ಮಂಗಳವಾರ, ಜೂನ್ 9, 2015

ಅಗಲಿದ ರಂಗಚೇತನಗಳಿಗೆ ರಂಗನಮನ :


ಅಬ್ದುಲ್ಸಾಬ್ ಇನ್ನಿಲ್ಲ, ರಾಜಶೇಖರ್ ವಾಪಸ್ ಬರೋಲ್ಲ.......

ಕೇವಲ ಒಂದೇ ವಾರದ ಅಂತರದಲ್ಲಿ ಕನ್ನಡ ರಂಗಭೂಮಿ ಇಬ್ಬರು ರಂಗ ಕಲಾವಿದರನ್ನು ಕಳೆದುಕೊಂಡಿತು. ಒಬ್ಬರು ವೃತ್ತಿ ರಂಗಭೂಮಿಯ ದಿಗ್ಗಜ ಹಿರಿಯ ನಟ ಅಬ್ದುಲ್ಸಾಬ್ ಅಣ್ಣಿಗೇರಿಯವರಾದರೆ ಇನ್ನೊಬ್ಬ ಯುವ ರಂಗಕರ್ಮಿ ರಾಜಶೇಖರ್ ನಿಲೋಗಲ್ಮಠ. ರಂಗಭೂಮಿಗೆ ತಮ್ಮದೇ ಆದ ರೀತಿಯಲ್ಲಿ ರಂಗಭೂಮಿಗೆ ಕೊಡುಗೆಯನ್ನು ಕೊಟ್ಟು ರಂಗಭೂಮಿಯ ಬೆಳವಣಿಗೆಗೆ ಜೀವ ಸವೆಸಿದ ರಂಗಜೀವಗಳಿಗೆ ರಂಗನಮನಗಳು. ಅಗಲಿದ ರಂಗಪ್ರತಿಭೆಗಳ ಕುರಿತು ಪುಟ್ಟ ಪರಿಚಯ ಇಲ್ಲಿದೆ.

ಗ್ರಾಮೀಣ ರಂಗಪ್ರತಿಭೆ ಅಬ್ದುಲ್ಸಾಬ್ ಅಣ್ಣಿಗೇರಿ :

ಅದು 60 ದಶಕ, ವೃತ್ತಿ ಕಂಪನಿ ನಾಟಕಗಳ ಸುವರ್ಣ ದಿನಮಾನಗಳು. ಕಂಪನಿ ನಾಟಕಗಳು ನಾಡಿನಲ್ಲಿ  ಸಾಂಸ್ಕೃತಿಕ ಸಂಚಲನವನ್ನುಂಟು ಮಾಡುವ ಕಾಲವದು. ನಾಟಕಾಸಕ್ತಿ ಹಾಗೂ ಹೊಟ್ಟೆಪಾಡಿಗಾಗಿ ಗ್ರಾಮೀಣ ಪ್ರದೇಶದ ಪ್ರತಿಭೆಗಳು ಬಹುತೇಕ ನಾಟಕ ಕಂಪನಿಗಳಲ್ಲಿ ಸೇರಿಕೊಂಡಿದ್ದರು. ಗದಗ ಜಿಲ್ಲೆಯ ಮುಳುಗುಂದ ಊರಿನ ಅಬ್ದುಲ್ಸಾಬ್ ಅಣ್ಣಿಗೇರಿ ಎನ್ನುವ ಹದಿನೈದು ವರ್ಷ ವಯಸ್ಸಿನ ಬಾಲಕ ಬಣ್ಣದ ಲೋಕದತ್ತ ಆಕರ್ಷಿತನಾದ. ಬಾಲನಟನಾಗಿ ಕಂಪನಿ ನಾಟಕದಲ್ಲಿ 1954ರಲ್ಲಿ ಸೇರಿಕೊಂಡ ಅಬ್ದುಲ್ಸಾಬ್ಗೆ ರಂಗಭೂಮಿಯೇ ಮನೆಯಾಯಿತು, ಬದುಕಾಯಿತು, ಭವಿಷ್ಯವೂ ಆಯಿತು. ಗುಬ್ಬಿ ವೀರಣ್ಣನವರ ಕಣ್ಣಿಗೆ ಬಿದ್ದು ಗುಬ್ಬಿ ಕಂಪನಿಯಲ್ಲಿ ಹಲವಾರು ವರ್ಷಗಳ ಕಾಲ ನಟನಾಗಿ ತೊಡಗಿಸಿಕೊಂಡ ಅಬ್ದುಲ್ಸಾಬ್ ನಂತರ ಹಲವಾರು ವೃತ್ತಿ ಕಂಪನಿಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದರು. ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಅಭಿನಯಿಸುತ್ತಾ ಜನಪ್ರೀಯತೆಯನ್ನು ಪಡೆದರು. ಅಬ್ದುಲ್ಸಾಬ್ರವರು ಅತ್ಯಮೋಘವಾಗಿ ಅಭಿನಯಿಸಿದ ಪರಷುರಾಮ, ರಾಮ, ಅಲ್ಲಮಪ್ರಭು, ಸತ್ಯಹರಿಶ್ಚಂದ್ರ ಪಾತ್ರಗಳಂತೂ ಎಂದೂ ಮರೆಯಲಾಗದಂತಹವು. ಕಲೆ ಎನ್ನುವುದು ಧರ್ಮಾತೀತವಾದದ್ದು ಎನ್ನುವುದಕ್ಕೆ ಸಾಕ್ಷಿಯಂತಿದ್ದ ಅಬ್ದುಲ್ಸಾಬ್ರವರು ರಂಗಭೂಮಿಯಲ್ಲಿ ಕೋಮುಸೌಹಾರ್ಧದ ಪ್ರತೀಕವಾಗಿದ್ದರು.

ಅವರ ಪ್ರತಿಭೆ ಹಾಗೂ ಜನಪ್ರೀಯತೆಗಳು ಅವರನ್ನು ರಂಗಭೂಮಿಯ ಚೌಕಟ್ಟನ್ನು ದಾಟಿಸಿ ಚಲನಚಿತ್ರ ಕ್ಷೇತ್ರಕ್ಕೂ ಕರೆದೊಯ್ದಿತು. ನೋಡುವುದಕ್ಕೆ ತೆಲುಗಿನ ಸುಪ್ರಸಿದ್ದ ನಟ-ನಾಯಕ ದಿ.ಎನ್.ಟಿ.ಆರ್ ರವರನ್ನೇ ಹೋಲುತ್ತಿದ್ದರು. ಗಾನಯೋಗಿ ಪಂಚಾಕ್ಷರಿ ಗವಾಯಿ, ಮಮತೆಯ ಮಡಿಲು.... ಸೇರಿದಂತೆ ಕೆಲವಾರು ಸಿನೆಮಾಗಳಲ್ಲೂ ತಮ್ಮ ಅಭಿನಯ ಚತುರತೆ ಮೆರೆದ ಅಬ್ದುಲ್ಸಾಬ್ರವರನ್ನು ಹಿಂದಿ ಚಲನಚಿತ್ರ ರಂಗವೂ ಕೈಬೀಸಿ ಕರೆಯಿತು. ದಸ್ತಾನೆ, ಮಜನೋ, ಮೈ ಚುಪ್ ನಹಿ ರಹೂಂಗಾ, ಜಂಗ್ ಸೇರಿದಂತೆ ಕೆಲವಾರು ಹಿಂದಿ ಸಿನೆಮಾಗಳಲ್ಲೂ ಸಹ ಅಬ್ದುಲ್ಸಾಬ್ ನಟಿಸಿದ್ದರು. ಕನ್ನಡ ಹಾಗೂ ಹಿಂದಿ ಭಾಷೆಯ ಮೇಲಿರುವ ಪ್ರಭುತ್ವ ಮತ್ತು ಅಭಿನಯ ಕಲೆಯಲ್ಲಿರುವ ಪ್ರತಿಭೆ ಎರಡೂ ಸೇರಿ ಅಬ್ದುಲ್ಸಾಬ್ರವರನ್ನು ಜನಪ್ರೀಯಗೊಳಿಸಿದ್ದರು. ಅಬ್ದುಲ್ಸಾಬ್ರವರ ಪತ್ನಿ ಪುಷ್ಪಮಾಲಾ ಅಣ್ಣಿಗೇರಿಯವರೂ ಸಹ ವೃತ್ತಿ ಕಂಪನಿ ನಾಟಕಗಳ ಜನಪ್ರೀಯ ನಟಿಯಾಗಿದ್ದವರು ಈಗಲೂ ನಟಿಸುತ್ತಿದ್ದಾರೆ.

ಅಬ್ದುಲ್ಸಾಬ್ರವರ ಪ್ರತಿಭೆ ಹಾಗೂ ಕೊಡುಗೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ, ಹಾಗೆಯೇ ಕಳೆದ ವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರಕಾರ ಘೋಷಿಸಿತ್ತಾದರೂ ಅನಾರೋಗ್ಯದಿಂದ ಬೆಂಗಳೂರಿಗೆ ಬಂದು ಪ್ರಶಸ್ತಿ ಸ್ವೀಕರಿಸಲು ಅಬ್ದುಲ್ಸಾಬ್ರವರಿಗೆ ಸಾಧ್ಯವಾಗಲಿಲ್ಲ. ಆದರೆ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನವನ್ನು ಸರಕಾರ ಹಮ್ಮಿಕೊಂಡಿರುವಾಗ ಅಬ್ದುಲ್ಸಾಬ್ರವರನ್ನು ಆಹ್ವಾನಿಸಿ ಪ್ರಶಸ್ತಿಯನ್ನು ವಿಶೇಷವಾಗಿ ಕೊಡಮಾಡಿದ್ದು ದಾಖಲಾರ್ಹ ಸಂಗತಿಯಾಗಿದೆ ಹಾಗೂ ಕಲಾವಿದನೊಬ್ಬನಿಗೆ ಸರಕಾರ ಕೊಡಮಾಡಬಹುದಾದ ಗೌರವವೂ ಆಗಿದೆ. ಅದಕ್ಕೆ ಅಬ್ದುಲ್ಸಾಬ್ ಅತ್ಯಂತ ಯೋಗ್ಯರೂ ಆಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ವಯೋಸಹಜ ಆರೋಗ್ಯದ ಸಮಸ್ಯೆಗಳಿಂದ ತೀವ್ರ ಅನಾರೋಗ್ಯಕ್ಕೊಳಗಾದ ಅಬ್ದುಲ್ಸಾಬ್ರವರು ತಮ್ಮ ಎಪ್ಪತ್ತಾರನೇ ವಯಸ್ಸಿನಲ್ಲಿ 2015 ಜೂನ್ 1 ರಂದು ಹುಬ್ಬಳ್ಳಿಯ ಗಣೇಶಪೇಟೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ರಂಗಭೂಮಿಗಾಗಿ ಬದುಕು ಸವೆಸಿ ಅಪಾರವಾದ ಕೊಡುಗೆ ನೀಡಿದಂತಹ ಅಬ್ದುಲ್ಸಾಬ್ರವರು ವೃತ್ತಿ ರಂಗಭೂಮಿ ಎಂದೂ ಮರೆಯದಂತಾ ಪ್ರತಿಭೆ.

ರಂಗಭೂಮಿಯನ್ನೇ ಬದುಕಾಗಿಸಿಕೊಂಡ ರಾಜಶೇಖರ್ ಇನ್ನಿಲ್ಲ :

ಎರಡೂ ಕಾಲು ದಶಕದ ಹಿಂದೆ ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರಿಂದ ಬದುಕು ಕಟ್ಟಿಕೊಳ್ಳಬೇಕೆಂದು ಬೆಂಗಳೂರಿಗೆ ಬಂದ ಯುವಕ ರಾಜಶೇಖರ್ ನಿಲೋಗಲ್ಮಠ ರಂಗಾಸಕ್ತಿಯಿಂದ ಬಂದು ಸೇರಿದ್ದುಅಭಿನಯ ತರಂಗರಂಗಶಾಲೆಯನ್ನು. ನಂತರ ರಂಗಭೂಮಿಯನ್ನೇ ವೃತ್ತಿಯಾಗಿ ತೆಗೆದುಕೊಂಡು ನಟನಾಗಿ, ರಂಗ ನಿರ್ದೇಶಕನಾಗಿ, ನಾಟಕಕಾರನಾಗಿ... ನಾಟಕ ನಿರ್ಮಿತಿಯ ಎಲ್ಲಾ ಆಯಾಮಗಳಲ್ಲೂ ತನ್ನನ್ನು ತೊಡಗಿಸಿಕೊಂಡ. ನಾಟಕವೇ ಆತನ ಉಸಿರು, ವೃತ್ತಿ, ಬದುಕು ಎಲ್ಲಾ ಆಗಿತ್ತು.

ಚಿತ್ರಾ, ಅಭಿನಯ ತರಂಗ, ಸಂಚಯ, ಸ್ನೇಹ ಸಮೂಹ... ಹೀಗೆ ಕೆಲವಾರು ರಂಗತಂಡಗಳಲ್ಲಿ ಸಕ್ರೀಯ ನಟನಾಗಿ ಪ್ರಮುಖ ಪಾತ್ರಗಳಲ್ಲಿ ರಾಜಶೇಖರ್ ಅಭಿನಯಿಸಿ ಗಮನಸೆಳೆದಿದ್ದರು. ಶೋಕಚಕ್ರ, ಚಂದ್ರಹಾಸ, ಬರ, ಕೇಳು ಜನಮೇಜಯ, ಶಸ್ತ್ರಪರ್ವ, ಪ್ರತಿಬಿಂಬಗಳು... ಸಂಕ್ರಾತಿ, ಚಿದಂಬರ ರಹಸ್ಯ, ಕೋರಿಯೋಲೀನಸ್... ಹೀಗೆ ಹಲವಾರು ನಾಟಕಗಳಲ್ಲಿ ನಟಿಸಿ ತನ್ನ ಅಭಿನಯ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಅಭಿನಯ ತರಂಗ ಹಾಗೂ ಚಿತ್ರಾ ತಂಡಗಳಿಗೆ ಹಲವಾರು ಬೀದಿನಾಟಕಗಳನ್ನು ಸ್ವತಃ ರಚಿಸಿ ನಿರ್ದೇಶಿಸಿದ್ದರು. ನೇಪತ್ಯದಲ್ಲಿ ನಟರಿಗೆ ಮೇಕಪ್ ಅಗತ್ಯಬಿದ್ದಾಗ ಮೇಕಪ್ ಮಾಡಿದರು, ಬ್ಯಾಕ್ಸ್ಟೇಜ್ನಲ್ಲಿ ಅಗತ್ಯವಿದ್ದಾಗಲೆಲ್ಲಾ ತೊಡಗಿಸಿಕೊಂಡಿದ್ದರು. ಹೆಚ್ಚೂ ಕಡಿಮೆ ರಂಗನಿರ್ಮಿತಿಯಲ್ಲಿ ಆಲ್ರೌಂಡರ್ ಆಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದನ್ನು ಬೆಂಗಳೂರಿನ ಆಧುನಿಕ ಹವ್ಯಾಸಿ ರಂಗಭೂಮಿ ಮರೆಯುವಂತಿಲ್ಲ. ರಂಗಭೂಮಿಯ ಕೆಲಸದಲ್ಲಿ ಬದ್ಧತೆ ಹಾಗೂ ಸಿದ್ಧತೆಗಳಿಗೆ ರಾಜಶೇಖರ್ ಮಾದರಿಯಾಗಿದ್ದಾರೆ.

ಆತ್ಮತೃಪ್ತಿಗಾಗಿ ರಂಗಭೂಮಿಯಲ್ಲಿ ಅವಿರತವಾಗಿ ದುಡಿದ ರಾಜಶೇಖರ್ ಹೊಟ್ಟೆಪಾಡಿಗಾಗಿ ಧಾರಾವಾಹಿಗಳಿಗೆ ಚಿತ್ರಕಥೆ ಬರೆಯುವುದನ್ನು ವೃತ್ತಿಯಾಗಿಸಿಕೊಂಡರು. ಬೆಳದಿಂಗಳಾಗಿ ಬಾ, ಬೃಂದಾವನ...  ಧಾರಾವಾಹಿಯಿಂದ ಹಿಡಿದು ರಥಸಪ್ತಮಿಯವರೆಗೂ ಕಳೆದ ಹದಿನೈದು ವರ್ಷಗಳಿಂದ ಬರೆದೇ ಬದುಕಿದರು. ಆಗಾಗ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿದರು. ದಿನವೊಂದಕ್ಕೆ ಎರಡರಿಂದ ಮೂರು ಧಾರವಾಹಿಗಳನ್ನು ಬರೆಯುವ ಒತ್ತಡ ನಿಭಾಯಿಸಲು ಕುಡಿತವನ್ನು ರೂಡಿಸಿಕೊಂಡರು. ಕೌಟುಂಬಿಕ ಸಮಸ್ಯೆಗಳು ರೂಢಿಸಿಕೊಂಡ ಕುಡಿತವನ್ನು ಹೆಚ್ಚಿಸಿದವು. ಕುಡಿತದ ತೀವ್ರತೆ ಹೆಚ್ಚಾಗಿ ಅದು ಜಾಂಡೀಸ್ಗೆ ತಿರುಗಿ 2015, ಮೇ 27 ರಂದು ರಾಜಶೇಖರ್ ತಮ್ಮ ನಿವಾಸದಲ್ಲಿ ಅಸುನೀಗಿದರು. ಕೇವಲ 46 ಹರೆಯದ ವಯಸ್ಸಲ್ಲಿ ಅಕಾಲಿಕವಾಗಿ ರಾಜಶೇಖರ್ ಮರಣ ಹೊಂದಿದ್ದು ಅವರ ಆತ್ಮೀಯರಿಗೆ, ರಂಗ ಬಂಧುಗಳಿಗೆ ನಿಜಕ್ಕೂ ಆಘಾತಕಾರಿಯಾಗಿದೆ. ರಾಜಶೇಖರ್ ತಮ್ಮ ಪ್ರತಿಭೆ ಹಾಗೂ ರಂಗಭೂಮಿಯ ಮೇಲಿದ್ದ ನಿಷ್ಟೆಗಳಿಗೆ ಆದರ್ಶವಾಗಿರುವಂತೆಯೇ ಅವರ ಬದುಕುರೂಢಿಸಿಕೊಂಡ ದೌರ್ಬಲ್ಯಗಳಿಂದ ದುರಂತ ತಪ್ಪಿದ್ದಲ್ಲಎನ್ನುವ ಸಂದೇಶವನ್ನೂ ಸಾರುವಂತಿದೆ.

ವಯೋವೃದ್ದರಾಗಿದ್ದ ಅಬ್ದುಲ್ಸಾಬ್ರವರ ಕ್ರಿಯಾಶೀಲತೆ ಬತ್ತಿತ್ತು, ರಂಗಭೂಮಿಯಿಂದ ನಿವೃತ್ತಿ ಹೊಂದಿ ಬಹಳವೇ ಕಾಲವಾಗಿತ್ತು. ಆದರೆ ರಾಜಶೇಖರ್ಗೆ ಇನ್ನೂ ಬೇಕಾದಷ್ಟು ತಾಕತ್ತಿತ್ತು. ರಂಗಶಾಲೆಯೊಂದನ್ನು ಮಾಡಬೇಕು ಎನ್ನುವ ಮಹತ್ವಾಕಾಂಕ್ಷೆಯೂ ಇತ್ತು. ಆದರೆ... ಅನಾರೋಗ್ಯ ಅವಕಾಶವನ್ನು ಕೊಡಲಿಲ್ಲ. ಕಲಾವಿದರ ಸಾವು ಯಾವಾಗಲೂ ನೋವು ತರುವಂತಹುದೇ. ಆದರೆ .. ಸಾವಿನ ನಂತರ ಬದುಕಿರುವವರು ತೋರುವ ತಾರತಮ್ಯ ಮಾತ್ರ ಅಕ್ಷಮ್ಯ. ಅಬ್ದುಲ್ಸಾಬ್ ರವರ ಮನೆಗೆ  ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಣಿ ಉಮಾಶ್ರೀರವರೇ ಹುಬ್ಬಳ್ಳಿಗೆ ಹೋಗಿ ಸಾಂತ್ವನ ಹೇಳಿ ಸಹಾಯ ಮಾಡಿಬಂದರು. ನಾಟಕ ಅಕಾಡೆಮಿಯ ಅಧ್ಯಕ್ಷರು ಓಡಿ ಹೋಗಿ ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಪತ್ರಿಕೆಗಳಿಗೆ ಹೇಳಿಕೆಗಳನ್ನು ಕೊಟ್ಟರು. ಆದರೆ ರಾಜಶೇಖರ್ ಅದೇನು ಪಾಪ ಮಾಡಿದ್ದ. ಬೆಂಗಳೂರಿನಲ್ಲೇ ಶವಸಂಸ್ಕಾರ ಮಾಡಲಾಯಿತಾದರೂ ಅಕಾಡೆಮಿಯ ಅಧ್ಯಕ್ಷರಿಗಿರಲಿ ಒಬ್ಬನೇ ಒಬ್ಬ ಸದಸ್ಯ ಕೂಡಾ ಸಾವಿನ ದಿನವೂ ಬರಲಿಲ್ಲ, ಸಾವಿನ ನಂತರವೂ ಮನೆಗೆ ಹೋಗಿ ಸಾಂತ್ವನ ಹೇಳಲಿಲ್ಲ. ಎರಡು ದಶಕಗಳ ಕಾಲ ತನ್ನ ಬದುಕನ್ನು ಮೋಂಬತ್ತಿಯ ಹಾಗೆ ಸುಟ್ಟುಕೊಂಡು ಕನ್ನಡ ರಂಗಭೂಮಿಗೆ ಬೆಳಕನ್ನು ಕೊಡಲು ಪ್ರಯತ್ನಿಸಿದ ಒಬ್ಬ ಕಲಾವಿದ ತೀರಿಕೊಂಡಾಗ ಅಕಾಡೆಮಿಯಾಗಲೀ, ಸಂಸ್ಕೃತಿ ಇಲಾಖೆಯಾಗಲಿ ಸ್ಪಂದಿಸದೇ ಇರುವುದು ಆಘಾತಕಾರಿ ವಿಷಯವಾಗಿದೆ. ಕನಿಷ್ಟ ಒಂದು ಶ್ರದ್ದಾಂಜಲಿ ಸಭೆಯನ್ನು ಆಯೋಜಿಸಿ ರಾಜಶೇಖರನಿಗೊಂದು ರಂಗಗೌರವ ಸಲ್ಲಿಸುವಲ್ಲೂ ಸಹ ಸರಕಾರಿ ಕೃಪಾಪೋಷಿತ ಸಾಂಸ್ಕೃತಿಕ ಸಂಸ್ಥೆಗಳು ವಿಫಲವಾಗಿದ್ದೊಂದು ವಿಪರ್ಯಾಸ. ಇದು ಒಬ್ಬ ಕ್ರಿಯಾಶೀಲ ರಂಗಕರ್ಮಿಗೆ ಮಾಡಿದ ಅವಮಾನವೂ ಆಗಿದೆ. ಬದುಕಿದ್ದಾಗಂತೂ ಯಾವುದೇ ಇಲಾಖೆ / ಅಕಾಡೆಮಿ ರಾಜಶೇಖರರ ರಂಗಕೈಂಕರ್ಯವನ್ನು ಗುರುತಿಸಿ ಒಂದೇ ಒಂದು ಪ್ರಶಸ್ತಿಯನ್ನು ಕೊಡಲಿಲ್ಲ ಈಗ ಕಲಾವಿದ ರಂಗಕಲೆಗಾಗಿ ದುಡಿದುಡಿದು ಮಡಿದಾಗಲೂ ಕನಿಷ್ಟ ಮಾತಿನ ಸಾಂತ್ವನವನ್ನೂ ಕೊಡಲು ಸಾಧ್ಯವಾಗಿಲ್ಲ ಎಂದ ಮೇಲೆ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಮಾನವೀಯತೆಯನ್ನೇ ಸಂದೇಶಿಸುವಂತಾಗಿದೆ. ಅದಕ್ಕಿಂತ ಹೆಚ್ಚಾಗಿ ಸಾವಿನಲ್ಲೂ ತಾರತಮ್ಯ ತೋರಿದ್ದಂತೂ ಅಕ್ಷಮ್ಯ.  . 

                                                                      -ಶಶಿಕಾಂತ ಯಡಹಳ್ಳಿ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ