ಶುಕ್ರವಾರ, ಫೆಬ್ರವರಿ 15, 2019

ಪುರಸ್ಕೃತರಿಗೆ ಸಂತೃಪ್ತಿ ತಂದ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ :




ಅಲ್ಲಿ ಅವಸರವೂ ಸಮಾಧಾನದ ಬೆನ್ನೇರಿತ್ತು. ಯಾರಿಗೂ ಯಾವುದೇ ರೀತಿಯ ದಾವಂತಗಳಿರಲಿಲ್ಲ. ಅಲ್ಲಿ ಯಾರೂ ಅಮುಖ್ಯರಾಗಿರದೇ ಎಲ್ಲರೂ ಮುಖ್ಯರೇ ಆಗಿದ್ದರು. ಅದು.. ಹಲವು ದಶಕಗಳ ಕಾಲ ರಂಗಕಾಯಕದಲ್ಲಿ ಸಾರ್ಥಕ ಸಾಧನೆ ಮಾಡಿದವರ ಮುಡಿಗೆ ಪ್ರಶಸ್ತಿ ಗರಿಗಟ್ಟುವ ಸಮಯ. ರಂಗಸಾಧಕರನ್ನು ಅತ್ಯಂತ ಆತ್ಮೀಯತೆ ಹಾಗೂ ಪ್ರೀತಿಯಿಂದ ಗೌರವಿಸಿದ್ದೇ ನಾಟಕ ಅಕಾಡೆಮಿಯ ಸೌಭಾಗ್ಯ.

ಹೌದು.. ಫೆಬ್ರುವರಿ 12ರಂದು ಉಡುಪಿಯ ಪುರಭವನದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯು 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು. ಇಡೀ ಸಮಾರಂಭ ಉಡುಪಿ ನೆಲದ ಗುಣವಾದ ನಿರಾತಂಕ ವಾತಾವರಣದಂತೆಯೇ ನಿರುಮ್ಮಳವಾಗಿ ನಡೆಯಿತು. ಪ್ರಶಸ್ತಿ ಪ್ರದಾನ ಸಮಾರಂಭದ ಕೆಲವಾರು ಪ್ರಮುಖ ವಿಶೇಷ ಸಂಗತಿಗಳು ಹೀಗಿವೆ..

1.     ರಾಜ್ಯಾದ್ಯಂತ ರಂಗಭೂಮಿಯಲ್ಲಿ ಸಾಧನೆ ಮಾಡಿದ 29 ಸಾಧಕರನ್ನು ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಮಾಡಿ ಅವರನ್ನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯಂತ ಪ್ರೀತಿಯಿಂದ ಗೌರವಿಸಲಾಯಿತು. ಹಿರಿಯ ರಂಗಕರ್ಮಿ ಪಿ.ಗಂಗಾಧರಸ್ವಾಮಿಯವರಿಗೆ  ಜೀವಮಾನ ಸಾಧನೆಯ ಗೌರವ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿದ್ದು ನಾಟಕ ಅಕಾಡೆಮಿಗೆ ಹೆಮ್ಮೆ ತರುವಂತಹುದಾಗಿತ್ತು. ಜೊತೆಗೆ ಪುಸ್ತಕ ಬಹುಮಾನವನ್ನೂ ಕೊಡಮಾಡಲಾಯಿತು.


2.  ಈ ಸಲ ಯಾವುದೇ ಪ್ರೋಟೋಕಾಲ್‌ಗಳ ಭಾರಗಳಿಲ್ಲದೇ, ಪಕ್ಷ ರಾಜಕಾರಣಿಗಳ ಉಪಸ್ಥಿತಿಯ ಹಂಗಿಲ್ಲದೇ, ಸಾಂಸ್ಕೃತಿಕ ರಾಜಕಾರಣಿಗಳ ಸೋಂಕಿಲ್ಲದೇ, ಅನಗತ್ಯವಾಗಿ ಬಂದು ನಿಂತು ಪೊಟೋಗಳಿಗಾಗಿ ಪೋಸ್ ಕೊಡುವ ಅಧಿಕಪ್ರಸಂಗಿಗಳ ಉಪಟಳವಿಲ್ಲದೇ, ಇಡೀ ಪ್ರಶಸ್ತಿ ಪ್ರದಾನ ಸಮಾರಂಭ ಅತ್ಯಂತ ನೆಮ್ಮದಿಯಾಗಿ ನೆರವೇರಿತು. ಪ್ರಶಸ್ತಿಗಳನ್ನು ಕೊಟ್ಟವರಿಗೂ ತೆಗೆದುಕೊಂಡವರಿಗೂ ಈ ಸಮಾರಂಭ ಸಂತೃಪ್ತಿ ತಂದಿದ್ದಂತೂ ಸುಳ್ಳಲ್ಲ.


3.  ಸಮಾರಂಭದಾದ್ಯಂತ ಎಲ್ಲರ ಗಮನ ಸೆಳೆದಿದ್ದು ಆಯೋಜಕರ ಶಿಸ್ತು ಮತ್ತು ಸಂಯಮ. ರಂಗಗೀತೆ, ನಾಡಗೀತೆಗಳೊಂದಿಗೆ ಆರಂಭವಾದ ಕಾರ್ಯಕ್ರಮ ಎಲ್ಲಿಯೂ ವ್ಯತ್ಯಯವಾಗದೇ ಸಾಂಗವಾಗಿ ಸಾಗಿ ಪ್ರೇಕ್ಷಕರಿಗೆ ಹಾಗೂ ಪ್ರಶಸ್ತಿ ಪುರಸ್ಕೃತರ ಅಭಿಮಾನಿಗಳಿಗೆ ಮುದನೀಡಿತು.  ನಿರೂಪಣೆಯಿಂದ ಹಿಡಿದು ಪ್ರತಿಯೊಬ್ಬ ಸಾಧಕರನ್ನು ಪ್ರೀತಿಯಿಂದ ಪರಿಚಯಿಸಿ ಒಬ್ಬೊಬ್ಬರನ್ನೇ ಆತ್ಮೀಯವಾಗಿ ಸನ್ಮಾನಿಸಿದ ಪರಿಯಂತೂ ಪ್ರಶಸ್ತಿ ಪುರಸ್ಕೃತರ ನೆನಪಿನ ಚಿತ್ತ ಬಿತ್ತಿಯಲ್ಲಿ ಅಜರಾಮರವಾಗುವಂತಿತ್ತು.


4.   ಹಿರಿಯ ರಂಗಕರ್ಮಿ ಹಾಗೂ ದೇಶದ ಹೆಮ್ಮೆಯ ಚಲನಚಿತ್ರ ನಿರ್ದೇಶಕರಾದ ಎಂ.ಎಸ್.ಸತ್ಯೂರವರು ಪ್ರತಿಯೊಬ್ಬ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿದ ರೀತಿ ಬೆರಗುಗೊಳಿಸುವಂತಹದು. ಯಾಕೆಂದರೆ ಅವರಿಗೆ ಈಗ 88 ವರ್ಷದ ವಯೋಮಾನ. ಈ ಇಳಿವಯದಲ್ಲೂ ಸಹ ಅತ್ಯಂತ ಉತ್ಸಾಹದಿಂದ ಪ್ರತಿಯೊಬ್ಬ ಸಾಧಕರನ್ನು ಎರಡು ಗಂಟೆಗಳ ಕಾಲ ಸನ್ಮಾನಿಸಿದ್ದು ಗಮನಾರ್ಹವಾದದ್ದು. 

5.  ಅಲ್ಲಿ ಯಾವುದೇ ಭಾಷಣಗಳ ಅತಿರೇಕಗಳಿರಲಿಲ್ಲ. ಅತಿಥಿಗಳು ಹತ್ತು ನಿಮಿಷಗಳಿಗಿಂತ ಹೆಚ್ಚು ಮಾತಾಡಲೂ ಹೋಗಲಿಲ್ಲ. ಅವರಾಡಿದ ಮಾತುಗಳಲ್ಲಿ ಗಟ್ಟಿಕಾಳುಗಳಿದ್ದವೇ ಹೊರತು ಜೊಳ್ಳು ತುಂಬಿರಲಿಲ್ಲ. ಎಂ.ಎಸ್.ಸತ್ಯೂರವರು, ಮುರಳೀಧರ ಉಪಾದ್ಯಾಯರವರು, ಅಕಾಡೆಮಿಯ ಅಧ್ಯಕ್ಷರಾದ ಜೆ.ಲೊಕೇಶರವರು ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶುಕುಮಾರರವರುಗಳೆಲ್ಲಾ ರಂಗಭೂಮಿಯ ಕಾಳಜಿ ಹಾಗೂ ಹಿತಾಸಕ್ತಿ ಕುರಿತು ಸಂಕ್ಷಿಪ್ತವಾಗಿ ಹಾಗೂ ಅಷ್ಟೇ ಸ್ಪಷ್ಟವಾಗಿ ಮಾತಾಡಿದರು. ಭಾಷಣಗಳು ಇಲ್ಲಿ ಭಾರವೆನಿಸದೇ ಆತ್ಮೀಯವೆನಿಸಿದ್ದು ಈ ಸಮಾರಂಭದ ವಿಶೇಷತೆಯಾಗಿತ್ತು.


6.  ಇಡೀ ಕಾರ್ಯಕ್ರಮದ ನಿರೂಪಣೆ ಮಾಡಿದ ನಾಟಕ ಅಕಾಡೆಮಿಯ ಸದಸ್ಯರಾದ ಬೆಲೂರು ರಘುನಂದನ್‌ರವರು ಒಂದೇ ಒಂದು ಅನಗತ್ಯವೆನಿಸುವ ಮಾತುಗಳನ್ನಾಡದೇ ಎಷ್ಟು ಬೇಕೋ ಅಷ್ಟು ಮಾತ್ರ ಮುತ್ತಿನಂತಹ ಮಾತಾಡಿ ಸಮಾರಂಭದಲ್ಲಿ ಸಹ್ಯವಾದ ವಾತಾವರಣವನ್ನು ನಿರ್ಮಿಸಿದರು. ಪ್ರಶಸ್ತಿ  ಪುರಸ್ಕೃತರ ಕುರಿತು ಪರಿಚಯ ಮಾಡಿದ ಅಕಾಡೆಮಿಯ ಸದಸ್ಯರೂ ಸಹ ಸರದಿಯಂತೆ ಬಂದು ಸಾಧಕರ ಕುರಿತು ಪರಿಚಯಾತ್ಮಕ ಮಾತುಗಳನ್ನು ಹೇಳಿ ನಿರ್ಗಮಿಸಿದರು. ಇಲ್ಲಿ ಯಾರೂ ಪೊಟೋಗಳಿಗೆ ಪೋಸ್ ಕೊಡುವ, ಇಲ್ಲವೇ ಅನಗತ್ಯವಾಗಿ ಬಂದು ವೇದಿಕೆಯಲ್ಲಿ ತಮ್ಮ ಅಸ್ತಿತ್ವವನ್ನು ತೋರಿಸುವಂತಹ ಅಧಿಕಪ್ರಸಂಗತನ ಮಾಡದೇ ಇರುವುದೇ ಸಮಾರಂಭದ ಶಿಸ್ತಿಗೆ ಸಾಕ್ಷಿಯಾಗಿತ್ತು.

7.  ಪ್ರಸ್ತುತ ನಾಟಕ ಅಕಾಡೆಮಿಯ ಸಾಧನೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಬೇಕಾಗಿದ್ದ ನಾಟಕ ಅಕಾಡೆಮಿಯ ಅಧ್ಯಕ್ಷರೂ ಸಹ ಈಗಾಗಲೇ ಮಾಡಿದ ಸಾಧನೆಗಳ ಬಗ್ಗೆ ಅತಿಯಾಗಿ ಹೇಳಿಕೊಳ್ಳದೇ ಮುಂದೆ ಆಗಬಹುದಾದ ಕಾರ್ಯಯೋಜನೆಗಳ ಕುರಿತು ಸಂಕ್ಷಿಪ್ತವಾಗಿ ಹೇಳಿ ತಮ್ಮ ಬಾಕಿ ಕನಸುಗಳನ್ನು ಸಭಿಕರ ಚಿತ್ತಗಳಲ್ಲಿ ಬಿತ್ತನೆ ಮಾಡಿದರು. ರಂಗಭೂಮಿ ಪ್ರಾಧಿಕಾರ ರಚನೆಯಾಗಬೇಕು, ರಾಜ್ಯಾದ್ಯಂತ ಚಿಕ್ಕಪುಟ್ಟ ರಂಗಮಂದಿರಗಳನ್ನು ನಿರ್ಮಿಸಬೇಕು, ಶಾಲೆಗಳಲ್ಲಿ  ರಂಗಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಎನ್ನುವ ಯೋಜನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದ ನೆಪದಲ್ಲಿ ರಂಗಭೂಮಿಯ ಹಿತಾಸಕ್ತಿಯ ಕುರಿತ ಮಾತುಗಳೇ ಇಡೀ ಸಮಾರಂಭದಲ್ಲಿ ಪ್ರತಿದ್ವನಿಸಿದವು.


8.  ಈ ಸಲದ ಪ್ರಶಸ್ತಿ ಪ್ರದಾನ ಸಮಾರಂಭದ ಇನ್ನೊಂದು ವಿಶೇಷವೇನೆಂದರೆ ಪ್ರಶಸ್ತಿ ಪುರಸ್ಕೃತರ ಮೆರವಣಿಗೆ. ಟೌನ್‌ಹಾಲ್ ಮುಖ್ಯ ಪ್ರವೇಶದ್ವಾರದಿಂದ ಎಲ್ಲಾ ಪುರಸ್ಕೃತರನ್ನು ಕಂಗೀಲು ಜಾನಪದ ನೃತ್ಯದ ಜೊತೆಗೆ ಮೆರವಣಿಗೆಯಲ್ಲಿ ಕರೆತಂದು, ಪ್ರತಿಯೊಬ್ಬ ಸಾಧಕರಿಗೂ ವೀಳ್ಯವನ್ನು ಕೊಟ್ಟು ಆತ್ಮೀಯವಾಗಿ ಸ್ವಾಗತಿಸಿ ವೇದಿಕೆಯಲ್ಲಿ ಕೂರಿಸಲಾಯಿತು. ಕರಾವಳಿ ಕರ್ನಾಟಕದ ಜನಪ್ರೀಯ ಜಾನಪದ ನೃತ್ಯಪ್ರಕಾರವು ಅತ್ಯಂತ ಆಕರ್ಷಣೀಯವಾಗಿದ್ದು ನೋಡುಗರಲ್ಲಿ ಸಂಚಲನವನ್ನುಂಟು ಮಾಡಿದ್ದಂತೂ ದಿಟ. 




9.  ಸಾವಿರ ನಾಟಕಗಳಲ್ಲಿ ಅಭಿನಯಿಸಿ, ಐನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿರುವ 72 ವರ್ಷ ವಯೋಮಾನದ ಹಾಸನ ಜಿಲ್ಲೆಯ ಚಿಕ್ಕಹೊನ್ನೇನಹಳ್ಳಿ ಗ್ರಾಮದ ನಿಕೋಲಸ್‌ರವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ನಂತರ ನಡೆದ ಪವಾಡಸದೃಶ ಘಟನೆಯನ್ನು ಇಲ್ಲಿ ನೆನೆಯಲೇಬೇಕು. ನಿಕೋಲಸ್‌ರವರು ತೀವ್ರ ಅನಾರೋಗ್ಯದಿಂದಾಗಿ ಎದ್ದು ನಿಲ್ಲಲೂ ಶಕ್ತಿಯಿಲ್ಲದೇ ಹಾಸಿಗೆ ಹಿಡಿದಿದ್ದರು. ಅವರು ಬದುಕುವ ಆಸೆಯನ್ನೇ ಕುಟುಂಬದವರು ಬಿಟ್ಟಿದ್ದರು. ಆದರೆ.. ಯಾವಾಗ ನಾಟಕ ಅಕಾಡೆಮಿ ಪ್ರಶಸ್ತಿ ಬಂದಿದ್ದು ಅವರ ಕಿವಿಗೆ ಬಿದ್ದಿತೋ ಅದೆಂತಹುದೋ ಅವ್ಯಕ್ತ ಶಕ್ತಿ ಅವರಲ್ಲಿ ಆವಾಹನೆಗೊಂಡಂತಾಗಿ ದಿನದಿಂದ ದಿನಕ್ಕೆ ಚೇತರಿಸಿಕೊಂಡರು. ದೇಹ ಕಂಪಿಸುತ್ತಿದ್ದರೂ ಸ್ವತಃ  ನಡೆದುಕೊಂಡು ಬಂದು ನಗುಮುಖದಿಂದ ಅಕಾಡೆಮಿಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಪ್ರಶಸ್ತಿ ನನ್ನ ಆರೋಗ್ಯ ಹಾಗೂ ಆಯಸ್ಸನ್ನು ಹೆಚ್ಚಿಸಿತು ಎಂದು ನಿಕೋಲಸ್ ಲವಲವಿಕೆಯಿಂದ ಹೇಳಿದ ಮಾತುಗಳು ಅಚ್ಚರಿಯನ್ನುಂಟುಮಾಡಿದವು. ವೈದ್ಯರಿಂದಾಗದ ಕೆಲಸವನ್ನು ಪ್ರಶಸ್ತಿಯೊಂದು ಮಾಡಿತಾ? ಹತಾಷೆಗಳಿಂದ ಹಾಸಿಗೆ ಹಿಡಿದವರಲ್ಲಿ ಮತ್ತೆ ಬದುಕುವ ಆಸೆಯನ್ನು ಬಿತ್ತಿತಾ? ಗೊತ್ತಿಲ್ಲ.. ಆದರೆ.. ಈ ರೀತಿ ಆಗಿದ್ದಕ್ಕೆ ನಿಕೊಲಸ್‌ರವರು ಗುಣಮುಖರಾಗಿದ್ದೇ ಸಾಕ್ಷಿಯಾಗಿದೆ. ಅಕಾಡೆಮಿಯು ಪ್ರಶಸ್ತಿ ಕೊಟ್ಟಿದ್ದು ಸಾರ್ಥಕವಾಗಿದೆ.  

10.  ರಾಯಚೂರು ಜಿಲ್ಲೆಯ ಕರಡಿಗುಡ್ಡ ಗ್ರಾಮದ ವಿಜಯಾನಂದ ಕರಡಿಗುಡ್ಡರವರು ವೃತ್ತಿರಂಗಭೂಮಿಯಲ್ಲಿ ಹೆಣ್ಣು ಪಾತ್ರಕ್ಕೆ ಹೆಸರಾದವರು. ಹತ್ತು ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ಸ್ತ್ರೀ ಪಾತ್ರವನ್ನು ಮಾಡಿದ ಹೆಗ್ಗಳಿಕೆ ಇವರದು. ಪಂಚಾಕ್ಷರಿ ಗವಾಯಿಗಳು ವಿಜಯಾನಂದರವರ ಸ್ತ್ರೀಪಾತ್ರವನ್ನು ಮೆಚ್ಚಿ ತಮ್ಮ ನಾಟಕ ತಂಡಕ್ಕೆ ಸೇರಿಸಿಕೊಂಡು ಬದುಕಿನಾದ್ಯಂತ ಬ್ರಹ್ಮಚಾರಿಯಾಗಿದ್ದು ರಂಗಸೇವೆ ಮಾಡು ಎಂದು ಹೇಳಿದ್ದನ್ನು ಚಾಚೂ ತಪ್ಪದೇ ನಡೆಸಿಕೊಂಡು ಬಂದ ಈ ನಟ ಐವತ್ತು ವರ್ಷ ದಾಟಿದ್ದರೂ ಇನ್ನೂ ಅವಿವಾಹಿತರಾಗಿಯೇ ಉಳಿದು ನಟನೆಯನ್ನೇ ಬದುಕಾಗಿಸಿಕೊಂಡಿದ್ದು ಈ ಕಾಲದ ವಿಸ್ಮಯವೇ ಆಗಿದೆ. ಇಂತಹ ಅಪರೂಪದ ವ್ಯಕ್ತಿಯನ್ನು ಗುರುತಿಸಿ ಪ್ರಶಸ್ತಿಯನ್ನು ಕೊಟ್ಟ ನಾಟಕ ಅಕಾಡೆಮಿಯ ನಡೆ ಅಭಿನಂದನೀಯ. ಹೀಗೆ.. . ಸಲ ಪ್ರಶಸ್ತಿ ಪುರಸ್ಕೃತರಾದ ಬಹುತೇಕರಲ್ಲಿ ಒಂದೊಂದು ರೀತಿಯ ವಿಶೇಷತೆ ಇರುವುದೇ ಈ ಬಾರಿಯ ವಿಶೇಷತೆ. 


11.  ಪ್ರಶಸ್ತಿ ಪ್ರದಾನ ಸಮಾರಂಭದ ಭಾಗವಾಗಿ ಮೂರು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಪದ್ಮಾ ಕೊಡಗುರವರ ಉಡುಪಿ ಜಿಲ್ಲಾ ರಂಗಮಾಹಿತಿ, ಬಸವರಾಜ ಬೆಂಗೇರಿಯವರ “ಅವಿಭಜಿತ ಧಾರವಾಡ ಜಿಲ್ಲಾ ರಂಗಮಾಹಿತಿ” ಹಾಗೂ ಗಣೇಶ ಅಮೀನಗಡರವರು ರಚಿಸಿದ ರಹಿಮಾನವ್ವ ಕಲ್ಮನಿ.. ಈ ಮೂರೂ ಪ್ರಮುಖ ಪುಸ್ತಕಗಳು ಬಿಡುಗಡೆಗೊಂಡು ಅರ್ಧ ಬೆಲೆಗೆ ಮಾರಾಟಗೊಂಡವು.

12.  ಸಾಧಕರನ್ನು ಅಭಿನಂದಿಸಲು ಆಹ್ವಾನಿತರಾಗಿ ಬಂದ ಎಂ.ಎಸ್.ಸತ್ಯೂರವರು ರಂಗಭೂಮಿಯಲ್ಲಿ ಕೆಲಸಮಾಡುವುದು ಒಂದು ರೀತಿಯಲ್ಲಿ ಹುಚ್ಚು. ಈ ಹುಚ್ಚರನ್ನು ಮೆಚ್ಚಿ ಅಕಾಡೆಮಿ ಗೌರವಿಸುತ್ತಿದೆ. ಈ ಹುಚ್ಚು ಮತ್ತು ಆ ಅವಿವೇಕತನ ಇಲ್ಲದೇ ಹೋದರೆ ನಾಟಕ ಮಾಡಲು ಸಾಧ್ಯವೇ ಇಲ್ಲಾ. ಈ ನಾಟಕದ ಹುಚ್ಚು ಇನ್ನೂ ಹೆಚ್ಚಾಗಿ ಬೆಳೆದು ಕರ್ನಾಟಕದ ತುಂಬಾ ಹರಡಿ ಎಲ್ಲರೂ ಹುಚ್ಚರಾಗಿ ಬಂದು ನಾಟಕ ನೋಡಲಿ ಎಂದು ಹಾರೈಸಿ ಪ್ರೇಕ್ಷಕರನ್ನು ರಂಜಿಸಿದ್ದೂ ಸಹ ಗಮನಾರ್ಹವೆನಿಸಿತು.  

13.  ಈ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟಕರಾಗಿ ಖ್ಯಾತ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪನವರು ಬರಬೇಕಾಗಿತ್ತು. ವಿಮಾನದಲ್ಲಿ ಬರುತ್ತೇನೆಂದೂ ಹೇಳಿದ್ದರು. ಆದರೆ.. ಕೊನೆ ಗಳಿಗೆಯಲ್ಲಿ ಅತ್ತಿಗೆಯವರಿಗೆ ಹುಷಾರಿಲ್ಲವೆಂದು ಹೇಳಿ ಬಾರದೇ ಹೋದರು. ರಂಗಕರ್ಮಿಗಳಿಗೆ ಇರುವ ಬದ್ಧತೆಯನ್ನು ಸಾಹಿತಿಗಳಾದ ಬರಗೂರರಿಂದ ಅಪೇಕ್ಷಿಸಲಾಗಿತ್ತು. ವಿಮಾನದಲ್ಲಿ ಬಂದು ಹೋಗುವ ಅನುಕೂಲತೆಯನ್ನೂ ಅಕಾಡೆಮಿ ವಿಶೇಷವಾಗಿ ಮಾಡಿಕೊಡಲಾಗಿತ್ತು. ಆದರೆ.. ಕೊನೆಯ ಗಳಿಗೆಯಲ್ಲಿ ಬಾರದೇ ಹೋಗಿದ್ದು ಪ್ರಶ್ನಾರ್ಹವಾಯಿತು.. ಮಾತುಕೊಟ್ಟ ಮೇಲೆ ಶತಾಯ ಗತಾಯ ಬರಬೇಕೆಂಬ ರಂಗನಿಷ್ಟೆಯನ್ನು ಬರಗೂರರಲ್ಲಿ ಬಯಸಿದ್ದೇ ತಪ್ಪಾಯಿತು. ಬರಗೂರರ ಬದಲಾಗಿ ಉಡುಪಿಯ ಚಿಂತಕ ಮುರಳೀಧರ ಉಪಾದ್ಯಾಯರು ಉದ್ಘಾಟನೆ ಮಾಡಿದರು. ಆದರೂ ಬರಗೂರರ ಬರುವಿಕೆಯನ್ನು ಎದುರುನೋಡುತ್ತಿದ್ದವರಿಗೆ ನಿರಾಸೆ ಆಗಿದ್ದಂತೂ ಸತ್ಯ.



14.  ಹಲವಾರು ಸಕಾರಾತ್ಮಕ ಸಂಗತಿಗಳ ನಡುವೆಯೇ ಒಂದಿಷ್ಟು ಚಿಕ್ಕಪುಟ್ಟ ಲೋಪಗಳೂ ಇದ್ದದ್ದಂತೂ ಸತ್ಯ. ಜೀವಮಾನದ ರಂಗಗೌರವ ಪ್ರಶಸ್ತಿಗೆ ಭಾಜನರಾದ ಪಿ.ಗಂಗಾಧರಸ್ವಾಮಿಯವರಿಗೆ ಒಂದೆರಡು ಮನದಾಳದ ಮಾತುಗಳನ್ನು ಹೇಳಲು ಅವಕಾಶ ಕೊಡಬೇಕಾಗಿತ್ತು, ಕೊಡಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಸಚಿವರು ಖುದ್ದಾಗಿ ಬರಲಾಗದಿದ್ದರೂ ಲಿಖಿತ ಸಂದೇಶವನ್ನು ಕಳುಹಿಸಿದ್ದು ಅದನ್ನು ಸಮಾರಂಭ ಆರಂಭವಾಗುವುದಕ್ಕಿಂತಾ ಮುನ್ನ ಓದಬೇಕಾಗಿತ್ತು ಓದಲಿಲ್ಲ. ವೇದಿಕೆಯ ಹಿಂದಿನ ಕೆಂಪು ಪರದೆಯ ಮೇಲೆ ಬರೆದ ಪ್ರತಿ ಪದಗಳ ನಡುವೆ ಸ್ಪೇಸ್ ಇರಬೇಕಾಗಿತ್ತು, ಇರಲಿಲ್ಲ. ಪ್ರಶಸ್ತಿ ಪುರಸ್ಕೃತರ ಕುರಿತ ಮಾಹಿತಿ ಪುಸ್ತಿಕೆಯನ್ನು ವೇದಿಕೆಯ ಮೇಲೆ ಬಿಡುಗಡೆಗೊಳಿಸಿದ ನಂತರ ಸಭಿಕರಿಗೆ ಹಂಚಬೇಕಿತ್ತು, ಹಾಗೆಯೇ ಹಂಚಲಾಯ್ತು. ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಂತ್ಯದಲ್ಲಿ ನಾಟಕ ಪ್ರದರ್ಶನ ಇಲ್ಲವೇ ರಂಗದೃಶ್ಯಾವಳಿ ಅಭಿನಯವನ್ನಾದರೂ ಏರ್ಪಡಿಸಿದ್ದರೆ ಸೂಕ್ತವೆನಿಸುತ್ತಿತ್ತು, ಹತ್ತು ಸಾಧಕರಿಗೆ ಪ್ರಶಸ್ತಿ ಕೊಟ್ಟಾದ ಮೇಲೆ ಒಂದು ರಂಗಗೀತೆಯನ್ನಾದರೂ ಹಾಡಿಸಿದ್ದರೆ ಪ್ರಶಸ್ತಿ ಪ್ರದಾನತೆಯ ಏಕತಾನತೆಯನ್ನು ಕಡಿಮೆಮಾಡಬಹುದಾಗಿತ್ತು. ಎದ್ದು ಹೋಗುತ್ತಿದ್ದ ರಂಗಾಸಕ್ತ ಪ್ರೇಕ್ಷಕರನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಆಕರ್ಷಣೆಯಿಂದಲಾದರೂ ತಡೆಹಿಡಿದು ಕೊನೆವರೆಗೂ ನಿಲ್ಲಸಬಹುದಾಗಿತ್ತು. ಆದರೆ ಹಾಗಾಗಲಿಲ್ಲ. ಪ್ರಶಸ್ತಿ ಪ್ರದಾನ ಮಾಡುವಾಗ ಹಿನ್ನೆಲೆ ಸಂಗೀತವನ್ನು ಹಾಕಿ ಜೊತೆಗೆ ಬೆಳಕಿನ ವಿನ್ಯಾಸದಲ್ಲಿ ಒಂಚೂರು ಬದಲಾವಣೆ  ಮಾಡಿ ಮೂಡ್ ಕ್ರೀಯೇಟ್ ಮಾಡಬಹುದಾಗಿತ್ತು, ಮಾಡಲಿಲ್ಲಾ.  ನಗಣ್ಯ ಎನಿಸುವ ಈ ಅಗ್ರಗಣ್ಯ ವಿಷಯಗಳಿಗೂ ಮಹತ್ವ ಕೊಟ್ಟಿದ್ದೇ ಆಗಿದ್ದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಪರಿಪೂರ್ಣವಾಗುವ ಸಾಧ್ಯತೆಯಿತ್ತು.. ಅಪೂರ್ಣವಾಯಿತು.


ಯಾರೇನೇ ಹೇಳಲಿ.. ಈ ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭವು ಅತ್ಯಂತ ಅಚ್ಚುಕಟ್ಟಾಗಿ ಶಿಸ್ಸುಬದ್ದವಾಗಿ ನೆರವೇರಿದ್ದಕ್ಕೆ ಉಡುಪಿಯ ರಂಗಾಸಕ್ತರು ಹಾಗೂ ಪ್ರಶಸ್ತಿ ಪುರಸ್ಕೃತರ ಅಭಿಮಾನಿಗಳು ಸಾಕ್ಷಿಯಾದರು. ಈ ಸಮಾರಂಭದ ಯಶಸ್ಸಿನ ಹಿಂದೆ ನಾಟಕ ಅಕಾಡೆಮಿಯ ಅಧ್ಯಕ್ಷರ ಸಂಘಟನಾ ಶಕ್ತ್ತಿ ಹಾಗೂ ಕ್ರಮಬದ್ದವಾದ ಯೋಜನೆಗಳು ಕೆಲಸ ಮಾಡಿದವು. ಅಧ್ಯಕ್ಷರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಾಯೋಗಿಕವಾಗಿ ಶ್ರಮಿಸಿದ್ದು ಪ್ರಸ್ತುತ ನಾಟಕ ಅಕಾಡೆಮಿಯ ಸದಸ್ಯರಾದ ಬಾಸುಮ ಕೊಡಗು. ತನ್ನೆಲ್ಲಾ ಕುಟುಂಬ ಪರಿವಾರವನ್ನು ಸೇರಿಸಿಕೊಂಡು ಹತ್ತಾರು ದಿನಗಳ ಕಾಲ ಪ್ರಶಸ್ತಿ ಪ್ರದಾನ ಸಮಾರಂಭದ ಯಶಸ್ಸಿಗಾಗಿ ಉಡುಪಿಯ ರಂಗಕರ್ಮಿ ಬಾಸುಮ ಕೆಲಸ ಮಾಡಿದ ರೀತಿ ನಿಜಕ್ಕೂ ಅಭಿನಂದನಾರ್ಹ. ಇದೆಲ್ಲದಕ್ಕೂ ಪೂರಕವಾಗಿ ನಾಟಕ ಅಕಾಡೆಮಿಯ ಸದಸ್ಯರು, ರೆಜಿಸ್ಟ್ರಾರ್ ಹಾಗೂ ಸಿಬ್ಬಂದಿಗಳ ಸಹಕಾರ ಸ್ಮರಣಾರ್ಹ.  ಒಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹೇಗೆ ಮಾಡಬೇಕೆಂಬುದಕ್ಕೆ ಮಾದರಿಯೆಂಬಂತೆ ಉಡುಪಿ ಸಮಾರಂಭ ಮೂಡಿಬಂದಿತು. ಪ್ರಶಸ್ತಿ ಪುರಸ್ಕೃತರಾದ ಪ್ರತಿಯೊಬ್ಬರಿಗೂ ಹರುಷ ತಂದಿತು. ಇಡೀ ಪ್ರಶಸ್ತಿ ಪ್ರದಾನ ಸಮಾರಂಭ ಯಶಸ್ವಿಯಾಯಿತು.. 

-ಶಶಿಕಾಂತ ಯಡಹಳ್ಳಿ..       





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ