ಗುರುವಾರ, ಮೇ 1, 2014

ಅಲೌಕಿಕ ಹಾದಿಯ ಹುಡುಕಾಟದಲ್ಲಿ ಶಿವಸಂಚಾರದ ’ಶರಣಸತಿ-ಲಿಂಗಪತಿ’

                                                                       
ತರಳಬಾಳು ಶ್ರೀಮಠದ 20ನೇ ಜಗದ್ಗುರುಗಳಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ (1914-1992) ಶತಮಾನೋತ್ಸವದ ಆಚರಣೆಯ ಅಂಗವಾಗಿ ಅವರೇ ರಚಿಸಿದ್ದ ಶರಣಸತಿ-ಲಿಂಗಪತಿ ನಾಟಕವನ್ನು ಎಸ್.ಮಾಲತಿರವರ ನಿರ್ದೇಶನದಲ್ಲಿ ವರ್ಷದ ಸಾಣೇಹಳ್ಳಿ ರೆಪರ್ಟರಿ ತಿರುಗಾಟವು ಕರ್ನಾಟಕದಾದ್ಯಂತ ಪ್ರದರ್ಶಿಸಲಾಗುತ್ತಿದೆ. ರಂಗನಿರಂತರ ಹಾಗೂ ಭಾರತ ಯಾತ್ರಾ ಕೇಂದ್ರವು  ಜಂಟಿಯಾಗಿ ಬೆಂಗಳೂರಿನಸಂಸ ಬಯಲು ರಂಗ ಮಂದಿರದಲ್ಲಿ ಎಪ್ರಿಲ್ 29 ರಿಂದ ಮೂರು ದಿನಗಳ ಕಾಲ ಆಯೋಜಿಸಿದ ಸಿ.ಆರ್.ಸಿಂಹ ನೆನಪಿನ ಶಿವಸಂಚಾರ ನಾಟಕೋತ್ಸವದಲ್ಲಿ 2014 ಎಪ್ರಿಲ್ 30ರಂದು ಶರಣಸತಿ-ಲಿಂಗಪತಿ ನಾಟಕವು ಪ್ರದರ್ಶನಗೊಂಡಿತು.


ಅದು ಶಿವಶರಣೆ ಅಕ್ಕಮಾಹಾದೇವಿಯ ಆತ್ಮಕಥೆ. ಆಕೆ ಹುಟ್ಟಿನಿಂದ ಐಕ್ಯವಾಗುವವರೆಗಿನ ಪ್ರಮುಖ ಘಟನೆಗಳ ಜೊತೆಗೊಂದು ಪಯಣ. ಮಹಾದೇವಿ ಹುಟ್ಟಿದ್ದು, ಮರುಳಸಿದ್ದರು ಲಿಂಗದೀಕ್ಷೆ ಕೊಟ್ಟಿದ್ದು, ಚೆನ್ನಮಲ್ಲಿಕಾರ್ಜುನ ದೇವರನ್ನು ತನ್ನ ಗಂಡ ಎಂದಾಕೆ ನಂಬಿಕೊಂಡಿದ್ದು. ಕೌಶಿಕರಾಜ ಆಕೆಯನ್ನು ಮೆಚ್ಚಿದ್ದು. ಮೂರು ಶರತ್ತುಗಳೊಂದಿಗೆ ಅವನನ್ನು ವಿವಾಹವಾಗಿದ್ದು. ಆತ ಶರತ್ತುಗಳನ್ನು ಮುರಿದಾಗ ಬಟ್ಟೆಗಳನ್ನು ಬಿಸಾಕಿದ ಮಹಾದೇವಿ ಕೇಶವನ್ನು ಹೊದ್ದು ಕಲ್ಯಾಣದ ಅನುಭವ ಮಂಟಪ ಸೇರಿದ್ದು. ಅಲ್ಲಿ ಅಲ್ಲಮನ ಪರೀಕ್ಷೆಗಳಲ್ಲಿ ಪಾಸಾಗಿ ಶ್ರೀಶೈಲದತ್ತ ಚೆನ್ನಮಲ್ಲಿಕಾರ್ಜುನನ ಸನ್ನಿಧಿಗೆ ಪಯಣಿಸಿದ್ದು. ಕೊನೆಗೆ ಕದಳಿವನದಲಿ  ಐಕ್ಯಳಾಗಿದ್ದು. ಹೀಗೆ... ಅಕ್ಕನ ಬದುಕಿನ ಲೆಕ್ಕಗಳನ್ನು  ಘಟನೆಗಳ ಮೂಲಕ ನಾಟಕ ಹೇಳುತ್ತಾ ವಚನಗಳ ಜೊತೆಜೊತೆಗೆ ಸಾಗುತ್ತದೆ.

ಚಲನಶೀಲತೆ ನಾಟಕದ ಬಹುಮುಖ್ಯ ದ್ರವ್ಯಗುಣ. ನಿಜವಾದ ಅರ್ಥದಲ್ಲಿ ಇದು ಜಂಗಮ ನಡಿಗೆ. ಯಾಕೆಂದರೆ ಹುಟ್ಟಿದೂರಿನಿಂದ ರಾಜ ಕೌಶಿಕನ ಅರಮನೆಗೆ, ಅಲ್ಲಿಂದ ಕಲ್ಯಾಣದ ಕಡೆಗೆ ಮಹಾದೇವಿಯದು ಏಕಾಂಗಿ ಸಂಚಾರ. ಅನುಭವ ಮಂಟಪದಿಂದ ಶ್ರೀಶೈಲದವರೆಗೆ ಪ್ರಯಾಸದ ಪ್ರಯಾಣ, ಅಲ್ಲಿಂದ ಅಂತಿಮ ಗುರಿ ಕದಳಿವನ. ಅಲ್ಲಿ ಚೆನ್ನಮಲ್ಲಿಕಾರ್ಜುನನಲ್ಲಿ ಐಕ್ಯಳಾಗುವವರೆಗೆ ಅಕ್ಕಮಹಾದೇವಿಯದು ಎಲ್ಲೂ ನೆಟ್ಟಗೆ ನೆಲೆ ನಿಲ್ಲದ ಜಂಗಮ ಚಲನೆ.

ಭಕ್ತಿರಸಕ್ಕೊಂದು ಬಲು ದೊಡ್ಡ ರೂಪಕ ಶರಣೆ. ಮೀರಾ ಹೇಗೆ ಕೃಷ್ಣನೇ ತನ್ನ ಸಂಗಾತಿ ಎಂದು ಕೃಷ್ಣನ ಭಜನೆಯಲ್ಲಿ  ಕಾಲಕಳೆದಳೋ ಅದಕ್ಕಿಂತ ಹೆಚ್ಚಾಗಿ ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನ ಅಂದರೆ ಶಿವನನ್ನೇ ತನ್ನ ಗಂಡ ಎಂದು ಪರಿಭಾವಿಸಿಕೊಂಡು ಎಲ್ಲಾ ಕಷ್ಟಗಳನ್ನು  ಎದುರಿಸಿ ತನ್ನ ಅಂತಿಮ ಗುರಿ ಮುಟ್ಟಿದಳು. ಇದನ್ನು  ಭಕ್ತಿರಸದ ಪರಾಕಾಷ್ಟೆ ಎನ್ನಬೇಕೋ, ಮಾರ್ಕ್ಸ ಹೇಳಿದ ಹಾಗೆ ದೇವರು ಎನ್ನುವುದೊಂದು ಅಫೀಮಿನ ನಶಾ ಎಂದು ಹೇಳಬೇಕೋ, ಅಥವಾ ಪುರೋಹಿತಶಾಹಿ ಪರಿಕಲ್ಪನೆಗಳ ಪ್ರಕಾರ ಬದುಕು ನಶ್ವರ, ಶಾಶ್ವತವೊಂದೇ ಅದು ಈಶ್ವರ ಎನ್ನುವುದನ್ನು ಒಪ್ಪಿಕೊಳ್ಳಬೇಕೋ... ಎಂಬುದು ಅವರವರ ಭಾವಭಕುತಿಗೆ ಬಿಟ್ಟಿದ್ದು. ಅಲ್ಲಮನ ಹಾಗೆ ಅಕ್ಕಮಾಹಾದೇವಿಯ ಆಲೋಚನೆಗಳೇ ತುಂಬಾ ಸಂಕೀರ್ಣ. ಅವರಿಬ್ಬರ ಬದುಕಿನ ಪಯಣವಂತೂ ಇನ್ನೂ ವಿಕ್ಷಿಪ್ತ. ಆದರೆ ಇಬ್ಬರದೂ ಒಂದೇ ತತ್ವ ಅದು ಬೆತ್ತಲಾಗದೇ ಬಯಲು ಸಿಕ್ಕದಿಲ್ಲಿ, ಸನ್ಯಾಸ ಮತ್ತು ಆಧ್ಯಾತ್ಮಗಳು ಪುರುಷರಿಗಷ್ಟೇ ಅಲ್ಲ ಮಹಿಳೆಯೂ ಸಾಧಿಸಿ ತೋರಿಸಬಲ್ಲಳು ಎಂಬುದಕ್ಕೆ ಅಕ್ಕಮಹಾದೇವಿಯ ಬದುಕೆ ಸಾಕ್ಷಿಯಾಗಿದೆ.

  
ವ್ಯಕ್ತಿಸ್ವಾತಂತ್ರ್ಯಕ್ಕೊಂದು ಬಹುದೊಡ್ಡ ಪ್ರೇರಣೆ ವೈರಾಗಿಣಿ. ತನಗಿಷ್ಟ ಇಲ್ಲದ್ದನ್ನು ಮಾಡಲು ಒಪ್ಪದ ಮನಸ್ಸು ಆಕೆಯದು. ರಾಜವೈಭೋಗಗಳನ್ನು ತ್ಯಜಿಸಿ, ಇಹದ ಅನುಕೂಲತೆಗಳಿಗೆ ಬೆನ್ನುಹಾಕಿ, ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ಬೆತ್ತಲಾಗಿ ಏಕಾಂಗಿಯಾಗಿ ಹೊರಟ ಇಂತಹ ದಿಟ್ಟ ಮಹಿಳೆ ಬಹುಷಃ ಮನುಕುಲದ ಇತಿಹಾಸದಲ್ಲಿ ಅಕ್ಕಮಹಾದೇವಿಯನ್ನು ಬಿಟ್ಟರೆ ಬೇರಾರೂ ಇಲ್ಲ. ಬಹುತೇಕ ಮಹಿಳೆಯರು ತಮ್ಮಿಚ್ಚೆಗಳನ್ನು ಕೊಂದುಕೊಂಡು ಜೀವನಪರ್ಯಂತ ಬೇರೆಯವರ ಇಚ್ಚೆಗನುಗುಣವಾಗಿ ಬದುಕು ಸವೆಸುವಂತಹ ನಮ್ಮ ಮನಕುಲದ ಪುರುಷ ಪ್ರಧಾನ ಚರಿತ್ರೆಯಲ್ಲಿ ಮೊಟ್ಟಮೊದಲ ಬಾರಿ ತನ್ನಿಚ್ಚೆಯಂತೆ ಬದುಕಿ, ತನಗನ್ನಿಸಿದ ಗುರಿ ಮುಟ್ಟಿ ಯಶಸ್ವಿಯಾದವಳು ಮಹಾದೇವಿಅಕ್ಕ. ಲಿಂಗವನ್ನೇ ಪತಿಯಾಗಿ ಸ್ವೀಕರಿಸಿ ಆರಾಧಿಸಿದ ಶರಣೆಸತಿ ಅಕ್ಕಮಹಾದೇವಿ ವ್ಯಕ್ತಿಗತ ಸ್ವಾತಂತ್ರ್ಯವನ್ನು ಎತ್ತಿಹಿಡಿದವಳು. ವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಗಳಿಸಿಕೊಂಡು ವಚನಗಳ ಮೂಲಕ ತನ್ನ ಅನಿಸಿಕೆಗಳನ್ನು ಚರಿತ್ರೆಯಲ್ಲಿ ದಾಖಲಿಸಿದಳು. ಅಕ್ಕನ ಬದುಕಿನ ವಿಕ್ಷಿಪ್ತತೆಗಿಂತಲೂ ಅವಳ ವಚನಗಳು ವಿಶಿಷ್ಟವಾಗಿವೆ. ಅಕ್ಕನಿಗಿಂತಲೂ ಆಕೆಯ ತಂದೆ ತಾಯಿಗಳು ತಮ್ಮ ಮಗಳಿಗೆ ಕೊಟ್ಟ ಆಯ್ಕೆಯ ಸ್ವಾತಂತ್ರ್ಯ ಈಗಿನ ತಂದೆತಾಯಿಗಳಿಗೆ ಮಾದರಿಯಾಗಿದೆ. ಮರ್ಯಾದೆ ಹತ್ಯೆಗಳು ಹೆಚ್ಚಾಗಿರುವ ಈಗಿನ ಸಂದರ್ಭದಲ್ಲಿ, ಹೆಣ್ಣು ಮಕ್ಕಳೆಂದರೆ ತಂದೆ ಇಲ್ಲವೇ ಗಂಡ ಹೇಳಿದ ಹಾಗೆ ಕೇಳಿಕೊಂಡಿರಬೇಕು ಎನ್ನುವ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮಾಹಾದೇವಿಯ ತಂದೆ ತನ್ನ ಮಗಳ ಆಯ್ಕೆಯ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದು ನಾಟಕದ ಪ್ರಮುಖ ಅಂಶವಾಗಿದೆ.
  
ಆದರೆ..... ಶರಣರ ಲಿಂಗನಿಷ್ಟೆಯನ್ನು ಬಲು ನಿಷ್ಟೆಯಿಂದ ಪರಿಪಾಲಿಸಿದ ಅಕ್ಕಮಹಾದೇವಿ ಅದ್ಯಾಕೆ ಶರಣರ ಕಾಯಕ ನಿಷ್ಟೆಯನ್ನು ನಿರಾಕರಿಸಿದಳು?. ಕಾಯಕದಲ್ಲಿ  ಕೈಲಾಸ ಕಾಣುವ ಬದಲು ಭ್ರಮೆಯೆಂಬ ಭ್ರಮರದ ಬೆನ್ನೇರಿ ಚೆನ್ನಮಲ್ಲಿಕಾರ್ಜುನನ್ನು ಹುಡುಕಿ ಹೊರಟಳು? ಬಸವಾದಿ ಶರಣರು ವಾಸ್ತವಕ್ಕೆ ಹತ್ತಿರವಾದ ಸಿದ್ದಾಂತವನ್ನು ಪ್ರತಿಪಾದಿಸಿದರು, ಅದು ಕಾಯಕ ಸಿದ್ದಾಂತ. ಆದರೆ ಅಕ್ಕಮಹಾದೇವಿಯದು ಅವಾಸ್ತವದ ಹುಡುಕಾಟ. ದೇಹವೇ ದೇಗುಲ ಎಂದು ಭೌತಿಕ ದೇಹಕ್ಕೆ ದೈವತ್ವವನ್ನು ಕೊಟ್ಟು ಗೌರವಿಸಿದವರು ಬಸವಣ್ಣ. ಆದರೆ ಅಮೇಧ್ಯದ ಮಡಕೆ, ಮೂತ್ರದ ಕುಡಿಕೆ, ಎಲುವಿನ ತಡಿಕೆ, ಕೀವಿನ ಹಡಿಕೆ, ಸುಡಲೀ ದೇಹವ, ಒಡಲುವಿಡಿದು ಕೆಡದಿರು ಮರುಳೆ ಎಂದು ದೇಹವನ್ನೇ ತುಚ್ಚೀಕರಿಸಿ ಆತ್ಮಸಾಕ್ಷಾತ್ಕಾರವೇ ಬದುಕಿನ ಗುರಿಯನ್ನಾಗಿಸಿಕೊಂಡವಳು ಮಹಾದೇವಿ. ನನಗೇಕಯ್ಯಾ? ಪ್ರಯೋಜನವೇನಯ್ಯಾ? ಹಂಗೇಕಯ್ಯಾ? ಎಂದು ಬಹುತೇಕ ವಚನಗಳಲ್ಲಿ ಭೌತಿಕವಾದ ಎಲ್ಲವನ್ನೂ ನಿರಾಕರಿಸುತ್ತಾಳೆ.  ಇದೆಲ್ಲವನ್ನೂ ಗಮನಿಸಿದರೆ, ಬಸವಣ್ಣನದು ಲೌಕಿಕ ತಾರ್ಕಿಕ ಸಿದ್ದಾಂತ, ಆದರೆ ಮಹಾದೇವಿ ಅಕ್ಕನದು ಅಲೌಕಿಕ ಅತಾರ್ಕಿಕ ಸಿದ್ದಾಂತ ಎಂದು ಅನ್ನಿಸದೇ ಇರದು. ಬಸವಣ್ಣ ಸಾಮಾಜದ ಪ್ರವರ್ತಕನಾದರೆ ಮಹಾದೇವಿಅಕ್ಕ ಸಮಾಜಕ್ಕೆ ವಿಮುಖಳಾಗಿ ವ್ಯಯಕ್ತಿಕವಾದ ಆಂತರಿಕ ಆತ್ಮ ಸಾಧನೆಗೆ ಪ್ರತೀಕವಾಗಿದ್ದಾಳೆ. ಅಕ್ಕಮಹಾದೇವಿಯ ಬದುಕಿನ ನಾಟಕ ನೋಡಿದಾಗ ಎಲ್ಲಾ ಸಂದೇಹಗಳು ಕಾಡತೊಡಗುತ್ತವೆ.

ಸರ್ವಸಂಗ ಪರಿತ್ಯಾಗಿನಿಯಾಗಿ ಲಿಂಗಸಂಗವನು ಬಯಸಿದ ಮಹಾದೇವಿ ಬದುಕು ನಿಜಕ್ಕೂ ವಿಚಿತ್ರ ಮತ್ತು ವಿಕ್ಷಿಪ್ತ. ಅಕ್ಕನ ವಚನಗಳ ಸಾಂಕೇತಿಕತೆಯನ್ನಾಧರಿಸಿ ಊಹಿಸಲಾದ ಆಕೆಯ ಬದುಕು ಹೇಳುವುದಕ್ಕೆ ಕೇಳುವುದಕ್ಕೆ ನೋಡುವುದಕ್ಕೆ ಚೆನ್ನ ಆದರೆ ಅನುಕರಿಸುವುದಕ್ಕೆ ಅಸಾಧ್ಯ. ಹೀಗಾಗಿ ಅಕ್ಕಮಹಾದೇವಿಯನ್ನು ನಾಟಕದಲ್ಲಿ ಕಟ್ಟಿಕೊಡಬೇಕಾದರೆ ಆಕೆಯ ಆತ್ಮಕಥೆಯ ಬದಲು ವಚನಗಳನ್ನೇ ಕೇಂದ್ರೀಕರಿಸಿದ್ದರೆ ಅನುಕರಣೀಯವಾಗಬಹುದಾಗಿತ್ತು. ಮಹಾದೇವಿಯ ಶಕ್ತಿ ಇರುವುದು ಆಕೆಯ ಬದುಕಿನ ಆಚರಣೆಗಳಲ್ಲಲ್ಲ  ಆಕೆಯ ವಿಚಾರಗಳಲ್ಲಿ. ಅಕ್ಕ ನಮಗೆ ದಕ್ಕುವುದು ಅನುಭಾವ ಮತ್ತು ಕಾವ್ಯಾಭಿವ್ಯಕ್ತಿಯಿಂದಾಗಿ. ಆದರೆ ನಾಟಕದಲ್ಲಿ ಅಕ್ಕನ ಆತ್ಮಕಥೆಯನ್ನು ಹೇಳುವ ಪ್ರಯತ್ನ ನಡೆದಿದೆ. ಪೂರಕವಾಗಿ ವಚನಗಳನ್ನು ಬಳಸಲಾಗಿದೆ


ವಾಸ್ತವದಲ್ಲಿ ನಾಟಕದಲ್ಲಿ ಪ್ರಸ್ತುತಗೊಂಡ ಅಕ್ಕಮಹಾದೇವಿಗೆ ಸಂಬಂಧಿಸಿದ ಆತ್ಮಕಥೆಯೇ ಅಂತೆಕಂತೆಗಳ ಸಂತೆ. ಯಾಕೆಂದರೆ ಮಹಾದೇವಿ ಹುಟ್ಟಿದ ಊರು, ಆಕೆಯ ಹೆತ್ತವರು ಯಾರು? ಎಂಬುದು ಗೊತ್ತಿಲ್ಲ.  ಆಕೆಯ ವಚನಗಳಲ್ಲಿ ಅಕ್ಕನ ಹಿನ್ನೆಲೆ ಕುರಿತು ಸ್ಪಷ್ಟ ಕುರುಹುಗಳೂ ಇಲ್ಲ, ಕೌಶಿಕ ರಾಜನ ಪ್ರಸ್ತಾಪವೂ ಇಲ್ಲ. ವೈಯಕ್ತಿಕ ವಿಚಾರಗಳನ್ನು ಆಕೆ ಎಲ್ಲೂ ನೇರವಾಗಿ ಹೇಳಿಕೊಂಡಿಲ್ಲ. ಉಡಿತಡಿಯಲ್ಲಿ ಮಲ್ಲಿಕಾರ್ಜುನನ ಗುಡಿ ಇರುವುದರಿಂದ ಅದೇ ಅವಳೂರೆಂದು ಆಕೆಯ ನಂತರ ಬಂದ ಹರಿಹರಾದಿ ಕವಿಗಳು ಊಹಿಸಿದ್ದಾರೆ. ವಚನಗಳಲ್ಲಿಯ ಸಾಂಕೇತಿಕತೆಗಳನ್ನಿಟ್ಟುಕೊಂಡು ಅಕ್ಕನ ಹುಟ್ಟು, ಬೆಳವಣಿಗೆ, ಮದುವೆ ಮುಂತಾದ ಕುರಿತು ಕಥೆ ಕಟ್ಟಲಾಗಿದೆಯಾದರೂ ಯಾವುದೂ ಅಧಿಕೃತವಲ್ಲ. ವಚನಗಳನ್ನು ಹೊರತುಪಡಿಸಿ ಬೇರೆ ಸಾಕ್ಷಗಳಿಲ್ಲ. ಆಕೆ ಸಾಂಕೇತಿಕವಾಗಿ ಮಾನಸಿಕವಾಗಿ ಬೆತ್ತಳಾದಳೇ ಹೊರತು ನಿಜಾರ್ಥದಲ್ಲಿ ಅಲ್ಲ ಎನ್ನುವುದಕ್ಕೆ  ಅಕ್ಕ ತನ್ನ ವಚನದಲ್ಲಿ ಕಟ್ಟಿಕೊಂಬಡೆ ತಿಪ್ಪೆಯ ಮೇಲೆ ಅರಿವೆ ಉಂಟು ಎಂದು ಹೇಳುತ್ತಿರಲಿಲ್ಲ. ಏನೇ ಆದರೂ ಅಕ್ಕಮಹಾದೇವಿಗೂ ಒಂದು ಕಥೆ ಕಟ್ಟಿ ಹೇಳಲಾಗುತ್ತದೆ. ಅದು ನಾಟಕವೂ ಆಗುತ್ತದೆ. ಬರುಬರುತ್ತಾ ಅವೆಲ್ಲಾ ಮಿಥ್ಗಳೇ ಸತ್ಯವೆಂದು ಅನ್ನಿಸತೊಡಗುತ್ತದೆ. ಜನ ಅದನ್ನೇ ನಂಬಿಕೊಂಡು ಬಿಡುತ್ತಾರೆ. ’ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆಎನ್ನುತ್ತಾ ಇಲ್ಲದ ಪರಲೋಕದತ್ತ ಜನರ ಗಮನವನ್ನು ಸೆಳೆಯುವ ಅಲೌಕಿಕವಾದಿಗಳು ಮಹಾದೇವಿ ಅಕ್ಕನನ್ನು ವೈರಾಗ್ಯದ ಮಹತ್ತರ ಮಾದರಿಯನ್ನಾಗಿಸಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಅಂತಹ ನಂಬುಗೆಗೆ ಇಂಬು ಕೊಡುವ ಕೆಲಸವನ್ನು ನಾಟಕ ಮಾಡುತ್ತಿದೆ. ಇಂತಹುದನ್ನು ಶ್ರೀಮಠ ಪ್ರಾಯೋಜಿಸುತ್ತಿದೆ. ’ಸೌಂದರ್ಯದ ಮೂಲ ದೇಹದಲ್ಲಿಲ್ಲ ಆತ್ಮದಲ್ಲಿದೆಎಂಬ ಅಕ್ಕನ ಮಾತುಗಳು ಆತ್ಮವಾದಿಗಳ ನಿಲುವಾಗಿದೆ. ಆದರೆಸೌಂದರ್ಯದ ಮೂಲ ಆತ್ಮದಲ್ಲೂ ಇಲ್ಲ ಅದು ಪ್ರೀತಿಯಲ್ಲಿದೆಎನ್ನುವುದು ವಾಸ್ತವಾದಿ ಸತ್ಯವಾಗಿದೆ

  ನಾಟಕದಲ್ಲಿ ಗಂಡು ಹೆಣ್ಣಿನ ನಡುವೆ ಇರುವ ಸೆಳೆತಕ್ಕೆ, ಪ್ರೇಮಕ್ಕೆ ವಿಕಾರತೆ ಎಂದು ಆರೊಪಿಸಲಾಗಿದೆ. ಅಕ್ಕಮಹಾದೇವಿಯು ಕಿನ್ನರಿ ಬೊಮ್ಮಯ್ಯನಿಗೆಗಂಡಿಗೆ ಹೆಣ್ಣನ್ನು, ಹೆಣ್ಣಿಗೆ ಗಂಡನ್ನು ಕಂಡರೆ ವಿಕಾರತೆ ಮೂಡುವುದು ಸಹಜಎಂದು ಹೇಳುತ್ತಾಳೆ. ಗಂಡು ಹೆಣ್ಣಿನ ನಡುವೆ ಪ್ರೀತಿ ಬೆಳೆಯುತ್ತದೆನ್ನುವುದು ಬಹುತೇಕರ ಅನುಭವ. ಕೆಲವು ವಿಕೃತ ಮನಸ್ಸಿನವರಿಗೆ ವಿಕಾರತೆ ಮೂಡಬಹುದೇನೋ. ಆದರೆ ನಾಟಕ ಪ್ರೀತಿಯನ್ನು ಹಾಗೂ ಪ್ರಕೃತಿ ಸಹಜ ಗಂಡು ಹೆಣ್ಣಿನ ಆಕರ್ಷಣೆಯನ್ನು ವಿಕಾರತೆ ಎಂದು ಕರೆದದ್ದು ಅವಾಸ್ತವವೆನ್ನಿಸುವಂತಿದೆ. ನಾಟಕದ ಅನುಭವ ಮಂಟಪದ ದೃಶ್ಯದಲ್ಲಿ  ಕೌಶಿಕ ರಾಜನನ್ನುಕಾಮಿಎಂದು ಮಾಹಾದೇವಿ ಜರಿಯುತ್ತಾಳೆ. ಆದರೆ ಕೌಶಿಕ ರಾಜ ಮಹಾದೇವಿಯನ್ನು ಪ್ರೀತಿಸುತ್ತಾನೆ, ಆರಾಧಿಸುತ್ತಾನೆ, ಆಕೆಯ ವಿಚಿತ್ರ ನಿರ್ಬಂಧಗಳಿಗೆ ಒಪ್ಪಿಯೂ ಮದುವೆ ಆಗುತ್ತಾನೆ. ತನ್ನ ರಾಜ್ಯದ ಬೊಕ್ಕಸನ್ನೇ ಬರಿದು ಮಾಡಿಕೊಂಡು ಕಂಗಾಲಾಗುತ್ತಾನೆ. ಯಾವುದೋ ಮನಸ್ಸಿನ ದುರ್ಬಲ ಸನ್ನಿವೇಶದಲ್ಲಿ ತನ್ನ ಹೆಂಡತಿಯನ್ನು ಮೋಹಿಸಿದ್ದಕ್ಕೆ ಕೌಶಿಕನಿಗೆ ವಿಕಾರತೆ ಉಂಟಾಯಿತು ಆದ್ದರಿಂದ ಅವನೊಬ್ಬ ವಿಕೃತ ಕಾಮಿ ಎನ್ನುವಂತೆ ಅಕ್ಕಮಹಾದೇವಿ ದೂರುವುದು ಹಾಗೂ ನಾಟಕ ಅದನ್ನು ಸಮರ್ಥಿಸುವುದು ಅತಿಶಯವೆನಿಸುತ್ತದೆ. ಮಹಾದೇವಿಯನ್ನು ದೈಹಿಕವಾಗಿ ಅನುಭವಿಸುವುದೇ ಆದಲ್ಲಿ ರಾಜ ತನ್ನ ಅಧಿಕಾರ ದುರ್ಬಳಿಕೆ ಮಾಡಿಕೊಂಡು ಯಾವಾಗಲೋ ಕೆಲಸ ಮಾಡಬಹುದಾಗಿತ್ತು. ಹಾಗೇನಾದರೂ ಮಾಡಿದ್ದರೆ ಅದು ವಿಕೃತ ಕಾಮವಾಗುತ್ತಿತ್ತು.

ಪ್ರೀತಿಸಿ ಮದುವೆಯಾಗಿ ಹೆಂಡತಿಯನ್ನು ಬಯಸುವುದು ವಿಕೃತತೆ ಎನ್ನುವುದಾದರೆ ಜಗದ ಎಲ್ಲಾ ಗಂಡಸರೂ ವಿಕೃತ ಕಾಮಿಗಳೇ ಆಗಿಬಿಡುತ್ತಾರೆ. ಗಂಡು ಹೆಣ್ಣಿನ ನಡುವಿನ ಸಂಬಂಧಗಳನ್ನು ಹೀಗೆ ಅಲ್ಲಗಳೆಯುವುದು ಪ್ರೇಮವಿರೋಧಿ ಹಾಗೂ ಜೀವವಿರೋಧಿ ನಿಲುವಾಗಿದೆ. ವಿಕಾರತೆ, ಕಾಮುಕ ಎನ್ನುವ ಮಾತುಗಳನ್ನು ನಾಟಕದಿಂದ ತೆಗೆಯುವುದುತ್ತಮ. ’ಸೃಷ್ಟಿ ತತ್ವ ಅರಿಯದವರಿಗೆ ಎಲ್ಲಾ ನಿಷ್ಟುರವಾಗಿ ಕಾಣುತ್ತದೆಎಂದು ಅಕ್ಕ ಮಹಾದೇವಿ ನಾಟಕದಲ್ಲಿ ಹೇಳುತ್ತಾಳೆ. ಹಾಗಾದರೆ ಯಾವುದು ಸೃಷ್ಟಿತತ್ವ. ಪ್ರೇಮವನ್ನು ನಿರಾಕರಿಸುವುದೇ, ದೇಹವನ್ನು ತುಚ್ಚಿಕರಿಸುವುದೇ, ಇರುವುದೆಲ್ಲವ ಬಿಟ್ಟು ಇರದುದ ನೆನೆವುದೆ, ಇರುವ ದೇಹಸಂಗಾತವನ್ನು ತಿರಸ್ಕರಿಸಿ ಇಲ್ಲದ ಆತ್ಮಸಂಗಾತಕೆ ಹಾತೊರೆಯುವುದೆ, ಅಲೌಕಿಕ ಅವಾಸ್ತವಿಕ ಕಲ್ಪನೆಗಾಗಿ ಲೌಕಿಕ ವಾಸ್ತವತೆಯನ್ನು ದಿಕ್ಕರಿಸುವುದೇ.... ಎನ್ನುವ ಪ್ರಶ್ನೆಗಳನ್ನು ನಾಟಕ ಹುಟ್ಟುಹಾಕುವಂತಿದೆ.  


ಮಾಯೆ ಎನ್ನುವುದು ನಾಟಕದ ಸ್ಥಾಯಿಭಾವವಾಗಿದೆ. "ಕಾಯಕ್ಕೆ ನೆಳಲಾಗಿ ನೆಳಲಾಗಿ, ಪ್ರಾಣಕ್ಕೆ ಮನವಾಗಿ, ಮನಕ್ಕೆ ನೆನಹಾಗಿ, ನೆನಹಿಗೆ ಅರಿವಾಗಿ ಕಾಡಿತ್ತು ಮಾಯೆ.... ಚನ್ನಮಲ್ಲಿಕಾರ್ಜುನ ನೀನೊಡ್ಡಿದ ಮಾಯೆಯನು ಯಾರೂ ಗೆಲ್ಲಲಾರರು" ಎಂದು ಅಕ್ಕ ಮಹಾದೇವಿ ಮಾಯೆಯ ಬಗ್ಗೆ ವ್ಯಾಖ್ಯಾನ ಮಾಡುತ್ತಲೇ ತನ್ನ ಅಸಹಾಯಕತೆಯನ್ನು ವಚನದ ಮೂಲಕ ಹೇಳುತ್ತಾಳೆ. ಹಾಗೆಯೇ ಇನ್ನೊಂದು ವಚನದಲ್ಲಿ "ಯೋಗಿಗೆ ಯೋಗಿನಿಯಾಗಿ, ಜೋಗಿಗೆ ಜೋಗಿನಿಯಾಗಿ, ಶ್ರವಣಗೆ ಸಂತಿನಿಯಾಗಿ, ಯತಿಗೆ ಪರಾರ್ಥವಾದಳು ಮಾಯೆ... ಹೆಣ್ಣಿಗೆ ಗಂಡು ಮಾಯೆ, ಗಂಡಿಗೆ ಹೆಣ್ಣು ಮಾಯೆ, ನಿಮ್ಮ ಮಾಯೆಗೆ ನಾ ಅಂಜುವವಳಲ್ಲ ಚನ್ನಮಲ್ಲಿಕಾರ್ಜುನ" ಎಂದೂ ಹೇಳುತ್ತಾಳೆ. ನಿಮ್ಮ ಮಾಯೆಯನ್ನು ಯಾರೂ ಗೆಲ್ಲಲಾರರು ಎಂದವಳು ಆಮೇಲೆಮಾಯೆಗೆ ನಾ ಅಂಜುವುದಿಲ್ಲಎನ್ನುವ ದಾರ್ಷೆಯನ್ನೂ ತೋರುತ್ತಾಳೆ. ಅಕ್ಕನ ಅರ್ಥದಲ್ಲಿ ಮನುಷ್ಯಸಂಬಂಧಗಳೇ ಮಾಯೆ ಎನ್ನುವುದಾದರೆ ವಾಸ್ತವವಾದದ್ದಾದರೂ ಏನು? ಮಾಯೆಯೇ ಮನುಜರ ಬದುಕಾಗಿದ್ದರೆ ಮನುಷ್ಯರ ನಿಜ ಅಸ್ತಿತ್ವ ಎಲ್ಲಿದೆ? ಹಾಗಾದರೆ ಮಾಯೆಯ ಸೆಳೆತದಿಂದ ಹೊರಬರಲು ಇರುವ ಪರ್ಯಾಯ ಮುಕ್ತಿಹೊಂದುವುದೊಂದೇನಾ? ಕಾಣದ ಶಕ್ತಿಯನ್ನು ಊಹಿಸಿಕೊಂಡು ಐಕ್ಯವಾಗುವುದೇ ಮನುಷ್ಯನ ಬದುಕಿನ ಗುರಿಯಾಗಿದ್ದರೆ ಬದುಕುವುದಾದರೂ ಯಾಕೆ? ಇವೆಲ್ಲಾ ಪ್ರಶ್ನೆ ವಾದಗಳನ್ನು ಮೀರಿ ಅಲ್ಲಮನು "ಗಂಡು ಮಾಯೆಯೆಂಬರು ಗಂಡು ಮಾಯೆಯಲ್ಲ, ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ, ಮನದ ಮುಂದಿನ ಆಸೆಯೇ ಮಾಯೆ ಕಾಣಾ ಗುಹೇಶ್ವರಾ" ಎಂದು  ಮಾಯೆಯ ಬಗ್ಗೆ ಅತ್ಯುತ್ತಮ ರೀತಿಯಲ್ಲಿ ಮಾರ್ಮಿಕವಾಗಿ ತನ್ನ ವಚನದಲ್ಲಿ ಉತ್ತರಿಸುತ್ತಾನೆ. ಇದು ಬಹುಷಃ ಅಕ್ಕ ಮಹಾದೇವಿ ಕಂಡುಕೊಂಡ ಭ್ರಮಾತ್ಮಕ ಮಾಯೆಗೆ ಅಲ್ಲಮ ಕೊಟ್ಟ ಸಮರ್ಥ ಉತ್ತರವೂ ಆದಂತಿದೆ. ಆದರೆ ನಾಟಕವು ಅಕ್ಕಮಹಾದೇವಿಯ ಮಾಯೆಯ ವ್ಯಾಖ್ಯಾನದ ಒಂದು ಮುಖವನ್ನು ಮಾತ್ರ ತೆರೆದಿಡುತ್ತದೆ. ಇದು ವ್ಯಕ್ತಿಗತವಾದ ಅಭಿಪ್ರಾಯವಾಗಿದೆಯೇ ಹೊರತು ಸಮಷ್ಟಿಯ ದರ್ಶನಹೊಂದಿಲ್ಲ.


ನಾಟಕದ ವಸ್ತು ವಿಷಯದ ಸತ್ಯಾಸತ್ಯತೆಗಳನ್ನು ಬದಿಗಿಟ್ಟು ನಾಟಕ ಪ್ರಯೋಗಕ್ಕೆ ಬಂದರೆ..... ನಾಟಕ ತನ್ನ ಕಥಾನಕದ ಚಲನಶೀಲತೆಯಿಂದಾಗಿ ನೋಡಿಸಿಕೊಂಡು ಹೋಗುತ್ತದೆ. ನಾಟಕದ ಆರಂಭದ ದೃಶ್ಯ ಸೊಗಸಾಗಿದೆ. ಗುಂಪನ್ನು ಶೈಲೀಕೃತ ಚಲನೆಗೊಳಪಡಿಸಿ ಪಾತ್ರಗಳನ್ನು ಪರಿಚಯಿಸಿದ ರೀತಿ ಆಕರ್ಷಣೀಯವಾಗಿದೆ. ಮಹಾದೇವಿಯ ಸೀರೆಯನ್ನು ಕೌಶಿಕ ಸೆಳೆಯುವಾಗ ಗುಂಪನ್ನು ಬಳಸಿದ್ದು ಹಾಗೂ ಕೌಶಿಕ ಉನ್ಮಾದಕ್ಕೆ ಒಳಗಾದಾಗ ಕಾಮ ಕ್ರೋಧ ಲೋಭ ಮದ ಮೋಹ ಮತ್ಸರಗಳನ್ನೇ ಪಾತ್ರವಾಗಿಸಿ ತೋರಿಸಿದ್ದು, ಕೊನೆಗೆ ಕದಳಿವನದಲ್ಲಿ ಅಕ್ಕ ಐಕ್ಯಳಾಗುವುದನ್ನು ಸಹ ವೇದಿಕೆಯಾದ್ಯಂತ ಹರಡಿದ ಬಿಳಿ ಪರದೆಯ ಮೂಲಕ ಸೃಷ್ಟಿಸಿದ್ದು ನಿರ್ದೇಶಕಿಯ ಕ್ರಿಯಾಶೀಲತೆಗೆ ಸಾಕ್ಷಿಯಾಗಿವೆ. ಆದರೆ ಇವೆಲ್ಲಾ ಹಳೆಯ ತಂತ್ರಗಳೇ ಆಗಿವೆ. ಎನ್ಎಸ್ಡಿ ಅನುಭವಿ ನಿರ್ದೇಶಕಿಯಿಂದ ಹೊಸರೀತಿಯ ನಾಟಕವನ್ನು ನಿರೀಕ್ಷಿಸಿದ್ದು ನಿರಾಶೆಯನ್ನುಂಟುಮಾಡಿದೆ.

ತುಂಬಾ ಸರಳವಾದ ಸೆಟ್ಗಳಿದ್ದು ಅವು ದೃಶ್ಯವೈಭವ ಸೃಷ್ಟಿಸುವಲ್ಲಿ ಸಾಕಾಗುತ್ತಿಲ್ಲ. ಮಕ್ಕಳು ಮರದ ಚಿತ್ರ ಬಿಡಿಸಿದ ಹಾಗಿದ್ದ ಎರಡು ಮರದ ಬಿತ್ತಿಚಿತ್ರಗಳನ್ನು ಬಳಸಿದ್ದು ಅಸಹಜವೆನ್ನಿಸುತ್ತದೆ. ಬೆಳಕಿನ ವಿನ್ಯಾಸದಲ್ಲೂ ಸಹ ಡೆಪ್ತ ಇಲ್ಲದೇ ಜನರಲ್ ಲೈಟಿಂಗ್ ಬಿಟ್ಟಿರುವಂತಿರುವುರಿಂದ ಇರುವ ಸೆಟ್ ಹಾಗೂ ಕಾಸ್ಟೂಮ್ಸಗಳು ಬಣ್ಣಕಳೆದುಕೊಂಡಂತೆನಿಸಿ ನೋಡುಗರಲ್ಲಿ ಅಗತ್ಯ ಮೂಡ್ ಸೃಷ್ಟಿಸುವಲ್ಲಿ ವಿಫಲವಾಗಿವೆ. ರಂಗತಂತ್ರಗಳ ಬಳಕೆಯಲ್ಲಿ ಶ್ರೀಮಂತಿಕೆ ಇಲ್ಲದ್ದರಿಂದ ಇಡೀ ನಾಟಕ ಡಲ್ ಎನಿಸುತ್ತದೆ. ನಾಟಕದ ನಿಜವಾದ ಶ್ರೀಮಂತಿಕೆ ಇರುವುದು ಬಳಸಿದ ಅಕ್ಕನ ವಚನಗಳಲ್ಲಿ. ನಾಗರಾಜರ ಸಂಗೀತ ಹಾಗೂ ಹಾಡುಗಾರಿಕೆ ನಾಟಕದ ಓಘಕ್ಕೆ ಪುಷ್ಟಿಕೊಟ್ಟಿವೆ.

ಜಾತಕದಲ್ಲಿ 'ಸಿಂಹ' ಎಂದು ಪಂಡಿತ ಹೇಳಿದ ತಕ್ಷಣ ಹೆದರಿ ಓಡುವ ಮಂತ್ರಿಯನ್ನು ನಾಟಕದಲ್ಲಿ ಕಾಣಬಹುದಾಗಿದೆ. ಹಾಸ್ಯಕ್ಕಾಗಿ ಇದನ್ನು ಸೃಷ್ಟಿಸಿದ್ದರೂ ಪಾತ್ರೋಚಿತವಾಗಿಲ್ಲ. ಮಂತ್ರಿಯ ದಾಡಿ ಹಾಗೂ ಮೀಸೆಯ ವಿನ್ಯಾಸ ಮುಸ್ಲಿಂ ದಂಡನಾಯಕರನ್ನು ನೆನಪಿಸುವಂತಿದ್ದು ಅದೂ ಪಾತ್ರಕ್ಕೆ ಪೂರಕವಾಗಿಲ್ಲ. ಮರುಳಸಿದ್ದರನ್ನು ಬೆಟ್ಟಿಯಾಗಲು ಅಕ್ಕ ಮನೆಯಿಂದ ಹೊರವಲಯಕ್ಕೆ ಹೋಗುತ್ತಾಳೆ, ನಂತರ ಕೂಡಲೇ ಮರುಳಸಿದ್ದರು ಮನೆಗೆ ಬರುತ್ತಾರೆ. ಆಗ ಹೊರಗೆ ಹೋಗಿದ್ದ ಅಕ್ಕ ಮನೆಯೊಳಗಿಂದ ಎಂಟ್ರಿ ತೆಗೆದುಕೊಳ್ಳುತ್ತಾಳೆ. ಇದು ಆಭಾಸಕಾರಿಯೆನಿಸುತ್ತದೆ. ಕಲಾವಿದರಿಗೆ ಎಂಟ್ರಿ ಎಕ್ಸಿಟ್ ಸೆನ್ಸ್ ಪಕ್ಕಾ ಇರಬೇಕಾಗುತ್ತದೆ. ಅನುಭವ ಮಂಟಪದ ದೃಶ್ಯ ಅದ್ಯಾಕೋ ತುಂಬಾ ದುರ್ಬಲವಾಗಿದೆ.
 
ಕಲಾವಿದರ ಮಾತುಗಳಲ್ಲಿ ಪೋರ್ಸ ಬೇಕಾಗಿತ್ತು. ಮಹಾದೇವಿ ಪಾತ್ರದ ಅನಿತಾಳ ಅಭಿನಯ ಚೆನ್ನಾಗಿದೆ ಆದರೆ ಮಾತುಗಳಲ್ಲಿ ಸ್ಪಷ್ಟತೆ ಇಲ್ಲವಾಗಿದೆ. ಕೌಶಿಕನಾಗಿ ಮಂಜುನಾಥರ ಸಂಭಾಷಣೆ ಚೆನ್ನಾಗಿದೆ ಆದರೆ ಅಭಿನಯದಲ್ಲಿ ಇನ್ನೂ ಪೋರ್ಸ ಬೇಕಾಗಿದೆ. ಪಂಡಿತನಾಗಿ ದೀಮಂತ ಹಾಗೂ ಭಟ್ರಾಗಿ ನಿತೀಶಕುಮಾರ ನಗಿಸಲು ಪ್ರಯತ್ನಿಸುತ್ತಾರೆ ಆದರೆ ಅವರ ಮೇಕಪ್ ತುಂಬಾ ಕರಾಬಾಗಿದೆ. ವಿಮಲಗೌಡನಾಗಿ ಬೈರಣ್ಣರ ಅಭಿನಯ ಭಾವಪೂರ್ಣವಾಗಿದೆ. ಕಳೆದ ಆರು ತಿಂಗಳಿಂದ ಸತತವಾಗಿ ರಾಜ್ಯಾದ್ಯಂತ ನಾಟಕಗಳನ್ನು ಪ್ರತಿರಾತ್ರಿ ಪ್ರದರ್ಶಿಸಿದ್ದರಿಂದಲೋ ಏನೋ ಎಲ್ಲಾ ಕಲಾವಿದರುಗಳ ನಟನೆಯಲ್ಲಿ ಯಾಂತ್ರಿಕ ರೀತಿಯ ಕೃತಕ ಅಭಿನಯವನ್ನು ಗುರುತಿಸಬಹುದಾಗಿದೆ.

ನಿರ್ದೇಶಕಿ ಎಸ್.ಮಾಲತಿ
ಇಷ್ಟಕ್ಕೂ ನಾಟಕ ಈಗ ಎಷ್ಟರ ಮಟ್ಟಿಗೆ ಪ್ರಸ್ತುತವಾಗಿದೆ? ಹಾಗೂ ಸಮಕಾಲೀನತೆಗೆ ಹೇಗೆ ಸ್ಪಂದಿಸುತ್ತದೆ? ಮಹಾದೇವಿ ಅಕ್ಕನ ವೈರಾಗ್ಯದ ಆದ್ಯಾತ್ಮಿಕ ಸಾಂಕೇತಿಕತೆ ಹೇಗೆ ಆದರ್ಶವಾಗುತ್ತದೆ? ಸಾಂಪ್ರದಾಯಿಕ ಸಾಮಾಜಿಕ ಸಂಕೋಲೆಗಳಿಂದ ಮುಕ್ತಳಾದ ಮಹಾದೇವಿಅಕ್ಕ ಕೊಟ್ಟಕೊನೆಗೆ ಸಾಧಿಸಿದ್ದಾದರೂ ಏನು? ದೇಹವೇ ದೇಗುಲ ಎಂದ ಬಸವಣ್ಣನವರ ಜೀವಪರ ನಿಲುವಿಗೆ ವಿರುದ್ಧವಾಗಿ ದೇಹವನ್ನು ತುಚ್ಚೀಕರಿಸುವ ಅಕ್ಕನ ಧೋರಣೆ ಶರಣ ತತ್ವಕ್ಕೆ ವಿರುದ್ಧವಾದುದಲ್ಲುದೇ? ಗಂಡು ಹೆಣ್ಣಿನ ಸಂಬಂಧಗಳು ವಿಕಾರ, ಕಾಮಕೂಪ ಎನ್ನುವ ಅಕ್ಕನ ಮಾತುಗಳು ಮನುಷ್ಯವಿರೋಧಿ ಎನ್ನಿಸುವುದಿಲ್ಲವೇ? ... ಹೀಗೆ ಹಲವಾರು ಪ್ರಶ್ನೆಗಳು ನಾಟಕ ನೋಡಿದ ಮೇಲೆ ಕಾಡತೊಡಗುತ್ತವೆ. ಶರಣಸತಿ ತನ್ನ ಲಿಂಗಪತಿಯನ್ನು ಪಡೆಯಲು ಸಾವನ್ನು ಆಹ್ವಾನಿಸಿಕೊಳ್ಳುತ್ತಾಳೆ. ಶರಣರ ಕಾಯಕ ಸಿದ್ದಾಂತಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ಆತ್ಮಸಂಗಾತದ ಸಿದ್ದಾಂತಕ್ಕೆ ಮಾದರಿಯಾಗುತ್ತಾಳೆ. ಮಾಯೆಗೆ ಅಂಜಿ, ಕಾಯವನ್ನು ತಿರಸ್ಕರಿಸಿ ಆತ್ಮಸಾಕ್ಷಾತ್ಕಾರಕ್ಕಾಗಿ ಮಹಾದೇವಿ ಅಕ್ಕ ಐಕ್ಯಳಾಗುತ್ತಾಳೆ. ಕೊನೆಗೂ ನಾಟಕದ ಪ್ರೇಕ್ಷಕರಿಗೆ ಮಾಯೆಯಾಗಿಯೇ ಕಾಡುತ್ತಾಳೆ.  

                                                         -ಶಶಿಕಾಂತ ಯಡಹಳ್ಳಿ




 


           


         
         


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ