ಗುರುವಾರ, ಮೇ 8, 2014

“ಸಿಜಿಕೆ ಕನಸು ಮತ್ತು ಸಾಮಾಜಿಕ ಸವಾಲುಗಳು ”

ಪ್ರೊ. ಸಿ.ಜಿ.ಕೃಷ್ಣಸ್ವಾಮಿ

                         

    
( 'ಸಂಸ' ಪತ್ರಿಕೆಯು ಸಿಜಿಕೆ ರಂಗಹುಡುಕಾಟ ಕಾರ್ಯಕ್ರಮದಲ್ಲಿ ಸಿಜಿಕೆ ಕನಸು ಮತ್ತು ಸಾಮಾಜಿಕ ಸವಾಲುಗಳು ಎನ್ನುವ ವಿಷಯದ ಮೇಲೆ ವಿಚಾರ ಸಂಕಿರಣವನ್ನು 2014, ಎಪ್ರಿಲ್ 23 ರಂದು ರವೀಂದ್ರ ಕಲಾಕ್ಷೇತ್ರದ ವಿಶ್ರಾಂತಿ ಕೊಠಡಿಯಲ್ಲಿ ಆಯೋಜಿಸಿತ್ತು.  ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿದ ನಾನು ಸಿಜಿಕೆ ಕುರಿತ ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೆ. ಸಮಯದ ಅಭಾವದಿಂದ ಸಿದ್ದಪಡಿಸಿಕೊಂಡುಬಂದಿದ್ದ ಪ್ರಬಂಧವನ್ನು ಪೂರ್ತಿಯಾಗಿ ಮಂಡಿಸಲಾಗದೇ ಸಂಕ್ಷಿಪ್ತವಾಗಿ ಹೇಳಿದ್ದೆ. ಪ್ರಬಂಧದ ಪೂರ್ಣ ಪಾಠ ಲೇಖನ ರೂಪದಲ್ಲಿ ಇಲ್ಲಿದೆ. ಸಿಜಿಕೆಯವರು ಕಂಡ ಕನಸುಗಳನ್ನು ಹಾಗೂ ಸಾಮಾಜಿಕ ಸವಾಲುಗಳಿಗೆ ಪ್ರತಿಯಾಗಿ ಸಿಜಿಕೆ ನಿರ್ವಹಿಸಿದ ಜವಾಬ್ದಾರಿಗಳನ್ನು ಮತ್ತು  ಸಿಜಿಕೆ ಮೇಲಿರುವ ಆರೋಪಗಳಿಗೆ ಸಮರ್ಥನೆಗಳನ್ನು ಲೇಖನದಲ್ಲಿ ವಿವರಿಸುವ ಪ್ರಯತ್ನಿಸಲಾಗಿದೆ. ) 

ಭೂತಕಾಲದ ಅರಿವಿಲ್ಲದವರಿಗೆ ಭವಿಷ್ಯವನ್ನು ಕನಸುವುದು ಹಾಗೂ ವರ್ತಮಾನವನ್ನು ಕಟ್ಟುವುದು ಕಷ್ಟಸಾಧ್ಯ. ಸಿಜಿಕೆ ಕೇವಲ ಒಂದು ವ್ಯಕ್ತಿಯಾಗಿರದೇ ರಂಗಶಕ್ತಿಯಾಗಿದ್ದವರು. ಸಿಜಿಕೆ ಕುರಿತು ಪದೇ ಪದೇ ಮಾತನಾಡುವುದನ್ನೇ ವ್ಯಕ್ತಿಕೇಂದ್ರಿತ ಭಜನೆ ಎನ್ನುವುದು ಸಿಜಿಕೆ  ಯವರ ಸಾಧನೆ ಕುರಿತು ಅಸೂಯೆ ಹೊಂದಿದವರು ಮಾತ್ರ ಹೇಳಬಹುದಾದ ಮಾತು. ಸಿಜಿಕೆ ಎಂದರೆ ಯಾರು? ಅವರು ಸಾಗಿಬಂದ ರಂಗದಾರಿ ಎಂತಹುದು? ಅವರ ಗುರಿ ಮತ್ತು ಸಾಧನೆಗಳೇನು? ಸಿಜಿಕೆ ಕಂಡ ಕನಸುಗಳು ಹಾಗೂ ಅವುಗಳನ್ನು ನನಸಾಗಿಸಿಕೊಂಡ ಬಗೆ ಎಂತಹುದು? ರಂಗ ಚಟುವಟಿಕೆ ಹಾಗೂ ರಂಗ ಚಳುವಳಿಗೆ ಸಿಜಿಕೆ ಕೊಡುಗೆ ಎಂತಹುದು?... ಎನ್ನುವುದನ್ನು ರಂಗಭೂಮಿಯ ಹೊಸತಲೆಮಾರಿಗೆ ತಿಳಿಸಿಕೊಡುವಂತಹ ಗುರುತರ ಜವಾಬ್ದಾರಿ ಸಿಜಿಕೆ ಒಡನಾಡಿಗಳದ್ದಾಗಿದೆ. ಸಿಜಿಕೆ ದೌರ್ಬಲ್ಯಗಳನ್ನೇ ಮುಂದೆ ಮಾಡಿಕೊಂಡು ಅವರ ಸಾಧನೆಯನ್ನು ನಿರಾಕರಿಸುವುದು ಹಾಗೂ ಯಾವುದೋ ಐಡಿಯಾಲಜಿಯ ಕನ್ನಡಕದಲ್ಲಿ  ಸಿಜಿಕೆಯನ್ನು ನೋಡಿ ಲೇವಡಿ ಮಾಡುವುದು ಬೇಜವಾಬ್ದಾರಿತನವೆನ್ನಿಸುತ್ತದೆ. ಹೀಗಾಗಿ ಸಿಜಿಕೆ ರವರ ಕನಸುಗಳು ಹಾಗೂ ಸಾಮಾಜಿಕ ಸವಾಲುಗಳ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸುವುದು ಪ್ರಸ್ತುತ ರಂಗಭೂಮಿಯ ಅಗತ್ಯವಾಗಿದೆ


ವಿಚಾರ ಸಂಕಿರಣದ ಉದ್ಘಾಟನೆ ಮಾಡುತ್ತಿರುವ ಡಾ.ವಿಜಯಮ್ಮನವರು
  
ಅಶಕ್ತ ಕಾಲುಗಳ ದುರ್ಬಲ ದೇಹರಚನೆಯ ಪ್ರೊ. ಸಿ.ಜಿ.ಕೃಷ್ಣಸ್ವಾಮಿ ಸಶಕ್ತ ಕನಸುಗಳನ್ನು ಕಂಡು ಅವುಗಳನ್ನು ನನಸಾಗಿಸಲು ಶಕ್ತಿಮೀರಿ ಶ್ರಮಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ರೀಡರ್ ಆಗಿ ಕೆಲಸ ಮಾಡುತ್ತಲೇ ರಂಗಭೂಮಿ ಕಟ್ಟಲು ದುಡಿದರು. ಯಾವುದೇ ಅಕಾಡೆಮಿಕ್ ರಂಗತರಬೇತಿ ಇಲ್ಲದೇ. ನಾಟಕ ಕಟ್ಟುವಲ್ಲಿ ಯಾವುದೇ ಸಿದ್ದವಾದ ಸಿದ್ದಾಂತಗಳಿಗೆ ಬದ್ದವಾಗದೆ, ಯಾವುದೇ ಪೂರ್ವಗ್ರಹಿಕೆಗಳಿಲ್ಲದೇ ಸಿಜಿಕೆ ನಾಟಕಗಳನ್ನು ಕಟ್ಟುವ ರೀತಿ ಅದ್ಬುತವಾದದ್ದು. ವ್ಯಯಕ್ತಿಕ ಶಿಸ್ತಿನಲ್ಲಿ ನಂಬಿಕೆ ಇಲ್ಲದ ಪಕ್ಕಾ ಅಶಿಸ್ತಿನ ಮನುಷ್ಯ ಶಿಸ್ತಿನ ನಾಟಕಗಳನ್ನು ನಿರ್ದೇಶಿಸಿದ್ದು ಅಚ್ಚರಿಯ ಸಂಗತಿ. ಇದಕ್ಕೆಲ್ಲಾ ಕಾರಣ ಪ್ರತಿದಿನ ಪ್ರತಿಕ್ಷಣ ಸಿಜಿಕೆ ಕಾಣುತ್ತಿದ್ದ ರಂಗ ಕನಸು. ತಾನು ಕೈಗೆತ್ತಿಕೊಂಡ ನಾಟಕದ ಜೊತೆ ಸಿಗರೇಟು ಸೇದುವಾಗ, ಕುಡಿಯುವಾಗ, ನಿದ್ದೆಯಲ್ಲೂ ಕೂಡಾ ಕನಸಿನಲ್ಲಿ ಸಿಜಿಕೆ ಕುಸ್ತಿಯಾಡುತ್ತಿರುತ್ತಾನೆ ಎಂದು ಕವಿ ಹೆಚ.ಎಸ್.ಶಿವಪ್ರಕಾಶ ಹೇಳಿದ್ದು ಅಕ್ಷರಶಃ ಸತ್ಯವಾಗಿದೆ. ಭ್ರಮೆಗಳಿಲ್ಲದ ಕನಸುಗಾರ ಸಿಜಿಕೆ ಎಂದು ಲಿಂಗದೇವರು ಹಳೆಮನೆ ಹೇಳಿದ್ದರಲ್ಲಿ ಸುಳ್ಳಿಲ್ಲ. ಸಿಜಿಕೆ ಕಂಡ ಕನಸುಗಳ ಕುರಿತು ಒಂದಿಷ್ಟು ವಿವರ ನೊಡೋಣ.

ಸಮುದಾಯದ ರಂಗಚಳುವಳಿ ಕನಸು : ಪ್ರಗತಿಪರ ಸಾಂಸ್ಕೃತಿಕ ಚಿಂತಕರು, ಎಡಪಂಥೀಯ ವಿಚಾರಧಾರೆಯ ಬುದ್ಧಿಜೀವಿಗಳು ಹುಟ್ಟಿಹಾಕಿದ ಸಾಂಸ್ಕೃತಿಕ ಸಂಘಟನೆ ಸಮುದಾಯ,  ಕಲೆ ಇರುವುದು ಕೇವಲ ಮನರಂಜನೆಗಾಗಿ ಅಲ್ಲ, ಕಲೆಗೆ ಸಾಮಾಜಿಕ ಜವಾಬ್ದಾರಿ ಇದೆ ಎಂಬ ದ್ಯೇಯದಲ್ಲಿ ನಂಬಿಕೆ ಇಟ್ಟುಕೊಂಡು ಆರಂಭವಾಗಿದ್ದು ಸಮುದಾಯ ಸಂಘಟನೆ. ಸಂಘಟನೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಮೂಲಕ ಸಾಂಸ್ಕೃತಿಕ ಚಳುವಳಿಯನ್ನು ಮುನ್ನಡೆಸಿದವರು ಸಿಜಿಕೆ. ಸಮುದಾಯವನ್ನು ಒಂದು ರಂಗಚಳುವಳಿಯಾಗಿ ಬ್ರಹದಾಕಾರವಾಗಿ ಬೆಳೆಸಬೇಕು ಎಂದು ಸಿಜಿಕೆ ಕನಸಿದರು ಮತ್ತು ಅದಕ್ಕಾಗಿ ಶ್ರಮಿಸಿದರು. ಅದೇ ತಾನೆ ಹೊಸದಾಗಿ ಮದುವೆಯಾಗಿದ್ದ ಸಿಜಿಕೆ ಹೆಂಡತಿಯನ್ನು ಮನೆಯಲ್ಲಿ ಬಿಟ್ಟು ಸಮುದಾಯ ಜಾಥಾದಲ್ಲಿ ಭಾಗವಹಿಸಿದ್ದರು. 1979 ಅಕ್ಟೋಬರ್ 15 ರಂದು ಬೀದರ್ನಿಂದ ಧಾರವಾಡದವರೆಗೂ ನಡೆದ ೩೦ದಿನಗಳ ಸಮುದಾಯ ಜಾಥಾದ ನೇತೃತ್ವವನ್ನು ವಹಿಸಿಕೊಂಡ ಸಿಜಿಕೆ ಸಮುದಾಯ ರಂಗಚಳುವಳಿಯನ್ನು ಯಶಸ್ವಿಯಾಗಿ ಮುನ್ನೆಡೆಸಿದರು. ಬಿಹಾರದಲ್ಲಿ ದಲಿತರ ನರಹತ್ಯೆಯ ವಿರುದ್ದ ಬೆಲ್ಚಿ ಬೀದಿನಾಟಕವನ್ನು ರಚಿಸಿ ನಿರ್ದೇಶಿಸಿದರು. ಬೆಳೆದವರು, ಛಾಸನಾಲಾ ನಾಟಕಗಳನ್ನು ಜಾಥಾದ ನಡುಮಧ್ಯದಲ್ಲೇ ತಯಾರಿ ಮಾಡಿದರು. ನಕ್ಸಲೀಯರ ಎನ್ಕೌಂಟರ್ ಕುರಿತು ಭಾರತ ದರ್ಶನ ನಾಟಕವೂ ಸಹ ಜಾಥಾದಲ್ಲೇ ಸಿಜಿಕೆಯವರಿಂದ ಸಿದ್ದಗೊಂಡಿತ್ತು. ಹೀಗೆ ಒಂದು ತಿಂಗಳ ಜಾಥಾದಲ್ಲಿ ನಾಟಕಗಳನ್ನು ರಚಿಸಿ, ರೂಪಿಸಿ, ನಿರ್ದೇಶಿಸಿ ಪ್ರದರ್ಶಿಸುತ್ತಲೇ ತಮ್ಮ ಸಾಮಾಜಿಕ ಬದ್ಧತೆಯನ್ನು ಹಾಗೂ ನಾಟಕದ ಸಿದ್ದತೆಯನ್ನು ಸಿಜಿಕೆ ಸಾಬೀತು ಪಡಿಸಿದರು. ಸಿಜಿಕೆ ರಂಗಬದ್ದತೆ ಎಷ್ಟಿತ್ತೆಂದರೆ ಸಮುದಾಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ತೊಂದರೆಯಾಗುತ್ತದೆಂದು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದರು. ರಂಗಚಟುವಟಿಕೆಗಳು ಚಳುವಳಿಯಾಗಬೇಕೆಂದು ಅಪಾರ ಕನಸು ಕಂಡ ಸಿಜಿಕೆ ಎಂಟು ವರ್ಷಗಳ ಕಾಲ ಸಮುದಾಯದಲ್ಲಿ ಸಕ್ರೀಯರಾಗಿದ್ದರು. ಮುಂದೆ ಸಮುದಾಯ ಸಂಘಟನೆಯಿಂದ ಭ್ರಮನಿರಸಗೊಂಡು ಅದರಿಂದ ವಿಮುಖರಾಗಿ ರಂಗಸಂಪದ ರಂಗತಂಡಕ್ಕೆ ನಾಟಕವನ್ನು ನಿರ್ದೇಶಿಸತೊಡಗಿದರು. ಪ್ರಸನ್ನ ಸಮುದಾಯದ ತಲೆ ಆದರೆ ಸಿಜಿಕೆ ಅದರ ಕಾಲು, ಇಂದು ಸಮುದಾಯದಲ್ಲಿ ತಲೆ ಮತ್ತು ಕಾಲು ಎರಡೂ ಇಲ್ಲ ಕೇವಲ ಮಧ್ಯದ ದೇಹ ಉಳಿದುಕೊಂಡಿದೆ ಎಂದು ಲಿಂಗದೇವರು ಹಳೆಮನೆಯವರು ಸಿಜಿಕೆ ಸಮುದಾಯ ಬಿಟ್ಟ ಸಂದರ್ಭದಲ್ಲಿ ಹೇಳಿದ್ದು ಸಿಜಿಕೆ ಸಂಘಟನೆ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಸಿಜಿಕೆ ನಿರ್ದೇಶನದ 'ವೈಶಂಪಾಯನ ತೀರ' ನಾಟಕದ ದೃಶ್ಯ

ಬೀದಿರಂಗಭೂಮಿ ಮೂಲಕ ಜನಜಾಗೃತಿ : ಸಿಜಿಕೆಯವರಿಗೆ ಹೇಗಾದರೂ ಮಾಡಿ ಜನರಲ್ಲಿ ಜಾಗೃತಿಯನ್ನುಂಟುಮಾಡಬೇಕು ಎನ್ನುವ ಅಸಾಧ್ಯ ಕನಸಿತ್ತು. ಅದಕ್ಕಾಗಿ ಅವರು ಬೀದಿನಾಟಕಗಳನ್ನು ಸಮರ್ಥವಾಗಿ ಬಳಸಿಕೊಂಡು ವ್ಯವಸ್ಥೆಯ ಅರಾಜಕತೆಯ ವಿರುದ್ಧ ಜನರನ್ನು ಎಚ್ಚರಿಸುವ ಕೆಲಸವನ್ನೂ ಆರಂಭದಲ್ಲಿ ತುಂಬಾ ಮಾಡಿದರು. ದಲಿತರ ಹತ್ಯೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಜನವಿರೋಧಿತನವನ್ನು ಬೆಲ್ಚಿ ನಾಟಕದಲ್ಲಿ ಬೆತ್ತಲುಗೊಳಿಸಿದರು. ಹೊಟೇಲ್ ಕಾರ್ಮಿಕರ ಸಮಸ್ಯೆಯನ್ನೇ ಆಧರಿಸಿ ಹೊಟೇಲ್ ಕಾರ್ಮಿಕರಿಂದಲೇ ಪಂಚತಾರಾ ಬೀದಿನಾಟಕವನ್ನಾಡಿಸಿದರು. ನಕ್ಸಲೀಯರ ನಕಲಿ ಕೊಲೆಗಳ ಕುರಿತು ನ್ಯಾಯಮೂರ್ತಿ ತಾರ್ಕುಂಡೆರವರ ವರದಿಯನ್ನಾಧರಿಸಿ ಭಾರತದರ್ಶನ ನಾಟಕವನ್ನು ರಚಿಸಿ ನಿರ್ದೇಶಿಸಿದರು. ಕಮ್ಯೂನಿಸ್ಟ್ ಪಕ್ಷದ ಕೆಂಬಾವುಟ ಉದಯವಾದದ್ದನ್ನು ಮೇ ಡೇ ಹೆಸರಲ್ಲಿ ನಾಟಕ ರಚಿಸಿ ನಿರ್ದೇಶಿಸಿದರು. ಅಲ್ಲೇ ಇದ್ದೋರು, ಬೆಲೆದವರು, ಛಸನಾಲ... ಮುಂತಾದ ನಾಟಕಗಳು ಆಳುವ ವ್ಯವಸ್ಥೆಯ ವಿರುದ್ದ ಜನರನ್ನು ಜಾಗೃತಿ ಮಾಡುವಂತಹುಗಳಾಗಿವೆ.    

ನಾಟಕಗಳ ನಿರ್ದೇಶನ : ಸಮಾಜಮುಖಿಯಾದ ಉತ್ತಮ ನಾಟಕಗಳನ್ನು ನಿರ್ದೇಶಿಸುವುದು ಸಿಜಿಕೆ ಆರಂಭದಲ್ಲಿ ಕಂಡ ಬಹುದೊಡ್ಡ ಕನಸಾಗಿತ್ತು. ಅದಕ್ಕಾಗಿ ಅವರು ಆರಿಸಿಕೊಂಡು ನಿರ್ದೇಶಿಸಿದ ನಾಟಕಗಳು ರಂಗಭೂಮಿಯಲ್ಲಿ ಮೈಲುಗಲ್ಲುಗಳಾಗಿವೆ. ಓದುವುದೇ ಕ್ಲಿಷ್ಪಕರವಾಗಿರುವ ದೇವನೂರು ಮಹಾದೇವರವರ ಒಡಲಾಳ ಕಥೆ ಹಾಗೂ ಕುಸುಮಬಾಲೆ ಕಾದಂಬರಿಗಳನ್ನು ರಂಗರೂಪಾಂತರಿಸಿ ನಿರ್ದೇಶಿಸಿ ತಮ್ಮ ನಿರ್ದೇಶನ ಪ್ರತಿಭೆಯನ್ನು ಸಾಬೀತುಪಡಿಸಿದರು. ಆಧುನಿಕ ಕನ್ನಡ ರಂಗಭೂಮಿಯಲ್ಲಿ ದೀನದಲಿತರ ದಮನಿತ ಬದುಕನ್ನು  ನಾಟಕವಾಗಿಸಿದವರು ಸಿಜಿಕೆ. ನಂತರ ಸನ್ನಿವೇಶ, ಮಹಾಚೈತ್ರ, ಸುಲ್ತಾನ ಟಿಪ್ಪು, ಶೇಕ್ಸ್ಪಿಯರನ ಸ್ವಪ್ನ ನೌಕೆ, ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ, ಪಂಚಮ, ಚಿಕ್ಕದೇವ ಭೂಪ, ಮದರ್ ಕರೇಜ್, ಫಾದರ್, ಒಥೆಲೋ, ಜ್ಯೂಲಿಯಸ್ ಸೀಸರ್, ತುಘಲಕ್, ತಬರನ ಕಥೆ, ಯಯಾತಿ, ಮತ್ತೆ ಮೊಹೆಂಜದಾರೋ, ವೈಶಂಪಾಯನ ತೀರ, ಬೇಲಿ ಮತ್ತು ಹೊಲ, ದೇಶಪ್ರೇಮಿ ಸುರಪುರ ನಾಯಕ.. ಹೀಗೆ ಒಂದಕ್ಕಿಂತ ಒಂದು ವಿಭಿನ್ನವಾದ ನಾಟಕಗಳನ್ನು ನಿರ್ದೇಶಿಸಿ ಕನ್ನಡ ರಂಗಭೂಮಿಗೆ ಅಪರೂಪದ ನಾಟಕಗಳನ್ನು ಕೊಟ್ಟರು. ಬೆಳಕಿನ ವಿನ್ಯಾಸಕರಾಗಿಯೂ ತಮ್ಮ ಪ್ರತಿಭೆಯನ್ನು ಸಿಜಿಕೆ ಮೆರೆದರು. ಪ್ರಸನ್ನರ ಗೆಲಿಲಿಯೋ, ಆರ್.ನಾಗೇಶರವರ ಹರಕೆಯ ಕುರಿ, ನರಸಿಂಹನ್ ರವರ ಟಿಪಿಕಲ್ ಟಿಪಿ ಕೈಲಾಸಂ... ಹಾಗೂ ತಾವೇ ನಿರ್ದೇಶಿಸಿದ ಹಲವು ನಾಟಕಗಳಿಗೆ ವಿಶಿಷ್ಟವಾಗಿ ಬೆಳಕಿನ ವಿನ್ಯಾಸ ಮಾಡಿದರು. ಸಿಜಿಕೆ ನಿರ್ದೇಶಿಸಿದ ಎಲ್ಲಾ ನಾಟಕಗಳೂ ಗೆದ್ದಿವೆ ಎಂದು ಹೇಳಲಾಗದು. ಆದರೆ ಅವು ರಂಗಭೂಮಿಯಲ್ಲಿ ತಮ್ಮದೇ ಆದ ಹೆಜ್ಜೆಗುರುತನ್ನು ಮೂಡಿಸಿರುವುದಂತೂ ಸುಳ್ಳಲ್ಲ.

ರಂಗನಿರಂತರ : ಇದು ಸಿಜಿಕೆ ಕಂಡ ಕನಸು. ಬೇರೆ ತಂಡಗಳಿಗೆ ಯಾಕೆ ನಾಟಕಗಳನ್ನು ಮಾಡಬೇಕು. ನಮ್ಮದೇ ಆದ ಒಂದು ರಂಗತಂಡವನ್ನು ಶುರುಮಾಡೋಣ ಎಂದು ಕನಸಿದ ಸಿಜಿಕೆ 1989 ರಲ್ಲಿ ರಂಗನಿರಂತರ ರಂಗತಂಡವನ್ನು ಅಸ್ತಿತ್ವಕ್ಕೆ ತಂದರು. ನಾಟಕ ನಿರ್ದೇಶನ ಹಾಗೂ ನೇಪತ್ಯದ ಜೊತೆಗೆ  ರಂಗಸಂಘಟಕರಾಗಿಯೂ ಗುರುತಿಸಿಕೊಂಡರು. ನಾಟಕಕಾರರು, ನಿರ್ದೇಶಕರು, ನೇಪತ್ಯದವರು, ಕಲಾವಿದರು ಹಾಗೂ ಪ್ರೇಕ್ಷಕರು ಒಟ್ಟಿಗೆ ಸೇರಿ ಮಾಡುವಂತಹ ಇಂಟಿಮೇಟ್ ಥಿಯೇಟರ್ ಕಟ್ಟುವ ಪರಿಕಲ್ಪನೆಯೊಂದಿಗೆ ರಂಗನಿರಂತರವನ್ನು ಸಿಜಿಕೆ ಕಟ್ಟಿದರು.  ರಂಗನಿರಂತರದಿಂದ ಸಿಜಿಕೆ ನೂರಾಐವತ್ತು ದಿನಗಳ ನಿರಂತರ ನಾಟಕೋತ್ಸವವನ್ನು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಂಘಟಿಸುವ ಕನಸು ಕಂಡರು. ಅದನ್ನು ಕೇಳಿ ನಕ್ಕವರೇ ಜಾಸ್ತಿ. ಅದರೆ ಕಂಡ ಕನಸನ್ನು ನನಸು ಮಾಡಿ ತಮ್ಮ ಸಂಘಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಕಲಾಕ್ಷೇತ್ರದಂತಹ  ದೊಡ್ಡ ರಂಗಮಂದಿರಗಳ ಅಗತ್ಯವನ್ನೇ ಸಿಜಿಕೆ ನಿರಾಕರಿಸಿ ಕಲಾಕ್ಷೇತ್ರದ ರಿಹರ್ಸಲ್ ಶೆಡ್ ಮುಂದಿನ ಜಾಗವನ್ನು ಉಪಯೋಗಿಸಿಕೊಂಡು ರಂಗಸ್ಥಳವನ್ನು ತಾತ್ಕಾಲಿಕವಾಗಿ ನಿರ್ಮಿಸಿದರು. ನಾಟಕೋತ್ಸವದಲ್ಲಿ ಆಪ್ತರಂಗಭೂಮಿ ಪರಿಕಲ್ಪನೆಗೆ ಹೆಚ್ಚು ಒತ್ತು ಕೊಟ್ಟರು. ಒಟ್ಟು  ೧೮ ನಾಟಕಗಳು ಪ್ರದರ್ಶನಗೊಂಡಿದ್ದು ಒಂದೊಂದು ನಾಟಕವೂ ಏಳು ಪ್ರಯೋಗಗಳನ್ನು ಮಾಡುತ್ತಿತ್ತು.  ಇಂತಹ ಪ್ರಯತ್ನ ಭಾರತದಲ್ಲೇ ಮೊದಲನೆಯದು. ಕರ್ನಾಟಕದ ಬೇರೆ ಬೇರೆ ಪ್ರಾಂತ್ಯದ ಯುವನಿರ್ದೇಶಕರಿಗೆ, ನಾಟಕಕರರಿಗೆ, ಕಲಾವಿದರಿಗೆ ವೇದಿಕೆಯನ್ನು ಒದಗಿಸಿಕೊಟ್ಟಿತು. ನಾಟಕೋತ್ಸವದಲ್ಲಿ ಹಲವಾರು ಹೊಸ ಕಲಾವಿದರು, ಹೊಸ ನಿರ್ದೇಶಕರು ಮೂಡಿ ಬಂದರು. ಸ್ಥಗಿತಗೊಂಡಿದ್ದ ರಂಗಚಟುವಟಿಕೆ ನಾಟಕೋತ್ಸವದಿಂದ ಚಲನಶೀಲತೆಯನ್ನು ಪಡೆಯಿತು. ಬಿ.ಜಯಶ್ರೀ, ಟಿ.ಎನ್.ಸೀತಾರಾಮ್, ವೆಂಕಟಸುಬ್ಬಯ್ಯ, ರಾಜಾರಾಂ, ನಾಗಾಭರಣ, ನರಸಿಂಹನ್, ಬಿ.ಸುರೇಶ್, ಎಸ್.ಆನಂದ, ಎನ್..ಸೂರಿ, ಜಯರಾಜ್, ಸುರೇಂದ್ರನಾಥ್, ರಮೇಶಚಂದ್ರ... ಮುಂತಾದವರು ನಾಟಕೋತ್ಸವದಲ್ಲಿ ಭಾಗಿಯಾಗಿದ್ದರು. ಈಗ ಇವರಲ್ಲಿ ಬಹುತೇಕರು ರಂಗಭೂಮಿಯಲ್ಲಿ ಹೆಸರುವಾಸಿ ನಿರ್ದೇಶಕರುಗಳಾಗಿದ್ದಾರೆ. 

ಸಿಜಿಕೆ ನಿರ್ದೇಶನದ 'ಮದರ್ ಕರೇಜ್' ನಾಟಕದ ದೃಶ್ಯ

ಗ್ರಾಮಸಮಾಜ ನಾಟಕೋತ್ಸವದ ಕಲ್ಪನೆ : ಹತ್ತು ದಿನಗಳ ನಾಟಕೋತ್ಸವವನ್ನು ಕೃಷ್ಣ ಆಲನಹಳ್ಳಿಯವರ ನೆನಪಿನಲ್ಲಿ ಗ್ರಾಮಸಮಾಜ ಹೆಸರಲ್ಲಿ ಮಾಡಬೇಕು ಎಂದು ಸಿಜಿಕೆ ನಿರ್ಧರಿಸಿದರು. ಕಲಾಕ್ಷೇತ್ರದ ಆವರಣದಲ್ಲಿ ಟೆಂಟ್ ಹಾಕಿಸಿದರು. ಗ್ರಾಮೀಣ ಬದುಕನ್ನು ಕಟ್ಟಿಕೊಡುವಂತಹ ಖ್ಯಾತ ಕಥೆಗಾರರ ಹತ್ತು ಕಥೆಗಳನ್ನು ಆಯ್ದುಕೊಂಡು ಅವುಗಳನ್ನು ರಂಗರೂಪಾಂತರಿಸಿ ಅವುಗಳನ್ನು ಹೊಸ ನಿರ್ದೇಶಕರುಗಳಿಂದ ನಾಟಕವಾಗಿ ಕಟ್ಟಿ ಪ್ರದರ್ಶಿಸಿರುವುದು ಸಿಜಿಕೆಯವರ ಅದ್ಬುತ ಪರಿಕಲ್ಪನೆಯಾಗಿತ್ತು. ಇದರಿಂದಾಗಿ ಹತ್ತು ಕಥೆಯಾಧಾರಿತ ಹೊಸ ನಾಟಕಗಳು ಹಾಗೂ ಹತ್ತು ಜನ ನಿರ್ದೇಶಕರು ನಾಟಕೋತ್ಸವದಲ್ಲಿ ರೂಪಗೊಂಡರು.  ಗ್ರಾಮಸಮಾಜ ಸರಣಿಯಲ್ಲಿ ಭಾಗಿಯಾದ ಬಹುತೇಕ ಹೊಸ ನಾಟಕಕಾರರು, ಹೊಸ ನಿರ್ದೇಶಕರು ತದನಂತರ ಸಿಜಿಕೆಯವರನ್ನು ತಮ್ಮ ಗುರುಗಳು ಎಂದೇ ಪರಿಭಾವಿಸಿದರು. ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ನಾಟಕಗಳನ್ನು ಪುಸ್ತಕ ರೂಪದಲ್ಲೂ ಸಿಜಿಕೆ ಪ್ರಕಟಿಸಿ ದಾಖಲಿಸಿದರು. ನಾಟಕೋತ್ಸವ ಆರ್ಥಿಕವಾಗಿ ಕೈಕಚ್ಚಿದರೂ ರಂಗಭೂಮಿಗೆ ಹೊಸ ಆಯಾಮವನ್ನು ನೀಡುವಲ್ಲಿ ಯಶಸ್ವಿಯಾಯಿತು. ಹೊಸ ಕಲಾವಿದರು ತಂತ್ರಜ್ಞರು ಬರುವುದಕ್ಕೆ ದಾರಿಯಾಯಿತು. ಸಿಜಿಕೆ ರಂಗಭೂಮಿಯನ್ನೊಂದು ಪ್ರಯೋಗಶಾಲೆಯನ್ನಾಗಿಸಿಕೊಂಡು ಹಲವಾರು ಪ್ರಯೋಗಗಳನ್ನು ಕಾಲಕಾಲಕ್ಕೆ ಮಾಡುತ್ತಲೇ ಹೋದರು. 

ಹೊಸ ಪ್ರತಿಭೆ ಬೆಳೆಸುವ ಕಲೆ : ಕಾಲಕಾಲಕ್ಕೆ ಹೊಸ ಪ್ರತಿಭೆಗಳು ಬರದಿದ್ದರೆ ರಂಗಭೂಮಿ ಸಕಾರಾತ್ಮಕವಾಗಿ ಬೆಳೆಯುವುದಿಲ್ಲ ಎನ್ನುವುದರ ಅರಿವು ಸಿಜಿಕೆ ರವರಿಗೆ ಇತ್ತು. ಅದಕ್ಕಾಗಿಯೇ ಹೊಸ ಪ್ರತಿಭೆಗಳ ಪಡೆಯನ್ನೇ ಹುಟ್ಟುಹಾಕುವ ಕನಸು ಕಂಡು ನಿರಂತರವಾಗಿ ಶ್ರಮಿಸಿದರು. ಪ್ರತಿಭೆ ಇದ್ದವರನ್ನು ಗುರುತಿಸಿ, ಕೆಲಸ ಮಾಡಲು ಅವಕಾಶವನ್ನು ಒದಗಿಸಿ, ಅವರ ಕಷ್ಟಸುಖಗಳಲ್ಲಿ ಭಾಗಿಯಾಗಿ ಹಲವಾರು ಹೊಸ ತಲೆಮಾರಿನ ಯುವಕರನ್ನು ರಂಗಭೂಮಿಯಲ್ಲಿ ಬೆಳೆಸಿದರು. ಶಶಿಧರ ಅಡಪ ರವರಂತಹ ಕಲಾನಿರ್ದೇಶಕರು, ಉಮಾಶ್ರೀ, ಮೈನಾ ಚಂದ್ರು ರಂತಹ ಕಲಾವಿದರು ಹಾಗೂ ನೂರಾರು ಪ್ರತಿಭಾವಂತರು ರೂಪಗೊಂಡಿದ್ದೇ ಸಿಜಿಕೆಯವರ ರಂಗಗರಡಿಯಲ್ಲಿ. 1990 ರಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹತ್ತು ದಿನಗಳ ಕಾಲ ಯುವ ನಾಟಕ ರಚನೆಕಾರರು ಹಾಗೂ ಯುವ ನಿರ್ದೇಶಕರುಗಳ ಉತ್ಸವವನ್ನು ಆಯೋಜಿಸಿದ ಸಿಜಿಕೆ ಯುವರಂಗಕರ್ಮಿಗಳನ್ನು ಹುಟ್ಟುಹಾಕಲು ಪ್ರಯತ್ನಿಸಿದರು. ಈಗಾಗಲೇ ಖ್ಯಾತರಾದವರನ್ನು ಬಿಟ್ಟು ಹೊಸ ಪೀಳಿಗೆಯವರನ್ನು ಬೆಳೆಸುವಲ್ಲಿ ಸಿಜಿಕೆ ತೋರಿಸಿದ ಆಸಕ್ತಿ ಆಪಾರ. 

ಸಾಹಿತ್ಯಕ್ಕೆ ರಂಗರೂಪ : ಆಧುನಿಕ ರಂಗಭೂಮಿಯಲ್ಲಿ ಹೊಸ ನಾಟಕಗಳು ಬರಬೇಕು ಎನ್ನುವುದು ಸಿಜಿಕೆಯವರ ಆಸೆಯಾಗಿತ್ತು. ಆಗ ಹೊಸ ನಾಟಕಗಳ ಕೊರತೆ ಇತ್ತು. ಸಿದ್ಧ ನಾಟಕಗಳನ್ನು ಬಿಟ್ಟು ಸೃಜನಶೀಲ ಸಾಹಿತ್ಯ ಕೃತಿಗಳತ್ತ ಸಿಜಿಕೆ ಒಲವು ತೋರಿಸಿ ಕಥೆ ಕಾದಂಬರಿಗಳನ್ನು ರಂಗರೂಪಕ್ಕೆ ತರುವ ಮೂಲಕ ಕನ್ನಡ ಸಾಹಿತ್ಯಲೋಕದ ಶ್ರೀಮಂತಿಕೆಯನ್ನು ನಾಟಕದಲ್ಲಿ ಕಟ್ಟಿಕೊಟ್ಟರು. ಒಂದು ವರ್ಷಗಳ ಕಾಲ ಶ್ರಮಿಸಿ ದೇವನೂರರ ಒಡಲಾಳ ಕಥೆಗೆ ಸಂಭಾಷಣೆ ಬರೆದು, ರಂಗರೂಪ ಕೊಟ್ಟು ವಿಶಿಷ್ಟವಾಗಿ ಸಿಜಿಕೆ ನಿರ್ದೇಶಿಸಿ ಕನ್ನಡ ರಂಗಭೂಮಿಯಲ್ಲಿ ಹೆಸರಾದರು. ಯಶವಂತ ಚಿತ್ತಾಲರ ಸಣ್ಣ ಕಥೆಯನ್ನಾಧರಿಸಿ ಅಬೋಲಿನ ನಾಟಕ, ಕೇಶವರೆಡ್ಡಿ ಹಂದ್ರಾಳರ ಸಣ್ಣ ಕಥೆಯನ್ನಾಧರಿಸಿದ ಕಳ್ಳಿಯಲ್ಲಿ ಕೆಂಪು ಹೂವು ನಾಟಕಗಳನ್ನು ರಂಗರೂಪಕ್ಕೆ ತಂದರು. ಸಿದ್ದಲಿಂಗಯ್ಯನವರ ಕತ್ತೆ ಮತ್ತು ಧರ್ಮ ಕವಿತೆಯನ್ನಿಟ್ಟುಕೊಂಡು ಮತ್ತೆ ಮೊಹೆಂಜದಾರೋ ಎನ್ನುವ ಹೆಸರಲ್ಲಿ ನಾಟಕವನ್ನಾಗಿಸಿ ಕಾಸರಗೋಡಿನ ರಂಗತಂಡಕ್ಕೆ ನಿರ್ದೇಶಿಸಿದರು. ಮಹಾಬಲಮೂರ್ತಿ ಕೊಡ್ಲೆಕೆರೆಯವರ ಸಣ್ಣಕತೆಯನ್ನಾಧರಿಸಿ ಮುಕುಂದರಾಜ್ರಿಂದ ವೈಶಂಪಾಯನ ತೀರ ವನ್ನು ರಂಗರೂಪಗೊಳಿಸಿದರು. ಸಾಹಿತ್ಯ ಲೋಕವನ್ನು ರಂಗಭೂಮಿಗೆ ನಾಟಕದ ಮೂಲಕ ಪರಿಚಯಿಸಿದ್ದು ಅಭಿನಂದನೀಯ. ಖ್ಯಾತನಾಮ ಕಥೆಗಾರರ ಒಂಬತ್ತು ಕಥೆಗಳನ್ನು ನಾಟಕವಾಗಿಸಿ ಪ್ರದರ್ಶಿಸಲು ಗ್ರಾಮೀಣ ಸಮಾಜ ನಾಟಕೋತ್ಸವವನ್ನು ಆಯೋಜಿಸಿದರು

ಸಿಜಿಕೆ ನಿರ್ದೇಶನದ 'ಡಾ.ಅಂಬೇಡ್ಕರ್' ನಾಟಕದ ದೃಶ್ಯ

ನಾಟಕಕಾರರನ್ನು ಸೃಷ್ಟಿಸಿದ ಪವಾಡ : ಕನ್ನಡ ರಂಗಭೂಮಿಯ ಬೆಳವಣಿಗೆಗೆ ಹೊಸ ನಾಟಕಗಳು ಬೇಕು ಎನ್ನುವ ಪರಿಕಲ್ಪನೆ ಸಿಜಿಕೆ ಯವರದ್ದಾಗಿತ್ತು. ಅದಕ್ಕಾಗಿ ಬರೆಯುವ ಸಾಮರ್ಥ್ಯ ಇರುವವರ ಹಿಂದೆ ಬಿದ್ದರು. ಎಂದೂ ನಾಟಕ ಬರೆಯದ ಕವಿ ಹೆಚ್.ಎಸ್.ಶಿವಪ್ರಕಾಶ್ ರವರಿಂದ ಮಹಾಚೈತ್ರ, ಸುಲ್ತಾನ ಟಿಪ್ಪು ಹಾಗೂ ಶೇಕ್ಸ್ಪಿಯರನ ಸ್ವಪ್ನ ನೌಕೆ ಎಂಬ ಮೂರು ನಾಟಕಗಳನ್ನು ಸಿಜಿಕೆ  ಬೆಂಬತ್ತಿ ಬರೆಸಿಕೊಂಡರು.  ಕಥೆಗಾರ ಕುಂವಿ ರವರ ಬೇಲಿ ಮತ್ತು ಹೊಲ ಕಾದಂಬರಿಯನ್ನು ಅವರಿಂದಲೇ ನಾಟಕವನ್ನಾಗಿಸಿ ಬರೆಸಿ ನಿರ್ದೇಶಿಸಿದರು. ಕೀರಂ ರಂತವರಿಂದಲೂ ಕಾಲಜ್ಞಾನಿ ಕನಕ ಹಾಗೂ ನೀಗಿಕೊಂಡ ಸಂಸ ನಾಟಕಗಳನ್ನು ಹರಸಾಹಸ ಪಟ್ಟು ಸಿಜಿಕೆ ಬರೆಸಿದರು. ಕವಿ-ವಿಮರ್ಶಕ ಎಲ್.ಎನ್.ಮುಕುಂದರಾಜ್ ರವರಿಂದ ವೈಶಂಪಾಯನ ತೀರ ನಾಟಕವನ್ನು ಸಿದ್ದಗೊಳಿಸಿಕೊಂಡರು. ಸುಮ್ಮನೆ ಬೇಟಿಯಾದ ಕವಿ ಕೆ.ಎಂ.ಮುನಿಕೃಷ್ಣರವರಿಗೆ ನೀವೇಕೆ ಒಂದು ನಾಟಕ ಬರಿಯಬಾರದು? ಎಂದು ಸಿಜಿಕೆ ದುಂಬಾಲುಬಿದ್ದರು. ಹಾಗೂ ಅವರಿಂದ ಸುರುಪುರದ ರಾಜಾ ವೆಂಕಟಪ್ಪ ನಾಟಕವನ್ನು ಬರೆಸಿ ನಿರ್ದೇಶಿಸಿಯೇ ಬಿಟ್ಟರು.... ಹೀಗೆ ಎಂದೂ ನಾಟಕದ ರಚನೆ ಮಾಡದಿರದಂತಹ, ವೃತ್ತಿಪರ ನಾಟಕಕಾರರಲ್ಲದವರಿಂದ ಸಿಜಿಕೆ ಉತ್ತಮ ನಾಟಕಗಳನ್ನು ಬರೆಯಿಸಿದರು. ಅದರಲ್ಲಿರುವ ನಾಟಕೀಯತೆಯ ಕೊರತೆಗಳನ್ನು ತಮ್ಮ ನಿರ್ದೇಶನ ಕೌಶಲದಿಂದ ನಿಭಾಯಿಸಿದರು. ಕನ್ನಡ ರಂಗಭೂಮಿಗೆ ಅಷ್ಟು ಹೊಸ ನಾಟಕಗಳು ಬರುವಂತೆ ಶ್ರಮಿಸಿದರು. ನಾಟಕಗಳ ಕೊರತೆಯನ್ನು ನೀಗಿಸಿದರು. ಹೊಸ ನಾಟಕಗಳು ಬೇಕು ಎನ್ನುವ ಕನಸನ್ನು ನನಸಾಗಿಸಿಕೊಂಡರು. ಒಂದು ಪ್ರತಿಭೆ ಮನಸ್ಸು ಮಾಡಿದರೆ ಅದೆಷ್ಟು ಪ್ರತಿಭೆಗಳನ್ನು ಹುಟ್ಟಿಸಲು ಸಾಧ್ಯ ಎನ್ನುವುದಕ್ಕೆ ಸಿಜಿಕೆ ಮಾದರಿಯಾದರು.  

ಈಡೇರದ ಸಿಜಿಕೆ ಕನಸುಗಳು : ಸಿಜಿಕೆ ಬಹುಮುಖಿ ವ್ಯಕ್ತಿತ್ವ ಹೊಂದಿದವರು. ಅವರ ಕನಸುಗಳೂ ಸಹ ಹಲವು ಆಯಾಮಗಳನ್ನು ಹೊಂದಿದ್ದವು. ಅದರಲ್ಲಿ ಕೆಲವೊಂದನ್ನು ಪಟ್ಟು ಹಿಡಿದು ಸಾಧಿಸಿದರು. ಆದರೆ ಇನ್ನೂ ಕೆಲವು ಕನಸುಗಳು ನನಸಾಗಲೇ ಇಲ್ಲ. ಅದರಲ್ಲಿ ಕೆಲವು ಹೀಗಿವೆ. 

ರೆಪರ್ಟರಿ ಕಟ್ಟುವ ಕನಸು : ಸಿಜಿಕೆಗೆ ರಂಗನಿರಂತರ ರೆಪರ್ಟರಿ ಕಟ್ಟಿ ನಾಡಿನಾದ್ಯಂತ ನಿರಂತರವಾಗಿ ನಾಟಕಗಳನ್ನು ಪ್ರದರ್ಶಿಸುವ  ಕನಸಿತ್ತು. ಆದರೆ ಅದು ಈಡೇರಲೇ ಇಲ್ಲ. ಅದಕ್ಕೆ ಬೇಕಾದ ಆರ್ಥಿಕ ಬೆಂಬಲ ಆಗ ಸಾಧ್ಯವಿರಲಿಲ್ಲ. ರವೀಂದ್ರ ಕಲಾಕ್ಷೇತ್ರ ಕೇಂದ್ರಿತ ರಂಗರಾಜಕೀಯ ಸಿಜಿಕೆ ಆಶಯಕ್ಕೆ ಪೂರಕವಾಗಿರಲಿಲ್ಲ. ಹಾಗಂತ ಸುಮ್ಮನೇ ಕೂಡುವ ಜಾಯಮಾನ ಸಿಜಿಕೆ ರವರದ್ದಾಗಿರಲೇ ಇಲ್ಲ. ಅದಕ್ಕಾಗಿ ಅವರು ರೂಪರೇಷೆಗಳನ್ನು ಸಿದ್ದಗೊಳಿಸಿ, ಪಂಡಿತಾರಾಧ್ಯ ಸ್ವಾಮೀಜಿಗಳ ಮನವೊಲಿಸಿ ಸಾಣೇಹಳ್ಳಿಯ ಶಿವಸಂಚಾರ ರೆಪರ್ಟರಿ ಹುಟ್ಟಲು ಕಾರಣೀಕರ್ತರಾದರು. ಈಗಲೂ ಸಿಜಿಕೆ ರವರ ರಂಗನಿರಂತರ ರೆಪರ್ಟರಿ ಕನಸನ್ನು ನನಸಾಗಿಸಲು ಸಾಧ್ಯವಿದೆ.  ರಂಗನಿರಂತರ ತಂಡದ ಡಿ.ಕೆ.ಚೌಟರು ಅಥವಾ ಶಶಿಧರ್ ಅಡಪರವರು ಮನಸ್ಸು ಮಾಡಿದರೆ ರಂಗನಿರಂತರ ರೆಪರ್ಟರಿ ಕಟ್ಟುವುದು ಅಸಾಧ್ಯವೇನಲ್ಲ. ಅದಕ್ಕೆ ಬೇಕಾದಷ್ಟು ಹಣಕಾಸಿನ ನೆರವು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ದೊರೆಯುತ್ತಿದೆ. ಕೇವಲ ಇಚ್ಚಾಶಕ್ತಿ ಬೇಕಾಗಿದೆ.

ನಾಟಕಗಳ ಪ್ರಕಟಣೆ : ರಂಗಭೂಮಿಯಲ್ಲಿ  ನಾಟಕಗಳ ಕೊರತೆ ಇದೆ. ಅದೇ ಹಳೇ ನಾಟಕಗಳನ್ನೇ ಎಷ್ಟೂಂತ ಆಡುವುದು. ಆದ್ದರಿಂದ ಹೊಸ ಹೊಸ ನಾಟಕಗಳನ್ನು ಬರೆಯಿಸಿ ಪ್ರಕಟಿಸಬೇಕು ಎನ್ನುವುದು ಸಿಜಿಕೆಯ ಕನಸಾಗಿತ್ತು. ಐದು ರೂಪಾಯಿಗೆ ಒಂದು ನಾಟಕ ಪುಸ್ತಕವನ್ನು ಕೊಡಬೇಕು ಹಾಗೂ ತಿಂಗಳಿಗೆ ಕನಿಷ್ಟ ಒಂದಾದರೂ ನಾಟಕದ ಪುಸ್ತಕ ಪ್ರಕಟವಾಗಬೇಕು ಎಂಬುದು ಸಿಜಿಕೆ ಬಯಕೆಯಾಗಿತ್ತು. ಜೊತೆಗೆ ಕರ್ನಾಟಕದಾದ್ಯಂತ ತಿರುಗಾಡಿ ಕನ್ನಡ ರಂಗಭೂಮಿಯ ಚಟುವಟಿಕೆಗಳನ್ನು ದಾಖಲೆ ಮಾಡಬೇಕು ಎನ್ನುವುದೂ ಅವರ ಅದಮ್ಯ ಆಸೆಯಾಗಿತ್ತು. ಆದರೆ ಅವರ ಕಾಲಕ್ಕೆ ಕೆಲಸಗಳು ನೆರವೇರಲಿಲ್ಲ. ಸಿಜಿಕೆಯವರ ಈಡೇರದ ಆಸೆಗಳನ್ನು ಅವರ ರಂಗನಿರಂತರ ತಂಡದ ಈಗಿನ ರೂವಾರಿಗಳಾಗಲೀ, ಇಲ್ಲವೇ ಸಿಜಿಕೆ ಕುರಿತು ಪುಂಕಾನುಪುಂಕವಾಗಿ ಭಾಷಣ ಮಾಡುವ ರಂಗಕರ್ಮಿಗಳಾಗಲೀ ಅಥವಾ ಸರಕಾರಿ ಇಲಾಖೆಗಳಾಗಲೀ ನೆರವೇರಿಸುವ ನಿಟ್ಟಿನಲ್ಲಿ ಶ್ರಮಿಸುವುದೊಳಿತು.

ಅಹಿಂದ ಸಾಂಸ್ಕೃತಿಕ ಕೇಂದ್ರ : ಎಲ್ಲಾ ಅಲ್ಪಸಂಖ್ಯಾತ, ಹಿಂದುಳಿದ  ಹಾಗೂ ದಲಿತರ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿ ಕಟ್ಟಿ ಬೆಳೆಸಬೇಕೆಂಬುದು ಸಿಜಿಕೆ ರವರ ಬಹುದಿನಗಳ ಆಸೆಯಾಗಿತ್ತು. ರಂಗಭೂಮಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರಿಂದಾಗಿ ಸಾಮಾಜಿಕ ಕಳಕಳಿಯ ಆಸೆ ಆಸೆಯಾಗಿಯೇ ಉಳಿಯಿತು. ಇದನ್ನು ಒಬ್ಬ ವ್ಯಕ್ತಿಯಿಂದ ಮಾಡುವುದು ಸುಲಭಸಾದ್ಯವಲ್ಲ. ಸರಕಾರಿ ಇಲಾಖೆಗಳು ಅಥವಾ ಸಮಾನ ಮನಸ್ಕರು ಇರುವ ಸಂಘಟನೆಗಳಿಂದ ಸಾಧ್ಯವಾಗಬಹುದಾಗಿದೆ. ಅಕಸ್ಮಾತ್ ಸಿಜಿಕೆ ಆರೋಗ್ಯದಿಂದಿದ್ದು ಆಯುಷ್ಯವೂ ಇದ್ದಿದ್ದರೆ ಬಹುಷಃ ಆಸೆಗೂ ಒಂದು ರೂಪಕೊಟ್ಟು ಅಹಿಂದ ಸಾಂಸ್ಕೃತಿಕ ಕೇಂದ್ರವನ್ನೂ ಹುಟ್ಟುಹಾಕುತ್ತಿದ್ದರೆಂಬುದು ಅವರನ್ನು ಬಲ್ಲವರಿಗೆ ಗೊತ್ತಿರುವಂತಹುದು. ಅನಾಥ ಮಕ್ಕಳ-ಬೀದಿ ಮಕ್ಕಳ ರಂಗಭೂಮಿಯನ್ನು ಕಟ್ಟಬೇಕು ಎನ್ನುವುದೂ ಕೂಡಾ ಸಿಜಿಕೆ ಆಸೆಯಾಗಿತ್ತು

ಸಿಜಿಕೆ ನಿರ್ದೇಶನದ 'ರುಡಾಲಿ' ನಾಟಕ ತಂಡ
ಸಿಜಿಕೆ ಮತ್ತು ಸಾಮಾಜಿಕ ಸವಾಲುಗಳು :
ಎಲ್ಲಾ ಕ್ರಿಯಾಶೀಲ ವ್ಯಕ್ತಿಗಳಿಗೆ ಆಳುವ ವ್ಯವಸ್ಥೆ ಹಲವಾರು ಸವಾಲುಗಳನ್ನು ಒಡ್ಡುತ್ತದೆ. ಸಾಮಾಜಿಕ ಸವಾಲುಗಳನ್ನು ಹೇಗೆ ನಿರ್ವಹಿಸಿ ತಮ್ಮ ಜವಾಬ್ದಾರಿಗಳನ್ನು ವ್ಯಕ್ತಿ ನಿಭಾಯಿಸುತ್ತಾನೆ ಅನ್ನುವುದರ ಮೇಲೆ ವ್ಯಕ್ತಿಯ ಸಾಮಾಜಿಕ ಬದ್ದತೆ ನಿರ್ಣಯವಾಗುತ್ತದೆ. ನಿಟ್ಟಿನಲ್ಲಿ ಸಿಜಿಕೆ ತಮ್ಮ ಜವಾಬ್ದಾರಿಯನ್ನು ವಿಭಿನ್ನ ಆಯಾಮಗಳಲ್ಲಿ ನಿಭಾಯಿಸಿದ್ದಾರೆ. ಪ್ರಗತಿಪರ ಸಾಂಸ್ಕೃತಿಕ ಸಂಘಟನೆಯಾದ ಸಮುದಾಯ ಸ್ಥಾಪಕ  ಕಾರ್ಯದರ್ಶಿಯಾಗಿದ್ದು ಎಂಟು ವರ್ಷಗಳ ಕಾಲ ಸಮುದಾಯವನ್ನು ಪ್ರಸನ್ನನವರ ಜೊತೆ ಸೇರಿ ಮುನ್ನಡೆಸಿದ್ದಾರೆ. ಆಳುವ ವ್ಯವಸ್ಥೆಯ ವಿರುದ್ದ ಬೀದಿನಾಟಕಗಳ ಜಾಥಾದ ನೇತೃತ್ವವನ್ನು ವಹಿಸಿಕೊಂಡು ಬೆಲ್ಚಿ ಸಮೇತ ಹಲವು ಬೀದಿನಾಟಕಗಳನ್ನು ರಚಿಸಿ ನಿರ್ದೇಶಿಸಿ ಪ್ರದರ್ಶಿಸಿ ಜನರಲ್ಲಿ ಜಾಗೃತಿಯನ್ನುಂಟುಮಾಡಲು ಶ್ರಮಿಸಿದ್ದಾರೆ. ಎಮರ್ಜನ್ಸಿ ಹೇರಿ ಸರ್ವಾಧಿಕಾರಿಯಾಗಿ ಮೆರೆದ ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಚುನಾವಣೆಗೆ ನಿಂತಾಗ ಫ್ಯಾಸಿಸ್ಟ್ ವಿರೋಧಿ ಸಾಂಸ್ಕೃತಿಕ ರಾಲಿಯನ್ನು ಸಿಜಿಕೆ ಆಯೋಜಿಸಿ ಮುಂದಾಳತ್ವವನ್ನು ವಹಿಸಿ ದ್ದರು. ಪ್ರಗತಿಪರ ಹಾಗೂ ವೈಜ್ಞಾನಿಕ ಸಂಸ್ಕೃತಿಯನ್ನು ಪ್ರಚಾರಮಾಡಲು ಕರ್ನಾಟಕದಾದ್ಯಂತ ಮೂವತ್ತು ದಿನಗಳ ಎರಡು ಸಾಂಸ್ಕೃತಿಕ ಜಾಥಾಗಳನ್ನು ಏರ್ಪಡಿಸಿದ್ದರು. ರಂಗಭೂಮಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ರಂಗಭೂಮಿ ಕ್ರಿಯಾ ಸಮಿತಿ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದರು. ಬಂಡಾಯ ಸಾಹಿತ್ಯ ಸಂಘಟನೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.... ಕರ್ನಾಟಕದಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಿಕ್ಕಟ್ಟು ಎದುರಾದಾಗಲೆಲ್ಲ ಬೀದಿಗಿಳಿದು ಪ್ರತಿಭಟಿಸಿದರು. ದಲಿತ ಸಂವೇದಿ ನಾಟಕಗಳನ್ನು ನಿರ್ದೇಶಿಸಿದರು. ಸ್ಲಂಗಳಲ್ಲಿ ಬೀದಿನಾಟಕ ಪ್ರದರ್ಶಿಸಿದರು. ಹೊಟೇಲ್ ಕಾರ್ಮಿಕರಿಗೆ ನಾಟಕವಾಡಿಸಿದರು. 

ಅನ್ಯಾಯದ ವಿರುದ್ಧ ಸದಾ ಬಂಡೇಳುವ ಗುಣ ಸಿಜಿಕೆಯವರದ್ದಾಗಿತ್ತು. ಹೀಗಾಗಿ ಸಾಮಾಜಿಕ ಅನ್ಯಾಯಗಳ ವಿರುದ್ಧ ಸಾಹಿತಿಗಳ, ಕಲಾವಿದರ ಅನೇಕ ಪ್ರತಿಭಟನಾ ಕಾರ್ಯಕ್ರಮಗಳನ್ನು ಸಿಜಿಕೆ ಸಂಘಟಿಸಿದ್ದಾರೆ. ಸಿಜಿಕೆ ನಿರ್ಗಮಿಸಿದ ಮೇಲೆ ರಂಗಭೂಮಿಯ ಪ್ರತಿಭಟನಾ ಶಕ್ತಿಯೇ ಕುಂಟಿತವಾಗಿದೆ ಇಲ್ಲವೇ ಸ್ವಾರ್ಥಪರವಾಗಿದೆ. ತನ್ನ ಬೆಳವಣಿಗೆಗಾಗಿ ಸಂಘಟನೆಯನ್ನು ಹಾಗೂ ಕಲಾವಿದರನ್ನು ಬಳಸಿಕೊಳ್ಳುವ ದೊಡ್ಡ ಗುಂಪೇ ರಂಗಭೂಮಿಯಲ್ಲಿದೆ. ಆದರೆ ತನ್ನ ಸಾಮರ್ಥ್ಯ ಹಾಗೂ ಸಂಘಟನೆಯ ಬಲವನ್ನು ಒಟ್ಟುಗೂಡಿಸಿ ಸಮಾಜಕ್ಕೆ ಸ್ಪಂದಿಸಿದ ವ್ಯಕ್ತಿ ಸಿಜಿಕೆ. ಒಬ್ಬ ವ್ಯಕ್ತಿ ಇನ್ನೂ ಎಷ್ಟು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ ಹೇಳಿ. ಎಷ್ಟು ರಂಗಕರ್ಮಿಗಳು ಸಿಜಿಕೆ ರೀತಿಯಲ್ಲಿ ವಿವಿಧ ಆಯಾಮಗಳಲ್ಲಿ ಸಮಾಜದ ಸವಾಲುಗಳಿಗೆ ಸ್ಪಂದಿಸಿದ್ದಾರೆ ಲೆಕ್ಕ ಹಾಕಿ. ಯಾರು ಏನೇ ಹೇಳಲಿ ಕನ್ನಡ ರಂಗಭೂಮಿಯಲ್ಲಿ ರಂಗಬದ್ದತೆ ಹಾಗೂ ಸಾಮಾಜಿಕ ಕಳಕಳಿಯ ವಿಷಯದಲ್ಲಿ ಸಿಜಿಕೆಗೆ ಸಿಜಿಕೆನೇ ಮಾದರಿ. 

ಸಿಜಿಕೆ ನಿರ್ದೇಶನದ 'ಬೇಲಿ ಮತ್ತು ಹೊಲ' ನಾಟಕದ ದೃಶ್ಯ
 
ಸಿಜಿಕೆಯವರಿಗೆ ಬೇಕಾದಷ್ಟು ದೌರ್ಬಲ್ಯಗಳಿವೆ ಆದರೆ ಅವು ವ್ಯಕ್ತಿಗತವಾದವುಗಳು. ಅವರ ಮೇಲೆ ಬೇಕಾದಷ್ಟು ಆರೋಪಗಳೂ ಇವೆ. ಅವು ಚರ್ಚಾರ್ಹವಾಗಿರುವಂತಹವು. ಅದರಲ್ಲಿ ಸಿಜಿಕೆ ಹಾಗೂ ರಾಜಕೀಯದ ಸಂಬಂಧಗಳ ಬಗ್ಗೆ ಹಲವರಿಗೆ ತಕರಾರಿದೆ. ಅದರಲ್ಲೂ ಸಮಾಜವಾದಿ ಎಡಪಂಥೀಯ ವೈಚಾರಿಕ ಚಿಂತನೆಗಳಿರುವ ಸಿಜಿಕೆ ಕೋಮುವಾದಿ ಬಿಜೆಪಿ ಪಕ್ಷಕ್ಕೆ ಸಪೋರ್ಟ ಮಾಡಿದರು ಎನ್ನುವುದು ಗುರುತರವಾದ ಆರೋಪ. ಆದರೆ ಇದು ಅರ್ಧ ಸತ್ಯ. ಸಿಜಿಕೆಯ ಅಂತರಂಗವನ್ನು ಬಲ್ಲವರಿಗೆ ಸಿಜಿಕೆ ಏನು ಎನ್ನುವುದು ಗೊತ್ತಿರುತ್ತದೆ. ಸಿಜಿಕೆ ಎಂದೂ ಯಾವುದೇ ಪಕ್ಷವನ್ನೂ ಬೆಂಬಲಿಸಲಿಲ್ಲ. ಆದರೆ ಸಿಜಿಕೆಗೆ ಇರುವ ಶಕ್ತಿ ಹಾಗೂ ದೌರ್ಬಲ್ಯ ಎಂದರೆ ಸ್ನೇಹಕ್ಕಾಗಿ ರಂಗಭೂಮಿಗಾಗಿ ಏನನ್ನಾದರೂ ಮಾಡುವಂತಹುದು. ಇದೇ ಗುಣ ಅವರನ್ನು ಒಬ್ಬ ಅಸಾಧ್ಯ ರಂಗಸಂಘಟಕನನ್ನಾಗಿಸಿದ್ದು. ಹಾಗೂ ಅದೇ ಗುಣ ಅವರನ್ನು ಕೋಮುವಾದಿ ಸಮರ್ಥಕನೆಂದು ಆರೋಪಿತನನ್ನಾಗಿಸಿದ್ದು. ಸಿಜಿಕೆ ಯವರಿಗೆ ಕೆಲವು ರಾಜಕೀಯ ವ್ಯಕ್ತಿಗಳ ಜೊತೆಗೆ ಅನನ್ಯವಾದ ಸ್ನೇಹ ಸಂಬಂಧವಿತ್ತು. ಅದರಲ್ಲಿ ಪ್ರಮುಖರಾದವರು ಎಂ.ಪಿ.ಪ್ರಕಾಶ ಹಾಗೂ ಜೀವರಾಜ ಆಳ್ವರವರು. ಇಬ್ಬರೂ ಮೊದಲು ಜನತಾದಳದಲ್ಲಿದ್ದಾಗ ಸಿಜಿಕೆ ಸಂಬಂಧದ ಬಗ್ಗೆ ಯಾರೂ ಮಾತನಾಡಲಿಲ್ಲ. ಆದರೆ ಯಾವಾಗ ಜೀವರಾಜ ಆಳ್ವರವರು ರಾಜಕೀಯದ ಅನಿವಾರ್ಯ ಕಾರಣಗಳಿಂದ ಬಿಜೆಪಿ ಗೆ ವಲಸೆ ಹೋಗಿ ಚುನಾವಣೆಗೆ ನಿಂತರೋ, ಯಾವಾಗ ಸಿಜಿಕೆ ಆಳ್ವರನ್ನು ಸಪೋರ್ಟ ಮಾಡಿದರೋ ಆಗ ಸಿಜಿಕೆ ಸಮಾಜವಾದಿಗಳ ಕಣ್ಣಿಗೆ ಅಪರಾಧಿಯಾಗಿ ಕಾಣತೊಡಗಿದರು. ಆದರೆ ಸಿಜಿಕೆರವರಿಗೆ ಯಾವುದೇ ಪಕ್ಷದ ಬಗ್ಗೆ ವ್ಯಯಕ್ತಿಕವಾಗಿ ಒಲವಿರಲಿಲ್ಲ. ರೀ ನನಗೆ ಯಾವ ಪಕ್ಷವೂ ಮುಖ್ಯ ಅಲ್ಲ ಕಣ್ರಿ, ಸ್ನೇಹ ಮುಖ್ಯ. ಜೀವರಾಜ ಆಳ್ವ ನನ್ನ ಸ್ನೇಹಿತರು. ಜೊತೆಗೆ ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಕಾಳಜಿ ಕಳಕಳಿ ಉಳ್ಳವರು. ಹಿಂದೆ ಸಚಿವರಾಗಿದ್ದಾಗ ರಂಗಭೂಮಿಗೆ ಅನೇಕ ಸಹಾಯವನ್ನು ಮಾಡಿದ್ದಾರೆ. ಅಂತವರು ಬೇರೆ ಪಕ್ಷಕ್ಕೆ ಹೋದ ತಕ್ಷಣ ಶತ್ರುಗಳೆಂದು ನೋಡಲು ಸಾಧ್ಯ ಇದೆಯಾ? ಎಂದು ಸಿಜಿಕೆ ಸಂದರ್ಶನವೊಂದರಲ್ಲಿ ಉತ್ತರಿಸಿದ್ದರು. ಅಂದರೆ ಸಿಜಿಕೆಗೆ ಗೆಳೆತನ ಹಾಗೂ ರಂಗಭೂಮಿ ಎರಡೂ ಬಹಳ ಮುಖ್ಯವಾಗಿತ್ತು. ಈಗಿನ ಗಿರೀಶ್ ಕಾರ್ನಾಡ್, ಅನಂತಮೂರ್ತಿ, ಮರುಳಸಿದ್ದಪ್ಪನವರಂತೆ ಸಿಜಿಕೆ ಎಂದೂ ಪಕ್ಷವೊಂದರ ಪರವಾಗಿ ಓಟು ಕೇಳಲು ಬೀದಿಗಿಳಿಯಲಿಲ್ಲ, ನಾಗಾಭರಣರಂತೆ ಬಿಜೆಪಿ ಪಕ್ಷದ ಪರವಾಗಿ ಚುನಾವಣಾ ಪ್ರಚಾರಕ್ಕೆ ಬೀದಿನಾಟಕ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಕಾರ್ನಾಡರನ್ನು ನಾಗಾಭರಣರನ್ನು ಪ್ರಶ್ನಿಸದ ಕೆಲವು ರಂಗಕರ್ಮಿಗಳು ಸಿಜಿಕೆಯವರನ್ನು ಮಾತ್ರ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ದ್ರೋಹಿ ಎಂದು ತೀರ್ಮಾನಿಸುವುದು ಅಕ್ಷಮ್ಯ. ಕಲಾವಿದನೊಬ್ಬ ಕೊಲೆಮಾಡಿ ಜೈಲು ಸೇರಿದರೂ ಅವನ ಪರವಾಗಿ ಹೋರಾಡಿ ಬಿಡಿಸಿಕೊಂಡು ಬರುತ್ತೇನೆ. ಆತ ಕೊಲೆಗಾರ ಎನ್ನುವುದು ನನಗೆ ಮುಖ್ಯವಲ್ಲ, ಆತ ರಂಗಕಲಾವಿದ ಅನ್ನೋದು ಮಾತ್ರ ನನಗೆ ಬಹುಮುಖ್ಯ ಎನ್ನುವುದು ಸಿಜಿಕೆಯವರ ಸ್ಪಷ್ಟವಾದ ಆಶಯವಾಗಿತ್ತು. ಅಂತಹ ಬಹುದೊಡ್ಡ ಮಾನವತಾವಾದಿ ಸಿಜಿಕೆ

ಸಿಜಿಕೆ ನಿರ್ದೇಶನದ 'ನೀಗಿಕೊಂಡ ಸಂಸ' ನಾಟಕದ ದೃಶ್ಯ
ವಿಚಾರವಾದಿಯಾಗಿದ್ದ ಸಿಜಿಕೆ ಮಠ ಸೇರಿ ನೀತಿಗೆಟ್ಟ ಎಂದು ಕೆಲವರು ಇನ್ನೊಂದು ಆರೋಪ ಹೊರೆಸುತ್ತಾರೆ. ಆದರೆ ಸಿಜಿಕೆ ಎಂದೂ ಯಾವುದೇ ಮಠಕ್ಕೆ ಹೋಗಿ ಮಠಾಧೀಶರಿಗೆ ಶಿರಸಾಷ್ಟಾಂಗ ನಮಸ್ಕಾರ ಶರಣಾಗಲಿಲ್ಲ. ಲಿಂಗ ಕಟ್ಟಲಿಲ್ಲ, ವಿಭೂತಿ ಬಳೆಯಲಿಲ್ಲ. ಜನಿವಾರ ಹಾಕಲಿಲ್ಲ, ಯಾವುದೇ ಮಠದ ಅನುಯಾಯಿಯೂ ಆಗಲಿಲ್ಲ. ಯಾವುದೇ ಧಾರ್ಮಿಕ ಸಿದ್ದಾಂತಕ್ಕೆ ಅಂಟಿಕೊಳ್ಳಲಿಲ್ಲ. ಕೊನೆವರೆಗೂ ರಂಗಜಂಗಮನಾಗೇ ಉಳಿದ. ಸಿಜಿಕೆ ರಂಗ ರೆಪರ್ಟರಿಯೊಂದನ್ನು ಕಟ್ಟಿ ನಿರಂತರವಾಗಿ ನಾಟಕಗಳನ್ನು ನಾಡಿನಾದ್ಯಂತ ಪ್ರದರ್ಶಿಸಬೇಕು ಎಂದು ಕನಸು ಕಂಡಿದ್ದರು. ಆದರೆ ರವೀಂದ್ರ ಕಲಾಕ್ಷೇತ್ರದ ಕಾಲೆಳೆಯುವ ರಾಜಕೀಯ, ಹದಗೆಟ್ಟ ಅವರ ಆರೋಗ್ಯ ಹಾಗೂ ರೆಪರ್ಟರಿಗೆ ಬೇಕಾದ ಅಪಾರವಾದ ಹಣಕಾಸಿನ ಕೊರತೆಯಿಂದಾಗಿ ಅವರ ಕನಸು ನನಸಾಗಲಿಲ್ಲ. ಆದರೆ ಸಾಧ್ಯತೆಯನ್ನು ಸಿಜಿಕೆ ಸಾಣೆಹಳ್ಳಿಯಲ್ಲಿ ಕಂಡುಕೊಂಡರು. ತರಳಬಾಳು ಶ್ರೀಮಠದ ಸಾಣೇಹಳ್ಳಿಯ ಶಾಖಾಮಠದ ಮಠಾಧೀಶರಾದ ಪಂಡಿತಾರಾಧ್ಯ ಸ್ವಾಮೀಜಿಗಳು ಸಾಣೇಹಳ್ಳಿಯಲ್ಲಿ ಶ್ರೀ ಶಿವಕುಮಾರ ಕಲಾಸಂಘ ವನ್ನು ಕಟ್ಟಿಕೊಂಡು ಶರಣ ತತ್ವ ಪ್ರಚಾರಕ್ಕಾಗಿ ವರ್ಷಕ್ಕೆ ಒಂದೋ ಎರಡೋ ನಾಟಕಗಳ ಎರಡು ಮೂರು ಪ್ರದರ್ಶನಗಳನ್ನು ಆಡಿಸುತ್ತಿದ್ದರು. ಅಲ್ಲಿಗೆ ಹೋದ ಸಿಜಿಕೆ ಸ್ವಾಮೀಜಿಯವರಿಗೆ ರೆಪರ್ಟರಿ ಪರಿಕಲ್ಪನೆಯನ್ನು ಮನದಟ್ಟು ಮಾಡಿದರು.

ಸಿಜಿಕೆರವರ ಒತ್ತಾಸೆಯಂತೆ ಶಿವಸಂಚಾರ ರೆಪರ್ಟರಿ ಸಾಣೆಹಳ್ಳಿಯಲ್ಲಿ ಆರಂಭವಾಯಿತು. ಹಾಗೂ ಗ್ರೀಕ್ ಮಾದರಿಯ ಬಯಲು ರಂಗಮಂದಿರವನ್ನೂ ಸಹ ಸಿಜಿಕೆ ಪರಿಕಲ್ಪನೆಯಂತೆ ಸಾಣೇಹಳ್ಳಿಯಲ್ಲಿ ಕಟ್ಟಲಾಯಿತು. ಕೇವಲ ಶರಣ ತತ್ವ ಪ್ರಚಾರದ ರಿಚುವಲ್ ಥಿಯೇಟರ್ ಆಗಿದ್ದ ಮಠ ಬದಲಾವಣೆಗೊಂಡು ಆಧುನಿಕ ನಾಟಕಗಳನ್ನು ನಿರ್ಮಿಸಿ ನಾಡಿನಾದ್ಯಂತ ಸಹಸ್ರಾರು ಪ್ರಯೋಗಗಳನ್ನು ಪ್ರದರ್ಶಿಸತೊಡಗಿತು. ಶರಣ ಸಂಸ್ಕೃತಿಯ ನಾಟಕಗಳ ಜೊತೆ ಜೊತೆಗೆ ಸೂರ್ಯಶಿಕಾರಿಯಂತಹ ಆಳುವ ವ್ಯವಸ್ಥೆ ವಿರೋಧಿ ನಾಟಕಗಳೂ  ಪ್ರದರ್ಶನಗೊಂಡವು. ಕಳ್ಳರು ಬಲುಗಳ್ಳರು, ರಾಕ್ಷಸ, ರೈತನ ಮಕ್ಕಳು, ಸದಾರಮೆ... ಮುಂತಾದ ನಾಟಕಗಳನ್ನೂ ಸಹ ಆಡಿಸಲಾಗಿದೆ.  ಅಶೋಕ ಬಾದರದಿನ್ನಿ, ಬಸವಲಿಂಗಯ್ಯ, ಜಂಬೆ, ಎಸ್.ಮಾಲತಿ... ರಂತಹ ಹಲವಾರು ರಂಗದಿಗ್ದಜರು ಶಿವಸಂಚಾರಕ್ಕೆ ಹೋಗಿ  ನಾಟಕಗಳನ್ನು  ನಿರ್ದೇಶಿಸಿದರು. ಕಲಾವಿದರ ಕೊರತೆಯನ್ನು ನೀಗಿಕೊಳ್ಳಲು ರಂಗಶಾಲೆಯನ್ನೇ ಸಾಣೇಹಳ್ಳಿ ಯಲ್ಲಿ ಆರಂಭಿಸಲಾಯಿತು. ಸಾಣೆಹಳ್ಳಿಯಂತಹ ಕುಗ್ರಾಮದಲ್ಲಿ ಪ್ರತಿ ವರ್ಷ ನವೆಂಬರನಲ್ಲಿ ರಾಷ್ಟ್ರೀಯ ನಾಟಕೋತ್ಸವ ಆಯೋಜನೆಗೊಳ್ಳುತ್ತಿರುವುದಕ್ಕೂ ಸಿಜಿಕೆ ಕಾರಣೀಕರ್ತರು. ಹೀಗೆ ಸಿಜಿಕೆಯವರ ಕನಸೊಂದು ಸಾಕಾರಗೊಂಡಿತು.

ಸಿಜಿಕೆ ಇರುವವರೆಗೂ ಶಿವಸಂಚಾರದಲ್ಲಿ ಹಲವಾರು ವೈಚಾರಿಕ ನಾಟಕಗಳು ಪ್ರದರ್ಶನಗೊಂಡವು. ಆದರೆ ಸಿಜಿಕೆ ಕಾಲವಶರಾದ ಮೇಲೆ ಕ್ಯಾಬರೆ ಕುಡಿತ ಕುಣಿತಗಳುಳ್ಳ ಸೂಳೆ ಸನ್ಯಾಸಿಯಂತಹ ನಾಟಕ ಪ್ರದರ್ಶನಗೊಳ್ಳುತ್ತಿದೆ. ಮತ್ತೆ ಪವಾಡ ಪ್ರೇರಿತ ಶರಣ ತತ್ವಗಳ ನಾಟಕಗಳು ಮುಂಚೂಣಿಗೆ ಬಂದವು. ಸಿಜಿಕೆ ಮಠದಲ್ಲಾದರೂ ನಾಟಕ ಕಟ್ಟಲಿ ಇಲ್ಲವೆ ಚರ್ಚಿನಲ್ಲಾದರೂ ನಾಟಕ ಮಾಡಿಸಲಿ ಆದರೆ ಎಂದೂ ತಮ್ಮ ವೈಚಾರಿಕತೆ ಹಾಗೂ ರಂಗಬದ್ದತೆಯನ್ನು ಮರೆತವರಲ್ಲ. ತಾವು ಕಂಡ ರೆಪರ್ಟರಿ ಕನಸನ್ನು ಸಿಜಿಕೆ ಶಿವಸಂಚಾರದ ಮೂಲಕ ನನಸು ಮಾಡಿಕೊಂಡರು. ಸಿಜಿಕೆ ನಂತರವೂ  ಸಹ ರೆಪರ್ಟರಿ ಮುಂದುವರೆಯುತ್ತಲೇ ಇದೆ. ಮಠವನ್ನೂ ಸಹ ರಂಗಮಠವನ್ನಾಗಿ ಬದಲಾಯಿಸಿದ ಸಿಜಿಕೆಯ ರಂಗನಿಷ್ಟೆಯನ್ನು ನಕಾರಾತ್ಮಕವಾಗಿ ಅರ್ಥೈಸಿಕೊಳ್ಳುವುದು ಮಹಾಚೇತನಕ್ಕೆ ಅವಮಾನಿಸಿದಂತೆ.

ಸಿಜಿಕೆ ನಿರ್ದೇಶನದ 'ಸುರಪುರದ ವೆಂಕಟಪ್ಪ ನಾಯಕ' ನಾಟಕ ತಂಡ

ಎಲ್ಲರಿಗಿರುವಂತೆ ಸಿಜಿಕೆಗೆ ಕೀರ್ತಿಯ ಹುಚ್ಚು ಇತ್ತು. ಕೀರ್ತಿಶನಿ ಹೆಗಲೇರಿದ್ದರಿಂದಲೇ ಸಿಜಿಕೆಗೆ ಇಷ್ಟೆಲ್ಲಾ ರಂಗಕಾರ್ಯಗಳನ್ನು ಮಾಡಲು ಸಾಧ್ಯವಾಯಿತು. ಹಣದ ದುರಾಸೆಗಿಂತಲೂ ಹೆಸರು ಮಾಡುವ ಹಪಾಹಪಿ ಅದೆಷ್ಟೋ ಪಾಲು ವಾಸಿ ಎನ್ನಿಸುತ್ತದೆ. ಹಾಗೆಯೇ ಹಾರ-ಶಾಲು-ಸನ್ಮಾನ ಹಾಗೂ ಹೆಸರನ್ನು ಗಳಿಸುವ ದಾವಂತದಲ್ಲಿ ಸಿಜಿಕೆ ನಿರಂತರ ಕ್ರಿಯಾಶೀಲರಾಗಿದ್ದರು. ಸರಕಾರಿ ಇಲಾಖೆಗಳ ಹಣವನ್ನು ಸುಳ್ಳು ಲೆಕ್ಕ ತೋರಿಸಿ ಪಡೆದು ಸ್ವಂತಕ್ಕೆ ಬಳಸಿಕೊಳ್ಳುವ ದುರುಳತನ ಸಿಜಿಕೆಯಲ್ಲಿರಲಿಲ್ಲ. ಅಕಸ್ಮಾತ್ ಇಲಾಖೆಯ ಹಣ ಪಡೆದರೂ ಅದೆಲ್ಲವನ್ನೂ ರಂಗಕ್ರಿಯೆಗೇ ಬಳಸಿಕೊಳ್ಳುವುದು ಅವರ ಜಾಯಮಾನ. ಸಿಜಿಕೆಯ ಪ್ರಾಜೆಕ್ಟ್ಗಳು ಅದೆಷ್ಟು ದೊಡ್ಡವಿರುತ್ತಿದ್ದವೆಂದರೆ ಇಲಾಖೆ ಕೊಡುವ ಹಣ ಆನೆಗೆ ಅರೆಕಾಸಿನ ಮಜ್ಜಿಗೆಯಂತಾಗುತ್ತಿತ್ತು. ಮತ್ತೆ ಅವರಿವರಲ್ಲಿ ಹಣ ಸಂಗ್ರಹಿಸಿ ರಂಗ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಿದ್ದರು. ಸರಕಾರಿ ಹಣ ದುರುಪಯೋಗ ಪಡಿಸಿಕೊಳ್ಳುವುದೇ ಆಗಿದ್ದರೆ ವರು ಯಾಕೆ ಡಿ.ಕೆ.ಚೌಟರು ಕೊಟ್ಟ ಸೆಕೆಂಡ್ ಹ್ಯಾಂಡ್ ಅಂಬಾಸಡಾರ್ ಕಾರನ್ನು ಬಳಸುತ್ತಿದ್ದರು. ಈಗ ಒಂದೆರಡು ಕಾರ್ಯಕ್ರಮಗಳಿಗೆ ಸಂಸ್ಕೃತಿ ಇಲಾಖೆಯ ಕ್ರಿಯಾಯೋಜನೆಯ ಹಣ ಸಿಕ್ಕರೆ ಸಾಕು ಕಾರು ಖರೀದಿಸಿ ಓಡಾಡುವ ರಂಗ ದಲ್ಲಾಳಿಗಳು ಬೇಕಾದಷ್ಟಿದ್ದಾರೆ. ಆದರೆ ಸಿಜಿಕೆಗೆ ಹೆಸರು ಮಾಡಬೇಕು, ರಂಗ ಇತಿಹಾಸದಲ್ಲಿ ತಮ್ಮ ಹೆಸರನ್ನು ಅಜರಾಮರವಾಗಿಸಬೇಕು ಎನ್ನುವ ಆಸೆ ಇದ್ದೇ ಇತ್ತು. ಆದರೆ ಅದರಿಂದ ರಂಗಭೂಮಿಗೆ ಹಾನಿಯೇನು ಆಗಲಿಲ್ಲವಲ್ಲ. ಸಿಜಿಕೆರವರ ಸಾಧನೆಗೆ ಹೋಲಿಸಿದರೆ ಹೆಸರಿನ ಮೋಹವೆನ್ನುವ ದೌರ್ಬಲ್ಯ ನಗಣ್ಯವೆನಿಸುತ್ತದೆ. ಮನುಷ್ಯನಾದವನಲ್ಲಿ ಶೇಕಡಾ ನೂರಕ್ಕೆ ನೂರು ಪರ್ಪೆಕ್ಷನ್ ಹುಡುಕುವುದು ಮೂರ್ಖತನವಾಗುತ್ತದೆ.

ಬಹುತೇಕ ಯುನಿವರ್ಸಿಟಿ ಪ್ರೊಪೆಸರ್ಗಳನ್ನು ಹೋಗಿ ಮಾತಾಡಿಸಿದರೆ ಅವರ ಗತ್ತು ಬಿಗುಮಾನ ಗೊತ್ತಾಗುತ್ತದೆ. ಲಕ್ಷಾಂತರ ರೂಪಾಯಿ ಯುಜಿಸಿ ಸಂಬಳ ಪಡೆಯುವ ಇವರು ಶ್ರೇಷ್ಟತೆಯ ವ್ಯಸನದಲ್ಲಿ ತೇಲುತ್ತಾ ಜನಸಾಮಾನ್ಯರಿಂದ ದೂರವೇ ಇರುತ್ತಾರೆ. ಆದರೆ ಯುನಿವರ್ಸಿಟಿ ಪ್ರೊಪೆಸರ್ ಆಗಿದ್ದುಕೊಂಡು ಎಂದೂ ಸಿಜಿಕೆ ಗತ್ತು ತೋರಿದವರಲ್ಲ. ತನಗಿಂತ ಕಿರಿಯರ ಜೊತೆಗೂ ಸ್ನೇಹಿತರಂತೆ ನಡೆದುಕೊಳ್ಳುತ್ತಾ ಒಂದು ರೀತಿಯಲ್ಲಿ ಮನೆಯ ಯಜಮಾನನ ಆತ್ಮೀಯತೆಯನ್ನು ತೋರುತ್ತಿದ್ದರು. ವ್ಯಕ್ತಿನಿಷ್ಟೆ ಅವರಲ್ಲಿದ್ದಿದ್ದರೆ ಶ್ರೇಷ್ಟತೆಯ ವ್ಯಸನಕ್ಕೆ ಬಿದ್ದು ಜನರಿಂದ ಎಂದೋ ದೂರಾಗುತ್ತಿದ್ದರು. ಶರಣರ ಗುಣವನ್ನು ಮರಣದಲ್ಲಿ ಕಾಣು ಎನ್ನುವಂತೆ ಸಿಜಿಕೆಯ ಜನಪ್ರೀಯತೆಯನ್ನು ಅವರ ಅಂತಿಮಯಾತ್ರೆಯಲ್ಲಿ ನೋಡಬಹುದಾಗಿತ್ತು. ಇಲ್ಲಿವರೆಗೂ ಯಾವ ರಂಗಕರ್ಮಿಗೂ ಸಿಗದಂತಹ ಅಪೂರ್ವ ಜನಸ್ಪಂದನೆ ಎಲ್ಲಾ ಕ್ಷೇತ್ರದ ಜನರಿಂದ ಸಿಜಿಕೆ ಅಂತಿಮಯಾತ್ರೆಯಲ್ಲಿ ಕಾಣಬಹುದಾಗಿತ್ತು. ಅಕಸ್ಮಾತ್ ಸಿಜಿಕೆ ಸ್ವಾರ್ಥಿಯಾಗಿದ್ದರೆ, ಭ್ರಷ್ಟನಾಗಿದ್ದರೆ. ರಾಜೀಕೋರನಾಗಿದ್ದರೆ ಸಹಸ್ರಾರು ಜನ ಅವರ ಸಾವಿನ ದಿನ ಬರುತ್ತಿರಲಿಲ್ಲ. ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಸಾಲುಗಟ್ಟಿ ನಿಲ್ಲುತ್ತಿರಲಿಲ್ಲ. ಬೆಂಗಳೂರಿನಿಂದ ಸಾಣೆಹಳ್ಳಿಯವರೆಗೂ ಸಿಜಿಕೆ ಅಂತಿಮಯಾತ್ರೆ ಸಾಗುತ್ತಿರಲಿಲ್ಲ. ಇಂತಹ ಭಾಗ್ಯ ಕನ್ನಡ ರಂಗಭೂಮಿಯಲ್ಲಿ ಸಿಜಿಕೆರವರಿಗೆ ಮಾತ್ರ ಸಿಕ್ಕಿದ್ದು ಅವರ ರಂಗಬದ್ದತೆ, ಮಾನವೀಯತೆ ಹಾಗೂ ಜನಪ್ರೀಯತೆಗೆ ಸಾಕ್ಷಿಯಾಗಿದೆ. ಸ್ಥಾಪಿತ ಹಿತಾಸಕ್ತಿಗಳನ್ನು ವಿರೋಧಿಸಿದ್ದರಿಂದ, ಕೆಲವರ ರಂಗದ್ರೋಹತನವನ್ನು ಟೀಕಿಸಿದ್ದರಿಂದ ಸಿಜಿಕೆ ಕೆಲವರಿಗೆ ಅಪ್ರೀಯರಾಗಿ ತೋರುತ್ತಾರೆ. ಕೆಟ್ಟ ಸಾಂಸ್ಕೃತಿಕ ಪರಿಸರವನ್ನು ಹಾಗೂ ರಂಗಭೂಮಿಯಲ್ಲಿರುವ ಸ್ವಾರ್ಥಿಗಳ ಪಡೆ ಮತ್ತು ಗುಂಪುಗಾರಿಕೆಯನ್ನು ಸಿಜಿಕೆ ಬಲವಾಗಿ ವಿರೋಧಿಸಿದ್ದಾರೆ, ಜಗಳಕ್ಕೆ ಬಿದ್ದಿದ್ದಾರೆ, ಎದುರು ಸಿಕ್ಕಾಗ ಬೈದಿದ್ದಾರೆ... ಹೀಗೆ ಸಿಜಿಕೆಯಿಂದ ಬೈಗಳುಗಳ ಪ್ರಸಾದ ತಿಂದವರಿಗೆ ಸ್ವಾಭಾವಿಕವಾಗಿ ಅವರು ಅಪತ್ಯವಾಗುತ್ತಾರೆ. ಇನ್ನು ಕೆಲವರು ಸಿಜಿಕೆ ಏರಿದ ಎತ್ತರವನ್ನು ಹಾಗೂ ಅವರಿಗೆ ಸಿಕ್ಕ ಜನಪ್ರೀಯತೆಯನ್ನು ಕಂಡು ಅಸೂಯೆಯಿಂದ ಅತೃಪ್ತ ಆತ್ಮವಾಗುತ್ತಾರೆ. ಆಗ ಅಂತವರಿಗೆ ಸಿಜಿಕೆಯ ಸಾಧನೆಗಿಂತ ವ್ಯೆಯಕ್ತಿಕ ದೌರ್ಬಲ್ಯಗಳೇ ಪ್ರಮುಖವಾಗುತ್ತವೆ. ಆದರೆ ಚರಿತ್ರೆ ಎನ್ನುವುದು ದೌರ್ಬಲ್ಯಗಳಿಗಿಂತ ಪ್ರತಿಭೆಯನ್ನೇ ಪರಿಗಣಿಸುತ್ತದೆ. ಉದಾಹರಣೆಗೆ ಚಾರ್ಲಿ ಚಾಪ್ಲಿನ್. ಅವನ ವಯಕ್ತಿಕ ದೌರ್ಬಲ್ಯಗಳು ಬೇಕಾದಷ್ಟಿದ್ದರೂ ಕೂಡಾ ತನ್ನ ಪ್ರತಿಭೆಯಿಂದಾಗಿ ಆತ ಶತಮಾನದ ನಟನೇ ಆಗಿದ್ದಾರೆ

ಶೇಕ್ಸಪಿಯರ್ ಸ್ವಪ್ನ ನೌಕೆ
 ಸಿಜಿಕೆ ತನ್ನ ಶಿಷ್ಯ ಪಡೆಯನ್ನು ಅದೆಷ್ಟು ಸಮರ್ಥವಾಗಿ ತರಬೇತುಗೊಳಿಸಿ ಬೆಳೆಸಿ ಹೋಗಿದ್ದಾರೆಂದರೆ ಸಿಜಿಕೆಯವರ ಅನುಪಸ್ಥಿತಿಯಲ್ಲೂ ಸಹ ಅವರ ರಂಗನಿರಂತರ ರಂಗ ತಂಡ ಕ್ರಿಯಾಶೀಲವಾಗಿದೆ. ಯಾವುದೇ ಒಂದು ರಂಗತಂಡದ ರೂವಾರಿ ನಿಷ್ಕ್ರೀಯನಾದರೆ ಇಲ್ಲವೆ ಮರಣಹೊಂದಿದರೆ ತಂಡವೇ ನಿಷ್ಕ್ರೀಯವಾಗುತ್ತದೆಂಬುದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಆದರೆ ಸಿಜಿಕೆಯ ನಿರ್ಗಮನದ ನಂತರವೂ ಸಹ ಅವರ ರಂಗತಂಡ ನಾಟಕಗಳನ್ನು ನಿರ್ಮಿಸುತ್ತಿದೆ ಹಾಗೂ ಸಾಧ್ಯವಾದಲ್ಲೆಲ್ಲಾ ಪ್ರದರ್ಶಿಸುತ್ತಿದೆ. ಪ್ರತಿ ವರ್ಷ ನಾಟಕೋತ್ಸವಗಳನ್ನು ಮಾಡುತ್ತಿದೆ.  ರಂಗನಿರಂತರಕ್ಕೆ ಇಪ್ಪತ್ತೈದು ವರ್ಷ ತುಂಬಿದ ಸಂದರ್ಭದಲ್ಲಿ 2014 ಜನವರಿ 11 ರಿಂದ 15 ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಜಿಕೆ ಹೆಸರಲ್ಲಿ ರಾಷ್ಟ್ರೀಯ ನಾಟಕೋತ್ಸವವನ್ನು ರಂಗನಿರಂತರ ತಂಡವು ಆಯೋಜಿಸಿತ್ತು. ಯಾವುದೇ ಸರಕಾರಿ ಇಲಾಖೆಗಳು ಮಾಡುವುದಕ್ಕಿಂತಲೂ ಉತ್ತಮವಾಗಿ ಹಾಗೂ ಅಚ್ಚುಕಟ್ಟಾಗಿ ಸಂಭ್ರಮದಿಂದ ನಾಟಕೋತ್ಸವ ನಡೆಯಿತು. ಇದು ಸಿಜಿಕೆಯವರ ಕರ್ತುತ್ವ ಶಕ್ತಿಗೆ ಸಾಕ್ಷಿಯಾಗಿದೆ. ಕೇವಲ ತಾನು ಬೆಳೆಯುವುದು ಮಾತ್ರವಲ್ಲ ಹಲವರನ್ನು ಬೆಳೆಸುವುದು ಬಹು ಮುಖ್ಯ ಎನ್ನುವುದನ್ನು ಸಿಜಿಕೆ ಪ್ರಾಯೋಗಿಕವಾಗಿ ತೋರಿಸಿ ಹೋಗಿದ್ದಾರೆ.
  
ಕಿ.ರಂ.ನಾಗರಾಜರವರು ಸಿಜಿಕೆ ರವರನ್ನು ಒಬ್ಬ ಅನುಭಾವಿ ಎಂದು ಕರೆದರು. ಇದರಲ್ಲಿ ತಪ್ಪೇನು ಇಲ್ಲವಲ್ಲ. ನಮ್ಮ ಚರಿತ್ರೆಯಲ್ಲಿ ಬಹುತೇಕ ಅನುಭಾವಿಗಳು ವಿಕ್ಷಿಪ್ತವಾಗಿಯೇ ಬದುಕಿ ಸಾಧಿಸಿದವರಾಗಿದ್ದಾರೆ. ಅಕ್ಕಮಹಾದೇವಿ, ಅಲ್ಲಮ, ತಿಪ್ಪೇರುದ್ರಸ್ವಾಮಿ, ಮಂಟೇಸ್ವಾಮಿ, ಕೈವಾರ ತಾತಯ್ಯ.... ಮುಂತಾದ ಅನುಭಾವಿಗಳ ಬದುಕು ತುಂಬಾನೆ ವಿಚಿತ್ರವಾಗಿತ್ತು. ಅವರ ನಡೆ ನುಡಿಗಳೂ ಸಹ ಅಷ್ಟೇ ವಿಕ್ಷಿಪ್ತವಾಗಿದ್ದವು. ಆದರೆ ಅವರ ವೈಚಾರಿಕತೆ ಪ್ರಖರವಾಗಿರುತ್ತಿತ್ತು. ಅವರು ಹಿಡಿದ ದಾರಿಗಿಂತಲೂ ಅನುಭಾವಿಗಳ ಗುರಿ ಮುಖ್ಯವಾಗಿತ್ತು. ಅದಕ್ಕಾಗಿಯೇ ಬಸವಣ್ಣ ಅಲ್ಲಮನಂತಹ ವಿಕ್ಷಪ್ತ ಅನುಭಾವಿಗಳ ಅನುಭವ ಶರಣರಿಗೆ ದೊರೆಯಲೆಂದು ಅನುಭವ ಮಂಟಪದ ಮುಖ್ಯಸ್ಥನನ್ನಾಗಿಸಿದ್ದು.  ಎಲ್ಲಾ ಮನುಷ್ಯ ಸಹಜ ದರ್ಬಲ್ಯಗಳನ್ನು ಹೊಂದಿಯೂ ರಂಗನಿಷ್ಟೆ, ಸಾಮಾಜಿಕ ಬದ್ದತೆ ಹಾಗೂ ವೈಚಾರಿಕ ಮನೋಭಾವನೆಯಿಂದಾಗಿ ಸಿಜಿಕೆ ಒಂದು ರೀತಿಯಲ್ಲಿ ರಂಗ ಅನುಭಾವಿಯೇ ಆಗಿದ್ದಾರೆ. ಸಿಜಿಕೆ ರವರ ಕನಸಿನ ರಂಗಭೂಮಿ ಕಟ್ಟುವಲ್ಲಿ ರಂಗಕರ್ಮಿಗಳು ಶ್ರಮಿಸಬೇಕಿದೆ. ಸಿಜಿಕೆಯ ನನಸಾಗದ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕಿದೆ. ಸಿಜಿಕೆ ನೆನಪನ್ನು ಪ್ರೇರಕಶಕ್ತಿಯನ್ನಾಗಿಸಿಕೊಂಡು ಕನ್ನಡ ರಂಗಭೂಮಿ ಇನ್ನಷ್ಟು ಪುಷ್ಟಿಯನ್ನು ಹೊಂದಬೇಕಾಗಿದೆ.     

                                                      -ಶಶಿಕಾಂತ ಯಡಹಳ್ಳಿ




 
         

               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ