ಬೆಂಗಳೂರಿನಲ್ಲಿ ಕಾರ್ಪೊರೇಟ್ ಪತ್ರಿಕೋದ್ಯಮ ನಾಟಕೋತ್ಸವವನ್ನು ಆಯೋಜಿಸುತ್ತಿದೆ. ರಂಗಭೂಮಿಗೂ ಹಾಗೂ ಕಾರ್ಪೊರೇಟ್ ಬಂಡವಾಳಶಾಹಿಗಳ ಪತ್ರಿಕೋದ್ಯಮಕ್ಕೂ ಎಲ್ಲಿಂದೆಲ್ಲಿಗೆ ಸಂಬಂಧ? ಸಂಬಂಧ ಇಲ್ಲದಿದ್ದರೂ ಸಹ ತನ್ನ ಹಿತಾಸಕ್ತಿಗಾಗಿ ಸಂಬಂಧವನ್ನು ಹುಟ್ಟುಹಾಕುವುದು ಕಾರ್ಪೊರೇಟ್ ಜಗತ್ತಿನ ವ್ಯಾಪಾರಿ ನೀತಿಯಾಗಿದೆ. ಟೈಮ್ಸ್ ಆಪ್ ಇಂಡಿಯಾ ಗ್ರುಪ್ ಭಾರತದ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಹಿಡಿತವನ್ನು ಹೊಂದಿದೆ. ಕೇಳಿದಷ್ಟು ಹಣ ಕೊಟ್ಟು ‘ವಿಜಯಕರ್ನಾಟಕ’ ಕನ್ನಡ ದಿನಪತ್ರಿಕೆಯನ್ನು ಕೊಂಡುಕೊಂಡು ಕರ್ನಾಟಕದಲ್ಲೂ ತಮ್ಮ ಮೊನಾಪಲಿ ಮುಂದುವರೆಸಿದರು. ಸಧ್ಯ ಕೋಮುವಾದಿಗಳ ಕೈಯಲ್ಲಿದ್ದ ‘ವಿಜಯಕರ್ನಾಟಕ’ ಬಂಡವಾಳಶಾಹಿಗಳ ಕೈಗೆ ಬಂತಲ್ಲಾ ಎಂದು ಪ್ರಗತಿಪರರು ಸಂತಸ ಪಟ್ಟಿದ್ದರು. ಇಂತಹ ಟೈಮ್ಸ್ ಗ್ರುಪ್ ಕರ್ನಾಟಕದಲ್ಲಿ ತನ್ನ ಏಕಸಾಮ್ಯತೆ ಮೆರೆಯಲು, ತನ್ನ ಮಾರುಕಟ್ಟೆ ವಿಸ್ತರಿಸಲು ಅನೇಕಾನೇಕ ಮಾರ್ಗೊಪಾಯಗಳನ್ನು ಹುಡುಕುತ್ತಿರುತ್ತದೆ. ಅಂತಹ ಒಂದು ಉಪಾಯವೇ ‘ಕಿರು ನಾಟಕೋತ್ಸವ’.
ಕಳೆದ ಎರಡು ವರ್ಷಗಳಿಂದ ‘ವಿಜಯಕರ್ನಾಟಕ’ ದ ವತಿಯಿಂದ ಕಿರುನಾಟಕೋತ್ಸವವನ್ನು ಟೈಮ್ಸ ಗ್ರುಪ್ ಆಯೋಜಿಸುತ್ತಿದೆ. ಕಳೆದ ವರ್ಷ ‘ಯುವಗರ್ಜನೆ’ ಹೆಸರಲ್ಲಿ ನಾಟಕೋತ್ಸವ ನಡೆದಿತ್ತು. ಈ ವರ್ಷ ‘ಎಡ್ಜಸ್ಟ್ ಮಾಡ್ಕೋಬೇಡಿ’ ಹೆಸರಲ್ಲಿ ಕಿರು ನಾಟಕೊತ್ಸವವನ್ನು 2014, ಮೇ 1 ರಿಂದ 3 ರ ವರೆಗೆ ಹನುಮಂತನಗರದ ಕೆ.ಹೆಚ್. ಕಲಾಸೌಧದಲ್ಲಿ ಆಯೋಜಿಸಿತ್ತು. ನಾಟಕೋತ್ಸವದ ವ್ಯವಸ್ಥೆ ಹಾಗೂ ಪತ್ರಿಕೆಯಲ್ಲಿ ಅದರ ಕುರಿತು ಪ್ರಚಾರಕ್ಕಾದ ಖರ್ಚು ಸುಮಾರು ಹತ್ತಾರು ಲಕ್ಷ ರೂಪಾಯಿಗಳು. ನಾಟಕೋತ್ಸವದಲ್ಲಿ ಆಯ್ಕೆಯಾದ ಮೂರು ನಾಟಕಗಳ ಬಹುಮಾನದ ಮೊತ್ತವೆ ಒಂದೂ
ಕಾಲು ಲಕ್ಷ ರೂಪಾಯಿ. ನಾಟಕೋತ್ಸವವೊಂದು ಅದೂ ಹತ್ತು ನಿಮಿಷಗಳ ಅವಧಿಯ ಕಿರು ನಾಟಕೋತ್ಸವವೊಂದಕ್ಕೆ ಇಷ್ಟೊಂದು ಹಣ ಖರ್ಚು ಮಾಡುತ್ತಿರುವುದು ರಂಗಭೂಮಿಗೆ ಸಂಭ್ರಮದ ವಿಷಯವಾಗಬೇಕಿತ್ತು. ಆದರೆ ಬಹುತೇಕ ಕನ್ನಡ ರಂಗಭೂಮಿ ಈ ಪ್ರಕೃಯೆಯಿಂದ ವಿಮುಖವಾಗಿತ್ತು. ಅದಕ್ಕೆ ಕಾರಣಗಳೂ ಇತ್ತು.
ಇಷ್ಟೊಂದು ಹಣ ಖರ್ಚು ಮಾಡಿ, ಬೇಕಾದಷ್ಟು ಪ್ರಚಾರ ಮಾಡಿ ಪತ್ರಿಕೆಯೊಂದು ನಾಟಕೋತ್ಸವ ಮಾಡುವುದರ ಹಿಂದಿರುವ ಹಕೀಕತ್ತು ರಂಗಭೂಮಿಯವರಿಗೆ ಸೂಕ್ಷ್ಮವಾಗಿ ಗೊತ್ತಿತ್ತು. ಈ ನಾಟಕೋತ್ಸವದ ಹಿಂದಿರುವುದು ಮತ್ತದೇ ಕಾರ್ಪೊರೇಟ್ ವ್ಯಾಪಾರಿ ಲೆಕ್ಕಾಚಾರಗಳು. ಹೆಚ್ಚುತ್ತಿರುವ ಪತ್ರಿಕೋದ್ಯಮದ ಪೈಪೋಟಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಕಾಂಪಿಟೇಶನ್ ಎದುರಿಸಲು ಟೈಮ್ಸ ಗ್ರುಪ್ಗೆ ಹೊಸ ಪರಿಕಲ್ಪನೆಗಳು ಬೇಕಾಗಿತ್ತು. ಹೆಚ್ಚು ಜನರನ್ನು ಸೆಳೆಯುವ ಈ ನಿಟ್ಟಿನಲ್ಲಿ ನಾಟಕಾಸ್ತ್ರವನ್ನು ಬಳಸಲು ನಿರ್ಧರಿಸಿತು. ನಾಟಕಗಳ ಮೂಲಕ ಯುವ ಓದುಗರನ್ನು ಸೆಳೆಯಲು ಪ್ರಯತ್ನಿಸಿತು. ಹೋಗಲಿ ಬಿಡಿ ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳಲು ಎಲ್ಲಾ ಪತ್ರಿಕೆಗಳು ಏನೇನೋ ಗಿಮಿಕ್ ಮಾಡುತ್ತವೆ. ಪ್ರಸಾರ ಸಂಖ್ಯೆ ಹೆಚ್ಚದಿದ್ದರೂ ಪರವಾಗಿಲ್ಲ ಜಾಹಿರಾತುದಾರರನ್ನು ಆಕರ್ಷಿಸಲು ಇಂತಹ ಗಿಮಿಕ್ಗಳು ಕಾರ್ಪೊರೇಟ್ ಪತ್ರಿಕೆಗೆ ಬೇಕಾಗಿತ್ತು. ಅದಕ್ಕೆ ರಂಗಭೂಮಿಯನ್ನು ಬಳಸಿಕೊಳ್ಳಲಾಯಿತು.
ಈಗಾಗಲೇ ರಂಗಭೂಮಿ ಎನ್ನುವ ಜನರ ನೆಚ್ಚಿನ ಮಾಧ್ಯಮವು ಚುಣಾವಣಾ ಪ್ರಚಾರಕ್ಕೆ, ಸರಕಾರಿ ಕಾರ್ಯಕ್ರಮಗಳ ಪ್ರಚಾರಕ್ಕೆ, ಕಾಂಡೂಮ್-ಕೊಲಾ ಮಾರಾಟಕ್ಕೆ ಬಳಕೆಯಾಗಿದೆ. ಇದರಿಂದ ಉತ್ತೇಜಿತರಾಗಿರುವ ಕಾರ್ಪೊರೇಟ್ ಸಂಸ್ಥೆಗಳು ಸಹ ತಮ್ಮ ವ್ಯಾಪಾರೋಧ್ಯಮದ ವಿಸ್ತರಣೆಗಾಗಿ ರಂಗಭೂಮಿಯನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಅದರ ಇನ್ನೊಂದು ರೂಪವೇ ವಿಜಯಕರ್ನಾಟಕದ ಕಿರು ನಾಟಕೋತ್ಸವ.
‘ರಂಗಭೂಮಿಯ ಬಗ್ಗೆ ನಿಜವಾದ ಕಾಳಜಿ ಕಳಕಳಿ ಈ ನಮ್ಮ ವಿಜಯಕರ್ನಾಟಕಕ್ಕೆ ನಿಜವಾಗಿಯೂ ಇದೆ. ಅದಕ್ಕಾಗಿ ನಾಟಕೋತ್ಸವಗಳನ್ನು ಲಕ್ಷಾಂತರ ಹಣ ಖರ್ಚುಮಾಡಿ ಆಯೋಜಿಸಲಾಗುತ್ತದೆ’ ಎಂದುಕೊಳ್ಳೊಣ. ಪತ್ರಿಕೆಯೊಂದರ ರಂಗಪ್ರೀತಿಗೆ ಜೈಕಾರ ಹಾಕೋಣ. ಆದರೆ ಇದೆ ಪತ್ರಿಕೆ ಕನ್ನಡ ರಂಗಭೂಮಿಯಲ್ಲಾಗುವ ಚಟುವಟಿಕೆಗಳಿಗೆ ಅದೆಷ್ಟು ಮಹತ್ವ ಕೊಡುತ್ತದೆ ಎನ್ನುವುದನ್ನು ನೋಡಬಹುದಾಗಿದೆ. ಸಿನೆಮಾಗಳ ಬಗ್ಗೆ ಪ್ರತಿ ದಿನ ಎರಡು ಪೂರ್ತಿ ಪುಟಗಳನ್ನು ಲವಲವಿಕೆ ಪುರವಣಿಯಲ್ಲಿ ತುಂಬಿಸಲಾಗುತ್ತದೆ. ಕಿರುತೆರೆಯಲ್ಲಾಗುವ ಚಿಕ್ಕಪುಟ್ಟ ಮಾಹಿತಿಗಳನ್ನೂ ರಸವತ್ತಾಗಿ ಬರೆಯಲಾಗುತ್ತದೆ. ವಿಶೇಷ ಸಿನೆಮಾ-ಟಿವಿ ಪುರವಣಿಗಳನ್ನೇ ತರಲಾಗುತ್ತದೆ. ನಟ ನಟಿಯರ ನಕರಾಗಳನ್ನು, ಗಾಸಿಪ್ಗಳನ್ನು ಪೊಟೋ ಸಮೇತ ಪ್ರಿಂಟ್ ಮಾಡಲಾಗುತ್ತದೆ. ರಜನೀಕಾಂತ ಬೆಂಗಳೂರಿಗೆ ಬಂದರೂ ಸುದ್ದಿ, ಯೋಗರಾಜ ಭಟ್ ಏನು ಮಾಡದೇ ಸುಮ್ಮನೇ ಕುಳಿತುಕೊಂಡರೂ ಸುದ್ದಿ. ಹೀಗೆ...
ಕಿರುತೆರೆ ಮತ್ತು ಹಿರಿತೆರೆಗೆ ಬಹುತೇಕ ಸ್ಕೋಪ್ ಕೊಡುವ ಇದೆ ಪತ್ರಿಕೆ ಈ ಎರಡೂ ಮಾಧ್ಯಮಗಳ ಹಿರಿಯಣ್ಣನಾದ ರಂಗಭೂಮಿಗೆ ಮಲತಾಯಿ ಧೋರಣೆ ತೋರಿಸುತ್ತಿದೆ. ಸಿನೆಮಾ ಹಾಗೂ ಟಿವಿ ಸಂಬಂಧಿಸಿದ ಕಾಲಂಗಳನ್ನು ಬರೆಯಲು ವಿಶೇಷ ವರದಿಗಾರರನ್ನೇ ನಿಯಮಿಸಿಕೊಳ್ಳುವ ಪತ್ರಿಕೆ ರಂಗಭೂಮಿಯಲ್ಲಿ ನಿರಂತರವಾಗಿ ನಡೆಯುವ ನಾಟಕಗಳ ತಯಾರಿ ಬಗ್ಗೆ, ಪ್ರದರ್ಶನಗಳ ಬಗ್ಗೆ ದಿವ್ಯ ನಿರ್ಲಕ್ಷವನ್ನು ತಳೆದಿದೆ. ನಾಟಕದ ಪ್ರದರ್ಶನದ ಕುರಿತು ವರದಿಯನ್ನು ಈ ಪತ್ರಿಕೆಗೆ ಕಳುಹಿಸಿದರೆ ನಗರ ಕಾರ್ಯಕ್ರಮದಲ್ಲಿ ಬಂದರೆ ಬಂತು ಇಲ್ಲವಾದರೆ ಇಲ್ಲ. ಕೆಲವೊಮ್ಮೆ ಚಿಕ್ಕದಾದ ವಿವರಣೆ ಕೊಡುತ್ತಾರಾದರೂ ಎಲ್ಲಾ ತಂಡದ ಕಾರ್ಯಕ್ರಮಗಳಿಗೂ ಆ ಭಾಗ್ಯವಿಲ್ಲ. ನಾಟಕದ ಪ್ರದರ್ಶನದ ನಂತರ ಆ ಕುರಿತು ವರದಿ ವಿಮರ್ಶೆ ಕೇಳಲೇ ಬೇಡಿ. ಅಕಸ್ಮಾತ್ ಯಾರಾದರೂ ಸ್ವಇಚ್ಚೆಯಿಂದ ನಾಟಕದ ವಿಮರ್ಶೆ ಬರೆದು ಕಳುಹಿಸಿದರೂ ಅದು ಪ್ರಕಟಗೊಳ್ಳುತ್ತದೆಂಬ ನಂಬಿಕೆ ಹಾಗೆ ಕಳುಹಿಸಿದವರಿಗೂ ಇರುವುದಿಲ್ಲ. ಆದರೆ ತಮ್ಮ ಪತ್ರಿಕೆಯನ್ನು ಕಲರ್ಫುಲ್ ಮಾಡಲು ಪ್ರದರ್ಶನಗೊಂಡ ನಾಟಕದ ಒಂದು ಸುಂದರ ಪೊಟೋವನ್ನು ಪ್ರಕಟಿಸುವ ಔದಾರ್ಯವನ್ನು ಇತ್ತೀಚೆಗೆ ವಿ.ಕ. ತೋರಿಸುತ್ತಿರುವುದೇ ರಂಗಭೂಮಿಯ ಸೌಭಾಗ್ಯವಾಗಿದೆ.
ಹೀಗೆ... ನಿರಂತರವಾಗಿ ಕರ್ನಾಟಕದಾದ್ಯಂತ ನಡೆಯುವ ಪ್ರಮುಖ ರಂಗಚಟುವಟಿಕೆಗಳ ಬಗ್ಗೆ ನಿರ್ಲಕ್ಷಹೊಂದಿ, ಕೇವಲ ಸಿನೆಮಾ ಹಾಗೂ ಟಿವಿ ಮಾಧ್ಯಮಗಳಿಗೆ ಪ್ರಚಾರ ಕೊಡುತ್ತಿರುವ ವಿ.ಕ ಪತ್ರಿಕೆ ರಂಗಭೂಮಿಯ ಬಗ್ಗೆ ಇರುವ ಕಾಳಜಿಯಿಂದಾಗಿ ನಾಟಕೋತ್ಸವವನ್ನು ಆಯೋಜಿಸುತ್ತಿದೆ ಎಂದರೆ ನಂಬುದುದಾದರೂ ಹೇಗೆ? ನಾಟಕ ಪ್ರದರ್ಶನಗಳ ಬಗ್ಗೆ ಚಿಕ್ಕ ವಿಮರ್ಶೆಯನ್ನು ಪ್ರಕಟಿಸದ ಪತ್ರಿಕೆ ಈಗ ಪುಟಗಂಟಲೇ ವಿ.ಕ ನಾಟಕೋತ್ಸವದ ಬಗ್ಗೆ ತನ್ನ ಪತ್ರಿಕೆಯಲ್ಲಿ ಬರೆಯುತ್ತದೆ ಎಂದರೆ ಅದರ ಹಿಂದಿರುವ ಕಾರ್ಪೊರೇಟ್ ವ್ಯಾಪಾರಿ ಉದ್ದೇಶ ಅರ್ಥವಾಗುತ್ತದೆ. (ವಿಕ ಒಂದೇ ಅಲ್ಲ ಎಲ್ಲಾ ವೃತ್ತ ಪತ್ರಿಕೆಗಳೂ ಸಹ ರಂಗಭೂಮಿ ಬಗ್ಗೆ ನಿರ್ಲಕ್ಷವನ್ನು ಹೊಂದಿವೆ. ವಾರಪತ್ರಿಕೆಯಲ್ಲಿ ‘ಅಗ್ನಿ’ ಪತ್ರಿಕೆ ಹೊರತು ಪಡಿಸಿ ಮಿಕ್ಕೆಲ್ಲಾ ಪತ್ರಿಕೆಗಳಿಗೆ ರಂಗಭೂಮಿ ಎಂದರೆ ಅಷ್ಟಕ್ಕಷ್ಟೇ.)
ಇಷ್ಟಕ್ಕೂ ಈ ನಾಟಕೋತ್ಸವದ ಹಿಂದಿರುವ ಉದ್ದೇಶವಾದರೂ ಏನು?. ಯುವಕರನ್ನು ಸೆಳೆಯುವುದು. ಈಗಿನ ಮಕ್ಕಳು ಪತ್ರಿಕೆ ಓದುತ್ತಿಲ್ಲ. ವಯಸ್ಸಾದವರು ಟಿವಿ ಬಿಟ್ಟು ಕದಲುತ್ತಿಲ್ಲ. ಇನ್ನು ಯುವಕರಾದವರನ್ನಾದರೂ ಪತ್ರಿಕೆಯತ್ತ ಆಕರ್ಷಿಸಲೇ ಬೇಕಾದ ಅನಿವಾರ್ಯತೆ ಇದೆ. ಆದ್ದರಿಂದಲೇ ಕಳೆದ ವರ್ಷ ‘ಯುವಗರ್ಜನೆ’ ಹೆಸರಲ್ಲಿ ನಾಟಕೋತ್ಸವ ಮಾಡಲಾಗಿತ್ತು. ಅದು ಪತ್ರಿಕೆ ಪ್ರಸಾರ ಸಂಖ್ಯೆ ಹೆಚ್ಚಿಸಿತೋ ಇಲ್ಲವೋ ಗೊತ್ತಿಲ್ಲ. ಆದರೆ ಜಾಹಿರಾತುದಾರರನ್ನಂತೂ ಆಕರ್ಷಿಸಿ ಪತ್ರಿಕೆಯ ಬೊಕ್ಕಸ ತುಂಬಿಸಿತ್ತು. ಇದರಿಂದ ಉತ್ತೇಜಿತರಾದ ಟೈಮ್ಸ್ ಗ್ರುಪ್ ಆಡಳಿತವು ಈ ವರ್ಷ ಸಹ ‘ಅಡ್ಜಸ್ಟ್ ಮಾಡ್ಕೋಬೇಡಿ’ ಕಿರುನಾಟಕೋತ್ಸವವನ್ನು ಆಯೋಜಿಸಿತ್ತು.
‘ಆಯ್ತು ಬಿಡಿ ಪತ್ರಿಕೆಯವರು ತಮ್ಮ ಲಾಭಕ್ಕಾಗಿಯೇ ಈ ನಾಟಕೋತ್ಸವ ಹಮ್ಮಿಕೊಳ್ಳಲಿ. ಅದೇ ನೆಪದಲ್ಲಿ ನಾಟಕಗಳಾದರೂ ಆದವಲ್ಲ. ಅಷ್ಟೊಂದು ಕಲಾವಿದರಿಗೆ ಅವಕಾಶ ಸಿಕ್ಕಿತಲ್ಲ. ಅದು ರಂಗಭೂಮಿಯಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದೆಯಲ್ಲಾ’ ಎಂದು ಸಮಾಧಾನ ಪಟ್ಟುಕೊಳ್ಳಬಹುದಾಗಿತ್ತು. ಆದರೆ ಆ ನಾಟಕೋತ್ಸದಲ್ಲಿ ಮೆರೆದಿರುವುದು ಕಾರ್ಪೊರೇಟ್ ಸಂಸ್ಕೃತಿ. ಈ ಕಾರ್ಪೊರೇಟ್ ಪತ್ರಿಕೋಧ್ಯಮದ ಹಿಡನ್ ಅಜೆಂಡಾ ಇದೇ ಆಗಿತ್ತು. ಜನಸಂಸ್ಕೃತಿಯನ್ನ ಕಾರ್ಪೊರೇಟ್ ಸಂಸ್ಕೃತಿಯನ್ನಾಗಿ ಬದಲಾಯಿಸುವುದೇ ಆ ಹಿಡನ್ ಅಜೆಂಡಾದ ಹಿಂದಿರುವ ಉದ್ದೇಶವಾಗಿತ್ತು. ಮೇಲ್ನೋಟಕ್ಕೆ ಇದನ್ನು ನಂಬಲು ಸಾಧ್ಯವಿಲ್ಲ ಎಂದಾದರೆ ಈ ನಾಟಕೋತ್ಸವದಲ್ಲಿ ಭಾಗವಹಿಸಿದ ತಂಡಗಳ ಹೆಸರನ್ನೊಮ್ಮೆ ಗಮನಿಸಿ. ಹೈ-5, ವಿ-ಮೂವ್, ಫೋರ್ತ್ ವಾಲ್, ತಾಹಟ್ಟೋ, ಸ್ಕ್ರೀನ್ ಪ್ಲೇ....
ಇವೆಲ್ಲಾ ಇಂಗ್ಲೀಷ್ ಹೆಸರುಳ್ಳ ತಂಡಗಳು. ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ
ಕೆಲಸಮಾಡುವಂತಹ ಹಾಗೂ ಮೇಲ್ಮಧ್ಯಮ ವರ್ಗದ ಯುವಕರ ಪಡೆ ಈ ನಾಟಕಗಳಲ್ಲಿ ಭಾಗವಹಿಸಿದ್ದರು. ಅಗ್ನಿದಿವ್ಯ, ನವೋದಯ... ಎನ್ನುವ ಹೆಸರಿನ ತಂಡಗಳೂ ಇದ್ದಾವೆಂಬುದು ಸಮಾದಾನಕರ. ಈ ನಾಟಕೋತ್ಸವದಲ್ಲಿ ಭಾಗವಹಿಸಿದ ಬಹುತೇಕ ಯುವಕರು ಆಧುನಿಕ ಜಾಗತೀಕರಣ ಯುಗದಿಂದ ಪ್ರಭಾವಿತರಾದವರು. ಹೇಗೆ ರಂಗಶಂಕರದಲ್ಲಿ ಒಂದು ರೀತಿಯ ಕಾರ್ಪೊರೇಟ್ ಸಂಸ್ಕೃತಿ ಜಾರಿಯಲ್ಲಿದೆಯೋ ಹಾಗೆಯೇ ಈ ವಿ.ಕ ನಾಟಕೋತ್ಸವದಲ್ಲೂ ಸಹ ಅದೇ ರೀತಿಯ ಸಂಸ್ಕೃತಿ ಕಂಡುಬಂದಿತು. ಇವರಲ್ಲಿ ಬಹುತೇಕರು ರಂಗಭೂಮಿಯ ಮೇಲಿನ ಪ್ರೀತಿಗಿಂತಲೂ ಕೇವಲ ಬಹುಮಾನ ಹಾಗೂ ಪ್ರಚಾರಕ್ಕಾಗಿ ಈ ನಾಟಕೋತ್ಸವದಲ್ಲಿ ತೊಡಗಿಸಿಕೊಂಡವರಿದ್ದರು. ಮಂಡ್ಯ ರಮೇಶರವರ ‘ಅಭಿನಯ’ ತಂಡ ಇದಕ್ಕೊಂದು ಅಪವಾದ. ಈ ‘ಅಭಿನಯ’ ತಂಡವನ್ನು ಹೊರತು ಪಡಿಸಿ ಬೇರೆಲ್ಲಾ ತಂಡಗಳು ಸಾಂದರ್ಭಿಕ ತಂಡಗಳಾಗಿವೆ.
ಕಾರ್ಪೊರೇಟ್ ಪತ್ರಿಕೆಯ ಹಿಡನ್ ಅಜೆಂಡಾ ಹಾಗೂ ವಿಸ್ತರಣಾ ಉದ್ದೇಶಗಳನ್ನು ಬದಿಗಿಟ್ಟು ಈ ನಾಟಕೋತ್ಸವ ಹಾಗೂ ಅದರಲ್ಲಿ ಪ್ರದರ್ಶನಗೊಂಡ ಕೆಲವು ಕಿರುನಾಟಕಗಳ ಕುರಿತು ನೊಡೋಣ. ‘ಅಡ್ಜಸ್ಟ್ ಮಾಡ್ಕೋಬೇಡಿ’ ಎನ್ನುವ ವಿಷಯವೇ ತುಂಬಾ ಅರ್ಥಪೂರ್ಣವಾಗಿದೆ. ನಮ್ಮ ಬದುಕಿನಲ್ಲಿ ಈ ಹೊಂದಾಣಿಕೆ ಎನ್ನುವುದು ಅನಿವಾರ್ಯ ಭಾಗವೇ ಆಗಿದೆ. ಎಲ್ಲಾ ಅನ್ಯಾಯಗಳನ್ನು ಸಹಿಸಿಕೊಂಡು, ಕಣ್ಣಮುಂದೆ ನಡೆಯುವ ಶೋಷಣೆಯನ್ನು ಗೊತ್ತಿದ್ದೂ ಉಪೇಕ್ಷಿಸಿ ಬದುಕುವ ಅನಿವಾರ್ಯತೆಯನ್ನು ಈ ವ್ಯವಸ್ಥೆ ಸೃಷ್ಟಿಮಾಡಿದೆ. ಭ್ರಷ್ಟಾಚಾರವಂತೂ ಸರ್ವಾಂತರವ್ಯಾಮಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ‘ಅಡ್ಜಸ್ಟ್ ಮಾಡ್ಕೋಬೇಡಿ’ ಎಂಬ ಆಲೋಚನೆ ಪ್ರಗತಿಶೀಲವೆನಿಸುತ್ತದೆ. ಈ ವಿಷಯದ ಕುರಿತು ಹತ್ತು ನಿಮಿಷಗಳ ಸ್ಕ್ರಿಪ್ಟ್ನ್ನು ಸ್ಪರ್ದೆಗೆ ಆಹ್ವಾನಿಸಲಾಗಿತ್ತು. ಅದಕ್ಕೆ ಬೇಕಾದಷ್ಟು ಕಂಡೀಷನ್ ಗಳನ್ನು ಹಾಕಲಾಗಿತ್ತು. ಅವರು ಹಾಕಿದ ನಿಬಂಧನೆಗಳನ್ನು ಪೂರೈಸಲು ಸಾಮಾನ್ಯ ರಂಗತಂಡಗಳಿಂದ ಅಸಾಧ್ಯವಾಗಿತ್ತು. ಅದಕ್ಕಾಗಿ ಹೈ ಪೈ ಯುವಕರ ತಂಡಗಳು ಭಾಗವಹಿಸಿದವು.
ಒಟ್ಟು ಐವತ್ತು ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿದ್ದವಂತೆ. ಕೊನೆಗೆ ಹದಿನೈದು ತಂಡಗಳು ಆಯ್ಕೆಯಾಗಿ ಅದರಲ್ಲಿ ಹನ್ನೆರಡು ತಂಡಗಳು ನಾಟಕಗಳನ್ನು ಪ್ರದರ್ಶಿಸಿದವು. ಮೇ ಒಂದರಂದು ಹೈ-5, ಹೆಚ್.ಎ.ಎಲ್ ಪೈನ್ ಆರ್ಟ್ಸ, ಪಂಚತಂತ್ರ, ಸುಮ್ಮನೆ, ಗುಲಾಬಿ, ವರ್ಷ ಹೆಗಡೆ ಆಂಡ್ ಕಂ., ಪ್ರವರ ಆರ್ಟ್ಸ ಸ್ಟುಡಿಯೋ.. ಹೀಗೆ ಆರು ತಂಡಗಳು ತಮ್ಮ ಕಿರು ನಾಟಕಗಳನ್ನು ಪ್ರದರ್ಶಿಸಿದರೆ, ಮೇ ಎರಡರಂದು ಅಜಿತ್ ಹಂದೇ ಆಂಡ್ ಕಂ., ತಹಾಟ್ಟೊ, ವಿ ಮೂವ್, ಅಭಿನಯ, ನವೋದಯ, ಸ್ಕ್ರೀನ್ ಪ್ಲೇ, ಫೋರ್ತ ವಾಲ್.. ಹೀಗೆ ಮತ್ತೆ ಆರು ತಂಡಗಳು ತಮ್ಮ ಕಿರು ನಾಟಕಗಳನ್ನು ಪ್ರದರ್ಶಿಸಿದವು. ಈ ಹನ್ನೆರಡು ನಾಟಕಗಳಲ್ಲಿ ಐದು ಉತ್ತಮ ನಾಟಕಗಳನ್ನು ಆಯ್ಕೆ ಮಾಡಿ ಮೇ ಮೂರರ ಮರು ಪ್ರದರ್ಶನಗೊಳಿಸಲಾಯಿತು. ಅದರಲ್ಲಿ ವಿ ಮೂವ್ ತಂಡದ ‘ಮೂರು ಹಂಪ್ಗಳು’ ನಾಟಕ ಮೊದಲ ಬಹುಮಾನ ಪಡೆದರೆ, ಎರಡನೇ ಬಹುಮಾನ ಮೈಸೂರಿನ ‘ಅಭಿನಯ’ ತಂಡದ ‘ಅಗ್ನಿದಿವ್ಯ’ ನಾಟಕದ ಪಾಲಾಯಿತು. ಮೂರನೆ ಬಹುಮಾನವನ್ನು ಪಡೆದಿದ್ದು ಫೋರ್ತ್ವಾಲ್ ತಂಡದ ‘ಚಿಲ್ಲರೆ ಪ್ರಹಸನ’ ನಾಟಕ. ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದು ತಾಹಟ್ಟೋ ತಂಡದ ‘ರೈಟಾ ಲೆಪ್ಟಾ’, ಸಮಾಧಾನಕರ ಬಹುಮಾನ ಅಜಿತ್ ಹಂದೆ ತಂಡದ ‘ಇಲ್ಲಿ ಹೇಸಿಗೆ ಮಾಡಬಾರದು’ ನಾಟಕ. ಈ ನಾಟಕಗಳ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಮೂರು ಹಂಪ್ಗಳು : ಅಭಿಷೇಕ್ ಅಯ್ಯಂಗಾರ್ ನಿರ್ದೇಶನದ ಈ ನಾಟಕ ಮೂರು ವ್ಯಕ್ತಿಗಳ ಅಡ್ಜೆಸ್ಟ್ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆ. ಒಂದೇ ಸೀಟಿನಲ್ಲಿ ಕುಳಿತು ಬಸ್ಸೊಂದರಲ್ಲಿ ಇಬ್ಬರು ಯುವಕರು ಹಾಗೂ ಒಬ್ಬಳು ಯುವತಿ ಪ್ರಯಾಣಿಸುತ್ತಿರುತ್ತಾರೆ. ಹಂಪ್ ಬಂದಾಗ ಬಸ್ಸಿನ ಡ್ರೈವರ್ ಬ್ರೇಕ್ ಹಾಕಿದಾಗಲೆಲ್ಲಾ ಒಬ್ಬೊಬ್ಬರು ಎದ್ದು ಹೊರಗೆ ಬಂದು ತಮ್ಮ ಅನುಭವವನ್ನು ನಿವೇದಿಸಿಕೊಂಡು ಮತ್ತೆ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ಮೊದಲಿನವ ತನಗೆ ಬದುಕಿನುದ್ದಕ್ಕೂ ಓದುವುದರಲ್ಲಿ, ನೌಕರಿಯಲ್ಲಿ ಅಯ್ಕೆ ಸ್ವಾತಂತ್ರ್ಯವಿಲ್ಲದೇ ಎಲ್ಲದಕ್ಕೂ ಅಡ್ಜೆಸ್ಟ್ ಮಾಡಿಕೊಂಡೇ ಬದುಕುತ್ತಿರುವುದನ್ನು ಅವಲತ್ತುಕೊಳ್ಳುತ್ತಾನೆ. ಇನ್ನೊಬ್ಬ ಸಾಹಿತಿ. ತನಗಿಷ್ಟವಿಲ್ಲದಿದ್ದರೂ ಸಿನೆಮಾ ಜನರಿಗಾಗಿ ಏನೆನೆಲ್ಲಾ ಅಡ್ಜೆಸ್ಟ್ ಮಾಡಿಕೊಂಡು ಬರೆಯಬೇಕಾಯಿತು ಎನ್ನುವುದನ್ನು ವಿವರಿಸುತ್ತಾನೆ. ಕೊನೆಗೆ ಆ ಯುವತಿ ಪುರುಷ ಪ್ರಧಾನ ಸಮಾಜದಲ್ಲಿ ಕುಂಟುಂಬದಲ್ಲಿ ಸಮಾಜದಲ್ಲಿ ಏನೆನೆಲ್ಲಾ ಅನುಭವಿಸಿ ಅನಿವಾರ್ಯತೆಗೊಳಗಾಗಿ ಅಡ್ಜಸ್ಟ್ ಮಾಡಿಕೊಳ್ಳಬೇಕಾಯಿತು ಎಂಬ ಮಹಿಳೆಯರ ಕಷ್ಟವನ್ನು ತೋಡಿಕೊಳ್ಳುತ್ತಾಳೆ. ಅಚ್ಚರಿಯ ವಿಷಯವೇನೆಂದರೆ ಈ ಕಿರುನಾಟಕಕ್ಕೆ ಮೊದಲ ಬಹುಮಾನ ಬಂದಿದ್ದು. ಈ ನಾಟಕದಲ್ಲಿ ಕ್ರಿಯೆ ಸಕ್ರೀಯವಾಗಿಲ್ಲ. ಮೂರು ಜನರು ಏಕವ್ಯಕ್ತಿಪ್ರಯೋಗದ ಹಾಗೆ ಪ್ರತ್ಯೇಕವಾಗಿ ಬಂದು ತಮ್ಮ ಅನುಭವ ಹೇಳಿಕೊಳ್ಳುವುದನ್ನೇ ನಾಟಕವಾಗಿಸಿದ್ದಾರೆ. ಈ ಮೂವರ ಅನುಭವಗಳು ಒಂದಕ್ಕೊಂದು ಸಂಬಂಧವಿಲ್ಲ. ಅಡ್ಜಸ್ಟ್ ಮಾಡ್ಕೋಬೇಡಿ ಎನ್ನುವ ನಾಟಕೋತ್ಸವದಲ್ಲಿ ತಾವು ಅಡ್ಜಸ್ಟ್ ಮಾಡಿಕೊಂಡು ಬದುಕುತ್ತಿರುವುದನ್ನೇ ಈ ಎಲ್ಲಾ ಪಾತ್ರಗಳೂ ಹೇಳುತ್ತವೆ. ವಸ್ತು ಸ್ಥಿತಿ ಹೇಳುವ ಪಾತ್ರಗಳು ಆ ಪರಿಸ್ಥಿತಿಯಿಂದಾ ಬಂಡಾಯವೇನೂ ಏಳುವುದಿಲ್ಲ. ಹೀಗೆ... ನಾಟಕೀಯತೆ ಹಾಗೂ ಚಲನಶೀಲತೆ ಇಲ್ಲದ ಕಿರುನಾಟಕವೊಂದು ಮೊದಲ ಬಹುಮಾನ ಪಡೆದದ್ದು ವಿಸ್ಮಯದ ವಿಷಯ.
ಅಗ್ನಿದಿವ್ಯ : ಮೈಸೂರಿನ ಮಂಡ್ಯ ರಮೇಶರವರ ಅಭಿನಯ ತಂಡಕ್ಕೆ ಮೇಘ ಸಮೀರರವರು ಈ ಕಿರುನಾಟಕವನ್ನು ನಿರ್ದೇಶಿಸಿದ್ದಾರೆ. ಜಾಗತೀಕರಣದ ಸಂದರ್ಭದಲ್ಲಾಗುವ ಸರಕು ಸಂಸ್ಕೃತಿಯ ದುಷ್ಪರಣಾಮವನ್ನು ಪರಿಣಾಮಕಾರಿಯಾಗಿ ಹೇಳುವ ಪ್ರಯತ್ನ ಈ ನಾಟಕದಲ್ಲಿದೆ. ಈ ಪ್ರಯೋಗ ಪಕ್ಕ ಬೀದಿನಾಟಕದ ಶೈಲಿಯಲ್ಲಿದೆ. ಹೀಗಾಗಿ ಬೀದಿನಾಟಕವೊಂದನ್ನು ರಂಗವೇದಿಕೆಯ ಮೇಲೆ ಅಭಿನಯಿಸಲಾಗಿದೆ. ಮಾಲ್ ಸಂಸ್ಕೃತಿ ಬಂದು ಜನರಲ್ಲಿ ಕೊಳ್ಳುಬಾಕತೆಯನ್ನು ಹುಟ್ಟಿಸುವುದನ್ನು ಮಾರ್ಮಿಕವಾಗಿ ಈ ನಾಟಕ ವಿಡಂಬನಾತ್ಮಕವಾಗಿ ಹೇಳುತ್ತದೆ. ವಿದೇಶಿ ಕಂಪನಿಗಳು ಬಂದು ಇಲ್ಲಿಯ ಜನರ ಭೂಮಿಯನ್ನು ಖರೀದಿಸಿ, ಇಲ್ಲಿನ ರೈತರು ಬೆಳೆದ ಉತ್ಪನ್ನಗಳನ್ನೇ ಬಳಸಿ ಲಾಭಮಾಡಿಕೊಳ್ಳುತ್ತಿರುವುದು ಹಾಗೂ ಪ್ಯಾಶನ್ ಸಂಸ್ಕೃತಿಯನ್ನು ಬೆಳೆಸಿ ತಮ್ಮ ಸರಕುಗಳನ್ನು ಬಿಕರಿ ಮಾಡಲು ಯತ್ನಿಸುವುದನ್ನು ಲೇವಡಿಮಾಡಲಾಗಿದೆ. ಈಗಾಗಲೇ ಈ ಶೋಷಕ ಕಂಪನಿಗಳಿಂದ ತೊಂದರೆಗೊಳಗಾಗಿರುವವರು ಮತ್ತೆ ಕಾಲವನ್ನು ಹಿಮ್ಮುಖವಾಗಿ ಭೂತಕಾಲದಲ್ಲಿ ಚಲಿಸಿ ಬಂಡವಾಳಶಾಹಿಗಳನ್ನು ನಿರಾಕರಿಸಿ ಅವರ ಮುಖವಾಡಗಳನ್ನು ಬೆತ್ತಲೆಗೊಳಿಸುವುದು ಈ ಕಿರುನಾಟಕದ ವೈಶಿಷ್ಟವಾಗಿದೆ. ಇಡೀ ನಾಟಕೋತ್ಸವದಲ್ಲಿ ಜಾಗತಿಕವಾಗಿ ಆಲೋಚಿಸಿ ಜನತೆಯ ನಿಜವಾದ ಶತ್ರುಗಳನ್ನು ಸರಿಯಾಗಿ ಗುರುತಿಸಿ ‘ಅಗ್ನಿದಿವ್ಯ’ ನಾಟಕ ಕಟ್ಟಿಕೊಟ್ಟ ಅಭಿನಯ ತಂಡದ ಜನಪರ ಕಾಳಜಿ ಅಭಿನಂದನಾರ್ಹ. ಬೇರೆಲ್ಲಾ ವಿಷಯದಲ್ಲಿ ಅಡ್ಜೆಸ್ಟ್ ಮಾಡಿಕೊಂಡರೂ ಈ ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳ ಲೂಟಿಕೋರ ಉದ್ಯಮದ ಪರವಾಗಿ ಅಡ್ಜೆಸ್ಟ್ ಮಾಡಿಕೊಂಡರೆ ಮಾರಕವೆನ್ನುವುದು ಈ ನಾಟಕದ ಆಶಯವಾಗಿದೆ. ವಿಷಯವನ್ನಾಧರಿಸಿ ನೋಡಿದರೆ ಈ ಕಿರುನಾಟಕಕ್ಕೆ ಮೊದಲ ಬಹುಮಾನ ಬರಬೇಕಿತ್ತು. ಶೈಲಿಯನ್ನಾಧರಿಸಿ ತೀರ್ಪಿತ್ತಿದ್ದರೆ ಪ್ರಿಸೀನಿಯಂ ವೇದಿಕೆಯಲ್ಲಿ ಬೀದಿನಾಟಕ ಮಾಡಿದ್ದರಿಂದ ಕೊಟ್ಟ ಕೊನೆಯ ಸ್ಥಾನ ಸಿಗಬೇಕಾಗಿತ್ತು. ಏನೇ ಆದರೂ ಈ ಕಿರುನಾಟಕೋತ್ಸವದಲ್ಲಿ ವೈಚಾರಿಕ ನಾಟಕವಾಗಿ ‘ಅಗ್ನಿದಿವ್ಯ’ ಮೂಡಿಬಂದಿದೆ. ಅಭಿನಯದಲ್ಲೂ ನಟರು ವೃತ್ತಿಪರತೆಯನ್ನು ತೋರಿದ್ದಾರೆ. ನಾಟಕದ ಮೂಲಕ ಜನತೆಯಲ್ಲಿ ಜಾಗೃತಿಯನ್ನುಂಟುಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಲ್ಲರೆ ಪ್ರಹಸನ : ಜಯದೇವ್ರವರು ನಿರ್ದೇಶಿಸಿದ ಈ ಕಿರುನಾಟಕ ಚಿಲ್ಲರೆ ಸಮಸ್ಯೆಯನ್ನು ಬಿಂಬಿಸುತ್ತದೆ. ಟೋಲ್ಗೇಟ್ನಲ್ಲಿ ಹಣ ಪಡೆದು ಚಿಲ್ಲರೆ ಬದಲು ಚಾಕಲೆಟ್ ಕೊಡುವುದು ಮಾಮೂಲಿ. ಆದರೆ ಹಾಗೆ ಒಂದು ಗೇಟ್ ನಲ್ಲಿ ಚಾಕಲೇಟ್ ಪಡೆದು ಇನ್ನೊಂದು ಗೇಟಿನಲ್ಲಿ ಚಿಲ್ಲರೆ ಬದಲು ಅದೇ ಚಾಕಲೆಟನ್ನು ಕೊಡುವ ಹೊಸ ಕಾನ್ಸೆಪ್ಟನ್ನು ಈ ಕಿರುನಾಟಕ ಹೇಳುತ್ತದೆ. ಸಿಟಿಬಸ್ ಪ್ರಯಾಣಿಕರಲ್ಲಿ ಚಿಲ್ಲರೆ ಇಲ್ಲದಾಗ ಕಂಡಕ್ಟರ್ ಟಿಕೆಟ್ ಹಿಂದೆ ಬಾಕಿ ಹಣ ಬರೆದುಕೊಡುತ್ತಾನೆ. ಆಗ ನೆನಪಿಸಿಕೊಂಡು ಚಿಲ್ಲರೆ ತೆಗೆದುಕೊಳ್ಳದ ಪ್ರಯಾಣಿಳೊಬ್ಬಳು ಮರೆತು ಕೆಳಗಿಳಿದು ಬೇರೊಂದು ಬಸ್ನಲ್ಲಿ ಪ್ರಯಾಣಿಸುವಾಗ ಚಿಲ್ಲರೆ ಬದಲಾಗಿ ಹಳೆ ಬಸ್ಸಿನ ಟಿಕೇಟನ್ನೇ ಕೊಟ್ಟು ಬಿಎಂಟಿಸಿ ಮೇಲೆ ಸೇಡು ತೀರಿಸಿಕೊಳ್ಳುತ್ತಾಳೆ. ಇದು ಅವಾಸ್ತವ ಉಪಾಯವೆನ್ನಿಸಿದರೂ ಲೇವಡಿ ಮಾಡಿ ನಗೆ ಹುಟ್ಟಿಸುವಲ್ಲಿ ಸಫಲವಾಗಿದೆ. ಆಟೋ ಹತ್ತಿದ ಮಹಿಳೆಯರಿಗೆ ಚಿಲ್ಲರೆ ಕೊಡದೇ ಸತಾಯಿಸುವ ಆಟೋ ಚಾಲಕನನ್ನು ತಮ್ಮ ಮಾತಿನಲ್ಲೇ ಮಣಿಸಿ ಚಿಲ್ಲರೆ ಒಸೂಲಿ ಮಾಡಲಾಗುತ್ತದೆ. ಹೀಗೆ ಹಣ ಕೊಟ್ಟು ಚಿಲ್ಲರೆ ಕೊಡದಿದ್ದರೆ ಅಡ್ಜೆಸ್ಟ್ ಮಾಡಿಕೊಳ್ಳದೇ ಬಾಕಿ ಮೊತ್ತವನ್ನು ವಸೂಲಿ ಮಾಡಲೇ ಬೇಕು. ಚಿಕ್ಕಪುಟ್ಟ ಶೋಷಣೆಗಳನ್ನೂ ಸಹ ಸಹಿಸಿಕೊಳ್ಳದೇ ಎದುರಿಸಿ ಗೆಲ್ಲಬೇಕು ಎನ್ನುವ ಸಂದೇಶವನ್ನು ಫೋರ್ತ ವಾಲ್ ತಂಡದ ಈ ‘ಚಿಲ್ಲರೆ ಪ್ರಹಸನ’ ಕೊಡುತ್ತದೆ. ಅಭಿನಯ ಹಾಗೂ ದೃಶ್ಯ ಸಂಯೋಜನೆ ದೃಷ್ಟಿಯಿಂದ ಈ ನಾಟಕ ಗಮನಾರ್ಹವಾಗಿದೆ. ಈ ನಾಟಕದಲ್ಲಿ ಕ್ರಿಯೆ ಇದೆ, ಚಲನಶೀಲತೆ ಇದೆ ಮತ್ತು ನಾಟಕೀಯತೆಯೂ ಇದೆ. ಹೀಗಾಗಿ ಇದನ್ನು ಕಿರುನಾಟಕವೆಂದು ಪರಿಗಣಿಸಬಹುದು. ಆದರೆ ಆಯ್ದುಕೊಂಡ ವಸ್ತು-ವಿಷಯ ತುಂಬಾ ಪೇರಲವಾಗಿದೆ. ಚಿಕ್ಕ ಚಿಲ್ಲರೆ ವಿಷಯವನ್ನು ನಿರೂಪಿಸಿ ಪ್ರದರ್ಶಿಸಿದ ರೀತಿಗಾಗಿ ಇದಕ್ಕೆ ಬಹುಮಾನ ಕೊಡಬಹುದಾಗಿದೆ. ಹಾಗೂ ಮೂರನೇ ಬಹುಮಾನವೂ ಸಂದಿದೆ.
ರೈಟಾ ಲೆಪ್ಟಾ : ಪ್ರಶಾಂತ ನಾಯರ್ ನಿರ್ದೇಶಿಸಿದ ಈ ಕಿರುನಾಟಕವನ್ನು ನಾಟಕ ಎನ್ನಬಹುದಾ? ಎನ್ನುವ ಸಂದೇಹ ಕಾಡುತ್ತದೆ. ಇದರಲ್ಲಿ ನಾಟಕಕ್ಕೆ ಪೂರಕವಾದ ಯಾವುದೇ ಅಂಶಗಳಿಲ್ಲ. ಕ್ರಿಯೆಯೂ ಇಲ್ಲಾ, ಪ್ರತ್ಯಕ್ಷ ಪ್ರತಿಕ್ರಿಯೆಯೂ ಇಲ್ಲ. ನಾಟಕೀಯತೆಯೂ ಇಲ್ಲ, ಚಲನಶೀಲತೆಯಂತೂ ಮೊದಲೇ ಇಲ್ಲ. ಒಂದು ಅಟೋ. ಅದರ ಡ್ರೈವರ್ ವೇದಿಕೆಯ ಬಲಭಾಗದಲ್ಲಿ ಕೂತು ಆಟೋ ಓಡಿಸುತ್ತಿದ್ದರೆ, ಪ್ಯಾಸೆಂಜರ್ ಆತನಿಂದ ಹದಿನೈದು ಅಡಿ ದೂರದಲ್ಲಿ ವೇದಿಕೆಯ ಎಡಬಾಗದಲ್ಲಿ ಬೆಂಚ್ ಮೇಲೆ ಕುಳಿತಿರುತ್ತಾನೆ. ಆಟೋದಲ್ಲಿ ಡ್ರೈವರ್ ಹಿಂದೆ ಪ್ಯಾಸೆಂಜರ್ ಕುಳಿತಿದ್ದಾನೆಂದು ಪ್ರೇಕ್ಷಕರು ತಿಳಿದುಕೊಳ್ಳಬೇಕು. ಇದೆನೋ ಸರಿ ಆದರೆ ಇಬ್ಬರೂ ದೂರದಲ್ಲಿ ಕುಳಿತುಕೊಂಡು ಶೂನ್ಯದಲ್ಲಿ ಮಾತಾಡುವವರ ಹಾಗೆ ಸಂಭಾಷಣೆ ಮಾಡುತ್ತಾರೆ. ಆತ ಅನಿವಾಸಿ ಬೆಂಗಳೂರಿನವನು. ಬಹುದಿನಗಳ ನಂತರ ಬೆಂಗಳೂರಿಗೆ ಬಂದಿದ್ದಾನೆ. ಬೆಂಗಳೂರಿನ ಸಿಟಿ ಮೆಂಟಾಲಿಟಿ ಬಗ್ಗೆ, ಕನ್ನಡ ಕಲ್ಚರ್ ಬಗ್ಗೆ, ಇಲ್ಲಿಯ ಯುವತಿಯರ ಡ್ರೆಸ್ ಬಗ್ಗೆ ಮಾತು ಬೆಳೆಯುತ್ತಾ ಹೋಗುತ್ತದೆ. ಪ್ಯಾಸೆಂಜರ್ ಹೇಳಿದ ಮಾತುಗಳನ್ನೆಲ್ಲಾ ನಿರಾಕರಿಸುವ ಡ್ರೈವರ್ ತನ್ನದೇ ಆದ ರೀತಿಯಲ್ಲಿ ಸಮರ್ಥನೆಗಳನ್ನು ಕೊಡುತ್ತಾನೆ. ಕೊನೆಗೆ ಇಬ್ಬರೂ ಅದಲು ಬದಲಾಗುವ ಮೂಲಕ ನಾಟಕ ಅಂತ್ಯವಾಗುತ್ತದೆ. ಇಡೀ ನಾಟಕದಲ್ಲಿ ಅಭಿನಯವೇ ಇಲ್ಲ. ಮಾತು ಮಾತು ಮಾತೇ ನಾಟಕವಾಗಿದೆ. ತುಂಬಾ ಡ್ರೈ ಎನ್ನಬಹುದಾದ ಸ್ಕ್ರಿಪ್ಟ್. ಆದರೂ ಈ ನಾಟಕ ಕಿರುನಾಟಕೋತ್ಸವದಲ್ಲಿ ತೀರ್ಪುಗಾರರ ಮೆಚ್ಚುಗೆಯ ಬಹುಮಾನ ಪಡೆದದ್ದು ತೀರ್ಪುಗಾರರ ಪ್ರಶ್ನಾರ್ಹವಾಗಿದೆ. ಕ್ರಿಯೆ-ಅಭಿನಯ-ನಾಟಕೀಯತೆ ನಾಟಕದ ಮೂರು ಪ್ರಮುಖ ಅಂಗಗಳು. ಈ ಯಾವ ಅಗತ್ಯವನ್ನೂ ಪೂರೈಸದ ರೈಟಾ ಲೆಪ್ಟಾ’ ನಾಟಕವನ್ನು ನಾಟಕವೆಂದು ಪರಿಗಣಿಸಿ ಬಹುಮಾನವನ್ನೂ ಕೊಟ್ಟ ತೀರ್ಪುಗಾರರ ತೀರ್ಪು ರೈಟಾ...ಇಲ್ಲವೇ ರಾಂಗಾ? ಎಂದು ಪ್ರಶ್ನಿಸುವ ಹಾಗಿದೆ. ಹಾಗೂ ನಾಟಕದ ಎಲ್ಲಾ ಅಂಶಗಳಿರುವ ಬೇರೆ ಅರ್ಹ ನಾಟಕಗಳನ್ನು ಬಹುಮಾನ ವಂಚಿತರನ್ನಾಗಿಸಿದಂತಾಗಿದೆ.
ಇಲ್ಲಿ ಹೇಸಿಗೆ ಮಾಡಬಾರದು : ಅಜಿತ್ ಹಂದೆ ನಿರ್ದೇಶನದ ಈ ಕಿರುನಾಟಕ ಸಾರ್ವಜನಿಕ ಜಾಗಗಳ ಸೌಂದರ್ಯವನ್ನು ಹಾಳುಮಾಡುವವರನ್ನು ಲೇವಡಿ ಮಾಡುತ್ತದೆ. ಈ ಕಿರುನಾಟಕದ ವಿಶೇಷವೇನೆಂದರೆ ಬಿಬಿಎಂಪಿ ಯು ರಸ್ತೆ ಬದಿಯಲ್ಲಿ ನಗರದ ಸೌಂದರ್ಯವನ್ನು ಹೆಚ್ಚಿಸಲು ಬಿಡಿಸಿದ ಕಲಾತ್ಮಕ ಚಿತ್ರಗಳೇ ಪಾತ್ರಗಳಾಗಿ ಜೀವತಳೆದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದು. ಚಿತ್ರಬಿತ್ತಿಯ ಪಾತ್ರಗಳು ತಮ್ಮ ಮುಖದ ಮೇಲೆ ಪೋಸ್ಟರ್ ಅಂಟಿಸುವುದನ್ನು ವಿರೋದಿಸುತ್ತವೆ. ಕುಡಿದು ಬಂದು ತಮ್ಮ ಮೇಲೆ ಮೂತ್ರ ಮಾಡಿದವರ ಮೇಲೆ ಮೂತ್ರ ಮಾಡುತ್ತವೆ. ಹೀಗೆ ಸಾರ್ವಜನಿಕ ಗೋಡೆಗಳ ಮೇಲೆ ಮನುಷ್ಯರು ಮಾಡುವ ಗಲೀಜನ್ನು ವಿಡಂಬನಾತ್ಮಕವಾಗಿ ಹೇಳುವ ಕ್ರಿಯಾಶೀಲ ಪ್ರಯತ್ನವನ್ನು ಈ ನಾಟಕ ಮಾಡುತ್ತದೆ. ಇದು ಪಕ್ಕಾ ಅವಾಸ್ತವಿಕ ಕಲ್ಪನೆಯ ನಾಟಕವಾದರೂ ಆ ಮೂಲಕ ನೋಡುಗರಲ್ಲಿ ನಗರ ಸೌಂದರ್ಯ ಹಾಳುಮಾಡಬಾರದು ಎನ್ನುವ ಪಾಠವನ್ನು ಹೇಳಿಕೊಡುತ್ತದೆ. ಸ್ಥಿರ ಚಿತ್ರಗಳು ಪಾತ್ರವಾಗಿ ಚಲನೆಗೊಳಗಾಗಿ ಒಬ್ಬರಿಗೊಬ್ಬರು ಹೇಳುವ ಪಂಚ್ ಡೈಲಾಗ್ಗಳು ನೋಡುಗರನ್ನು ನಗೆಗಡೆಲಲ್ಲಿ ತೇಲಿಸುತ್ತವೆ. ಸತ್ತ ಬಿತ್ತಿಚಿತ್ರಗಳು ಪಾತ್ರವಾಗುವ ಪರಿಕಲ್ಪನೆಯಿಂದಾಗಿ ಈ ನಾಟಕ ವಿಶಿಷ್ಟವೆನಿಸುತ್ತದೆ. ನಾಟಕೀಯ ಸಮೃದ್ದತೆ ತುಂಬಿದೆ. ಪಾತ್ರವೊಂದು ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತಾಡುವ ರೀತಿ ಅದರಿಂದ ಹುಟ್ಟುವ ನಗು ಪ್ರೇಕ್ಷಕರಲ್ಲಿ ಆತ್ಮೀಯತೆಯನ್ನುಂಟು ಮಾಡುತ್ತದೆ. ಕ್ರಿಯೆ ಪ್ರತಿಕ್ರಿಯೆ ನಾಟಕೀಯತೆ ಅಭಿನಯಗಳಿಂದ ಇದೊಂದು ಪಕ್ಕಾ ಕಿರುನಾಟಕವೆನ್ನಿಸುತ್ತದೆ. ಮೂವರು ಯುವತಿಯರು ಹಾಗು ಒಬ್ಬ ಗಂಡಸು ಹೀಗೆ ಒಟ್ಟು ನಾಲ್ಕೇ ಜನರ ಈ ಟೀಮ್ ಉತ್ತಮ ಅಭಿನಯವನ್ನು ನೀಡಿದೆ. ಎಲ್ಲಾ ವಿಭಾಗಗಳಲ್ಲಿ ಪರಿಪೂರ್ಣ ಕಿರುನಾಟಕವೆನ್ನಬಹುದಾದ ಇದರ ಏಕೈಕ ದೌರ್ಬಲ್ಯವೆಂದರೆ ಕೊಟ್ಟ ವಿಷಯವನ್ನು ಬಿಟ್ಟು ಬಾಕಿಯದ್ದನ್ನೆಲ್ಲಾ ಹೇಳಿರುವುದು. ‘ಅಡ್ಜಸ್ಟ್ ಮಾಡಿಕೊಬೇಡಿ’ ಎನ್ನುವ ಥೀಮ್ ಈ ನಾಟಕದಲ್ಲಿ ಸಮರ್ಥವಾಗಿ ದ್ವನಿಸುವುದಿಲ್ಲ. ಇದರಿಂದಾಗಿಯೇ ಮೊದಲ ಬಹುಮಾನಕ್ಕೆ ಸೂಕ್ತವಾದ ಈ ನಾಟಕ ಸಮಾಧಾನಕರ ಬಹುಮಾನಕ್ಕೆ ಸಮಾಧಾನ ಹೊಂದಿದೆ.
ಈ ಮೇಲಿನ ಐದೂ ಬಹುಮಾನಿತ ನಾಟಕಗಳನ್ನು ಹೊರತುಪಡಿಸಿ ‘ಗುಂಡಿ ಗೋವಿಂದ’ ಎನ್ನುವ ಇನ್ನೊಂದು ಉತ್ತಮ ನಾಟಕ ಈ ಕಿರುನಾಟಕೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ರೈಟೋ ಲೆಪ್ಟೋ ಎನ್ನುವಂತಹ ನಾಟಕವಲ್ಲದ ನಾಟಕವನ್ನು ಪರಿಗಣಿಸಿ ತೀರ್ಪುಗಾರರ ಬಹುಮಾನ ಕೊಟ್ಟ ತೀರ್ಪುಗಾರರು ಉತ್ತಮ ಕಿರುನಾಟಕವೊಂದನ್ನು ಉಪೇಕ್ಷಿಸಿದ್ದು ಅಚ್ಚರಿ ಎನಿಸುತ್ತದೆ. ಪ್ರೇಕ್ಷಕರ ಅಭಿಪ್ರಾಯಕ್ಕೂ ತೀರ್ಪುಗಾರರ ಆಯ್ಕೆಗೂ ತುಂಬಾ ವ್ಯತ್ಯಾಸವಿರುವುದು ಬಹುಮಾನ ಘೋಷಣೆಯಾದಾಗ ಬಯಲಾಯಿತು. ಬಹುಷಃ ‘ಗುಂಡಿ ಗೋವಿಂದ’ ನಾಟಕಕ್ಕೆ ಪ್ರೇಕ್ಷಕರ ಆಯ್ಕೆ ಪ್ರಶಸ್ತಿಯಾದರೂ ದೊರೆಯಲೇ ಬೇಕಿತ್ತು. ಆದರೂ ಆ ನಾಟಕ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ.
ಗುಂಡಿ ಗೋವಿಂದ : ನವೋದಯ ತಂಡ ಪ್ರದರ್ಶಿಸಿದ ಈ ಕಿರುನಾಟಕವನ್ನು ಪೂರ್ಣಚಂದ್ರ ತೇಜಸ್ವಿ ರಚಿಸಿ ನಿರ್ದೇಶಿಸಿ ನಟಿಸಿದ್ದಾರೆ. ಗೋವಿಂದೇಗೌಡನ ತಾಯಿಗೆ ತೀವ್ರ ಅನಾರೋಗ್ಯ, ಕಾರಲ್ಲಿ ಕರೆದುಕೊಂಡು ಹೋಗಬೇಕೆಂದರೆ ರಸ್ತೆ ಎಲ್ಲಾ ಗುಂಡಿ ಅಗೆದಿದ್ದಾರೆ. ಅಂಬುಲೆನ್ಸಗೆ ಪೋನ್ ಮಾಡಿದರೆ ಆ ಏರಿಯಾಗೆ ಬರೋದಿಲ್ಲ ಅಂತಾರೆ. ಹೇಗೋ ಡಾಕ್ಟರನ್ನು ಸಂಪರ್ಕಿಸಿ ಇರುವ ಸಮಸ್ಯೆಯನ್ನು ಹೇಳಿ ಒಪ್ಪಿಸಲಾಗುತ್ತದೆ. ಹೇಗೋ ಬಂದು ಟ್ರೀಟಮೆಂಟ್ ಕೊಟ್ಟ ಡಾಕ್ಟರು ರೋಗಿಯನ್ನು ಉಳಿಸುತ್ತಾರೆ. ಮರಳಿ ಮನೆಗೆ ಹೋಗುವಾಗ ಗುಂಡಿಯಲ್ಲಿ ಬಿದ್ದು ಕಾಲು ಮುರಿದುಕೊಳ್ಳುತ್ತಾರೆ. ಟಿವಿಯವರು ಲೈವ್ ವರದಿ ಮಾಡಲು ಬರುತ್ತಾರೆ. ಡಾಕ್ಟರ ಪೋನ್ ಕರೆಗೆ ಸ್ಪಂದಿಸಿದ ಅಂಬುಲೆನ್ಸ್ ನವನು ಬಂದು ಗುಂಡಿಯಲ್ಲಿ ವೆಹಿಕಲ್ ಸಮೇತ ಬೀಳುತ್ತಾನೆ. ಕೊನೆಗೆ ಕೆಲವರು ಹೊತ್ತುಕೊಂಡೇ ಡಾಕ್ಟರನ್ನು ಶವದ ವಾರ್ಡಗೆ ಸೇರಿಸುತ್ತಾರೆ. ಕೊನೆಗೆ ಅಲ್ಲಿ ನೆರೆದ ಜನರು ಬರೀ ಅಡ್ಜಸ್ಟ್ ಮಾಡಿಕೊಂಡು ಬದುಕಿದರೆ ಇಲ್ಲವೇ ವ್ಯಕ್ತಿಗತವಾಗಿ ವಿರೋಧಿಸಿದರೆ ಏನೂ ಪ್ರಯೋಜನವಿಲ್ಲ. ಎಲ್ಲರೂ ಸೇರಿ ಒಗ್ಗಟ್ಟಾಗಿ ಪ್ರತಿಭಟಿಸಿ ನ್ಯಾಯ ಪಡೀಬೇಕು ಎಂದು ನಿರ್ಧರಿಸುವ ಮೂಲಕ ನಾಟಕ ಅಂತ್ಯವಾಗುತ್ತದೆ. ಇಡೀ ಕಿರುನಾಟಕೋತ್ಸವದಲ್ಲಿ ಪರ್ಪೆಟ್ ಆಗಿರುವ ನಾಟಕ ಎಂದರೆ ಈ ‘ಗುಂಡಿಗೋವಿಂದ’ ನಾಟಕವೇ. ಒಂದು ವಿಡಂಬನಾತ್ಮಕ ಕಥಾನಕವಿದೆ. ಹಲವಾರು ನಾಟಕೀಯ ದೃಶ್ಯಗಳಿವೆ, ಹೊಟ್ಟೆ ಹುಣ್ಣಾಗುವಂತೆ ನಗಿಸುವ ಶುದ್ಧ ಹಾಸ್ಯವಿದೆ. ವ್ಯವಸ್ಥೆಯ ವಿಡಂಬನೆಯಿದೆ, ಹಲವಾರು ಪಾತ್ರಗಳಿದ್ದಾವೆ. ಹಾಡು ಸಂಗೀತವೂ ಮೇಳೈಸಿದೆ. ಸೆಟ್ ಪ್ರಾಪರ್ಟಿಗಳಿದ್ದಾವೆ. ಅದ್ಬುತವಾದ ಟೈಮಿಂಗ್ ಇರುವ ಅಭಿನಯವಿದೆ. ಕೊನೆಗೆ ‘ಒಬ್ಬೊಬ್ಬರೆ ಅಡ್ಜಸ್ಟ್ ಮಾಡಿಕೊಳ್ಳದೇ ದ್ವನಿಎತ್ತಿದರೆ ಪ್ರಯೋಜನವಿಲ್ಲ ಒಗ್ಗಟ್ಟಾಗಿ ಹೋರಾಡೋಣ’ ಎನ್ನುವ ಸಂದೇಶವಿದೆ. ಇನ್ನೂ ಏನು ಬೇಕು ಹೇಳಿ ಒಂದು ನಾಟಕಕ್ಕೆ. ಕೇವಲ ಹತ್ತು ನಿಮಿಷದಲ್ಲಿ ಪೂರ್ಣ ಪ್ರಮಾಣದ ನಾಟಕ ಹೇಳಬಹುದಾದದ್ದನ್ನು ಈ ಕಿರುನಾಟಕ ಹೇಳುತ್ತದೆ. ನಾಟಕದ ಎಲ್ಲಾ ವಿಭಾಗಗಳೂ ಇಲ್ಲಿವೆ. ಮೊದಲ ಬಹುಮಾನಕ್ಕೆ ಸೂಕ್ತವೆನ್ನಿಸುವ ಕಿರುನಾಟಕ ಇದಾಗಿದೆ. ಆದರೂ ಈ ನಾಟಕ ಬಹುಮಾನ ವಂಚಿತವಾಗಿ ಕಡೆಗಣಿಸಲ್ಪಟ್ಟಿದೆ.
ಯಾಕೆಂದರೆ ಈ ನಾಟಕದ ಸಂದೇಶವೇ ಬಹುಮಾನವಂಚಿತರನ್ನಾಗಿಸಿದೆ. ಶೋಷಿತರಾದ ಜನ ಒಂದು ಸಾಂಘಿಕ ಶಕ್ತಿಯಾಗಿ ಹೋರಾಡುವುದನ್ನು ಯಾವುದೇ ಕಾರ್ಪೊರೇಟ್ ಉದ್ಯಮಗಳು ಒಪ್ಪುವುದಿಲ್ಲ. ಆ ರೀತಿಯ ಹೋರಾಟಗಳು ಈ ಬಂಡವಾಳಶಾಹಿಗಳ ಬುಡವನ್ನೇ ಅಲ್ಲಾಡಿಸುತ್ತವೆಂಬುದು ಅವುಗಳಿಗೆ ಚೆನ್ನಾಗಿ ಗೊತ್ತು. ನೀವು ಬೇಕಾದರೆ ವ್ಯಕ್ತಿಗತವಾಗಿ ಏನನ್ನೂ ‘ಅಡ್ಜಸ್ಟ್ ಮಾಡ್ಕೋಬೇಡಿ’, ಯಾಕೆಂದರೆ ನಮಗೆ ಪ್ರಕಟಿಸಲು ಸುದ್ದಿಗಳು ಬೇಕು. ವ್ಯಯಕ್ತಿಕ ಬಿಡಿ ಸಮಸ್ಯೆಗಳು ಪತ್ರಿಕೆಗಳಲ್ಲಿ ದೊಡ್ಡದಾಗಿ ಪ್ರತಿಬಿಂಬಿಸಬೇಕು. ಆದರೆ ಯಾವುದೇ ಕಾರಣಕ್ಕೂ ವ್ಯಕ್ತಿಗಳು ಶಕ್ತಿಯಾಗಿ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳಬಾರದು. ಹಾಗೇನಾದರೂ ಆದರೆ ಬಂಡವಾಳಿಗರ ಬಂಡವಾಳವೇ ಬೀದಿಪಾಲಾಗುತ್ತದೆ. ಬೇರೆಲ್ಲಾ ನಾಟಕಗಳು ಕೇವಲ ಚಿಲ್ಲರೆ ಸಮಸ್ಯೆಗಳನ್ನು ಹೇಳುತ್ತಾ ಅವುಗಳಿಗೆ ಅಡ್ಜಸ್ಟ್ ಮಾಡ್ಕೋಬೇಡಿ ಎಂದು ನಾಟಕಗಳ ಮೂಲಕ ತಿಳಿಸಿದವು. ಅಗ್ನಿದಿವ್ಯ ನಾಟಕಮಾತ್ರ ಮಾಲ್ಗಳ ಕೊಳ್ಳುಬಾಕ ಸರಕು ಸಂಸ್ಕೃತಿಯ ಅಪಾಯವನ್ನು ಎತ್ತಿ ತೋರಿಸಿತಾದರೂ ಜನಹೋರಾಟದ ಸಾಧ್ಯತೆಗಳ ಬಗ್ಗೆ ಹೇಳಲಿಲ್ಲ. ಆದರೆ ಈ ‘ಗುಂಡಿ ಗೋವಿಂದ’ ನಾಟಕ ಮಾತ್ರ ‘ನ್ಯಾಯ ಬೇಕಾದರೆ ಒಗ್ಗಟ್ಟಾಗಿ ಹೋರಾಡಿ’ ಎಂದು ಜನಜಾಗೃತಿಯ ಸಂದೇಶವನ್ನು ಕೊಟ್ಟಿತು. ಇಂತಹ ಸಂದೇಶಗಳು ಆಳುವ ವ್ಯವಸ್ಥೆಗೆ ಹಾಗೂ ಆ ವ್ಯವಸ್ಥೆಯನ್ನು ಪೋಷಿಸುತ್ತಿರುವ ಕಾರ್ಪೊರೇಟ್ ಪತ್ರಿಕೋದ್ಯಮಿಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಅದೇನು ಒಳ ರಾಜಕೀಯ ನಡೆಯಿತೋ ಏನೋ ಕಿರುನಾಟಕೋತ್ಸವದಲ್ಲಿ ಉತ್ತಮವಾದ ಪರಿಪೂರ್ಣ ಕಿರುನಾಟಕವೊಂದು ಕೊನೆಯ ಹಂತಕ್ಕೆ ಆಯ್ಕೆ ಯಾಗದೇ ದೂರಮಾಡಲಾಯಿತು.
ನಾಟಕ ಸ್ಪರ್ಧೆಗಳ ಬಗ್ಗೆ ಜನರಲ್ಲಿ ವಿಶ್ವಾಸಾರ್ಹತೆ ಮೂಡಬೇಕಾದರೆ ಮೊದಲು ಬಹುಮಾನದ ಆಯ್ಕೆಯಲ್ಲಿ ಪಾರದರ್ಶಕತೆಯನ್ನು ಪಾಲಿಸಬೇಕು. ಮೂರು ಜನ ತೀರ್ಪುಗಾರರನ್ನು ಒಂದು ಕಡೆ ಸೇರಿಸದೇ ಬೇರೆ ಬೇರೆಯಾಗಿ ಕೂಡಿಸಿ ಅವರ ಫಲಿತಾಂಶವನ್ನು ಪ್ರತ್ಯೇಕವಾಗಿಯೇ ಪರಿಶೀಲಿಸಬೇಕು. ಯಾರು ತೀರ್ಪುಗಾರರು ಎನ್ನುವುದು ರಂಗ ತಂಡಗಳಿಗಾಗಲೀ ಪ್ರೇಕ್ಷಕರಿಗಾಗಲೀ ಗೊತ್ತಾಗದಂತೆ ರಹಸ್ಯವನ್ನು ಕಾಪಾಡಿ ತೀರ್ಪುಗಾರರ ಮೇಲೆ ಪರಿಣಾಮ ಬೀರಬಹುದಾದ ಸಾಧ್ಯತೆಗಳನ್ನು ನಿವಾರಿಸಿಕೊಳ್ಳಬೇಕು. ಜೊತೆಗೆ ಪ್ರೇಕ್ಷಕರನ್ನೂ ಸಹ ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿದಾರರನ್ನಾಗಿ ಮಾಡಿಕೊಳ್ಳಬೇಕು. ನಾಟಕದ ನಂತರ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಸಿದ್ದಗೊಳಿಸಿದ ಪಾರ್ಮಾಟಲ್ಲಿ ಪಡೆಯಬೇಕು. ಎಷ್ಟು ಸಾಧ್ಯವಾಗುತ್ತಾ ಅಷ್ಟು ಪಾರದರ್ಶಕವಾಗಿ ಬಹುಮಾನಿತ ನಾಟಕಗಳನ್ನು ಆಯ್ಕೆ ಮಾಡಿದರೆ ನಾಟಕೋತ್ಸವಕ್ಕೊಂದು ಘನತೆ ಬರುತ್ತದೆ. ರಂಗತಂಡಗಳಿಗೂ ಪ್ರತಿವರ್ಷ ಭಾಗವಹಿಸಲು ಉತ್ಸಾಹ ಬರುತ್ತದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ