಳನ್ನೇ ಬಳಸಿಕೊಂಡಿದ್ದಾರೆ. ಅಷ್ಟೇ ಸಮರ್ಥವಾದ ಬೇರೆ ಹಾಡುಗಳನ್ನು ಹೊಸದಾಗಿ ರಚಿಸಿ ಈ ನಾಟಕದಲ್ಲಿ ಅಳವಡಿಸಿ ಜನರಿಗೆ ತಲುಪಿಸಿದ್ದರೆ ಬೀದಿ ನಾಟಕ ಚಳುವಳಿಗೆ ಹೊಸ ಹೋರಾಟದ ಹಾಡುಗಳಾದರೂ ದಕ್ಕುತ್ತಿದ್ದವು. ಟಿ.ಹೆಚ್.ಲವಕುಮಾರ್ನಂತಹ ಯುವಕರು ಈಗಾಗಲೇ ರೂಢಿಗತವಾದ ಬೀದಿ ನಾಟಕ ತಂತ್ರಗಾರಿಕೆಯನ್ನು ಮುರಿದು ಕಟ್ಟಲು ಪ್ರಯತ್ನ ಪಡಬೇಕಿದೆ. ಯಾಕೆಂದರೆ ಬೀದಿ ನಾಟಕ ಅಂದರೆ ಹೀಗೆ ಇರಬೇಕು ಎನ್ನುವುದನ್ನು ಒಡೆದು ಹೊಸ ಸಾಧ್ಯತೆಗಳನ್ನು ಬದಲಾದ ಕಾಲಕ್ಕೆ ಅನುಗುಣವಾಗಿ ಕಂಡುಕೊಳ್ಳಬೇಕಾಗಿದೆ.
ಈ ಬೀದಿನಾಟಕ ಟೌನ್ಹಾಲ್ ಮುಂದೆ ಪ್ರದರ್ಶನಗೊಳ್ಳಲು ಲವಕುಮಾರ್ ಸ್ಥಾಳಾವಕಾಶ ಮಾಡಿಕೊಳ್ಳುತ್ತಿದ್ದರೆ, ನಾನು ಹೋಗಿ ಹೋರಾಟದ ಆಯೋಜಕರಲ್ಲಿ ನಾಟಕ ಕುರಿತು ಮೈಕಲ್ಲಿ ಅನೌನ್ಸ್ ಮಾಡಲು ಕೇಳಿಕೊಂಡೆ. ಆ ವ್ಯಕ್ತಿಗೆ ಜನರ ಗಲಾಟೆಯಲ್ಲಿ ಅದೇನು ಕೇಳಿಸಿತೋ ಗೊತ್ತಿಲ್ಲ. ಕಲಾವಿದರುಗಳು ಹಾಕಿದ ಕರಿ ಪ್ಯಾಂಟು ಕರಿ ಟೀಶರ್ಟನ್ನು ಮಾತ್ರ ಗಮನಿಸಿ ‘ಈಗ ಕಾರ್ಪೋರೇಟ್ ಕಲಾವಿದರಿಂದ ಬೀದಿ ನಾಟಕ” ಎಂದು ನಿರಂತರವಾಗಿ ಎರಡು ಮೂರು ಬಾರಿ ಘೋಷಿಸಿ ಬಿಟ್ಟ. ನನಗೆ ತಲೆ ತಲೆ ಚಚ್ಚಿಕೊಳ್ಳಬೇಕೆನಿಸಿತು.
ಯಾಕೆಂದರೆ ಆ ನಾಟಕ ಮಾಡುತ್ತಿದ್ದುದೇ ಆಳುವ ವರ್ಗ ಹಾಗೂ ಕಾರ್ಪೋರೇಟ್ ಕುಳಗಳು ಅದು ಹೇಗೆ ನೆಲ ಜಲ ನುಂಗಿ ರೈತರಿಗೆ ಅನ್ಯಾಯ ಮಾಡುತ್ತಿವೆ ಎನ್ನುವುದರ ವಿರುದ್ದ. ಆದರೆ ರಂಗಕಲಾವಿದರನ್ನು ಕಾರ್ಪೋರೇಟ್ ಕಲಾವಿದರು ಎಂದು ಬಹಿರಂಗವಾಗಿ ಘೋಷಿಸಿದ್ದೊಂದು ವಿಪರ್ಯಾಸ. ಅನೌನ್ಸ್ ಮಾಡಿದವನ ಅಜ್ಞಾನವೋ ಅಥವಾ ಇತ್ತೀಚೆಗೆ ಕಾಪೋರೇಟ್ ಕಂಪನಿಯ ಕೆಲಸಗಾರರು ಹೀಗೆ ಕಪ್ಪು ಉಡುಪು ಹಾಕಿ ವೀಕೆಂಡಲ್ಲಿ ಮೆರಾಥಾನ್, ಸೈಕಲ್ ರೇಸಿಂಗ್ ಅಂತೆಲ್ಲಾ ಬೆಂಗಳೂರಿನ ಬೀದಿಗಿಳಿಯುವುದು ಕಾರಣವೋ, ಇಲ್ಲವೇ ಈ ಬೀದಿ ನಾಟಕದ ತಂಡದ ಹೆಸರು ಇಂಗ್ಲೀಷಲ್ಲಿ ಇದ್ದುದ್ದಕ್ಕೋ... ಗೊತ್ತಿಲ್ಲ. ಅಂತೂ ಕಪ್ಪು ಪ್ಯಾಂಟ್ ಟೀಶರ್ಟ ಹಾಕಿದ ಯುವಕರೆಲ್ಲಾ ಕಾರ್ಪೋರೇಟ್ ಸೆಕ್ಟರಿನವರು ಎಂದು ಬ್ರ್ಯಾಂಡ್ ಆದಂತಿದೆ. ಹೀಗಾಗಿ ಮೊದಲು ಬೀದಿ ರಂಗಭೂಮಿ ಕಲಾವಿದರು ಈ ಕಪ್ಪು ಕಾಸ್ಟ್ಯೂಮ್ಸಗಳನ್ನು ಬದಲಾಯಿಸುವ ಅನಿವಾರ್ಯತೆ ಇದೆ. ಇಲ್ಲವಾದರೆ ಕಷ್ಪಪಟ್ಟು ನಾಟಕ ಮಾಡುವವರು ರಂಗಭೂಮಿಯವರು ಅದರ ಕ್ರೆಡಿಟ್ ದಕ್ಕುವುದು ಕಾರ್ಪೋರೇಟ್ ಕಲಾವಿದರಿಗೆ. ಹೇಗಿದೆ ನೋಡಿ ಕಾಸ್ಟ್ಯೂಮ್ ಮಹಾತ್ಮೆ. ಹಾಗೆಯೇ ಈ ನಾಟಕ ತಂಡದ ಹೆಸರನ್ನೂ ಕನ್ನಡೀಕರಿಸಿದರೆ ಸೂಕ್ತ.
ಏನೇ ಆಗಲಿ ಕನ್ನಡ ನೆಲ ಜಲದ ಹಕ್ಕಿನ ಹೋರಾಟಕ್ಕೆ ಸಾಂಕೇತಿಕವಾದರೂ ರಂಗಭೂಮಿ ಈ ಬೀದಿ ನಾಟಕದ ಮೂಲಕ ಸ್ಪಂದಿಸಿದ್ದು ಹೆಮ್ಮೆಯ ವಿಷಯ. ಸ್ವಯಂಪ್ರೇರಿತವಾಗಿ ಈ ಬೀದಿನಾಟಕವನ್ನು ಮಾಡಿ ಕಲಾಕ್ಷೇತ್ರದಿಂದ ಕೆಆರ್ಎಸ್ ವರೆಗೆ ನೀರು ಹಾಗೂ ನೆಲದ ಹಕ್ಕಿಗಾಗಿ ಬೀದಿರಂಗ ಚಳುವಳಿಯನ್ನು ಹಮ್ಮಿಕೊಂಡ ಲವಕುಮಾರ್ ಹಾಗೂ ಅವರ ಹಷ್ಮಿ ಥೀಯಟರ್ ಫೋರಮ್ಮಿನ ಕಲಾವಿದರಿಗೆ ರಂಗಭೂಮಿ ಅಭಿನಂದನೆಗಳನ್ನು ಹೇಳಲೇಬೇಕಿದೆ. ‘ನಾಟಕ ಎನ್ನುವುದು ಕೇವಲ ನಾಲ್ಕು ಗೋಡೆಯ ನಡುವೆ ಮಾಡುವ ಕಲಾಪ್ರದರ್ಶನವಲ್ಲ. ನಾಡು ನುಡಿ ನೆಲ ಜಲದ ಸಮಸ್ಯೆಗಳಿಗೆ ಕಲಾವಿದರು ಬೀದಿಗಿಳಿದು ರಂಗಕಲೆಯ ಮೂಲಕ ಜನಜಾಗೃತಿಯನ್ನೂ ಮಾಡುವ ಹೋರಾಟದ ಮಾಧ್ಯಮ’ ಎನ್ನುವುದನ್ನು ಸಾಬೀತು ಪಡಿಸಿದ ರಂಗಗೆಳೆಯರಿಗೆ ಅಭಿನಂದನೆಗಳು. ಕರ್ನಾಟಕ ಬಂದ್ ಎಂದುಕೊಂಡು ಪಂಚೆಂದ್ರಿಯಗಳನ್ನೂ ಬಂದ್ ಮಾಡಿಕೊಂಡು ಮನೆಯಲ್ಲಿ ಕುಳಿತ ಅಪ್ಪಟ (?) ಕಲಾವಿದರಿಗೆ ಹಾಗೂ ಫಲಾನುಭವಿಗಳಾದ ರಂಗಸಂಘಟಕರಿಗೆ ಈ ಯುವಕರ ಬೀದಿರಂಗಚಳುವಳಿ ಮಾದರಿಯಾಗಬೇಕಿದೆ. “ಕಲೆ ಎನ್ನುವುದು ಕೇವಲ ಮನರಂಜನೆಯ ಮಾಧ್ಯಮ ಮಾತ್ರವಲ್ಲ ಅದು ಜನಹೋರಾಟದ ಮಾಧ್ಯಮವೂ ಆಗಬಲ್ಲುದು. ಕಲೆಗಾಗಿ ಕಲೆಯಲ್ಲ, ಜನರಿಗಾಗಿ ಕಲೆ” ಎನ್ನುವುದು ಎಲ್ಲಾ ಕಲಾವಿದರಿಗೂ, ರಂಗೋಪಜೀವಿಗಳಿಗೂ ಅರ್ಥವಾಗಬೇಕಿದೆ. ನಾಡು ನುಡಿ ನೆಲಜಲ ಸಂಸ್ಕೃತಿಗೆ ಧಕ್ಕೆ ಆದಾಗಲೆಲ್ಲಾ ರಂಗಕರ್ಮಿಗಳು ಒಂದಾಗಿ ಜನರ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸಬೇಕಿದೆ. ಪ್ರಯತ್ನ ಪುಟ್ಟದಾದರೂ ಅಂತಹ ಒಂದು ದಿಟ್ಟ ಪ್ರಯತ್ನ ಮಾಡಿದ ಹಷ್ಮಿ ಥೀಯಟರ್ ಪೋರಮ್ಮಿನ ಕಲಾವಿದರುಗಳಿಗೆ ಎಲ್ಲಾ ರಂಗಕರ್ಮಿಗಳು ಅಭಿನಂದಿಸಬೇಕಿದೆ. ಈ ನಾಟಕ ಕಾವೇರಿ ಕೊಳ್ಳದ ರೈತಸಮುದಾಯಕ್ಕೆ ತಲುಪಬೇಕಿದೆ.

-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ