ಬುಧವಾರ, ಮೇ 28, 2014

ಭಾರತೀಯ ಜನರಂಗಭೂಮಿಗೆ ‘ಇಪ್ಟಾ’ ದ ಕೊಡುಗೆ ;




      


2014 ಮೇ 25 ಕ್ಕೆ ಸರಿಯಾಗಿಇಪ್ಟಾಸಾಂಸ್ಕೃತಿಕ ಸಂಘಟನೆಗೆ 71 ವರ್ಷ ತುಂಬಿತು. ’ಇಪ್ಟಾ ವರ್ಷಾಚರಣೆಯ ಸಂಭ್ರಮದ ಸಂದರ್ಭದಲ್ಲಿ ಭಾರತದ ಹೆಮ್ಮೆಯ ಸಾಂಸ್ಕೃತಿಕ ಸಂಘಟನೆಯ ಕುರಿತ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ


  
ಇಂಡಿಯನ್ ಪೀಪಲ್ಸ್ ಥೇಯಟರ್ ಅಸೋಸಿಯೇಶನ್ ಅಂದ್ರೆ ಹೊಸಪೀಳಿಗೆಯವರಿಗೆ ಅರ್ಥವಾಗುತ್ತೋ ಇಲ್ಲೋ ಗೊತ್ತಿಲ್ಲ. ಆದರೆ ಇಪ್ಟಾ ಅಂದರೆ ಬುದ್ದಿಜೀವಿಗಳು, ಸಾಹಿತಿಗಳು, ರಂಗಭೂಮಿಯವರಿಗಷ್ಟೇ ಅಲ್ಲಾ, ಹಲವಾರು ಹಳ್ಳಿ ಪಟ್ಟಣಗಳ ಸಾಮಾನ್ಯ ಜನರಿಗೆ ತಕ್ಷಣ ಗೊತ್ತಾಗುತ್ತದೆ ಬೀದಿ ನಾಟಕದವರು ಅಂತ. ಜನಸಾಮಾನ್ಯರನ್ನು ಎಚ್ಚರಿಸುವಂತಹ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವಂತಹ ನಾಟಕಗಳನ್ನು ಆಡುವ ಇಪ್ಟಾ ತಂಡಗಳು ಭಾರತದ 22 ರಾಜ್ಯಗಳಲ್ಲಿ  ಈಗಲೂ ಸಕ್ರೀಯವಾಗಿವೆ. ಇಪ್ಟಾ ಕಲಾವಿದರು ಹಾಡುವ ಹೋರಾಟದ ಹಾಡುಗಳನ್ನು ಜನ ಈಗಲೂ ನೆನೆಸಿಕೊಳ್ಳುತ್ತಾರೆ. ಇಪ್ಟಾ ಒಂದು ಸಾಮಾಜಿಕ ಬದ್ಧತೆ ಇರುವ, ಸಮಸಮಾಜದ ಪರಿಕಲ್ಪನೆ ಹೊಂದಿರುವ ಸಾಂಸ್ಕೃತಿಕ ಸಂಘಟನೆ.

ನಾಟಕ, ಬೀದಿನಾಟಕ, ಚಲನಚಿತ್ರ, ಸಂಗೀತ, ನೃತ್ಯ, ಹಾಡು, ಸಾಹಿತ್ಯ, ಚಿತ್ರಕಲೆ, ಜನಪದ ಕಲೆ.... ಇಂತಹ ಹಲವು ಕಲಾಪ್ರಕಾರಗಳ ಮೂಲಕ ಜನಜಾಗೃತಿಯನ್ನು ಮಾಡುತ್ರಾ ಸಹಸ್ರಾರು ಕಲಾವಿದರನ್ನು ಒಂದು ವೇದಿಕೆಗೆ ತಂದು ದೇಶದ ಸ್ವಾತಂತ್ರ್ಯಕ್ಕಾಗಿ ಸಾಂಸ್ಕೃತಿಕ ಸೇನೆಯನ್ನು ಕಟ್ಟಿ ಗುಲಾಮಗಿರಿಯ ವಿರುದ್ಧ ಸಾಂಸ್ಕೃತಿಕ ಸಮರವನ್ನು ಸಾರಿದ ಸಂಘಟನೆಇಪ್ಟಾ’.

ಇದು ಇಂದು ನಿನ್ನೆ ಹುಟ್ಟಿದ್ದಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1943 ರಲ್ಲಿ ಹುಟ್ಟಿದ್ದು. ಅನೇಕ ಕ್ರೀಯಾಶೀಲ ವ್ಯಕ್ತಿಗಳ ಸ್ವತಂತ್ರ ಭಾರತದ ಆಶಯದ ಅಭಿವ್ಯಕ್ತಿಯಾಗಿ ಇಪ್ಟಾ ಅಸ್ತಿತ್ವಕ್ಕೆ ಬಂದಿತು. ಅದು ಎರಡನೇ ವಿಶ್ವಯುದ್ದದ ಸಂಕಷ್ಟದ ಕಾಲ. ಬ್ರಿಟೀಷರು ಭಾರತವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವ ಕಾಲ. ಭಾರತದ ಜನತೆ ಗುಲಾಮಗಿರಿಯಲ್ಲಿ ಸಿಕ್ಕು ಸ್ವಾತಂತ್ರ್ಯಕ್ಕಾಗಿ ಪರಿತಪಿಸುತ್ತಿರುವ ದುರಂತಮಯ ಕಾಲ. ಅಂತಹ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಸಾಗರದತ್ತ ಸಾವಿರಾರು ನದಿಗಳು ಹರಿಯತೊಡಗಿದ್ದವು. ಅದರಲ್ಲಿ ಪ್ರಮುಖವಾಗಿ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳುವಳಿ ಆರಂಭಗೊಂಡಿತ್ತು. ಜೊತೆಗೆ ಅನೇಕ ರೀತಿಯ ಚಳುವಳಿಗಳು ತೀವ್ರಗೊಂಡಿದ್ದವು. ಅಂತಹ ಭಾರತದ ಸ್ವಾತಂತ್ರ್ಯದ ಸಂಗ್ರಾಮಕ್ಕೆ ಪೂರಕವಾಗಿ ರೂಪಗೊಂಡ ಸೈದ್ದಾಂತಿಕ ಹಿನ್ನೆಲೆಯ ಸಾಂಸ್ಕೃತಿಕ ಚಳುವಳಿಗೆ ನಾಯಕತ್ವವನ್ನು ಒದಗಿಸಿದ್ದು ಇಂಡಿಯನ್ ಪೀಪಲ್ಸ ಥೇಯಟರ್ ಅಸೋಸಿಯೇಶನ್



ಇಪ್ಟಾ ಅಸ್ತಿತ್ವಕ್ಕೆ ಬರಲು ಬಂಗಾಳದ ಬರ ಕೂಡಾ ಒಂದು ಪ್ರಮುಖ ಕಾರಣವಾಯಿತು. ಅದು 1942 ನೇ ಇಸವಿ, ಬಂಗಾಳದಲ್ಲಿ ಮಾನವ ನಿರ್ಮಿತ ಕ್ಷಾಮ ಅನೇಕ ಜನ ಮತ್ತು ಜಾನುವಾರಗಳನ್ನು ಬಲಿತೆಗೆದುಕೊಂಡಿತು. ಲಕ್ಷಾಂತರ ಜನ ಅನ್ನ ನೀರು ಇಲ್ಲದೇ ಕಂಗಾಲಾದರು. ದುರಂತ ಘಟನೆ ಅನೇಕ ಪ್ರಗತಿಪರ ಬರಹಗಾರರು ಮತ್ತು ಕಲಾವಿದರು ಒಂದು ಆಶಯಕ್ಕೆ ಬದ್ದರಾಗಿ ಒಂದಾಗಲು ಪ್ರೇರಣೆಯಾಯಿತು.  ಬರ ಪೀಡಿತರಿಗೆ ಸಹಾಯ ಮಾಡುವ ಉದ್ದೇಶದಿಂದ ಹಣ, ಆಹಾರ ಸಂಗ್ರಹಿಸಲು ಬಿನಯ್ ರಾಯ್ ನೇತೃತ್ವದಲ್ಲಿ ಸಾಂಸ್ಕೃತಿಕ ಪಡೆಯೊಂದು ಸಂಘಟಿತವಾಯ್ತು. ಪಡೆಯ ಕಾರ್ಯಕರ್ತರು ದೇಶಾದ್ಯಂತ ಹಲವಾರು ಕಡೆ ವಾಮಿಕ್ ಜಾನ್ಪುರಿಯವರ ಭೂಕಾ ಹೈ ಬೆಂಗಾಲ್ ನಾಟಕವನ್ನು ಪ್ರದರ್ಶಿಸಿ, ಬೀದಿ ಬೀದಿಗಳಲ್ಲಿ ಹಾಡುಗಳನ್ನು ಹಾಡಿ ಹಣ ಸಂಗ್ರಹಿಸಿ ಕ್ಷಾಮಪೀಡಿತರ ನೋವಿಗೆ ದನಿಯಾದರು. ಸಾಂಸ್ಕೃತಿಕ ಪಡೆಯ ಪ್ರೇರಣೆಯಿಂದಾಗಿ ಅನೇಕ ಸಾಂಸ್ಕೃತಿಕ ತಂಡಗಳು ಬೇರೆ ಬೇರೆ ಪ್ರಾಂತ್ಯಗಳಲ್ಲಿ ಜನಜಾಗೃತಿಯ ಉದ್ದೇಶದಿಂದ ಹುಟ್ಟಿಕೊಂಡವು. ಆಗ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾ. ಪಿ.ಸಿ.ಜ್ಯೋಷಿಯವರು ಇಂತಹ ಹಲವಾರು ಪ್ರತ್ಯೇಕ ತಂಡಗಳನ್ನು ಸೈದ್ದಾಂತಿಕ ತಳಹದಿಯಮೇಲೆ ಒಂದು ವೇದಿಕೆಯಡಿಯಲ್ಲಿ ತರಲು ತುಂಬಾ ಶ್ರಮಿಸಿದರು. ಜೊತೆಗೆ ಪ್ರಗತಿಪರ ಬರಹಗಾರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸಾಜದ್ ಜಹೀರ್ ಕೂಡಾ ಬರಹಗಾರರನ್ನು ಒಂದು ಬ್ಯಾನರ್ ಕೆಳಗೆ ಸಂಘಟಿಸಿದರು. ಎಲ್ಲಾ ರೀತಿಯ ಪ್ರಯತ್ನಗಳ ಫಲವಾಗಿ ಇಂಡಿಯನ್ ಪೀಪಲ್ಸ್ ಥೇಯಟರ್ ಅಸೋಸಿಯೇಶನ್ (ಇಪ್ಟಾ) ಜನ್ಮತಾಳಿತು.


ಭಾರತೀಯ ಕಮ್ಯೂನಿಸ್ಟ್ ಪಕ್ಷದ ಪ್ರಗತಿಪರ ಆಲೋಚನೆಗಳ ಆಶಯಕ್ಕೆ ಪೂರಕವಾಗಿ, ಕಲೆಗಾಗಿ ಕಲೆಯಲ್ಲ, ಜನರಿಗಾಗಿ ಕಲೆ ಎನ್ನುವ ಜನಪರ ಸಿದ್ದಾಂತದ ಪ್ರತೀಕವಾಗಿ ಇಪ್ಟಾ ಕಳೆದ ಏಳು ದಶಕದಿಂದ ಭಾರತದಾದ್ಯಂತ ಬಹುತೇಕ ರಾಜ್ಯಗಳಲ್ಲಿ ಸಕ್ರೀಯವಾಗಿದೆ. ಎಡಪಂಥೀಯ ರಂಗಭೂಮಿ (ಲೆಪ್ಟಿಸ್ಟ್ ಥೇಯಟರ್) ಎಂದೇ ಇಪ್ಟಾ ಹೆಸರಾಗಿದ್ದು ಸಾಂಸ್ಕೃತಿಕ ಎಚ್ಚರವನ್ನು ದೇಶದ ಜನತೆಯಲ್ಲಿ ತರುವುದೇ ಅದರ ಪ್ರಮುಖ ಗುರಿಯಾಗಿದೆ. ಕಲೆ ಎಂಬುದು ಕೇವಲ ಮನರಂಜನೆಗಾಗಿ ಮಾತ್ರವಲ್ಲಾ, ಅದು ಜನರಲ್ಲಿ ಜಾಗೃತಿ ಮೂಡಿಸುವ ಪರಿಕರವಾಗಿ ಬಳಕೆಯಾಗಬೇಕು ಎನ್ನುವ ಮಹತ್ವಾಂಕಾಂಕ್ಷೆ ಇಟ್ಟುಕೊಂಡ ಸಾಂಸ್ಕೃತಿಕ ಸಂಘಟನೆಯು ಪ್ರದರ್ಶಕ ಕಲೆಯ ಎಲ್ಲಾ ಆಯಾಮಗಳನ್ನು ಹೊಸ ದೃಷ್ಟಿಕೋನದಿಂದ  ಪ್ರಸ್ತುತ ಪಡಿಸುತ್ತಾ ಬಂದಿದೆ. ಜನರ ನಡುವೆಯೇ ಇದ್ದು ಜನತೆಯ ಸಂಕಷ್ಟಗಳನ್ನು ಅರಿತು ಜನರಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಅರಿವನ್ನು ಮೂಡಿಸಲು ನಾಟಕ, ಬೀದಿನಾಟಕ, ಹಾಡು, ನೃತ್ಯ, ಸಂಗೀತಗಳನ್ನು ಬಳಸುತ್ತಾ ಬಂದ ಇಪ್ಟಾ ಸಂಘಟನೆ ಜನತೆಗಾಗಿ ಕಲೆ ಎಂಬುದನ್ನು ಸಾಬೀತು ಪಡಿಸಿತು. ರಂಗಮಂದಿರದತ್ತ ಜನರನ್ನು ಕರೆತರುವ ಬದಲು ಬೀದಿನಾಟಕಗಳ ಮೂಲಕ ಜನರತ್ತಲೇ ರಂಗಭೂಮಿಯನ್ನು ತೆಗೆದುಕೊಂಡು ಹೋಗುವ ಕೆಲಸವನ್ನು ಇಪ್ಟಾ ಸಮರ್ಥವಾಗಿ ಮಾಡಿತು. ನಿಜವಾದ ಅರ್ಥದಲ್ಲಿ ಇಪ್ಟಾ ಜನತೆಗಾಗಿಯೇ ಇರುವ ಜನತಾ ರಂಗಭೂಮಿ  ಅರ್ಥಾರ್ತ ಪೀಪಲ್ಸ್ ಥೇಯಟರ್ ಆಗಿದೆ.

 ಇಪ್ಟಾ ಸಾಂಸ್ಕೃತಿಕ ಸಂಘಟನೆಯ ಹುಟ್ಟು ಬೆಳವಣಿಗೆಯ ಹಿನ್ನೆಲೆ ಹೀಗಿದೆ. ಅದು 1936 ಇಸವಿ, ಪ್ರೊಗ್ರೆಸ್ಸಿವ್ ರೈಟರ್ಸ ಅಸೋಸಿಯೇಶನ್ ಎಂಬ ಪ್ರಗತಿಪರ ಬರಹಗಾರರ ಒಕ್ಕೂಟವು ಮಹಾಸಮ್ಮೇಳನವೊಂದನ್ನು ಆಯೋಜಿಸಿತ್ತು. ಸಮ್ಮೇಳನದಲ್ಲಿ ಸಾಂಸ್ಕೃತಿಕ ಸಂಘಟನೆಯೊಂದರ ಅಗತ್ಯತೆ ಕುರಿತು ವಿಷಯ ಮಂಡಿಸಲಾಯಿತು. ಮುಂದೆ ನಾಲ್ಕು ವರ್ಷಗಳ ನಂತರ ಅಂದರೆ 1940 ರಲ್ಲಿ ಕಲ್ಕತ್ತಾದಲ್ಲಿ ಯುವ ಸಾಂಸ್ಕೃತಿಕ ಸಂಸ್ಥೆ ಅಸ್ಥಿತ್ವಕ್ಕೆ ಬಂತು. ಅದರ ಮುಂದುವರಿಕೆಯಾಗಿ 1941 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜನತೆಯ ರಂಗಭೂಮಿ (ಪೀಪಲ್ಸ ಥೇಯಟರ್) ಯೊಂದನ್ನು ಹುಟ್ಟುಹಾಕಲು ಚರ್ಚೆಗಳಾದವು. ಶ್ರೀಲಂಕಾದ ಅನಿಲ್ ಡಿಸೆಲ್ವಾರ ಸಲಹೆಯಂತೆ 1942ರಲ್ಲಿ ಬಾಂಬೆಯಲ್ಲಿ ಇಂಡಿಯನ್ ಪೀಪಲ್ಸ್ ಥೇಯಟರ್ ಅಸೋಸಿಯೇಶನ್ (ಇಪ್ಟಾ) ಸಾಂಸ್ಕೃತಿಕ ಸಂಘಟನೆಯನ್ನು ಹುಟ್ಟುಹಾಕಲಾಯಿತು.

ಆಗ ಪ್ರಚಲಿತದಲ್ಲಿದ್ದ ಹಲವಾರು ಪ್ರಗತಿಪರ ಸಾಂಸ್ಕೃತಿಕ ತಂಡಗಳು, ರಂಗತಂಡಗಳು ಹಾಗೂ ಸಾಂಸ್ಕೃತಿಕ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಇಪ್ಟಾಕ್ಕೆ ಬಂದು ಸೇರಿಕೊಂಡು ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡರು. ಪೀಪಲ್ಸ್ ಥೇಯಟರ್ ಎಂಬ ಹೆಸರನ್ನು ಸೂಚಿಸಿದ್ದು ಆಗಿನ ಪ್ರಸಿದ್ದ ವಿಜ್ಞಾನಿ ಹೋಮಿ ಜಹಾಂಗೀರ್ ಬಾಬಾರವರು.  1943 ಮೇ 25 ರಂದು ಬಾಂಬೆಯ ಮರ್ವಾರಿ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಇಪ್ಟಾ ಅಧಿಕೃತವಾಗಿ ಅಸ್ಥಿತ್ವಕ್ಕೆ ಬಂದಿತು.

ಬನ್ನಿ ಬರಹಗಾರರೇ, ಬನ್ನಿ ಕಲಾವಿದರೆ, ಬನ್ನಿ ನಟರೆ, ಬನ್ನಿ ನಾಟಕಕಾರರೇ... ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಕೆಲಸಮಾಡುವ ಎಲ್ಲರೂ ಬನ್ನಿ. ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಇರುವಂತಹ ಧೈರ್ಯವಂತ ಹೊಸ ಪ್ರಪಂಚವೊಂದರ ಸೃಷ್ಟಿಗಾಗಿ ಎಲ್ಲರೂ ಸ್ವಯಂಪ್ರೇರಿತರಾಗಿ ಅರ್ಪಿಸಿಕೊಳ್ಳಿ... ಎಂದು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಹಿರೇನ್ ಮುಖರ್ಜಿಯವರು ಭಾರತದ ಎಲ್ಲಾ ಭಾಗಗಳಿಂದ ಬಂದ ಬರಹಗಾರರು ಮತ್ತು ಕಲಾವಿದರಿಗೆ ಕರೆ ಕೊಟ್ಟರು. ಮೊದಲ ಸಮ್ಮೇಳನದಲ್ಲಿ ಇಪ್ಟಾ ಅಧ್ಯಕ್ಷರಾಗಿ ಟ್ರೇಡ್ ಯುನಿಯನ್ ನಾಯಕರಾದ ಕಾ.ಎನ್.ಎಂ.ಜ್ಯೋಷಿ ಆಯ್ಕೆಯಾದರು. ಅನಿಲ್ ಡಿಸಿಲ್ವಾ ರವರು ಕಾರ್ಯದರ್ಶಿಯಾದರೆ, ಬಿನಯ್ ರಾಯ್ ಮತ್ತು ಕೆ.ಡಿ.ಚಾಂಡಿ ಸಹಕಾರ್ಯದರ್ಶಿಗಳಾದರು. ಆಗಲೇ ಬಾಂಬೆ, ಬಂಗಾಳ, ಪಂಜಾಬ್, ಡೆಲ್ಲಿ, ಉತ್ತರಪ್ರದೇಶ, ಮಲಬಾರ್, ಆಂದ್ರಪ್ರದೇಶ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಪ್ರಾಂತೀಯ ಕಮಿಟಿಗಳು ಚಾಲನೆಗೊಂಡವು. ಇಪ್ಟಾ 2ನೇ ಮತ್ತು 3ನೇ ಸಮ್ಮೇಳನಗಳೂ 1944 ಮತ್ತು 1945 ರಲ್ಲಿ ಬಾಂಬೆಯಲ್ಲಿಯೇ ನಡೆದವು. 1946 ರಲ್ಲಿ 4ನೇ ಸಮ್ಮೇಳನ ಕಲ್ಕತ್ತಾದಲ್ಲಿ ಜರುಗಿತು.



ಕಲಾ ಮಾಧ್ಯಮದ ಮೂಲಕ ಸಮಕಾಲೀನ ಸಮಸ್ಯೆಗಳನ್ನು ಜನರಿಗೆ ತಿಳಿಸಿ ಎಚ್ಚರಿಸುವುದು ಹಾಗು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಹೊಸ ವಿಚಾರಧಾರೆಗಳ ಮೂಲಕ ಪ್ರಸ್ತುತಪಡಿಸುವುದು ಇಪ್ಟಾ ಸಾಂಸ್ಕೃತಿಕ ಚಳುವಳಿಯ ಮೂಲ ಆಶಯವಾಯಿತು. ಆಶಯದಿಂದ ಆರಂಭಗೊಂಡ ಸಾಂಸ್ಕೃತಿಕ ಚಳುವಳಿಯು ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಬದಲಾವಣೆಗೆ ಕಾರಣವಾಯಿತು. ಕಲೆಗಾಗಿಯೇ ಮುಡುಪಾಗಿದ್ದ ಹಲವಾರು ಇಪ್ಟಾ ಕಲಾವಿದರು ಕಲೆ ಮತ್ತು ಸೌಂದರ್ಯಕ್ಕೆ ಹೊಸ ದೃಷ್ಟಿಕೋನವನ್ನು ಸೃಷ್ಟಿಸಿದರು. ಅವರೆಲ್ಲಾ ಕಲೆ, ಕಲಾವಿದ ಮತ್ತು ಪ್ರೇಕ್ಷಕರ ಸಂಬಂಧದ ಕುರಿತು ಹೊಸ ವ್ಯಾಖ್ಯಾನವನ್ನು ಸೃಜಿಸಿದರು.

ಭಾರತೀಯ ಸಂಸ್ಕೃತಿಯಲ್ಲಿರುವ ಜೀವಂತಿಕೆಯನ್ನು ಅಳವಡಿಸಿಕೊಂಡು ಪ್ರಗತಿಪರ ಚಿಂತನೆಗಳನ್ನು ರೂಢಿಸಿಕೊಂಡ ಇಪ್ಟಾ ಕಲಾ ಜಗತ್ತಿಗೆ ಅಪ್ರತಿಮ ಕ್ರಿಯಾಶೀಲ ಕೊಡುಗೆಯನ್ನು ಕೊಟ್ಟಿತು. ಪ್ರಗತಿಪರ ನಿಲುವು ಮತ್ತು ಕ್ರಾಂತಿಕಾರಿ ವಿಚಾರ ಹಾಗೂ ಆಚರಣೆಗಳಿಂದಾಗಿ ಇಪ್ಟಾ ಸದಸ್ಯರು ಅನೇಕ ಬಾರಿ ಆಳುವ ಶಕ್ತಿಗಳಿಂದ ದಮನಕ್ಕೊಳಗಾದರೂ ಲೆಕ್ಕಿಸಲಿಲ್ಲ. ಮುಂದಿಟ್ಟ ಹೆಜ್ಜೆ ಹಿಂದಿಡಲಿಲ್ಲ.

ಇಕ್ಬಾಲ್ರವರು ರಚಿಸಿದ ಸಾರೆ ಜಹಾಸೆ ಅಚ್ಚಾ... ಎಂಬ ದೇಶಪ್ರೇಮದ ಗೀತೆಗೆ ಪಂಡಿತ್ ರವಿಶಂಕರ್ ಸ್ವರ ಸಂಯೋಜನೆ ಮಾಡದರು. ಇಪ್ಟಾದ ಕೇಂದ್ರ ಸಮಿತಿ ೧೯೪೪ರಲ್ಲಿ ಹಾಡನ್ನು ಪ್ರಸ್ತುತಪಡಿಸಿತು. ಮುಂದೆ ಹಾಡು ಎಲ್ಲಾ ವಲಯಗಳಲ್ಲೂ ಜನಪ್ರೀಯವಾಯಿತು. ಇದರಿಂದ ಪ್ರೇರಣೆಗೊಂಡ ಹಲವಾರು ಬರಹಗಾರರು ಅನೇಕ ಜನಜಾಗೃತಿಯ ಹಾಡುಗಳನ್ನು ರಚಿಸಿದರು. ಜಂಗ್ ಹೈ ಆಜಾದಿ, ಭೂಖೆ ಹೈ ಬಂಗಾಳ, ಹಮ್ ಧರತೀಕೆ ಲಾಲ್, ಹಮ್ ಹೋಂಗೆ ಕಾಮಯಾಬ್, ಗಂಗಾ ಬಹತೀ ಹೊ ಕ್ಯೂಂವ್, ದಮಾದಮ್ ಮಸ್ತಕಲಂದರ್... ಇಂತಹ ಸಾವಿರಾರು ಹಾಡುಗಳಿಗೆ ಪ್ರಪ್ರಥಮ ಬಾರಿಗೆ ಜೀವದ್ವನಿಯನ್ನು ತುಂಬಿದ ಸಂಘಟನೆಇಪ್ಟಾ’. ಎಲ್ಲಾ ಹಾಡುಗಳನ್ನು ಇಪ್ಟಾದ ಕಲಾವಿದರು ಜನರ ನಡುವೆ ಹಾಡುವ ಮೂಲಕ ಸಾಮಾಜಿಕ ಎಚ್ಚರವನ್ನು ಮೂಡಿಸಿದರು. ಇದರಿಂದಾಗಿ ಜನಸಂಗೀತ ಎಂಬ ಪರಂಪರೆ ಬೆಳೆಯತೊಡಗಿತು.

'ಇಪ್ಟಾ' ತಂಡದ ಬೀದಿ ನಾಟಕದ ದೃಶ್ಯ
  
ಇಪ್ಟಾ ಸಾಂಸ್ಕೃತಿಕ ತಂಡ ಪ್ರಯೋಗಿಸಿದ ನೃತ್ಯ-ಸಂಗೀತ ನಾಟಕಗಳಾದ ಭಾರತ್ ಕೀ ಆತ್ಮಾ ಮತ್ತು ಅಮರ್ ಭಾರತ್ಗಳು ಐತಿಹಾಸಿಕ ಕೊಡುಗೆಗಳಾಗಿವೆ. ಸಾಂಪ್ರದಾಯಿಕ ಜಾನಪದ ಪ್ರಕಾರಗಳಿಗೆ ಸಮಕಾಲೀನತೆಯನ್ನು ತಂದ ಜೋತಿರ್ಮಯಿ ಮೊಯಿತ್ರಾರವರ ನವಜೀವನ ಗಾನ್, ಆಂದ್ರಪ್ರದೇಶದಲ್ಲಿ ಡಾ.ರಾಜಾರಾವ್ ಪ್ರಯೋಗಿಸಿದ ಬುರ್ರಕಥಾ, ವೀಧಿ ನಾಟಕ, ಹರಿಕಥೆಗಳು ಇಪ್ಟಾ ಅಪೂರ್ವ ಪ್ರದರ್ಶನಗಳಾಗಿವೆ. ಮಲಬಾರಿನ ಮಚೌ ನೃತ್ಯ ಹಾಗೂ ಉತ್ತರಭಾರತದ ಜಾನಪದ ನೃತ್ಯಗಳೂ ಸಹ ಜನಕಲೆಗೆ ಹೊಸ ಐಡೆಂಟಿಟಿ ತಂದಿತ್ತವು. ಮರಾಠಿಯಲ್ಲಿ ಅಮರ್ ಶೇಖರ ಹಾಡುಗಳು, ಮಗೈ ಓಜಾರ್ ರವರ ಆಸ್ಸಾಮಿ ಜಾನಪದ ಸಂಗೀತಗಳು ಇಪ್ಟಾ ಸಾಂಸ್ಕೃತಿಕ ಚಳುವಳಿಯಲ್ಲಿ ಮಹತ್ವದ್ದಾಗಿವೆ.

ಭಾರತದ ರಂಗಭೂಮಿಗೆ ಇಪ್ಟಾ ಹೊಸ ದಿಕ್ಕನ್ನೇ ತೋರಿಸಿತು. ಹಳೆಯ ಸಾಂಪ್ರದಾಯಿಕ ಪ್ರದರ್ಶನ ಪದ್ದತಿಗಳನ್ನು ಒಡೆದು ಹಾಕಿ, ಹೊಸ ದೃಷ್ಟಿಕೋನದಲ್ಲಿ ನಾಟಕಗಳನ್ನು ಪ್ರಸ್ತುತಪಡಿಸಲಾಯಿತು. ಜನರ ನೋವು, ದುಃಖ, ಕನಸು ಮತ್ತು ಮಹತ್ವಾಂಕಾಂಕ್ಷೆಗಳನ್ನು ಕಲಾಪ್ರಕಾರಗಳಲ್ಲಿ ಪ್ರಸ್ತುತಪಡಿಸಿದ ರೀತಿ ಅಮೋಘವಾಗಿತ್ತು. ಬಂಗಾಳದ ಬಿಜಾನ್ ಭಟ್ಟಾಚಾರ್ಯರ ನವಾನ್ನ (ಹೊಸ ಬೆಳೆ) ನಾಟಕವು ಸಾಂಪ್ರದಾಯಿಕತೆಯನ್ನು ಒಡೆದು ಕಟ್ಟುವ ರೀತಿಗೆ ಸಾಕ್ಷಿಯಾಯಿತು. ಶಂಕರ-ವಾಸಿರೆಡ್ಡಿಯವರ ಮಾ ಭೂಮಿ, ಟೋಫಿಲ್ ಬಾಸಿಯವರ ತುಮ್ನೆ ಮುಜೆ ಕಮ್ಯೂನಿಸ್ಟ್ ಬನಾಯಾ, ನಾಟಕಗಳು ಆಧುನಿಕ ರಂಗಭೂಮಿಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದವು. ಡಾ.ರಶೀದ್ ಜಹಾನ್, ಕ್ವಾಜಾ ಅಹಮದ್ ಅಬ್ಬಾಸ್, ಅಲಿ ಸರ್ದಾರ್ ಜಾಪ್ರಿ, ಸರ್ಮಾಲ್ಕರ್, ಬಲವಂತ ಗಾರ್ಗಿ, ಜಸ್ವಂತ ಟಕ್ಕರ್, ಮಾಮಾ ವರೇರ್ಕರ್, ಆಚಾರ್ಯ ಅತ್ರೇಯ ಮತ್ತು ಇತರ ಹಲವಾರು ರಂಗದಿಗ್ಗಜರು ವಾಸ್ತವವಾದಿ ರಂಗಭೂಮಿಯನ್ನು ಇಪ್ಟಾ ಮೂಲಕ ಹುಟ್ಟುಹಾಕಿದರು.

ಪಾಟ್ನಾ 'ಇಪ್ಟಾ' ತಂಡದ ಬೀದಿ ನಾಟಕದ ದೃಶ್ಯ

ಬಲರಾಜ್ ಸಹಾನಿ, ಶಂಭುಮಿತ್ರ, ಹಬೀಬ್ ತನ್ವೀರ್, ಭೀಷ್ಮ ಸಹಾನಿ, ದೀನಾ ಪಾಠಕ್, ರಾಜೇಂದ್ರ ರಘುವಂಶಿ, ಆರ್.ಎಂ.ಸಿಂಗ್, ಉತ್ಪಲ್ದತ್, .ಕೆ.ಹಾನಗಲ್, ರಾಮೇಶ್ವರ್ ಸಿಂಗ್ ಕಶ್ಯಪ್, ಶೈಲಾ ಭಾಟಿಯಾ... ಹೀಗೆ ಹಲವಾರು ನಟ, ನಿರ್ದೇಶಕರು ಇಪ್ಟಾ ಮೂಲಕ ಸಾಂಸ್ಕೃತಿಕ ಲೋಕದ ಆಯಾಮಗಳನ್ನು ವಿಸ್ತರಿಸಿದರು.

ಆಗ ತಾನೇ ಚಲನಚಿತ್ರರಂಗ ಭಾರತದಲ್ಲಿ ಜನಪ್ರೀಯವಾಗತೊಡಗಿತ್ತು. ಮಾಧ್ಯಮವನ್ನು ಬಳಸಿ ತಮ್ಮ ಜನಪರ ಆಶಯಗಳನ್ನು ಜನರಿಗೆ ತಲುಪಿಸಲು ಸಾಧ್ಯ ಎಂಬುದನ್ನು ಮನಗಂಡು, ಇಪ್ಟಾದಲ್ಲಿ ಸಕ್ರೀಯವಾಗಿದ್ದ ಹಲವಾರು ಪ್ರತಿಭಾವಂತರು ಸ್ವಾತಂತ್ರ್ಯದ ನಂತರ ಸಿನೆಮಾ ಮಾಧ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
 

'ದರ್ತಿ ಕಾ ಲಾಲ್' ಸಿನೆಮಾ
ಹೀಗಾಗಿ... ಇಪ್ಟಾ 1946 ರಲ್ಲಿ ದರ್ತಿ ಕೆ ಲಾಲ್ ಎನ್ನುವ ಸಿನೆಮಾವನ್ನೂ ನಿರ್ಮಿಸಿತು. ಬಜೋನ್ ಭಟ್ಟಾಚಾರ್ಯರ ನವಾನ್ನ ಮತ್ತು ಅಂತಿಮ್ ಅಭಿಲಾಶಾ ಎಂಬ ಎರಡು ನಾಟಕಗಳನ್ನಾಧರಿಸಿದ ಸಿನೆಮಾ ಖ್ವಾಜಾ ಅಹ್ಮದ್ ಅಬ್ಬಾಸ್ ರವರ ನಿರ್ದೇಶನದಲ್ಲಿ ತಯಾರಾಯಿತು.  ಪಂಡಿತ್ ರವಿಶಂಕರ್ ಸಂಗೀತ ನಿರ್ದೇಶಕರಾಗಿದ್ದು, ಅಲಿ ಸರ್ದಾರ್ ಜಾಪ್ರಿರವರು ಹಾಡು ಬರೆದರು. ಪ್ರೇಮ್ ಧವನ್, ಶಂಭುಮಿತ್ರಾ, ತೃಪ್ತಿ ಮಿತ್ರಾ, ಬಲರಾಜ್ ಸಹಾನಿ, ದಮಯಂತಿ ಸಹಾನಿ, ಉಷಾದತ್ತ.... ಹೀಗೆ ಹಲವಾರು ಇಪ್ಟಾ ದಿಗ್ಗಜರು ಚಲನಚಿತ್ರದಲ್ಲಿ ನಟಿಸಿದ್ದರು.

ಸಿನೆಮಾದ ಆರಂಭದ ಕಾಲದಲ್ಲಿ ಹಿಂದಿ ಮತ್ತು ಬಂಗಾಳಿ ಚಲನಚಿತ್ರರಂಗವನ್ನು ಇಪ್ಟಾದಲ್ಲಿ ಸಕ್ರೀಯವಾಗಿದ್ದ ಪ್ರತಿಭೆಗಳೇ ಆಳಿದರು. ಬಲರಾಜ್ ಸಹಾನಿ ಬಾಂಬೆಯ ಇಪ್ಟಾದ ನಾಟಕಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದರು. 1946ರಲ್ಲಿ ದರತಿ ಕೆ ಲಾಲ್, ದೂರ್ ಚಲೆ, ಹಾಗೂ ಬದನಾಮಿ ಸಿನೆಮಾಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನೆಮಾ ಪಯಣವನ್ನು ಆರಂಭಿಸಿದರು. 1946ರಿಂದ ಅವರು ಕಾಲವಶರಾದ 13 ಎಪ್ರಿಲ್ 1973 ರವರೆಗಿನ ಕಾಲಘಟ್ಟದಲ್ಲಿ 82 ಸಿನೆಮಾಗಳಲ್ಲಿ ಬಲರಾಜ್ ಸಹಾನಿ ಅಭಿನಯಿಸಿದ್ದಾರೆ. 200ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿದ .ಕೆ.ಹಾನಗಲ್ ರಂಗಭೂಮಿಯ ಮೂಲಕವೇ ಬೆಳೆದವರು. ಇಪ್ಟಾ ಅಧ್ಯಕ್ಷರಾಗಿಯೂ ಇಪ್ಟಾವನ್ನು ಮುನ್ನಡೆಸಿದರು. ಕರ್ನಾಟಕದಿಂದ ಬಾಂಬೆಗೆ ಹೋಗಿ ಇಪ್ಟಾದಲ್ಲಿ ತಮ್ಮನ್ನು ತೊಡಗಿಸಿಕೊಂಡ ಎಂ.ಎಸ್.ಸತ್ಯೂರವರು ಹಲವಾರು ನಾಟಕಗಳನ್ನು ನಿರ್ದೇಶಿಸುವುದರ ಜೊತೆಗೆ ಏಳು ಸಿನೆಮಾಗಳನ್ನು ನಿರ್ದೇಶಿಸಿದರು. ಏಕ ಥಾ ಚೋಟು ಏಕ ಥಾ ಮೋಟು, ಗರಂ ಹವಾ, ಕನ್ನೇಶ್ವರರಾಮ, ಸುಖಾ (ಬರ).... ಮುಂತಾದ ಹೊಸ ಅಲೆಯ ಸಿನೆಮಾಗಳು ಅವರ ಜನಪರ ಕಾಳಜಿಗೆ ಸಾಕ್ಷಿಗಳಾದವು


'ಗಿರಿಜಾ ಕಿ  ಸಪ್ನೆ' ಬಾಂಬೆ ಇಪ್ಟಾ ನಾಟಕ
  1947ರಲ್ಲಿ ಬ್ರಿಟೀಷರ ನೇರ ಆಡಳಿತದಿಂದ ಭಾರತಕ್ಕೆ ಮುಕ್ತಿ ಸಿಕ್ಕಿತು. ರಾಜಕೀಯ ಸ್ವಾತಂತ್ರ್ಯ ಬಂದನಂತರ ಇಪ್ಟಾ ಕೂಡಾ ವಿಸರ್ಜನೆಗೊಳ್ಳಬೇಕು, ವಸಾಹತುಶಾಹಿಗಳಿಂದ ಸ್ವಾತಂತ್ರ್ಯ ಪಡೆಯುವ ತನ್ನ ಆಶಯ ಈಡೇರಿತು ಎಂದು ಕೆಲವರು ಒತ್ತಾಯಿಸಿದರು. ಆದರೆ ಸಮಾನತೆ ಬರದೇ ಸ್ವತಂತ್ರ್ಯಕ್ಕೆ ಬೆಲೆಯಿಲ್ಲ ಎಂದು ಹಲವರು ಪ್ರತಿಪಾದಿಸಿದರು. ಕೊನೆಗೂ ರಾಷ್ಟ್ರೀಯ ಮಟ್ಟದಲ್ಲಿ 1960 ರಲ್ಲಿ ಇಪ್ಟಾ ಸಾಂಸ್ಕೃತಿಕ ಸಾಮ್ರಾಜ್ಯ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಲ್ಲಿ ಹಂಚಿಹೋಯಿತು. ಇಪ್ಟಾ ಪ್ರಮುಖರು ತಮ್ಮದೇ ಆದ ರಂಗತಂಡಗಳನ್ನು ಮಾಡಿಕೊಂಡು ತಮ್ಮ ತಮ್ಮ ರಾಜ್ಯಗಳಲ್ಲಿ ಕ್ರೀಯಾಶೀಲರಾದರು. ಒಂದು ರೀತಿಯಲ್ಲಿ ಇಪ್ಟಾ ವಿಕೇಂದ್ರಿಕರಣಗೊಂಡಿತು. ಇನ್ನೊಂದು ಅರ್ಥದಲ್ಲಿ ವ್ಯಕ್ತಿಕೇಂದ್ರಿತ ರಂಗತಂಡಗಳಾಗಿ ಪ್ರತ್ಯೇಕ ತಂಡಗಳು ಅಸ್ತಿತ್ವಕ್ಕೆ ಬಂದವು. ಹಲವಾರು ಸ್ವತಂತ್ರ ರಂಗತಂಡಗಳು ಪ್ರಗತಿಪರ ವಿಚಾರಧಾರೆಗಳನ್ನು ತಮ್ಮ ರಂಗ ಚಟುವಟಿಕೆಗಳ ಮೂಲಕ ಮುಂದುವರೆಸಿದವು.     ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಶಂಭುಮಿತ್ರರವರ ಬಹುರೂಪಿ, ಹಬೀಬ್ ತನ್ವೀರ್ರವರ ನಿವ್ ಥೇಯಟರ್, ರುಮಾ ಗುಹಾ ಠಾಕೂರರ ಕಲ್ಕತ್ತಾ ಯುಥ್ ಚೌರ್, ಎಂ.ಬಿ.ಶ್ರೀನಿವಾಸರವರ ಮದ್ರಾಸ್ ಯುತ್ ಚೌರ್,..... ಜೊತೆಗೆ ಶಾಂತಿವರ್ಧನ್, ಉತ್ಪಲ್ದತ್ ಹಾಗೂ ಇತರ ರಂಗಪ್ರಮುಖರು ತಮ್ಮದೇ ಆದ ರಂಗತಂಡಗಳನ್ನು ಹುಟ್ಟುಹಾಕಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಇಪ್ಟಾ ಆಶಯಗಳೊಂದಿಗೆ ಮುಂದುವರೆಸಿದರು.

ಬೇರೆ ಬೇರೆ ರಾಜ್ಯಗಳಲ್ಲಿ ಇಪ್ಟಾ ಬೇರೆ ಬೇರೆ ಹೆಸರುಗಳಲ್ಲಿ ಸಾಂಸ್ಕೃತಿಕ ಚಳುವಳಿ ಮತ್ತು ಚಟುವಟಿಕೆಗಳನ್ನು ಕಳೆದ ಆರು ದಶಕಗಳಿಂದ ಮುಂದುವರೆಸಿಕೊಂಡು ಬಂದಿದೆ. ಕರ್ನಾಟಕದಲ್ಲಿ ಭಾರತೀಯ ಜನಕಲಾ ಸಮಿತಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಬಿಹಾರಗಳಲ್ಲಿಭಾರತೀಯ ಜನನಾಟ್ಯ ಸಂಘ, ಆಂದ್ರ ಪ್ರದೇಶದಲ್ಲಿಪ್ರಜಾನಾಟ್ಯ ಮಂಡಳಿ’,  ಬೇರೆ ರಾಜ್ಯಗಳಲ್ಲಿಭಾರತೀಯ ಜನ ನಾಟ್ಯ ಮಂಚ್, ಜನ ಸಂಸ್ಕೃತಿ ಮಂಚ್ ಮುಂತಾದ ಹೆಸರುಗಳಲ್ಲಿ ಇಪ್ಟಾ ಲೋಗೋ ಬಳಸಿಕೊಂಡೇ ಸಾಂಸ್ಕೃತಿಕ ಜಾಗೃತಿ ಮುಂದುವರೆಸಲಾಯಿತು. 1980 ರಲ್ಲಿ ಭಾರತದಾದ್ಯಂತ ಬೇರೆ ಬೇರೆ ಹೆಸರುಗಳಿಂದ ಕೆಲಸಮಾಡುತ್ತಿರುವ ಎಲ್ಲಾ ಇಪ್ಟಾ ಘಟಕಗಳನ್ನು ರಾಷ್ಟ್ರಮಟ್ಟದಲ್ಲಿ ಮರುಸಂಘಟಿಸುವ ಕೆಲಸಕ್ಕೆ ಚಾಲನೆ ನೀಡಲಾಯಿತು.

'ಇಪ್ಟಾ' ತಂಡದ ಬೀದಿ ನಾಟಕದ ದೃಶ್ಯ

1985ರಲ್ಲಿ ಆಗ್ರಾದಲ್ಲಿ ನಡೆದ ಇಪ್ಟಾ ರಾಷ್ಟ್ರೀಯ ಸಮ್ಮೇಳನದಲ್ಲಿ 15 ರಾಜ್ಯಗಳ 300 ಜನ ರಾಜ್ಯ ಘಟಕದ ಪ್ರತಿನಿಧಿಗಳು ಪಾಲ್ಗೊಂಡು ರಾಷ್ಟ್ರೀಯ ಮಟ್ಟದಲ್ಲಿ ಇಪ್ಟಾವನ್ನು ಮರುಸಂಘಟಿಸುವ ನಿರ್ಧಾರ ಮಾಡಲಾಯ್ತು. 1986ರಲ್ಲಿ ಹೈದರಾಬಾದ್ನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನವನ್ನು ಹೆಸರಾಂತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ರವರು ಉದ್ಘಾಟಿಸಿದರು. ಖ್ಯಾತ ನಟಿ ಶಬಾನಾ ಅಜ್ಮಿಯವರ ತಂದೆ ಕೈಪ್ ಅಜ್ಮಿರವರು ಇಪ್ಟಾ ಅಧ್ಯಕ್ಷರಾಗಿ ಆಯ್ಕೆಗೊಂಡರು. .ಕೆ.ಹಾನಗಲ್, .ಎಸ್.ಸತ್ಯು, ರಾಜೇಂದ್ರ ರಘುವಂಶಿ, ದೀನಾ ಪಾಠಕ್, ಭೀಷ್ಮ ಸಹಾನಿ, ಮುಂತಾದವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಗೋವಿಂದ್ ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿಯಾದರು.

ಇಪ್ಟಾದ ಹಳೆಯ ಮತ್ತು ಹೊಸ ತಲೆಮಾರಿನ ಸಂಚಾಲಕರುಗಳಾದ ನಾವು ಸದೃಢವಾದ ಮತ್ತು ಕ್ರಿಯಾಶೀಲವಾದ ರಾಷ್ಟ್ರೀಯ ಸಾಂಸ್ಕೃತಿಕ ಚಳುವಳಿಯನ್ನು ಕಟ್ಟಲು ನಮ್ಮನ್ನು ನಾವು ಮತ್ತೆ ಸಮರ್ಪಿಸಿಕೊಳ್ಳುತ್ತಿದ್ದೇವೆ. ದುಷ್ಟಶಕ್ತಿಗಳಿಂದ ಶೋಷಣೆಗೊಳಗಾದ ಭಾರತದ ಜನತೆಯನ್ನು ಸಂಪೂರ್ಣವಾಗಿ ನಂಬುತ್ತೇವೆ ಮತ್ತು ನಾವೆಲ್ಲರೂ ಕೈಜೋಡಿಸುವ ಮೂಲಕ ಜೀವಂತ ಸಾಂಸ್ಕೃತಿಕ ಸಂಬಂಧಗಳನ್ನು ನಿರ್ಮಿಸಲು ಹೆಮ್ಮೆ ಪಡುತ್ತೇವೆ ಎಂದು ಹೈದರಾಬಾದ್ ರಾಷ್ಟ್ರೀಯ ಸಮ್ಮೇಳನದಲ್ಲಿ ಘೋಷಿಸಲಾಯಿತು.

2011 ರಲ್ಲಿ ಛತ್ತಿಸಗಡದ ಬಿಲಾಯಿಯಲ್ಲಿ ನಡೆದ 13ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ರಂಗಕರ್ಮಿ, ಸಿನೆಮಾ ನಟ ಪದ್ಮಭೂಷಣ .ಕೆ.ಹಾನಗಲ್ರವರನ್ನು ಇಪ್ಟಾ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. 26 ಆಗಸ್ಟ್ 2012 ರಲ್ಲಿ ಹಾನಗಲ್ರವರು ಕಾಲವಶರಾಗುವವರೆಗೂ ಅವರೇ ಇಪ್ಟಾದ ಗೌರವಾಧ್ಯಕ್ಷರಾಗಿದ್ದರು. ಹಿರಿಯ ರಂಗಕರ್ಮಿ ರಣಬೀರ್ ಸಿಂಗ್ರವರು ಕಾರ್ಯಕಾರಿ ಅಧ್ಯಕ್ಷರಾಗಿ ಪ್ರಸ್ತುತ ಇಪ್ಟಾವನ್ನು ಮುನ್ನೆಡೆಸುತ್ತಿದ್ದಾರೆ.



ಭಾರತದಾದ್ಯಂತ ಈಗ 600ಕ್ಕೂ ಹೆಚ್ಚು ಇಪ್ಟಾ ಘಟಕಗಳು 22 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ರಿಯಾಶೀಲವಾಗಿವೆ. 12000 ಕ್ಕೂ ಹೆಚ್ಚು ಜನ ಇಪ್ಟಾ ಕಾರ್ಯಕರ್ತರು ದೇಶಾದ್ಯಂತ ಸಕ್ರೀಯರಾಗಿದ್ದಾರೆ. ದೇಶದ ಸ್ವಾತಂತ್ರ್ಯ ಚಳುವಳಿಗೆ ಸಾಂಸ್ಕೃತಿಕ ನಾಯಕತ್ವ ವಹಿಸಿದ ಇಪ್ಟಾ ಸಂಘಟನೆಯ ಸಮರಶೀಲ ಸಾಂಸ್ಕೃತಿಕ ಇತಿಹಾಸದ ಸ್ವರಣೆಗಾಗಿ 1994, ಮೇ 25 ರಂದು ಭಾರತ ಸರಕಾರ 'ಇಪ್ಟಾ' ಲಾಂಚನ ಹೊಂದಿದ ಅಂಚೆಚೀಟಿಯನ್ನು ಇಪ್ಟಾದ 50ನೇ ವರ್ಷದ ಸುವರ್ಣ ಸಂಭ್ರಮದ ನೆನಪಿನಲ್ಲಿ ಬಿಡುಗಡೆ ಮಾಡಿತು.

ಆಗ ಸ್ವಾತಂತ್ರ್ಯ ಚಳುವಳಿ ತೀವ್ರವಾಗಿದ್ದ  ಕಾಲವಾಗಿತ್ತು. ಚಳುವಳಿಗೆ ಪೂರಕವಾಗಿ ಅಗತ್ಯವಾದ ಸಾಂಸ್ಕೃತಿಕ ಚಳುವಳಿ ಅಗತ್ಯವಾಗಿತ್ತು. ಅದಕ್ಕೆ ಇಪ್ಟಾ ನಾಯಕತ್ವವನ್ನು ಒದಗಿಸಿತು. ಆದರೆ ಈಗ ಜಾಗತೀಕರಣ ಎನ್ನುವುದು ಎಲ್ಲಾ ಚಳುವಳಿಗಳನ್ನೂ ಆಪೋಷಣ ತೆಗೆದುಕೊಂಡಿದೆ. ಇಡೀ ವ್ಯವಸ್ಥೆ ಭ್ರಷ್ಟಾಚಾರಮಯವಾಗಿದೆ. ಕೋಮು ಶಕ್ತಿಗಳು ತಮ್ಮ ಅಧಿಕಾರದಾಹಕ್ಕಾಗಿ ಕೋಮು ಸೌಹಾರ್ಧತೆಯನ್ನು ಕದಡಿ ಜನರನ್ನು ಒಡೆದು ಆಟವಾಡುತ್ತಿವೆ. ಅಮೇರಿಕದಂತಹ ಸಾಮ್ರಾಜ್ಯಶಾಹಿ ದೇಶಗಳ ಕಾರ್ಪೊರೇಟ್ ಕಂಪನಿಗಳು ಭಾರತದ ಆರ್ಥಿಕತೆಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿವೆ. ವಿದೇಶಿ ಸಾಂಸ್ಕೃತಿಯ ಅಟ್ಟಹಾಸಕ್ಕೆ ದೇಶಿ ಸಂಸ್ಕೃತಿ ನಾಶವಾಗುತ್ತಿದೆ. ಇಂತಹ ಪ್ರಕ್ಷುಬ್ಧ ಕಾಲಘಟ್ಟದಲ್ಲಿ ಇಪ್ಟಾದಂತಹ ಸಂಘಟನೆ ಜನರಲ್ಲಿ ಜಾಗೃತಿ ಮೂಡಿಸಲು ಅಗತ್ಯವಾಗಿದೆ. ತಳಸಂಸ್ಕೃತಿಯ ಪ್ರತೀಕವಾದ ಚರ್ಮವಾಧ್ಯ ನಗಾರಿಯನ್ನು ಬಾರಿಸುವ ಕಲಾವಿದನ ಲಾಂಚನ ಹೊಂದಿದ ಇಪ್ಟಾದಂತಹ ಸಾಂಸ್ಕೃತಿಕ ಸಂಘಟನೆಯ ಅಗತ್ಯ ಇನ್ನೂ ಇದೆ.  ಅಸಮಾನ ವ್ಯವಸ್ಥೆಯ ವಿರುದ್ದ ಸಾಂಸ್ಕೃತಿಕ ಚಳುವಳಿಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಇಪ್ಟಾ ಮರು ಸಂಘಟನೆಗೊಂಡು ಜನರ ಬಳಿಗೆ ಹೋಗಬೇಕಾಗಿದೆ. ಸಶಕ್ತ, ಸಮಾನ, ಸ್ವಾಭಿಮಾನಿ ಭಾರತವನ್ನು ಕಟ್ಟುವ ಇಪ್ಟಾ ಕನಸು ನನಸಾಗಬೇಕಿದೆ.

                                                    -ಶಶಿಕಾಂತ ಯಡಹಳ್ಳಿ

   


ಇಪ್ಟಾ ರೂವಾರಿಗಳು :

ಅನಿಲ್ ಡಿ. ಸಿಲ್ವಾ, ದೇವ್ ಆನಂದ, ಮುಲ್ಕರಾಜ್ ಆನಂದ, ಪೃತ್ವಿರಾಜ್ ಕಪೂರ್, ಬಿಜೊನ್ ಭಟ್ಟಾಚಾರ್ಯ, ರಿತ್ವಿಕ್ ಪಾಠಕ್, ಉತ್ಪಲ್ ದತ್, ಕ್ವಾಜಾ ಅಹಮದ್ ಅಬ್ಬಾಸ್, ಸಲಿಲ್ ಚೌದರಿ, ಪಂಡಿತ್ ರವಿಶಂಕರ, ನಿರಂಜನ್ ಸಿಂಗ್ ಮಾನ್, ಜಗದೀಶ ಪರ್ಯಾದಿ, ರಾಜೇಂದ್ರ ರಘುವಂಶಿ,  ಶಂಭು ಮಿತ್ರ, ಕೈಪ್ ಹಜ್ಮಿ, ಶೌಕತ್ ಅಜ್ಮೀ, ಶಬಾನಾ ಹಜ್ಮಿ, ಬಲರಾಜ್ ಸಹಾನಿ, ಭೀಷ್ಮ ಸಹಾನಿ, ದಮಯಂತಿ ಬಲರಾಜ್,  ಉತ್ಪಲ್ದತ್, .ಕೆ.ಹಾನಗಲ್, ರಾಮೇಶ್ವರ್ ಸಿಂಗ್ ಕಶ್ಯಪ್, ಶೈಲಾ ಭಾಟಿಯಾ, ಅಲಿ ಸರ್ದಾರ್ ಜಾಪ್ರಿ, ಜಸ್ವಂತ ಠಕ್ಕರ್, ಆಚಾರ್ಯ ಅತ್ರೇಯ, ಆರ್.ಎಂ.ಸಿಂಗ್, ದೀನಾ ಪಾಠಕ್, ಶೈಲಾ ಭಾಟಿಯಾ, ಬಲವಂತ ಗಾರ್ಗಿ. ಡಾ.ರಶೀದ್ ಜಹಾನ್, ಉಷಾದತ್ತ, ಹಬೀಬ್ ತನ್ವೀರ್, ಎಂ.ಎಸ್.ಸತ್ಯು, ಮನೋರಂಜನ್ ಭಟ್ಟಾಚಾರ್ಯ, ಕೆ.ಸುಬ್ರಮಣಿಯನ್,ಡಾ. ರಾಜಾ ರಾವ್,ಶೈಲಾ ಭಾಟಿಯಾ, ವಿಷ್ಣು ಪ್ರಸಾದ್ ರಾವಾ, ಹೆಮಾಂಗ ವಿಸ್ವಾಸ, ಅಮರ್ ಶೈಕ್.......ರಾಜೇಂದ್ರ ರಘುವಂಶಿ, ಫಾರುಕ್ ಶೇಖ, ನಿರಂಜನ, ಮೋಹನ್ ಸೇಹಗಲ್,


ಇಪ್ಟಾ ರಾಷ್ಟ್ರೀಯ ಸಮ್ಮೇಳನಗಳು.

1ನೇ ರಾಷ್ಟ್ರೀಯ ಸಮ್ಮೇಶನ 1943 ರಲ್ಲಿ ಬಾಂಬೆ.
2ನೇ ರಾಷ್ಟ್ರೀಯ ಸಮ್ಮೇಶನ 1944 ರಲ್ಲಿ ಬಾಂಬೆ.
3ನೇ ರಾಷ್ಟ್ರೀಯ ಸಮ್ಮೇಶನ 1945 ರಲ್ಲಿ ಬಾಂಬೆ.
4ನೇ ರಾಷ್ಟ್ರೀಯ ಸಮ್ಮೇಶನ 1946 ರಲ್ಲಿ ಕಲ್ಕತ್ತಾ
5ನೇ ರಾಷ್ಟ್ರೀಯ ಸಮ್ಮೇಶನ 1948 ರಲ್ಲಿ ಅಲ್ಹಾಬಾದ್
6ನೇ ರಾಷ್ಟ್ರೀಯ ಸಮ್ಮೇಶನ 1949 ರಲ್ಲಿ ಅಲ್ಹಾಬಾದ್
7ನೇ ರಾಷ್ಟ್ರೀಯ ಸಮ್ಮೇಶನ 1952 ರಲ್ಲಿ ಬಾಂಬೆ.
8ನೇ ರಾಷ್ಟ್ರೀಯ ಸಮ್ಮೇಶನ 1957 ರಲ್ಲಿ ಡೆಲ್ಲಿ.
9ನೇ ರಾಷ್ಟ್ರೀಯ ಸಮ್ಮೇಶನ 1986 ರಲ್ಲಿ ಹೈದರಾಬಾದ್
10ನೇ ರಾಷ್ಟ್ರೀಯ ಸಮ್ಮೇಶನ 1992 ರಲ್ಲಿ ಜಯಪೂರ್
11ನೇ ರಾಷ್ಟ್ರೀಯ ಸಮ್ಮೇಶನ 2001 ರಲ್ಲಿ ತ್ರಿಶೂರ್ (ಕೇರಳ)
12ನೇ ರಾಷ್ಟ್ರೀಯ ಸಮ್ಮೇಶನ 2005 ರಲ್ಲಿ ಲಕನೌ
13ನೇ ರಾಷ್ಟ್ರೀಯ ಸಮ್ಮೇಶನ 2011 ರಲ್ಲಿ ಬಿಲಾಲಿ (ಛತ್ತಿಸಗಢ)

























ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ