ಬುಧವಾರ, ಡಿಸೆಂಬರ್ 24, 2014

ವಿನೋದದ ಮೂಲಕ ವಿಷಾದವನ್ನು ಹೇಳುವ “ಇಲ್ಲಾ...ಅಂದ್ರೆ...ಇದೆ....”





 ಇಲ್ಲಾ...ಅಂದ್ರೆ...ಇದೆ ಇದೊಂದು ವಿಚಿತ್ರ ಹೆಸರಿನ ಸಚಿತ್ರ ನಾಟಕ. ಪುರುಷಪ್ರಧಾನ ವ್ಯವಸ್ಥೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಬ್ಬರು ತಮ್ಮ ಬದುಕು ಬವಣೆಗಳನ್ನು ರಂಗದಂಗಳದಲ್ಲಿ ವಿನೋದಮಯವಾಗಿ ಚರ್ಚಿಸುತ್ತಲೇ ವಿಷಾದವನ್ನು ಹುಟ್ಟಿಸುವುದು ನಾಟಕದ ಅಂತಃಸತ್ವವಾಗಿದೆ. ಥೀಮಾ ಎನ್ನುವ ಹೊಸದಾಗಿ ಅಸ್ತಿತ್ವಕ್ಕೆ ಬಂದ ರಂಗತಂಡ ಮೊದಲ ಬಾರಿಗೆ ಆಡುತ್ತಿರುವ ನಾಟಕ ಆಧುನಿಕ ಕನ್ನಡ ಮಹಿಳಾ ರಂಗಭೂಮಿಯಲ್ಲಿ ಹೊಸ ಟ್ರೆಂಡ್ನ್ನು ಹುಟ್ಟಿಸುವಂತಿದೆ. ಡಿಸೆಂಬರ್ 15 ರಿಂದ 29ರವರೆಗೆ ನಾಟಕ ಬೆಂಗಳೂರು ಆಯೋಜಿಸಿದ ವಾರ್ಷಿಕ ನಾಟಕೋತ್ಸವದಲ್ಲಿ 2014 ಡಿಸೆಂಬರ್ 17ರಂದು ಕಲಾಗ್ರಾಮದ ಕಲಾಭವನದಲ್ಲಿ ಇಲ್ಲಾ ಅಂದ್ರೆ ಇದೆ ನಾಟಕವು ಪ್ರದರ್ಶನಗೊಂಡು ನೋಡುಗರಲ್ಲಿ ತೀವ್ರ ಕುತೂಹಲವನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಯಿತು. ನಾಟಕವನ್ನು ಶೈಲೇಶ್ಕುಮಾರ್ ರವರು ರಚಿಸಿದ್ದು, ಎಸ್.ವಿ.ಸುಷ್ಮಾರವರು ನಿರ್ದೇಶಿಸಿದ್ದಾರೆ.

ನಾಟಕದ ಸಂಕ್ಷಿಪ್ತ ಕಥೆ ಹೀಗಿದೆ. ಚಿತ್ರಕಲಾವಿದೆ ಸುರಭಿ ಹಾಗೂ ರಾಕೆಟ್ ವಿಜ್ಞಾನಿ ಚೈತ್ರಾ ಇಬ್ಬರೂ ವಿಮಾನ ನಿಲ್ದಾಣದ ಲಾಂಜ್ನಲ್ಲಿ ಅನಿರೀಕ್ಷಿತವಾಗಿ ಬೇಟಿಯಾಗುತ್ತಾರೆ. ಅತಿಯಾಗಿ ಮಾತಾಡುವ ಬಿಂದಾಸ್ ಮಹಿಳೆ ಸುರಭಿ ತನ್ನ ಬಗ್ಗೆ ತನ್ನ ಕುಟುಂಬದ ಬಗ್ಗೆ ಹಾಸ್ಯಮಯವಾಗಿ ಹೇಳುತ್ತಲೇ ಗಂಭೀರ ಸ್ವಭಾವದ ಚೈತ್ರಳ ಹಿನ್ನೆಲೆಯನ್ನು ಕೆದಕುತ್ತಾಳೆ. ವಿಭಿನ್ನ ಸ್ವಭಾವದ ಮಹಿಳೆಯರಿಬ್ಬರೂ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಲೇ ಆತ್ಮೀಯರಾಗಿಬಿಡುತ್ತಾರೆ. ಗಂಡನ ಶೋಷಣೆಯನ್ನು ಸಹಿಸಿಕೊಂಡು ಬಾಳುತ್ತಿದ್ದ ಚೈತ್ರಾಳ ಹೊಟ್ಟೆಯಲ್ಲಿ ಹೆಣ್ಣುಮಗು ಇದೆ ಎಂದು ತಿಳಿದು ಅದನ್ನು ತೆಗೆಸಲು ಆದೇಶಿಸಿದ ಪತಿ ಆದೇಶಿಸುತ್ತಾನೆ. ಅದನ್ನು ವಿರೋಧಿಸಿ ಗಂಡನನ್ನು ತೊರೆದ ಚೈತ್ರಳು ತನ್ನ ಮಗುವಿನೊಂದಿಗೆ ಸ್ವತಂತ್ರ ಬದುಕನ್ನು ಕಟ್ಟಿಕೊಂಡಿರುತ್ತಾಳೆ. ಹಾಗೆಯೇ ವಿಧೇಯ ಗಂಡನ ಹೆಂಡತಿ ತಾನೆಂದು ಕಾಲ್ಪನಿಕ ಕಥೆಯೊಂದನ್ನು ಸುರಭಿ ಹೇಳುತ್ತಾಳೆ. ಕೊನೆಗೂ ಸುರಭಿಯ ಹುಸಿ ನಗುವಿನ ಹಿಂದಿರುವ ನೋವಿನ ಅಸಲಿತನ ನೋಡುಗರಲ್ಲಿ ವಿಷಾದವನ್ನುಂಟುಮಾಡುತ್ತದೆ. ಹೀಗೆ ಇಬ್ಬರ ಮಾತುಗಳಲ್ಲಿ ಪುರುಷ ವ್ಯವಸ್ಥೆಯಲ್ಲಿ ಛಿದ್ರಗೊಂಡ ಮಹಿಳೆಯರ ಬದುಕು ಅನಾವರಣಗೊಂಡಿದೆ.


  ನಾಟಕದಲ್ಲಿ ಸಿದ್ದ ಕಥೆಯ ಚೌಕಟ್ಟೆಂಬುದಿಲ್ಲ. ಮಹಿಳೆಯರ ಬದುಕಿನಲ್ಲಾಗುವ ಬಿಡಿ ಘಟನೆಗಳನ್ನು ಸೊಗಸಾಗಿ ಜೋಡಿಸಲಾಗಿದೆ. ಪ್ರಹಸನದ ಮಾದರಿಯಲ್ಲಿ ಘಟನೆಗಳು ಒಂದಾದ ನಂತರ ಒಂದು ಘಟಿಸುತ್ತಾ ಸಾಗುತ್ತವೆ. ಇಬ್ಬರೇ ನಟಿಯರು ಹಲವು ಪಾತ್ರಗಳಾಗಿ ಸನ್ನಿವೇಶಗಳನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಪಾತ್ರಗಳ ಪಂಚ್ ಡೈಲಾಗ್ಗಳು ಒಂದು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟು ನಗೆಗಡಲಲ್ಲಿ ಮುಳಿಗೇಳಿಸುವಲ್ಲಿ ಸಫಲವಾಗಿವೆ. ನಗಿಸುವುದಕ್ಕಾಗಿಯೇ ಕೆಲವೊಂದು ಡಬಲ್ ಮೀನಿಂಗ್ ಡೈಲಾಗ್ಗಳನ್ನು ಬಳಸಲಾಗಿದೆಯಾದರೂ ಅವು ಎಲ್ಲೂ ಅಶ್ಲೀಲವೆನ್ನಿಸದೇ ಪ್ರೇಕ್ಷಕರಿಗೆ ಕಚಗುಳಿ ಇಡುತ್ತವೆಯೇ ಹೊರತು ಮುಜುಗರವನ್ನುಂಟುಮಾಡುವುದಿಲ್ಲ.

ಶಂಕರ್ ಪಾತ್ರದ ಮೂಲಕ ಪುರುಷ ಶ್ರೇಷ್ಟತೆಯ ವ್ಯಸನವನ್ನು, ಚೈತ್ರಳ ಗಂಡನ ಪಾತ್ರದ ಮೂಲಕ ಪುರುಷಾಧಿಕಾರ ಹಾಗೂ ಹೆಣ್ಣು ಮಗು ಕುರಿತ ವಿರೋಧಿತನವನ್ನು ನಾಟಕದಲ್ಲಿ ಚಿತ್ರಿಸಲಾಗಿದೆ. ಮಹಿಳೆ ನಾಟಕದ ನಿರ್ದೇಶಕಿ ಆಗಿರುವುದರಿಂದ ಹಾಗೂ ಅಭಿನಯಿಸಿದ ಇಬ್ಬರೂ ಮಹಿಳೆಯರೇ ಆಗಿದ್ದರಿಂದ ಪುರುಷ ವಿರೋಧಿ ನೆಲೆಯಲ್ಲಿ ನಾಟಕ ಮೂಡಿಬಂದಿದೆ. ಆದರೆ ನಾಟಕವನ್ನು ಬರೆದವರು ಪುರುಷರಾಗಿದ್ದರಿಂದ ಮಹಿಳೆಯರನ್ನು ಲೇವಡಿ ಮಾಡುವ ಮಾತುಗಳೂ ಸಹ ಅಲ್ಲಲ್ಲಿ ಬಿಂಬಿತವಾಗಿವೆ. ಉದಾಹರಣೆಗೆ ತಲತಲಾಂತರದಿಂದ ಹೆಂಗಸರಿಗೆ ಶಾಪಿಂಗ್ ಮಾಡೋದೇ ಕೆಲಸ, ಶಾಪಿಂಗ್ ಮಾಡದಿರುವವರು ಹೆಂಗಸರೇ ಅಲ್ಲ,,,  ಎನ್ನುವ ರೀತಿಯ ಸಂಭಾಷಣೆಗಳು ಮೇಲ್ಮಧ್ಯಮ ವರ್ಗದವರ ಶಾಪಿಂಗ್ ತೆವಲನ್ನು ಇಡೀ ಮಹಿಳಾ ಕುಲಕ್ಕೆ ಅನ್ವಯಿಸಿದ್ದು ಪ್ರಶ್ನಾರ್ಹವಾಗಿದೆ. ಹೆಂಗಸರು ತಲತಲಾಂತರದಿಂದ ಮಾಡಿಕೊಂಡು ಬಂದಿರೋದು ಗಾಸಿಪ್ ಹಬ್ಬಿಸೋ ಕೆಲಸ..... ಎನ್ನುವ ಮಾತು ಸಹ ಮಹಿಳಾ ವಿರೋಧಿಯೇ ಆಗಿದೆ. ಮಹಿಳೆಯರ ಬಗ್ಗೆ ಮಹಿಳೆಯರೇ ಆಡಿಕೊಂಡು ಮಹಿಳಾ ಕುಲವನ್ನೇ ನಗೆಪಾಟಲಿಗೀಡು ಮಾಡಿದ್ದು ತಾತ್ವಿಕವಾಗಿ ಅಸಮಂಜಸವೆನಿಸುತ್ತದೆ. ಶಾಪಿಂಗ್ ಹಾಗೂ ಗಾಸಿಪ್ ಖಯಾಲಿಗಳಿಗೆ ಲಿಂಗಬೇಧವೆನ್ನುವುದಿಲ್ಲ. ಯಾಕೆ ವೃತಾ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದಾರೆ, ಗೊತ್ತಾಗುತ್ತಿಲ್ಲ.


ಹೆಣ್ಣು ಬ್ರೂಣ ಹತ್ಯೆ ಹಾಗೂ ಮಹಿಳೆಯರ ಮೇಲಾಗುವ ಅತ್ಯಾಚಾರ ಎರಡು ಸಾಮಾಜಿಕ ಪುರುಷ ದೌರ್ಜನ್ಯಗಳು ನಾಟಕದಲ್ಲಿ ವಿಷಾದದ ಕೇಂದ್ರಬಿಂದುವಾಗಿದ್ದು ಅದರ ಪರೀಧಿಯಲ್ಲಿ ವಿನೋದ ಆವರಿಸಿಕೊಂಡಿದೆ. ಕೇವಲ ಸಮಸ್ಯೆಯನ್ನು ತೋರದೇ ಅದಕ್ಕೆ ಪರಿಹಾರವನ್ನೂ ನಾಟಕ ಸೂಚಿಸುತ್ತದೆ. ಬ್ರೂಣ ಹತ್ಯೆ ವಿರೋಧಿಸಿದ ಚೈತ್ರ ಗಂಡನ ಮನೆ ತೊರೆದು ಮಗುವನ್ನು ಹೆತ್ತು ಹೊಸ ಬದುಕನ್ನು ಕಟ್ಟಿಕೊಂಡರೆ, ಅತ್ಯಾಚಾರಕ್ಕೊಳಗಾಗಿ ಸಮಾಜ ನಿಂದನೆಗೆ ಒಳಗಾದ ಸುರಭಿ ಎಲ್ಲವನ್ನೂ ಮೆಟ್ಟಿ ನಿಂತು ಚಿತ್ರಕಲೆಯಲ್ಲಿ ದೊಡ್ಡ ಹೆಸರು ಮಾಡುವುದರ ಮೂಲಕ ಸಾರ್ಥಕ ಬದುಕು ಕಟ್ಟಿಕೊಳ್ಳುತ್ತಾಳೆ. ಪಿತೃಪ್ರಧಾನ ಸಮಾಜದ ಪುರುಷಾಧಿಕಾರದಲ್ಲಿ ನೊಂದು ಬೆಂದು ಬದುಕು ಸವಿಸುವ ಕೊಟ್ಯಾಂತರ ಶೋಷಿತ ಮಹಿಳೆಯರಿಗೆ ನಾಟಕದ ಎರಡೂ ಮಹಿಳಾ ಪಾತ್ರಗಳು ಮಾದರಿಯಾಗಿವೆ. ನೊಂದವರಿಗೆ ನಗುನಗುತ್ತಲೇ ಹೊಸ ಬದುಕನ್ನು ಸೃಷ್ಟಿಸಿಕೊಳ್ಳಲು ಪ್ರೇರಕವಾಗಿದೆ.
           
ಕಾಲಕಾಲಕ್ಕೆ ರಂಗಭೂಮಿ ತನ್ನ ಇತಿಮಿತಿಯಲ್ಲೇ ಪ್ರಯೋಗಶೀಲತೆಯನ್ನು ಬೆಳೆಸಿಕೊಳ್ಳುತ್ತಲೇ ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಒಂದು ರಂಗತಂಡವನ್ನು ಕಟ್ಟಿಕೊಂಡು ನಾಟಕವನ್ನು ಮಾಡಿಸುವುದು ಹಾಗೂ ಮರುಪ್ರದರ್ಶನಗಳನ್ನು ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾಗಿದೆ. ಜಾಗತೀಕರಣದ ಒತ್ತಡದ ಬದುಕಿನಲ್ಲಿ ಹವ್ಯಾಸಿ ಕಲಾವಿದರ ಬದ್ದತೆ ಹಾಗೂ ಆದ್ಯತೆಗಳು ಬದಲಾಗಿದೆ. ಇಂತಹ ಸಂದರ್ಭದಲ್ಲಿ ಏಕವ್ಯಕ್ತಿಪ್ರಯೋಗಗಳ ಒಂದು ಟ್ರೆಂಡ್ ಕನ್ನಡ ರಂಗಭೂಮಿಯಲ್ಲಿ ಹುಟ್ಟಿಕೊಂಡಿತ್ತು. ಸಿ.ಆರ್.ಸಿಂಹ, ಬಿ.ಜಯಶ್ರೀ, ನಾಗಾಭರಣ, ಕವತ್ತಾರ್, ಎನ್.ಮಂಗಳ, ಆರ್.ಟಿ.ರಮಾ.. ಮುಂತಾದ ಹೆಸರಾಂತ ರಂಗಕರ್ಮಿಗಳು ಏಕವ್ಯಕ್ತಿ ಪ್ರಯೋಗಗಳನ್ನು ಮಾಡುತ್ತಾ ಒಂದು ರಂಗಪ್ರಕಾರವನ್ನು ಜನಪ್ರೀಯಗೊಳಿಸಿದರು. ಆದರೆ ಇತ್ತೀಚೆಗೆ ಏಕವ್ಯಕ್ತಿ ಪ್ರಯೋಗಗಳು ಅಪರೂಪವಾಗಿವೆ. ಅದರ ಸ್ಥಾನವನ್ನು ದ್ವಿವ್ಯಕ್ತಿ ತ್ರೀವ್ಯಕ್ತಿ ಪ್ರಯೋಗಗಳು ತುಂಬುತ್ತಿವೆ. ಪ್ರಸನ್ನನವರು ನಿರ್ದೇಶಿಸಿದ ಮೆಕ್ಕಾದಾರಿ ಮೂರು ಕಲಾವಿದರ ನಾಟಕವಾಗಿದ್ದರೆ, ಬಿ.ಸುರೇಶ್ ಹಾಗೂ ಏಣಗಿ ನಟರಾಜರು ಅಭಿನಯಿಸಿದ ನಾ ತುಕಾರಾಂ ಅಲ್ಲಾ ನಾಟಕ ದ್ವಿವ್ಯಕ್ತಿ ಪ್ರಯೋಗವಾಗಿದೆ. ಇಂತಿ ನಿನ್ನ ಅಮೃತಾ ಸಹ ಇಬ್ಬರೇ ವ್ಯಕ್ತಿಗಳ ನಾಟಕವಾಗಿದೆ. ಲಕ್ಷ್ಮೀ ಚಂದ್ರಶೇಖರರವರ ಕ್ರಿಯೇಟಿವ್ ಥೇಯಟರ್ ಸಹ ಕೆಲವು ದ್ವಿವ್ಯಕ್ತಿ ನಾಟಕಗಳನ್ನು ಕಟ್ಟಿ ಆಡಿಸಿದೆ. ಇಂತಹ ನಾಟಕಗಳಲ್ಲಿ ಇಬ್ಬರು ನಟರು, ಇಲ್ಲವೇ ಒಬ್ಬರು ನಟ ಹಾಗೂ ಇನ್ನೊಬ್ಬರು ನಟಿ ಪಾತ್ರವಹಿಸುತ್ತಿದ್ದರು. ಆದರೆ ಮೊದಲ ಬಾರಿಗೆ ಇಬ್ಬರು ನಟಿಯರು ಸೇರಿ ಇಲ್ಲಾ ಅಂದ್ರೆ ಇದೆ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಏಕವ್ಯಕ್ತಿ ಹಾಗೂ ದ್ವಿವ್ಯಕ್ತಿ ಮಾದರಿಯ ನಾಟಕಗಳು ಕಾಲಘಟ್ಟದ ಅನಿವಾರ್ಯತೆಯೋ ಮಿತಿಯೋ ಗೊತ್ತಿಲ್ಲ ಆದರೆ ನೋಡುಗರನ್ನು ಹಿಡಿದಿಡುವ ತಾಕತ್ತನ್ನಂತೂ ನಾಟಕಗಳು ಹೊಂದಿವೆ.

ಇದನ್ನು ಸಂಪೂರ್ಣ ನಾಟಕ ಎನ್ನಲಾಗದಿದ್ದರೂ ಅಪೂರ್ಣತೆಯಲ್ಲಿಯೇ ಪೂರ್ಣತೆಯ ಭ್ರಮೆಯನ್ನು ಹುಟ್ಟಿಸುವ ಒಂದು ಪ್ರಯತ್ನವನ್ನು ಇಲ್ಲಾ ಅಂದ್ರೆ ಇದೆ ನಾಟಕದಲ್ಲಿ ಕಾಣಬಹುದಾಗಿದೆ. ಏಕವ್ಯಕ್ತಿ ರಂಗಪ್ರಯೋಗದ ಬಹುತೇಕ ಅಂಶಗಳನ್ನು ಇಟ್ಟುಕೊಂಡೇ ಇಬ್ಬರು ನಟಿಯರು ಅಭಿನಯಿಸಿದ ನಾಟಕದ ಸ್ಕ್ರಿಪ್ಟ್ ಇನ್ನೂ ನಾಲ್ಕಾರು ಪಾತ್ರಗಳ ಅಗತ್ಯತೆಯನ್ನು ಕೇಳುತ್ತದೆ. ಆದರೆ ಎಲ್ಲಾ ಪಾತ್ರಗಳ ಕೊರತೆಯನ್ನೂ ಸಹ ನಟಿಯರಿಬ್ಬರೇ ಅಭಿನಯಿಸಿ ನಿಭಾಯಿಸಿದ್ದು ಕಲಾವಿದೆಯರ ಸಾಮರ್ಥ್ಯವನ್ನು ತೋರಿಸುತ್ತಾದರೂ ನಾಟಕ ಸಂಪೂರ್ಣವೆನ್ನಿಸುವುದಿಲ್ಲ. ಒಂದು ರಂಗಪಠ್ಯ ಕೇಳುವಷ್ಟು ನಟ ನಟಿಯರನ್ನು ಬಳಸಿಕೊಳ್ಳುವ ಸಾಧ್ಯತೆ ಇಲ್ಲಾ ಆದರೂ ಇದೆ ಎಂದು ತೋರಿಸುವ ನಾಟಕ ರಂಗಭೂಮಿಯ ಪ್ರಯೋಗಶೀಲತೆಗೆ ಹಿಡಿದ ಕನ್ನಡಿಯಾಗಿದೆ.

ನಾಟಕದ ಕೊನೆಯ ಹಂತದಲ್ಲಿ ಪ್ರೇಕ್ಷಕನ ಆಲೋಚನೆ ಕ್ರಮವನ್ನೇ  ಬುಡಮೇಲು ಮಾಡುವಂತೆ ಮೂಡಿಬಂದಿರುವ ಅನಿರೀಕ್ಷಿತ ತಿರುವು ನಾಟಕದ ದಿಕ್ಕನ್ನೇ ಬದಲಾಯಿಸಿದೆ. ಅಲ್ಲಿವರೆಗೂ ತನ್ನದೇ ಆದ ಆದರ್ಶಮಯ ಕೌಟುಂಬಿಕ ಕಲ್ಪನೆಯನ್ನು ವಿಜ್ರಂಬಿಸಿ ಹೇಳುತ್ತಿದ್ದ ಸುರಭಿ ಪಾತ್ರದ ನಗುವಿನ ಹಿಂದಿನ ನೋವನ್ನು ತೆರೆದಿಡುವ ಸನ್ನಿವೇಶ ನೋಡುಗರ ಮನಮಿಡಿಯುವಂತೆ ಮಾಡುತ್ತದೆ. ಪುರುಷರ ವಿಕೃತತೆಗೆ ಬಲಿಯಾಗಿ ಬದುಕನ್ನೇ ಕಳೆದುಕೊಂಡವಳ ಸಂಕಟ ಪ್ರೇಕ್ಷಕರನ್ನು ತಲ್ಲಣಗೊಳಿಸುವಂತೆ ಮೂಡಿಬಂದಿದೆ. ನಾಟಕದ ನಿಜವಾದ ಸಾರ್ಥಕತೆ ಇರುವುದೇ ಕ್ಲೈಮ್ಯಾಕ್ಸಿನಲ್ಲಿ. ನಾಟಕದ ಅನಿರೀಕ್ಷಿತ ಅಂತ್ಯ ನಾಟಕ ಮುಗಿದ ಮೇಲೆಯೂ ನೋಡುಗರನ್ನು ಆಲೋಚಿಸುವಂತೆ ಪ್ರೇರೇಪಿಸುವಲ್ಲಿ ಸಫಲವಾಗಿದೆ.

ಸನ್ನಿವೇಶಕ್ಕೆ ಪೂರಕವಾಗಿ ಬಳಸಲಾದ ಸಿಂಪಲ್ ಸೆಟ್ಗಳು ನಾಟಕದ ಇನ್ನೊಂದು ವಿಶೇಷ. ಐದು ಚಿಕ್ಕ ಪ್ಲೆಕ್ಸ್ಗಳನ್ನು ಬಳಸಿ ಏರಪೋರ್ಟ ಲಾಂಜಿನ ಇಮೇಜನ್ನು ಸೃಷ್ಟಿಸಲಾಗಿದೆ. ಒಂದೊಂದು ಪ್ಲೆಕ್ಸಗಳನ್ನು ತಿರುಗಿಸಿಟ್ಟಾಗ ಇನ್ನೊಂದು ಲೊಕೇಶನ್ ಮೂಡಿಬರುವ ಕೌತುಕ ಇಲ್ಲಿದೆ. ಕಛೇರಿ, ಕಿಚನ್, ಬೆಡ್ ರೂಂ...ರೆಸ್ಟೊರೆಂಟ್.... ಹೀಗೆ ಕೆವಾರು ಲೊಕೇಶನ್ಗಳನ್ನು ಕ್ಷಣಾರ್ಧದಲ್ಲಿ ಬದಲಾಯಿಸುವ ರಂಗವಿನ್ಯಾಸ ಹಾಗೂ ಲೊಕೇಶನ್ ಬಿತ್ತಿಚಿತ್ರವನ್ನು ಇಬ್ಬರೂ ನಟಿಯರೇ ಸ್ಥಳಾಂತರಿಸುವುದರಿಂದ ಬ್ಲಾಕ್ಔಟ್ ಸಮಯವನ್ನು ಉಳಿಸುತ್ತದೆ ಹಾಗೂ ಪ್ರೇಕ್ಷಕರನ್ನು ಅತ್ತಿತ್ತ ಅಲ್ಲಾಡಲೂ ಸಮಯಕೊಡದಂತೆ ನೋಡಿಕೊಂಡಿದೆ. ಆದರೆ... ಸನ್ನಿವೇಶ ಹುಟ್ಟಿಸುವ ಮೂಡನ್ನು ಹಾಳು ಮಾಡಿದ್ದು ಬೆಳಕಿನ ವಿನ್ಯಾಸ. ಕಪ್ಪಣ್ಣನವರು ಅನುಭವಿ ಬೆಳಕಿನತಜ್ಞರಾಗಿದ್ದರೂ ನಾಟಕದಲ್ಲಿ ಲೈಟಿಂಗ್ ಏರಿಯಾವನ್ನು ಸರಿಯಾಗಿ ವಿನ್ಯಾಸಗೊಳಿಸುವಲ್ಲಿ ಎಡವಿದ್ದಾರೆ. ರಂಗದ ಎಡಭಾಗದಲ್ಲಿ ಕಛೇರಿಯ ದೃಶ್ಯ ಹಾಗೂ ನಂತರ ಬಲಭಾಗದಲ್ಲಿ ಅಡುಗೆ ಮನೆ ದೃಶ್ಯಗಳು ನಡೆಯುವಾಗ ಅದಕ್ಕೆ ಮಾತ್ರ ಸ್ಪಾಟ್ಲೈಟ್ ಅಗತ್ಯವಿರುತ್ತದೆಯೇ ಹೊರತು ಅಕ್ಕ ಪಕ್ಕದ ಲೊಕೇಶನ್ ಮೇಲಲ್ಲ.

ಇರುವ ಇಬ್ಬರೂ ನಟಿಯರು ರಂಗದಿಂದ ನಿರ್ಗಮಿಸಿ ಕಾಸ್ಟೂಮಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡು ಮತ್ತೆ ರಂಗಕ್ಕೆ ಆಗಮಿಸುವಾಗ ಇನ್ನೂ ಕೌಶಲತೆಯನ್ನು ಮೆರೆಯಬೇಕಾಗಿದೆ. ಪಕ್ಕಾ ಟೈಮಿಂಗ್ನ್ನು ವರ್ಕಔಟ್ ಮಾಡಿದರೆ ನೋಡುಗರಿಗೆ ಅಚ್ಚರಿಯನ್ನು ಹುಟ್ಟಿಸಬಹುದಾಗಿದೆ. ಲೈವ್ ಆಗಿ ನಟಿಯರೇ ಪ್ಲೆಕ್ಸನ್ನು ತಿರುಗಿಸಿಟ್ಟುಕೊಂಡು ಕಾಸ್ಟೂಮ್ ಬದಲಾಯಿಸಿಕೊಂಡು ಬರುವ ಅಲ್ಪ ಸಮಯದಲ್ಲಿ ಬ್ಲಾಕ್ಔಟ್ ಕೊಟ್ಟಿದ್ದರೆ ಪ್ರೇಕ್ಷಕರಲ್ಲಿ ಕುತೂಹಲವವನ್ನು ಮೂಡಿಸಬಹುದಾದ ಸಾಧ್ಯತೆ ಇತ್ತು.

ಕೆಲವೊಂದು ಸಂಬಂಧವೇ ಇಲ್ಲದ ಸಂಭಾಷಣೆಗಳಿವೆ. ಉದಾಹರಣೆಗೆ ಇವರಮ್ಮ ಜಯಲಲಿತಾ ರಿಲೇಟಿವ್ ಇರಬೇಕು, ಕಿರಿಕ್ ಪಾರ್ಟಿ... ಎಂದು ಸುರಭಿ ತನ್ನ ಅತ್ತೆ ಕುರಿತು ಹೇಳುತ್ತಾಳೆ. ಇಲ್ಲಿ ಅತ್ತೆಯನ್ನು ಜಯಲಲಿತಾಗೆ ಹೋಲಿಸುವುದೇ ಅಸಮಂಜಸ. ಗಾತ್ರದಲ್ಲಿ ಹೊರತು ಪಡಿಸಿ ಅತ್ತೆ ಪಾತ್ರದಾರಿಗೂ ಹಾಗೂ ಜಯಲಲಿತಾಗೂ ಯಾವುದೇ ಹೋಲಿಕೆ ಇಲ್ಲ. ಅನಗತ್ಯವಾಗಿ ಇಲ್ಲಿ ಜಯಲಲಿತಾಳನ್ನು ನಗಿಸುವ ಒಂದೇ ಮಾನದಂಡಕ್ಕಾಗಿ ಪ್ರಸ್ತಾಪಿಸುವುದು ಅಪ್ರಸ್ತುತವೆನಿಸುತ್ತದೆ. ಸುರಭಿ ಪಾತ್ರಧಾರಿ ಆಗಾಗ ಲೈಕ್ ವುಮೆನ್ ಆಲ್ಸೋ ಎನ್ನುವುದು ಲೆಸ್ಬಿಯನ್ ಅಪ್ರೋಚ್ ಆಗಿದೆ. ಅದ್ಯಾಕೆ ಸುರಭಿ ಪಾತ್ರ ಆಗಾಗ ಬಂದು ಚೈತ್ರಳ ಲ್ಯಾಪ್ಟಾಪ್ನ್ನು  ಅಪರೇಟ್ ಮಾಡುತ್ತದೆನ್ನುವುದು ಪ್ರೇಕ್ಷಕರಿಗೆ ಯಕ್ಷಪ್ರಶ್ನೆಯಾಗಿದೆ.

ನಾಟಕದ ನಿರ್ದೇಶಕಿ ಸುಷ್ಮಾರವರೇ ಸುರಭಿ ಪಾತ್ರವನ್ನು ನಿರ್ವಹಿಸಿ ತಮ್ಮ ಪಾತ್ರವನ್ನು ತಾವೇ ನಿರ್ದೇಶಿಸಿಕೊಂಡಿದ್ದು ತುಂಬಾ ಸೊಗಸಾಗಿ ಮೂಡಿ ಬಂದಿದೆ. ಆದರೆ ಅವರ ಫಾಸ್ಗಳಿಲ್ಲದ ವೇಗದ ನಾನ್ಸ್ಟಾಪ್ ಮಾತುಗಳು ಕೆಲವೊಮ್ಮೆ ಕೇಳುಗರಲ್ಲಿ ಅಸ್ಪಷ್ಟತೆಯನ್ನು ಮೂಡಿಸುತ್ತವೆ. ನಾಟಕದಲ್ಲಿ ಆಗಾಗ ಬಳಸಲಾದ ಹಿನ್ನೆಲೆ ಸಂಗೀತ ಮೂಡ್ ಕ್ರಿಯೇಟ್ ಮಾಡುವ ಬದಲು ಪ್ರೇಕ್ಷಕರಿಗೆ ಡಿಸ್ಟರ್ಬ ಮಾಡಿದ್ದಂತೂ ಸುಳ್ಳಲ್ಲ. ಕೊನೆಗೆ ಪಾತ್ರ ಮಾತಾಡುತ್ತಿರುವಾಗಲೇ ಗಟ್ಟಿದ್ವನಿಯ ಆಲಾಪವು ಸೆಂಟಿಮೆಂಟ್ ಸಂಭಾಷಣೆಯ ತೀವ್ರತೆಯನ್ನು ಕಡಿತಗೊಳಿಸಿದೆ. ನಟಿಯರಿಬ್ಬರ ಅಭಿನಯದ ಕುರಿತು ಎರಡು ಮಾತಿಲ್ಲ. ಇಬ್ಬರೂ ನಟಿಯರು ನೃತ್ಯಪಟುಗಳು ಹಾಗೂ ನೃತ್ಯ ಸಂಯೋಜಕರಾಗಿ ಹೆಸರು ಮಾಡಿದ್ದಾರೆ. ಆದರೆ ನಾಟಕದ ಪಠ್ಯದಲ್ಲಿ ಅವರ ನೃತ್ಯ ಕೌಶಲ್ಯಕ್ಕೆ ಅವಕಾಶವೇ ಇಲ್ಲದಾಗಿದೆ. ಆದರೂ ಅಭಿನಯದಲ್ಲಿ ಪೈಪೋಟಿಗೆ ಬಿದ್ದಂತೆ ನಟಿಸಿ ನಾಟಕವನ್ನು ಯಶಸ್ವಿಯಾಗಿಸಿದ್ದಾರೆ. ಮಹಿಳೆಯರ ಅಂತರಂಗದ ಸಂಕಟಗಳನ್ನು ನಗಿಸುತ್ತಲೇ ಬಹಿರಂಗವಾಗಿ ರಂಗದಂಗಳದಲ್ಲಿ ತೆರೆದಿಟ್ಟಿದ್ದಾರೆ.


ಬದಲಾಯಿಸಿಕೊಳ್ಳಬಹುದಾದ ಚಿಕ್ಕ ಪುಟ್ಟ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡರೆ ನಾಟಕವು ಪ್ರಯೋಗದ ಹಂತದಿಂದ ಪ್ರದರ್ಶನದ ಹಂತ ತಲುಪಲು ಸಾಧ್ಯವಿದೆ. ತಮ್ಮದೇ ಆದ ಮಿತಿಯಲ್ಲಿ ನಾಟಕವನ್ನು ನಿರ್ಮಿತಿ ಮಾಡಿಕೊಂಡು ತಮ್ಮ ಅಭಿನಯ ಪ್ರತಿಭೆಯನ್ನು ನಾಟಕದ ಮೂಲಕ ಪ್ರದರ್ಶಿಸುವ ಆಶಯದೊಂದಿಗೆ ಥೀಮಾ ರಂಗತಂಡವನ್ನು ಹುಟ್ಟುಹಾಕಲಾಗಿದ್ದು ಅದರ ಮೊದಲ ನಾಟಕ ಯಶಸ್ವಿಯಾಗಿದೆ. ಮನರಂಜನೆಯ ಜೊತೆಗೆ ಮನಪರಿವರ್ತನೆಗೆ ಪ್ರೇರಕವಾಗುವಂತಹ ಇಂತಹ ನಾಟಕಗಳು ಇಂದಿನ ಅಗತ್ಯವೂ ಆಗಿದೆ. ವಿನೋದದ ಮೂಲಕ ವಿಷಾದವನ್ನು ಹೇಳುವ ಇಲ್ಲಾ ಅಂದ್ರೆ ಇದೆ ನಾಟಕ ನಾಡಿನಾದ್ಯಂತ ಪ್ರದರ್ಶನಗೊಳ್ಳಬೇಕಿದೆ.  

                      -ಶಶಿಕಾಂತ ಯಡಹಳ್ಳಿ     








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ