ಸೋಮವಾರ, ಮೇ 26, 2014

ನಾಟಕ ಅಕಾಡೆಮಿಯ ಕೋಆಪ್ಟ್ ಜಾತಿರಾಜಕಾರಣ ಪ್ರಹಸನ :




ನಾಟಕ ಅಕಾಡೆಮಿಯಲ್ಲಿ ದುರ್ಭಲ ಅಧ್ಯಕ್ಷ; ಸರ್ವಾಧಿಕಾರಿ ಸದಸ್ಯ ; ಜಾತಿವಾದಿ ರೆಜಿಸ್ಟ್ರಾರ್:

 





ಶಾಪಗ್ರಸ್ಥ ಕರ್ನಾಟಕ ನಾಟಕ ಅಕಾಡೆಮಿಗೆ ಹಿಡಿದಿರುವ ಶಾಪ ವಿಮೋಚನೆಯಾಗುವ ಲಕ್ಷಣಗಳಂತೂ ಕಾಣುತ್ತಿಲ್ಲ. ಕಳೆದ ಎರಡು ಅವಧಿಗಳಲ್ಲಿ ನಾಟಕ ಅಕಾಡೆಮಿ ರಂಗಭೂಮಿಯನ್ನು ಬೆಳೆಸುವುದಿರಲಿ ತನ್ನನ್ನು ತಾನು ಉಳಿಸಿಕೊಳ್ಳಲು ಹೆಣಗಾಡಿತು. ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಸಂಘಪರಿವಾರದ ನಿಷ್ಟ ಕಾರ್ಯಕರ್ತರಾಗಿದ್ದ ಡಾ.ರಾಜಾರಾಂರವರನ್ನು  ನಾಟಕ ಅಕಾಡೆಮಿಯ ಅಧ್ಯಕ್ಷರನ್ನಾಗಿ ಸರಕಾರ ಆಯ್ಕೆ ಮಾಡಿತು. ಆದರೆ ರಾಜಾರಾಂ ತಮ್ಮ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಯಾರನ್ನೂ ನಂಬಲಿಲ್ಲ, ತನ್ನ ಕೆಲವು ಕುಲಬಾಂಧವರನ್ನು ಹೊರತುಪಡಿಸಿ ಬೇರೆ ರಂಗಕರ್ಮಿಗಳನ್ನು ಹತ್ತಿರ ಸೇರಿಸಲಿಲ್ಲ, ರಾಜ್ಯಾದ್ಯಂತ ರಂಗಭೂಮಿ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿಲ್ಲ. ರಂಗಭೂಮಿಯ ಜನರಿಗೆ ಅಕಾಡೆಮಿ ಅನ್ನುವುದೊಂದು ಇದೆ ಎನ್ನುವುದು ಮರೆತೆ ಹೋಗತೊಡಗಿತು. ತಾಕತ್ತಿರುವವರು ಅಕಾಡೆಮಿಯನ್ನು ಲೆಕ್ಕಿಸದೇ ನೇರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಗಳೊಂದಿಗೆ ವ್ಯವಹರಿಸಿ ತಮ್ಮ ಅನುದಾನಗಳನ್ನು ಪಡೆಯತೊಡಗಿದರು.

ನಂತರ ಬಿಜೆಪಿ ಕಾರ್ಯಕರ್ತೆಯಾಗಿದ್ದ ಮಾಲತಿ ಸುಧೀರರವರನ್ನು ಅವರ ಒತ್ತಾಸೆಯ ಮೇರೆಗೆ ನಾಟಕ ಅಕಾಡೆಮಿಯ ಅಧ್ಯಕ್ಷೆಯನ್ನಾಗಿಸಿ ಮತ್ತೆ ತನ್ನ ರಾಜಕೀಯ ಕಾರಣಗಳಿಗಾಗಿ ಬಿಜೆಪಿ ಸರಕಾರ ಅಕಾಡೆಮಿಯ ಮೇಲೆ ಹೇರಿತು. ರಾಜಾರಾಂ ಮತ್ತು ಮಾಲತಿ ಇಬ್ಬರ ಆಯ್ಕೆ ಮಾಡಿದ್ದು ಆಗ ಬಿಜೆಪಿ ಸರಕಾರವನ್ನು ನೇಪತ್ಯದಲ್ಲೇ ನಿಂತು ನಿಯಂತ್ರಿಸುತ್ತಿದ್ದ ಪುರೋಹಿತಶಾಹಿ ಪ್ರತಿನಿಧಿ ಸಂತೋಷಜೀ. ಮಾಲತಿರವರು ಅಧ್ಯಕ್ಷರೇನೋ ಆದರು ಆದರೆ ಒಂಬತ್ತು ತಿಂಗಳುಗಳ ಕಾಲ ಸರಕಾರ ಸದಸ್ಯರನ್ನೇ ನೇಮಕ ಮಾಡಲಿಲ್ಲ. ವೃತ್ತಿ ಕಂಪನಿಯಿಂದ ಬಂದ ಮಾಲತಿರವರಿಗೆ ಆಧುನಿಕ ಕನ್ನಡ ರಂಗಭೂಮಿಯ ಕುರಿತು ಏನೇನೂ ಗೊತ್ತಿರಲಿಲ್ಲ. ವಾರ್ಷಿಕ ಪ್ರಶಸ್ತಿ ಹಂಚಿಕೆಯೊಂದನ್ನು ಹೊರತು ಪಡಿಸಿ ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳೂ ಕಾರ್ಯಗತಗೊಳ್ಳಲಿಲ್ಲ. ಅಕಾಡೆಮಿಯ ಸದಸ್ಯರಿಗೂ ಹಾಗೂ ಅಧ್ಯಕ್ಷೆಗೂ ತಾಳ ಮೇಳ ಸರಿಬರಲಿಲ್ಲ. ವಿಠಲ್ ಕೊಪ್ಪದರಂತಹ ಕ್ರಿಯಾಶೀಲ ರಂಗಕರ್ಮಿ ಅಕಾಡೆಮಿ ಸದಸ್ಯರಾಗಿದ್ದರಾದರೂ ಅವರ ಎಲ್ಲಾ ಆಲೋಚನೆ ಹಾಗೂ ಯೋಜನೆಗಳಿಗೆ ಅಧ್ಯಕ್ಷೆಯಿಂದ ಹಾಗೂ ರೆಜಿಸ್ಟ್ರಾರರವರಿಂದ ಸಹಕಾರ ದೊರೆಯಲಿಲ್ಲ. ಅಕಾಡೆಮಿಯ ರೆಜಿಸ್ಟ್ರಾರ್ ಆಗಿದ್ದ ಸರ್ವಾಧಿಕಾರಿ ಮನೋಭಾವದ ಮನುವಾದಿ ವ್ಯಕ್ತಿ ಟಿ.ಜಿ.ನರಸಿಂಹಸಿಂಹಮೂರ್ತಿ ಇಡೀ ಅಕಾಡೆಮಿಯನ್ನು ತನ್ನ ಹಾಗೂ ತನ್ನ ಕುಲಬಾಂಧವರ ಹಿತಾಸಕ್ತಿಗಾಗಿ ಬಳಸಿಕೊಳ್ಳತೊಡಗಿದ. ಅಕಾಡೆಮಿಯ ಸದಸ್ಯರ ಮೇಲೇಯೇ ಸವಾರಿ ಮಾಡತೊಡಗಿದ. ಕೊನೆಕೊನೆಗೆ ಕೊಪ್ಪದರವರಂತಹ ಅಕಾಡೆಮಿಯ ಸದಸ್ಯರೇ ರೆಜಿಸ್ಟ್ರಾರ್ ಸರ್ವಾಧಿಕಾರದ ವಿರುದ್ದ ಸಿಡಿದೆದ್ದು ನರಸಿಂಹಮೂರ್ತಿಯನ್ನು ನಾಟಕ ಅಕಾಡೆಮಿಯಿಂದಲೇ ವರ್ಗಮಾಡಿಸಿ ಒಕ್ಕಲೆಬ್ಬಿಸಿದ್ದರು. ಎಲ್ಲಾ ಆಯಾಮಗಳಲ್ಲೂ ನಿಷ್ಕ್ರೀಯಗೊಂಡ ನಾಟಕ ಅಕಾಡೆಮಿ ಹೆಚ್ಚು ಕಡಿಮೆ ಕೋಮಾ ಸ್ಥಿತಿಗೆ ಸೇರಿಕೊಂಡಿತು. ರಂಗಕರ್ಮಿಗಳಿಗಂತೂ ಅಂತಹ ಅಕಾಡೆಮಿಯೊಂದು ಇದೆ ಎನ್ನುವುದೇ ಮರೆತುಹೋಯಿತು. ರಂಗಭೂಮಿಯ ಅದೃಷ್ಟಕ್ಕೆ ಚುನಾವಣೆಯಲ್ಲಿ ಬಿಜೆಪಿ ಸರಕಾರ ಸರ್ವನಾಶವಾಯಿತು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿತು. ಇನ್ನೂ ಅಧಿಕಾರಾವಧಿ ಇರುವಾಗಲೇ ಮಾಲತಿಯವರಿಂದ ಒತ್ತಾಯದಿಂದಲೇ ರಾಜೀನಾಮೆ ಪಡೆಯಲಾಯಿತು.
         

ರಂಗಭೂಮಿಯಿಂದಲೇ ಬೆಳೆದ ಉಮಾಶ್ರೀ ಕನ್ನಡ ಮತ್ತು ಸಂಸ್ಕೃತಿ ಮಂತ್ರಿಯಾದಾಗ ರಂಗಕರ್ಮಿಗಳಲ್ಲಿ ಒಂದಿಷ್ಟು ಆಸೆ ಚಿಗುರಿತು. ಮಲಗಿಕೊಂಡಿದ್ದ ನಾಟಕ ಅಕಾಡೆಮಿಗೆ ಉತ್ತಮ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಅಕಾಡೆಮಿಗೆ ಹಿಡಿದ ಸೂತಕ ಕಳೆಯುತ್ತದೆ ಎಂಬ ಆಶಾಭಾವನೆ ಬೆಳೆಯತೊಡಗಿತು. ಒಂದಿಷ್ಟು ರಂಗಭೂಮಿಯ ಒಳಹೊರಗನ್ನು ಬಲ್ಲ ಉಮಾಶ್ರೀಯವರಿಂದ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಅದಕ್ಕೆ ಪೂರಕವಾಗಿ ಹಿರಿಯ ರಂಗಕರ್ಮಿಗಳಾದ ಎಲ್.ಕೃಷ್ಣಪ್ಪ ಹಾಗೂ ಜೆ.ಲೋಕೇಶ ಇಬ್ಬರೂ ಅಕಾಡೆಮಿಯ ಅಧ್ಯಕ್ಷರಾಗಲು ತಮ್ಮ ಪ್ರಯತ್ನ ಮುಂದುವರೆಸಿದರು. ಅಹಿಂದ ಪರವಾದ ದೋರಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದರಿಂದ ಎಲ್.ಕೃಷಪ್ಪರವರು ಅಧ್ಯಕ್ಷರಾಗಬಹುದೆಂದೂ  ಇಲ್ಲವೇ ರಂಗಸಂಪದ ರಂಗತಂಡವು ಮೊಟ್ಟಮೊದಲಿಗೆ ಉಮಾಶ್ರೀರವರ ಪ್ರತಿಭೆ ಗುರುತಿಸಿ ನಟನೆಗೆ ಅವಕಾಶಕೊಟ್ಟು ಬೆಳೆಸಿದ್ದರಿಂದ ರಂಗಸಂಪದದ ರೂವಾರಿಗಳಲ್ಲೊಬ್ಬರಾದ ಜೆ.ಲೋಕೇಶರವರು ನಾಟಕ ಅಕಾಡೆಮಿಗೆ ಅಧ್ಯಕ್ಷರಾಗಬಹುದೆಂದೂ ರಂಗಭೂಮಿಯಲ್ಲಿ ಚರ್ಚೆಗಳಾದವು. ಹೆಚ್ಚು ಕಡಿಮೆ ಜೆ.ಲೋಕೇಶರವರ ಹೆಸರು ಪೈನಲ್ ಆಗಿತ್ತು. ಉಮಾಶ್ರೀ ಕೂಡಾ ಅದಕ್ಕೆ ಒಲವು ತೋರಿಸಿದ್ದರು.

ಅಷ್ಟರಲ್ಲಿ ಇನ್ನೊಂದು ಅನಿರೀಕ್ಷಿತ ಬೆಳವಣಿಗೆ ಘಟಿಸಿತು. ಕರ್ನಾಟಕಕ್ಕೆ ಸಾಂಸ್ಕೃತಿಕ ನೀತಿ ತಯಾರಿಸುವ ಕುರಿತು ಬರಗೂರರ ನೇತೃತ್ವದಲ್ಲಿ ಸಭೆಯೊಂದು ಕನ್ನಡ ಭವನದಲ್ಲಿ ನಡೆದಿತ್ತು. ಸಭೆಗೆ ಕಾ..ಚಿಕ್ಕಣ್ಣ, ಉಮಾಶ್ರೀಯಾದಿಯಾಗಿ ಹಲವಾರು ಬುದ್ದಿಜೀವಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಆಹ್ವಾನಿತರಾಗಿದ್ದ ಅಗ್ನಿ ಪತ್ರಿಕೆಯ ಸಂಪಾದಕರಾದ ರಾಜಶೇಖರ ಹತಗುಂದಿಯವರು ಇಲ್ಲಿವರೆಗೂ ನಾಟಕ ಅಕಾಡೆಮಿಗೆ ಎಲ್ಲಾ ವರ್ಗಗಳಿಂದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಆದರೆ ಒಬ್ಬರೇ ಒಬ್ಬ ಮುಸ್ಲಿಂ ವ್ಯಕ್ತಿಯನ್ನೂ ನಿಯಮಿಸಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಸಲ ಧರ್ಮದವರನ್ನೂ ಪರಿಗಣಿಸಿ ಅಧ್ಯಕ್ಷರನ್ನಾಗಿಸಬೇಕು. ಗುಲ್ಬರ್ಗದಲ್ಲಿ ಕುಮಾರೇಶ್ವರ ನಾಟ್ಯ ಸಂಘ ಮಾಲೀಕರಾದ ಶೇಖ ಮಾಸ್ತರ್ ಅದಕ್ಕೆ ಸೂಕ್ತವಾದ ವ್ಯಕ್ತಿ.. ಎಂದು ಅಂಕಿ ಅಂಶಗಳ ಸಮೇತ ತಮ್ಮ ವಾದವನ್ನು ಮುಂದಿಟ್ಟರು. ಕೆಲವರಿಗೆ ಇದು ಸರಿಯೆಂದು ತೋಚಿತು. ಸಿ.ಎಂ ಸಿದ್ದರಾಮಯ್ಯನವರೂ ಸಹ ಅಹಿಂದ ದವರಿಗೆ ಹೆಚ್ಚು ಮಹತ್ವ ಕೊಡಬೇಕು ಎಂದು ಅನಧೀಕೃತ ಪರಮಾನು ಹೊರಡಿಸಿದ್ದರು. ಸಿದ್ದರಾಮಯ್ಯನವರ ಪರಮಾಪ್ತರಾದ ಕಾ..ಚಿಕ್ಕಣ್ಣ ಹಾಗೂ ಎಲ್.ಹನುಮಂತಯ್ಯನವರಿಗೆ ಹತಗುಂದಿಯವರ ಪ್ರಸ್ತಾವನೆ ಇಷ್ಟವಾಯಿತು. ಇದನ್ನು ಸಿಎಂ ಕಿವಿಗೂ ಹಾಕಿದರು. ವಿಷಯ ಶೇಖ ಮಾಸ್ತರಗೂ ತಿಳಿಯಿತು. ಅಲ್ಲಿವರೆಗೂ ಅಕಾಡೆಮಿಯ ಅಧ್ಯಕ್ಷತೆ ತನಗೆ ಸಿಗಬಹುದೆನ್ನುವ ಯಾವ ಕಲ್ಪನೆಯೂ ಇಲ್ಲದ ಮಾಸ್ತರರಿಗೆ ಇದ್ದಕ್ಕಿದ್ದಂತೆ ಆಸೆ ನೂರ್ಮಡಿಯಾಯಿತು. ತಮ್ಮ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಹತಗುಂದಿಯವರಿಗೆ ಅಭಿನಂದನೆಯನ್ನೂ ಸಲ್ಲಿಸಿದ ಶೇಖಮಾಸ್ತರ್ ನೇರವಾಗಿ ಹೋಗಿ ಹಿಡಿದುಕೊಂಡಿದ್ದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಮಂತ್ರಿಗಳಾದ ಡಾ.ಖಮರುಲ್ ಇಸ್ಲಾಂ ರವರ ಪಾದಗಳನ್ನು. ಗುಲ್ಬರ್ಗಾದ ಉಸ್ತುವಾರಿ ಮಂತ್ರಿಯೂ ಆಗಿರುವ ಖಮರುಲ್ ತಮ್ಮ ಬಂಧುವೊಬ್ಬ ಅಕಾಡೆಮಿ ಅಧ್ಯಕ್ಷನಾದರೆ ಉತ್ತಮ ಎಂದು ಕೊಂಡು ಹೋಗಿ ಕುಳಿತಿದ್ದು ಸಿಎಂ ಸಿದ್ದರಾಮಯ್ಯನವರ ಎದುರು. ತಮ್ಮ ಕುಲಬಾಂಧವನಿಗೆ ಅಕಾಡೆಮಿ ಪಟ್ಟ ಕಟ್ಟಲೇ ಬೇಕೆಂದು ಹಠ ಹಿಡಿದ ಖಮರುಲ್ ಇಸ್ಲಾಂರವರಿಗೆ ಸಿ.ಎಂ ಅಭಯಹಸ್ತ ನೀಡಿದರು. ಯಾಕೆಂದರೆ ಮುಂದೆ ಪಾರ್ಲಿಮೆಂಟ್ ಚುನಾವಣೆ ಶುರುವಾಗುವುದರಲ್ಲಿತ್ತು. ಅಲ್ಪಸಂಖ್ಯಾತರನ್ನು ಹಾಗೂ ಅವರ ನಾಯಕರನ್ನು ಓಲೈಸಲೇಬೇಕಿತ್ತು.

ಇದರಿಂದಾಗಿ ಉಮಾಶ್ರಿರವರಿಗೆ ಮುಜುಗರವಾಗತೊಡಗಿತು. ಅವರು ಈಗಾಗಲೇ ಜೆ.ಲೋಕೆಶ್ರವರಿಗೆ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಆಶ್ವಾಸನೆ ಕೊಟ್ಟಾಗಿತ್ತು. ಆದರೆ ಸಿಎಂ ಹಾಗೂ ಅವರ ಆಪ್ತರಾದ ಚಿಕ್ಕಣ್ಣ ಹಾಗೂ ಎಲ್.ಹನುಮಂತಯ್ಯ ಇಬ್ಬರೂ ಸಾಮಾಜಿಕ ಬ್ಯಾಲನ್ಸಿಂಗ್ ಪರ ನಿಂತುಕೊಂಡರು. ಲೊಕೇಶ ತಮ್ಮ ರಂಗಸಂಪದ ತಂಡದಿಂದ ಉಮಾಶ್ರೀರವರಿಗೆ ನಾಟಕದ ಆರಂಗ್ರೆಟಂ ಮಾಡಿಸಿ ಅವಕಾಶ ಕೊಟ್ಟಿದ್ದರೆ, ಶೇಖ ಮಾಸ್ತರ ತಮ್ಮ  ಕಂಪನಿ ನಾಟಕಗಳಲ್ಲಿ ಪಾತ್ರಗಳನ್ನು ಕೊಟ್ಟು ಅನ್ನಕ್ಕೆ ದಾರಿ ಮಾಡಿದ್ದರು. ಅವಕಾಶ ಕೊಟ್ಟವರು ಹಾಗೂ ಅನ್ನ ಕೊಟ್ಟವರು ಇಬ್ಬರಲ್ಲಿ ಯಾರನ್ನು ಅಕಾಡೆಮಿಗೆ ನಿಯಮಿಸಿ ತನ್ನ ಋಣ ತೀರಿಸಿಕೊಳ್ಳಲಿ ಎನ್ನುವ ಗೊಂದಲದಲ್ಲಿ ಉಮಾಶ್ರೀ ಬಿದ್ದರು. ಒಂದಲ್ಲಾ ಎರಡಲ್ಲಾ ಒಂಬತ್ತು ತಿಂಗಳ ಕಾಲ ಹಗ್ಗ ಜಗ್ಗಾಟ ನಡೆದೇ ಇತ್ತು. ಯಾವಾಗ ಶೇಖ ಮಾಸ್ತರ್ ಹೆಸರು ಅಕಾಡೆಮಿ ಅಧ್ಯಕ್ಷಗಿರಿಗೆ ಮುಂಚೂಣಿಗೆ ಬಂದಿತೋ ಆಗ ಶೇಕ್ ಆಗಿದ್ದು ಕಪ್ಪಣ್ಣ ಆಂಡ್ ಗ್ಯಾಂಗ್. ಜೆ.ಲೋಕೇಶ್ ಸುಮ್ಮನೆ ಇದ್ದಿದ್ದರೂ ಉಮಾಶ್ರಿಯವರು ಏನಾದರೂ ಮಾಡಿ ಅವರಿಗೆ ಅಧ್ಯಕ್ಷತೆ ಪಟ್ಟ ವಹಿಸುವ ಸಂಭವನೀಯತೆ ಇತ್ತು. ಯಾಕೆಂದರೆ ಬೇರೆಲ್ಲಾ ಅಕಾಡೆಮಿಗೆ ಯಾರನ್ನು ಬೇಕಾದರೂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಿ ಆದರೆ ನಾಟಕ ಅಕಾಡೆಮಿಗೆ ಮಾತ್ರ ಲೊಕೇಶರವರನ್ನು ಆಯ್ಕೆ ಮಾಡಿ ಎಂದು ತಮ್ಮ ಸ್ಪಷ್ಟ ಅನಿಸಿಕೆಯನ್ನು ಸಂಸ್ಕೃತಿಯ ಇಲಾಖೆಯ ಅಧಿಕಾರಿಗಳಿಗೆ ಉಮಾಶ್ರೀ ಹೇಳಿದ್ದರು.

ಶೇಖ್ ಮಾಸ್ತರ
ಆದರೆ ಯಾವಾಗ ಕಪ್ಪಣ್ಣ ಮತ್ತು ಅವರ ಗ್ಯಾಂಗ್ ಲೊಕೇಶರವರ ಪರವಾಗಿ ಪ್ರೆಸ್ಮೀಟ್ಗಳನ್ನು ಮಾಡುತ್ತಾ ಮಂತ್ರಿಣಿ ಮೇಲೆ ಬೇರೆ ಬೇರೆ ಪ್ರಭಾವಿಗಳಿಂದ ವಿಪರೀತ ಒತ್ತಡ ಹೇರಲು ಪ್ರಾರಂಭಿಸಿದರೋ ಉಮಾಶ್ರೀ ತಮ್ಮ ನಿಯತ್ತನ್ನು ಲೊಕೇಶರವರಿಂದ ಶೇಖ್ ಮಾಸ್ತರ ಕಡೆಗೆ ಬದಲಾಯಿಸಿಬಿಟ್ಟರು. ಆಗಲೇ ಲೋಕೇಶರವರ ಅದೃಷ್ಟ ಕೈಕೊಟ್ಟಿತು. ಶೇಖ ಮಾಸ್ತರರ ನಸೀಬು ಚಮಕಾಯಿಸಿತು. ಕೊನೆಗೂ ಉಮಾಶ್ರೀಯವರ ಬೆಂಬಲ ಪಡೆದ ಕಾ..ಚಿಕ್ಕಣ್ಣನವರು ಅಧ್ಯಕ್ಷರ ಆಯ್ಕೆಯ ಪೈಲಿಗೆ ದಿನಾಂಕ 2014 ಫೆಬ್ರವರಿ 25 ರಂದು ಸಿಎಂ ಸಹಿ ಹಾಕಿಸಿಕೊಂಡರು. ಕಪ್ಪಣ್ಣ ಮತ್ತು ಅವರ ಬೆಂಬಲಿಗ ಪಡೆ ಭಾರಿ ಮುಖಭಂಗಕ್ಕೊಳಗಾಯಿತು. ಕಪ್ಪಣ್ಣನವರನ್ನು ಮುಂದಿಟ್ಟುಕೊಂಡು ಅಧ್ಯಕ್ಷಗಿರಿಗೆ ಪ್ರಯತ್ನಿಸಿದ ಜೆ.ಲೊಕೇಶರವರಿಗೆ ಭಾರೀ ನಿರಾಶೆಯಾಯಿತು. ಎಲ್ಲರಿಗಿಂತಲೂ ಸಂತಸ ಪಟ್ಟಿದ್ದು ರಾಜಶೇಖರ ಹತಗುಂದಿ. ನಾಟಕ ಅಕಾಡೆಮಿಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಅಲ್ಪಸಂಖ್ಯಾತ ಕೋಮಿನವರೊಬ್ಬ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಹಾಗೂ ಅದಕ್ಕೆ ಮೂಲ ಕಾರಣ ಹತಗುಂದಿಯವರ ಪ್ರೇರಣೆಯಾಗಿದ್ದು ಅವರ ಸಂಭ್ರಮಕ್ಕೆ ಮೂಲ ಕಾರಣವಾಗಿತ್ತು. ಶೇಖ ಮಾಸ್ತರ್ ಕೂಡಾ ಅಕಾಡೆಮಿ ಅಧ್ಯಕ್ಷಗಿರಿ ಒಲಿಯಲು ಮೂಲ ಕಾರಣೀಕರ್ತರಾದ ರಾಜಶೇಖರರವರಿಗೆ ಅಪಾರ ಕೃತಜ್ಞತೆಯನ್ನು ತಿಳಿಸಿದರು.

ಆದರೆ... ಯಾವುದೇ ಸಂಭವನೀಯತೆಗಳನ್ನು ಮೊದಲೇ ಅಂದಾಜಿಸುವ ಕಪ್ಪಣ್ಣ ಹಾಗೂ ಇನ್ನಿತರ ಸಾಂಸ್ಕೃತಿಕ ಪಟ್ಟಭದ್ರ ಹಿತಾಸಕ್ತಿಗಳು ಯಾವುದಕ್ಕೂ ಇರಲಿ ಎಂದು ತಮ್ಮ ಚದುರಂಗದ ದಾಳಗಳನ್ನು ಇನ್ನೊಂದು ರೀತಿಯಲ್ಲಿ ಉರುಳಿಸಿದ್ದರು. ಯಾವಾಗ ಜೆ.ಲೋಕೇಶರು ಅಧ್ಯಕ್ಷರಾಗುವ ಅವಕಾಶ ಕಡಿಮೆಯಾಯಿತೋ, ಯಾವಾಗ ಶೇಖ ಮಾಸ್ತರರನ್ನು ಶೇಕ್ ಮಾಡಲು ಸಾಧ್ಯವಿಲ್ಲ ಎಂದು ಅರಿವಾಯಿತೋ ಆಗಲೇ ರಂಗಭೂಮಿಯ ಪರಾವಲಂಬಿ ಜೀವಿಗಳು ಹುಷಾರಾದರು. ತಾವು ಶತಾಯ ಗತಾಯ ವಿರೋಧಿಸಿದ ಶೇಖ ಮಾಸ್ತರ್ ತಮ್ಮ ಕೃಪಾಕಟಾಕ್ಷವಿಲ್ಲದೇ ನಾಟಕ ಅಕಾಡೆಮಿಯ ಅಧ್ಯಕ್ಷರಾದರೆ ನಮ್ಮ ಬೇಳೆ ಕಾಳು ಬೇಯೋದಿಲ್ಲ. ನಾವು ಹೇಳಿದ ಮಾತು ನಡಿಯಲಿಕ್ಕಿಲ್ಲ ಎಂದುಕೊಂಡು ನಾಟಕ ಅಕಾಡೆಮಿಯ ಸದಸ್ಯರ ಪಟ್ಟಿಯಲ್ಲಿ ತಮ್ಮ ಬೆಂಬಲಿಗರ ಹೆಸರನ್ನು ಸೇರಿಸುವ ಕೆಲಸವನ್ನು ಮುತುವರ್ಜಿಯಿಂದ ಮಾಡಿದರು. ಬ್ರಾಹ್ಮಣ ಸಂಜಾತರು ಹಾಗೂ ಅಬ್ರಾಹ್ಮಣರಾಗಿಯೂ ಬ್ರಾಹ್ಮಣ್ಯವನ್ನು ಮೈಗೂಡಿಸಿಕೊಂಡವರೂ ಇದರಲ್ಲಿದ್ದರು.

ಬಾರಿ ಅಕಾಡೆಮಿ ಅಂಗಳದಲ್ಲಿ ಸಹ ಬ್ರಾಹ್ಮಣ್ಯದ ಬೀಜಗಳನ್ನು ಉದ್ದೇಶಪೂರ್ವಕವಾಗಿಯೇ ನೆಡಲಾಯಿತು. ಬೀಜಗಳೀಗ ಸಾವಕಾಶವಾಗಿ ಬಲಿತು ತಮ್ಮ ಜೀನ್ ಗುಣವನ್ನು ತೋರಿಸಲು ಆರಂಭಿಸಿದವು. ಫೆಬ್ರವರಿ 26 ರಂದು ಅಕಾಡೆಮಿ ಅಧ್ಯಕ್ಷರು ಹಾಗೂ ಸದಸ್ಯರ ಪಟ್ಟಿ ಏಕಕಾಲಕ್ಕೆ ಅನೌನ್ಸ್ ಮಾಡಲಾಯಿತು (ಸರ್ಕಾರಿ ಆದೇಶ ಸಂ:ಕಸಂವಾ 817 ಕಸಧ 2013(5)). ತದನಂತರ ಇದ್ದಕ್ಕಿದ್ದಂತೆ ಸಂಭ್ರಮದಿಂದ ಕುಣಿದಾಡಿದ ಬೀಜಗಳು ತಮ್ಮನ್ನು ನೆಟ್ಟವರ ಕೃಪಾಕಟಾಕ್ಷದಿಂದಾಗಿ ತಮ್ಮ ಕೆಲಸಗಳನ್ನು ಶುರುಮಾಡಿಕೊಂಡವು. ಇನ್ನೂ ಅತ್ತ ಕಡೆ ನಾಟಕ ಅಕಾಡೆಮಿಯ ಅಧ್ಯಕ್ಷರು ನೆಟ್ಟಗೆ ಅಧಿಕಾರವನ್ನು ವಹಿಸಿಕೊಂಡಿರಲಿಲ್ಲ. ಅಷ್ಟರಲ್ಲಿ ಯಾವುಯಾವುದೋ ಜಿಲ್ಲೆಯ ಕೋಟಾದಲ್ಲಿ ನಾಟಕ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿ ಬೆಂಗಳೂರಲ್ಲಿ ವಾಸವಾಗಿರುವ ಅಕಾಡೆಮಿ ಸದಸ್ಯರುಗಳನ್ನೆಲ್ಲಾ ಸೇರಿಸಿ ಅನಧೀಕೃತವಾದ ಸಭೆಯನ್ನು ಸುಚಿತ್ರ ಆವರಣದಲ್ಲಿ ನಡೆಸಲಾಯಿತು. ಅದರ ನಾಯಕತ್ವವನ್ನು ವಹಿಸಿಕೊಂಡವರು ರಂಗಶಂಕರದ ಮುದ್ದಣ್ಣ ಹಾಗೂ ಕಲ್ಪನಾ ನಾಗಾನಾಥ. ರಂಗಾಭರಣದ ಗುಣಶೀಲನ್, ಎನ್.ಕೆ.ರಾಮಕೃಷ್ಣ ಭಾಗವಹಿಸಿದ್ದರು. ಅನಧೀಕೃತ ನಾಟಕ ಅಕಾಡೆಮಿಯ ಸದಸ್ಯರ ಸಭೆಯಲ್ಲಿ ತೆಗೆದುಕೊಂಡ ಮುಖ್ಯ ಠರಾವುಗಳು ಹೀಗಿವೆ.  ಬೆಂಗಳೂರಿನಲ್ಲಿರುವ ಅಕಾಡೆಮಿ ಸದಸ್ಯರೆಲ್ಲಾ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು. ಇನ್ನೂ ಮೂರು ಜನರನ್ನು ಸಹಸದಸ್ಯರನ್ನು ಅಧ್ಯಕ್ಷರು ಆಯ್ಕೆ ಮಾಡಿಕೊಳ್ಳುವ ಸಮಯದಲ್ಲಿ ನಮ್ಮ ಪರವಾಗಿರುವವರನ್ನು ಆರಿಸಬೇಕು. ಅಕಾಡೆಮಿ ಅಧ್ಯಕ್ಷರಾದ ಶೇಖ ಮಾಸ್ತರರಿಗೆ ಬೆಂಗಳೂರಿನ ರಂಗಭೂಮಿಯ ಬಗ್ಗೆ ಏನೇನು ಅರಿವಿಲ್ಲ. ಹೀಗಾಗಿ ನಮ್ಮ ಮಾರ್ಗದರ್ಶನದಲ್ಲಿ ಅಕಾಡೆಮಿ ಕಾರ್ಯನಿರ್ವಹಿಸಬೇಕು. ಅಕಸ್ಮಾತ್ ಅಧ್ಯಕ್ಷರು ತಮ್ಮ ವಿವೇಚನಾ ಕೋಟಾದಲ್ಲಿ ಸದಸ್ಯರನ್ನು ಕೋಆಪ್ಟ್ ಮಾಡಲೇಬೇಕೆಂದರೆ ದೂರದ ಜಿಲ್ಲೆಯಿಂದಲೇ ಆಯ್ಕೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಬೇಕು. ಹಾಗೂ ನಮ್ಮ ಒಗ್ಗಟ್ಟಿಗೆ ಭಂಗ ತರುವಂತಹ ಯಾವುದೇ ವ್ಯಕ್ತಿಯನ್ನು ಸದಸ್ಯರನ್ನಾಗಿ ಮಾಡಲೇ ಕೂಡದು ಅಜೆಂಡಾಗಳನ್ನು ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು. ಅನಧೀಕೃತ ಗ್ಯಾಂಗಿನ ಲೀಡರ್ ಆಗಿ ಮುದ್ದಣ್ಣ ಸ್ವಘೋಷಿತವಾಗಿ ಆಯ್ಕೆಯಾದರು. ಬೊಂಬೆ ಆಡ್ಸೋರು ಹೇಳಿದ ಹಾಗೆ ಮುದ್ದಣ್ಣ ಬೇನಾಮಿ ನಾಯಕತ್ವವನ್ನು ನಿರ್ವಹಿಸತೊಡಗಿದರು. ಹೀಗೆ ಎರಡು ಮೂರು ಅನಧೀಕೃತ ಸಭೆಗಳು ನಡೆದವು. ಹಾಗೂ ತಮ್ಮ ಪರವಾಗಿ ನಾರಾಯಣ ರಾಯಚೂರ ಸದಸ್ಯರಾಗಬೇಕೆಂದು ಗ್ಯಾಂಗ್ ನಿರ್ಧರಿಸಿತು. ಜೊತೆಗೆ ನಾಟಕ ಅಕಾಡೆಮಿ ಏನೇನು ಮಾಡಬೇಕು ಎನ್ನುವ ಪಟ್ಟಿಯನ್ನು ತಯಾರಿಸಿಕೊಂಡು ಶೇಖ ಮಾಸ್ತರಗೆ ಕೊಡಲಾಯಿತು. ಅಧ್ಯಕ್ಷನಾಗಿ ನಿನಗೆ ಏನೇನು ಮಾಡಲು ಸಾಧ್ಯವಿಲ್ಲ. ಏನು ಮಾಡಬೇಕೆಂದು ನಾವು ಮಾರ್ಗದರ್ಶನ ಮಾಡುತ್ತೇವೆ. ಇಲ್ಲಿದೆ ನೋಡಿ ಯೋಜನೆಗಳ ಪಟ್ಟಿ ಎಂದು ಗ್ಯಾಂಗ್ ನಾಟಕ ಅಕಾಡೆಮಿ ಅಧ್ಯಕ್ಷರಿಗೆ ಪರೋಕ್ಷವಾಗಿ ತಮ್ಮ ಸಂದೇಶವನ್ನು ರವಾನಿಸಿತು.

ಇಷ್ಟಕ್ಕೂ ಏನಿದು ಕೋಆಪ್ಟ್? ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ವರ್ಷ ಹತ್ತು ಜನರನ್ನು ನಾಟಕ ಅಕಾಡೆಮಿಗೆ ಸದಸ್ಯರನ್ನಾಗಿ ನಿಯಮಿಸುತ್ತದೆ. ಹಾಗೂ ಅಕಾಡೆಮಿಯ ಅಧ್ಯಕ್ಷರಿಗೆ ಅನುಕೂಲವಾಗುವಂತವರನ್ನು ಅವರೇ ಆಯ್ಕೆ ಮಾಡಿಕೊಳ್ಳಲಿ ಎನ್ನುವ ಉದ್ದೇಶದಿಂದ ಅಧ್ಯಕ್ಷರು ಮೂರು ಜನ ಸದಸ್ಯರನ್ನು ಸಹಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೀಗೆ ಆಯ್ಕೆ ಆದವರಿಗೆ ಕೋಅಪ್ಟ್ ಮೇಂಬರ ಎನ್ನುತ್ತಾರೆ. ಆದರೆ ವರ್ಷ ಅದೇನಾಯಿತೋ ಗೊತ್ತಿಲ್ಲ ಹದಿನೈದು ಜನ ಸದಸ್ಯರನ್ನು ಸರಕಾರ ಆಯ್ಕೆಮಾಡಿತು. ಇದು ಅಕಾಡೆಮಿಗಳ ಬೈಲಾಗೆ ವಿರುದ್ಧವಾಗಿದ್ದು ಯಾರಾದರೂ ಕೋರ್ಟಿಗೆ ಹೋದರೆ ಎಲ್ಲಾ ಸದಸ್ಯರ ಆಯ್ಕೆ ಅನೂರ್ಜಿತವಾಗುತ್ತದೆಂದು ಅರಿತ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಇದ್ದಕ್ಕಿದ್ದಂಗೆ ಹಿಂದಿನ ದಿನಾಂಕ ನಮೂದಿಸಿ ಜಿಓ ಮಾಡಿಸಿಕೊಂಡು ಬಚಾವಾದರು. ಆದರೆ ಕೋಆಪ್ಟ್ ಸದಸ್ಯರ ಬಗ್ಗೆ ಗೊಂದಲ ಏರ್ಪಟ್ಟಿತ್ತು. ಸರಕಾರಕ್ಕೆ ಪತ್ರ ಬರೆದು ಮೂವರು ಸಹಸದಸ್ಯರನ್ನು ಅಕಾಡೆಮಿಯ ಅಧ್ಯಕ್ಷರು ತೆಗೆದುಕೊಳ್ಳಬಹುದು ಎಂದು ಮನದಟ್ಟು ಮಾಡಿಕೊಳ್ಳಲಾಯಿತು. ಈಗ ಸಹಸದಸ್ಯರ ಆಯ್ಕೆಯ ಹಿಂದೆ ಸಾಂಸ್ಕೃತಿಕ ರಾಜಕಾರಣ ಶುರುವಾಯಿತು.     


ಗುಡಿಹಳ್ಳಿ ನಾಗರಾಜ
ಅಕಾಡೆಮಿಗೆ ಸಹಸದಸ್ಯನಾಗಲು ಅಧ್ಯಕ್ಷರಿಗೆ ದುಂಬಾಲು ಬಿದ್ದವರು ಹಿರಿಯ ಪತ್ರಕರ್ತರಾದ ಗುಡಿಹಳ್ಳಿ ನಾಗರಾಜರವರು. ತಿಂಗಳು ಅವರು ಪ್ರಜಾವಾಣಿ ಗ್ರುಪ್ನಿಂದ ರಿಟೈರ್ ಆಗುತ್ತಿರುವುದರಿಂದ ಅವರಿಗೆ ಅಕಾಡೆಮಿಯಲ್ಲಿ ಸದಸ್ಯನಾಗಬೇಕೆಂಬ ಬಯಕೆ ಸಹಜವಾದದ್ದಾಗಿತ್ತು. ಏನೇ ಆಗಲಿ ಅಕಾಡೆಮಿಗೆ ಸಹಸದಸ್ಯನಾಗಿ ಆಯ್ಕೆ ಆಗಲೇ ಬೇಕೆಂದು ಅವರು ನಿರ್ಧರಿಸಿಯಾಗಿತ್ತು. ಅದ್ಯಾಕೆ ಹಿರಿಯರಾದ ಗುಡಿಹಳ್ಳಿ ಹೀಗೆ ಅಲ್ಪತೃಪ್ತರಾದರೋ ಗೊತ್ತಿಲ್ಲ. ಯಾಕೆಂದರೆ ಅವರ ಹಿರಿಯರಾಗಿದ್ದಾರೆ ಹಾಗೂ ರಂಗಭೂಮಿ ಚಟುವಟಿಕೆಗಳನ್ನು ಅವರು ದಶಕಗಳಿಂದ ಪತ್ರಿಕೆ ಹಾಗೂ ಪುಸ್ತಕಗಳಲ್ಲಿ ದಾಖಲಿಸುತ್ತಾ ಬಂದಿದ್ದಾರೆ. ಅವರು ಸ್ವಲ್ಪ ವರ್ಷ ಕಾಯ್ದು ಸರಿಯಾದ ರೀತಿಯಲ್ಲಿ ಪ್ರಯತ್ನಿಸಿದ್ದರೆ ಮುಂದಿನ ಸಲ ನಾಟಕ ಅಕಾಡೆಮಿಯ ಅಧ್ಯಕ್ಷರಾಗುವ ಸಾಧ್ಯತೆಗಳಿದ್ದವು. ಶೇಖ ಮಾಸ್ತರರಂತವರಿಗೆ ಹೋಲಿಸಿದರೆ ಗುಡಿಹಳ್ಳಿಯವರಿಗೆ ಅರ್ಹತೆಯೂ ಇತ್ತು. ಆದರೆ ತಮ್ಮ ಪ್ರಭಾವವನ್ನು ಬಳಸಿ ಮತ್ತೊಬ್ಬರ ಅವಕಾಶವನ್ನು ಕಿತ್ತುಕೊಂಡು ಸಹಸದಸ್ಯ ಸ್ಥಾನಕ್ಕೆ ಹಪಹಪಿಸಿದ್ದಂತೂ ಅಕ್ಷಮ್ಯ. ಯಾಕೆಂದರೆ ಗುಡಿಹಳ್ಳಿಯವರು ಈಗಾಗಲೇ ಒಂದು ಬಾರಿ ನಾಟಕ ಅಕಾಡೆಮಿಯ ಸದಸ್ಯರಾಗಿ ಮೂರುವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈಗ ಬೇರೆ ಯುವ ರಂಗಕರ್ಮಿಗಳಿಗೆ ಅವಕಾಶ ಮಾಡಿಕೊಡುವ ಔದಾರ್ಯ ತೋರಿದ್ದರೆ ಇನ್ನೂ ದೊಡ್ಡವರೆನಿಸಿಕೊಳ್ಳುತ್ತಿದ್ದರು. ಆದರೆ ಹಾಗಾಗಲಿಲ್ಲ. ಎಲ್ಲಾ ಆಯಾಮಗಳಲ್ಲೂ ತಮ್ಮ ಪ್ರಯತ್ನ ಮುಂದುವರೆಸಿದರು.

2014 ಮಾರ್ಚ 15ರಂದು ನಡೆದ ನಾಟಕ ಅಕಾಡೆಮಿಯ  ಮೊದಲ ಸಭೆಯಲ್ಲಿ ಸಹಸದಸ್ಯರ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಮಾಡಬಹುದಾಗಿತ್ತಾದರೂ ಚುನಾವಣೆ ನೀತಿ ಸಂಹಿತೆಯ ನೆಪ ಹೇಳಿ ಸಭೆಯನ್ನು ಮುಂದೂಡಲಾಗಿತ್ತು. ನಂತರ ಮೇ 12 ರಂದು ಎರಡನೇ ಸಭೆ ನಡೆಯಿತು. ಕೋ-ಆಪ್ಟ್ ಆಯ್ಕೆಯಲ್ಲಿ ಸಭೆಗಿಂತಲೂ ಮೊದಲೇ ಹಲವಾರು ಜಾತಿಸಮೀಕರಣಗಳು ನಡೆದವು. ಸಿದ್ದರಾಮಯ್ಯನವರ ಅಹಿಂದ ಆಶಯಕ್ಕೆ ವಿರುದ್ಧವಾಗಿ ಪ್ರಮುಖ ಜಾತಿಯವರಾದ ಬ್ರಾಹ್ಮಣ ಹಾಗೂ ಲಿಂಗಾಯತ ಲಾಬಿಗಳು ಕೆಲಸ ಮಾಡತೊಡಗಿದವು. ಕಲ್ಟನಾ ನಾಗಾನಾಥ ಹಾಗೂ ಅಕಾಡೆಮಿಯ ಹಾಲಿ ರೆಜಿಸ್ಟ್ರಾರ್ ಭಾಗ್ಯಮ್ಮ ಇಬ್ಬರೂ ಬ್ರಾಹ್ಮಣ ಸಮುದಾಯದವರಾದ್ದರಿಂದ ಕೋಮಿನವರನ್ನು ಸಹಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದು ಪ್ರಯತ್ನ ಶುರುಮಾಡಿದರು. ನಾರಾಯಣ ರಾಯಚೂರು, ಶಶಿಧರ್ ಭಾರೀಘಾಟ ಹಾಗೂ ಶ್ರೀಪತಿ ಮಂಜಿನಬೈಲುರವರ ಹೆಸರುಗಳನ್ನು ಸೂಚಿಸಿದರು. ಆದರೆ ಇವರು ಈಗಾಗಲೇ ನಾಟಕ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರಿಂದ ಹಾಗೂ ಶಶಿಧರ್ ಭಾರಿಘಾಟರವರು ಕಪ್ಪಣ್ಣನವರ ಜೊತೆ ಸೇರಿ ಜೆ.ಲೋಕೇಶರ ಪರವಾಗಿ ಬೆಂಬಲಿಸಿದ್ದರಿಂದ ಶೇಖ ಮಾಸ್ತರ್ ಹೆಸರುಗಳನ್ನು ಪರಿಶೀಲಿಸಲು ಭಾಗ್ಯಮ್ಮರವರಿಗೆ ತಿಳಿಸಿದರು. ಆಗ ಭಾಗ್ಯಮ್ಮನವರಿಗೆ ಹೊಳೆದಿದ್ದೆ ಡಾ.ಶ್ರೀಪಾದ ಭಟ್ ಹೆಸರು. ಭಟ್ರು ಮೊದಲು ಆಕಾಡೆಮಿಗೆ ಸದಸ್ಯರಾಗಿಲ್ಲ ಹಾಗೂ ಅವರ ಹೆಸರು ಹೇಳಿದರೆ ಯಾರೂ ವಿರೋಧಿಸಲಾರರು ಅದಕ್ಕಿಂತ ಹೆಚ್ಚಾಗಿ ತಮ್ಮ ಕುಲಬಾಂಧವರು ಎನ್ನುವ ಕಾರಣದಿಂದಾಗಿ ಭಾಗ್ಯಮ್ಮ ತಮ್ಮ ಜಾತಿ ರಾಜಕಾರಣ ಶುರುಮಾಡಿದರು. ಅಕಾಡೆಮಿಯ ಸಭೆಗಿಂತಲೂ ವಾರದ ಮುಂಚೆಯೇ ಶ್ರೀಪಾದರಿಗೆ ಪೋನ್ ಮಾಡಿದ ಭಾಗ್ಯಮ್ಮ ನಾಟಕ ಅಕಾಡೆಮಿಗೆ ಕೋಆಪ್ಟ್ ಸದಸ್ಯರಾಗಲು ತಾವು ಒಪ್ಪಿಕೊಳ್ಳಬೇಕು ಎಂದು ಕೇಳಿಕೊಂಡರು. ಆದರೆ ತುಂಬಾ ಸಂಕೋಚದ ಸ್ವಭಾವದ ಸಜ್ಜನರಾದ ಡಾ.ಶ್ರೀಪಾದರು ನವೀರಾಗಿಯೇ ನಿರಾಕರಿಸಿದರು. ಇದರಿಂದ ಬೇಸರಗೊಂಡ ಭಾಗ್ಯಮ್ಮ ಶ್ರೀಪಾದರ ಆತ್ಮೀಯ ಸ್ನೇಹಿತ ಸಿದ್ದಾಪುರದ ವಿಠ್ಠಲ್ ಬಂಡಾರಿಯವರಿಗೆ ಪೋನ್ ಮಾಡಿ ಶ್ರಿಪಾದರನ್ನು ಒಪ್ಪಿಸಲು ಒತ್ತಾಯಿಸಿದರು. ಬಂಡಾರಿಯವರ ಸ್ನೇಹಪೂರ್ವಕ ಒತ್ತಾಯಕ್ಕೆ ಶ್ರೀಪಾದರು ಮಣಿದು ಒಪ್ಪಿಗೆ ಕೊಟ್ಟರು. ಭಾಗ್ಯಮ್ಮ ತಮ್ಮ ತಂತ್ರದಲ್ಲಿ ಸಫಲರಾದರು.
ಡಾ.ಶ್ರಿಪಾದ ಭಟ್
ಇಲ್ಲಿ ಡಾ.ಶ್ರಿಪಾದ ಭಟ್ರವರ ಬಗ್ಗೆ ಒಂದು ವಿಷಯ ಹೇಳಲೇಬೇಕು. ಕನ್ನಡ ನಾಡಿನ ಪ್ರತಿಭಾನ್ವಿತ ರಂಗನಿರ್ದೇಶಕರಲ್ಲಿ ಮುಂಚೂಣಿಯಲ್ಲಿರುವವರು ಶ್ರೀಪಾದರು. ಶಿರ್ಶಿಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದುಕೊಂಡು ರಂಗಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ಶಾಲೆಯ ರಜಾದಿನಗಳನ್ನು ನಾಟಕ ನಿರ್ದೇಶನಕ್ಕಾಗಿಯೇ ಮುಡುಪಾಗಿಟ್ಟಿದ್ದಾರೆ. ತುಂಬಾ ಅಪರೂಪದ ಪ್ರತಿಭಾವಂತ. ಬಿ.ವಿ.ಕಾರಂತರ ಲೆವಲ್ಗೆ ನಾಟಕಗಳನ್ನು ಕಟ್ಟಿಕೊಡುತ್ತಾರೆ. ರಂಗಭೂಮಿ ವಿಷಯದಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ನಾಟಕ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿ. ಅಂತಹ ಪ್ರತಿಭಾನ್ವಿತ ವ್ಯಕ್ತಿತ್ವವನ್ನು ನಾಟಕ ಅಕಾಡೆಮಿ ಸದಸ್ಯಗಿರಿಯೂ ಅಲ್ಲ ಸಹಸದಸ್ಯತ್ವಕ್ಕೆ ಆಯ್ಕೆ ಮಾಡಿದ್ದು ಮಹಾನ್ ಪ್ರತಿಭೆಗೆ ಮಾಡಿದ ಅವಮಾನವೇ ಆಗಿದೆ. ಇದು ಹೇಗಿದೆ ಎಂದರೆ ಹೆಸರಾಂತ ನಿರ್ದೇಶಕರನ್ನು ಕರೆದು ನಾಟಕದಲ್ಲಿ ಪಾತ್ರ ಮಾಡಲು ಅದೂ ಪೋಷಕ ಪಾತ್ರ ಮಾಡಲು ಒಪ್ಪಿಸಿದಂತಿದೆ. ನಾಟಕ ಅಕಾಡೆಮಿಯ ಜಾತಿರಾಜಕಾರಣಕ್ಕೆ ಶ್ರೀಪಾದ ಭಟ್ರಂತವರು ಬಲಿಯಾಗಿದ್ದು ಶೋಚನೀಚಿi. ಅಚ್ಚರಿಯ ವಿಷಯವೆಂದರೆ ಶೇಖ ಮಾಸ್ತರರಿಗೆ ಡಾ.ಶ್ರೀಪಾದ ಭಟ್ರವರೆಂದರೆ ಯಾರು ಎನ್ನುವುದೂ ಗೊತ್ತಿಲ್ಲ ಹಾಗೆಯೇ ಶ್ರೀಪಾದ ಭಟ್ರಿಗೆ ಶೇಖಮಾಸ್ತರ ಎಂದರೆ ಯಾರು ಎನ್ನುವುದೂ ಗೊತ್ತಿಲ್ಲ. ಸಹಸದಸ್ಯನಾಗಬೇಕಾದ ವ್ಯಕ್ತಿಯ ಬಗ್ಗೆ ಕನಿಷ್ಟ ಮಾಹಿತಿಯೂ ಇಲ್ಲದೇ ಜಾತಿವಾದಿ ಶಕ್ತಿಗಳು ಹೇಳಿದ ತಕ್ಷಣ ಆಯಿತು ಎಂದು ಒಪ್ಪಿಕೊಂಡ ಶೇಖ ಮಾಸ್ತರರ ಅವಿವೇಕತನಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?

ಇನ್ನೂ ಒಂದು ಮಾತನ್ನು ಇಲ್ಲಿ ಹೇಳಲೇಬೇಕು. ಅದು ನಾಟಕ ಅಕಾಡೆಮಿಯ ರೆಜಿಸ್ಟ್ರಾರ್ ಆದವರು ಅಕಾಡೆಮಿಯ ಅಧ್ಯಕ್ಷರಿಗೆ ಆಡಳಿತದಲ್ಲಿ ಸಹಾಯಕರಾಗಿರಬೇಕು ಹಾಗೂ ಲೆಕ್ಕಪತ್ರಗಳ ದೇಖರೇಖಿ ನೋಡಿಕೊಳ್ಳಬೇಕು. ಆದರೆ ಸಂಸ್ಕೃತಿ ಇಲಾಖೆಯ ಆಯಕಟ್ಟಿನ ಜಾಗದಲ್ಲಿ ಕುಳಿತಿರುವ ಬ್ರಾಹ್ಮಣ ಅಧಿಕಾರಿಗಳು ಅಲ್ಲಿಯೂ ಸಹ ತಮ್ಮ ಜಾತಿರಾಜಕೀಯ ಮಾಡುತ್ತಿರುವುದು ಅನಾಹುತಕಾರಿಯಾಗಿರುವಂತಹುದು. ಅಕಾಡೆಮಿಯ ಅಧ್ಯಕ್ಷರ ವಿವೇಚನಾ ಕೋಟಾದಲ್ಲಿ ಮೂಗು ತೂರಿಸುವುದು ವೃತ್ತಿದ್ರೋಹ. ತಮ್ಮ ಮಿತಿಯನ್ನು ಮೀರಿ ಕೋಮುವಾದಿ ಸಾಂಸ್ಕೃತಿಕ ರಾಜಕಾರಣ ಮಾಡಿದ್ದರಿಂದಲೇ ಹಿಂದಿದ್ದ ಹಾರವ ರೆಜಿಸ್ಟ್ರಾರ್ ನರಸಿಂಹಮೂರ್ತಿ ಅಕಾಡೆಮಿಯ ಸದಸ್ಯರ ಜೊತೆಗೆ ತಕರಾರು ಮಾಡಿಕೊಂಡು ಜಾಗದಿಂದಲೇ ವರ್ಗವಾಗಿ ಹೋಗಬೇಕಾಯಿತು. ಜಾಗಕ್ಕೆ ಬಂದ ಭಾಗ್ಯಮ್ಮನವರು  ನರಸಿಂಹಮೂರ್ತಿಯವರಿಗಿಂತ ತಾವು ಯಾವುದರಲ್ಲೂ ಕಡಿಮೆಯಿಲ್ಲ ಎಂದುಕೊಂಡು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ಜಾತಿಯವರೊಂದಿಗೆ ಶಾಮೀಲಾಗಿ ಅಕಾಡೆಮಿಯಲ್ಲಿ ಬ್ರಾಹ್ಮಣ್ಯಕ್ಕೆ ಒತ್ತಾಸೆಯಾಗಿರುವುದು ಅತಿರೇಕ. ಭಾಗ್ಯಮ್ಮನವರ ಪತಿಯವರಾದ ಹುಣಸವಾಡಿ ರಾಜನ್ರವರು ಜಾತ್ಯಾತೀತ ಮನೋಭಾವದ ವ್ಯಕ್ತಿ. ರಂಗಭೂಮಿಯ ಬಗ್ಗೆ ಅಪಾರ ಒಲವಿರುವ ರಾಜನ್ರವರು ಎಂದೂ ಜಾತಿರಾಜಕಾರಣ ಮಾಡಿದವರಲ್ಲ. ಹಾಗೇನಾದರೂ ಅವರು ಪುರೋಹಿತಶಾಹಿ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರೆ ಸಂಯುಕ್ತ ಕರ್ನಾಟಕ ಸಂಪಾದಕ ಸ್ಥಾನದಿಂದ ಹೊರಬರುತ್ತಿರಲಿಲ್ಲ. ಆದರೆ ಅದ್ಯಾಕೆ ರಾಜನ್ರವರ ಪತ್ನಿ ತಮ್ಮ ಅಧಿಕಾರವನ್ನು ಜಾತಿರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ? ಅಕಾಡೆಮಿಯ ಅಧ್ಯಕ್ಷರ ಹಕ್ಕಿನಲ್ಲೂ ತಮ್ಮ ಮೂಗು ತೂರಿಸುತ್ತಿದ್ದಾರೆ. ಸಹಸದಸ್ಯರ ಆಯ್ಕೆಯಲ್ಲಿ ಅನಗತ್ಯವಾಗಿ ಕೋಮುರಾಜಕೀಯ ಮಾಡುತ್ತಿದ್ದಾರೆ?

ಕೋಆಪ್ಟ ಪ್ರಹಸನದಲ್ಲಿ ಬ್ರಾಹ್ಮಣ್ಯದ ಲಾಭಿಯ ಜೊತೆಗೆ ಲಿಂಗಾಯತ ಲಾಭಿಯೂ ಸೇರಿಕೊಂಡುಬಿಟ್ಟಿತು. ಬೆಂಗಳೂರುವಾಸಿ ನಾಟಕ ಅಕಾಡೆಮಿ ಸದಸ್ಯರ ಗಿಲ್ಡ್ ಬ್ರಾಹ್ಮಣ ಕೋಟಾದ ಆಯ್ಕೆ ಮುಗಿದ ಕೂಡಲೇ ಲಿಂಗಾಯತ ಸಮುದಾಯಕ್ಕೆ ಸೇರಿದ ಮುದ್ದಣ್ಣ ರಟ್ಟೇಹಳ್ಳಿ ಗುಡಿಹಳ್ಳಿ ನಾಗರಾಜರ ಬೆನ್ನಿಗೆ ನಿಂತು ಬಿಟ್ಟರು. ಗುಡಿಹಳ್ಳಿ ತಮ್ಮದೇ ಸಮುದಾಯದ ಅಕಾಡೆಮಿ ಸದಸ್ಯ ಹುನುಗುಂದದ ಕೊನೆಸಾಗರರವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಜಾತಿ ಬೆಂಬಲಿಗರ ಪಡೆಯನ್ನು ಗಟ್ಟಿಗೊಳಿಸಿಕೊಂಡರು. ಶೇಖ ಮಾಸ್ತರರ ಬೆಂಬತ್ತಿ ಬೆಂಬಲವನ್ನೂ ಪಡೆದರು. ಶೇಖ ಮಾಸ್ತರ್ ಬಾಕಿ ಸದಸ್ಯರಿಗೆ ಪೋನ್ ಮಾಡಿ ಗುಡಿಹಳ್ಳಿಯವರನ್ನು ಬೆಂಬಲಿಸಲು ಕೇಳಿಕೊಂಡರು. ಇರುವ ಮೂರು ಕೋಆಪ್ಟ್ ಸ್ಥಾನಗಳಲ್ಲಿ ಎರಡು ಪ್ರಭಲ ಕೋಮುಗಳು ಹಂಚಿಕೊಂಡ ನಂತರ ಉಳಿದ ಇನ್ನೊಂದು ಸ್ಥಾನ ಅಕಾಡೆಮಿ ಅಧ್ಯಕ್ಷರಿಗೆ ಬಿಟ್ಟುಕೊಡಲಾಗಿತ್ತು. ಅವರು ಸ್ಥಾನಕ್ಕೆ ಆಯ್ಕೆ ಮಾಡಿದ್ದು ಅವರ ವೃತ್ತಿ ಕಂಪನಿ ಸ್ನೇಹಿತ, ನಾಟಕ ಕಂಪನಿ ಮಾಲೀಕ ಕೊಪ್ಪಳದ ವೀರಯ್ಯ..ರವರನ್ನು. ಹೀಗೆ ಅವರವರ ಸ್ವಾರ್ಥಹಿತಾಸಕ್ತಿಗಾಗಿ ಹಾಗೂ ಜಾತಿಕಾರಣಕ್ಕಾಗಿ ನಡೆದ ಅಕಾಡೆಮಿಯ ಸಹಸದಸ್ಯರ ಆಯ್ಕೆ ಪ್ರಹಸನ ರಂಗಕರ್ಮಿಗಳ ಅಪಹಾಸ್ಯಕ್ಕೆ ಕಾರಣವಾಯಿತು.

ಯಾಕೆಂದರೆ ಈಗಾಗಲೇ ಒಮ್ಮೆ ಅಕಾಡೆಮಿಯ ಸದಸ್ಯರಾಗಿದ್ದವರಿಗೆ ಮತ್ತೊಮ್ಮೆ ಸಹಸದಸ್ಯರಾಗಿಸಿ ಆಯ್ಕೆಮಾಡಿ ಬೇರೆಯವರ ಅವಕಾಶವನ್ನು ಕಿತ್ತುಕೊಂಡಿದ್ದು ಅಕ್ಷಮ್ಯ. ಡಾ.ಶ್ರೀಪಾದ ಭಟ್ರವರ ಪ್ರತಿಭೆಗೆ ತಕ್ಕ ಸ್ಥಾನ ಕೊಡದೇ ಜಾತಿಕಾರಣಕ್ಕೆ ಸಹಸದಸ್ಯರನ್ನಾಗಿಸಿದ್ದು ಪ್ರತಿಭಾವಂತನಿಗೆ ಮಾಡಿದ ಅವಮಾನ. ಜೊತೆಗೆ ಅಕಾಡೆಮಿ ಸದಸ್ಯರ ಪಟ್ಟಿಯಲ್ಲಿ ಯಾವ ಜಿಲ್ಲೆಗೆ ಪ್ರಾತಿನಿಧ್ಯತೆ ದಕ್ಕಿಲ್ಲವೋ ಅಂತಹ ಜಿಲ್ಲೆಗೆ ಅವಕಾಶ ಕೊಡುವ ಬದಲು ಈಗಾಗಲೇ ಸದಸ್ಯರಿರುವ ದಾವಣಗೆರೆ ಹಾಗೂ ಕೊಪ್ಪಳ ಜಿಲ್ಲೆಯವರನ್ನೇ ಸಹಸದಸ್ಯತ್ವಕ್ಕೆ ಆಯ್ಕೆ ಮಾಡಿದ್ದು ಪ್ರಾದೇಶಿಕ ಅಸಮತೋಲನಕ್ಕೆ  ಕಾರಣವಾಯಿತು. ಜೊತೆಗೆ ಈಗಾಗಲೇ ಆಯ್ಕೆಯಾದ ಸದಸ್ಯರ ಜಾತಿಯವರಿಗೆ ಮತ್ತೆ ಅವಕಾಶವನ್ನು ಕೊಟ್ಟಿದ್ದರಿಂದ ಸಾಮಾಜಿಕ ನ್ಯಾಯಕ್ಕೆ ಮಾರಕವಾಯಿತು. ಯಾವ ಸರಕಾರ ಅಲ್ಪಸಂಖ್ಯಾತರಿಗೆ ಅಕಾಡೆಮಿಯ ಅಧ್ಯಕ್ಷತೆ ಕೊಟ್ಟು ತನ್ನ ಸಾಮಾಜಿಕ ಬ್ಯಾಲನ್ಸಿಂಗ್ ಮಾಡಿತ್ತೋ ಅದಕ್ಕೆ ವಿರುದ್ಧವಾಗಿ ಮತ್ತೆ ಪ್ರಭಲ ಕೋಮುಗಳ ವ್ಯಕ್ತಿಗಳನ್ನೇ ಆಯ್ಕೆ ಮಾಡಿ ಸರಕಾರದ ಆಶಯಕ್ಕೆ ಎಳ್ಳುನೀರು ಬಿಡಲಾಯಿತು.

ಮುದ್ದಣ್ಣ
ನಾಟಕ ಅಕಾಡೆಮಿಯ ಬೆಂಗಳೂರುವಾಸಿ ಸದಸ್ಯರುಗಳ ನಾಯಕತ್ವವನ್ನು ವಹಿಸಿಕೊಂಡಿರುವ ಮುದ್ದಣ್ಣ ಸರ್ವಾಧಿಕಾರಿಯ ಹಾಗೇ ವರ್ತಿಸುತ್ತಿರುವುದು ಅವರನ್ನು ಬಲ್ಲವರಿಗೆ ಅಚ್ಚರಿಯ ವಿಷಯವೇನಲ್ಲ. ಯಾಕೆಂದರೆ ಅವರು ದಶಕಗಳಿಂದ ಕೆಲಸಮಾಡುತ್ತಿರುವುದೇ ಕಾರ್ಪೋರೇಟ್ ಸಂಸ್ಕೃತಿಯ ರಂಗಶಂಕರದಲ್ಲಿ. ರಂಗಶಂಕರದಲ್ಲಿ ನಾಟಕ ಮಾಡಿದವರಿಗೆ ಮುದ್ದಣ್ಣನ ಕಮಾಂಡಿಂಗ್ ಬಗ್ಗೆ ಗೊತ್ತಿದ್ದೇ ಇರುತ್ತದೆ. ನಾಟಕದ ನಂತರ ಯಾರಾದರೂ ಪ್ರೇಕ್ಷಕರು ಅಪ್ಪೀ ತಪ್ಪೀ ಕಲಾವಿದರನ್ನು ಅಭಿನಂದಿಸಲೆಂದು ಡಯಾಸ್ ಮೇಲೆ ಕಾಲಿಟ್ಟರೆ ಸಾಕು ಮುದ್ದಣ್ಣ ರೌದ್ರಾವತಾರ ತಾಳಿ ಬೈಗಳುಗಳ ಮೂಲಕ ಅವಮಾನಿಸುತ್ತಾನೆ. ಪ್ರೇಕ್ಷಕರೇ ರಂಗಶಂಕರಕ್ಕೂ ಹಾಗೂ ಮುದ್ದಣ್ಣನವರಿಗೂ ಅನ್ನದಾತರು ಎನ್ನುವುದನ್ನು ಮರೆತು ಅನ್ನದಾತರನ್ನೇ ನಿಷ್ಕೃಷ್ಟವಾಗಿ ಕಾಣುವ ಮುದ್ದಣ್ಣ ಈಗ ಹೆಚ್ಚುವರಿಯಾಗಿ ನಾಟಕ ಅಕಾಡೆಮಿ ಸದಸ್ಯತ್ವವನ್ನು ಹೊಂದಿದ್ದು ಸರ್ವಾಧಿಕಾರಿಗೆ ಎರಡು ಕೋಡು ಮೂಡಿದಂತಾಗಿದೆ. ಅವರ ಹಿನ್ನಲೆಯಲ್ಲಿ ರಂಗೋಪಜೀವಿಗಳ ಒಂದು ಗುಂಪೇ ಇದೆ.

ಕೆಲವು ಸದಸ್ಯರ ಲಾಬಿ ಮಾಡಿಕೊಂಡು ಜಾತಿವಾರು ಸಹಸದಸ್ಯರನ್ನು ಆಯ್ಕೆಮಾಡಿಸಿಕೊಂಡು ಬೀಗುತ್ತಿರುವ ಮುದ್ದಣ್ಣ ಮೇ 12 ನಾಟಕ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ರಂಗಶಂಕರದ ಮಾದರಿಯಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲೂ ಕಂಪಲ್ಸರಿ ನಾಟಕಗಳಿಗೆ ಟಿಕೇಟನ್ನು ಇಡಲೇಬೇಕು.. ಎಂದು ಸರ್ವಾಧಿಕಾರಿ ಧೋರಣೆಯಲ್ಲಿ ತಮ್ಮ ಠರಾವು ಠಳಾಯಿಸಿದರು. ಆದರೆ ರಂಗಶಂಕರ ಎನ್ನುವ ಖಾಸಗಿ ಕಾರ್ಪೋರೇಟ್ ಮಾದರಿ ಸಂಸ್ಥೆಗೂ ಸರಕಾರಿ ಪೋಷಿತ ರವೀಂದ್ರ ಕಲಾಕ್ಷೇತ್ರಕ್ಕೂ ಇರುವ ವ್ಯತ್ಯಾಸವೇ ಅವರಿಗೆ ಗೊತ್ತಿಲ್ಲ. ರವೀಂದ್ರ ಕಲಾಕ್ಷೇತ್ರದಲ್ಲಿ ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜನೆ ತೆಗೆದುಕೊಂಡು ನಾಟಕ ಮಾಡುವವರು ಟಿಕೆಟ್ ಇಡಬಾರದು ಎಂಬ ಕಾನೂನೇ ಇದೆ. ಸಾಮಾನ್ಯ ಜನರಿಗೂ ನಾಟಕ ತಲುಪಬೇಕು ಅದಕ್ಕಾಗಿ ಸರಕಾರಿ ಪ್ರಾಯೋಜನ ನೆರವಾಗಬೇಕು ಎನ್ನುವುದು ಇದರ ಹಿಂದಿರುವ ಸದುದ್ದೇಶ. ರಂಗಶಂಕರದ ಹಾಗೆ ರವೀಂದ್ರ ಕಲಾಕ್ಷೇತ್ರದ ನಿರ್ವಹನೆಗೆ ಬಹುರಾಷ್ಟ್ರೀಯ ಕಂಪನಿಗಳ ಪ್ರಾಯೋಜನ ಮತ್ತು ಹಣ ಬರುವುದಿಲ್ಲ. ರಂಗಶಂಕರದ ಹಾಗೆ ಇಂಗ್ಲೀಷ್ ನಾಟಕಗಳಿಗೆ ಅವಕಾಶಕೊಟ್ಟು ಐಟಿ ಬಿಟಿ ಕಾಲ್ಸೆಂಟರ್ ಪ್ರೇಕ್ಷಕರನ್ನು ಸೆಳೆಯುವ ಅನಿವಾರ್ಯತೆಯೂ ರವೀಂದ್ರ ಕಲಾಕ್ಷೇತ್ರಕ್ಕಿಲ್ಲ. ರಂಗಶಂಕರದ ಹಲವಾರು ಸರ್ವಾಧಿಕಾರಿ ಕಾನೂನುಗಳು ಸರಕಾರಿ ರವೀಂದ್ರ ಕಲಾಕ್ಷೇತ್ರಕ್ಕೆ ಅನ್ವಯಿಸಲು ಸಾಧ್ಯವೇ ಇಲ್ಲ. ಒಬ್ಬ ಸ್ಲಂ ನಲ್ಲಿರುವವ ಕೂಡಾ ರವೀಂದ್ರ ಕಲಾಕ್ಷೇತ್ರದಲ್ಲಿ ಬಂದು ನಾಟಕ ನೋಡಿ ಆನಂದಿಸಬಹುದಾಗಿದೆ. ಆದರೆ ರಂಗಶಂಕರದಲ್ಲಿ ಕೆಳವರ್ಗದವರಿರಲಿ ಮಧ್ಯಮವರ್ಗದವರಿಗೂ ನಾಟಕ ನೋಡಲು ಸಾಧ್ಯವಿಲ್ಲ. ಅದಕ್ಕೆ ನಾಟಕವೊಂದಕ್ಕೆ ನಿಗಧಿಪಡಿಸಲಾಗುವ ನೂರಾರು ರೂಪಾಯಿಯ ಟಿಕೆಟ್ ಬೆಲೆ ಹಾಗೂ ಹಲವಾರು ಕಟ್ಟಳೆಗಳೂ ಕಾರಣವಾಗಿವೆ. ವ್ಯತ್ಯಾಸವನ್ನು ತಿಳಿಯದೆ, ಯಾರಿಗಾಗಿ ನಾಟಕ ಎನ್ನುವ ಮೂಲಭೂತ ಅಗತ್ಯತೆ ಅರಿಯದೇ ಮುದ್ದಣ್ಣ ರಂಗಶಂಕರದ ಮಾದರಿಯನ್ನು ರವೀಂದ್ರ ಕಲಾಕ್ಷೇತ್ರಕ್ಕೆ ಅನ್ವಯಿಸಲು ನೋಡುವುದೇ ಅತಾರ್ಕಿಕ ಸರ್ವಾಧಿಕಾರಿ ನಿಲುವಾಗಿದೆ. ಎಲ್ಲಿ ತನ್ನ ಸರ್ವಾಧಿಕಾರಿ ನಿಲುವು ಹಾಗೂ ಜಾತಿರಾಜಕಾರಣ ಬಯಲಾಗುತ್ತದೋ ಎಂದು ಆತಂಕಗೊಂಡ ಮುದ್ದಣ್ಣ ಸರ್ವಸದಸ್ಯರ ಸಭೆಯ ನಂತರ ಸಭೆಯಲ್ಲಿ ನಡೆದುದನ್ನು ಯಾವ ಸದಸ್ಯರೂ ಹೊರಗೆಲ್ಲೂ ಬಾಯಿಬಿಡಬಾರದು ಎಂದು ತನ್ನದೇ ರೀತಿಯಲ್ಲಿ ಎಲ್ಲರಿಗೂ ಸುಗ್ರೀವಾಜ್ಞೆ ಮಾಡಿದ್ದು ನೋಡಿದರೆ ಮುದ್ದಣ್ಣನ ಮಸ್ತಕದಲ್ಲಿ ಹಿಟ್ಲರ್ ಸವಾರಿಯಾಗಿದ್ದನ್ನು ಖಚಿತಪಡಿಸುವಂತಿದೆ. ಈಗಲೇ ಮುದ್ದಣ್ಣ ಹಾಗೂ ಇತರ ಜಾತಿವಾದಿ ಸದಸ್ಯರು ಹಾಗೂ ರೆಜಿಸ್ಟ್ರಾರ್ಗಳ ಒಳಮರ್ಮ ಅರಿತುಕೊಂಡು ಎಚ್ಚರದಿಂದಿರುವುದು ಇತರೆ ಸದಸ್ಯರ ಅಸ್ತಿತ್ವಕ್ಕೆ ಅಗತ್ಯವಾಗಿದೆ. ಹೀಗೆ ಮುದ್ದಣ್ಣನ ಲಾಬಿ ಗುಂಪಿನ ತಂತ್ರಗಳಿಗೆ ತಲೆಅಲ್ಲಾಡಿಸುತ್ತಿದ್ದರೆ ಮಿಕ್ಕೆಲ್ಲಾ ನಾಟಕ ಅಕಾಡೆಮಿ ಸದಸ್ಯರು ನಾಮಕಾವಾಸ್ತಾ ಇದ್ದೂ ಇಲ್ಲದ ಹಾಗೆ ಇರಬೇಕಾಗುತ್ತದೆ. ಮುದ್ದಣ್ಣನ ಪಡೆ ಸಾವಕಾಶವಾಗಿ ಇಡೀ ಅಕಾಡೆಮಿಯನ್ನೇ ತನ್ನ ಸುಪರ್ಧಿಗೆ ಪಡೆದುಕೊಂಡು ಮುದ್ದಣ್ಣನೇ ಅನಧೀಕೃತ ಅಧ್ಯಕ್ಷನಾಗಿ ಅಧಿಕಾರ ಚಲಾಯಿಸುವುದರಲ್ಲಿ ಸಂದೇಹವಿಲ್ಲ. ಬ್ರಾಹ್ಮನೋ ಬ್ರಹ್ಮಾಂಡ ಪಾತಕಃ, ಜಂಗಮೋ ಜಗದ್ಘಾತಕಃ ಎನ್ನುವ ಜನಸಾಮಾನ್ಯರ ಅನುಭವದ ಮಾತಿನಲ್ಲಿ ಸತ್ಯ ಎಷ್ಟಿದೆ ಎಂದು ಗೊತ್ತಿಲ್ಲ. ಆದರೆ ನಾಟಕ ಅಕಾಡೆಮಿಯಲ್ಲಿ ಮಾತು ನಿಜವಾಗದಿರಲಿ. ಜಾತಿರಾಜಕಾರಣ ಹಾಗೂ ಸರ್ವಾಧಿಕಾರವನ್ನು ಎದುರಿಸುವ ದೈರ್ಯ ಮಿಕ್ಕೆಲ್ಲಾ ಸದಸ್ಯರಿಗೆ ಬರಲಿ.
  
ಹತಗುಂದಿಯವರ ಸಾಮಾಜಿಕ ಬದ್ದತೆ ಹಾಗೂ ಸರ್ವರಿಗೂ ಅಧಿಕಾರದಲ್ಲಿ ಸಮಪಾಲು ಸಿಗಬೇಕು ಎನ್ನುವ ಆಶಯ ಸ್ವಗತಾರ್ಹವೇ ಆಗಿತ್ತು. ಆದರೆ ಅವರು ತಮ್ಮ ಆಶಯದ ಈಡೇರಿಕೆಗೆ ತಪ್ಪು ವ್ಯಕ್ತಿಯನ್ನು ಸೂಚನೆ ಮಾಡುವ ಮೂಲಕ ಮತ್ತೆ ಮೂರು ವರ್ಷಗಳ ಕಾಲ ನಾಟಕ ಅಕಾಡೆಮಿಗೆ ಸೂತಕದ ಛಾಯೆಯನ್ನೇ ಮುಂದುವರೆಸಲು ಪರೋಕ್ಷವಾಗಿ ಕಾರಣರಾದರು ಹಾಗೂ ನಂತರ ಅದಕ್ಕಾಗಿ ಪಶ್ಚಾತ್ತಾಪವನ್ನೂ ಪಟ್ಟರು. ಆದರೆ ಕಾಲ ಮಿಂಚಿ ಹೋಗಿತ್ತು. ಶೇಖ ಮಾಸ್ತರ್ ಅಕಾಡೆಮಿಯ ಅಧ್ಯಕ್ಷಗಾದಿಯನ್ನು ಅಲಂಕರಿಸಿಯಾಗಿತ್ತು. ಹಾಗೂ ತಮ್ಮ ವ್ಯಾಪಾರಿ ವರಸೆಯನ್ನು ಶುರುಹಚ್ಚಿಕೊಂಡಾಗಿತ್ತು. ಈಗಾಗಲೇ ಅಕಾಡೆಮಿಗೆ ಸದಸ್ಯರಾದವರಿಗೆ ಮತ್ತೆ ಅವಕಾಶ ಕೊಡಬೇಡಿ, ಯಾರು ನಿಮಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಬರುವುದನ್ನು ತಪ್ಪಿಸಿದರೋ ಅಂತವರಿಗೆ ಕರೆದು ಮತ್ತೆ ಮಣೆ ಹಾಕಬೇಡಿರಿ. ಜಾತಿರಾಜಕಾರಣಕ್ಕೆ ಮಣಿಯಬೇಡಿರಿ, ಪುಲ್ ಟೈಮ್ ರಂಗಕರ್ಮಿಗಳನ್ನು ಕೋಆಪ್ಟ್ ಮಾಡಿಕೊಂಡು ನಾಟಕ ಅಕಾಡೆಮಿಯನ್ನು ಸಭಲಗೊಳಿಸಿರಿ ಎಂದು ರಂಗಭೂಮಿಯ ಹಿತಾಸಕ್ತಿಗಾಗಿ ರಾಜಶೇಖರ ಹತಗುಂದಿಯವರು ಪರಿಪರಿಯಾಗಿ ಶೇಖಮಾಸ್ತರರನ್ನು ಕೇಳಿಕೊಂಡರು. ಒಂದು ವೇಳೆ ಶೇಖ್ ಮಾಸ್ತರರು ಸ್ಥಾಪಿತ ಹಿತಾಸಕ್ತಿಗಳ ಬಲೆಗೆ ಬಿದ್ದು ಅಕಾಡೆಮಿಯ ಮೇಲಿನ ಹಿಡಿತ ಕಳೆದುಕೊಂಡು ಡೆಮ್ಮಿ ಅಧ್ಯಕ್ಷನಾದರೆ ಶೇಖ್ ಮಾಸ್ತರ್ಗೆ ಅಧ್ಯಕ್ಷಪಟ್ಟ ದಕ್ಕುವುದಕ್ಕೆ ಮೂಲ ಕಾರಣೀಕರ್ತರಾದ ತಾವೇ ಕಾರಣರಾಗುತ್ತೇವೆ ಎಂಬ ಆತಂಕ ಹತಗುಂದಿಯವರದ್ದಾಗಿತ್ತು. ಅದಕ್ಕಾಗಿ ಶೇಖ್ ಮಾಸ್ತರರಿಗೆ ಸರಿಯಾದ ನಿರ್ದಾರಗಳನ್ನು ತೆಗೆದುಕೊಳ್ಳಲು ಅವರು ಹಲವು ಸೂಚನೆಗಳನ್ನು ಆತ್ಮೀಯವಾಗಿ ಕೊಟ್ಟರು.

ಆದರೆ... ಹತಗುಂದಿಯವರ ಮುಂದೆ ಆಯಿತು ಹಾಗೇ ಮಾಡುತ್ತೇನೆ ಎಂದು ಕಳೆದೆರಡು ತಿಂಗಳಿಂದ ಕಾಗೆಹಾರಿಸಿದ ಮಾಸ್ತರರು ಕೊನೆಗೆ ತಮ್ಮ ಅಸಲಿ ಮುಖವಾಡವನ್ನು ತೋರಿಸಿಕೊಟ್ಟರು. ಅಯ್ಯೋ ನಾನೇನು ಮಾಡಲಿ ಮಂತ್ರಿ ಉಮಾಶ್ರೀಯವರು ಮೂರು ಹೆಸರುಗಳನ್ನು ಸೂಚಿಸಿದ್ದಾರೆ. ಅವರ ಮಾತನ್ನು ಕೇಳದಿದ್ದರೆ ನಾಳೆ ಅಕಾಡೆಮಿಗೆ ಅನುದಾನ ಕೊಡದಿರಬಹುದು. ಅದಕ್ಕೆ ಉಮಾಶ್ರೀಯವರು ಹೇಳಿದವರನ್ನು ನಾನು ಕೋಆಪ್ಟ್ ಮಾಡಿಕೊಳ್ಳಬೇಕಾಗಿದೆ ಎಂದು ಶೇಖ ಮಾಸ್ತರ ಕೊನೆಗಳಿಗೆಯಲ್ಲಿ ಹತಗುಂದಿಯವರಿಗೆ ರೀಲ್ ಬಿಡತೊಡಗಿದರು. ಆದರೆ ಯಾವ ಮಂತ್ರಿಣಿಯೂ ಯಾವ ಹೆಸರನ್ನೂ ಸೂಚಿಸಿರಲಿಲ್ಲ. ಅಕಾಡೆಮಿಯ ಮೇ 12 ಸಭೆ ನಿಕ್ಕಿಯಾದ ದಿನವೇ ಮೂರು ಸಹಸದಸ್ಯರ ಹೆಸರುಗಳೂ ಸಹ ಪೈನಲ್ ಆಗಿದ್ದವು. ಅದನ್ನು ನೇರವಾಗಿ ಹೇಳಲಾಗದ ಅದಕ್ಷ ಶೇಖಮಾಸ್ತರ್ ಉಮಾಶ್ರೀಯವರ ಮೇಲೆ ಗೂಬೆಕೂಡಿಸಿ ತಾನು ಒಳ್ಳೆಯವರಾಗಲು ನೋಡಿದರು
 
ಯಾರು ತಮ್ಮನ್ನು ಅಧಿಕಾರದ ಏಣಿಗೆ ಹತ್ತಿಸಿದರೋ ಅಂತಹ ಹತಗುಂದಿಯವರಿಗೆ ಎರಡು ತಿಂಗಳಿಂದ ಆಶ್ವಾಸನೆಗಳನ್ನು ಕೊಡುತ್ತಾ ಬಂದು ಕೊನೆಗಳಿಗೆಯಲ್ಲಿ ಮಾಸ್ತರರು ಸರಿಯಾಗಿ ಕೈಕೊಟ್ಟರು. ಯಾರು ತಮಗೆ ಬರಬಹುದಾದ ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ತಪ್ಪಿಸಿದ್ದರೋ ಅಂತವರನ್ನು ಜೊತೆಗಿರಿಸಿಕೊಂಡರು. ಯಾವ ಸ್ಥಾಪಿತ ಹಿತಾಸಕ್ತಿಗಳು ಶೇಖಮಾಸ್ತರ್ ಅಕಾಡೆಮಿ ಅಧ್ಯಕ್ಷ ಆಗಲೇಬಾರದೆಂದು ಶತಾಯ ಗತಾಯ ಪ್ರಯತ್ನಿಸಿದ್ದರೋ ಅಂತವರ ಅನುಯಾಯಿಗಳ ಮಾತನ್ನು ವೇದವಾಖ್ಯ ಎನ್ನುವಂತೆ ತಿಳಿದು ನಡೆದರು. ಯಾವ ಕಪ್ಪಣ್ಣನವರು ಶೇಖಮಾಸ್ತರರನ್ನು ಮೊದಲಿಂದ ಕೊನೆವರೆಗೂ ವಿರೋಧಿಸಿದ್ದರೋ ಅಂತ ಕಪ್ಪಣ್ಣನವರ ಮನೆಗೆ ಅಕಾಡೆಮಿ ಅಧ್ಯಕ್ಷತೆ ವಹಿಸಿಕೊಂಡ ತಕ್ಷಣ ಹೋಗಿ ಉಂಡು ಆಶೀರ್ವಾದ ಪಡೆದುಕೊಂಡು ಬಂದರು. ಯಾವ ರಾಜಕೀಯ ಸಾಮಾಜಿಕ ಕಳಕಳಿಯ ಕಾರಣಕ್ಕಾಗಿ ಶೇಖ ಮಾಸ್ತರ ಅಧ್ಯಕ್ಷರಾಗಿ ಆಯ್ಕೆಯಾದರೋ ಅದಕ್ಕೆ ವಿರುದ್ದವಾಗಿ ಜಾತಿರಾಜಕಾರಣಕ್ಕೆ ಕಾರಣರಾದರು. ಮೀರ್ಸಾದಿಕ್ತನಾ ಅಂದರೆ ಇದೇನಾ?

ಅಕಾಡೆಮಿಯೊಂದನ್ನು ಮುನ್ನಡೆಸಲು ಬೇಕಾದ ಸಂಘಟನಾ ಸಾಮರ್ಥ್ಯ, ದೂರದರ್ಶಿತ್ವ ಹಾಗೂ ಪ್ರತಿನಿದಿಸುವ ಕ್ಷೇತ್ರದ ಕುರಿತ ಸಮಗ್ರ ಮಾಹಿತಿ ಇರುವವರನ್ನು ಸರಕಾರ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕಾಗಿತ್ತು. ಆದರೆ ಸರಕಾರ ಎನ್ನುವುದು ಯಾವಾಗ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ತನ್ನ ರಾಜಕೀಯ ತಂತ್ರಗಾರಿಕೆಯನ್ನು ಮೆರೆಸುತ್ತದೋ ಆಗ ಅಕಾಡೆಮಿಗಳು ನಿಷ್ಕ್ರೀಯವಾಗುತ್ತವೆ ಎನ್ನುವುದಕ್ಕೆ ಹಿಂದೆ ಬೇಕಾದಷ್ಟು ಉದಾಹರಣೆಗಳಿವೆ. ಸಂಘಪರಿವಾರದಿಂದ ಆಯ್ಕೆಯಾಗಿದ್ದ ಮಾಲತಿ ಸುಧೀರರವರ ಅಕಾಡೆಮಿ ಅಧ್ಯಕ್ಷಗಿರಿಯೇ ಇದಕ್ಕೆ ಮಹತ್ವದ ಸಾಕ್ಷಿಯಾಗಿದೆ. ಮತ್ತೆ ಬಾರಿಯೂ ಸಹ ಅಹಿಂದ ರಾಜಕೀಯದ ತಂತ್ರಗಾರಿಕೆಯ ಭಾಗವಾಗಿ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿರುವ ಶೇಖಮಾಸ್ತರ್ ಅಕಾಡೆಮಿಯನ್ನು ತೇಲಿಸುವ ಬದಲು ಮುಳುಗಿಸುವ ಸಾಧ್ಯತೆಗಳೇ ಹೆಚ್ಚಿವೆ. ಅವರಿಗೆ ಸ್ವಂತ ನಿರ್ಧಾರ ಎನ್ನುವುದು ಇಲ್ಲವೇ ಇಲ್ಲ ಎನ್ನುವುದಕ್ಕೆ ಜಾತಿವಾದಿಗಳ ಒತ್ತಡಕ್ಕೊಳಗಾಗಿ ಪ್ರಬಲ ಜಾತಿಯವರನ್ನು ಸಹಸದಸ್ಯರನ್ನಾಗಿ ಆಯ್ಕೆ ಮಾಡಿರುವುದೇ ಸಾಕ್ಷಿಯಾಗಿದೆ. ಶೇಖ ಮಾಸ್ತರರಿಗೆ ರಂಗಭೂಮಿಯ ಹಿತಾಸಕ್ತಿಗಿಂತ ಸ್ವಂತ ಹಿತಾಸಕ್ತಿಯೇ ಮುಖ್ಯ ಎನ್ನುವುದಕ್ಕೆ ತಮ್ಮ ಸ್ನೇಹಿತ ವೀರಯ್ಯನವರನ್ನು ಕೋಆಪ್ಟ್ ಮಾಡಿ ಯಾವುದೋ ಋಣ ತೀರಿಸಿರುವುದೇ ಆಧಾರವಾಗಿದೆ. ಅಧ್ಯಕ್ಷರಿಗೆ ನಿಜವಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುವವರು ಬೇಕಾಗಿಲ್ಲ, ವೈಚಾರಿಕ ನೆಲೆಯಲ್ಲಿ ಆಲೋಚಿಸುವವರ ಅಗತ್ಯವಿಲ್ಲ, ಪ್ರಶ್ನೆ ಮಾಡುವವರಂತೂ ಒಪ್ಪಿಗೆಯಿಲ್ಲ. ಜೊತೆಗೆ ರಂಗಭೂಮಿಯ ಕುರಿತು ಸಮಗ್ರ ಮಾಹಿತಿಯೂ ಇಲ್ಲ.

ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ಆಗ ತಾನೆ ಅಧ್ಯಕ್ಷರಾಗಿ ಖುರ್ಚಿಯನ್ನು ಅಲಂಕರಿಸಿ ನಾಟಕ ಅಕಾಡೆಮಿಯಲ್ಲಿ ಹೊಸ ಬಿಳಿ ಜುಬ್ಬಾ ಪೈಜಾಮಾ ಹಾಕಿಕೊಂಡು ಡೌಲಿನಿಂದ ಶೇಖ ಮಾಸ್ತರರು ಕುಳಿತಿದ್ದರು. ಆಗ ಅಲ್ಲಿಗೆ ನಮ್ಮ ಖ್ಯಾತ (?) ನಿರ್ದೇಶಕ ಸುರೇಶ ಆನಗಳ್ಳಿಯವರ ಆಗಮನವಾಯಿತು. ನಾನು ಸುರೇಶ ಆನಗಳ್ಳಿ ಎಂದು ಗತ್ತಿನಿಂದಲೇ ನುಡಿದ ವ್ಯಕ್ತಿಯನ್ನು ಮೇಲೆ ಕೆಳಗೆ ನೋಡಿದ ಶೇಖಮಾಸ್ತರರು ಹೌದಾ! ಏನಾಗಬೇಕಾಗಿತ್ತು ನಿಮಗೆ, ಅನುದಾನ ಬೇಕಾಗಿತ್ತಾ? ಎಂದು ಕೇಳಿದರು. ಇಡೀ ಜಗತ್ತಿಗೇ ತನ್ನ ಹಿರಿಮೆ ಗೊತ್ತಿದೆ ಎಂಬ ಭ್ರಮೆಯಲ್ಲಿದ್ದ ಆನಗಳ್ಳಿಗೆ ಶೇಖ ಮಾಸ್ತರ್ ಶಾಕ್ ಕೊಟ್ಟಿದ್ದರು. ನಾನು ಎನ್ಎಸ್ಡಿ ಡೈರೆಕ್ಟರ್ ಸುರೇಶ ಆನಗಳ್ಳಿ ಎಂದು ಒತ್ತಿ ಒತ್ತಿ ಆನಗಳ್ಳಿ ಹೇಳತೊಡಗಿದರು. ಎನ್ಎಸ್ಡಿ ಹೆಸರು ಕೇಳಿದ ಕೂಡಲೇ ಶೇಖ ಶೇಕ್ ಅಗಿ ಗೌರವಕೊಟ್ಟು ಕನಿಷ್ಟ ಕೂತುಕೊಳ್ಳಲಾದರೂ ಹೇಳಬಹುದು ಎನ್ನುವ ಲೆಕ್ಕಾಚಾರ ಆನಗಳ್ಳಿಯದು. ಆದರೆ ಹೌದಾ,! ನಿಮ್ಮದು ಎನ್ಎಸ್ಡಿ ಅನ್ನೋ ರಂಗತಂಡ ಇದೆಯಾ? ಆಯಿತು ನೋಡೋಣ, ಅನುದಾನ ಕೊಡೋಣ? ಎಂದು ಶೇಖ ಮಾಸ್ತರ ಅಮಾಯಕವಾಗಿ ಉತ್ತರಿಸಿದಾಗ ಆರು ಅಡಿಯ ಮನುಷ್ಯ ಆನಗಳ್ಳಿಗೆ ಅವಮಾನದಿಂದಾಗಿ ಭೂಮಿಗಿಳಿದಂತಾಗಿ ಮುಂದೊಂದು ಮಾತನ್ನು  ಆಡದೇ ತನಗಾದ ಅವಮಾನವನ್ನು ಯಾರಾದರೂ ನೋಡಿದರಾ ಎಂದು ಸುತ್ತ ಮುತ್ತ ಗಮನಿಸಿ ಹೊರಟು ಹೋದರು. ಘಟನೆಯಿಂದಾಗಿ ಸುರೇಶ ಆನಗಳ್ಳಿ ಎನ್ನುವ ಸರ್ವಾಧಿಕಾರಿಯ ಗರ್ವಭಂಗವಾಯಿತು ಜೊತೆಗೆ ಆನಗಳ್ಳಿ ಹೊಗಲಿ ಎನ್ಎಸ್ಡಿ ಅಂದರೆ ಏನು ಎನ್ನುವುದು ಗೊತ್ತಿಲ್ಲದಂತಹ ಅದಕ್ಷ ಶೇಖ ಮಾಸ್ತರರ ಅಜ್ಞಾನ ಬಹಿರಂಗವಾಯಿತು.  ಇದು ನಮ್ಮ ಕನ್ನಡ ನಾಡಿನ ರಂಗಭೂಮಿಯ ಹೆಮ್ಮೆಯ ನಾಟಕ ಅಕಾಡೆಮಿಯ ಹಾಲಿ ಅಧ್ಯಕ್ಷರ ಅವಿವೇಕತನಕ್ಕೆ  ರೂಪಕವಾಗಿದೆ.

ಇನ್ನೊಂದು ಉದಾಹರಣೆ ಗಮನಿಸಬಹುದು. ಇತ್ತೀಚೆಗೆ ಶೇಖ ಮಾಸ್ತರರನ್ನು ಕಾರ್ಯಕ್ರಮವೊಂದರಲ್ಲಿ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಅತಿಥಿ ಭಾಷಣ ಮಾಡುತ್ತಾ ಮಾಸ್ತರರು ನಾನು ಒಂದು ನೌಕರಿ ಮಾಡುತ್ತಾ ಸುಖವಾಗಿರಬಹುದಾಗಿತ್ತು, ಆದರೆ ಸುಮ್ಮನಿರಲಾರದೆ ನಾಟಕ ಕಂಪನಿ ಎನ್ನುವ ಮುಳ್ಳು ಚುಚ್ಚುಕೊಂಡು ಪರದಾಡಿದೆ. ಮತ್ತೂ ಸುಮ್ಮನಿರದೇ ಈಗ ನಾಟಕ ಅಕಾಡೆಮಿ ಅಧ್ಯಕ್ಷಗಿರಿ ಎನ್ನುವ ಇನ್ನೊಂದು ಮುಳ್ಳು ಚುಚ್ಚಿಕೊಂಡಿದ್ದೇನೆ.. ಎಂದು ಸಾರ್ವಜನಿಕವಾಗಿ ಅವಲತ್ತುಕೊಂಡರು. ಯಾರು ಹೇಳಿದ್ದು ಮಾಸ್ತರಿಗೆ ಮುಳ್ಳು ಚುಚ್ಚಿಕೊ ಎಂದು. ಅಧ್ಯಕ್ಷಗಿರಿ ಎನ್ನುವ ಮುಳ್ಳು ಚುಚ್ಚಿಕೊಳ್ಳಲು ಇವರ್ಯಾಕೆ ಹೋಗಿ ಮಂತ್ರಿಗಳ ಕಾಲು ಹಿಡಿದುಕೊಂಡರು. ಮುಳ್ಳು ಚುಚ್ಚಿಕೊಳ್ಳುವುದರಲ್ಲೂ ಅದೆಂತಹ ಸಂತಸ, ಸವಲತ್ತು ಇದೆ ಎಂಬುದು ಗೊತ್ತಿದ್ದೇ ತಾನೆ ಮುಳ್ಳನ್ನ ಹುಡುಕಿಕೊಂಡು ಹೋಗಿ ಚುಚ್ಚಿಸಿಕೊಂಡು ಸಂಭ್ರಮಿಸುತ್ತಿರುವುದು. ಇದರಿಂದ ಗೊತ್ತಾಗುತ್ತದೆ ಶೇಖ ಮಾಸ್ತರರ ರಂಗಭೂಮಿಯ ನಿಷ್ಟೆ. ಇವರಿಗೆ ನಾಟಕವೆಂದರೆ , ಅಕಾಡೆಮಿ ಅಧ್ಯಕ್ಷಗಿರಿ ಎಂದರೆ ಮುಳ್ಳಿದ್ದ ಹಾಗೆ. ರಂಗಭೂಮಿಯಿಂದಲೇ ಬದುಕು ಕಟ್ಟಿಕೊಂಡವರು, ನಾಟಕದ ಕೆಲಸಗಳಿಂದಲೇ ಅಕಾಡೆಮಿ ಅಧ್ಯಕ್ಷ ಗೌರವಕ್ಕೆ ಪಾತ್ರವಾದವರು ಹೇಳುವ ಮಾತೆ ಇದು. ಉಂಡ ಮನೆಯ ಜಂತಿ ಹಿರಿಯುವುದೆಂದರೆ ಇದೆನಾ? ಅನ್ನ ಕೊಟ್ಟ ನಾಟಕರಂಗವನ್ನು ಮುಳ್ಳು ಎಂದು ಜರಿಯುವುದು ಸರಿನಾ?

ಸಮಗ್ರ ಕನ್ನಡ ರಂಗಭೂಮಿಯ ಅಭಿವೃದ್ದಿಯ ಉದ್ದೇಶದಿಂದ ಆಯ್ಕೆ ಮಾಡಲಾದ ನಾಟಕ ಅಕಾಡೆಮಿಯ ಹಾಲಿ ಅಧ್ಯಕ್ಷರಿಗೆ ಎನ್ಎಸ್ಡಿ ಅಂದರೆ ಏನು ಗೊತ್ತಿಲ್ಲ. ಡಾ.ಶ್ರೀಪಾದ ಭಟ್ ಅನ್ನುವವರು ಏನು ಮಾಡುತ್ತಾರೆ ಎನ್ನುವ ಅರಿವಿಲ್ಲ. ರಂಗಾಯಣದ ನಿರ್ದೇಶಕರ ಪರಿಚಯವಿಲ್ಲ, ಪ್ರಸನ್ನ ಎಂದರೆ ಯಾರು ಅವರ ಕೊಡುಗೆ ಏನು ಎನ್ನುವ ತಿಳುವಳಿಕೆ ಇಲ್ಲ. ಆಧುನಿಕ ಕನ್ನಡ ರಂಗಭೂಮಿಯ ಐದು ಪ್ರಮುಖ ರಂಗತಂಡಗಳು ಹಾಗೂ ಅದರ ರೂವಾರಿಗಳ ಹೆಸರನ್ನು ಹೇಳಲು ಬರುವುದಿಲ್ಲ. ಆದರೆ ಇದರ ಬದಲಾಗಿ ಅಕಾಡೆಮಿಗೆ ಸರಕಾರದಿಂದ ಬರುವ ಹಣ ಎಷ್ಟು ಎಂದು ಕೇಳಿ ತಟ್ಟನೆ ಉತ್ತರಿಸುತ್ತಾರೆ. ಹಾಗೂ ಎಂಬತ್ತು ಲಕ್ಷ ರೂಪಾಯಿ ಏನೇನಕ್ಕೂ ಸಾಲದು ಎಂದು ಅವಲತ್ತುಕೊಳ್ಳುತ್ತಾರೆ. ಅಕಾಡೆಮಿ ಅಧ್ಯಕ್ಷರಿಗೆ ಸಿಗುವ ಸಂಬಳ ಬತ್ಯೆ ಸವಲತ್ತುಗಳ ಲೆಕ್ಕ ಕೇಳಿ ಇಂಚಿಂಚಾಗಿ ಬಿಡಿಸಿ ಹೇಳುತ್ತಾರೆ. ಇದರಿಂದ ಗೊತ್ತಾಗುತ್ತದೆ ಶೇಖ ಮಾಸ್ತರರ ಬದ್ದತೆ ಯಾವುದಕ್ಕೆ ಎನ್ನುವುದು.  ನಾಟಕ ಅಕಾಡೆಮಿ ನಡೆಸುವುದೆಂದರೆ ಒಂದು ಜಿಲ್ಲಾ ಕೇಂದ್ರದಲ್ಲಿ ನಾಟಕ ಕಂಪನಿ ನಡೆಸಿದಂತಲ್ಲ.

ಶೇಖ ಮಾಸ್ತರರ ಸಂಘಟನಾ ಸಾಮರ್ಥ್ಯಕ್ಕೆ ಇಲ್ಲೊಂದು ಉದಾಹರಣೆ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೇ ತಿಂಗಳ ಕೊನೆಯ ವಾರದಲ್ಲಿ ಎಲ್ಲಾ ಅಕಾಡೆಮಿಗಳನ್ನು ಒಟ್ಟು ಸೇರಿಸಿ ಕಾರ್ಯಕ್ರಮವೊಂದನ್ನು ಮಾಡುವುದೆಂದು ನಿರ್ಧರಿಸಿತು. ಶೇಖ ಮಾಸ್ತರರನ್ನು ಕರೆದು ಪೌರಾಣಿಕ, ಐತಿಹಾಸಿಕ ಹಾಗೂ ಆಧುನಿಕ ನಾಟಕಗಳನ್ನಾಧರಿಸಿದ ಹದಿನೈದು ನಿಮಿಷ ಅವಧಿಯ ಮೂರು ನಾಟಕಗಳ ತುಣುಕಗಳನ್ನು ಪ್ರದರ್ಶಿಸಲು ವ್ಯವಸ್ಥೆ ಮಾಡಲು ಇಲಾಖೆ ಕೇಳಿಕೊಂಡಿತು. ಆದರೆ ಶೇಖ ಮಾಸ್ತರರು ತಲೆ ಹಿಡಿದುಕೊಂಡು ಅಯ್ಯೋ ಇದೊಂದು ಹೆಡೆಕ್ ಕೆಲಸ ಬಂದುಬಿಟ್ಟಿದೆ. ಹೇಗೆ ಆರ್ಗನೈಸ್ ಮಾಡುವುದು. ಮೂರು ಶೈಲಿಯ ನಾಟಕಗಳನ್ನು ಮಾಡುವ ತಂಡಗಳನ್ನು ಎಲ್ಲಿ ಹುಡುಕುವುದು ಎಂದು ಸಿಕ್ಕವರ ಮುಂದೆ ಗೋಳಾಡತೊಡಗಿದರು. ಯಾಕೆಂದರೆ ಅವರಿಗೆ ಬಹುತೇಕ ರಂಗತಂಡಗಳ ಪರಿಚಯವೂ ಇಲ್ಲ. ಯಾವ ರಂಗತಂಡ ಯಾವ ನಾಟಕಗಳನ್ನು ಸಿದ್ದಗೊಳಿಸಿ ಪ್ರದರ್ಶಿಸುತ್ತಿವೆ ಎನ್ನುವುದರ ಕುರಿತು ಅರಿವೂ ಇಲ್ಲ. ಹೀಗಾಗಿ ಇದೊಂದು ಅತೀ ಸಣ್ಣ ಕಾರ್ಯಕ್ರಮ ಆಯೋಜಿಸುವುದಕ್ಕೆ ಹೆಡೆಕ್ ಎಂದು ತಲೆ ಹಿಡಿದು ಕುಳಿತುಕೊಳ್ಳುವ ಸೋ ಕಾಲ್ಡ್ ಅಧ್ಯಕ್ಷರು ಇನ್ನು ಮೂರು ವರ್ಷ ನಾಟಕ ಅಕಾಡೆಮಿಯ ಕಾರ್ಯಕ್ರಮಗಳನ್ನು ಹೇಗೆ ಆಯೋಜಿಸುತ್ತಾರೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.

ಆಧುನಿಕ ರಂಗಭೂಮಿಯ ಕುರಿತು, ಬೆಂಗಳೂರಿನ ರಂಗರಾಜಕೀಯದ ಕುರಿತು, ರಾಜಧಾನಿಯ ಸಾಂಸ್ಕೃತಿಕ ದಲ್ಲಾಳಿ ವರ್ಗದ ಕುರಿತು ಶೇಖ ಮಾಸ್ತರರಿಗೆ ಅರಿವಿಲ್ಲದ್ದನ್ನೇ ಬಳಸಿಕೊಂಡು ನಾಟಕ ಅಕಾಡೆಮಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಜಾತಿವಾದಿಗಳ ಒಂದು ವರ್ಗ ಸಂಘಟಿತರಾಗಿ ಕಾಯುತ್ತಿದೆ. ತಳಸಮುದಾಯದಿಂದ ಬಂದ ಕೆಲವೇ ಕೆಲವು ಅಸಂಘಟಿತ  ಸದಸ್ಯರುಗಳು ಬಲಿತ ವರ್ಗದ ತಂತ್ರಗಳಿಗೆ, ಅಮೋಘ ವಾದಗಳಿಗೆ ಹಾಗೂ ಸಾಂಘಿಕ ಹುನ್ನಾರಗಳಿಗೆ ಬಲಿಯಾಗಿ ಅವರನ್ನು ಎದುರಿಸುವ ಬದಲಾಗಿ ಬೆಂಬಲಿಸುವ ಅನಿವಾರ್ಯತೆಗೊಳಗಾಗಿದ್ದಾರೆ. ಅದಕ್ಷ ಅಧ್ಯಕ್ಷ, ಕೆಲವು ಅವಕಾಶವಾದಿ ಸದಸ್ಯರುಗಳು ಹಾಗೂ ಇನ್ನಿತರ ರಾಜಧಾನಿಯ ರಂಗರಾಜಕೀಯದ ಅರಿವಿಲ್ಲದ ಅಮಾಯಕ ಸದಸ್ಯರುಗಳ ಒಕ್ಕೂಟವಾದ ಹಾಲಿ ಕರ್ನಾಟಕ ನಾಟಕ ಅಕಾಡೆಮಿಯಿಂದ ರಂಗಭೂಮಿಯ ಅಭಿವೃದ್ದಿಯಾಗುವುದು ಅಸಾಧ್ಯವೆನಿಸುತ್ತದೆ. ಮತ್ತದೆ ಸರಕಾರಿ ಹಣದ ಹಂಚಿಕೆ, ಪ್ರಶಸ್ತಿಗಳ ವಿತರಣೆ, ಅನಗತ್ಯ ಕಾರ್ಯಕ್ರಮಗಳ ಆಯೋಜನೆಗಳಲ್ಲೇ ಅಕಾಡೆಮಿ ಮುಳುಗಿ ಹೋಗುವುದರಲ್ಲಿ ಸಂದೇಹವೇ ಇಲ್ಲ. ಅದು ಮುಳುಗದಿದ್ದರೂ ಮುಳುಗಿಸುವವರು ತಮ್ಮ ಸರದಿಗಾಗಿ ಕಾಯುತ್ತಲೇ ಇದ್ದಾರೆ. ಅಕಾಡೆಮಿಯಿಂದ ಸಮಗ್ರ ರಂಗಭೂಮಿ ಬೆಳವಣಿಗೆಗೆ ಸಹಕಾರಿಯಾಗಬಹುದೆಂಬ ನಿರೀಕ್ಷೆ ಬಾರಿಯೂ ಹುಸಿಯಾಗಿದೆ. ಮತ್ತೆ ಮೂರು ವರ್ಷಗಳ ನಂತರ ಯಾರಾದರೂ ದೂರದರ್ಶಿತ್ವ ಇರುವ ರಂಗನಿಷ್ಟ ವ್ಯಕ್ತಿ ನಾಟಕ ಅಕಾಡೆಮಿಗೆ ಅಧ್ಯಕ್ಷನಾಗಿ ಬರಬಹುದೇನೋ ಎನ್ನುವ ಸಣ್ಣ ಆಶಯವೊಂದೇ ರಂಗಕರ್ಮಿಗಳ ಅಪೇಕ್ಷೆಯಾಗಿದೆ.  


                                                  -ಶಶಿಕಾಂತ ಯಡಹಳ್ಳಿ

  








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ