ಆತ್ಮೀಯ ಮುದ್ದಣ್ಣ,
ನಿಮಗೂ ಒಂದು ಪತ್ರ ಬರೆಯುವೆನೆಂದು ಅಂದುಕೊಂಡಿರಲಿಲ್ಲ. ಆದರೆ ಅಂತಹ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಮೇ 26 ರಂದು ನಮ್ಮ ಪತ್ರಿಕೆಯ ಬ್ಲಾಗ್ನಲ್ಲಿ ‘ನಾಟಕ ಅಕಾಡೆಮಿಯ ಕೋಆಪ್ಟ್ ರಾಜಕಾರಣ’ದ ಕುರಿತು ಬರೆದಿದ್ದಕ್ಕೆ ನಿಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯಿತು. ‘ಕುಂಬಳಕಾಯಿ ಕಳ್ಳ’ ಎಂದರೆ ಒಬ್ಬನಾದರೂ ಹೆಗಲು ಮುಟ್ಟಿ ನೋಡಿಕೊಂಡು ನಾನು ಕಳ್ಳನಲ್ಲ ಹಾಗೇ ಹೇಳಿದವರೇ ಸರಿಯಿಲ್ಲ’ ಎನ್ನುವ ರೀತಿ ಉತ್ತರಿಸಿದ್ದು ಒಳ್ಳೆಯದೇ ಆಯಿತು. ಹೀಗೆ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಸಂಘರ್ಷದ ನಡುವೆಯೇ ಸತ್ಯ ಹೊರಬರುವುದೆಂದು ನಂಬಿದವನು ನಾನು.
ಪ್ರೀಯ ಮುದ್ದಣ್ಣ, ‘ನಾವು ಹೇಗೆ ಭಾವಿಸುತ್ತೆವೆಯೋ ಎಲ್ಲವೂ ಹಾಗೆಯೇ ಗೋಚರಿಸುತ್ತದೆ’ ಎನ್ನುವ ನಿಮ್ಮ ಸವಕಲು ನುಡಿಗಟ್ಟಿನ ಅನಿಸಿಕೆ ನನಗೆ ಇಷ್ಟವಾಯಿತು. ಆದರೆ ಅದು ನಿಮ್ಮ ಸ್ವಂತ ಅನುಭವದ ಮಾತು. ಎಲ್ಲರಿಗೂ ಅನ್ವಯಿಸುವುದಿಲ್ಲ. ಅದೂ ಪತ್ರಕರ್ತರಿಗಂತೂ ಅನ್ವಯಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಬರಹಗಾರ ಬರೀ ಭಾವಿಸುವುದಿಲ್ಲ ಹಾಗೂ ಭಾವಿಸಿದ್ದನ್ನೆಲ್ಲಾ ಗೋಚರಿಸಿಕೊಂಡು ಬರೆಯುವುದಿಲ್ಲ. ಹಾಗೆ ಬರೆದರೆ ಆತ ಪತ್ರಕರ್ತನಾಗಲೂ ಸಾಧ್ಯವಿಲ್ಲ. ಗೋಚರಿಸಿದ್ದನ್ನು ವಿವೇಚನೆಗೆ ಅಳವಡಿಸಿಕೊಂಡು ವಿಶ್ಲೇಷಿಸಿ ಬರೆಯುವವನು ಪತ್ರಕರ್ತನಾಗಲು ಸಾಧ್ಯ. ಒಬ್ಬ ರಂಗೋಪಜೀವಿ ತನಗೆ ಗೊತ್ತಿಲ್ಲದ ಪತ್ರಿಕಾಧರ್ಮದ ಪಾಠವನ್ನು ವಿಕ್ಷಿಪ್ತವಾಗಿ ಹೇಳುವುದು ವಿತಂಡವಾದವೆನಿಸುತ್ತದೆ ಮುದ್ದಣ್ಣ. ಸಾಕ್ಷಿ ಆಧಾರ ಪುರಾವೆಗಳಿಲ್ಲದೇ ತನಿಖಾ ಪತ್ರಿಕೋಧ್ಯಮದಲ್ಲಿ ಯಾರೂ ಕೆಲಸ ಮಾಡಲು ಸಾಧ್ಯವಿಲ್ಲವಣ್ಣಾ.
ಎಲ್ಲರಿಗೂ ಅವರವರು ಮಾಡುವ ಕೆಲಸದಲ್ಲಿ ಬದ್ದತೆ ಇರುತ್ತದೆ ಹಾಗೂ ಇರಬೇಕು. ಸಮಾಜದ ಬಗ್ಗೆ, ಸಂಸ್ಕೃತಿಯ ಬಗ್ಗೆ ನಿಜವಾದ ಕಳಕಳಿಯಿರುವ ಬರಹಗಾರನಿಗೆ ದ್ವೇಷದಿಂದ ಬರೆಯುವುದು, ವಿಷ ಕಕ್ಕುವುದು, ಅಸಹನೆ ಅಸಮಾಧಾನದಿಂದ ಬರೆಯುವುದು ಸಾಧ್ಯವೇ ಇಲ್ಲ. ‘ಎಲ್ಲೋ ತಪ್ಪಾಗಿದ್ದರೆ ತಪ್ಪಾಗಿದೆ’ ಎಂದು ಬರೆಯುವುದು ಹಾಗೂ ತಿದ್ದಿಕೊಳ್ಳಲು ಪ್ರೇರೇಪಿಸುವುದು ಪತ್ರಕರ್ತನ ಧರ್ಮ ಮತ್ತು ಕರ್ಮ. ನೀನು ಮಾತ್ರವಲ್ಲ ಮುದ್ದಣ್ಣ ಬಹುತೇಕರು ‘ಇದ್ದದ್ದು ಇದ್ದಂತೆ ಬರೆದರೆ ಎದ್ದು ಬಂದು ಎದೆಗೆ ಒದ್ದಂತೆ’ ಎಂದು ಪರಿಭಾವಿಸಿಕೊಂಡು ನಿನ್ನಂತೆಯೇ ವಿಪರೀತವಾಗಿ ಅವಲತ್ತುಕೊಳ್ಳುತ್ತಾರೆ. ಸತ್ಯವನ್ನು ಒಪ್ಪಿಕೊಳ್ಳುವ, ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುವ, ತಪ್ಪು ಮಾಡಿಲ್ಲವೆಂದು ಮನಸ್ಸಾಕ್ಷಿಗೆ ಗೊತ್ತಾದರೆ ನಿರ್ಲಕ್ಷಿಸುವ ಗುಣಗಳು ಕೆಲವೇ ಕೆಲವು ಜನರಿಗೆ ಮಾತ್ರ ಸಾಧ್ಯ. ಅಂತಹ ಗುಣವನ್ನು ಮುದ್ದಣ್ಣನಿಂದ ನಾನು ಅಪೇಕ್ಷಿಸಿದ್ದೆ. ಆದರೆ ಸರ್ವಾಧಿಕಾರಿ ಮನೋಭಾವದ ವ್ಯಕ್ತಿ ಎಂದೂ ಬದಲಾಗಲು ಸಾಧ್ಯವೇ ಇಲ್ಲ ಎಂಬುದನ್ನು ತೋರಿಸಿಕೊಟ್ಟು ನನ್ನ ನಿರೀಕ್ಷೆಯನ್ನು ಗಟ್ಟಿಗೊಳಿಸಿದೆ.
‘ರಂಗಪತ್ರಿಕೆ ಎನ್ನುವ ಅಸ್ತ್ರ ಹಿಡಿದು ಸಾಂಸ್ಕೃತಿಕ ಲೋಕದ ರಾಯಭಾರಿ ಎಂದುಕೊಂಡು ರವೀಂದ್ರ ಕಲಾಕ್ಷೇತ್ರದಲ್ಲಿ ಠಳಾಯಿಸುತ್ತೇನೆ’ ಎಂದು ಆರೋಪ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ ಮುದ್ದಣ್ಣ. ‘ರಂಗಪತ್ರಿಕೆ’ ಎನ್ನುವುದೊಂದು ರಂಗವಿರೋಧಿಗಳ, ಸಾಂಸ್ಕೃತಿಕ ದಲ್ಲಾಳಿಗಳ ವಿರುದ್ದ ಬಳಸಲಾಗುವ ಅಸ್ತ್ರ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಹಾಗೂ ನನ್ನ ಪತ್ರಿಕೆ ಅದನ್ನು ನಿರಂತರವಾಗಿ ಮಾಡುತ್ತದೆ. ಆದರೆ ನಾನೆಂದೂ ಸಾಂಸ್ಕೃತಿಕ ಲೋಕದ ರಾಯಭಾರಿ ಎಂದು ಎಲ್ಲೂ ಹೇಳಿಲ್ಲ ಹಾಗೂ ಬರೆದಿಲ್ಲ. ಸಾಂಸ್ಕೃತಿಕ ಲೋಕದ ರಾಯಭಾರಿ ಎನ್ನುವುದಕ್ಕಿಂತಲೂ ರಂಗಭೂಮಿಯ ಪರಿಚಾರಕ ಎಂದುಕೊಂಡು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ರಂಗನಿಷ್ಟೆಯಿಂದ ಕೆಲಸ ಮಾಡುತ್ತಿರುವುದು ನನ್ನ ಜಾಯಮಾನ. ಇದಕ್ಕಾಗಿ ನಾನು ಯಾವುದೇ ಬಹುರಾಷ್ಟ್ರೀಯ ಕಂಪನಿಗಳ ಕೃಪಾಪೋಷಿತ ಕಾರ್ಪೋರೇಟ್ ಮಾದರಿ ಸಂಸ್ಥೆಗಳಿಂದ ಅನುದಾನ ಪಡೆಯುತ್ತಿಲ್ಲ ಇಲ್ಲವೇ ಸಂಬಳವನ್ನೂ ಪಡೆಯುತ್ತಿಲ್ಲ ಎನ್ನುವುದನ್ನು ನೆನಪಿಸ ಬಯಸುತ್ತೇನೆ. ರಂಗಶಂಕರದ ಆವರಣ ಬಿಟ್ಟು ಬೇರೇನೂ ಗೊತ್ತಿಲ್ಲದ ಮಹಾಮಹಿಮ ಮುದ್ದಣ್ಣ ನಾನು ಕಲಾಕ್ಷೇತ್ರದಲ್ಲಿ ಠಳಾಯಿಸುತ್ತೇನೆ ಎಂಬುದು ನಿಮ್ಮ ಭ್ರಮೆಯಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದಾಗ ಹೊರತು ಪಡಿಸಿ ನಾನು ಕಲಾಕ್ಷೇತ್ರಕ್ಕೂ ಬರುವುದಿಲ್ಲ ಇಲ್ಲವೇ ರಂಗಶಂಕರಕ್ಕೂ ಕಾಲಿಡುವುದಿಲ್ಲ. ನನಗೆ ರಂಗಚಟುವಟಿಕೆಗಳನ್ನು ದಾಖಲಿಸುವುದು ಮುಖ್ಯವೇ ಹೊರತು ಹರಟೆ ಹೊಡೆಯುವುದಾಗಲೀ ಇಲ್ಲವೇ ಸುಮ್ಮನೆ ಠಳಾಯಿಸುವುದಾಗಲೀ ಗೊತ್ತಿಲ್ಲ. ನಿಮಗೆ ಗೊತ್ತಿಲ್ಲದಿದ್ದರೆ ಗೊತ್ತು ಮಾಡಿಕೊಳ್ಳುವುದು ಉತ್ತಮ. ಗೊತ್ತಿಲ್ಲದೇ ಆರೋಪಿಸುವುದು ಮೂರ್ಖತನವೆನ್ನಿಸುತ್ತದೆ.
ಕಲಾಕ್ಷೇತ್ರ ಕೇಂದ್ರಿತ ರಂಗಾಸಕ್ತಿ ನನ್ನದಲ್ಲ. ರಂಗಶಂಕರದ ಆವರಣವನ್ನೇ ರಂಗಜಗತ್ತು ಎಂದುಕೊಳ್ಳುವಂತಹ ಕೂಪಮಂಡೂಕವೂ ನಾನಲ್ಲ. ಇಡೀ ಕನ್ನಡ ರಂಗಭೂಮಿಯ ಬೆಳವಣಿಗೆಯ ಕುರಿತ ಕಾಳಜಿ ಹೊಂದಿ ಎಲ್ಲೆಲ್ಲಿ ರಂಗಚಟುವಟಿಕೆಗಳು ನಡೆಯುತ್ತವೋ ಅಲ್ಲಲ್ಲಿ ಆಹ್ವಾನದ ಮೇಲೆ ಹೋಗಿ ಅವುಗಳನ್ನು ದಾಖಲಿಸಿದ್ದೇನೆ. ಬೇಕಾದರೆ ನನ್ನ ಪತ್ರಿಕೆಯ ಪ್ರಿಂಟೆಂಡ್ ಪ್ರತಿಗಳು ನಿಮ್ಮಲ್ಲಿದ್ದರೆ ಓದಿಕೊಳ್ಳಿ. ಇಲ್ಲದಿದ್ದರೆ ನಾನೇ ಕಳುಹಿಸಿಕೊಡುತ್ತೇನೆ. ಅದು ಸಾಧ್ಯವಾಗದಿದ್ದಲ್ಲಿ ನಮ್ಮ ಪತ್ರಿಕೆಯ ಇಂಟರನೆಟ್ ಬ್ಲಾಗ್ ಆವೃತ್ತಿಯಲ್ಲಿ ಪ್ರಕಟಗೊಂಡ ಲೇಖನಗಳನ್ನು ಓದಿಕೊಂಡರೆ ತಿಳಿಯುತ್ತದೆ ನಾನು ಯಾವಾಗ ಎಲ್ಲೆಲ್ಲಿ ಠಳಾಯಿಸುತ್ತೇನೆ, ಏನನ್ನು ದಾಖಲಿಸುತ್ತೇನೆ ಎಂದು. ‘ಪತ್ರಿಕೆಯ ಮೂಲಕ ನನ್ನ ಕೆಲಸ ಸಾಧಿಸಿಕೊಳ್ಳುತ್ತೇನೆ’ ಎಂದು ಹೇಳುವ ಮುದ್ದಣ್ಣಾ ಪತ್ರಿಕೆಯನ್ನು ನಾನು ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಒಂದಾದರೂ ಸಾಕ್ಷಿ ಇದ್ದರೆ ಹೋಗಿ ತಾರಣ್ಣ. ಯಾರನ್ನಾದರೂ ಬ್ಲಾಕ್ಮೇಲ್ ಮಾಡಿದ್ದೇನಾ? ಯಾರಿಂದಲಾದರೂ ಹಣ ಪಡೆದಿದ್ದೇನಾ? ಇಲ್ಲಿವರೆಗೂ ಯಾವುದಾದರೂ ಅಧಿಕಾರ, ಪ್ರಶಸ್ತಿ ಪಡೆದಿದ್ದೇನಾ? ಪತ್ರಿಕೆ ಬಳಸಿಕೊಂಡು ಸರಕಾರಿ
ಇಲಾಖೆ ಅಕಾಡೆಮಿಗಳಿಂದ ಒಂದೇ ಒಂದು ನಯಾಪೈಸೆ ಪಡೆದಿದ್ದೇನಾ? ನನಗಂತೂ ಗೊತ್ತಿಲ್ಲ, ಒಂಚೂರು ನಿನಗೆ ಗೊತ್ತಿದ್ದರೆ ನನಗೂ ತಿಳಿಸಣ್ಣಾ. ರಂಗಪತ್ರಿಕೆಯ ನಿಷ್ಟುರತೆ ಇಂದಾಗಿ ಕೆಲವು ರಂಗದ್ರೋಹಿಗಳ ವೈರತ್ವವನ್ನು ಸಂಪಾದಿಸಿದ್ದೇನೆಯೇ ಹೊರತು ಇಲ್ಲಿವರೆಗೂ ಏನನ್ನೂ ಪಡೆದಿಲ್ಲ. ಯಾಕೆಂದರೆ ನಾನು ನಿನ್ನ ಹಾಗೆ ರಂಗೋಪಜೀವಿಯಲ್ಲ. ರಂಗಕಾಳಜಿ ಹೊರತು ನನಗೇನು ಗೊತ್ತಿಲ್ಲ.
ನಿನಗೊಂದು ವಿಷಯ ಹೇಳುತ್ತೇನೆ, ಕಿವಿ ಇದ್ದರೆ ಕೇಳು. ನಮ್ಮ ಹವ್ಯಾಸಿ ರಂಗಭೂಮಿಯ ಪರಿಕಲ್ಪನೆಯನ್ನು ಹಾಳುಮಾಡಿದವರೇ ನಿನ್ನಂತ ರಂಗೋಪಜೀವಿಗಳು. ಯಾವುದೋ ಒಂದು ಕಡೆ ನೌಕರಿಯನ್ನು ಮಾಡುತ್ತಾ, ಉಳಿದ ಸಮಯವನ್ನು ರಂಗಕ್ರಿಯೆಗಳಿಗಾಗಿ ಮುಡುಪಿಟ್ಟು, ತಮ್ಮ ಸಂಬಳದ ಒಂದಿಷ್ಟು ಭಾಗವನ್ನು ರಂಗಚಟುವಟಿಕೆಗಳಿಗಾಗಿ ಮೀಸಲಿಟ್ಟು ನಾಟಕವನ್ನು ಕಟ್ಟುವುದು ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಕೊಂಡ ರಂಗಕರ್ಮಿಗಳ ರಂಗನಿಷ್ಟೆಯಾಗಿತ್ತು. ಇದನ್ನು ರಂಗದಿಗ್ಗಜರಾದ ಸಿಜಿಕೆ, ಆರ್.ನಾಗೇಶ... ಮುಂತಾದವರು ರೂಢಿಸಿಕೊಂಡು ಆಧುನಿಕ ಕನ್ನಡ ರಂಗಭೂಮಿಯನ್ನು ಕಟ್ಟಿದರು. ಅವರು ತಮ್ಮ ಸಂಬಳ ಸಮಯ ಸಂಪಾದನೆಯನ್ನು ರಂಗಭೂಮಿಗೆ ಧಾರೆಯೆರೆದರೇ ಹೊರತು ರಂಗಭೂಮಿಯನ್ನು ಅವಲಂಬಿಸಿ ಪರಾವಲಂಬಿಯಾಗಿ ಬದುಕಲಿಲ್ಲ. ಯಾವಾಗ ರಂಗಭೂಮಿಯನ್ನೇ ಸಂಪಾದನೆಯ ದಾರಿಯನ್ನಾಗಿ ನಿನ್ನಂತ ಹಲವು ರಂಗೋಪಜೀವಿಗಳು ಮಾಡಿಕೊಂಡರೋ ಆಗ ಹವ್ಯಾಸಿ ರಂಗಭೂಮಿಯ ಬುಡವೇ ಅಲ್ಲಾಡತೊಡಗಿತು. ತಾವು ಬದುಕಲು, ಜೊತೆಗೆ ತಮ್ಮ ಕುಟುಂಬವನ್ನು ನಿರ್ವಹಿಸಲು ರಂಗಭೂಮಿಯನ್ನು ಆಶ್ರಯಿಸಿದವರು. ಸಕಲ ಅನುಕೂಲತೆಗಳಿಗಾಗಿ ರಂಗಭೂಮಿಯನ್ನೇ ಸಾಧನವಾಗಿಸಿಕೊಂಡರು. ರಂಗಭೂಮಿಗಾಗಿ ಬದುಕುವ ಬದಲು ರಂಗಭೂಮಿಯಲ್ಲೇ ಬದುಕುವ ಮಾರ್ಗವನ್ನು ಕಂಡುಕೊಂಡರು. ಇದರಿಂದಾಗಿ ಎಪ್ಪತ್ತರ-ಎಂಬತ್ತರ ದಶಕದಲ್ಲಿ ಉಚ್ರಾಯ ಸ್ಥಿತಿಯಲ್ಲಿದ್ದ ಆಧುನಿಕ ಹವ್ಯಾಸಿ ಕನ್ನಡ ರಂಗಭೂಮಿ ಬರುಬರುತ್ತಾ ತನ್ನ ತೀವ್ರತೆಯನ್ನು ಕಳೆದುಕೊಂಡಿತು. ಈಗೀಗಲಂತೂ ಸರಕಾರಿ ಅನುದಾನ ಕ್ರಿಯಾಯೋಜನೆಗಳ ಮೇಲೆಯೇ ಅದರ ಅಸ್ತಿತ್ವ ನಿಂತಿದೆಯೆನೋ ಎನ್ನುವಷ್ಟರ ಮಟ್ಟಿಗೆ ಹವ್ಯಾಸಿ ರಂಗಭೂಮಿ ಪರಾವಲಂಬಿಯಾಗಿದೆ. ರಂಗಭೂಮಿಗಾಗಿ ಯಾವ ಪ್ರತಿಫಲಾಕ್ಷೆ ಇಲ್ಲದೇ ದುಡಿಯುವುದು ನಿಸ್ವಾರ್ಥ, ‘ರಂಗಭೂಮಿಯಿಂದಲೇ ಆರ್ಥಿಕ ಲಾಭ ಪಡೆಯುತ್ತೇನೆ, ಕುಟುಂಬ ವರ್ಗವನ್ನು ಸಾಕುತ್ತೇನೆ’ ಎನ್ನುವುದು ಸ್ವಾರ್ಥ. ಹೀಗಾಗಿ ರಂಗೋಪಜೀವಿಗಳಿಂದ ರಂಗಭೂಮಿ ಬೆಳೆಯುವುದು ಕಷ್ಟಸಾಧ್ಯ. ಅಲ್ಲಿ ರಂಗನಿಷ್ಟೆಗಿಂತ ರಂಗಭೂಮಿ ತಂದು ಕೊಡುವ ಲಾಭಗಳೇ ಮುಖ್ಯವಾಗಿರುತ್ತವೆ. ಇದರಿಂದಾಗಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಯೋಜನೆಗಳ ಪ್ರಯೋಜನ ಪಡೆಯಲು ಹಲವರು ಸಾಲುಗಟ್ಟಿದ್ದಾರೆ. ಕಾಲು ಭಾಗ ಖರ್ಚು ಮಾಡಿ ಮುಕ್ಕಾಲು ಭಾಗ ಸರಕಾರಿ ಹಣವನ್ನು ಸ್ವಂತಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರಕಾರದಿಂದ ಸುಳ್ಳು ಲೆಕ್ಕ ತೋರಿಸಿ ಹಣ ಪಡೆದು ಹಲವಾರು ರಂಗೋಪಜೀವಿಗಳು ಕಾರು ಕೊಂಡು ಆಸ್ತಿ ಮಾಡಿಕೊಂಡಿದ್ದಾರೆ.
ಆದರೆ ಮುದ್ದಣ್ಣ, ಇಲ್ಲಿವರೆಗೂ ನಾನು ಯಾವುದೇ ಸರಕಾರಿ ಇಲಾಖೆಗಳಿಂದಾಗಲೀ, ಸರಕಾರಿ ಕೃಪಾಪೋಷಿತ ಅಕಾಡೆಮಿಗಳಿಂದಾಗಲೀ ಹಣ ಪಡೆದಿಲ್ಲ. ನನ್ನ ಸ್ವಂತ ಸಂಪಾದನೆಯ ಒಂದಿಷ್ಟು ಭಾಗವನ್ನು ವ್ಯಯಿಸಿ ರಂಗಚಟುವಟಿಕೆಗಳನ್ನು ಕಳೆದ ಎರಡು ದಶಕಗಳಿಂದ ಮಾಡಿಕೊಂಡು ಬಂದಿದ್ದೇನೆ. ‘ಇಪ್ಟಾ’ ಸಂಘಟನೆಯನ್ನು ಕಟ್ಟುವಲ್ಲಿ ನನಗೆ ಸಾಧ್ಯವಾದಷ್ಟೂ ಶ್ರಮಿಸಿದ್ದೇನೆ. ಕೈಯಿಂದ ಕಾಸು ಹಾಕಿ ರಂಗಪತ್ರಿಕೆಯನ್ನು ನಡೆಸಿದ್ದೇನೆ. ಮೂವತ್ತೆರಡಕ್ಕೂ ಹೆಚ್ಚು ನಾಟಕ-ಬೀದಿನಾಟಕಗಳನ್ನು ಬರೆದು ‘ಇಪ್ಟಾ’ ಸಾಂಸ್ಕೃತಿಕ ಸಂಘಟನೆಯ ಮೂಲಕ ಆಡಿಸಿದ್ದೇನೆ. ಆದರೆ ಯಾವುದೇ ವ್ಯಕ್ತಿಯಿಂದಾಗಲೀ, ಸಂಘ ಸಂಸ್ಥೆಗಳಿಂದಾಗಲೀ, ಸರಕಾರಿ ಇಲಾಖೆಗಳಿಂದಾಗಲೀ ಇಲ್ಲವೇ ಬಹುರಾಷ್ಟ್ರೀಯ ಕಂಪನಿಗಳಿಂದಾಗಲೀ ಎಂದೂ ಹಣಕಾಸಿನ ನೆರವನ್ನು ಪಡೆದಿಲ್ಲ. ಪಡೆಯಲೇ ಬಾರದು ಎಂಬ ಹಠವಿಲ್ಲ. ಆದರೆ ನನಗೆ ಈಗ ಅದರ ಅಗತ್ಯವಿಲ್ಲ. ಯಾಕೆಂದರೆ ರಂಗೋಪಜೀವಿಯಾಗಿ ರಂಗಭೂಮಿಗೆ ಭಾರವಾಗಿ ಬದುಕುವ ಆಸೆ ನನಗಿಲ್ಲ. ಅಕಸ್ಮಾತ್ ನಾನು ರಂಗಭೂಮಿಯಿಂದ ವ್ಯಯಕ್ತಿಕ ಲಾಭ ಮಾಡಿಕೊಂಡಿದ್ದು ನಿಮ್ಮ ಗಮನಕ್ಕೆ ಬಂದಿದ್ದರೆ ಅದನ್ನು ನನಗೆ ಆಧಾರ ಸಮೇತ ತಿಳಿಸಬೇಕಾಗಿ ಕೋರುತ್ತೇನೆ.
‘ಕೈಗೆ ಸಿಗದ ದ್ರಾಕ್ಷಿ ಹುಳಿ’ ಎಂದುಕೊಂಡು ಅಕಾಡೆಮಿಯನ್ನು ಟೀಕಿಸಿದ್ದೇನೆ’ ಎಂದುಕೊಂಡಿದ್ದು ನಿನ್ನ ಇನ್ನೊಂದು ಭ್ರಮೆ ಮುದ್ದಣ್ಣ. ನಾನು ಇದೇ ಮೊದಲೇನಲ್ಲಾ ಅಕಾಡೆಮಿಯನ್ನು, ಅಕಾಡೆಮಿ ಅಧ್ಯಕ್ಷರನ್ನು, ಅಕಾಡೆಮಿಯ ರಂಗರಾಜಕೀಯವನ್ನು ಟೀಕಿಸಿದ್ದು. ಇದರ ಬಗ್ಗೆ ತಿಳಿದುಕೊಳ್ಳಬೇಕಾದರೆ ‘ರಂಗಭೂಮಿ ವಿಶ್ಲೇಷಣೆ’ ಪತ್ರಿಕೆಯ ಹಳೆಯ ಸಂಚಿಕೆಗಳನ್ನು ಓದಿದರೆ ತಿಳಿಯುತ್ತದೆ. ಕಪ್ಪಣ್ಣನವರು ಅಧ್ಯಕ್ಷರಾದಾಗ, ರಾಜಾರಾಂ ರವರು ಅಕಾಡೆಮಿ ಅಧ್ಯಕ್ಷರಾದಾಗ ಪತ್ರಿಕೆ ವಿರೋಧ ಪಕ್ಷದಂತೆ ಕೆಲಸ ಮಾಡಿ ಒಳ್ಳೆಯ ಕೆಲಸಗಳನ್ನು ಬೆಂಬಲಿಸಿದೆ, ಆದ ತಪ್ಪುಗಳನ್ನು ನಿಷ್ಟುರವಾಗಿ ಸಾರ್ವಜನಿಕವಾಗಿ ವಿಶ್ಲೇಷಿಸಿದೆ. ಆದರೆ ಆ ಇಬ್ಬರೂ ಅಧ್ಯಕ್ಷರನ್ನು ಅಕಾಡೆಮಿಯಲ್ಲಿ ನಾನು ಬೆಟ್ಟಿಯಾಗಿದ್ದು ಒಂದೊಂದೆ ಸಲ. ಅದು ಅವರ ಸಂದರ್ಶನ ಪಡೆಯುವಾಗ ಮಾತ್ರ. ನನ್ನ ಗುರುಗಳಾದ ಆರ್. ನಾಗೇಶರವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಒಂದೇ ಒಂದು ಸಲವೂ ಸಹ ಅಕಾಡೆಮಿಯ ಮೆಟ್ಟಲನ್ನು ಹತ್ತಿಲ್ಲ, ಅವರಿಂದ ಸಹಾಯ ಕೇಳಲಿಲ್ಲ. ಆಳುವ ವ್ಯವಸ್ಥೆಗೆ ವಿರೋಧ ಪಕ್ಷದ ರೀತಿಯಲ್ಲಿ ವಿವೇಚನಾಯುಕ್ತವಾಗಿ ಕೆಲಸ ಮಾಡಬೇಕಾದದ್ದು ಪತ್ರಿಕೆಯ ಹಾಗೂ ಪತ್ರಕರ್ತನ ನಿಜವಾದ ಗುಣ. ದ್ರಾಕ್ಷಿ ಹುಳಿನೋ ಸಿಹಿನೋ ಗೊತ್ತಿಲ್ಲ ಆದರೆ ವಿಶ್ಲೇಷಿಸುವುದನ್ನಂತೂ ಬಿಟ್ಟಿಲ್ಲ. ಬಿಡುವುದೂ ಇಲ್ಲ. ರಾಜಿರಹಿತ ಬರವಣಿಗೆಯನ್ನು ನನ್ನ ಗುರುಗಳಾದ ಎ.ಎಸ್.ಮೂರ್ತಿಗಳು ನನಗೆ ಕಲಿಸಿಕೊಟ್ಟಿದ್ದಾರೆ ಹಾಗೂ ಟೀಕಾಸ್ತ್ರವನ್ನು ಹೇಗೆ ರಂಗಭೂಮಿಯ ಬೆಳವಣಿಗೆಗೆ ಪೂರಕವಾಗಿ ಬಳಸಬೇಕು ಎನ್ನುವ ವಿಧ್ಯೆಯನ್ನೂ ಕಲಿಸಿ ಕೊಟ್ಟಿದ್ದಾರೆ. ಅಕಾಡೆಮಿ ಇರಲಿ ಇಲ್ಲವೇ ಅಸೆಂಬ್ಲಿಯೇ ಇರಲಿ. ಎಡವಟ್ಟುಗಳಾದಾಗ ಅದನ್ನು ಬರೆಯುವುದು ಪತ್ರಿಕೆಯ ಧರ್ಮ ಹಾಗೂ ಪತ್ರಕರ್ತನ ಕರ್ಮ ಎನ್ನುವ ಅರಿವು ನನಗಿದೆ ಮುದ್ದಣ್ಣಾ. ಯಾರೋ ಕಟ್ಟಿದ ಹುತ್ತದಲ್ಲಿ ಸೇರಿ ದರ್ಭಾರ್ ಮಾಡುವುದು ನನ್ನ ಜಾಯಮಾನವಲ್ಲವಣ್ಣಾ.
‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡಾ’ ಎಂಬ ಸಾರ್ವಕಾಲಿಕ ನೀತಿಯನ್ನು ಬೋಧಿಸಿದ ಬಸವಣ್ಣನವರ ಧರ್ಮದಲ್ಲಿ ಹುಟ್ಟಿದ ಮುದ್ದಣ್ಣಾ! ಹುಸಿಯ ನುಡಿಯುವುದನ್ನೇ ಯಾಕೆ ಕಾಯಕ ಮಾಡಿಕೊಂಡಿದ್ದೀಯಣ್ಣಾ. ಮೇಲಿಂದ ಮೇಲೆ ಪೋನ್ ಮಾಡಿ ನಿನಗೆ ಒತ್ತಾಯಿಸಿದೆ ಎಂದು ಸುಳ್ಳು ಹೇಳುತ್ತೀಯಲ್ಲಣ್ಣಾ. ಒಂಚೂರು ನಿನ್ನ ಹಾಗೂ ನನ್ನ ಮೊಬೈಲ್ ನಂಬರ್ ಡಿಟೇಲ್ ತಗೆಸಣ್ಣಾ. ನಾನೆಷ್ಟು ಸಲ ನಿನಗೆ ಪೋನ್ ಮಾಡಿದೆ ಎಂದು ತಿಳಿದುಕೊಂಡು ಮಾತಾಡಣ್ಣಾ. ನಾನು ಪೋನ್ ಮಾಡಿದ್ದೇ ಒಂದೇ ಸಲ. ಅದೂ ನೀನು ಬೆಂಗಳೂರು ಮೂಲದ ನಾಟಕ ಅಕಾಡೆಮಿ ಸದಸ್ಯರಾದವರನ್ನು ಸೇರಿಸಿಕೊಂಡು ಸುಚಿತ್ರಾದಲ್ಲಿ ಅನಧೀಕೃತ ಮೀಟಿಂಗ್ ಮಾಡಿದ್ದು ಕೆಲವು ಮೂಲಗಳಿಂದ ನನಗೆ ತಿಳಿದ ಮೇಲೆ ಅದನ್ನು ಕನ್ಪರಂ ಮಾಡಿಕೊಳ್ಳಲು ಕಾಲ್ ಮಾಡಿದ್ದೆ. ನಾನು ಬ್ಲಾಗ್ನಲ್ಲಿ ಬರೆದ ಕೆಲವು ವಿಷಯಗಳನ್ನು ಹೇಳಿದ್ದೂ ಸ್ವತಃ ನೀವೇ ಎಂಬುದಕ್ಕೆ ಸಾಕ್ಷಿಯಾಗಿ ಈಗಲೂ ನಮ್ಮಿಬ್ಬರ ಸಂಭಾಷಣೆಯ ಆಡಿಯೋ ರಿಕಾರ್ಡ ನನ್ನಲ್ಲಿದೆ. ನನಗೆ ಬೇಕಾದ ವಿಷಯವನ್ನು ತಿಳಿದುಕೊಂಡಾದ ಮೇಲೆ ನಾನು ಮತ್ತೆ ಎಂದೂ ಪೋನ್ ಮಾಡಲಿಲ್ಲ. ಅದರ ಅಗತ್ಯವೂ ಇರಲಿಲ್ಲ. ಆ ನಂತರ ನೀನೇ ನನಗೆ ಪೋನ್ ಮಾಡಿ ‘ಸಹಸದಸ್ಯರನ್ನು ಸರಕಾರವೇ ಈಗಾಗಲೇ ನಿಯಮಿಸಿದೆ’ ಎಂದು ಸುಳ್ಳು ಮಾಹಿತಿ ನೀಡಿದ್ದನ್ನೊಂದಿಷ್ಟು ನೆನಪಿಸಿಕೋ ಮುದ್ದಣ್ಣ. ಬೇಕಾದರೆ ಅದಕ್ಕೂ ಸಾಕ್ಷಿ ಕೊಡುತ್ತೇನೆ.
ನಿಜವಾದ ಲಿಂಗಾಯತ ಸುಳ್ಳು ಹೇಳುವುದಿಲ್ಲ ಹೇಳಬಾರದು. ಸುಳ್ಳುಗಳನ್ನು ಹೇಳುವವನು ಲಿಂಗಾಯತ ಧರ್ಮಕ್ಕೆ ಅವಮಾನ. ಅಕಾಡೆಮಿಯ ಸಭೆ ಶುರುವಾಗುವ ದಿನ ‘ನಾನು ನಿನ್ನನ್ನು ಬೇಟಿಯಾಗಿದ್ದೆ ಹಾಗೂ ಅಕಾಡೆಮಿಗೆ ಮುದುಕರನ್ನು ನಿಯಮಿಸಿಕೊಳ್ಳುವುದಕ್ಕಿಂತ ನನ್ನಂತ ಯುವಕರನ್ನು ನಿಯಮಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದೆ’ ಎಂದು ಹೇಳಿದ್ದು ಹಸಿ ಸುಳ್ಳಲ್ಲದೇ ಮತ್ತೇನು?. ಅಲ್ಲಾ ಮುದ್ದಣ್ಣ ನಾವಿಬ್ಬರೂ ಮುಖತಃ ಬೆಟ್ಟಿಯಾಗಿ ಅದೆಷ್ಟು ವರ್ಷಗಳಾಯಿತು ನೆನಪಿಸಿಕೋ. ಸಾಗರ ತಂಡದವರು ರಂಗಶಂಕರದಲ್ಲಿ ನಾಟಕ ಮಾಡಬೇಕೆಂದಾಗ ಅವರ ಪರವಾಗಿ ಬಂದು ರಂಗಶಂಕರದ ಹಣವನ್ನು ಕಟ್ಟುವಾಗ ನಾವಿಬ್ಬರೂ ಕೊನೆಯ ಬಾರಿಗೆ ಬೇಟಿಯಾಗಿದ್ದು. ಆದರೆ ಅಕಾಡೆಮಿ ಸಭೆಗೆ ಮುಂಚೆ ನಾನು ಸಿಕ್ಕಿದ್ದೆ ಎಂದು ಸುಳ್ಳು ಹೇಳುವುದಕ್ಕೆ ನಿಜಕ್ಕೂ ಒಂದಿಷ್ಟು ಬಸವ ಧರ್ಮದಲ್ಲಿ ನಂಬಿಕೆ ಇಟ್ಟಿದ್ದರೆ ನಾಚಿಕೆಯಾಗಬೇಕು. ಹೋಗಲಿ ನಾನು ಮೇ 12 ರಂದು ಅಕಾಡೆಮಿ ಸಭೆಯ ದಿನದಂದು ನಿನ್ನನ್ನು ಬೇಟಿಯಾಗಿದ್ದನ್ನು ನೋಡಿದವರು ಯಾರಾದರೂ ಇದ್ದರೆ ಅವರ ಹೆಸರನ್ನು ತಿಳಿಸಲು ಸಾಧ್ಯವಾ? ಹೋಗಲಿ ಅಕಾಡೆಮಿಯ ಕೆಲವು ಸದಸ್ಯರನ್ನು ನಾನು ಮುದುಕರು ವಯಸ್ಸಾದವರು ಎಂದು ನಿಂದಿಸಿದ್ದಕ್ಕೆ ಸಣ್ಣದೊಂದು ಸಾಕ್ಷಿಯನ್ನು ಒದಗಿಸಿಕೊಡಲು ಸಾಧ್ಯವಾ? ಆರೋಪ ಮಾಡುವುದು ಸುಲಭ. ಆದರೆ ಸುಳ್ಳು ಆರೋಪಗಳಿಗೆ ಆಧಾರವನ್ನು ಒದಗಿಸುವುದು ಅಸಾಧ್ಯ. ಬೇಕಾದರೆ ನನ್ನನ್ನು ಕೇಳು ನಾನು ಬರೆದಿರುವ ಲೇಖನದಲ್ಲಿ ಮಾಡಲಾದ ಎಲ್ಲಾ ಟೀಕೆ ಟಿಪ್ಪಣಿಗಳಿಗೆ ಸೂಕ್ತ ಆಧಾರವನ್ನು ನಾನು ಒದಗಿಸುತ್ತೇನೆ.
‘ಅಕಾಡೆಮಿಯ ಸಭೆಯಲ್ಲಿ ಕಿವಿ ನೆಟ್ಟುಕೊಳ್ಳುವ ಚಾಳಿ’ ನನಗಿದೆ ಎಂದು ಆರೋಪಿಸಿರುವ ಮುದ್ದಣ್ಣ, ಅಕಾಡೆಮಿ ಯಾರಪ್ಪನ ಸೊತ್ತಣ್ಣ. ಅದೊಂದು ಸಾರ್ವಜನಿಕರ ಹಣದಿಂದ ನಡೆಯುವ ಸರಕಾರಿ ಕೃಪಾಪೋಷಿತ ಸಂಸ್ಥೆಯಾಗಿದೆ. ಅಲ್ಲಿ ನಡೆಯುವ ಎಲ್ಲವೂ ಕೂಡಾ ಸಾರ್ವಜನಿಕರಿಗೆ ತಿಳಿಯಬೇಕಿದೆ. ಹಾಗೂ ಯಾವುದೇ ಸರಕಾರಿ ಇಲಾಖೆ ಮತ್ತು ಸಂಸ್ಥೆಗಳು ಯಾವುದೇ ರಹಸ್ಯ ಕಾರಾಚರಣೆ ಮಾಡುವಂತಿಲ್ಲ. ಹಾಗೆ ಯಾರಿಗೂ ತಿಳಿಯದಂತೆ ರಹಸ್ಯ ಚಟುವಟಿಕೆಗಳನ್ನು ಮಾಡುವವರನ್ನು ಬೆತ್ತಲು ಗೊಳಿಸಲೆಂದೇ ಆರ್ಟಿಐ ಕಾಯಿದೆ ರೂಪಗೊಂಡಿರುವುದು. ತಿಳಿಯದಿದ್ದರೆ ತಿಳಿದುಕೋ ಮುದ್ದಣ್ಣ ಪತ್ರಿಕೆಗಳು ಇರುವುದೇ ಯಾವುದೇ ರೀತಿಯ ವ್ಯವಸ್ಥೆಯೊಳಗಿನ ಜನವಿರೋಧಿ, ಜೀವವಿರೋಧಿ ರಹಸ್ಯ ಚಟುವಟಿಕೆಗಳನ್ನು ಸಾರ್ವಜನಿಕರಿಗೆ ತಿಳಿಸಲು. ಜಾತಿವಾದಿತನ, ಸರ್ವಾಧಿಕಾರಿ ಧೋರಣೆಗಳನ್ನು ಜನತೆಯ ಮುಂದಿಡಲು. ಅದಕ್ಕಾಗಿ ರಹಸ್ಯ ಕಾರ್ಯಾಚರಣೆಗಳನ್ನು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಸ್ವಜನಪಕ್ಷಪಾತಿಗಳ ಸ್ವಾರ್ಥಸಾಧಕರ ಮುಖವಾಡ ಜನರಿಗೆ ತಿಳಿಯುವುದಾದರೂ ಹೇಗೆ. ಅಕಾಡೆಮಿ ಅಷ್ಟೇ ಅಲ್ಲ ರಂಗಶಂಕರದ ಕನ್ನಡ ವಿರೋಧಿ ಧೋರಣೆಯನ್ನೂ ಸಹ ನಾನು ವಿರೋಧಿಸಿ ಬರೆದಿದ್ದೇನೆ. ರಂಗವಿರೋಧಿತನವನ್ನು ಟೀಕಿಸಿದ್ದೇನೆ. ಉತ್ತಮ ಕೆಲಸಗಳನ್ನು ಶ್ಲಾಘಿಸಿದ್ದೇನೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ಕಿವಿ ಅಷ್ಟೇ ಅಲ್ಲಾ ಮುದ್ದಣ್ಣ ತಮ್ಮ ಪಂಚೇಂದ್ರಿಯಗಳನ್ನೂ ಇಟ್ಟುಕೊಂಡು ದಾಖಲಿಸುವುದು ಪತ್ರಿಕೆಯ ಕರ್ತವ್ಯವಾಗಿದೆ. ನಿಮ್ಮ ಕೆಲಸ ನೀವು ಮಾಡಿ ನಮ್ಮ ಕೆಲಸ ನಾವು ಮಾಡುತ್ತೇವೆ.
ಒಂದಿಷ್ಟು ನೆನಪಿಸಿಕೊಳ್ಳಲು ಸಾಧ್ಯವಾಗುವುದಿದ್ದರೆ ಜ್ಞಾಪಿಸಿಕೋ ಮುದ್ದಣ್ಣ. ಕೆಲವು ವರ್ಷಗಳ ಹಿಂದೆ ನಿಮ್ಮ ಮಗಳು ಓದುವ ಇಂಗ್ಲೀಷ್ ಶಾಲೆಯಲ್ಲಿ ನಾಟಕವೊಂದನ್ನು ನಿರ್ಮಿಸಲು ಸಹಕರಿಸಿದ್ದೀರಿ. ಆಗ ಅದರ ಕುರಿತು ಬರೆಯಲು ನನ್ನನ್ನು ಪದೇ ಪದೇ ಒತ್ತಾಯಿಸಿದ್ದೀರಿ. ನಿಮ್ಮ ಒತ್ತಾಯಕ್ಕೆ ಮಣಿದು ನನ್ನ ಒತ್ತಡದ ಸಮಯದಲ್ಲೂ ಸಹ ಬಂದು ಆ ನಾಟಕ ನೋಡಿ ಪತ್ರಿಕೆಗಳಲ್ಲಿ ಬರೆದು ದಾಖಲಿಸಿದೆ. ಅದಕ್ಕಾಗಿ ನಿಮ್ಮಿಂದ ಎಂದೂ ಪ್ರತಿಫಲ ಹಾಗೂ ಪ್ರಯೋಜನ ಎರಡನ್ನೂ ನಾನು ಬಯಸಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ. ಅದು ನಿಜಕ್ಕೂ ಉತ್ತಮ ಮಕ್ಕಳ ನಾಟಕವಾಗಿತ್ತು ಹಾಗೂ ಎನ್. ಮಂಗಳಾರವರು ಅದ್ಬುತವಾಗಿ ಆ ನಾಟಕವನ್ನು ನಿರ್ದೇಶಿಸಿದ್ದರು. ಆದ್ದರಿಂದ ಆ ನಾಟಕದ ಕುರಿತು ಸಕಾರಾತ್ಮಕ ವಿಮರ್ಶೆಯನ್ನು ಬರೆದು ಪ್ರಕಟಿಸಲಾಯಿತು. ಹಾಗೂ ಇಂಗ್ಲೀಷ್ ಶಾಲೆಯಲ್ಲಿ ಕನ್ನಡ ಮಕ್ಕಳ ನಾಟಕವೊಂದು ನಿರ್ಮಾಣಗೊಳ್ಳಲು ಕಾರಣೀಕರ್ತರಾದ ಮುದ್ದಣ್ಣನವರ ಪ್ರಯತ್ನವನ್ನೂ ದಾಖಲಿಸಲಾಗಿತ್ತು. ‘ಸರ್ ಈ ನಾಟಕದಲ್ಲಿ ನನ್ನ ಮಗಳು ಪ್ರಮುಖ ಪಾತ್ರ ಮಾಡಿದ್ದಾಳೆ, ಅವಳ ಪರ್ಪಾಮನ್ಸ ಬಗ್ಗೆ ಒಂದಿಷ್ಟು ಬರೆಯಿರಿ’ ಎಂದು ಆಗ ನನಗೆ ಹೇಳಿದಾಗಲೇ ಮುದ್ದಣ್ಣನ ಸ್ವಜನಪಕ್ಷಪಾತದ ಅರಿವು ನನಗಾಗಿತ್ತು. ಏನೇ ಆದರೂ ಆ ಮಗು ಚೆನ್ನಾಗಿಯೇ ನಟಿಸಿತ್ತು. ಮುದ್ದಣ್ಣಾ ಆಗ ನಿಮ್ಮ ಮಗುವಿನ ಬಗ್ಗೆ ಪತ್ರಿಕೆಗಳಲ್ಲಿ ಬರಬೇಕಿತ್ತು, ಹಾಗೂ ನಾಟಕ ಮಾಡಿಸಿದ್ದು ದಾಖಲಾಗಬೇಕಿತ್ತು. ಆ ದಾಖಲೆಯನ್ನಿಟ್ಟುಕೊಂಡು ಆ ಇಂಟರನ್ಯಾಷನಲ್ ಶಾಲೆಯಲ್ಲಿ ನಿಮ್ಮ ಪ್ರಭಾವ ಹೆಚ್ಚಿಸಿಕೊಳ್ಳಬೇಕಿತ್ತು. ಇದೆಲ್ಲಕ್ಕೂ ಆಗ ನಾನು ಹಾಗೂ ನನ್ನ ಪತ್ರಿಕೆ ಬೇಕಾಗಿತ್ತು. ಆದರೆ ಈಗ ಟೀಕಿಸಿ ಬರೆದ ತಕ್ಷಣ ನಾನು ಸ್ವಾರ್ಥಿಯಾಗಿಬಿಟ್ಟೆ ಹಾಗೂ ನಮ್ಮ ಪತ್ರಿಕೆ ಸ್ವಾರ್ಥಸಾಧನೆಯ ಅಸ್ತ್ರವಾಗಿಬಿಟ್ಟಿತಲ್ಲವೇ? ಮೊದಲು ಪ್ರಶಂಸೆ ಹಾಗೂ ಟೀಕೆಗಳನ್ನು ಸಮನಾಗಿ ತೆಗೆದುಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೋ ಮುದ್ದಣ್ಣ. ಕಾರ್ಪೋರೇಟ್ ಪಾಲಸಿಯ ರಂಗಶಂಕರದಲ್ಲಿ ಕೆಲಸ ಮಾಡುವವನು ಒಂದಿಷ್ಟು ಕಾರ್ಪೋರೇಟ್ ಗುಣಗಳನ್ನು ಬೆಳೆಸಿಕೊಂಡರೆ ಒಳ್ಳೆಯದು. ಹೊಗಳಿಕೆಗೆ ಹಿಗ್ಗದ, ತೆಗಳಿಕೆಗೆ ಕುಗ್ಗದ ಆರುಂದತಿ ನಾಗ್ರವರ ಸಮಚಿತ್ತದ ಗುಣವನ್ನು ರೂಢಿಸಿಕೊಂಡರೆ ಉತ್ತಮ. ಸಕಾರಾತ್ಮಕ ಉದ್ದೇಶದಿಂದ ಟೀಕೆ ಮಾಡಿದವರ ಮೇಲೆ ನಕಾರಾತ್ಮಕವಾಗಿ ಸುಳ್ಳು ಆರೋಪಗಳನ್ನು ಹೊರೆಸಿ ನಿರಪರಾಧಿ ಎಂದು ತೋರಿಸಿಕೊಳ್ಳುವ ತವಕ ಆಶಾಡಭೂತಿತನ ಎನ್ನಿಸುತ್ತದೆ. ನಿನ್ನ ಮೇಲೆ ಸೇಡು ತೀರಿಸಿಕೊಳ್ಳಲು ಇಲ್ಲಸಲ್ಲದ್ದನ್ನು ಬರೆದಿದ್ದೇನೆ ಎನ್ನುತ್ತೀಯಲ್ಲಾ, ಹಾಗಾದರೆ ಆ ಲೇಖನ ಬರೆಯುವುದಕ್ಕೂ ಮೊದಲು ನನ್ನ ನಿನ್ನ ನಡುವೆ ಏನಾದರೂ ಮನಸ್ತಾಪ ಭಿನ್ನಾಭಿಪ್ರಾಯ ಜಗಳ ಇತ್ತೇನಣ್ಣಾ. ಅಂತಾದ್ದೇನೂ ಇಲ್ಲವೆಂದ ಮೇಲೆ ಸೇಡು ತೀರಿಸಿಕೊಳ್ಳಲೆಂದೇ ಬರೆಯುವ ಅಗತ್ಯ ಎಲ್ಲಿದೆಯಣ್ಣಾ.
ಅಕಾಡೆಮಿಯ ಕೋಆಪ್ಟ್ ಬಗ್ಗೆ ಇಲ್ಲ ಸಲ್ಲದ ಅಸಂಬದ್ದ ಮಾತುಗಳನ್ನು ನಾನು ಬರೆದಿದ್ದೇನೆ’ ಎನ್ನುವುದು ನಿಮ್ಮ ಇನ್ನೊಂದು ಆರೋಪ. ಸತ್ಯ ಏನು ಗೊತ್ತಾ ಮುದ್ದಣ್ಣ. ಅಸಂಬದ್ದ ಮಾತುಗಳನ್ನು ಹೇಳಿದ್ದು ನೀನು. ಹೇಳಿದ್ದೊಂದು ನಂತರ ಮಾಡಿದ್ದೊಂದು. ಅದಕ್ಕೆ ಪುರಾವೆ ಬೇಕಾ ಇಲ್ಲಿದೆ. ಮಾರ್ಚ 15 ಕ್ಕೂ ನಾಲ್ಕಾರು
ದಿನಗಳ ಮುಂಚೆ ನಾನು ಮಾಹಿತಿಗಾಗಿ ಪೋನ್ ಮಾಡಿದ್ದೆ. ಆಗ “ಈಗಾಗಲೇ ಬೆಂಗಳೂರಿನಲ್ಲಿರುವ ಅಕಾಡೆಮಿ ಸದಸ್ಯರು ಸೇರಿ ಎರಡು ಮೀಟಿಂಗ್ ಮಾಡಿದ್ದೇವೆ. ಬೆಂಗಳೂರಿನಲ್ಲಿರುವ ಯಾರನ್ನೂ ಕೋಆಪ್ಟ್ ಮಾಡಿಕೊಳ್ಳಬಾರದು ಹಾಗೂ ಯಾವ ಜಿಲ್ಲೆಗೆ ಅಕಾಡೆಮಿಯಲ್ಲಿ ಪ್ರಾತಿನಿದ್ಯತೆ ಸಿಕ್ಕಿಲ್ಲವೋ ಆ ಜಿಲ್ಲೆಯವರನ್ನು ಸದಸ್ಯರನ್ನಾಗಿ ಮಾಡಬೇಕೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ” ಎಂದು ಪೋನಲ್ಲಿ ಹೇಳಿದ್ದೇ ನೀವಲ್ಲವೇ ಮುದ್ದಣ್ಣ. ಮುಂದೆ ಅಕಾಡೆಮಿ ಸಭೆಯಲ್ಲಿ ಮಾಡಿದ್ದೇನು. ಅದೇ ಬೆಂಗಳೂರು ಮೂಲದ ಈಗಾಗಲೇ ಒಂದು ಬಾರಿ ನಾಟಕ ಅಕಾಡೆಮಿಯ ಸದಸ್ಯರಾಗಿದ್ದವರನ್ನೇ ತಾನೆ ನಿಮ್ಮ ಕುಲಬಾಂಧವರು ಎನ್ನುವ ಕಾರಣಕ್ಕೆ ಪ್ರಪೋಜ್ ಮಾಡಿ ಬೇರೆ ಸದಸ್ಯರಿಗೆ ಮಾತನಾಡಲೂ ಅವಕಾಶ ಕೊಡದೇ ಆಯ್ಕೆಯಾಗುವಂತೆ ನೋಡಿಕೊಂಡಿರುವುದು. ‘ಪ್ರಾತಿನಿದ್ಯತೆ ಇಲ್ಲದ ಜಿಲ್ಲೆಗಳಿಂದ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಗುವುದು’ ಎಂದು ಹೇಳಿದ್ದನ್ನು ಮರೆತು ಈಗಾಗಲೇ ಡಾವಣಗೆರೆ ಜಿಲ್ಲೆಯಿಂದ ಅಕಾಡೆಮಿ ಸದಸ್ಯರಿದ್ದರೂ ಮತ್ಯಾಕೆ ಅದೇ ಜಿಲ್ಲೆಯವರನ್ನು ಕೋಆಪ್ಟ್ ಮಾಡಿಕೊಂಡಿರುವುದು? ಕೊಪ್ಪಳ ಜಿಲ್ಲೆಯಿಂದ ಈಗಾಗಲೇ ಸರಕಾರವೇ ಅಕಾಡೆಮಿಗೆ ಸದಸ್ಯನನ್ನು ನಿಯಮಿಸಿರುವಾಗ ಮತ್ಯಾಕೆ ಅದೇ ಜಿಲ್ಲೆಯನ್ನು ಪ್ರತಿನಿಧಿಸುವ ವೀರಯ್ಯನವರನ್ನು ಕೋಆಪ್ಟ್ ಮಾಡಿಕೊಳ್ಳಲು ಬೆಂಬಲಿಸಿರುವುದು? ಜಾತಿಯತೆ ಮತ್ತು ಪ್ರಾದೇಶಿಕ ಅಸಮತೋಲನಕ್ಕೆ ನೀವು ಕಾರಣರಾಗಿದ್ದು ಸರಿತಾನೆ? ಈಗ ಮನಸಾಕ್ಷಿ ಎನ್ನುವುದಿದ್ದರೆ ಕೇಳಿಕೋ ಮುದ್ದಣ್ಣಾ ಹೇಳುವುದೊಂದು ಮಾಡುವುದೊಂದು ಮಾಡಿದ್ಯಾರು? ಅಸಂಬದ್ದವಾಗಿ ಹೇಳಿದ್ಯಾರು? ಇದೆಲ್ಲವನ್ನೂ ನಾನು ಕಪೋಲ ಕಲ್ಪಿತವಾಗಿ ಹೇಳುತ್ತಿಲ್ಲ. ಅಂದು ಪೋನಲ್ಲಿ ನನ್ನ ಜೊತೆ ಮಾತಾಡಿದ್ದರ ಆಡಿಯೋ ಈಗಲೂ ನನ್ನ ಹತ್ತಿರ ಇದೆ. ಬೇಕೆಂದಾಗ ಕೇಳಿಸುತ್ತೇನೆ.
ಮುದ್ದಣ್ಣಾ. ನಿಮ್ಮ ಸರ್ವಾಧಿಕಾರವನ್ನು ಉದಾಹರಣೆ ಸಮೇತ ಲೇಖನದಲ್ಲಿ ಹೇಳಿದ್ದೇನೆ. ರಂಗಶಂಕರದಲ್ಲಿ ನಿಮ್ಮ ದುರಹಂಕಾರದ ನಡತೆಯಿಂದ ಬೇಸತ್ತ ಹಲವು ರಂಗಕರ್ಮಿಗಳು ಅಲ್ಲಿ ನಾಟಕ ಮಾಡುವುದನ್ನು ಬಿಟ್ಟಿದ್ದಾರೆ. ಅಂತವರ ಲಿಸ್ಟ್ ಕೊಡಬಲ್ಲೆ. ರಂಗಶಂಕರದಲ್ಲಿ ನಾಟಕ ನೋಡಲು ಬಂದಾಗೆಲ್ಲಾ ನಿಮ್ಮ ಅಧಿಕಾರಪೂರ್ಣ ಗರ್ವದ ಆದೇಶಗಳನ್ನು ನಾನೇ ಕೇಳಿದ್ದೇನೆ. ಇನ್ನು ರಂಗಶಂಕರದ ವೇದಿಕೆಯ ಮೇಲೆ ಲಕ್ಷಾಂತರ ಮೌಲ್ಯದ ಉಪಕರಣಗಳಿರುತ್ತವೆ ಎಂದು ಹೇಳಿ ಯಾರ ಕಿವಿಯ ಮೇಲೆ ಹೂ ಇಡಬೇಕೆಂದು ಮಾಡಿದ್ದಿ ಮಾರಾಯಾ. ನೀವು ನಾಟಕತಂಡಗಳಿಗೆ ಕೊಡುವುದು ಖಾಲಿ ವೇದಿಕೆ. ಲೈಟಿಂಗ್ನಂತಹ ಉಪಕರಣಗಳು ಮೇಲೆ ಕಟ್ಟಲ್ಪಟ್ಟಿರುತ್ತವೆ. ಖಾಲಿ ವೇದಿಕೆಯ ಮೇಲೆ ಆಯಾ ರಂಗತಂಡದ ಸೆಟ್ ಪ್ರಾಪರ್ಟಿಗಳಿರುತ್ತವೆ. ಆಯಾ ತಂಡಕ್ಕೆ ಸಂಬಂಧಪಟ್ಟ ಅಭಿಮಾನಿಗಳು ಗೊತ್ತಿಲ್ಲದೇ ನಟರನ್ನು ಅಭಿನಂದಿಸಲು ವೇದಿಕೆ ಹತ್ತಿದರೆ ನಿಮ್ಮ ಲಕ್ಷಾಂತರ ಮೌಲ್ಯದ ಉಪಕರಣಗಳು ಅದು ಹೇಗೆ ಹಾಳಾಗುತ್ತವೆ? ಸರಿ ಆಯ್ತು ಹಾಗೆನೇ ಇಟ್ಟುಕೊಳ್ಳೋಣ. ಅಭಿನಂದಿಸಲು ಬಂದವರು ಮೇಲೆ ಹತ್ತಿ ನಿಮ್ಮ ಉಪಕರಣಗಳನ್ನು ಹಾಳುಮಾಡುತ್ತಾರೆ ಎಂದೇ ನಂಬೋಣ. ಆ ಅಮೂಲ್ಯ ಉಪಕರಣಗಳ ಕಾವಲು ಕಾಯುತ್ತಿರುವ ನೀವು ಆ ಪ್ರೇಕ್ಷಕರನ್ನು ಒರಟು ಭಾಷೆಯಲ್ಲಿ ನಿಂದಿಸುವುದ್ಯಾಕೆ? ಅದನ್ನೇ ಮೆತ್ತಗೆ ವಿನಯಪೂರ್ವಕವಾಗಿ ಹೇಳಲು ಸಾಧ್ಯವಿಲ್ಲವೆ. ಜೋರು ಮಾಡಿ ಅವಮಾನಿಸಿ ಹೇಳುವುದರಿಂದ ಪ್ರೇಕ್ಷಕರಿಗೆ ಅವಮಾನವಾಗುವುದಿಲ್ಲವೆ? ಮರ್ಯಾದೆ ಕೊಟ್ಟು ಹೇಳಿದರೆ ಹೇಳಿದವರಿಗೂ ಗೌರವ ಬರುತ್ತದಲ್ಲವೆ? ನಿನಗೆ ಪರೋಕ್ಷವಾಗಿ ಅನ್ನ ಕೊಡುವ ಅನ್ನದಾತರನ್ನು ಹೆದರಿಸುವುದು ಅನ್ನದ್ರೋಹ ಅಲ್ಲವೆ? ಇದೊಂದೆ ಅಲ್ಲ. ಲೈಂಟಿಂಗ್ ಆದಿಯಾಗಿ ರಂಗಶಂಕರದಲ್ಲಿ ನೀವು ಕೊಡುವ ಕಿರುಕುಳ ಅದೆಷ್ಟು ಎಂದು ಅನುಭವಿಸಿದವರನ್ನು ಕೇಳಿಕೊ.ಕೆಲವರು ಹೇಳದಿರಬಹುದು. ಯಾಕೆಂದರೆ ಎಲ್ಲಿ ಮುದ್ದಣ್ಣನಿಗೆ ಪ್ರತಿಭಟಿಸಿದರೆ ಮುಂದಿನ ಪ್ರದರ್ಶನಕ್ಕೆ ಎಲ್ಲಿ ಕೊಕ್ಕೆ ಹಾಕುತ್ತಾನೋ ಎಂಬ ಆತಂಕದಿಂದ ಎಲ್ಲಾ ಕಿರಿಕ್ಗಳನ್ನು ಸಹಿಸಿಕೊಂಡು ಹೋಗುವ ರಂಗತಂಡಗಳು ಇದ್ದಾವೆ. ಇನ್ನು ಕೆಲವರು ಈ ರಂಗಶಂಕರದ ಸಹವಾಸವೇ ಸಾಕು ಎಂದು ಬೇರೆ ರಂಗಮಂದಿರಗಳತ್ತ ಮುಖ ಮಾಡಿದ್ದಾರೆ. ಇದಕ್ಕೂ ಬೇಕಾದರೆ ಹಲವು ಉದಾಹರಣೆಗಳನ್ನು ನಾನು ಕೊಡುತ್ತೇನೆ. ‘ರಂಗಶಂಕರದಲ್ಲಿ ಹೇಗೆ ವರ್ತಿಸಬೇಕು ಎಂದು ಹೇಳುವ ಅಧಿಕಾರ ರಂಗಶಂಕರದ ಮುಖ್ಯಸ್ತರನ್ನು ಹೊರತು ಪಡಿಸಿ ಯಾರಿಗೂ ಇಲ್ಲ’ ಎನ್ನುವ ಮಾತೇ ಸರ್ವಾಧಿಕಾರದ ಲಕ್ಷಣ ಎನ್ನುವುದನ್ನು ಮೊದಲು ತಿಳಿದುಕೋ ಮುದ್ದಣ್ಣಾ.
ರಂಗಶಂಕರ ನಿನಗೆ ಅನ್ನ ಕೊಡುವ ಸಂಸ್ಥೆ ಆಗಿರಬಹುದು. ಆದರೆ ರಂಗಶಂಕರಕ್ಕೆ ಅನ್ನ ಕೊಡುವವರು ಪ್ರೇಕ್ಷಕರು. ಬಹುರಾಷ್ಟ್ರೀಯ ಕಂಪನಿಗಳ ಪ್ರಾಯೋಜನದಿಂದ ರಂಗಶಂಕರ ನಡೆಯುತ್ತದೆಂದು ನೀನು ತಿಳಿದಿದ್ದರೆ ಅದು ಅರ್ಧಸತ್ಯ ಮಾತ್ರ. ನಾಟಕಕ್ಕೆ ಪ್ರೇಕ್ಷಕರಿಲ್ಲದಿದ್ದರೆ ಅಲ್ಲಿ ನಾಟಕವೂ ಇಲ್ಲ, ನಾಟಕ ಇಲ್ಲದಿದ್ದರೆ ಯಾವ ಕಾರ್ಪೋರೆಟ್ ಕಂಪನಿಗಳೂ ಪುಕ್ಕಟೆಯಾಗಿ ಹಣ ಕೊಡುವುದೂ ಇಲ್ಲ. ರಂಗಶಂಕರ ಖಾಸಗಿ ಆಡಳಿತವಿರುವ ಸಂಸ್ಥೆಯಾದರೂ ಸರಕಾರದಿಂದ ನೆಲ ಹಣ ತೆಗೆದುಕೊಂಡೇ ನೆಲೆ ನಿಂತಿದೆ. ಯಾವಾಗ ಅದು ಸರಕಾರದಿಂದ ಸಹಾಯ ಪಡೆಯಿತೋ ಅದನ್ನು ಪ್ರಶ್ನಿಸುವ ಹಕ್ಕು ಜನಸಾಮಾನ್ಯರಿಗೂ ಇದೆ. ಅದಕ್ಕಿಂತ ಹೆಚ್ಚಾಗಿ ಅಲ್ಲಿ ಬರುವ ಪ್ರೇಕ್ಷಕರು ಪುಕ್ಕಟೆಯಾಗಿ ಬಂದು ನಾಟಕ ನೋಡುವುದಿಲ್ಲ. ಐವತ್ತೋ ನೂರೋ ರೂಪಾಯಿ ಕೊಟ್ಟು ನಾಟಕ ನೋಡುತ್ತಾರೆ. ಅಂತಹ ಹಣ ಕೊಟ್ಟು ಬಂದು ನಾಟಕ ನೋಡುವ ಪ್ರೇಕ್ಷಕರಿಗೆ ರಂಗಶಂಕರದ ನೌಕರನೊಬ್ಬ ಅವಮಾನಕಾರಿಯಾಗಿ ಕೆಟ್ಟದಾಗಿ ಮಾತಾಡಿದರೆ ಅದನ್ನು ವಿರೋಧಿಸುವ, ಹಿಡಿದು ಕೇಳುವ ಹಕ್ಕು ಪ್ರೇಕ್ಷಕರಿಗಿದ್ದೇ ಇದೆ.
ನಿನಗೆ ಬಹುಷಃ ನೆನಪಿಲ್ಲದಿರಬಹುದು. ಯಾಕೆಂದರೆ ಆಗ ನಾವಿಬ್ಬರೂ ಪರಸ್ಪರ ಪರಿಚಯವಿರಲಿಲ್ಲ. ಮೊಟ್ಟ ಮೊದಲು ನಿನ್ನ ಸರ್ವಾಧಿಕಾರಿ ಮಾತುಗಳನ್ನು ವಿರೋದಿಸಿದ್ದೇ ನಾನು. ಬಿ.ವಿ.ರಾಜಾರಾಂರವರ ನಾಟಕವೊಂದರ ಪ್ರದರ್ಶನದ ನಂತರ ಯಾರೋ ವೇದಿಕೆ ಏರಿದರು ಎಂದು ನೀನು ಪ್ರೇಕ್ಷಕರ ಕೈಕುಲುಕಿದ ಕಲಾವಿದರ ಮೇಲೂ ಕೂಗಾಡಿದೆ. ‘ಯಾಕೆ ಕಲಾವಿದರ ಮೇಲೆ ಕೂಗಾಡುತ್ತೀಯಾ’ ಎಂದು ನಾನು ಅಂದು ತಿರುಗಿ ಬಿದ್ದೆ. ರಾಜಾರಾಂ ರವರೇ ಬಂದು ‘ಆತ ಹಾಗೇ ಬಿಡು ಯಡಹಳ್ಳಿ, ಬನ್ನಿ ಹೊರಗೆ ಹೋಗೋಣ ಎಂದು ನನ್ನನ್ನು ಕರೆದುಕೊಂಡು ಹೋದರು. ನಿನಗೆ ಮರೆತಿದ್ದರೆ ರಾಜರಾಂ ರವರನ್ನು ಕೇಳಿ ತಿಳಿದುಕೋ. ನಿನಗೆ ಪರೋಕ್ಷವಾಗಿ ಅನ್ನಕ್ಕೆ ದಾರಿಯಾದ ಪ್ರೇಕ್ಷಕ ಪ್ರಭುವಿಗೆ ನಿನ್ನ ದುರಹಂಕಾರದ ವರ್ತನೆಯನ್ನು ಪ್ರಶ್ನಿಸುವ ಎಲ್ಲಾ ಹಕ್ಕೂ ಇದೆ. ಅನ್ಯಾಯ ಎಲ್ಲೇ ಆಗಲಿ, ಯಾರಿಂದಲೇ ಆಗಲಿ ಅದನ್ನು ಪ್ರಶ್ನಿಸುವ, ದಾಖಲಿಸುವ, ಬರೆಯುವ ಹಕ್ಕನ್ನು ಈ ದೇಶದ ಸಂವಿಧಾನವೇ ಪತ್ರಕರ್ತರಿಗೆ ಕೊಟ್ಟಿದೆ. ಎಂತೆಂತಾ ಸಿಎಂ, ಪಿಎಂ ಗಳನ್ನೇ ಪ್ರಶ್ನಿಸುವ, ಎಂತೆಂತವರ ಸರ್ವಾಧಿಕಾರಿತನ, ಜಾತೀಯತೆ, ಭ್ರಷ್ಟತೆಗಳನ್ನು ಸಮಾಜ ನಿಷ್ಟೆಯಿಂದಾಗಿ ಬಯಲಿಗೆಳೆಯುವ ಪತ್ರಕರ್ತರಿದ್ದಾರೆಂದೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೂ ಸಹ್ಯವಾಗಿದೆ. ಇನ್ನು ಯಾವುದೋ ಒಂದು ರಂಗಮಂದಿರದ ನೌಕರನೊಬ್ಬ ಪ್ರೇಕ್ಷಕರೊಂದಿಗೆ ಸರ್ವಾಧಿಕಾರಿಯಾಗಿ ನಡೆದುಕೊಂಡರೆ ಅದನ್ನು ಪತ್ರಕರ್ತನೊಬ್ಬ ಪ್ರಶ್ನಿಸಬಾರದು ಎನ್ನುವ ನಿನ್ನ ದೋರಣೆಯೇ ಬಾಲಿಷವಾಗಿದೆ. ನಿನ್ನ ನಲವತ್ತು ವರ್ಷಗಳ ರಂಗಭೂಮಿ ಒಡನಾಟದಲ್ಲಿ ಎಂದೂ ದೊಡ್ಡವನೆಂದು ಭಾವಿಸಿಕೊಂಡಿಲ್ಲ ಎಂದು ಹೇಳುವ ಮುದ್ದಣ್ಣಾ ಯಾಕೆ ಪ್ರೇಕ್ಷಕರ ಜೊತೆ, ಕಲಾವಿದರ ಜೊತೆ, ರಂಗತಂಡಗಳ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತೀಯಾಣ್ಣಾ. ಯಾರೂ ನಿನ್ನನ್ನು ತಮ್ಮ ಹುಡುಗನೆಂದು ಹಚ್ಚಿಕೊಂಡಿಲ್ಲ. ಎಲ್ಲಿ ನಿನ್ನನ್ನು ಎದುರು ಹಾಕಿಕೊಂಡರೆ ನಾಟಕ ಪ್ರದರ್ಶನಗಳಿಗೆ ಮುಂದೆ ಅವಕಾಶ ದಕ್ಕದಂತೆ ನೀನು ಮಾಡುತ್ತೀಯೋ, ಎಲ್ಲಿ ನಾಟಕದ ಪ್ರದರ್ಶನಕ್ಕೆ ನಿನ್ನ ಸಹಕಾರ ಸಿಗದೇ ಹೋಗುವುದೋ ಎನ್ನುವ ಅವ್ಯಕ್ತ ಭಯದಿಂದ ನಿನ್ನ ಜೊತೆಗೆ ಚೆನ್ನಾಗಿರುತ್ತಾರೆ. ಒಂದಿಷ್ಟು ಜನ ಮುಂದೆ ಹೊಗಳುತ್ತಾರೆ. ಪ್ರಾತ್ಯಕ್ಷಿತೆ ಬೇಕಾದರೆ ನಿನ್ನ ಹಿಂದೆ ನಿನ್ನ ಬಗ್ಗೆ ಯಾರ್ಯಾರು ಏನೇನು ಮಾತಾಡುತ್ತಾರೆ ಎನ್ನುವುದನ್ನು ಆಧಾರ ಸಹಿತ ತೋರಿಸುತ್ತೇನೆ.
ಇನ್ನು ರಂಗಶಂಕರದ ನಿಯಮ ಮತ್ತು ಕರ್ತವ್ಯಗಳ ಬಗ್ಗೆ ಮಾತಾಡುವ ಮುದ್ದಣ್ಣಾ, ಅದೇ ರಂಗಶಂಕರದ ನಿಯಮಗಳನ್ನು ರಾಜಾರೋಷವಾಗಿ ನೀನೇ ಮುರಿದಿರುವುದನ್ನೂ ಹೇಳುತ್ತೇನೆ ಕೇಳಣ್ಣಾ. ಸಂಜೆ ಏಳುವರೆ ಗಂಟೆಯ ನಂತರ ಯಾರೇ ಎಂತಹ ಪ್ರಭಾವಶಾಲಿಗಳೇ ಬಂದರೂ ರಂಗಶಂಕರದ ಒಳಗೆ ಬಿಡಬಾರದು ಎನ್ನುವ ಸ್ಟ್ರಿಕ್ಟ್ ರೂಲ್ ಇದೆ. ಅದಕ್ಕೆ ಅಲ್ಲಿ ಕೆಲಸ ಮಾಡುವವರೆಲ್ಲರೂ ಬದ್ದವಾಗಿರಬೇಕಾಗಿದೆ. ಆದರೆ ಏಳುವರೆ ಗಂಟೆಯ ನಂತರ ಬಂದವರು ಆತ್ಮೀಯರಾಗಿದ್ದರೆ ಅವರನ್ನು ಅನಧೀಕೃತವಾಗಿ ಲಿಪ್ಟಿನಲ್ಲಿ ಮೇಲೆ ಕರೆದುಕೊಂಡು ಹೋಗಿ, ಲೈಟಿಂಗ್ ರೂಮಿನಿಂದ ಆಡಿಟೋರಿಯಂಗೆ ಒಳಮಾರ್ಗದಲ್ಲಿ ಕಳುಹಿಸುವ ಕೆಲಸವನ್ನು ಅದೆಷ್ಟು ಸಲ ನೀನು ಮಾಡಿಲ್ಲ ಎನ್ನುವುದನ್ನು ಎದೆ ಮುಟ್ಟಿಕೊಂಡು ಹೇಳು ಮುದ್ದಣ್ಣಾ.
ಹಾಗೆ ಅನಧೀಕೃತವಾಗಿ ನನ್ನನ್ನೂ ಸಹ ಒಮ್ಮೆ ಕರೆದುಕೊಂಡು ಹೋಗಿದ್ದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಯಾಕೆಂದರೆ ಆಗ ನಿಮ್ಮ ಮಗಳು ನಟಿಸಿದ ನಾಟಕಕ್ಕೆ ಉತ್ತಮ ವಿಮರ್ಶೆ ಬರೆದಿದ್ದೆನಲ್ಲಾ, ಅದಕ್ಕಾಗಿ ನನ್ನನ್ನು ರಂಗಶಂಕರದ ರೂಲ್ ಬ್ರೇಕ್ ಮಾಡಿ ಕರೆದುಕೊಂಡು ಹೋಗಿದ್ದು ಈಗಲೂ ನನಗೆ ಸ್ಪಷ್ಟವಾಗಿ ನೆನಪಿದೆ. ಹಾಗಾದರೆ ಒಂದು ವ್ಯವಸ್ಥೆಯ ಕಾನೂನನ್ನು ಮುರಿಯುವುದು ವೃತ್ತಿದ್ರೋಹ ಅಲ್ಲವಾ ಮುದ್ದಣ್ಣಾ.
ನಿನ್ನ ಜಾತಿವಾದದ ಮುಖವಾಡ ಅಕಾಡೆಮಿಯ ಕೋಆಪ್ಟ್ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಅದನ್ನು ಈಗಾಗಲೇ ಹಿಂದಿನ ಲೇಖನದಲ್ಲಿ ವಿವರಿಸಿದ್ದೇನೆ. ಅಕಾಡೆಮಿಯ ರೆಜಿಸ್ಟ್ರಾರನ್ನು ಜಾತಿವಾದಿ ಎಂದು ಕರೆದಿದ್ದಕ್ಕೆ ನಿನಗೆ ಭಾರಿ ಬೇಸರವಾಗಿದೆ. ಆದರೆ ಯಾವ ಕೋಆಪ್ಟ್ ಕೆಲಸ ಅಕಾಡೆಮಿಯ ಸಭೆಯಲಿ ನಿರ್ಧಾರವಾಗಬೇಕಿತ್ತೋ ಅದನ್ನು ಬಿಟ್ಟು ರೆಜಿಸ್ಟ್ರಾರ್ ಆಗಿದ್ದವರೂ ಅಕಾಡೆಮಿ ಆಡಳಿತ ನೋಡಿಕೊಳ್ಳುವುದನ್ನು ಬಿಟ್ಟು ತನ್ನ ಕುಲಬಾಂಧವರೆನ್ನುವ ಕಾರಣಕ್ಕೆ ಮೊದಲೇ ಶ್ರೀಪಾದ ಭಟ್ ರನ್ನು ಸಂಪರ್ಕಿಸಿದ್ದು ಯಾಕೆ? ಅವರು ನಿರಾಕರಿಸಿದಾಗ ಅವರ ಸ್ನೇಹಿತರಿಗೆ ಪೋನ್ ಮಾಡಿ ಭಟ್ರನ್ನು ಒಪ್ಪಿಸಲು ಒತ್ತಾಯಿಸಿದ್ದ್ಯಾಕೆ? ಅದೇ ಒಬ್ಬ ದಲಿತ ಇಲ್ಲವೇ ಶೂದ್ರ ರಂಗಕರ್ಮಿಯನ್ಯಾಕೆ ಸಂಪರ್ಕಿಸಲಿಲ್ಲ? ತನ್ನ ಆಡಳಿತದ ಮಿತಿಯನ್ನು ಮೀರಿ ಬ್ರಾಹ್ಮಣರು ಎನ್ನುವ ಕಾರಣಕ್ಕೆ ಜಾತಿರಾಜಕೀಯ ಮಾಡಿದ್ದು ಅದು ಹೇಗೆ ಸಮರ್ಥನೀಯ? ಭಾಗ್ಯಮ್ಮನವರು ಭಟ್ ರನ್ನು ಹಾಗೂ ಬಂಡಾರಿಯವರನ್ನು ಮೊದಲೇ ಪೋನ್ ಮಾಡಿ ಸಂಪರ್ಕಿಸಿದ್ದಕ್ಕೆ ಸಾಕ್ಷಿ ಆಧಾರ ಬೇಕೆಂದರೆ ಅದನ್ನೂ ನಾನು ನಿಮ್ಮ ಭ್ರಮೆ ನಿವಾರಣೆಗಾಗಿ ಒದಗಿಸುತ್ತೇನೆ. ಅಂದು ಅಕಾಡೆಮಿಯ ಸಭೆಯಲ್ಲಿ ಬೇರೆ ಸದಸ್ಯರಿಗೆ ಮಾತಾಡಲೂ ಅವಕಾಶ ಕೊಡದ ರೆಜಿಸ್ಟ್ರಾರ್ ಮೊದಲೇ ನಿರ್ಧರಿಸಲಾಗಿದ್ದ ಹೆಸರನ್ನು ಸೂಚಿಸಿದ ತಕ್ಷಣ ಬರೆದುಕೊಳ್ಳುವ ಆತುರ ತೋರಿಸಿದ್ಯಾಕೆ? ಎನ್ನುವುದರ ಹಿಂದಿರುವ ಹುನ್ನಾರವನ್ನು ಇನ್ನೂ ವಿವರವಾಗಿ ಹೇಳಬೇಕಾ?
ನನ್ನ ಬಗ್ಗೆ ಹೇಳಬೇಕಾದದ್ದು ಬೇಕಾದಷ್ಟಿದೆ ಎನ್ನುವ ಮುದ್ದಣ್ಣಾ, ಒಂದಾದರೂ ನಂಬುವಂತಹ ಸಾಕ್ಷಿ ಆಧಾರದ ಸಮೇತ ಆರೋಪ ಮಾಡಣ್ಣಾ. ಟೀಕೆ ಮಾಡಿದವರನ್ನೇ ಟೀಕಿಸುವ ಗುಣ ಬಿಡಣ್ಣಾ. ಮತ್ತೊಬ್ಬರ ವ್ಯಕ್ತಿತ್ವದ ಬಗ್ಗೆ ಪ್ರಶ್ನಿಸುವ ಮೊದಲು ನಿನ್ನ ವ್ಯಕ್ತಿತ್ವದೊಳಗೊಮ್ಮೆ ಹೊಕ್ಕು ನೋಡಣ್ಣಾ. ನಿನ್ನಂದಾದ ಜಾತೀಯತೆ, ಸ್ವಜನಪಕ್ಷಪಾತ, ಸರ್ವಾಧಿಕಾರ, ಅನ್ನದ್ರೋಹ, ರಂಗದ್ರೋಹಗಳನ್ನು ಕುರಿತು ಒಬ್ಬನೇ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಣ್ಣಾ. ಇಷ್ಟೆಲ್ಲಾ ಹೇಳಿದ ಮೇಲೂ ನಿನಗೆ ಅಸಮಾಧಾನವಿದ್ದರೆ ನಾನೇ ನನ್ನ ಸಂಸ್ಥೆಯ ಮೂಲಕ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸುತ್ತೇನೆ. ಬಾ ಸಾರ್ವಜನಿಕವಾಗಿ ಚರ್ಚಿಸೋಣ. ನನ್ನಲ್ಲಿರುವ ಸಾಕ್ಷಿ ಆಧಾರಗಳ ಸಮೇತ
ಕೋಆಪ್ಟ್ ರಾಜಕಾರಣ ಹಾಗೂ ಜಾತೀಯತೆ ಕುರಿತು ಹಾಗೂ ಮುದ್ದಣ್ಣನ ರಂಗದ್ರೋಹಗಳ ಕುರಿತು ವಿಷಯ ಮಂಡಿಸುತ್ತೇನೆ. ನೀನು ಬಂದು ಅದಕ್ಕೆ ಪುರಾವೆಗಳ ಸಮೇತ ಸಮರ್ಥನೆಗಳನ್ನು ಕೊಡು. ಇಲ್ಲವೇ ನಿನ್ನ ಅನ್ನದಾತ ರಂಗಶಂಕರದಲ್ಲಿ ಅದೂ ಆಗದಿದ್ದರೆ ನಾಟಕ ಅಕಾಡೆಮಿಯಿಂದ ‘ಕೋಆಪ್ಟ್ ರಾಜಕಾರಣ ಹಾಗೂ ಜಾತೀಯತೆ’ ವಿಷಯದ ಬಗ್ಗೆ ವಿಚಾರ ಸಂಕಿರಣವನ್ನು ಆಯೋಜಿಸಿದರೆ ನಾನು ಬಂದು ನನ್ನ ಸಮರ್ಥನೆಗಳನ್ನು ಮಂಡಿಸುತ್ತೇನೆ. ಸಮಸ್ಯೆಗಳಿದ್ದರೆ, ಅರೋಪಗಳಿದ್ದರೆ ಅದನ್ನು ಮುಕ್ತವಾಗಿ ಚರ್ಚಿಸುವುದುತ್ತಮ. ಇಷ್ಟಕ್ಕೂ ನನಗೆ ಮುದ್ದಣ್ಣನಾಗಲೀ ಇಲ್ಲವೇ ಬೇರೆ ಯಾರಾದರಾಗಲೀ ಶತ್ರುಗಳಲ್ಲ. ಯಾರ ಮೇಲೂ ದ್ವೇಷ ಸಾಧಿಸುವ ಹಠವೂ ನನಗಿಲ್ಲ. ಆದರೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ರಂಗವಿರೋಧಿ ಕೆಲಸಗಳಾದಾಗ ವಿರೋಧಿಸುವುದು ಒಬ್ಬ ರಂಗಪರಿಚಾರಕನಾಗಿ ಹಾಗೂ ಒಬ್ಬ ಪತ್ರಕರ್ತನಾಗಿ ನನ್ನ ಕರ್ತವ್ಯವಾಗಿದೆ. ನನ್ನ ಕರ್ತವ್ಯವನ್ನು ನಿಷ್ಟೆಯಿಂದ ಮಾಡಿಕೊಂಡು ಬಂದಿದ್ದೇನೆ. ಈಗಲೂ ನಿಷ್ಕ್ರೀಯ ನಾಟಕ ಅಕಾಡೆಮಿ ಎನ್ನುವ ಬಹುತೇಕರ ಆಶಯವನ್ನು ಹುಸಿಮಾಡಿ ಕ್ರಿಯಾಶೀಲವಾಗಿ ರಂಗಭೂಮಿ ಕಟ್ಟಲು ಶ್ರಮಿಸಿದರೆ ನಾನು ಸಂಭ್ರಮಿಸುತ್ತೇನೆ ಹಾಗೂ ಅಕಾಡೆಮಿಯ ಚಟುವಟಿಕೆಗಳನ್ನು ಸಕಾರಾತ್ಮಕವಾಗಿ ದಾಖಲಿಸುತ್ತೇನೆ. ನಾಟಕ ಅಕಾಡೆಮಿ ಎನ್ನುವುದು ರಂಗಭೂಮಿಯ ಪ್ರಾತಿನಿಧಿಕ ಸಂಸ್ಥೆಯಾಗಬೇಕು, ರಂಗಭೂಮಿ ಕಟ್ಟುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಬೇಕು ಎನ್ನುವುದೇ ಎಲ್ಲಾ ರಂಗಕರ್ಮಿಗಳ ಆಶಯವಾಗಿದೆ.
ಮುದ್ದಣ್ಣಾ ನೀನೊಬ್ಬ ಉತ್ತಮ ಬೆಳಕಿನ ತಜ್ಞ ಎನ್ನುವುದರಲ್ಲಿ ಸಂದೇಹವೇ ಇಲ್ಲ. ನಿನ್ನ ಕೆಲಸವನ್ನು ಪತ್ರಿಕೆಯವರು ಪ್ರಶಂಸಿದಾಗ ಸಂಭ್ರಮಿಸಿದ್ದಷ್ಟೇ ನಿನ್ನ ದೌರ್ಬಲ್ಯಗಳ ಕುರಿತು ಟೀಕೆ ಮಾಡಿದಾಗ ಸಹನೆ ಇರಲಿ. ಟೀಕೆಗಳು ಬಂದಲ್ಲಿ ನಿನ್ನ ಕ್ರಿಯಾಶೀಲ ಕೆಲಸಗಳ ಮೂಲಕ ಉತ್ತರಿಸು. ಸೂಕ್ತ ಆಧಾರಗಳಿಲ್ಲದೆ ಪ್ರತ್ಯಾರೋಪಿಸುವುದು ವಿತಂಡವಾದವೆನಿಸುತ್ತದೆ. ಪ್ರೇಕ್ಷಕರ ಜೊತೆಗೆ, ರಂಗ ತಂಡಗಳ ಜೊತೆಗೆ, ಕಲಾವಿದರ ಜೊತೆಗೆ ಒಂದಿಷ್ಟು ಮಾನವೀಯತೆಯಿಂದ ವರ್ತಿಸು. ದುರಹಂಕಾರದ ಮಾತಿಗಿಂತಲೂ ವಿನಯಪೂರ್ವಕ ಮಾತುಗಳು ನಿನ್ನ ಘನತೆಯನ್ನು ಹೆಚ್ಚಿಸುತ್ತವೆ. ರಂಗಶಂಕರದಿಂದಾಗಿ ನಿನಗೊಂದು ಐಡೆಂಟಿಟಿ ಸಿಕ್ಕಿದೆ. ಅದನ್ನು ಸಮರ್ಥವಾಗಿ ನಿರ್ವಹಿಸು. ಹಳ್ಳಿಗಾಡಿನಿಂದ ಬಂದ ಗ್ರಾಮೀಣ ಪ್ರತಿಭೆಯೊಂದು ರಂಗಭೂಮಿಯಲ್ಲಿ ಒಂದಿಷ್ಟು ಸಾಧನೆ ಮಾಡಿದ್ದು ನಮಗೆಲ್ಲಾ ಹೆಮ್ಮೆಯ ವಿಷಯ. ಆದರೆ ಪಟ್ಟಣಕ್ಕೆ ಬಂದು ದುರಹಂಕಾರವನ್ನು ಬೆಳೆಸಿಕೊಂಡು ಗಳಿಸಿದ ಹೆಸರನ್ನು ಹಾಳುಮಾಡಿಕೊಳ್ಳುವುದು ಸರಿಯಲ್ಲಾ. ಸರ್ವಾಧಿಕಾರಿ ಮನೋಭಾವನೆ ಸರ್ವನಾಶಕ್ಕೆ ದಾರಿ ಎನ್ನುವುದನ್ನು ಅರ್ಥೈಸಿಕೊಂಡರೆ ಎಲ್ಲರಿಗೂ ಬೇಕಾದವನಾಗಿ ಬಾಳಬಹುದು. ರಂಗಶಂಕರ ನಿನ್ನನ್ನು ಕೊನೆವರೆಗೂ ಸಾಕಲಾರದು, ಈ ಅಕಾಡೆಮಿ ಸದಸ್ಯತ್ವ ಮೂರು ವರ್ಷಗಳ ನಂತರ ನಿನ್ನ ಜೊತೆಗೆ ಇರಲಾರದು. ಕೊನೆಗೂ ನೀನು ಮಾಡುವ ಸೌಹಾರ್ಧಯುತವಾದ ರಂಗಕೆಲಸಗಳೇ ಮುದ್ದಣ್ಣನನ್ನು ರಂಗಕರ್ಮಿಯಾಗಿ ರಂಗ ಇತಿಹಾಸದಲ್ಲಿ ದಾಖಲಿಸುವುದು.
ಇದನ್ನೆಲ್ಲಾ ಹೇಳುವುದಕ್ಕೆ ನೀನ್ಯಾರು? ಎಂದು ನೀನು ಕೇಳಬಹುದು ಮುದ್ದಣ್ಣಾ. ನಾನು ನಿನಗೆ ಬುದ್ದಿ ಹೇಳುತ್ತಿಲ್ಲ. ಒಂದಿಷ್ಟು ವರ್ತನೆ ಬದಲಾಯಿಸಿಕೊಂಡರೆ, ದೌರ್ಬಲ್ಯಗಳನ್ನು ತಿದ್ದಿಕೊಂಡರೆ ಮುದ್ದಣ್ಣ ರಂಗಭೂಮಿಗೆ ಒಂದು ಅಸೆಟ್ ಆಗಬಹುದು ಎನ್ನುವ ಆಶಾಭಾವನೆ ನನ್ನದು. ನಿನ್ನ ಸಾಮರ್ಥ್ಯ ದೊಡ್ಡದು. ಆದರೆ ಅದನ್ನು ಸೀಮಿತ ಗೊಳಿಸಿಕೊಳ್ಳುವುದು ಬೆಳವಣಿಗೆಗೆ ಮಾರಕ. ಅಕಾಡೆಮಿ ಎನ್ನುವುದು ರಂಗಶಂಕರದ ಹಾಗೆ ಖಾಸಗಿ ಸಂಸ್ಥೆಯಾಗಿರದೇ ಸಾರ್ವಜನಿಕ ಸಂಸ್ಥೆಯಾಗಿದೆ. ಸಾರ್ವಜನಿಕ ಕೆಲಸಕ್ಕೆ ಆಯ್ಕೆಯಾದಾಗ ಟೀಕೆಗಳು, ವಿಮರ್ಶೆಗಳು ಬರುವುದು ಸಾಮಾನ್ಯ. ನಿನ್ನಲ್ಲಿ ಸರ್ವಾಧಿಕಾರಿ ಮನೋಭಾವನೆ ಇಲ್ಲದಿದ್ದಲ್ಲಿ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಕೆಲಸದ ಮೂಲಕ ಸಾಮರ್ಥ್ಯ ತೋರಿಸು. ಅರೋಪಕ್ಕೆ ಪ್ರತಿಯಾಗಿ ನಂಜುಕಾರಿದರೆ ಅದರ ಪರಿಣಾಮವೂ ನಕಾರಾತ್ಮಕವಾಗಿಯೇ ಇರುತ್ತದೆ.
ಮುದ್ದಣ್ಣಾ, ಅಕಾಡೆಮಿಯಲ್ಲಿ ಹಾವೇರಿ ಜಿಲ್ಲೆಯನ್ನು ತಾನೆ ಪ್ರತಿನಿಧಿಸುತ್ತಿರುವುದು. ಹಾವೇರಿಯಲ್ಲಿ ಕಳೆದ ಹತ್ತು ದಿನಗಳಿಂದ ಮಾಳವಾಡರ ನೇತೃತ್ವದಲ್ಲಿ ‘ಗ್ರಾಮರಂಗ’ ವು ದೊಡ್ಡಾಟದ ಕುರಿತು ಕಾರ್ಯಗಾರವನ್ನು ಹಮ್ಮಿಕೊಂಡಿದೆ. ಪ್ರತಿ ದಿನ ವಿಚಾರ ಸಂಕಿರಣ, ದೊಡ್ಡಾಟ ಪ್ರಾತ್ಯಕ್ಷಿತೆ ಹಾಗೂ ದೊಡ್ಡಾಟದ ತರಬೇತಿ ನಿರಂತರವಾಗಿ ನಡೆಯುತ್ತಿದೆ. ಗೊತ್ತಿಲ್ಲದಿದ್ದರೆ ವಿಚಾರಿಸಿ ತಿಳಿದುಕೋಳ್ಳಣ್ಣಾ. ವೃತ್ತಿಯಲ್ಲಿ ರೈತರಾದ ಮಾಳವಾಡರು ಮೂಡಲಪಾಯ ದೊಡ್ಡಾಟಕ್ಕೆ ಕಾಯಕಲ್ಪ ಕೊಡಲು ತುಂಬಾ ಶ್ರಮಿಸುತ್ತಿದ್ದಾರೆ. ಅವರಿಗೆ ಸರಕಾರಿ ಸಂಸ್ಥೆಗಳ ಸಹಕಾರವನ್ನು ಹೇಗೆ ತೆಗೆದುಕೊಳ್ಳಬೇಕು ಎನ್ನುವುದೂ ಗೊತ್ತಿಲ್ಲ. ಮಾಳವಾಡರು ತಮ್ಮ ಕುಟುಂಬ ಪರಿವಾರ ಸಮೇತರಾಗಿ ದೊಡ್ಡಾಟ ರಂಗಭೂಮಿ ಉಳಿಸಲು ಬೆಳೆಸಲು ಶ್ರಮಿಸುತ್ತಿದ್ದಾರೆ. ಮೇ ಎರಡರಂದೂ ನಾನು ಪೂರ್ತಿ ದಿನ ಅವರೊಂದಿಗಿದ್ದು ಬಂದೆ. ಅವರಿಗೆ ಈಗ ಅಕಾಡೆಮಿಯಂತಹ ಸಂಸ್ಥೆಗಳಿಂದ ನೈತಿಕ ಹಾಗೂ ಆರ್ಥಿಕ ನೆರವಿನ ಅಗತ್ಯತೆ ಇದೆ. ಅವರು ಕೇಳಲಿ ಬಿಡಲಿ ಅಲ್ಲಿ ಜಾನಪದ ರಂಗಭೂಮಿಯ ಕೆಲಸ ಪ್ರಾಮಾಣಿಕವಾಗಿ ಆಗುತ್ತಿದೆ. ಅದಕ್ಕೆ ಸ್ಪಂದಿಸುವುದು ಅಕಾಡೆಮಿಯ ಕರ್ತವ್ಯವಾಗಿದೆ. ಒಂದು ಅಕಾಡೆಮಿ ಮಾಡಬಹುದಾದ ಕೆಲಸವನ್ನು ಗ್ರಾಮರಂಗ ಹಾವೇರಿಯಲ್ಲಿ ಮಾಡುತ್ತಿದೆ. ಅಕಾಡೆಮಿಗೆ ಹಾಗೂ ಅದರ ಸದಸ್ಯರಾದ ನಿಮಗೆ ರಂಗಭೂಮಿಯ ಕುರಿತು ಕನಿಷ್ಟ ಕಳಕಳಿ ಇದ್ದರೆ ಈ ಕೂಡಲೇ ಅವರನ್ನು ಸಂಪರ್ಕಿಸಿ. ಮಾಳವಾಡರ ಮೋಬೈಲ್ ನಂ. 94800
73013. ಆರ್ಥಿಕ ಬೆಂಬಲ ಕೊಡಲು ಅಕಾಡೆಮಿ ಕಾನೂನುಗಳು ಅಡ್ಡಬಂದರೂ ನೈತಿಕ ಬೆಂಬಲವನ್ನಾದರೂ ಕೊಡಿ. ಈ
ದೊಡ್ಡಾಟದ ತರಬೇತಿ ಶಿಬಿರದಲ್ಲಿ ತಯಾರಾದ ‘ವೀರ ರಾಣಿ ಕಿತ್ತೂರು ಚೆನ್ನಮ್ಮ’ ಎನ್ನುವ ಮೊಟ್ಟ ಮೊದಲ ಚಾರಿತ್ರಿಕ ದೊಡ್ಡಾಟದ ನಾಟಕದ ಮುಂದಿನ ಪ್ರದರ್ಶನಗಳಿಗೆ ಬೇಕಾದ ಸಹಕಾರ ನೀಡಿ. ಮುದ್ದಣ್ಣಾ ನಿಮ್ಮ ಜಿಲ್ಲೆಯಲ್ಲಿ ಆಗುತ್ತಿರುವು ಈ ಚಾರಿತ್ರಿಕ ಸಾಹಸಕ್ಕೆ ಈ ಕೂಡಲೇ ಸ್ಪಂದಿಸುವುದು ಆ ಜಿಲ್ಲೆಯನ್ನು ಅಕಾಡೆಮಿಯಲ್ಲಿ ಪ್ರತಿನಿಧಿಸುತ್ತಿರುವ ನಿಮ್ಮ ಕರ್ತವ್ಯವಾಗಿದೆ. ಈ ವಾದ ವಿವಾದ, ಆರೋಪ ಪ್ರತ್ಯಾರೋಪ, ರಂಗರಾಜಕೀಯಗಳನ್ನು ಬದಿಗಿಟ್ಟು ಮೊದಲು ರಂಗಕ್ರಿಯೆಗಳಿಗೆ ಸ್ಪಂದಿಸಬೇಕಿದೆ. ‘ಗ್ರಾಮರಂಗ’ ದ ರಂಗಕ್ರಿಯೆಗೆ ಅಕಾಡೆಮಿಯಿಂದ ಸಾಧ್ಯವಾದಷ್ಟು ನೆರವನ್ನು ದೊರಕಿಸಿಕೊಡುತ್ತೀರೆಂದು ನಂಬಿರುವೆ. ಸಕಾರಾತ್ಮಕ ಲೇಖನಗಳು ಬರಬೇಕೆಂದರೆ ಇಂತಹ ಸಕಾರಾತ್ಮಕ ರಂಗಕ್ರಿಯೆಗಳಿಗೆ ಅಕಾಡೆಮಿ ಬೆಂಬಲಿಸಬೇಕಿದೆ. ಮುದ್ದಣ್ಣಾ ನಿನ್ನ ಅಕಾಡೆಮಿಯ ಸದಸ್ಯತ್ವದ ಅವಧಿಯಲ್ಲಿ ಸಕಾರಾತ್ಮಕ ರಂಗಚಟುವಟಿಕೆಗಳನ್ನು ಎಲ್ಲರೂ ನಿರೀಕ್ಷಿಸುತ್ತಿದ್ದೇವಣ್ಣಾ. ನಿರಾಶೆಗೊಳಿಸುವುದಿಲ್ಲ ಎಂದು ಕಾಯುತ್ತಿದ್ದೇವಣ್ಣಾ. ಅಕಾಡೆಮಿಗೆ ಶುಭಾವಾಗಲಿ. ಇಲ್ಲಿವರೆಗೂ ಆದದ್ದಕ್ಕಿಂತಲೂ ಹೆಚ್ಚು ರಂಗ ಕೆಲಸಗಳು ಆಗಲಿ. ಒಟ್ಟಾರೆಯಾಗಿ ರಂಗಭೂಮಿ ಸಕಾರಾತ್ಮಕವಾಗಿ ಬೆಳೆಯಲಿ. ಅದಕ್ಕೆ ಮುದ್ದಣ್ಣನವರ ಕೊಡುಗೆಯೂ ಇರಲಿ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ