ಶನಿವಾರ, ಮೇ 3, 2014

ವಿಶಿಷ್ಟ ಶೈಲಿಯ ವಿಕ್ಷಿಪ್ತ ನಾಟಕ “ಅಗ್ನಿಪಥ” :


                                    
       
ಮಹಾಭಾರತ ಕಥೆಗಳ ಆಗರ. ಮನುಕುಲದ ವ್ಯಕ್ತಿ ಅಭಿವ್ಯಕ್ತಿಯ ವೈರುದ್ಯಗಳ ಸಾಗರ. ಮಹಾಕಾವ್ಯದಲ್ಲಿ ಬರುವ ಪ್ರತಿ ಪ್ರಮುಖ ಪಾತ್ರಗಳೂ ರಂಗದಂಗಳದಲ್ಲಿ ಕಾಲಾನುಕ್ರಮದಲ್ಲಿ ನಿಷ್ಕರ್ಷಕ್ಕೊಳಗಾಗಿವೆ. ಪೌರಾಣಿಕ ಪರಿಕಲ್ಪನೆಯ ಪಾತ್ರ ಹಾಗೂ ಸನ್ನಿವೇಶಗಳು ಸಮಕಾಲೀನತೆಗೆ ಸ್ಪಂದಿಸುವ ನಾಟಕಗಳಾಗಿವೆ. ಮಹಾಭಾರತದ ಪುರುಷ ಪಾತ್ರಗಳು ತಮ್ಮದೇ ಆದ ಅಹಮಿಕೆಯಲ್ಲಿ ವಿಜ್ರಂಭಿಸಿದರೆ ಸ್ತ್ರೀಪಾತ್ರಗಳು ಬದುಕಿನ ಆಯ್ಕೆ ಸ್ವಾತಂತ್ರ್ಯವಿಲ್ಲದೇ ಶೋಷನೆಗೊಳಗಾಗಿ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ನಲುಗಿ ಹೋಗಿವೆ. ಹೀಗೆ ಮಹಾಕಾವ್ಯ ಕಥನದಲ್ಲಿ ರಾಜರುಗಳ ಮಕ್ಕಳಾಗಿ ರಾಜರುಗಳನ್ನು ಮದುವೆಯಾಗಿಯೂ ಬದುಕಿನುದ್ದಕ್ಕೂ ಅವಮಾನ ಸಂಕಟ ಅಪಮಾನಗಳನ್ನು ಅನುಭವಿಸಿದ ಅಂಬೆ, ಗಾಂಧಾರಿ, ಕುಂತಿ, ಮಾದ್ರಿ, ದ್ರೌಪತಿಯರು ಸವೆಸಿದ ದಾರಿಯ ಅವಲೋಕನವೇ ಅಗ್ನಿಪಥ ನಾಟಕ.

ಬಿ.ಜಯಶ್ರೀರವರು ಮಹಾಭಾರತದ ಐದೂ ಶೋಷಿತ ಸ್ತ್ರೀ ಪಾತ್ರಗಳನ್ನಿಟ್ಟುಕೊಂಡು ಅಗ್ನಿಪಥ ನಾಟಕವನ್ನು ಮೈಸೂರಿನ ಮಂಡ್ಯ ರಮೇಶರವರ ನಟನ ರಂಗತಂಡಕ್ಕೆ ನಿರ್ದೇಶಿಸಿದ್ದಾರೆ. 2014 ಎಪ್ರಿಲ್ 25 ರಂದು ರಂಗಭೂಮಿ ಉಡುಪಿ ರಂಗತಂಡವು ದಿ.ಕುತ್ವಾಡಿ ಆನಂದ ಗಾಣಿಗರ ನೆನಪಿನಲ್ಲಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಆನಂದೋತ್ಸವ ನಾಟಕೋತ್ಸವದಲ್ಲಿ ಅಗ್ನಿಪಥ ನಾಟಕವು ಪ್ರದರ್ಶನಗೊಂಡು ಪ್ರೇಕ್ಷಕರಿಗೆ ವಿಶಿಷ್ಟ ಅನುಭವವನ್ನು ಕೊಟ್ಟಿತು.

  
ಮಹಾಭಾರತದ ಕಥೆ ಜನಮಾನಸದಲ್ಲಿ ಅಚ್ಚಾಗಿದೆ. ಸ್ತ್ರೀ ಪಾತ್ರಗಳ ಪರಿಕಲ್ಪನೆಯೂ ಪ್ರೇಕ್ಷಕರಿಗಿದೆ. ಆದರೆ.. ಹೀಗೆ ಗೊತ್ತಿರುವ ಕಥೆ, ಪಾತ್ರಗಳನ್ನಿಟ್ಟುಕೊಂಡು ಹೇಗೆ ನಾಟಕವನ್ನು ಪ್ರಸ್ತುತಗೊಳಿಸಬೇಕೆಂಬುದು ನಿರ್ದೇಶಕರಿಗಿರುವ ಸವಾಲಿನ ಕೆಲಸವಾಗಿದೆ. ಸವಾಲನ್ನು ಸಮರ್ಥವಾಗಿ ನಿಭಾಯಿಸಿದ ಬಿ.ಜಯಶ್ರೀರವರು ಎರಡು ವಿಭಿನ್ನ ಪ್ರಾದೇಶಿಕ ಸಂಸ್ಕೃತಿಯ ಜಾನಪದ ಕಲಾಪ್ರಕಾರದ ಶೈಲಿಗಳನ್ನು ನಾಟಕದ ನಿರೂಪನೆಯಲ್ಲಿ ವಿಶೇಷವಾಗಿ ಬಳಸಿಕೊಂಡು ವಿಶಿಷ್ಟ ರೀತಿಯಲ್ಲಿ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಗೊಂದಲಿಗರು ಹಾಡಿ ಕುಣಿದು ಕಥೆ ಹೇಳುವ ರೀತಿಗೆ ಕರಾವಳಿ ಕರ್ನಾಟಕದ ಯಕ್ಷಗಾನದ ಹೆಜ್ಜೆಗಳನ್ನು ಸೇರಿಸಿ ಪೌರಾಣಿಕ ಕಥಾನಕದ ಬಿಡಿ ಭಾಗಗಳನ್ನು ಒಂದು ಬಂಧದಲ್ಲಿ ಜೋಡಿಸಿ ಅಗ್ನಿಪಥ ದಲ್ಲಿ ದೃಶ್ಯವೈಭವವನ್ನು ಮೂಡಿಸಿದ್ದಾರೆ. ನಾಟಕದ ಕಥಾ ಹೂರಣಕ್ಕಿಂತಲೂ ಅದನ್ನು ಪ್ರಸ್ತುತಪಡಿಸಲು ಬಳಸಿದ ಜಾನಪದ ಶೈಲಿಯ ಆವರಣವು ಅಗ್ನಿಪಥ ಅನನ್ಯತೆಯನ್ನು ಹೆಚ್ಚಿಸಿದೆ

 
ಅತ್ತ ಪ್ರೀತಿಸಿದ ಸಾಲ್ವರಾಜನಿಂದಲೂ ತಿರಸ್ಕೃತಳಾಗಿ, ಇತ್ತ ಸ್ವಯಂವರದಲ್ಲಿ ತನ್ನನ್ನು ಗೆದ್ದ ಭೀಷ್ಮನಿಂದಲೂ ತ್ಯಜಿಸಲ್ಪಟ್ಟ ಅಂಬೆ ಭೀಷ್ಮನ ಸಾವಿಗೆ ತಾನೇ ಕಾರಣಳಾಗುತ್ತೇನೆಂದು ಶಪಥಗೈದು ಅಗ್ನಿಗಾಹುತಿಯಾಗುತ್ತಾಳೆ. ಭೀಷ್ಮ ಸೃಷ್ಟಿಸಿದ ಯುದ್ಧದ ಭೀತಿಗೆ ಬಲಿಪಶುವಾಗಿ ತನ್ನ ಮನಸ್ಸಿನ ವಿರುದ್ಧ ಹುಟ್ಟುಕುರುಡನನ್ನು ಕಟ್ಟಿಕೊಳ್ಳಬೇಕಾದ ಅಸಾಹಯಕತೆಗೆ ಒಳಗಾದ ಗಾಂಧಾರಿ ಪುರುಷ ಪ್ರಧಾನ ವ್ಯವಸ್ಥೆಗೆ ಧಿಕ್ಕಾರ ಹೇಳುತ್ತಾಳೆ. ಭೀಷ್ಮನ ಒತ್ತಾಯದಿಂದ ರೋಗಪೀಡಿತನಾದ ಪಾಂಡುರಾಜನನ್ನು ಮದುವೆಯಾದ ಮಾದ್ರಿ ಗಂಡನ ಒತ್ತಾಸೆಗೆ ಕಟ್ಟುಬಿದ್ದು ಆತನನ್ನು ಕೂಡಿ ಆತನ ಸಾವಿಗೆ ಕಾರಣಳಾಗಿ ಗಂಡನ ಚಿತೆಯೊಂದಿಗೆ ಅಗ್ನಿಗೆ ಅರ್ಪಿಸಿಕೊಳ್ಳುತ್ತಾಳೆ. ಪಗಡೆಯಲ್ಲಿ ತನ್ನನ್ನು ಸೋತ ಗಂಡಂದಿರನ್ನು ಬಿಟ್ಟು ದುರ್ಯೋಧನನ ದಬ್ಬಾಳಿಗೆ ಹಾಗೂ ಭೀಷ್ಮಾದಿ ಹಿರಿಯರ ಮೌನಸಮ್ಮತಿಯ ವಿರುದ್ಧ ತಿರುಗಿಬಿದ್ದ ದ್ರೌಪತಿ ಕುರುವಂಶದ ನಿರ್ಮಾಮ ಆಗುವವರೆಗೂ ಮುಡಿ ಕಟ್ಟುವುದಿಲ್ಲಾ ಎಂದು ಪ್ರತಿಜ್ಞೆ ಮಾಡುತ್ತಾಳೆ. ಕರ್ಣನ ತಾಯಿ ತಾನೇ ಎಂದು ಅವನಿಗೆ ತಿಳಿಸಿದ ಕುಂತಿ ತೊಟ್ಟ ಬಾಣವ ಮರಳಿ ತೊಡುವುದಿಲ್ಲ ಎಂದು ಭಾಷೆ ಪಡೆಯುತ್ತಾಳೆ. ಕೊನೆಗೆ ಕ್ಲೈಮ್ಯಾಕ್ಸಿನಲ್ಲಿ ಚಕ್ರವ್ಯೂಹದಲ್ಲಿ ಅಭಿಮನ್ಯುವಿನ ಸಾವು, ಯುದ್ದಭೂಮಿಯಿಂದ ಗುರುದ್ರೋಣರ ನಿರ್ಗಮನ, ದುರ್ಯೋಧನನ ಊರುಭಂಗ, ಶ್ರೀಕೃಷ್ಣನಿಗೆ ಗಾಂಧಾರಿ ಶಾಪ, ವಾನುಪ್ರಸ್ಥಕ್ಕೆ ಹೋದ ದೃತರಾಷ್ರ-ಗಾಂಧಾರಿ-ಕುಂತಿ ಕಾಡಿನ ಬೆಂಕಿಗೆ ಆಹುತಿ..... ಇಷ್ಟೆಲ್ಲಾ ಘಟನೆಗಳು ನಡೆದು ನಾಟಕ ಅಂತ್ಯವಾಗುತ್ತದೆ. ಪ್ರೇಕ್ಷಕರ ತಲೆಯಲ್ಲಿ ಗೊಂದಲ ಗೂಡು ಕಟ್ಟುತ್ತದೆ

 

  ನಾಟಕದಲ್ಲಿ ಗೊಂದಲಿಗರ ಕಥನ ಶೈಲಿಯನ್ನು ಬಳಸಿದ್ದಕ್ಕೂ ಹಾಗೂ ಇಡೀ ನಾಟಕ ಗೊಂದಲಾಪುರ ಆಗಿದ್ದಕ್ಕೂ ಸರಿಯಾಗಿದೆ. ನಾಟಕದಾದ್ಯಂತ ಗೊಂದಲ ಗೋಜಲುಗಳು ಬೇಕಾದಷ್ಟಿವೆ. ಸಿದ್ಧ ನಾಟಕಗಳನ್ನು ನಿರ್ದೇಶಿಸುವಲ್ಲಿ ಹೆಸರುವಾಸಿಯಾಗಿರುವ ಬಿ.ಜಯಶ್ರೀಯವರು ನಟನಾ ರಂಗಶಿಬಿರದಲ್ಲಿ ಇಂಪ್ರೂವೈಸ್ ಮಾಡಲಾದ ಕೆಲವು ತುಣುಕುಗಳನ್ನಿಟ್ಟುಕೊಂಡು ತಮ್ಮದೇ ಆದ ಪರಿಕಲ್ಪನೆ ಸೇರಿಸಿ ನಾಟಕವಾಗಿಸಿದ್ದಾರೆ. ಆದರೆ... ಬೇರೆ ಬೇರೆ ಕಾಲದಲ್ಲಿ ನಡೆಯುವ ವ್ಯಕ್ತಿಯಾಧಾರಿತ ಬಿಡಿ ಘಟನೆಗಳನ್ನು ಒಂದು ಚೌಕಟ್ಟಿನಲ್ಲಿ ಸರಿಯಾದ ಕ್ರಮದಲ್ಲಿ ಜೋಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇಡೀ ನಾಟಕ ನಿರ್ದೇಶಕಿಯ ಹಿಡಿತಕ್ಕೆ ಸಿಕ್ಕದೇ ಏನೋ ಹೇಳಲು ಹೋಗಿ ಇನ್ನೇನೋ ಹೇಳಿದಂತಾಗಿದೆ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿದಂತಾಗಿದೆ. ಮೇಲೆ ತಿಳಿಸಿದ ಕಥಾನಕದ ಸಾರಾಂಶವನ್ನು ಗಮನಿಸಿದರೆ ಒಂದಕ್ಕೊಂದು ಸಂಬಂಧವಿಲ್ಲದ ಘಟನೆಗಳನ್ನು ಅಸಂಗತವಾಗಿ ಒಟ್ಟು ಸೇರಿಸಿದ್ದು ತಿಳಿಯುತ್ತದೆ. ಸ್ತ್ರೀವಾದಿ ಆಶಯಕ್ಕೆ ಪೂರಕವಾಗಿರುವಂತೆ ನಾಟಕ ಆರಂಭದಲ್ಲಿ ಕಾಣುತ್ತಿದ್ದರೂ, ಬರುಬರುತ್ತಾ ಮಹಿಳಾ ವಿರೋಧಿತನವನ್ನು ಸಾಬೀತುಪಡಿಸಿದಂತೆ ನಾಟಕ ಮೂಡಿ ಬಂದಿದೆ ಎಂಬುದು ಇಡೀ ನಾಟಕವನ್ನು ನೋಡಿದವರಿಗೆ ಭಾಸವಾಗುತ್ತದೆ.

ಪುರುಷ ಅಹಮಿಕೆಯ ವಿರುದ್ಧ ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿದ ಅಂಬೆಯ ಮಾತುಗಳು ನಾಟಕದಲ್ಲಿ ಸಶಕ್ತವಾಗಿವೆ. ಹೆಣ್ಣಿನ ಆಯ್ಕೆಯ ಸ್ವಾತಂತ್ರ್ಯವನ್ನು ಅಲ್ಲಗಳೆದು ಹೆಣ್ಣನ್ನು ಉಪಯೋಗದ ವಸ್ತುವನ್ನಾಗಿ ಪರಿಗಣಿಸಿ ನನ್ನನ್ನು ನನ್ನ ಇಷ್ಟಾನುಸಾರ ಬದುಕುವ ಒಂದಾಸೆಯನ್ನೂ ನಿರಾಸೆಗೊಳಿಸಿದೆ..... ನಮ್ಮ ಅಭಿಪ್ರಾಯಗಳಿಗೆ ಮಣ್ಣನೆ ನೀಡುವ ಕನಿಷ್ಟ ಔದಾರ್ಯತೆಯನ್ನೂ ತೋರಲಿಲ್ಲ.... ನೀನು ಗೆದ್ದಿರುವುದು ಕೇವಲ ಕ್ಷತ್ರೀಯ ಪುರುಷರನ್ನೇ ಹೊರತು ನನ್ನನ್ನಲ್ಲ... ಧಿಕ್ಕಾರವಿರಲಿ ಪುರುಷ ವ್ಯವಸ್ಥೆಗೆ..... ತನ್ನ ಸ್ವಾರ್ಥಕ್ಕೆ ನನ್ನನ್ನು ಬಲಿಪಶುವಾಗಿಸಿದ ಭೀಷ್ಮನಿಗೆ ಧಿಕ್ಕಾರವಿರಲಿ... ಎಂದು ಅಂಬೆ ಭೀಷ್ಮನ ನೆಪದಲ್ಲಿ ಮಹಿಳೆಯರ ಸ್ವಾತಂತ್ರ್ಯಹರಣ ಮಾಡುವ ಎಲ್ಲಾ ಪುರುಷರಿಗೂ ಧಿಕ್ಕಾರ ಕೂಗುತ್ತಾಳೆ. ಹಾಗೆಯೇ ಗಾಂಧಾರಿಯೂ ಸಹ ಪ್ರತಿರೋಧಿಸುವ ಒಂದೇ ಒಂದು ಅವಕಾಶವೂ ನನಗೆ ಸಿಗಲಿಲ್ಲ, ಗಂಡಿನ ದೃಷ್ಟಿಕೋನದಿಂದ ಹೆಣ್ಣನ್ನು ಅಳೆಯುವುದು ಪ್ರಕೃತಿಗೆ ಮಾಡಿದ ಅನ್ಯಾಯ.... ಆಸೆಗಳ ಹೆಮ್ಮರದಲ್ಲಿ ರೆಂಬೆಕೊಂಬೆಗಳಲಿ ತೂಗುವ ಕನಸುಗಳೆ ನನ್ನನ್ಯಾಕೆ ಎಚ್ಚರಿಸಲಿಲ್ಲ.... ಹೆಣ್ಣಿನ ಬಗ್ಗೆ ಪ್ರೀತಿ ಅಭಿಮಾನಗಳಿಗಿಂತ ತಾತ್ಸಾರವೇ ತುಂಬಿರುವ ಭೀಷ್ಮನಿಗೆ ನನ್ನ ಧಿಕ್ಕಾರ... ಎಂದು ತನ್ನ ಆಕ್ರೋಶ ವ್ಯಕ್ತಪಡಿಸುತ್ತಾಳೆ.

  
ಎರಡೂ ಪಾತ್ರಗಳ ಮಾರ್ಮಿಕ ಮಾತುಗಳು ಹಾಗೂ ಪೂರಕ ದೃಶ್ಯಗಳು ಪ್ರೇಕ್ಷಕರಲ್ಲಿ ನಾಟಕದ ಬಗ್ಗೆ ಒಲವನ್ನು ಹೆಚ್ಚಿಸುತ್ತವೆ. ಆದರೆ ತದನಂತರ ಬರುವ ಮಾದ್ರಿ ಹಾಗೂ ಕುಂತಿ ಪಾತ್ರಗಳು ಹಾಗೂ ಪೂರಕ ಸನ್ನಿವೇಶಗಳು ಮೊದಲೆರಡು ಪಾತ್ರಗಳಿಗಿಂತ ವಿಭಿನ್ನ ನೆಲೆಯಲ್ಲಿ ನಿಲ್ಲುತ್ತವೆ. ಅಲ್ಲಿಂದ ನಾಟಕದ ಗತಿಯೂ ಬದಲಾಯಿಸುತ್ತದೆ. ಸ್ತ್ರೀಪರ ನಿಲುವು ಬದಲಾಗಿ ವಿರುದ್ಧ ನೆಲೆಯಲಿ ನಾಟಕ ಮುಂದುವರೆಯುತ್ತದೆ.

ಪಾಂಡುರಾಜನಿಗೆ ಶಾಪವಿತ್ತು, ಹೆಣ್ಣನ್ನು ಕೂಡಿದರೆ ಮರಣವಿತ್ತು ಎಂದು ವ್ಯಾಸಭಾರತ ಕಥೆ ಕಟ್ಟುತ್ತದೆ. ಆದರೆ... ಪಾಂಡುರಾಜನ ಪುರುಷತ್ವ ಇದ್ದಕ್ಕಿದ್ದಂತೆ ಆರು ತಿಂಗಳಿಂದ ಜಾಗೃತವಾಗಿತ್ತು. ಪಾಂಡುರಾಜನ ಜೊತೆ ಮಾದ್ರಿ ಆಗಾಗ ಕೂಡಿ ಬಸಿರಾಗಿದ್ದಳು. ಅದೊಂದು ದಿನ ಪತಿಯ ಆಸೆಗೆ ಒಪ್ಪಿ ಕೂಡಿದಾಗ ಪಾಂಡುರಾಜ ಸತ್ತ ಎಂದು ನಾಟಕದಲ್ಲಿ ಹೇಳಲಾಗಿದೆ. ಪಾಂಡುರಾಜನ ಶಾಪ ಹಾಗೂ ಶಂಡತ್ವ ಎರಡನ್ನೂ ನಿರಾಕರಿಸುವ ನಾಟಕದ ಆಶಯ ಸ್ವಾಗತಾರ್ಹ. ಆದರೆ... ಗಂಡ ಹೆಂಡತಿ ಒಂದಾಗಿದ್ದಕ್ಕೆ ಗಂಡನ ಮರಣ ಹೇಗಾಯ್ತು? ಅಷ್ಟು ವರ್ಷ ಇಲ್ಲದ ಪುರುಷತ್ವ ಅದೇಗೆ ಇದ್ದಕ್ಕಿದ್ದಂತೆ ಜಾಗೃತವಾಯಿತು? ತಾನು ಬಸುರಿ ಎನ್ನುವುದನ್ನು ಮಾದ್ರಿ ಗಂಡ ಸಾಯುವವರೆಗೂ ಯಾಕೆ ಮುಚ್ಚಿಟ್ಟಳು? ಹೊಟ್ಟೆಯಲ್ಲಿರುವ ಮಗು ತಂದೆಯ ಹಾಗೆ ರೋಗಿಷ್ಟನಾಗಿ ಹುಟ್ಟಬಹುದೆಂದು ಯೋಚಿಸಿ ಗಂಡನ ಚಿತೆ ಏರಿದ್ದರಲ್ಲಿ ಸೂಕ್ತ ಸಮರ್ಥನೆ ಎಲ್ಲಿದೆ? ಶಾಪ ಎನ್ನುವ ಅತಾರ್ಕಿಕತೆಯನ್ನು ಮುರಿಯಲು ಇನ್ನಷ್ಟು ಅತಾರ್ಕಿಕ ಅಂಶಗಳನ್ನು ಮಾದ್ರಿಯ ಪಾತ್ರದ ಮೂಲಕ ನಿರ್ದೇಶಕಿ ಕಟ್ಟಿ ಕೊಟ್ಟಿದ್ದು ಸಮರ್ಥನೀಯವೆನ್ನಿಸುವುದಿಲ್ಲ.

ಸ್ತ್ರೀ ಕುಲದ ಶೋಷಣೆಯನ್ನು ಮಹಾಭಾರತದ ಸ್ತ್ರೀ ಪಾತ್ರಗಳನ್ನಿಟ್ಟುಕೊಂಡು ಹೇಳ ಹೊರಟಿರುವ ನಿರ್ದೇಶಕಿ ನಂತರ ಇದ್ದಕ್ಕಿದ್ದಂತೆ ಕುಂತಿ ಕರ್ಣರ ಸಮಾಗಮದತ್ತ ಚಿತ್ತ ಹೊರಳಿಸುತ್ತಾರೆ. ಯದ್ದದಲ್ಲಿ ತನ್ನ ಐವರು ಮಕ್ಕಳ ಉಳಿವಿಗಾಗಿ ತನ್ನ ಇನ್ನೊಬ್ಬ ಅನಧೀಕೃತ ಪುತ್ರ ಕರ್ಣನನ್ನು ಬಲಿಪಶುವಾಗಿಸಲು ಸಂಚು ನಡೆಸುತ್ತಾಳೆ. ಮಾತೃ ಮಮತೆಯನ್ನು ಮುಂದು ಮಾಡಿ ವರ ಪಡೆದ ಹೆತ್ತತಾಯಿ ಕುಂತಿ ಭಾವನಾತ್ಮಕವಾಗಿ ತನ್ನ ಮಗನನ್ನೇ ಶೋಷಿಸುತ್ತಾಳೆ. ಸ್ವಾರ್ಥ ಸಾಧಕಿಯಾಗುತ್ತಾಳೆ. ಕುಂತಿಯು ಮಗನ ಕೊಂದಳು ಇನ್ಯಾರ ನಂಬುವುದು ಸರ್ವಜ್ಞ ಎಂದು ದೃಶ್ಯದಲ್ಲಿ ಬಳಸಿದ ಸರ್ವಜ್ಞನ ವಚನ ಕುಂತಿಯ ಪುತ್ರಹತ್ಯಾ ಪ್ರೇರಣೆಗೆ ಇಂಬು ಕೊಡುವಂತಿದೆ. ಇಲ್ಲಿಗೆ ಮಹಿಳಾಪರ ನಿಲುವನ್ನು ಹೊಂದಿದ ನಾಟಕದ ಆಶಯ ದಾರಿತಪ್ಪುತ್ತದೆ.

ತನ್ನನ್ನು ಸ್ಥಿತಿಗೆ ತಂದ ಗಂಡಂದಿರ ಬಗ್ಗೆ ಚಕಾರವೆತ್ತದ ದ್ರೌಪತಿಯು ಕುರುಕುಲದ ಹಿರಿಯರನ್ನು ಹಾಗೂ ಕುರುಪುತ್ರರನ್ನು ಕಾರಣವಾಗಿಸುತ್ತಾ ಸ್ವಜನಪಕ್ಷಪಾತ ಮೆರೆಯುತ್ತಾಳೆ. ಕುರುಕುಲದ ನಿರ್ನಾಮಕ್ಕೆ ಶಪಥ ಮಾಡುತ್ತಾಳೆ.  ಸಂದರ್ಭದಲ್ಲಿ ಒಡಲೊಳಗಿನ ಕಿಚ್ಚು ತನ್ನ ಸುಡಲೊಲ್ಲದೆ ಪರರ ಸುಡದು... ಎನ್ನುವ ವಚನದ ಸಾಲನ್ನೂ ಬಳಸಿ ದ್ರೌಪತಿಯ ಒಡಲ ಕಿಚ್ಚಿನಿಂದಲೇ ಎಲ್ಲಾ ಅನಾಹುತಗಳು ನಡೆದವು ಎನ್ನುವಂತೆ ದೃಶ್ಯ ದ್ವನಿಸುತ್ತದೆ. ಕೊನೆಯ ದೃಶ್ಯದಲ್ಲಂತೂ ಗಾಂಧಾರಿ ಶ್ರೀಕೃಷ್ಣನಿಗೆ ಶಾಪಕೊಡುತ್ತಾಳೆ. ಆಗ ದೃತರಾಷ್ಟ್ರ ಗಾಂಧಾರಿಗೆ ಎಲ್ಲಾ ಅನಾಹುತಕ್ಕೂ ನೀನೆ ಕಾರಣ, ನಿನ್ನನ್ನು ಮೊದಲೆ ಸಾಯಿಸಿಬಿಡಬೇಕಿತ್ತು ಎಂಬ ಅನಾಹುತಕಾರಿ ಮಾತನ್ನಾಡಿದಾಗ ಹೌದು ಚಿಗುರನ್ನು ಚಿಗುರುವ ಮುಂಚೆಯೇ ಚಿವುಟಬೇಕಿತ್ತು ಎಂದು ಗಾಂಧಾರಿ ಪಶ್ಚಾತ್ತಾಪ ಪಡುತ್ತಾಳೆ. ಇಬ್ಬರ ಹೇಳಿಕೆ ಅದೆಷ್ಟು ಅಪಾಯಕಾರಿ ಎಂದರೆ ಹೆಣ್ಣು ಶಿಶು ಹತ್ಯೆಗೆ ಪ್ರೇರಕವಾಗಿದೆ. ಹೆಣ್ಣು ಹುಟ್ಟಿದ್ದರಿಂದ ಎಲ್ಲಾ ಕೇಡಾಗುತ್ತದೆ, ಆದ್ದರಿಂದ ಹೆಣ್ಣನ್ನು ಚಿಗುರಿನಲ್ಲೇ ಚಿವುಟಬೇಕು ಎನ್ನುವ ನಕಾರಾತ್ಮಕ ಆಶಯವನ್ನು ಪರೋಕ್ಷವಾಗಿ ನಾಟಕ ಹೇಳುವಂತಿದೆ

  
ಹೀಗೆ... ಹಲವಾರು ವಿರೋದಾಭಾಸಗಳು ನಾಟಕದಾದ್ಯಂತ ಮೂಡಿಬಂದಿವೆ. ನಿರ್ದೇಶಕಿಗೆ ನಾಟಕದಲ್ಲಿ ಏನನ್ನು ಹೇಳಬೇಕು, ಯಾವ ಆಶಯಕ್ಕೆ ಬದ್ಧವಾಗಿರಬೇಕು, ವಿರೋದಾಭಾಸಗಳಿಲ್ಲದಂತೆ ಹೇಗೆ ನಾಟಕವನ್ನು ಕಟ್ಟಬೇಕು ಎನ್ನುವ ಸ್ಪಷ್ಟ ಪರಿಕಲ್ಪನೆ ಇದ್ದಿದ್ದರೆ ನಾಟಕ ಸೊಗಸಾಗಿ ತರ್ಕಬದ್ದವಾಗಿ ಬರಬಹುದಾಗಿತ್ತು. ಮಹಿಳೆಯರ ನೋವು, ಸಂಕಟ, ಅಪಮಾನಗಳನ್ನು ತೋರಿಸುವ ದಾವಂತದಲ್ಲಿ ಮಹಿಳೆ ದ್ವೇಷ, ಕಾಮದಾಸೆ ರೂಢಿಸಿಕೊಂಡವಳೆಂದೂ, ತನ್ನ ಸ್ವಾರ್ಥಕ್ಕಾಗಿ ಪುತ್ರಹತ್ಯೆಗೂ ಕಾರಣಳಾಗುತ್ತಾಳೆಂಬುದನ್ನೂ ಅಗ್ನಿಪಥದಲ್ಲಿ ಸೇರಿಸಲಾಗಿದೆ. ಎಲ್ಲಾ ಮಹಾಭಾರತದ ಮಹಿಳಾ ಪಾತ್ರಗಳ ಅಂತಿಮ ಗುರಿ ಸೇಡು, ದ್ವೇಷಸಾಧನೆಯಾದಂತಿದೆ. ಇಲ್ಲಿನ ಮಹಿಳೆಯತು ತಮ್ಮನ್ನು ತಾವು ನಾಶಮಾಡಿಕೊಳ್ಳುತ್ತಾರೆ, ಇಲ್ಲವೇ ಶಪಥ ತೊಟ್ಟೋ ಇಲ್ಲವೇ ಶಾಪಕೊಟ್ಟೋ ಮತ್ತೊಬ್ಬರ ಸರ್ವನಾಶಕ್ಕೆ ಕಾರಣೀಕರ್ತರಾಗುತ್ತಾರೆ ಎಂಬುದನ್ನು ನಾಟಕ ಪರೋಕ್ಷವಾಗಿ ಸಾಬೀತುಪಡಿಸುತ್ತದೆ.

ಇದರ ಜೊತೆಗೆ... ಭೀಷ್ಮ ಎಲ್ಲರನ್ನು ಸೋಲಿಸಿ ಭಾರ್ಯೆಯನ್ನು ಪಡೆಯುತ್ತೇನೆ ಎಂದು ಸ್ವಯಂವರದಲ್ಲಿ ಅರ್ಭಟಿಸುತ್ತಾನೆ. ಭಾರ್ಯೆ ಎಂದರೆ ಹೆಂಡತಿ. ಸ್ವಯಂವರ ಏರ್ಪಡಿಸುವುದು ಅವಿವಾಹಿತ ರಾಜಕುಮಾರಿಯರಿಗೆ ಹೊರತು ವಿವಾಹಿತ ಹೆಂಡತಿಯರಿಗಲ್ಲ. ಭೀಮಸೇನ ತನ್ನ ನೂರು ಮಕ್ಕಳನ್ನು ಬಲಿತೆಗೆದುಕೊಂಡ ಎಂದು ಗಾಂಧಾರಿ ಪರಿತಪಿಸುತ್ತಾಳೆ. ಆದರೆ ಭೀಮ ಕೊಂದಿದ್ದು ತನ್ನ ಎದುರಾಳಿ ಧುರ್ಯೋಧನನನ್ನು ಎಂದು ಎಲ್ಲಾ ನಮೂನಿಯ ಮಹಾಭಾರತಗಳು ಸಾರುತ್ತವೆ. ಹೀಗೆ.... ಕೆಲವು ಸಾಂದರ್ಭಿಕ ನ್ಯೂನ್ಯತೆಗಳನ್ನು ಮುಂದಿನ ಪ್ರದರ್ಶನಗಳಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ.

ಎಲ್ಲಾ ತಾರ್ಕಿಕ ಹಾಗೂ ತಾತ್ವಿಕ ಸಮಸ್ಯೆಗಳು ಹಾಗೂ ನಾಟಕದ ಆಶಯದ ವಿಪರ್ಯಾಸಗಳನ್ನು ಬದಿಗಿಟ್ಟು ನಾಟಕವನ್ನು ನೋಡಿದರೆ ದೃಶ್ಯವೈಭವವನ್ನು ಆನಂದಿಸಬಹುದಾಗಿದೆ. ಗೊಂದಲಿಗರ ವೇಷದಲ್ಲಿ ಬರುವ ಎಲ್ಲಾ ನಟರುಗಳು ಹಾಡುತ್ತಾ, ಕುಣಿಯುತ್ತಾ ಕಥಾ ನಿರೂಪಕರೂ ಆಗುತ್ತಾ ಪಾತ್ರಗಳಾಗಿಯೂ ಬದಲಾಗುವುದು ನೋಡುಗರಿಗೆ ವಿಶಿಷ್ಟ ಅನುಭವವನ್ನು ಕೊಡುವಂತಿದೆ. ದೃಶ್ಯ ಸೃಷ್ಟಿ ಸಾಧ್ಯತೆಗಳನ್ನು  ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ.  ಪ್ರತಿ ದೃಶ್ಯದ ಸಂಯೋಜನೆ ಹಾಗೂ ಕಲಾವಿದರ ಚಲನೆಗಳು ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡುವಂತಿವೆ. ವೇದಿಕೆ ಮೇಲೆಯೇ ಕಲಾವಿದರು ಕೊಡುವ ಸಂಗೀತ ಮತ್ತು ಹಾಡುಗಳು ದೃಶ್ಯಸೃಷ್ಟಿಗೆ ಪುಷ್ಟಿಕೊಟ್ಟಿವೆ.

ಎಲ್ಲಾ ಪುರುಷರಿಗೂ ಒಂದೇ ರೀತಿಯ ಗೊಂದಲಿಗರ ವೇಷಭೂಷನ ಹಾಗೂ ಎಲ್ಲಾ ಮಹಿಳಾ ಪಾತ್ರದಾರಿಗಳಿಗೂ ಒಂದೇ ಬಗೆಯ ಕಾಸ್ಟೂಮ್ಸ ಹಾಕಿಸಲಾಗಿದೆ. ಪಾತ್ರೋಚಿತ ಉಡುಗೆಗಳಿಲ್ಲದೆ ಇದೊಂದು ರೀತಿಯಲ್ಲಿ ಯುನಿಫಾರಂ ಮಾದರಿ ಕಾಸ್ಪೂಮ್ಸ ಬಳಕೆಯಾಗಿದೆ. ದ್ವೇಷವನ್ನೇ ಬಿತ್ತಿ ಬೆಳೆಯುವ ನಾಟಕದಲ್ಲಿ ಎಲ್ಲಾ ಪುರುಷ ಪಾತ್ರಗಳ ಅಂಗಿಯ ಹಿಂದೆ ಲವ್ ಮಾರ್ಕ ಚಿನ್ಹೆ ಇರುವುದು ವಿಚಿತ್ರ. ಕೆಲವು ಪಂಜುಗಳನ್ನು ಹೊರತು ಪಡಿಸಿ ರಂಗಪರಿಕರಗಳನ್ನು ಬಳಸಿಲ್ಲ. ಆದರೆ ಕೆಲವಾರು ಸಂದರ್ಭಗಳಲ್ಲಿ ನಟರನ್ನೇ ಸೆಟ್ ಪರಿಕರವಾಗಿ ಬಳಸಿ ದೃಶ್ಯಗಳನ್ನು ಸೃಷ್ಟಿಸಲಾಗಿದೆ. ಆಹಾರ್ಯಾಭಿನಯದ ಕೊರತೆಯನ್ನು ನಟರು ವಾಚಿಕಾಭಿನಯದಲ್ಲೇ ತೂಗಿಸಿದ್ದಾರೆ. ಬೀದಿನಾಟಕಗಳಲ್ಲಿ ಒಂದೇ ರೀತಿಯ ಕಾಸ್ಟೂಮ ಧರಿಸಿದ ನಟರು ಗುಂಪಾಗುತ್ತಾ, ಗುಂಪಿನಿಂದ ಬೇರ್ಪಡುವ ವ್ಯಕ್ತಿ ಪಾತ್ರವಾಗುತ್ತಾ, ಮತ್ತೆ ಪಾತ್ರ ಮುಗಿದ ನಟರು ಗುಂಪಲ್ಲಿ ಒಂದಾಗುತ್ತಾ ಹೇಗೆ ನಾಟಕವನ್ನು ಕಟ್ಟಿಕೊಡುತ್ತಾರೋ ಅದೇ ರೀತಿ ನಾಟಕದಲ್ಲೂ ಸಹ ಗೊಂದಲಿಗರ ಕಥಾನಕದ ಮಾದರಿಯನ್ನು ಬಳಸಿ ಪ್ರಿಸಿನೀಯಂ ನಾಟಕವನ್ನು ನಿರ್ಮಿಸಲಾಗಿದೆ. ಆಧುನಿಕ ರಂಗಭೂಮಿಗೆ ಇದೇನೂ ಹೊಸದಲ್ಲ. ಆದರೆ ಗೊಂದಲಿಗರು ಹಾಗೂ ಯಕ್ಷಗಾನ ಎರಡೂ ಜಾನಪದ ಶೈಲಿಗಳನ್ನು ಬ್ಲೆಂಡ್ ಮಾಡಿ ನಾಟಕವನ್ನು ಕಟ್ಟಿಕೊಟ್ಟಿದ್ದು ಹೊಸತನದಿಂದ ಕೂಡಿದೆ. ನಾಟಕಕ್ಕೊಂದು ಕಥೆಕಟ್ಟಿ ಅದರ ಆಶಯವನ್ನು ಸಮರ್ಥವಾಗಿ ಹೇಳುವಲ್ಲಿ ಸೋತ ಬಿ.ಜಯಶ್ರೀರವರು ನಾಟಕದ ನಿರೂಪನಾ ಶೈಲಿಯ ಬಳಕೆಯಲ್ಲಿ ಗೆದ್ದಿದ್ದಾರೆ. ನಾಟಕದ ಕಥಾ ವಸ್ತುವಿನಲ್ಲಿ ಗೊಂದಲಗಳಿದ್ದರೂ ಪ್ರದರ್ಶನದಲ್ಲಿ ಇಡೀ ನಾಟಕ ಅದ್ಬುತವಾಗಿ ಮೂಡಿಬಂದಿದೆ. ಇದಕ್ಕೆ ನಟರ ಕೊಡುಗೆ ಅನನ್ಯವಾಗಿದೆ.

ಎಲ್ಲಾ ಕಲಾವಿದರೂ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಅದರಲ್ಲೂ ನಾಟಕದ ಪ್ರಮುಖ ಮಹಿಳಾ ಕಲಾವಿದರು ತಮ್ಮ ಭಾವಪೂರ್ಣ ಆಂಗಿಕಾಭಿನಯದಿಂದ ಗಮನ ಸೆಳೆಯುತ್ತಾರೆ. ಅಂಬೆಯಾಗಿ ದೀಶಾರಮೇಶ್, ಗಾಂಧಾರಿ ಹಾಗೂ ದ್ರೌಪತಿಯಾಗಿ ಪ್ರೀಯಾ, ಕುಂತಿಯಾಗಿ ಅಪೂರ್ವ, ಮಾದ್ರಿಯಾಗಿ ಕಾವ್ಯ... ಎಲ್ಲಾ ಯುವ ಕಲಾವಿದೆಯರು ಪಾತ್ರವೇ ತಾವಾಗಿ ಅಭಿನಯಿಸಿ ವೃತ್ತಿಪರತೆಯನ್ನು ಮೆರೆದಿದ್ದಾರೆ. ಭೀಷ್ಮನಾಗಿ ರಾಮು, ದೃತರಾಷ್ಟ್ರನಾಗಿ ಮುರುಳಿ ಶೃಂಗೇರಿ, ದುರ್ಯೋಧನನಾಗಿ ರಾಗ್ ಅರಸ್, ಕರ್ಣನಾಗಿ ಮೇಘ ಸಮೀರ್.. ಮುಂತಾದ ನಟರು ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಪಾತ್ರಕ್ಕೆ ಪೂರಕವಲ್ಲದ ವೇಷ ಹಾಕಿದ್ದರೂ ತಮ್ಮ ಅಭಿನಯ ಸಾಮರ್ಥ್ಯದಿಂದಲೇ ಪಾತ್ರಗಳನ್ನು ಕಟ್ಟಿಕೊಟ್ಟ ಯುವ ನಟ ನಟಿಯರ ವೃತ್ತಿಪರ ಅಭಿನಯ ನಟನ ತಂಡದ ರಂಗಬದ್ಧತೆಗೆ ಸಾಕ್ಷಿಯಾಗಿದೆ. ಕಲಾವಿದರನ್ನು ರೂಪಿಸುವಲ್ಲಿ ಶ್ರಮಿಸಿದ ಮಂಡ್ಯ ರಮೇಶರವರ ಪರಿಶ್ರಮ ಅಪಾರವಾಗಿದೆ.

ಶಶಿಧರ್ ಅಡಪರವರ ರಂಗವಿನ್ಯಾಸ ಇಡೀ ನಾಟಕದ ಆಶಯವನ್ನು ಸಂಕೇತಿಸುವಂತಿದೆ. ರಂಗದ ಹಿನ್ನೆಲೆಯಲ್ಲಿ ಪುರುಷಪ್ರಧಾನ ವ್ಯವಸ್ಥೆಗೆ ಸಾಕ್ಷಿಯಾಗಿ ಎರಡು ಕೊಂಬುಗಳು ಹಾಗೂ ಅದರ ಕೆಳಗೆ ಉರಿಯುವ ಪಂಜುಗಳುಳ್ಳ ಸ್ಥಾಯಿಯಾಗಿದ್ದ ಸೆಟ್ ನೋಡುಗರ ಗಮನ ಸೆಳೆಯುವಂತಿತ್ತು. ಕೆ.ಆನಂದರಾಜುರವರ ಬೆಳಕಿನ ವಿನ್ಯಾಸ ಪ್ರತಿ ದೃಶ್ಯಗಳ ಭಾವಕ್ಕೆ ಮೂಡ್ ಸೃಷ್ಟಿಸುವಲ್ಲಿ ಸಹಕಾರಿಯಾಯಿತು. ೧೦೨ ಡಿಗ್ರಿ ಜ್ವರದಲ್ಲೂ ರೆಸ್ಟ್ ಪಡೆಯದೇ ಪ್ರದರ್ಶನದಲ್ಲಿ ಬೆಳಕನ್ನು ಸಮರ್ಥವಾಗಿ ನಿರ್ವಹಿಸಿದ ನಿಂಗರಾಜುರವರ ರಂಗನಿಷ್ಟೆ ಪ್ರಶಂಸನೀಯ. ಸಂಬಾಳ ವಾದ್ಯಗಳನ್ನು ಬಳಸಿ ಲೈವ್ ಸಂಗೀತ ನೀಡಿ ಹಾಡುಗಳನ್ನು ನಟರಿಂದಲೇ ಹೊರಹೊಮ್ಮಿಸಿದ್ದು ನಾಟಕದ ಯಶಸ್ಸಿಗೆ ಪೂರಕ ಕಾರಣವಾಯಿತು


 ಇಡೀ ನಾಟಕದಲ್ಲಿ ತರ್ಕಬದ್ಧ ಕಥೆ ಎಂಬುದಿಲ್ಲ. ಮಹಾಭಾರತದ ಬಿಡಿ ಬಿಡಿ ಸನ್ನಿವೇಶಗಳನ್ನಿಟ್ಟುಕೊಂಡು ದೃಶ್ಯಗಳನ್ನು ಕಟ್ಟಲಾಗಿದೆ. ಹಾಗೆ ಕಟ್ಟುವಾಗ ಒಂದು ಪಾತ್ರದ ದೃಶ್ಯದ ನಂತರ ಪಾತ್ರವನ್ನು ಅಲ್ಲೇ ಕೈಬಿಡುವ ಬದಲು ಕ್ಲೈಮ್ಯಾಕ್ಸನಲ್ಲಿ ಹಾಗೆ ಬಿಟ್ಟ ಪಾತ್ರಗಳಿಗೆ ಲಿಂಕ್ ಒದಗಿಸಿದ್ದರೆ ನಾಟಕ ಅರ್ಥಪೂರ್ಣವಾಗುತ್ತಿತ್ತು. ಐದು ಮಹಿಳೆಯರ ಬದುಕು-ಬವನೆಗಳನ್ನೇ ಪ್ರಧಾನವಾಗಿಟ್ಟುಕೊಂಡು, ಭೀಷ್ಮನನ್ನು ಪುರುಷ ಪ್ರಧಾನ ವ್ಯವಸ್ಥೆಯ ಪ್ರತೀಕವಾಗಿಟ್ಟುಕೊಂಡು ನಾಟಕ ಕಟ್ಟಿಕೊಟ್ಟಿದ್ದರೆ ಅಗ್ನಿಪಥ ಉತ್ತಮ ಪ್ರಯೋಗವಾಗಬಹುದಾಗಿತ್ತು. ಕುಂತಿ ಕರ್ಣರ ದೃಶ್ಯ ಹಾಗೂ ಕೊನೆಯ ಅಭಿಮನ್ಯು, ದ್ರೋಣ ಹಾಗೂ ದೃತರಾಷ್ಟ್ರ-ಗಾಂಧಾರಿಯ ವಾನುಪ್ರಸ್ಥಾಶ್ರಮದ ದೃಶ್ಯಗಳು ನಾಟಕದ ಆಶಯಕ್ಕೆ ಅಪ್ರಸ್ತುತವೆನಿಸುತ್ತವೆ. ಅಪ್ರಸ್ತುತ ದೃಶ್ಯಗಳನ್ನು ಕೈಬಿಟ್ಟು  ಕುರುಕ್ಷೇತ್ರ ಯುದ್ಧದಲ್ಲಿ ಅಂಬೆ ಶಿಖಂಡಿಯಾಗಿ ಭೀಷ್ಮನನ್ನು ನಿರ್ಬಂಧಿಸಿ ಅದು ಹೇಗೆ ತನ್ನ ಶಪತ ಪೂರೈಸಿಕೊಂಡಳು, ದ್ರೌಪತಿ ಹೇಗೆ ದುರ್ಯೊಧನನ ಸಾವಿಗೆ ಕಾರಣಳಾಗಿ ನೆತ್ತರಿನಲ್ಲಿ ತನ್ನ ಮುಡಿ ಕಟ್ಟಿಕೊಂಡಳು... ಎಂಬುದನ್ನು ತೋರಿಸಿದ್ದರೆ ಬಿಡಿ ದೃಶ್ಯಗಳನ್ನು ನಾಟಕದ ಕೊನೆಯಲ್ಲಿ ಸಮೀಕರಿಸಿದಂತಾಗುತ್ತಿತ್ತು. ಅಗ್ನಿಪಥ ಎಂಬ ಗೊಂದಲಿಗರಾಟದಲ್ಲಿ ಆದ ಗೊಂದಲಗಳನ್ನು ನಿವಾರಿಸಿಕೊಳ್ಳಬಹುದಾಗಿತ್ತು. ಒಂದು ಪರಿಪೂರ್ಣ ನಾಟಕವನ್ನು ಕೊಡಬಹುದಾಗಿತ್ತು. ನಿಟ್ಟಿನಲ್ಲಿ ನಟನ ರೂವಾರಿ ಮಂಡ್ಯ ರಮೇಶರವರು ಆಲೋಚಿಸಿ ಸೂಕ್ತ ಪರಿವರ್ತನೆಗೆ ಮುಂದಾದರೆ ಉತ್ತಮ ನಾಟಕವೊಂದು ನಟನ ರಂಗತಂಡಕ್ಕೆ ಸಿಕ್ಕಬಹುದಾಗಿದೆ, ಆಧುನಿಕ ಕನ್ನಡ ರಂಗಭೂಮಿಗೆ ವಿಶಿಷ್ಟ ನಿರೂಪನೆಯ ಸ್ತ್ರೀಸಂವೇದಿ ನಾಟಕವೊಂದು ದಕ್ಕಬಹುದಾಗಿದೆ.

 
ಬೆಂಕಿ ಎನ್ನುವುದು ಅಗ್ನಿಪಥ ನಾಟಕದ ಸ್ಥಾಯಿಭಾವವಾಗಿದೆ. ಅಂಬೆ ತನ್ನ ಮನದಲ್ಲಿ ಪುರುಷ ದ್ವೇಷದ ಕಿಡಿ ಹಚ್ಚಿಕೊಂಡು ಅಗ್ನಿಗಾಹುತಿಯಾಗುತ್ತಾಳೆ. ಮಾದ್ರಿ ತನ್ನ ಮನದ ಬಯಕೆಗಳನ್ನೆಲ್ಲಾ ಬಲಿಕೊಟ್ಟು ಗಂಡನ ಚಿತೆಯ ಜೊತೆಗೆ ಬೆಂಕಿಗಾಹುತಿಯಾಗುತ್ತಾಳೆ. ಹಾಗೆಯೇ ದ್ರೌಪತಿ ತನ್ನ ಅಪಮಾನದ ಕಿಚ್ಚನ್ನು ಒಡಲಲ್ಲಿಟ್ಟುಕೊಂಡು ದುರ್ಯೊಧನನ ಸಾವಲ್ಲಿ ತಣ್ಣಗಾಗುತ್ತಾಳೆ. ಗಾಂಧಾರಿಯಂತೂ ತನ್ನ ನೂರೊಂದು ಮಕ್ಕಳ ಸಾವಿನ ಸೇಡಿನ ಕಿಚ್ಚನ್ನು ಶ್ರೀಕೃಷ್ಣನಿಗೆ ಶಾಪಹಾಕುವ ಮೂಲಕ ನೀಗಿಕೊಳ್ಳುತ್ತಾಳೆ. ಹೀಗೆ... ಇಲ್ಲಿ ಬೆಂಕಿ ಎನ್ನುವುದು ನೇರ ಅಗ್ನಿಯೂ ಆಗುತ್ತದೆ ಜೊತೆಗೆ ಮನದೊಳಗಿನ ದ್ವೇಷಾಗ್ನಿಯೂ ಆಗುತ್ತದೆ. ಸೇಡು, ಶಾಪ, ರೋಷ, ರೊಚ್ಚು, ಹತಾಶೆ, ಶಪತಗಳಾದಿ ರೂಪದಲ್ಲಿ ಬೆಂಕಿ ಮಹಾಭಾರತದ ಮಹಾಸಾದ್ವಿಯರನ್ನು ತಟ್ಟಿದೆ. ಬೆಂಕಿಯ ಪ್ರಕೋಪ ಪುರುಷರನ್ನು ಬಲಿತೆಗೆದುಕೊಂಡಿದೆ. ಮಹಿಳೆಯರು ತಾಪದ ಬೆಂಕಿಯ ಪರಿಣಾಮದಿಂದ ಪುರುಷರ ಅಂತರಂಗದ ಅಹಂಕಾರ ಹಾಗೂ ಬಹಿರಂಗದ ಸಾಮ್ರಾಜ್ಯಗಳು ಪತನವಾಗಿವೆ. ಒಟ್ಟಾರೆಯಾಗಿ ಎಲ್ಲಿ ಮಹಿಳೆಯರು ಅಪಮಾನ, ಹತಾಶೆ, ಶೋಷಣೆ ಹಾಗೂ ವಂಚನೆಗೊಳಗಾಗುತ್ತಾರೋ ಅಲ್ಲಿ ಅದಕ್ಕೆ ಕಾರಣೀಕರ್ತರಾಗುವ ಪುರುಷರು ನಾಶವಾಗುತ್ತಾರೆ ಎನ್ನುವ ಸಂದೇಶವನ್ನು ಅಗ್ನಿಪಥ ನಾಟಕವು ಪರೋಕ್ಷವಾಗಿ ಸಾರುತ್ತದೆ.

ಬಿ.ಜಯಶ್ರೀರವರು
ಪುರಾಣ ಚರಿತ್ರೆಗಳೆಲ್ಲಾ ಸ್ತ್ರೀ ಶೋಷಣೆಯನ್ನೇ ಮಾಡಿವೆ. ಆದರೆ ಶಿವಶರಣರು ಮಾತ್ರ ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದವರು, ಮಹಿಳೆಯರಲ್ಲಿ ವಿಶ್ವಾಸ ತುಂಬಿದವರು ಎಂದು ಗೊಂದಲಿಗರ ಮೂಲಕ ನಾಟಕದಲ್ಲಿ ಹೇಳಿಸಿರುವ ನಿರ್ದೇಶಕಿ ಸ್ತ್ರೀಸಮಾನತೆಯ ಆಶಾಕಿರಣವೊಂದನ್ನು ನಾಟಕದಲ್ಲಿ ಬಿತ್ತಿದ್ದಾರೆ. ಜೊತೆಗೆ ಮಹಿಳೆಯರು ಮೈಕೊಡವಿ ಮೇಲೇಳಬೇಕು, ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಬೇಕು ಎಂಬ ಸಂದೇಶವನ್ನೂ ನಿರೂಪಕರ ಮೂಲಕ ಕೊಡುತ್ತಾರೆ. ಸ್ತ್ರೀಸಂವೇದನೆಯ ಸಾರ್ಥಕ ಸಂದೇಶವನ್ನು ನಾಟಕದ ದೃಶ್ಯದಲ್ಲಿ ಕಟ್ಟಿಕೊಡಲಾಗದಿದ್ದರೂ ಬಿ.ಜಯಶ್ರೀರವರು ಹೀಗೆ ನಾಟಕದ ಕೊನೆಯಲ್ಲಿ ನಿರೂಪಕರ ಬಾಯಲ್ಲಿ ಮಾತಾಗಿ ಹೇಳಿಸಿದ್ದು ಸಮಾಧಾನಕರವಾಗಿದೆ

                                  -ಶಶಿಕಾಂತ ಯಡಹಳ್ಳಿ 





 
 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ