ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿದ್ದ ಮೌಡ್ಯತೆ ಹಾಗೂ ಧಾರ್ಮಿಕ ಶೋಷಣೆಯನ್ನು ಪ್ರತಿರೋಧಿಸಿ ಜನರಲ್ಲಿ ಜಾಗೃತಿಯನ್ನುಂಟುಮಾಡಲು ಬಸವಾದಿ ಶರಣರು ಶ್ರಮಿಸಿದರು. ಅದೊಂದು ಸಾಂಘಿಕ ಶಕ್ತಿಯ ಕ್ರಿಯೆಯಾಗಿತ್ತು. ಅದಕ್ಕೆ ಒಂದು ಹಂತದಲ್ಲಿ ರಾಜಾಶ್ರಯವೂ ಸಿಕ್ಕಿತ್ತು. ಆದರೆ ಸರಿಸುಮಾರು ಅದೇ ಕಾಲಕ್ಕೆ ಸಮಾಜದೊಳಗಿನ ಮೌಡ್ಯತೆ ಹಾಗೂ ತಂತ್ರ ಕುತಂತ್ರಗಳಿಂದ ಅದನ್ನು ಪೋಷಿಸುತ್ತಿರುವ ಪುರೋಹಿತಶಾಹಿಗಳು, ಜಂಗಮರು ಹಾಗೂ ವ್ಯಾಪಾರಿಗಳನ್ನು ವಿರೋಧಿಸಿ ಸಾಮಾಜಿಕ ಬದಲಾವಣೆಗೆ ಏಕಾಂಗಿಯಾಗಿ ಪ್ರಯತ್ನಿಸಿದ ವ್ಯಕ್ತಿ ‘ಮರುಳಸಿದ್ಧ’. ಯಾವುದೇ ಪ್ರಭಲ ಜಾತಿ-ಧರ್ಮ-ರಾಜಾಶ್ರಯದ ಬೆಂಬಲವಿಲ್ಲದೇ ಅತ್ಯಂತ ಕೆಳವರ್ಗದಿಂದ ಬಂದು, ಶ್ರಮಜೀವಿಗಳ ಸಹಕಾರದ ಮೂಲಕ ಜನಪರಿವರ್ತನೆಗೆ ತನ್ನ ಬದುಕನ್ನೇ ಮೀಸಲಿಟ್ಟ ಅದಮ್ಯ ಶಕ್ತಿ ಮರುಳಸಿದ್ಧ. ಅವರ ಬದುಕು ಬವಣೆ ಸಾಧನೆಗಳ ಅರಿವು ಈಗಿನ ಬಹುಜನರಿಗಿಲ್ಲ. ಅವರು ರಚಿಸಿದ್ದರು ಎನ್ನಲಾದ ಯಾವ ವಚನಗಳೂ ಈಗಿಲ್ಲ. ಮರುಳಸಿದ್ಧರ ಕುರಿತು ನಿಖರವಾದ ಮಾಹಿತಿಗಳಿಲ್ಲ. ಆದರೆ ಮರುಳಸಿದ್ದರು ಲೋಕಕಲ್ಯಾಣಕ್ಕಾಗಿ ಸ್ಥಾಪಿಸಿದ ತರಳಬಾಳು ಸದ್ಧರ್ಮ ಪೀಠ ಅವರ ಇರುವಿಕೆಗೆ ಸಾಕ್ಷಿಯಾಗಿದೆ. ರಾಜಯ್ಯನ ರಗಳೆಯಲ್ಲಿ ಅವರು ಅಕ್ಕಮಹಾದೇವಿಗೆ ಶರಣದೀಕ್ಷೆ ಕೊಟ್ಟ ಬಗ್ಗೆ ಪ್ರಸ್ಥಾಪ ಇದೆ. ಮಹಾದೇವ ಬಣಕಾರರು ಕಳೆದ ಶತಮಾನದಲ್ಲಿ ರಚಿಸಿದ ‘ಮರುಳಸಿದ್ಧ ಕಾವ್ಯ’ದಲ್ಲಿ ಮರುಳಸಿದ್ಧರ ಜೀವನ ಕುರಿತು ವಿವರಗಳಿವೆ. ಮರುಳಸಿದ್ಧರನ್ನು ಈಗಿನ ಜನರಿಗೆ ಪರಿಚಯಿಸಿದ್ದು ಅವರ ಕುರಿತ ನಾಟಕ ‘ವಿಶ್ವಬಂಧು ಮರುಳಸಿದ್ಧ’.
ಸಿರಿಗೆರೆಯ ತರಳಬಾಳು ಬ್ರಹನ್ಮಠದ ಈ ಮೂಲ ಪುರುಷ, ತರಳಬಾಳು ಸದ್ಧರ್ಮ ಪೀಠದ ಸಂಸ್ಥಾಪಕರಾದ ಮರುಳಸಿದ್ಧರ ಬದುಕಿನ ಘಟನೆಗಳನ್ನಾಧರಿಸಿ ತರಳಬಾಳು ಶ್ರೀಮಠದ 20ನೇ ಜಗದ್ಗುರುಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ‘ವಿಶ್ವಬಂಧು ಮರುಳಸಿದ್ಧ’ ಎಂಬ ನಾಟಕವನ್ನು ರಚಿಸಿದ್ದರು. ಸಾಣೇಹಳ್ಳಿಯ 2013-14 ರ ಶಿವಸಂಚಾರದ ತಿರುಗಾಟಕ್ಕೆ ಮಾಲತೇಶ ಬಡಿಗೇರರವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ. ರಂಗನಿರಂತರ ಹಾಗೂ ಭಾರತ ಯಾತ್ರಾ ಕೇಂದ್ರವು ಜಂಟಿಯಾಗಿ ಬೆಂಗಳೂರಿನ ಸಂಸ ಬಯಲು ರಂಗ ಮಂದಿರದಲ್ಲಿ ಎಪ್ರಿಲ್ 29 ರಿಂದ ಮೂರು ದಿನಗಳ ಕಾಲ ಆಯೋಜಿಸಿದ ಸಿ.ಆರ್.ಸಿಂಹ ನೆನಪಿನ ‘ಶಿವಸಂಚಾರ’ ನಾಟಕೋತ್ಸವದಲ್ಲಿ 2014 ಮೇ 1 ರಂದು ‘ವಿಶ್ವಬಂಧು ಮರುಳಸಿದ್ಧ’ ನಾಟಕವು ಪ್ರದರ್ಶನಗೊಂಡಿತು.
ಮರುಳಸಿದ್ಧರು ಹುಟ್ಟಿದ್ದು ಮಾದಿಗರ ಮಗನಾಗಿ ಬಳ್ಳಾರಿ ಜಿಲ್ಲೆಯ ಉಜ್ಜಯಿನಿ ಪಕ್ಕದ ಕಗ್ಗಲಪುರ ಗ್ರಾಮದಲ್ಲಿ ಎಂದು ಊಹಿಸಲಾಗಿದೆ. ಅನಾಥವಾದ ಮಗುವನ್ನು ಮಕ್ಕಳಿಲ್ಲದ ಆ ಊರಿನ ಪ್ರಮುಖ ಸಾಕುತ್ತಾನೆ. ಮುಂದೆ ದೊಡ್ಡವನಾದ ಆ ಮಗು ಆ ಊರಿನಲ್ಲಿ ದೇವರ ಹೆಸರಲ್ಲಿ ನಡೆಯುತ್ತಿದ್ದ ಪ್ರಾಣಿಬಲಿಯನ್ನು ವಿರೋಧಿಸಿ ಶೋಷಕರ ಕುತಂತ್ರವನ್ನು ಬಯಲುಮಾಡುತ್ತಾನೆ. ತನ್ನ ಪ್ರಖರವಾದ ವೈಚಾರಿಕ ಮಾತುಗಳಿಂದ ದಲಿತವರ್ಗದವರನ್ನು ಹೆಂಡ, ಮಾಂಸಾಹಾರ ಸೇವನೆಯಿಂದ ಮುಕ್ತರನ್ನಾಗಿಸುತ್ತಾನೆ. ಲೋಕಕಲ್ಯಾಣಕ್ಕಾಗಿ ಊರು ಬಿಟ್ಟು ಚಿತ್ರದುರ್ಗದ ಹತ್ತಿರವಿರುವ ಚಿನ್ಮಯಾದ್ರಿಗೆ ಬಂದು ರೇವಣಸಿದ್ದರಿಂದ ದೀಕ್ಷೆ ಪಡೆಯುತ್ತಾನೆ. ನಂತರ ಗರುವಿನ ಅಪೇಕ್ಷೆಯಂತೆ ನಾಡು,ಕಾಡು,ಮೇಡು ಅಲೆದು ಜನರ ಮೌಡ್ಯ ಹಾಗೂ ಶೋಷಕ ಶಕ್ತಿಗಳ ವಿರುದ್ಧ ತನ್ನ ವಿಚಾರಗಳನ್ನು ಮಂಡಿಸಿ ಜನರಲ್ಲಿ ಜಾಗೃತಿ ಮಾಡುತ್ತಾನೆ. ಇದರಿಂದಾಗಿ ಬ್ರಾಹ್ಮಣರ ವಿರೋಧಕ್ಕೊಳಗಾಗಿ ತೊಂದರೆಗೊಳಗಾಗುತ್ತಾನೆ. ಕೆಲವರನ್ನು ಶಿಷ್ಯರನ್ನಾಗಿಸಿಕೊಳ್ಳುತ್ತಾ ನಿರಂತರ ಅಲೆಮಾರಿಯಾದ ಮರುಳಸಿದ್ಧರು ಕೊಲ್ಲಾಪುರದ ಯುವರಾಣಿ ಮಾಯೆಯ ಮದವನ್ನು ತನ್ನ ತಾತ್ವಿಕ ವಿಚಾರಗಳಿಂದ ಇಳಿಸಿ ಅವಳನ್ನು ವಾದದಲ್ಲಿ ಸೋಲಿಸುತ್ತಾರೆ. ಕೊನೆಗೆ ಹುಟ್ಟಿದ ಊರಿಗೆ ಬಂದು ತರಳಬಾಳು ಸದ್ಧರ್ಮ ಪೀಠ ಸ್ಥಾಪನೆಗಾಗಿ ಸಾಕುತಂದೆಯಿಂದ ಒಂದಿಷ್ಟು ಭೂಮಿಯನ್ನು ಪಡೆದು ತನ್ನ ಶಿಷ್ಯನಾದ ಸಿದ್ದೇಶ್ವರನಿಗೆ ತರಳಬಾಳು ಮಠಕ್ಕೆ ಪೀಠಾಧಿಪತಿಯನ್ನಾಗಿಸುತ್ತಾರೆ. ಇದು ಮರುಳಸಿದ್ದರ ಕುರಿತು ನಂಬಬಹುದಾದ ಸಾಧ್ಯತೆಯಿರುವ ಕಥಾನಕವಾಗಿದೆ.
ಆದರೆ.... ಎಲ್ಲಾ ಸಾಧಕರನ್ನೂ ಪವಾಡ ಪುರುಷರನ್ನಾಗಿಸುವುದು, ದೈವಾಂಶ ಸಂಭೂತರನ್ನಾಗಿಸುವುದು ನಮ್ಮ ಪುರಾಣ ಇತಿಹಾಸಗಳಲ್ಲಿ ಹಾಸುಹೊಕ್ಕಾಗಿದೆ. ಧಾರ್ಮಿಕ ಸಾಧಕರಾಗಿದ್ದರಂತೂ ಅವರಿಗೆ ಅತೀಂದ್ರೀಯ ಶಕ್ತಿಗಳನ್ನು ಆರೋಪಿಸಿ ಇಲ್ಲದ ಕಾಲ್ಪನಿಕ ಕಥೆಗಳನ್ನು ಕಟ್ಟಿ ಅವರ ಕುರಿತು ಭಯ ಭಕ್ತಿಗಳನ್ನು ಹುಟ್ಟಿಸಿ, ದೇವಸ್ಥಾನ ಮಠ ಪೀಠಗಳನ್ನು ಕಟ್ಟಿ ಸ್ಥಾಪಿತ ಹಿತಾಸಕ್ತಿ ಸೃಷ್ಟಿಯಾಗುವುದು ಮನುಕುಲದ ಚರಿತ್ರೆಯಲ್ಲಿ ನಡೆದು ಬಂದ ಪರಂಪರೆಯೇ ಆಗಿದೆ. ಇದಕ್ಕೆ ಬಸವಣ್ಣನಂತಹ ವಿಚಾರವಾದಿಗಳೂ ಹೊರತಾಗಿಲ್ಲ. ಜಂಗಮತ್ವವನ್ನು ಸಾರಿದ ಬಸವಣ್ಣನನ್ನೇ ಸ್ಥಾವರಗೊಳಿಸಿ, ಪವಾಡಪುರುಷನನ್ನಾಗಿಸಿದ್ದು ನಮ್ಮ ಕಣ್ಣಮುಂದೆಯೇ ಇದೆ. ಇನ್ನು ಮರುಳಸಿದ್ಧರನ್ನು ಬಿಡುತ್ತಾರೆಯೇ?. ಅಂತಹುದಕ್ಕೆ ಸಾಕ್ಷಿಯಾಗಿ ‘ವಿಶ್ವಬಂಧು ಮರುಳಸಿದ್ಧ’ ನಾಟಕ ಪ್ರದರ್ಶನ ಮೂಡಿಬಂದಿದೆ. ಐತಿಹಾಸಿಕ ವ್ಯಕ್ತಿಯ ಆಧುನಿಕ ಪುರಾಣವನ್ನು ಈ ನಾಟಕದಲ್ಲಿ ತೋರಿಸಲಾಗಿದೆ. ಐತಿಹಾಸ ಘಟನೆಗೆ ಪುರಾಣ ಕಲ್ಪನೆಯನ್ನು ಸೇರಿಸಲಾಗಿದೆ. ಮರುಳಸಿದ್ದರ ಕುರಿತು ಈ ನಾಟಕದ ಪುರಾಣಸದೃಶ ಪ್ಯಾಂಟಸಿ ಪರಿಕಲ್ಪನೆ ಹೀಗಿದೆ...
ದೇವತೆಗಳು ಲಾಲಿ ಹಾಡಿ ಮಗುವೊಂದನ್ನು ಬಯಲಲ್ಲಿ ಬಿಟ್ಟು ಹೋಗುವುದು ಮಕ್ಕಳಿಲ್ಲದ ಬಾಚನಗೌಡನ ಕನಸಿನಲ್ಲಿ ಗೋಚರಿಸಿ ಆತ ಮನೆಗೆ ಮಗುವನ್ನು ಕರೆತರುತ್ತಾನೆ. ಅದಕ್ಕಾಗಿಯೇ ಕಾಯುತ್ತಿರುವಂತಿದ್ದ ರೇವಣಸಿದ್ದರು ಹುಡುಕಿ ಬಂದು ಕಾರುಣಿಕ ಶಿಶುವಿಗೆ ‘ಮರುಳಸಿದ್ಧ’ ಎಂದು ನಾಮಕರಣ ಮಾಡುತ್ತಾರೆ. ಗೌಡನ ಮನೆಯಲ್ಲಿ ಬೆಳೆದ ಮಗು ಬಾಲಕನಾಗಿ ದನಕಾಯುತ್ತಾ ಶಿವನ ದ್ಯಾನವನ್ನೂ ಮಾಡುತ್ತಾ ಜನರ ಮೌಡ್ಯತೆಯನ್ನು ವಿರೋಧಿಸುತ್ತಾನೆ. ಊರ ಮಾರಿಹಬ್ಬದಂದು ಪ್ರಾಣಿಹಿಂಸೆಯನ್ನು ತಡೆದ ಮರುಳಸಿದ್ಧ ದುಡಿಯುವ ಜನರಲ್ಲಿ ಜಾಗೃತಿ ಮೂಡಿಸಿ ಲೋಕಕಲ್ಯಾಣಕ್ಕಾಗಿ ಊರು ಬಿಟ್ಟು ಚಿನ್ಮಯಾದ್ರಿಗೆ ಗುರುದರ್ಶನಕ್ಕಾಗಿ ಬರುತ್ತಾನೆ. ಗುರು ರೇವಣಸಿದ್ದರು ತಮ್ಮ ದಿವ್ಯ ದೃಷ್ಟಿಯಿಂದ ನೋಡಿತ್ತಾರೆ. “ಕೈಲಾಸದಲ್ಲಿ ಶಿವ ಮತ್ತು ಪಾರ್ವತಿ ತಮ್ಮಿಬ್ಬರಲ್ಲಿ ಯಾರು ಹೆಚ್ಚು ಎಂದು ವಾದಿಸುತ್ತಿರುತ್ತಾರೆ. ‘ಶಕ್ತಿ ಇಲ್ಲದೆ ಶಿವ ಶವ’ ಎಂದು ಪಾರ್ವತಿ ಪತಿಗೆ ಚಾಲೇಂಜ್ ಮಾಡಿ ಅದನ್ನು ಸಾಬೀತುಪಡಿಸಲು ಮಾಯೆಯನ್ನು ಸೃಷ್ಟಿಸಿ ಶಿವಭಕ್ತರನ್ನು ಶಿಕ್ಷಿಸಲು ಮರ್ತ್ಯಲೋಕಕ್ಕೆ ಕಳುಹಿಸಿದ್ದು ತಿಳಿದ ರೇವಣಸಿದ್ದರು ಆ ಮಾಯೆಯ ಸಂಹಾರಕ್ಕೆ ಮರುಳಸಿದ್ದರನ್ನು ಕೊಲ್ಲಾಪುರದತ್ತ ಕಳುಹಿಸುತ್ತಾರೆ. ದಾರಿಯಲ್ಲಿ ಬರುವಾಗ ಬ್ರಾಹ್ಮಣರು ಯಜ್ಞಕ್ಕೆ ಪ್ರಾಣಿಬಲಿ ಕೊಡುವುದನ್ನು ಮರುಳಸಿದ್ದರು ಪ್ರಶ್ನಿಸಿದಾಗ ಶಿಕ್ಷಿಸಲ್ಪಡುತ್ತಾರೆ. ತನ್ನ ಪವಾಡಗಳಿಂದ ಪಾರಾಗಿ ವಿಸ್ಮಯ ಹುಟ್ಟಿಸಿದ ಮರುಳಸಿದ್ದರು ಆಮೇಲೆ ಮೂಕನಿಗೆ ಮಾತು ಬರುವ ಪವಾಡ ಮಾಡಿ ಆ ಮೂಕನನ್ನು ತನ್ನ ಶಿಷ್ಯನನ್ನಾಗಿಸಿಕೊಂಡು ಸಿದ್ದೇಶ್ವರ ಎಂದು ನಾಮಕರಣ ಮಾಡುತ್ತಾರೆ. ಕುಡುಕನನ್ನು ಸ್ಪರ್ಷಮಾತ್ರದಿಂದ ಬದಲಾಯಿಸುತ್ತಾರೆ. ಶಿವಭಕ್ತ ರಾವಿತಂದೆಯ ಜೊತೆಗೆ ಮಾಯಾ ಸಂಹಾರಕ್ಕೆ ಕೊಲ್ಲಾಪುರಕ್ಕೆ ಬರುತ್ತಾರೆ. ಇವರ ಆಗಮನವನ್ನು ತಿಳಿದ ಮಾಯೆ ಕೊಪೋದ್ರಿತಳಾಗುತ್ತಾಳೆ. ಈ ಸತ್ಪುರಷರನ್ನು ತಮ್ಮ ಮೋಹದಲ್ಲಿ ಬೀಳಿಸಿಕೊಂಡು ಬಂಧಿಸಿ ತರಲು ನರ್ತಕಿಯರನ್ನು ಕಳುಹಿಸಿ ವಿಫಲಳಾಗುತ್ತಾಳೆ. ಕೊನೆಗೆ ಮರುಳಸಿದ್ಧರ ಜೊತೆಗೆ ವಾದಕ್ಕಿಳಿಯುತ್ತಾಳೆ. ‘ಆದೇಯಕ್ಕಿಂತ ಆಧಾರವೇ ಮುಖ್ಯ, ಶಕ್ತಿಗಿಂತ ಶಿವನೇ ಮುಖ್ಯ’ ಎಂಬುದನ್ನು ಸಾಬೀತುಪಡಿಸಿ ಮರುಳಸಿದ್ಧರು ಮಾಯೆಯನ್ನು ವಾದದಲ್ಲಿ ಸೋಲಿಸಿ ಆಕೆ ಬಂದಿಸಿಟ್ಟ ಶಿವಭಕ್ತರನ್ನು ಬಿಡುಗಡೆಗೊಳಿಸುತ್ತಾರೆ. ಆನಂತರ ತಮ್ಮ ಹುಟ್ಟೂರಿಗೆ ಬಂದು ಸಾಕುತಂದೆಯಿಂದ ಭೂಮಿದಾನ ಪಡೆದು ತರಳಬಾಳು ಸದ್ಧರ್ಮ ಪೀಠ ಸ್ಥಾಪಿಸಿ ಸಿದ್ಧೇಶ್ವರರನ್ನು ಪೀಠಾಧೀಶರನ್ನಾಗಿಸಿ ತೆರೆಮರೆಗೆ ಸರಿಯುತ್ತಾರೆ. ಇಲ್ಲಿಗೆ ನಾಟಕ ಮುಗಿಯುತ್ತದೆ. ಶ್ರೀಮಠದ ಭಕ್ತಾದಿಗಳಿಗೆ ತಮ್ಮ ಮೂಲಪೂರುಷರ ಪವಾಡಸದೃಶ ದೃಶ್ಯಗಳು ಸಾರ್ಥಕತೆಯನ್ನುಂಟುಮಾಡಿದರೆ, ಶರಣರ ಪ್ರಗತಿಪರ ಚಿಂತನೆಯ ಅರಿವಿದ್ದವರಿಗೆ ಪ್ರಶ್ನೆಗಳನ್ನು ಹುಟ್ಟಿಸುವಲ್ಲಿ ಈ ನಾಟಕ ಸಫಲವಾಗಿದೆ.
ಪುರೋಹಿತಶಾಹಿವರ್ಗ ತಮ್ಮ ಶೋಷಣೆಯನ್ನು ಖಾಯಂಗೊಳಿಸಿಕೊಳ್ಳಲು ಅವತಾರಗಳ ಕಲ್ಪನೆಗಳನ್ನು ಕಟ್ಟಿಕೊಟ್ಟರು. ಅದೇ ರೀತಿಯಲ್ಲಿ ಮರುಳಸಿದ್ದರನ್ನೂ ಸಹ ಅವತಾರ ಪುರುಷನನ್ನಾಗಿ, ಪವಾಡ ಪುರುಷನನ್ನಾಗಿ, ದುಷ್ಟ ಶಕ್ತಿಯ ಸಂವಾರಕನನ್ನಾಗಿ ನಿರೂಪಿಸುವ ನಿಟ್ಟಿನಲ್ಲಿ ಈ ನಾಟಕ ಪ್ರಸ್ತುತಗೊಂಡಿದೆ. ತನ್ನ ಬದುಕಿನುದ್ದಕ್ಕೂ ಪುರೋಹಿತರ ಮೌಡ್ಯತೆಯನ್ನು ವಿರೋಧಿಸಿದ ಮರುಳಸಿದ್ಧರನ್ನೇ ಅವತಾರಪುರುಷರನ್ನಾಗಿ ಚಿತ್ರಿಸಲು ಈ ನಾಟಕ ಪ್ರಯತ್ನಿಸಿದ್ದೊಂದು ವಿಪರ್ಯಾಸ. ಶಿವನಿಗಿಂತ ತಾನು ಮಿಗಿಲು ಎಂಬ ಪಾರ್ವತಿಯ ಅಹಂಕಾರವನ್ನು ನಾಶಗೊಳಿಸಲು ಶಿವ ಮರುಳಸಿದ್ದರನ್ನು ಸೃಷ್ಟಿಸಿದ. ಮರುಳುಸಿದ್ಧ ತನ್ನ ಪವಾಡಗಳಿಂದ ಜನಮಾನಸದಲ್ಲಿ ಹೆಸರಾದ. ಪಾರ್ವತಿಯ ದುರಹಂಕಾರದ ಫಲವಾಗಿ ಹುಟ್ಟಿದ ಮಾಯೆಯನ್ನು ತನ್ನ ಚಾಣಾಕ್ಷತನದಿಂದ ಮಟ್ಟಹಾಕಿದ. ಶಿವಭಕ್ತರನ್ನು ಮಾಯೆಯ ಬಂಧನದಿಂದ ಬಿಡಿಸಿದ ಹಾಗೂ ಪಾರ್ವತಿಯ ಶ್ರೇಷ್ಠತೆಯ ವ್ಯಸನವನ್ನು ನಾಶಮಾಡುವ ಮೂಲಕ ಶಿವನ ಸಾರ್ವಭೌಮತೆಯನ್ನು ಎತ್ತಿ ಹಿಡಿದ ಎಂದು ಸಾಬೀತುಪಡಿಸುವುದೇ ಈ ನಾಟಕದ ಆಶಯವಾಗಿದೆ. ಪುರೋಹಿತಶಾಹಿ ತನ್ನ ಅಸ್ತಿತ್ವಕ್ಕಾಗಿ ಹುಟ್ಟಿ ಹಾಕಿದ ಮೌಡ್ಯತೆಯನ್ನು ವಿರೋಧಿಸುವ ಈ ನಾಟಕವು ಮರುಳಸಿದ್ಧರ ಪವಾಡ ಪುರಾಣದ ಮೂಲಕ ಇನ್ನೊಂದು ಬಗೆಯ ಮೌಡ್ಯತೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ.
ಬಸವಾದಿ ಶರಣರಿಗೂ ಹಾಗೂ ಮರುಳಸಿದ್ಧರಿಗೂ ಯಾವುದೇ ಬಗೆಯ ಸಂಬಂಧವಿಲ್ಲ ಎಂದು ಚರಿತ್ರೆ ಹೇಳುತ್ತದೆ. ಆದರೆ ಪುರೋಹಿತಶಾಹಿಯ ಕರ್ಮಠತನ-ಕಂದಾಚಾರಗಳ ವಿರೋಧ ಹಾಗೂ ಶಿವನ ಮೇಲಿನ ಭಕ್ತಿ ವಿಷಯದಲ್ಲಿ ಸಾಮ್ಯತೆಗಳಿವೆ. ಬಹುಷಃ ತರಳಬಾಳು ಪೀಠಕ್ಕೆ 20ನೇ ಜಗದ್ಗುರುಗಳಾಗಿ ಬಂದ ಶಿವಕುಮಾರ ಸ್ವಾಮಿಗಳು ಶರಣತತ್ವವನ್ನು ಒಪ್ಪಿಕೊಂಡರು, ಬಸವತತ್ವವನ್ನು ಅಪ್ಪಿಕೊಂಡರು. ಅಂದಿನಿಂದ ತರಳಬಾಳು ಸದ್ಧರ್ಮ ಪೀಠ ಶರಣ ಸಂಸ್ಕೃತಿಯ ಮಠವಾಯಿತು. ಯಾವಾಗ ಬಸವಣ್ಣನವರ ಜಂಗಮತ್ವವನ್ನು ಈ ಪೀಠ ಹಿಂಬಾಲಿಸಿತೋ ಆಗ ಈ ಅವಾಸ್ತವ ಪರಿಕಲ್ಪನೆಗಳಿಗೆ ತಿಲಾಂಜಲಿಯನ್ನಿತ್ತಬೇಕಿತ್ತು. ಮರುಳಸಿದ್ಧರನ್ನು ಈ ರೀತಿ ದೈವಾಂಶಸಂಭೂತ ಅವತಾರವನ್ನಾಗಿ ಚಿತ್ರಿಸಬಾರದಿತ್ತು. ಇದೇ ನಾಟಕವನ್ನು ಈ ಹಿಂದೆ ಅಶೋಕ ಬಾದರದಿನ್ನಿ ನಿರ್ದೇಶಿಸಿದ್ದರು. ಅವಾಸ್ತವದ ಪವಾಡ ಹಾಗೂ ಪುರಾಣ ಪರಿಕಲ್ಪನೆಗಳನ್ನು ಬದಿಗಿಟ್ಟು ಮರುಳಸಿದ್ದರ ಮೌಡ್ಯವಿರೋಧಿತನವನ್ನು ನಾಟಕವಾಗಿಸಿದ್ದರು. ಆದರೆ ನಮ್ಮ ಮಾಲತೇಶ ಬಡಿಗೇರರವರಿಗೆ ಮರುಳಸಿದ್ದರು ಅದೆಂತಾ ಮರುಳು ಮಾಡಿದ್ದರೋ ಗೊತ್ತಿಲ್ಲ. ನಿರ್ದೇಶಕರ ಗ್ರಹಿಕೆಗೆ ಮರುಳಸಿದ್ದರು ಮಾಯಾರಾಕ್ಷಸಿಯ ದಮನಕ್ಕೆ ಬಂದ ಶಿವಸಂಜಾತ ಅವತಾರವಾಗಿ ಕಾಣಿಸಿದ್ದಾರೆ. ಅದಕ್ಕಾಗಿ ಇಲ್ಲಿ ಮರುಳಸಿದ್ದ ಮಗುವಾಗಿದ್ದಾಗ ದೇವತೆಗಳು ಜೋಗುಳ ಹಾಡುತ್ತಾರೆ. ಕೈಲಾಸದಲ್ಲಿ ಶಿವದಂಪತಿಗಳು ಹೆಚ್ಚುಗಾರಿಕೆಗಾಗಿ ಕಿತ್ತಾಡುತ್ತಾರೆ, ಮರುಳಸಿದ್ದರು ಬೇಕಾದಷ್ಟು ಪವಾಡಗಳನ್ನು ಮಾಡುತ್ತಾರೆ. ಹಾಗೂ ಪಾರ್ವತಿಯ ಅವತಾರವೇ ಆದ ಮಾಯೆ ರಕ್ಕಸಿಯಾಗುತ್ತಾಳೆ. ಕೊನೆಗೆ ರಕ್ಕಸಿಯ ಸೊಕ್ಕನ್ನು ಅಡಗಿಸಿದ ಮರುಳಸಿದ್ಧರು ಶಿವಮಹಿಮೆಯನ್ನು ಸಾರುತ್ತಾರೆ. ಮರುಳಸಿದ್ಧರು ಪವಾಡಗಳನ್ನು ಸೃಷ್ಟಿಸಿದರೋ ಇಲ್ಲವೋ ಗೊತ್ತಿಲ್ಲ ಆದರೆ ಮಾಲತೇಶರವರು ಮಾತ್ರ ಈ ನಾಟಕದಲ್ಲಿ ಕೆಲವು ಹೆಚ್ಚುವರಿ ಪವಾಡಗಳನ್ನು ಸೃಷ್ಟಿಸಿದ್ದಾರೆ. ಅವುಯಾವವೆಂದರೆ……
ಎಂದೂ ಬ್ರಾಹ್ಮಣರು ಶೂದ್ರರನ್ನು ಮುಟ್ಟಿಸುಕೊಳ್ಳುವುದಿಲ್ಲ. ಆದರೆ ಈ ನಾಟಕದಲ್ಲಿ ಯಾಗ ಮಾಡುತ್ತಿರುವ ಬ್ರಾಹ್ಮಣರು ಶೂದ್ರ ಮರುಳಸಿದ್ದನ ಕೈಕಾಲುಗಳನ್ನು ಕಟ್ಟಿ ತಾವೇ ಹೊತ್ತುಕೊಂಡು ಹೋಗಿ ಸುಣ್ಣದ ಭಟ್ಟಿಯಲ್ಲಿ ಮುಳುಗಿಸಿ ಬಂದು ಮತ್ತೆ ಹೋಮದಲ್ಲಿ ನಿರತರಾಗುತ್ತಾರೆ. ಮಾರಿಹಬ್ಬದಲ್ಲಿ ಪ್ರಾಣಿಬಲಿಏನೋ ಸರಿ ಅದರೆ ನರಬಲಿಯನ್ನು ಕೊಡುವಂತಹ ಪದ್ದತಿ 12ನೇ ಶತಮಾನದಲ್ಲಿ ಆಚರಣೆಯಲ್ಲಿತ್ತಾ? 12ನೇ ಶತಮಾನದಲ್ಲಿ ಬ್ರಾಹ್ಮಣರು ತಮ್ಮ ಯಜ್ಞಕ್ಕೆ ಪ್ರಾಣಿಗಳನ್ನು ಬಲಿಕೊಟ್ಟ ಉದಾಹರಣೆಗಳು ಚರಿತ್ರೆಯಲ್ಲಿಲ್ಲ. ಅವರು ಮಾಂಸಾಹಾರ ತ್ಯಜಿಸಿ ಅದೆಷ್ಟೋ ಶತಮಾನಗಳಾಗಿದ್ದವು. ಆದರೆ ಈ ನಾಟಕದಲ್ಲಿ ಬ್ರಾಹ್ಮಣರು ಯಜ್ಞದಲ್ಲಿ ಪ್ರಾಣಿಗಳನ್ನು ಬಲಿಕೊಡುವುದನ್ನು ತಪ್ಪಿಸಲು ಮರುಳಸಿದ್ಧರು ಬರುತ್ತಾರೆ. ಇದು ನಂಬಲಾರ್ಹವಲ್ಲ. ಯಾವುದೇ ಅಕ್ಷರಾಭ್ಯಾಸವಿಲ್ಲದ ದನಕಾಯುವ ಹುಡುಗ ಮರುಳಸಿದ್ಧ ಈ ನಾಟಕದಲ್ಲಿ ದೊಡ್ಡ ಗ್ರಂಥವನ್ನಿಟ್ಟುಕೊಂಡು ಓದುವುದು
ಹೇಗೆ ಸಾಧ್ಯ? ಮೂಕನಿಗೆ ಮಾತು ಬರಿಸಲಾಗುತ್ತದೆ, ಕುಡುಕನನ್ನು ಮನುಷ್ಯನನ್ನಾಗಿಸಲಾಗುತ್ತದೆ. ಸಾವು ಬಾದಿಸದೇ ಬದುಕಿಸುತ್ತದೆಂಬುದನ್ನು ನಂಬಲು ಕಷ್ಟ. ಪುರಾಣಗಳಲ್ಲಿ ಇಂದ್ರ ಋಷಿಗಳ ತಪಸ್ಸು ಕೆಡಿಸಲು ದೇವಕನ್ಯೆಯರನ್ನು ಕಳುಹಿಸುವಂತೆ ರಕ್ಕಸಿಯೊಬ್ಬಳು ಸಾಧುಗಳನ್ನು ಬಂಧಿಸಲು ರಾಜನರ್ತಕಿಯರನ್ನು ಕಳುಹಿಸಿ ನಾಗಿನ್ ನೃತ್ಯ ಮಾಡಿಸುವುದು ಅಸಹಜವಾಗಿದೆ. ರಾಜ ಮಹಾರಾಜರ ಕಾಲದ ಉಳಿಗಮಾನ್ಯ ವ್ಯವಸ್ಥೆಯಲ್ಲಿ ಬಂಡವಾಳಶಾಹಿ ಪರಿಕಲ್ಪನೆಯೇ ಇರಲಿಲ್ಲ. ಆದರೂ ಈ ನಾಟಕದಲ್ಲಿ ಹಲವಾರು ಬಾರಿ ಬಂಡವಾಳಶಾಹಿಗಳನ್ನು ಎಳೆತರಲಾಗಿದೆ. ‘ಹುಟ್ಟು ಸಾವು ಕರ್ಮಾನುಸಾರ’ ಎಂದು ಮರುಳಸಿದ್ಧರ ಬಾಯಲ್ಲಿ ಹೇಳಿಸಿ ಪುರೋಹಿತರ ಕರ್ಮಸಿದ್ಧಾಂತಕ್ಕೆ ಇಂಬು ಕೊಡಲಾಗಿದೆ. ನರಬಲಿಗಾಗಿ ಕೆಳವರ್ಗದ ಜನರು ಒತ್ತಾಯಿಸುವುದು ಅಸಮಂಜಸವೆನಿಸುತ್ತದೆ. ಮರುಳಸಿದ್ಧರ ಸಾಕುತಂದೆ ಬಾಚನಗೌಡ ಜಾತಿಯಲ್ಲಿ ಗೌಡನಾಗಿದ್ದು ವೃತ್ತಿಯಲಿ ಒಕ್ಕಲಿಗ ಆದರೂ ಆತನಿಗೆ ಲಿಂಗ ಕಟ್ಟಿ ವಿಭೂತಿ ಬಳಿಯಲಾಗಿದೆ....
ಇಂತಹ ಎಂತೆಂತಹಾ ಪವಾಡಗಳನ್ನು ನಿರ್ದೇಶಕರು ತಮಗೆ ತಾವೇ ಕಲ್ಪಿಸಿಕೊಂಡು ಸೃಷ್ಟಿಸಿರುವುದು ಮರುಳಸಿದ್ಧರ ವ್ಯಕ್ತಿತ್ವಕ್ಕೆ ವಿರುದ್ಧವಾದುದಾಗಿವೆ. ಇದು ಪೌರಾಣಿಕ ನಾಟಕವಲ್ಲ ಐತಿಹಾಸಿಕ ನಾಟಕ ಎನ್ನುವುದನ್ನು ನಿರ್ದೇಶಕರು ಅರ್ಥಮಾಡಿಕೊಳ್ಳಬೇಕಿತ್ತು. ಇಲ್ಲವೇ ಪಂಡಿತಾರಾಧ್ಯ ಸ್ವಾಮೀಜಿಗಳು ಅರ್ಥಮಾಡಿಸಬೇಕಾಗಿತ್ತು.
ನಿಜಕ್ಕೂ ಮರುಳಸಿದ್ಧರು ಅತ್ಯಂತ ಕೆಳವರ್ಗದ ಮಾದಿಗ ಜಾತಿಯಿಂದ ಬಂದು ಅನೇಕ ಅಡೆತಡೆಗಳನ್ನು ಮೆಟ್ಟಿನಿಂತು ತಮ್ಮ ಆತ್ಮಸ್ತೈರ್ಯ ಹಾಗೂ ಸ್ವಪ್ರಯತ್ನದಿಂದ ಬೆಳೆದು ಲೋಕಕಲ್ಯಾಣಕ್ಕಾಗಿ, ಮೌಢ್ಯತೆ ನಿವಾರಣೆಗಾಗಿ ಶ್ರಮಿಸಿರುವುದು ಅನನ್ಯವಾದ ಕೆಲಸ. ವಾಮಾಚಾರ ಕಂದಾಚಾರಗಳನ್ನು ಶತಾಯ ಗತಾಯ ವಿರೋಧಿಸಿದ್ದು ಜನಮುಖಿ ನಿಲುವಿಗೆ ಪ್ರತೀಕ, ತಮ್ಮ ಸಮಾಜಮುಖಿ ಕಾರ್ಯಗಳ ಮುಂದುವರಿಕೆಗಾಗಿ ಪೀಠವನ್ನು ಸ್ಥಾಪಿಸಿರುವುದು ಅವರ ದೂರದೃಷ್ಟಿಯ ಸಂಕೇತ. ಕೆಳವರ್ಗದ ದ್ವನಿಕಳೆದುಕೊಂಡ ಜನರ ಪ್ರತಿನಿಧಿಯಾಗಿ ರಾಜಾಶ್ರಿತ ಬ್ರಾಹ್ಮಣ ಮಠಗಳನ್ನೂ ಮೀರಿ ಜನಾಶ್ರಿತ ಪೀಠವನ್ನು ಕಟ್ಟಿದ್ದು ಹೆಮ್ಮೆಯ ವಿಷಯ. ಮರುಳಸಿದ್ದರ ‘ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು’ ಎನ್ನುವ ಚಲನಶೀಲತೆ ಗಮನಸೆಳೆವ ಸಂಗತಿ. ಇಂತಹ ವಿಷಯಗಳ ಕುರಿತು ನಾಟಕವನ್ನು ಕೇಂದ್ರಿಕರಿಸಿದ್ದರೆ ವಾಸ್ತವ ನೆಲೆಗಟ್ಟಿನಲ್ಲಿ ನಾಟಕ ಮೂಡಿಬರಬಹುದಾಗಿತ್ತು. ಆದರೆ ಅವಾಸ್ಥವದ ದಾರಿಯ ಮೂಲಕ ‘ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ರಕ್ಷೆ’ ಎನ್ನುವ ಸನಾತನ ಕಲ್ಪನೆಗೆ ಪೂರಕವಾಗಿ ಪುರಾಣ ಪರಿಕಲ್ಪನೆಗಳನ್ನು ಸೇರಿಸಿ ‘ವಿಶ್ವಬಂಧು ಮರುಳಸಿದ್ಧ’ ನಾಟಕವನ್ನು ಕಟ್ಟಿಕೊಟ್ಟಿದ್ದು ತಾತ್ವಿಕ ದೃಷ್ಟಿಕೋನದಲ್ಲಿ ವಿಪರ್ಯಾಸವೆನಿಸುತ್ತದೆ.
ನಿಜಕ್ಕೂ ಮರುಳಸಿದ್ಧರು ಅತ್ಯಂತ ಕೆಳವರ್ಗದ ಮಾದಿಗ ಜಾತಿಯಿಂದ ಬಂದು ಅನೇಕ ಅಡೆತಡೆಗಳನ್ನು ಮೆಟ್ಟಿನಿಂತು ತಮ್ಮ ಆತ್ಮಸ್ತೈರ್ಯ ಹಾಗೂ ಸ್ವಪ್ರಯತ್ನದಿಂದ ಬೆಳೆದು ಲೋಕಕಲ್ಯಾಣಕ್ಕಾಗಿ, ಮೌಢ್ಯತೆ ನಿವಾರಣೆಗಾಗಿ ಶ್ರಮಿಸಿರುವುದು ಅನನ್ಯವಾದ ಕೆಲಸ. ವಾಮಾಚಾರ ಕಂದಾಚಾರಗಳನ್ನು ಶತಾಯ ಗತಾಯ ವಿರೋಧಿಸಿದ್ದು ಜನಮುಖಿ ನಿಲುವಿಗೆ ಪ್ರತೀಕ, ತಮ್ಮ ಸಮಾಜಮುಖಿ ಕಾರ್ಯಗಳ ಮುಂದುವರಿಕೆಗಾಗಿ ಪೀಠವನ್ನು ಸ್ಥಾಪಿಸಿರುವುದು ಅವರ ದೂರದೃಷ್ಟಿಯ ಸಂಕೇತ. ಕೆಳವರ್ಗದ ದ್ವನಿಕಳೆದುಕೊಂಡ ಜನರ ಪ್ರತಿನಿಧಿಯಾಗಿ ರಾಜಾಶ್ರಿತ ಬ್ರಾಹ್ಮಣ ಮಠಗಳನ್ನೂ ಮೀರಿ ಜನಾಶ್ರಿತ ಪೀಠವನ್ನು ಕಟ್ಟಿದ್ದು ಹೆಮ್ಮೆಯ ವಿಷಯ. ಮರುಳಸಿದ್ದರ ‘ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು’ ಎನ್ನುವ ಚಲನಶೀಲತೆ ಗಮನಸೆಳೆವ ಸಂಗತಿ. ಇಂತಹ ವಿಷಯಗಳ ಕುರಿತು ನಾಟಕವನ್ನು ಕೇಂದ್ರಿಕರಿಸಿದ್ದರೆ ವಾಸ್ತವ ನೆಲೆಗಟ್ಟಿನಲ್ಲಿ ನಾಟಕ ಮೂಡಿಬರಬಹುದಾಗಿತ್ತು. ಆದರೆ ಅವಾಸ್ಥವದ ದಾರಿಯ ಮೂಲಕ ‘ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ರಕ್ಷೆ’ ಎನ್ನುವ ಸನಾತನ ಕಲ್ಪನೆಗೆ ಪೂರಕವಾಗಿ ಪುರಾಣ ಪರಿಕಲ್ಪನೆಗಳನ್ನು ಸೇರಿಸಿ ‘ವಿಶ್ವಬಂಧು ಮರುಳಸಿದ್ಧ’ ನಾಟಕವನ್ನು ಕಟ್ಟಿಕೊಟ್ಟಿದ್ದು ತಾತ್ವಿಕ ದೃಷ್ಟಿಕೋನದಲ್ಲಿ ವಿಪರ್ಯಾಸವೆನಿಸುತ್ತದೆ.
ಬೇರೆ ತಂಡಗಳಿಗೆ ಈ ರೀತಿ ನಾಟಕ ಮಾಡಿಸಿದ್ದರೆ ಅದೊಂದು ರೂಪಕ ಪ್ರಧಾನ ನಾಟಕ, ಖುಷಿಗಾಗಿ ಮಾಡಲಾಗಿದೆ ಎಂದುಕೊಳ್ಳಬಹುದಿತ್ತು. ಆದರೆ ಶರಣ ತತ್ವ ಪ್ರಚಾರವನ್ನೇ ಕಾಯಕ ಮಾಡಿಕೊಂಡಿರುವ ತರಳಬಾಳು ಶಾಖಾಮಠದ ಶಿವಸಂಚಾರವು ಈ ರೀತಿಯ ಅಸಹಜ ವ್ಯಕ್ತಿ ವೈಭವೀಕರಣದ ನಾಟಕವನ್ನು ನಿರ್ಮಿಸಿ ನಾಡಿನಾದ್ಯಂತ ಪ್ರದರ್ಶಿಸುತ್ತಿರುವುದು ವಿಪರ್ಯಾಸವಾಗಿದೆ. ತೋರಿಸುವ ಗುರಿ ಎಷ್ಟು ಮುಖ್ಯವೋ ಅದಕ್ಕಾಗಿ ಹಿಡಿದ ದಾರಿಯೂ ಅಷ್ಟೇ ಮುಖ್ಯವಾಗುತ್ತದೆ. ಪವಾಡಗಳ ಹಾದಿ ಹಿಡಿದು ಮೌಡ್ಯ ವಿರೋಧಿ ಗುರಿಯನ್ನು ಮುಟ್ಟಲಾಗದು.
ಈ ಎಲ್ಲಾ ತಾತ್ವಿಕತೆಯ ವಿಚಾರಗಳನ್ನು ಬಿಟ್ಟು ಕೇವಲ ಪ್ರದರ್ಶನವನ್ನು ಮಾತ್ರ ಗಮನಿಸಿದರೆ ಮಾಲತೇಶ ಬಡಿಗೇರರ ದೃಶ್ಯ ವೈಭವೀಕರಣವನ್ನು ನೋಡುವುದೇ ಒಂದು ಸಂಭ್ರಮ. ಕೈಲಾಸದಲ್ಲಿ ಶಿವಪಾರ್ವತಿಯರ ದೃಶ್ಯ, ಮಾಯೆ ಪಾತ್ರ ವಿಜ್ರಂಭಿಸುವ ಪರಿ, ಓ ಹೋ ಹೋ ಓಂ ನಮಃ ಶಿವಾಯ ಮತ್ತು ಶಂಭೂ ಹರಹರ ಶಂಭೋ ಆಲಾಪಗಳು....
ನೋಡುಗರನ್ನು ಭ್ರಮಾಲೋಕಕ್ಕೆ ಕರೆದುಕೊಂಡು ಹೋಗುವಂತಿದೆ. ಈ ನಾಟಕಕ್ಕೆ ಕಥೆಯ ಚೌಕಟ್ಟಿಲ್ಲ ಆದರೆ ನಿರಂತರ ಚಲನಶೀಲತೆ ಇದೆ. ಘಟನೆಗಳು ಒಂದಾದ ನಂತರ ಒಂದು ನಡೆಯುತ್ತಲೇ ಹೋಗುತ್ತವೆ.
ಮಾಲತೇಶ ಈ ನಾಟಕದಲ್ಲಿ ಪ್ರತಿ ಪಾತ್ರಗಳನ್ನು ಪೋಷಿಸಿದ ರೀತಿ ಹಾಗೂ ಪ್ರತಿ ಪಾತ್ರಕ್ಕೂ ಕಲಿಸಿದ ವಿಶಿಷ್ಟವಾದ ಅಭಿನಯ ಶೈಲಿಗಳು ನೋಡುಗರಲ್ಲಿ ಸಂಚಲನವನ್ನುಂಟು ಮಾಡುತ್ತವೆ. ಜಂಗಮನಾಗಿ ದೀಮಂತ, ಜೋಯಿಶನಾಗಿ ನಿತೀಶಕುಮಾರ, ಶೆಟ್ಟಿಯಾಗಿ ನಾಗೇಶ್ ತಮ್ಮ ವಿಶಿಷ್ಟ ಆಂಗಿಕಾಭಿನಯದಿಂದಾಗಿ ನಗುಉಕ್ಕಿಸುತ್ತಾರೆ. ಬಾಲಕ ರೇವಣಸಿದ್ಧ ಪಾತ್ರದಲ್ಲಿ ಅನಿತಾರ ಅಭಿನಯ ದಿಟ್ಟವಾಗಿದೆ. ಮರುಳಸಿದ್ದರ ಪಾತ್ರದಲ್ಲಿ ಬಿ.ಮಂಜುನಾಥ ಮಾತು ಮತ್ತು ನಟನೆ ಗಮನಸೆಳೆಯುತ್ತದಾದರೂ ಗಾಂಭೀರ್ಯತೆ ಅತಿಯಾದಂತೆನಿಸಿತು. ಬಾಚನಗೌಡನಾಗಿ ಶಂಕರ ಮೇಟ್ರಿ ಹಾಗೂ ರೇವಣಸಿದ್ಧರಾಗಿ ರಮೇಶ ಬಡಿಗೇರರವರ ಅಭಿನಯ ಪಾತ್ರಕ್ಕೆ ಘನತೆಯನ್ನು ತಂದುಕೊಡುವಂತಿವೆ. ಇಡೀ ನಾಟಕದಲ್ಲಿ ತನ್ನ ವಿರಾಟ ನಟನೆ, ಸಂಭಾಷಣೆ ಹಾಗೂ ನೃತ್ಯದ ಮೂಲಕ ಮೆರೆದಿದ್ದು ಮಾಯೆ ಪಾತ್ರದ ಮೀನಾಕ್ಷಿ. ಅಭಿನಯ ವಿಭಾಗದಲ್ಲಿ ಎಲ್ಲಾ ಪಾತ್ರಗಳಲ್ಲೂ ಪೋರ್ಸ ಇತ್ತು. ನಟರಲ್ಲಿರುವ ಪ್ರತಿಭೆಯನ್ನು ನಿರ್ದೇಶಕರು ಚೆನ್ನಾಗಿ ಬಳಸಿಕೊಂಡು ಪಾತ್ರಗಳನ್ನು ಕಟ್ಟಿಕೊಟ್ಟಿದ್ದಾರೆ. ಬ್ಲಾಕಿಂಗ್ ಹಾಗೂ ಮೂವಮೆಂಟ್ಗಳು ಸೊಗಸಾಗಿ ಮೂಡಿಬಂದಿವೆ. ಆದರೆ ಆಗಮನ ನಿರ್ಗಮನಗಳತ್ತ ಇನ್ನೂ ಕಲಾವಿದರು ಗಮನಹರಿಸಬೇಕಿದೆ.
ಸಂಗೀತ ಸಂಯೋಜನೆಯನ್ನೂ ಮಾಡಿದ ಮಾಲತೇಶ ಹಾಡುಗಳು ಜನರ ಎದೆಯನ್ನು ತಟ್ಟುವಂತೆ ಸೃಷ್ಟಿಸಿದ್ದಾರೆ. ಬನ್ನಿ ಬನ್ನಿರೋ....., ಮಜ್ಜಿಗೆ ಆಹಾ ಮಜ್ಜಿಗೆ.. ಮಾಯೆ ಗಂಡಗೆ ಭಿಕ್ಷಾ.....ಮುಂತಾದ ಹಾಡುಗಳು ಕೇಳುಗರ ಎದೆಬಡಿತ ಹೆಚ್ಚಿಸುವಂತಿದ್ದವು. ಆದರೆ ಅದ್ಯಾಕೋ ಹಾಡಿನ ಅಬ್ಬರ ಸ್ವಲ್ಪ ಜಾಸ್ತಿಯಾದಂತೆನಿಸಿ ಮಾಧುರ್ಯ ಮಾಯವಾಯಿತು. ಪ್ರೇಕ್ಷಕರನ್ನು ಉದ್ಧೀಪನಗೊಳಿಸುವುದೇ ಹಾಡು ಮತ್ತು ಸಂಗೀತಗಳ ಉದ್ದೇಶವಾದಂತಿತ್ತು ಹಾಗೂ ಆ ಉದ್ದೇಶದಲ್ಲಿ ಸಫಲವೂ ಆಯಿತು. ಇಡೀ ನಾಟಕದಲ್ಲಿ ಗಮನ ಸೆಳೆದಿದ್ದು ಪ್ರತಿ ದೃಶ್ಯಕ್ಕೆ ಮಾಡಲಾದ ಸೆಟ್. ಪ್ರತಿಯೊಂದು ದೃಶ್ಯವೂ ಒಂದು ಕಲಾಕೃತಿ ಎನ್ನುವ ರೀತಿಯಲ್ಲಿ ರಂಗವಿನ್ಯಾಸವನ್ನು ಮಾಲತೇಶ ಮಾಡಿದ್ದರು. ಕೊಟ್ಟ ಕೊನೆಗೆ ತರಳಬಾಳು ಪೀಠಾರೋಹಣ ದೃಶ್ಯಸೃಷ್ಟಿಯಂತೂ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿ ಅನಿಯಂತ್ರಿತ ಚಪ್ಪಾಳೆಯನ್ನು ಗಿಟ್ಟಿಸಿತು. ದೇವತೆಯ ಮುಖವಾಡ, ಕೋಣದ ಚಿತ್ರಣದಂತಹ ದೊಡ್ಡದಾದ ರಂಗಪರಿಕರಗಳು ನಾಟಕದ ಆಕರ್ಷಣೀಯತೆಯನ್ನು ಹೆಚ್ಚಿಸಿವೆ.
ಪುರೋಹಿತರು, ಜಂಗಮರು, ವ್ಯಾಪಾರಸ್ತರು ಹಾಗೂ ಆಳುವ ಪ್ರಭುತ್ವದ ಜನವಿರೋಧಿ ದೋರಣೆಯನ್ನು ರಂಗದಂಗಳದಲ್ಲಿ ಬೆತ್ತಲು ಮಾಡುವ ಈ ನಾಟಕವು ದುಡಿಯುವ ವರ್ಗಗಳನ್ನು ನಿರಂತರವಾಗಿ ಶೋಷಿಸಲು ಈ ಧರ್ಮ, ದೇವರುಗಳನ್ನು ಹೇಗೆ ಆಳುವ ವರ್ಗಗಳು ದುರುಪಯೋಗಪಡಿಸಿಕೊಂಡು ಜನರಲ್ಲಿ ಮೌಡ್ಯತೆಯನ್ನು ಬಿತ್ತುತ್ತವೆ ಎನ್ನುವುದನ್ನು ಈ ನಾಟಕದಲ್ಲಿ ವಿಡಂಬಣಾತ್ಮಕವಾಗಿ ತೋರಿಸಲಾಗಿದೆ. ಆದರೆ ಪವಾಡ ಮೌಡ್ಯತೆ ಹಾಗೂ ಪುರಾಣ ಕಲ್ಪನೆಗಳನ್ನು ಅಳವಡಿಸಿ ನಾಟಕದ ಆಶಯಕ್ಕೆ ವಿರುದ್ಧವಾಗಿ ನಾಟಕವನ್ನು ನಿರ್ಮಿಸಲಾಗಿದೆ. ರಿಚುವಲ್ ಥೀಯೆಟರ್ ಎಂಬುದು ಶಿವಸಂಚಾರದ ಬಸವ ತತ್ವಗಳ ಹಿನ್ನೆಲೆಯಲ್ಲಿ ರಿಚುವಲ್ ಆಗೇ ಇರಬೇಕೆಂದೇನೂ ಇಲ್ಲ. ಈ ಹಿಂದೆ ಅಲ್ಲಮನ ಕುರಿತು ಶಿವಸಂಚಾರ ನಾಟಕವನ್ನು ನಿರ್ಮಿಸಿದ್ದಾಗ ಪವಾಡ ಪುರುಷ ಅಲ್ಲಮನನ್ನು ಪವಾಡ ರಹಿತ ಅಲ್ಲಮನನ್ನಾಗಿ ತೋರಿಸಲಾಗಿತ್ತು. ಆದ್ದರಿಂದ ರಿಚುವಲ್ ರಂಗಭೂಮಿಯಲ್ಲೂ ಸಹ ಸೈದ್ದಾಂತಿಕತೆಯನ್ನು ತೋರಬಹುದಾಗಿದೆ. ಅದನ್ನು ಶಿವಸಂಚಾರಕ್ಕೆ ನಾಟಕ ನಿರ್ದೇಶಿಸುವ ನಿರ್ದೇಶಕರಿಗೆ ಮನದಟ್ಟು ಮಾಡುವ ಕೆಲಸವನ್ನು ಶಿವಸಂಚಾರದ ರೂವಾರಿಗಳಾದ ಪಂಡಿತಾರಾಧ್ಯರು ಮಾಡಬೇಕಿದೆ.
“ಕಲೆಗಳಿರುವುದು ಕೇವಲ ಲೋಕಕಲ್ಯಾಣಕ್ಕಾಗಿ. ಲೋಕದ ಸ್ಥಿತಿಯನ್ನು ಹದಗೆಡಿಸುವುದಕ್ಕಲ್ಲ. ನಾಟ್ಯಕಲೆಯ ಆದ್ಯ ಪ್ರವರ್ಥಕ ನಟರಾಜ ಪರಶಿವನು ಈ ಕಲೆಯನ್ನು ಮಾನವಕೋಟಿಗೆ ಕರುಣಿಸಿದ್ದು ಮಾನವತೆಯ ಉತ್ಕರ್ಷಕ್ಕೆ ವಿನಃ ಅಪಕರ್ಶಕ್ಕಲ್ಲ” ಎಂದು ಈ ನಾಟಕದಲ್ಲಿ ಮರುಳಸಿದ್ಧರು ಹೇಳುವ ಸಂಭಾಷಣೆಯು ಕಲೆಯನ್ನು ವ್ಯಾಪಾರಿ ಸರಕನ್ನಾಗಿಸಿಕೊಂಡ ಕೆಲವು ಸಾಂಸ್ಕೃತಿಕ ದಲ್ಲಾಳಿಗಳಿಗೆ ಹಾಗೂ ಕಲೆಯ ಹೆಸರಲ್ಲಿ ವಿಕೃತಿಗಳನ್ನೇ ಕಟ್ಟಿಕೊಡುವ ಕೆಲವು ನಿರ್ದೇಶಕರಿಗೆ ಎಚ್ಚರಿಸುವಂತಿದೆ.
ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ರಂಗನಿರಂತರ ರಂಗತಂಡ ಶಶಿಧರ್ ಅಡಪರವರ ನೇತೃತ್ವದಲ್ಲಿ ಆಯೋಜಿಸಿದ್ದ ‘ಶಿವಸಂಚಾರ’ ನಾಟಕೋತ್ಸವವು ನಿಜಾರ್ಥದಲ್ಲಿ ಯಶಸ್ವಿಯಾಯಿತು. ಮೂರೂ ದಿನಗಳ ಕಾಲ ಸಂಸ ಬಯಲು ರಂಗ ಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕಿತು. ನಾಟಕ ಪ್ರದರ್ಶನದ ಆದೇಯಕ್ಕಿಂತ ಪ್ರೇಕ್ಷಕರೆಂಬ ಆಧಾರವೇ ಮುಖ್ಯ ಎನ್ನುವುದನ್ನು ಸಾಬೀತುಪಡಿಸಿತು. ಮರುಳಸಿದ್ಧರ ಪವಾಡವೋ ಏನೋ(?) ಈ ಪ್ರದರ್ಶನದಲ್ಲಿ ಬಂದ ಮಳೆ ಬಂದಂತೆ ಮಾಯವಾಯಿತು. ನಾಟಕ ಪ್ರದರ್ಶನ ಸಾಂಗವಾಯಿತು.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ