ಶುಕ್ರವಾರ, ಮೇ 30, 2014

ಗುಡಿಹಳ್ಳಿಯವರ ನಿವೃತ್ತಿ ಮತ್ತು ಹುತ್ತವ ಬಡಿದರೆ ಪ್ರಸಂಗ :




ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜರವರು ಇಂದು (ಮೇ 30) ಪ್ರಜಾವಾಣಿ ಬಳಗದ ಪತ್ರಕರ್ತ ಹುದ್ದೆಯಿಂದ ನಿವೃತ್ತರಾದರು. ಅದೆಂತದೊ ದುಗುಡ ದುಮ್ಮಾನದಲ್ಲಿ ಸಂಜೆ ಪ್ರೆಸ್ ಕ್ಲಬ್ ನಲ್ಲಿ ಕುಳಿತಿದ್ದರು. ಮೂರು ದಶಕಗಳಿಂದ ಕೆಲಸ ಮಾಡುತ್ತಾ ಬಂದವರು  ಇದ್ದಕ್ಕಿದ್ದಂತೆ ನಾಳೆಯಿಂದ ನಿಗಧಿತ ಕೆಲಸಕ್ಕೆ ಹೋಗುವ ಹಾಗಿಲ್ಲವಲ್ಲ ಎಂದರೆ ಬೇಸರ ಹೆಪ್ಪುಗಟ್ಟುವುದು ಸಹಜ. ನಿವೃತ್ತರಾಗಿದ್ದಕ್ಕೆ ಒಂದೆರಡು ಸಾಂತ್ವನದ ಮಾತನ್ನು ಹೇಳಿ ಇನ್ನು ಮೇಲೆ ರಂಗಭೂಮಿಯ ಕುರಿತು ಹೆಚ್ಚು ಬರೆಯಲು ಹೆಚ್ಚಿನ ಸಮಯ ಸಿಕ್ಕಿದ್ದಕ್ಕೆ ಅಭಿನಂದನೆ ಹೇಳೋಣ  ಎಂದು ಅವರ ಹತ್ತಿರ ಹೋದೆ. ಆದರೆ ಅದೇನಾಯಿತೋ ಏನೋ ನನ್ನ ಮುಖ ನೋಡಿದ ತಕ್ಷಣ ಗುಡಿಹಳ್ಳಿಯವರಿಗೆ ದುಗುಡ ಜಾಸ್ತಿಯಾಯಿತು. "ಹುತ್ತವ ಬಡಿದರೆ ಹಾವು ಸಾಯುವುದಿಲ್ಲ" ಎಂದು ಒಗಟಾಗಿ ಒಂದು ಸ್ವಲ್ಪ ವರಟಾಗಿ ಹೇಳಿದರು. ಅವರ ಒಗಟು ಮಾತಿನ ಅರ್ಥ ಅಕ್ಕಪಕ್ಕದವರಿಗೆ ಆಗದಿದ್ದರೂ ನನಗೆ ಚೆನ್ನಾಗಿ ಗೊತ್ತಾಗಿತ್ತು. ಅಕಾಡೆಮಿ ಸಹಸದಸ್ಯರಾಗಲು ಗುಡಿಹಳ್ಳಿಯವರು ಮಾಡಿದ ಹರಸಾಹಸದ ಬಗ್ಗೆ ನನ್ನ ಬ್ಲಾಗ್ ನಲ್ಲಿ ಬರೆದಿದ್ದು ಅವರನ್ನು ಕೆರಳಿಸಿತ್ತು. "ನೀನು ಬರಹದ ಮೂಲಕ ಹುತ್ತವನ್ನು ಬಡೆದಿದ್ದೀಯೇ ಹೊರತು ಹಾವನ್ನು ಸಾಯಿಸಲು ಸಾಧ್ಯವಿಲ್ಲ" ಎಂಬುದು ಅವರ ಮಾತಿನ ಮರ್ಮವಾಗಿತ್ತು. ಪರೋಕ್ಷವಾಗಿ ತಮ್ಮನ್ನು ತಾವೇ ಹಾವು ಎಂದುಕೊಂಡಿದ್ದು ಅವರ ಅರಿವಿಗೆ ಬರಲೇ ಇಲ್ಲ.

ತಮ್ಮ ವೃತ್ತಿ ಜೀವನದಲ್ಲಿ ಅದೆಷ್ಟು ವಿಷಯಗಳ ಬಗ್ಗೆ, ನಾಟಕಗಳ ಬಗ್ಗೆ, ಕೆಲವೊಮ್ಮೆ ಕೆಲವು ವ್ಯಕ್ತಿಗಳ ಬಗ್ಗೆ  ಗುಡಿಹಳ್ಳಿಯವರು ಬರೆದಿದ್ದಾರೆ. ಇವರು ಬರೆದಿದ್ದನ್ನೂ ಬರೆಸಿಕೊಂಡವರು ಸಕಾರಾತ್ಮಕವಾಗಿಯೇ ತೆಗೆದುಕೊಂಡಿದ್ದಾರೆ. ಆದರೆ ಯಾವಾಗ ನಾನು ಇದ್ದದ್ದನ್ನು ಇದ್ದಹಾಗೆಯೇ ಅತ್ಯಂತ ಗೌರವ ಪೂರ್ವಕವಾಗಿ ಬರೆದಿದ್ದನ್ನು ಅರಗಿಸಿಕೊಳ್ಳಲಾಗದಿದ್ದ ಮೇಲೆ ಬೇರೆಯವರ ಕುರಿತು ಟೀಕೆ ಮಾಡುವ ಹಕ್ಕು ಒಬ್ಬ ಪರ್ತಕರ್ತನಿಗಿದೆಯಾ? ಎಂದು ಆಲೋಚಿಸತೊಡಗಿದೆ. ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳದಿದ್ದರೆ ಅಂತವರು ಬೇರೆಯವರ ಕುರಿತು ಬರೆಯುವ ಸಾಹಸ ಮಾಡಲೇಬಾರದು. ಪರ್ತಕರ್ತನ ಪರಮ ಕರ್ತವ್ಯವೇ ಸತ್ಯವನ್ನು ದಾಖಲಿಸುವುದು. ನಾನು ಗುಡಿಹಳ್ಳಿಯವರ ಕುರಿತು ಬರೆದಿದ್ದು ತಪ್ಪಾಗಿದ್ದರೆ,  ಅದು ತಪ್ಪು ಎಂದು ಅವರ ಆತ್ಮಸಾಕ್ಷಿ ಒಪ್ಪಿದರೆ ಅದನ್ನು ವಿರೋಧಿಸಲಿ ಬೇಡವೆಂದವರಾರು?  ಬರೆದಿದ್ದು ಸತ್ಯವೆಂದು ಗುಡಿಹಳ್ಳಿಯವರ ಅಂತರಂಗಕ್ಕೆ ತಿಳಿದಿದ್ದರೆ ಅದನ್ನು ಒಪ್ಪಿಕೊಳ್ಳಲಿ. ಅದು ಬಿಟ್ಟು ಹುತ್ತ ಹಾವು ಕೋಲು ಎಂದೆಲ್ಲಾ ಒಗಟಾಗಿ ಮಾತಾಡುವುದು ಗುಡಿಹಳ್ಳಿಯಂತಹ ಹಿರಿಯ ಪರ್ತಕರ್ತರಿಗೆ ಶೋಭಿಸದು. ಪರ್ತಕರ್ತನ ಕರ್ತವ್ಯವನ್ನು ಗುಡಿಹಳ್ಳಿಯವರಿಗೆ ನಾನು ಹೇಳಿಕೊಡುವುದು ಮೊಮ್ಮಗು ಅಜ್ಜನಿಗೆ ಕೆಮ್ಮು ಕಲಿಸಿಕೊಟ್ಟಂತಾಗುತ್ತದೆ. ಅಂತಹ ದಾರ್ಷವೂ ನನ್ನದಲ್ಲ. ಆದರೆ ಸಣ್ಣ ಟೀಕೆಯನ್ನು ಸಹಿಸಿಕೊಳ್ಳುವ  ಇಲ್ಲವೇ ಅದಕ್ಕೆ ಸಮರ್ಥವಾಗಿ ಉತ್ತರಿಸುವ ಸಾಧ್ಯತೆಯನ್ನು ಬಿಟ್ಟು ಈರ್ಷೆಯನ್ನು ಹೊಂದುವುದು ಹಿರಿತನಕ್ಕೆ ತಕ್ಕುದಾದುದಲ್ಲ.

ಹಾವು ಸಾಯುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಹಾವಿನಂತಹ ವಿಷಜಂತು ಮನುಕುಲಕ್ಕೆ ಯಾವುದೇ ರೀತಿಯಲ್ಲಿ ಮಾರಕವಾದಾಗ ಅದರ ಇರುವಿನ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟುಮಾಡುವುದು ಪರ್ತಕರ್ತನ ಪರಮ ಕರ್ತವ್ಯವಾಗಿದೆ. ಹಾವು ಸಾಯುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಹಾವಿನ ತಾವನ್ನು ಪೆನ್ನೆಂಬ ಕೋಲಿನಿಂದ ಬರಹಗಾರ ಹೊಡೆಯುತ್ತಲೇ ಇರಬೇಕಾಗುತ್ತದೆ. ಹಾವು ಎಂದರೆ ಹಾವೇ ಎಂದುಕೊಳ್ಳಬೇಕಿಲ್ಲ. ಮನುಷ್ಯನೊಳಗೂ ಸಹ ಹಾವಿನಂತಹ ವಿಷ ಗುಣ ಸೇರಿಕೊಂಡಿತ್ತದೆ. ಆ ಅವಗುಣದಿಂದ ಯಾವಾಗ ಮನುಷ್ಯ ಸ್ವಾರ್ಥಿಯಾಗುತ್ತಾನೋ, ತನ್ನ ಸ್ವಾರ್ಥಕ್ಕೆ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಾನೋ, ಸ್ವಜನಪಕ್ಷಪಾತಿಯಾಗುತ್ತಾನೋ, ಜಾತೀವಾದಿ ಯಾಗುತ್ತಾನೋ, ಮತ್ತೊಬ್ಬರ  ಅವಕಾಶಗಳನ್ನು ಕಸಿದುಕೊಳ್ಳುತ್ತಾನೋ, ತನ್ನ ಹುದ್ದೆಯ ದುರುಪಯೋಗ ಮಾಡಿಕೊಂಡು ಪ್ರಶಸ್ತಿ, ಆಸ್ತಿ ಹೊಡೆದುಕೊಳ್ಳುತ್ತಾನೋ... ಅಂತಹ ಹಾವುಗಳು ಯಾವುದೇ ಹುತ್ತದಲ್ಲಿರಲಿ ಅವನ್ನು ಸರಿದಾರಿಗೆ ತರಲು, ತಿದ್ದಿಕೊಂಡು ನಡೆಯಲು... ಪರ್ತಕರ್ತ ಹಾಗೂ ಪತ್ರಿಕೆಗಳು ಹುತ್ತವನ್ನು ಬಡಿಯುವ ಕೆಲಸವನ್ನು ಮಾಡುತ್ತಲೇ ಇರುತ್ತವೆ. ಇಲ್ಲಿ ಮನುಷ್ಯನ ಸ್ವಾರ್ಥಕ್ಕಾಗಿ ಮನುಷ್ಯನನ್ನು ಕೊಲ್ಲಲು ಸಾಧ್ಯವಿಲ್ಲ. ಆದರೆ  ಅಂತಹ ಮನುಷ್ಯನೊಳಗಿನ  ಸ್ವಾರ್ಥ ಹಾಗೂ ಅದರಿಂದುಂಟಾಗುವ ಪರಿಣಾಮಗಳ ಕುರಿತು ತಿಳುವಳಿಕೆ ಕೊಡುವ ಹಾಗೂ ಅಂತಹ ವ್ಯಕ್ತಿಯಿಂದ ಹುಷಾರಾಗಿರಿ ಎಂದು ಇತರರನ್ನು ಎಚ್ದರಿಸುವ ಕೆಲಸವನ್ನು ಬರಹಗಾರ ಮಾಡಬೇಕಾಗುತ್ತದೆ. ಇದು ಗುಡಿಹಳ್ಳಿಯಂತಹ ಹಿರಿಯ ಬರಹಗಾರರಿಗೆ ಗೊತ್ತಿಲ್ಲವೆಂದಲ್ಲ. ಅಥವಾ ಅಂತಹ ವಿವೇಕಿಗಳಿಗೆ ತಿಳುವಳಿಕೆ ಹೇಳಬೇಕಾದ ದುರಹಂಕಾರವೂ ನನ್ನಂತ ಕಿರಿಯ ಪರ್ತಕರ್ತನಿಗಿಲ್ಲ.

"ಹಾವು - ಹುತ್ತಕ್ಕಿಂತ ಇಲ್ಲಿ ಕೋಲು ಮುಖ್ಯ. ಹುತ್ತವ ಬಡಿದರೆ ಕನಿಷ್ಟ ಹಾವು ಹೆದರಿಕೊಳ್ಳಬಹುದು. ಸರಿಹೋಗಬಹುದು. ಇಲ್ಲವೇ ಬೇರೆಯವರಿಗೆ ಹಾವಿನ ಇರುವು ಗೊತ್ತಾಗಿ ಅವರು ಎಚ್ಚೆತ್ತುಕೊಳ್ಳಬಹುದು. ಹುತ್ತ ಬಡಿಯುವುದೇ ನನ್ನ ಕಸಬು" ಎಂದು ನಾನು ಕೂಲಾಗಿ ಗುಡಿಹಳ್ಳಿಯವರಿಗೆ ಉತ್ತರಿಸಿದೆ. ನನ್ನ ಉತ್ತರ ಗುಡಿಹಳ್ಳಿಯವರಿಗೆ ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ ಮೌನಕ್ಕೆ ಶರಣಾದರು. 'ಹಾವಿನ ದ್ವೇಷ ಹನ್ನೆರಡು ವರುಷ. ನನ್ನ ದ್ವೇಷ  ನೂರು ವರುಷ' ಎಂದು ನಾಗರಹಾವಿನ ವಿಷ್ಣುವರ್ಧನ್ ರೀತಿ ಗುಡಿಹಳ್ಳಿಯವರು ಇನ್ನು ಮುಂದೆ ನನ್ನ ನೋಡಿದಾಗಲೆಲ್ಲಾ ಹಾಡುತ್ತಾರೋ ಇಲ್ಲವೇ ಚಿಕ್ಕ ಪುಟ್ಟ ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಆತ್ಮೀಯತೆಯನ್ನು ಮುಂದುವರೆಸುತ್ತಾರೋ ಎನ್ನುವುದು ನೋಡಬೇಕಿದೆ. 

ಏನೇ ಆಗಲಿ ಮೂರು ದಶಕಗಳಿಂದ ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಪರ್ತಕರ್ತರಾಗಿ ಕಾರ್ಯನಿರ್ವಹಿಸುತ್ತಲೇ ರಂಗಭೂಮಿಯ ಬಗ್ಗೆ ಅಪಾರವಾದ ಒಲವನ್ನು ಹೊಂದಿ ಕಾಲಕಾಲಕ್ಕೆ ರಂಗಚಟುವಟಿಕೆಗಳನ್ನು ದಾಖಲಿಸಿದ್ದು ಗುಡಿಹಳ್ಳಿಯವರ ರಂಗಾಸಕ್ತಿಗೆ ಸಾಕ್ಷಿಯಾಗಿದೆ. ಈಗ ಅವರು ನಿಗದಿತ ಹುದ್ದೆಯಿಂದ ನಿವೃತ್ತರಾಗಿದ್ದಾರೆಯೇ ಹೊರತು ಬರವಣಿಗೆಯಿಂದಲ್ಲ. ಕಲಾವಿದನಿಗೆ, ಬರಹಗಾರನಿಗೆ ನಿವೃತ್ತಿ ಎನ್ನುವುದೇ ಇಲ್ಲ. ಅವರು ಸ್ವಯಂ ನಿವೃತ್ತರಾಗುವವರೆಗೂ ಯಾರೂ ಕ್ರಿಯಾಶೀಲತೆಯನ್ನು ನಿವೃತ್ತಗೊಳಿಸಲು ಸಾಧ್ಯವೇ ಇಲ್ಲ.  ಹೀಗಾಗಿ ಗುಡಿಹಳ್ಳಿ ನಾಗರಾಜರವರು ನಿರಂತರವಾಗಿ ರಂಗಭೂಮಿ ಕುರಿತು ಬರೆಯುತ್ತಾ ಇರಲಿ. ಅವರ ನಿವೃತ್ತಿಯ ನಂತರದ ಉಳಿಕೆಯ ಸಮಯ ರಂಗಭೂಮಿಗೆ ಬಳಕೆಯಾಗಲಿ, ಅವರು ಯಾವುದೇ ಕಾರಣಕ್ಕೂ ಹಾವೂ ಆಗದೇ ಹುತ್ತವೂ ಆಗದೇ ಸಮಾಜವನ್ನು ಎಚ್ಚರಿಸುವ ಕೋಲಾಗಲಿ. ಅವರ ಪ್ರತಿಭೆ ರಂಗಭೂಮಿಯನ್ನು ದಾಖಲಿಸುವ ಪೆನ್ನಾಗಲಿ. ಗುಡಿಹಳ್ಳಿಯವರು ನೂರ್ಕಾಲ ಕ್ರಿಯಾಶೀಲವಾಗಿ ಬದುಕಲಿ ಎಂದು ಮನತುಂಬಿ ಆಶಿಸೋಣ. 

                                                                -ಶಶಿಕಾಂತ ಯಡಹಳ್ಳಿ

ಬುಧವಾರ, ಮೇ 28, 2014

ಕರ್ನಾಟಕದಲ್ಲಿ ‘ಭಾರತೀಯ ಜನಕಲಾ ಸಮಿತಿ’ (ಇಪ್ಟಾ) :



                                                      

 
(2014 ಮೇ 25 ಕ್ಕೆ ಸರಿಯಾಗಿಇಪ್ಟಾಸಾಂಸ್ಕೃತಿಕ ಸಂಘಟನೆಗೆ 71 ವರ್ಷ ತುಂಬಿತು. ’ಇಪ್ಟಾ ವರ್ಷಾಚರಣೆಯ ಸಂಭ್ರಮದ ಸಂದರ್ಭದಲ್ಲಿ ಕರ್ನಾಟಕದಲ್ಲಿಇಪ್ಟಾಸಂಘಟನೆಯ ಕುರಿತ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ.)  


 ನಗಾರಿಯನ್ನು ಬಾರಿಸುವ ಕಲಾವಿದ ಇದು ಇಪ್ಟಾದ ಲಾಂಚನ. ನಗಾರಿ ಎನ್ನುವ ಚರ್ಮವಾಧ್ಯ ಶ್ರಮಸಂಸ್ಕೃತಿಯ ಪ್ರತೀಕವಾದರೆ ತಮಗರಿವಿಲ್ಲದಂತೆಯೇ ಸಮಸ್ಯೆಯ ಸುಳಿಯೊಳಗೆ ಬಿದ್ದು ಶೋಷನೆಗೊಳಗಾದ ಜನಸಮೂಹವನ್ನು ಎಚ್ಚರಿಸುವ ಸಂಕೇತವೆ ನಗಾರಿಯನ್ನು ಬಾರಿಸುವ ಸದ್ದು. ಹಾಗೆ ಎಚ್ಚರಿಸುವಂತಹ ಕೆಲಸವನ್ನು ಕಲೆಯ ಮೂಲಕ ಕಲಾವಿದರು ಮಾಡುತ್ತಾರೆ ಎನ್ನುವ ಪ್ರತೀಕವೇ ವಾಧ್ಯ ನುಡಿಸುತ್ತಿರುವ ಕಲಾವಿದ. ಲಾಂಚನವೇ ಹೇಳುತ್ತದೆ ಕಲೆಯ ಮೂಲಕ ಜನಜಾಗೃತಿಯನ್ನು ಮಾಡುತ್ತಾ ಸಾಂಸ್ಕೃತಿಕ ಚಳುವಳಿಯನ್ನು ರೂಪಿಸುವ ಪ್ರಯತ್ನವನ್ನು ಇಪ್ಟಾ ಮಾಡುತ್ತದೆ ಎಂದು.

ಇಪ್ಟಾ ಪೂರ್ಣ ಹೆಸರು ಇಂಡಿಯನ್ ಪೀಪಲ್ಸ್ ಥಿಯಟರ್ ಅಸೋಸಿಯೇಶನ್ ಎಂದು. ಖ್ಯಾತ ವಿಜ್ಞಾನಿ ಹೋಮಿ ಜಹಾಂಗೀರ್ ಬಾಬಾರವರೇ ಹೆಸರನ್ನು ಸೂಚಿಸಿದ್ದು. ಕರ್ನಾಟಕದಲ್ಲಿ ಅದು ಭಾರತೀಯ ಜನಕಲಾ ಸಮಿತಿ ಆಗಿದೆ. ಇದೊಂದು ಭಾರತದಾದ್ಯಂತ ಸಂಘಟಿತಗೊಂಡ ಏಕೈಕ ಸಾಂಸ್ಕೃತಿಕ ಸಂಘಟನೆ. ಇದು ಇಂದು ನಿನ್ನೆ ಹುಟ್ಟಿದ್ದಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1942ರಲ್ಲಿ ಹುಟ್ಟಿತು. ಅನೇಕ ಕ್ರಿಯಾಶೀಲ ವ್ಯಕ್ತಿಗಳ ಸ್ವತಂತ್ರ ಭಾರತದ ಆಶಯದ ಅಭಿವ್ಯಕ್ತಿಯಾಗಿ ಇಪ್ಟಾ ಅಸ್ತಿತ್ವಕ್ಕೆ ಬಂದಿತು. ಇಪ್ಟಾದ ಹುಟ್ಟಿಗೆ ಬೆಂಗಳೂರು ಸಹ ವೇದಿಕೆಯೊದಗಿಸಿತು. 1941 ರಲ್ಲಿ ಬೆಂಗಳೂರಿನಲ್ಲಿ ಸೇರಿದ ಪ್ರಗತಿಪರ ಕಲಾವಿದರು ಹಾಗೂ ಬರಹಗಾರರು ಪೀಪಲ್ಸ್ ಥೀಯಟರ್ ಅಂದರೆ  ಜನತೆಯ ರಂಗಭೂಮಿಯೊಂದನ್ನು ಆರಂಭಿಸಲು ಪೂರ್ವಭಾವಿ ಸಭೆಯೊಂದನ್ನು ನಡೆಸಿದರು. ಅದರ ಮುಂದುವರಿಕೆಯಾಗಿ ಬಾಂಬೆಯಲ್ಲಿ 1942 ರಲ್ಲಿ ಇಪ್ಟಾ ಸಾಂಸ್ಕೃತಿಕ ಸಂಘಟನೆಯನ್ನು ಚಾಲನೆಗೊಳಿಸಲಾಯಿತು. 1943, ಮೇ 25 ರಂದು ಬಾಂಬೆಯ ಮಾರ್ವಾರಿ ಶಾಲೆಯಲ್ಲಿ ನಡೆದ ಮೊದಲ ರಾಷ್ಟ್ರೀಯ ಸಮ್ಮೇಳನದಲ್ಲಿ ಇಪ್ಟಾ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.

ಕಲಾ ಮಾಧ್ಯಮದ ಮೂಲಕ ಸಮಕಾಲೀನ ಸಮಸ್ಯೆಗಳನ್ನು ಜನರಿಗೆ ತಿಳಿಸಿ ಎಚ್ಚರಿಸುವುದು ಹಾಗೂ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಹೊಸ ವಿಚಾರಧಾರೆಗಳ ಮೂಲಕ ಪ್ರಸ್ತುತಪಡಿಸುವುದು ಇಪ್ಟಾ ಸಾಂಸ್ಕೃತಿಕ ಸಂಘಟನೆಯ ಮೂಲ ಆಶಯವಾಯಿತು ರಾಷ್ಟ್ರೀಯ ಮಟ್ಟದಲ್ಲಿ ಇಪ್ಟಾ ಅಸ್ತಿತ್ವಕ್ಕೆ ಬಂದ ನಂತರ 1944ರಲ್ಲಿ ಕರ್ನಾಟಕದಲ್ಲಿಯೂ ಪೀಪಲ್ಸ್ ಥೀಯಟರ್ ಆರಂಭಿಸುವ ಪ್ರಯತ್ನಗಳು ಶುರುವಾದವು. ಕರ್ನಾಟಕದಲ್ಲಿ  ಮಂಗಳೂರು ನಗರದಲ್ಲಿ ಭಾರತೀಯ ಜನತಾ ರಂಗಭೂಮಿ ಎನ್ನುವ ಹೆಸರಲ್ಲಿ ಇಪಾ ಆರಂಭವಾಯಿತು. ಪ್ರಗತಿಪರ ಲೇಖಕ ನಿರಂಜನ್ರವರು ಅದರ ಮುಂದಾಳತ್ವ ವಹಿಸಿದ್ದರು. ಕರ್ನಾಟಕದ ಮೊಟ್ಟ ಮೊದಲ ಇಪ್ಟಾ ಸಮಾವೇಶವನ್ನು ಪ್ರಖ್ಯಾತ ಸಾಹಿತಿಗಳಾದ ಶಿವರಾಮ ಕಾರಂತರು ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಆಗ ಇಪ್ಟಾದ ಕಲಾವಿದರು ದಾದಾ ಕಾಮ್ರೇಡ್ ನಾಟಕವನ್ನು ಮಂಗಳೂರು ಮತ್ತು ಮೈಸೂರುಗಳಲ್ಲಿ ಪ್ರದರ್ಶನ ಮಾಡಿ ಸಾಂಸ್ಕೃತಿಕ ಸಂಘಟನೆಗೆ ರಂಗಚಾಲನೆ ಕೊಟ್ಟರು. ನಂತರವೂ ಆಗಾಗ ಕೆಲವು ನಾಟಕ ಬೀದಿನಾಟಕಗಳು ಬಿಡಿ ಬಿಡಿಯಾಗಿ ಪ್ರದರ್ಶನಗೊಳ್ಳುತ್ತಲೇ ಬಂದವು.

ವೃತ್ತಿರಂಗಭೂಮಿ ಆಗ ಚಾಲ್ತಿಯಲ್ಲಿತ್ತು. ಇನ್ನೂ ಆಧುನಿಕ ರಂಗಭೂಮಿ ಕನ್ನಡದಲ್ಲಿ ಆರಂಭಗೊಂಡಿರಲಿಲ್ಲ. ಬಾಂಬೆ, ಬೆಂಗಾಳದ ಹಾಗೆ ಕನ್ನಡದಲ್ಲಿ ಬೀದಿನಾಟಕ ಪರಂಪರೆಯೂ ಶುರುವಾಗಿರಲಿಲ್ಲ. ಆದ್ದರಿಂದ ಇಪ್ಟಾ ಚಟುವಟಿಕೆಗಳು ಗರಿಗೆದರಲಿಲ್ಲ. 1970 ದಶಕದಲ್ಲಿ  ಎಂ.ಎಸ್.ಸತ್ಯು ಹಾಗೂ ನಿಜಗುಣ.. ಮುಂತಾದವರು ಮತ್ತೆ ಬೆಂಗಳೂರಿನಲ್ಲಿ ಇಪ್ಟಾ ಚಟುವಟಿಕೆಗಳಿಗೆ ಚಾಲನೆಕೊಡುವ ಪ್ರಯತ್ನವನ್ನು ಮಾಡಿದರು. ಆದರೆ ಅದು ಕೆಲವು ನಾಟಕ ಪ್ರದರ್ಶನಗಳಿಗೆ ಸೀಮಿತವಾಯಿತು.

ಹೇಗೆ ಇಪ್ಟಾ ಸಾಂಸ್ಕೃತಿಕ ಸಂಘಟನೆ ದೇಶಾದ್ಯಂತ ಹೆಮ್ಮರವಾಗಿ ಬೆಳೆಯಿತು? ಹಾಗೂ ಯಾಕೆ ಪೀಪಲ್ಸ್ ಥೀಯಟರ್ ಕರ್ನಾಟಕದಲ್ಲಿ ಚಿಗುರೊಡೆಯಲಿಲ್ಲ, ಹುಲುಸಾಗಿ ಬೆಳೆಯಲಿಲ್ಲ?. ಅದಕ್ಕೆ ಮೂಲ ಕಾರಣ ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಸಿಪಿಐ). 1941ರಲ್ಲಿ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಅಸ್ತಿತ್ವದಲ್ಲಿದ್ದ ಹಲವಾರು ಸಾಂಸ್ಕೃತಿಕ ತಂಡಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ಒಗ್ಗೂಡಿಸಿ ಒಂದು ವೇದಿಕೆಗೆ ತರಲು ಆಗಿನ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾ. ಪಿ.ಸಿ.ಜ್ಯೋಶಿಯವರು ತುಂಬಾನೇ ಶ್ರಮಿಸಿದರು. ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ನಡೆಯುತ್ತಿರುವ ಜನತೆಯ ಹೋರಾಟಕ್ಕೆ ಸಾಂಸ್ಕೃತಿಕ ಚಳುವಳಿ ಎಷ್ಟೊಂದು ಮಹತ್ವದ್ದು ಎಂಬುದರ ಕುರಿತ ಸಂಪೂರ್ಣ ಅರಿವು ಕಾ.ಜ್ಯೋಶಿಯವರಿಗಿತ್ತು. ಇಪ್ಟಾದ ಹುಟ್ಟಿಗೆ ಅವರ ಕೊಡುಗೆ ಅಪಾರವಾದದು. ಯಾವಾಗ ಸಿಪಿಐ ಎನ್ನುವ ಸಂಘಟಿತ ಎಡಪಂಥೀಯ ಪಕ್ಷ ಹಾಗೂ ಅದರ ಸಹಸ್ರಾರು ಕಾರ್ಯಕರ್ತರು ಇಪ್ಟಾ ಬೆನ್ನಿಗೆ ನಿಂತರೋ ಆಗ ಇಪ್ಟಾ ತನ್ನ ಚಟುವಟಿಕೆಗಳನ್ನು ಚಳುವಳಿ ರೂಪದಲ್ಲಿ ಬಾಂಬೆ ಬೆಂಗಾಳ ಮುಂತಾದ ಕಡೆ ತೀವ್ರಗೊಳಿಸಿತು. ದೇಶದ ಸಾಂಸ್ಕೃತಿಕ ನೇತೃತ್ವವನ್ನು ವಹಿಸಿಕೊಂಡಿತು. ಕಲಾಮಾಧ್ಯಮದ ಹಲವು ಆಯಾಮಗಳನ್ನು ಬಳಸಿಕೊಂಡು ಬೆಳೆಯಿತು. ಇದರಿಂದಾಗಿಯೇ ಇಪ್ಟಾ  ಎಡಪಂಥೀಯ ರಂಗಭೂಮಿ ಎಂದೇ ಹೆಸರಾಯಿತು. ಪ್ರಗತಿಪರರು, ಎಡಪಂಥೀಯ ಚಿಂತನೆ ಇರುವ ಕಲಾವಿದರು, ಬರಹಗಾರರು ಬಹುದೊಡ್ಡ ಸಂಖ್ಯೆಯಲ್ಲಿ ಇಪ್ಟಾ ಮೂವ್ಮೆಂಟ್ನಲ್ಲಿ ಪಾಲ್ಗೊಂಡರು.

ಆದರೆ... ಕರ್ನಾಟಕದಲ್ಲಿ ಪರಿಸ್ಥಿತಿ ಇದಕ್ಕೆ ತದ್ವಿರುದ್ದವಾಗಿತ್ತು. ಕರ್ನಾಟಕದ ಸಿಪಿಐ ಪಕ್ಷದ ಮುಖಂಡರಿಗೆ ಸಾಂಸ್ಕೃತಿಕ ಹಿನ್ನಲೆಯೂ ಇರಲಿಲ್ಲ, ಸಾಂಸ್ಕೃತಿಕ ಚಳುವಳಿಯ ಅಗತ್ಯದ ಅರಿವೂ ಇರಲಿಲ್ಲ. ನಾಟಕ ಮಾಡುವುದರಿಂದ ಕ್ರಾಂತಿ ಆಗುತ್ತಾ? ಎಂದು ಅಚ್ಚರಿ ವ್ಯಕ್ತಪಡಿಸಿದರು. ಯಾವಾಗ ಪಕ್ಷದ ಸಹಕಾರ ಹೆಚ್ಚಾಗಿ ಸಿಗಲಿಲ್ಲವೋ, ಸಿಪಿಐ ಕೇಂದ್ರ ಸಮಿತಿಯ ಹಾಗೆ ಅಸಂಘಟಿತ ಕಲಾವಿದರು ಮತ್ತು ಕಲಾತಂಡಗಳನ್ನು  ಸೈದ್ದಾಂತಿಕವಾಗಿ ಒಂದು ವೇದಿಕೆಯಡಿ ಸಂಘಟಿಸಲು ಪ್ರಯತ್ನಿಸಲಿಲ್ಲವೋ ಆಗ ಜನತೆಯ ರಂಗಭೂಮಿ ಕರ್ನಾಟಕದಲ್ಲಿ ಚಳುವಳಿಯಾಗಿ ಬೆಳೆಯದೇ ಕೇವಲ ಬಿಡಿ ಬಿಡಿ ಚಟುವಟಿಕೆಯಾಯಿತು.

ಸೈದ್ದಾಂತಿಕ ಭಿನ್ನಾಭಿಪ್ರಾಯದಿಂದಾಗಿ ಸಿಪಿಐ ಪಕ್ಷ  1964ರಲ್ಲಿ ಇಬ್ಬಾಗವಾಗಿ ಸಿಪಿಎಂ ಪಕ್ಷ ಹುಟ್ಟಿಕೊಂಡಿತು. ಸಿಪಿಐ ಪಕ್ಷ ಮಾಡಲಾಗದ ಕೆಲಸವನ್ನು ಸಿಪಿಎಂ ಪಕ್ಷ ಕರ್ನಾಟಕದಲ್ಲಿ ಮಾಡಿತು. ಪ್ರಸನ್ನ, ಸಿಜಿಕೆ... ರವರಂತಹ ಹಲವಾರು ಪ್ರಗತಿಪರ ಆಶಯಗಳನ್ನು ಹೊಂದಿದ ಕಲಾವಿದರು ಮತ್ತು ರಂಗನಿರ್ದೇಶಕರುಗಳನ್ನು ಹಾಗೂ ಅನೇಕ ಪ್ರಗತಿಪರ ಬರಹಗಾರರನ್ನು ಒಂದು ಗೂಡಿಸಿತು. 1975 ರಲ್ಲಿ ಸಿಪಿಎಂ ಪಕ್ಷದ ಬೆಂಬಲದಲ್ಲಿ ಕರ್ನಾಟಕದಲ್ಲಿ ಸಮುದಾಯ ಎನ್ನುವ ಸಾಂಸ್ಕೃತಿಕ ಸಂಘಟನೆ ಆರಂಭಗೊಂಡಿತು. ಹೀಗೆ ಸಮುದಾಯ ಮುಂಚೂಣಿಯಲ್ಲಿದ್ದ ಹಲವು ರಂಗನಿರ್ದೇಶಕರುಗಳು ದೆಹಲಿಯ ಎನ್ಎಸ್ಡಿ ಯಲ್ಲಿ ಕಲಿತು ಬಂದವರಾಗಿದ್ದರು. ಅವರಿಗೆ ಇಪ್ಟಾದ ಪೀಪಲ್ಸ್ ಥೀಯೆಟರ್ ಚಳುವಳಿ ಬಗ್ಗೆ ಅರಿವಿತ್ತು. ಜೊತೆಗೆ ಸಿಜಿಕೆ..... ಯಂತಹ ಪ್ರತಿಭಾನ್ವಿತರು ಕೈಜೋಡಿಸಿದರು. ಹೀಗಾಗಿ ಇಪ್ಟಾ ಬದಲಾಗಿ ಸಮುದಾಯ ಕರ್ನಾಟಕದಲ್ಲಿ ಹೊಸ ಜನಪರ ಸಾಂಸ್ಕೃತಿಕ ಸಂಘಟನೆಯಾಗಿ ಬೆಳೆಯಿತು. ಇಪ್ಟಾ ಆಶಯಗಳನ್ನು ಮುಂದುವರೆಸಿತು.

ಕರ್ನಾಟಕದ ಸಿಪಿಐ ಪಕ್ಷದಲ್ಲಿ ಸಾಂಸ್ಕೃತಿಕ ಆಂದೋಲನದ ಮಹತ್ವವನ್ನು ಅರಿತವರು ಡಾ. ಸಿದ್ದನಗೌಡ ಪಾಟೀಲರು. ಇಪ್ಟಾವನ್ನು ಮತ್ತೆ ಕರ್ನಾಟಕದಲ್ಲಿ ಮರು ಸಂಘಟಿಸುವ ಪ್ರಯತ್ನವನ್ನು ಶುರುಮಾಡಿದರು. 1982 ರಲ್ಲಿ ಸಿದ್ದನಗೌಡರು ಸಂಪಿಗೆ ತೋಂಟದಾರ್ಯ ಹಾಗೂ ಇತರ ಪ್ರಗತಿಪರ ಕಲಾವಿದರು ಮತ್ತು ಬರಹಗಾರರನ್ನು ಸೇರಿಸಿ ಧಾರವಾಡದಲ್ಲಿ ಇಪ್ಟಾ ಚಟುವಟಿಕೆಗಳಿಗೆ ಚಾಲನೆಯನ್ನಿತ್ತರು. ಬೀದಿನಾಟಕಗಳನ್ನು ಆರಂಭಿಸಿದರು. 1983 ರಲ್ಲಿ ಸಿಪಿಐ ವಿಧ್ಯಾರ್ಥಿ ಯುವಜನ ಸಂಘಟನೆಗಳು ವಿಜಯನಗರದ ಉಕ್ಕಿನ ಕಾರ್ಖಾನೆಗಾಗಿ ಬಳ್ಳಾರಿಯ ಸಂಡೂರಿನಿಂದ ಬೆಂಗಳೂರಿಗೆ ಜಾಥಾ ಹೊರಟಾಗ ಹಾದಿಯುದ್ದಕ್ಕೂ ವಿಜಯನಗರ ಉಕ್ಕು ಎಂಬ ಬೀದಿನಾಟಕವನ್ನು ಪ್ರದರ್ಶಿಸಲಾಯಿತು.   ಜನತೆ ಭಾಷಣಗಳಿಗಿಂತ ಬೀದಿನಾಟಕಕ್ಕೆ ಹೆಚ್ಚು ಸ್ಪಂದಿಸ ತೊಡಗಿತು. ಬೀದಿನಾಟಕದ ಯಶಸ್ಸಿನಿಂದಾಗಿ ಇಪ್ಟಾ ಹೊಸರೂಪ ಪಡೆಯಿತು. ಮತ್ತು ಬೀದಿನಾಟಕಗಳು ಹಾಗೂ ಹೋರಾಟದ ಹಾಡುಗಳು ಒಂದು ಚಳುವಳಿಗೆ ಎಷ್ಟು ಅಗತ್ಯ ಎಂಬುದರ ಅರಿವು ಹಲವರಿಗಾಯಿತು.

ಡಾ.ಸಿದ್ದನಗೌಡ ಪಾಟೀಲರು ಇಪ್ಟಾ ಚಟುವಟಿಕೆಗಳನ್ನು ಧಾರವಾಡದಿಂದ ರಾಜ್ಯಾದ್ಯಂತ ವಿಸ್ತರಿಸಲು ಕಾರ್ಯಪ್ರವೃತ್ತರಾದರು. ಚಿಕ್ಕಮಗಳೂರಿನಲ್ಲಿ ಚಳುವಳಿಗಳಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದ ಬಿ.ಕೆ.ಸುಂದರೇಶರವರ ಸಹಕಾರದಿಂದ ಚಿಕ್ಕಮಗಳೂರು, ದಾವಣಗೆರೆ, ಬೆಂಗಳೂರು ಸೇರಿದಂತೆ ಹಲವಾರು ಕಡೆ ಇಪ್ಟಾ ಶಾಖೆಗಳು ಆರಂಭಗೊಂಡವು.  ಆಗ ಕರ್ನಾಟಕದ ಇಪ್ಟಾ ಘಟಕಕ್ಕೆ ಭಾರತೀಯ ಜನಕಲಾ ಸಮಿತಿ ಎಂದು ಪುನರ್ನಾಮಕರಣ ಮಾಡಲಾಯಿತು. ಸಿದ್ದನಗೌಡರ ಮುತುವರ್ಜಿಇಂದಾಗಿ ಕರ್ನಾಟಕದಾದ್ಯಂತ ಹಲವಾರು ಇಪ್ಟಾದ ಘಟಕಗಳು ಆರಂಭಗೊಂಡವು. ಬೀದಿನಾಟಕ ಮತ್ತು ಹಾಡಿನ ಕಾರ್ಯಾಗಾರಗಳನ್ನು ಆಯೋಜಿಸಲಾಯಿತು. ಹಲವಾರು ಯುವಕಲಾವಿದರು ಇಪ್ಟಾದ ಜೊತೆಗೆ ಗುರುತಿಸಿಗೊಂಡರು. 11 ಜಿಲ್ಲೆಗಳಲ್ಲಿ ಇಪ್ಟಾದ ಘಟಕಗಳು ಸಕ್ರೀಯವಾದವು. ಹಲವಾರು ಹಳ್ಳಿ ಪಟ್ಟಣಗಳ ಬೀದಿಗಳಲ್ಲಿ ಇಪ್ಟಾದ ಹಾಡು ಮತ್ತು ಬೀದಿನಾಟಕಗಳ ತಮಟೆಯ ಸದ್ದು ಕೇಳತೊಡಗಿತು. ಇಪ್ಟಾ ಅಂದರೆ ಬಾಂಬೆ ಕಡೆ ತಿರುಗಿನೋಡುತ್ತಿದ್ದ ಕನ್ನಡ ಸಾಂಸ್ಕೃತಿಕ ಲೋಕ ಕರ್ನಾಟಕದಲ್ಲೇ ಇಪ್ಟಾದ ಚಟುವಟಿಕೆಗಳು ಆರಂಭಗೊಂಡಿದ್ದು ಹಾಗೂ ಬೀದಿನಾಟಕಗಳ ಮೂಲಕ ಜನಜಾಗೃತಿಯನ್ನು ಮಾಡುತ್ತಿರುವುದನ್ನು ನೋಡಿ ಬೆರಗಾಯಿತು. ಧಾರವಾಡವನ್ನು ಕೇಂದ್ರವಾಗಿರಿಸಿಕೊಂಡು ಇಪ್ಟಾದ ಚಟುವಟಿಕೆಗಳು ರಾಜ್ಯಾದ್ಯಾಂತ ಆರಂಭಗೊಂಡವು.

ಇಪ್ಟಾ ಸಾಂಸ್ಕೃತಿಕ ಸಂಘಟನೆಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಜೈಪುರದಲ್ಲಿ ನಡೆದ ಇಪ್ಟಾದ ಮಹಾ ಸಮ್ಮೇಳನದಲ್ಲಿ ಕೇಂದ್ರ ಸಮಿತಿಯು ಎಲ್ಲಾ ರಾಜ್ಯಗಳೂ ಇಪ್ಟಾದ ಸುವರ್ಣ ಮಹೋತ್ಸವವನ್ನು ಆಚರಿಸಬೇಕೆಂದು ಆದೇಶಿಸಲಾಯಿತು. ಅದರಂತೆ 1995, ಮೇ 25 ರಿಂದ 27 ರವರೆಗೆ 3 ದಿನಗಳ ಕಾಲ ಧಾರವಾಡದಲ್ಲಿ ನಡೆದ ಭಾರತೀಯ ಜನಕಲಾ ಸಮಿತಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಅದ್ಬುತವಾಗಿ ಯಶಸ್ವಿಯಾಯಿತು. ಕರ್ನಾಟಕದಲ್ಲಿ ಇಪ್ಟಾದ ಚಟುವಟಿಕೆಗಳು ಚಳುವಳಿ ರೂಪದಲ್ಲಿ ಬೆಳೆಯಲು ಕಾರ್ಯಕ್ರಮ ಪ್ರೇರಣೆಯಾಯಿತು. 11 ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಕಲಾವಿದರು ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದರು. ಇಪ್ಟಾದ ರಾಷ್ಟ್ರೀಯ ನಾಯಕರಾಗಿದ್ದ ಖ್ಯಾತ ರಂಗಭೂಮಿ ಮತ್ತು ಸಿನೆಮಾ ಕಲಾವಿದ .ಕೆ.ಹಾನಗಲ್ ರವರು ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿದರು. ಗಿರೀಶ್ ಕಾರ್ನಾಡ್, ಎಂ.ಎಸ್.ಸತ್ಯು, ಜಿ.ರಾಮಕೃಷ್ಣ, .ಎಸ್.ಮೂರ್ತಿ, ಜಿ.ಕೆ.ಗೋವಿಂದರಾವ್, ಏಣಗಿ ಬಾಳಪ್ಪ ಮುಂತಾದವರು 3 ದಿನಗಳ ಕಲಾ ಮಹೋತ್ಸವದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಸುವರ್ಣ ಮಹೋತ್ಸವದ ಯಶಸ್ಸಿನ ಪ್ರೇರಣೆಯಿಂದಾಗಿ ಮೈಸೂರು, ವಿಜಾಪುರ, ಬೆಳಗಾವಿ, ಮಂಗಳೂರು, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿ ಇಪ್ಟಾದ ಶಾಖೆಗಳು ಆರಂಭವಾದವು.

ಆಗ ಸರಕಾರದ ಶಿಕ್ಷಣ ಇಲಾಖೆ ಸಾಕ್ಷರತಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಡಾ.ಸಿದ್ದನಗೌಡರು ಇಪ್ಟಾದ ಕಲಾವಿದರನ್ನು ಸೇರಿಸಿಕೊಂಡು ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಿಗೆ ಹೋಗಿ ಬೀದಿನಾಟಕ ಮತ್ತು ಹಾಡುಗಳ ಮೂಲಕ ಅಕ್ಷರ ಜಾಗೃತಿಯನ್ನು ಮೂಡಿಸಿದರು. ಅವರೇ ಸಾಕ್ಷರತೆಯ ಕುರಿತು ಹಾಡುಗಳನ್ನು ರಚಿಸಿ ರಾಗಸಂಯೋಜಿಸಿದರು, ಬೀದಿನಾಟಕಗಳನ್ನು ಬರೆದು ನಿರ್ದೇಶಿಸಿದರು. ಹಳ್ಳಿಗಳಲ್ಲಿ ಸಂಪರ್ಕಕ್ಕೆ ಬಂದ ಗ್ರಾಮೀಣ ಕಲಾವಿದರನ್ನು ಇಪ್ಟಾ ಸಂಘಟನೆಗೆ ಕರೆತಂದರು. ಹಾಗೆ ಬಂದ ಕಲಾವಿದರಿಗೆ ಕಲಾಶಿಭಿರಗಳನ್ನು   ಆಯೋಜಿಸಿ ಸೈದ್ದಾಂತಿಕ ತರಬೇತಿಯನ್ನು ಕೊಟ್ಟರು. ಹೀಗಾಗಿ ಬೇರುಮಟ್ಟದಲ್ಲಿ ಇಪ್ಟಾ ಬೆಳೆಯಲು ಅನುಕೂಲವಾಯಿತು. ಒಬ್ಬ ವ್ಯಕ್ತಿ ಆಸಕ್ತಿ ವಹಿಸಿದರೆ ಒಂದು ಸಾಂಸ್ಕೃತಿಕ ಸಂಘಟನೆಯನ್ನು ಗಟ್ಟಿಯಾಗಿ ಕಟ್ಟಬಹುದು, ಹಲವಾರು ಶಾಖೆಗಳನ್ನು ಸೃಷ್ಟಿಸಬಹುದು ಹಾಗೂ ಸಾವಿರಾರು ಕಲಾವಿದರನ್ನು ಬೆಳೆಸಬಹುದು ಎಂಬುದಕ್ಕೆ ಡಾ.ಸಿದ್ದನಗೌಡ ಪಾಟೀಲರೇ ಸಾಕ್ಷಿ.

ನಾಟಕಕ್ಕಾಗಿ ನಾಟಕ ಮಾಡದೇ ಸಾಮಾಜಿಕ ಸಮಸ್ಯೆಗಳಿನ್ನಿಟ್ಟುಕೊಂಡು ಬೀದಿನಾಟಕಗಳ ಮೂಲಕ ಜನಜಾಗೃತಿ ಮಾಡುವ ಜನಪರ ಕೆಲಸದಲ್ಲಿ ಇಪ್ಟಾ ತೊಡಗಿಸಿಕೊಂಡಿತು. ಬೀದಿನಾಟಕದ ಗಂಧ ಗಾಳಿ ಗೊತ್ತಿಲ್ಲದ ಉತ್ತರ ಕರ್ನಾಟಕದ ಜನತೆಗೆ ಇಂತಹುದೊಂದು ಕಲಾಮಾಧ್ಯಮ ಇದೆ ಎಂಬುದನ್ನು ಪರಿಚಯಿಸಿದ್ದೇ ಇಪ್ಟಾ. ಎಲ್ಲಕ್ಕಿಂತ ಹೆಚ್ಚಾಗಿ ಅನಾಮಿಕ ಕಲಾವಿದರನ್ನು ಗುರುತಿಸಿ ಕರೆತಂದು, ಸೈದ್ದಾಂತಿಕವಾಗಿ ತರಬೇತಿಯನ್ನು ಕೊಟ್ಟು, ಸಾಮಾಜಿಕ ಜವಾಬ್ದಾರಿಯ ಅರಿವನ್ನು ಮಾಡಿಕೊಟ್ಟಿದ್ದು ಇಪ್ಟಾದ ಹಿರಿಮೆಯಾಗಿದೆ. ಎಲ್ಲೋ ಗೀಗಿ ಪದ ಹಾಡುವವರು, ಭಜನೆ ಮಾಡುವವರು.... ಇಂತಹ ಹಲವಾರು ಕಲಾವಿದರಿಗೆ ಹೋರಾಟದ ಹಾಡುಗಳನ್ನು ಕಲಿಸಿ ಜನಜಾಗೃತಿಗಾಗಿ ಪ್ರೇರೇಪಿಸಿದ್ದು ಇಪ್ಟಾ ಮಾಡಿದ ಸಾಧನೆ. ಯಾವುದೇ ರೀತಿಯ ಪ್ರಾಯೋಜಕರ ಹಂಗಿಲ್ಲದೇ ಜನರಿಗಾಗಿ ನಾಟಕಮಾಡಿ, ಜನಕೊಟ್ಟ ಪುಡಿಕಾಸುಗಳಿಂದಲೇ ಖರ್ಚುಗಳನ್ನು ನಿಭಾಯಿಸಿ, ನಿಜವಾದ ಅರ್ಥದಲ್ಲಿ ಜನತೆಯ ರಂಗಭೂಮಿಯನ್ನು ಬೆಳೆಸಿದ ಗರಿಮೆ ಇಪ್ಟಾ ಸಂಘಟನೆಯದು.

ಎಲ್ಲಕ್ಕಿಂತ ಹೆಚ್ಚಾಗಿ ಜನಪರ ಚಳುವಳಿಗೆ ಪೂರಕವಾಗಿ ಇಪ್ಟಾ ನಿರಂತರವಾಗಿ ಸ್ಪಂದಿಸುತ್ತಾ ಬಂದಿದೆ. ಬಾಗೂರುನವಿಲೆ ರೈತ ಚಳವಳಿಯಲ್ಲಿ ಸರಕಾರದ ಹುನ್ನಾರಗಳ ಕುರಿತು ಜನಜಾಗೃತಿ ಮಾಡುವಲ್ಲಿ ಇಪ್ಟಾ ಕಲಾವಿದರ ಹಾಡುಗಳು ಮತ್ತು ಬೀದಿನಾಟಕಗಳು ಬಹುದೊಡ್ಡ ಪಾತ್ರವನ್ನು ವಹಿಸಿವೆ. ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗಳಾಗಿರಬಹುದು, ರೈತ ಚಳುವಳಿಯ ಹೋರಾಟಗಳಾಗಿರಬಹುದು... ಇಪ್ಟಾ ಕಲಾವಿದರ ಹಾಡುಗಳು ಚಳುವಳಿಗಾರರಲ್ಲಿ ಹೊಸ ಹುರುಪನ್ನು ತಂದಿವೆ. ಜನರಲ್ಲಿ ಜಾಗೃತಿ ಮೂಡಿಸುವ ಯಾವುದೇ ಅವಕಾಶವನ್ನೂ ಸಮರ್ಥವಾಗಿ ಬಳಸಿಕೊಂಡು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಇಪ್ಟಾ ಸಾಂಸ್ಕೃತಿಕ ಸಂಘಟನೆ ನಿರ್ವಹಿಸುತ್ತಾ ಬಂದಿದೆ.  ಭ್ರಷ್ಟಾಚಾರ, ಕೋಮುವಾದ, ಜಾತೀವಾದ, ವರದಕ್ಷಿಣೆ, ಜಾಗತೀಕರಣ, ಜನವಿರೋಧಿ       ರಾಜಕಾರಣ.... ಹೀಗೆ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧ ಬೀದಿನಾಟಕ ಮತ್ತು ಹಾಡುಗಳ ಮೂಲಕ ಇಪ್ಟಾ ತನ್ನ ಸಾಂಸ್ಕೃತಿಕ ಚಳುವಳಿಯನ್ನು ಮುಂದುವರೆಸಿದೆ.

ಡಾ.ಸಿದ್ದನಗೌಡ ಪಾಟೀಲರು ರಚಿಸಿ ನಿರ್ದೇಶಿಸಿದ ರಾಜಕೀಯ ವಿಡಂಬನಾತ್ಮಕ ಬೀದಿನಾಟಕ ಪೊಲೀಸರ ನಾಯಿ ರಾಜ್ಯಾದ್ಯಂತ ಸಾವಿರಾರು ಪ್ರದರ್ಶನಗಳಾಗಿವೆ. ಸಿದ್ದನಗೌಡರು ಬರೆದು ನಿರ್ದೇಶಿಸಿದ ರೈತರ ಆತ್ಮಹತ್ಯೆ ಕುರಿತಾದ ಪರಿಹಾರ , ಕೋಮುವಾದದ ಹುನ್ನಾರವನ್ನು ಬಯಲುಗೊಳಿಸುವ ಅದಲ್ ಬದಲ್ ಕಾಂಚಾಣ ಮಿಂಚಾಣ, ವ್ಯವಸ್ಥೆಯನ್ನು ಕುರಿತ ಸ್ವಾತಂತ್ರ್ಯ... ಮೊದಲಾದ ಬೀದಿನಾಟಕಗಳ ನೂರಾರು ಪ್ರದರ್ಶನಗಳನ್ನು  ಇಪ್ಟಾದ ಕಲಾವಿದರು ಮಾಡಿದ್ದಾರೆ.  ಬಹುರಾಷ್ಟ್ರೀಯ ಕಂಪನಿಗಳ ಕುತಂತ್ರವನ್ನು ಬಯಲು ಮಾಡುವ ದಿಲ್ ಮಾಂಗೇ ಮೋರ್, ರಾಜಕೀಯ ದೊಂಬರಾಟವನ್ನು ತೋರುವ ಖುರ್ಚಿ, ಕೋಮುವಾದದ ಹುನ್ನಾರಗಳನ್ನು ಹೇಳುವ ಧರ್ಮಕಾಂಡ, ವಿದೇಶಿ ತಂಪುಪಾನೀಯಗಳ ಅಪಾಯವನ್ನು ತೋರುವ ಕೋಲಾಹಲ... ಹೀಗೆ ಹಲವಾರು ಬೀದಿ ನಾಟಕಗಳನ್ನು ಇಪ್ಟಾ ಕಲಾವಿದರಿಗೆ ಶಶಿಕಾಂತ ಯಡಹಳ್ಳಿ ರಚಿಸಿ ನಿರ್ದೇಶಿಸಿ ಪ್ರದರ್ಶಿಸಿದ್ದಾರೆ.

ಪ್ರಿಸೀನಿಯಂ ನಾಟಕಗಳನ್ನೂ ಇಪ್ಟಾ ನಿರ್ಮಿಸಿ ಪ್ರದರ್ಶಿಸಿದೆ. ಪ್ರೇಮಚಂದರ ಕಫನ್ ಕಥೆಯಾದರಿಸಿದ ಹೆಣದ ಬಟ್ಟೆ ನಾಟಕವನ್ನು  ಇಪ್ಟಾ ಕಲಾವಿದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಹಲವಾರು ಪ್ರಯೋಗಗಳನ್ನು ಕಂಡಿದೆ. ಸಿದ್ದನಗೌಡ ಪಾಟೀಲರು ಧಾರವಾಡ ಇಪ್ಟಾ ಘಟಕಕ್ಕೆ ನಿರ್ದೇಶಿಸಿದ್ದ ರಾಮರಾಜ್ಯ, ಅಮರಾನಗರ ದೇಸಾಯರ ಕಥೆ, ಭೀಷ್ಮ ಸಹಾನಿಯವರ ಹಾನೂಷ್ ನಾಟಕಗಳು ಧಾರವಾಡವೂ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಪ್ರದರ್ಶನಗೊಂಡಿವೆ. ಮಂಜುನಾಥ ಬೆಳಕೆರೆ ರಚಿಸಿದ ಶರೀಫ ನುಡಿದಾನ ನೋಡ ನಾಟಕವನ್ನು ಜನ್ನಿಯವರು ಮೈಸೂರು ಇಪ್ಟಾ ಕಲಾವಿದರಿಗೆ ನಿರ್ದೇಶಿಸಿದ್ದು ಮೈಸೂರು ಬೆಂಗಳೂರು ಸೇರಿ ಕೆಲವು ಕಡೆ ಪ್ರದರ್ಶನಗೊಂಡಿದೆ. ಭೀಷ್ಮ ಸಹಾನಿಯವರ ಪರಿಹಾರ ನಾಟಕವನ್ನು ಅಶೋಕ ಬಾದರದಿನ್ನಿ ವಿಜಾಪುರದ ಇಪ್ಟಾ ಘಟಕಕ್ಕೆ ನಿರ್ದೇಶಿಸಿದ್ದರು. ಕುವೆಂಪುರವರ ಜಲಗಾರ ನಾಟಕವನ್ನು ದಾವಣಗೆರೆ ಇಪ್ಟಾ ಘಟಕಕ್ಕೆ ಎಂ.ಪ್ರಸನ್ನಕುಮಾರ್ರವರು ನಿರ್ದೇಶಿಸಿದ್ದರು. ಬೆಂಗಳೂರಿನ ಇಪ್ಟಾ ಘಟಕಕ್ಕೆ ಶಶಿಕಾಂತ ಯಡಹಳ್ಳಿಯವರು ಪರಿವರ್ತನೆ ನಾಟಕವನ್ನು ರಚಿಸಿ ನಿರ್ದೇಶಿಸಿದ್ದು ಬೆಂಗಳೂರಿನಲ್ಲಿ ಕೆಲವಾರು ಪ್ರಯೋಗ ಕಂಡಿದೆ.... ಹೀಗೆ ಕೇವಲ ಬೀದಿ ನಾಟಕ ಮಾತ್ರವಲ್ಲ ರಂಗನಾಟಕಗಳನ್ನೂ ಇಪ್ಟಾ ನಿರ್ಮಾಣ ಮಾಡಿ ಪ್ರದರ್ಶಿಸಿದೆ. ದ್ವನಿಯ ಎತ್ತಿರೋ ಎನ್ನುವ ಹೋರಾಟದ ಹಾಡುಗಳ ದ್ವನಿಸುರಳಿಯನ್ನು ಮಂಗಳೂರು ಇಪ್ಟಾ ಹೊರತಂದಿದೆ. ಹೀಗೆ ಎಲ್ಲಾ ಇತಿಮಿತಿಗಳ ನಡುವೆಯೂ ಭಾರತೀಯ ಜನಕಲಾ ಸಮಿತಿ ಇಂದಿಗೂ ಕ್ರಿಯಾಶೀಲವಾಗಿದೆ. ತನ್ನ ಸಾಮಾಜಿಕ ಜವಾಬ್ದಾರಿಯನ್ನು ಸಾಂಸ್ಕೃತಿಕ ಪರಿಕರಗಳ ಮೂಲಕ ನಿಬಾಯಿಸುತ್ತಿದೆ.

2002 ರಲ್ಲಿ ಡಾ.ಸಿದ್ದನಗೌಡ ಪಾಟೀಲರ ಹೆಗಲಿಗೆ ಸಿಪಿಐ ಪಕ್ಷದ ಕಾರ್ಯದರ್ಶಿ ಹೊನೆಗಾರಿಕೆ ಹೆಚ್ಚುವರಿಯಾಗಿ ಬಿದ್ದಿತೋ ಆಗ ಇಪ್ಟಾದ ಚಟುವಟಿಕೆಗೆ ಸ್ವಲ್ಪ ಹಿನ್ನಡೆಯಾಯಿತು. ಭಾರತೀಯ ಜನಕಲಾ ಸಮಿತಿಯ ಕಾರ್ಯಕಾರಿ ಮಂಡಳಿಯನ್ನು ಪುನರಚಿಸಲಾಯಿತು. ಎಂ.ಎಸ್.ಸತ್ಯುರವರನ್ನು ಅಧ್ಯಕ್ಷರಾಗಿ, ಕೇಸರಿ ಹರವುರವನ್ನು ಉಪಾಧ್ಯಕ್ಷರನ್ನಾಗಿ, ಡಾ.ಸಿದ್ದನಗೌಡ ಪಾಟೀಲರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಶಶಿಕಾಂತ ಯಡಹಳ್ಳಿಯನ್ನು ಖಜಾಂಚಿಯಾಗಿ..... ಆಯ್ಕೆ ಮಾಡಲಾಯಿತು. ಬೆಂಗಳೂರಿನ ಘಾಟೆಭವನದಲ್ಲಿ ಸೃಷ್ಟಿ ಸಂಸ್ಥೆಯ ಸಹಕಾರದಲ್ಲಿ ಇಪ್ಟಾ ಪ್ರತಿ ಭಾನುವಾರ ಅಭಿನಯ ತರಬೇತಿಯನ್ನು ಯುವಜನರಿಗೆ ಕೊಡಲು ಪ್ರಾರಂಭಮಾಡಿತು. ಅದು ಈಗಲೂ ಮುಂದುವರೆದಿದೆ. 2000 ಕ್ಕೂ ಹೆಚ್ಚು ಯುವಕರು ತರಬೇತಿ ಹೊಂದಿದ್ದಾರೆ. ರಂಗಭೂಮಿ, ಟಿವಿ, ಚಲನಚಿತ್ರಗಳಲ್ಲಿ ಹಲವಾರು ಜನ ತೊಡಗಿಸಿಕೊಂಡಿದ್ದಾರೆ. ನೆನಪಿರಲಿ ಪ್ರೇಮ್ನಂತಹ ಸಿನೆಮಾದ ನಾಯಕ ನಟ ಇಪ್ಟಾದ ಕೊಡುಗೆಯಾಗಿದೆ.

 ಭಾರತೀಯ ಕಮ್ಯೂನಿಸ್ಟ್ ಪಕ್ಷದ ಪ್ರಗತಿಪರ ಆಲೋಚನೆಗಳ ಆಶಯಕ್ಕೆ ಪೂರಕವಾಗಿ, ಕಲೆಗಾಗಿ ಕಲೆಯಲ್ಲ, ಜನರಿಗಾಗಿ ಕಲೆ ಎನ್ನುವ ಜನಪರ ಸಿದ್ದಾಂತದ ಪ್ರತೀಕವಾಗಿ ಇಪ್ಟಾ ಕಳೆದ ಏಳು ದಶಕದಿಂದ ಭಾರತದಾದ್ಯಂತ ಬಹುತೇಕ ರಾಜ್ಯಗಳಲ್ಲಿ ಸಕ್ರೀಯವಾಗಿದೆ. ಎಡಪಂಥೀಯ ರಂಗಭೂಮಿ (ಲೆಪ್ಟಿಸ್ಟ್ ಥೇಯಟರ್) ಎಂದೇ ಇಪ್ಟಾ ಹೆಸರಾಗಿದ್ದು ಸಾಂಸ್ಕೃತಿಕ ಎಚ್ಚರವನ್ನು ದೇಶದ ಜನತೆಯಲ್ಲಿ ತರುವುದೇ ಅದರ ಪ್ರಮುಖ ಗುರಿಯಾಗಿದೆ. ಕಲೆ ಎಂಬುದು ಕೇವಲ ಮನರಂಜನೆಗಾಗಿ ಮಾತ್ರವಲ್ಲಾ, ಅದು ಜನರಲ್ಲಿ ಜಾಗೃತಿ ಮೂಡಿಸುವ ಪರಿಕರವಾಗಿ ಬಳಕೆಯಾಗಬೇಕು ಎನ್ನುವ ಮಹತ್ವಾಂಕಾಂಕ್ಷೆ ಇಟ್ಟುಕೊಂಡ ಸಾಂಸ್ಕೃತಿಕ ಸಂಘಟನೆಯು ಪ್ರದರ್ಶಕ ಕಲೆಯ ಎಲ್ಲಾ ಆಯಾಮಗಳನ್ನು ಹೊಸ ದೃಷ್ಟಿಕೋನದಿಂದ  ಪ್ರಸ್ತುತ ಪಡಿಸುತ್ತಾ ಬಂದಿದೆ. ಜನರ ನಡುವೆಯೇ ಇದ್ದು ಜನತೆಯ ಸಂಕಷ್ಟಗಳನ್ನು ಅರಿತು ಜನರಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಅರಿವನ್ನು ಮೂಡಿಸಲು ನಾಟಕ, ಬೀದಿನಾಟಕ, ಹಾಡು, ನೃತ್ಯ, ಸಂಗೀತಗಳನ್ನು ಬಳಸುತ್ತಾ ಬಂದ ಇಪ್ಟಾ ಸಂಘಟನೆ ಜನತೆಗಾಗಿ ಕಲೆ ಎಂಬುದನ್ನು ಸಾಬೀತು ಪಡಿಸಿದೆ. ರಂಗಮಂದಿರದತ್ತ ಜನರನ್ನು ಕರೆತರುವ ಬದಲು ಬೀದಿನಾಟಕಗಳ ಮೂಲಕ ಜನರತ್ತಲೇ ರಂಗಭೂಮಿಯನ್ನು ತೆಗೆದುಕೊಂಡು ಹೋಗುವ ಕೆಲಸವನ್ನು ಇಪ್ಟಾ ಸಮರ್ಥವಾಗಿ ಮಾಡಿದೆ. ನಿಜವಾದ ಅರ್ಥದಲ್ಲಿ ಇಪ್ಟಾ ಜನತೆಗಾಗಿಯೇ ಇರುವ ಜನತಾ ರಂಗಭೂಮಿ  ಅರ್ಥಾರ್ಥ ಪೀಪಲ್ಸ್ ಥೇಯಟರ್ ಆಗಿದೆ.

ಕರ್ನಾಟಕದ ಪ್ರಸ್ತುತ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿಯಲ್ಲಿ ಹೊಸ ರೀತಿಯ ಸಾಂಸ್ಕೃತಿಕ ಚಳುವಳಿಯ ಅವಶ್ಯಕತೆ ಇದೆ. ಹಸಿವು ನಿರುದ್ಯೋಗ, ಬಡತನ, ಅಸ್ಪೃಶ್ಯತೆ, ಲಿಂಗತಾರತಮ್ಯ, ಅಸಮಾನತೆ, ಕೋಮುವಾದ, ಜಾತೀಯತೆ ತಾಂಡವವಾಡುತ್ತಿರುವ ನಮ್ಮ ಸಮಾಜದಲ್ಲಿ ಮತ್ತೊಮ್ಮೆ ಸಾಮಾಜಿಕ ಚಳುವಳಿಗಳು ಬೆಳೆಯಬೇಕಿವೆ. ಸಾಂಸ್ಕೃತಿಕ ರಂಗ ಕೇವಲ ಚಟುವಟಿಕೆಗಳಿಗೆ ಸೀಮಿತವಾಗದೇ ಒಂದು ಜನಪರ ಚಳುವಳಿಯಾಗಿ  ಬೆಳೆಯಬೇಕಿದೆ. ಜಾಗತೀಕರಣದ ಹೊಸ ಆರ್ಥಿಕ ()ನೀತಿಯ ದುಷ್ಪರಿಣಾಮದಿಂದ ಭಾರತದ ಸ್ವಾವಲಂಬನೆ, ಸಾರ್ವಭೌಮತ್ವ ಹಾಗೂ ಸಂಸ್ಕೃತಿ ಅಪಾಯದಲ್ಲಿದೆ. ಇಂಥ ವಿಕ್ಷಿಪ್ತ ಸಂದರ್ಭದಲ್ಲಿ      ಸಾಂಸ್ಕೃತಿಕ ಲೋಕ ತನ್ನ ಜವಾಬ್ದಾರಿಯನ್ನು ಜನಜಾಗೃತಿಯ ಮೂಲಕ ಸಮರ್ಥವಾಗಿ ನಿಭಾಯಿಸಬೇಕಿದೆ. ಭಾರತೀಯ ಜನಕಲಾ ಸಮಿತಿ (ಇಪ್ಟಾ)ಯು ಮತ್ತೆ ಮರುಸಂಘಟನೆಗೊಂಡು, ರಾಜ್ಯದ ಪ್ರಗತಿಪರ ರಂಗತಂಡಗಳು ಮತ್ತು ಕಲಾವಿದರನ್ನು  ಒಂದು ವೇದಿಕೆಗೆ ತಂದು ಜನಪರ ಸಾಂಸ್ಕೃತಿಕ ಚಳುವಳಿಯನ್ನು ಬೆಳೆಸಲು ಪ್ರಯತ್ನಿಸಬೇಕಾಗಿದೆ. ಇಪ್ಟಾ ಮತ್ತೆ ಸಾಂಸ್ಕೃತಿಕ ನೇತೃತ್ವವನ್ನು ವಹಿಸಿಕೊಳ್ಳಬೇಕಾಗಿದೆ.

                                                     -ಶಶಿಕಾಂತ ಯಡಹಳ್ಳಿ