‘ಅಹಿಂಸೋ ಪರಮೋಧರ್ಮಃ’ ಎಂದು ಮನುಕುಲಕ್ಕೆ ಸಂದೇಶಕೊಟ್ಟ ಬುದ್ದ ಹುಟ್ಟಿದ ನಾಡದು, ಬಿಹಾರ.
ಮೂರುವರೆ ದಶಕಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಲಿಸುವಂತಹ ನರಹತ್ಯಾ ಘಟನೆಯೊಂದು ಬುದ್ದನ ನಾಡು ಬಿಹಾರದ ‘ಬೆಲ್ಚಿ’ ಗ್ರಾಮದಲ್ಲಿ ನಡೆಯಿತು. ಕೆಲಸಕ್ಕೆ ತಕ್ಕ ಕಾಳು ಕೇಳಿದ ದಲಿತರ ಸಾಮೂಹಿಕ ನರಮೇಧ ನಡೆಸಿದ ಜಮೀನ್ದಾರರ ಪಡೆ ಪೆಟ್ರೋಲ್ ಹಾಕಿ ಜೋಳದ ಹುಲ್ಲಿನಲ್ಲಿ ಬರ್ಬರವಾಗಿ ಹರಿಜನರನ್ನು ಸುಡಲಾಗಿತ್ತು. ರಾಜಕಾರಣಿಗಳು ಹಾಗೂ ದರೋಡೆಕೋರರ ಬೆಂಬಲದಿಂದ ಸವರ್ಣೀಯ ಪಡೆ ಹೊತ್ತಿ ಉರಿವ ಹೆಣಗಳ ಮುಂದೆ ಹೋಳಿ ಹಬ್ಬ ಆಚರಿಸಿ ಅಟ್ಟಹಾಸಗೈದಿದ್ದು ಮಾಧ್ಯಮಗಳಿಂದ ತಿಳಿದ ದೇಶದ ಜನತೆ ಆಘಾತಕ್ಕೊಳಗಾಗಿತ್ತು. ಬಿಹಾರ ವಿಧಾನ ಸಭೆ ಹಾಗೂ ದೆಲ್ಲಿ ಸಂಸತ್ತಿನಲ್ಲೂ ಈ ವಿಷಯದ ಕುರಿತು ಗದ್ದಲವಾಯಿತು. ಆ ನಂತರ ನಡೆದ ರಾಜಕೀಯ ಪ್ರೇರಿತ ತಂತ್ರ ಕುತಂತ್ರಗಳಿಂದ ದೇಶಕ್ಕೆ ದೇಶವೇ ತಲೆತಗ್ಗಿಸಿತ್ತು.
ಆಳುವ ವರ್ಗಗಳ ಈ ಅಟ್ಟಹಾಸವನ್ನು ಬೀದಿಯಲ್ಲಿ ಬೆತ್ತಲೆಗೊಳಿಸುವ ಪ್ರಯತ್ನವೊಂದು ಕರ್ನಾಟಕದಲ್ಲಿ ನಡೆದಿತ್ತು. ಅದುವೆ ‘ಬೆಲ್ಚಿ’ ಬೀದಿನಾಟಕ ಪ್ರಯೋಗ. ಸಿಜಿ ಕೃಷ್ಣಸ್ವಾಮಿ (ಸಿಜಿಕೆ) ಗಳು ‘ಸಮುದಾಯ’ ಸಾಂಸ್ಕೃತಿಕ ಸಂಘಟನೆಗಾಗಿ ರಚಿಸಿ-ನಿರ್ದೇಶಿಸಿದ ‘ಬೆಲ್ಚಿ’ ನಾಟಕವು ಆಗಿನ ಕಾಲಕ್ಕೆ ಸಂಚಲನವನ್ನುಂಟು ಮಾಡಿತು. ಇದು ಸಿಜಿಕೆ ನಿರ್ದೇಶನದ ಮೊಟ್ಟ ಮೊದಲ ಬೀದಿನಾಟಕವಾಗಿತ್ತು. 1979ರಿಂದ ನಾಡಿನಾದ್ಯಂತ 2000 ಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಂಡ ಈ ಬೀದಿ ನಾಟಕವು ಶೋಷಕ ವರ್ಗಗಳ ಮುಖವಾಡವನ್ನು ಬಯಲುಮಾಡಿತು. ತದನಂತರ ಹಲವಾರು ಭಾಷೆಗಳಿಗೂ ಅನುವಾದಗೊಂಡ ಈ ನಾಟಕ ಆಯಾ ಭಾಷಾ ರಾಜ್ಯಗಳಲ್ಲೂ ಪ್ರದರ್ಶನಗೊಂಡಿದ್ದೊಂದು ಇತಿಹಾಸ.
ಕರ್ನಾಟಕದಲ್ಲಿ 1944ರಲ್ಲಿ ‘ಇಪ್ಟಾ’ ಸಂಘಟನೆ ನಿರಂಜನರ ನಿರ್ದೇಶನದಲ್ಲಿ ಬೀದಿ ನಾಟಕದ ಪರಂಪರೆಗೆ ಶ್ರೀಕಾರ ಹಾಕಿತು. ಆ ನಂತರ ಎ.ಎಸ್.ಮೂರ್ತಿಗಳ ‘ಚಿತ್ರಾ’ ತಂಡ ಬೀದಿ ನಾಟಕ ಪರಂಪರೆಯನ್ನು ಮುಂದುವರೆಸಿತು. 1972ರಲ್ಲಿ ‘ಸಮುದಾಯ’ ಸಂಘಟನೆ ಅಸ್ತಿತ್ವಕ್ಕೆ ಬಂತು. 1975
ರಲ್ಲಿ ಪ್ರಸನ್ನರವರು ಸಮುದಾಯಕ್ಕೆ ಕುರ್ಚಿಗಳು, ಬೆಕ್ಕುಗಳು ಹಾಗೂ ಇನ್ನೊಂದು ಒಟ್ಟು ಮೂರು ಅಣಕು ಬೀದಿನಾಟಕಗಳನ್ನು ನಿರ್ದೇಶಿಸಿದ್ದರು. ಆದರೆ ಇವನ್ನು ಬೀದಿನಾಟಕ ಎನ್ನುವ ಹಾಗಿಲ್ಲ. ಯಾಕೆಂದರೆ ಅದರಲ್ಲಿ ಮಾತುಗಳಿಲ್ಲದೇ ಕೇವಲ
ಕೆಲವು ಶಬ್ಧಗಳು ಹಾಗೂ ಸನ್ನೆಗಳಿದ್ದವು. ತದನಂತರ ಬಾದಲ್ ಸರ್ಕಾರ್ರವರು ಸಮುದಾಯಕ್ಕೆ ‘ರಂಗ ತರಬೇತಿ ಕಾರ್ಯಾಗಾರ’ವನ್ನು ಕುಂಬಳಗೋಡಿನಲ್ಲಿ ನಿರ್ದೇಶಿಸಿದರು. ಆ ಶಿಬಿರದ ಪ್ರೇರಣೆಯಿಂದ ಹುಟ್ಟಿದ್ದು ‘ಬೆಲ್ಚಿ’ ನಾಟಕ. ನಿಜವಾದ ಅರ್ಥದಲ್ಲಿ ಬೀದಿನಾಟಕದ ಪಕ್ಕಾ ಪಾರ್ಮ್ಯಾಟನಲ್ಲಿ ಪ್ರದರ್ಶನಗೊಂಡ ಕರ್ನಾಟಕದ ಮೊಟ್ಟ ಮೊದಲ ರಾಜಕೀಯ ಬೀದಿನಾಟಕವೆಂದರೆ ‘ಬೆಲ್ಚಿ’ ಎಂದು ಡಾ.ವಿಜಯಮ್ಮರವರು ಈಗಲೂ ನೆನಪಿಸಿಕೊಳ್ಳುತ್ತಾರೆ. ಕರ್ನಾಟಕದ ಸಾಂಸ್ಕೃತಿಕ ಪ್ರಗತಿಪರ ಚಳುವಳಿಯ ಬಹುಮುಖ್ಯ ಕುರುಹಾಗಿ ‘ಬೆಲ್ಚಿ’ ಯನ್ನು ಗುರುತಿಸಬಹುದಾಗಿದೆ. ಜನಹೋರಾಟಕ್ಕೆ ಪೂರಕವಾಗಿ ಸಾಂಸ್ಕೃತಿಕ ಚಲನಶೀಲತೆಯನ್ನು ಈ ಬೀದಿನಾಟಕದ ಮೂಲಕ ಸಮುದಾಯ ಆರಂಭಿಸಿತು. ಇದರಲ್ಲಿ ಸಿಜಿಕೆ ಕೊಡುಗೆ ಗಮನಾರ್ಹವಾಗಿತ್ತು.
ಈಗ ‘ಸಂಸ’ ತಂಡವು ‘ಸಿಜಿಕೆ ರಂಗಹುಡುಕಾಟ’ ಎನ್ನುವ ಹೆಸರಲ್ಲಿ 65 ದಿನಗಳ ‘ಬೆಲ್ಚಿ’ ಬೀದಿ ನಾಟಕ ಪ್ರದರ್ಶನವನ್ನು ರಾಜ್ಯಾದ್ಯಂತ ಆಯೋಜಿಸಿ ಜನರಿಗೆ ಮರೆತೇ ಹೋಗಿದ್ದ ‘ಬೆಲ್ಚಿ’ ಹತ್ಯಾಕಾಂಡವನ್ನು ಮತ್ತೊಮ್ಮೆ ಜ್ಞಾಪಿಸಿ ಜನರನ್ನು ಶೋಷಕ ವ್ಯವಸ್ಥೆಯ ವಿರುದ್ಧ ಜಾಗೃತಗೊಳಿಸುವಂತಹ ಪ್ರಯತ್ನವನ್ನು ಮಾಡುತ್ತಿದೆ. 2014, ಎಪ್ರಿಲ್ 24 ರಂದು ‘ಸಿಜಿಕೆ ರಂಗಹುಡುಕಾಟ’ ಕಾರ್ಯಕ್ರಮದ ಉದ್ಘಾಟನೆ ‘ಸಂಸ ಬಯಲು ರಂಗ ಮಂದಿರದಲ್ಲಿ ನೆರವೇರಿತು. ಹಾಗೂ ಅವತ್ತೇ ಸಂಜೆ ‘ಬೆಲ್ಚಿ’ ಬೀದಿನಾಟಕವನ್ನೂ ಸಹ ಪ್ರದರ್ಶಿಸಲಾಯಿತು. ಆಗ ಸಿಜಿಕೆ ನಿರ್ದೇಶಿಸಿದ್ದ ‘ಬೆಲ್ಚಿ’ ಬೀದಿನಾಟಕವನ್ನು ಈಗ ‘ಸಂಸ’ ತಂಡಕ್ಕಾಗಿ ಕೃಷ್ಣಕುಮಾರ ಯಾದವ್ರವರು ಮರು ನಿರ್ದೇಶಿಸಿದ್ದು ಹತ್ತು ಜನ ಯುವಕರ ತಂಡವು ರಾಜ್ಯಾದ್ಯಂತ ಸರಿಸುಮಾರು ಇನ್ನೂರು ಪ್ರದರ್ಶನಗಳನ್ನು ಮಾಡುವ ಗುರಿಯೊಂದಿಗೆ ಬೀದಿನಾಟಕ ಯಾತ್ರೆ ಹೊರಟಿವೆ. ಈ ನಾಟಕದ ಮರುನಿರ್ದೇಶನದ ಜೊತೆಗೆ ಪಾತ್ರವನ್ನೂ ಮಾಡುತ್ತಿರುವ ಕೃಷ್ಣಕುಮಾರ ಯಾದವ್ ರವರ ಜೊತೆಗೆ ಮಂಜುನಾಥ ಕಗ್ಗೆರೆ, ಅಮಾಸ ನಾಯಕ, ಅನಿಲ್ ಅದ್ದೆ, ಅರುಣ ಬಿ.ಸಿ, ಚಲಪತಿ.ಎನ್.ಸಿ, ಮಹಾಂತೇಶ, ದುರ್ಗಮ್ಮ, ಆಶಾ, ಸುರೇಶ ಮತ್ತು ಪ್ರವೀನ್ ದಾಸ್ ಇಷ್ಟು ಜನ ಕಲಾವಿದರು ಕರ್ನಾಟಕದ ಮೂವತ್ತು ಜಿಲ್ಲೆಗಳಲ್ಲಿ ಒಟ್ಟು ಇನ್ನೂರು ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ. ಸಂಸ ಸುರೇಶ ಈ ಎಲ್ಲಾ ನಾಟಕಗಳ ಆಯೋಜಕ, ಪ್ರಾಯೋಜಕ ಮತ್ತು ವ್ಯವಸ್ಥಾಪಕರಾಗಿದ್ದಾರೆ.
ಬಿಹಾರದ ರಾಜಧಾನಿ ಪಾಟ್ನಾದಿಂದ ನೂರೈವತ್ತು ಕಿಲೋಮಿಟರ್ ದೂರದಲ್ಲಿರುವ ಒಂದು ಕುಗ್ರಾಮ ‘ಬೆಲ್ಚಿ’, ಆ ಊರಿನ ಜಮೀನ್ದಾರ ಮಹಾವೀರ ಮೆಹತಾ. ಜಮೀಜ್ದಾರನ ದಬ್ಬಳಿಕೆ ಸಹಿಸಲಾರದ ಬ್ರಾಹ್ಮಣ ಕುಟುಂಬವೊಂದು ತನ್ನ ಜಮೀನನ್ನು ಸಿಂಘ್ವ ಎನ್ನುವ ಹರಿಜನ ಯುವಕನಿಗೆ ಬರೆದು ಕೊಟ್ಟು ಊರು ಬಿಡುತ್ತದೆ. ಜಮೀನ್ದಾರನ ಹೊಲದಲ್ಲಿ ದುಡಿದ ದಲಿತರಿಗೆ ಹೇಳಿದಷ್ಟು ಕಾಳು ಕೊಡಲಿಲ್ಲ ಎಂದು ಸಿಂಘ್ವನ ನೇತೃತ್ವದಲ್ಲಿ ಕೂಲಿಕಾರ್ಮಿಕರು ನ್ಯಾಯ ಕೇಳುತ್ತಾರೆ. ತನಗೆ ಸಿಗಬೇಕಾದ ಜಮೀನು ಸಿಂಘ್ವನ ಪಾಲಾಯಿತು ಹಾಗೂ ದಲಿತರೆಲ್ಲಾ ತಿರುಗಿ ಬಿದ್ದರು ಎನ್ನುವ ಕಾರಣಕ್ಕೆ ಕುದ್ದು ಹೋಗುವ ಜಮೀನ್ದಾರನು ಡಕಾಯತ ಪರಶುರಾಮನಿಗೆ ಸಿಂಘ್ವನನ್ನು ಕೊಲೆಮಾಡಲು ಹೇಳುತ್ತಾನೆ. ಆದರೆ ಆ ಡಕಾಯತರನ್ನು ತನ್ನ ಸಾಂಘಿಕ ಶಕ್ತಿಯಿಂದ ಸಿಂಘ್ವ ಹಿಮ್ಮೆಟ್ಟಿಸುತ್ತಾನೆ. ರಾಜಕಾರಣಿಯೊಬ್ಬ ಮೋಸದಿಂದ ಸಿಂಘ್ವನನ್ನು ಹಿಡಿದುಕೊಡುತ್ತಾನೆ. ಡಕಾಯತರೊಂದಿಗೆ ಸೇರಿದ ಜಮೀನ್ದಾರನು ಸಿಂಘ್ವನ ಸಮೇತ ಹನ್ನೊಂದು ಜನ ಹರಿಜನರನ್ನು ಕೊಂದು ಬೆಂಕಿ ಹಚ್ಚಿ ಸುಡುತ್ತಾನೆ. ‘ಕಳ್ಳತನ ಮಾಡಲು ಹೋಗಿ ಹರಿಜನರು ಸತ್ತರು, ಮಾನಭಂಗ ಮಾಡಲು ಯತ್ನಿಸಿ ಸತ್ತರು’ ಎಂದು ಪತ್ರಿಕೆಗಳು ಸುಳ್ಳು ಸುದ್ದಿ ಬರೆಯುತ್ತವೆ. ಪತ್ರಕರ್ತನೊಬ್ಬನ ಪರಿಶ್ರಮದಿಂದ ಅಸಲಿಯತ್ತು ಬಯಲಾಗುತ್ತದೆ. ಅಸೆಂಬ್ಲಿಯಲ್ಲಿ ಹುಸಿ ಚರ್ಚೆ ಶುರುವಾಗುತ್ತದೆ. ದೆಹಲಿ ಪಾರ್ಲಿಮೆಂಟನಲ್ಲೂ ಚರ್ಚೆ ತಾರಕಕ್ಕೆರುತ್ತದೆ. ಆಗ ಅಧಿಕಾರದಲ್ಲಿದ್ದ ಜನತಾಪಕ್ಷದ ಗ್ರಹಮಂತ್ರಿ ಚರಣಸಿಂಗ್ ‘ಅದು ಕೊಲೆಯಲ್ಲ ಎರಡು ಕೋಮಿನ ನಡುವಿನ ಹೊಡೆದಾಟ’ ಎಂದು ಬೇಜವಾಬ್ದಾರಿ ಹೇಳಿಕೆ ಕೊಡುತ್ತಾನೆ. ಕಾಂಗ್ರೆಸ್ ವಿರೋಧಿಸುತ್ತದೆ. ಹೀಗೆ ಒಂದು ಪಕ್ಷ ಇನ್ನೊಂದು ಪಕ್ಷದ ಮೇಲೆ ಆರೋಪಿಸುವುದನ್ನೇ ಕಾಯಕ ಮಾಡಿಕೊಳ್ಳುತ್ತವೆ. ಮತ್ತೆ ಪಾರ್ಲಿಮೆಂಟ್ ಚುನಾವಣೆ ಬರುತ್ತದೆ. ಹರಿಜನೋದ್ದಾರದ ಹೆಸರಲ್ಲಿ ಎಲ್ಲಾ ಪಕ್ಷಗಳು ಭಾಷಣ ಕುಟ್ಟುತ್ತವೆ. ಕೆಳಗೆ ಬಿದ್ದ ವ್ಯಕ್ತಿಯೊಬ್ಬ ಮೇಲೆದ್ದು ಪಕ್ಷದ ನಾಯಕರಿಗೆ ಉಗಿಯುತ್ತಾನೆ. ಬೆಲ್ಚಿ ಜನರು ದಿಕ್ಕಾರ ಕೂಗುತ್ತಾರೆ. ಇಲ್ಲಿಗೆ ಈ ಬೀದಿ ನಾಟಕ ಕೊನೆಯಾಗುತ್ತದೆ.
ಘಟನೆಯೊಂದರ ವಿವಿಧ ಆಯಾಮಗಳನ್ನು ಹೇಳುವ ಈ ನಾಟಕ ಕೊನೆಗೆ ಆ ಹತ್ಯಾಘಟನೆಗೆ ಕಾರಣರಾದವರ ಬಗ್ಗೆ ಎಲ್ಲೂ ಪ್ರಸ್ತಾಪಿಸುವುದೇ ಇಲ್ಲ. ಜಮೀನ್ದಾರ ಪಡೆಗೆ, ಡಕಾಯಿತರಿಗೆ ಶಿಕ್ಷೆಯಾಯಿತೋ ಇಲ್ಲವೇ ಬಿಡುಗಡೆಯಾಯಿತೋ ಎನ್ನುವುದನ್ನೂ ಈ ನಾಟಕ ಹೇಳುವುದಿಲ್ಲ. ಬಹುಷಃ ಗತಿತಾರ್ಕಿಕ ಅಂತ್ಯ ಕಾಣಿಸುವುದು ಈ ನಾಟಕದ ಉದ್ದೇಶವೂ ಅಲ್ಲ. ನರಹತ್ಯಾಕಾಂಡದ ನೆಪದಲ್ಲಿ ರಾಜಕಾರಣಿಗಳ ನೀಚತನವನ್ನು ಬಯಲು ಮಾಡುವ ಹಾಗೂ ರಾಜಕೀಯ ಪಕ್ಷಗಳ ಜನವಿರೋಧಿತನವನ್ನು ಬೆತ್ತಲೆ ಮಾಡುವ ಉದ್ದೇಶವನ್ನಿಟ್ಟುಕೊಂಡು ಸಿಜಿಕೆ ರವರು ಈ ‘ಬೆಲ್ಚಿ’ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಇದರಿಂದಾಗಿ ಇದನ್ನು ರಾಜಕೀಯ ಬೀದಿ ನಾಟಕ ಎನ್ನಬಹುದಾಗಿದೆ.
ಬಹುಷಃ ಈ ಆಳುವ ವರ್ಗದವರ ಅಟ್ಟಹಾಸದ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದವರಿಗೆಲ್ಲಾ ಈ ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆ ಕೊಡುವ ಕಾಣಿಕೆ ಎಂದರೆ ‘ಹಿಂಸೆ ಮತ್ತು ಸಾವು’ ಎರಡೇ. ಬೆಲ್ಚಿ ಒಂದೇ ಯಾಕೆ? ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಈ ಶೋಷಕ ಪಡೆಯು ದುಡಿಯುವ ವರ್ಗಗಳ ಮೇಲೆ ಮಾಡುವ ದೌರ್ಜನ್ಯಕ್ಕೆ ಕೊನೆಯೇ ಇಲ್ಲವಾಗಿದ್ದು ಕೇವಲ ಹಿಂಸೆಯ ರೂಪ ಮತ್ತು ಅನುಷ್ಟಾನದಲ್ಲಿ ವ್ಯತ್ಯಾಸ ಇರುತ್ತದಷ್ಟೇ. ಮೂರು ದಶಕಗಳ ಹಿಂದೆ ಬೆಲ್ಚಿಯ ದಲಿತರ ಮೇಲಾದ ದೌರ್ಜನ್ಯವು ಎಲ್ಲಾ ದುಡಿಯುವ ವರ್ಗದವರ ಮೇಲೆ ನಡೆಯುವ ಶೋಷಣೆಯೂ ಆಗಿದ್ದರಿಂದಲೇ ದೂರದ ಬಿಹಾರದ ಕುಗ್ರಾಮದಲ್ಲಿ ನಡೆದ ಹಿಂಸಾಕಾಂಡ ಕರ್ನಾಟಕದಲ್ಲಿ ಪ್ರತಿದ್ವನಿಸಿತ್ತು. ಚಳುವಳಿಗಳು ಕ್ರಿಯಾಶೀಲವಾಗಿದ್ದ ಆ ಕಾಲದಲ್ಲಿ ಈ ‘ಬೆಲ್ಚಿ’ ನಾಟಕವು ಶೋಷಕ ವರ್ಗಗಳ ವಿರುದ್ಧ ನಡೆಯುವ ಹೋರಾಟಕ್ಕೆ ಪ್ರೇರಣೆಯನ್ನುಂಟುಮಾಡಿತ್ತು. ಶೋಷಿತ ಜನರ ಮನದಲ್ಲಿ ವಿಮೋಚನೆಯ ಪ್ರಜ್ಞೆ ಮೂಡಿಸುವ ಪ್ರಯತ್ನವನ್ನು ಈ ಬೀದಿನಾಟಕದ ಮೂಲಕ ಮಾಡಿದ ಸಿಜಿಕೆ ಹಾಗೂ ಸಮುದಾಯ ನಿಜಕ್ಕೂ ಅಭಿನಂದನಾರ್ಹರು.
ನಮ್ಮ ಭವ್ಯ
(?) ಪ್ರಜಾಪ್ರಭುತ್ವ ವ್ಯವಸ್ಥೆಯ ರಾಜಕೀಯ ನಾಯಕರುಗಳ ಹಾಗೂ ಪಕ್ಷಗಳ ನಕಲಿ ಮುಖವಾಡವನ್ನು ‘ಬೆಲ್ಚಿ’ ಬಿಚ್ಚಿಡುತ್ತದೆ. ರಾಜಕಾರಣಿಗಳ ಅವಕಾಶವಾದಿತನ, ಅಧಿಕಾರದ ಹಪಾಹಪಿತನ ಹಾಗೂ ಅದಕ್ಕಾಗಿ ಜನರನ್ನು ನಂಬಿಸಲು ಅವರು ಸೃಷ್ಟಿಸುವ ಭ್ರಮೆಗಳನ್ನು ‘ಬೆಲ್ಚಿ’ ಬೀದಿನಾಟಕವು ಬೀದಿ ಬೀದಿಗಳಲ್ಲಿ ಅನಾವರಣಗೊಳಿಸುವಂತಿದೆ. ಜೊತೆಗೆ ಆಳುವ ವರ್ಗಗಳ ಕಾವಲಿಗಿರುವ ಪೊಲೀಸ್ ವ್ಯವಸ್ಥೆಯನ್ನು ಹಾಗೂ ಸಮಾಜದ್ರೋಹಿ ಶಕ್ತಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡು ಬಡಜನರ ಮೇಲೆ ದಬ್ಬಾಳಿಕೆ ಮಾಡುವ ಉಳ್ಳವರ ದೌರ್ಜನ್ಯವನ್ನು ಬಯಲಿಗೆಳೆವ ಮೂಲಕ ಈ ದೇಶದ ಪ್ರಭುತ್ವವನ್ನು ಪ್ರಶ್ನಿಸುವ ಈ ಬೀದಿನಾಟಕವು ಇಡೀ ವ್ಯವಸ್ಥೆಗೆ ಧಿಕ್ಕಾರ ಹೇಳುವುದರೊಂದಿಗೆ ಅಂತ್ಯವಾಗುತ್ತದೆ. ಶೋಷಿತ ಜನರ ಅಸಹಾಯಕತೆ ಮತ್ತು ಶೋಷಕರ ಅಟ್ಟಹಾಸವನ್ನು ಸಾರುವ ಡಾ.ಸಿದ್ದಲಿಂಗಯ್ಯನವರ ‘ದೊಡ್ಡ ಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ...’ ಹಾಡು ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದ್ದು ನಾಟಕದ ಒಟ್ಟಾರೆ ಆಶಯವನ್ನು ಅಭಿವ್ಯಕ್ತಿಸುವಂತಿದೆ.
“ಈ ದೇಶದಲ್ಲಿ ಯಾವತ್ತಿನವರೆಗೂ ಹರಿಜನರ, ಗಿರಿಜನರ, ರೈತ ಕಾರ್ಮಿಕರ ಸಮಸ್ಯೆ ಇರುತ್ತದೋ, ಅಲ್ಲಿವರೆಗೂ ಈ ರಾಜಕಾರಣಿಗಳು ಸಾಯೊಲ್ಲ, ತಮ್ಮ ಅಧಿಕಾರವನ್ನೂ ಬಿಟ್ಟು ಕೊಡೊಲ್ಲ” ಎನ್ನುವ ಈ ನಾಟಕದ ಮಾತುಗಳು ಅದೆಷ್ಟು ವಾಸ್ತವಿಕ ಎಂದರೆ ಎಲ್ಲಾ ಸಮಸ್ಯೆಗಳಿಗೂ ಈ ಇಚ್ಚಾಶಕ್ತಿ ರಹಿತ ರಾಜಕೀಯವೇ ಮೂಲಕಾರಣವಾಗಿದೆ ಎಂಬುದನ್ನು ಈ ನಾಟಕ ಸೂಚ್ಯವಾಗಿ ಹೇಳಿದೆ. ಹಾಗೆಯೇ ಭ್ರಷ್ಟ ರಾಜಕೀಯ ಪಕ್ಷಗಳ ಸಮಸ್ಯೆ ಬಗ್ಗೆಯೂ ಅನುಕಂಪ ತೋರಿಸುವ ಈ ನಾಟಕವು “ಒಂದು ಪಕ್ಷ ಸುಧಾರಣೆ ಎಷ್ಟು ಕಷ್ಟ ಗೊತ್ತಾ? ಒಂದು ಗುಂಪು ಅಧಿಕಾರದಾಸೆಗೆ ಆ ಪಕ್ಷಕ್ಕೆ ನೆಗೆಯುತ್ತದೆ. ಮಂತ್ರಿಗಿರಿ ಕೊಡದಿದ್ದರೆ ಭಿನ್ನಮತ ಹುಟ್ಟಿಸಲಾಗುತ್ತದೆ. ಕೆಲವರು ರಾಜೀನಾಮೆ ಬೆದರಿಕೆ ಹಾಕ್ತಾರೆ...” ಎಂಬ ಹಲವು ರಾಜಕೀಯದ ಸತ್ಯಗಳನ್ನು ಬಹಿರಂಗಗೊಳಿಸುತ್ತಲೇ ಪ್ರಜಾಪ್ರಭುತ್ವದ ಹುಸಿತನವನ್ನು ಹಸಿಹಸಿಯಾಗಿ ನಾಟಕದಾದ್ಯಂತ ಲೇವಡಿ ಮಾಡಲಾಗಿದೆ.
ಈ ಬೀದಿನಾಟಕಕ್ಕೆ ನಿರ್ದೇಶಕರು ಬಳಸಿಕೊಂಡ ತಂತ್ರವೇ ಬಹಳ ವಿಶಿಷ್ಟವಾಗಿದೆ. ಕಲಾವಿದರಿಗೆ ಸುಲಭವಾಗಿ ಕೈಗೆ ಸಿಗುವಂತೆ ಪರಿಕರಗಳನ್ನು ಇಡಲು ನಡುಮಧ್ಯೆ ಕಂಬವಿದೆ. ಎಲ್ಲಿಯೂ ಗೊಂದಲವಾಗದಂತೆ ರೂಪಿಸಲಾದ ಬ್ಲಾಕಿಂಗ್ಗಳು ಮತ್ತು ವೃತ್ತಾಕಾರದ ಜಾಗವನ್ನು ಸಮರ್ಥವಾಗಿ ಬಳಸಿಕೊಂಡ ಬಗೆ ಮತ್ತು ಸ್ಟೇಜ್ ಬ್ಯಾಲನ್ಸ್ ಮಾಡಿದ ರೀತಿಯಿಂದಾಗಿ ‘ಬೆಲ್ಚಿ’ ನೋಡುಗರನ್ನು ಬೆರಗುಗೊಳಿಸುತ್ತದೆ. ಸುತ್ತಲೂ ಪ್ರೇಕ್ಷಕರು ಇದ್ದರೂ ಎಲ್ಲರಿಗೂ ನಾಟಕ ಕಮ್ಯೂನಿಕೇಟ್ ಆಗುವ ಹಾಗೆ ಡಿಸೈನ್ ಮಾಡಲಾಗಿದೆ. ಈ ಬೀದಿನಾಟಕಕ್ಕೆ ಆಯ್ಕೆ ಮಾಡಿಕೊಂಡ ವಸ್ತು ಅದನ್ನು ನಿರೂಪಿಸಲು ಬಳಸಲಾದ ಸ್ವರೂಪ ಹಾಗೂ ಪ್ರದರ್ಶಿಸಿದ ರೀತಿ ‘ಬೀದಿ ನಾಟಕ’ದ ಚಳುವಳಿಗೆ ನಾಂದಿಹಾಡಿದಂತಿತ್ತು. ದೊಡ್ಡಗೌಡರ ಬಾಗಿಲಿಗೆ ಹಾಡಿನಿಂದ ತೆರೆದುಕೊಳ್ಳುವ ಬೆಲ್ಚಿ ನಾಟಕವು ನಿರೂಪಕನ ಮಾತಿನಿಂದ ಮುಂದುವರೆಯುತ್ತದೆ. ನಿರೂಪಕನ ಜೊತೆಗೆ ಎಲ್ಲಾ ಪಾತ್ರದಾರಿಗಳೂ ಮಾತಿನಲ್ಲಿ ಕಥೆಯನ್ನು ಮುಂದುವರೆಸುತ್ತಾರೆ. ನಂತರ ಆ ಗುಂಪಿನಲ್ಲೇ ಕೆಲವರು ಪಾತ್ರಗಳಾಗಿ ಬದಲಾಗುತ್ತಾರೆ. ಪಾತ್ರದ ನಂತರ ಮತ್ತೆ ಗುಂಪಿನಲ್ಲಿ ಒಂದಾಗುವ ಪಾತ್ರಗಳು ನಿರೂಪಕನಿಗೆ ಸಾತ್ ಕೊಡುತ್ತಾರೆ. ಹೀಗೆ ನಾಟಕವಿಡೀ ಗುಂಪು-ಪಾತ್ರ -ನಿರೂಪನೆ ಕ್ರಿಯೆಗಳು ನಿರಂತರವಾಗಿ ನಡೆಯುತ್ತಲೇ ಬೀದಿ ನಾಟಕವನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತವೆ. ಅರ್ಧ ಗಂಟೆಯ ನಾಟಕ ಆರು ದಶಕಗಳ ರಾಜಕೀಯ ತಂತ್ರ ಕುತಂತ್ರಕ್ಕೆ ಸಾಕ್ಷಿಯಾದಂತಿದೆ. ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿಡಂಬಿಸುವಂತಿದೆ.
ಬೆಲ್ಚಿಯ ದಲಿತರ ಹತ್ಯಾದುರಂತ ನಡೆದು ಮೂರುವರೆ ದಶಕಗಳೇ ಕಳೆದಿವೆ. ತದನಂತರ ಗೋದ್ರಾದಲ್ಲಿ ಸರಕಾರದ ಉಸ್ತುವಾರಿಯಲ್ಲೇ ನರಹತ್ಯಾಕಾಂಡ ನಡೆದಿದೆ. ತದನಂತರವೂ ಹಲವಾರು ಸಾಮೂಹಿಕ ಹತ್ಯೆ ಪ್ರಕರಣಗಳು ಪಲ್ಲವಿಸಿವೆ. ದಲಿತರನ್ನು ಪ್ರಾಣಿಗಳಂತೆ ಹಿಂಸಿಸಿ ಕೊಂದ ಅನೇಕ ದುರಂತಗಳು ಇತಿಹಾಸ ಸೇರಿವೆ. ಬೆಲ್ಚಿ ಹತ್ಯಾಕಾಂಡವನ್ನೇ ನೆನಪಿಸುವ ದಲಿತರ ಸಾಮೂಹಿಕ ಹತ್ಯೆ ಕೋಲಾರದಲ್ಲಿ ನಡೆದಿದೆ.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ‘ರಣವೀರ ಸೇನೆ’ ಎನ್ನುವ ಭೂಮಾಲೀಕರ ರಕ್ಷಣಾ ಪಡೆ ಲೆಕ್ಕವಿಲ್ಲದಷ್ಟು ದಲಿತರನ್ನು ಹತ್ಯೆ ಮಡಿದೆ. ಜಾರ್ಖಂಡದ ‘ಸೆಲ್ವಾ ಜುಡುಂ’ ಎನ್ನುವ ಸರಕಾರಿ ಪ್ರಾಯೋಜಿತ ಕೊಲೆಗಡುಕ ಪಡೆ ದಮನಿತರ ಹತ್ಯೆ ಮಾಡುವಲ್ಲಿ ಇವತ್ತಿಗೂ ನಿರತವಾಗಿದೆ. ಇಂತಹ ರಕ್ತ ಸಿಕ್ತ ಪರಂಪರೆಯೇ ಸ್ವಾತಂತ್ರೊತ್ತರ ಭಾರತದ ಇತಿಹಾಸದಲ್ಲಿ ದಾಖಲಾಗಿದೆ. ಅಸಮಾನ ವ್ಯವಸ್ಥೆ ಹಾಗೂ ಶೋಷಕ ಆಳುವ ವರ್ಗಗಳಿರುವವರೆಗೂ ಇಂತವುಗಳು ನಡೆಯುತ್ತಲೇ ಇರುತ್ತವೆ. ಈಗ ಬೆಲ್ಚಿ ನರಹತ್ಯಾಕಾಂಡದಂತಹ ಘಟನೆಯ ನೆನಪು ಯಾರನ್ನೂ ಕಾಡುವುದೂ ಇಲ್ಲ, ಮನ ಕಲಕುವುದೂ ಇಲ್ಲ. ಮಾನವೀಯ ತುಡಿತವೇ ಮರೆಯಾದ ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಮೂರುವರೆ ದಶಕಗಳ ಹಿಂದೆ ನಡೆದ ಘಟನೆಯನ್ನಾಧರಿಸಿದ ಈ ‘ಬೆಲ್ಚಿ’ ಬೀದಿನಾಟಕದ ಪ್ರದರ್ಶನ ಈಗ ಪ್ರಸ್ತುತವೇ ಎನ್ನುವ ಸಂದೇಹ ಕಾಡದಿರದು.
ಈ ಬೆಲ್ಚಿ ಬೀದಿನಾಟಕ ಈಗ ಅಪ್ರಸ್ತುತವಾಗಿದ್ದರೂ, ಇದೇ ನೆಪದಲ್ಲಿ ಸಿಜಿಕೆಯವರ ನಿರ್ದೇಶನದ ರಂಗತಂತ್ರಗಾರಿಕೆಯನ್ನು ಈಗಿನ ರಂಗಕರ್ಮಿಗಳಿಗೆ ಅರಿಯಲು ಸಹಾಯಕವಾಗುತ್ತದೆ. ಸಿಜಿಕೆಯವರನ್ನು ನೆನಪಿಸಿಕೊಂಡಂತೆಯೂ ಆಗುತ್ತದೆ. ಈ ನಿಟ್ಟಿನಲ್ಲಿ ಸಂಸ ತಂಡದ ‘ಸಿಜಿಕೆ ರಂಗ ಹುಡುಕಾಟ 65 ದಿನಗಳ ‘ಬೆಲ್ಚಿ’ ಬೀದಿನಾಟಕ ಪ್ರದರ್ಶನ’ದ ರಂಗಯಾತ್ರೆ ಯಶಸ್ವಿಯಾಗಲಿ ಎಂಬುದೇ ರಂಗಕರ್ಮಿಗಳ ಮನದಾಳದ ಬಯಕೆಯಾಗಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ