ಶುಕ್ರವಾರ, ಜುಲೈ 29, 2016

ಪ್ರವಾದಿ ಮಹಮ್ಮದರ ಪರಿಚಯ ‘ಓದಿರಿ’ : ನಾಟಕ ವಿಮರ್ಶೆ




ಇಸ್ಲಾಂ ಧರ್ಮದ ಅಂತಿಮ ಪ್ರವಾದಿಯಾದ ಮಹಮ್ಮದರ ಜೀವನಾಧಾರಿತ ಐತಿಹಾಸಿಕ ನಾಟಕ ಓದಿರಿ. ಬೋಳವಾರು ಮಹಮದ್ ಕುಂಞರವರು ರಚಿಸಿದ ಕಾದಂಬರಿಯನ್ನು ಆಧರಿಸಿ ಹೆಗ್ಗೋಡಿನ ಡಾ.ಎಂ.ಗಣೇಶರವರು ರಂಗರೂಪಗೊಳಿಸಿ ತಮ್ಮ ಸತ್ಯಶೋಧನ ರಂಗಸಮುದಾಯ (ಜನಮನದಾಟ) ರೆಪರ್ಟರಿ ತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. ಸಮುದಾಯ ಬೆಂಗಳೂರು ಆಯೋಜಿಸಿದ್ದ ‘ಓದಿರಿ’ ನಾಟಕ ಪ್ರದರ್ಶನವು 2016 ಜುಲೈ 26 ರಂದು ಬೆಂಗಳೂರಿನ ಕೆ.ಹೆಚ್.ಕಲಾಸೌಧದಲ್ಲಿ  ಪ್ರಯೋಗಗೊಂಡಿತು.

ಯಾವುದೇ ಧರ್ಮಾಧಾರಿತ ಕೃತಿ ಅಥವಾ ನಾಟಕ ಎಂದಾಗ ಅದು ಧರ್ಮಪ್ರಚಾರದ  ಭಾಗವಾಗುವ ಸಾಧ್ಯತೆಗಳೇ ಹೆಚ್ಚು. ಆದರೆ ಈ ಓದಿರಿ ನಾಟಕ ಅದಕ್ಕೆ ಹೊರತಾಗಿದ್ದು ಪ್ರವಾದಿಯೊಬ್ಬರ ಬಾಲ್ಯ, ಯೌವನ, ಮದುವೆ, ಪ್ರವಾದಿತ್ವ ಪ್ರಾಪ್ತಿ, ಸತ್ಯಶೋಧನೆ ಮತ್ತು ಮನುಕುಲಕೆ ಅಗತ್ಯವಾದ ನೈತಿಕ ಮೌಲ್ಯಗಳ ಪ್ರತಿಪಾದನೆಗಳನ್ನು ತೋರಿಸುವಂತಿದೆ.



ಹುಟ್ಟುವ ಮುಂಚೆಯೇ ತಂದೆಯನ್ನು ಕಳೆದುಕೊಂಡು, ಎಂಟು ವರ್ಷದ ಬಾಲ್ಯದಲ್ಲಿ ತಾಯಿಯೂ ಕಾಲವಶವಾದಾಗ ದೊಡ್ಡಪ್ಪ ಅಬು ತಾಲಿಬ್ ರವರ ಪೋಷಣೆಯಲ್ಲಿ ಬೆಳೆಯುವ ಬಾಲಕ ಮಹಮ್ಮದ್ ಕುರಿಗಳನ್ನು ಕಾಯುತ್ತಾ, ವ್ಯಾಪಾರ ವಹಿವಾಟುಗಳಲ್ಲಿ ದೊಡ್ಡಪ್ಪನಿಗೆ ಸಹಾಯ ಮಾಡುತ್ತಾ ಓದು ಬರಹ ಕಲಿಯಲಾಗದೇ ಬೆಳೆಯುತ್ತಾರೆ. ಮೆಕ್ಕಾದಿಂದ ಸಿರಿಯಾಕೆ ವ್ಯಾಪಾರಕ್ಕೆ ಹೋದಾಗ ಅಲ್ಲಿಯ ಕ್ರೈಸ್ತ ಗುರುವೊಬ್ಬರು ಬಾಲಕ ಮಹಮ್ಮದರೇ ಮುಂದಿನ ಪ್ರವಾದಿ ಎಂದು ಗುರುತಿಸುತ್ತಾರೆ. ಶ್ರೀಮಂತ ವಿಧವೆ ಖಟೀಜಾಳ ಬಯಕೆ ಹಾಗೂ ದೊಡ್ಡಪ್ಪನ ಇಚ್ಚೆಯಂತೆ ಆಕೆಯನ್ನು ಮದುವೆಯಾಗುತ್ತಾರೆ. ಬಿಡುವಿನ ಸಮಯದಲ್ಲಿ ಗುಹೆಯೊಂದರಲ್ಲಿ ಧ್ಯಾನಕ್ಕೆ ಕುಳಿತ ಮಹಮ್ಮದರಿಗೆ ಅಲ್ಲಾನ ಕೃಪೆಯಾಗಿ ಲೋಕಕಲ್ಯಾಣಕ್ಕಾಗಿ ಹುಟ್ಟಿ ಬಂದ ಪ್ರವಾದಿ ಎಂದು ತಿಳಿಯುತ್ತದೆ. ತದನಂತರ ಸತ್ಯಶೋಧನೆಯತ್ತ ಬದುಕು ಮುಡುಪಾಗಿಟ್ಟ ಮಹಮ್ಮದರು ಮನುಕುಲಕೆ ನೆಮ್ಮದಿಯ ನೆಲೆಯ ಮಾರ್ಗವನ್ನು ಬೋಧಿಸುತ್ತಾರೆಂಬುದು ಈ ಓದಿರಿ ನಾಟಕದ ಸಾರಾಂಶವಾಗಿದೆ.

ಇಡೀ ನಾಟಕ ಆರಾಧನಾ ಭಾವದಲ್ಲೇ ನಡೆಯುತ್ತದೆ. ಎಲ್ಲಾ ಮಹಾನುಭಾವರ ವ್ಯಕ್ತಿತ್ವವನ್ನು ಅವರ ಹುಟ್ಟಿನಿಂದಲೇ ವಿಶಿಷ್ಟವಾಗಿ ಕಟ್ಟುವ ಪರಿಕಲ್ಪನೆಗಳು ಮನುಕುಲದ ಇತಿಹಾಸದಲ್ಲಿ ಹಾಸುಹೊಕ್ಕಾಗಿವೆ. ಮಹಾತ್ಮರ ಬದುಕಿನ ಜೊತೆಜೊತೆಗೆ ಮಿಥ್‌ಗಳನ್ನು ಕಟ್ಟುತ್ತಲೇ ಪವಾಡಗಳನ್ನು ಹುಟ್ಟಿಸುತ್ತಾ ಮಹಾನ್ ವ್ಯಕ್ತಿಗಳನ್ನು ಆರಾಧಿಸುವ ಪರಂಪರೆ ಬುದ್ದ, ಏಸು, ಬಸವ ಅಲ್ಲಮರಾದಿಯಾಗಿ ಅನೇಕರ ಬದುಕಿನ ಚರಿತ್ರೆಯಲ್ಲಿ ಅನುಯಾಯಿಗಳಿಂದ ಅನಾವರಣಗೊಳ್ಳುತ್ತಲೇ ಬಂದಿದೆ. ಇದಕ್ಕೆ ಪ್ರವಾದಿ ಮಹಮ್ಮದರೂ ಹೊರತಲ್ಲ. ಹುಟ್ಟುತ್ತಲೇ ಹುಣ್ಣಿಮೆ ಚಂದ್ರನಂತೆ ಬೆಳಗುವುದು, ಬಿರುಬಿಸಿಲ ಸುಡುವ ಮರಳಲ್ಲಿ ಪುಟ್ಟ ಬಾಲಕ ತಿಂಗಳುಗಳ ಕಾಲ ನಡೆದರೂ ಆಯಾಸಗೊಳ್ಳದೇ ಇರುವುದು. ಬಿಸಿಲು ಬಾದಿಸದಿರಲೆಂದು ಬಾಲಕನ ತಲೆಯ ಮೇಲೆ ಮಾತ್ರ ಮೋಡವೊಂದು ನೆರಳು ಮಾಡುವುದು. ದಾರಿಯ ಅಕ್ಕಪಕ್ಕದ ಖರ್ಜೂರದ ಮರಗಳು ಚಾಮರ ಬೀಸುವುದು... ಇದ್ದಕ್ಕಿದ್ದಂತೆ ದೇವರು ದರ್ಶನವಾಗಿ ಜ್ಞಾನೋದಯವಾಗುವುದು... ಹೀಗೆ ಹಲವಾರು ಅಸಂಗತ ಅಪ್ರಾಕೃತ ವಿವರಗಳು ಸಂಗತಗಳಾಗಿ ಮೂಡಿ ಬಂದು ಐತಿಹಾಸಿಕ ಪ್ರವಾದಿಯನ್ನು ಪೌರಾಣಿಕ ಪಾತ್ರವಾಗಿಸುವ ನಿಟ್ಟಿನಲ್ಲಿ ಇಡೀ ನಾಟಕ ಶ್ರಮಿಸುತ್ತದೆ. ತರ್ಕಗಳಾಚೆಗೆ ನಿಂತು ಜನಮಾನಸದ ಧಾರ್ಮಿಕ ನಂಬಿಕೆಗಳ ಜಾಡು  ಹಿಡಿದು ಓದಿರಿ ನಾಟಕ ನೋಡಿಸಿಕೊಂಡು ಹೋಗುತ್ತದೆ.

ನಾಟಕದ ಯಾವುದೇ ದೃಶ್ಯದಲ್ಲೂ ಪ್ರವಾದಿ ಮಹಮ್ಮದರ ಪಾತ್ರವನ್ನು ತೋರಿಸಲಾಗುವುದಿಲ್ಲ ಎಂದು ಮೊದಲೇ ಕರಪತ್ರಗಳಲ್ಲಿ ಸ್ಪಷ್ಟೀಕರಿಸಲಾಗಿದೆ. ಇಡೀ ನಾಟಕದಲ್ಲೆಲ್ಲೂ ಮಹಮ್ಮದರನ್ನು ಭೌತಿಕವಾಗಿ ಎಲ್ಲಿಯೂ ತೋರಿಸದೇ ಬೆಳಕಿನ ಕಿರಣದ ಮೂಲಕ ಮತ್ತು ನೇಪತ್ಯದ ದ್ವನಿಯ ಮೂಲಕ ಅವರ ಅಸ್ತಿತ್ವವನ್ನು ತೋರಿಸಲು ಪ್ರಯತ್ನಿಸಲಾಗಿದೆ. ವ್ಯಕ್ತಿ ಇಲ್ಲದೇ ವ್ಯಕ್ತಿಯ ಉಪಸ್ಥಿತಿಯನ್ನು ತೋರಿಸುವ ನಿರ್ದೇಶಕರ ತಂತ್ರಗಾರಿಕೆ ತುಂಬಾ ಸೊಗಸಾಗಿ ಮೂಡಿಬಂದಿದೆ. ಆದರೆ ಮಹಮ್ಮದರ ಪಾತ್ರವನ್ನು ತೋರಿಸಿದ್ದರೆ ನಾಟಕ ಇನ್ನೂ ಕಳೆಗಟ್ಟುತ್ತಿತ್ತು. ಪಾತ್ರದ ಅಭಿನಯದ ಬದಲು ದ್ವನಿಯನ್ನು ಮಾತ್ರ ಕೇಳಿ ಊಹಿಸಿಕೊಳ್ಳುವುದು ಕೇಳುಗರಿಗೆ ತಪ್ಪುತ್ತಿತ್ತು. ಮಹಮ್ಮದರ ಮಾತು ಹಾಗೂ ಉಪದೇಶಗಳು ಪರದೆಯ ಹಿನ್ನೆಲೆಯಿಂದ ಬರುವಾಗ ಇಡೀ ರಂಗವೇದಿಕೆ ಖಾಲಿಯಾಗಿರಬೇಕಿತ್ತು. ಆಗ ಪ್ರದರ್ಶನ ಮಾಧ್ಯಮ ಶ್ರವ್ಯ ಮಾಧ್ಯಮವಾಗಿ ಬದಲಾಗಿ ವೇದಿಕೆ ಕ್ರಿಯಾರಹಿತವಾಗಿ ಪ್ರೇಕ್ಷಕರಿಗೆ ಯಾವುದೋ ಕೊರತೆ ಕಾಡುವಂತಾಗುತ್ತಿತ್ತು. ಆದರೆ.. ನಿರ್ದೇಶಕರ ಸಾಂದರ್ಭಿಕ ಅನಿವಾರ್ಯತೆ ಹಾಗೂ ಧಾರ್ಮಿಕ ಅಸಹಿಷ್ಣುತತೆಗೆ ಕಾರಣವಾಗಬಾರದು ಎನ್ನುವ ಕಾಳಜಿ ಈ ರೀತಿಯ ರಾಜೀತನಕ್ಕೆ ಪ್ರೇರೇಪಿಸಿದಂತಿದೆ.

ಒಂದೂ ಕಾಲು ಗಂಟೆಯ ಸಮಯದಲ್ಲಿ ಪ್ರವಾದಿಯೊಬ್ಬರ ಬದುಕು ಬೋಧನೆ ಹಾಗೂ ಸಾಧನೆಗಳನ್ನು ನಾಟಕವಾಗಿ ಹಿಡಿದಿಡುವುದು ಸುಲಭ ಸಾಧ್ಯವಲ್ಲ. ಆದ್ದರಿಂದ ಪ್ರಮುಖ ಸನ್ನಿವೇಶಗಳನ್ನು ಸಂಕ್ಷಿಪ್ತವಾಗಿ ದೃಶ್ಯೀಕರಿಸುವ ಪ್ರಯತ್ನ ಮಾಡಲಾಗಿದ್ದು ತುಂಬಾ ವೇಗವಾಗಿ ದೃಶ್ಯಗಳು ಬದಲಾಗುತ್ತಾ ಸಾಗುತ್ತವೆ. ಮಹಮ್ಮದರ ಬದುಕಿನ ಆಳ ಅಗಲಕ್ಕಿಳಿಯದ ನಾಟಕವು ಮೇಲ್ಮಟ್ಟದಲ್ಲೆ ಪರಿಚಯಾತ್ಮಕ ನೋಟವನ್ನು ನೋಡುಗರಿಗೆ ತೋರಿಸಲು ಪ್ರಯತ್ನಿಸುತ್ತದೆ. ಕೊನೆಗೆ ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ, ತನ್ನಬನ್ನಿಸಬೇಡ, ಅಸಹ್ಯ ಪಡಬೇಡ ಎನ್ನುವ ಬಸವಣ್ಣನವರ ವಚನದ ಸಾರವನ್ನೇ ಮಹಮ್ಮದರು ಹೇಳುವ ಮೂಲಕ ನಾಟಕ ಕೊನೆಯಾಗುತ್ತದೆ. ಇಸ್ಲಾಂ ಧರ್ಮದ ಪ್ರವಾದಿಗಳ ಕುರಿತು ಒಂದು ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡುವಲ್ಲಿ ಓದಿರಿ ನಾಟಕ ಸಾರ್ಥಕತೆ ಪಡೆದಿದೆ.

ಕೆಲವೇ ಕಲಾವಿದರುಗಳು ಹಲವು ಪಾತ್ರಗಳನ್ನು ಅಭಿನಯಿಸುತ್ತಾ ನಿರೂಪನಾ ಪ್ರಧಾನ ನಾಟಕವನ್ನು ಕಟ್ಟಿಕೊಟ್ಟಿರುವುದನ್ನು ನೋಡುವುದೇ ಬಲು ಚೆಂದ. ಪ್ರತಿಯೊಬ್ಬರೂ ಏಕಕಾಲದಲ್ಲಿ ಪಾತ್ರವೂ ಆಗಿ, ನಿರೂಪಕರೂ ಆಗಿ ಕಥಾನಕವನ್ನು ಮುನ್ನಡೆಸುವುದು ಸೋಜಿಗದ ಸಂಗತಿ. ನೀನಾಸಮ್ ರಂಗಶಿಕ್ಷಣ ಸಂಸ್ಥೆಯಲ್ಲಿ ಪಳಗಿದ ಈ ಕಲಾವಿದರುಗಳು ಆಂಗಿಕ ಹಾಗೂ ವಾಚಿಕಾಭಿನಯದಲ್ಲಿ ನೋಡುಗರ ಮನಸೂರೆಗೊಳ್ಳುತ್ತಾರೆ. ಡಿಂಗ್ರಿ ನರೇಶ್, ಚಿದಂಬರ ಪೂಜಾರಿ, ಸಂತೋಷ್, ಜಗದೀಶ್, ಲಕ್ಕಿಮರದ ಶಾರದ, ಅಕ್ಷತ ನಾಯ್ಕ ಈ ಆರೂ ಅನುಭವಿ ಕಲಾವಿದರುಗಳು ತಮ್ಮ ಪಾತ್ರಗಳಿಗೆ ನ್ಯಾಯವದಗಿಸಿದ್ದಾರೆ.

ಡಾ.ಗಣೇಶ್ ಎಂ ಹೆಗ್ಗೋಡು
ಇಡೀ ನಾಟಕ ಕನ್ನಡ ಭಾಷೆಯಲ್ಲಿದೆಯಾದರೂ ಕೆಲವು ಕವ್ವಾಲಿ ಹಾಡುಗಳನ್ನು ಉರ್ದು ಭಾಷೆಯಲ್ಲಿ ಹಾಡಿದ್ದರ ಔಚಿತ್ಯವೇನು?  ಎನ್ನುವ ಪ್ರಶ್ನೆ ಕಾಡುತ್ತದೆ. ಅನೇಕ ಸಲ ಪುನರಾವರ್ತನೆಯಾಗುವ ಹರ್ ದರ್ದಕಿ ದವಾ ಹೈ ಮಹಮ್ಮದ್ ಕಿ ಶಹರಮೆ, ಕ್ಯೂ ಆಕೆ ರೋರಹಾ ಹೈ ಮಹಮದ್ ಕೆ ಶಹರಮೇ... ಹಾಡನ್ನು ಕನ್ನಡೀಕರಿಸಿ ಹಾಡಿದ್ದರೆ ನಾಟಕಕ್ಕೆ ಏನೂ ತೊಂದರೆಯಾಗುತ್ತಿರಲಿಲ್ಲ. ಅರೆಬಿಕ್ ಶೈಲಿಯ ಹಾಡು ಮತ್ತು ಸಂಗೀತಗಳು ನಿರೂಪಣೆಯ ಏಕತಾನತೆಯ ಸಾಧ್ಯತೆಯನ್ನು ಕಡಿತಗೊಳಿಸಿವೆ. ಯಾವುದೇ ಸೆಟ್ ಪರಿಕರಗಳಿಲ್ಲದೇ ಕೇವಲ ಕಲಾವಿದರ ಅಭಿನಯ ಪ್ರತಿಭೆಯನ್ನು ಬಳಸಿಕೊಂಡು ನಾಟಕವನ್ನು ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕರು ಸಮರ್ಥವಾಗಿ ಮಾಡಿದ್ದಾರೆ. ಬ್ಲಾಕಿಂಗ್ ಹಾಗೂ ಮೂವ್‌ಮೆಂಟ್‌ಗಳ ಸಂಯೋಜನೆಗಳು ನಾಟಕವನ್ನು ಆಕರ್ಷಣೀಯವಾಗಿ ಮಾಡಿ ಸೆಟ್ ಪರಿಕರಗಳ ಕೊರತೆಯನ್ನು ಗೊತ್ತಾಗದಂತೆ ಮಾಡಿವೆ. ಬೆಳಕಿನ ಸಂಯೋಜನೆ ದೃಶ್ಯಕ್ಕೆ ಪೂರಕವಾಗಿದ್ದರೂ ನಿರ್ವಹಣೆಯಲ್ಲಿ ಇನ್ನೂ ಖರಾರುವಕ್ಕತೆ ಬೇಕಿದೆ. ಕಣ್ಣಿಗೆ ಕಾಣಿಸದ ಪ್ರಮುಖ ಪಾತ್ರವನ್ನು ಇದೆ ಎಂದು ತೋರಿಸಲು ವೇದಿಕೆಯ ನಡುವೆ ಬಳಸಿದ ಬೆಳಕಿನ ದೃಶ್ಯ ಕಲ್ಪನೆ ಸೊಗಸಾಗಿದೆ. ಇಸ್ಲಾಂ ಪೂಜಾ ವಿಧಾನಗಳಾದ ಅಂಗಶುದ್ದಿ, ನಮಾಜ್ ಗಳನ್ನು ಪೂರ್ಣವಾಗಿ ತೋರಿಸುವ ಬದಲು ಸಾಂಕೇತಿಕವಾಗಿ ತೋರಿಸಿದ್ದರೆ ಚೆನ್ನಾಗಿತ್ತು.

ಕಾದಂಬರಿಯಲ್ಲಿರುವ ವಿವರಗಳು ನಾಟಕದಲ್ಲಿ ಮೂಡಿಬಂದಿಲ್ಲ. ಅದ್ಯಾಕೋ ಕಾದಂಬರಿ ಕಾಡಿದಷ್ಟು ನಾಟಕ ಕಾಡುವುದಿಲ್ಲ. ಮೂಲ ಕಾದಂಬರಿ ಓದದೇ ನಾಟಕ ನೋಡಿದವರಿಗೆ ಈ ಸಮಸ್ಯೆ ಇಲ್ಲ. ಇಸ್ಲಾಂಮೇತರ ಬಂಧುಗಳಿಗೆ ಪ್ರವಾದಿ ಮಹಮ್ಮದರ ಕುರಿತು ಒಂದು ಸಂಕ್ಷಿಪ್ತ ಪರಿಚಯವನ್ನು ನಾಟಕದ ಮೂಲಕ ಮಾಡಿಕೊಡುವ ಮಹತ್ತರವಾದ ಕೆಲಸದಲ್ಲಿ ಓದಿರಿ  ರಂಗಪ್ರಯೋಗ ಯಶಸ್ವಿಯಾಗಿದೆ. ವಿಶ್ಲೇಷಣಾತ್ಮಕವಾಗಿ ಕಟ್ಟಿಕೊಡಬಹುದಾದ ನಾಟಕವನ್ನು ಆರಾಧನಾ ಮನೋಭಾವದಲ್ಲಿ ಕಟ್ಟಿಕೊಡುವ ನಿರ್ದೇಶಕ ಗಣೇಶ್‌ರವರ ಓದಿರಿ ಪ್ರಶ್ನಾರ್ಹವಾಗಿದೆ. ಮುಸ್ಲಿಮೇತರ ಕಲಾವಿದರೆಲ್ಲಾ ಸೇರಿ ಇಸ್ಲಾಂ ಧರ್ಮದ ಪ್ರವಾದಿ ಕುರಿತ ನಾಟಕವನ್ನು ಕಟ್ಟಿಕೊಟ್ಟಿದ್ದೇ ಧಾರ್ಮಿಕ ಸೌಹಾರ್ಧತೆ ಹಾಗೂ ಸಹೋದರತೆಯ ದ್ಯೋತಕವಾಗಿದೆ. ಈ ನಿಟ್ಟಿನಲ್ಲಿ ಸತ್ಯಶೋಧನ ರಂಗಸಮುದಾಯ ಅಭಿನಂದನಾರ್ಹವಾಗಿದೆ.



                            - ಶಶಿಕಾಂತ ಯಡಹಳ್ಳಿ

  
      



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ