ಗುರುವಾರ, ಜೂನ್ 26, 2014

ನಾಟಕ ಅಕಾಡೆಮಿ ಏಣಗಿ ಬಾಳಪ್ಪನವರಿಗೆ ಮಾಡಿದ್ದು ಸನ್ಮಾನವೋ ಇಲ್ಲಾ ಅವಮಾನವೋ?


ಕನ್ನಡ ರಂಗಭೂಮಿಯ ಡಾ.ರಾಜಕುಮಾರ್ ಎಂದರೆ ಅದು ಏಣಗಿ ಬಾಳಪ್ಪನವರು. ವೃತ್ತಿ ಕಂಪನಿ ನಾಟಕ ಕ್ಷೇತ್ರದಲ್ಲಿ ಆರು ದಶಕಗಳ ಕಾಲ ಕಲಾವಿದರಾಗಿ, ಕಂಪನಿ ಮಾಲೀಕರಾಗಿ, ರಂಗಸಂಘಟಕರಾಗಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ಕನ್ನಡ ರಂಗಭೂಮಿಗೆ ಅಪಾರವಾದ ಕೊಡುಗೆಯನ್ನಿತ್ತವರು. ಇದೆಲ್ಲದಕ್ಕಿಂತ ಹೆಚ್ಚಾಗಿ ವ್ಯಸನ ರಹಿತರಾಗಿ, ಅತ್ಯುತ್ತಮ ವ್ಯಯಕ್ತಿಕ ಶಿಸ್ತನ್ನು ರೂಢಿಸಿಕೊಂಡು ಮಾದರಿ ಬದುಕನ್ನು ಬದುಕಿದಂತವರು. ಇಂತಹ ರಂಗಭೂಮಿಯ 'ಬಸವಣ್ಣ'ನಿಗೆ ಈಗ ನೂರು ವರ್ಷ ತುಂಬಿದೆ. ಇಂತಹ ಅಪರೂಪದ ಹಿರಿಯ ರಂಗಜೀವಿಯ ಶತಕ ಸಂಭ್ರಮವನ್ನು ಇಡೀ ರಂಗಭೂಮಿ ಆಚರಿಸಬೇಕಾಗಿದೆ. ನಾಟಕ ಅಕಾಡೆಮಿ ತಡವಾಗಿಯಾದರೂ ಏಣಗಿ ಬಾಳಪ್ಪನವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸ್ತುತ್ಯಾರ್ಹ

ಕನ್ನಡ ನಾಟಕ ಅಕಾಡೆಮಿ ಏಣಗಿ ಬಾಳಪ್ಪನವರ ಸನ್ಮಾನ ಸಂಭ್ರಮ ಕಾರ್ಯಕ್ರಮವನ್ನು ಧಾರವಾಡದಲ್ಲಿ 2014, ಜೂನ್ 14 ರಂದು ಹಮ್ಮಿಕೊಂಡಿತ್ತು. ನಾಟಕ  ಅಕಾಡೆಮಿಯ ಹೊಸ ಪದಾದಿಕಾರಿಗಳ ಪಡೆ ಅಸ್ತಿತ್ವಕ್ಕೆ ಬಂದು ಮೂರುವರೆ ತಿಂಗಳ ನಂತರ ಹಮ್ಮಿಕೊಂಡ ಮೊದಲ ಕಾರ್ಯಕ್ರಮ ಇದು. ಏಣಗಿ ಬಾಳಪ್ಪನವರಿಗೆ ನೂರು ವರ್ಷ ತುಂಬಿದ ಶತಕ ಸಂದರ್ಭದಲ್ಲಿ ಅವರನ್ನು ಗೌರವಿಸಬೇಕಾದದ್ದು ನಾಟಕ ಅಕಾಡೆಮಿಯ ಆದ್ಯ ಕರ್ತವ್ಯವಾಗಿತ್ತು. ಜೊತೆಗೆ ನಿಷ್ಕ್ರೀಯಗೊಂಡ ಅಕಾಡೆಮಿ ಇನ್ನೂ ಬದುಕಿದೆ ಎಂದು ತೋರಿಸಲು ಬಾಳಪ್ಪನವರಂತಹ ಹೆಸರಾಂತರನ್ನು ಸನ್ಮಾನಿಸುವ ಜರೂರತ್ತು ಇತ್ತು.

ಇಡೀ ಸನ್ಮಾನ ಸಂಭ್ರಮದ ಕಾರ್ಯಕ್ರಮಗಳನ್ನೂ ಸಹ ವಿಶೇಷವಾಗಿ ರೂಪಿಸಲಾಗಿತ್ತು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನವು ಜೂನ್ 14 ರಂದು ಸಾಂಸ್ಕೃತಿಕ ಕಲರವದಿಂದ ತಂಬಿತ್ತು. ಅಕಾಡೆಮಿಯ ಅಧ್ಯಕ್ಷ ಎಲ್.ಬಿ.ಶೇಖ ಮಾಸ್ತರ್ ಖುದ್ದಾಗಿ ನಿಂತು ನೂರೊಂದು ಕಲಾವಿದರನ್ನು ಸೇರಿಸಿ ಏಣಗಿ ಬಾಳಪ್ಪನವರ 'ಕಲಾವೈಭವ ನಾಟ್ಯಸಂಘ' ನಾಂದಿ ಗೀತೆಯನ್ನು ಕಂಪೋಜ್ ಮಾಡಿ ವೇದಿಕೆಯಲ್ಲಿ ಸಮೂಹ ಗಾಯನ ರೂಪದಲ್ಲಿ ಪ್ರಸ್ತುತ ಪಡಿಸಿದರು. ರಂಗ ಗೀತೆಗಳ ಗಾಯನ, ಕವಿತೆಗಳ ವಾಚನ, ಲೈವ್ ಚಿತ್ರ ರಚನೆಗಳು, ವಾರ್ತಾ ಇಲಾಖೆಗೆ ಚಿಕ್ಕಸುರೇಶರವರು  ನಿರ್ದೇಶಿಸಿದ ಏಣಗಿ ಬಾಳಪ್ಪನವರ  ಕುರಿತ ಸಾಕ್ಷಚಿತ್ರ ಪ್ರದರ್ಶನ, ಏಣಗಿ ಬಾಳಪ್ಪನವರ ಕುರಿತ ಲೇಖನಗಳ ಸಂಗ್ರಹವಿರುವ ಪುಸ್ತಕ ಬಿಡುಗಡೆ ಹಾಗೂ ಹುಬ್ಬಳ್ಳಿಯ ಕರ್ನಾಟಕ ಜಾನಪದ ಕಲಾವಿದರ ಅಭಿವೃದ್ದಿ ಸಂಘದಿಂದ ಹೆಲನ್ ಮೈಸೂರು ರವರ ನಿರ್ದೇಶನದ ನಾಟಕ 'ಜಗಜ್ಯೋತಿ ಬಸವೇಶ್ವರ' ಪ್ರದರ್ಶನಗಳು ಬಾಳಪ್ಪನವರ ಸನ್ಮಾನ ಸಮಾರಂಭದ ಭಾಗಗಳಾಗಿದ್ದವು.

ಶತಕ ಪುರುಷ ನಾಟ್ಯಭೂಷಣ ಏಣಗಿ ಬಾಳಪ್ಪ ಹಾಗೂ ಅವರ ಪತ್ನಿ ಏಣಗಿ ಲಕ್ಷ್ಮೀಬಾಯಿ ಇಬ್ಬರನ್ನೂ ಸನ್ಮಾನಿಸಿ ಗೌರವಿಸಲಾಯಿತು. ಏಣಗಿ ದಂಪತಿಗಳಿಬ್ಬರೂ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರೆಂಬುದು ಇಲ್ಲಿ ಇನ್ನೊಂದು ವಿಶೇಷ. ಇವರ ಜೊತೆಗೆ ಏಣಗಿ ಬಾಳಪ್ಪನವರು ಕಟ್ಟಿ ಬೆಳೆಸಿದ 'ಕಲಾವೈಭವ ನಾಟ್ಯ ಸಂಘ'ದಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ಕಲಾವಿದರನ್ನೂ ಸಹ ಕರೆಸಿ ಸನ್ಮಾನಿಸಲಾಯಿತು. ಸಮಾರಂಭಕ್ಕೆ ಗೈರು ಹಾಜರಾದ ಸುಭದ್ರಮ್ಮ ಮನ್ಸೂರ ಹಾಗೂ ಸುಧಾ  ಇಬ್ಬರನ್ನು ಹೊರತು ಪಡಿಸಿ ಸದಾಶಿವ ಬ್ರಹ್ಮಾವರ, ಗಂಗಯ್ಯ ಶಿರಹಟ್ಟಿಮಠ, ಕೃಷ್ಣಾಜಿ ಶಿರಸಿ, ಪುಷ್ಪಮಾಲಾ ಅಣ್ಣೀಗೇರಿ, ಬಸಯ್ಯ ಸವದತ್ತಿ, ಸುಶೀಲಮ್ಮ ಕುಂದಾಪುರ, ಶಂಕರಪ್ಪ ಸುಡುಗಾಡಿ, ಸಚಿದೇವಿ ವಿಜಾಪುರ, ಸದಾಶಿವ ಜನಗೌಡರ ವೆಂಕಟೇಶ ಹೆಗಡೆ, ಸುಬ್ರಹ್ಮಣ್ಯ ಶಾಸ್ತ್ರಿ, ರಾಧ ಬೇವಿನಕಟ್ಟಿ ಹಾಗೂ ಸೈಯದ್ ಮಾಸ್ತರ.... ಹೀಗೆ ಹದಿಮೂರು ಜನ ಹಿರಿಯ ಕಲಾವಿದರು ಸನ್ಮಾನಿತರಾಗಿ ಸಂತಸಗೊಂಡರುಒಂದು ಕಂಪನಿ ನಾಟಕದ ಹಳೆಯ ತಲೆಮಾರಿನ ಕಲಾವಿದರೆಲ್ಲಾ ಮೂರು ದಶಕಗಳ ನಂತರ ಒಂದೇ ವೇದಿಕೆಯ ಮೇಲೆ ಸಮ್ಮಿಲನಗೊಂಡ  ಸಂಭ್ರಮ ಅನನ್ಯವಾಗಿತ್ತು.

ಆದರೆ..... ಮೂರು ಗಂಟೆಗಳ ಕಾಲ ನಡೆದ ಅಕಾಡೆಮಿ ಪ್ರಾಯೋಜಿತ ಈ ಕಾರ್ಯಕ್ರಮದಲ್ಲಿ ನಿಜವಾಗಿಯೂ ನಡೆದಿದ್ದು ಏಣಗಿ ಬಾಳಪ್ಪನವರ ಸನ್ಮಾನವೋ ಇಲ್ಲಾ ಅವಮಾನವೋ? ಎನ್ನುವ ಅನುಮಾನ ಅಲ್ಲಿ ನೆರೆದವರಿಗೆಲ್ಲಾ ಕಾಡಿದ್ದಂತೂ ಸುಳ್ಳಲ್ಲ. ಯಾಕೆಂದರೆ  ಯಾರಿಗಾಗಿ ಈ ಸಂಭ್ರಮದ ಸಮಾರಂಭ ಮಾಡಲಾಗಿತ್ತೋ ಅದು ನೆಪಮಾತ್ರವಾಗಿ ಏಣಗಿ ಬಾಳಪ್ಪನವರ ಹೆಸರಲ್ಲಿ ತಮ್ಮನ್ನು ತಾವು ಮೆರೆಸಿಕೊಳ್ಳುವುದು ಅಕಾಡೆಮಿ ಅಧ್ಯಕ್ಷರ ಒಳ ಹುನ್ನಾರು ಎನ್ನುವುದು ಶೇಖ ಮಾಸ್ತರರ ಆಟಿಟ್ಯೂಡ್ ನೋಡಿದವರಿಗೆ ಸ್ಪಷ್ಪವಾಗತೊಡಗಿತು. ನಾಟಕ ಅಕಾಡೆಮಿಯ ಮುಖ್ಯಸ್ತರಾಗಿ ಸನ್ಮಾನ ಸಮಾರಂಭದ ವ್ಯವಸ್ಥೆಯನ್ನು ಹಿನ್ನೆಲೆಯಲ್ಲಿ ನಿಂತು ಅಚ್ಚುಕಟ್ಟಾಗಿ ಆಯೋಜಿಸಬೇಕಿದ್ದ  ಶೇಖ ಮಾಸ್ತರ್ ಅದನ್ನು ಬಿಟ್ಟು ಎಲ್ಲವನ್ನೂ ತಾನೇ ಮಾಡಲು ಹೋಗಿ ಧಾರವಾಡದ ಪ್ರಜ್ಞಾವಂತ ಜನರ ಮುಂದೆ ನಗೆಪಾಟಲಿಗೀಡಾಗಿದ್ದೊಂದು ವಿಪರ್ಯಾಸ.




ನೂರು ಜನ ಕಲಾವಿದರನ್ನು ಸೇರಿಸಿ ಏಣಗಿ ಬಾಳಪ್ಪನವರ ನಾಟಕ ಕಂಪನಿಯ ನಾಂದಿ ಗೀತೆಯನ್ನು ಸಮೂಹ ಗಾಯನದ ಮೂಲಕ ವೇದಿಕೆಯ ಮೇಲೆ ಹಾಡಿಸಲಾಯಿತು. ಈ ನಾಂದಿ ಗೀತೆಯ ಸಂಗೀತ ಸಂಯೋಜನೆ ಹಾಗೂ ನಿರ್ದೇಶನವನ್ನು ವಹಿಸಿಕೊಂಡವರು ಖುದ್ದು ಶೇಖ ಮಾಸ್ತರರೇ. ಅವರಿಗೆ ತಮ್ಮ ಕಂಪನಿ ನಾಟಕದ ಸಂಗೀತ ಪ್ರತಿಭೆಯನ್ನು ತೋರಿಸಬೇಕಾಗಿತ್ತು. ಅವಕಾಶವಿದ್ದಾಗ ತೋರಿಸಿಕೊಳ್ಳಲಿ ಬಿಡಿ ಬೇಡಾ ಎಂದವರಾರು? ಆದರೆ ಜನ ಮೆಚ್ಚಿ ಹೌದೌದು ಎನ್ನುವಂತೆ ಸಮೂಹ ನಾಂದಿ ಗೀತೆ ಗಾಯನ ನಿರ್ದೇಶಿಸಿದ್ದರೆ ಶಹಬ್ಬಾಷ್ ಶೇಖ್ ಎನ್ನಬಹುದಾಗಿತ್ತು. ಆದರೆ ಇಡೀ ನಾಂದಿ ಗೀತೆ ಯಾವುದೇ ತಾಳ ತಂತಿ ಸ್ವರ ಏರಿಳಿತಗಳಿಲ್ಲದೇ, ಸಂಗೀತಕ್ಕೂ ಹಾಡಿಗೂ ತಾಳಮೇಳವಿಲ್ಲದೇ ತಗಡೆದ್ದು ಹೋಯಿತು. ಇದು ಹಾಡಿದ ಕಲಾವಿದರ ತಪ್ಪಾಗಿರದೇ ಸೂಕ್ತ ರಿಹರ್ಸಲ್ಸ ಮಾಡಿಸದೇ ಕೆಟ್ಟದಾಗಿ ಸಂಗೀತ ಸಂಯೋಜನೆ ಮಾಡಿ ಅರ್ಜೆಂಟಲ್ಲಿ ಹಾಡಿಸಿದ ಶೇಖ ಮಾಸ್ತರನ ಅತಿರೇಕದ ಆತ್ಮವಿಶ್ವಾಸದ ಫಲವಾಗಿತ್ತು. ಆದರೂ ಧಾರವಾಡದ ಜನ ಸಹನಶೀಲರು ಬಾಳಪ್ಪನವರ ಮೇಲಿನ ಅಭಿಮಾನಕ್ಕೆ ಅದನ್ನೂ ತಡೆದುಕೊಂಡರು. ಇಡೀ ಸನ್ಮಾನ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮನತಣಿಸಿದ್ದು ರಂಗಸಂಗೀತ ಕಾರ್ಯಕ್ರಮ ಮತ್ತು  ಹಾಗೂ ಸುಂದರವಾದ ರಂಗಸಜ್ಜಿಕೆ ಮಾತ್ರ.

ಏಣಗಿ ಬಾಳಪ್ಪನವರಿಗೆ ನೂರು ವರ್ಷ ತುಂಬಿದೆ, ಹಾಗೂ ಅವರ ಪತ್ನಿ ಲಕ್ಷ್ಮೀಬಾಯಿರವರಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಸಂದಿದೆ.. ಹೀಗಾಗಿ ಈ ಇಬ್ಬರೂ ರಂಗದಂಪತಿಗಳು ಇಡೀ ಸಂಭ್ರಮದ ಕೆಂದ್ರಬಿಂದುವಾಗಬೇಕಿತ್ತು. ಆದರೆ ಹಾಗಾಗಲು ಈ ನಮ್ಮ ನಾಟಕ ಅಕಾಡೆಮಿಯ ಬ್ರಹಸ್ಪತಿಗಳ ಗುಂಪು ಅವಕಾಶವನ್ನೇ ಕೊಡಲಿಲ್ಲ. ಏಣಗಿ ಬಾಳಪ್ಪ ದಂಪತಿಗಳ ಜೊತೆಗೆ ''ಕಲಾವೈಭವ ನಾಟ್ಯ ಸಂಘ'ದಲ್ಲಿ  ಮೂರು ದಶಕಗಳ ಹಿಂದೆ ತೊಡಗಿಸಿಕೊಂಡಿದ್ದ ಹದಿಮೂರು ಜನ ಕಲಾವಿದರಿಗೂ ಸಹ ಸಾಮೂಹಿಕ ಸನ್ಮಾನ ಮಾಡಲಾಯಿತು. (ಇನ್ನೂ ಇಬ್ಬರು ಗೈರು ಹಾಜರಾಗಿದ್ದರು). ಇದರಿಂದಾಗಿ ಬಾಳಪ್ಪನವರ ಸನ್ಮಾನ 'ಗುಂಪಿನಲ್ಲಿ ಗೋವಿಂದ' ಎನ್ನುವಂತಾಯಿತು. ಸರಕಾರ ರಾಜ್ಯಪ್ರಶಸ್ತಿಗಳನ್ನು ಸಾಮೂಹಿಕವಾಗಿ ಕೊಡುವಂತೆ ಇಲ್ಲಿಯೂ ಸಹ ಒಂದು ಗುಂಪನ್ನು ವೇದಿಕೆಯ ಮೇಲೆ ಸೇರಿಸಿ ಅವಸರವಸರವಾಗಿ ಒಂದು ಸಲಕ್ಕೆ ಐದೈದು ಜನರಂತೆ ಶಾಲು ಹೂಹಾರ ಫಲ ತಾಂಬೂಲ ಕೊಟ್ಟು ಸರಸ್ವತಿಯ ಮೂರ್ತಿಯನ್ನಿತ್ತು ಸನ್ಮಾನ ಮಾಡಲಾಯಿತು. ಇತರ ಕಲಾವಿದರಿಗೆ ಸನ್ಮಾನಿಸಿದ್ದು ತಪ್ಪೆಂದು ಇದರ ಅರ್ಥವಲ್ಲ. ಆದರೆ ಈ ಸಂದರ್ಭದಲ್ಲಿ ಏಣಗಿ ಬಾಳಪ್ಪನವರು ಮಾತ್ರ ಪ್ರಮುಖರಾಗಬೇಕಾಗಿತ್ತು. ಆದರೆ ಅವರ ಪ್ರಾಮುಖ್ಯತೆಯನ್ನು ಡೈಲ್ಯೂಟ್ ಮಾಡಿ ಸಮೂಹ ಸನ್ಮಾನ ಮಾಡಿದ್ದು ಬಾಳಪ್ಪನವರಿಗೆ ಮಾಡಿದ ಅವಮಾನವೇ ಆಗಿದೆ. ಬೇಕೆಂದರೆ ಇನ್ನೊಂದು ಕಾರ್ಯಕ್ರಮ ಮಾಡಿ ಹಿರಿಯ ರಂಗಕಲಾವಿದರನ್ನು ಸನ್ಮಾನಿಸಲಿ. ಇಲ್ಲವೇ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳನ್ನು ಹಿರಿಯರಿಗೆ ಕೊಟ್ಟು ಸಂಭ್ರಮಿಸಲಿ ಬೇಡ ಎಂದವರಾರು?. ಇಷ್ಟಕ್ಕೂ ಇಡೀ ಕಾರ್ಯಕ್ರಮ ರೂಪಿಸುವಾಗ 'ಏಣಗಿ ಬಾಳಪ್ಪನವರಿಗೆ ಶತಕ ಸಂಭ್ರಮ ಆಚರಣೆ' ಎಂದೇ ಬಿಂಬಿಸಲಾಗಿತ್ತು. ಆಮಂತ್ರಣ ಪತ್ರಿಕೆಯ ಮುಖಪುಟದಲ್ಲೂ ಅದನ್ನೇ ಹೈಲೈಟ್ ಮಾಡಲಾಗಿತ್ತು. ಆದರೆ ಕಾರ್ಯಕ್ರಮ ಮಾತ್ರ 'ಹಿರಿಯ ಕಲಾವಿದರಿಗೆ ಸನ್ಮಾನ' ಎನ್ನುವ ರೀತಿಯಲ್ಲಿ ನಡೆದು ಆ ಹಿರಿಯ ಕಲಾವಿದರಲ್ಲಿ ಏಣಗಿ ಬಾಳಪ್ಪನವರೂ ಒಬ್ಬರು ಎನ್ನುವಂತಾಗಿ ಇಡೀ ಸಮಾರಂಭದ ಮೂಲ ಆಶಯವೇ  ಭಗ್ನಗೊಂಡಿತು. ಹತ್ತರಲ್ಲಿ ಹನ್ನೊಂದನೆಯವರಾಗಿ ಬಾಳಪ್ಪನವರು ಸನ್ಮಾನಿತರಾದರು. ಒಂದೇ ವ್ಯತ್ಯಾಸ ಏನೆಂದರೆ ಎಲ್ಲರಿಗೂ ಕೊಟ್ಟ ಸರಸ್ವತಿ ಪ್ರತಿಮೆಗಿಂತ ಬಾಳಪ್ಪನವರಿಗೆ ಕೊಟ್ಟ ಪ್ರತಿಮೆ ಒಂದಿಷ್ಟು ದೊಡ್ಡದಾಗಿತ್ತುಅರ್ಥಪೂರ್ಣವಾಗಬೇಕಾಗಿದ್ದ  ಕಾರ್ಯಕ್ರಮ ವ್ಯರ್ಥಪೂರ್ಣವಾಗಿದ್ದೊಂದು ವಿಪರ್ಯಾಸ.



ಹೋಗಲಿ ಕಾರ್ಯಕ್ರಮವನ್ನಾದರೂ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತಾ? ಅದೂ ಇಲ್ಲ. ಇಡೀ ಕಾರ್ಯಕ್ರಮದಲ್ಲಿ ಶಿಸ್ತು ಎನ್ನುವುದೇ ಮಾಯವಾಗಿತ್ತು. ಸಮಾರಂಭ ಮುಗಿದ ನಂತರ ಧಾರವಾಡದ ಕೆಲ ಪ್ರೇಕ್ಷಕರು ಹೇಳಿದ್ದೇನೆಂದರೆ 'ಇದೊಂದು ನಾಟಕ ಅಕಾಡೆಮಿಯ ಹುಚ್ಚರ ಸಂತೆ, ಹುಚ್ಚ ಮುಂಡೆ ಮದುವೇಲಿ ಉಂಡವನೇ ಜಾಣ' ಎಂದು. ಕಾರ್ಯಕ್ರಮಕ್ಕೆ ನಿರೂಪಕರನ್ನು ಬೆಂಗಳೂರಿನಿಂದ ಕಳುಹಿಸಲಾಗುವುದು ಎಂದು ನಾಟಕ ಅಕಾಡೆಮಿಯ ರೆಜಿಸ್ಟ್ರಾರ್ ಭಾಗ್ಯರವರ ಹಠ. ಅವರಿಗೆ ತಮ್ಮ ಕುಲಬಾಂಧವರಿಗೆ ಆ ಅವಕಾಶವನ್ನು ದೊರಕಿಸಿಕೊಡುವ ತವಕ.  ಆದರೆ ಈ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶಂಕರ ಹಲಗತ್ತಿ ಅದನ್ನು ವಿರೋದಿಸಿದರು. 'ನಿರೂಪಕರನ್ನಾದರೂ ಧಾರವಾಡದವರನ್ನು ಹಾಕಿಕೊಳ್ಳಿ' ಇಲ್ಲವಾದರೆ ಎಲ್ಲರೂ ಬೆಂಗಳೂರಿನವರೇ ಬಂದು ಇಲ್ಲಿ ಮಾಡುವುದಿದ್ದರೆ ನೀವೆ ಮಾಡಿಕೊಳ್ಳಿ, ಎಂದು ಖಡಾಖಂಡಿತವಾಗಿ ಹೇಳಿದರು. ಅವರ ಒತ್ತಾಸೆಗೆ ಮನಿದು ಧಾರವಾಡದ ಆಕಾಶವಾಣಿ ಕಲಾವಿದೆ ಆರತಿ ದೇವಶಿಖಾಮನಿ ಹಾಗೂ ಶಿಕ್ಷಕರಾದ ಎಸ್.ಕಣವಿರವರನ್ನು ಸಮಾರಂಭದ ನಿರೂಪನೆಗೆ ಕರೆಸಲಾಯಿತು. ಇದರಿಂದಾಗಿ ವಿರೋಧಿಸಿದ ಶಂಕರಣ್ಣರವರಿಗೆ ಆಮೇಲೆ ಯಾವುದೇ ಕೆಲಸ ವಹಿಸದೇ ಉದ್ದೇಶ ಪೂರ್ವಕವಾಗಿ ಮೂಲೆಗುಂಪು ಮಾಡಲಾಯಿತು. ಹಾಗೂ ನಿರೂಪಕರಿದ್ದರೂ ಅವರ ಕೆಲಸವನ್ನು ಶೇಖ ಮಾಸ್ತರರೇ ಮಾಡಿದರು. ಅದು ಹೇಗೆಂದರೆ.. ನಮ್ಮ ಶೇಖ ಮಾಸ್ತರರಿಗೆ ನಿರೂಪಕರ ಮೇಲೆ ಅದ್ಯಾಕೋ ನಂಬಿಕೆಯೇ ಇರಲಿಲ್ಲ. ಹೀಗಾಗಿ ಕಾರ್ಯಕ್ರಮದ ನಡುವೆಯೇ ತಾವೇ ಆಗಾಗ ಎದ್ದು ಮೈಕು ಕಿತ್ತುಕೊಂಡು ಮಾತಾಡತೊಡಗಿದರು. ಸನ್ಮಾನಿತರನ್ನು ಕರೆಯುವುದು, ಅವರ ಪರಿಚಯ ಮಾಡುವುದನ್ನೂ ಸಹ ಶೇಖ ಮಾಸ್ತರರೇ ಮಾಡತೊಡಗಿದ್ದು ಸಿಕ್ಕಾಪಟ್ಟೆ ಆಭಾಸಕಾರಿಯಾಯಿತು. ನಿರೂಪಕರೆನ್ನಿಸಿಕೊಂಡವರು ಅಸಹಾಯಕರಾಗಿ ಶೇಖ ಮಾಸ್ತರನ ತೆವಲುತನವನ್ನು ನೋಡುತ್ತಾ ನಿಲ್ಲಬೇಕಾಯಿತು. ಸಮಾರಂಭದ ಗಂಭಿರತೆಯನ್ನು ಹಾಳು ಮಾಡಿ ಆಶಿಸ್ತನ್ನು ಕಾಪಾಡುವಲ್ಲಿ ಶೇಖ ಮಾಸ್ತರ ಯಶಸ್ವಿಯಾದರು. ಏಣಗಿ ಬಾಳಪ್ಪನವರು ಮೂಕ ಪ್ರೇಕ್ಷಕರಾಗಿ ವೇದಿಕೆಯ ಮೇಲೆ ಕುಳಿತಿದ್ದರು.  


ಶೇಖ ಮಾಸ್ತರ
ಬಹುಷಃ ನಾಟಕ ಅಕಾಡೆಮಿಯ ಇತಿಹಾಸದಲ್ಲಿ ಶೇಖ ಮಾಸ್ತರನ ರೀತಿ ವೇದಿಕೆಯ ಮೇಲೆ ತಮ್ಮನ್ನು ತಾವು ಮೆರೆಸಿಕೊಳ್ಳಲು ಹಪಾಹಪಿಗೊಳಗಾದ  ಮೈಕಾಸುರ ಪ್ರೀಯ ಇನ್ನೊಬ್ಬ ಅಧ್ಯಕ್ಷರನ್ನು ರಂಗಭೂಮಿ ಇದುವರೆಗೂ ನೋಡಿಲ್ಲಮತ್ತೊಂದು ಪ್ರಮುಖವಾದ ಯಡವಟ್ಟಾಗಿದ್ದು ಮುಖ್ಯ ಅತಿಥಿಗಳ ಅನುಪಸ್ಥಿತಿಯಲ್ಲಿ. ನಾಟಕ ಅಕಾಡೆಮಿಯ ಅಧ್ಯಕ್ಷ  ಅದೆಷ್ಟು ದುರ್ಭಲ ಎನ್ನುವುದಕ್ಕೆ ಇದು ಮತ್ತೊಂದು ಪ್ರಮುಖ ಸಾಕ್ಷಿಯಾಯಿತು. ಸನ್ಮಾನ ಸಮಾರಂಭದ ಉದ್ಘಾಟನೆಗೆ ಕನ್ನಡ ಮತ್ತು ಸಂಸ್ಕೃತಿ ಮಂತ್ರಿಣಿ ಉಮಾಶ್ರಿರವರು ಬರಬೇಕಿತ್ತು, ಕಾರ್ಯಕ್ರಮದ ಹಿಂದಿನ ದಿನದ ರಾತ್ರಿವರೆಗೂ ಬರುತ್ತೇನೆಂದೇ ಉಮಾಶ್ರೀ ಆಶ್ವಾಸನೆ ಕೊಡುತ್ತಿದ್ದರು. ಪುಸ್ತಕದ ಬಿಡುಗಡೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ..ದಯಾನಂದರವರು ಬರಬೇಕಿತ್ತು ಹಾಗಂತ ಆಮಂತ್ರಣ ಪತ್ರಿಕೆಗಳಲ್ಲಿ ಮುದ್ರಿಸಲಾಗಿತ್ತು. ಆದರೆ ಇಲಾಖೆಯ ಪ್ರಮುಖರು ಧಾರವಾಡದತ್ತ ಮುಖ ಮಾಡಲಿಲ್ಲ. ಇವರನ್ನು ಕರೆತರುವ ತಾಕತ್ತು ನಮ್ಮ ನಾಟಕ ಅಕಾಡೆಮಿಯ ಅದಕ್ಷ ಅಧ್ಯಕ್ಷರಿಗೆ  ಸಾಲದಾಯಿತು. ಬೆಂಗಳೂರಿನ ಸದಸ್ಯರಂತೂ ನಿಟ್ಟಿನಲ್ಲಿ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಶಿವು ಹಿರೇಮಠ ಹಾಗೂ ಧಾರವಾಡ ಗ್ರಾಮೀಣ ಭಾಗದಿಂದ ಆರಿಸಿ ಬಂದ ಶಾಸಕ ವಿನಯ ಕುಲಕರ್ಣಿ ಬರಲೇಬೇಕಿತ್ತು... ಆದರೆ ಇಬ್ಬರೂ ಸಮಾರಂಭಕ್ಕೆ ಗೈರು ಹಾಜರಾದರುಇನ್ನು ನಿಯತ್ತಾಗಿ  ಬಂದವರು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಒಬ್ಬರೇ.

ಸನ್ಮಾನ ಸಮಾರಂಭಕ್ಕೆ ಬರಬೇಕಾದ ಅತಿಥಿಗಳೇ ಬರದಿದ್ದರೆ ಹೇಗೆ? ಕೊನೆಗಳಿಗೆಯಲ್ಲಿ ಶೇಖ ಮಾಸ್ತ ಕೈಕಾಲುಗಳು ಶೇಕ್ ಆಗತೊಡಗಿದವು. ತಳಮಳ ಶುರುವಾಯಿತು. ಏನು ಮಾಡಬೇಕು ಎನ್ನುವುದೇ ಅವರಿಗೆ ತಿಳಿಯದಾಯಿತು. ಅತಿಥಿಗಳ ಅನಾವೃಷ್ಟಿಗೆ ಪರಿಹಾರವೊದಗಿಸಲು ಶಂಕರ ಹಲಗತ್ತಿರವರನ್ನು ಕೇಳಿಕೊಳ್ಳಲಾಯಿತು. ನಾಟಕ ಅಕಾಡೆಮಿಯಲ್ಲಿ ಧಾರವಾಡವನ್ನು ಪ್ರತಿನಿಧಿಸುವ ಜಗುಚಂದ್ರ ಕೂಡ್ಲ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಇಬ್ಬರೂ ತರಾತುರಿಯಲ್ಲಿ ಹೋಗಿ ರಾಜಕಾರಣದಿಂದ ನಿವೃತ್ತರಾದ ಚಂದ್ರಕಾಂತ ಬೆಲ್ಲದರವರನ್ನು ಒಪ್ಪಿಸಿ ಕರೆತಂದರು. ಹಾಗೆಯೇ ಸಾಹಿತ್ಯ ಕ್ಷೇತ್ರದಿಂದ ಬಹುತೇಕ ನಿವೃತ್ತರಾದ ಚೆನ್ನವೀರ ಕಣವಿರವರನ್ನೂ ಸಹ  ಕಾರ್ಯಕ್ರಮದ ಉದ್ಘಾಟನೆಗೆ ಒಪ್ಪಿಸಿ ಕರೆತಂದು ನಾಟಕ ಅಕಾಡೆಮಿಯ ಮರ್ಯಾದೆ ಉಳಿಸಿಕೊಳ್ಳಲು ಪರದಾಡಬೇಕಾಯಿತು. ಮೊದಲೇ ಕಾರ್ಯಕ್ರಮಕ್ಕೆ ಬರುತ್ತೇನೆಂದು ಹೇಳಿದವರೆಲ್ಲಾ ಸಾಮೂಹಿಕವಾಗಿ ಬಾರದೇ ಹೋದಾಗ ಅದನ್ನು ಮೊದಲೇ ತಿಳಿದುಕೊಂಡು ಅವರ ಮೇಲೆ ಒತ್ತಡ ಹಾಕಿ ಕರೆಸಿಕೊಳ್ಳುವ ತಾಕತ್ತೂ ಶೇಖ ಮಾಸ್ತರರಿಗಿಲ್ಲವೆಂದ ಮೇಲೆ ನಾಟಕ ಅಕಾಡೆಮಿಯ ಅಧ್ಯಕ್ಷರಾಗಲು ಯೋಗ್ಯತೆ ಇದೆಯಾ? ಎನ್ನುವ ಪ್ರಶ್ನೆ ಕಾಡದೇ ಇರದು. ಇದು ಶೇಖ ಮಾಸ್ತರನ ದೌರ್ಬಲ್ಯವೋ, ನಾಟಕ ಅಕಾಡೆಮಿ ಸದಸ್ಯರ ಬೇಜವಾಬ್ದಾರಿತನವೋ ಇಲ್ಲವೇ ಬರುತ್ತೇನೆಂದು ಹೇಳಿ ಬಾರದೇ ಹೋದ ಗಣ್ಯ ಅತಿಥಿಗಳ ನಿರ್ಲಕ್ಷವೋ... ಒಟ್ಟಿನ ಮೇಲೆ ಎಲ್ಲವೂ ಸೇರಿ ಏಣಗಿ ಬಾಳಪ್ಪನವರಂತಹ ದೈತ್ಯ ರಂಗ ಪ್ರತಿಭೆಗೆ ಅಪಾರ ಅಪಮಾನ ಮಾಡಿದಂತಾಯಿತು

ಅನನುಭುವಿ ಅದಕ್ಷ ಶೇಖ ಮಾಸ್ತರನ ವಿಷಯ ಬಿಡೋಣ. ಹಿಂದೆಂದೋ ಸಿನೆಮಾ ನಟನಾಗಿದ್ದವರೊಬ್ಬರು ಬೆಂಗಳೂರಿನ ಟಾಯ್ಲೆಟ್ ಪಕ್ಕದಲ್ಲಿ ಅನಾಥವಾಗಿ ವಾಸಿಸುತ್ತಿದ್ದಾರೆ ಎಂಬುದನ್ನ ಕಂಡುಹಿಡಿದು, ಅಲ್ಲಿಗೆ ಮಿಡಿಯಾದವರ ಸಮೇತ ಓಡಿ ಹೋಗಿ ಹಿರಿಯ ಕಲಾವಿದರನ್ನು ಅಪ್ಪಿಕೊಂಡು ಅನಾಥಾಶ್ರಮಕ್ಕೆ ಸೇರಿಸಿ ಮಾಧ್ಯಮಗಳಲ್ಲಿ ಪ್ರಚಾರ ಪಡೆದ ಮಂತ್ರಿಣಿ ಉಮಾಶ್ರೀಯವರಿಗೆ ಒಪ್ಪಿಕೊಂಡಿದ್ದ ಹಿರಿಯ ರಂಗಕರ್ಮಿಯೊಬ್ಬರ ಸನ್ಮಾನ ಸಮಾರಂಭಕ್ಕೆ  ತಪ್ಪಿಸದೇ ಹೋಗಬೇಕು ಎನ್ನುವ ಕನಿಷ್ಟ ಕಳಕಳಿಯೂ ಇಲ್ಲದಿರುವುದು ರಂಗಭೂಮಿಯ ದುರಂತ. ಬೇರೆ ಯಾವುದೇ ರಾಜಕಾರಣಿ ಹೀಗೆ ಮಾಡಿದ್ದರೆ ನಿರ್ಲಕ್ಷಿಸಬಹುದಾಗಿತ್ತು. ಆದರೆ ರಂಗಭೂಮಿಯನ್ನೇ ಏಣಿ ಮಾಡಿಕೊಂಡು ಮಂತ್ರಿ ಪದವಿಯವರೆಗೂ ಬೆಳೆದ ಉಮಾಶ್ರೀರವರಿಂದ ರಂಗಕರ್ಮಿಗಳು ಇಂತಹ ಬೇಜವಾಬ್ದಾರಿತನವನ್ನು ನಿರೀಕ್ಷಿಸಿರಲಿಲ್ಲ.

ಒಬ್ಬ ಶತಕ ಕಂಡ ಮಹಾನ್ ರಂಗಚೇತನಕ್ಕೆ ಜೀವಮಾನದ ಸಾಧನೆಗಾಗಿ ಒಂದು ನಾಟಕ  ಅಕಾಡೆಮಿ ಅಭೂತಪೂರ್ವ ಕಾರ್ಯಕ್ರಮವನ್ನು ರೂಪಿಸಬಹುದಾಗಿತ್ತು. ಬಹುದಿನಗಳ ಕಾಲ ನೆನಪಿಡಬಹುದಾದಂತಹ ಅರ್ಥಪೂರ್ಣವಾದ ರೀತಿಯಲ್ಲಿ ಸನ್ಮಾನ ಸಮಾರಂಭವನ್ನು ಆಯೋಜಿಸಬಹುದಾಗಿತ್ತು. ಏಣಗಿ ಬಾಳಪ್ಪನವರ ಸನ್ಮಾನ ಸಮಾರಂಭದಲ್ಲಿ ಬಾಳಪ್ಪನವರ ಬದುಕು ಮತ್ತು ಸಾಧನೆಯ ಕುರಿತು ಸಮರ್ಥವಾಗಿ ಮಾತಾಡುವ ಒಬ್ಬರೂ ಇರಲಿಲ್ಲ. ತರಾತುರಿಯಲ್ಲಿ ಕೊನೆಗಳಿಗೆಯಲ್ಲಿ ಬಂದ ಚೆನ್ನವೀರ ಕಣವಿರವರು ಪೂರ್ವ ತಯಾರಿ ಇಲ್ಲದ್ದರಿಂದ ತಮಗೆ ತಿಳಿದಷ್ಟು ಬಾಳಪ್ಪನವರ ವಿಷಯವನ್ನು ಹೇಳಿದ್ದಷ್ಟೇ ಭಾಗ್ಯ. ಇಂತಹ ಹಾರ ತುರಾಯಿಗಳ ಹಲವಾರು ಸನ್ಮಾನಗಳನ್ನು ಬಾಳಪ್ಪನವರು ಈಗಾಗಲೇ ಪಡೆದಿದ್ದಾಗಿದೆ. ಅಕಾಡೆಮಿಯ ಸನ್ಮಾನವೂ ಅಂತಹುದರಲ್ಲಿ ಒಂದೆಂಬಂತೆ ನಡೆದದ್ದು ಅನಪೇಕ್ಷಣೀಯ. ಒಂದು ದಿನಪೂರ್ತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಏಣಗಿ ಬಾಳಪ್ಪನವರ ಕುರಿತು ವಿಚಾರ ಸಂಕಿರಣ, ಅರ್ಥಪೂರ್ಣ ಸಂವಾದ, ಮೌಲಿಕವಾದ ಚರ್ಚೆಗಳನ್ನು ಏರ್ಪಡಿಸಿದ್ದರೆ, ಬಾಳಪ್ಪನವರ  ರಂಗಾನುಭವಗಳನ್ನು ಅವರಿಂದಲೇ ಕೇಳಿಸಿದ್ದರೆ, ಬಾಳಪ್ಪನವರ ಜೊತೆ ಜೊತೆಗೆ ತೊಡಗಿಸಿಕೊಂಡ ಅವರ ಸಮಕಾಲೀನ ಹಿರಿಯ ಕಲಾವಿದರು ಬಾಳಪ್ಪನವರ ಜೊತೆಗಿನ ತಮ್ಮ  ಅನುಭವಗಳನ್ನು ಹಂಚಿಕೊಂಡಿದ್ದರೆ... ಅಕಾಡೆಮಿಯ  ಕಾರ್ಯಕ್ರಮ  ಅರ್ಥಪೂರ್ಣವಾಗುತ್ತಿತ್ತು. ಏಣಗಿ ಬಾಳಪ್ಪ ದಂಪತಿಗಳನ್ನೇ ಅದ್ದೂರಿಯಾಗಿ ಸನ್ಮಾನಿಸಿ ಅಭೂತಪೂರ್ವ ಗೌರವವನ್ನು ಕೊಡಮಾಡಬೇಕಿತ್ತು. ಹಿರಿಯ ಕಲಾವಿದರನ್ನೂ ಸಹ ಸನ್ಮಾನಿಸಲೇ ಬೇಕೆಂದಿದ್ದರೆ ಏಣಿಗಿ ಬಾಳಪ್ಪನವರಿಂದ ಅವರ ನಾಟಕ ಕಂಪನಿಯಲ್ಲಿ ತೊಡಗಿಸಿಕೊಂಡ ಹಿರಿಯ ಕಲಾವಿದರಿಗೆ ರಂಗಸನ್ಮಾನ ಕೊಡಿಸಿದ್ದರೆ  ಸಮಾರಂಭ  ಕಳೆಗಟ್ಟುತ್ತಿತ್ತು. ಆದರೆ... ಅನನುಭವಿಗಳ ಒಂದು ಪಡೆಯೇ ತುಂಬಿರುವ ನಾಟಕ ಅಕಾಡೆಮಿಗೆ ಹೇಳುವವರಾದರೂ ಯಾರು? ಹೇಳಿದರೂ ಕೇಳುವವರಾದರೂ ಎಲ್ಲಿದ್ದಾರೆ. ಸರ್ವಾಧಿಕಾರಿ ಮನೋಭಾವದ ಕೆಲವು ಸದಸ್ಯರುಗಳು ಹಾಗೂ ಯಾವುದೇ ದೃಷ್ಟಿಕೋನವಿಲ್ಲದ ಅಧ್ಯಕ್ಷ ನಾಟಕ ಅಕಾಡೆಮಿಯ ಸಾರಥ್ಯ ವಹಿಸಿರುವಾಗ ಬೇರೆ ರಂಗಕರ್ಮಿಗಳನ್ನ ಕರೆದು ಸಲಹೆಗಳನ್ನು ಪಡೆಯುವಷ್ಟು ವ್ಯವಧಾನವಾದರೂ ಎಲ್ಲಿದೆ.

ಕಪ್ಪಣ್ಣನಂತಹ ಕಪ್ಪಣ್ಣ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ಕೆಲವಾರು ಬುದ್ದಿಜೀವಿಗಳನ್ನು, ಪತ್ರಕರ್ತರನ್ನು ಹಾಗೂ ಹಿರಿಯ ರಂಗಕರ್ಮಿಗಳನ್ನು ಕರೆಸಿ ಸಲಹೆಗಳನ್ನು ತೆಗೆದುಕೊಂಡು ಕೆಲಸವನ್ನು ಮಾಡುತ್ತಿದ್ದರು. ಬಹುಷಃ ಕಪ್ಪಣ್ಣನವರ ಕಾಲಘಟ್ಟದಲ್ಲಿ ಆದಂತಹ ವೈವಿದ್ಯಮಯ ರಂಗಕಾರ್ಯಕ್ರಮಗಳು ಬೇರೆ ಯಾರೇ ಅಧ್ಯಕ್ಷರಾಗಿದ್ದಾಗಲೂ ಆಗಿಲ್ಲ. ಕಪ್ಪಣ್ಣನವರಿಗೆ ರೀತಿಯ ಸಂಘಟನಾ ಸಾಮರ್ಥ್ಯ ಹಾಗೂ ಕಾಂಟ್ಯಾಕ್ಟ್ ಇತ್ತು. ಅಕಾಡೆಮಿಯ ಅನುದಾನದ ಹಣಕ್ಕಿಂತಲೂ ಹಲವು ಪಟ್ಟು ಹಣವನ್ನು ಬೇರೆ ಕಡೆಯಿಂದ ತರುವ ಸಾಮರ್ಥ್ಯ  ಅವರಿಗಿತ್ತು. ಅವರ ಅವಧಿಯಲ್ಲಿದ್ದ ಸದಸ್ಯರ ಮೇಲೆ ಕಪ್ಪಣ್ಣನವರ ನಿಯಂತ್ರಣ ಇತ್ತು. ಅವರು ಎಲ್ಲವನ್ನೂ ತಾವೊಬ್ಬರೇ ಮಾಡಲು ಹೋಗದೇ ಅವರವರ ಕೆಲಸಗಳನ್ನು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಹಂಚಿ ಮೇಲುಸ್ತುವಾರಿಯನ್ನು ಸಮರ್ಥವಾಗಿ ಮಾಡಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ತಮ್ಮ ಹುಂಬತನ ಹಾಗೂ ಆರ್ಥಿಕ ಅಶಿಸ್ತಿನಿಂದಾಗಿ ಕಪ್ಪಣ್ಣ ಹೆಸರು ಕೆಡಿಸಿಕೊಂಡರೇ ಹೊರತು ಅಕಾಡೆಮಿಯಿಂದ ಅವರು ಮಾಡಿದಷ್ಟು ರಂಗಕೆಲಸಗಳನ್ನು ಬೇರೆ ಯಾವ ನಾಟಕ ಅಕಾಡೆಮಿ ಅಧ್ಯಕ್ಷರಾದವರೂ ಮಾಡಿಲ್ಲ ಎನ್ನುವುದು ನಿರ್ವಿವಾದ.

ಆದರೆ ಈಗಿನ ನಾಟಕ ಅಕಾಡೆಮಿ ಅಧ್ಯಕ್ಷರಾದ ಶೇಖ್ ರವರಿಗೆ ಸಂಘಟನಾ ಸಾಮರ್ಥ್ಯವೂ ಇಲ್ಲ, ಯಾರ ಸಾಮರ್ಥ್ಯವನ್ನು ಹೇಗೆ  ಬಳಸಿಕೊಳ್ಳಬೇಕು ಎನ್ನುವ ಜಾಣ್ಮೆಯೂ ಇಲ್ಲ. ತಮ್ಮದೇ ಸದಸ್ಯರು ಹಾಗೂ ರೆಜಸ್ಟ್ರಾರ ಮೇಲೆ ನಿಯಂತ್ರಣವಿಲ್ಲ, ನಾಟಕ ಅಕಾಡೆಮಿಯ ಮೂಲಕ ರಂಗಭೂಮಿಯನ್ನು ಹೇಗೆಲ್ಲಾ ಕಟ್ಟಬೇಕು ಎನ್ನುವ ದೂರದೃಷ್ಟಿಯಂತೂ ಮೊದಲೇ ಇಲ್ಲ. ಅಕಾಡೆಮಿಯ ಹಣವನ್ನು ಹೇಗೆಲ್ಲಾ ಖರ್ಚು ಮಾಡಿ ಮಿಕ್ಕಿಸಿಕೊಳ್ಳಬೇಕು, ಅಕಾಡೆಮಿಯಿಂದ ಮೆರೆದು ಹೆಸರನ್ನು ಹೇಗೆ ದಕ್ಕಿಸಿಕೊಳ್ಳಬೇಕು.. ಎನ್ನುವುದರ ಬಗ್ಗೆ ಮಾತ್ರ ಶೇಖ್ರವರ ಆಶಯ ಕೇಂದ್ರೀಕೃತವಾಗಿರುತ್ತದೆ. ಹೆಸರು ಮತ್ತು ಹಣವೇ ಪ್ರಮುಖವಾಗಿದ್ದರೆ ಅದಕ್ಕೆ ರಾಜಕಾರಣದಂತಹ ಬೇರೆ ಕ್ಷೇತ್ರಗಳಿವೆ. ಆದರೆ ಪ್ರಾಮಾಣಿಕತೆ, ಸಂಘಟನಾ ಸಾಮರ್ಥ್ಯ, ವಿವೇಚನೆಯುಳ್ಳ ರಂಗನಿಷ್ಟೆ ಹಾಗೂ ದೂರದೃಷ್ಟಿಗಳು ಮಾತ್ರ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿರಬೇಕಾದವರಿಗೆ ಇರಬೇಕಾದ ನಿಜವಾದ ಅರ್ಹತೆಯಾಗಿದೆ. ಇವುಗಳನ್ನು ಶೇಖ ಮಾಸ್ತರರಲ್ಲಿ ಹುಡುಕಿದರೂ ಸಿಗುವುದಿಲ್ಲ ಎನ್ನುವುದಕ್ಕೆ ಕೆಟ್ಟದಾಗಿ ಆಯೋಜನೆಗೊಂಡ ಏಣಗಿ ಬಾಳಪ್ಪನವರ ಸನ್ಮಾನ ಸಂಭ್ರಮ ಕಾರ್ಯಕ್ರಮ ಒಂದು ಉದಾಹರಣೆಯಾಗಿದೆ.    
ನಾಟಕ ಅಕಾಡೆಮಿಗೆ ಹದಿನೈದು ಜನ ಸದಸ್ಯರು ಹಾಗೂ ಮೂರು ಜನ ಸಹಸದಸ್ಯರಿದ್ದಾರೆ. ಹಿಂದಿನ ಎಲ್ಲಾ ಅಕಾಡೆಮಿಗಳಲ್ಲಿ ಒಟ್ಟು ಹದಿಮೂರು ಜನ ಸದಸ್ಯ ಮಂಡಳಿ ಇದ್ದರೆ ಈ ಸಲದ  ಅಕಾಡೆಮಿಗೆ ಇನ್ನೂ ಐದು ಜನ ಹೆಚ್ಚೇ ಇದ್ದಾರೆ. ಆದರೆ ಕೇವಲ ಸದಸ್ಯರ ಸಂಖ್ಯೆ ಹೆಚ್ಚಿಸಿದರೆ ಅಕಾಡೆಮಿಯ ಸಾಮರ್ಥ್ಯ ಹೆಚ್ಚುತ್ತದೆ ಎನ್ನುವುದು ಕೇವಲ ಭ್ರಮೆ. ಎಷ್ಟು ಜನ ಸದಸ್ಯರಿದ್ದಾರೆ ಎನ್ನುವುದಕ್ಕಿಂತಲೂ ಅದರಲ್ಲಿ ಎಷ್ಟು ಜನ ರಂಗನಿಷ್ಟರಾಗಿದ್ದು ಸಂಘಟನಾ ಸಾಮರ್ಥ್ಯ ಹೊಂದಿದ್ದಾರೆ. ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ.  ಏಣಗಿ ಬಾಳಪ್ಪನವರ ಈ ಸಮಾರಂಭದ ಯಶಸ್ಸಿಗೆ ಎಲ್ಲಾ ಹಾಲಿ ಸದಸ್ಯರುಗಳು ಒಂದು ವಾರಗಳ ಕಾಲ ಧಾರವಾಡದಲ್ಲಿದ್ದು ಒಗ್ಗಟ್ಟಿನಿಂದ ಒಂದೊಂದು ಕೆಲಸ ವಹಿಸಿಕೊಂಡು ಶ್ರಮಿಸಿದ್ದರೆ ಈ ಸಮಾರಂಭಕ್ಕೆ ಈ ಗತಿ ಬರುತ್ತಿರಲಿಲ್ಲ. ಧಾರವಾಡದ ನಾಟಕ ಅಕಾಡೆಮಿ ಪ್ರತಿನಿಧಿಯಾದ ಜಗುಚಂದ್ರ ತಮ್ಮೆಲ್ಲಾ ಮಿತಿಗಳಲ್ಲೂ ಸಹ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದಾರೆ. ಆದರೆ ಇದು ಒಬ್ಬರಿಂದಾಗುವ ಕೆಲಸವಲ್ಲ. ಅಥವಾ ಯಾರೋ ಒಬ್ಬರ ಮೇಲೆ ಎಲ್ಲಾ ಭಾರ ಹಾಕಿ ಬೆಂಗಳೂರು ಹಾಗೂ ಮತ್ತಿತರ ಕಡೆಗಳಲ್ಲಿ ತಮ್ಮ ವ್ಯಯಕ್ತಿಕ ಕೆಲಸಗಳಲ್ಲಿ ಮಿಕ್ಕ ಸದಸ್ಯರು ತೊಡಗಿಕೊಂಡರೆ ಸಮಾರಂಭ ಕಳೆಗಟ್ಟುವುದಿಲ್ಲ

ಕಾರ್ಯಕ್ರಮಕ್ಕೆ ಕೇವಲ ಎರಡು ದಿನಗಳಿದ್ದಾಗ ಅಕಾಡೆಮಿ ಅಧ್ಯಕ್ಷರು ಧಾರವಾಡಕ್ಕೆ ಬಂದು ನಾಂದಿಗೀತೆ ಸಂಯೋಜನೆಗೆ ಕುಳಿತುಕೊಂಡರು. ಧಾರವಾಡಕ್ಕೆ ಬಂದ ಅಕಾಡೆಮಿಯ ಸದಸ್ಯರೆಲ್ಲರನ್ನೂ ಸೇರಿಸಿಕೊಂಡು ಸಮಾರಂಭದ ದಿನದ ಬೆಳಿಗ್ಗೆಯಾದರೂ ಕಾರ್ಯಕ್ರಮದ ರೂಪರೇಷೆಗಳನ್ನ ರೂಪಿಸಲು ಶೇಖ ಮಾಸ್ತರ್ ಪ್ರಯತ್ನಿಸಬಹುದಿತ್ತು. ಆದರೆ ಬಂದ ಕೆಲವು ಸದಸ್ಯರನ್ನು ಕರೆದುಕೊಂಡು ಬೆಳಿಗ್ಗೆ ಒಂಬತ್ತು ಗಂಟೆಗೆ ಶೇಖ ಮಾಸ್ತರ ಹೋಗಿ ಕುಳಿತಿದ್ದು ಧಾರವಾಡದ ರಂಗಾಯಣದಲ್ಲಿ. ಯಾಕೆಂದರೆ ಅಲ್ಲಿ ಕಲಾವಿದರ ಮಾಶಸನದ ಕುರಿತು ಕಲಾವಿದರ ಸಂದರ್ಶನವನ್ನ ಏರ್ಪಡಿಸಲಾಗಿತ್ತು. ಏಣಗಿರವರ ಸನ್ಮಾನ ಸಮಾರಂಭಕ್ಕಿಂತಾ ಮಾಶಾಸನದ ಮೀಟಿಂಗ್ ಅಧ್ಯಕ್ಷರು ಹಾಗೂ ಸದಸ್ಯರಿಗೆ ತುಂಬಾ ಮಹತ್ವದ್ದಾಗಿತ್ತು. ಯಾಕೆಂದರೆ ಅಲ್ಲಿ ಲಾಭ ಮಾಡಿಕೊಳ್ಳಬಹುದಾದ ಹಲವು ಅವಕಾಶಗಳಿವೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಹಮ್ಮಿಕೊಂಡ ಸಮಾರಂಭಕ್ಕಿಂತಾ ಮಾಶಾಸನ ಸಂದರ್ಶನಕ್ಕೆ ಮಹತ್ವ ಕೊಟ್ಟಿದ್ದು ನೋಡಿದಾಗ  ಈ ಎಲ್ಲರ ರಂಗನಿಷ್ಟೆ ಯಾವುದಕ್ಕೆ ಮೀಸಲು ಎಂಬುದು ಅರಿವಾಗದೇ ಇರದು. ಈ ಸಂದರ್ಶನವನ್ನು ಒಂದು ದಿನದ ನಂತರವೂ ಇಟ್ಟುಕೊಳ್ಳಬಹುದಾಗಿತ್ತು. ಸಂದರ್ಶನದ ನಂತರ ಊಟ ಮುಗಿಸಿ ಬೀಡಾ ಹಾಕಿಕೊಂಡು ಸಮಾರಂಭದ ಸಭಾಂಗಣಕ್ಕೆ ಅಧ್ಯಕ್ಷರು ಹಾಗೂ ಸದಸ್ಯರುಗಳು ಬಂದಾಗ ಸರಿಯಾಗಿ ಸಂಜೆ ನಾಲ್ಕು ಗಂಟೆ. ಮಿಕ್ಕೆಲ್ಲಾ ಅಕಾಡೆಮಿಯ ಗೌರವಾನ್ವಿತ ಸದಸ್ಯರುಗಳು ಅತಿಥಿಗಳು ಬಂದ ಹಾಗೆ ಕಾರ್ಯಕ್ರಮದ ದಿನ ಸಂಜೆ ನಾಲ್ಕು ಗಂಟೆಗೆ ಕೈಬೀಸಿಕೊಂಡು ಬಂದು ವೇದಿಕೆ ಮೇಲೆ ಪೊಟೋಗಳಿಗೆ ಪೋಸ್ ಕೊಟ್ಟು ತಮ್ಮ ಕೆಲಸ ಆಯಿತು ಎಂದು ಹೊರಟು ಹೋದರು. ಒಬ್ಬನೇ ಒಬ್ಬ ಸದಸ್ಯ ಒಂದು ಖುರ್ಚಿಯನ್ನೂ ಆಚೀಚೆ ಸರಿಸಲಿಲ್ಲ. ಅವರು ತಿಂದ ಅನ್ನ ಕರಗಲಿಲ್ಲ, ಕುಡಿದ ನೀರು ಹೊಟ್ಟೆಯಲ್ಲಿ ಕುಲುಕಲಿಲ್ಲ. ರೆಜಿಸ್ಟ್ರಮ್ಮ ಭಾಗ್ಯರವರು ಹೊಸ ಬಟ್ಟೆಯುಟ್ಟು ಮೆರೆದಿದ್ದು ಬಿಟ್ಟರೆ ಕಾರ್ಯಕ್ರಮಕ್ಕೆ ಯಾವುದೇ ರೀತಿ ಸಹಕಾರಿಯಾಗಲಿಲ್ಲ. ಇದೂ ಒಂದು ಸಾರ್ವಜನಿಕ ಕಾರ್ಯಕ್ರಮವನ್ನು ರೂಪಿಸುವ ವಿಧಾನವಾಏಣಗಿ ಬಾಳಪ್ಪರಂತಹ ರಂಗದಿಗ್ಗಜರನ್ನು ಸನ್ಮಾನಿಸು ರೀತಿನಾ? ರಂಗಸಾಧಕನನ್ನು ಕರೆಸಿ ಅವಮಾನಿಸುವ ಅಗತ್ಯ ಇದೆಯಾ?

ಹಣ ಇದ್ದರೆ ಸಾಕು ಎಂಥಾ ಕಾರ್ಯಕ್ರಮಗಳನ್ನಾದರೂ  ಮಾಡಬಹುದು ಎನ್ನುವ ಭ್ರಮೆಯಲ್ಲಿದ್ದವರಿಗೆ ಧಾರವಾಡದ ರಂಗಕರ್ಮಿಗಳು ಹಾಗೂ ಸಾಹಿತಿಗಳು ಸಾರಾಸಗಟಾಗಿ ನಿರ್ಲಕ್ಷಿಸಿ ಸರಿಯಾಗಿ ಪಾಠ ಕಲಿಸಿದರು. ಗಿರಡ್ಡಿ ಗೋವಿಂದರಾಜುರವರನ್ನು ಹೊರತು ಪಡಿಸಿ ಬೇರೆ ಯಾವ ಪ್ರಮುಖ ಸಾಹಿತಿಗಳೂ ಸಹ  ವಿದ್ಯಾವರ್ಧಕ ಸಂಘದ ಅಕ್ಕಪಕ್ಕವೂ ಸುಳಿಯಲಿಲ್ಲ. ಧಾರವಾಡದ ಹಲವಾರು ರಂಗತಂಡಗಳ ಮುಖ್ಯಸ್ತರು ಸಭಾಭವನದೊಳಗೆ ಕಾಲಿಡಲಿಲ್ಲ. ಅಷ್ಟಕ್ಕೂ  ಬಂದ ಕೆಲವೇ ಕೆಲವು ಜನ ರಂಗಕರ್ಮಿಗಳು ಶೇಖ ಮಾಸ್ತರನ ಸಮೂಹ ಗಾನ ಹಾಗೂ ಅವರ ಕೈಸೇರಿದ ಮೈಕಾಸುರನ ಭಯಕ್ಕೆ ತಲ್ಲಣಗೊಂಡು ಹೊರಟೇ ಹೋದರು. ಆದರೆ ಏಣಗಿ ಬಾಳಪ್ಪನವರ ಮೇಲಿನ ಅಭಿಮಾನದಿಂದಾಗಿ ಧಾರವಾಡದ ಕಲಾಸಕ್ತರು ಹಾಗೂ ಸನ್ಮಾನಿತರಾದ ಹದಿಮೂರು ಹಿರಿಯ ಕಲಾವಿದರ ಬಂಧು ಬಾಂಧವರಿಂದಾಗಿ ಇಡೀ ಸಭಾಂಗಣ ತುಂಬಿದ್ದೊಂದೇ ಸಂತಸದ ಸಂಗತಿ. ಆದರೆ ಯಾವಾಗ ಶೇಖ ಮಾಸ್ತರ ಮೈಕ್ ಹಿಡಿದು ಬಲವಂತವಾಗಿ ಕೆಟ್ಟರೀತಿಯಲ್ಲಿ  ಕಾರ್ಯಕ್ರಮದ ನಿರೂಪನೆ ಮಾಡಲು ಶುರುಮಾಡಿದರೋ ಒಂದಿಷ್ಟು ಜನ ಜಾಗ ಖಾಲಿಮಾಡಿದರು. ಸನ್ಮಾನದ ನಂತರ ಪೊಟೋ ತೆಗೆಸಿಕೊಳ್ಳಲು ಮುಗಿಬಿದ್ದ ಸನ್ಮಾನಿತರ ಸಂಬಂಧಿಕರು ಹಾಗೂ ಅಕಾಡೆಮಿಯ ಸದಸ್ಯರುಗಳ ಪೊಟೋ ತೆವಲಿಗೆ ಬೇಸತ್ತ ಇನ್ನೂ ಕೆಲವರು ಹೊರನಡೆದರು. ಕೊನೆಗೆ ಅಳಿದುಳಿದ ಜನತೆ ಅಪಾರ ನಿರೀಕ್ಷೆಯನ್ನಿಟ್ಟುಕೊಂಡು ಕಾಯುತ್ತಿದ್ದ 'ಜಗಜ್ಯೋತಿ ಬಸವೇಶ್ವರ' ನಾಟಕವೂ ನೀರಸವೆನಿಸಿದ ಕೂಡಲೇ ಒಬ್ಬೊಬ್ಬರಾಗಿ ಹೊರನಡೆದರು. ಇಡೀ ಸಮಾರಂಭ ಒಂದು ರೀತಿಯಲ್ಲಿ ಏಣಗಿ ಬಾಳಪ್ಪನವರ ಹೆಸರಲ್ಲಿ ನಡೆದ ನಾಟಕ ಅಕಾಡೆಮಿಯವರ ವಿವೇಚನಾ ರಹಿತ ಪ್ರಹಸನದಂತಿತ್ತು.

ಇಷ್ಟಕ್ಕೂ ಈ ಮೂರು ಗಂಟೆ ನಡೆದ ಸನ್ಮಾನ ಸಮಾರಂಭ ಕಾರ್ಯಕ್ರಮಗಳಿಗೆ  ತೆಗೆದಿರಿಸಲಾದ ಬಜೆಟ್ ಎಷ್ಟು ಗೊತ್ತೆ? ಬರೊಬ್ಬರಿ ಐದು ಲಕ್ಷ ರೂಪಾಯಿಗಳು. ಖರ್ಚಾಗಿದ್ದು ಇನ್ನೂ ಲೆಕ್ಕ ಸಿಕ್ಕಿಲ್ಲ. 'ಇಷ್ಟು ಹಣ ಕೊಟ್ಟಿದ್ದರೆ ತಿಂಗಳಿಗೊಂದು ಇಂತಹ ಸನ್ಮಾನ ಸಮಾರಂಭಗಳನ್ನು ಇದಕ್ಕಿಂತಲೂ ಅದ್ದೂರಿಯಾಗಿ ವರ್ಷ ಪೂರ್ತಿ ಮಾಡುತ್ತಿದ್ದೆವು' ಎಂದು ಧಾರವಾಡದ ರಂಗಕರ್ಮಿಗಳು ಹೇಳಿದ್ದರಲ್ಲಿ ಸತ್ಯಾಂಶ ಇದೆ. ಅದೂ ಶಂಕರ ಹಲಗತ್ತಿರವರು ಅತೀ ಕಡಿಮೆ ಬೆಲೆಗೆ 'ಕೃಷಿ ತರಬೇತಿ ಕೇಂದ್ರ'ದಲ್ಲಿ ಬೇರೆ ಊರುಗಳಿಂದ ಬಂದ ಎಲ್ಲಾ  ಕಲಾವಿದರು ಮತ್ತು ಅತಿಥಿಗಳಿಗೆ ವಸತಿ ವ್ಯವಸ್ಥೆಯನ್ನು ಮಾಡಿದ್ದರು. ಇಷ್ಟರ ಮೇಲೆ 'ಎಲ್ಲರಿಗೂ ಊಟದ ವ್ಯವಸ್ಥೆಯನ್ನು ನೀವೆ ಮಾಡಿ' ಎಂದು ಶಂಕರಣ್ಣ ಶೇಖ ಮಾಸ್ತರ್ ಆಗ್ರಹಿಸಿದರಂತೆ. ವಸತಿ ಹಾಗೂ ಊಟದ ದುಡ್ಡನ್ನೂ ಸಹ ಉಳಿಸಿ ಸರಕಾರಕ್ಕೆ ಸುಳ್ಳು ಲೆಕ್ಕ ತೋರಿಸುವ ಹುನ್ನಾರವನ್ನು ಗ್ರಹಿಸಿದ ಶಂಕರಣ್ಣ 'ಊಟದ ವ್ಯವಸ್ಥೆ ಅಕಾಡೆಮಿಯಿಂದ ಮಾಡಿಕೊಳ್ಳಿ' ಎಂದು ಪಾರಾದರು.

"ನಾಟಕ  ಅಕಾಡೆಮಿಯವರು ಬೆಂಗಳೂರಿನಿಂದ  ಗುಳೆ ತೊಗೊಂಡು ಬಂದು ಧಾರವಾಡದಲ್ಲಿ ಜಾತ್ರಿ ಮಾಡಿಕೊಂಡು ಹೋದಂಗಾತು, ಅರ್ಥಪೂರ್ಣವಾಗಿ ಮಾಡಬಹುದಾಗಿದ್ದ ಕಾರ್ಯಕ್ರಮ ಸಂಘಟನೆಯ ಕೊರತೆಯಿಂದಾಗಿ ಅಸ್ತವ್ಯಸ್ತಗೊಂಡು ಅಪೂರ್ಣವಾಯಿತು" ಎಂದು ಈ ಸಮಾರಂಭದ ಸ್ವಾಗತ ಸಮಿತಿಯ ಅಧ್ಯಕ್ಷ ಶಂಕರ ಹಲಗತ್ತಿಯವರು ವಿಷಾದ ವ್ಯಕ್ತಪಡಿಸುತ್ತಾರೆ. ಇದು ನಿಜಕ್ಕೂ ರಂಗಭೂಮಿಯ ಪ್ರಾತಿನಿಧಿಕ ಸರಕಾರಿ ಕೃಪಾಪೋಷಿತ ಸಂಸ್ಥೆಯಾದ  ಕರ್ನಾಟಕ ನಾಟಕ  ಅಕಾಡೆಮಿಗಾದ ಅವಮಾನ. ನಾಟಕ ಅಕಾಡೆಮಿಯ ಮಾನವನ್ನು ಹೀಗೆ ಧಾರವಾಡದಲ್ಲಿ ಕಳೆದುಕೊಳ್ಳಬೇಕಾದ ಅಗತ್ಯ ಅಕಾಡೆಮಿಯ ಪಟಾಲಂಗೆ ಇತ್ತಾ? ಸರಕಾರಿ ಹಣವನ್ನು ಖಾಲಿ ಮಾಡಲು, ಕಾರ್ಯಕ್ರಮ ಮಾಡುವ ಅನಿವಾರ್ಯತೆಗೆ ದಾರಿ ಕಂಡುಕೊಳ್ಳಲು, ಹೆಸರಿಗೆ ಮಾತ್ರ ಕಾರ್ಯಕ್ರಮಗಳನ್ನು ರೂಪಿಸಿದೆವೆಂದು ದಾಖಲೆ ಬರೆಯಲು... ಈ ರೀತಿಯ ನಾಮಕಾವಸ್ಥೆ ಸಮಾರಂಭವನ್ನು ಹಮ್ಮಿಕೊಳ್ಳುವ ಅಗತ್ಯವಿತ್ತಾ? ಇಂತಹ ನೂರು ಅಕಾಡೆಮಿಗಳನ್ನು ಒಂದು ಕಡೆ ತೂಕಕ್ಕಿಟ್ಟರೂ ಏಣಗಿ ಬಾಳಪ್ಪನವರ ಸಾಧನೆಯ ಒಂದು ತೂಕಕ್ಕೆ ಸಮ ಆಗಲಾರದು. ಅಂತಹುದರಲ್ಲಿ  ಶತಕ ಸನ್ಮಾನ ಸಂಭ್ರಮ ಮಾಡುತ್ತೇವೆ ಎಂದು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಏಣಗಿ ಬಾಳಪ್ಪನವರನ್ನು ಏಣಗಿ ಗ್ರಾಮದಿಂದ ಧಾರವಾಡಕ್ಕೆ ಕರೆಯಿಸಿ  ಅವಮಾನಿಸುವ  ಜರೂರತ್ತಾದರೂ ಏನಿತ್ತು? ಇದಕ್ಕೆಲ್ಲಾ ಉತ್ತರ ಹೇಳಬೇಕಾದ ನಾಟಕ ಅಕಾಡೆಮಿಯ ತಂಡವು ಮುಂದಿನ ತಿಂಗಳು ಮೈಸೂರಲ್ಲಿ ಎರಡು ದಿನ ಪೌರಾಣಿಕ ನಾಟಕೋತ್ಸವದ ರೂಪರೇಷೆಗಳಲ್ಲಿ ಬ್ಯೂಸಿ ಆಗಿದೆ. ಎರಡು ದಿನಗಳ ಐದು ನಾಟಕಗಳ ಪ್ರದರ್ಶನಕ್ಕೆ ಮೂರು ಲಕ್ಷ ಹಣದ ಬಜೆಟ್ ಸಿದ್ದಗೊಳಿಸಿದೆ. ಯಾವ್ಯಾವ ಬಾಬತ್ತಿನಲ್ಲಿ ಹೇಗೆಲ್ಲಾ ಲೆಕ್ಕ ತೋರಿಸಬಹುದಾದ ಮಾರ್ಗಗಳಿವೆ ಎಂದು ಅಧ್ಯಕ್ಷ ಶೇಖ್ ಸಾಹೇಬರು ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ. ರೆಜಿಸ್ಟ್ರಮ್ಮ ಪಕ್ಕ ಕುಳಿತು ಇದರಿಂದ ತಮಗೆಷ್ಟು ಲಾಭ ತಮ್ಮ ಕುಲಬಾಂಧವರಿಗೆಷ್ಟು ಲಾಭ ಎಂದು ಕೂಡಿಸಿ ಗುಣಿಸುತ್ತಿದ್ದಾರೆ. ಕನ್ನಡ ರಂಗಭೂಮಿ ತನ್ನ ದುರ್ಬಲ ಅಕಾಡೆಮಿಯ ದುರಂತವನ್ನು ಕಂಡು ಮಮ್ಮಲ ಮರಗುತ್ತಿದೆ. ಏಣಗಿಯಲ್ಲಿ ಕುಳಿತ ಬಾಳಪ್ಪನೆಂಬ ರಂಗಭೂಮಿಯ ಹಿರಿಯಜ್ಜ ತನಗೆ ಮಾಡಿದ್ದು ಸನ್ಮಾನವೋ ಇಲ್ಲಾ ಅವಮಾನವೋ ಎಂದು ಚಿಂತಿಸುತ್ತಿದೆ. ಧಾರವಾಡದ ಕಲಾಸಕ್ತರು ಮಾತ್ರ ಬಾಳಪ್ಪನವರಿಗೆ ಸನ್ಮಾನದ ಹೆಸರಲ್ಲಿ ಮಾಡಿದ ಅವಮಾನಕ್ಕೆ ಬೆಂಗಳೂರಿನತ್ತ ಮುಖಮಾಡಿ ಕ್ಯಾಕರಿಸಿ ಉಗಿಯುತ್ತಿದ್ದಾರೆ. ಇನ್ನೂ ನಾಟಕ ಅಕಾಡೆಮಿಯ ಮೂರು ವರ್ಷಗಳ ಅವಧಿಯಲ್ಲಿ  ಏನೆನೆಲ್ಲಾ ಪ್ರಹಸನಗಳು ನಡೆಯುತ್ತವೆಯೋ ಅದಕ್ಕೆ ಸಾಕ್ಷಿಯಾಗಲು ರಂಗಭೂಮಿ ನಿಟ್ಟುಸಿರಿಡುತ್ತಾ ಕಾಯುತ್ತಿದೆ.   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ