ಶುಕ್ರವಾರ, ಫೆಬ್ರವರಿ 8, 2019

ಆರ್.ನಾಗೇಶ್ ನಿರ್ದೇಶನದ ನಾಟಕಗಳಲ್ಲಿ ಪ್ರತಿಭಟನೆಯ ನೆಲೆಗಳು :



ಕನ್ನಡ ಹವ್ಯಾಸಿ ರಂಗಭೂಮಿಗೆ ವೈಚಾರಿಕ ನೆಲಗಟ್ಟು ಹಾಗೂ ಪ್ರತಿಭಟನೆಯ ಪಟ್ಟುಗಳನ್ನು ತಂದುಕೊಟ್ಟವರಲ್ಲಿ  ಆರ್.ನಾಗೇಶರವರು ಮೊದಲಿಗರು. ಅವರಲ್ಲಿದ್ದ ಬಂಡಾಯದ ಮನೋಭಾವ ಅವರು ರಂಗಭೂಮಿಗೆ ಬರುವುದಕ್ಕಿಂತಲೂ ಮೊದಲೇ ರೂಪಿತವಾದಂತಹುದು. ನಾಗೇಶರವರು ಪ್ರೌಢ ಶಾಲೆಯಲ್ಲಿದ್ದಾಗಲೇ ತಮಿಳು ಭಾಷಾ ಸಹಪಾಟಿಗಳಿಂದ ಪೆರಿಯಾರ್‌ರವರ ವಿಚಾರಗಳ ಬಗ್ಗೆ ತಿಳಿದುಕೊಂಡು ಸ್ಥಾಪಿತ ಹಿತಾಸಕ್ತಿಗಳ ಶಡ್ಯಂತ್ರಗಳನ್ನು ವಿರೋಧಿಸತೊಡಗಿದರು.. ಕನ್ನಡದ ಕಟ್ಟಾಳುಗಳಾಗಿದ್ದ ಮ.ರಾಮಮೂರ್ತಿ ಹಾಗೂ ಅ.ನ.ಕೃಷ್ಣರಾಯರ ಸಂಪರ್ಕದಿಂದಾಗಿ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್‌ಸಿ ಓದುವಾಗ ಕನ್ನಡಪರ ಭಾಷಾ ಚಳುವಳಿಯ ಸೆಳೆತಕ್ಕೆ ಒಳಗಾದರು. ಆಗಲೇ ಲಂಕೇಶರವರಂತಹ ಸಾಹಿತಿಗಳ ಸಹವಾಸವೂ ದೊರೆಯಿತು. ಇವೆಲ್ಲದರ ಒಡನಾಟದಿಂದಾಗಿ ನಾಗೇಶರವರ ಅರಿವು ಹಾಗೂ ಬಂಡಾಯದ ಮನೋಭಾವ ವಿಸ್ತಾರವಾಗುತ್ತಲೇ ಬಂತು.

ಜೊತೆಗೆ ಕಾಲೇಜಿನಲ್ಲಿರುವಾಗಲೇ ನಾಟಕಗಳ ಬಗ್ಗೆ ಆಸಕ್ತಿಯೂ ಬೆಳೆದು ಕಾಲೇಜಿನ ರಂಗಚಟುವಟಿಕೆಗಳಲ್ಲೂ ತೊಡಗಿಸಿಕೊಂಡರು. ನಾಗೇಶರವರವರ ರಂಗಾಸಕ್ತಿಯನ್ನು ಗಮನಿಸಿದ ಮ.ರಾಮಮೂರ್ತಿಯವರು ರಂಗಭೂಮಿ ಕ್ಷೇತ್ರದಲ್ಲೇ ಮುಂದುವರೆಯಲು ಆದೇಶಿಸಿದರು. ಆಗ ಕನ್ನಡ ಚಳುವಳಿಯ ಭಾಗವಾಗಿ ಕನ್ನಡ ಸಾಹಿತ್ಯ ಕಲಾ ಸಂಘ ಎನ್ನುವ ಸಾಂಸ್ಕೃತಿಕ ವಿಭಾಗವಿತ್ತು. ಅದೇ ಸಂಘದ ಹೆಸರಲ್ಲಿ ನಾಗೇಶರವರು ರಂಗಚಟುವಟಿಕೆಗಳನ್ನು ಆರಂಭಿಸಿದರು. ಆನಂತರ ನಾಗೇಶರವರ ದಾರಿ ದಿಕ್ಕುಗಳೆಲ್ಲವೂ ರಂಗಭೂಮಿಯ ಕಡೆಗೆ ಹೊರಟವು. ತಲೆಯಲ್ಲಿ ವೈಚಾರಿಕತೆ, ಮನಸಲ್ಲಿ ಹೋರಾಟದ ಮನೋಭಾವಗಳನ್ನು ಇಟ್ಟುಕೊಂಡೇ ರಂಗಕಾಯಕವನ್ನು ಶುರುಮಾಡಿದ್ದರಿಂದಾಗಿ ಕನ್ನಡ ರಂಗಭೂಮಿಗೆ ಒಬ್ಬ ವೈಚಾರಿಕ ಪ್ರಜ್ಞೆಯ ನಿರ್ದೇಶಕ ದಕ್ಕಿದ್ದು. ಇದಕ್ಕಾಗಿ ಮ.ರಾಮಮೂರ್ತಿಯವರಿಗೆ ಧನ್ಯವಾದಗಳನ್ನು ಹೇಳಲೇಬೇಕು.

ನಾಗೇಶರವರ ವೈಶಿಷ್ಟ್ಯತೆ ಏನೆಂದರೆ ಅವರು ಯಾವುದೇ ರಂಗತರಬೇತಿ ಶಾಲೆಗೆ ಹೋಗದೇ, ಯಾವ ರಂಗಗುರುವಿನ ಜೊತೆ ಶಿಷ್ಯತ್ವವನ್ನು ಪಡೆಯದೇ ತಮಗೆ ತಾವೇ ಗುರುವಾದವರು, ಅರಿವೇ ಗುರುವೆಂದುಕೊಂಡವರು. ಬಂಡಾಯದ ಬೆಳಕಿನಲ್ಲಿ ತಮ್ಮ ದಾರಿಯನ್ನು ತಾವೇ ಆಯ್ಕೆ ಮಾಡಿಕೊಂಡರು. ಕನ್ನಡ ರಂಗಭೂಮಿ ಎಂದೂ ಮರೆಯದಂತಹ ನಾಟಕಗಳನ್ನು ನಿರ್ದೇಶಿಸಿ ಕೊಟ್ಟರು. ನಾಗೇಶರವರು ರಂಗಭೂಮಿಗೆ ಬಂದಾಗ ಮನರಂಜನಾತ್ಮಕ ನಗೆನಾಟಕಗಳೇ ಎಲ್ಲಾ ಕಡೆ ಪ್ರದರ್ಶನಗೊಳ್ಳುತ್ತಿದ್ದವು. ಚಳುವಳಿ ಹಾಗೂ ವೈಚಾರಿಕತೆಯ ಹಿನ್ನೆಲೆಯಿಂದ ಬಂದ ನಾಗೇಶರವರಿಗೆ ರಂಜನೆಯ ನಾಟಕಗಳು ಹಿಡಿಸಲಿಲ್ಲ. ರಂಗಕಲೆಯ ಉದ್ದೇಶ ಪ್ರೇಕ್ಷಕರನ್ನು ವಿಚಾರಕ್ಕೆ ಪ್ರೇರೇಪಿಸುವುದೇ ಹೊರತು ಕೇವಲ ಮನರಂಜಿಸುವುದಲ್ಲ ಎನ್ನುವುದನ್ನು ಅರಿತುಕೊಂಡು ನೋಡುಗರಲ್ಲಿ ಒಂದಿಷ್ಟು ಅರಿವನ್ನು ಮೂಡಿಸುವಂತಹ ನಾಟಕಗಳನ್ನು ಕಟ್ಟಿಕೊಡುವತ್ತ ದಿಟ್ಟ ಹೆಜ್ಜೆ ಹಾಕಿದರು.

ಎಲ್ಲರೂ ನಡೆದ ದಾರಿಯಲ್ಲಿ ನಡೆಯದೇ ತಮ್ಮದೇ ಆದ ಭಿನ್ನ ಹಾದಿಯನ್ನು ನಾಗೇಶರವರು ಹುಡುಕತೊಡಗಿದರು. ಶ್ರೀರಂಗರ ನಾಟಕಗಳಲ್ಲಿರುವ ಬದಲಾವಣೆಯ ನಡೆ ನಾಗೇಶರವರನ್ನು ಸೆಳೆಯಿತು. ಶ್ರೀರಂಗರ ನಾಟಕಗಳನ್ನು ನಿರ್ದೇಶಿಸಿದರು. ...ಕಲಾಸಂಘ ವನ್ನು ಅದರ ಪಾಡಿಗೆ ಬಿಟ್ಟು ತಮ್ಮದೇ ರೀತಿಯಲ್ಲಿ ಆಲೋಚಿಸುವ ಗೆಳೆಯರ ಜೊತೆಗೆ ಸೇರಿ ರಂಗಸಂಪದ ತಂಡವನ್ನು ಕಟ್ಟಿದರು. ಹೊಸ ಹೊಸ ಕನಸುಗಳನ್ನು ಕಾಣುತ್ತಾ.. ಸಹವರ್ತಿಗಳಲ್ಲೂ ಕನಸುಗಳನ್ನು ಬಿತ್ತುತ್ತಾ ಹುಲುಸಾದ ರಂಗಬೆಳೆಯನ್ನು ಬೆಳೆಯುವ ಬದ್ದತೆಯ ಜೊತೆಗೆ ಪ್ರತಿಭಟನಾ ಮಾಧ್ಯಮವಾದ ರಂಗಭೂಮಿಯ ಮೂಲಕ ಸಮಾಜವನ್ನು ಎಚ್ಚರಿಸುವ ಆಶಯವನ್ನು ಹೊಂದಿದ್ದರು. ಉದರನಿಮಿತ್ಯ ವಾರ್ತಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಾದರೂ ಅವರ ಮನಸ್ಸು ರಂಗಕ್ರಿಯೆಯಲ್ಲೇ ಸದಾ ತೊಡಗಿಕೊಂಡಿರುತ್ತಿತ್ತು. ಪ್ರತಿಭಟನೆ ಎನ್ನುವುದು ಅವರ ಬದುಕಿನ ಭಾಗವೇ ಆಗಿತ್ತು. ಮನೆಯಲ್ಲಿ, ಕಛೇರಿಯಲ್ಲಿ, ರಂಗಭೂಮಿಯಲ್ಲಿ ಇಲ್ಲವೇ ಸಮಾಜದಲ್ಲಿ ಎಲ್ಲಿಯೇ ಏನೇ ಒಂಚೂರು ಅನ್ಯಾಯ ಕಂಡುಬಂದರೂ ತಕ್ಷಣ ಪ್ರತಿಭಟಿಸುವ ನಾಗೇಶರವರ ರೀತಿಗೆ ಅವರ ಸಹವರ್ತಿಗಳೇ ಬೆಚ್ಚಿಬಿದ್ದಿದ್ದಿದೆ. ಸರಕಾರಿ ನೌಕರರು ಸಾರ್ವಜನಿಕ ಪ್ರತಿಭಟನೆಗಳಲ್ಲಿ ಭಾಗವಹಿಸಬಾರದೆಂಬ ಕಾನೂನು ಇದ್ದರೂ ಅದಕ್ಕೆಲ್ಲಾ ಯೋಚನೆ ಮಾಡದೇ ವ್ಯವಸ್ಥೆಯ ವಿರುದ್ಧದ ಚಳುವಳಿಗಳಲ್ಲಿ ಭಾಗವಹಿಸುತ್ತಲೇ ಬಂದ ನಾಗೇಶರವರು ತಮ್ಮ ಬದುಕಿನ ಎಲ್ಲಾ ಸ್ಥರಗಳಲ್ಲಿ ಪ್ರತಿಭಟನೆಯನ್ನು ರೂಢಿಸಿಕೊಂಡಿದ್ದರು ಹಾಗೂ ತಮ್ಮ ನಾಟಕಗಳ ಮೂಲಕವೂ ಸಹ ಬಂಡಾಯವನ್ನೇ ಪ್ರತಿಪಾದಿಸುತ್ತಿದ್ದರು. ಪ್ರತಿಭಟನೆಯನ್ನು ಬುದ್ದಿ-ಭಾವ-ಬದುಕು ಹಾಗೂ ರಂಗಭೂಮಿಯಲ್ಲಿ ಅಳವಡಿಸಿಕೊಂಡು ಕ್ರಿಯಾಶೀಲತೆಯನ್ನು ಕೊನೆಯವರೆಗೂ ಉಳಿಸಿಕೊಂಡು ಬಂದ ನಾಗೇಶ್‌ರವರು ಕನ್ನಡ ರಂಗಭೂಮಿಯಲ್ಲಿ ಅಚ್ಚರಿಯಾಗಿಯೇ ಉಳಿದರು.

ನಾಗೇಶರವರ ಬಹುತೇಕ ಸಮಕಾಲಿನ ರಂಗನಿರ್ದೇಶಕರುಗಳು ಸಿದ್ದ ಮಾದರಿಯ ನಾಟಕಗಳನ್ನು ಆಯ್ದುಕೊಂಡು ರಂಗಪ್ರಯೋಗಗಳನ್ನು ಮಾಡಿಸುತ್ತಿದ್ದರೆ ಒಂದಿಷ್ಟು ಕನ್ನಡ ಸಾಹಿತ್ಯವನ್ನು ಸ್ವ-ಆಸಕ್ತಿಯಿಂದ ಓದಿಕೊಂಡಿದ್ದ ನಾಗೇಶರವರು ಪ್ರತಿಭಟನೆಯೇ ಮೂಲದ್ರವ್ಯವಾಗಿರುವಂತಹ ಕಥೆ ಕಾದಂಬರಿಗಳನ್ನು ಆಯ್ಕೆ ಮಾಡಿಕೊಂಡು ರಂಗರೂಪಗೊಳಿಸಿ ನಾಟಕಗಳನ್ನು ನಿರ್ದೇಶಿಸಿದರು. ಇದು ರಂಗಭೂಮಿಯಲ್ಲಿ ಸಾಹಿತ್ಯ ಕೃತಿಗಳ ಅಳವಡಿಕೆಯ ಪರಂಪರೆಯನ್ನೇ ಹುಟ್ಟುಹಾಕಿತು. ನಾಗೇಶರವರು ನಾಟಕಕ್ಕಾಗಿ ಆಯ್ದುಕೊಂಡ ಸಾಹಿತ್ಯ ಕೃತಿಗಳನ್ನೊಮ್ಮೆ ಗಮನಿಸಿದರೆ ಅವರ ಬಂಡಾಯ ಮನೋಭಾವ ಅರ್ಥವಾಗುತ್ತದೆ. ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಕೃಷ್ಣ ಆಲನಗಳ್ಳಿ, ಶಿವರಾಮ್ ಕಾರಂತರರಂತಹ ಪ್ರಸಿದ್ದ ಸಾಹಿತಿಗಳ ಕನ್ನಡ ಸಾಹಿತ್ಯ ಲೋಕದ ಮಹತ್ವದ ಕೃತಿಗಳನ್ನು ರಂಗದಮೇಲೆ ತಂದು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರವಾದ ಕೆಲಸವನ್ನು ಮಾಡಿದರು. ಕಥೆಯಾಧಾರಿತ ನಾಟಕಗಳಿಗೆ ಹೊಸ ಪ್ರೇಕ್ಷಕ ವರ್ಗ ಹುಟ್ಟಲು ಕಾರಣೀಕರ್ತರಾದರು.

ಯಯಾತಿ, ತಾಮ್ರಪತ್ರ, ಹರಕೆಯ ಕುರಿ, ಜಯಸಿದ ನಾಯಕ, ಕಾಮಗಾರಿ, ಬುಜಂಗಯ್ಯನ ದಶಾವತಾರ.. ತೇಜಸ್ವಿಯವರ ತಬರನ ಕಥೆ ಮತ್ತು ಕೃಷ್ಣೇಗೌಡರ ಆನೆ, ಶಿವರಾಂ ಕಾರಂತರ ಚೋಮ,  ಶ್ರೀರಂಗರ ಕೇಳು ಜನಮೇಜಯ, ಕುವೆಂಪುರವರ ರಕ್ತಾಕ್ಷಿ, ಹೆಚ್,ಎಸ್,ಶಿವಪ್ರಕಾಶರವರ ಸುಲ್ತಾನ ಟಿಪು..  ಹೀಗೆ ಒಂದಕ್ಕಿಂತಾ ಒಂದು ವಿಭಿನ್ನವಾದ  ಬಂಡಾಯ ಮೂಲದ ಕಥೆ ಕಾದಂಬರಿಗಳನ್ನು ನಾಟಕವಾಗಿ ಕಟ್ಟಿಕೊಟ್ಟ ಕೀರ್ತಿ ನಾಗೇಶರವರದ್ದು. ನಾಗೇಶರವರು ನಿರ್ದೇಶಿಸಿದ ಕೆಲವು ನಾಟಕಗಳಲ್ಲಿರುವ ಪ್ರತಿಭಟನಾ ಪ್ರಜ್ಞೆಯನ್ನು ಗಮನಿಸಬಹುದಾಗಿದೆ.

ತಬರನ ಕಥೆ : ಪೂರ್ಣಚಂದ್ರ ತೇಜಸ್ವಿಯವರು ಬರೆದ ತಬರನ ಕಥೆ ಸಾಹಿತ್ಯ ಕೃತಿಯನ್ನು ರಂಗರೂಪಗೊಳಿಸಿ ನಾಗೇಶರವರು ನಿರ್ದೇಶಿಸಿದರು. ಈ ನಾಟಕ ರಂಗಭೂಮಿಯಲ್ಲಿ ಹೊಸ ಸಂಚಲನವನ್ನೇ ಹುಟ್ಟುಹಾಕಿದರು. ಸ್ವಾಂತಂತ್ರೋತ್ತರ ಭಾರತದಲ್ಲಿ ಜನಸಾಮಾನ್ಯರ ಮೇಲೆ ಆಳುವ ವರ್ಗಗಳು ಮಾಡುವ ಶೋಷಣೆ ಹಾಗೂ ಭ್ರಷ್ಟಾಚಾರವನ್ನು ವಿಡಂಬನಾತ್ಮಕವಾಗಿ ತೋರುವ ನಾಟಕವೇ ತಬರನ ಕಥೆ. ಪ್ರಾಮಾಣಿಕರಿಗೆ ಈ ವ್ಯವಸ್ಥೆಯಲ್ಲಿ ಆಗುವ ತಾಪತ್ರಯಗಳನ್ನು ತಬರ ಎನ್ನುವ ಪಾತ್ರದ ಮೂಲಕ ಹೇಳುತ್ತಲೇ ಇಡೀ ಪ್ರಜಾಪ್ರಭುತ್ವ ಎನ್ನುವ ವ್ಯವಸ್ಥೆಯನ್ನು ರಂಗದಂಗಳದಲ್ಲಿ ಬೆತ್ತಲು ಮಾಡಿ ತೋರುವ ಪ್ರಯತ್ನವನ್ನು ತಬರನ ಕಥೆ ನಾಟಕದ ಮೂಲಕ ನಾಗೇಶರವರು ಮಾಡಿದರು.
 
ತಬರನ ಕಥೆ ನಾಟಕದ ದೃಶ್ಯ

ತಬರ ಎನ್ನುವ ಕೆಳವರ್ಗದ  ಪ್ರಾಮಾಣಿಕ ನೌಕರನನ್ನು ಇಡೀ ಆಳುವ ಶೋಷಕ ವ್ಯವಸ್ಥೆ ಹೇಗೆಲ್ಲಾ ಶೋಷಣೆ ಮಾಡುತ್ತದೆ ಎನ್ನುವುದನ್ನು ಮನಮಿಡಿಯುವಂತಹ ದೃಶ್ಯಗಳ ರೂಪದಲ್ಲಿ ನಾಗೇಶರವರು ಕಟ್ಟಿಕೊಟ್ಟರು. ಕೊನೆಯವರೆಗೂ ಅನ್ಯಾಯಗಳನ್ನೆಲ್ಲಾ ಸಹಿಸಿಕೊಂಡ ತಬರ ಕೊನೆಗೆ ಮುನ್ಸಿಪಾಲ್ಟಿ ಅಧ್ಯಕ್ಷನ ಮುಖಕ್ಕೆ ಉಗಿಯುವ ಮೂಲಕ ತನ್ನ ಪ್ರತಿಭಟನೆಯನ್ನು ತೋರಿಸುತ್ತಾನೆ. ಅತ್ಯಂತ ಕಡುಕಷ್ಟದಲ್ಲಿದ್ದ ತಬರನು ಅಧ್ಯಕ್ಷನಿಗೆ ಲಂಚ ಕೊಟ್ಟಿದ್ದರೆ ತನ್ನ ಪೇನ್ಶನ್ ಹಣವನ್ನು ಪಡೆಯಬಹುದಾಗಿತ್ತಾದೂ ಈ ಭ್ರಷ್ಟವ್ಯವಸ್ಥೆಗೆ ರೋಸಿ ಹೋಗಿ ಪೂರಾ ಹಣವನ್ನ ನೀವೇ ಇಟ್ಕೊಳ್ಳಿ ಎಂದು ಹೇಳಿ ಆ ಅಸಹ್ಯದ ವಾತಾವರಣದಿಂದ ಹೊರಟುಹೋಗುವುದೇ ಪ್ರತಿಭಟನೆಯ ಬಹುದೊಡ್ಡ ರೂಪಕವಾಗಿದೆ.

ನಾಟಕದಾದ್ಯಂತ ಶೋಷಕ ವ್ಯವಸ್ಥೆಯ ವೃಣಗಳನ್ನು ತೋರಿಸುತ್ತಲೇ ಕೊನೆಗೆ ಆಕ್ರೋಶದ ನುಡಿಗಳನ್ನು ತಬರನಿಂದ ಹೊರಡಿಸಿ ಅನ್ಯಾಯದ ವಿರುದ್ಧ ಬಂಡಾಯದ ಮನೋಭಾವವನ್ನು ನಾಗೇಶರವರು ಪ್ರೇಕ್ಷಕರಿಗೆ ರವಾನಿಸುತ್ತಾರೆ. ಒಂದು ಕಡೆ ತಬರನ ಮೂಲಕ ಅಹಿಂಸಾತ್ಮಕ ಸಾತ್ವಿಕ ಸಿಟ್ಟನ್ನು ಈ ನಾಟಕ ಹೇಳಿದರೆ, ಇನ್ನೊಂದು ಕಡೆ  ಕಾರ್ಮಿಕ ನಾಯಕ ಬಂಟೆಪ್ಪ ಮುನ್ಸಿಪಾಲ್ಟಿ ಅಧ್ಯಕ್ಷನ ಭ್ರಷ್ಟತೆಗೆ ಆಕ್ರೋಶಗೊಂಡು ಆತನನ್ನು ಕೊಲೆ ಮಾಡಿ ಹಿಂಸಾತ್ಮಕ ಪರಿಹಾರವನ್ನು ಕಂಡುಕೊಳ್ಳುವುದನ್ನೂ ತೋರಿಸಲಾಗುತ್ತದೆ. ವ್ಯವಸ್ಥೆಯ ಹಿಂಸೆಯ ವಿರುದ್ಧ ತಬರನದು ಗಾಂಧಿ ಹಾದಿಯ ನಡೆಯಾದರೆ, ಬಂಟೆಪ್ಪನದು ಪ್ರತಿಹಿಂಸಾತ್ಮಕ ನಕ್ಸಲ್ ನಡೆಯಾಗಿದೆ. ತಮ್ಮ ಮೇಲೆ ಹೇರಲಾದ ಅಘೋಷಿತ ಹಿಂಸಿಯ ವಿರುದ್ಧ ಈಗ ಜನಸಮುದಾಯದ ಮುಂದೆ ಎರಡೇ ಆಯ್ಕೆಗಳಿವೆ. ಒಂದು ಗಾಂಧಿ ಮಾರ್ಗ ಇಲ್ಲವೆ ಇನ್ನೊಂದು ಮಾವೋ ಮಾರ್ಗ. ಇವೆರಡರ ನಮೂನೆಗಳು ಈ ನಾಟಕದಲ್ಲಿದೆ. ನಾಗೇಶರವರ ಒಳಗೊಬ್ಬ ಗಾಂಧಿ ಹಾಗೂ ಮಾವೋ ಇಬ್ಬರೂ ಇದ್ದದ್ದನ್ನು ಅವರ ಬದುಕಿನ ನಡೆ ಹಾಗೂ ಅವರ ನಾಟಕದ ಕ್ರಿಯೆಗಳನ್ನು ಗಮನಿಸಿದವರಿಗೆ ಅರ್ಥವಾಗುವಂತಹುದು. ಆದರೆ ಈ ರಕ್ಕಸ ಭ್ರಷ್ಟ ವ್ಯವಸ್ಥೆ ಎನ್ನುವುದು ಅಹಿಂಸಾತ್ಮಕ ಹಾಗೂ ಪ್ರತಿಹಿಂಸಾತ್ಮಕ ಎರಡೂ ರೀತಿಯ ಪ್ರತಿಭಟನೆಯನ್ನೂ ಬಗ್ಗು ಬಡಿದು ಬಾಯಿಗೆ ಹಾಕಿಕೊಳ್ಳುತ್ತದೆ ಎನ್ನುವ ಅರಿವೂ ಕೂಡಾ ನಾಗೇಶರವರಿಗಿತ್ತು. ಆದ್ದರಿಂದ ಅವರು ಯಾವುದೇ ನಿರ್ದಿಷ್ಟ ತೀರ್ಮಾನಗಳನ್ನು ತಮ್ಮ ನಾಟಕದ ಕೊನೆಗೆ ಹೇಳದೇ ವಸ್ತುಸ್ಥಿತಿಯನ್ನು ತೋರಿಸಿ ನಿರ್ಧಾರಗಳನ್ನು ನೋಡುಗರಿಗೆ ಬಿಡುತ್ತಿದ್ದರು. ಯಾಕೆಂದರೆ ಒಬ್ಬ ವ್ಯಕ್ತಿ ಅಥವಾ ಒಂದಿಷ್ಟು ಸಂಘಟನೆಗಳ ಪ್ರತಿಭಟನೆಯಿಂದಾ ಈ ಅಸಮಾನ ವ್ಯವಸ್ಥೆ ಬದಲಾಗದು ಎನ್ನುವ ಸತ್ಯ ನಾಗೇಶರವರಿಗೆ ಗೊತ್ತಿತ್ತು. ಇಂತಹ ಬಲಾಢ್ಯ ಶೋಷಕ ವ್ಯವಸ್ಥೆ ಬದಲಾಗಬೇಕಾದರೆ ಅದಕ್ಕೆ ಜನರು ಜಾಗೃತರಾಗಿ ಜನಾಂದೋಲನ ಮಾಡಬೇಕಾಗುತ್ತದೆ ಎನ್ನುವ ಅರಿವೂ ಅವರಿಗಿತ್ತು. ಆ ಜನಾಂದೋಲನ ಯಾವತ್ತು ಆಗುತ್ತೋ ಗೊತ್ತಿಲ್ಲಾ, ಆದರೆ ಅದಕ್ಕೆ ಪೂರಕವಾಗಿ ನಾಟಕದ ಮೂಲಕ ಜನರಲ್ಲಿ ಶೋಷಕರ ವಿರುದ್ದ ಜಾಗೃತಿಯ ಬೀಜಗಳನ್ನಾದರೂ ಬಿತ್ತುವ ಪ್ರಯತ್ನವನ್ನು ಉದ್ದೇಶಪೂರ್ವಕವಾಗಿಯೇ ಮಾಡಿದರು. ರಂಗಮಾಧ್ಯಮವನ್ನು ಬಳಸಿಕೊಂಡು ಪ್ರೇಕ್ಷಕರಲ್ಲಿ ಆಳುವ ವರ್ಗಗಳ ವಿಕೃತಿಗಳ ವಿರುದ್ಧ ವಿಚಾರಗಳನ್ನು ಉದ್ದೀಪನಗೊಳಿಸುವ ಕಾಯಕವನ್ನು ತಮ್ಮೆಲ್ಲಾ ನಾಟಕಗಳ ಮೂಲಕ ಮಾಡುತ್ತಲೇ ಹೋದರು.

ಕೃಷ್ಣೇಗೌಡರ ಆನೆ : ಪೂರ್ಣಚಂದ್ರ ತೇಜಸ್ವಿಯವರ ಕಥೆಯನ್ನಾಧರಿಸಿದ ಕೃಷ್ಣೇಗೌಡರ ಆನೆ ಯನ್ನು ರಂಗರೂಪಗೊಳಿಸಿದ ಆರ್.ನಾಗೇಶರವರು ಮೈಸೂರು ರಂಗಾಯಣಕ್ಕೆ ನಿರ್ದೇಶಿಸಿದ್ದರು. ಸಮಾಜದಲ್ಲಿ ಎಚ್ಚರದ ದ್ವನಿಯಾಗಿದ್ದ ತೇಜಸ್ವಿಯವರೇ ಈ ನಾಟಕದಲ್ಲಿ ಒಂದು ಪಾತ್ರವಾಗಿದ್ದು ನಾಟಕದಾದ್ಯಂತ ವ್ಯವಸ್ಥೆಯೊಳಗಿನ ಅವ್ಯವಸ್ಥೆಯ ವಿರುದ್ದ ಪ್ರತಿಭಟನೆ ತೋರುತ್ತಾರೆ. ಅರಣ್ಯ ನಾಶಕ್ಕೆ ಕಾರಣರಾದ ಮರಗಳ್ಳರು ಹಾಗೂ ಮುನ್ಸಿಪಾಲ್ಟಿಯ ಅಧ್ಯಕ್ಷರ ನಡುವೆ ಇರುವ ಅವ್ಯವಹಾರವನ್ನು ಈ ನಾಟಕದಲ್ಲಿ ಬಯಲುಗೊಳಿಸಲಾಗಿದೆ. ಹುಚ್ಚುನಾಯಿಗಳ ಹಾವಳಿಯ ವಿರುದ್ದದ ಪ್ರತಿಭಟನೆಯಲ್ಲಿ ಈ ನಾಟಕದ ನಾಯಕ ಜನರ ಪರವಾದ ದ್ವನಿಯಾಗುತ್ತಾನೆ. ಆನೆಗೂ ಅಯ್ಯಪ್ಪನ ಮಾಲೆ ಹಾಕಿ ಜನರನ್ನು ಯಾಮಾರಿಸುವ ಶಡ್ಯಂತ್ರವನ್ನು ಅನಾವರಣಗೊಳಿಸುವ ಈ ನಾಟಕವು ಜನರ ಧಾರ್ಮಿಕ ಭಾವನೆಗಳನ್ನು ಹೇಗೆಲ್ಲಾ ಲಾಭತನಕ್ಕೆ ಬಳಸಲಾಗುತ್ತದೆಂಬುದನ್ನು ಮಾರ್ಮಿಕವಾಗಿ ತೋರಿಸಲಾಗಿದೆ.
 
ಕೃಷ್ಣೇಗೌಡರ ಆನೆ  ನಾಟಕದ ದೃಶ್ಯ

ಪರಿಸರ ನಾಶದ ವಿರುದ್ಧ, ಮುನ್ಸಿಪಾಲ್ಟಿಯನ್ನು ಆಳುವ ಭ್ರಷ್ಟರ ವಿರುದ್ಧ, ಅರಣ್ಯ ಇಲಾಖೆ, ವಿದ್ಯುತ್ ಇಲಾಖೆ, ಟೆಲಿಪೋನ್ ಇಲಾಖೆ ಹಾಗೂ ಆಸ್ಪತ್ರೆಯಂತಹ ಸರಕಾರಿ ಇಲಾಖೆಗಳು ಜನರಿಗೆ ಕೊಡಬಹುದಾದ ಕಿರುಕುಳಗಳ ವಿರುದ್ದ, ಧಾರ್ಮಿಕ ನಂಬಿಕೆಗಳ ವಿರುದ್ದ, ಮಠಾಧೀಶರ ಸ್ವಾರ್ಥಗಳ ವಿರುದ್ದ, ಪುರುಷರು ಮಹಿಳೆಯರ ಮೇಲೆ ಮಾಡುವ ಕೌಟುಂಬಿಕ ದೌರ್ಜನ್ಯದ ವಿರುದ್ದ.. ಅಧಿಕಾರಿಯ ದರ್ಪದ ವಿರುದ್ದ.. ಈ ಇಡೀ ನಾಟಕವು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ.. ಪ್ರತಿಭಟನೆಯನ್ನು ತೋರಿಸುತ್ತಲೇ ಸಾಗುತ್ತದೆ. ಆನೆ ಎನ್ನುವುದು ಇಲ್ಲಿ ನೆಪಮಾತ್ರ. ಆದರೆ.. ಜನಸಾಮಾನ್ಯರ ಮೇಲೆ ಆಗುತ್ತಿರುವ ಅನ್ಯಾಯಗಳ ವಿರುದ್ಧದ ದ್ವನಿಯಾಗಿ ನಾಟಕ ಮೂಡಿಬಂದಿದೆ. ಶ್ರಮಿಕರ ಪರವಾಗಿ ಸಿಂಪತಿಯನ್ನು ತೋರಿಸುತ್ತಲೇ ಆಳುವ ಶಕ್ತಿಗಳನ್ನು ವಿಡಂಬಿಸಿ ವಿರೋಧಿಸುವ ಈ ನಾಟಕವು ವಿನೋದದ ಮೂಲಕ ವಿಷಾದವನ್ನ ಹೇಳುತ್ತಿದೆ.

ಒಂದೇ ನಾಟಕದಲ್ಲಿ ಇಷ್ಟೊಂದು ರೀತಿಯಲ್ಲಿ ಪ್ರತಿಭಟನಾತ್ಮ ನೆಲೆಗಳು ಅನಾವರಣಗೊಂಡಿದ್ದು ಬಹುಷಃ ಕೃಷ್ಣೇಗೌಡರ ಆನೆ ನಾಟಕದಲ್ಲಿ ಮಾತ್ರವೆಂದು ಕಾಣುತ್ತದೆ. ತೇಜಸ್ವಿಯವರ ಒಳಬಂಡಾಯದ ಸ್ಥರಗಳನ್ನು ಆರ್.ನಾಗೇಶರವರು ಈ ನಾಟಕದಲ್ಲಿ ವಿಸ್ತರಿಸಿದ್ದಾರೆ. ಬಂಡಾಯದ ವಿವಿಧ ಸ್ವರೂಪಗಳನ್ನು ಬಿಚ್ಚಿಟ್ಟಿದ್ದಾರೆ. ತೇಜಸ್ವಿಯವರ ಕಥೆ ಕೇವಲ ಆಸಕ್ತ ಅಕ್ಷರಸ್ತರನ್ನು ಮಾತ್ರ ತಲುಪಿದ್ದರೆ, ಆರ್. ನಾಗೇಶರವರ ನಿರ್ದೇಶನದ ನಾಟಕವು ಅನಕ್ಷರಸ್ತರಾದಿಯಾಗಿ ಎಲ್ಲಾ ವರ್ಗದವರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ನೂರೈವತ್ತು ಪ್ರಯೋಗಗಳನ್ನು ಕಂಡ ಈ ನಾಟಕ ಇನ್ನೂ ಹೆಚ್ಚೆಚ್ಚು ಪ್ರದರ್ಶನಗಳಿಗೆ ಬೇಡಿಕೆಯನ್ನು ಹೊಂದಿದೆ.  

ನಮ್ಮೊಳಗೊಬ್ಬ ನಾಜೂಕಯ್ಯ: ಟಿ.ಎನ್.ಸೀತಾರಾಂ ರವರು ರಚಿಸಿದ ಈ ನಾಟಕವನ್ನು ಆರ್.ನಾಗೇಶರವರು ಮೂರು ದಶಕಗಳ ಹಿಂದೆಯೇ ನಟರಂಗ ತಂಡಕ್ಕೆ ನಿರ್ದೇಶಿಸಿದ್ದರು. ಈ ನಾಟಕದಲ್ಲಿ ಬರುವ ನಾಯಕನ ಪಾತ್ರದ ಹೆಸರು ಪ್ರಸಾದ್. ಬಹುಷಃ ಈ ಪಾತ್ರಕ್ಕೂ ನಾಗೇಶರವರ ಸ್ವಭಾವಕ್ಕೂ ಹಲವಾರು ಸಾಮ್ಯತೆಗಳಿವೆ. ಭ್ರಷ್ಟನೊಬ್ಬನ ಕೈಯನ್ನು ಕುಲುಕುವುದೂ ಅಪರಾಧ ಎಂದೇ ಪ್ರಸಾದ್ ಪಾತ್ರ ನಂಬಿರುತ್ತದೆ, ಪ್ರಾಮಾಣಿಕತೆಯನ್ನೇ ಮೈಗೂಡಿಸಿಕೊಂಡಿರುತ್ತದೆ, ಅನ್ಯಾಯದ ವಿರುದ್ಧ ತನ್ನ ತೀಕ್ಷ್ಣ ಬರಹಗಳ ಮೂಲಕ ಪ್ರತಿಭಟಿಸುತ್ತದೆ, ಭ್ರಷ್ಟರ ವಿರುದ್ದ ಅಸಾಧ್ಯ ಕೋಪವನ್ನು ತಾಳಿರುತ್ತದೆ ಜೊತೆಗೆ ಆರ್ಥಿಕ ನಿರ್ವಹನೆಯ ಅಶಿಸ್ತನ್ನೂ ಹೊಂದಿರುತ್ತದೆ. ನಮ್ಮ ನಾಗೇಶರವರೂ ಸಹ ಹಾಗೇನೇ ಇದ್ದವರು. ಸುಳ್ಳರು, ಮೈಗಳ್ಳರು, ಭ್ರಷ್ಟರು, ಲಂಚಕೋರರು, ಖದೀಮರು ಎಂದರೆ ನಾಗೇಶರವರಿಗೆ ಆಗಿಬರುತ್ತಿರಲಿಲ್ಲ. ಅಂತವರ ವಿರುದ್ಧ ಯಾವಾಗಲೂ ಹರಿಹಾಯುತ್ತಿದ್ದರು ಮತ್ತು ಅಂತವರಿಂದ ಸಾಧ್ಯವಾದಷ್ಟೂ ದೂರ ಇರಲು ಪ್ರಯತ್ನಿಸುತ್ತಿದ್ದರು. ಶೋಷಕ ವ್ಯವಸ್ಥೆಯ ವಿರುದ್ಧ ರಂಗಮಾಧ್ಯಮದ ಮೂಲಕ ಪ್ರತಿಭಟಿಸುತ್ತಲೇ ಬಂದ ನಾಗೇಶರವರು ಬದುಕಿನಲ್ಲಿಯೂ ಸಹ ಅಶಿಸ್ತು ಹಾಗೂ ಅನ್ಯಾಯದ ವಿರುದ್ಧ ಅಸಾಧ್ಯ ಅಸಹನೆ ಮತ್ತು ಕೋಪವನ್ನು ಪ್ರದರ್ಶಿಸುತ್ತಿದ್ದರು. ಮೊದಲಿನಿಂದಲೂ ರೂಢಿಸಿಕೊಂಡಿದ್ದ ಆರ್ಥಿಕ ಅಶಿಸ್ತಿನಿಂದಾಗಿ ಅನೇಕಾನೇಕ ತೊಂದರೆಗಳಿಗೂ ಸಿಲುಕಿಕೊಂಡಿದ್ದರು. ವ್ಯವಸ್ಥೆಯ ಹುನ್ನಾರಗಳಿಗೆ ಬಲಿಯಾಗಿ ನಾಜೂಕಯ್ಯ ನಾಟಕದ ಪ್ರಸಾದ್ ಹೇಗೆ ಅನಿವಾರ್ಯವಾಗಿ ರಾಜಿಯಾಗಬೇಕಾಗಿ ಬಂದಿತೋ ಹಾಗೆಯೇ ನಾಗೇಶರವರೂ ಸಹ ಹಲವಾರು ಸಲ ಬದುಕಲ್ಲಿ ರಾಜಿಯಾಗಬೇಕಾಗಿ ಬಂದಿತು. ಅದರೆ.. ಅವರು ತಮ್ಮ ನಾಟಕಗಳ ಮೂಲಕ ತಮ್ಮ ಪ್ರತಿಭಟನೆಯ ಮೂಲಸೆಲೆಯನ್ನು ಯಾವಾಗಲೂ ಜೀವಂತವಾಗಿಟ್ಟುಕೊಂಡಿದ್ದರು.  

‘ನಮ್ಮೊಳಗೊಬ್ಬ ನಾಜೂಕಯ್ಯ’  ನಾಟಕದ ದೃಶ್ಯ
 ಈ ಎಲ್ಲಾ ಕಾರಣಗಳಿಗಾಗಿ ನಾಜೂಕಯ್ಯ ನಾಟಕದ ಪ್ರಸಾದ್ ಪಾತ್ರ ನಾಗೇಶರವರ ವ್ಯಕ್ತಿತ್ವಕ್ಕೆ ಅನೇಕ ಸಾಮ್ಯತೆಗಳನ್ನು ಹೊಂದಿದೆ ಎಂದು ಹೇಳಿದ್ದು. ಈ ನಾಟಕದಲ್ಲಿ ಕಾರ್ಪೊರೇಟ್ ಕಂಪನಿಗಳ ಲೂಟಿ ಸಾಮ್ರಾಜ್ಯದ ಹುನ್ನಾರಗಳನ್ನು ಮಾರ್ಮಿಕವಾಗಿ ತೋರಿಸಲಾಗಿದೆ. ರಾಜಕಾರಣಿಗಳಿಗೂ, ದಲ್ಲಾಳಿಗಳಿಗೂ ಹಾಗೂ ಕಾರ್ಪೋರೇಟ್ ಕುಳಗಳಿಗೂ ನಡುವೆ ಇರುವ ವ್ಯವಹಾರಿಕ ಅಕ್ರಮ ಸಂಬಂಧಗಳನ್ನು ತೋರಿಸುತ್ತಲೇ ಅವುಗಳ ವಿರುದ್ಧದ ಪ್ರಖರ ಪ್ರತಿಭಟನೆಯ ದ್ವನಿಯಾಗಿ ಪ್ರಸಾದ್ ಪಾತ್ರ ಮೂಡಿಬಂದಿದೆ. ಇಡೀ ಆಳುವ ಶೋಷಕ ವ್ಯವಸ್ಥೆಯೇ ಭ್ರಷ್ಟವಾಗಿರುವಾಗ ಪ್ರಾಮಾಣಿಕವಾಗಿರುವವರು ಬದುಕುವುದೇ ಕಷ್ಟ ಎಂದು ಹೇಳುವ ಈ ನಾಟಕದಲ್ಲಿ ಕೊನೆಗೆ ಪ್ರಾಮಾಣಿಕತೆ ಸೋತು ಭ್ರಷ್ಟರಿಗೆ ಶರಣಾಗುವುದೊಂದು ದುರಂತ. ಈ ದುರಂತಮಯ ನಾಟಕದಲ್ಲೂ ಸಹ ಶೋಷಕರ ಶಡ್ಯಂತ್ರಗಳನ್ನು ಬಯಲುಗೊಳಿಸುವಲ್ಲಿ ಈ ನಾಟಕ ಯಶಸ್ವಿಯಾಗಿದೆ. 



ಆರ್.ನಾಗೇಶರವರೇ ಹೀಗೆ.. ಅವರು ಯಾವುದೇ ನಾಟಕವನ್ನು ನಿರ್ದೇಶಿಸಲು ಆಯ್ಕೆ ಮಾಡಿಕೊಂಡರೂ ಅದರೊಳಗೆ ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿಯೋ ಬಂಡಾಯದ ಅಂಶಗಳು ಅಡಕವಾಗಿಯೇ ಇರುತ್ತಿದ್ದವು. ಅವರ ಒಳಗಿದ್ದ ವ್ಯವಸ್ಥೆಯ ವಿರುದ್ಧದ ಬಂಡಾಯಗಾರ ಪ್ರತಿ ನಾಟಕದಲ್ಲೂ ತನ್ನ ಛಾಪನ್ನು ಮೂಡಿಸುತ್ತಲೇ ಹೋಗುತ್ತಿದ್ದ. ರಂಗಭೂಮಿ ಕೇವಲ ಮನರಂಜನೆಗೆ ಮಾತ್ರವಲ್ಲಾ ಅದು ಪ್ರತಿಭಟನೆಯ ವೇದಿಕೆ ಎಂದು ಬರೀ ಮಾತಲ್ಲಿ ಮಾತ್ರ ಹೇಳದ ನಾಗೇಶರವರು ತಮ್ಮ ಪ್ರತಿ ಕೃತಿಯಲ್ಲೂ ತೋರಿಸಿಕೊಟ್ಟರು. ರಂಗಭೂಮಿ ಎಂದರೆ ಪ್ರತಿಭಟನೆಯ ಮಾಧ್ಯಮ ಎನ್ನುವುದನ್ನು ತಮ್ಮೆಲ್ಲಾ ನಾಟಕಗಳ ಮೂಲಕ ಸಾಬೀತುಪಡಿಸಿದರು. ಹವ್ಯಾಸಿ ಕನ್ನಡ ರಂಗಭೂಮಿಯ ಬಂಡಾಯಗಾರ ರಂಗನಿರ್ದೇಶಕರಾಗಿಯೇ ನಾಗೇಶರವರು ಗುರುತಿಸಿಕೊಂಡರು. ಅವರು ವ್ಯಕ್ತಿಗತವಾಗಿ ತಮ್ಮ ಬದುಕಿನಲ್ಲೂ, ಸರಕಾರಿ ವೃತ್ತಿಯಲ್ಲಿಯೂ ಹಾಗೂ ಹವ್ಯಾಸಿ ರಂಗಪ್ರವೃತ್ತಿಯಲ್ಲಿಯೂ ಪ್ರತಿಭಟನೆಯನ್ನೇ ಜೀವಸೆಲೆಯಾಗಿ ಇಟ್ಟುಕೊಂಡೇ ಬದುಕಿ ಬಾಳಿದವರು. ಬದುಕು ಹಾಗೂ ಸಾಧನೆ ಎರಡರಲ್ಲೂ ಬಂಡಾಯ ಮನೋಭಾವ ಮತ್ತು ವೈಚಾರಿಕ ಮನೋಧರ್ಮವನ್ನು ಇಟ್ಟುಕೊಂಡಿರುವ ನಾಗೇಶರವರಂತಹ ರಂಗಕರ್ಮಿಗಳು ರಂಗಭೂಮಿಯಲ್ಲಿ ಅಪರೂಪ, ಅಂತಹ ಬಂಡಾಯಗಾರ ನಾಗೇಶರವರಂತವರ ಸಂತತಿ ಸಾವಿರವಾಗಲಿ.

-ಶಶಿಕಾಂತ ಯಡಹಳ್ಳಿ
 

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ