ಶುಕ್ರವಾರ, ಮೇ 9, 2014

'ಪಂಚಮ' ಪ್ರಯೋಗದ ಹಿಂದೆ ಸಿಜಿಕೆ ಪರದಾಟ :



ಮೇಕಿಂಗ್  ಆಪ್ 'ಪಂಚಮ' :

                                   


(ಪಂಚಮ ರಂಗದಿಗ್ಗಜ 'ಸಿಜಿಕೆ'ರವರು ಮೊಟ್ಟ ಮೊದಲು ನಿರ್ದೇಶಿಸಿದ ನಾಟಕ. ದಲಿತಕವಿಗಳಾಗಿದ್ದ ಡಾ.ಸಿದ್ದಲಿಂಗಯ್ಯನವರು ಬರೆದ ಮೊದಲ ನಾಟಕ. ಸಮುದಾಯ ಸಂಘಟನೆಯು ನಾಟಕವನ್ನು ನಾಡಿನಾದ್ಯಂತ ಪ್ರದರ್ಶಿಸಿದೆ. ನಾಟಕವನ್ನು ರಂಗನಿರಂತರ ತಂಡವು ಈಗ ಮತ್ತೆ ನಿರ್ಮಿಸಿದ್ದು ಮುರುಡಯ್ಯನವರು ಅದನ್ನು ಮರು ನಿರ್ದೇಶಿಸಿದ್ದಾರೆ. 2014 ಮಾರ್ಚ 18 ರಂದು ನಾಟಕದ ಪ್ರದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಾಗಿತ್ತು. ಮತ್ತೆ ಈಗ ಸಂಸ ಪತ್ರಿಕೆಯು ಸಿಜಿಕೆ ರಂಗಹುಡುಕಾಟ ಕಾರ್ಯಕ್ರಮದ ಭಾಗವಾಗಿ 2014, ಎಪ್ರಿಲ್ 23 ರಂದು ಸಂಸ ಬಯಲು ರಂಗ ಮಂದಿರದಲ್ಲಿ ಪಂಚಮ ನಾಟಕದ ಮರುಪ್ರದರ್ಶನವನ್ನು ಏರ್ಪಡಿಸಿತ್ತು. ಈಗಾಗಲೇ ರಂಗಭೂಮಿ ವಿಶ್ಲೇಷಣೆ  ರಂಗಪತ್ರಿಕೆ ಬ್ಲಾಗ್ನಲ್ಲಿ ನಾಟಕದ ಕುರಿತು 2014 ಮಾರ್ಚ ತಿಂಗಳಲ್ಲಿ ವಿಮರ್ಶೆಯನ್ನು ಪ್ರಕಟಿಸಲಾಗಿದೆ. ಮತ್ತೆ ಅದನ್ನೇ ರಿಪೀಟ್ ಮಾಡುವ ಬದಲಾಗಿ ಮೇಕಿಂಗ್ ಆಪ್ ಪಂಚಮ ಕುರಿತ ಕೆಲವು ಕುತೂಹಲಕಾರಿ ವಿವರಗಳನ್ನು ಲೇಖನದ ಮೂಲಕ ಕೊಡುವ ಪ್ರಯತ್ನ ಮಾಡಲಾಗಿದೆ. ಪಂಚಮ ನಾಟಕಕ್ಕಿಂತಲೂ ಅದರ ತಯಾರಿಗಾಗಿ ಸಿಜಿಕೆ ಪಟ್ಟ ಪರಿಶ್ರಮ ತುಂಬಾ ಕುತೂಹಲಕಾರಿಯಾಗಿರುವಂತಹುದು. ಒಂದು ನಾಟಕದ ತಯಾರಿಯ ಹಿಂದೆ ನಿರ್ದೇಶಕ ಹಾಗೂ ನೇಪತ್ಯದವರ ಶ್ರಮ ಎಷ್ಟಿರುತ್ತಿತ್ತು ಎನ್ನುವುದನ್ನು ಹೇಳುವುದೇ ಲೇಖನದ ಉದ್ದೇಶ. ಪಂಚಮ ತಯಾರಿಯ ಹಲವಾರು ವಿವರಗಳನ್ನು ಸಿಜಿಕೆ ತಮ್ಮ ಕತ್ತಾಲೆ ಬೆಳದಿಂಗಳೊಳಗ ಪುಸ್ತಕದಲ್ಲಿ ದಾಖಲಿಸಿದ್ದಾರೆ. ವಿವರಗಳನ್ನೇ ಇಟ್ಟುಕೊಂಡು ಲೇಖನ ರೂಪದಲ್ಲಿ ಕಟ್ಟಿ ಕೊಡುವ ಆಶಯ ಇಲ್ಲಿದೆ. )

ಅದು 1979 ನೇ ಇಸ್ವಿ. ಮಂಗಳೂರು ಹಾಗೂ ತುಮಕೂರಿನಲ್ಲಿ ಸಮುದಾಯ ಸಂಘಟನೆಯ ಶಾಖೆಗಳನ್ನು ಆರಂಭಿಸಬೇಕೆಂದು ನಿರ್ಧರಿಸಲಾಗಿತ್ತು. ಶಾಖೆಯ ಉದ್ಘಾಟನೆ ನಾಟಕ ಪ್ರದರ್ಶನದೊಂದಿಗೆ ಆಗಬೇಕು ಎನ್ನುವುದು ಕಮಿಟಿಯ ತೀರ್ಮಾಣವಾಗಿತ್ತು. ಯಾರು ನಾಟಕ ನಿರ್ದೇಶಿಸಬೇಕು? ಯಾವ ನಾಟಕ ತೆಗೆದುಕೊಳ್ಳಬೇಕು? ಎನ್ನುವ ಪ್ರಶ್ನೆಗೆ ಉತ್ತರವಾಗಿ ಸಿಜಿಕೆ ರವರಿಗೆ ತುಮಕೂರಿನ ಹೊಣೆ ಹೊರೆಸಲಾಯಿತು. ಮಂಗಳೂರಿಗೆ ಪ್ರಸನ್ನ ನಾಟಕ ನಿರ್ದೇಶಿಸುವುದೆಂದು ತೀರ್ಮಾಣವಾಯಿತು. ಪ್ರಸನ್ನ ಎನ್ಎಸ್ಡಿ ಯಲ್ಲಿ ನಿರ್ದೇಶನ ಕಲಿತು ಬಂದವರು ಹಾಗೂ ಅನುಭವಿ ರಂಗ ನಿರ್ದೇಶಕರು. ಬೆಂಗಾಲಿಯ ಮಾರೀಚನ ಬಂದುಗಳು ನಾಟಕವನ್ನು ಆಯ್ಕೆ ಮಾಡಿಕೊಂಡು ಮಂಗಳೂರಿನಲ್ಲಿ ತಾಲಿಂ ಶುರುಮಾಡಿಯೇಬಿಟ್ಟರು.

ಆದರೆ ನಿರ್ದೇಶನದ ಗಂಧ ಗಾಳಿ ಗೊತ್ತಿಲ್ಲದ ಸಿಜಿಕೆ ತಮ್ಮ ಭಂಡ ದೈರ್ಯದಿಂದ ಆಯ್ತು ಮಾಡ್ತೇನೆ ಎಂದು ಒಪ್ಪಿಕೊಂಡರು. ಆದರೆ ಮನದಲ್ಲಿ ಆತಂಕ ತೌಡು ಕುಟ್ಟತೊಡಗಿತ್ತು. ಒಪ್ಪಿಕೊಂಡು ಆಗಿದೆ. ಆದರೆ ಯಾವ ನಾಟಕ ತೆಗೆದುಕೊಳ್ಳಬೇಕು ಎನ್ನುವುದು ಆಧ್ಯತೆಯ ಪ್ರಶ್ನೆಯಾಗಿತ್ತು. ನಾಟಕ ಯಶಸ್ವಿಯಾದರೆ ನಾನು ಒಬ್ಬ ನಿರ್ದೇಶಕನಾಗಬಹುದು ಅಕಸ್ಮಾತ್ ಸೋತರೆ ನಿರ್ದಾಕ್ಷಿಣ್ಯವಾಗಿ ನಾಟಕದಿಂದ ದೂರಾಗಿ ಕೇವಲ ಸಂಘಟನಕಾಗಿರಬೇಕಾಗುತ್ತಲ್ಲಾ ಎನ್ನುವ ಸಂಕಟ ಸಿಜಿಕೆಯವರದ್ದಾಗಿತ್ತು. ಇಷ್ಟಕ್ಕೂ ಸಿಜಿಕೆ ಎಂದೂ ನಿರ್ದೇಶಕನಾಗಬೇಕು ಎಂದು ಆಸೆ ಇಟ್ಟುಕೊಂಡವರೇ ಅಲ್ಲ. ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲೆಂದು ಸಮುದಾಯಕ್ಕೆ ಸೇರಿದ್ದ ಸಿಜಿಕೆ ಈಗ ನಾಟಕ ನಿರ್ದೇಶನದ ಜವಾಬ್ದಾರಿಯನ್ನು ಅನಿವಾರ್ಯವಾಗಿ ಹೊರಬೇಕಿತ್ತು. ಮೊದಲು ಬಸವನಗುಡಿ ನ್ಯಾಷನಲ್ ಕಾಲೇಜಿನ ತರಗತಿಗೆ ಡಾ.ಸಿ.ವೀರಣ್ಣನವರ ನೆಲ ಮುಟ್ಟಿದ ಹೊಟ್ಟೆಪ್ಪ ನಾಟಕವನ್ನು ಅದು ಹೇಗೋ ನಿರ್ದೇಶಿಸಿದ್ದರಿಂದ ಸಿಜಿಕೆಗೆ ಒಂದು ಸಣ್ಣ ದೈರ್ಯ ಬಂದಿತ್ತು. ಆದರೆ ನಿರ್ದೇಶನದ ತಂತ್ರಗಾರಿಕೆ ಬಗ್ಗೆ ಏನೆಂದರೆ ಏನೂ ಗೊತ್ತಿಲ್ಲದ ಸಿಜಿಕೆ ಏನಾಗುತ್ತೋ ನೋಡೇ ಬಿಡೋಣ ಎನ್ನುವ ಹುಂಬುತನದಲ್ಲಿ ನಾಟಕದ ತಯಾರಿ ಶುರುಮಾಡಿದರು.


ನಾಟಕ ಸರಳವಾಗಿರಬೇಕು ಹಾಗೂ ಸಮಾಜಕ್ಕೆ ಸಂದೇಶವನ್ನು ಕೊಡಬೇಕು. ಉದ್ದೇಶವನ್ನಿಟ್ಟು ಹುಡುಕುತ್ತಿರುವಾಗ ಸಿಜಿಕೆಗೆ ಹೊಳೆದಿದ್ದು ದಲಿತಕವಿ ಸಿದ್ದಲಿಂಗಯ್ಯನವರು ಆಪ್ರಿಕಾದ ನಾಟಕವೊಂದರ ಸ್ಪೂರ್ತಿಯಿಂದ ಬರೆದಿದ್ದ ಪಂಚಮ ನಾಟಕ. ಸರಿ ಇದೆ ನಾಟಕ ಇರಲಿ ಎಂದು ನಿರ್ಧರಿಸಿದ ನಂತರ ಎರಡು ಸಮಸ್ಯೆಗಳು ಸಿಜಿಕೆಯವರನ್ನು ಕಾಡತೊಡಗಿದವು. ಒಂದು ನಾಟಕದ ಅವಧಿ ಕೇವಲ ಮುಕ್ಕಾಲು ಗಂಟೆಯದ್ದಾಗಿತ್ತು. ನಾಟಕ ಎನ್ನಿಸಿಕೊಳ್ಳಬೇಕೆಂದರೆ ಒಂದು ಗಂಟೆಯಷ್ಟಾದರೂ ಹಿಗ್ಗಿಸಬೇಕಾಗಿತ್ತು. ಹಾಗೂ ನಾಟಕದಲ್ಲಿ ಹಾಡುಗಳಿದ್ದವು. ಆದರೆ ಸಿಜಿಕೆಗೆ ರಾಗ ತಾಳದ ತಳಬುಡ ಗೊತ್ತಿರಲಿಲ್ಲ. ಆದರೂ ಹೇಗಾದರೂ ಪ್ರಯತ್ನ ಮಾಡಲೇಬೇಕಿತ್ತು

 ನಾಟಕ ಏನೋ ಆಯ್ಕೆಯಾಯಿತು ಆದರೆ ಅದಕ್ಕೆ ಬೇಕಾದ ನಟರನ್ನೆಲ್ಲಿಂದ ತರುವುದು. ಸಿಜಿಕೆ ನಾಟಕ ಮಾಡಿಸುತ್ತಾರೆಂದು ತಿಳಿದ ಕೂಡಲೇ ತುಮಕೂರಿನ ಅನಂತರಾಮ್ ಪತ್ರಿಕೆಗಳಲ್ಲಿ ಪ್ರಚಾರ ಮಾಡಿ ಕೆಲವಾರು ಕಲಾವಿದರನ್ನೂ ಸಂದರ್ಶನ ಮಾಡಿ ಆಯ್ಕೆ ಮಾಡಿ ಸಿಜಿಕೆ ಮುಂದೆ ನಿಲ್ಲಿಸಿಬಿಟ್ಟರು. ನಟನೆಯ ಬಗ್ಗೆ ಏನೇನೂ ಗೊತ್ತಿಲ್ಲದ ಹೊಸಬರನ್ನು ನೋಡಿ ಗಾಬರಿಯಾದ ಸಿಜಿಕೆಗೆ ನಕಲಿ ಶಾಮನ ವೇಷ ಹಾಕಿಕೊಂಡು ಅಲ್ಲಿಂದ ಓಡಿಹೋಗಬೇಕು ಅನ್ನಿಸಿತಂತೆ. ಯಾಕೆಂದರೆ ಅಲ್ಲಿ ಬಂದ ಹುಡುಗರು ರಾಜ್ಕುಮಾರ, ಉದಯ್ಕುಮಾರ, ಕಲ್ಯಾಣಕುಮಾರ ರೀತಿ, ಹುಡುಗಿಯರು ಜಯಂತಿ, ಲೀಲಾವತಿಯವರ ಹಾಗೆ ಅನುಕರಿಸುವುದನ್ನ ನೋಡಿ ಸಿಜಿಕೆ ದಿಗ್ಮೂಢರಾದರು. ಹೇಗೆ ಸಾರ್ ನನ್ನ ಸೆಲೆಕ್ಷನ್ ಎಂದು ಅನಂತರಾಮ್ ಹೆಮ್ಮೆಯಿಂದ ಕೇಳಿದಾಗ ಸಿಜಿಕೆ ನಾಲಿಗೆಯ ಪಸೆ ಒಣಗಿ ನಾಟಕದ ಸಹವಾಸಕ್ಕೆ ತಿಲಾಂಜಲಿಯನ್ನಿಟ್ಟು ಓಡಿಬಿಡಬೇಕು ಎನ್ನಿಸಿತಂತೆ. ಇವರನ್ನೇನಾದರೂ ನಟನೆಗೆ ಆಯ್ಕೆ ಮಾಡಿಕೊಂಡರೆ ತಾನು ಮೆಂಟಲ್ ಆಸ್ಪತ್ರೆಗೆ ಸೇರುವುದು ಗ್ಯಾರಂಟಿ ಎಂದುಕೊಂಡ ಸಿಜಿಕೆ ಅವರಿಗೆಲ್ಲಾ ವಿದಾಯ ಹೇಳಿ ಹಗುರಾದರು. ನಾಟಕ ನಿರ್ದೇಶಿಸುವ ಕಷ್ಟಕ್ಕಿಂತ ರಾಜಕೀಯ ಸೇರಿದ್ದರೆ ಎಷ್ಟೋ ಚೆನ್ನಾಗಿತ್ತು ಎಂದು ಸಿಜಿಕೆ ಅವಲತ್ತುಕೊಂಡರು. ಕೊನೆಗೆ ಸಿಜಿಕೆಯವರಿಂದ ನಟರ ಸಮಸ್ಯೆಯನ್ನು ಕೇಳಿದ ಸಣ್ಣಗುಡ್ಡಯ್ಯನವರು ತಮ್ಮ ಸಹದ್ಯೋಗಿಯಾಗಿದ್ದ ಟಿ.ಎಸ್.ಲೋಹಿತಾಶ್ವರವರನ್ನು ಪರಿಚಯಿಸಿದರು. ಈಗ ಪ್ರಸಿದ್ದ ಚಲನಚಿತ್ರ ನಟರಾಗಿರುವು ಲೋಹತಾಶ್ವರವರೇ ಅವರು. ಆಗ ಲೋಹಿತಾಶ್ವ ಶೇಕ್ಷಪೀಯರ್ ತುಂಡೆಂಬಂತೆ ಆಡುತ್ತಿದ್ದರಂತೆ.

ಪಂಚಮ ನಾಟಕದ ಸಹವಾಸವೇ ಬೇಡವೆಂದುಕೊಂಡ ಸಿಜಿಕೆ ಎರಡೇ ಪಾತ್ರಗಳಿರುವ ಹೆಚ್.ಎಸ್.ರಾಘವೇಂದ್ರರಾವ್ ರವರು ಅನುವಾದಿಸಿದ ವೇಟಿಂಗ್ ಪಾರ್ ಲೆಪ್ಟಿ ನಾಟಕವನ್ನು ಪರಿಶೀಲಿಸಿದರು. ಆದರೆ ಇಷ್ಟು ಸುಲಭಕ್ಕೆ ಸೋಲು ಒಪ್ಪಿಕೊಳ್ಳುವುದು ಬೇಡವೆಂದುಕೊಂಡು ಐದು ಪಾತ್ರಗಳಿರುವ ಪಂಚಮ ನಾಟಕವನ್ನೇ ಪೈನಲ್ ಮಾಡಿದರು. ಲೋಹಿತಾಶ್ವರವರನ್ನು ನಾಟಕದಲ್ಲಿ ಪ್ರಮುಖವಾದ ಹಯವದನ್ರಾವ್ ಪಾತ್ರಕ್ಕೆ ಆಯ್ಕೆಮಾಡಿದರು. ನಟನೆ ಗೊತ್ತಿಲ್ಲದ ಹುಡುಗರನ್ನು ಕರೆತಂದು ಸಿಜಿಕೆ ತಲೆಕೆಡಿಸಿದ್ದ ಅನಂತರಾಮ್ರವರಿಗೆ ಪಂಚಮನ ಪಾತ್ರವನ್ನು ಕೊಟ್ಟರು. ಲೋಹಿತಾಶ್ವರವರ ತಂಗಿ ಹೇಮಾರಿಗೂ ಒಂದು ಪಾತ್ರ ಕೊಟ್ಟು ಉಳಿದ ಪಾತ್ರಗಳಿಗೆ ವಿದ್ಯಾರ್ಥಿ ಚಳುವಳಿಯಿಂದ ಬಂದವರನ್ನು ಆಯ್ಕೆ ಮಾಡಿಕೊಂಡು ತಮ್ಮ ನಾಟಕದ ಕಾಸ್ಟಿಂಗ್ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಸಿಜಿಕೆ ನಿಟ್ಟುಸಿರಿಟ್ಟರು


ಈಗ ಮುಂದಿನ ಸವಾಲೆಂದರೆ ತಾಲಿಂ ಶುರುಮಾಡುವುದು. ಆದರೆ ನಮ್ಮ ತಾಯಾಣೆಗೂ ನನಗೆ ಅಭಿನಯ ಅಂದ್ರೆ ಏನು ಅಂತಾ ಗೊತ್ತಿರಲಿಲ್ಲ ಎನ್ನುವ ಸಿಜಿಕೆಗೆ ನಟರನ್ನು ಹೇಗೆ ತಯಾರಿ ಮಾಡಬೇಕು ಎಂದು ಗೊತ್ತಾಗದೇ ಪರದಾಡಿದರು. ಅದೇ ಟೆನ್ಶನ್ನಿನಲ್ಲಿ ಸಿಗರೇಟು ಮೇಲೆ ಸಿಗರೇಟು ಸೇದುತ್ತಾ ತಮಗೆ ಅನಿಸಿದ ಹಾಗೆ ಹೇಳತೊಡಗಿದರು. ಅವರು ಹೇಳಿದ್ದನ್ನೆ ನಟನೆ ಎಂದುಕೊಂಡ ಸ್ವೀಕರಿಸಿದ ನಟರು ಅಭಿನಯಿಸತೊಡಗಿದರು. ಹೇಗೋ ನಾಟಕದ ರಿಹರ್ಸಲ್ ಶುರುಮಾಡಿದ್ದಾಯಿತು. ತಾಲಿಂ ನೋಡಲೆಂದೇ ತುಮಕೂರಿನ ಖ್ಯಾತರ ಹಿಂಡೇ ಪ್ರತಿ ದಿನ ನೆರೆದಿರುತ್ತಿತ್ತು. ಹೊಸ ನಾಟಕಕಾರ, ಹೊಸ ನಟರು, ಹಾಗೂ ಅನನುಭವಿ ಹೊಸ ನಿರ್ದೇಶಕ. ಹೀಗೆ ಎಲ್ಲಾ ಎಲ್ ಬೋರ್ಡಗಳು ಸೇರಿ ನಾಟಕವನ್ನು ಕಟ್ಟಲು ಶುರುಮಾಡಿದ್ದರು.

ನಾಟಕದಲ್ಲಿ ಹಾಡುಗಳು ಇರುವುದರಿಂದ ಸಂಗೀತ ಸಂಯೋಜನೆ ಮಾಡಲು ಯಾರಾದರೂ ಬೇಕಾಗಿತ್ತು. ಇದು ಗೊತ್ತಾಗಿದ್ದೇ ತಡ ಅನಂತರಾಮ್ ಓಡಿ ಹೋಗಿ ತುಮಕೂರಿನ ಹಾರ್ಮೋನಿಯಂ ಮೇಷ್ಟ್ರನ್ನು ಕರೆತಂದು ಕೂಡಿಸಿದರು. ಸಂಗೀತ ಬ್ರಹ್ಮನ ಲೆಗ್ ಹಾರ್ಮೋನಿಯಂ ಅಬ್ಬರಕ್ಕೆ ತಬ್ಬಿಬ್ಬಾಗಿ ಹೆದರಿದ ಸಿಜಿಕೆ ಬೆಂಗಳೂರಿಗೆ ಓಡಿಹೋಗಿ ಎಸ್.ಕೆ.ಮಾಧವ್ರಾವ್ ಮುಂದೆ ನಿಂತರು. ಸಂಗೀತ ಸಂಯೋಜನೆ ಮಾಡಲು ಒಪ್ಪಿಸಿದರು. ಜನಾರ್ಧನ್ ಹಾಡು ಹೇಳಲು ಬಂದರು. ಸಿಜಿಕೆಗೆ ಸ್ವಲ್ಪ ನಿರಾಳವಾಯಿತು.

ದಿನನಿತ್ಯ ಬೆಂಗಳೂರಿನಿಂದ ತುಮಕೂರಿಗೆ ಹೋಗಿ ಬಂದು ಮಾಡುವುದರಲ್ಲೇ ಸಿಜಿಕೆ ಸುಸ್ತೆದ್ದು ಹೋಗುತ್ತಿದ್ದರು. ಅದೂ ಸ್ಕೂಟರ್ನಲ್ಲಿ. ತನ್ನ ವೃತ್ತಿ ಕೆಲಸವನ್ನು ಮುಗಿಸಿಕೊಂಡು ಪ್ರತಿ ದಿನ ಸಂಜೆ ಸಿದ್ದರಾಜುರವರ ಸ್ಕೂಟರ್ನಲ್ಲಿ ಬೆಂಗಳೂರು ಬಿಟ್ಟು ತುಮಕೂರು ಸೇರಿ ತಾಲಿಂ ನಡೆಸುತ್ತಿದ್ದ ಸಿಜಿಕೆ ಮತ್ತೆ ರಾತ್ರಿ ತಾಲಿಂ ನಂತರ  ಬೆಂಗಳೂರಿಗೆ ಅದೇ ಸ್ಕೂಟರ್ನಲ್ಲಿ ಮರುಪ್ರಯಾಣ ಮಾಡಬೇಕು. ದಾರಿಯಲ್ಲಿ ಒಂಚೂರು ಎಚ್ಚರ ತಪ್ಪಿದರೋ ಯಾವುದೋ ಲಾರಿ ಕೆಳಗೆ ಅಪ್ಪಚ್ಚಿ. ನಾಟಕ ಮಾಡಿಸಲೇ ಬೇಕಾದ ಮಾನಸಿಕ ಒತ್ತಡ ಹಾಗೂ ಪ್ರತಿ ದಿನ ನೂರೈವತ್ತು ಕಿಮಿ ಸ್ಕೂಟರ್ ಪ್ರಯಾಣದಿಂದಾಗುವ ದೈಹಿಕ ಶ್ರಮದಿಂದಾಗಿ ಸಿಜಿಕೆ ಬಸವಳಿದರು. ಆದರೂ ದೃತಿಗೆಡಲಿಲ್ಲ. ಒಂದು ದಿನವೂ ರಿಹರ್ಸಲ್ ನಿಲ್ಲಲಿಲ್ಲ.  ಊಟ ತಿಂಡಿಯ ಸಮಸ್ಯೆ ಇನ್ನಿಲ್ಲದಂತೆ ಕಾಡತೊಡಗಿತು. ಅಜ್ಜಪ್ಪ ಎನ್ನುವ ವಿದ್ಯಾರ್ಥಿ ಕಿವುಚುತ್ತಿದ್ದ ಬದನೆಕಾಯಿ, ಮೆಣಸಿನ ಕಾಯಿಯ ಗೊಜ್ಜನ್ನೇ ಅನ್ನಕ್ಕೆ ಮಿಕ್ಸ್ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಅನಿವಾರ್ಯತೆ ಉಂಟಾಯಿತು.
   
ನಾಟಕ ಪ್ರದರ್ಶನದ ದಿನ ಓಡಿ ಬಂದಿತು. ಆದರೆ ನಾಟಕವನ್ನೆಲ್ಲಿ ಆಡುವುದು. ತುಮಕೂರಿನಲ್ಲಿ ನಾಟಕವಾಡಲು ರಂಗಮಂದಿರಗಳ ಕೊರತೆ. ಎಲ್ಲಿ ನಾಟಕ ಮಾಡುವುದೆಂಬುದೇ ಸಮಸ್ಯೆಯಾಯಿತು. ಕೊನೆಗೂ ಆರ್ಯನ್ ಸ್ಕೂಲ್ನಲ್ಲಿ ನಾಟಕ ಆಡಿಸುವುದೆಂದು ತೀರ್ಮಾನಿಸಲಾಯಿತು. ನೇಪತ್ಯದ ಕೆಲಸಗಳನ್ನು ಶುರುಮಾಡಬೇಕಾಗಿತ್ತು. ಸಮುದಾಯದ ಗಂಗಾಧರಸ್ವಾಮಿ, ಗುಂಡಣ್ಣ ಹಾಗೂ ಸನತ್ಕುಮಾರ್ ನೇಪತ್ಯದಲ್ಲಿ ಕೆಲಸ ನಿರ್ವಹಿಸಲು ಜೊತೆಯಾದರು. ನಾಟಕಕ್ಕೆ ಬೇಕಾದ ಯಾವುದೇ ಸಲಕರಣೆಗಳೂ ತುಮಕೂರಿನಲ್ಲಿ ಸಿಗುತ್ತಿರಲಿಲ್ಲ. ಲೋಕಲ್ ಜನರನ್ನು ಕೇಳಿದರೆ ಯಾರಿಗೂ ಗೊತ್ತಿರಲಿಲ್ಲ. ಏನಾದರೂ ಮಾಡಲೇ ಬೇಕಿತ್ತು. ರಂಗಸಜ್ಜಿಕೆ ಸಿದ್ದಪಡಿಸಲೇ ಬೇಕಿತ್ತು. ಸಿಜಿಕೆ ಜೊತೆಗೆ ಮೂವರು ನೇಪತ್ಯ ಕರ್ಮಿಗಳು ತಾವು ಕಲಿತ ಬುದ್ದಿಯನ್ನೆಲ್ಲಾ ಉಪಯೋಗಿಸಿ ಏನೇನೋ ಹರಸಾಹಸ ಮಾಡಿ ರಂಗಸಜ್ಜಿಕೆ ಸಿದ್ದಪಡಿಸತೊಡಗಿದರು

ಕಪ್ಟು ಪರದೆಗಳಾಗಲೀ ಲೈಟಿಂಗ್ಗಳಾಗಲೀ ತುಮಕೂರಿನಲ್ಲಿ ದೊರೆಯುತ್ತಿರಲಿಲ್ಲ. ಕೆಲವೊಂದನ್ನು ಬೆಂಗಳೂರಿನಿಂದ ತರಿಸಬೇಕಾಗುತ್ತಿತ್ತು. ಖಾಲಿ ವೇದಿಕೆಯನ್ನು ರಂಗಮಂದಿರ ಮಾಡುವುದೆಂದರೆ ಪವಾಡವಲ್ಲವಲ್ಲ. ಒಂದು ಸಲ ಏಣಿ ಹತ್ತಿದ ಗಂಗಾಧರಸ್ವಾಮಿಗಳು ಪರದೆ ಕಟ್ಟುತ್ತಿದ್ದರು, ಏಣಿ ಜಾರದಂತೆ ಕೆಳಗೆ ಹಿಡಿದುಕೊಂಡಿದ್ದ ಗುಂಡಣ್ಣ ಹಾಗೂ ಸನತ್ ನಿಂತ ನಿಂತಲ್ಲೇ ನಿದ್ದೆಗೆ ಜಾರಿದ್ದರು. ಹಿಡಿದವರ ಹಿಡಿತ ಸಡಿಲಗೊಂಡ ತಕ್ಷಣ ಏಣಿ ಜಾರಿತು, ಅನಾಹುತವನ್ನು ಗಮನಿಸಿದ ಸಿಜಿಕೆ ಪಕ್ಕಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡರು. ಗಂಗಾಧರಸ್ವಾಮಿ ಸಿಜಿಕೆ ಮೇಲೆ ಬಿದ್ದು ಬದುಕಿದರು. ಒಂಚೂರು ವ್ಯತ್ಯಾಸ ಆಗಿದ್ದರೂ ಗಂಗಾಧರಸ್ವಾಮಿ ಬ್ರೆಕ್ಟ್ ಪಾದ ಸೇರುತ್ತಿದ್ದರೆಂದು ಸಿಜಿಕೆ ಆತಂಕಗೊಂಡಿದ್ದರು. ಹಾಗೂ ಹೀಗೂ ಮಾಡಿ ಬೆಳಿಗ್ಗೆ ನಾಲ್ಕು ಗಂಟೆಗೆ ರಂಗಸಜ್ಜಿಕೆ ಸಿದ್ದವಾಯಿತು.

ಬೆಳ್ಳಂಬೆಳಿಗ್ಗೆ ವಿಪರೀತ ಚಳಿ. ಬಸ್ ಸ್ಟ್ಯಾಂಡ್ ಪಕ್ಕದ ಹೋಟೆಲ್ಗೆ ಕಾಫಿ ಕುಡಿಯಲು ಹೊರಟ ನಾಲ್ಕು ಜನ ನೇಪತ್ಯದ ಪಡೆ ಮಾತಾಡಿದ್ದು ತಾವು ರಾತ್ರಿಯೆಲ್ಲಾ ಅನುಭವಿಸಿದ ನೋವಿನ ಬಗ್ಗೆ ಅಲ್ಲ, ಅಗಲಿಬಂದ ಮನೆಯವರ ಬಗ್ಗೆಯೂ ಅಲ್ಲ. ಇಂದು ರಾತ್ರಿ ನಡೆಯುವ ನಾಟಕ ಪ್ರದರ್ಶನದ ಯಶಸ್ಸಿನ ಬಗ್ಗೆ. ಸಿಜಿಕೆಗೆ ಸಿಕ್ಕಾಪಟ್ಟೆ ಆತಂಕ. ಡೋಂಟ್ ವರಿ ಎಂದು ದೈರ್ಯ ತುಂಬಿದ್ದು ಗಂಗಾಧರಸ್ವಾಮಿ. ಬೆಳಿಗ್ಗೆ ಏಳುವರೆಗಂಟೆಗೆ ಬೆಳಕಿನ ವಿನ್ಯಾಸ ಮಾಡಲು ಬೆಂಗಳೂರಿನಿಂದ ಬೆಳಕು ತಜ್ಞ ಪರೇಶ್ಕುಮಾರ್ ಬಂದು ಬೆಳಕಿನ ವ್ಯವಸ್ಥೆ ಮಾಡತೊಡಗಿದರು. ರಾತ್ರಿಯೆಲ್ಲಾ ಕೆಲಸ ಮಾಡಿ ಸುಸ್ತಾಗಿದ್ದ ಸನತ್ ಹಾಗೂ ಗುಂಡಣ್ಣ ಮೂಲೆಯಲ್ಲಿ ಕರ್ಟನ್ ಹೊದ್ದು ಗೊರಕೆ ಹೊಡೆಯುತ್ತಿದ್ದರು. ಸಿಜಿಕೆ ರೆಸ್ಟ್ ತೆಗೆದುಕೊಳ್ಳುವ ಬದಲಾಗಿ ನಟರನ್ನು ಸೇರಿಸಿ ನಾಟಕದ ತಾಲೀಮಿಗೆ ನಿಂತರು.

ಅಂದು ಸಂಜೆ ಪಂಚಮ ನಾಟಕದ ಪ್ರದರ್ಶನ. ನಾಟಕ ನೋಡಲು ತುಮಕೂರಿನ ಜನ ಕಿಕ್ಕಿರಿದು ಸೇರಿದ್ದಾರೆ. ಊರಿನಲ್ಲಿ ಬಗೆಯ ನಾಟಕ ಆಗ ಹೊಸದು. ಬೆಂಗಳೂರಿನಿಂದ ಸಮುದಾಯದ ಗೆಳೆಯರ ಹಿಂಡೇ ನೆರೆದಿದೆ. ಸಿಜಿಕೆಗೆ ಅಗ್ನಿ ಪರೀಕ್ಷೆಯ ಸಮಯ. ತನ್ನ ಸಾಮರ್ಥ್ಯದ ಸತ್ವ ಪರೀಕ್ಷೆಯ ಸಮಯ. ಮಾನಸಿಕ ಒತ್ತಡಕ್ಕೆ ಒಳಗಾದ ಸಿಜಿಕೆಗೆ ನಾಟಕ ನೋಡುವ ತಾಳ್ಮೆ ಇಲ್ಲದೇ ರಂಗದ ಹಿಂದೆ ಹೋಗಿ ಕುಳಿತುಕೊಂಡರು. ನಾಟಕ ಶುರುವಾಯಿತು. ಪ್ರೇಕ್ಷಕರಿಂದ ಆಗಾಗ ಚಪ್ಪಾಳೆಯ ಸದ್ದು ನಗು ಕೇಕೆಗಳ ದ್ವನಿ. ಸಿಜಿಕೆ ಆತಂಕ ಕ್ಷಣಕ್ಷಣಕ್ಕೂ ಹೆಚ್ಚಾಗತೊಡಗಿತ್ತು. ಬಹು ಮುಖ್ಯ ರಂಗಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿದ್ದರು ಸಿಜಿಕೆ. ಅಂತೂ ಇಂತೂ ನಾಟಕ ಮುಗಿಯಿತು. ನಾಟಕ ನೋಡಿ ಖುಷಿಯಾದ ರಂಗಗೆಳೆಯರು ವೇದಿಕೆ ಏರಿ ಅಭಿನಂದಿಸಲು ಓಡಿ ಬಂದರು. ಗಂಗಾಧರಸ್ವಾಮಿ, ಸನತ್, ಗುಂಡಣ್ಣ  ಸಂತಸದಿಂದ ಓಡಿ ಬಂದು ಸಿಜಿಕೆಯನ್ನು ಅಪ್ಪಿಕೊಂಡರು. ಕ್ಷಣಕ್ಕೆ ಸಿಜಿಕೆಗೆ ನೀರಿಲ್ಲದ ರೂಮು, ಹಸಿಮೆಣಸಿನಕಾಯಿ ಗೊಜ್ಜು ಮುದ್ದೆ, ಸ್ಕೂಟರಿನ ನಿರಂತರ ಅಲೆದಾಟ, ರಾತ್ರಿಯೆಲ್ಲಾ ನಿದ್ದೆಗೆಟ್ಟ ಶ್ರಮ... ಎಲ್ಲವನ್ನೂ ಮರೆಸಿಹಾಕಿ ಸಂಭ್ರಮ ಮೇರೆ ಮೀರಿತು. ಲೋಹಿತಾಶ್ವ ಒಮ್ಮಿಂದೊಮ್ಮೆಲೇ ನಟ ಶ್ರೇಷ್ಟನಾಗಿ ಬಿಟ್ಟಿದ್ದರು. ಮಿಕ್ಕೆಲ್ಲಾ ನಟರು ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿ ಸಮುದಾಯ ಹುಟ್ಟಿಗೆ ಸಾರ್ಥಕ ನಾಂದಿ ಹಾಡಿದ್ದರು. ಇದೆಲ್ಲಕ್ಕಿಂತ ಮಿಗಿಲಾಗಿ ರಾತ್ರೋ ರಾತ್ರಿ ರಂಗನಿರ್ದೇಶಕನೊಬ್ಬ ಸೃಷ್ಟಿಯಾಗಿದ್ದ ಅದು  ಸಿ.ಜಿ.ಕೃಷ್ಣಸ್ವಾಮಿ (ಸಿಜಿಕೆ)..  

                                     -ಶಶಿಕಾಂತ ಯಡಹಳ್ಳಿ     



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ