ಶನಿವಾರ, ಮಾರ್ಚ್ 9, 2019

"ಅನುದಾನವೆಂಬೋ ಕನ್ನಡಿಯೊಳಗಿನ ಗಂಟು”, ಬೋಗಸ್ ಸಂಸ್ಥೆಗಳಿಗೆ ರಾಜಕೀಯದವರ ನಂಟು..”




ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹದಾಯಕವಾಗಿ ವಾರ್ಷಿಕ ಅನುದಾನವನ್ನು ಕೊಡುತ್ತಾ ಬಂದಿದೆ. ಕರ್ನಾಟಕದಲ್ಲಿ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರವು ಕೊಡುವ ಈ ಸಹಾಯಧನವು ಒಂದಿಷ್ಟು ಮಟ್ಟಿಗೆ  ಕಲೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗಿದೆ

ಜೊತೆಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುವುದು, ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದಿರುವುದು, ಅನರ್ಹರು ಫಲಾನುಭವಿಗಳಾಗುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅನುದಾನದಲ್ಲಿ ಬಲಾಡ್ಯರು ಹೆಚ್ಚು ಪಾಲನ್ನು ಪಡೆಯುವುದು ಹಾಗೂ ನಿಜವಾಗಿಯೂ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಏನೂ ದಕ್ಕದೇ ಇರುವುದೂ ಸಹ ಗುಟ್ಟಾದ ಸಂಗತಿ ಏನಲ್ಲ. ಇಲಾಖೆಯ ಅನುದಾನವನ್ನೇ ನಂಬಿಕೊಂಡು ಉಸಿರಾಡುವ ಅನೇಕ ಸಂಸ್ಥೆಗಳೂ ಅಸ್ತಿತ್ವದಲ್ಲಿವೆ

ಹೀಗೆ ಹಲವಾರು ನಕಾರಾತ್ಮಕ ಅಂಶಗಳನ್ನೂ ಮೀರಿ ಹಲವಾರು ಸಂಘ ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿವೆ. ರಂಗನಿರಂತರದಂತಹ ಕೆಲವಾರು ತಂಡಗಳು ಸಿಕ್ಕಿದ ಅನುದಾನಕ್ಕೆ ಮತ್ತಷ್ಟು ಹಣವನ್ನು ಖರ್ಚುಮಾಡಿ ರಾಷ್ಟ್ರೀಯ ನಾಟಕೋತ್ಸವಗಳನ್ನೂ ಆಯೋಜಿಸುತ್ತಿವೆ. ಕೆಲವು ಚಿಕ್ಕಪುಟ್ಟ ರಂಗತಂಡಗಳೂ ಸಹ ದೊರಕಿದ ಅಲ್ಪ ಆರ್ಥಿಕ ಸಹಾಯದಲ್ಲಿ ಒಂದಿಷ್ಟು ರಂಗಚಟುವಟಿಕೆಗಳನ್ನು ಮಾಡುತ್ತಲೇ ಬಂದಿವೆ.

ಆದರೆ... ಇಲಾಖೆಯ ಸಚಿವರ ತಪ್ಪು ಗ್ರಹಿಕೆಯಿಂದಲೋ, ಇಲ್ಲವೇ ಚುನಾವಣೆಯ ನೀತಿ ಸಂಹಿತೆಯ ನೆಪದಿಂದಲೋ ಅನುದಾನ ಹಂಚಿಕೆಯನ್ನೇ ಅನಿರ್ದಿಷ್ಟ ಅವಧಿಯವರೆಗೆ ಮುಂದೂಡುವುದು ಅಕ್ಷಮ್ಯ. ಮಾರ್ಚ್ 31 ಒಳಗೆ ಇಲಾಖೆಯು 2017-18ನೇ ಸಾಲಿನ ಸರಕಾರದ ಅನುದಾನವನ್ನು ಬಳಸಿಕೊಳ್ಳದೇ ಹೋದರೆ ಬಾಕಿ ಉಳಿದ ಹಣವೆಲ್ಲಾ ಸರಕಾರೀ ಖಜಾನೆಗೆ ವಾಪಸ್ ಹೋಗುತ್ತದೆ. ಮತ್ತೆ ಮುಂದಿನ ಸಲದ ಬಜೆಟ್ ನಲ್ಲಿ  ಸರಕಾರ ಇಲಾಖೆಗೆ ಹಣವನ್ನು ನಿಗದಿಪಡಿಸಿ ಬಿಡುಗಡೆ ಮಾಡುವವರೆಗೂ ಅನುದಾನದ ಹಣ ಯಾವುದೇ ಸಂಘ ಸಂಸ್ಥೆ ತಂಡಗಳಿಗೂ ದೊರಕುವುದಿಲ್ಲ. ಈಗಾಗಲೇ ಬಜೆಟ್ನಲ್ಲಿ ವರ್ಷ ಮೀಸಲಿಟ್ಟ ಹಣ ಖಜಾನೆಗೆ ಹೋದರೆ ಮತ್ತೆ ಮರಳಿ ಸಿಕ್ಕುವುದಿಲ್ಲ. ಕರ್ನಾಟಕದಾದ್ಯಂತ ಸಾಂಸ್ಕೃತಿಕ ಚಟುವಟಿಕೆಗಳು ಕುಂಟಿತಗೊಳ್ಳುವುದಂತೂ ಸುಳ್ಳಲ್ಲ



ನಮ್ಮ ಮಂತ್ರಿ ಮಾನ್ಯರುಗಳಿಗೆ ಕಲಾವಿದರ ಸಂಕಟ ಅರ್ಥವಾಗುವುದಿಲ್ಲ. ಸರಕಾರದ ಮೇಲೆ ಒತ್ತಡ ತರುವ ಆಸ್ಥೆ ಮತ್ತು ಅಧಿಕಾರ ಇಲಾಖೆಯ ಅಧಿಕಾರಿಗಳಿಗಿಲ್ಲ. ಮುಂದಿನ ವಾರ ಯಾವಾಗ ಬೇಕಾದರೂ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಏನಾದರೂ ಮಾಡುವುದಿದ್ದರೆ ಅಷ್ಟರೊಳಗೇ ಮಾಡಬೇಕು. ಸಂಸ್ಕೃತಿ ಇಲಾಖೆಯ ಸಚಿವರಾದ ಡಿ.ಕೆ.ಶಿವಕುಮಾರರವರ ಮೇಲೆ ಎಲ್ಲಾ ದಿಕ್ಕುಗಳಿಂದ ಒತ್ತಡ ಹೇರುವ ಕೆಲಸವಾಗಬೇಕಿದೆ. ಅದು ಆಗದಿದ್ದರೆ ಮುಖ್ಯ ಮಂತ್ರಿಗಳನ್ನೇ ಹಿರಿಯ ಸಾಹಿತಿ, ರಂಗಕರ್ಮಿಗಳ ಆಯೋಗ ತುರ್ತಾಗಿ ಬೇಟಿಯಾಗಿ ಕನ್ವೀಯನ್ಸ್ ಮಾಡಬೇಕಿದೆ. ಅದೂ ಆಗದಿದ್ದರೆ  ಪತ್ರಿಕಾ ಹೇಳಿಕೆಗಳು ಹಾಗೂ ಟಿವಿ ಮಾಧ್ಯಮಗಳ ಮೂಲಕವಾದರೂ ಸರಕಾರದ ಗಮನ ಸೆಳೆದು ಮಂತ್ರಿಗಳು ಅನುದಾನದ ಕಡತಕ್ಕೆ ಸಹಿ ಹಾಕುವಂತೆ ಒತ್ತಡ ತರಬೇಕಿದೆ. ಅದೂ ಸಾಧ್ಯವಾಗದಿದ್ದರೆ ಕಲಾವಿದರುಗಳು ಬೀದಿಗಿಳಿದು ಸರಕಾರದ ವಿಳಂಬನೀತಿಯನ್ನು ವಿರೋಧಿಸಿ ಸರಣಿ ಧರಣಿ ಸತ್ಯಾಗ್ರಹಗಳನ್ನು ಮಾಡಿ ಸರಕಾರವನ್ನು ಎಚ್ಚರಿಸಬೇಕಿದೆ. ಏನೂ ಮಾಡದೇ ಕೂತರೆ ವರ್ಷದ ಅನುದಾನ ಮರಳಿ ಖಜಾನೆ ಸೇರುವುದು ಖಂಡಿತ ಹಾಗೂ ಸಾವಿರಾರು ಸಂಘ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದು ಖಚಿತ..

ಅನುದಾನಕ್ಕೆ ಅರ್ಹವೆನಿಸುವ ಸಂಸ್ಥೆಗಳನ್ನು ಆಯ್ಕೆ ಮಾಡುವವರು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು. ಮತ್ತು ಆಯಾ ಅಕಾಡೆಮಿಗಳ ಅಧ್ಯಕ್ಷರುಗಳ ಸಮ್ಮುಖದಲ್ಲೇ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಬೋಗಸ್ ಸಂಸ್ಥೆಗಳನ್ನು ಅನುದಾನಕ್ಕೆ ಆಯ್ಕೆ ಮಾಡಿದ್ದೇ ನಿಜವಾದರೆ ಅದರ ಹೊಣೆಗಾರಿಕೆಯನ್ನೂ ಆಯ್ಕೆ ಮಾಡಲು ಕಾರಣರಾದವರೇ ಹೊರಬೇಕಲ್ಲವೆ? ಅರ್ಹ ಸಂಸ್ಥೆಗಳನ್ನು ಅನುದಾನಕ್ಕೆ ಆಯ್ಕೆ ಮಾಡಿದ್ದೇ ನಿಜವಾದಲ್ಲಿ ಅಕಾಡೆಮಿಯ ಅಧ್ಯಕ್ಷರುಗಳೆಲ್ಲಾ ಸೇರಿ ಸರಕಾರಕ್ಕೆ ಮನದಟ್ಟು ಮಾಡಿಕೊಡಬೇಕಲ್ಲವೆ? ಆಯ್ಕೆ ಸಮಿತಿಯಲ್ಲಿರುವವರಿಗೆ ಹತ್ತು ಲಕ್ಷಕ್ಕಿಂತ ಹೆಚ್ಚಿಗೆ ಹಣ ಹಂಚಲು ಸಾಧ್ಯವಿಲ್ಲ. ಹತ್ತು, ಇಪ್ಪತ್ತರಿಂದ ಐವತ್ತು ಲಕ್ಷದವರೆಗೆ ಅನುದಾನವನ್ನು ಹಂಚುವ ಕೆಲಸವನ್ನು ಸೆಕ್ರೆಟರಿ ಮತ್ತು ಮಂತ್ರಿಗಳ ಮಟ್ಟದಲ್ಲಿ ನಿರ್ಧಾರ ಮಾಡಲಾಗುತ್ತಿದೆ. ಇಲಾಖೆಯ ನಿಬಂಧನೆಗಳನ್ನು ಗಾಳಿಗೆ ತೂರಿ ರಾಜಕೀಯದವರ ಒತ್ತಾಸೆಯ ಮೇಲೆ ಹಲವಾರು ಬಲಾಡ್ಯ ಸಂಸ್ಥೆಗಳಿಗೆ ಬೇಕಾಬಿಟ್ಟಿ ಹಣವನ್ನು ಹಂಚಿಕೆ ಮಾಡಲಾಗುತ್ತಿದೆ ಹಾಗೂ ಅನುದಾನ ಬಿಡುಗಡೆಗಾಗಿ ಅಧಿಕಾರಿಗಳ ಮೇಲೆ ಒತ್ತಡವನ್ನೂ ಹಾಕಲಾಗುತ್ತದೆ. ಇದರ ಹೊಣೆಯನ್ನು ಹೊರಬೇಕಾದವರು ಯಾರು? ಬೋಗಸ್ ಎನ್ನಲಾದ ಸಂಸ್ಥೆಗಳಿಗೆ ಉತ್ತೇಜನ ಕೊಡುತ್ತಿರುವವರು ಯಾರು? ಎಲ್ಲಾ ಪ್ರಶ್ನೆಗಳನ್ನು ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಕೇಳಬೇಕಾಗಿದೆ. ಆದರೆ ಈಗ ಸಮಸ್ಯೆ ಇರುವುದು ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಮುಳ್ಳುಗಳಿವೆಯೆಂದು ಹೂವುಗಳ ಕತ್ತು ಹಿಚುಕದಿರಿ:

2017-18 ಸಾಲಿನ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಬೇಕಿತ್ತು ಆದರೆ  ಇಲಾಖೆಯ ಸಚಿವರು 13 ಕೋಟಿ ರೂಪಾಯಿಗಳ ಅನುದಾನದ ಕಡತಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ. ಹಾಗೂ ಅನುದಾನದ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆಯೆಂಬ ಆರೋಪ ಬಂದಿರುವುದರಿಂದ ಅನುದಾನ ಮಂಜೂರು ಮಾಡುವುದನ್ನು ಸಚಿವರು ತಡೆ ಹಿಡಿದಿದ್ದಾರೆ

ಸಚಿವರ ನಿರಾಕರಣೆಯ ನಡೆಯಿಂದಾಗಿ ಈಗ ಅನುದಾನದ ಫಲಾನುಭವಿಗಳ ಪಟ್ಟಿಯನ್ನು ಸಿದ್ದಗೊಳಿಸಿದ ಸಮಿತಿಯ ಸುತ್ತ ಈಗ ಅನುಮಾನದ ಹುತ್ತ ಬೆಳೆದು ನಿಂತಂತಾಗಿದೆ. ಸಚಿವರ ಮಾತುಗಳನ್ನು ನಂಬುವ ಮುನ್ನ ಕಲಾ ಸಂಸ್ಥೆಗಳನ್ನು ಅನುದಾನಕ್ಕೆ ಆಯ್ಕೆ ಮಾಡುವ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳುವುದು ಒಳಿತು.

ಪ್ರತಿ ವರ್ಷ ಅನುದಾನಕ್ಕೆ ಅರ್ಹ ಸಂಸ್ಥೆಗಳನ್ನು ಆಯ್ಕೆ ಮಾಡಲು ಸರಕಾರವು ತಜ್ಞರ  ಸಮಿತಿಯೊಂದನ್ನು ರಚನೆ ಮಾಡಿರುತ್ತದೆ. ಸಂಸ್ಕೃತಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಸಮಿತಿಯ ಅಧ್ಯಕ್ಷರಾಗಿದ್ದರೆ, ಇಲಾಖೆಯ ನಿರ್ದೇಶಕರು ಕಾರ್ಯದರ್ಶಿಯಾಗಿರುತ್ತಾರೆ. ಎಲ್ಲಾ ಅಕಾಡೆಮಿಗಳ ಅಧ್ಯಕ್ಷರುಗಳು ಸಮಿತಿಯ ಸದಸ್ಯರಾಗಿರುತ್ತಾರೆ

ಈಗ ಮೊದಲಿನಂತೆ ನೇರವಾಗಿ ಅರ್ಜಿ ಸಲ್ಲಿಸುವಂತಿಲ್ಲ. ಅನುದಾನದ ಅಪೇಕ್ಷೆ ಇರುವ ಸಾಂಸ್ಕೃತಿಕ ಸಂಸ್ಥೆಯವರು ತಾವು ಮಾಡಿದ ಕಾರ್ಯಕ್ರಮಗಳ ವಿವರಗಳು, ಸಂಘ ಸಂಸ್ಥೆಗಳ ನೋಂದಣಿ ಪ್ರಮಾಣಪತ್ರಆಡಿಟ್ ರಿಪೋರ್ಟ ಮುಂತಾದ ದಾಖಲೆಗಳೊಂದಿಗೆ ಇಲಾಖೆಯ ವೆಬ್ ಸೈಟ್ ಗೆ ಆನ್ ಲೈನ್ ಮೂಲಕ ನಿಗಧಿತ ಅವಧಿಯೊಳಗೆ ಅರ್ಜಿ  ಸಲ್ಲಿಸಬೇಕಾಗುತ್ತದೆ. ಹೀಗೆ ಸಲ್ಲಿಸಲಾದ ಅರ್ಜಿಗಳನ್ನು ಜಿಲ್ಲಾವಾರು ವಿಭಾಗೀಕರಿಸಿ ಆಯಾ ಜಿಲ್ಲೆಯ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಅಧಿಕಾರಿ ಕಲಾ ಸಂಸ್ಥೆಗಳು ಸಲ್ಲಿಸಿದ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಅರ್ಹ ಸಂಸ್ಥೆಗಳ ಪಟ್ಟಿಯನ್ನು  ಇಲಾಖೆಯ ಬೆಂಗಳೂರು ಕೇಂದ್ರಕ್ಕೆ ರವಾನಿಸುತ್ತಾರೆ. ತದನಂತರ ಹೀಗೆ ಆಯ್ಕೆಯಾದ ಸಂಸ್ಥೆಗಳ ಮರು ಆಯ್ಕೆ ಕಾರ್ಯವು ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಆಯಾ ಅಕಾಡೆಮಿಯ ಅಧ್ಯಕ್ಷರುಗಳ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಅನರ್ಹರೆನಿಸುವವರನ್ನು ಕೈಬಿಟ್ಟು ಅರ್ಹರಾದವರು ಹಿಂದಿನ ವರ್ಷಗಳಲ್ಲಿ ಮಾಡಿದ ಕಾರ್ಯಕ್ರಮಗಳನ್ನು ಆಧರಿಸಿ ಅನುದಾನದ ಮೊತ್ತವನ್ನು ನಿರ್ಧರಿಸಲಾಗುತ್ತದೆ

ಇಷ್ಟೆಲ್ಲಾ ಆದ ಮೇಲೆ ಎರಡನೇ ಹಂತದಲ್ಲಿ ಆಯ್ಕೆಯಾದ ಸಂಸ್ಥೆಗಳ ಪಟ್ಟಿಯನ್ನು ಇಲಾಖೆಯ ನಿರ್ದೇಶಕರು ಹಾಗೂ ಮುಖ್ಯ ಕಾರ್ಯದರ್ಶಿಗಳು ಮತ್ತೊಮ್ಮೆ ಪಟ್ಟಿಯನ್ನು ಪರಿಶೀಲಿಸಿ ಸಂಸ್ಕೃತಿ ಇಲಾಖೆಯ ಸಚಿವರಿಗೆ  ಕಡತವನ್ನು ಕಳುಹಿಸಲಾಗುತ್ತದೆ. ಸಚಿವರ ಸಹಿ ಆದ ನಂತರವಷ್ಟೇ ಅನುದಾನವನ್ನು ಅಧೀಕೃತವಾಗಿ  ಫಲಾನುಭವಿ ಸಂಸ್ಥೆಗಳ ಬ್ಯಾಂಕ್ ಅಕೌಂಟಗಳಿಗೆ ಆರ್ಟಿಜಿಎಸ್ ಮೂಲಕ ಪಾವತಿ ಮಾಡಲಾಗುತ್ತದೆ

ಇಷ್ಟೆಲ್ಲಾ ಪರಿಶೀಲನೆಗೆ ಒಳಗಾಗಿ ಬಂದ ಆಯ್ಕೆ ಪಟ್ಟಿಯನ್ನು ಇಲಾಖೆಯ ಸಚಿವರೇ ಬೋಗಸ್ ಬಿಲ್ ಸಂಸ್ಥೆಗಳಿವೆಯೆಂದು ಅನುರ್ಜಿತಗೊಳಿಸಿದ್ದು ಅಚ್ಚರಿದಾಯಕ. ಅಂದರೆ ಮಾನ್ಯ ಸಚಿವರಿಗೆ ಸಹಾಯಕ ನಿರ್ದೇಶಕರಿಂದ ಹಿಡಿದು ಮುಖ್ಯ ಕಾರ್ಯದರ್ಶಿಗಳ ವರೆಗೆ ತಮ್ಮ ಇಲಾಖೆಯ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲವೆಂದಾಯಿತು. ಅಕಾಡೆಮಿಯ ಅಧ್ಯಕ್ಷರುಗಳಿರುವ ತಜ್ಞರ ಸಮಿತಿಯ ಮೇಲೆ ಅಪನಂಬಿಕೆ ಇದೆ ಎಂದಾಯಿತು. ಕೆಲವು ಬೋಗಸ್ ಬಿಲ್ ಸಂಸ್ಥೆಗಳು ಮಾಡುವ ವಂಚನೆಗಳಿಂದಾಗಿ ಸಾವಿರಾರು ಸಂಘ ಸಂಸ್ಥೆಗಳು ಅನುದಾನದಿಂದ ವಂಚಿತವಾಗಬೇಕಾಯ್ತುಸಂಸ್ಕೃತಿ ಇಲಾಖೆಯ ಅನುದಾನವನ್ನು ಬಯಸಿ ಈ ವರ್ಷ ಆರು ಸಾವಿರದಷ್ಟು ಅರ್ಜಿಗಳು ಆನ್ ಲೈನ್ ಮೂಲಕ ಇಲಾಖೆಯ ವೆಬ್ ಸೈಟಿಗೆ ಬಂದಿವೆ. ಅದರಲ್ಲಿ ಒಂದೂವರೆ ಸಾವಿರದಷ್ಟು ಸಂಸ್ಥೆಗಳು ಅನುದಾನಕ್ಕೆ ಅರ್ಹತೆ ಪಡೆದಿವೆ ಈಗ ಅವುಗಳಿಗೂ ಬೋಗಸ್ ಸಂಸ್ಥೆಗಳಿವೆ ಎಂಬ ನೆಪದಲ್ಲಿ ಅನುದಾನವನ್ನು ತಡೆಹಿಡಿಯಲಾಗಿದೆ.

ಇಷ್ಟಕ್ಕೂ ಬೋಗಸ್ ಸಂಸ್ಥೆಗಳು ಆಯ್ಕೆ ಪಟ್ಟಿಗೆ ಸೇರುವುದಾದರೂ ಹೇಗೆಇಲಾಖೆಯ ಅನುದಾನದ ಸಿಂಹಪಾಲನ್ನು ಪಡೆಯುವ ಕೆಲವೇ ಕೆಲವು ಸಂಸ್ಥೆಗಳು ಫಲಾನುಭವಿಗಳಾಗೋದು ಹೇಗೆ? ಎನ್ನುವ ಪ್ರಶ್ನೆಗೆ ಉತ್ತರ ರಾಜಕಾರಣಿಗಳೇ ಆಗಿದ್ದಾರೆ.

ಇಲ್ಲಿ ಕೆಲವು ಬಲಾಡ್ಯ ಸಂಘ ಸಂಸ್ಥೆಗಳಿದ್ದಾವೆ. ಇನ್ನು ಕೆಲವು ರೋಲ್ ಕಾಲ್ ವ್ಯಕ್ತಿಗಳೂ ಇದ್ದಾರೆ. ಬಲಾಡ್ಯರು ಇಲಾಖೆಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಹಾಗೂ ಆನ್ ಲೈನಿನಲ್ಲಿ ಅಗತ್ಯ ದಾಖಲೆಗಳನ್ನೂ ಸಲ್ಲಿಸುವುದಿಲ್ಲ ಹಾಗೂ ಯಾವುದೇ ಅಧಿಕಾರಿಗಳಿಗೂ ಕ್ಯಾರೆ ಅನ್ನುವುದಿಲ್ಲ. ಅವರದು ಏನಿದ್ದರೂ ಡೈರೆಕ್ಟ್ ಅಟ್ಯಾಕ್. ನೇರವಾಗಿ ಮಂತ್ರಿಗಳಿಂದ ಶಿಪಾರಸ್ಸು ಪತ್ರವನ್ನು ತಂದು ಇಲಾಖೆಯ ಅಧಿಕಾರಿಗಳ ತಲೆ ಮೇಲೆ ಕುಳಿತುಕೊಳ್ಳುತ್ತಾರೆ. ಇನ್ನು ಕೆಲವರು ಮಂತ್ರಿಗಳಿಂದ ಇಲಾಖೆಯ ಕಾರ್ಯದರ್ಶಿ ಹಾಗೂ ನಿರ್ದೇಶಕರುಗಳಿಗೆ ಪೋನ್ ಮಾಡಿಸಿ ಅನುದಾನ ಪಟ್ಟಿಯೊಳಗೆ ನುಸುಳುತ್ತಾರೆ. ಮುಖ್ಯಮಂತ್ರಿಗಳಿಂದಲೇ ರೆಕಮೆಂಡೇಶನ್ ತರುವ ತಿಮಿಂಗಿಲುಗಳೂ ಇವೆ. ಮಂತ್ರಿ ಮಾನ್ಯರಿಂದ ಒತ್ತಡ ಬಂದಾಗ ಇಲಾಖೆಯ ಅಧಿಕಾರಿಗಳು ಇಲ್ಲವೆನ್ನಲಾಗುವುದಿಲ್ಲ. ಇಲ್ಲವೆಂದ ಅಧಿಕಾರಿಗೆ ಉಳಿಗಾಲವಿಲ್ಲ‌. ತೆಗೆದುಕೊಂಡ ಅನುದಾನಕ್ಕೆ ಸರಿಯಾಗಿ ಲೆಕ್ಕಪತ್ರಗಳನ್ನೂ ಬಲಶಾಲಿಗಳು ಕೊಡುವುದಿಲ್ಲ... ಅವರನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ

ಇನ್ನು ಕೆಲವು ರೋಲ್ ಕಾಲ್ ವ್ಯಕ್ತಿಗಳಿದ್ದಾರೆ. ಅವರು ಅಧಿಕಾರಿಗಳನ್ನು ಸದಾ ಬ್ಲಾಕ್ಮೇಲ್ ಮಾಡುತ್ತಲೇ ಬೋಗಸ್ ಬಿಲ್ ಗಳನ್ನು ಕೊಟ್ಟು ಆಯ್ಕೆ ಪಟ್ಟಿಯಲ್ಲಿ ಅಧಿಕೃತವಾಗಿಯೇ ನುಸುಳುತ್ತಾರೆ. ಇಲ್ಲ ಎಂದರೆ ರೋಲ್ ಕಾಲ್ ಪತ್ರಿಕೆಗಳಲ್ಲಿ ಅಧಿಕಾರಿಗಳ ವಿರುದ್ದ ಇಲ್ಲಸಲ್ಲದ್ದನ್ನು ಬರೆಸುತ್ತಾರೆ. ಲೋಕಾಯುಕ್ತಕ್ಕೆ ಸುಳ್ಳು ದೂರು ಕೊಡುತ್ತೇನೆ ಎಂದು ಹೆದರಿಸುತ್ತಾರೆ. ತರಲೆಗಳಿಂದ ತಮ್ಮ ವ್ಯಕ್ತಿತ್ವ ಹಾಗೂ ವೃತ್ತಿಗೆ ಎಲ್ಲಿ ದಕ್ಕೆ ಬರುತ್ತದೋ ಎಂದು ಅಧಿಕಾರಿಗಳೂ ಜಾಣ ಕುರುಡುತನವನ್ನು ತೋರಿ ಅನುದಾನದ ಪಟ್ಟಿಯಲ್ಲಿ ರೋಲ್ಕಾಲಿಗರನ್ನೂ ಸೇರಿಸುತ್ತಾರೆ

ಮತ್ತೆ ಕೆಲವರಿದ್ದಾರೆ.. ಸತ್ಯವೇ ನಾಚುವಂತೆ ಮಾಡದ ಕಾರ್ಯಕ್ರಮಗಳಿಗೆ ಸುಳ್ಳು ದಾಖಲೆ ಹಾಗೂ ಬಿಲ್ಲುಗಳನ್ನು ಸೃಷ್ಟಿಸುವುದರಲ್ಲಿ ನಿಸ್ಸೀಮರು. ಅವರೂ ಸಹ ಕೆಳಹಂತದ ಅಧಿಕಾರಿಗಳನ್ನು ಸರಿಹೊಂದಾಣಿಕೆ ಮಾಡಿಕೊಂಡು ಫಲಾನುಭವಿಗಳಾಗುತ್ತಾರೆಇಂತಹ ಬಲಾಡ್ಯರು ಹಾಗೂ ರೋಲ್ ಕಾಲಿಗರ ಹಾವಳಿಯ ನಡುವೆ ನಿಜಕ್ಕೂ ಅರ್ಹರಾದ ಸಂಘ ಸಂಸ್ಥೆಯವರು ಅನುದಾನದ ಪಟ್ಟಿ ಸೇರಲು ಹರಸಾಹಸ ಪಡುತ್ತಾರೆ

ಆಳುವವರು ಅನರ್ಹರಿಗೆ ಶಿಪಾರಸ್ಸು ಮಾಡದೇ ಹೋದರೆ, ಇಲಾಖೆಯ ನಿಬಂಧನೆಗಳನ್ನು ಖಡ್ಡಾಯವಾಗಿ ಪಾಲಿಸಲೇಬೇಕೆಂಬ ಆದೇಶವನ್ನು ಪಾಲನೆ ಮಾಡಲೇಬೇಕೆಂದು ಸಚಿವರು ಆದೇಶಿಸಿದರೆ ಅನುದಾನದಲ್ಲಿ ಸಿಂಹಪಾಲನ್ನು ಪಡೆಯುವ ಬಲಾಢ್ಯ ಬಾಯಿಬಡುಕ ಸಂಸ್ಥೆಗಳನ್ನು ನಿರ್ಬಂಧಿಸಬಹುದು. ಬೋಗಸ್ ಬಿಲ್ ಸಂಸ್ಥೆಗಳಿವೆಯೆಂದು ಇಡೀ ಆಯ್ಕೆ ಪ್ರಕ್ರಿಯೆಯನ್ನೇ ಅಮಾನತ್ತಿಲ್ಲಿಟ್ಟಿರುವ ಇಲಾಖೆಯ ಸಚಿವ ಡಿ.ಕೆ.ಶಿವಕುಮಾರರ ನಡೆ ಪ್ರಶ್ನಾರ್ಹವಾಗಿದೆ. ಅನುದಾನವನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಸಂಘ ಸಂಸ್ಥೆಗಳ ಮುಖ್ಯಸ್ಥರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿರುತ್ತಾರೆ. ಯಾವುದೇ ಸಂಸ್ಥೆ ಒಪ್ಪಂದ ಪತ್ರದಂತೆ ನಡೆದುಕೊಳ್ಳದೇ ಇದ್ದರೆ ಸಂಸ್ಥೆಯ ವಿರುದ್ದ ಕಾನೂನು ಕ್ರಮವನ್ನು ಜರುಗಿಸಿ ಕ್ರಿಮಿನಲ್ ಮೊಕದ್ದಮೆ ಹೂಡಬಹುದಾಗಿದೆ. ಅನುದಾನವನ್ನು ದುರುಪಯೋಗ ಮಾಡಿಕೊಳ್ಳುವ  ಸಂಸ್ಥೆಗಳನ್ನು ಬ್ಲಾಕ್ ಲಿಸ್ಟಲ್ಲಿ ಇರಿಸಿ ಕೊಟ್ಟ ಅನುದಾನವನ್ನು ಕಾನೂನಿನ ಪ್ರಕಾರವೇ ವಸೂಲಿ ಮಾಡಬಹುದಾಗಿದೆ. ಹಿಂದೆ ದಯಾನಂದರವರು ಇಲಾಖೆಯ ನಿರ್ದೇಶಕರಾಗಿದ್ದಾಗ ಇಂತಹ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಂಡು ಐವತ್ತಕ್ಕೂ ಹೆಚ್ಚು ರೋಲ್ ಕಾಲ್ ಸಂಸ್ಥೆಗಳನ್ನು ಬ್ಲಾಕ್ ಲಿಸ್ಟಿಗೆ ಸೇರಿಸಿದ್ದರು ಹಾಗೂ ಕೆಲವು ವಂಚಕರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಲಿ ಸಚಿವರಿಗೆ ಕಲೆ ಮತ್ತು ಸಂಸ್ಕೃತಿಯ ಮೇಲೆ ಒಂದಿಷ್ಟಾದರೂ ಕಾಳಜಿ ಕಳಕಳಿ ಇದ್ದರೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದ ಹಾಗೂ ಸೂಕ್ತ ದಾಖಲೆಗಳನ್ನು ಸಲ್ಲಿಸದ ಸಂಸ್ಥೆಗಳು ಅದೆಷ್ಟೇ ಬಲಾಡ್ಯವಾಗಿದ್ದರೂ ಅಂತವರಿಗೆ ಅನುದಾನವನ್ನು ನಿಲ್ಲಿಸಲಿ. ಕೂಡಲೇ ಆಯ್ಕೆ ಪಟ್ಟಿಯ ಕಡತಕ್ಕೆ ಸಹಿ ಹಾಕಿ ಅನುದಾನವನ್ನು ಮಂಜೂರು ಮಾಡಲಿ. ಆಯ್ಕೆ ಪಟ್ಟಿಯೊಳಗೆ ತೂರಿಕೊಂಡ ಬೋಗಸ್ ಸಂಸ್ಥೆಗಳು ಅನುದಾನವನ್ನು ದುರ್ಬಳಿಕೆ ಮಾಡಿಕೊಂಡರೆ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಅಧಿಕಾರಿಗಳಿಗೆ ಆದೇಶಿಸಲಿ. ಕರ್ನಾಟಕದ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ಎಲ್ಲಾ ರೀತಿಯ ಅಗತ್ಯ ಸಹಕಾರವನ್ನು ನೀಡಲಿ. ಮುಳ್ಳುಗಳಿವೆಯೆಂದು ಹೂಗಳ ಕತ್ತು ಹಿಚುಕದಿರಲಿ.. ಹಾವುಗಳಿವೆಯೆಂದು ಇಡೀ ಕಾಡನ್ನೇ ನಾಶಗೊಳಿಸದಿರಲಿ..

- ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ