ಸುಬ್ಬಣ್ಣ ಖಾಯಂ ಆಗಿ ಬದುಕಿನ ನೇಪತ್ಯಕ್ಕೆ ಸೇರಿ ಈ ತಿಂಗಳು ಜೂನ್ 15ಕ್ಕೆ ಸರಿಯಾಗಿ ಒಂದು ವರ್ಷವಾಯಿತು. ಅವರ ಅಗಲಿಕೆಯ ನೆನಪಿಗಾಗಿ ಈ ಲೇಖನದ ಮೂಲಕ ಅಕ್ಷರನಮನ. ಒಂದು ವರ್ಷದ ಹಿಂದಿನ ಆ ಕರಾಳ ದಿನದಂದು ರಂಗಕರ್ಮಿಗಳಿಗೆ ‘ರಂಗಪ್ರಪಂಚದ ಸುಬ್ಬಣ್ಣ ಇನ್ನಿಲ್ಲ’ ಎನ್ನುವ ಮಾತೇ ನಂಬಲು ಸಾಧ್ಯವಾಗಿರಲಿಲ್ಲ. ಅವರಿಗಿನ್ನೂ ಸಾಯುವ ವಯಸ್ಸೂ ಅಲ್ಲ. ಆ ಯುವ ರಂಗಕರ್ಮಿಗೆ ಕೇವಲ 42 ವರ್ಷವಷ್ಟೇ. ಕುಡುಕುತನ ಕೆಡುಕತನದ ಮಾತೇ ಇಲ್ಲ. ನಟಸಾಮ್ರಾಟನಾಗಬಯಸಿದ ಸುಬ್ಬಣ್ಣ ಎಂದೂ ಚಟಸಾಮ್ರಾಟನಾಗಲಿಲ್ಲ. ಅಂತಹ ಆತಂಕಕಾರಿ ಎನ್ನುವಂತಹ ರೋಗಗಳ್ಯಾವವೂ ಇರಲೇಇಲ್ಲ. ನೋಡಿದರೆ ಆರಡಿ ಎತ್ತರದ ಅಜಾನುಬಾಹು, ಮಾತಾಡಿದರೆ ಕಂಚಿನ ಕಂಠ, ಯಾವುದೇ ಪಾತ್ರೆಗೆ ಸುರಿದರೂ ಅದೇ ಆಕಾರಪಡೆಯುವ ನೀರಿನಂತೆ ಯಾವುದೇ ಪಾತ್ರಕೊಟ್ಟರೂ ಪಾತ್ರವನ್ನೇ ಆಕ್ರಮಿಸಿಕೊಳ್ಳುವ ಅಭಿನಯ ಪ್ರತಿಭೆ.... ಅನ್ನಿಸಿದ್ದನ್ನು ಶತಾಯ ಗತಾಯ ಮಾಡಿಯೇ ತೀರುವೆನೆಂಬ ಛಲಗಾರ... ಹಿಡಿದ ಕೆಲಸ ಎಂತಾ ಕಷ್ಟದ್ದಾದರೂ ಮಾಡಿ ಗುರಿಮುಟ್ಟಲು ಪ್ರಯತ್ನಿಸುವ ಸುಬ್ಬಣ್ಣ ಅದ್ಯಾಕೆ ಹೀಗೆ ನಟ್ಟ ನಡುವೆ ತನ್ನೆಲ್ಲಾ ಮಹತ್ವಾಕಾಂಕ್ಷೆಗಳನ್ನು ಬಿಟ್ಟೆದ್ದು ರಂಗಗೆಳೆಯರನ್ನೆಲ್ಲಾ ನಿರಾಶೆಗೊಳಿಸಿ ಹೊರಟು ಹೋದ?...
ಕಳೆದ ವರ್ಷ ಜೂನ್ 14ರಂದು ಸಂಜೆ ನಾಟಕ ನೋಡಿದ ನಂತರ ಸಂಸ ಪತ್ರಿಕೆಯ ಸಂಪಾದಕ ಸುರೇಶ ಜೊತೆಗೆ ಮಾತಾಡಿ ಮನೆಗೆ ಹೋಗಿ ರಾತ್ರಿ ಕುಳಿತು ‘ರಂಗಪ್ರಪಂಚ ಪತ್ರಿಕೆ’ಯ ಪುಟಗಳನ್ನು ಡಿಟಿಪಿ ಮಾಡಿ ಮುಗಿಸಿ ಆರಾಮಾಗೇ ಮಲಗಿದ ಸುಬ್ಬಣ್ಣ ಮಧ್ಯರಾತ್ರಿ ಎರಡು ಗಂಟೆಗೆ ತಣ್ಣಗಾಗಿಹೋದನೆಂದರೆ ನಂಬಲು ಹೇಗೆ ಸಾಧ್ಯ? ಮರುದಿನ ಮುಂಜಾನೆ ರಂಗಕರ್ಮಿಗಳಿಗೆಲ್ಲಾ ಸುದ್ದಿ ತಿಳಿದಾಗ ಇದೊಂದು ಸುಳ್ಳು ಸುದ್ದಿ ಎಂದೇ ಅಂದುಕೊಂಡ ಅನೇಕರು ಮತ್ತೊಬ್ಬರಿಗೆ ಪೋನ್ ಮಾಡಿ ಕೇಳಿ ಖಚಿತಪಡಿಸಿಕೊಂಡು ಶಾಕ್ಗೊಳಗಾಗಿಬಿಟ್ಟಿದ್ದರು. ಯಾಕೆ ಹೀಗಾಯಿತು? ಕಲ್ಲುಬಂಡೆಯಂತಹ ಶರೀರ ಹೊಂದಿದವನಿಗೆ ಸಾವು ಹೇಗೆ ಬಂದಿತು? ಎಂಬುದು ಎಲ್ಲರ ಪ್ರಶ್ನೆ. ಉತ್ತರ ಒಂದೇ ಹೃದಯಸ್ಥಂಭನ. ಹಾರ್ಟಅಟ್ಯಾಕ್.
ಸಂಸ ಬಯಲು ರಂಗ ಮಂದಿರದಲ್ಲಿ ಸುಬ್ಬಣ್ಣನ ಪಾರ್ಥೀವ ಶರೀರಕ್ಕೆ ಶ್ರದ್ದಾಂಜಲಿ ಸಲ್ಲಿಸುವಾಗ ಯಾವ ಹಾಡು ಹಾಡೋಣ? ಎಂದು ಸಿದ್ದರಾಜ ಹಾಗೂ ರಂಗಗೆಳೆಯರು ಕೇಳಿದಾಗ ನಾನು ಹಾಡಲು ಹೇಳಿದ್ದು “ತನುವಿನೊಳಗನುದಿನ ಇದ್ದು ನನ್ನ ಮನಕ್ಕೊಂದು ಮಾತು ಹೇಳದೇ ಹೋದೆಯಾ ಹಂಸಾ....”, ಈ ಹಾಡು ಸುಬ್ಬಣ್ಣನಿಗೆ ಅದೆಷ್ಟು ಸೂಕ್ತವಾಗಿತ್ತು ಎಂದರೆ.. ಒಂದೇ ಒಂದು ಬಾರಿ ಕಂಪಿಸದ, ಸ್ಥಬ್ದಗೊಳ್ಳುವ ಮುಂಚೆ ಎಚ್ಚರಿಸುವ ಕೆಲಸ ಮಾಡದ ಈ ಹೃದಯವಂತನ ಹೃದಯ ಹೀಗೆ ಹೇಳದೇ ಕೇಳದೆ ನಿಂತಿದ್ದು, ಒಂದು ಸಣ್ಣ ಕುರುಹನ್ನೂ ಕೊಡದೇ ಪ್ರಾಣ ಹಾರಿಹೋಗಿದ್ದು, ಕೊನೆಗೆ ಸುಬ್ಬಣ್ಣನ ಅರಿವಿಗೂ ಬರದಂತೆ ಅವರ ಚೇತನ ಅನಿಕೇತನವಾಗಿದ್ದು ನಿಜಕ್ಕೂ ವಿಸ್ಮಯದ ಸಂಗತಿ.
ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಸುಬ್ಬಣ್ಣನ ಪ್ರಾಣ ಹೋದನಂತರವೂ ಅವರ ಮುಖ ಒಂದಿಷ್ಟೂ ಕಳೆಗೆಟ್ಟಿರಲಿಲ್ಲ, ಪಾತ್ರವಾಗಿ ಬಣ್ಣ ಹಚ್ಚುತ್ತಿದ್ದ ಈ ಕಲಾವಿದನ ಮುಖ ಸ್ವಲ್ಪವೂ ಬಣ್ಣಗೆಡಲಿಲ್ಲ. ನೋಡಿದ ಯಾರೂ ಕೂಡಾ ಸುಬ್ಬಣ್ಣ ಸತ್ತಿದ್ದಾನೆ ಎಂದು ಹೇಳಲು ಸಾದ್ಯವೆ ಇರಲಿಲ್ಲ. ಕೊನೆಯ ಕ್ಷಣದವರೆಗೂ ಸುಬ್ಬಣ್ಣ ಅಭಿನಯ ನಿಲ್ಲಸಲೇ ಇಲ್ಲ. ಸೂತಕದ ಮನೆಯಲ್ಲಿ, ಸಾವಿನ ಪಾತ್ರದಲ್ಲೂ ಜೀವಂತಿಕೆಯನ್ನು ತೋರಿಸಿ ಎಲ್ಲರ ಕಣ್ಣಲ್ಲಿ ಕಂಬನಿಯಾದ ಸುಬ್ಬಣ್ಣ ಖಾಯಂ ಆಗಿ ನೇಪತ್ಯ ಸೇರಿ ತನ್ನ ಬದುಕಿನ ಪರದೆಯನ್ನು ಎಳೆದುಬಿಟ್ಟ. ತನ್ನ ಹೆಜ್ಜೆ ಗುರುತುಗಳನ್ನು ಮತ್ತು ಹಲವು ಸಾಧನೆಗಳನ್ನು ಕನ್ನಡ ರಂಗಭೂಮಿ ಹಾಗೂ ದೃಶ್ಯಮಾಧ್ಯಮಗಳಲ್ಲಿ ಮೂಡಿಸಿ ಮರೆಯಾಗಿಬಿಟ್ಟ.
ಆರಂಭದಲ್ಲಿ ನಾಟಕದ ಬಗ್ಗೆ ಆಸಕ್ತಿ ಮೂಡಿದಾಗ ಸುಬ್ರಮಣಿ ಹೋಗಿ ಸೇರಿದ್ದು ಎ.ಎಸ್.ಮೂರ್ತಿಯವರ ‘ಅಭಿನಯತರಂಗ’ ಶಾಲೆಯನ್ನು. ಎ.ಎಸ್.ಮೂರ್ತಿಗಳಿಗೆ ಖಾಸಾ ಶಿಷ್ಯನೇ ಆಗಿ ಹೋಗಿದ್ದ ಸುಬ್ಬಣ್ಣನಿಗೆ ಗುರುವಿನ ಮೇಲೆ ಅಸಾಧ್ಯವಾದ ಅಭಿಮಾನ. ನಟನೆಯನ್ನು ಕಲಿಸಿದ ಮೂರ್ತಿಯವರೇ ಸುಬ್ಬಣ್ಣನ ಪ್ರತಿಭೆಯನ್ನು ಗಮನಿಸಿ ಹೆಗ್ಗೋಡಿನ ‘ನೀನಾಸಂ’ಗೆ ಒಂದು ವರ್ಷದ ತರಬೇತಿಗೆ ಕಳುಹಿಸಿಕೊಟ್ಟರು. ನಂತರ ನೀನಾಸಂ ತಿರುಗಾಟದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ ಸುಬ್ಬಣ್ಣ ಅಭಿನಯವನ್ನು ಉಸಿರಾಗಿಸಿಕೊಂಡರು. ಗುರುವಿನ ಅಗಲಿಕೆ ಕುರಿತು ತನ್ನ ರಂಗಪ್ರಪಂಚ ಪತ್ರಿಕೆಯ ಸಂಪಾದಕೀಯದಲ್ಲಿ ಅಪಾರ ದುಃಖವನ್ನು ಸುಬ್ಬಣ್ಣ ವ್ಯಕ್ತಪಡಿಸಿದ್ದರು. ಅಷ್ಟು ಸಾಕಾಗಿತ್ತು, ಆದರೆ..... ಇನ್ನೂ ಆ ರಂಗಭೀಷ್ಮ ಎ.ಎಸ್.ಎಂ (2012, ಡಿಸೆಂಬರ 18) ತೀರಿಕೊಂಡು ಏಳು ತಿಂಗಳು ಪೂರ್ಣಗೊಂಡಿಲ್ಲ ಅಷ್ಟರಲ್ಲೇ ಈ ಪರಮ ಶಿಷ್ಯ ಸುಬ್ಬಣ್ಣ ಜೂನ್ 15 ರಂದು ಗುರುವಿನ ಹಿಂದೆ ‘ನಾ ಬಂದೆ’ ಎಂದು ನೇಪತ್ಯದತ್ತ ನಡೆದೇ ಬಿಟ್ಟ. ಇದೇನು ಗುರುಭಕ್ತಿಯೋ, ಕಾಕತಾಳಿಯವೋ.... ಗೊತ್ತಿಲ್ಲ. ಎಲ್ಲ ದೌರ್ಬಲ್ಯಗಳನ್ನು ಜೀರ್ಣಿಸಿಕೊಂಡು, ತಮ್ಮ ಸಾಧನೆಯನ್ನು ಪೂರ್ಣಗೊಳಿಸಿದ ಎ.ಎಸ್.ಮೂರ್ತಿಯವರು ವಯೋವೃದ್ಧರಾಗುವವರೆಗೂ ಅರ್ಥಪೂರ್ಣವಾಗಿ ಬದುಕಿದ್ದರು. ಆದರೆ.. ಅವರ ಶಿಷ್ಯ ಸುಬ್ಬಣ್ಣ ಯಾವ ದೌರ್ಬಲ್ಯಗಳೂ ಇಲ್ಲದೇ ರಂಗಪಾರಿಚಾರಿಕೆಯನ್ನು ವಿವಿಧ ಆಯಾಮಗಳಲ್ಲಿ ಮಾಡುತ್ತಲೇ ಗುರುವಿನ ಅರ್ಧದಷ್ಟು ವಯಸ್ಸಿನಲ್ಲೇ ಗುರುವಿನ ಹಿಂದೆ ಹೋಗಿದ್ದೊಂದು ವಿಪರ್ಯಾಸ.
ಮೂರ್ತಿಗಳ ನಂತರ ಸುಬ್ಬಣ್ಣನಿಗೆ ಅಪಾರವಾದ ಅಭಿಮಾನ ಇದ್ದದ್ದು ಲಂಕೇಶರ ಬಗ್ಗೆ. ಯಾಕೋ ಏನೋ ಗೊತ್ತಿಲ್ಲ ಒಂದೇ ಮನಸ್ಥಿತಿಯವರು ಆಕರ್ಷಿತರಾಗುತ್ತಾರೆನ್ನುವ ಹಾಗೆ ಎ.ಎಸ್.ಮೂರ್ತಿ ಹಾಗೂ ಲಂಕೇಶರಿಗಿರುವ ಹಲವು ವಿಲಕ್ಷಣ ಗುಣಲಕ್ಷಣಗಳು ಸುಬ್ಬಣ್ಣನಲ್ಲೂ ಇದ್ದವು. ಮೂರ್ತಿಯವರು ಮತ್ತು ಲಂಕೇಶ ಈ ಇಬ್ಬರೂ ದಿಗ್ಗಜರು ಲೋಕವಿರೋಧಿಗಳು, ಖಂಡಿತವಾದಿಗಳು, ಎಲ್ಲರನ್ನೂ ಎದುರು ಹಾಕಿಕೊಳ್ಳುವ ತಾಕತ್ತಿರುವವರು, ತಾವು ಅಂದುಕೊಂಡಿದ್ದೇ ಪರಮ ಸತ್ಯ ಎಂದು ಪ್ರತಿಪಾದಿಸುವವರು, ಆನೆಯ ಹಾಗೆ ತಾವು ನಡೆದದ್ದೇ ದಾರಿ ಎಂದು ಮುನ್ನುಗ್ಗಿದವರು. ಇವರಂತೆಯೇ ಬದುಕಿನುದ್ದಕ್ಕೂ ಇದ್ದವರು ಸುಬ್ರಮಣಿ. ಸುಬ್ಬಣ್ಣನಿಗೆ ಮೂರ್ತಿಯವರು ನೇರವಾಗಿ ಗುರುವಾದರೆ, ಲಂಕೇಶ ಮಾನಸ ಗುರುವಾಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ನಾಟಕದಲ್ಲಿ ಎಂ.ಎ. ಸ್ನಾತ್ತಕೋತ್ತರ ಪದವೀದರರಾಗಿದ್ದ ಸುಬ್ರಮಣಿ ಮುಂದೆ ಲಂಕೇಶರ ನಾಟಕಗಳತ್ತ ಆಕರ್ಷಿತರಾಗಿ ಅವರ ನಾಟಕಗಳ ಮೇಲೆ ಅಧ್ಯಯನ ಮಾಡಿ ಪಿಹೆಚ್ಡಿ ಪದವಿ ಪಡೆದು ಡಾ. ಸುಬ್ರಮಣಿಯಾದರು. ಸಂಕ್ರಾಂತಿ ನಾಟಕವೊಂದನ್ನು ಹೊರತು ಪಡಿಸಿ ಲಂಕೇಶರ ಎಲ್ಲಾ ನಾಟಕಗಳನ್ನು “ಲಂಕೇಶ ನಾಟಕ ಚಕ್ರ” ಹೆಸರಲ್ಲಿ ತಮ್ಮ ರಂಗಪ್ರಪಂಚ ರಂಗತಂಡದಿಂದ ರಂಗಪ್ರದರ್ಶನಗೊಳಿಸಿದ ಸುಬ್ಬಣ್ಣ ಬಹುತೇಕ ನಾಟಕಗಳನ್ನು ಸ್ವತಃ ನಿರ್ದೇಶಿಸಿದರು. ಈ ನಾಟಕಗಳನ್ನು ತಮ್ಮ ಸ್ವಂತ ಹಣವನ್ನು ಹಾಕಿ ನಿರ್ಮಿಸಿ ಅಪಾರವಾದ ಆರ್ಥಿಕನಷ್ಟವನ್ನು ಅನುಭವಿಸಿದರು.
ರಂಗಭೂಮಿಯನ್ನು ಹೊರತುಪಡಿಸಿ ಬೇರೆಲ್ಲೂ ಹೊಟ್ಟೆಪಾಡಿಗಾಗಿ ನೌಕರಿ ಮಾಡಲು ಆಸಕ್ತಿ ತೋರದ ಸುಬ್ಬಣ್ಣ ಹೋಗಿ ಸೇರಿದ್ದು ಮಲ್ಲೇಶ್ವರಂನಲ್ಲಿರುವ ಎಂಇಎಸ್ ರಂಗಶಾಲೆಯನ್ನು. ಕೋಆರ್ಡಿನೇಟರ್ ಆಗಿ, ಅಭಿನಯದ ಶಿಕ್ಷಕರಾಗಿ ಐದು ವರ್ಷಗಳಷ್ಟು ಕಾಲ ಎಂಇಎಸ್ ನಲ್ಲಿ ಕೆಲಸ ಮಾಡಿದ ಸುಬ್ಬಣ್ಣ ಯಾವುದೋ ಬಿನ್ನಾಭಿಪ್ರಾಯದಿಂದಾಗಿ ಆ ನೌಕರಿಯನ್ನೂ ಬಿಟ್ಟು ಅಲ್ಲಿಯೇ ಅತಿಥಿ ಉಪನ್ಯಾಸಕರಾಗಿ ನಟನೆಯನ್ನು ಕಲಿಸುತ್ತಿದ್ದರು. ಹಾಗೆಯೇ ಎರಡು ವರ್ಷ ಕಾಲ ಆದರ್ಶ ಫಿಲಂ ಸಂಸ್ಥೆಯಲ್ಲೂ ಅಭಿನಯವನ್ನು ಹೇಳಿಕೊಟ್ಟರು. ನಂತರ ಮಹಾದೇವ್ ನಡೆಸುತ್ತಿದ್ದ ‘ಕಸ್ತೂರಿ ಕಲಾಕೇಂದ್ರ’ದ ನಿರ್ದೇಶಕರಾಗಿ ಆಸಕ್ತ ಯವಕರಿಗೆ ಅಭಿನಯಕಲೆಯನ್ನು ಕಲಿಸ ತೊಡತೊಡಗಿದರು. ನಡುವೆ ಸಮಯ ಸಿಕ್ಕಾಗೆಲ್ಲಾ ಟಿವಿ ಸೀರಿಯಲ್ ಗಳಲ್ಲಿ, ಅವಕಾಶ ಸಿಕ್ಕಾಗ ಸಿನೆಮಾಗಳಲ್ಲಿ ಅಭಿನಯಿಸುತ್ತಿದ್ದರು. ಹೀಗೆ ಶಿಕ್ಷಣ ವೃತ್ತಿಯಿಂದ ಮತ್ತು ಅಭಿನಯದಿಂದ ಬಂದ ಆದಾಯವನ್ನು ನಾಟಕ ನಿರ್ಮಾಣಕ್ಕೆ ಖರ್ಚು ಮಾಡುತ್ತಾ ಹೇಗೋ ಇದ್ದ ಸುಬ್ಬಣ್ಣನಿಗೆ ಪತ್ರಿಕೆಯೊಂದನ್ನು ಮಾಡಬೇಕು ಎನ್ನುವ ಹಂಬಲ ಶುರವಾಯಿತು. ಆಗಾಗ ಒಂದಿಷ್ಟು ಕವಿತೆ, ಬಿಡಿ ಲೇಖನ ಬರೆದ ಅನುಭವ ಇದ್ದದ್ದರಿಂದ ಎಲ್ಲಾ ಕಲೆಗಳ ಕುರಿತು ಪತ್ರಿಕೆ ಮಾಡಬೇಕೆಂದು ಒಂದೆರಡು ವರ್ಷದಿಂದ ಮನಸ್ಸಲ್ಲೇ ಆಲೋಚನೆ ರೂಪಿಸುತ್ತಲೇ ಬಂದರು.
ಅದೇ ಸಮಯಕ್ಕೆ ನಾನು ‘ರಂಗಭೂಮಿ ವಿಷ್ಲೇಷಣೆ’ ಪತ್ರಿಕೆ ಶುರುಮಾಡಿದ್ದೆ. “ನನ್ನ ಯೋಜನೆಯನ್ನು ಕದ್ದು ನನಗಿಂತ ಮೊದಲೇ ಪತ್ರಿಕೆ ತಂದಿದ್ದೀ” ಎಂದು ನನ್ನ ಜೊತೆಗೆ ಪ್ರೀತಿಯಿಂದ ಸುಬ್ಬಣ್ಣ ಜಗಳಕ್ಕೆ ಬಿದ್ದು ಮುಂದಿನ ಮೂರೆ ತಿಂಗಳಲ್ಲಿ ‘ರಂಗಪ್ರಪಂಚ’ ಎನ್ನುವ ಪತ್ರಿಕೆಯನ್ನು 2007 ರಲ್ಲಿ ಕಲರ್ ಮುಖವರ್ಣಿಕೆಯಲ್ಲಿ ಹೊರತಂದರು. ‘ಬೇಡಾ ಸುಬ್ಬಣ್ಣ ಅಷ್ಟೊಂದು ಖರ್ಚು ಮಾಡಿ ಬಣ್ಣದಲ್ಲಿ ಪತ್ರಿಕೆ ತರಬೇಡಾ, ಕಡಿಮೆ ಖರ್ಚಲ್ಲಿ ಹೆಚ್ಚು ಅರ್ಥಪೂರ್ಣ ಲೇಖನಗಳಿರುವ ಪತ್ರಿಕೆ ಮಾಡು’ ಎಂದು ಕಿವಿಮಾತು ಹೇಳಿದರೂ ಕೇಳದೇ ಅಂತಸತ್ವಕ್ಕಿಂತ ಆಕರ್ಷಣೆಯತ್ತ ಮನಸೋತು ತನ್ನೆಲ್ಲಾ ಆದಾಯವನ್ನು ಪತ್ರಿಕೆ ಮೇಲೆ ಹಾಕಿದ ಸುಬ್ಬಣ್ಣ ಒಂದು ವರ್ಷದೊಳಗೆ ಸೋತು ಸುಣ್ಣವಾಗಿ ಹೋದ. ಕನಿಷ್ಟ ಒಂದು ಲಕ್ಷದಷ್ಟು ಹಣ ಪತ್ರಿಕೆ ಮಾಡಿ ಕಳೆದುಕೊಂಡೆ ಎಂದು ನೊಂದುಕೊಂಡ ಸುಬ್ಬಣ್ಣ ಆರ್ಥಿಕವಾಗಿ ನಷ್ಟದಲ್ಲಿದ್ದ. ಪತ್ರಿಕೆಯನ್ನು ಪುಕ್ಕಟೆ ಹಂಚುವ ಮೂಲಕ ಇನ್ನಷ್ಟು ನಷ್ಟಕ್ಕೆ ಗುರಿಯಾದ. ಆದರೂ ತನ್ನ ಛಲವನ್ನು ಬಿಡಲಿಲ್ಲ ಪತ್ರಿಕೆಯನ್ನೂ ನಿಲ್ಲಿಸಲಿಲ್ಲ. ಪುಕ್ಕಟೆ ಹಂಚುವುದನ್ನೂ ಬಿಡಲಿಲ್ಲ. ನಷ್ಟ ತಗ್ಗಿಸಿಕೊಳ್ಳಲು ರಂಗಪತ್ರಿಕೆಯನ್ನು ಒಂದಿಷ್ಟು ಕಮರ್ಸಿಯಲ್ ಮಾಡಿದ. ನೃತ್ಯ- ಸಂಗೀತ ಕಲಾವಿದರನ್ನು ಪರಿಚಯಿಸುವುದನ್ನೇ ಪತ್ರಿಕೆಯ ಮುಖ್ಯ ಉದ್ದೇಶವನ್ನಾಗಿಸಿಕೊಂಡ. ಪರಿಚಯಿಸಿದ ಕಲಾವಿದರಿಂದ ಬಂದ ಹಣದಿಂದ ಪತ್ರಿಕೆ ಹೊರತಂದ. ಕೆಲವು ಜನ ಪ್ರಾಯೋಜಕರನ್ನು ಹಿಡಿದು ಅವರ ಪೊಟೋಗಳನ್ನು ಪತ್ರಿಕೆಯಲ್ಲಿ ಹಾಕಿದ. ಹೀಗೆ ಗೊತ್ತು ಗುರಿ ಇಲ್ಲದೇ ಪತ್ರಿಕೆ ಸಾಗತೊಡಗಿತ್ತು. ಸಾವಿನ ಕೊನೆಯ ದಿನ, ಕೊನೆಯ ಕ್ಷಣದವರೆಗೂ ಪತ್ರಿಕೆಯ ಜೊತೆಗೆ ಹೆಣಗಾಡಿದ. ಆ ಕಡೆ ಮನೆ ಕಟ್ಟಿದ ಸಾಲ ತೀರಿಸುವ ಅನಿವಾರ್ಯತೆ, ಈ ಕಡೆ ಪ್ರತಿ ತಿಂಗಳು ಪತ್ರಿಕೆಗೆ ಹಣ ಹೊಂದಾಣಿಕೆ ಮಾಡುವ ಒತ್ತಡ, ಜೊತೆಗೆ ಮನೆ ಮಕ್ಕಳು ಕುಟಂಬದ ಜವಾಬ್ದಾರಿ. ಮತ್ತೊಂದು ಕಡೆ ನಾಟಕ ನಿರ್ಮಾಣದಿಂದಾದ ನಷ್ಟ. ಎಲ್ಲವನ್ನೂ ತೂಗಿಸಿಕೊಂಡು ಹೋಗುವುದು ಹರಸಾಹಸದ ಕೆಲಸ. ಆರ್ಥಿಕ ಸಮಸ್ಯೆಗಳ ಜೊತೆಗೆ ಬಡಿದಾಡಿದ ಸುಬ್ಬಣ್ಣ ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗಕ್ಕೆ ಉಪನ್ಯಾಸಕನಾಗಿ ನೌಕರಿಗೆ ಸೇರಿಕೊಂಡ. ಅವರು ಕೊಡುವ ೧೫ ಸಾವಿರ ಹಣ ಏನಕ್ಕೂ ಸಾಲಲಿಲ್ಲ. ಬೆಂಗಳೂರಿನಿಂದ ಮೈಸೂರಿಗೆ ದಿನವೂ ಹೋಗಿ ಬರುವುದರಿಂದ ಸಮಯ ಪೋಲಾಗತೊಡಗಿತ್ತು. ಕೊನೆಗೆ ಆ ನೌಕರಿಗೂ ತಿಲಾಂಜಲಿಯನ್ನಿತ್ತ ಸುಬ್ಬಣ್ಣ ಬೆಂಗಳೂರಲ್ಲೇ ಇದ್ದು ಏನನ್ನಾದರೂ ಸಾಧಿಸುವ ನಿರ್ಣಯಕ್ಕೆ ಬಂದ.
ಈ ಎಲ್ಲಾ ಆರ್ಥಿಕ ಸಮಸ್ಯೆಗಳು ಸುಬ್ಬಣ್ಣನಲ್ಲಿ ಉತ್ಸಾಹವನ್ನು ಕುಗ್ಗಿಸಲಿಲ್ಲ. ಬೇರೆ ಯಾರೇ ಆಗಿದ್ದರೂ ರಂಗಭೂಮಿಯ ಸಹವಾಸವೇ ಸಾಕೆಂದು ಬೇರೆನೋ ಕೆಲಸ ಮಾಡಿಕೊಂಡು ಬದುಕುತ್ತಿದ್ದರು. ಆದರೆ ಈ ನಾಟಕದ ಗುಂಗೇ ಹೀಗೆ... ಒಮ್ಮೆ ಈ ನಾಟಕದ ಅಭಿನಯದ ಪಿತ್ತ ನೆತ್ತಿಗೇರಿದರೆ ಅದು ಬೇಗ ಇಳಿಯುವಂತಹುದಲ್ಲ. ರಂಗಭೂಮಿ ಎಲ್ಲರಂತೆ ಸುಬ್ಬಣ್ಣನಿಗೂ ಅನೇಕ ಪಾಠಗಳನ್ನು ಕಲಿಸಿತು. ಆ ಪಾಠದ ಫಲವಾಗಿಯೋ ಏನೋ ‘ರಂಗಭೂಮಿ ಉದ್ಯಮವಾಗಬೇಕು’ ಎಂದು ಸುಬ್ಬಣ್ಣ ಎಲ್ಲಾ ವೇದಿಕೆಗಳಲ್ಲಿ, ರಂಗಗೆಳೆಯರಲ್ಲಿ ಹೇಳತೊಡಗಿದ. ಸಿನೆಮಾರಂಗದ ಹಾಗೆ, ಟಿವಿ ಕ್ಷೇತ್ರದ ಹಾಗೆ ರಂಗಭೂಮಿ ಉಧ್ಯಮವಾದರೆ ರಂಗಭೂಮಿಯನ್ನೇ ನಂಬಿ ಬದುಕುವ ನಮ್ಮಂತಹ ರಂಗಕರ್ಮಿಗಳ ಬದುಕಿಗೆ ದಾರಿಯಾಗುತ್ತದೆ” ಎಂದು ಸಿಕ್ಕಲ್ಲೆಲ್ಲಾ ಪ್ರತಿಪಾದಿಸತೊಡಗಿದ. ಇಲ್ಲೇ ನನಗೂ ಮತ್ತು ಸುಬ್ಬಣ್ಣನಿಗೂ ತಾರ್ಕಿಕವಾಗಿ ತೀವ್ರವಾದ ಭಿನ್ನಾಭಿಪ್ರಾಯ ಶುರುವಾಗಿದ್ದು. ರಂಗೋಧ್ಯಮವಾದ ವೃತ್ತಿರಂಗಭೂಮಿಯ ವ್ಯಾಪಾರೀಕರಣದ ಅತಿರೇಕಗಳನ್ನು ವಿರೋಧಿಸಿ ಅಸ್ಥಿತ್ವಕ್ಕೆ ಬಂದ ಹವ್ಯಾಸಿ ರಂಗಭೂಮಿ ಉದ್ಯಮವಾಗಬೇಕು ಎನ್ನುವುದೇ ಒಂದು ವಿಪರ್ಯಾಸ.
ಜಾಗತೀಕರಣದ ಕಾರ್ಪೊರೇಟ್ ಸಂಸ್ಕೃತಿ ಹಾಗೂ ಹೊರಗುತ್ತಿಗೆಯ ದುಷ್ಪರಿಣಾಮಗಳು, ಪ್ರಾಯೋಜಕರ ತಾಳಕ್ಕೆ ಕುಣಿಯುವ ಟಿವಿ ಸಂಸ್ಕೃತಿ ಸಮಾಜದ ಮೇಲೆ ಮಾಡುತ್ತಿರುವ ಸಾಂಸ್ಕೃತಿಕ ದುರಾಕ್ರಮಣಗಳು, ದೇಶೀ ಸಂಸ್ಕೃತಿಯನ್ನು ಸರ್ವನಾಶಮಾಡಿ ಬಹುರಾಷ್ಟ್ರೀಯ ಸರಕು ಮಾರಾಟಕ್ಕೆ ಪೂರಕವಾಗಿ ಹುಟ್ಟಿಕೊಂಡ ಜಾಹೀರಾತು ಸಂಸ್ಕೃತಿಯ ಅಪಾಯಗಳು..... ಹೀಗೆ ಎಲ್ಲವನ್ನೂ ಬಿಡಿಬಿಡಿಸಿ ಹೇಳಿದರೂ ಯಾವ ತರ್ಕಕ್ಕೂ ಒಗ್ಗದ ಸುಬ್ಬಣ್ಣ ಕೊನೆಕೊನೆಗೆ ಹಣ ಮಾಡಬೇಕು, ರಂಗಭೂಮಿ ಶ್ರೀಮಂತವಾಗಬೇಕು, ನಾಟಕವನ್ನು ನಂಬಿಕೊಂಡವರು ಆರ್ಥಿಕವಾಗಿ ಬಲವಾಗಿರಬೇಕು... ಎಂದು ತೀವ್ರವಾಗಿ ನಂಬಿಕೊಂಡಿದ್ದ. ಬಹುಷಃ ರಂಗಭೂಮಿಯಿಂದಲೇ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಒತ್ತಾಸೆಗೆ ಬಿದ್ದಿದ್ದರಿಂದಲೋ... ಅಥವಾ... ರಂಗಭೂಮಿಗೆ ಏನೆಲ್ಲಾ ಮಾಡಿದರೂ ತನ್ನ ಬದುಕಿನ್ನೂ ಅತಂತ್ರವಾಗೇ ಇದೆಯಲ್ಲಾ ಎನ್ನುವ ಆಂತರಿಕ ಒತ್ತಡದಿಂದಲೋ ಸುಬ್ಬಣ್ಣ ರಂಗೊದ್ಯಮಿಯಾಗಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದ. ಆದರೆ ಅದು ಹವ್ಯಾಸಿ ರಂಗಭೂಮಿಯ ಚೌಕಟ್ಟಿನಲ್ಲಿ ಅಸಾಧ್ಯದ ಮಾತು. ಸುಬ್ಬಣ್ಣನಿಗೆ ರಂಗಭೂಮಿಯ ಹೆಸರಲ್ಲಿ ಹೇಗೆ ಹಣ ಮಾಡಬೇಕು ಎನ್ನುವ ಒಳಗುಟ್ಟುಗಳೂ ಗೊತ್ತಿರಲಿಲ್ಲ. ಅಷ್ಟರಮಟ್ಟಿಗೆ ಆತ ಅಮಾಯಕ.
ಸುಬ್ಬಣ್ಣನನ್ನೇ ಬಳಸಿಕೊಂಡು, ತಮ್ಮ ರಂಗಸಂಸ್ಥೆಯ ಪದಾಧಿಕಾರಿಯನ್ನಾಗಿ ನಿಯಮಿಸಿಕೊಂಡು ಕೇಂದ್ರ ಸರಕಾರದಿಂದ ಅನುದಾನವನ್ನು ಪಡೆದು ಸ್ವಂತಕ್ಕೆ ಬಳಸಿಕೊಂಡವರಿದ್ದಾರೆ... ಅಂತಹ ತಂತ್ರಗಾರಿಕೆಯೂ ಸುಬ್ಬಣ್ಣನಿಗೆ ತಿಳಿದಿರಲಿಲ್ಲ. ಕಾಟಾಚಾರಕ್ಕೆ ನಾಟಕೋತ್ವವಗಳನ್ನು ಮಾಡಿ, ಹೊರಗುತ್ತಿಗೆ ಆಧಾರದಲ್ಲಿ ನಾಟಕಗಳನ್ನು ಮಾಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಖಜಾನೆಗೆ ಕನ್ನ ಹಾಕಿ ಲೂಟಿ ಮಾಡುತ್ತಿರುವ ಮಹಾಮಹಿಮರು ಸುಬ್ಬಣ್ಣನ ಜೊತೆಜೊತೆಗೆ ಇದ್ದಾರೆ... ಆದರೆ ಅವರ ಕುತಂತ್ರಗಾರಿಕೆ ಸುಬ್ಬಣ್ಣನಿಗೆ ಗೊತ್ತಿರಲಿಲ್ಲ. ಇಲಾಖೆಯ ಕ್ರಿಯಾಯೋಜನೆಯ ಹಣದಲ್ಲಿ ತಮ್ಮ ಕಾರು ಬಾರುಗಳನ್ನು ನಿರ್ವಹಿಸುತ್ತಾ... ಕುಟುಂಬಗಳನ್ನು ಸಾಕಿ ಸಲುಹುವವರಿದ್ದಾರೆ... ಅವರ ಕುರಿತು ಮಾಹಿತಿ ಇದ್ದ ಸುಬ್ಬಣ್ಣನಿಗೆ ಅವರ ದಾರಿ ಸರಿಬರಲಿಲ್ಲ. ಇಲ್ಲದ ಬೇನಾಮಿ ರೆಪರ್ಟರಿಗಳನ್ನು ಕಾಗದದಲ್ಲಿ ಹುಟ್ಟು ಹಾಕಿ ಪ್ರತಿ ವರ್ಷ ಕೇಂದ್ರ ಸರಕಾರದಿಂದ ನಿಯಮಿತವಾಗಿ ಹಣ ಗಂಟನ್ನು ಹೊಡೆಯುವವರು ರಂಗಭೂಮಿಯ ಆಯಕಟ್ಟಿನ ಜಾಗದಲ್ಲಿದ್ದಾರೆ.... ಈ ಯಾವ ಬೇನಾಮಿ ಕೆಲಸಗಳೂ ಸುಬ್ಬಣ್ಣನಿಂದ ಸಾಧ್ಯವಿರಲಿಲ್ಲ. ಹಣ ಮಾಡುವ ಈ ಯಾವ ಒಳದಾರಿಗಳೂ ಗೊತ್ತಿಲ್ಲದ ಸುಬ್ಬಣ್ಣ ಅಮಾಯಕತೆಯಿಂದ ಹೇಳುತ್ತಿದ್ದ ಒಂದೇ ಮಾತು “ ರಂಗಭೂಮಿ ಉದ್ಯಮವಾಗಬೇಕು, ರಂಗಕರ್ಮಿಗಳು ಹಣಮಾಡಬೇಕು”....
ನಿಜಕ್ಕೂ ಸುಬ್ಬಣ್ಣನ ಸಾವಿಗೆ ಯಾರು ಕಾರಣರು?.... ಆತನ ಆರೋಗ್ಯಕಾರಿಯಾಗಿದ್ದ ಹೃದಯದ ಮೇಲೆ ಅಷ್ಟೊಂದು ಒತ್ತಡವನ್ನು ಹಾಕಿದವರಾರು? ಏನಾದರೂ ಮಾಡಲೇಬೇಕೆಂದು ಸದಾ ತುಡಿಯುತ್ತಿದ್ದ ಆ ಕ್ರಿಯಾಶೀಲ ಹೃದಯ ನಿಲ್ಲುವಂತೆ ಮಾಡಿದರ ಹಿಂದಿರುವ ರಹಸ್ಯವಾದರೂ ಏನು? ವಾಸ್ತವದಲ್ಲಿ ಇದು ಸಹಜ ಸಾವು ಎಂದೇ ಬಿಂಬಿತವಾದರೂ ನನಗ್ಯಾಕೋ ಇದು ಕೊಲೆಯೆಂದೇ ಅನ್ನಿಸುತ್ತಿದೆ. ಇಡೀ ನಮ್ಮ ವ್ಯವಸ್ಥೆ ವ್ಯವಸ್ಥಿತವಾಗಿ ಒಂದು ಕ್ರಿಯಾಶೀಲ ಜೀವವನ್ನು ನಿರ್ಜೀವಗೊಳಿಸಿತಾ? ಎಂಬ ಸಂದೇಹ ಕಾಡುತ್ತಿದೆ.
'ಅಭಿನಯತರಂಗ'ದಿಂದ ನಾಟಕದಲ್ಲಿ ಡಿಪ್ಲೋಮೊ. 'ನೀನಾಸಂ' ನಲ್ಲಿ ಅಭಿನಯದಲ್ಲಿ ಡಿಪ್ಲೊಮೋ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಾಟಕವಿಭಾಗದಲ್ಲಿ ಎಂ.ಎ ಸ್ನಾತಕೊತ್ತರ ಪದವಿ, ಲಂಕೇಶರ ನಾಟಕಗಳ ಕುರಿತು ಪಿಹೆಚ್ಡಿ ಡಾಕ್ಟರೇಟ್..... ಇನ್ನೂ ಏನೇನು ಓದಬೇಕುತ್ತು ಹೇಳಿ. ಡಾಕ್ಟರೇಟ್ ನಂತರ ಮುಂದೆ ಓದುವುದಕ್ಕೆ ಇನ್ನೇನಿದೆ. ನಾಟಕ ಕಲೆಯಲ್ಲಿ ಇಷ್ಟೊಂದು ಉನ್ನತ ಶಿಕ್ಷಣ ಪಡೆದವನ ಯೋಗ್ಯತೆಗೊಂದು ನೌಕರಿಯನ್ನೂ ಕೊಡದಷ್ಟು ಈ ವ್ಯವಸ್ಥೆ ದರಿದ್ರವಾಗಿದೆ. ಪಿಯುಸಿ ಓದಿ ಇಂಗ್ಲಿಷನಲ್ಲಿ ಮಾತಾಡೋ ವ್ಯಕ್ತಿಗೆ ಬಹುರಾಷ್ಟ್ರೀಯ ಕಂಪನಿಯಲ್ಲಿ ತಿಂಗಳಿಗೆ ಇಪ್ಪತ್ತರಿಂದ ನಲವತ್ತು ಸಾವಿರ ಸಂಬಳ ಜೊತೆಗೆ ಇತ್ಯಾದಿ ಅನುಕೂಲತೆಗಳಿವೆ. ಆದರೆ... ಒಬ್ಬ ಡಾಕ್ಟರೇಟ್ ಮಾಡಿದ ಪ್ರತಿಭಾವಂತನಿಗೆ ಮೈಸೂರು ವಿಶ್ವವಿದ್ಯಾಲಯ ಕೊಟ್ಟಿದ್ದು ತಾತ್ಕಾಲಿಕ ನೌಕರಿ ಜೊತೆಗೆ 15 ಸಾವಿರ ಗೌರವ ಸಂಭಾವಣೆ. ಇಷ್ಟೇ ಡಾಕ್ಟರೇಟ್ಗಿರಿಗಿರುವ ಮರ್ಯಾದೆ. ಇಷ್ಟೆಲ್ಲಾ ಆಸೆಯಿಂದ, ಆಸಕ್ತಿಯಿಂದ ಓದಿದ ಒಬ್ಬ ಮಧ್ಯಮ ವರ್ಗದ ವ್ಯಕ್ತಿಯ ಹೃದಯಕ್ಕಾಗುವ ಗಾಯಗಳೆಷ್ಟು ಹೇಳಿ.
ಅಸಾಧ್ಯ ಅಭಿನಯ ಪ್ರತಿಭೆ ಇರುವ ಸುಬ್ಬಣ್ಣನನ್ನು ಟಿವಿ ಮಾಧ್ಯಮ ದಿನಗೂಲಿಯ ರೀತಿಯಲ್ಲಿ ನಡೆಸಿಕೊಂಡಿತು. ಬಾ.. ಬಣ್ಣ ಹಚ್ಚು... ಹೇಳಿದ ಪಾತ್ರ ಮಾಡು... ಸಂಜೆಗೆ ಐನೂರೊ, ಸಾವಿರ ರೂಪಾಯಿನೋ ತೆಗೆದುಕೊಂಡು ಹೋಗು. ಪಾತ್ರ ಇದ್ದಾಗ ಬಾ... ಇಲ್ಲದಿದ್ದಾಗ ಬರಬೇಡ. ಕೆಲವು ಸಿನೆಮಾದಲ್ಲಿ ಅಭಿನಯಿಸಿದ ಸುಬ್ಬಣ್ಣನಿಗೆ ಯಾರೂ ಒಂದು ರೂಪಾಯಿ ಸಂಭಾವನೆ ಕೊಡಲಿಲ್ಲ. ಕೇವಲ ಪ್ರೀತಿಯಿಂದ ನಟಿಸಿದ ಸುಬ್ಬಣ್ಣ ಸಂಭಾವನೆಯನ್ನು ಕೇಳಲೂ ಇಲ್ಲ. ಯಾಕೆಂದರೆ ಸುಬ್ಬಣ್ಣನಂತಹ ಪ್ರತಿಭೆಗಳಿಗೆ ಹಿಂದೆ ಗಾಡ್ ಪಾದರ್ಗಳೂ ಇರೋದಿಲ್ಲ, ಹಣ ಹಾಕಿ ಸಿನೆಮಾ ಮಾಡುವ ಪಾದರ್ಗಳೂ ಇರೋದಿಲ್ಲ. ಖಾಯಂ ಆದಾಯ ಎನ್ನುವುದು ಇಲ್ಲದೇ ಈ ಅತಂತ್ರ ವ್ಯವಸ್ಥೆಯಲ್ಲಿ ಸುಬ್ಬಣ್ಣನಂತಹ ಅಮಾಯಕ ಜೀವಿಯ ಹೃದಯಕ್ಕೆ ಆದ ಆತಂಕಗಳೆಷ್ಟು.
ಹೋಗಲಿ ಅಪಾರವಾಗಿ ಪ್ರೀತಿಸಿದ ರಂಗಭೂಮಿಯಾದರೂ ಸುಬ್ಬಣ್ಣನಂತವರನ್ನು ಗುರುತಿಸಿ ಸನ್ಮಾನಿಸಿ, ಆತನ ಸಂಕಟಕ್ಕೆ ಸಮಾಧಾನ ಹೇಳಿತಾ? ಇಲ್ಲವೇ ಇಲ್ಲ. ಎರಡು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರೀಯವಾಗಿರುವ ಸುಬ್ಬಣ್ಣನಿಗೆ ಕೊನೆಯವರೆಗೂ ನಾಟಕ ಅಕಾಡೆಮಿ ಸದಸ್ಯಗಿರಿಯನ್ನೂ ಕೊಡಲಿಲ್ಲ. ಅಷ್ಟೇ ಯಾಕೆ ಒಂದೇ ಒಂದು ಪ್ರಶಸ್ತಿಯನ್ನೂ ಕೊಡಲಿಲ್ಲ. ರಂಗಭೂಮಿಗೆ ತನ್ನನ್ನು ತಾನು ಸಮರ್ಪಿಸಿಕೊಂಡ ಜೀವದ ಹೃದಯಕ್ಕೆ ಒಂದಿಷ್ಟು ಸಾಂತ್ವನವನ್ನಾದರೂ ಒಂದು ಪ್ರಶಸ್ತಿ ಕೊಡುತ್ತಿತ್ತೋ ಏನೋ? ಕಳೆದ ಬಾರಿ ಸುಬ್ಬಣ್ಣನಿಗೆ ಸಿಗಬಹುದಾದ ಅಕಾಡೆಮಿ ಪ್ರಶಸ್ತಿ ಕೂಡಾ ರಂಗರಾಜಕೀಯದಿಂದಾಗಿ ಬೇರೊಬ್ಬರ ಪಾಲಾಗಿದ್ದು ಎಂತಾ ದುರಂತ.
ಖಾಯಂ ಆದ ಆದಾಯದ ಕೊರತೆ, ಆರ್ಥಿಕ ಸಂಕಷ್ಟದ ನಡುವೆಯೇ ಪ್ರತಿ ತಿಂಗಳು ಪತ್ರಿಕೆಯನ್ನು ತರಲೇ ಬೇಕಾದ ಆಂತರಿಕ ಒತ್ತಡ, ದಶಕಗಳಿಂದ ಮಾಡಿದ ರಂಗಕ್ರಿಯೆಗೆ ಅಕಾಡೆಮಿ-ಇಲಾಖೆಗಳಿಂದ ಪ್ರತಿಕ್ರಿಯೆ ಇಲ್ಲದಿರುವ ನಿರಾಶೆ, ಎಷ್ಟೊಂದು ಓದಿಕೊಂಡರೂ-ನಾಟಕ ಕಲೆಯಲ್ಲಿ ಉನ್ನತ ಶಿಕ್ಷಣ ಪಡೆದರೂ ಪರಿಣಾಮ ಮಾತ್ರ ಶೂನ್ಯ ಎನ್ನುವ ಹತಾಷೆ, ಜೊತೆಗೆ ಕುಟುಂಬ ನಿರ್ವಹಣೆಯ ಜವಾಬ್ದಾರಿ, ನಾಟಕ ನಿರ್ಮಾಣದ ರಂಗಸಂಘಟನೆಯ ಹೊಣೆಗಾರಿಕೆ..... ಒಂದು ಪುಟ್ಟ ಹೃದಯ ಎಷ್ಟೊಂದು ಒತ್ತಡವನ್ನು ಸಹಿಸಬಲ್ಲುದು. ಇನ್ನು ಸಹಿಸುವುದು ಅಸಾಧ್ಯವೆಂದಾದಾಗ ಹೃದಯ ಸ್ಥಬ್ದವಾಯಿತು, ತನ್ನ ಕೆಲಸ ನಿಲ್ಲಿಸಿಬಿಟ್ಟಿತು.
ಈ ಅಮಾನವೀಯ ವ್ಯವಸ್ಥೆ ಒಂದು ಪ್ರತಿಭೆಗೆ ನೀರೆರೆದು ಬೆಳಸುವಲ್ಲಿ ವಿಫಲವಾಯಿತು. ಉನ್ನತ ಶಿಕ್ಷಣ ಪಡೆಯಲು ಅವಕಾಶಮಾಡಿಕೊಟ್ಟ ವ್ಯವಸ್ಥೆಯೇ ಶಿಕ್ಷಣಕ್ಕೆ ಯೋಗ್ಯವೆನಿಸುವ ಕೆಲಸವೊಂದನ್ನು ಕೊಡದೇ ಪ್ರತಿಭಾನ್ವಿತನ ಬದುಕನ್ನೇ ಅತಂತ್ರವನ್ನಾಗಿಸಿತು. ಸ್ವಂತ ಬದುಕನ್ನೂ ನಿರ್ಲಕ್ಷಿಸಿ ರಂಗಭೂಮಿಗೆ ತನ್ನೆಲ್ಲಾ ಪ್ರತಿಭೆ, ಸಮಯ, ಹಣವನ್ನು ದಾರೆಯೆರೆದ ಸುಬ್ಬಣ್ಣ ರಂಗಭೂಮಿಗೆ ಕೊಟ್ಟ ಕೊಡುಗೆಯನ್ನು ಗುರುತಿಸದೇ ನಿರ್ಲಕ್ಷಿಸಿದ ರಂಗಭೂಮಿಗೆ ಸಂಬಂಧಿಸಿದ ಅಕಾಡೆಮಿ, ಇಲಾಖೆಗಳ ಬೇಜವಾಬ್ದಾರಿತನಗಳು ಕ್ರಿಯಾಶೀಲ ಜೀವವೊಂದರ ಅಂತ್ಯಕ್ಕೆ ಪರೋಕ್ಷವಾಗಿ ಕಾರಣವಾದವು.
ತನ್ನ ಪಾತ್ರ ಮುಗಿಸಿ ಎದ್ದು ಹೋಗುವ ಮುಂಚೆ ಹಲವು ಯುವಕರಿಗೆ ಅಭಿನಯ ಕಲೆಯನ್ನು ಸುಬ್ಬಣ್ಣ ದಶಕಗಳ ಕಾಲ ಹೇಳಿಕೊಟ್ಟಿದ್ದಾರೆ. ಎಂಇಎಸ್ ಶಾಲೆಯಲ್ಲಿ, ಆದರ್ಶ ಸಂಸ್ಥೆಯಲ್ಲಿ, ಕಸ್ತೂರಿ ಕಲಾಕೇಂದ್ರದಲ್ಲಿ, ಸೃಷ್ಟಿ ಸಂಸ್ಥೆಯಲ್ಲಿ ಸುಬ್ಬಣ್ಣ ಕಲಿಸಿಕೊಟ್ಟ ನಟನೆಯ ಪಾಠಗಳನ್ನು ಸಾವಿರಾರು ಯುವಕರು ಕಲಿತಿದ್ದಾರೆ. ಸುಬ್ಬಣ್ಣನ ಆಶಯವನ್ನು ಹಲವರಾದರೂ ಮುಂದುವರೆಸಿಕೊಂಡು ಹೋಗುತ್ತಾರೆ. ಕೆಲವರಾದರೂ ಸುಬ್ಬಣ್ಣನಂತಹ ರಂಗಶಿಕ್ಷಕನನ್ನು ಕೊನೆಯವರೆಗೂ ನೆನಪಿನಲ್ಲಿಡುತ್ತಾರೆ. ನಟನಾಗಿ, ರಂಗನಿರ್ದೇಶಕನಾಗಿ, ರಂಗಪತ್ರಿಕೆಯ ಸಂಪಾದಕನಾಗಿ, ರಂಗಸಂಘಟಕನಾಗಿ, ರಂಗಶಿಕ್ಷಕನಾಗಿ... ಸುಬ್ಬಣ್ಣ ತಾವಿರುವಷ್ಟು ಕಾಲ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ. ಹಲವಾರು ಜನ ಉತ್ತರಾಧಿಕಾರಿಗಳನ್ನೂ ಹುಟ್ಟುಹಾಕಿದ್ದಾರೆ. ಸುಬ್ಬಣ್ಣ ಇನ್ನೂ ಹಲವಾರು ವರ್ಷ ನಮ್ಮ ಜೊತೆಗಿರಬೇಕಿತ್ತು... ಆದರೆ ಅಂತಹ ಕ್ರಿಯಾಶೀಲ ಜೀವವೊಂದನ್ನು ಉಳಿಸಿಕೊಳ್ಳುವ ಸೌಭಾಗ್ಯ ನಮ್ಮ ವ್ಯವಸ್ಥೆಗೂ ಇಲ್ಲಾ, ನಮ್ಮ ರಂಗಭೂಮಿಗೂ ಇಲ್ಲಾ. ಸುಬ್ಬಣ್ಣನಂತವರನ್ನು ಪರೋಕ್ಷವಾಗಿ ಕೊಂದು ತಿಂದ ಈ ಸಮಾಜದ ಅಮಾನವೀಯ ವ್ಯವಸ್ಥೆಗೆ ಕನಿಷ್ಟ ಪಶ್ಚಾತ್ತಾಪವೂ ಇಲ್ಲಾ. ಈ ವ್ಯವಸ್ಥೆಯ ಅಸಹಕಾರವನ್ನು ಮೀರಿ ಸುಬ್ಬಣ್ಣನಂತಹ ಹಲವಾರು ರಂಗಕರ್ಮಿಗಳು ಈಗಲೂ ಕಲೆಗಾಗಿ ಶ್ರಮಿಸುತ್ತಿದ್ದಾರೆ. ಕನಿಷ್ಟ ಅಂತಹವರನ್ನಾದರೂ ಗುರುತಿಸಿ ಅಗತ್ಯ ಸಹಕಾರವನ್ನು ಕೊಟ್ಟು ಬೆಳೆಸಬೇಕಾದ ಜವಾಬ್ದಾರಿ ಈ ವ್ಯವಸ್ಥೆಯ ಮೇಲಿದೆ, ರಂಗಭೂಮಿಯ ಸಾಂಸ್ಥಿಕ ಸಂಸ್ಥೆಗಳ ಮೇಲಿದೆ, ಎಲ್ಲಕ್ಕಿಂತ ಹೆಚ್ಚಾಗಿ ರಂಗಕರ್ಮಿಗಳು ಹಾಗೂ ರಂಗಕಲಾಪೋಷಕರ ಮೇಲಿದೆ.
“ನಮ್ಮವರು ಶೂಟಿಂಗಿಗೆ ಹೋಗಿದ್ದಾರೆ, ಇನ್ನೇನು ರಾತ್ರಿ ಬರ್ತಾರೆ.... ನಾಟಕದ ತಾಲಿಂಗೆ ಹೋಗಿದ್ದಾರೆ, ಮುಗಿಸಿದ ತಕ್ಷಣ ಬಂದೇ ಬರ್ತಾರೆ ಕಾಯ್ತಾ ಇರಿ...” ... ಸುಬ್ಬಣ್ಣನ ಮನೆಯವರಿಗೆ ಸಾಂತ್ವಣ ಹೇಳಲು ಹೋದವರಿಗೆಲ್ಲಾ ಅವರ ಹೆಂಡತಿ ಕಣ್ಣೀರಾಗಿ ಹೀಗೆ ಉತ್ತರಿಸುತ್ತಿದ್ದರು. ಸುಬ್ಬಣ್ಣ ಮರಳಿ ಬರೋದಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಆ ನೊಂದ ಮಹಿಳೆಗೆ ಮಾತ್ರ ಈಗಲೂ ಅಪಾರವಾದ ನಂಬಿಕೆ... ‘ರಾತ್ರಿ ಸುಬ್ಬಣ್ಣ ನಾಟಕ ಮುಗಿಸಿದ ತಕ್ಷಣ ಬಂದೇ ಬರ್ತಾರೆ’ ಅಂತ. ಆದರೆ ಅವರಿಗೆ ಹೇಗೆ ಹೇಳುವುದು ಸುಬ್ಬಣ್ಣ ತನ್ನ ನಾಟಕದ ಪರದೆ ಎಳೆದುಕೊಂಡು ಖಾಯಂ ಆಗಿ ನೇಪತ್ಯಕ್ಕೆ ಹೋದರು ಎಂದು. ಸುಬ್ಬಣ್ಣನ ನೆನಪಾದಾಗಲೆಲ್ಲಾ ಆ ಹಾಡು ಮತ್ತೆ ಮತ್ತೆ ಕಾಡುತ್ತದೆ.
“ತನುವಿನೊಳಗನುದಿನ ಇದ್ದು,
ನನ್ನ ಮನಕ್ಕೊಂದು ಮಾತು-
ಹೇಳದೇ ಹೋದೆಯಾ ಹಂಸಾ....”,
-ಶಶಿಕಾಂತ ಯಡಹಳ್ಳಿ
ತನುವಿನೊಳಗನುದಿನ ಇದ್ದು,
ಪ್ರತ್ಯುತ್ತರಅಳಿಸಿನನ್ನ ಮನಕ್ಕೊಂದು ಮಾತು-
ಹೇಳದೇ ಹೋದೆಯಾ ಹಂಸಾ.. ಈ ತತ್ವಪದ ಪೂರ್ತಿ ಇದ್ದರೆ ಪ್ರಕಟಿಸಿ...