ಮಂಗಳವಾರ, ನವೆಂಬರ್ 3, 2015

ಅರ್ಜಿ ಮರ್ಜಿ ಮೀರಿದ ರಾಜ್ಯೋತ್ಸವ ಪ್ರಶಸ್ತಿ ;


ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ; ಶಿಪಾರಸ್ಸು ರಾಜಕೀಯಕ್ಕೆ ಮುಕ್ತಿ



ಹಿಂದೆಂದೂ ಇಲ್ಲರ ರೀತಿಯಲ್ಲಿ 2015 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳು ರಾಜಕೀಯದ ಪ್ರಭಾವಳಿಯಿಂದ ಮುಕ್ತವಾಗಿ ಹಾಗೂ ಬಹುತೇಕ ಸೂಕ್ತವಾಗಿ ಆಯ್ಕೆಯಾಗಿವೆ. ಹಿಂದೆ ಪ್ರಶಸ್ತಿಗಳ ಆಯ್ಕೆಗಿರುವ ಸರಕಾರಿ ಮಾನದಂಡಗಳನ್ನು ಗಾಳಿಗೆ ತೂರಿ ರಾಜಕೀಯ ಪ್ರಭಾವ ಹಾಗೂ ಮಂತ್ರಿ ಮಾನ್ಯರ ಶಿಪಾರಸ್ಸುಗಳಿಗೆ ಒಳಗಾಗಿ ಪ್ರಶಸ್ತಿಗಳನ್ನು ಬೇಕಾಬಿಟ್ಟಿ ಹಂಚಿದ್ದಿದೆ. ನೂರು ನೂರಿಪ್ಪತ್ತು ಜನರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಿದೆ. ಪ್ರಶಸ್ತಿ ಪ್ರಧಾನ ಮಾಡುವ ಕೊನೆಗಳಿಗೆಯಲ್ಲಿ ಸಹ ಹೆಸರುಗಳನ್ನು ಸೇರಿಸಿ ಪ್ರಶಸ್ತಿ ಕೊಟ್ಟಿದ್ದೂ ಆಗಿಹೋಗಿದೆ. ರಾಜ್ಯೋತ್ಸವ ಪ್ರಶಸ್ತಿ ಎನ್ನುವುದಕ್ಕೆ ಯಾವುದೇ ಘನತೆ ಗೌರವಗಳೇ ಇಲ್ಲದ ಹಾಗಾಗಿತ್ತು. ನಿಜವಾದ ಸಾಧಕರಿಗಿಂತ ಶಿಪಾರಸ್ಸು ತರುವ ಪ್ರಭಾವಶಾಲಿಗಳು ಪ್ರಶಸ್ತಿಯನ್ನು ಗಿಟ್ಟಿಸುತ್ತಿದ್ದರು. ಕೆಲವರಂತೂ ಪ್ರಶಸ್ತಿಗಳನ್ನು ಹಣಕೊಟ್ಟು ಕೊಂಡುಕೊಳ್ಳುವ ಮಟ್ಟಕ್ಕೆ ಪ್ರಶಸ್ತಿಗಳು ಮಾರಾಟದ ವಸ್ತುಗಳಾಗಿದ್ದವು. ಯಾರಾದರೂ ತಮಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ ಎಂದು ಹೇಳಿದರೆ ಎಷ್ಟಕ್ಕೆ ಕೊಂಡುಕೊಂಡೆ? ಎಂದು ಕೇಳುವಷ್ಟು ಪ್ರಶಸ್ತಿಗಳ ಮೌಲ್ಯ ಅಪಮೌಲ್ಯಗೊಂಡಿತ್ತು.

ಆದರೆ..... ಸಲದ ರಾಜ್ಯೋತ್ಸವ ಪ್ರಶಸ್ತಿಗಳ ಆಯ್ಕೆಯ ಪ್ರಕ್ರಿಯೆಗಳು ಎಲ್ಲಾ ರೀತಿಯ ಪ್ರಭಾವಳಿಗಳನ್ನು ಮೀರಿನಿಂತು ಪಾರದರ್ಶಕವಾಗಿ ನಡೆದಿದ್ದು ನಿಜಕ್ಕೂ ಮಾದರಿಯಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ನಾನು ಯಾರನ್ನೂ ರೆಕಮೆಂಡ್ ಮಾಡೋದಿಲ್ಲ ಹಾಗೂ ಎಲ್ಲಿಯೂ ಮೂಗು ತೂರಿಸುವುದಿಲ್ಲ ಎಂದು ಹೇಳಿ ಅದಕ್ಕೆ ಕೊನೆಯವರೆಗೂ ಬದ್ಧವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮೊದಲು ಅಭಿನಂದಿಸಲೇಬೇಕು. ಯಾವುದೇ ರಾಜಕೀಯ ಲಾಭಿಗೂ ಮಣಿಯಬೇಡಿ, ಯೋಗ್ಯ ಸಾಧಕರನ್ನು ಸಾಮಾಜಿಕ ನ್ಯಾಯದ ಮಾನದಂಡದ ಮೇಲೆ ಆಯ್ಕೆ ಮಾಡಿ ಎಂದು ಪ್ರಶಸ್ತಿ ಆಯ್ಕೆ ಸಮಿತಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಣಿ ಉಮಾಶ್ರೀಯವರಿಗೆ ವಿಷಯದಲ್ಲಿ ಹ್ಯಾಟ್ಸಾಪ್ ಹೇಳಲೇಬೇಕು. ಇದೆಲ್ಲದಕ್ಕಿಂತ ಪ್ರಶಸ್ತಿ ಆಯ್ಕೆ ಕಮಿಟಿಗೆ ಸದಸ್ಯರುಗಳನ್ನು ಆಯ್ಕೆ ಮಾಡುವುದರಲ್ಲಿಯೇ ಆಯ್ಕೆ ಸಮಿತಿಯ ಅಧ್ಯಕ್ಷೆಯಾಗಿದ್ದ ಉಮಾಶ್ರೀಯವರು ಜಾಣತನ ತೋರಿಸಿದ್ದರು. ಕೆ.ಮರುಳಸಿದ್ದಪ್ಪ, ಕಾ..ಚಿಕ್ಕಣ್ಣ, ನಾ.ದಾಮೋದರ ಶೆಟ್ಟಿ, ಹೀ.ಶಿ.ರಾಮಚಂದ್ರಗೌಡ, ಕೆ.ಬಿ.ಸಿದ್ದಯ್ಯ... ರಂತಹ ನಿಷ್ಟುರವಾದಿಗಳನ್ನು ಆಯ್ದು ಆಯ್ಕೆ ಸಮಿತಿ ಸದಸ್ಯರನ್ನಾಗಿಸಲಾಗಿತ್ತು. ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷರುಗಳು ಸಹ ಪ್ರಶಸ್ತಿ ಕಮಿಟಿಯ ಸದಸ್ಯರಾಗಿದ್ದರು. ಮೊಟ್ಟಮೊದಲು ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕೊಡಬಾರದು ಎಂದು ಉಮಾಶ್ರೀಯವರಿಗೆ ಒತ್ತಾಯಿಸಿದ್ದೇ ಆಯ್ಕೆ ಕಮಿಟಿಯ ಸದಸ್ಯರುಗಳುಸದಸ್ಯರುಗಳ ಮಾತಿಗೆ ಆಯ್ಕೆ ಸಮಿತಿಯ ಅಧ್ಯಕ್ಷೆ ಉಮಾಶ್ರೀ ಕೊನೆಯವರೆಗೂ ಬೆಂಬಲಿಸಿದರುಯಾವಾಗ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದವರು ಒತ್ತಡ ಪ್ರಭಾವಗಳನ್ನು ಮೀರಿನಿಂತು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಪ್ರಶಸ್ತಿಗಳ ಆಯ್ಕೆಗೆ ಆದೇಶಿಸುತ್ತಾರೋ ಆಗ ಕಮಿಟಿ ಸದಸ್ಯರುಗಳು ಹಾಗೂ ಅಕಾಡೆಮಿಗಳ ಅಧ್ಯಕ್ಷರುಗಳು ಅನಿವಾರ್ಯವಾಗಿ ಸಾಧ್ಯವಾದಷ್ಟೂ ಯೋಗ್ಯರಾದ ಸಾಧಕರಿಗೆ ಪ್ರಶಸ್ತಿ ಕೊಡಿಸಲು ಪ್ರಯತ್ನಿಸುತ್ತಾರೆಂಬುದು ಸಲ ಸಾಬೀತಾಗಿದೆ.


ರಾಜ್ಯೋತ್ಸವ ಪ್ರಶಸ್ತಿ ಬಯಸಿ 1100 ಅರ್ಜಿಗಳು ಬಂದಿದ್ದವು. ಆದರೆ ಕರ್ನಾಟಕ ರಾಜ್ಯ ಉದಯಿಸಿ ೬೦ ವರ್ಷಗಳಾಗಿದ್ದರಿಂದ 60 ಸಾಧಕರಿಗೆ ಮಾತ್ರ ಪ್ರಶಸ್ತಿ ಕೊಡಬೇಕೆಂದು ಸರಕಾರ ತೀರ್ಮಾನಿಸಿಯಾಗಿತ್ತು. ಇಷ್ಟೊಂದು ಅರ್ಜಿಗಳಲ್ಲಿ ಕೇವಲ 60 ಜನರನ್ನು ಆಯ್ಕೆ ಮಾಡುವುದು ಆಯ್ಕೆ ಕಮಿಟಿಗೆ ಒಂದು ಬಲು ದೊಡ್ಡ ಸವಾಲು. ಅದರಲ್ಲೂ ಜಾತಿವಾರು, ಜಿಲ್ಲಾವಾರು, ಪ್ರಾದೇಶಿಕತೆ, ವಯೋಮಿತಿಗಳೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಪ್ರಶಸ್ತಿಗಳನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಕಮಿಟಿಯ ಸದಸ್ಯರುಗಳ ಮೇಲಿತ್ತು. ಸುದೀರ್ಘವಾಗಿ  ಒಂದು ವಾರಗಳ ಕಾಲ ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗೆ ಕನ್ನಡ ಭವನದಲ್ಲಿ ಕುಳಿತ ಆಯ್ಕೆ ಸಮಿತಿಯ ಎಲ್ಲಾ ಸದಸ್ಯರುಗಳು ಭೂತಕನ್ನಡಿ ಹಾಕಿ ಅಳೆದು ಸುರಿದು ಕೊನೆಗೆ 130 ಜನರನ್ನು ಆಯ್ಕೆ ಮಾಡಿ ಸರಕಾರಕ್ಕೆ ಸಲ್ಲಿಸಿತು. ಉಮಾಶ್ರೀಯವರು ಮುಖ್ಯಮಂತ್ರಿಯವರೊಡನೆ ಚರ್ಚಿಸಿ ಕೊಟ್ಟ ಕೊನೆಗೆ 30 ಸಾಧಕರಿಗೆ ಪ್ರಶಸ್ತಿಗಳನ್ನು ಅಕ್ಟೋಬರ್ 30 ರಂದು ಘೋಷಿಸಲಾಯಿತು. ಬಾರಿಯ ಅಭಿನಂದನೀಯ ವಿಷಯ ಏನೆಂದರೆ ಶಿಪಾರಸ್ಸುಗಳನ್ನು ನಜರಂದಾಜು ಮಾಡಿ  ಪಕ್ಕಕ್ಕಿಟ್ಟಿದ್ದು. ಕೆಲವರಂತೂ ನಾಲ್ಕೈದು ಮಿನಿಸ್ಟರುಗಳಿಂದ ರೆಕಮೆಂಡೇಶನ್ ಪತ್ರಗಳನ್ನು ಅರ್ಜಿ ಜೊತೆಗೆ ಲಗತ್ತಿಸಿದ್ದರು. ಅಂತವರನ್ನೆಲ್ಲಾ ನಿರ್ಲಕ್ಷಿಸಲಾಯಿತು. ಆಯ್ಕೆ ಕಮಿಟಿ ಚರ್ಚಿಸಿ ಆಯ್ಕೆ ಮಾಡಿದ ಪಟ್ಟಿಯ ಒಳಗೇ 60 ಜನರನ್ನು ಪೈನಲೈಜ್ ಮಾಡಲಾಯಿತೇ ಹೊರತು ಯಾವೊಬ್ಬರನ್ನು ಒತ್ತಡಕ್ಕೊಳಗಾಗಿ ಸೇರಿಸಿಲ್ಲ ಎನ್ನುವುದೇ ಸಲದ ರಾಜ್ಯೋತ್ಸವ ಪ್ರಶಸ್ತಿಯ ಹೆಗ್ಗಳಿಕೆ.

ಇನ್ನೂ ವಿಶೇಷತೆ ಏನೆಂದರೆ ಪ್ರಶಸ್ತಿಗೆ ಅರ್ಜಿ ಹಾಕದ ನಿಜವಾದ ಸಾಧಕರ ಹೆಸರುಗಳನ್ನು ಕಮಿಟಿಯ ಸದಸ್ಯರುಗಳೇ ಕಂಡುಹಿಡಿದು ಸಭೆಯಲ್ಲಿ ಚರ್ಚಿಸಿ ಪ್ರಶಸ್ತಿಗೆ ಪರಿಗಣಿಸಲಾಯಿತು. ಈಗ ಆಯ್ಕೆಗೊಂಡ ಪ್ರಶಸ್ತಿ ಪುರಸ್ಕೃತರಲ್ಲಿ ಅರ್ಧದಷ್ಟು ಸಾಧಕರು ಅರ್ಜಿಯನ್ನೇ ಸಲ್ಲಿಸಿರಲಿಲ್ಲ. ತಮಗೆ ಪ್ರಶಸ್ತಿ ಬರುತ್ತದೆ ಎನ್ನುವ ಕಲ್ಪನೆಯೂ ಅವರಿಗಿರಲಿಲ್ಲ. ಪ್ರಶಸ್ತಿಗಳು ಪ್ರಕಟಗೊಂಡಾಗಲೇ ಅವರಿಗೆಲ್ಲಾ ಗೊತ್ತಾಗಿದ್ದು. ನಿಜವಾದ ಪ್ರಶಸ್ತಿಯನ್ನು ಆಯ್ಕೆ ಮಾಡಬೇಕಾದದ್ದೇ ಹೀಗೆ. ನಿಜವಾದ ಸಾಧಕರು ಅರ್ಜಿ ಹಿಡಿದುಕೊಂಡು ತಮ್ಮ ಸಾಧನೆಯ ಪಟ್ಟಿ ಮಾಡಿಕೊಂಡು... ಆಯ್ಕೆ ಸಮಿತಿಯ ಮರ್ಜಿಗಾಗಿ ಶಿಪಾರಸ್ಸುಗಳನ್ನು ತಂದುಕೊಂಡು ಪ್ರಶಸ್ತಿಗಳಿಗೆ ಒತ್ತಾಯಿಸುವುದು ನಿಜಕ್ಕೂ ಅವಮಾನಕಾರಿ ಸಂಗತಿಯಾಗಿದೆ. ಸ್ವಾಭಿಮಾನ ಇರುವ ಯಾವುದೇ ಸಾಧಕ ಎಂದೂ ಸರಕಾರದ ಮುಂದೆ ಪ್ರಶಸ್ತಿ ಕೊಡಿ ಎಂದು ಕೈಚಾಚುವುದಿಲ್ಲ... ಚಾಚಬಾರದು. ನಿಜವಾದ ಪ್ರತಿಭೆಗಳನ್ನು, ಸಾಧಕರನ್ನು ಹುಡುಕಿ ತೆಗೆದು ಅಂತವರಿಗೆ ಪ್ರಶಸ್ತಿಯ ಗೌರವವನ್ನು ಕೊಡುವುದು ಸರಕಾರದ ಹಾಗೂ ಸರಕಾರ ನಿಯಮಿಸಿದ ಆಯ್ಕೆ ಕಮಿಟಿಯ ಆದ್ಯ ಕರ್ತವ್ಯವಾಗಿದೆ. ಸಲದ ಆಯ್ಕೆ ಸಮಿತಿ ಇಂತಹುದೊಂದು ಸಾಧನೆಯನ್ನು ಮಾಡಿದೆ. ಪ್ರಶಸ್ತಿಗಾಗಿ ಕೋರಿಕೆ ಸಲ್ಲಿಸದ ಸ್ವಾಭಿಮಾನಿಗಳನ್ನು ಗುರುತಿಸಿ ಗೌರವಿಸಲಾಗಿದೆ. ಸೋಮಶೇಖರರಾವ್, ಸಾವುಕಾರ ಜಾನಕಿ, ಬ್ರಹ್ಮಾವರ, ಉಡುಪಿಯ ಕಲ್ಲೇ ಶಿವೋತ್ತರರಾವ್, ಡಾ.ವೀರೇಂದ್ರ ಸಿಂಪಿ, ಸಾಧುಕೋಕಿಲ, ಡಾ.ಜಿನದತ್ತ ದೇಸಾಯಿ.... ಹೀಗೆ ಹಲವಾರು ಜನರಿಗೆ ಪ್ರಶಸ್ತಿ ಸಿಗಬಹುದೆಂಬುದರ ಸುಳಿವೂ ಇರಲಿಲ್ಲ. ಮುಖ್ಯಮಂತ್ರಿ ಚಂದ್ರು, ವೈಜನಾಥ ಪಾಟೀಲರಂತವರ ಹಲವಾರು ಪ್ರಮುಖರ  ಹೆಸರುಗಳು ಚರ್ಚೆಗೆ ಬಂದಿದ್ದರೂ ನಿರಾಕರಿಸಲಾಯಿತು.

ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಮಂಗಳಮುಖಿ ಸಮುದಾಯವನ್ನೂ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಸಲದ ವಿಶೇಷತೆಯಲ್ಲಿಯೇ ವಿಶಿಷ್ಟವಾಗಿದೆ. ಲಿಂಗ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಸರಕಾರೇತರ ಸಂಸ್ಥೆಯನ್ನು ಕಟ್ಟಿಕೊಂಡು ಶ್ರಮಿಸುತ್ತಿರುವ ಮಂಗಳಮುಖಿ ಅಕೈ ಪದ್ಮಶಾಲಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದ್ದು ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ಒದಗಿಸಿದಂತಿದೆ.

ಸಾಧಕರನ್ನು ಗೌರವಿಸುವುದೇನೋ ಸರಿ... ಆದರೆ ವಯೋವೃದ್ದರಾಗಿ ಎದ್ದು ನಿಲ್ಲಲೂ ಸಾಮರ್ಥ್ಯ ಇಲ್ಲದವರಿಗೂ ಸಹ ಪ್ರಶಸ್ತಿಯನ್ನು ಕೊಡಲಾಗಿದೆ. ಎಂಬತ್ತು, ತೊಂಬತ್ತು, ತೊಂಬತ್ನಾಲ್ಕು ವಯೋಮಾನದವರಿಗೂ ಪ್ರಶಸ್ತಿ ಪ್ರಕಟಗೊಂಡಿದೆ. ಇಂತವರ ಸಂಖ್ಯೆ ಸಲದ ಪ್ರಶಸ್ತಿ ಪಟ್ಟಿಯಲ್ಲಿ ಹೆಚ್ಚಾಗಿದೆ. ಹೀಗಾಗಿ ಇದೊಂದು ವಯೋವೃದ್ದ ಪ್ರಶಸ್ತಿ ಪುರಸ್ಕಾರವಾದಂತಾಗಿದೆವಿರೇಂದ್ರ ಸಿಂಪಿಯವರು ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಾ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ. ಮಮ್ತಾಜ್ ಬೇಗಂರವರು ಅನಾರೋಗ್ಯದಿಂದಾಗಿ ಪ್ರಶಸ್ತಿ ಪಡೆಯಲು ಬರಲೂ ಸಾಧ್ಯವಾಗಲಿಲ್ಲ. ಸಾಯುವ ಮುಂಚೆ ಸಾಧಕರಿಗೆ ಪ್ರಶಸ್ತಿ ಕೊಡಬೇಕು ಎನ್ನುವ ಆಯ್ಕೆ ಸಮಿತಿಯ ಧೋರಣೆ ಸರಿಯಾದುದಲ್ಲ. ಅಂತಹ ಸಾಧಕರಿಗೆ ಇಳಿಸಂಜೆಯಲ್ಲಿ ಬೇಕಾದದ್ದು ಪ್ರಶಸ್ತಿಯಲ್ಲಾ ಅನಾರೋಗ್ಯಕ್ಕೆ ಚಿಕಿತ್ಸೆ ಹಾಗೂ ಆರ್ಥಿಕ ಸಹಾಯನಾಳೆ ಸಾಯುವವರಿಗೆ ಇಂದು ಪ್ರಶಸ್ತಿ ಕೊಡುವುದಕ್ಕಿಂತಲೂ ಅವರನ್ನು ಗುಣಮುಖರನ್ನಾಗಿಸುವತ್ತ ಸರಕಾರ ಸಹಾಯಹಸ್ತ ಚಾಚಬೇಕು. ಹಾಗೂ ಅವರ ಸಾಧನೆಗಳನ್ನು ಮುಂದಿನ ತಲೆಮಾರಿಗೆ ತಿಳಿಸುವ ಮಾರ್ಗೊಪಾಯಗಳತ್ತ ಸಕಾರಾತ್ಮಕವಾಗಿ ಯೋಜನೆ ರೂಪಿಸಬೇಕು.   ಸರಕಾರ ಕೊಡಮಾಡುವ ಪ್ರಶಸ್ತಿಗಳು ಸಾಧಕನಿಗೆ ಇನ್ನಷ್ಟು ಸಾಧನೆ ಮಾಡಲು ಸ್ಪೂರ್ತಿಯಾಗುವಂತಿರಬೇಕೆ ಹೊರತು ಸಾಯುವವನಿಗೆ ಗಂಗಾಜಲದಂತಾಗಬಾರದು. ಇನ್ನೂ ವಯಸ್ಸಿರುವವರಿಗೆ ಮುಂದೆ ಪ್ರಶಸ್ತಿ ಪಡೆಯುವ ಸಾಧ್ಯತೆಗಳಿವೆ ಹೀಗಾಗಿ ವಯೋವೃದ್ದರಿಗೆ ಮೊದಲು ಪಶಸ್ತಿ ಕೊಡುವುದು ಸೂಕ್ತ ಎನ್ನುವ ಅಘೋಷಿತ ನಿರ್ಧಾರವನ್ನು ಸರಕಾರ ಹಾಗೂ ಪ್ರಶಸ್ತಿ ಆಯ್ಕೆ ಕಮಿಟಿ ತೆಗೆದುಕೊಂಡಂತಿದೆ. ಪ್ರಶಸ್ತಿ ಯಾವುದೇ ಸಾಧಕರಿಗೆ ಕೊಡಲಿ, ಆದರೆ ಹಾಗೆ ಕೊಡುವ ಪ್ರಶಸ್ತಿ ಅವರಲ್ಲಿ ಹುಮ್ಮಸ್ಸನ್ನು ಹಾಗೂ ಇನ್ನೂ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರೇರಣೆಯನ್ನು ಕೊಡುವಂತಿರಲಿ. ಬೇಕಾದರೆ ಹಿಂದೆ ಅವಿಶ್ರಾಂತವಾಗಿ ಶ್ರಮಿಸಿ ಈಗ  ವಿಶ್ರಾಂತಿ ಜೀವನ ನಡೆಸುತ್ತಿರುವ  ವಯೋವೃದ್ದರನ್ನೂ ಜ್ಞಾನವೃದ್ದರನ್ನೂ ಗುರುತಿಸಿ ಜೀವಮಾನದ ಸಾಧನೆ ಹೆಸರಲ್ಲಿ ಪ್ರಶಸ್ತಿ ಕೊಟ್ಟರೆ ಪಡೆದವರಿಗೊಂದು ಗೌರವ ಹಾಗೂ ಕೊಟ್ಟ ಪ್ರಶಸ್ತಿಗೊಂದು ಮೌಲ್ಯ ದೊರಕಿದಂತಾಗುತ್ತದೆ. ಇಲ್ಲವಾದರೆ  ರಾಜ್ಯೋತ್ಸವ ಪ್ರಶಸ್ತಿ ಎನ್ನುವುದು ಸಾಯುವ ಕಾಲಕ್ಕೆ ದೊರೆಯುವ ಗೌರವ ಎನ್ನುವಂತಾಗುತ್ತದೆ. ನಿಟ್ಟಿನಲ್ಲಿ ಮುಂದಿನ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಕಮಿಟಿ ಹಾಗೂ ಸಂಬಂಧಿಸಿದವರು ಆಲೋಚನೆ ಮಾಡುವುದುತ್ತಮ. ಯುವ ಕ್ರಿಕೆಟ್ ಆಟಗಾರ ವಿನಯ್ಕುಮಾರ್, ಮಂಗಳಮುಖಿ ಅಕೈ ಪದ್ಮಶಾಲಿ, ಸಾಧುಕೋಕಿಲ, ಅಪ್ಪಗೆರೆ ತಿಮ್ಮರಾಜು... ಇಂತಹ ಕೆಲವು ಹಾಲಿ ಕ್ರಿಯಾಶೀಲವಾಗಿರುವ ಸಾಧಕರಿಗೂ ಸಲದ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟಿದ್ದು ಶ್ಲಾಘನೀಯ.



ಇರುವ 60 ಪ್ರಶಸ್ತಿಗಳನ್ನು 16 ವಿಭಾಗಗಳಿಗೆ ಹಂಚಿ ಕೊಡುವುದು ಸುಲಭಸಾಧ್ಯವೇನಲ್ಲ. ಆದರೂ ಜಾನಪದ ರಂಗಭೂಮಿ ಹಾಗೂ ವೃತ್ತಿರಂಗಭೂಮಿಗಳಿಗೆ ಹೋಲಿಸಿದರೆ ಆಧುನಿಕ ಹವ್ಯಾಸಿ ರಂಗಭೂಮಿಯನ್ನು ಕಡೆಗಣಿಸಲಾಗಿದೆ. ಹೆಚ್.ಜಿ.ಸೋಮಶೇಖರರಾವ್ ರವರನ್ನು ಮಾತ್ರ ಪರಿಗಣಿಸಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಬಹುಷಃ ವೃತ್ತಿ ಕಂಪನಿ ರಂಗಭೂಮಿಯಿಂದ ಬಂದ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶೇಖ ಮಾಸ್ತರರ ಒತ್ತಡವೋ ಅಥವಾ ಒಂದು ಕಾಲದಲ್ಲಿ ತಮ್ಮ ಅನ್ನಕ್ಕೆ ದಾರಿಮಾಡಿಕೊಟ್ಟ ಕಂಪನಿ ನಾಟಕಗಳ ಮೇಲಿರುವ ಉಮಾಶ್ರೀಯವರ ಋಣಸಂದಾಯ ಪ್ರೀತಿಯೋ ಗೊತ್ತಿಲ್ಲ. ಆದರೆ ಈಗ ರಾಜ್ಯಾದ್ಯಂತ ಪ್ರಚಲಿತದಲ್ಲಿರುವ ಆಧುನಿಕ ಕನ್ನಡ ರಂಗಭೂಮಿಯ ಸಾಧಕರನ್ನು ನಿರ್ಲಕ್ಷಿಸಿದ್ದು ಮಾತ್ರ ಅಕ್ಷಮ್ಯ. ನೃತ್ಯ ಸಂಗೀತ ವಿಭಾಗಕ್ಕೆ ಆರು ಹಾಗೂ ಜಾನಪದ ಕ್ಷೇತ್ರದವರಿಗೆ ಏಳು ಮತ್ತು ವೃತ್ತಿ ರಂಗಭೂಮಿ ಕಲಾವಿದರಿಗೆ 4 ಪ್ರಶಸ್ತಿಗಳನ್ನು ಕೊಡಮಾಡಿದ್ದು ಆಧುನಿಕ ರಂಗಭೂಮಿಗೆ ಒಂದೇ ಒಂದು ಪ್ರಶಸ್ತಿ ಕೊಟ್ಟಿದ್ದು ಮಲತಾಯಿ ಧೋರಣೆ ಪ್ರತೀಕವಾಗಿದೆ. ಆಧುನಿಕ ರಂಗಭೂಮಿಯ ಕುರಿತು ಆಳವಾದ ಅರಿವುಳ್ಳ... ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೆಲಸಮಾಡಿದ್ದ ಡಾ.ಕೆ.ಮರುಳಸಿದ್ದಪ್ಪನವರು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದೂ ಪ್ರಮಾದ ಹೇಗೆ ಜರುಗಿತು ಗೊತ್ತಿಲ್ಲ. ಆದರೆ ಆಧುನಿಕ ಕನ್ನಡ ರಂಗಭೂಮಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವಲ್ಲಿ ಅನ್ಯಾಯ ಆಗಿದ್ದಂತೂ ಸತ್ಯ. ಇದನ್ನು ಕೇಳಬೇಕಾದ ರಂಗಕರ್ಮಿಗಳು ಅದ್ಯಾಕೆ ಮೌನವಾಗಿದ್ದಾರೋ ತಿಳಿದಿಲ್ಲ. ಮುಂದಿನ ವರ್ಷದ ಪ್ರಶಸ್ತಿ ಆಯ್ಕೆಯಲ್ಲಾದರೂ ವರ್ಷ ಆದ ಅನ್ಯಾಯವನ್ನು ಸರಿಪಡಿಸಬೇಕೆಂಬ ಒತ್ತಾಯವನ್ನಾದರೂ ಸರಕಾರಕ್ಕೆ ಮಾಡುವುದು ರಂಗಕರ್ಮಿಗಳ ಜವಾಬ್ದಾರಿಯಾಗಿದೆ. ಇಲ್ಲವಾದರೆ   ತಾರತಮ್ಯ ಮುಂದುವರೆಯುತ್ತಲೇ ಇರುತ್ತದೆ.

ಸರಕಾರ ಪ್ರತಿ ಸಲ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕಮಿಟಿಯನ್ನು ಮೊದಲೇ ಮಾಧ್ಯಮಗಳ ಮೂಲಕ ಪ್ರಚಾರ ಪಡಿಸುವುದು ಸರಿಯಾದ ಕ್ರಮವೇ ಅಲ್ಲ. ಕಮಿಟಿಯ ಸದಸ್ಯರುಗಳು ಒತ್ತಡರಹಿತವಾಗಿ ಹಾಗೂ ಮುಕ್ತವಾಗಿ ಸಾಧಕರನ್ನು ಆಯ್ಕೆ ಮಾಡಬೇಕೆಂದರೆ ಅವರ ಹೆಸರನ್ನು ನವೆಂಬರ್ ಒಂದರವರೆಗೂ ಗುಪ್ತವಾಗಿಡಬೇಕು. ಯಾಕೆಂದರೆ ಆಯ್ಕೆ ಸಮಿತಿಯ ಸದಸ್ಯರುಗಳ ಮೇಲೆ ಪ್ರಶಸ್ತಿ ಆಕಾಂಕ್ಷಿಗಳ ಒತ್ತಡ ವಿಪರೀತವಾಗುತ್ತದೆ. ಸದಸ್ಯರ ಗೆಳೆಯರು, ಸಂಬಂಧಿಕರು, ಪರಿಚಯಸ್ತರುಗಳು ತಮ್ಮ ಹೆಸರನ್ನು ಪ್ರಶಸ್ತಿಗೆ ಪರಿಗಣಿಸುವಂತೆ ದುಂಬಾಲು ಬೀಳುತ್ತಾರೆ. ಬೇರೆ ಬೇರೆ ಪ್ರಭಾವಿಗಳಿಂದ ರೆಕಮೆಂಡ್ ಮಾಡಿಸಿ ಪೋನಾಯಿಸುತ್ತಾರೆ. ಕೆಲವರಂತೂ ಸಮಿತಿಯ ಸದಸ್ಯರ ಮನೆಗಳನ್ನು ಹುಡುಕಿಕೊಂಡು ಹೋಗಿ ಬಯೋಡಾಟಾಗಳನ್ನು ಕೊಟ್ಟು ಪ್ರಶಸ್ತಿ ಕೊಡಿಸಲೇಬೇಕೆಂದು ಇನ್ನಿಲ್ಲದಂತೆ ಒತ್ತಾಯಿಸುತ್ತಾರೆ. ಇನ್ನೂ ಕೆಲವರಿರುತ್ತಾರ ಬ್ಲಾಕ್ಮೇಲಿಗರು. ಬಾರಿ ಪ್ರಶಸ್ತಿ ಕೊಡಿಸದೇ ಇದ್ದಲ್ಲಿ ವಿಷ ಕುಡಿದು ಸಾಯುತ್ತೇನೆ ಎಂದೂ ಆಯ್ಕೆ ಸಮಿತಿಯ ಸದಸ್ಯರನ್ನು ಖಾಸಗಿಯಾಗಿ ಸಂಪರ್ಕಿಸಿ ಎಮೋಶನಲ್ ಬ್ಲಾಕಮೇಲ್ ಮಾಡುತ್ತಾರೆ. ಇಷ್ಟೊಂದು ಒತ್ತಡಗಳ ನಡುವೆ ಸದಸ್ಯರುಗಳು ಅದು ಹೇಗೆ ಸಮರ್ಪಕವಾಗಿ ಆಯ್ಕೆ ಮಾಡಲು ಸಾಧ್ಯ? ಕಾ..ಚಿಕ್ಕಣ್ಣನವರಂತೂ ನಾಲ್ಕಾರು ದಿನಗಳ ಕಾಲ ತಮ್ಮ ಮೊಬೈಲ್ ಪೋನನ್ನೇ ಆಪ್ ಮಾಡಿದ್ದರು. ನಾ.ದಾಮೋದರ ಶೆಟ್ಟಿಯವರು ನಾನು ಕೇವಲ ಸಲಹಾ ಸಮಿತಿಯ ಸದಸ್ಯರಾಗಿದ್ದು ನಿಮ್ಮ ಹೆಸರನ್ನೂ ಸೂಚಿಸುತ್ತೇನೆ ಎಂದು ಪ್ರಶಸ್ತಿ ಬೇಡಿ ಬಂದವರಿಂದ ತಪ್ಪಿಸಿಕೊಳ್ಳಲು ಹವಣಿಸಿದರು. ಇದು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಬಹುತೇಕ ಸದಸ್ಯರುಗಳ ಸಮಸ್ಯೆಯಾಗಿದೆ. ಸರಕಾರ ಮೊದಲು ಮಾಡಬೇಕಾದ ಕೆಲಸವೇನೆಂದರೆ ಆಯ್ಕೆ ಸಮಿತಿಯ ಸದಸ್ಯರುಗಳ ಆಯ್ಕೆಯನ್ನೇ ಗುಟ್ಟಾಗಿಡಬೇಕು. ಪ್ರಶಸ್ತಿ ಆಕಾಂಕ್ಷಿಗಳಿಗೆ ಸದಸ್ಯರುಗಳ ಬಗ್ಗೆ ಮಾಹಿತಿ ಇಲ್ಲದಂತೆ ಮಾಡಬೇಕು. ಆಗಲಾದರೂ ಸದಸ್ಯರುಗಳು ಒತ್ತಡರಹಿತವಾಗಿ ಸಾಧಕರ ಸಾಧನೆಯನ್ನು ಮಾತ್ರ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಬಹುದಾಗಿದೆ.


ಇಷ್ಟೆಲ್ಲಾ ಪ್ರಶಸ್ತಿಗಳ ಆಯ್ಕೆ ಕಸರತ್ತು ಮಾಡಿದರೂ ನವೆಂಬರ್ ಒಂದರಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತದೋ ಇಲ್ಲವೋ ಎನ್ನುವ ಆತಂಕವಿತ್ತು. ಯಾಕೆಂದರೆ  ಬಿ.ಕೆ.ಸತ್ಯನಾರಾಯಣರಾವ್ ಎನ್ನುವ ಸ್ವಘೋಷಿತ ಕವಿ ಸಾಹಿತಿಯು ಪ್ರಶಸ್ತಿ ಆಯ್ಕೆಯನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿ ಸಮಾರಂಭಕ್ಕೆ ತಡೆ ನೀಡಬೇಕೆಂದು ಧಾವೆ ಹೂಡಿಬಿಟ್ಟಿದ್ದರು. ಕಳೆದ ಸಲವೂ ಸಹ ಸತ್ಯನಾರಾಯಣರಾವ್ ರವರು ತನಗೆ ಪ್ರಶಸ್ತಿ ಕೊಡದೇ ಅನ್ಯಾಯ ಮಾಡಲಾಗಿದೆ ಹೀಗಾಗಿ ಪ್ರಶಸ್ತಿ ಕೊಡಿಸಲು ಕೋರ್ಟು ಆಜ್ಞಾಪಿಸಬೇಕು ಎಂದು ಉಚ್ಚನ್ಯಾಯಾಲಕ್ಕೆ ಕೇಳಿಕೊಂಡಿದ್ದ. ಮುಂದಿನ ವರ್ಷದ ಪ್ರಶಸ್ತಿ ಆಯ್ಕೆಯಲ್ಲಿ ಸತ್ಯನಾರಾಯಣರಾವರವರ ಹೆಸರನ್ನು ಪರಿಗಣಿಸಬೇಕು ಎಂದು ಹೇಳಿದ ನ್ಯಾಯಾಲಯ ಕೇಸನ್ನು ಕ್ಲೋಸ್ ಮಾಡಿತ್ತು. ಸಲವೂ ಸಹ ಪ್ರಶಸ್ತಿಗೆ ಅರ್ಜಿ ಹಾಕಿಕೊಂಡು ಪ್ರಶಸ್ತಿ ಸಿಗದೇ ನಿರಾಶೆಯಾದ ಸತ್ಯನಾರಾಯಣರವರು ಮತ್ತೆ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ಕೊಡಲು ಕೋರಿಕೊಂಡರು. ನ್ಯಾಯಾಲಯವೇನಾದರೂ ಅವರ ಮಾತು ಮನ್ನಿಸಿದ್ದರೆ ಪ್ರಶಸ್ತಿ ಪ್ರಧಾನ ಸಮಾರಂಭವೇ ನಿಂತು ಹೋಗುವ ಭಯ ಸರಕಾರ ಹಾಗೂ ಆಯ್ಕೆ ಕಮಿಟಿಯನ್ನು ಕಾಡಿತ್ತು. ಆದರೆ ನ್ಯಾಯಾಧೀಶ ಆನಂದ ಬೈರಾರೆಡ್ಡಿಯವರು ಸರಕಾರಕ್ಕೆ ನೊಟೀಸ್ ಜಾರಿಗೊಳಿಸಿ ಹೆಚ್ಚುವರಿ ಅಡ್ವೋಕೇಟ್ ಜನರಲ್ .ಎಸ್.ಪೊಣ್ಣಪ್ಪರವರಿಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದರಾದರೂ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ತಡೆಯಾಜ್ಞೆ ಕೊಡಲು ನಿರಾಕರಿಸಿದರು. ಇದರಿಂದಾಗಿ ನಿರಾತಂಕವಾಗಿ ನವೆಂಬರ್ ಒಂದರಂದು ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆಯಿತು.

ಇದೆಲ್ಲಾ ಸುಖಾಂತ್ಯವಾಯಿತು ಅನ್ನುವುದರೊಳಗೆ ಸಚಿವೆ ಉಮಾಶ್ರೀಯವರಿಗೆ ಅವರದೇ ಪಕ್ಷದ ಮಂತ್ರಿ ಶಾಸಕರಿಂದ ವಿಘ್ನ ಶುರುವಾಯಿತು. ಪ್ರಶಸ್ತಿ ಆಯ್ಕೆಯಲ್ಲಿ ಉಮಾಶ್ರೀಯವರ ಕಾರ್ಯವೈಖರಿ ಕುರಿತು ಕೆಲವು ಶಾಸಕರು ಅಪಸ್ವರ ಎತ್ತಿದರುರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ಶುರುವಾಗುವುದಕ್ಕಿಂತ ಮುನ್ನ ಯಶವಂತಪುರದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೇಟಿಯಾದ ಶಾಸಕ ಮುನಿರತ್ನ ಹಾಗೂ ಶಾಸಕ ಆನೇಕಲ್ ಶಿವಣ್ಣ ರವರು ಮೌಖಿಕವಾಗಿ ಉಮಾಶ್ರೀಯವರ ವಿರುದ್ಧ ತಮ್ಮ ಅಸಹನೆ ವ್ಯಕ್ತಪಡಿಸಿದರುರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುವಂತೆ ತಮ್ಮ ಕ್ಷೇತ್ರದ ಅರ್ಹ ಸಾಧಕರ ಹೆಸರನ್ನು ತಾವು ಶಿಫಾರಸು ಮಾಡಿದ್ದರೂ ಗಮನ ಹರಿಸದೇ ತಮ್ಮ ಬಗ್ಗೆಯೇ ತಪ್ಪು ಅಭಿಪ್ರಾಯ ಮೂಡುವಂತೆ ಸಚಿವೆ ನಡೆದುಕೊಂಡಿದ್ದಾರೆ...ಆದ್ದರಿಂದ ಉಮಾಶ್ರೀಯವರ ಖಾತೆಯನ್ನು ತಕ್ಷಣ ಬದಲಾಯಿಸಬೇಕು ಹಾಗೂ ಸಮರ್ಥರಿಗೆ ಖಾತೆಯನ್ನು ವಹಿಸಿಕೊಡಬೇಕು ಎಂದು ಮುಖ್ಯಮಂತ್ರಿಯವರನ್ನು  ಶಾಸಕರುಗಳು ಆಗ್ರಹಪಡಿಸಿದರು. ಯಾವಾಗ ಸಿದ್ದರಾಮಯ್ಯನವರು ಇವರುಗಳ ದೂರಿಗೆ ಕಿವಿಗೊಡಲಿಲ್ಲವೋ ಆಗ ಪ್ರಶಸ್ತಿ ಆಯ್ಕೆಯಲ್ಲಿ ತಾರತಮ್ಯ ಮಾಡಿದ್ದಾರೆಂದು ಉಮಾಶ್ರೀಯವರ ಮೇಲೆ ಹೈಕಮಾಂಡಿಗೆ ದೂರು ನೀಡಲು ಕಾಂಗ್ರೆಸ್ ಶಾಸಕರುಗಳು ನಿರ್ಧರಿಸಿದರು.

ಇದಪ್ಪಾ ರಾಜಕಾರಣ ಅಂದ್ರೆ.....! ಹಲವಾರು ಪ್ರಶಸ್ತಿ ಆಕಾಂಕ್ಷಿಗಳು ಒಬ್ಬರಿಗಿಂತ ಹೆಚ್ಚು ರಾಜಕಾರಣಿಗಳ, ಶಾಸಕ ಮಂತ್ರಿಗಳ ಶಿಪಾರಸ್ಸು ಪತ್ರ ತಂದಿರುತ್ತಾರೆ. ಇರೋದೆ 60 ಪ್ರಶಸ್ತಿಗಳು. ಶಿಪಾರಸ್ಸು ತಂದವರಿಗೆಲಾ ಪ್ರಶಸ್ತಿ  ಕೊಡಲು ಸಾಧ್ಯವಿಲ್ಲ ಎನ್ನುವ ಕನಿಷ್ಟ ಪರಿಜ್ಞಾನವೂ ಇಲ್ಲದ ಶಾಸಕರುಗಳಿಗೆ ಬುದ್ದಿ ಹೇಳುವವರಾದರೂ ಯಾರು. ಶಿಪಾರಸ್ಸುಗಳಿಂದಲೇ ಪ್ರಶಸ್ತಿ ಪಡೆಯುವವರನ್ನು ಆಯ್ಕೆ ಮಾಡುವುದಿದ್ದರೆ ಪ್ರಶಸ್ತಿ ಆಯ್ಕೆ ಕಮಿಟಿಯಾದರೂ ಯಾಕಿರಬೇಕು. ಹೋಗಲಿ ಒಬ್ಬ ಸಚಿವರ ಖಾತೆಯಲ್ಲಿ ಇನ್ನೊಬ್ಬರು ಮೂಗು ತೂರಿಸಬಾರದು ಎನ್ನುವ ಸಾಮಾನ್ಯ ಜ್ಯಾನವೂ ಹುಂಬ ರಾಜಕಾರಣಿಗಳಿಗಿಲ್ಲದ್ದು ಖೇದಕರ. ಮೊಟ್ಟ ಮೊದಲ ಬಾರಿಗೆ ರಾಜಕೀಯ ಒತ್ತಡಗಳನ್ನು ಮೀರಿ ಸಾಧನೆಯ ಮಾನದಂಡದ ಮೇಲೆ ರಾಜ್ಯೋತ್ಸವ ಪ್ರಶಸ್ತಿಗಳು ಹಂಚಿಕೆಯಾಗಿವೆ. ಇಂತಹ ಪಾರದರ್ಶಕ ಆಯ್ಕೆಗಳು ಮುಂದಿನ ವರ್ಷಗಳ ಪ್ರಶಸ್ತಿಗಳ ಆಯ್ಕೆಗಳಿಗೆ ಮಾದರಿಯಾಗಿವೆ. ಆದರೆ ಅದಕ್ಕೂ ಅಡೆತಡೆಯನ್ನೊಡ್ಡುವ ಹುನ್ನಾರಗಳು ಸ್ವಾರ್ಥಿ ರಾಜಕಾರಣಿಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಂತಹುದಕ್ಕೆಲ್ಲಾ ಮುಖ್ಯಮಂತ್ರಿಗಳು ಸೊಪ್ಪುಹಾಕಬಾರದು ಹಾಗೂ ಸಚಿವೆ ಅಧೀರರಾಗಬಾರದು. ಮೊದಲು ಸಾಹಿತ್ಯಕ-ಸಾಂಸ್ಕೃತಿಕ ಕ್ಷೇತ್ರದವರು ಶಿಪಾರಸ್ಸು ರಾಜಕೀಯವನ್ನು ಹಾಗೂ ಸ್ವಹಿತಾಸಕ್ತಿಯ ರಾಜಕೀಯದವರ ಬೇಜವಾಬ್ದಾರಿ ನಡುವಳಿಕೆಯನ್ನು ಖಂಡಿಸಬೇಕು. ಯಾವುದೇ ಉತ್ತಮ ಕೆಲಸಗಳಾದಾಗ ಅಂತಹುದಕ್ಕೆ ಅಡ್ಡಗಾಲು ಹಾಕುವ ಶಕ್ತಿಗಳ ವಿರುದ್ಧ ಪ್ರತಿಭಟಿಸಬೇಕು. ಬಾರಿಯಂತಹ ಪಾರದರ್ಶಕವಾದ ರೀತಿಯಲ್ಲಿ ಸರಕಾರದ ಎಲ್ಲಾ ಪ್ರಶಸ್ತಿಗಳೂ  ನಿಜವಾದ ಸಾಧಕರಿಗೆ ಶಿಪಾರಸ್ಸು ಅರ್ಜಿ ಮರ್ಜಿಗಳ ಹಂಗಿಲ್ಲದೇ ದೊರೆಯುವಂತಾಗಬೇಕು. ಆಗಲೆ ಪ್ರಶಸ್ತಿಗಳಿಗೆ ಮೌಲ್ಯ ಪ್ರಾಪ್ತಿಯಾಗುವುದು ಹಾಗೂ ಪ್ರಶಸ್ತಿ ಪಡೆದವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುವುದು. ಪ್ರಭಾವ ಬೀರುವವರಿಗೆ ಮಾತ್ರ ಪಶಸ್ತಿ ಕೊಡಲಾಗುವುದೆಂಬ ಕಳಂಕ ದೂರಾಗುವುದು. ಮೊಟ್ಟ ಮೊದಲು ಶಕ್ತ ರಾಜಕಾರಣದ ಹಿಡಿತದಿಂದ ಸರಕಾರಿ ಪ್ರಶಸ್ತಿಗಳನ್ನು ಮುಕ್ತಗೊಳಿಸಿ ನಿಜವಾದ ಸಾಧಕರನ್ನು  ಗುರುತಿಸಿ ಗೌರವಿಸುವುದೇ ಪ್ರಶಸ್ತಿ ಪುರಸ್ಕಾರಗಳ ಆದ್ಯತೆಯಾಗಬೇಕಿದೆ. ಇದಕ್ಕಾಗಿ ಎಲ್ಲಾ ಪ್ರಜ್ಞಾವಂತರೂ ಸರಕಾರದ ಮೇಲೆ ಒತ್ತಡವನ್ನು ಹೇರಬೇಕಿದೆ. ಅಂತಹ  ಒಂದು ಸಾರ್ಥಕ ಪ್ರಯತ್ನ ಸಲದ ರಾಜ್ಯೋತ್ಸವದ ಪ್ರಶಸ್ತಿಯಲ್ಲಿ ಮಾಡಲಾಗಿದ್ದು. ಅದಕ್ಕೆ ಕಾರಣೀಕರ್ತರಾದ  ಮುಖ್ಯಮಂತ್ರಿ ಸಿದ್ದರಾಮಯ್ಯ, ಇಲಾಖೆ ಸಚಿವೆ ಉಮಾಶ್ರೀ ಹಾಗೂ ಪ್ರಶಸ್ತಿ ಆಯ್ಕೆ ಕಮಿಟಿಯ ಸದಸ್ಯರೆಲ್ಲರನ್ನೂ ಅಭಿನಂದಿಸಬೇಕಿದೆ
ಈ ಲೇಖನದ ಉದ್ದೇಶ ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲವೂ ಸರಿಯಾಗಿದೆ. ಪರಿಪೂರ್ಣವಾದ  ಆಯ್ಕೆ ಆಗಿದೆ ಎಂದು ಹೇಳುವುದಲ್ಲ. ಪ್ರಶಸ್ತಿ ಪಡೆದ ಎಲ್ಲರೂ ಅರ್ಹರಾಗಿದ್ದಾರೆಂದು ಸಮರ್ಥಿಸಿಕೊಳ್ಳುವುದೂ ಅಲ್ಲ.  ಅಥವಾ ಆಳುವ ವರ್ಗದವರನ್ನು ಹೊಗಳುವ ಉದ್ದೇಶವೂ ಇಲ್ಲ.  ಈ ಹಿಂದಿನ ವರ್ಷಗಳ ಪ್ರಶಸ್ತಿಗಳಲ್ಲಿ ಕಾಲು ಭಾಗದಷ್ಟು ಯೋಗ್ಯರಿಗೆ ಪ್ರಶಸ್ತಿ ದೊರೆತಿದ್ದರೆ ಮುಕ್ಕಾಲು ಭಾಗ ಪುರಸ್ಕೃತರು ವಸೀಲಿ ಭಾಜಿಯಿಂದಾಗಿ ಪ್ರಶಸ್ತಿ ಪಡೆದವರಾಗಿದ್ದರು. ಆದರೆ ಈ ಸಲ ಆಯ್ಕೆ ಆದವರಲ್ಲಿ ಮುಕ್ಕಾಲು ಭಾಗ ಪ್ರಶಸ್ತಿಗೆ ಅರ್ಹರಿದ್ದು ಕಾಲು ಭಾಗ ಮಾತ್ರ ಅದು ಹೇಗೋ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಹಾಗೆ ಹುಡುಕುತ್ತಾ ಹೋದರೆ ಕನ್ನಡ ನಾಡಿನಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಸಾಧನೆಯಲ್ಲಿ ಮುಂದಿದ್ದಾರೆ. ಅಸಾಧ್ಯವನ್ನು ಸಾಧಿಸಿದ ಹಲವಾರು ಜನರಿಗೆ ಈ ವರೆಗೂ ಪ್ರಶಸ್ತಿಗಳೇ ಸಿಕ್ಕಿಲ್ಲ. ಎಲ್ಲಾ ಸಾಧಕರಿಗೂ ಪ್ರಶಸ್ತಿ ಕೊಡಲು ಸಾಧ್ಯವೂ ಇಲ್ಲ. ಇರುವುದರಲ್ಲಿ  ಉತ್ತಮರನ್ನು ನೋಡಿ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಬೇಕಾದ ಅನಿವಾರ್ಯತೆ ಪ್ರಶಸ್ತಿ ಆಯ್ಕೆ ಸಮಿತಿಯದಾಗಿದೆ. ಈ ಸಲದ ಕಮಿಟಿಯವರು ಅರ್ಹರನ್ನು ಆಯ್ಕೆ ಮಾಡಲು ಬೇಕಾದಷ್ಟು ಶ್ರಮಿಸಿದ್ದಾರೆ. ಆದರೂ ಅರಿವಿನ ಕೊರತೆಯೋ, ಯಾರೋ ದಿಕ್ಕುತಪ್ಪಿಸಿ ತಪ್ಪು ಮಾಹಿತಿ ಕೊಟ್ಟಿದ್ದರಿಂದಲೋ ಅಥವಾ ಉದ್ದೇಶಪೂರ್ವಕಾವಾಗಿಯೋ ಕೆಲವು ಹೆಸರುಗಳು ಅರ್ಹರ ಜೊತೆಗೆ ಸೇರಿದ್ದಂತೂ ಸತ್ಯ. ಸಧ್ಯ  ಯಾವುದೇ ಶಿಪಾರಸ್ಸು ವಸೀಲಿ ಇಲ್ಲದೇ ಮುಕ್ಕಾಲು ಭಾಗವಾದರೂ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರಕಿದ್ದು  ಸಂತಸಕರ. ಇದಕ್ಕಾದರೂ ಸಂಬಂಧಿಸಿದವರನ್ನು ಅಭಿನಂದಿಸಬೇಕಿದೆ.  ಮುಂದಿನ ವರ್ಷದ ಪ್ರಶಸ್ತಿ ಆಯ್ಕೆಯಲ್ಲಿ ಇನ್ನೂ ಕಟ್ಟು ನಿಟ್ಟಿನ ಶಿಸ್ತನ್ನು ರೂಢಿಸಿಕೊಂಡು ಸಾಧಕರನ್ನು ಅರ್ಜಿ ಮರ್ಜಿಗಳಿಲ್ಲದೇ ಗುರುತಿಸಿ ಗೌರವಿಸಬೇಕಾದ ಹೊಣೆಗಾರಿಕೆ ಸರಕಾರದ ಮೇಲಿದೆ. ಏನೇ ಆಗಲಿ ಸರಕಾರಿ ಪ್ರಶಸ್ತಿಗಳು ಅರ್ಹರಿಗೆ ಮಾತ್ರ ದೊರಕಬೇಕಿದೆ. 


                              -ಶಶಿಕಾಂತ ಯಡಹಳ್ಳಿ                             
               




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ