ದೀಪದ ಕೆಳಗೆ ಕತ್ತಲಿರುತ್ತದೆ. ಜಗಮಗಿಸುವ ರಂಗವೇದಿಕೆಯ ಹಿಂದೆ ನೆರಳಿನಲ್ಲಿ
ನೇಪತ್ಯವಿರುತ್ತದೆ. ರಂಗಕರ್ಮಿಗಳ ಬದುಕಲ್ಲಿ ಕೆಲವು ಬೇಸರಗಳೂ ಇರುತ್ತವೆ. ಬಹುಷಃ ಬಹುತೇಕರು ತಮ್ಮ
ಬೇಸರಗಳನ್ನು ತಮ್ಮೊಳಗೇ ಬಚ್ಚಿಟ್ಟುಕೊಂಡು ರಂಗಭೂಮಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ತೊಡಗಿಕೊಂಡಿರುತ್ತಾರೆ.
ಕೆಲವರನ್ನು ಹೊರತುಪಡಿಸಿ ಹಲವರ ರಂಗಬದುಕಿನ ಹಿಂದೆ ಬೇಸರದ ಸಂಗತಿಗಳು ಇದ್ದೇ ಇರುತ್ತವೆ. ಅದಕ್ಕೆ
ಹೇಳುವುದು ಬದುಕು ಹಾಗೂ ರಂಗಭೂಮಿ ಎರಡೂ ನೆರಳು ಬೆಳಕಿನ ಆಟ ಎಂದು. ಎಂತಹ ಬೇಸರಗಳಿದ್ದರೂ ಪರವಾಗಿಲ್ಲ
ಅವು ರಂಗಭೂಮಿಯನ್ನು ತೊರೆಯುವ ಹಾಗೆ ಮಾಡಬಾರದು. ಹಾದಿಯ ಮುಳ್ಳುಗಳು ಗುರಿಯನ್ನು ಬದಲಾಯಿಸಬಾರದು.
ಆದರೆ... ಈ ಒಂದು ಬೇಸರದ ಘಟನೆ ಯುವ ರಂಗಕರ್ಮಿಯೊಬ್ಬಳನ್ನು ರಂಗಭೂಮಿಯಿಂದ ವಿಮುಖರನ್ನಾಗಿಸುವ ಹಾಗಿವೆ.
ಒಂಚೂರು ಓದಿ ಸಂಬಂಧಪಟ್ಟವರು ಗಮನಿಸಿ.
ಇದು ಹೇಳಬಾರದ ಸಂಗತಿ ಆದರೂ ಹೇಳಲೇ ಬೇಕಿದೆ.
ಆಕೆ ಕನ್ನಡ ರಂಗಭೂಮಿಯಲ್ಲಿ
ತುಂಬಾ ಆಸಕ್ತಿಯಿಂದ ತೊಡಗಿಕೊಂಡಿದ್ದಾರೆ. ಬದುಕಿನಲ್ಲಾದ ಕೌಟುಂಬಿಕ ದುರಂತಗಳನ್ನೆಲ್ಲಾ ಹಲ್ಲುಕಚ್ಚಿ
ಸಹಿಸಿಕೊಂಡು ನಾಟಕಗಳ ನಿರ್ಮಿತಿಯಲ್ಲಿ ನೆಮ್ಮದಿಯನ್ನು ಕಾಣಲು ಏಕಾಂಗಿಯಾಗಿ ಪ್ರಯತ್ನಿಸುತ್ತಿದ್ದಾಳೆ.
ಹಲವಾರು ಯುವ ಕಲಾವಿದರಿಗೆ ತರಬೇತಿಯನ್ನು ಕೊಟ್ಟು ನಿರಂತರವಾಗಿ ಉತ್ತಮ ನಾಟಕಗಳನ್ನು ಮಾಡುತ್ತಲೇ ಬಂದಿದ್ದಾಳೆ.
ರಂಗಭೂಮಿ ಅವರ ಬದುಕಾಗಿದೆ. ನಾಟಕರಂಗವನ್ನೇ ನಂಬಿ ಬದುಕುತ್ತಿದ್ದಾಳೆ. ಅಸಾಧ್ಯ ಪ್ರತಿಭಾವಂತೆ. ಹೆಸರು
ಹೇಳುವ ಅಗತ್ಯವಿಲ್ಲ ಬೇಕಾದರೆ ಸಾಂಕೇತಿಕವಾಗಿ 'ದಾಮಿನಿ' ಎಂದು ತಿಳಿದುಕೊಳ್ಳೋಣ.
ಎಲ್ಲಿ ಪ್ರತಿಭೆ ಇದೆಯೋ ಅವರ ಸುತ್ತ ಅಕಾರಣವಾಗಿ ಅಸೂಯೆಯೆಂಬ ರಕ್ಕಸ ಮನಸ್ಸಿನ ಮನೋರೋಗದ ವ್ಯಕ್ತಿಗಳೂ
ಇರುತ್ತಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಮೊನ್ನೆ ಸಿಜಿಕೆ ರವರ 'ಬೆಲ್ಚಿ' ನಾಟಕವನ್ನು ಸಂಸ
ಬಯಲು ರಂಗಮಂದಿರದಲ್ಲಿ ನೋಡುತ್ತಿದ್ದೆ. ನಮ್ಮ ದಾಮಿಣಿ ಪೋನ್ ಮಾಡಿದರು. ತುಂಬಾ ಆತಂಕದಲ್ಲಿದ್ದಂತಿತ್ತು.
"ಸಾರ್ ನಿಮ್ಮ ಹತ್ತಿರ ಅರ್ಜೆಂಟಾಗಿ ಮಾತಾಡಬೇಕಿದೆ"
ಎಂದರು. ನಾಟಕ ಮುಗಿದ ತಕ್ಷಣ ಮಾತಾಡೋಣ ಎಂದೆ. ಆದರೂ ಸಂಸದ ಮುಂದೆ ಬಂದು ಅಸಹನೆಯಿಂದ ಅತ್ತಿತ್ತ
ಓಡಾಡುತ್ತಲೇ ಇದ್ದರು. ನಾಟಕ ಮುಗಿದ ತಕ್ಷಣ ಬೆಟ್ಟಿಯಾಗಿ ತಮ್ಮ ಆತಂಕವನ್ನು ತೋಡಿಕೊಂಡರು.
ಕಣ್ಣಲ್ಲಿ ವಸರುತ್ತಿದ್ದ ನೀರನ್ನು ನಿಯಂತ್ರಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದರು.
ಇಷ್ಟಕ್ಕೂ ಆಗಿದ್ದಾದರೂ ಏನು? ಕೇಳಿದೆ. 'ದಯವಿಟ್ಟು ಹೋಗಿ ಕಲಾಕ್ಷೇತ್ರದ ಪುರುಷರ
ಟೈಲೆಟ್ ನೋಡಿ ಸಾರ್' ಎಂದಳು. ನನಗೆ ಗಾಬರಿಯಾಯಿತು. ನಾನ್ಯಾಕೆ ನೋಡಬೇಕು? 'ಏನಾಯಿತು ಹಾಗೇ ಹೇಳಿ' ಎಂದೆ. ಕಣ್ಣೀರು ಕಟ್ಟೆ ಒಡೆಯಿತು. ಅಕ್ಕಪಕ್ಕ
ಯಾರಾದರೂ ಇದ್ದಾರಾ ಎಂದು ನೋಡಿ ಗುಟ್ಟು ಹೇಳುವವರಂತೆ 'ಸಾರ್, ಕಲಾಕ್ಷೇತ್ರದ ಗಂಡಸರ ಟೈಲೆಟ್ಟಿನೊಳಗಿನ
ಗೋಡೆ ಹಾಗೂ ಬಾಗಿಲಿನ ಹಿಂದೆ ನನ್ನ ಬಗ್ಗೆ ಅಶ್ಲೀಲವಾಗಿ ಏನೇನೋ ಬರೆದಿದ್ದಾರಂತೆ, ನನ್ನ ಮಾನ ಮರ್ಯಾದೆ
ಹಾಳು ಮಾಡಲು ಯಾರೋ ಪ್ರಯತ್ನಿಸುತ್ತಿದ್ದಾರೆ ಸಾರ್, ಏನು ಮಾಡೋದು ಮರ್ಯಾದೆಯಿಂದ
ಕೆಲಸ ಮಾಡಲೂ ಬಿಡ್ತಿಲ್ಲಾ ಇಲ್ಲಿ, ನೆಮ್ಮದಿ ಹಾಳು ಮಾಡ್ತಿದ್ದಾರೆ.." ಎಂದು ಅವಲತ್ತುಕೊಂಡರು.
ಅವಳ ತಂಡದ ಹುಡುಗನೊಬ್ಬ ಆ ಹೊಲಸು ಬರಹವನ್ನು ನೋಡಿ
ಆತಂಕದಿಂದ ಹೇಳಿದ್ದನ್ನು ವಿವರಿಸಿದರು.
ಸಮಸ್ಯೆಯ ಗಾಂಭೀರ್ಯತೆ ಅರ್ಥವಾಗತೊಡಗಿತು. ಆ ಯುವ ರಂಗನಿರ್ದೇಶಕಿಯ ಮನದೊಳಗಿನ
ತುಮುಲಕ್ಕೆ ಕಾರಣ ಗೊತ್ತಾಯಿತು. ನನ್ನೊಳಗೆ ನನಗೆ ಕೆಟ್ಟ ಮನಸ್ಸಿನ ಗಂಡು ಕುಲದ ಮೇಲೆಯೇ ಹೇಸಿಗೆ ಎನಿಸತೊಡಗಿತು.
ಅಸಮಾಧಾನವಿದ್ದರೆ ನೇರವಾಗಿ ತಿಳಿಸಬೇಕು, ಅಸೂಯೆ ಇದ್ದರೆ ಅದನ್ನು ತಮ್ಮ ಪ್ರತಿಭೆಯ ಮೂಲಕ ಪೈಪೋಟಿ
ಎದುರಿಸಿ ಸಾಬೀತುಪಡಿಸಬೇಕು. ದ್ವೇಷ ಇದ್ದರೆ ನೇರಾ ನೇರಾ ಕಾದಾಡಬೇಕು. ಅದು ಬಿಟ್ಟು ಹೆಣ್ಣುಮಗಳೊಬ್ಬಳ
ಕುರಿತು ಹೀಗೆ ಹೇಡಿಯ ಹಾಗೆ ಟೈಲಟ್ಟಿನಲ್ಲಿ ಕುಳಿತು ಚಾರಿತ್ರ್ಯವಧೆ ಮಾಡಿ ವಿಕೃತ ಸಂತೋಷ ಪಡುತ್ತಿರುವ
ಅನಾರೋಗ್ಯಕರ ಮನಸ್ಸುಗಳಿಗೆ ಏನು ಮಾಡುವುದು.
" ಈ ಸಮಸ್ಯೆ ಇಂದು ನಿನ್ನೆಯದಲ್ಲ. ಪರಂಪರಾಗತವಾಗಿ ಬಂದಿದೆ. ಪುರುಷ
ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಯಾವುದೇ ಕಾರಣಕ್ಕೂ ಮುಂದೆ ಮುನ್ನುಗ್ಗುವುದನ್ನು ಗಂಡಿನ ಅಹಂ ಒಪ್ಪುತ್ತಿಲ್ಲ.
ಅಕಸ್ಮಿಕವಾಗಿ ಆಕೆ ಒಂದಿಷ್ಟು ತನ್ನ ಪ್ರತಿಭೆ, ಚಾರಿತ್ರ್ಯಗಳಿಂದ
ಹೆಸರು ಪಡೆಯುತ್ತಿರುವಳೆಂದರೆ ಸಾಕು ಎಲ್ಲಾ ಅಸ್ತ್ರಗಳನ್ನು ಬಳಸಿ ಮಹಿಳೆಯ ಮಾನಸಿಕ ಸ್ತೈರ್ಯವನ್ನೇ
ಕಂಗೆಡಿಸುತ್ತಾರೆ. ಅದೆಲ್ಲವನ್ನೂ ಎದುರಿಸಿ ಹೆಣ್ಣು ದಿಟ್ಟವಾಗಿ ನಿಂತರೆ ಅವಳ ಚಾರಿತ್ರ್ಯವನ್ನು ಕೆಡಿಸಲು
ನೋಡುತ್ತಾರೆ. ಇದು ಎಂ.ಎಂ. ಕಲಬುರ್ಗಿಯವರ 'ಖರೇ ಖರೇ ಸಂಗ್ಯಾಬಾಳ್ಯಾ' ನಾಟಕದಲ್ಲಿ ಸ್ಪಷ್ಟವಾಗುತ್ತದೆ.
ಇಂತಹ ಪುರುಷ ದೌರ್ಜನ್ಯಕ್ಕೆ ಸೀತೆಯಂತ ಸೀತೆಯೇ ಬಲಿಯಾದಳು
ಇನ್ನು ಬೇರೆಯವರಾವ ಲೆಕ್ಕ. ಯಾವಾಗ ಮಹಿಳೆಯನ್ನು ಸಕಾರಾತ್ಮಕವಾಗಿ ಎದುರಿಸಲು ಗಂಡಸರಿಗೆ ಸಾಧ್ಯವಾಗುವುದಿಲ್ಲವೋ
ಆಗೆಲ್ಲಾ ಪುರುಷರು ನಕಾರಾತ್ಮಕವಾದ ವಾಮಮಾರ್ಗ ಹಿಡಿದಿದ್ದು ಇತಿಹಾಸದಲ್ಲಿ ಹಾಸುಹೊಕ್ಕಾಗಿದೆ. ಹೆಣ್ಣಿನ
ಶೀಲವನ್ನೇ ಗುರಿಯಾಗಿಸಿಕೊಂಡು ಮರ್ಯಾದೆಗೆಡಿಸುವ ಕೆಲಸ ಮಾಡುವ ಹೊಲಸು ಮನಸ್ಸುಗಳು ಎಲ್ಲಾ ಕಡೆಗೂ ಎಲ್ಲಾ
ಕಾಲಕ್ಕೂ ಇವೆ. ಹೀಗಾಗಿ ಎಂದು ದೃತಿಗೆಡಬೇಡಿ, ಇಂತಹ ವಿಕ್ಷಪ್ತ ವ್ಯಕ್ತಿಗಳ ಹೊಲಸು ಕೆಲಸಕ್ಕೆ ಚಿಂತಿಸಬೇಡಿ " ಎಂದು
ಧೈರ್ಯ ಹೇಳಿದೆ.
"ಸಾರ್ ಆ ಅಸಹ್ಯದ ಬರಹ
ಓದಿದವರೆಲ್ಲಾ ನನ್ನ ಬಗ್ಗೆ ಕೆಟ್ಟದಾಗಿ ತಿಳಿದುಕೊಳ್ಳುತ್ತಾರೆ...." ಅವಳ ಆತಂಕ ಸರಿಯಾಗಿತ್ತು. "ಆಯಿತು ಯಾರು ಬರೆದಿದ್ದಾರೆ
ಎಂಬುದು ಗೊತ್ತಿಲ್ಲದೇ ಅವರನ್ನು ಹಿಡಿದು ಶಿಕ್ಷಿಸಲು ಸಾಧ್ಯವಿಲ್ಲ. ಇದು ಯಾರೋ ಹೇಡಿಗಳು ಅಸೂಹೆಯಿಂದ
ಮಾಡಿದ ಕುಕೃತ್ಯವಾಗಿದೆ. ಕಲಾಕ್ಷೇತ್ರದ ಮ್ಯಾನೇಜರ್ ಹತ್ತಿರ ಮಾತಾಡಿ ಸರಿಪಡಿಸಲು ಹೇಳುತ್ತೇನೆ. ಮೊದಲು
ನಿಮ್ಮ ತಂಡದ ಯಾರೋ ಒಬ್ಬ ಹುಡುಗನನ್ನು ಕಳುಹಿಸಿ ಮೊದಲು ಆ ದರಿದ್ರ ಬರಹವನ್ನು ಹೇಗಾದರೂ ಮಾಡಿ ಅಳಿಸಲು
ಏರ್ಪಾಡು ಮಾಡಿ. ಎಲ್ಲಿವರೆಗೂ ನೀವು ಸರಿಯಾದ ದಾರಿಯಲ್ಲಿ ಇರುತ್ತೀರೋ ಅಲ್ಲಿವರೆಗೂ ಇಂತಹ ಯಾವುದೇ
ಅಡೆತಡೆಗೂ ಆತಂಕಪಡುವ ಅಗತ್ಯವಿಲ್ಲ. ನಿಮ್ಮ ರಂಗಕಾರ್ಯದತ್ತ ಗಮನ ಕೊಡಿ....." ಎಂದು ಹೇಳಿ ಕಳುಹಿಸಿದೆ.
ಆದರೂ ಮನಸ್ಸು ತಳಮಳಿಸತೊಡಗಿತು.
ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಹೀಗಾಗಿದ್ದರೆ ನಾನು ಹೇಗೆ ರಿಯಾಕ್ಟ ಮಾಡುತ್ತಿದ್ದೆ.
ಬಹುಷಃ ಹೀಗೇನೆ ಮಾಡುತ್ತಿದ್ದೆ. ಯಾಕೆಂದರೆ ಹಾಗೆ ಹೇಡಿತನದ ಹೊಲಸು ವ್ಯಕ್ತಿಯನ್ನು ಕಂಡು ಹಿಡಿಯುವುದಾದರೂ
ಹೇಗೆ. ನೇರವಾಗಿ ಜಗಳಕ್ಕೆ ಬಂದರೆ ನೆಲ ಕಚ್ಚಿ ನಿಂತು ಗೆಲ್ಲಬಹುದು. ಆದರೆ ಹೀಗೆ ಕತ್ತಲಲ್ಲಿ ಕಲ್ಲು
ಹೊಡೆದು ಓಡಿ ಹೋಗುವವರನ್ನು, ಟೈಲೆಟ್ ನಲ್ಲಿ ಹೊಲಸು ಹೊಲಸಾಗಿ ಬರೆದು ಹೆಸರು ಹಾಳುಮಾಡುವ ಹೇಡಿಗಳನ್ನು
ಮಾಡುವುದಾದರೂ ಏನು?
ಒಮ್ಮೆ ಬಿಡುವಾದಾಗ ಕಲಾಕ್ಷೇತ್ರದ ಪುರುಷರ ಟೈಲೆಟ್ ಗೆ ಬೇಟಿ ಕೊಡಿ. ಎಲ್ಲಾ
ನಮೂನಿ ಲೈಂಗಿಕ ಸಾಹಿತ್ಯ ಅದರ ಗೋಡೆ ಬಾಗಿಲ ಮೇಲೆ ಇದೆ. ಇದನ್ನು ಬರೆದ ವಿಕೃತ ಮನಸ್ಸಿನ ನವ ವಾತ್ಸಾಯಣರು
ವಿಘ್ನಸುಖ ಅನುಭವಿಸುತ್ತಾರೆ. ಕಲಾಕ್ಷೇತ್ರದ ನಿರ್ವಹಣೆಯ ಹೊಣೆ ಅದರ ಮ್ಯಾನೇಜರ್ ಮತ್ತು ಸಿಬ್ಬಂದಿಯದಾಗಿದೆ.
ಯಾರಾದರೂ ಹೀಗೆ ಹೊಲಸಾಗಿ ಬರೆದರೆ ಅದನ್ನು ಗಮನಿಸಿ ಕೂಡಲೇ ಸ್ವಚ್ಚಗೊಳಿಸಬೇಕು. ಅನುಮಾನ ಬಂದ ಆಗುಂತಕರ
ಮೇಲೆ ಕಣ್ಗಾವಲಿಡಬೇಕು. ಸಿಕ್ಕವರನ್ನು ಹಿಡಿದು ಶಿಕ್ಷಿಸಬೇಕು. ಕರ್ನಾಟಕದ ಸಾಂಸ್ಕೃತಿಕ ಕೇಂದ್ರಸ್ಥಾನವಾದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂತಹ ಸಂಸ್ಕೃತಿ
ಹೀನ ಕೆಲಸಗಳು ನಡೆಯುವುದು ನಾಚಿಗೆಗೇಡಿನ ಸಂಗತಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ
ಕ್ರಮ ಕೈಗೊಳ್ಳಲೇಬೇಕಿದೆ.
ಇದೆಂತಾ ವಿಪರ್ಯಾಸ ನೋಡಿ.... ಮಹಿಳೆ ಸೀತೆಯ ಹಾಗೆ ತನ್ನ ಕಳಂಕವನ್ನು ತಾನೇ
ನಿವಾರಿಸಿಕೊಳ್ಳಬೇಕಾಗಿದೆ. ಪ್ರತಿ ದಿನ ಬದುಕಿನ ಅಗ್ನಿಪ್ರವೇಶ ಮಾಡಬೇಕಿದೆ. ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ
ಹೆಣ್ಣಮಕ್ಕಳು ತಮ್ಮ ಚಾರಿತ್ರ್ಯವನ್ನು ಕಾಪಾಡಿಕೊಳ್ಳಲು ಪರದಾಡಬೇಕಿದೆ. ಈ ಶೀಲದ ಪರಿಕಲ್ಪನೆ ಎನ್ನುವುದು
ಮಹಿಳೆಗೆ ಅಂಟಿಸಿದ ಶಾಪವಾಗಿದೆ. ರಂಗಭೂಮಿಯಲ್ಲಿ ಮಹಿಳೆಯರಿಗೆ ನೆಮ್ಮದಿ, ರಕ್ಷಣೆ,ಸುರ ಕ್ಷಿತ ಭಾವನೆ
ಇಲ್ಲವಾದರೆ ಮಹಿಳಾ ರಂಗಕರ್ಮಿಗಳು ರಂಗಕ್ರಿಯೆಯಲ್ಲಿ ತೊಡಗಿಕೊಳ್ಳುವುದಾದರೂ ಹೇಗೆ? ತೀವ್ರವಾಗಿ ತೊಡಗಿಸಿಕೊಂಡವರಿಗೂ
ಹೀಗೆ ಮಾನಸಿಕ ಹಿಂಸೆಯನ್ನು ಕೊಡುವುದರ ಮೂಲಕ ಅವರ
ಉತ್ಸಾಹವನ್ನು ಕುಂದಿಸುವುದರಿಂದ ರಂಗಭೂಮಿ ಬೆಳವಣಿಗೆಗೆ ಹಾನಿ ಇದೆ. ಮತ್ತು ಇಂತಹ ಮಹಿಳಾವಿರೋಧಿ ಕೆಲಸಕ್ಕೆ ಎಲ್ಲಾ ರಂಗಕರ್ಮಿಗಳು ಪ್ರತಿರೋಧಿಸಬೇಕಿದೆ. ಅಶ್ಲೀಲ ಬರವಣಿಗೆ
ಮಾಡಿದವನು ಯಾವನೇ ಇರಲಿ ಅಂತಹ ಕ್ರಿಮಿಗೆ ದಿಕ್ಕಾರವಿರಲಿ. ಮಹಿಳೆಗೆ ಗೌರವ ಕೊಡದ ಕೀಚಕರಿಗೆ ಖಂಡನೆಯಿರಲಿ.
ಹೆಣ್ಣಲ್ಲವೇ ನಿಮ್ಮ ಹೆತ್ತವಳು
ಹೆಣ್ಣಲ್ಲವೇ ನಿಮ್ಮ ಪೊರೆದವಳು
ಹೆಣ್ಣಲ್ಲವೇ ನಿಮ್ಮ ಪೊರೆದವಳು
ಹೆಣ್ಣು ಹೆಣ್ಣಂದೇಕೆ ಹೀಗಳಿವರು
ಕಣ್ಣು ಕಾಣದ ಗಾವಿಲು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ