ಹಿರಿಯ ಪತ್ರಕರ್ತ ಗುಡಿಹಳ್ಳಿ
ನಾಗರಾಜರವರು ಇಂದು (ಮೇ 30) ಪ್ರಜಾವಾಣಿ ಬಳಗದ ಪತ್ರಕರ್ತ ಹುದ್ದೆಯಿಂದ ನಿವೃತ್ತರಾದರು. ಅದೆಂತದೊ
ದುಗುಡ ದುಮ್ಮಾನದಲ್ಲಿ ಸಂಜೆ ಪ್ರೆಸ್ ಕ್ಲಬ್ ನಲ್ಲಿ ಕುಳಿತಿದ್ದರು. ಮೂರು ದಶಕಗಳಿಂದ ಕೆಲಸ ಮಾಡುತ್ತಾ
ಬಂದವರು ಇದ್ದಕ್ಕಿದ್ದಂತೆ ನಾಳೆಯಿಂದ ನಿಗಧಿತ ಕೆಲಸಕ್ಕೆ
ಹೋಗುವ ಹಾಗಿಲ್ಲವಲ್ಲ ಎಂದರೆ ಬೇಸರ ಹೆಪ್ಪುಗಟ್ಟುವುದು ಸಹಜ. ನಿವೃತ್ತರಾಗಿದ್ದಕ್ಕೆ ಒಂದೆರಡು ಸಾಂತ್ವನದ
ಮಾತನ್ನು ಹೇಳಿ ಇನ್ನು ಮೇಲೆ ರಂಗಭೂಮಿಯ ಕುರಿತು ಹೆಚ್ಚು ಬರೆಯಲು ಹೆಚ್ಚಿನ ಸಮಯ ಸಿಕ್ಕಿದ್ದಕ್ಕೆ
ಅಭಿನಂದನೆ ಹೇಳೋಣ ಎಂದು ಅವರ ಹತ್ತಿರ ಹೋದೆ. ಆದರೆ
ಅದೇನಾಯಿತೋ ಏನೋ ನನ್ನ ಮುಖ ನೋಡಿದ ತಕ್ಷಣ ಗುಡಿಹಳ್ಳಿಯವರಿಗೆ ದುಗುಡ ಜಾಸ್ತಿಯಾಯಿತು. "ಹುತ್ತವ
ಬಡಿದರೆ ಹಾವು ಸಾಯುವುದಿಲ್ಲ" ಎಂದು ಒಗಟಾಗಿ ಒಂದು ಸ್ವಲ್ಪ ವರಟಾಗಿ ಹೇಳಿದರು. ಅವರ ಒಗಟು ಮಾತಿನ
ಅರ್ಥ ಅಕ್ಕಪಕ್ಕದವರಿಗೆ ಆಗದಿದ್ದರೂ ನನಗೆ ಚೆನ್ನಾಗಿ ಗೊತ್ತಾಗಿತ್ತು. ಅಕಾಡೆಮಿ ಸಹಸದಸ್ಯರಾಗಲು ಗುಡಿಹಳ್ಳಿಯವರು
ಮಾಡಿದ ಹರಸಾಹಸದ ಬಗ್ಗೆ ನನ್ನ ಬ್ಲಾಗ್ ನಲ್ಲಿ ಬರೆದಿದ್ದು ಅವರನ್ನು ಕೆರಳಿಸಿತ್ತು. "ನೀನು
ಬರಹದ ಮೂಲಕ ಹುತ್ತವನ್ನು ಬಡೆದಿದ್ದೀಯೇ ಹೊರತು ಹಾವನ್ನು ಸಾಯಿಸಲು ಸಾಧ್ಯವಿಲ್ಲ" ಎಂಬುದು ಅವರ
ಮಾತಿನ ಮರ್ಮವಾಗಿತ್ತು. ಪರೋಕ್ಷವಾಗಿ ತಮ್ಮನ್ನು ತಾವೇ ಹಾವು ಎಂದುಕೊಂಡಿದ್ದು ಅವರ ಅರಿವಿಗೆ ಬರಲೇ
ಇಲ್ಲ.
ತಮ್ಮ ವೃತ್ತಿ ಜೀವನದಲ್ಲಿ
ಅದೆಷ್ಟು ವಿಷಯಗಳ ಬಗ್ಗೆ, ನಾಟಕಗಳ ಬಗ್ಗೆ, ಕೆಲವೊಮ್ಮೆ ಕೆಲವು ವ್ಯಕ್ತಿಗಳ ಬಗ್ಗೆ ಗುಡಿಹಳ್ಳಿಯವರು ಬರೆದಿದ್ದಾರೆ. ಇವರು ಬರೆದಿದ್ದನ್ನೂ ಬರೆಸಿಕೊಂಡವರು
ಸಕಾರಾತ್ಮಕವಾಗಿಯೇ ತೆಗೆದುಕೊಂಡಿದ್ದಾರೆ. ಆದರೆ ಯಾವಾಗ ನಾನು ಇದ್ದದ್ದನ್ನು ಇದ್ದಹಾಗೆಯೇ ಅತ್ಯಂತ
ಗೌರವ ಪೂರ್ವಕವಾಗಿ ಬರೆದಿದ್ದನ್ನು ಅರಗಿಸಿಕೊಳ್ಳಲಾಗದಿದ್ದ ಮೇಲೆ ಬೇರೆಯವರ ಕುರಿತು ಟೀಕೆ ಮಾಡುವ
ಹಕ್ಕು ಒಬ್ಬ ಪರ್ತಕರ್ತನಿಗಿದೆಯಾ? ಎಂದು ಆಲೋಚಿಸತೊಡಗಿದೆ. ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ
ತೆಗೆದುಕೊಳ್ಳದಿದ್ದರೆ ಅಂತವರು ಬೇರೆಯವರ ಕುರಿತು ಬರೆಯುವ ಸಾಹಸ ಮಾಡಲೇಬಾರದು. ಪರ್ತಕರ್ತನ ಪರಮ ಕರ್ತವ್ಯವೇ
ಸತ್ಯವನ್ನು ದಾಖಲಿಸುವುದು. ನಾನು ಗುಡಿಹಳ್ಳಿಯವರ ಕುರಿತು ಬರೆದಿದ್ದು ತಪ್ಪಾಗಿದ್ದರೆ, ಅದು ತಪ್ಪು ಎಂದು ಅವರ ಆತ್ಮಸಾಕ್ಷಿ ಒಪ್ಪಿದರೆ ಅದನ್ನು ವಿರೋಧಿಸಲಿ
ಬೇಡವೆಂದವರಾರು? ಬರೆದಿದ್ದು ಸತ್ಯವೆಂದು ಗುಡಿಹಳ್ಳಿಯವರ
ಅಂತರಂಗಕ್ಕೆ ತಿಳಿದಿದ್ದರೆ ಅದನ್ನು ಒಪ್ಪಿಕೊಳ್ಳಲಿ. ಅದು ಬಿಟ್ಟು ಹುತ್ತ ಹಾವು ಕೋಲು ಎಂದೆಲ್ಲಾ
ಒಗಟಾಗಿ ಮಾತಾಡುವುದು ಗುಡಿಹಳ್ಳಿಯಂತಹ ಹಿರಿಯ ಪರ್ತಕರ್ತರಿಗೆ ಶೋಭಿಸದು. ಪರ್ತಕರ್ತನ ಕರ್ತವ್ಯವನ್ನು
ಗುಡಿಹಳ್ಳಿಯವರಿಗೆ ನಾನು ಹೇಳಿಕೊಡುವುದು ಮೊಮ್ಮಗು ಅಜ್ಜನಿಗೆ ಕೆಮ್ಮು ಕಲಿಸಿಕೊಟ್ಟಂತಾಗುತ್ತದೆ.
ಅಂತಹ ದಾರ್ಷವೂ ನನ್ನದಲ್ಲ. ಆದರೆ ಸಣ್ಣ ಟೀಕೆಯನ್ನು ಸಹಿಸಿಕೊಳ್ಳುವ ಇಲ್ಲವೇ ಅದಕ್ಕೆ ಸಮರ್ಥವಾಗಿ ಉತ್ತರಿಸುವ ಸಾಧ್ಯತೆಯನ್ನು
ಬಿಟ್ಟು ಈರ್ಷೆಯನ್ನು ಹೊಂದುವುದು ಹಿರಿತನಕ್ಕೆ ತಕ್ಕುದಾದುದಲ್ಲ.
ಹಾವು ಸಾಯುತ್ತದೋ ಇಲ್ಲವೋ
ಗೊತ್ತಿಲ್ಲ. ಆದರೆ ಹಾವಿನಂತಹ ವಿಷಜಂತು ಮನುಕುಲಕ್ಕೆ ಯಾವುದೇ ರೀತಿಯಲ್ಲಿ ಮಾರಕವಾದಾಗ ಅದರ ಇರುವಿನ
ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟುಮಾಡುವುದು ಪರ್ತಕರ್ತನ ಪರಮ ಕರ್ತವ್ಯವಾಗಿದೆ. ಹಾವು ಸಾಯುತ್ತದೋ
ಇಲ್ಲವೋ ಗೊತ್ತಿಲ್ಲ ಆದರೆ ಹಾವಿನ ತಾವನ್ನು ಪೆನ್ನೆಂಬ ಕೋಲಿನಿಂದ ಬರಹಗಾರ ಹೊಡೆಯುತ್ತಲೇ ಇರಬೇಕಾಗುತ್ತದೆ.
ಹಾವು ಎಂದರೆ ಹಾವೇ ಎಂದುಕೊಳ್ಳಬೇಕಿಲ್ಲ. ಮನುಷ್ಯನೊಳಗೂ ಸಹ ಹಾವಿನಂತಹ ವಿಷ ಗುಣ ಸೇರಿಕೊಂಡಿತ್ತದೆ.
ಆ ಅವಗುಣದಿಂದ ಯಾವಾಗ ಮನುಷ್ಯ ಸ್ವಾರ್ಥಿಯಾಗುತ್ತಾನೋ, ತನ್ನ ಸ್ವಾರ್ಥಕ್ಕೆ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಾನೋ,
ಸ್ವಜನಪಕ್ಷಪಾತಿಯಾಗುತ್ತಾನೋ, ಜಾತೀವಾದಿ ಯಾಗುತ್ತಾನೋ, ಮತ್ತೊಬ್ಬರ ಅವಕಾಶಗಳನ್ನು ಕಸಿದುಕೊಳ್ಳುತ್ತಾನೋ, ತನ್ನ ಹುದ್ದೆಯ ದುರುಪಯೋಗ
ಮಾಡಿಕೊಂಡು ಪ್ರಶಸ್ತಿ, ಆಸ್ತಿ ಹೊಡೆದುಕೊಳ್ಳುತ್ತಾನೋ... ಅಂತಹ ಹಾವುಗಳು ಯಾವುದೇ ಹುತ್ತದಲ್ಲಿರಲಿ
ಅವನ್ನು ಸರಿದಾರಿಗೆ ತರಲು, ತಿದ್ದಿಕೊಂಡು ನಡೆಯಲು... ಪರ್ತಕರ್ತ ಹಾಗೂ ಪತ್ರಿಕೆಗಳು ಹುತ್ತವನ್ನು
ಬಡಿಯುವ ಕೆಲಸವನ್ನು ಮಾಡುತ್ತಲೇ ಇರುತ್ತವೆ. ಇಲ್ಲಿ ಮನುಷ್ಯನ ಸ್ವಾರ್ಥಕ್ಕಾಗಿ ಮನುಷ್ಯನನ್ನು ಕೊಲ್ಲಲು
ಸಾಧ್ಯವಿಲ್ಲ. ಆದರೆ ಅಂತಹ ಮನುಷ್ಯನೊಳಗಿನ ಸ್ವಾರ್ಥ ಹಾಗೂ ಅದರಿಂದುಂಟಾಗುವ ಪರಿಣಾಮಗಳ ಕುರಿತು ತಿಳುವಳಿಕೆ
ಕೊಡುವ ಹಾಗೂ ಅಂತಹ ವ್ಯಕ್ತಿಯಿಂದ ಹುಷಾರಾಗಿರಿ ಎಂದು ಇತರರನ್ನು ಎಚ್ದರಿಸುವ ಕೆಲಸವನ್ನು ಬರಹಗಾರ
ಮಾಡಬೇಕಾಗುತ್ತದೆ. ಇದು ಗುಡಿಹಳ್ಳಿಯಂತಹ ಹಿರಿಯ ಬರಹಗಾರರಿಗೆ ಗೊತ್ತಿಲ್ಲವೆಂದಲ್ಲ. ಅಥವಾ ಅಂತಹ ವಿವೇಕಿಗಳಿಗೆ
ತಿಳುವಳಿಕೆ ಹೇಳಬೇಕಾದ ದುರಹಂಕಾರವೂ ನನ್ನಂತ ಕಿರಿಯ ಪರ್ತಕರ್ತನಿಗಿಲ್ಲ.
"ಹಾವು - ಹುತ್ತಕ್ಕಿಂತ
ಇಲ್ಲಿ ಕೋಲು ಮುಖ್ಯ. ಹುತ್ತವ ಬಡಿದರೆ ಕನಿಷ್ಟ ಹಾವು ಹೆದರಿಕೊಳ್ಳಬಹುದು. ಸರಿಹೋಗಬಹುದು. ಇಲ್ಲವೇ
ಬೇರೆಯವರಿಗೆ ಹಾವಿನ ಇರುವು ಗೊತ್ತಾಗಿ ಅವರು ಎಚ್ಚೆತ್ತುಕೊಳ್ಳಬಹುದು. ಹುತ್ತ ಬಡಿಯುವುದೇ ನನ್ನ ಕಸಬು"
ಎಂದು ನಾನು ಕೂಲಾಗಿ ಗುಡಿಹಳ್ಳಿಯವರಿಗೆ ಉತ್ತರಿಸಿದೆ. ನನ್ನ ಉತ್ತರ ಗುಡಿಹಳ್ಳಿಯವರಿಗೆ ಅರ್ಥವಾಯಿತೋ
ಇಲ್ಲವೋ ಗೊತ್ತಿಲ್ಲ ಮೌನಕ್ಕೆ ಶರಣಾದರು. 'ಹಾವಿನ ದ್ವೇಷ ಹನ್ನೆರಡು ವರುಷ. ನನ್ನ ದ್ವೇಷ ನೂರು ವರುಷ' ಎಂದು ನಾಗರಹಾವಿನ ವಿಷ್ಣುವರ್ಧನ್ ರೀತಿ ಗುಡಿಹಳ್ಳಿಯವರು
ಇನ್ನು ಮುಂದೆ ನನ್ನ ನೋಡಿದಾಗಲೆಲ್ಲಾ ಹಾಡುತ್ತಾರೋ ಇಲ್ಲವೇ ಚಿಕ್ಕ ಪುಟ್ಟ ಟೀಕೆ ಟಿಪ್ಪಣಿಗಳನ್ನು
ಸಕಾರಾತ್ಮಕವಾಗಿ ತೆಗೆದುಕೊಂಡು ಆತ್ಮೀಯತೆಯನ್ನು ಮುಂದುವರೆಸುತ್ತಾರೋ ಎನ್ನುವುದು ನೋಡಬೇಕಿದೆ.
ಏನೇ ಆಗಲಿ ಮೂರು ದಶಕಗಳಿಂದ
ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಪರ್ತಕರ್ತರಾಗಿ ಕಾರ್ಯನಿರ್ವಹಿಸುತ್ತಲೇ ರಂಗಭೂಮಿಯ ಬಗ್ಗೆ ಅಪಾರವಾದ
ಒಲವನ್ನು ಹೊಂದಿ ಕಾಲಕಾಲಕ್ಕೆ ರಂಗಚಟುವಟಿಕೆಗಳನ್ನು ದಾಖಲಿಸಿದ್ದು ಗುಡಿಹಳ್ಳಿಯವರ ರಂಗಾಸಕ್ತಿಗೆ
ಸಾಕ್ಷಿಯಾಗಿದೆ. ಈಗ ಅವರು ನಿಗದಿತ ಹುದ್ದೆಯಿಂದ ನಿವೃತ್ತರಾಗಿದ್ದಾರೆಯೇ ಹೊರತು ಬರವಣಿಗೆಯಿಂದಲ್ಲ.
ಕಲಾವಿದನಿಗೆ, ಬರಹಗಾರನಿಗೆ ನಿವೃತ್ತಿ ಎನ್ನುವುದೇ ಇಲ್ಲ. ಅವರು ಸ್ವಯಂ ನಿವೃತ್ತರಾಗುವವರೆಗೂ ಯಾರೂ
ಕ್ರಿಯಾಶೀಲತೆಯನ್ನು ನಿವೃತ್ತಗೊಳಿಸಲು ಸಾಧ್ಯವೇ ಇಲ್ಲ. ಹೀಗಾಗಿ ಗುಡಿಹಳ್ಳಿ ನಾಗರಾಜರವರು ನಿರಂತರವಾಗಿ ರಂಗಭೂಮಿ
ಕುರಿತು ಬರೆಯುತ್ತಾ ಇರಲಿ. ಅವರ ನಿವೃತ್ತಿಯ ನಂತರದ ಉಳಿಕೆಯ ಸಮಯ ರಂಗಭೂಮಿಗೆ ಬಳಕೆಯಾಗಲಿ, ಅವರು
ಯಾವುದೇ ಕಾರಣಕ್ಕೂ ಹಾವೂ ಆಗದೇ ಹುತ್ತವೂ ಆಗದೇ ಸಮಾಜವನ್ನು ಎಚ್ಚರಿಸುವ ಕೋಲಾಗಲಿ. ಅವರ ಪ್ರತಿಭೆ
ರಂಗಭೂಮಿಯನ್ನು ದಾಖಲಿಸುವ ಪೆನ್ನಾಗಲಿ. ಗುಡಿಹಳ್ಳಿಯವರು ನೂರ್ಕಾಲ ಕ್ರಿಯಾಶೀಲವಾಗಿ ಬದುಕಲಿ ಎಂದು
ಮನತುಂಬಿ ಆಶಿಸೋಣ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ