ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು
ಆಯೋಜಿಸಿದ “ಮಹಿಳೆ ಮತ್ತು ಮಕ್ಕಳು- ವರ್ತಮಾನದ ನೋಟ” ಎನ್ನುವ ವಿಷಯದ ಕುರಿತ ನಾಟಕ
ರಚನಾ ಕಮ್ಮಟದಲ್ಲಿ ಭಾಗವಹಿಸಲು ನನ್ನನ್ನು ಆಹ್ವಾನಿಸಿದ್ದಕ್ಕೆ ಆ ಕಮ್ಮಟದ ನಿರ್ದೇಶಕರಾದ ನಿಮಗೆ ಅನಂತ
ಧನ್ಯವಾದಗಳು. ಹಾಗೂ ನಿಮ್ಮದೇ ಆದ ಮಿತಿಯಲ್ಲಿ ನಾಟಕ ರಚನಾ ಕಮ್ಮಟವನ್ನು ಸರಕಾರಿ ಲೆಕ್ಕದಲ್ಲಿ ಯಶಸ್ವಿಯಾಗಿ
ನಿರ್ವಹಿಸಿದ್ದಕ್ಕೆ ಅಭಿನಂದನೆಗಳು.
ನಿಮ್ಮ ಆತ್ಮೀಯ ಆಹ್ವಾನದ ಮೇರೆಗೆ
ನಾಟಕ ರಚನಾ ಕಮ್ಮಟದಲ್ಲಿ ನಾನೂ ಭಾಗವಹಿಸಿ ನಾಟಕವೊಂದನ್ನು ಬರೆದು ಕೊಟ್ಟಿದ್ದು ಅದಕ್ಕಾಗಿ ಸರಕಾರವು
ಹತ್ತು ಸಾವಿರ ಹಣವನ್ನು ಕೊಡುತ್ತಿದೆ ಎಂಬುದು ನನಗೆ ಗೊತ್ತಿದೆ. ಸಂಸ್ಕೃತಿ ಇಲಾಖೆಯಿಂದ ನನ್ನ ಬ್ಯಾಂಕ್
ಅಕೌಂಟ್ ವಿವರ ಕೇಳಿ ಪೋನ್ ಸಹ ಬರುತ್ತಿದೆ. ಆದರೆ.. ಈ ಸಂಭಾವನೆಯನ್ನು ನಾನು ವಿನಯಪೂರ್ವಕವಾಗಿ ನಿರಾಕರಿಸುತ್ತಿದ್ದೇನೆ.
ನನಗೆ ಸರಕಾರ ಕೊಡಮಾಡುವ ಹಣ ಬೇಕಾಗಿಲ್ಲ ಹಾಗೂ ಅದನ್ನು ಪಡೆಯುವ ಅರ್ಹತೆಯೂ ನನಗಿಲ್ಲ ಎಂದು ನಿಮಗೆ
ವಿಷಾದದಿಂದ ತಿಳಿಸುತ್ತಿದ್ದೇನೆ.
ಯಾಕೆಂದರೆ... ನಾಟಕಗಳ ಅಂತಿಮ
ಆಯ್ಕೆ ಪ್ರಕ್ರಿಯೆಯಲ್ಲಿ ನಾನು ಬರೆದ ನಾಟಕವು ತಿರಸ್ಕೃತವಾಗಿದೆ. ಹಾಗೂ ತಿರಸ್ಕರಿಸಲ್ಪಟ್ಟ ನಾಟಕಕ್ಕೆ
ಸಂಭಾವನೆಯನ್ನು ಪಡೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ.
ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿರುವ ಹಲವಾರು ತಾರತಮ್ಯಗಳು ಹಾಗೂ ಸಾಂಸ್ಕೃತಿಕ ರಾಜಕಾರಣವು
ನನಗೆ ಒಪ್ಪಿತವಾಗಿಲ್ಲ. ಅವುಗಳಲ್ಲಿ ಕೆಲವೊಂದನ್ನು ನಿಮ್ಮ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇನೆ.
ಬೇಸರಿಸಿಕೊಳ್ಳದೇ ಓದುತ್ತೀರೆಂದು ನಂಬಿರುವೆ.
1. ‘ಯಾವುದೇ ಕಾರಣಕ್ಕೂ ಶಿಬಿರಾರ್ಥಿಗಳು ಬರೆಯುವ ನಾಟಕವು ಸ್ವತಂತ್ರ
ರಚನೆಯಾಗಿರಬೇಕು ಪೌರಾಣಿಕ, ಚಾರಿತ್ರಿಕ ಹಾಗೂ ಜಾನಪದದ ಆಕರಗಳಿಂದ ಪ್ರೇರೇಪಿತವಾಗಿರಬಾರದು’ ಎನ್ನುವ ನಿಯಮವನ್ನು ನೀವು
ನಾಟಕ ರಚನಾ ಕಮ್ಮಟದ ಆರಂಭದಲ್ಲಿ ಸ್ಪಷ್ಟಪಡಿಸಿದ್ದೀರಿ. ಹಾಗೂ ನಿಮ್ಮ ಕಾಲೇಜಿಗೆ ಬಂದಿದ್ದಾಗ ಖಾಸಗಿಯಾಗಿ
ನನಗೂ ಮುಂಚೆಯೇ ಒತ್ತಿ ಒತ್ತಿ ಹೇಳಿದ್ದೀರಿ. ಆದರೆ..
ಅಂತಿಮವಾಗಿ ಆಯ್ಕೆಯಾದ ನಾಟಕಗಳ ಪಟ್ಟಿ ನೋಡಿದಾಗ ನೀವೇ ಮಾಡಿದ ನಿಬಂಧನೆಗಳು ಉಲ್ಲಂಘನೆಯಾಗಿದ್ದು ಸ್ಪಷ್ಟವಾಗಿ
ಗೋಚರಿಸುವಂತಿದೆ. ಕೆಲವಾರು ನಾಟಕಗಳು ಪೌರಾಣಿಕ, ಚಾರಿತ್ರಿಕ ಹಾಗೂ ಜಾನಪದಗಳ ಆಕರಗಳನ್ನು ಬಳಸಿಕೊಂಡು
ರಚನೆಗೊಂಡಿದ್ದು ಅಂತವುಗಳು ಆಯ್ಕೆಯಾಗಿದ್ದು ನಿಮ್ಮ ನಿಯಮವನ್ನು ನೀವೇ ಮುರಿದಂತಾಗಿದೆ. ಹೀಗೆ ಸಿದ್ದ
ಆಕರಗಳನ್ನು ಬಳಸಿಕೊಂಡು ನಾಟಕ ಬರೆಯುವುದು ಸ್ವತಂತ್ರ ನಾಟಕಗಳನ್ನು ಬರೆಯುವುದಕ್ಕಿಂತಲೂ ಬಲು ಸುಲಭದ್ದಾಗಿದೆ.
ಈ ಸುಲಭ ಸಾಧ್ಯತೆಯ ಅವಕಾಶಗಳಿಂದ ಮಿಕ್ಕೆಲ್ಲ ಶಿಬಿರಾರ್ಥಿಗಳನ್ನು ವಂಚಿಸಿದಂತಾಗಿದೆ. ಕೆಲವರು ಧೈರ್ಯ
ಮಾಡಿ ನಿಮ್ಮ ಬೇಸಿಕ್ ರೂಲನ್ನು ಬ್ರೇಕ್ ಮಾಡಿ ಸಿದ್ದ ಆಕರಗಳಿಂದ ಪ್ರೇರೇಪಿತರಾಗಿ ನಾಟಕವನ್ನು ರಚಿಸಿಕೊಂಡು
ಬಂದಿದ್ದು ಅವುಗಳಲ್ಲಿ ಬಹುತೇಕವುಗಳನ್ನು ಆಯ್ಕೆ ಮಾಡಿದ್ದೀರಿ. ನಾಟಕಗಳು ಅದೆಷ್ಟೇ ಶ್ರೇಷ್ಟವಾಗಿರಲಿ
ಆದರೆ ಅವು ಶಿಬಿರದ ನಿಯಮಕ್ಕೆ ಬದ್ದವಾಗಿಲ್ಲವಾದ್ದರಿಂದ ಅವುಗಳನ್ನು ಆಯ್ಕೆ ಸಂದರ್ಭದಲ್ಲಿ ಪರಿಗಣಿಸಿದ್ದೇ
ಸರಿಯಲ್ಲ. ಅಕಸ್ಮಾತ್ ಇಂತಹ ನಾಟಕಗಳನ್ನು ನೀವು ಆಯ್ಕೆ ಮಾಡಿಕೊಳ್ಳುವುದೇ ಆಗಿದ್ದರೆ ನಿಮ್ಮ ರೂಲನ್ನು
ಕೈಬಿಟ್ಟು ಎಲ್ಲರಿಗೂ ಮುಕ್ತ ಅವಕಾಶವನ್ನು ಕೊಡಬಹುದಾಗಿತ್ತು. ಇದು ನಿಮ್ಮ ಕಡೆಯಿಂದ ಆದ ಮೊದಲ ತಾರತಮ್ಯವಾಗಿದ್ದು
ಇದಕ್ಕೆ ನನ್ನ ವಿರೋಧವಿದೆ.
2. ಸ್ವತಂತ್ರ ನಾಟಕಗಳು ಮಾತ್ರ ಬರಬೇಕು ಎಂದು ನೀವೇ ಮಾಡಿದ
ರೂಲನ್ನು ಬ್ರೇಕ್ ಮಾಡಲಾಗಿದೆ. ತಾವೇ ಬರೆದು ಪ್ರಕಟಗೊಂಡ ಕಥೆಯನ್ನೇ ರಂಗರೂಪವನ್ನಾಗಿಸಿಕೊಂಡು ಬಂದವರ
ನಾಟಕವನ್ನೂ ಸಹ ಆಯ್ಕೆ ಮಾಡಿದ್ದೀರಿ. ಇದೂ ಸಹ ನಿಯಮದ ಸ್ಪಷ್ಟ ಉಲ್ಲಂಘನೆಯೇ ಆಗಿದೆ.
3. ಇನ್ನು ನಾಟಕ ವಾಚನದ ನಂತರ ಅದನ್ನು ಮೌಲ್ಯಮಾಪನ ಮಾಡಲು
ಮೂರು ಜನರ ಎಕ್ಸಪರ್ಟಗಳು (?) ಇದ್ದರು. ನಾನು ಹಲವಾರು ನಾಟಕಗಳ ವಾಚನಕ್ಕೆ ಪ್ರತ್ಯಕ್ಷದರ್ಶಿಯಾಗಿದ್ದೇನೆ.
ನಾಟಕ ವಾಚನದ ನಂತರ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ತೀರ್ಪುಗಾರರು ‘ಇದು ನಾಟಕವೇ ಅಲ್ಲ, ನಾಟಕೀಯತೆ
ಇಲ್ಲ, ರಂಗಸಾಧ್ಯತೆ ಇಲ್ಲವೇ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ.
ಆದರೆ ಹಾಗೆ ಹೇಳಲ್ಪಟ್ಟ ನಾಟಕಗಳೂ ಸಹ ಆಯ್ಕೆಗೊಂಡಿದ್ದು ನನಗೆ ಅಚ್ಚರಿಯನ್ನುಂಟು ಮಾಡಿದೆ. ತೀರ್ಪುಗಾರರ
ನಿರ್ಣಯವೇ ಅಂತಿಮ ಅನ್ನುವುದಾದರೆ ಅದೇ ತೀರ್ಪುಗಾರರು ನಾಟಕದ ಮೇಲಿನ ಚರ್ಚೆಯಲ್ಲಿ ನಿರಾಕರಿಸಲ್ಪಟ್ಟ
ನಾಟಕಗಳು ಅದು ಹೇಗೆ ಆಯ್ಕೆಯಾದವು ಎನ್ನುವ ಯಕ್ಷಪ್ರಶ್ನೆಗೆ ಉತ್ತರ ನಿರುತ್ತರ.
4. ಮೊದಲ ಕಂತಿನ ಕಮ್ಮಟದಲ್ಲಿ ‘ಭಾಗವಹಿಸಿದ ಶಿಬಿರಾರ್ಥಿಗಳೆಲ್ಲಾ
ಖಡ್ಡಾಯವಾಗಿ ತಮ್ಮ ನಾಟಕದ ಸಾರಲೇಖನವನ್ನು ಕೊಟ್ಟು ಹೋಗಲೇಬೇಕು, ಕೊಡದಿದ್ದವರಿಗೆ ನಾಟಕ ರಚನೆಯ ಅವಕಾಶವಿಲ್ಲ’ ಎಂದು ನೀವೇ ಹಲವಾರು ಸಲ ಕಮ್ಮಟದಲ್ಲಿ
ಸಾರ್ವತ್ರಿಕವಾಗಿ ಹಾಗೂ ಖಾಸಗಿಯಾಗಿ ಹೇಳಿದ್ದೀರಿ. ಇದಕ್ಕೆ ಎಲ್ಲಾ ಶಿಬಿರಾರ್ಥಿಗಳೂ ಸಾಕ್ಷಿಯಾಗಿದ್ದಾರೆ.
ಆದರೆ.. ಭಾಗವಹಿಸಿದ್ದ ೫೫ ಶಿಬಿರಾರ್ಥಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ಸಾರಲೇಖನವನ್ನು ಕೊಡಲಿಲ್ಲ
ಎನ್ನುವುದು ನಿಮಗೂ ಗೊತ್ತಿದೆ. ಆದರೆ.. ನಿಮ್ಮ ಮಾತನ್ನು
ನೀವೇ ಪಕ್ಕಕ್ಕಿಟ್ಟು, ನೀವೇ ಮಾಡಿದ ರೂಲನ್ನೂ ನೀವೇ ಬ್ರೇಕ್ ಮಾಡಿ ಎಲ್ಲರಿಗೂ ಮುಂದಿನ ಕಮ್ಮಟದಲ್ಲಿ
ಭಾಗವಹಿಸಲು ಪತ್ರವನ್ನೂ ಕಳಿಸಿ ನಾಟಕ ರಚನೆಗೆ ಅವಕಾಶವನ್ನೂ ಕೊಟ್ಟಿದ್ದು ಯಾಕೆ? ನೀವೇ ಮಾಡಿದ ನಿಬಂಧನೆಗಳಿಗೆ
ಬೆಲೆಯೇ ಇಲ್ಲವೇ? ಸ್ಟ್ರಿಕ್ಟ್ ಮೇಸ್ಟ್ರಾದ ನೀವು ಎಲ್ಲಾ ಸಂದರ್ಭಗಳಲ್ಲೂ ಹೀಗೆ ರಾಜಿ ಮಾಡಿಕೊಂಡಿದ್ದು
ನಿಜಕ್ಕೂ ನನಗಂತೂ ವಿಸ್ಮಯದ ಸಂಗತಿಯಾಗಿದೆ.
5. ಎರಡನೇ ಹಂತದ ಕಮ್ಮಟ ನಡೆಯುವ ಮೂರು ದಿನಗಳ ಕಾಲ ಶಿಬಿರಾರ್ಥಿಗಳೆಲ್ಲಾ
ಖಡ್ಡಾಯವಾಗಿ ಭಾಗವಹಿಸಬೇಕೆಂಬುದು ಕಮ್ಮಟದ ಇನ್ನೊಂದು ಪ್ರಮುಖ ನಿಬಂಧನೆಯಾಗಿತ್ತು. ಇದನ್ನು ನೀವು
ಎಲ್ಲರಿಗೂ ತಿಳಿಸಿದ್ದೀರಿ. ಆದರೆ.. ಈ ನಿಯಮ ಉಲ್ಲಂಘನೆಯಾಗಿದ್ದು ನಿಮಗೂ ಗೊತ್ತಿದೆ. ಕೆಲವರು ಮೊದಲ
ದಿನ ಬಂದು ತಮ್ಮ ನಾಟಕ ಓದಿ ಹೊರಟು ಹೋದರು. ಇನ್ನು ಕೆವರು ಎರಡನೇ ದಿನ ಬಂದು ಸೇರಿದರು. ಮತ್ತೆ ಕೆಲವರು
ಕೊನೆಯ ದಿನ ಬಂದು ತಮ್ಮ ನಾಟಕ ಓದಿ ಹಿಂದಿನ ಮೂರು ದಿನಗಳ ಅಟೆಂಡೆನ್ಸಿಗೆ ಸಹಿ ಹಾಕಿ ಟಿಎ ಪಡೆದುಕೊಂಡು
ಹೋದರು. ನಿಮ್ಮ ಮೂರು ದಿನ ಖಡ್ಡಾಯವಾಗಿ ಭಾಗವಹಿಸಬೇಕು ಎನ್ನುವ ನಿಬಂಧನೆಯನ್ನು ಸೀರಿಯಸ್ಸಾಗಿ ತೆಗೆದುಕೊಂಡ
ಕೆಲವರು ನಿಯಮಕ್ಕೆ ಬೆಲೆಕೊಟ್ಟು ಕಮ್ಮಟಕ್ಕೆ ಬರದೇ ಅವಕಾಶ ವಂಚಿತರಾದರು. ಇದೆಲ್ಲಾ ನಿಮಗೆ ಗೊತ್ತಿದೆ.
ಆದರೂ ಬೇಕು ಬೇಕಾದವರು ತಮಗೆ ಅನುಕೂಲವಾದಾಗ ಬಂದು ನಾಟಕ ಓದಲು ಅವಕಾಶ ಮಾಡಿಕೊಟ್ಟಿದ್ದು ನಿಮ್ಮ ರಾಜೀತನಕ್ಕೆ
ಸಾಕ್ಷಿಯಾಗಿದೆ.
6. ಮೊದಲ ಕಮ್ಮಟಕ್ಕೂ ಹಾಗೂ ಎರಡನೆಯ ಕಮ್ಮಟಕ್ಕೂ ನಡುವೆ
ಸರಿಯಾಗಿ ಎರಡು ತಿಂಗಳ ಸಮಯವಿತ್ತು. ಒಂದು ನಾಟಕ ಬರೆದುಕೊಂಡು ಬರಲು ಇಷ್ಟೊಂದು ಸಮಯ ಸಾಕಷ್ಟಾಗಿತ್ತು.
ಆದರೂ ಕೆಲವರು ಯುದ್ದಕಾಲೇ ಶಸ್ತ್ರಾಬ್ಯಾಸ ಶುರು ಮಾಡಿದರು. ಕಮ್ಮಟಕ್ಕೆ ಬಂದ ನಂತರ ನಾಟಕ ಬರೆಯಲು
ಆರಂಭಿಸಿದರು. ಮೂರು ದಿನಗಳಲ್ಲಿ ಸಂತೆ ಹೊತ್ತಿಗೆ ಮೂರು ಮೊಳ ನೇಯ್ದು ಓದಿದರು. ಅಂತವರ ನಾಟಕಗಳೂ ಆಯ್ಕೆಯಾದವು.
ನಾಟಕ ಬರೆದುಕೊಂಡು ಬರಲೇಬೇಕು ಎನ್ನುವ ನಿಮ್ಮದೇ ರೂಲು ಬ್ರೇಕಾಗಿ ಹೋಯಿತು. ಬೇರೆಯವರ ನಾಟಕದ ಚರ್ಚೆಯಲ್ಲಿ
ಖಡ್ಡಾಯವಾಗಿ ಶಿಬಿರಾರ್ಥಿಗಳು ಭಾಗವಹಿಸಬೇಕೆಂದು ಹೇಳಿದ್ದ ನಿಮ್ಮ ಮಾತನ್ನು ಮೀರಿ ಚರ್ಚೆಯ ಸಮಯದಲ್ಲಿ
ಎಲ್ಲೋ ಕೂತು ನಾಟಕ ಬರೆಯುವ ಕೆಲಸವನ್ನು ಕೆಲವರು ಮಾಡಿದ್ದು ನಿಮ್ಮ ಗಮನಕ್ಕೆ ಬಂದಿಲ್ಲವೆಂದೇನಲ್ಲ.
7. ಪ್ರತಿಯೊಂದು ನಾಟಕದ ಸ್ಕ್ರಿಪ್ಟನ್ನು 13 ಪಾಂಟ್ ನಲ್ಲಿ, ಎಪೋರ್ ಸೈಜಲ್ಲಿ ಕನಿಷ್ಟ 30 ಪುಟಗಳಷ್ಟಾದರೂ ಡಿಟಿಪಿ ಮಾಡಿಸಲೇಬೇಕೆಂಬುದು ಇನ್ನೊಂದು ನಿಯಮ. ಎರಡೂವರೆ ಗಂಟೆಯ ಪೂರ್ಣ ಪ್ರಮಾಣದ ನಾಟಕ ಬರಲಿ ಎನ್ನುವುದು ಇದರ ಹಿಂದಿರುವ ಸದುದ್ದೇಶ. ಈ ನಿಯಮಗಳನ್ನು ಬರೆದ ಪತ್ರವೊಂದು ಎಲ್ಲಾ ಶಿಬಿರಾರ್ಥಿಗಳಿಗೆ ಮುಂಚೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಲಿಖಿತವಾಗಿ ಕಳುಹಿಸಿತ್ತು. ಆದರೆ ಈ ನಿಬಂಧನೆ ಹಲವಾರು ನಾಟಕಗಳ ಸ್ಕ್ರಿಪ್ಟಗಳಲ್ಲಿ ಪಾಲನೆಯಾಗಿಲ್ಲವಾದರೂ ಅಂತಹ ರಂಗಪಠ್ಯಗಳು ಆಯ್ಕೆಯಾಗಿವೆಯೆಂಬುದು ವಿಪರ್ಯಾಸ. ಕೆಲವರಿಗೆ ಡಿಟಿಪಿ ಮಾಡಿಕೊಂಡು ಬರಲು ಆಗದೇ ಕೈಯಲ್ಲಿ ಬರೆದುಕೊಂಡು ಬಂದವರಿಗೆ ರಿಯಾಯಿತಿ ಕೊಡಬಹುದು. ಪೂರ್ವಭಾವಿಯಾಗಿ ಟೈಪು ಮಾಡಿ ಪ್ರಿಂಟೌಟ್ ತರದೇ, ಕೈಯಲ್ಲೂ ಬರೆದುಕೊಂಡು ಬರದೇ, ಅಲ್ಲಿಯೇ ಬಂದು ಲ್ಯಾಪ್ಟಾಪಲ್ಲಿ ಬರೆದು ಓದಿದ್ದನ್ನು ಪರಿಗಣಿಸಿದ್ದನ್ನೂ ಆಯಿತು ಬಿಡು ಹೇಗೋ ನಾಟಕ ಓದಿದರಲ್ಲ ಎಂದು ಸಮಾಧಾನ ಪಡಬಹುದು . ಆದರೆ... 30 ಪುಟ ಖಡ್ಡಾಯವೆಂಬ ರೂಲ್ ಇದ್ದರೂ ಅದಕ್ಕಿಂತ ಕಡಿಮೆ ಪುಟಗಳು ಬರೆದುಕೊಂಡು ಬಂದವರಿದ್ದಾರೆ. ಹದಿನೈದು ಪುಟದಲ್ಲಿ ಬರೆದ ನಾಟಕವೂ ಆಯ್ಕೆಗೊಂಡಿದೆ. ತೀರ್ಪುಗಾರರ ಚರ್ಚೆಯಲ್ಲಿ ಯಾವುದು ಪೂರ್ಣಪ್ರಮಾಣದ ನಾಟಕ ಆಗಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತೋ ಅಂತಹ ನಾಟಕವೂ ಆಯ್ಕೆಯಾಗಿದೆಯೆಂದರೆ ಹಿನ್ನೆಲೆಯಲ್ಲಿ ಏನೆಲ್ಲಾ ರಾಜಿ ರಾಜಕೀಯ ನಡೆದಿರಬೇಕು ಎಂಬ ಸಂದೇಹ ಮೂಡದಿರದು.
7. ಪ್ರತಿಯೊಂದು ನಾಟಕದ ಸ್ಕ್ರಿಪ್ಟನ್ನು 13 ಪಾಂಟ್ ನಲ್ಲಿ, ಎಪೋರ್ ಸೈಜಲ್ಲಿ ಕನಿಷ್ಟ 30 ಪುಟಗಳಷ್ಟಾದರೂ ಡಿಟಿಪಿ ಮಾಡಿಸಲೇಬೇಕೆಂಬುದು ಇನ್ನೊಂದು ನಿಯಮ. ಎರಡೂವರೆ ಗಂಟೆಯ ಪೂರ್ಣ ಪ್ರಮಾಣದ ನಾಟಕ ಬರಲಿ ಎನ್ನುವುದು ಇದರ ಹಿಂದಿರುವ ಸದುದ್ದೇಶ. ಈ ನಿಯಮಗಳನ್ನು ಬರೆದ ಪತ್ರವೊಂದು ಎಲ್ಲಾ ಶಿಬಿರಾರ್ಥಿಗಳಿಗೆ ಮುಂಚೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಲಿಖಿತವಾಗಿ ಕಳುಹಿಸಿತ್ತು. ಆದರೆ ಈ ನಿಬಂಧನೆ ಹಲವಾರು ನಾಟಕಗಳ ಸ್ಕ್ರಿಪ್ಟಗಳಲ್ಲಿ ಪಾಲನೆಯಾಗಿಲ್ಲವಾದರೂ ಅಂತಹ ರಂಗಪಠ್ಯಗಳು ಆಯ್ಕೆಯಾಗಿವೆಯೆಂಬುದು ವಿಪರ್ಯಾಸ. ಕೆಲವರಿಗೆ ಡಿಟಿಪಿ ಮಾಡಿಕೊಂಡು ಬರಲು ಆಗದೇ ಕೈಯಲ್ಲಿ ಬರೆದುಕೊಂಡು ಬಂದವರಿಗೆ ರಿಯಾಯಿತಿ ಕೊಡಬಹುದು. ಪೂರ್ವಭಾವಿಯಾಗಿ ಟೈಪು ಮಾಡಿ ಪ್ರಿಂಟೌಟ್ ತರದೇ, ಕೈಯಲ್ಲೂ ಬರೆದುಕೊಂಡು ಬರದೇ, ಅಲ್ಲಿಯೇ ಬಂದು ಲ್ಯಾಪ್ಟಾಪಲ್ಲಿ ಬರೆದು ಓದಿದ್ದನ್ನು ಪರಿಗಣಿಸಿದ್ದನ್ನೂ ಆಯಿತು ಬಿಡು ಹೇಗೋ ನಾಟಕ ಓದಿದರಲ್ಲ ಎಂದು ಸಮಾಧಾನ ಪಡಬಹುದು . ಆದರೆ... 30 ಪುಟ ಖಡ್ಡಾಯವೆಂಬ ರೂಲ್ ಇದ್ದರೂ ಅದಕ್ಕಿಂತ ಕಡಿಮೆ ಪುಟಗಳು ಬರೆದುಕೊಂಡು ಬಂದವರಿದ್ದಾರೆ. ಹದಿನೈದು ಪುಟದಲ್ಲಿ ಬರೆದ ನಾಟಕವೂ ಆಯ್ಕೆಗೊಂಡಿದೆ. ತೀರ್ಪುಗಾರರ ಚರ್ಚೆಯಲ್ಲಿ ಯಾವುದು ಪೂರ್ಣಪ್ರಮಾಣದ ನಾಟಕ ಆಗಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತೋ ಅಂತಹ ನಾಟಕವೂ ಆಯ್ಕೆಯಾಗಿದೆಯೆಂದರೆ ಹಿನ್ನೆಲೆಯಲ್ಲಿ ಏನೆಲ್ಲಾ ರಾಜಿ ರಾಜಕೀಯ ನಡೆದಿರಬೇಕು ಎಂಬ ಸಂದೇಹ ಮೂಡದಿರದು.
8. ನಾಟಕ ರಚನೆ ಮಾಡುವವರಿಗೆ ಕೊಟ್ಟ ವಿಷಯ ‘ಮಹಿಳೆ ಮತ್ತು ಮಕ್ಕಳು’ ವರ್ತಮಾನದ ನೋಟ” ಎಂಬುದಾಗಿತ್ತು. ಆದರೆ ಹಲವಾರು
ನಾಟಕಗಳು ಈ ವಿಷಯವನ್ನು ಕೇಂದ್ರವಾಗಿಟ್ಟುಕೊಳ್ಳದೇ ಪರೀಧಿಯಲ್ಲೇ ಸುತ್ತಿದಂತಿವೆ. ಮಹಿಳೆಯರ ಮೇಲಾಗುತ್ತಿರುವ
ಶೋಷಣೆ, ವಂಚನೆ ಹಾಗೂ ಪರಿಹಾರಗಳ ಕುರಿತು ನಾಟಕಗಳು ಬರಲಿ ಎನ್ನುವುದು ಸಚಿವೆ ಉಮಾಶ್ರೀಯವರ ಮಹತ್ವಾಂಕಾಂಕ್ಷೆಯಾಗಿತ್ತು.
ಆದರೆ.. ಮಹಳೆಯರ ಮೇಲೆ ನಡೆಯುವ ದೌರ್ಜನ್ಯವನ್ನೇ ಕೇಂದ್ರವಾಗಿಟ್ಟುಕೊಂಡ ನಾಟಕಗಳು ಎಷ್ಟಿವೆ ಎಂಬುದನ್ನು
ಇನ್ನೊಮ್ಮೆ ಪರಿಶೀಲಿಸಿದರೆ ನಿಮಗೆ ಗೊತ್ತಾಗುತ್ತದೆ. ಉದ್ದೇಶಕ್ಕೆ ಬದ್ದವಾಗಿರದ ನಾಟಕಗಳು ಅದೆಷ್ಟೇ
ಸೊಗಸಾಗಿದ್ದರೂ ಆಯ್ಕೆ ಮಾಡಿಕೊಂಡರೆ ಅದು ನಾಟಕ ರಚನಾ ಕಮ್ಮಟದ ಆಶಯಕ್ಕೆ ಅನ್ಯಾಯ ಮಾಡಿದಂತಾಗುತ್ತದೆ.
ಅದೆಷ್ಟು ನಾಟಕಗಳು ಈ ಮೂಲ ವಿಷಯಕ್ಕೆ ಬದ್ದವಾಗಿವೆ ಎಂಬುದನ್ನು ಕಮಿಟಿಯೊಂದನ್ನು ಮಾಡಿ ಅಧ್ಯಯನ ಮಾಡಿದರೆ
ಗೊತ್ತಾಗುತ್ತದೆ.
9. ನಿಮಗೆ ಸರಕಾರಿ ಇಲಾಖೆಯ ಟಾರ್ಗೆಟ್ ಮುಖ್ಯವಾದಂತಿದ್ದು
ಅದಕ್ಕಾಗಿ ಬಳಸುವ ವಾಮಮಾರ್ಗಗಳನ್ನು ಮುಕ್ತವಾಗಿಸಿದ್ದೀರಿ ಎನ್ನುವುದು ನನ್ನ ಸಂದೇಹ. ಏನಾದರೂ ಮಾಡಿ,
ಹೇಗಾದರೂ ಮಾಡಿ, ನಿಯಮ ನಿಬಂಧನೆಗಳನ್ನು ಗಾಳಿಗೆ ತೂರಿ.. ಆದರೆ ನಾಟಕವೊಂದನ್ನು ಓದಿ ಎನ್ನುವುದು ನಿಮ್ಮ
ಹಿಡನ್ ಅಜೆಂಡಾ ಆಗಿತ್ತೆಂಬುದು ಈಗ ಸ್ಪಷ್ಟವಾಗುತ್ತಿದೆ. ಇದು ಹೇಗಿದೆ ಎಂದರೆ ಕಾಫಿ ಮಾಡಿದರೂ ಚಿಂತೆಯಿಲ್ಲ
ಪರೀಕ್ಷೆ ಚೆನ್ನಾಗಿ ಬರೆಯಿರಿ ಎಂದು ಗುರುಗಳು ಶಿಷ್ಯರಿಗೆ ಹೇಳಿದಂತಿದೆ. ತುಂಬಾ ಶ್ರಮವಹಿಸಿ ನಿಯಮಗಳಿಗೆ
ನಿಷ್ಟರಾಗಿ ಬರೆದವರಿಗಿಂತಾ ನಿಬಂಧನೆಗಳನ್ನು ಗಾಳಿಗೆ ತೂರಿದವರು ಆಯ್ಕೆಯಾದಂತಿದೆ. ಇದು ಖಂಡಿತಾ ನಿಮ್ಮಂತ
ಪ್ರತಿಭಾನ್ವಿತರಿಗೆ ಶೋಭೆ ತರುವಂತಹುದಲ್ಲ. ಸರಕಾರಿ ಅಧಿಕಾರಿಗಳು ಮಾಡುವ ಕೆಲಸವಿದು. ಸುಳ್ಳು ಅಂಕಿ
ಅಂಶಗಳನ್ನು ತೋರಿಸಿ, ಇಲಾಖೆಯ ನಿಯಮಗಳನ್ನು ಮೀರಿ ಇಲಾಖೆ ಇಷ್ಟೊಂದು ಸಾಧನೆ ಮಾಡಿದೆ ಎಂದು ಹೇಳುವ
ಅಧಿಕಾರಿಗಳಿಗೂ ನಿಮ್ಮಂತ ಪ್ರತಿಭಾವಂತರಿಗೂ ತುಂಬಾ ವ್ಯತ್ಯಾಸವಿದೆಯೆಂದು ನಂಬಿದ್ದೆ. ಆದರೆ ನನ್ನ
ನಂಬಿಕೆ ಹುಸಿಯಾಯಿತು. ಸಾಂಸ್ಕೃತಿಕ ಗುತ್ತಿಗೆದಾರನಿಗೂ ಹಾಗೂ ಬದ್ದತೆ ಇರುವ ನಿಮಗೂ ತುಂಬಾನೇ ಅಂತರವಿದೆಯೆಂದುಕೊಂಡಿದ್ದೆ...
ಆದರೆ.. ನಿಮಗೂ ಅಂಕಿ ಅಂಶಗಳು ಹಾಗೂ ಅಂತಿಮ ರಿಜಲ್ಟ್ ಮುಖ್ಯವಾಯಿತೇ ಹೊರತು ಸಾಂಸ್ಕೃತಿಕ ಬದ್ದತೆ
ಹಾಗೂ ಕೊಟ್ಟ ಮಾತುಗಳಲ್ಲ ಎಂಬ ಸಂದೇಹ ಬಲವಾಗತೊಡಗಿದೆ.
10. ಇನ್ನು ನಾನು ಬರೆದ ನಾಟಕದ ಕುರಿತು ಒಂದೆರಡು ಮಾತು
ಹೇಳಲು ಬಯಸುತ್ತೇನೆ. ಬೇರೆಯವರ ನಾಟಕಕ್ಕೆ ಹೋಲಿಕೆ ಮಾಡುವುದು ನನ್ನ ಉದ್ದೇಶವಲ್ಲ. ಆದರೆ ಕೊಟ್ಟ ವಿಷಯಕ್ಕೆ
ಬದ್ದವಾಗಿ ನಾಟಕ ರಚಿಸಿದ್ದರಲ್ಲಿ ಸಂದೇಹವಿಲ್ಲ. ಮಹಿಳೆಯರ ಮೇಲೆ ನಡೆಯುವ ಎಲ್ಲಾ ರೀತಿಯ ದೌರ್ಜನ್ಯಗಳಿಗಿಂತಲೂ
ಬ್ರೂಣ ಹತ್ಯೆ ಎನ್ನುವುದು ಮನುಕುಲಕ್ಕೆ ಅಪಾಯಕಾರಿಯಾಗಿದೆ. ಈಗಾಗಲೇ ದೇಶದಲ್ಲಿ ಲಿಂಗಾನುಪಾತದಲ್ಲಿ
ಸಾಕಷ್ಟು ಅಂತರವಾಗಿದೆ. ಹೀಗೆಯೇ ಪುರುಷ ಪ್ರಧಾನ ವ್ಯವಸ್ಥೆ ಹೆಣ್ಣು ಬ್ರೂಣವನ್ನು ಹತ್ಯೆ ಮಾಡುತ್ತಾ,
ಮಹಿಳೆಯರ ಮೇಲೆ ದೌರ್ಜನ್ಯವೆಸಗಿ ಸಾಯಿಸುತ್ತಾ ಸಾಗಿದರೆ ಮುಂದೊಂದು ದಿನ ಮಹಿಳೆಯರೇ ಇಲ್ಲವಾದಾಗ ಪುರುಷಕುಲ
ಅದು ಹೇಗೆ ಪರದಾಡಬೇಕಾಗುತ್ತದೆ ಎನ್ನುವುದನ್ನು ಹ್ಯೂಮರಸ್ಸಾಗಿ ಹೇಳುವ ಪ್ರಯತ್ನವನ್ನು ‘ವಿನಾಶಕಾಲೇ...’ ನಾಟಕ ಮಾಡುತ್ತದೆ. ಬಹುತೇಕ
ನಾಟಕಗಳು ಭೂತಕಾಲ ಇಲ್ಲವೇ ವರ್ತಮಾನಕ್ಕೆ ಸ್ಪಂದಿಸಿದರೆ ನನ್ನ ನಾಟಕ ಭವಿಷ್ಯತ್ತಿಗೆ ಸಂಬಂದಿಸಿದ್ದಾಗಿದೆ.
ಮುನುಕುಲಕೆ ಮುಂದೊದಗಬಹುದಾದ ಅಪಾಯದ ಕುರಿತು ಎಚ್ಚರಿಕೆಯನ್ನು ಕೊಡುವಂತಹ ಸಾರ್ವಕಾಲಿಕ ಆಶಯದ ನಾಟಕವನ್ನು
ರಚಿಸುವ ಪ್ರಯತ್ನ ಮಾಡಿದ್ದೇನೆ. ಈ ನಾಟಕ ನೋಡಿದವರಿಗೆ ಮಹಿಳೆಯ ಅಗತ್ಯತೆ ಎಷ್ಟೆಂದು ಮನದಟ್ಟಾಗುವ
ನಿಟ್ಟಿನಲ್ಲಿ ನಾಟಕ ಮೂಡಿಬಂದಿದೆ. ನಾನು ಬರೆದಿದ್ದು ಶ್ರೇಷ್ಟ ನಾಟಕವೆಂದು ಘೋಷಿಸಿಕೊಳ್ಳುವ ದುರಹಂಕಾರ
ನನ್ನದಲ್ಲ. ಯಾವುದೇ ನಾಟಕ ಮೊದಲ ಓದಿಗೆ ಪರಿಪೂರ್ಣ ನಾಟಕವೂ ಆಗುವುದಿಲ್ಲ. ಆದರೆ.. ನಾಟಕದ ಆಶಯ ಹಾಗೂ
ಅದರ ನಿರೂಪನಾ ಕ್ರಮ ಮತ್ತು ಮೂಲ ಉದ್ದೇಶಕ್ಕೆ ಪೂರಕ ಬದ್ದತೆಗಳು ನಾಟಕದ ಆಯ್ಕೆಗೆ ಮಾನದಂಡವಾಗಬೇಕಾಗಿತ್ತು.
ಆದರೆ.. ತೀರ್ಪುಗಾರರೊಬ್ಬರನ್ನು ಕೇಳಿದಾಗ ‘ನಿಮ್ಮ ನಾಟಕ ಪ್ಯಾಂಟಸಿ ರೀತಿಯಲ್ಲಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಅವರ ಮಾತು ‘ನಾಟಕ ಏನು ಹೇಳುತ್ತೆ ಅನ್ನೋದು ಮುಖ್ಯವಾ ಇಲ್ಲಾ ಹೇಗೆ ಹೇಳುತ್ತದೆ
ಎನ್ನುವುದು ಮುಖ್ಯವಾ?’ ಎನ್ನುವ ಸಂದೇಹ ಹುಟ್ಟಿಸಿದ್ದಂತೂ ಸತ್ಯ. ಮೊದಲು ನನ್ನ
ನಾಟಕದ ಪ್ರತಿಯನ್ನು ನೀವು ಒಮ್ಮೆ ಓದಿ ನೋಡಿ. ಇಲ್ಲವೇ ಪರಿಶೀಲನಾ ಕಮಿಟಿಯೊಂದನ್ನು ಮಾಡಿ ಎಲ್ಲಾ ನಾಟಕಗಳನ್ನು
ಮರುಪರಿಶೀಲನೆಗೆ ಅಳವಡಿಸಿ. ಆಗ ಯಾವುದು ಕಾಳು ಯಾವುದು ಜೊಳ್ಳು ಎನ್ನುವುದು ಗೊತ್ತಾಗುತ್ತದೆ.
ಇನ್ನೂ ಹೇಳಲು ಬೇಕಾದಷ್ಟಿದೆ.
ತೀರ್ಪುಗಾರರ ಆಯ್ಕೆಯಲ್ಲಾದ ಲೋಪದ ಬಗ್ಗೆ ಹೇಳಬೇಕಿದೆ. ಸಾಂಸ್ಕೃತಿಕ ರಾಜಕಾರಣದ ಒಳಹೊರಗನ್ನು ಹೇಳಬೇಕಿದೆ.
ಇಡೀ ಪ್ರಾಜೆಕ್ಟಿನ ಸಾಧಕ ಬಾದಕಗಳನ್ನು ಚರ್ಚಿಸಬೇಕಿದೆ. ಇನ್ನೊಂದು ಲೇಖನದಲ್ಲಿ ಎಲ್ಲವನ್ನೂ ಸವಿಸ್ತಾರವಾಗಿ
ಬರೆಯುವ ಪ್ರಯತ್ನ ಮಾಡುವೆ.
ನಿಮ್ಮಂತಾ ಪ್ರತಿಭಾನ್ವಿತರು
ಇಂತಹ ಸರಕಾರಿ ಸಾಂಸ್ಕೃತಿಕ ಗುತ್ತಿಗೆ ಕೆಲಸದಲ್ಲಿ ತೊಡಗಿಕೊಳ್ಳಬಾರದಿತ್ತು. ನಿಮ್ಮ ಪ್ರತಿಭೆ, ಶ್ರಮ
ಹಾಗೂ ಸಮಯ ವ್ಯರ್ಥವಾಗಿ ಸೋರಿಹೋಗುವುದರಲ್ಲಿ ಸಂದೇಹವಿಲ್ಲ. ಸರಕಾರಿ ವ್ಯವಸ್ಥೆ ನಿಮ್ಮನ್ನು ಬಳಸಿಕೊಂಡು
ರಾಜೀತನವನ್ನು ಕಲಿಸುತ್ತದೆ. ಇಲ್ಲಿ ಅಂಕಿ ಅಂಶ ಖರ್ಚು ವೆಚ್ಚ ಹಾಗೂ ಲೆಕ್ಕಾಚಾರಗಳೇ ಪ್ರಮುಖವಾಗಿದ್ದು ನಿಜವಾದ ಉದ್ದೇಶಬದ್ದ ಸಾಂಸ್ಕೃತಿಕ ಕೆಲಸ ಸಾಧ್ಯವಿಲ್ಲ.
ನೀವೆಷ್ಟೇ ಸಮರ್ಥಿಸಿಕೊಂಡರೂ ಒಂದು ಪಕ್ಷದ ಪ್ರಚಾರಕ್ಕೆ ಸೀಮಿತವೆನಿಸಿದ ದೇವರಾಜ ಅರಸು ಶತಮಾನೋತ್ಸವದಲ್ಲಿ
ನೀವು ನಾಯಕತ್ವ ವಹಿಸಿದ್ದು ಹಾಗೂ ಈ ೨ ಕೋಟಿಯ ಸರಕಾರಿ ಪ್ರಾಜೆಕ್ಟಿನ ಕಮ್ಮಟದ ನಿರ್ದೇಶಕರಾಗಿದ್ದು
ನಿಮ್ಮ ಪ್ರತಿಭೆಯ ಅಭಿಮಾನಿಯಾದ ನನಗೆ ವ್ಯಯಕ್ತಿಕವಾಗಿ ಸಮ್ಮತವಲ್ಲ. ಇಷ್ಟೇ ಶ್ರಮ ಶಕ್ತಿ ಪ್ರತಿಭೆಯನ್ನು
ಇನ್ನೂ ಒಂದೆರಡು ನಾಟಕಗಳ ರಚನೆಯಲ್ಲಿ ವ್ಯಯಸಿದ್ದರೆ ಕನ್ನಡ ರಂಗಭೂಮಿಗೆ ಉತ್ತಮ ನಾಟಕಗಳಾದರೂ ದಕ್ಕುತ್ತಿದ್ದವು. ಸಿಕ್ಕಸಿಕ್ಕವರಿಗೆಲ್ಲಾ ನೀವು ಪ್ರೀತಿಯಿಂದ ಅವಿವೇಕಿ ಎನ್ನುವುದನ್ನು
ರೂಢಿಸಿಕೊಂಡಿದ್ದೀರಿ. ಅದಕ್ಕೆ ಪ್ರತಿಯಾಗಿ ನಿಮ್ಮಿಂದಲೂ ರಾಜೀರಹಿತ ವಿವೇಕತನವನ್ನು ಎಲ್ಲರೂ ಆಶಿಸುತ್ತಾರೆಂಬುದನ್ನು
ಮರೆಯದಿರಿ.
ಇದೇ ಕೆಲಸವನ್ನು ನಿಮ್ಮದೇ
ಡಾ.ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ನಿಂದ ಮಾಡಿದ್ದರೂ ಇದಕ್ಕಿಂತ ಸಮರ್ಥವಾಗಿ ನಾಟಕ ರಚನಾ ಕಮ್ಮಟ ನಡೆಸಬಹುದಾಗಿತ್ತು.
ಆದರೆ ಸರಕಾರಿ ಕೆಲಸ ದೇವರ ಕೆಲಸವಾಗದೇ ಸಾಂಸ್ಕೃತಿಕ ಬದ್ದತೆಯ ಕೆಲಸವಾಗಲಿ ಎನ್ನುವುದೇ ನನ್ನ ಆಶಯವಾಗಿದೆ.
ಒಬ್ಬ ಪ್ರತಿಭಾವಂತ ಕವಿ, ನಾಟಕಕಾರ ಕೆವೈಎನ್ ಸರಕಾರಿ ಪ್ರಾಜೆಕ್ಟಗಳಲ್ಲಿ ಕಳೆದುಹೋಗದಿರಲಿ ಎನ್ನುವುದು
ನನ್ನ ಮನದಾಳದ ಆಶಯವಾಗಿದೆ.
ನಿಷ್ಟುರ ಮಾತುಗಳಿಂದ ಬೇಸರವಾಗಿದ್ದರೆ
ಕ್ಷಮೆಯಿರಲಿ. ವಿಮರ್ಶಕನೊಬ್ಬ ನಿಮ್ಮೊಳಗೆ ಹುಟ್ಟಿಕೊಳ್ಳದಿದ್ದರೆ ಹೊರಗೆ ಹುಟ್ಟಿಕೊಳ್ಳುತ್ತಾನೆನ್ನುವ
ಲಂಕೇಶರ ಮಾತು ನೆನಪಿರಲಿ.
ವಂದನೆಗಳೊಂದಿಗೆ
ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ