ಸಚಿವೆಗೆ ಚಲ್ಲಾಟ; ಕಲಾವಿದರಿಗೆ ಪ್ರಾಣಸಂಕಟ :
ಐನೂರಕ್ಕೂ
ಹೆಚ್ಚು ಗ್ರಾಮೀಣ ಕಲಾವಿದರು
ಹತಾಶೆಯಿಂದ ತೀವ್ರವಾಗಿ ನೊಂದುಕೊಂಡರು.
ಕಲಾಪ್ರದರ್ಶನಕ್ಕೆಂದು ಉತ್ಸಾಹದಿಂದ
ಕರ್ನಾಟಕದ ಮೂಲೆ ಮೂಲೆಗಳಿಂದ
ಬೆಂಗಳೂರಿಗೆ ಬಂದಿದ್ದ ಕಲಾತಂಡಗಳು
ನಿರಾಶೆಯಿಂದ ತಲ್ಲಣಿಸಿಹೋಗಿವೆ. ಸಾಂಸ್ಕೃತಿಕ
ಕಮಿಟಿಯ ಯಡವಟ್ಟಿಗೆ, ಇಲಾಖೆಯ
ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ, ಸಚಿವೆಯ
ಅಧಿಕಾರ ದರ್ಪಕ್ಕೆ ಬಲಿಯಾಗಿಹೋಯ್ತು
ರವೀಂದ್ರ ಕಲಾಕ್ಷೇತ್ರ-50 ‘ನೆನಪಿನೋಕಳಿ’ ಸಾಂಸ್ಕೃತಿಕ ಕಾರ್ಯಕ್ರಮ.
ಐವತ್ತು
ವರ್ಷ ಮೀರಿದ ರವೀಂದ್ರ
ಕಲಾಕ್ಷೇತ್ರದ ನೆನಪಿಗಾಗಿ ಜುಲೈ
6 ರಂದು
‘ನೆನಪಿನೋಕಳಿ’ ಎನ್ನುವ
ಸಾಂಸ್ಕೃತಿಕ ಕಾರ್ಯಕ್ರಮ ಸರಣಿಯ
ಉದ್ಘಾಟನಾ ಸಮಾರಂಭವನ್ನು ಕನ್ನಡ
ಮತ್ತು ಸಂಸ್ಕೃತಿ ಇಲಾಖೆ
ಆಯೋಜಿಸಿತ್ತು. 2017ರ ಮಾರ್ಚ
ತಿಂಗಳವರೆಗೆ ಪ್ರತಿ ತಿಂಗಳು
ನಾಲ್ಕಾರು ದಿನಗಳ ಕಾಲ
ರವೀಂದ್ರ ಕಲಾಕ್ಷೇತ್ರದಲ್ಲಿ ಒಂದೊಂದು
ಕಲಾಪ್ರಕಾರದ ಪ್ರದರ್ಶನಗಳನ್ನು ಏರ್ಪಡಿಸುವುದೆಂದೂ ನಿರ್ಧರಿಸಲಾಗಿತ್ತು. ಕಾರ್ಯಕ್ರಮದ
ರೂಪರೇಷೆಗಳನ್ನು ಸಿದ್ದಪಡಿಸಿ ಅನುಷ್ಟಾನಕ್ಕೆ
ತರಲು ಶ್ರೀಮಾನ್ ಕಪ್ಪಣ್ಣನವರ
ಅಧ್ಯಕ್ಷತೆಯಲ್ಲಿ ‘ರವೀಂದ್ರ
ಕಲಾಕ್ಷೇತ್ರ-50 ಸಾಂಸ್ಕೃತಿಕ ಸಮಿತಿ’ಯನ್ನೂ ರಚಿಸಲಾಗಿತ್ತು.
ಈ ಸಮಿತಿ ಹಾಗೂ
ಇಲಾಖೆಯ ನಡುವಿನ ಹೊಂದಾಣಿಕೆಯ
ಸಮಸ್ಯೆಯಿಂದಾಗಿ 2016 ಮಾರ್ಚನಲ್ಲಿ ಆರಂಭವಾಗಬೇಕಿದ್ದ ‘ನೆನಪಿನೋಕಳಿ’ಯ
ಉದ್ಘಾಟನೆಯು ದಿನಾಂಕ ನಿರ್ಧರಿಸಿದ
ನಂತರವೂ ಮೂರು ಬಾರಿ
ಮುಂದೂಡಲ್ಪಟ್ಟಿತ್ತು. ಎಲ್ಲವೂ ಅಂದುಕೊಂಡಂತೆ
ಆಗಿದ್ದರೆ ಈ ಸಾಂಸ್ಕೃತಿಕ
ಕಾರ್ಯಕ್ರಮಗಳ ಉದ್ಘಾಟನೆ ಜುಲೈ
6 ರಂದು
ಆಗಬೇಕಿತ್ತು. ಪೂರ್ವಭಾವಿಯಾಗಿ ಎಲ್ಲಾ
ತಯಾರಿಯೂ ನಡೆದಿತ್ತು. ಕಲಾಕ್ಷೇತ್ರವೂ
ಸಿಂಗಾರಗೊಂಡಿತ್ತು. ಐನೂರಕ್ಕೂ ಹೆಚ್ಚು
ಜನ ಕಲಾವಿದರು ಅವತ್ತು
ಪ್ರದರ್ಶನ ನೀಡಲು ಸಕಲ
ತಯಾರಿಯೊಂದಿಗೆ 6ನೇ ತಾರೀಖು
ಬೆಳಿಗ್ಗೆ ಬೆಂಗಳೂರಿಗೆ ಬಂದಾಗಿತ್ತು. ಆದರೇನು ಮಾಡೋದು
ಕಲಾವಿದರ ನಸೀಬೇ ಕೈಕೊಟ್ಟಿತ್ತು.
ಹಿಂದಿನ ದಿನ ಅಂದರೆ
೫ನೇ ತಾರೀಖಿನಂದೇ ಇಡೀ
ಕಾರ್ಯಕ್ರಮ ರದ್ದಾಗಿ ಹೋಗಿತ್ತು.
ಅಪಾರ ಆಸೆಯಿಂದ ಬಂದ
ಗ್ರಾಮೀಣ ಕಲಾವಿದರಿಗಂತೂ ಆಘಾತವಾಯಿತು.
ಕಲಾವಿದರ ಹಾಗೂ ಸಂಘಟಕರ
ಒಂದು ತಿಂಗಳ ಶ್ರಮ
ನೀರಿನಲ್ಲಿ ಹೋಮಮಾಡಿದಂತಾಯಿತು. ಶ್ರೀಮಾನ್
ಕಪ್ಪಣ್ಣ ಮತ್ತು ಟೀಂನವರಿಗೆ
ದಿಕ್ಕೇತೋಚದಂತಾಯಿತು.
ಯಾಕೆ
ಹೀಗೆ ಸರಕಾರಿ ಕಾರ್ಯಕ್ರಮ
ಇದ್ದಕ್ಕಿದಂತೆ ರದ್ದಾಯಿತು? ಕಲಾವಿದರಿಗೆ
ಹೀಗೆ ಯಾಕೆ ಅನ್ಯಾಯ
ಮಾಡಲಾಯಿತು? ಎಂದು ನೋಡಿದರೆ
ಅದಕ್ಕೆಲ್ಲಾ ಕಾರಣ ಸಂಸ್ಕೃತಿ
ಇಲಾಖೆ ಸಚಿವೆ ಉಮಾಶ್ರೀ
ಎನ್ನುವುದು ಖಚಿತವಾಯಿತು. ಜುಲೈ
5 ರಂದು
ಮದ್ಯಾಹ್ನ ಉಮಾಶ್ರೀಯವರು ‘ನೆನಪಿನೋಕಳಿ’ ಕಾರ್ಯಕ್ರಮ ಕುರಿತು
ಪೂರ್ವಭಾವಿ ಪತ್ರಿಕಾಗೋಷ್ಠಿಯನ್ನು ನಡೆಸಬೇಕಾಗಿತ್ತು.
ಉಮಾಶ್ರೀಯವರೂ ಉಲ್ಲಾಸದಿಂದ ತಯಾರಾಗಿದ್ದರು.
ಆ ಸಮಯಕ್ಕೆ ಸರಿಯಾಗಿ
ರಂಗಕರ್ಮಿಯೊಬ್ಬರು ಕಾರ್ಯಕ್ರಮದ
ಆಹ್ವಾನ ಪತ್ರಿಕೆಯನ್ನು ಸಚಿವೆಗೆ
ತಲುಪಿಸಿದರು. ಒಂದು ಸಲ
ಅದರ ಮೇಲೆ ಕಣ್ಣಾಡಿಸಿದ
ಉಮಾಶ್ರೀಯವರ ಕಣ್ಣು ಕೆಂಪಾಯಿತು.
ಯಾಕೆಂದರೆ ಅದರಲ್ಲಿ ಉಮಾಶ್ರೀಯವರ
ಪ್ರಸ್ತುತ ಆರಾಧ್ಯದೈವವಾದ ಮುಖ್ಯಮಂತ್ರಿ
ಸಿದ್ದರಾಮಯ್ಯನವರ ಹೆಸರೇ ಇರಲಿಲ್ಲ.
ಜೊತೆಗೆ ಶ್ರೀಮತಿ.ಉಮಾಶ್ರೀ
ಎನ್ನುವ ಹೆಸರು ಉದ್ಘಾಟಕರೆಂದು
ಇತ್ತಾದರೂ ಅದರ ಕೆಳಗೆ
ಸಚಿವೆ ಮಂತ್ರಿಣಿ ಅದೂ
ಇದು ಎಂದು ಅವರ
ಪದವಿ ಅಧಿಕಾರಗಳ ಹೆಸರುಗಳನ್ನು
ಕೈಬಿಡಲಾಗಿತ್ತು. ಅತಿಥಿಗಳಾಗಿ ಆಹ್ವಾನಿತರಾಗಿದ್ದ ಅನಂತಕುಮಾರ್, ಕೆ.ಜೆ.ಜಾರ್ಜ,
ವೀರಪ್ಪ ಮೋಯಿಲಿ, ಆಸ್ಕರ್
ಪರ್ನಾಂಡೀಸ್ ಹೀಗೆ ಹಲವಾರು
ರಾಜಕಾರಣಿಗಳ ಹೆಸರನ್ನು ಮಾತ್ರ
ಮುದ್ರಿಸಿ ಅವರು ನಿಭಾಯಿಸಿದ್ದ,
ನಿಭಾಯಿಸುತ್ತಿರುವ ಹುದ್ದೆಗಳ
ಹೆಸರನ್ನು ನಮೂದಿಸಿರಲಿಲ್ಲ. ಇಷ್ಟು
ಸಾಕಿತ್ತು ಸಚಿವೆಯ ಪಿತ್ತ
ನೆತ್ತಿಗೇರಲು. “ಇಡೀ
ಕಾರ್ಯಕ್ರಮಗಳನ್ನು ಕೂಡಲೇ
ರದ್ದುಪಡಿಸಿ” ಎಂಬ
ಮೌಖಿಕ ಆದೇಶ ಹೊರಬಿದ್ದಿತು.
ಸಂಭ್ರಮದಿಂದ ವಿಜ್ರಂಭಿಸುತ್ತಿದ್ದ ರವೀಂದ್ರ
ಕಲಾಕ್ಷೇತ್ರದ ಆವರಣದಲ್ಲಿ ಸೂತಕದ
ಕಳೆ ತುಂಬಿಕೊಂಡಿತು. ಸಂಜೆ
ಪ್ರದರ್ಶನ ಕೊಡಲು ಬೆಳಿಗ್ಗೆ
ಬಂದಿದ್ದ ಕಲಾವಿದರುಗಳು ಕಕ್ಕಾಬಿಕ್ಕಿಯಾದರು.
ಸಾಂಸ್ಕೃತಿಕ ಸಮಿತಿಯ ಒಂದಿಬ್ಬರನ್ನು
ಬಿಟ್ಟರೆ ಕಪ್ಪಣ್ಣ ಸೇರಿದಂತೆ
ಉಳಿದವರೆಲ್ಲರೂ ಕಲಾವಿದರ ಕನಿಷ್ಟ
ಊಟ ಉಪಚಾರದ ಅಗತ್ಯಗಳಿಗೂ
ಸ್ಪಂದಿಸದೇ ಅನಾಥರನ್ನಾಗಿಸಿದರು.
“ಎರಡು
ಕೋಟಿ ಅನುದಾನ ಕೊಟ್ಟ
ಸಿದ್ದರಾಮಯ್ಯನವರನ್ನು ಬಿಟ್ಟು
ಅದು ಹೇಗೆ ಕಾರ್ಯಕ್ರಮ
ಮಾಡುತ್ತೀರಿ? ಎನ್ನುವುದು ಉಮಾಶ್ರೀಯವರ
ಸಿಟ್ಟಿಗೆ ಪ್ರಮುಖ ಕಾರಣವಾಗಿತ್ತು.
ಸಿದ್ದರಾಮಯ್ಯನವರೇನು ತಮ್ಮ
ಜೇಬಿನಿಂದಾ ಹಣ ಕೊಡುತ್ತಾರಾ?
ಮುಖ್ಯಮಂತ್ರಿಯಾಗಿ ಕಲೆ
ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸುವುದು
ಅವರ ಕರ್ತವ್ಯಗಿದೆ. ರಾಜ್ಯದ
ಜನತೆಯ ಪ್ರತಿನಿಧಿಯಾಗಿ ಅವರು
ತಮ್ಮ ಕರ್ತವ್ಯ ಮಾಡಿದ್ದರಲ್ಲಿ
ವಿಶೇಷತೆ ಏನಿಲ್ಲ. ಇಷ್ಟಕ್ಕೂ
ನಿಗಧಿಯಾದ ದಿನಾಂಕದಂದು ಸಿದ್ದರಾಮಯ್ಯ
ಬರದಿದ್ದರೆ ಸಂಘಟಕರೇನು ಮಾಡಬೇಕು?
ಈಗಾಗಲೇ ಮೂರು ಸಲ
ದಿನಾಂಕ ನಿಗಧಿಯಾಗಿ ಕ್ಯಾನ್ಸಲ್
ಆಗಿ ಮುಖಬಂಗವಾಗಿದೆ. ರವೀಂದ್ರ ಕಲಾಕ್ಷೇತ್ರಕ್ಕೆ
2013 ರಲ್ಲೇ 50 ವರ್ಷಗಳು ತುಂಬಿದವು. ಈ ರವೀಂದ್ರ ಕಲಾಕ್ಷೇತ್ರದ
ಸುವರ್ಣ ಸಂಭ್ರಮದ ಕಾರ್ಯಕ್ರಮಕ್ಕೆ ಚಾಲನೆ ಕೊಡುವ
ಕೆಲಸ ಆರಂಭವಾಗಿ ಎರಡು
ವರ್ಷಗಳೇ ಕಳೆದಿವೆ. ರವೀಂದ್ರ
ಕಲಾಕ್ಷೇತ್ರ-50 ಎನ್ನುವ ಕಾರ್ಯಕ್ರಮ
ವಿಳಂಬಗೊಂಡು ಜನರ ಕಣ್ಣಲ್ಲಿ
ಹಾಸ್ಯಾಸ್ಪದವಾಗಿ ಈಗ ಐವತ್ತು
ವರ್ಷ ಮೀರಿದ ರವೀಂದ್ರ
ಕಲಾಕ್ಷೇತ್ರ-50 ಎನ್ನುವ ಹೆಸರಲ್ಲಿ
ಕಾರ್ಯಕ್ರಮ ಮಾಡುವ ಅನಿವಾರ್ಯತೆ
ಬಂದಿದೆ. ಇಂತಹುದರಲ್ಲಿ ನಾಲ್ಕನೇ
ಬಾರಿಯೂ ದಿನಾಂಕ ಮುಂದೂಡುವುದನ್ನು ಸಾಂಸ್ಕೃತಿಕ ಕಮಿಟಿ
ಒಪ್ಪಲಿಲ್ಲ. ಇನ್ನು ಪ್ರೊಟೋಕಾಲ್
ಎನ್ನುವುದು ಸರಕಾರವೇ ಕಾರ್ಯಕ್ರಮವನ್ನು ಖುದ್ದಾಗಿ ಮಾಡಿದಾಗ
ಅನ್ವಯವಾಗುವಂತಹುದೇ ಹೊರತು
ಸರಕಾರ ಅನುದಾನವನ್ನು ಬಳಸಿ
ಸಾಂಸ್ಕೃತಿಕ ಸಮಿತಿ ಮಾಡುವ
ಕಾರ್ಯಕ್ರಮಕ್ಕೆ ಅನ್ವಯವಾಗುವುದಿಲ್ಲ ಎನ್ನುವುದು
ಕಮಿಟಿ ಅಧ್ಯಕ್ಷರಾದ ಕಪ್ಪಣ್ಣನವರು
ಸಮರ್ಥನೆಯಾಗಿದೆ. ಒಟ್ಟಿನ ಮೇಲೆ
ಸಚಿವೆ, ಸಮಿತಿ, ಅಧಿಕಾರಗಳ
ಮೇಲಾಟದಲ್ಲಿ ಕಲಾವಿದರು ಬಲಿಪಶುಗಳಾಗಿ
ಸಾಂಸ್ಕೃತಿಕ ಕಾರ್ಯಕ್ರಮ ರದ್ದಾಗಿ
ನಾಲ್ಕನೆಯ ಬಾರಿಗೆ ಮುಂದೂಡಲ್ಪಟ್ಟಿತು.
‘ಯಾಕೆ
ರದ್ದಾಯಿತು?’ ಎಂದು ಒತ್ತಾಯಿಸಿದ
ಪತ್ರಕರ್ತರಿಗೆ ಕಪ್ಪಣ್ಣ ಸಾಹೇಬರು
“ಉಮಾಶ್ರೀಯವರ ಮಲಮಗ ತೀರಿಕೊಂಡಿದ್ದು
ಸಚಿವೆಯವರು ತಿಥಿ ಆಚರಣೆಯಲ್ಲಿದ್ದಾರೆ.
ಅವರ ಮನೆಯಲ್ಲಿ ಸೂತಕವಿರುವುದರಿಂದ ಕಾರ್ಯಕ್ರಮ ರದ್ದು
ಮಾಡಲಾಯಿತು” ಎಂಬ
ಬಾಲಿಶವಾದ ಕಾರಣವನ್ನು ಕೊಟ್ಟು
ಬೀಸೋ ಡೊಣ್ಣೆಯಿಂದ ಪಾರಾಗಲು
ನೋಡಿದರು. ಇಲಾಖೆಯ ನಿರ್ದೇಶಕರಾದ
ದಯಾನಂದರವರು ಅಸಹಾಯಕತೆಯಿಂದ ಆಕಾಶನೋಡುತ್ತಾ
ಸೂತಕದ ಮಾತನ್ನೇ ಪುನರಾವರ್ತಿಸಿದರು.
ಸಚಿವೆಯವರ ಮಲಮಗ ಅಪಘಾತದಲ್ಲಿ
ತೀರಿಕೊಂಡು ಆಗಾಗಲೇ ನಾಲ್ಕೈದಾರು
ದಿನಗಳಾಗಿತ್ತು. ತೀರಿಕೊಂಡ ದಿನವೇ
ದುಃಖತಪ್ತರಾದ ಸಚಿವೆ ಯಾವುದೋ
ನೆಪ ಹೇಳಿ ಕಾರ್ಯಕ್ರಮ
ರದ್ದು ಮಾಡಿದ್ದರೆ ಕಪ್ಪಣ್ಣ
ಹೇಳಿದ ಸಬೂಬಿಗೆ ಒಂದು
ಅರ್ಥವಿರುತ್ತಿತ್ತು. ಕಲಾವಿದರ ಪರಿಶ್ರಮ,
ಸಂಘಟಕರ ಶ್ರಮ ಹಾಗೂ
ಇಲಾಖೆಯ ಹಣ ಉಳಿಯುತ್ತಿತ್ತು.
ಹೀಗೆ ಸರಕಾರಕ್ಕೆ ಮುಖಭಂಗವಾಗುವುದಾದರೂ ತಪ್ಪುತ್ತಿತ್ತು. ಇಷ್ಟಕ್ಕೂ
ಸಚಿವೆಯ ಮನೆಯಲ್ಲಿ ದುರಂತ
ಘಟಿಸಿದ್ದರೆ ಅದು ಅವರ
ವ್ಯಯಕ್ತಿಕವಾದ ಸಂಗತಿ. ಅವರ
ದುಃಖ ಇಡೀ ರಾಜ್ಯದ
ದುಃಖವಾಗಬೇಕೆಂದೇನಿಲ್ಲ. ವ್ಯಯಕ್ತಿಕ ಸಮಸ್ಯೆಗೆ
ಸಾರ್ವಜನಿಕ ಕಾರ್ಯಕ್ರಮವನ್ನು ಬಲಿಕೊಡಬೇಕಾದ
ಅಗತ್ಯವಿರಲಿಲ್ಲ.
ಆದರೆ
ಅಸಲಿ ಸಮಸ್ಯೆಯಿರುವುದು ಸೂತಕದಲ್ಲಲ್ಲ,
ಪ್ರೊಟೋಕಾಲ್ ನಿರ್ವಹಣೆಯಲ್ಲಿ. ರಂಗಭೂಮಿಯವರ
ಆಹ್ವಾನ ಪತ್ರಿಕೆಯಲ್ಲಿ ಅತಿಥಿಗಳ
ಹೆಸರುಗಳಿರುತ್ತವೆಯೇ ಹೊರತು
ಹಿಂದೆ ಮುಂದೆ ಹುದ್ದೆ
ಬಿರುದಾವಳಿಗಳು ಇರುವುದಿಲ್ಲ. ಇಲ್ಲಿ
ಕಲೆ ಮುಖ್ಯವೇ ಹೊರತು
ವ್ಯಕ್ತಿಗಳಲ್ಲ. ಇಷ್ಟಕ್ಕೂ ಕಪ್ಪಣ್ಣನವರು
ಅನೇಕ ಸಲ ಉಮಾಶ್ರೀಯವರಿಗೆ
ಪೋನ್ ಮಾಡಿ ಕೇಳಿದ್ದಾರೆ.
ತಮ್ಮ ಕೆಲಸದ ಒತ್ತಡ
ಹಾಗೂ ಕೌಟುಂಬಿಕ ದುಃಖದಲ್ಲಿದ್ದ
ಸಚಿವೆ “ಆಗಾಗ
ಪೋನ್ ಮಾಡಿ ಡಿಸ್ಪರ್ಬ
ಮಾಡಬೇಡಿ. ನೀವೇ ಕಮಿಟಿಯವರು
ಸೇರಿ ನಿರ್ಧರಿಸಿ ಆಹ್ವಾನ
ಪತ್ರಿಕೆ ಮುದ್ರಿಸಿ ನನಗೆ
ಕಳುಹಿಸಿಕೊಡಿ” ಎಂದು
ಹೇಳಿದ್ದಾರೆ. ಈ ಕಪ್ಪಣ್ಣ
ಸಾಹೇಬರು ಯಥಾಪ್ರಕಾರ ಆಹ್ವಾನ
ಪತ್ರಿಕೆ ಮುದ್ರಿಸಿದ್ದಾರೆ. ಮುಖ್ಯಮಂತ್ರಿಗಳು ಅವತ್ತಿನ ದಿನ
ಬರುತ್ತಿಲ್ಲ ಎಂಬುದನ್ನು ಕನ್ಪರಂ
ಮಾಡಿಕೊಂಡು ಅವರ ಹೆಸರನ್ನು
ಸೇರಿಸಿಲ್ಲ. ಆದರೆ ಈ
ಸರಕಾರಿ ಕಾರ್ಯಕ್ರಮಗಳನ್ನು ಮಾಡುವಾಗ
ಪ್ರೊಟೋಕಾಲ್ ಅನ್ನೋದೊಂದು ಅನಗತ್ಯ
ಅಘೋಷಿತ ವಿಕ್ಷಿಪ್ತ ನಿಯಮವಿದೆ.
ಅದೇನೆಂದರೆ ಮಂತ್ರಿಗಳು ಮುಖ್ಯಮಂತ್ರಿಗಳು ಬರದೇ ಇದ್ದರೂ
ಅವರ ಹೆಸರನ್ನು ಅವರ
ಹುದ್ದೆಗಳ ಸಮೇತ ಅಲಂಕಾರಿಕವಾಗಿ
ಆಮಂತ್ರಣ ಪತ್ರಿಕೆಯಲ್ಲಿ ಹಾಕಲೇಬೇಕು
ಎಂಬುದು. ಈ ನಾಟಕದ
ಮಂದಿಗೆ ಇದೆಲ್ಲಾ ಸರಕಾರಿ
ಹಿಡನ್ ರೂಲ್ಗಳು
ಗೊತ್ತಿರುವುದಿಲ್ಲ. ಮಾಮೂಲಿನಂತೆ ಪತ್ರಿಕೆ
ಮುದ್ರಿಸಿ ಎಲ್ಲರಿಗೂ ಹಂಚಿದ್ದಾರೆ.
ಈ ಪ್ರೊಟೋಕಾಲ್ ಎನ್ನುವುದು
ಒಂದಿಡೀ ಕಾರ್ಯಕ್ರವನ್ನು ಬರ್ಬಾದ್ ಮಾಡಿದ್ದು
ಬಹುಷಃ ರಂಗಭೂಮಿಯ ಇತಿಹಾಸದಲ್ಲಿ
ಇದೇ ಮೊದಲ ಬಾರಿ
ಇದ್ದೀತು.
ದೂರದೂರದಿಂದ
ಬಂದಿದ್ದ ಕಲಾವಿದರು ತಮಗಾದ
ನಿರಾಸೆಗಾಗಿ ನೊಂದು ಪ್ರತಿಭಟಿಸಬಹುದಾಗಿತ್ತು.
ಆದರೆ ಯಾವೊಬ್ಬ ಕಲಾವಿದರೂ
ಪ್ರತಿಭಟಿಸುವ ಗೋಜಿಗೆ ಹೋಗದೆ
ಕಾರಂತರ ಕ್ಯಾಂಟೀನಿನಲ್ಲಿ ಜೋಗಿಲ
ಸಿದ್ದರಾಜು ವ್ಯವಸ್ಥೆ ಮಾಡಿದ್ದ
ತಿಂಡಿ ಮುಗಿಸಿಕೊಂಡು, ಹೋಗಿಬರುವ
ಖರ್ಚಿಗೆ ಮುಂಗಡ ರಸೀದಿಯಲ್ಲಿ
ಸಹಿ ಮಾಡಿ ಸರಕಾರವನ್ನೂ
ಸಚಿವೆಯನ್ನೂ ಬೈದುಕೊಳ್ಳುತ್ತಾ ಬಂದ
ದಾರಿಗೆ ಸಿಕ್ಕಷ್ಟೇ ಸುಂಕ
ಎಂದುಕೊಂಡು ತಮ್ಮ ಸಾಮಾನು
ಸರಂಜಾಮುಗಳೊಂದಿಗೆ ಊರಿಗೆ
ಮರಳಿದರು. ಆದರೆ.. ಇಂತದೇ
ಅವಕಾಶಕ್ಕಾಗಿ ಕಾಯುತ್ತಿದ್ದ ಕೆಲವು
ಸಾಂಸ್ಕೃತಿಕ ದಲ್ಲಾಳಿಗಳ ಪಡೆ
ಕಾರ್ಯಕ್ರಮ ರದ್ದಾದ ಕೂಡಲೇ
ಕಲಾಕ್ಷೇತ್ರದ ಮುಂದೆ ನಿಂತು
‘ಅಯ್ಯಯ್ಯೋ ಅನ್ಯಾಯ’, ‘ಸಂಸ್ಕೃತಿ
ಇಲಾಖೆಗೆ ದಿಕ್ಕಾರ’ ಎಂದು
ಅಬ್ಬರಿಸತೊಡಗಿದರು. ಈ ಮುಂಚೆ
ಸರಕಾರಿ ಅಧಿಕಾರಿಗಳಿಗೆ ಪರ್ಸಂಟೇಜ್
ಪ್ರಸಾದವನ್ನು ಕೊಟ್ಟು ಲಕ್ಷಾಂತರ
ರೂಪಾಯಿಗಳ ಅನುದಾನವನ್ನು ಪಡೆದು
ಲಾಭ ಮಾಡಿಕೊಳ್ಳುತ್ತಿದ್ದ ಈ
ರಂಗದಲ್ಲಾಳಿಗಳಿಗೆ ಕಳೆದೆರಡು
ವರ್ಷಗಳಿಂದ ಕೇಳಿದಷ್ಟು ಹಣ
ಬಿಡುಗಡೆಯಾಗದೇ ಆರ್ಥಿಕವಾಗಿ ಬರಗೆಟ್ಟುಹೋಗಿದ್ದಂತೂ ಸತ್ಯ.
ದಯಾನಂದರವರು ಸಂಸ್ಕೃತಿ ಇಲಾಖೆಗೆ
ನಿರ್ದೇಶಕರಾಗಿ ಬಂದ ಮೇಲಂತೂ
ಕೆಲವಾರು ನಕಲಿ ಸಾಂಸ್ಕೃತಿಕ
ಸಂಘಟನೆಗಳು ಇಲಾಖೆಯ ಬ್ಲಾಕ್ಲಿಸ್ಟ್ಗೆ
ಸೇರಿಸಲ್ಪಟ್ಟವು. ಸರಕಾರಿ ಹಣದುರುಪಯೋಗದ
ಆರೋಪದ ಮೇಲೆ ಒಂದೆರಡು
ಸಂಸ್ಥೆಗಳ ಮುಖ್ಯಸ್ತರ ಮೇಲೆ
ಕ್ರಿಮಿನಲ್ ಕೇಸ್ ಹಾಕಲಾಗಿತ್ತು.
ಮಿಕ್ಕ ಸಾಂಸ್ಕೃತಿಕ ಸಂಘಟನೆಗಳ
ಕ್ರಿಯಾಶೀಲತೆಯ ಆಧಾರದ ಮೇಲೆ
ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು.
ಹೀಗಾಗಿ ಸರಕಾರಿ ಹುಲ್ಲುಗಾವಲಿನಲ್ಲಿ ತಿಂದುಂಡು ಮೇಯ್ದುಕೊಂಡಿದ್ದ ಪುಂಡ ದನಗಳಿಗೆ
ನುಂಗಲು ಮೇವೇ ಇಲ್ಲವಾಯಿತು.
ಅಂತವರೆಲ್ಲಾ ಸೇರಿ ದಯಾನಂದರವರ
ಮೇಲೆ ಹಾಗೂ ಉಮಾಶ್ರೀಯವರ
ಮೇಲೆ ಸಮಯ ಸಿಕ್ಕಾಗಲೆಲ್ಲಾ
ಆಕ್ರಮಣ ಮಾಡುತ್ತಲೇ ಬಂದಿದ್ದರು.
ಕೆಲವು ರೋಲ್ಕಾಲ್
ಪತ್ರಿಕೆಗಳಲ್ಲಿ ಕೆಟ್ಟ ಭಾಷೆ
ಬಳಸಿ ನಿಂದಿಸಲಾಯಿತು. ಸಚಿವೆಯನ್ನು
ಬೈಕಾಟ್ ಮಾಡಲಾಯಿತು. ಇಲಾಖೆಯ
ಮುಂದೆ ಪ್ರತಿಭಟನೆಯನ್ನೂ ಹಮ್ಮಿಕೊಳ್ಳಲಾಗಿತ್ತು.
ಆದರೆ ಬೆಂಕಿಹತ್ತಿದ ಮನೆಯ
ಗಳಹಿರಿಯುವ ಈ ಸಾಂಸ್ಕೃತಿಕ
ದಲ್ಲಾಳಿಗಳ ಯಾವುದೇ ಒತ್ತಡಕ್ಕೆ
ಇಲಾಖೆಯ ನಿರ್ದೇಶಕರಾಗಲೀ ಸಚಿವೆಯಾಗಲಿ
ಕ್ಯಾರೇ ಎನ್ನಲಿಲ್ಲ.
ಯಾವುದೋ
ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ
ಈ ದಲ್ಲಾಳಿ ಪಡೆಗೆ
‘ನೆನಪಿನೋಕಳಿ’ ಕಾರ್ಯಕ್ರಮ
ರದ್ದಾಗಿದ್ದು ತಿಳಿದು ಕುಣಿದುಕುಪ್ಪಳಿಸುವಂತಾಯಿತು. ತಮ್ಮ ಚೇಲಾ
ಬಾಲಗಳನ್ನು ಕರೆದುಕೊಂಡು ಬಂದು
ರವೀಂದ್ರ ಕಲಾಕ್ಷೇತ್ರದ ಮುಂದೆ
ನಿಂತು ಇಲಾಖೆಯ ವಿರುದ್ಧ,
ಸಚಿವೆಯ ವಿರುದ್ದ ದಿಕ್ಕಾರ
ಕೂಗತೊಡಗಿದರು. ಟಿವಿ ವಾಹಿನಿಗಳ
ಕ್ಯಾಮಾರಾದ ಮುಂದೆ ಇವರ
ಹಾರಾಟ ಮೇರೆ ಮೀರಿತು.
ನಿಜವಾಗಿ ಅನ್ಯಾಯವಾಗಿ ನೊಂದುಕೊಂಡ
ಕಲಾವಿದರು ಪ್ರತಿಭಟಿಸುವುದನ್ನು ಬಿಟ್ಟು
ಸುಮ್ಮನಾಗಿದ್ದರು. ಆದರೆ ಈ ಕಾರ್ಯಕ್ರಮಕ್ಕೂ ಕಲಾವಿದರಿಗೂ
ಸಂಬಂಧವೆ ಇಲ್ಲದ ರಂಗದಲ್ಲಾಳಿಗಳು
ಸೇಡಿನ ಮನೋಭಾವದಿಂದ ರಂಪಾರಾದ್ದಾಂತ
ಮಾಡಲು ಶುರುಮಾಡಿದರು. ಆದರೆ
ಇವರ ದಿಡೀರ್ ಧಿಕ್ಕಾರವನ್ನು
ಯಾವ ರಂಗಕರ್ಮಿಗಳೂ ಅಷ್ಟೊಂದು
ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ.
ಸಂಸ್ಕೃತಿ ಇಲಾಖೆ ಉತ್ತರಿಸುವ
ಗೋಜಿಗೂ ಹೋಗಲಿಲ್ಲ. ಕೂಗುವವರು
ಕೂಗಿ ಸುಸ್ತಾಗಿ ಮನೆಗೆ
ಹೋದರು.
ಯಾರೇನೇ
ಹೇಳಲಿ... ಕೂಗಾಡುವವರು ಕೂಗಾಡಲಿ,
ಗೊಣಗುವವರು ಗೊಣಗಿಕೊಳ್ಳಲಿ ಆದರೆ
ಇಡೀ ಪ್ರಹಸನ ಸಚಿವೆಯ
ಅಧಿಕಾರದ ದರ್ಪವನ್ನು ತೋರಿಸುತ್ತದೆ.
ತಮ್ಮ ವ್ಯಯಕ್ತಿಕ ಖಿನ್ನತೆ
ಅಹಂಕಾರಕ್ಕೆ ಐನೂರು ಜನ
ಕಲಾವಿದರು ಭಾಗವಹಿಸುವ ಕಾರ್ಯಕ್ರಮವನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಿದ್ದು ಅಕ್ಷಮ್ಯ. ಇವರ
ಪ್ರೊಟೊಕಾಲ್ಗೆ ಪೂರಕವಾಗಿ
ಆಹ್ವಾನ ಪತ್ರಿಕೆ ಇಲ್ಲದಿದ್ದಲ್ಲಿ
ಇನ್ನೂ ಒಂದು ದಿನ
ಸಮಯವಿತ್ತಲ್ಲ.. ಹೇಳಿದ್ದರೆ ಒಂದೇ
ಒಂದು ಗಂಟೆಯೊಳಗಾಗಿ ಆಹ್ವಾನ
ಪತ್ರಿಕೆಯನ್ನೇ ಸಚಿವೆಯ ಹಿತಾಸಕ್ತಿಯಂತೆ
ಬದಲಾಯಿಸುವ ಅವಕಾಶವೂ ಇತ್ತಲ್ಲ.
ಆದರೆ.. ಉಗುರಿಗೆ ಹೋಗುವ
ಸಮಸ್ಯೆಗೆ ಕೊಡಲಿಯನ್ನೇ ತೆಗೆದುಕೊಂಡು
ಕಲಾವದರೆನ್ನುವ ಗುಬ್ಬಚ್ಚಿಗಳ ಮೇಲೆ
ಅಧಿಕಾರವೆನ್ನುವ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವ
ಅಗತ್ಯ ಉಮಾಶ್ರೀಯವರಿಗೆ ಬೇಕಿರಲಿಲ್ಲ.
ಇಷ್ಟಕ್ಕೂ ಬೇರೆ ಯಾರಾದರೂ
ಮಂತ್ರಿ ಈ ರೀತಿ
ಮಾಡಿದ್ದರೆ ಬೇರೆ ಮಾತಾಗುತ್ತಿತ್ತು.
ಆದರೆ.. ಮೂಲತಃ ಕಲಾವಿದೆಯಾಗಿರುವ ಉಮಾಶ್ರೀಯವರನ್ನು ಇದೇ
ಕಲಾಕ್ಷೇತ್ರ, ಇದೇ ರಂಗಕರ್ಮಿಗಳು
ಅವಕಾಶಕೊಟ್ಟು ಬೆಳೆಸಿದ್ದು. ಕಲೆಯನ್ನು
ಏಣಿಯಾಗಿಸಿಕೊಂಡು ಅಧಿಕಾರದ ಗದ್ದುಗೆಯನ್ನು
ಹಿಡಿದ ಈ ಮಾಜಿಕಲಾವಿದೆ ಗುರಿ
ಮುಟ್ಟಿದ ನಂತರ ಹತ್ತಿದ
ಏಣಿಯನ್ನೇ ಒದ್ದರೆ ಹೇಗೆ?
ರಂಗಕರ್ಮಿಗಳನ್ನು ಅವಮಾನಿಸಿ ಕಲಾವಿದರನ್ನು
ಸಂಕಷ್ಟಕ್ಕೆ ಈಡುಮಾಡಿದರೆ ಹೇಗೆ?
ಇದು ಖಂಡಿತಾ ಸಮರ್ಥನೀಯವಲ್ಲ.
ಕಲಾವಿದರಿಗೆ ಮಾಡಿದ ಅವಮರ್ಯಾದೆ
ಹಾಗೂ ಕಲಾಕ್ಷೇತ್ರಕ್ಕೆ ಮಾಡಿದ
ಅವಮಾನವಾಗಿದೆ. ಅಧಿಕಾರದ ಪಿತ್ತ
ನೆತ್ತಿಗೇರಿ ಕುಣಿಯುತ್ತಿರುವ ಪ್ರಸ್ತುತ
ಸನ್ನಿವೇಶದಲ್ಲಿ ಉಮಾಶ್ರೀಯವರಿಗೆ ಮಾಡಿದ್ದು
ತಪ್ಪು ಎಂದು ಹೇಳುವವರಾದರೂ
ಯಾರು? ಕಲಾವಿದರು ಹಾಗೂ
ಕಲಾಲೋಕವನ್ನು ತಮ್ಮಿಚ್ಚೆಗೆ ತಕ್ಕಂತೆ
ಆಡಿಸುತ್ತಿರುವ ಸಚಿವೆಗೆ ಬಿಸಿ
ಮುಟ್ಟಿಸುವ ತಾಕತ್ತಿರುವ ನಾಯಕರಾದರೂ
ಸಾಂಸ್ಕತಿಕ ಕ್ಷೇತ್ರದಲ್ಲಿ ಯಾರಿದ್ದಾರೆ?
ಕಲಾವಿದರಿಗಾದ
ಅನ್ಯಾಯವನ್ನು ಮೊಟ್ಟಮೊದಲು ವಿರೋಧಿಸಬೇಕಾದದ್ದು ‘ನೆನಪಿನೋಕಳಿ’ ಕಾರ್ಯಕ್ರಮದ
ಉಸ್ತುವಾರಿಯನ್ನು ಹೊತ್ತಿರುವ ಸಾಂಸ್ಕೃತಿಕ
ಸಮಿತಿಯ ಹೊಣೆಗಾರಿಕೆಯಾಗಿತ್ತು. ಯಾಕೆಂದರೆ
ಒಂದು ಕೆಲಸವನ್ನು ಒಂದು
ಸಮಿತಿಗೆ ವಹಿಸಿದ ಮೇಲೆ
ಅದರ ನಿರ್ಣಯಗಳಿಗೆ ಬೆಲೆ
ಕೊಡಬೇಕಾದದ್ದು ಇಲಾಖೆಯ ಹಾಗೂ
ಸಚಿವೆಯ ಕರ್ತವ್ಯವಾಗಿತ್ತು. ಅಕಸ್ಮಾತ್
ಲೋಪದೋಷಗಳೇನಾದರೂ ಕಂಡುಬಂದರೆ ಅದನ್ನು
ತಿದ್ದಿಕೊಳ್ಳಲು ಸಲಹೆ ಸೂಚನೆ
ಕೊಡಬಹುದಾಗಿತ್ತು. ಯಾವಾಗ ಸಾಂಸ್ಕೃತಿಕ
ಸಮಿತಿಯ ಗಮನಕ್ಕೆ ತರದೇ
ಏಕಪಕ್ಷೀಯವಾಗಿ ಸಚಿವೆ ಇಡೀ
ಕಾರ್ಯಕ್ರಮವನ್ನು ರದ್ದು ಮಾಡಿದರೋ
ಆಗ ಮೊಟ್ಟ ಮೊದಲು
ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ
ಕಲಾರತ್ನ ಕಪ್ಪಣ್ಣನವರು ಕಮಿಟಿಗೆ
ರಾಜೀನಾಮೆ ಕೊಡಬೇಕಿತ್ತು. ಮಾಜಿ
ರಂಗಕರ್ಮಿ ಹಾಗೂ ಹಾಲಿ
ಸಾಂಸ್ಕೃತಿಕ ಗುತ್ತಿಗೆದಾರರಾದ ಕಪ್ಪಣ್ಣನವರಿಂದ
ಇಂತಹ ನಿರ್ದಾರವನ್ನು ಅಪೇಕ್ಷಿಸಲೂ
ಸಾಧ್ಯವಿಲ್ಲ. ಹೋಗಲಿ ಕಮಿಟಿಯ
ಸದಸ್ಯರುಗಳಾದರೂ ಕಲಾವಿದರಿಗಾದ ಅನ್ಯಾಯಕ್ಕೆ
ಹಾಗೂ ಕಮಿಟಿಗಾದ ಅವಮಾನಕ್ಕೆ
ಬದಲಾಗಿ ರಾಜೀನಾಮೆ ಘೊಷಿಸಿದ್ದರೆ
ಅವರ ರಂಗಬದ್ದತೆ ಸಾಬೀತಾಗುತ್ತಿತ್ತು.
ಆದರೆ.. ಯಾರೆಂದರೆ ಯಾರೂ
ಒಂದು ಚಕಾರವನ್ನೂ ಎತ್ತದೇ
ತೆಪ್ಪಗಿದ್ದು ಅಧಿಕಾರದಲ್ಲಿರುವವರಿಗೆ ತಮ್ಮ
ಅಪಾರ ನಿಷ್ಠೆಯನ್ನು ತೋರಿಸಿದ್ದು
ನಿಜಕ್ಕೂ ಅಕ್ಷಮ್ಯ. ಯಾಕೆಂದರೆ
ಈ ಕಮಿಟಿಯಲ್ಲಿರುವ ಅಧ್ಯಕ್ಷರಾದಿಯಾಗಿ ಬಹುತೇಕ ಸದಸ್ಯರುಗಳು
ಸರಕಾರಿ ಪ್ರಾಜೆಕ್ಟ್ಗಳ
ಹಾಗೂ ಅನುದಾನಗಳ ಫಲಾನುಭವಿಗಳು.
ಎಲ್ಲಿ ಸಚಿವೆಯನ್ನು ವಿರೋಧಿಸಿದರೆ,
ಸಂಸ್ಕೃತಿ ಇಲಾಖೆಯ ವಿರುದ್ಧ
ಪ್ರತಿಭಟಿಸಿದರೆ ಮುಂದೆ ಸಿಗಬಹುದಾದ
ಸರಕಾರಿ ಸವಲತ್ತುಗಳ ಬಾಗಿಲು
ಬಂದಾಗುವುದೋ ಎನ್ನುವ ಅವ್ಯಕ್ತ ಆತಂಕ. ಇನ್ನು
ಕೆಲವರಿಗೆ ಪ್ರಶಸ್ತಿ ಸನ್ಮಾನ
ಪದವಿಗಳು ಈ ಸರಕಾರದ ಕಾಲಾವಧಿಯಲ್ಲಿ
ಮರೀಚಿಕೆಯಾಗಬಹುದು ಎನ್ನುವ
ಅನುಮಾನ. ಹೀಗಾಗಿ ಬಹುತೇಕರು
ತಮಗೆ ಆದ ಅವಮಾನವನ್ನು
ಸಹಿಸಿಕೊಂಡು, ಕಲಾವಿದರಿಗಾಗಿ ಅವಮರ್ಯಾದೆಯನ್ನು ಕಡೆಗಣಿಸಿ ತಮ್ಮ
ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು
ಪಂಚೆಂದ್ರಿಯಗಳನ್ನು ನಿಯಂತ್ರಿಸಿಕೊಂಡು ಸುಮ್ಮನೇ ಕುಳಿತು
ನಿಜವಾದ ರಂಗಕರ್ಮಿಗಳ ಕಣ್ಣಲ್ಲಿ
ಅವಕಾಶವಾದಿಗಳಾಗಿ ಹೋದರು. ಸಮಿತಿಯ
ಸದಸ್ಯರಲ್ಲೊಬ್ಬರಾದ ಜೆ.ಲೋಕೇಶ್‌ರಂತವರು ಈ ಅವಕಾಶವಾದಿಗಳ
ಸಹವಾಸವೇ ಬೇಡವೆಂದುಕೊಂಡು ಮೊದಲಿನಿಂದಲೂ
ನಿರ್ಲಿಪ್ತರಾಗಿ ಹೊರಗುಳಿದರು.
ಎಲ್ಲರಿಗೂ
ಇಲ್ಲಿ ಅವರವರ ಹಿತಾಸಕ್ತಿಯೇ
ಬಹಳ ಮುಖ್ಯವಾಗಿದೆ. ಕಲೆಯ
ಬಗ್ಗೆ ಕಾಳಜಿ, ಕಲಾವಿದರ
ಬಗ್ಗೆ ಕಳಕಳಿ ಎನ್ನುವುದೇ
ಇಲ್ಲವಾಗಿದೆ. ಸಾಂಸ್ಕೃತಿಕ ದಲ್ಲಾಳಿಗಳಿಗೆ
ಸರಕಾರಿ ಪ್ರಾಜೆಕ್ಟಗಳ ಮೇಲೆ
ಆಸೆ,
ಸಚಿವೆಗೆ ಅಧಿಕಾರದ ದರ್ಪ
ಮೆರೆವ ದುರಹಂಕಾರ, ಇಲಾಖೆಯ
ಅಧಿಕಾರಿಗಳಂತೂ ಅಸಹಾಯಕ ಆಜ್ಞಾಪಾಲಕರಾಗಿದ್ದು ಸಿಕ್ಕ ಅವಕಾಶಗಳಲ್ಲೇ
ತಮ್ಮಪಾಲನ್ನು ಹೊಂಚಿಕೊಳ್ಳುವ ತಹತಹ.
ಇನ್ನು ಈ ಕಲಾವಿದರನ್ನು
ಕೇಳುವವರಾದರೂ ಯಾರು? ರೈತರ
ಹೆಸರಲ್ಲಿ ಸರಕಾರ ನಡೆಸುವವರು
ಅನ್ನದಾತನನ್ನೇ ಕಡೆಗಣಿಸಿ ಲಾಭ
ಮಾಡಿಕೊಳ್ಳುವಂತೆ. ಸಂಸ್ಕೃತಿ ಹಾಗೂ
ಕಲಾವಿದರ ಹೆಸರಲ್ಲೇ ನಡೆಯುತ್ತಿರುವ
ಕನ್ನಡ ಮತ್ತು ಸಂಸ್ಕೃತಿ
ಇಲಾಖೆಯು ಕಲೆ ಹಾಗೂ
ಕಲಾವಿದರನ್ನೇ ತುಳಿಯುತ್ತಿರುವುದು ನಿಜಕ್ಕೂ
ಅಮಾನವೀಯವಾಗಿದೆ. ಇಲ್ಲಿ
ಒಗ್ಗರಣೆಗೆ ಹಾಕಿದ ನಂತರ
ತಿನ್ನುವಾಗ ಬಿಸಾಡುವ ಕರಬೇವಿನ
ಎಲೆಗಳಂತಾಗಿದೆ ಕಲಾವಿದರ ಬದುಕು.
ಸರಕಾರಿ ಪ್ರಾಜೆಕ್ಟಗಳಿಗಾಗಿ ಆದೇಶಿಸುವವರು
ಸಚಿವರು, ಅನುಷ್ಟಾನಕ್ಕೆ ತರುವವರು
ಸರಕಾರಿ ನಿಷ್ಟರಾದ ಅಧಿಕಾರಿಗಳು,
ಸಂಘಟಿಸುವವರು ಇಲಾಖೆಗೆ ಬದ್ದರಾದ
ರಂಗ ಸಂಘಟಕರು.. ಆದರೆ..
ಈ ಮೇಲಿನ ಮೂರೂ
ವರ್ಗದವರು ಕಲಾವಿದರನ್ನು ಬಳಸಿಕೊಂಡು
ತಮ್ಮ ತಮ್ಮ ಹಿತಾಸಕ್ತಿಗಳನ್ನು ಸಾಧಿಸುತ್ತಿರುವುದು ಕಲಾಲೋಕದ
ದುರಂತವಾಗಿದೆ. ಎಲ್ಲಿ ಕಲೆ
ಹಾಗೂ ಕಲಾವಿದರು ಪ್ರಮುಖವಾಗಬೇಕಾಗಿತ್ತೋ ಅವರ ಜಾಗದಲ್ಲಿ
ಸಂಘಟಕರು, ಅಧಿಕಾರಿಗಳು ಹಾಗೂ
ಸಚಿವರು ಮೆರೆಯುತ್ತಿರುವುದು ಕಲೆಯ
ಬೆಳವಣಿಗೆಗೆ ಪೂರಕವಂತೂ ಅಲ್ಲವೇ
ಅಲ್ಲ. ಸರಕಾರ ಹಣ
ಕೊಡುತ್ತದೆ ಎನ್ನುವ ಕಾರಣಕ್ಕೆ
ಕಲಾವಿದರು ಏನೇ ಅವಮಾನವಾದರೂ
ಅದೆಷ್ಟೇ ಅನಾನುಕೂಲವಾದರೂ ಸಹಿಸಿಕೊಂಡು
ಸಹಕರಿಸಬೇಕು ಎನ್ನುವ ನಿಲುವು
ಕಲಾಲೋಕಕ್ಕೆ ಆತ್ಮಹತ್ಯಾಕಾರಿಯಾಗಿದೆ. ಇಷ್ಟಕ್ಕೂ
ಸರಕಾರಿ ಇಲಾಖೆ ಕಲೆಗಾಗಿ
ಕೊಡಮಾಡುವ ಹಣ ಯಾವ
ಸಚಿವರ, ಅಧಿಕಾರಿಗಳ ಅಥವಾ
ಸಾಂಸ್ಕೃತಿಕ ಗುತ್ತಿಗೆದಾರರ ಸ್ವಂತ
ಸಂಪಾದನೆಯಿಂದ ಸಂದಾಯವಾಗುವಂತಹುದಲ್ಲ. ಅದು
ಜನತೆಯಿಂದ ತೆರಿಗೆ ರೂಪದಲ್ಲಿ
ಬಂದ ಜನಸಮುದಾಯದ ಹಣ. ಕಲೆಗೆ
ಮೀಸಲಿಟ್ಟ ಹಣದ ಬಹುಪಾಲು
ಕಲಾವಿದರಿಗೆ ತಲುಪಬೇಕಾದದ್ದು ನ್ಯಾಯಯುತವಾದದ್ದು.
ಆದರೆ.. ಕಲಾವಿದರಿಗೆ ಸಿಗುವುದು
ಪುಡಿಗಾಸಾದರೆ ಪಾಜೆಕ್ಟರೂಪದ ಹಣದ
ಸಿಂಹಪಾಲು ಹಂಚಿಕೆಯಾಗುವುದು ರಾಜಕಾರಣಿಗಳಿಗೆ,
ಅಧಿಕಾರಿಗಳಿಗೆ ಹಾಗೂ ನಡುವಿನ
ದಲ್ಲಾಳಿ ವರ್ಗಕ್ಕೆ ಎನ್ನುವುದು
ಮಾತ್ರ ಬಂಡವಾಳಶಾಹಿ ಪ್ರಜಾಪ್ರಭುತ್ವದ ಕರಾಳ ಮುಖವಾಗಿದೆ.
ವ್ಯವಸ್ಥೆ ಹೀಗಿರುವಾಗ ಕಲಾಲೋಕ
ಉಳಿದು ಬೆಳೆಯುವುದಾದರೂ ಯಾವಾಗ?
ಕಲಾವಿದರು ತಮ್ಮ ಬದುಕನ್ನೂ
ತೂಗಿಸಿಕೊಂಡು ಕಲೆಯನ್ನು ಉಳಿಸಿಕೊಂಡು
ಹೋಗುವುದು ಹೇಗೆ? ಕರ್ನಾಟಕದ
ಸಾಂಸ್ಕೃತಿಕ ವೈಭವ ಶ್ರೀಮಂತಗೊಳ್ಳುವುದಾದರೂ ಎಂದು?
- ---- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ