ಬುಧವಾರ, ಫೆಬ್ರವರಿ 6, 2019

ಪರಿತ್ಯಕ್ತೆ (ಏಕವ್ಯಕ್ತಿ ರಂಗಪ್ರಸ್ತುತಿ)






(ಅಂಬೆ ಮಹಾಭಾರತದ ಮಹಾಕಾವ್ಯದಲ್ಲಿ ಬರುವ ಶೋಷಿತ ಹೆಣ್ಣು. ಪುರುಷ ಪ್ರಧಾನ ವ್ಯವಸ್ಥೆಗೆ ಬಲಿಯಾಗಿ ಬಂಡಾಯವೆದ್ದ ಮೊಟ್ಟಮೊದಲ ಹೋರಾಟಗಾರ್ತಿ. ಅವಳ ಅಂತ್ಯ ದುರಂತವಾದರೂ ಅವಳ ಅಂತರಂಗದ ಆಲಾಪ ಈಗಲೂ ಪ್ರತಿದ್ವನಿಸುತ್ತಲೇ ಇದೆ. ಸಂಗಾತಿಯ ಆಯ್ಕೆಯ ಸ್ವಾತಂತ್ರ್ಯಕ್ಕಾಗಿ ಅನುಕ್ಷಣ ತುಡಿದ ಅಂಬೆ ಅದರಿಂದ ವಂಚಿತಳಾಗಿ ವ್ಯವಸ್ಥೆಯ ವಿರುದ್ದ ತಿರುಗಿ ಬೀಳುವ ರೀತಿಯು ಸ್ತ್ರೀಸ್ವಾತಂತ್ರ್ಯದ ಪರ ಗಟ್ಟಿಯಾದ ದ್ವನಿಯಾಗಿದೆ. ಈಗಲೂ ಕೂಡಾ ಅಂಬೆಯಂತಹ ಬಹುತೇಕ ಸ್ತ್ರೀಯರು ಸಂಗಾತಿಯ ಆಯ್ಕೆಯ ಸ್ವಾತಂತ್ರ್ಯವಿಲ್ಲದೇ ಒತ್ತಾಯ ಒತ್ತಡಕ್ಕೆ ಮದುವೆಯಾಗಿ ಸಮಾಜದ ಕಟ್ಟುಪಾಡುಗಳಿಗೆ ಹೆದರಿ ಅನಿವಾರ್ಯವಾಗಿ ತಮ್ಮ ಮನಸ್ಸಿನ ವಿರುದ್ದ ಬದುಕನ್ನು ಸವೆಸುತ್ತಿದ್ದಾರೆ. ಎಲ್ಲೋ ಕೆಲವರು ಹೇರಿಕೆಯನ್ನು ವಿರೋಧಿಸಿ ಇಷ್ಟ ಬಂದವರ ಜೊತೆಗೆ ಬದುಕುವ ಪ್ರಯತ್ನವನ್ನು ಮಾಡುತ್ತಾರಾದರೂ ಅಂತವರಲ್ಲಿ ಹಲವರು ಪಾಡೂ ಸಹ ಅಂಬೆಯಂತೆಯೇ ಆಗಿದ್ದನ್ನು ಗಮನಿಸಬಹುದಾಗಿದೆ. ಪುರುಷಪ್ರಧಾನ ವ್ಯವಸ್ಥೆ ಎನ್ನುವುದು ಕಾಲಾತೀತವಾಗಿ ಸ್ತ್ರೀಸ್ವಾತಂತ್ರ್ಯವನ್ನು ಹತ್ತಿಕ್ಕಿ ಹಡೆಯತ್ತಿ ಬುಸುಗುಡುತ್ತಲೇ ಇದೆ. ಅಗಣಿತ ಅಂಬೆಯರು ಈ ವ್ಯವಸ್ಥೆಗೆ ಬಲಿಯಾಗಿದ್ದಾರೆ. ಇಂತಹ ಅನೇಕಾನೇಕ ಅಂಬೆಯರ ಸಂಕಟಗಳನ್ನು ಅನಾವರಣಗೊಳಿಸುವ ಒಂದು ರಂಗಪ್ರಯತ್ನವೇ ಈ ಏಕವ್ಯಕ್ತಿ ನಾಟಕ )

(ವೇದಿಕೆಯಲ್ಲಿ ತ್ರಿಕೋನದ ಬಿಂದುಗಳಲ್ಲಿ ಮೂರು ಕಂಬಗಳು. ಪ್ರತಿ ಕಂಬಕ್ಕೂ ಒಂದೊಂದು ಕಿರೀಟ, ಮುಖವಾಡ ಹಾಗೂ ಶಲ್ಯವನ್ನು ಸಿಕ್ಕಿಸಿರಬೇಕು. ಬಲಗಡೆ ಕಂಬ ಭೀಷ್ಮನನ್ನೂ, ಎಡಗಡೆ ಕಂಬ ಸಾಲ್ವ ರಾಜಕುಮಾರನನ್ನೂ, ಹಿಂದೆ ಮಧ್ಯಕ್ಕಿರುವ ಕಂಬ ಕಾಶೀರಾಜನನ್ನು ಸಂಕೇತಿಸುತ್ತದೆ. ಆಯಾ ಪಾತ್ರಗಳ ಸಂಭಾಷಣೆಯನ್ನು ಹೇಳುವಾಗ ಅಂಬೆ ಆ ಪಾತ್ರಗಳ ಮುಖವಾಡ, ಕಿರೀಟ ಮತ್ತು ಅಂಗವಸ್ತ್ರವನ್ನು ತೊಟ್ಟುಕೊಳ್ಳುವುದು ಪಾತ್ರ ಪೋಷಣೆಗೆ ಸೂಕ್ತ. )

(ಅಂಬೆ..) ಅಂಬೆ.. ಆ ಜಗನ್ಮಾತೆ ಜಗದಂಬೆಯ ಆಶೀವಾದದಿಂದ ಹುಟ್ಟಿದವಳು ನಾನು ಅಂಬೆ.. ಕಾಶೀರಾಜನ ಅಚ್ಚುಮೆಚ್ಚಿನ ಚೊಚ್ಚಲ ಪುತ್ರಿ ಅಂಬೆ. ಅಂಬಾಭವಾನಿಯ ಆರಾಧಕರಾದ ನನ್ನಪ್ಪಾಜಿ ತಮ್ಮ ಕುಲದೇವತೆಯ ಹೆಸರನ್ನೇ ತನ್ನ ಮೂವರೂ ಪುತ್ರಿಯರಿಗೆ ಇಟ್ಟಿದ್ದು ನಾನು ಅಂಬೆ, ಇನ್ನೊಬ್ಬಳು ಅಂಬಿಕೆ, ಮತ್ತೊಬ್ಬಳು ಅಂಬಾಲಿಕೆ. ನನ್ನ ಬದುಕಿನ ದುರಂತಕಥೆ ಮತ್ತು ದುರಾದೃಷ್ಟದ ವ್ಯಥೆಯನ್ನು ನಿಮ್ಮ ಮುಂದೆ ಹಂಚಿಕೊಂಡು ಹಗುರಾಗಲು ಬಂದಿರುವೆ.

ಅಮಾಯಕ ಹೆಣ್ಣೊಬ್ಬಳ ಬದುಕಿನಲ್ಲಿ ಇಷ್ಟೆಲ್ಲಾ ಅನಿಷ್ಟಗಳು ಆದೀತೆಂದು ನಾನು ಕನಸು ಮನಸಲ್ಲೂ ಎಣಿಸಿರಲಿಲ್ಲ. ಬೇರೆ ಯಾರ ಬದುಕೂ ಈ ಅಂಬೆಯಂತಾಗದಿರಲೆಂದು ಆ ಜಗದಂಬೆಯಲ್ಲಿ ಪ್ರಾರ್ಥಿಸುವೆ. ಇಷ್ಟಕ್ಕೂ ಏನಾಯ್ತು? ಯಾಕಾಯ್ತು? ಹೇಗಾಯ್ತು? ಯಾರಿಂದಾಯ್ತು? ಎನ್ನುವ ಹಲವಾರು ಸಂದೇಹಗಳು ನಿಮ್ಮ ಮೆದುಳನ್ನು ಹುಳದಂತೆ ಹೊಕ್ಕು ಕಾಡುತ್ತಿರಬಹುದಲ್ವೇ..? ಕುತೂಹಲ.. ಕುತೂಹಲ ಇದ್ದಲ್ಲಿ ಕಥೆ ಕೇಳಿಸಿಕೊಂಡು ಇಲ್ಲವೇ ನೋಡಿಸಿಕೊಂಡು ಹೋಗುತ್ತದೆ. ಹೇಳುವುದು ಬೇಕಾದಷ್ಟಿದೆ.. ಕೇಳಲು ನೀವು ಸಿದ್ದರಾಗಿದ್ದರೆ.. ಮೊಗೆಮೊಗೆದು ತೋಡಿಕೊಳ್ಳುವುದು ಸಾಕಷ್ಟಿದೆ, ನೀವು ಸಮಯಕೊಟ್ಟು ನೋಡಲು ತಯಾರಾಗಿದ್ದರೆ..

ನನ್ನನ್ನು ಅಂಬೆ.. ಜಗದಂಬೆ, ಅಂಬಾಭವಾನಿ.. ಹೀಗೆ ಯಾವುದೇ ಹೆಸರಿನಿಂದ ಬೇಕಾದರೂ ಕರೆಯಿರಿ ನನಗೇನೂ ವ್ಯತ್ಯಾಸವಾಗುವುದಿಲ್ಲ. ಆಗಿದ್ದು ಆಗುವುದು ಆಗಬೇಕಾದದ್ದು ಯಾವುದೂ ಬದಲಾಗುವುದಿಲ್ಲ. ನನ್ನ ತಂದೆಯಾದ ಕಾಶೀರಾಜನ ಅರಮನೆಯಲ್ಲಿ ತಂಗಿಯರ ಜೊತೆಗೆ ಆಡುತ್ತಾ, ಸಖಿಯರೊಂದಿಗೆ ಚಲ್ಲಾಟವಾಡುತ್ತಾ ಸುಖವಾಗಿದ್ದೆ. ಬಾಲಕಿಯಾಗಿದ್ದವರು ಯಾವಾಗ ಯೌವನಕ್ಕೆ ಬಂದೆವೋ ನಮಗೇ ಗೊತ್ತಾಗಲಿಲ್ಲ. ನಾವು ಮೂವರೂ ಸಹೋದರಿಯರಿಗೆ ಮದುವೆ ಮಾಡಬೇಕೆಂದು ನಿಶ್ಚಯಿಸಿದ ನನ್ನ ತಂದೆಯವರು ನಮಗಾಗಿ ಸ್ವಯಂವರ ಏರ್ಪಡಿಸಿದ ಸುದ್ದಿ ಸಖಿಯರಿಂದ ತಿಳಿಯುವವರೆಗೂ ನಾವು ಮದುವೆಯ ವಯಸ್ಸಿಗೆ ಬಂದಿದ್ದೇವೆಂಬುದುರ ಅರಿವೂ ನಮಗಿರಲಿಲ್ಲ. ಅಲ್ಲಿಯವರೆಗೂ ಪ್ರತಿನಿತ್ಯ ಆಟ, ಚಲ್ಲಾಟ, ನೀರಾಟ, ವಾಯುವಿಹಾರಗಳಲ್ಲೇ ಸಂತಸವಾಗಿದ್ದೆವು. ನಮ್ಮದೇ ಆದ ಜಗತ್ತಲ್ಲಿ ಸುಖಿಸುತ್ತಿದ್ದೆವು.

ನನ್ನ ಅಪ್ಪಾಜಿಗೆ ಗಂಡು ಸಂತಾನ ಇಲ್ಲದ್ದರಿಂದ ದೊಡ್ಡವಳಾದ ನನ್ನನ್ನೇ ಗಂಡುಮಗುವಿನಂತೆ ಬೆಳೆಸಿದ್ದಂತೂ ಸತ್ಯ. ಶಾಸ್ತ್ರಗಳ ಅಧ್ಯಯನದ ಜೊತೆಜೊತೆಗೆ ಶಸ್ತ್ರಾಭ್ಯಾಸಗಳನ್ನೂ ಸಹ ನನಗೆ ವಿಶೇಷವಾಗಿ ಕಲಿಸುವ ಏರ್ಪಾಡನ್ನು ತಂದೆಯವರು ಮಾಡಿದ್ದರು. ನನ್ನ ಕತ್ತಿವರಸೆಯ ಚಾಕಚಕ್ಯತೆಯನ್ನು ನೋಡಿ ನೀನು ಗಂಡಾಗಿದ್ದರೆ ಈ ರಾಜ್ಯಕ್ಕೆ ಉತ್ತರಾಧಿಕಾರಿಯಾಗಬಹುದಾಗಿತ್ತು ಆದರೆ ಆಗಲಿಲ್ವೇ ಎಂದು ಪಿತಾಶ್ರೀಯವರು ಆಗಾಗ ಹಳಹಳಿಸುತ್ತಿದ್ದರು. ಅವರಿಗೆ ಪಟ್ಟಕ್ಕೇರಿಸಲು ಗಂಡುಸಂತಾನ ಬೇಕಾಗಿತ್ತು. ಆದರೆ.. ನಾವು ಮೂವರೂ ಹೆಣ್ಣಾಗಿ ಹುಟ್ಟಿದ್ದೆವು.

ಅದೊಂದು ದಿನ ಅರಮನೆಯ ಅಂತಃಪುರದಲ್ಲಿ ನಾನು ಅಪ್ಪಾಜಿಯ ಪಕ್ಕದಲ್ಲಿ ಕೂತು ಪಿತಾಶ್ರೀ ಪುರುಷರು ಮಾಡಬಹುದಾದ ಎಲ್ಲಾ ಕೆಲಸ-ಕಾಯಕಗಳನ್ನು ಸ್ತ್ರೀಯರು ಮಾಡಲು ಸಾಧ್ಯವಿರುವಾಗ, ಗಂಡಿಗಿಂತಾ ಹೆಣ್ಣಿಗೇ ಏಕಾಗ್ರತೆ ಹಾಗೂ ಕಾರ್ಯಕುಶಲತೆ ಹೆಚ್ಚಿರುವಾಗ, ರಾಜ್ಯವನ್ನು ಸ್ತ್ರೀಯರು ಯಾಕೆ ಆಳಬಾರದು..? ಗಂಡೇ ಆಗಬೇಕೆನ್ನುವ ಕಟ್ಟಲೆ ಮಾಡಿದವರಾದರೂ ಯಾರು? ಎಂದು ಅಳುಕಿನಿಂದಲೇ ಕೇಳಿದೆ. ಇದನ್ನು ಕೇಳಿ ಸ್ವಲ್ಪ ಗಂಭೀರವಾದ ತಂದೆ ನಿಂತಲ್ಲೇ ಎದ್ದು ನಿಂತು ಶೂನ್ಯದಲ್ಲಿ ನೋಡುತ್ತಾ.. (ಕಾಶೀರಾಜನ ವೇಷದಾರಿಯಾದ ಅಂಬೆ ತಂದೆಯ ಹಾಗೆ ಮಾತು ಅನುಕರಿಸುತ್ತಾಳೆ.)

(ಕಾಶೀರಾಜ..) ಇಲ್ಲ ಮಗಳೆ.. ಪಟ್ಟಕ್ಕೆ ಗಂಡಾದರೇನು ಹೆಣ್ಣಾದರೇನು? ಎನ್ನುವ ಪ್ರಶ್ನೆಯೇ ಇಲ್ಲಿ ಅಪ್ರಸ್ತುತ. ಸಂಪ್ರದಾಯ ಮಗಳೇ ಸಂಪ್ರದಾಯ. ರಾಜನೆಂಬುವವ ಎಂದೂ ನಿಜಾರ್ಥದಲ್ಲಿ ಸರ್ವತಂತ್ರ ಸ್ವತಂತ್ರ ಅಲ್ಲವೇ ಅಲ್ಲ. ಪ್ರತಿಯೊಬ್ಬ ರಾಜನ ಸಿಂಹಾಸನದ ಸುತ್ತ ಅಗೋಚರವಾದ ಪಾರಂಪರಿಕ ಸಾಂಪ್ರದಾಯದ ಬೇಲಿಗಳನ್ನು ಹಾಕಲಾಗಿರುತ್ತದೆ. ಬೇಲಿಗಳನ್ನು ತೆಗೆದು ಹಾಕಲು ಯತ್ನಿಸಿದಷ್ಟೂ ದೊರೆಯನ್ನೇ ದುರ್ಬಲಗೊಳಿಸುವ ಸಂಚು ನಡೆಯುತ್ತಾ ಹೋಗುತ್ತದೆ. ಪಾರಂಪರೆಯಿಂದ ಬಂದ  ಪದ್ಧತಿಗಳನ್ನು ಚಾಚೂ ತಪ್ಪದಂತೆ ಕಾಪಾಡಿಕೊಂಡು ಹೋಗುವುದಷ್ಟೇ ರಾಜನಾದವನ ಮೂಲಭೂತ ಕರ್ತವ್ಯ. ಸಿಂಹಾಸನದ ಹಿತವನ್ನು, ಸಂಪ್ರದಾಯಗಳ ಕಟ್ಟುಪಾಡುಗಳನ್ನು, ಪುರೋಹಿತಶಾಹಿಗಳ ಆಸಕ್ತಿಯನ್ನು ಶತಾಯ ಗತಾಯ ನಿಷ್ಟೆಯಿಂದ ಕಾಯ್ದು ಕಾಪಿಡುವವನು ಮಾತ್ರ ರಾಜನಾಗಿರಬಲ್ಲ. ಇಲ್ಲದೇ ಹೋದರೆ ಸಂಚುಕೋರರ ವಂಚನೆಗೆ ಜಾಲಕ್ಕೆ ಬಲಿಯಾಗಿ ನಾಶ.. ಸರ್ವನಾಶವಾಗಿ ಹೋಗಬಲ್ಲ.

ಪರಂಪರೆಯ ಜೇನುಗೂಡಿಗೆ ಕೈಹಾಕಿದವರ‍್ಯಾರೂ ಸರಳವಾಗಿ ರಾಜ್ಯಭಾರ ಮಾಡಿಲ್ಲಾ ಮಗಳೇ ಮಾಡಿಲ್ಲ. ನಾನು ನಿನಗೆ ರಾಜ್ಯಪಟ್ಟ ಕಟ್ಟಬಯಸಿದರೆ ನನ್ನ ಪಟ್ಟಕ್ಕೂ ಸಂಚಕಾರ ಶತಸಿದ್ಧವೆನ್ನುವ ಅರಿವು ನಿನಗಿರಲಿ. ಸಿಂಹಾಸನಕ್ಕೆ ಗಂಡು ಸಂತಾನವೇ ಬೇಕು.. ನೀನು ರಾಜನೊಬ್ಬನ ಮಡದಿಯಾಗಿ ಇನ್ನೊಬ್ಬ ರಾಜಕುಮಾರನನ್ನು ಹೆತ್ತು ಕೊಡುವ ಕರ್ತವ್ಯ ನಿರ್ವಹಿಸಿದರೆ ಸಾಕು.. ನೀನೀಗ ಮದುವೆಯ ವಯಸ್ಸಿಗೆ ಬಂದಿರುವೆ ಮಗಳೇ, ನಿನಗೂ ನಿನ್ನ ತಂಗಿಯರಿಗೂ ವೀರಾಧಿವೀರ ರಾಜಪುತ್ರರನ್ನು ಹುಡುಕಿ ವಿವಾಹ ಮಾಡಲು ಸ್ವಯಂವರವನ್ನು ಏರ್ಪಡಿಸಲು ಸಿದ್ದತೆ ನಡೆಸಿದ್ದೇನೆ. ಯಾವ ರಾಜಕುಮಾರ ವೀರತ್ವವನ್ನು ಸಾಬೀತುಪಡಿಸಿ ನಿನ್ನನ್ನು ಸ್ವಯಂವರದಲ್ಲಿ ಗೆಲ್ಲುತ್ತಾನೋ ಅಂತಹ ಧೀರನ ಧರ್ಮಪತ್ನಿಯಾಗುವೆ ನೀನು. ಈ ತಂದೆಯ ರಾಜ್ಯದಿಂದ ಗಂಡನ ರಾಜ್ಯಕ್ಕೆ ಹೋಗಿ ಸುಖವಾಗಿರುವೆ.. ಮಗಳೇ ಸುಖವಾಗಿರುವೆ.. (ಕಣ್ಣಲ್ಲಿ ನೀರು)
  
(ಹೀಗೆ ಮಾತಾಡುತ್ತಲೇ ಕಾಶೀರಾಜನ ವೇಷ ಕಳಚಿಟ್ಟ ಅಂಬೆ ತನ್ನ ಮಾತು ಮುಂದುವರೆಸುತ್ತಾಳೆ)

(ಅಂಬೆ..) ಅಪ್ಪನ ಕಣ್ಣುಗಳಲ್ಲಿ ನನ್ನ ಕಣ್ಣುಗಳನ್ನಿಟ್ಟು ನೇರವಾಗಿ ನೋಡುತ್ತಲೇ ಇದ್ದೆ. ಸನಾತನ ಸಂಪ್ರದಾಯಗಳ ಕಟ್ಟಲೆಗಳ ಸಂಕೋಲೆಗಳಲ್ಲಿ ಸಿಕ್ಕಿಬಿದ್ದು ಸಿಂಹಾಸನದ ಹಿತ ಕಾಪಾಡಲು ಕಟಿಬದ್ದನಾಗಿದ್ದ ದೊರೆಯ ಅಸಹಾಯಕತೆಯನ್ನು ಅಪ್ಪಾಜಿಯ ಕಣ್ಣುಗಳಲ್ಲಿ ಕಂಡೆ. ತಂದೆಯವರ ನಯನಗಳಂಚಿನಲ್ಲಿ ಜಿನುಗಿದ ನೀರನ್ನೂ ಗಮನಿಸಿದೆ. ಮಗಳಿಗೆ ಪಟ್ಟಕಟ್ಟಲಾಗದ ಅಸಹಾಯಕತೆಗೋ, ಇಲ್ಲವೇ ಇವಳು ಗಂಡಾಗಲಿಲ್ಲವಲ್ಲಾ ಎನ್ನುವ ಅಸಹನೆಗೋ ಅಥವಾ ಮದುವೆಯಾದ ನಂತರ ಮಗಳು ತನ್ನನ್ನು ಬಿಟ್ಟು ಹೋಗುತ್ತಾಳಲ್ಲಾ ಎನ್ನುವ ಪಿತೃವಾತ್ಸಲ್ಯಕ್ಕೋ.. ಅವರ ನಯನಗಳಲಿ ನೀರಾಡುತ್ತಿತ್ತು. ನನಗೂ ಆ ಕ್ಷಣಕ್ಕೆ ಅಳು ಬಂದಂತಾಯಿತಾದರೂ ನನಗೇ ಗೊತ್ತಿಲ್ಲದೇ ನನ್ನ ಸ್ವಯಂವರದ ಏರ್ಪಾಡು ಮಾಡಿದ್ದು ತಿಳಿದು ಬೇಸರವಾಯಿತು. ನೇರವಾಗಿಯೇ ಕೇಳಿದೆ..

ಮದುವೆಯಾಗಬೇಕಾದವಳು ನಾನು ಅಪ್ಪಾಜೀ.. ಕೊನೆಯವರೆಗೂ ಪತಿಯ ಜೊತೆ ಪತ್ನಿಯಾಗಿ ಬದುಕಬೇಕಾದವಳು ನಾನು, ನನ್ನಚ್ಚೆ ಬಂದವರನ್ನು ಆಯ್ಕೆ ಮಾಡಿಕೊಂಡು ವಿವಾಹವಾಗುವ ಸ್ವಾತಂತ್ರ್ಯವೂ ನನಗಿಲ್ಲವಾ ತಂದೆ, ಯಾರೋ ಗೊತ್ತಿಲ್ಲದ ಅಪರಿಚಿತ ರಾಜಕುಮಾರನೊಬ್ಬ ಬಂದು, ನನ್ನನ್ನು ಗೆದ್ದುಕೊಂಡು, ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಾನೆಂದರೆ ನಾನೇನು ಕ್ರಯಕ್ಕಿಟ್ಟ ಕುರಿಮರಿಯೇ.. ಇಲ್ಲಾ ರಾಜನ ಸವಾರಿಗೆ ಬಳಸುವ ಪಟ್ಟದ ಕುದುರೆಯೇ..? ಹೇಳು ತಂದೆಯೇ ಹೇಳು.. ನನ್ನದೇ ಆದ ಈ ದೇಹ ಮನದ್ದು ಹಾಗೂ ಬದುಕಿನ ಮೇಲೆ ನನಗೆ ಯಾವುದೇ ಹಕ್ಕಿಲ್ಲವೇ?
ಅದ್ಯಾರೋ ಹಿಂದೆ ಮುಂದೆ ಗೊತ್ತಿಲ್ಲದ ಅಪರಿಚಿತನ ಜೊತೆಗೆ ನಾನು ಹೇಗೆ ಮನಸು ಬದಲಾಯಿಸಿಕೊಳ್ಳಲಿ ಅಪ್ಪಾಜಿ,,, ನನ್ನಿಚ್ಚೆಗೆ ವ್ಯತಿರಿಕ್ತವಾಗಿ ದಿನನಿತ್ಯ ಅದು ಹೇಗೆ ಹಾಸಿಗೆ ಹಂಚಿಕೊಳ್ಳಲಿ. ನನಗೂ ಕನಸುಗಳಿವೆ ಆಸೆಗಳಿವೆ, ನನ್ನ ಪತಿಯಾದವನು ಹಾಗಿರಬೇಕು ಹೇಗಿರಬೇದು ಎಂಬ ಕಲ್ಪನೆಗಳೂ ನನ್ನಲ್ಲಿವೆ, ಯಾರೋ ಬಂದು ಸ್ಪರ್ದೆಗಿಟ್ಟ ಪಾರಿತೋಷಕದ ಹಾಗೇ ಹೆಣ್ಣನ್ನು ಗೆದ್ದುಕೊಂಡು ಹೋಗುವುದು ಸ್ತ್ರೀಯರ ಭಾವನೆಗಳ ಮೇಲೆ ಮಾಡಿದ ಆಕ್ರಮಣವಾಗುವುದಿಲ್ಲವೇ? ಇಚ್ಚೆ ಇಲ್ಲದ ಸ್ತ್ರೀಯನ್ನು ಅಪರಿಚಿತನೊಬ್ಬ ಬಲವಂತವಾಗಿ ಅತಿಕ್ರಮಿಸುವುದು ಹೆಣ್ಣಿನ ಮನಸಿನ ಮೇಲೆ ಮಾಡಿದ ದಾಳಿಯಲ್ಲವೇ..? ಉತ್ತರ ಹೇಳು ತಂದೆ.. ಯಾಕೆ ಹೀಗೆ ಸುಮ್ಮನೇ ನಿಂತೆ.. ನನಗೆ ಈ ರೀತಿಯ ಸ್ವಯಂವರ ಇಷ್ಟವಿಲ್ಲ ಅಪ್ಪಾಜಿ. ಗೆದ್ದು ಬೀಗಿದವನ ಹಿಂದೆ ತಲೆತಗ್ಗಿಸಿಕೊಂಡು ಕುರಿಯ ಹಾಗೆ ಹೋಗುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲಾ. ನೀವು ನಿಮ್ಮ ಮಗಳ ಆಸೆ ಆಕಾಂಕ್ಷೆ ಕನಸುಗಳನ್ನು ನಾಶಮಾಡಲಾರಿರಿ ಎಂದೇ ನಂಬಿರುವೆ.. ನನಗೆ ನನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ದಯಪಾಲಿಸಲಾರಿರಾ ಅಪ್ಪಾಜಿ.. ನನಗಿಷ್ಟವಾದವರ ಜೊತೆ ಬದುಕುವುದಕ್ಕೆ ಅನುಮತಿ ನೀಡಲಾರಿರಾ..?

ನೀವು ದೊರೆಯನ್ನುವುದಕ್ಕಿಂತಲೂ ನನಗೆ ಜನ್ಮಕೊಟ್ಟ ತಂದೆಯೆಂದು ಮಂಡಿಯೂರಿ ಬೇಡಿಕೊಳ್ಳುತ್ತಿರುವೆ, ನನಗೆ ನನ್ನದೇ ಆದ ಬದುಕನ್ನು ರೂಪಿಸಿಕೊಳ್ಳುವ ಅವಕಾಶವನ್ನು ದಯವಿಟ್ಟು ಮಾಡಿಕೊಡಿ.. ಇಲ್ಲಿಯವರೆಗೂ ನಾನು ನಿಮ್ಮನ್ನು ಎಂದೂ ಏನನ್ನೂ ಕೇಳಿಲ್ಲಾ.. ನೀವೂ ನನಗೇನು ಕೊರತೆ ಮಾಡಿಲ್ಲಾ. ಆದರೆ.. ಈಗ ನಿಮ್ಮಲ್ಲಿ ನಾನು ಸ್ವಾತಂತ್ರ್ಯದ ಭಿಕ್ಷೆ ಕೇಳುತ್ತಿರುವೆ. ಈ ಸ್ವಯಂವರ ಎನ್ನುವ ಸಂತೆಯಲ್ಲಿ ನಿಮ್ಮ ಪುತ್ರಿಯನ್ನು ಪ್ರದರ್ಶನದ ಪದಾರ್ಥವಾಗಿಸಿ, ಬಲವಿದ್ದವನು ಗೆದ್ದು ಕೊಂಡಯ್ಯಬಹುದಾದ ಬಹುಮಾನವನ್ನಾಗಿಸಿ ಹೆಣ್ಣಿನ ಮಾನ ಕಳೆಯದಿರಿ ಅಪ್ಪಾಜಿ, ಸ್ತ್ರೀಯರ ಘನತೆಯನ್ನು ಕುಂಟಿತಗೊಳಿಸದಿರಿ. ನಿಮ್ಮನ್ನು ಸೆರಗೊಡ್ಡಿ ಬೇಡಿಕೊಳ್ಳುವೆ.. ಕರುಣೆ ತೋರಿ ದೊರೆಯೇ..  ಹೀಗೆ ಕರುಣಾಜನಕವಾಗಿ ಅಪ್ಪಾಜಿಯನ್ನು ಪರಿಪರಿಯಾಗಿ ಕೇಳಿಕೊಂಡೆ. ದೊರೆಯ ಕಲ್ಲಿನಂತಾ ಮನಸ್ಸೂ ಸಾವಕಾಶವಾಗಿ ಕರಗಿದ್ದನ್ನೂ ಕಂಡುಕೊಂಡೆ. ಅಕ್ಕರೆಯಿಂದ ಹತ್ತಿರ ಬಂದು ತಲೆಯನ್ನು ಸವರುತ್ತಾ ನಿಂತ ನನ್ನ ತಂದೆ ಒಮ್ಮೆ ಉಸಿರನ್ನು ಜೋರಾಗಿ ಎಳೆದುಕೊಂಡು... (ಮಾತಾಡುತ್ತಲೇ ಅಂಬೆ ತಂದೆಯ ಅಂಗವಸ್ತ್ರ ತೊಟ್ಟು ಕಾಶೀರಾಜನಾಗಿ ಬದಲಾಗುತ್ತಾಳೆ)

(ಕಾಶೀರಾಜ..) ನಿನ್ನ ಮನದ ತಳಮಳ ತಲ್ಲಣಗಳನ್ನು ತಂದೆಯಾಗಿ ನಾನು ಅರ್ಥಮಾಡಿಕೊಳ್ಳಬಲ್ಲೆ ಅಂಬೆ. ಆದರೆ.. ರಾಜನಾಗಿ ಅಸಹಾಯಕನಾಗಿರುವೆ. ವಯಸ್ಸಿಗೆ ಬಂದ ಮಗಳ ಮದುವೆಗಾಗಿ ಸ್ವಯಂವರ ಏರ್ಪಡಿಸುವುದು ಪರಂಪರೆಯಿಂದ ಬಂದ ರಾಜಕುಲಧರ್ಮ.  ಇಂದು ನಾನದನ್ನು ಬದಲಾಯಿಸಲು ಹೇಗೆ ಸಾಧ್ಯ? ವಿರಾಧಿವೀರ ಶೂರನಾದವನು ತನ್ನ ಅಳಿಯ ಆಗಬೇಕು.. ಗಂಡು ದಿಕ್ಕಿಲ್ಲದ ರಾಜ್ಯದ ಆಡಳಿತವನ್ನು ಮುಂದೊಂದು ದಿನ ಅಳಿಯ ನಿಭಾಯಿಸಬೇಕು. ನಮ್ಮ ರಾಜ್ಯಕ್ಕೆ ಶತ್ರುಗಳಿಂದ ಆಪತ್ತು ಎದುರಾದಾಗ ಸೈನ್ಯ ಸಮೇತ ಬಂದು ಬೆಂಬಲಿಸಿ ರಾಜ್ಯವನ್ನು ಕಾಪಾಡಬೇಕು, ಎನ್ನುವ ಸದುದ್ದೇಶದಿಂದ ಮಗಳೇ ಈ ರೀತಿ ಸ್ವಯಂವರವನ್ನು ಏರ್ಪಡಿಸುವುದು. ಬಲಾಡ್ಯನೊಬ್ಬನಿಗೆ ಮಗಳನ್ನು ಧಾರೆಯೆರೆದು ಕೊಡುವುದು. ಮಗಳ ಮದುವೆಯ ಜೊತೆಗೆ ರಾಜ್ಯದ ಹಿತಾಸಕ್ತಿಯೂ ಇದರಲ್ಲಿ ಅಡಗಿರುವುದರಿಂದ ಸ್ವಯಂವರವನ್ನು ರದ್ದು ಮಾಡಲು ಸಾಧ್ಯವಿಲ್ಲಾ ಕಂದಾ.. ಅದಕ್ಕೆ ರಾಜಧರ್ಮ ಒಪ್ಪುವುದಿಲ್ಲಾ...

ಆದರೂ.. ನಿನ್ನ ಭಾವನೆಗಳಿಗೆ ಗೌರವಕೊಡಲು ಸ್ವಯಂವರದಲ್ಲಿ ಒಂದು ಸಣ್ಣ ಮಾರ್ಪಾಡನ್ನು ಮಾಡಬಲ್ಲೆ. ಸ್ವಯಂವರವನ್ನು ಸ್ಪರ್ಧೆಯನ್ನಾಗಿ ಮಾಡದೇ ಬಂದ ರಾಜಕುಮಾರರಲ್ಲಿ ನಿನಗಿಷ್ಟವೆಂದೆನಿಸುವವರಿಗೆ ವಿಜಯಮಾಲೆ ಹಾಕಿ ನಿನ್ನ ಬಾಳಸಂಗಾತಿಯನ್ನ ಆಯ್ದುಕೊಳ್ಳುವ ಅವಕಾಶವನ್ನು ಮಾಡಿಕೊಡಬಲ್ಲೆ. ಸ್ವಯಂವರಕ್ಕೆ ಬಂದ ರಾಜಕುಮಾರರನ್ನು ಹೊರತು ಪಡಿಸಿ ಬೇರೆಯವರ ವಧುವಾಗಲು ನೀನು ಬಯಸಿದರೆ ಅದಕ್ಕೆ ರಾಜಧರ್ಮದಲ್ಲಿ ಅನುಮತಿ ಇಲ್ಲಾ ಮಗಳೇ.. ನೀನು ನನ್ನ ಪ್ರೀತಿಯ ಪುತ್ರಿಯಾಗಿ ನನ್ನ ಅಸಹಾಯಕತೆಯನ್ನೂ ಅರ್ಥ ಮಾಡಿಕೊಳ್ಳುವೆಯೆಂದು ನಂಬಿರುವೆ. ಬಂಗಾರದ ಗೊಂಬೆಯಂತಾ ಈ ಅಂಬೆಯನ್ನು ಮದುವೆಯಾಗ ಬಯಸಿ ಬರುವವರು ಸಾಮಾನ್ಯರೇನಲ್ಲಾ.. ಅತಿರಥ ಮಹಾರಥರೇ ಆಗಿರುತ್ತಾರೆಂಬುದು ನೆನಪಿರಲಿ. ಬಲಾಢ್ಯರಾದ ನೆರೆಹೊರೆಯ ರಾಜ್ಯದ ವೀರರಾಜಕುಮಾರರಿಗೆ ಮಾತ್ರ ಆಮಂತ್ರಣ ಕಳುಹಿಸುವೆ. ಬಂದವರು ಇಂದ್ರನಂತೆಯೋ ಮನ್ಮಥನಂತೆಯೋ ಇಲ್ಲದಿರಬಹುದು, ಇದ್ದುದರಲ್ಲೇ ಚಂದ್ರನಂತಿರುವ ಒಬ್ಬನನ್ನು ನೀನೇ ಆಯ್ಕೆ ಮಾಡಿಕೊಂಡು ನನ್ನ ಮನದ ಭಾರವನ್ನು ಇಳಿಸು ಕಂದಾ.. ಹಾಂ.. ನೀನು ಹೀಗೆ ಮಂದಹಾಸ ಬೀರುತ್ತಿದ್ದರೆ ಅದನ್ನು ನೋಡುವುದೇ ನನಗಾನಂದ.. (ಕಾಶಿರಾಜನ ಅಂಗವಸ್ತ್ರ ಕಳಚಿಟ್ಟು ಅಂಬೆಯಾಗಿ) ಹೀಗೆ ಹೇಳುತ್ತಾ ತಂದೆಯವರು ಗಂಭೀರವಾಗಿ ಎದ್ದು ನನ್ನತ್ತ ಒಮ್ಮೆ ಕರುಣೆಯ ಕಣ್ಣುಗಳಿಂದ ನೋಡುತ್ತಾ ಹೊರಗೆ ಹೊರಟೇ ಹೋದರು. (ಹಿನ್ನೆಲೆಯಲ್ಲಿ ಹಾಡು, ಬಕ್ ಔಟ್)


ದೃಶ್ಯ 2 : ಅರಮನೆಯ ಉದ್ಯಾನವನ.

(ಅಂಬೆ ಹೂವುಗಳನ್ನು ಕಿತ್ತು ತಲೆಗೆ ಮುಡಿಯುತ್ತಾ ಹಾಡು ಗುಣುಗುತ್ತಾ ಬರುತ್ತಾಳೆ.) ಇಂದೇಕೋ ಮನಸ್ಸು ಭಾರವಾದಂತಿದೆ. ಯಾವಾಗಲೂ ಸಖಿಯರೊಂದಿಗೆ ಸಂತಸದಿಂದ ಕಳೆಯುತ್ತಿದ್ದ ಸಂಭ್ರಮದ ಕಾಲಕ್ಕೆ ಇನ್ನುಮೇಲೆ ಚ್ಯುತಿಬರುವ ಹಾಗೆನಿಸುತ್ತಿದೆ. ಆತಂಕ.. ನಿರಾತಂಕವಾಗಿದ್ದ ಮನಸ್ಸಿನಲ್ಲಿ ಎಲ್ಲಿಲ್ಲದ ಆತಂಕ. ಈ ವಿವಾಹ ಎನ್ನುವುದು ಸಂಭ್ರಮದ ಸಂಗತಿ ಎಂದು ನಾನು ಕೇಳಿದ್ದೆ, ತಿಳಿದಿದ್ದೆ. ಆದರೆ.. ಈಗ ಮದುವೆಯ ಪ್ರಸ್ತಾಪವೇ ನನಗೆ ಅಪತ್ಯವೆನಿಸುತ್ತಿದೆ. ಕೇಳಿದಿರಾ ಹೂಹಣ್ಣು ಗಿಡಬಳ್ಳಿಗಳೇ, ಕೇಳಿದಿರಾ ಗಿಳಿ ಗೊರವಂಕ ಪಕ್ಷಿಗಳೇ.. ಎಂದೂ ನೋಡದ, ಒಮ್ಮೆಯೂ ಒಡನಾಟ ಮಾಡದ ವ್ಯಕ್ತಿಗಳು ಬರುವರಂತೆ, ಸ್ಪರ್ಧೆಯಲ್ಲಿ ಭಾಗವಹಿಸಿ ವಧುವನ್ನು ಗೆಲ್ಲುವರಂತೆ, ವಿಜಯಹೊಂದಿದವರಿಗೆ ನಾನು ವರಮಾಲೆ ಹಾಕಿ ಪತಿ ಎಂದು ಒಪ್ಪಿಕೊಂಡು ಹಿಂದಿಂದೆ ಹೋಗುವುದಂತೆ. (ನಗು)

ಇಂತದ್ದನ್ನೆಲ್ಲಾ ಕೇಳುವುದಕ್ಕೇ ನನಗೆ ಒಂತರಾ ಮುಜುಗರವೆನಿಸುತ್ತದೆ. ಗೆದ್ದವರ ಜೊತೆಗೆ ಎದ್ದು ಹೋಗುವುದಕ್ಕಿಂತಾ ಇಷ್ಟಪಟ್ಟವರ ಜೊತೆಗೆ ಕದ್ದು ಹೋಗುವುದೇ ಒಳಿತೆಂದು ಮನಸ್ಸು ಹೇಳುತ್ತಿದೆ. (ವ್ಯಂಗ್ಯವಾಗಿ) ಆದರೆ.. ಹಾಗೆ ನಾವು ಹಾಗೆಲ್ಲಾ ಮಾಡುವ ಹಾಗಿಲ್ಲವಲ್ಲಾ..? ಯಾಕೆಂದರೆ ನಾನು ರಾಜಪುತ್ರಿ. ಇಡೀ ಸಮಸ್ತ ರಾಜ್ಯದ ಮಾನ ಮರ್ಯಾದೆಗಳನ್ನು ಕಾಪಾಡುವ ಹೊಣೆಗಾರಿಕೆಯನ್ನು ನಮ್ಮ ಮೇಲೆ ಹೇರಲಾಗಿದೆಯಲ್ಲಾ? ಛೇ... ಮರೆಯಬೇಕೆಂದಷ್ಟೂ ಮತ್ತದೇ ಮಾತುಗಳು ಮೆದುಳಲ್ಲಿ ಮರಿಮಾಡುತ್ತಿವೆ. ಒಂದಿಷ್ಟು ನೆಮ್ಮದಿಯನ್ನು ಹುಡುಕಿಕೊಂಡು ಅರಮನೆ ಬಿಟ್ಟು ಒಬ್ಬಂಟಿಯಾಗಿ ಈ ಉದ್ಯಾವನಕ್ಕೆ ಬಂದಿರುವೆ. ನನ್ನ ಮನಸ್ಸಿನ ಆಲೋಚನೆಯನ್ನು ಬದಲಾಯಿಸಿಕೊಳ್ಳಬೇಕು.. ಹಾಂ..

ಈ ಹುಣ್ಣಿಮೆಯ ಚಂದ್ರ ಅದೆಷ್ಟು ಚೆಂದ. ತಂಪನೆಯ ತಂಗಾಳಿ ದೇಹವನು ತೀಡಿ ಸರಸದ ಸರಿಗಮ ಬಾರಿಸುವಂತಿದೆ. ಈ ಸುಂದರ ಹೂವುಗಳು ಯಾರ ಹಂಗಿಲ್ಲದೇ ಸುವಾಸನೆಯನ್ನು ಬೀರಿ ನನ್ನ ಈ ಸಿರಿಯೌವನ ತುಂಬಿದ ಮೈಮನಸುಗಳನ್ನು ಪುಳಕಿತಗೊಳಿಸುತ್ತಿವೆ. ಅಲ್ಲಿ ಕೂತಿರುವ ಹಕ್ಕಿಗಳು ಯಾವವು? ಹಾ.. ಇವು ಮೈನಾ ಹಕ್ಕಿಗಳು.. ಅವುಗಳಿಗೀಗ ಹಾಡಿ ಕೂಡುವ ಸಮಯ. ಅದು ಹೇಗೆ ಅವು ಒಂದಕ್ಕೊಂದು ಬೆಸೆದಂತೆ ಕೂತು ಮುದ್ದಾಡುತ್ತಿವೆ. ಹೋ.. ನನಗೂ ಒಬ್ಬ ಇನಿಯನಿದ್ದಿದ್ದರೆ.. ಪ್ರಿಯಕರನೊಬ್ಬ ಹಿಂದಿನಿಂದ ಮೆಲ್ಲಗೆ ಬಂದು ಮೆತ್ತಗೆ ತಬ್ಬಿಕೊಂಡಿದ್ದರೆ.. ತನ್ನ ಬೆಚ್ಚನೆಯ ಬಾಹುಗಳಲ್ಲಿ ನನ್ನಿಡೀ  ದೇಹವನ್ನು ಅಪ್ಪಿಕೊಂಡಿದ್ದರೆ.. ಇಂದ್ರನೋ, ಚಂದ್ರನೋ, ಕಿನ್ನರನೋ ಕಿಂಪುರುಷನೋ ಬಂದು ರೂಪರಾಶಿಯ ರಮಣಿಯನ್ನು ಈ ರಮಣೀಯ ಜಾಗದಲ್ಲಿ ರಮಿಸಿದ್ದರೆ..?

ಹಾ.. ಆಹಾ.. ಆಹಾಹಾ.. ಎಂತಾ ಸುಖ..  (ಎಂದು ಮುಲುಗುತ್ತಾ ಇರುವಾಗ ಹಿಂದೆ ಯಾರೋ ಅಪ್ಪಿಕೊಂಡಂತಾಗಿ ಎಚ್ಚರಗೊಂಡು) ಹಾಂ.. ಯಾರು ಯಾರದು ನನ್ನನ್ನು ಹೀಗೆ ತಬ್ಬಿಕೊಂಡಿರುವುದು. ಅಯ್ಯೋ ಬಿಡಿ.. ಈಗ ನನ್ನನ್ನು ಬಿಡದಿದ್ದರೆ ಜೋರಾಗಿ ಕಿರಿಚಿಕೊಳ್ಳುತ್ತೇನೆ.. (ಬಿಡಿಸಿಕೊಂಡು). (ಸ್ಪುರದ್ರೂಪಿ ಯುವಕನನ್ನು  ಕಂಡು ಒಂದರೆಕ್ಷಣ ಗಾಬರಿಯಾಗಿ ನಾಚಿಕೆಯಿಂದ ಪಕ್ಕಕ್ಕೆ  ಓಡಿ ಬಂದು ನಿಂತು). ಯಾರು ಈತ.. ಎಷ್ಟೊಂದು ಸುಂದರ, ಎಷ್ಟೊಂದು ಚೆಲುವ.. ನನ್ನ ಮನಸಿನ ಪಿಸುಮಾತಿನ ಆಲಾಪವನು ಆಲಿಸಿ ಯಾರೋ ಕಿಂಪುರುಷನೇ ಕಾನನದಿಂದ ಬಂದು ಬಿಟ್ಟನಾ? ಏನು ಎತ್ತರದ ನಿಲುವು, ಆತನ ಕಣ್ಣಲ್ಲಿ ತುಂಬಿಕೊಂಡಿದೆ ಅಪಾರ ಒಲವು. ಆತನ ಬಿಸಿ ಅಪ್ಪುಗೆಯಂತೂ ನನ್ನನ್ನು ಬಿಸಿಗೆ ಹಿಡಿದ ಬೆಣ್ಣೆಯಂತೆ ಕ್ಷಣಮಾತ್ರದಲ್ಲಿ ಕರಗಿಸಿ ಬಿಟ್ಟಿತಲ್ಲಾ. ಈತನ ಯೌವನದ ಗಂಧಗಾಳಿ ನನ್ನ ಮೈಯ್ಯಲ್ಲಾ ಪೂಸಿ ಮನದ ತುಂಬಾ ಘಮಘಮಿಸುತ್ತಿದೆಯಲ್ಲಾ. (ಕಿರುಗಣ್ಣಿನಿಂದ ನೋಡುತ್ತಾ)

ದೇಹದಲ್ಲಿ ಅದೇನೋ ಒಂತರಾ ಸಂಚಲನ, ಮನಸಲ್ಲಿ ಎಂತದೋ ರೋಮಾಂಚನ. ಒಂದೇ ಒಂದು ಅಪ್ಪುಗೆಯಲ್ಲಿ ಎಷ್ಟೊಂದು ಅನನ್ಯ ಒಲವಿನ ಸಿಂಚನ.. ಯಾರು ಈ ಅಜಾನುಭಾಹು, ನಟ್ಟನಡುರಾತ್ರಿಯಲ್ಲಿ ಕಟ್ಟುಮಸ್ತಾದ ಆಳು ಈ ಕಾಶೀರಾಜನ ಉದ್ಯಾನವನಕೆ ಬರುವುದೆಂದರೇನು? ಒಂದಿನಿತೂ ಹೆದರಿಕೆಯ ಹಂಗಿಲ್ಲದೇ ರಾಜಕುಮಾರಿಯನ್ನು ತಬ್ಬಿಕೊಳ್ಳುವುದು ಎಂದರೇನು? ಏನೇ ಆಗಲಿ ಕೇಳಿಯೇ ಬಿಡುವೆ.. (ನಾಲ್ಕು ಹೆಜ್ಜೆ ಹಿಂದೆ ಬಂದು) 

ಆರ್ಯ.. ಯಾರು ನೀವು? ಸುತ್ತಲೂ ಇರುವ ಕಾವಲು ಕೋಟೆಯನ್ನು ಬೇಧಿಸಿ ಈ ಸರಿಹೊತ್ತಿನಲ್ಲಿ ಇಲ್ಲಿಗೆ ಬರುವ ಸಾಹಸ ಮಾಡಿದ್ದು ನೋಡಿದರೆ ನೀವು ಯಕ್ಷನೋ, ಗಂಧರ್ವನೋ, ಕಿನ್ನರನೋ ಕಿಂಪುರುಷನೋ ಇರಬೇಕು.. ಯಾಕೀ ನೀರವ ಮೌನ? ಯಾರೆಂದು ಉತ್ತರಿಸುವಿರೋ ಇಲ್ಲಾ ಕಾವಲು ಪಡೆಯನ್ನು ಕೂಗಿ ಕರೆಯಲೋ..

ಹೀಗೆ ನಾನು ಆತಂಕ ಹಾಗೂ ಅಚ್ಚರಿಯಲ್ಲಿ ಆ ಸಲಗದಂತ ಚೆಲುವನನ್ನು ಕೇಳಿದೆ. ಆತ ಆಗ ಯಾವುದೇ ಆತಂಕವಿಲ್ಲದೇ ಒಮ್ಮೆ ಮಂದಹಾಸ ಬೀರಿದ್ದಕ್ಕೆ ನಾನು ಆ ತಂಗಾಳಿಯಲ್ಲೂ ಬೆವೆತುಬಿಟ್ಟೆ. ಆತ ಒಮ್ಮೆ ತನ್ನ ಎರಡೂ ಕಣ್ಣುಗಳನ್ನು ಮುಚ್ಚಿ ತೆಗೆದ.. ಜೋಲಿ ಹೊಡೆದು ಆತನ ತೆಕ್ಕೆಯಲ್ಲಿ ಬಿದ್ದುಬಿಟ್ಟೆ. ಆತ ಯಾರು ಏನು ಅಂತಾ ಕೂಡಾ ಅರಿಯದೇ ನನ್ನ ಮನಸ್ಸನ್ನು ಆತನಿಗೆ ಕೊಟ್ಟುಬಿಟ್ಟೆ. ಅವನು ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ (ಅಂಬೆ ಮಾತಾಡುತ್ತಲೇ ರಾಜಕುಮಾರನ ಶಲ್ಯೆಯನ್ನು ಹಾಕಿಕೊಂಡು ಸಾಲ್ವ ರಾಜಕುಮಾರನಾಗಿ)

(ಸಾಲ್ವ..) ಸಮಾಧಾನ ಸುಂದರಿ ಸಮಾಧಾನ. ನಾನು ಯಾವ ಗಂಧರ್ವನೂ ಅಲ್ಲಾ.. ನೀನಂದುಕೊಂಡಂತೆ ಕಿನ್ನರ ಕಿಂಪುರುಷನೂ ಅಲ್ಲಾ. ನಾನು ಸಾಲ್ವ.. ಸಾಲ್ವ ದೇಶದ ರಾಜಕುಮಾರ. ನಾಳೆ ಈ ಕಾಶೀರಾಜನರಮನೆಯಲ್ಲಿ ನಡೆಯುವ ಸ್ವಯಂವರಕ್ಕೆ ಕನ್ಯಾರ್ಥಿಯಾಗಿ ಬಂದಿರುವೆ. ಕಾಶೀರಾಜನಿಗೆ ಜಗದೇಕ ಸುಂದರಿಯಾದ ಮಗಳಿದ್ದಾಳಂತೆ. ಅವಳ ಮುಖ ಹುಣ್ಣಿಮೆಯ ಬೆಳದಿಂಗಳಂತೆ ಹೊಳೆಯುತ್ತದೆಯಂತೆ. ಆದರೆ. ಆದರೆ.. ಈಗ ನಿನ್ನನ್ನು ನೋಡಿದ ಮೇಲೆ ನನ್ನ ನಿರ್ಧಾರವನ್ನು ಬದಲಾಯಿಸುತ್ತಿರುವೆ. ಸ್ವಯಂವರಕ್ಕೆ ಹೋಗುವುದನ್ನು ತಪ್ಪಿಸಿಕೊಂಡು ಇಲ್ಲಿ ನಿನ್ನೊಡನೆ ತೆಪ್ಪಗೆ ಇದ್ದುಬಿಡಬೇಕೆಂದಿರುವೆ. ನಿನ್ನನ್ನು ನೋಡಿದ ಮೇಲೆ ನನಗೆ ಯಾವ ರಾಜಕುಮಾರಿಯೂ ಬೇಡಾ.. ಚಂದ್ರನಂತಹ ಮುಖದವಳ ಸಹವಾಸವೂ ಬೇಡ ಎನ್ನಿಸುತ್ತಿದೆ. ನೀನು ನನಗೆ ಜಗದೆಲ್ಲ ರಾಜಕುಮಾರಿಗಳ ಮಹಾರಾಣಿ ಎಂದೆನಿಸುತ್ತಿದೆ. ನಾನು ನಿನ್ನಲ್ಲಿ ಅನುರಕ್ತನಾಗಿರುವೆ ದೇವಿ, ನನ್ನ ಪ್ರೇಮ ಪ್ರಸ್ತಾಪವನ್ನು ಮುಂದಿಡುತ್ತಿರುವೆ. ನಿರಾಕರಿಸದೇ ಒಪ್ಪಿಕೋ ಪ್ರೀಯೆ.. ಇರಲಿ ಈ ಪಾಮರನ ಮೇಲೆ ಒಂಚೂರು ದಯೆ..

(ಇಲ್ಲಿ ಒಂದು ರೊಮ್ಯಾಂಟಿಕ ಹಾಡು ಹಾಕಿದರೂ ಚೆಂದ) ಹೀಗೆ ಹೇಳುತ್ತಾ ತನ್ನ ಮನಮೋಹಕ ಮಾತುಗಳಿಂದ ನನ್ನನ್ನು  ಮರುಳುಗೊಳಿಸಿದ ಸಾಲ್ವ ನನ್ನ ತಲೆಯನ್ನು ತನ್ನೆದೆಗೆ ಒತ್ತಿಕೊಂಡ. (ಹೀಗೆ ಹೇಳುತ್ತಾ ಸಾಲ್ವನ ಶಲ್ಯೆ ತಗೆದು ಅಂಬೆ ಆಗುತ್ತಾಳೆ)

(ಅಂಬೆ..) ಆಹಾ.. ಮರೆತೆನೆಂದರೂ ಮರೆಯಲಾಗದ ಅಮೃತ ಗಳಿಗೆಯದು. ಮೊಟ್ಟ ಮೊದಲ ಬಾರಿಗೆ ಪರಪುರುಷನ ಸಂಗದಲ್ಲಿ ಈ ಅಂಗನೆ ಮೈಮರೆತಿದ್ದಳು. ನನ್ನ ಮನದ ಅನುಮತಿಯನ್ನೂ ಕೇಳದೇ ನಾನು ಅವನಲ್ಲಿ ಅನುರಕ್ತಳಾಗಿ ಬಿಟ್ಟೆ. ಆತ ಹೇ:ಳಿದ್ದಕ್ಕೆಲ್ಲಾ ಹಿಂದು ಮುಂದು ಯೋಚನೆ ಮಾಡದೇ ಹೂಂಗುಟ್ಟಿದೆ. ಅಂದು ರಾತ್ರಿ ಉದ್ಯಾನವನದ ತುಂಬೆಲ್ಲಾ ತಂಗಾಳಿಯ ಅಲೆಗಳೆಂತೆ ಅಲೆದಾಡಿದೆವು. ಉಕ್ಕೇರಿದ ಪ್ರೇಮದ ಪ್ರವಾಹದಲಿ ಈಜಾಡಿದೆವು. ಆತ ನನ್ನ ಮಡಿಲಲ್ಲಿ ಮಗುವಿನಂತೆ ಮಲಗಿ ಸುಖಿಸುತ್ತಿದ್ದ. ನಾನು ಅವನ ಎದೆಯ ಮೇಲೆ ತಲೆಯನ್ನಿಟ್ಟು ತಬ್ಬಿಕೊಂಡು, ಕ್ಷಣಕ್ಷಣಕೂ ಸೋರಿಹೋಗುತ್ತಿದ್ದ ಸಂತಸದ ಗಳಿಗೆಗಳನ್ನು ಹಿಡಿದಿಡಲು ಯತ್ನಿಸುತ್ತಿದ್ದೆ. ನಾನು ಅವನನ್ನು ನನಗರಿವಿಲ್ಲದಂತೆ ಅಪಾರವಾಗಿ ಪ್ರೀತಿಸತೊಡಗಿದೆ. ಅವನು ನನ್ನನ್ನು ರಾಜಕುಮಾರಿ ಎಂದರಿಯದೇ ಪ್ರೇಮಿಸತೊಡಗಿದ.

ಅವತ್ತು ಆ ಸೂರ್ಯನಿಗೆ ಅದ್ಯಾಕಷ್ಟು ಹೊಟ್ಟೇಕಿಚ್ಚೋ ಗೊತ್ತಿಲ್ಲ, ಎಂದಿನಕ್ಕಿಂತಾ ಇಂದು ಬಲು ಬೇಗ ಉದಯಿಸಿದ. ಇನ್ನೇನು ನಾವಿಬ್ಬರೂ ಅಗಲುವ ಗಳಿಗೆ ಹತ್ತಿರ ಬರುತ್ತಿರುವಾಗ ಕೈಯಲ್ಲಿ ಕೈಹಿಡಿದು ಕಣ್ಣಲ್ಲಿ ಕಣ್ಣಿಟ್ಟು ಆತನ ಕಿವಿಯಲ್ಲಿ ನಾನೇ ರಾಜಕುಮಾರಿ ಅಂಬೆ, ನಿನ್ನ ಪ್ರೀತಿಯ ಗೊಂಬೆ ಎಂದು ಪಿಸುಗುಟ್ಟಿದೆ. ಆತನ ಇಡೀ ಮೈ ರೋಮಾಂಚನಗೊಂಡಿದ್ದು ನನ್ನರಿವಿಗೆ ಬಂತು. ಇಂದು ಸಂಜೆ ನಡೆಯುವ ಸ್ವಯಂವರದಲ್ಲಿ ನಾನು ನನ್ನ ಈ ನಲ್ಲನಿಗೆ ಹೂಮಾಲೆ ಹಾಕುವುದಾಗಿ ಮಾತುಕೊಟ್ಟೆ. ಆತ ನನ್ನನ್ನು ತನ್ನ ಕೊಟ್ಟ ಕೊನೆಯ ಉಸಿರಿರುವವರೆಗೂ ಕಣ್ಣ ರೆಪ್ಪೆಯಂತೆ ಕಾಪಾಡುವುದಾಗಿ ಮಾತುಕೊಟ್ಟ. ಅಗಲುವ ಇಚ್ಚೆ ಇಲ್ಲದಿದ್ದರೂ ಆ ಕ್ಷಣಕ್ಕೆ ಬೇರೆ ಆಗಲೇಬೇಕಿತ್ತು. ಆಗ ನಮ್ಮಿಬ್ಬರ ದೇಹಗಳು ದೂರಾದವಾದರೂ ಮನಸ್ಸುಗಳು ಅದಲುಬದಲಾಗಿದ್ದವು.

ಹೋ.. ನಾನಂದುಕೊಂಡಂತೆಯೇ ಆಗುತ್ತದೆಂದು ನಾನು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ. ದೇಹದ ಜೊತೆಗೆ ಮನಸ್ಸೂ ಸಹ ಹಕ್ಕಿಯಂತೆ ಹಾರಾಡಿ ಹಗುರಾದಂತೆನಿಸಿತು. ನಾನು ಈಗ ಮದುವೆಯಾಗುತ್ತಿರುವುದು ಅಪರಿಚಿತ ವ್ಯಕ್ತಿಯನ್ನಲ್ಲ.. ನನ್ನ ದೇಹದ ನರನಾಡಿಗಳಲ್ಲಿ ಹರಡಿರುವ ಪರಿಚಿತ ಪ್ರೇಮಿಯನ್ನು ಎನ್ನುವ ಸಂಗತಿಯೇ ನನ್ನಲ್ಲಿ ಅತೀವ ಸಂತಸವನ್ನುಂಟು ಮಾಡಿತು. ನಿನ್ನೆ ರಾತ್ರಿಯವರೆಗೂ ಮದುವೆಯ ಬಗ್ಗೆ ಮನದಲಿದ್ದ ಅಪಾರ ಆತಂಕ ಈಗ ದೂರಾಗಿ. ಯಾವಾಗ ಮದುವೆಯಾಗಿ ನನ್ನ ನಲ್ಲನೊಡನೆ ಮಧುಚಂದ್ರಕೆ ಹೋದೇನೋ ಎನ್ನುವ ಕಾತುರ ಕಾಡತೊಡಗಿದ್ದಂತೂ ಸತ್ಯ. (ಹಾಡು)

ಅರಮನೆಯ ಅಂತಃಪುರಕ್ಕೆ ಹೋಗಿ ಅಲಂಕರಿಸಿಕೊಂಡು ಸಂಜೆ ಆಗುವುದನ್ನೇ ಕಾಯುತ್ತಾ ಕುಳಿತೆ. ನನ್ನ ಸಂತಸ ಸಂಭ್ರಮದ ಹಿಂದಿರುವ ಸತ್ಯ ಗೊತ್ತಿಲ್ಲದ ತಂಗಿಯರು ಅಚ್ಚರಿಯಿಂದಲೇ ನೋಡಿ ನಕ್ಕರು. ಸಂಜೆಯೂ ಆಯಿತು.. ನಿರೀಕ್ಷಿತ ಗಳಿಗೆಯೂ ನನ್ನನ್ನು ಹತ್ತಿರ ಕರೆಯಿತು.  (ವೇದಿಕೆಯ ಮೇಲೆ ಕತ್ತಲೆ ಕಳೆದು ಬೆಳಕಾದಾಗ) 
 
ದೃಶ್ಯ 3 :  ರಾಜದರ್ಬಾರು,  ಸ್ವಯಂವರ :

(ಅಂಬೆ..) ಯಾವಾಗ ನನ್ನ ಮನದಿನಿಯನನ್ನು ನೋಡಿಯೇನೋ ಎನ್ನುವ ದಾವಂತದಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಗಳನ್ನಿಡುತ್ತಾ, ಕರದಲಿ ವರಮಾಲೆಯನ್ನು ಹಿಡಿದು ತಂಗಿಯರ ಜೊತೆಗೆ ನಮಗಾಗಿ ಸಿದ್ದವಾಗಿದ್ದ ಪೀಠಗಳತ್ತ ಹೋಗಿ ಪವಡಿಸಿದೆ. ಒಂದು ಸಲ ಯಾರಿಗೂ ಅನುಮಾನ ಬರದ ರೀತಿಯಲ್ಲಿ ಸ್ವಯಂವರಕ್ಕೆ ಬಂದು ಕೂತಿದ್ದ ರಾಜಕುಮಾರರ ಆಸನಗಳತ್ತ ಕಣ್ಣು ಹಾಯಿಸಿದೆ. ಎಲ್ಲಿ.. ಎಲ್ಲಿ ನನ್ನ ನಲ್ಲಾ.. ಎಂದು ಮನಸ್ಸು ಕೂಗಿ ಕೂಗಿ ಕರೆಯುತ್ತಿತ್ತು. ಆದರೆ ಅವನ ಸುಳಿವೇ ಇರಲಿಲ್ಲ. ಬಹುಪರಾಕುಗಳು ಮೊಳಗಿ ಆಯಿತು. ನನ್ನ ತಂದೆ ಕಾಶೀರಾಜ ಬಂದು ಸಿಂಹಾಸನವನ್ನು ಅಲಂಕರಿಸಿಯೂ ಆಯಿತು. ಅಲ್ಲಿ ಎಲ್ಲರೂ ಇದ್ದರು. ಆದರೆ.. ನನ್ನ ಹೃದಯ ಸಾಮ್ರಾಜ್ಯದ ರಾಜಕುಮಾರ ಮಾತ್ರ ಅಲ್ಲಿರಲಿಲ್ಲ. ಒಬ್ಬೊಬ್ಬ ರಾಜಕುಮಾರನೂ ನಮ್ಮನ್ನು ಇಡಿಯಾಗಿ ನುಂಗುವ ಹಾಗೆ ನೋಡುತ್ತಿದ್ದದ್ದನ್ನು ನೋಡಿ ನನಗಂತೂ ಮುಜುಗರವಾಗತೊಡಗಿತು. ಇವರೆಂದೂ ಹೆಣ್ಣನ್ನು ನೋಡಿಯೇ ಇಲ್ಲವೇನೋ ಎನ್ನುವ ಹಾಗೆ ಅನ್ನಿಸಿದ್ದಂತೂ ಸುಳ್ಳಲ್ಲ. ಹೆಣ್ಣನ್ನು ಭೋಗದ ವಸ್ತು ಎಂದೇ ನಂಬಿ ನಡೆಯುವ ಬಹುಪತ್ನಿವಲ್ಲಭರೂ ಅಲ್ಲಿದ್ದರು. ದನದ ಜಾತ್ರೆಯಲ್ಲಿ ಕೊಬ್ಬಿದ ದನಗಳ ಮೈಮುಟ್ಟಿ ನೋಡುವ ಗಿರಾಕಿಗಳಂತೆ ಅವರೆಲ್ಲಾ ನನಗೆ ಕಾಣತೊಡಗಿದರು. ಮುಖದ ಮುಂದೆ ಇಳಿಬಿಟ್ಟಿದ್ದ ಪಾರದರ್ಶಕ ಪರದೆಯನ್ನು ಮುಖದ ಮುಂದೆ ಸರಿಯಾಗಿ ಹಾಕಿಕೊಂಡೆ. ಆದರೆ ನಾನು ಸುಮ್ಮನಿದ್ದರೂ ನನ್ನ ಕಣ್ಣುಗಳು ರಾಜಕುಮಾರರ ಗುಂಪಿನತ್ತಲೇ ನೆಟ್ಟಿದ್ದವು. ಏನೇನೋ ನೆಪಮಾಡಿ ಕದ್ದು ಕದ್ದು ನೋಡುತ್ತಿದ್ದವು.

ಇನ್ನೇನು ಕೆಲವೇ ಕ್ಷಣಗಳಲ್ಲಿ ಸ್ವಯಂವರ ಶುರುವಾಗಬೇಕಿತ್ತು. ನನ್ನ ಅಂತರಂಗದಲ್ಲಿ ಆತಂಕ ಅತಿಯಾಗತೊಡಗಿತ್ತು. ಅಷ್ಟರಲ್ಲಿ ಎಲ್ಲಿದ್ದನೋ ಅವನು, ನನ್ನವನು. ಕಣ್ಣು ಮಿಟುಕಿಸುವಷ್ಟರಲ್ಲಿ ಗಾಳಿಯಂತೆ ಮೆಲ್ಲಗೆ ಬಂದು ತನ್ನ ಆಸನದ ಮೇಲೆ ಕುಳಿತು ನನ್ನತ್ತ ನೋಡಿ ಮುಗಳ್ನಕ್ಕ. ಆತನ ಆ ಒಂದೇ ಒಂದು ನಗೆಯಲ್ಲಿ ನಾನು ಕೊಚ್ಚಿಕೊಂಡು ಹೋಗುವಂತೆ ಭಾಸವಾಯಿತು. ಅಲ್ಲಿರುವ ರಾಜಕುಮಾರರೆಲ್ಲರೂ ಯಾವುದೋ ರೀತಿಯ ಆತಂಕದಲ್ಲಿದ್ದರೆ ನನ್ನವನು ಮಾತ್ರ ನಿರಾತಂಕಿತನಾಗಿದ್ದ. ಇತ್ತ ಪಕ್ಕದಲ್ಲಿದ್ದ ನನ್ನ ತಂಗಿಯರಂತೂ ಯಾರ ಕೊರಳಿಗೆ ವರಮಾಲೆ ಹಾಕಬೇಕು ಎನ್ನುವ ಲೆಕ್ಕಾಚಾರದಲ್ಲಿ ಮುಳುಗಿದಂತಿತ್ತು. ನನ್ನದಂತೂ ಮೊದಲೇ ಪಕ್ಕಾ ಆಗಿತ್ತು. ಮೊದಲು ದೊಡ್ಡವಳಾದ ನನ್ನ ಸರದಿ. ರಾಜಕುಮಾರರು ಒಬ್ಬೊಬ್ಬರಾಗಿ ನನ್ನ ಮುಂದೆ ತಮ್ಮ ಗಂಭೀರ ನಡಿಗೆಯಲ್ಲಿ ಬಂದು ನಿಂತರು. ನಾನವರ ಕೊರಳಿಗೆ ಮಾಲೆ ಹಾಕುತ್ತೇನೇನೋ ಎನ್ನುವ ಅವರ ನಿರೀಕ್ಷೆ ಹುಸಿಯಾದಾಗ, ನಾನು ನನ್ನ ಕತ್ತನ್ನು ಎಡಬಲಕ್ಕೆ ಅಲ್ಲಾಡಿಸಿದಾಗ, ಅವರೆಲ್ಲರೂ ನಿರಾಸೆಯಿಂದ ನಿಟ್ಟುಸಿರಿಟ್ಟಿದ್ದು ನನಗರಿವಾಯಿತು. ನಾನಿಲ್ಲವಾದರೇನು ನನ್ನ ತಂಗಿಯರ ಸರದಿಯಲ್ಲಾದರೂ ತಮ್ಮ ಕತ್ತಿಗೆ ಹೂವಿನ ಹಾರ ಬೀಳಬಹುದೆಂಬ ಲೆಕ್ಕಾಚಾರದಲಿ ಒಮ್ಮೆ ನನ್ನ ತಂಗಿಯರತ್ತ ನೋಡಿ ತಮ್ಮ ಆಸನಕ್ಕೆ ಹೋಗಿ ಒಬ್ಬೊಬ್ಬರೇ ಆತಂಕದಿಂದಲೇ ಆಸೀನರಾದರು.

ನನಗೋ ಹೊಟ್ಟೆಯೊಳಗೆ ಚಿಟ್ಟೆಗಳು ಹಾರಿದಂತಹ ಅನುಭವ. ಯಾವಾಗ ನನ್ನವನು ಬರುವನೋ, ಯಾವಾಗ ಅವನ ಕೊರಳಿಗೆ ಹಾರ ಹಾಕುವೆನೋ ಎಂದು ತುದಿಗಾಲಲ್ಲಿ ನಿಂತು ಕಾಯುತ್ತಿದ್ದೆ. ಎಲ್ಲ ರಾಜಕುಮಾರರ ಸರದಿ ಮುಗಿದ ಮೇಲೆ ಕೊಟ್ಟಕೊನೆಗೆ ಆತ ಬಂದ. ಏನು ಗಾಂಭೀರ್ಯದ ನಡಿಗೆ, ಅದೇನು ವೀರತೇಜದ ಬೆಡಗು, ಇನ್ನೂ ಚೆನ್ನಾಗಿ ನೋಡಿ ಆನಂದಿಸಬೇಕೆಂದರೆ ನನ್ನ ಮುಖದ ಮುಂದೆ ಇಳಿಬಿದ್ದಿದ್ದ ಪರದೆ ಅಡ್ಡಿಯಾಗಿತ್ತಾದರೂ ಮನದ ಒಳಗಣ್ಣು ತೆರೆದಿತ್ತು. ಆವನು ಬಂದಾ,, ನನ್ನ ಕಣ್ಣ ಮುಂದೆ ನಿಂತಾ.. ಮತ್ತದೇ ಮಂದಹಾಸ.. ಒಂದು ಸಲ ನನ್ನ ತಂದೆಯ ಕಡೆಗೆ ಕಿರುಗಣ್ಣಿನಿಂದ ನೋಡಿದೆ. ಅವರೂ ಆತಂಕದಲ್ಲಿದ್ದರು. ಕೊಟ್ಟೆಕೊನೆಯ ರಾಜಕುಮಾರನಿಗೂ ಮಗಳು ಮಾಲೆ ಹಾಕದಿದ್ದರೆ ಎಷ್ಟೊಂದು ಅವಮಾನವಾದೀತು ಎನ್ನುವ ತಳಮಳದಲ್ಲಿ ಅವರಿದ್ದರು. ಅಪ್ಪನ ಕಡೆಗೆ ನೋಡಿ ಒಮ್ಮೆ ನನ್ನ ಎರಡೂ ಕಣ್ಣುಗಳನ್ನು ಮುಚ್ಚಿ ತೆರೆದು ಚಿಂತಿಸಬೇಡಿರೆಂದು ಕಣ್ಣ ಸನ್ನೆಯಲ್ಲೇ ಹೇಳಿದೆ. ಎದುರು ನಿಂತಿದ್ದ ನನ್ನ ರಾಜಕುಮಾರನ ಕಡೆಗೆ ಬಯಕೆಗಳ ಕಂಗಳಿಂದ ನೋಡಿದೆ. ಇಬ್ಬರ ಕಣ್ಣುಗಳೂ ಮಿಲನಗೊಂಡವು. ನಾನು ವರಮಾಲೆ ಹಾಕುವುದನ್ನೇ ಮರೆತು ಆತನನ್ನು ನೋಡುತ್ತಿದ್ದೆ. ಆತನೇ ನನ್ನ ಮೈಮರೆವನ್ನು ಅರ್ಥ ಮಾಡಿಕೊಂಡು ತನ್ನ ಕತ್ತನ್ನು ಒಂಚೂರು ಕೆಳಕ್ಕೆ ಬಾಗಿಸಿ ಯಾರಿಗೂ ಗೊತ್ತಾಗದ ಹಾಗೆ ಕಣ್ಣು ಮಿಟುಕಿಸಿದ. ನನ್ನ ಮೈಯೆಲ್ಲಾ ರೋಮಾಂಚನವಾಯಿತು. ನನಗರಿವಿಲ್ಲದಂತೆ ನನ್ನ ಕೈಗಳು ಮಾಲೆಯನ್ನು ಮೇಲೆಕ್ಕಿತ್ತಿದವು. ಇನ್ನೇನು ಪುಷ್ಪಮಾಲೆ ನನ್ನವನ ಕೊರಳನ್ನು ಅಲಂಕರಿಸಬೇಕಿತ್ತು... ಅಷ್ಟರಲ್ಲಿ.. (ನಗಾರಿ ಸದ್ದು)

ನಿಲ್ಲಿಸು ಎನ್ನುವ ಜೋರಾದ ದ್ವನಿ ಇಡೀ ಸಭಾಂಗಣವನ್ನು ಬೆಚ್ಚಿಬೀಳಿಸಿತು. ಏನಾಗುತ್ತಿದೆ ಎಂದು ನನ್ನ ಅರಿವಿಗೆ ಬರುವ ಮೊದಲೇ ಅಗಾಧಕಾಯದ ಒಬ್ಬ ಆಗುಂತಕ ಬಿರುಗಾಳಿಯಂತೆ ಬಂದು ನಿಂತಿದ್ದ. ಒಂದೇ ಕ್ಷಣದಲ್ಲಿ ಅಲ್ಲಿ ನೆರೆದಿದ್ದ ಎಲ್ಲರ ಮುಖದಲ್ಲೂ ಆತಂಕ ಮಡುಗಟ್ಟಿತು. ನನಗಂತೂ ಕೈಕಾಲುಗಳಲ್ಲಿ ನಡುಕ ಶುರುವಾಯಿತು. ರಾಜಕುಮಾರಿಯರನ್ನು ವಿವಾಹವಾಗ ಬಯಸುವವರು ಮೊದಲು ನನ್ನೊಂದಿಗೆ ಯುದ್ಧ ಮಾಡಿ ಗೆಲ್ಲಲಿ, ಸೋಲುಗೆಲುವುಗಳ ಸ್ಪರ್ಧೆಯಿಲ್ಲದ ಇದೆಂತಾ ಸ್ವಯಂವರ. ಹೆಣ್ಣು ಹೊನ್ನು ಮಣ್ಣಿನ ಮೇಲೆ ಯಾವತ್ತು ಅವುಗಳನ್ನು ಗೆಲ್ಲುವ ಸಾಮರ್ಥ್ಯ ಇರುವವನ ಹಕ್ಕಿರುತ್ತದೆ ಎಂದು ಆತ ಸವಾಲೆಸೆಯುತ್ತಾ ಒಂಟಿ ಸಲಗದ ಹಾಗೆ ಹೂಂಕರಿಸಿ ನಿಂತ. ಅಲ್ಲಿರುವ ರಾಜಕುಮಾರರಿಗೂ ವೀರಾವೇಶ ಬಂದಂತಿತ್ತು. ಈ ಅಧಿಕಪ್ರಸಂಗಿಯನ್ನು ಸೋಲಿಸಿ ರಾಜಕುಮಾರಿಯರನ್ನು ಮೆಚ್ಚಿಸಿ ಮದುವೆಯಾಗಲು ಇದೊಂದು ಸುವರ್ಣಾವಕಾಶವೆಂದಕೊಂಡು ಕೆಲವು ರಾಜಕುಮಾರರು ಯುದ್ದಕ್ಕೆ ಸಿದ್ದರಾದರು.  ಒಬ್ಬೊಬ್ಬರಾಗಿ ಆ ಆಗುಂತಕನ ಮೇಲೆ ಬಿದ್ದರು. ಅವನೋ ಅವರನ್ನು ಒಂದೇ ಕ್ಷಣಕ್ಕೆ ಮೇಲಕ್ಕೆತ್ತಿ ಧರೆಗೆ ಕುಟ್ಟಿದ. ಮತ್ತೆ ಇಬ್ಬಿಬ್ಬರು ತದನಂತರ ನಾಲ್ಕಾರು ರಾಜಕುಮಾರರು ಆ ಮದವೇರಿದಂತಿದ್ದ ಒಂಟಿ ಸಲಗದ ಮೇಲೆ ಆಕ್ರಮಣ ಮಾಡಿದರು. ಆದರೆ ಆತ ಪಳಗಿದ ಹುಲಿಯಂತೆ ಆಕ್ರಮಣವನ್ನು ಎದುರಿಸಿ ಎಲ್ಲರನ್ನೂ ಸೆದೆಬಡೆದು ಅಲ್ಲಿಂದ ಓಡಿಸಿ ಬಿಟ್ಟ. ಹೂವಿನ ತೋಟದಲ್ಲಿ ಗೂಳಿಯ ಹಾಗೆ ನುಗ್ಗಿ ಬಂದ ಆ ಹಂತಕ ಸಂಭ್ರಮದ ಸಭಾಂಗಣವನ್ನು ಸೂತಕದ ಮನೆಯನ್ನಾಗಿಸಿದ.

ಇದೆಲ್ಲವನ್ನೂ ನೋಡುತ್ತಿದ್ದ ನನ್ನ ಸಾಲ್ವ ಕೋಪದಿಂದ ಕುದಿಯುತ್ತಿದ್ದ. ಇನ್ನೆರಡು ಗಳಿಗೆಗಳಲ್ಲಿ ವರಮಾಲೆ ತನ್ನ ಕೊರಳಿಗೆ ಬೀಳುವುದನ್ನು ತಪ್ಪಿಸಿದ ಆಕ್ರಮಣಕೋರನ ಮೇಲೆ ಅಧಮ್ಯ ಆಕ್ರೋಶ ಸಾಲ್ವನಿಗೆ ಉಕ್ಕೇರಿತು. ಇತ್ತ ನನ್ನ ಸಾಲ್ವ, ಅತ್ತ ಆ ಸಲಗ, ಇಬ್ಬರೂ ಒಬ್ಬರನ್ನೊಬ್ಬರು ದೃಷ್ಟಿಸತೊಡಗಿದರು. ಹೀಗೆ.. ವೃತ್ತಾಕಾರದಲ್ಲಿ ದುರುಗುಟ್ಟುತ್ತಲೇ ಸುತ್ತತೊಡಗಿದರು. ಅಲ್ಲಿ ಯುದ್ದ ಶುರುವಾದರೆ ನನ್ನ ಮನದೊಳಗೋ ತಾಳದ ತಳಮಳ. ಹೇಗಾದರೂ ಮಾಡಿ ನನ್ನ ರಾಜಕುಮಾರ ಆ ರಾಕ್ಷಸನನ್ನು ಹಿಡಿದು ಹೊಡೆದು ಇಲ್ಲಿಂದ ಓಡಿಸಲಿ ಎಂದು ಜಗದಂಬೆಯಲ್ಲಿ ಬೇಡಿಕೊಳ್ಳತೊಡಗಿದೆ. ನನ್ನವನೂ ಹೂಂಕರಿಸಿದ. ಇಬ್ಬರೂ ನಿರಾಯುಧರಾಗಿಯೇ ಹೊಡೆದಾಡತೊಡಗಿದರು. ತನ್ನೆಲ್ಲಾ ಶಕ್ತಿಯನ್ನು ಒಟ್ಟುಸೇರಿಸಿದ ಸಾಲ್ವ ತನ್ನೆರಡೂ ಕೈಯಿಂದ ಆಗುಂತಕನಿಗೆ ಏಟು ಕೊಟ್ಟೇ ಬಿಟ್ಟ. ಆ ಏಟಿನಿಂದ ತತ್ತರಿಸಿದ ಆ ರಾಕ್ಷಸ ನಾಲ್ಕು ಹೆಜ್ಜೆ ಹಿಂದಕ್ಕೆ ಹೋಗಿ ಮತ್ತೆ ಕಾಡೆಮ್ಮೆಯಿಂತೆ ಮುಂದೆ ಬಂದು ಸಾಲ್ವನ ಹೊಟ್ಟೆಗೆ ತನ್ನ ತಲೆಯಿಂದ ಇರಿದೇ ಬಿಟ್ಟ. ಅಯ್ಯೋ ಪಾಪ ನನ್ನ ಸಾಲ್ವ ನೆಲಕ್ಕೆ ಬಿದ್ದ. ನನ್ನ ಉಸಿರೇ ನಿಂತಂತಾಯಿತು.

ಓಡಿ ಹೋಗಿ ನೋವಿನಿಂದ ನರಳುತ್ತಿದ್ದ ನನ್ನ ಸಾಲ್ವನನ್ನು ಮೇಲಕ್ಕೆತ್ತಿ ಸಾಂತ್ವನ ಹೇಳಬೇಕೆಂದು ಒಂದು ಹೆಜ್ಜೆ ಮುಂದಕ್ಕಿಟ್ಟೆ, ಆದರೆ ನನ್ನ ತಂಗಿಯರು ನನ್ನ ಕೈಹಿಡಿದು ತಡೆದರು. ಸಾಲ್ವ ತನ್ನೆಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ಮೇಲಕ್ಕೆದ್ದು ನಿಂತ. ಮತ್ತೊಮ್ಮೆ ಆಕ್ರೋಶಗೊಂಡು ಆಕ್ರಮಣ ಮಾಡಿದ. ಆದರೆ.. ಆ ಸಲಗದ ಮುಂದೆ ಅವನ ಆಕ್ರೋಶ ಉರಿದು ಅಂಗಾರವಾದಂತಾಯಿತು. ಆ ಹಂತಕನು ಒಮ್ಮೆ ಹೂಂಕರಿಸಿ ಒಂದೇ ಕ್ಷಣದಲ್ಲಿ ಸಾಲ್ವನನ್ನು ಮೇಲಕ್ಕೆತ್ತಿ ನೆಲಕ್ಕೆ ಬಡಿದೇ ಬಿಟ್ಟ. ಲೇ ಕುನ್ನಿ.. ಎದುರಾಳಿಗಳನ್ನು ಎದುರಿಸುವ ಸಾಮರ್ಥ್ಯವಿಲ್ಲದ ಮೇಲೆ ನಿನಗ್ಯಾಕೋ ವಿವಾಹವಾಗುವ ಹಂಬಲ. ಮೊದಲು ವೀರ ಗಂಡಸಾಗು ಆಮೇಲೆ ಹೆಣ್ಣನ್ನು ಅರಸು. ಎದುರಾಳಿಯನ್ನು ಗೆಲ್ಲಲಾಗದವರು ಇನ್ನು ಹೆಣ್ಣನ್ನೇನು ಗೆದ್ದಾನು. ಹೋಗು ಹೋಗು ಸೀರೆ ಉಟ್ಟು, ಬಳೆ ತೊಟ್ಟು ರಾಜಕುಮಾರಿಯರ ದಾಸಿವಾಸ ಸೇರು ಹೋಗು ಎಂದು ತುಚ್ಚವಾದ ಮಾತುಗಳಲ್ಲಿ ಹೀಗಳೆದ. ತುಂಬಿದ ಸಭೆಯಲ್ಲಿ ತನ್ನ ಗಂಡಸುತನಕ್ಕೆ ಆದ ಅವಮಾನದಿಂದ ಕುಗ್ಗಿಹೋದ ಸಾಲ್ವ ನನ್ನ ಕಡೆಗೆ ಒಂದೇ ಒಂದು ಸಲವೂ ನೋಡದೇ ಸೋಲಿಸಿದವನ ಮುಖವನ್ನೇ ಕಡುಕೋಪದಿಂದ ಕೆಕ್ಕರಿಸಿ ನೋಡುತ್ತಾ  ಕಾಲೆಳೆದುಕೊಂಡು ಅಲ್ಲಿಂದಾ ಹೊರಗೆ ಹೊರಟೇ ಹೋದ. ಜೀವವೇ ಹೊದಂತೆನಿಸಿತು ನನಗೆ. ಆತನ ಸಹಾಯಕ್ಕೆ ಧಾವಿಸಿ ಹೋಗಬೇಕೆಂದು ಮನಸ್ಸು ಹಾತೊರೆಯುತಿತ್ತಾದರೂ ದೇಹ ಸ್ಪಂದಿಸಲೇ ಇಲ್ಲಾ. ಎಷ್ಟೇ ಆದರೂ ನಾನು ರಾಜಕುಮಾರಿ ಅಲ್ಲವೇ,  ತುಂಬಿದ ಸಭೆಯಲ್ಲಿ ರಾಜಮರ್ಯಾದೆಯೆಂಬುದನ್ನು ಕಾಪಾಡಬೇಕೆಂಬ ಕಟ್ಟುಪಾಡು ನನ್ನ ಮೇಲೆ ಜನ್ಮತಃ ಹೇರಲ್ಪಟ್ಟಿತ್ತಲ್ಲವೇ?

ಅಸಹಾಯಕತೆ.. ಮೊಟ್ಟ ಮೊದಲ ಬಾರಿಗೆ ನನಗೆ ಅತ್ಯಂತ ಅತೀವ ಅಸಹಾಯಕತೆಯ ಅರಿವಾಯಿತು. ಸೋತು ಅವಮಾನಿತನಾಗಿ ಕುಗ್ಗಿಹೋದ ನನ್ನ ಮನದಿನಿಯ ಸಾಲ್ವನನ್ನು ಓಡಿಹೋಗಿ ತಡೆದು ನಿಲ್ಲಿಸಬೇಕೆಂಬ ಪ್ರಯತ್ನವನ್ನೂ ಮಾಡದೇ, ಅನಿರೀಕ್ಷಿತವಾಗಿ ಆದ ಆಘಾತದಿಂದ ಹೊರಬರಲಾಗದೇ ಗರಬಡಿದವರಂತೆ ಕೂತು ಬಿಟ್ಟೆ..  ಆಘಾತದಿಂದ ಹೊರಬಂದ ನನ್ನ ತಂದೆ ಸಾವರಿಸಿಕೊಂಡು ಸಿಂಹಾಸನವನ್ನಿಳಿದು ಬಂದು ಯಾರು ನೀನು ವೀರಾಧೀವೀರಾ.. ನಿಮ್ಮ ಪರಿಚಯ ತಿಳಿಸುವಿರಾ? ಎಂದು ವಿನಯಪೂರ್ವಕವಾಗಿ ಕೇಳಿದ್ದು ನನ್ನ ಕಿವಿಗೆ ಬಿತ್ತು. (ಕುಸಿದು ಕೂತು ಸಾವರಿಸಿಕೊಂಡು ಮೇಲೆದ್ದ ಅಂಬೆ ಭೀಷ್ಮನಾಗಿ..)

(ಭೀಷ್ಮ..) ಭೀಷ್ಮಾ... ನಾನು ಕುರುಕುಲದ ಕುಲಪುತ್ರ ಭೀಷ್ಮ.. ನಮಗೆ ಸ್ವಯಂವರದ ಕುರಿತು ಆಹ್ವಾನ ಕಳುಹಿಸುವ ಸೌಜನ್ಯವೂ ನಿಮಗಿಲ್ಲದೇ ಹೋಯಿತೆ ಕಾಶೀರಾಜಾ.. ಕರೆಕಳುಹಿಸದಿದ್ದರೇನಾಯಿತು ಸ್ವಯಂವರದಲ್ಲಿ ನಿನ್ನ ಹೆಣ್ಣುಮಕ್ಕಳನ್ನು ಗೆದ್ದು ಹಸ್ತಿನಾವತಿಗೆ ಕರೆದೊಯ್ಯಲು ನಾನೇ ಖುದ್ದಾಗಿ ಬಂದಿರುವೆ, ಇನ್ನು ಗುದ್ದಾಟ ಸಾಕು, ನಾ ಗೆದ್ದ ಮಾಲನ್ನು ಸದ್ದಿಲ್ಲದೇ ನನ್ನ ಜೊತೆಗೆ ಕಳುಹಿಸಿಕೊಡು ಎಂದು ಆತ ಹೇಳಿದ್ದೇ ತಡ ಆತಂಕದಲ್ಲಿದ್ದ ನನ್ನ ತಂದೆ ಅತೀವ ಸಂತಸದಿಂದಾ ಇಳಿಬಿದ್ದ ತನ್ನ ಅಂಗವಸ್ತ್ರವನ್ನು ಎತ್ತಿ ಹೆಗಲಿಗೇರಿಸುತ್ತಾ..

(ಕಾಶೀರಾಜ..) ಭೀಷ್ಮ.. ಕುರುಕುಲ ಚಕ್ರಾಧಿಪತ್ಯದ ಕಣ್ಮಣಿ, ಜಗದೇಕವೀರ ಭೀಷ್ಮರು ನಮ್ಮ ರಾಜ್ಯದಲ್ಲಿ. ಎಂತಹ ಸೌಭಾಗ್ಯ ನಮ್ಮದು. ನೀವು ನನ್ನ ಪುತ್ರಿಯರನ್ನು ವಿವಾಹವಾಗಲು ಬಯಸಿದ ಸಂಗತಿಯನ್ನು ಹೇಳಿ ಕಳುಹಿಸಿದ್ದರೆ ಸಾಕಾಗಿತ್ತು.. ನಾನೇ ಅವರನ್ನು ಕರೆದುಕೊಂಡು ಸಕಲ ಕಾಣಿಕೆಗಳೊಂದಿಗೆ ಹಸ್ತಿನಾವತಿಗೆ ಬರುತ್ತಿದ್ದೆ. ಆದರೆ.. ಅನ್ಯತಾ ಭಾವಿಸಬೇಡಿ, ತಾವು ಆಜನ್ಮ ಬ್ರಹ್ಮಚಾರಿಯಾಗಿರುತ್ತೇನೆಂದು ಪ್ರತಿಜ್ಞೆ ಮಾಡಿದ್ದೀರೆಂದು ಕೇಳಿ ತಿಳಿದಿದ್ದೆ. ಅದಕ್ಕಾಗಿ ತಮಗೆ ಆಹ್ವಾನ ಕಳುಹಿಸಲು ಹೋಗಲಿಲ್ಲ. ಹೋ.. ಕೊನೆಗೂ ತಾವೇ ಬಂದಿರಲ್ಲಾ.. ಬನ್ನಿ ವಿಶ್ರಾಂತಿ ಗೃಹದಲ್ಲಿ ವಿಶ್ರಮಿಸಿಕೊಳ್ಳಿ. ಯಾರಲ್ಲಿ.. ಮಹಾವೀರರಿಗೆ ಬೇಕಾದ ಏರ್ಪಾಡು ಮಾಡಿರಿ..  ಹೀಗೆಂದು ನನ್ನ ತಂದೆ ಹಂತಕನ ಹಿಂದೆ ಹಲ್ಲುಗಿಂಜುತ್ತಾ ನಿಂತಿದ್ದು ನನಗಂತೂ ಹೇಸಿಗೆ ಹುಟ್ಟಿಸಿತು. ಕೆಲವೇ ಗಳಿಗೆಗಳ ಹಿಂದೆ ರಾಜಸಭೆಗೆ ನುಗ್ಗಿ ರಸಾನುಭಂಗ ಮಾಡಿದ ಅಧಿಕಪ್ರಸಂಗಿಯನ್ನು, ಸಭಾಮರ್ಯಾದೆ ತಿಳಿಯದ ಆಕ್ರಮಣಕೋರನನ್ನು ಕುರಿತು ಕಾಶೀರಾಜ ಬಹುಪರಾಕ್ ಹೇಳುವುದನ್ನು ನೋಡಿ ಮನಸ್ಸಿಗೆ ಕಸಿವಿಸಿಯಾಯಿತು.

(ಭೀಷ್ಮ..) ನಾನು ನನ್ನ ಪ್ರತಿಜ್ಞೆಗೆ ಬದ್ದನಾಗಿಯೇ ಇದ್ದೇನೆ ರಾಜಾ.. ಜಗತ್ತಿನ ಯಾವುದೇ ಶಕ್ತಿಗಳು ಬಂದು ಒತ್ತಾಯಿಸಿದರೂ ನಾನು ನನ್ನ ತಂದೆಗೆ ಕೊಟ್ಟ ಮಾತನ್ನೆಂದೂ ಬದಲಾಯಿಸಲಾರೆ. ಯಾಕೆಂದರೆ ಅದು ಭೀಷ್ಮ ಪ್ರತಿಜ್ಞೆ.  ವಧುಗಳು ಬೇಕಾದದ್ದು ನನಗಲ್ಲ ನನ್ನ ಅನುಜ ವಿಚಿತ್ರ್ಯವೀರ್ಯನಿಗೆ. ಹಸ್ತಿನಾವತಿಯ ರಾಜಕುಮಾರನಿಗೆ. ಇಲ್ಲಾ.. ನನಗೀಗ ವಿಶ್ರಾಂತಿಗೆ ಸಮಯವಿಲ್ಲ. ನನ್ನ ರಥ ಹೊರಗಡೆ ಹೊರಡಲು ಸಿದ್ದವಾಗಿದೆ. ಈಗ.. ಈ ಕೂಡಲೇ ನಿನ್ನ ಪುತ್ರಿಯರನ್ನು ಅದರಲ್ಲಿ ಕೂಡಿಸಿ ವಿದಾಯ ಹೇಳಿ ಬಿಡು. ಹಸ್ತಿನಾವತಿಗೆ ತಲುಪುವ ಹಾದಿ ಇನ್ನೂ ದೂರವಿದೆ. ಹೂಂ.. ವಧುಗಳೇ ಇನ್ನು ಹೊರಡಿ.. ಇಲ್ಲಿಗೆ ಈ ರಾಜ್ಯದ ಋಣ ತೀರಿತು. ಇನ್ನು ಮೇಲೆ ಏನಿದ್ದರೂ ಹಸ್ತಿನಾವತಿಯಲ್ಲಿಯೇ ನಿಮ್ಮ ಬದುಕು ಭವಿಷ್ಯ ಎಲ್ಲಾ. ಯಾಕೆ.. ನಿನ್ನ ತಂಗಿಯರು ಹೊರಟ ಹಾಗೆ ನೀನ್ಯಾಕೆ ಹೊರಡುತ್ತಿಲ್ಲಾ.. ಓಹೋ... ಅಪ್ಪಾಜಿಯವರ ಆಶೀರ್ವಾದ ಪಡೆದು ಬರುವುದು ಬೇರೆ ಬಾಕಿ ಇದೆಯೋ.. ಸರಿ ನಾನು ರಥದಲ್ಲಿ ಕೂತು ಕಾಯುತ್ತಿರುತ್ತೇನೆ.. ಶೀಘ್ರವಾಗಿ ಬಂದು ಬಿಡು.. ತಡಮಾಡಿದರೆ ಪಶ್ಚಾತ್ತಾಪ ಪಡಬೇಕಾದದ್ದು ನೀನಲ್ಲಾ ನಿನ್ನ ತಂದೆ ಎನ್ನುವುದನ್ನು ಮರೆಯದಿರು.. ಹೂಂ.. ಎಂದು ಹೂಂಕರಿಸುತ್ತಾ ಭೀಷ್ಮ ಹೊರಟೇ ಹೋದ.

(ಅಂಬೆ..) ನನಗೆ ಅಲ್ಲಿ ಏನಾಗುತ್ತಿದೆ ಎನ್ನುವುದೇ ಅರ್ಥವಾಗದ ಹಾಗೆ ಘಟನೆಗಳು ಪಟಪಟನೇ ನನ್ನ ಕಣ್ಣ ಮುಂದೆಯೇ ನಡೆಯುತ್ತಾ ಹೋದವು. ಆತನ ಹೂಂಕಾರಕ್ಕೆ ಬೆಚ್ಚಿದ ತಂಗಿಯರಾದ ಅಂಬಿಕೆ ಅಂಬಾಲಿಕೆಯರು ಕೈಯಲ್ಲಿ ಹಿಡಿದ ವರಮಾಲೆಯ ಸಮೇತ ಕಟುಕನನ್ನು ಹಿಂಬಾಲಿಸುವ ಕುರಿಗಳ ಹಾಗೆ ಆ ಭೀಷ್ಮನ ಹಿಂದೆ ಹೊರಟು ಹೋದರು. ಆದರೆ.. ನಾನು..

ಇಲ್ಲಾ ಹೋಗಲಾರೆ.. ನನ್ನಿಚ್ಚೆಯನು ನಾನೆಂದೂ ಮೀರಲಾರೆ. ಅಪ್ಪಾಜಿ.. ನಾನು ಆ ರಾಕ್ಷಸನೊಂದಿಗೆ ಹೋಗಲಾರೆ ಅಪ್ಪಾಜಿ.. ನೀವಾದರೂ ಹೇಳಿ.. ನನ್ನನ್ನು ಇಲ್ಲಿಯೇ ಬಿಟ್ಟು ಹೋಗಲು ತಿಳಿಸಿ. ಅವತ್ತು ನೀವೇ ನನಗೆ ಮಾತುಕೊಟ್ಟಿದ್ದೀರಿ.. ನನ್ನಿಷ್ಟ ಬಂದ ರಾಜಕುಮಾರನಿಗೆ ವರಮಾಲೆ ಹಾಕಿ ವಿವಾಹವಾಗಲು ಅನುಮತಿ ಕೊಟ್ಟಿದ್ದೀರಿ.. ಆದರೆ ಈಗ ಇದ್ದಕ್ಕಿದ್ದಂತೆ ಯಾರೋ ಒಬ್ಬ ಬಂದು ಹಲವರ ಎದೆಗೊದ್ದು ಗೆದ್ದೆನೆಂದು ಬೀಗುತ್ತಾ ನನ್ನನ್ನು ಬಲವಂತದಿಂದ ಎಳೆದೊಯ್ಯುತ್ತಿರುವಾಗ ನೀವೂ ಅದಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದೀರಿ. ದಯವಿಟ್ಟು ನನಗಿಷ್ಟವಾದ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಬದುಕಲು ಅನುಕೂಲಮಾಡಿಕೊಡಿ.. ಇಲ್ಲವಾದರೆ ಈ ಕ್ಷಣವೇ ನನ್ನನ್ನು ಇಲ್ಲಿಯೇ ಕೊಂದುಬಿಡಿ. ಇಷ್ಟವಿಲ್ಲದವರ ಜೊತೆ ಜೀವನಪೂರ್ತಿ ದೇಹ ಹಂಚಿಕೊಂಡು, ಮನಸ್ಸು ಗಾಯ ಮಾಡಿಕೊಂಡು ಬದುಕುವುದಕ್ಕಿಂತಾ ಸಾಯುವುದೇ ಮೇಲು ಹೀಗೆ ಅಂಗಲಾಚಿ ತಂದೆಯವರನ್ನು ಬೇಡಿಕೊಂಡೆ.. ನನ್ನ ಮನದ ಇಂಗಿತವನ್ನು ಹೇಳಿಕೊಂಡೆ.. ಆದರೆ.. ನನ್ನ ಮಾತುಗಳು ಅವರ ಮೇಲೆ ಯಾವುದೇ ಪರಿಣಾಮವನ್ನು ಬೀರಿದಂತೆ ಕಾಣಲಿಲ್ಲ. ನಿಧಾನವಾಗಿ ಹತ್ತಿರ ಬಂದು ನನ್ನ ತಲೆಯ ಮೇಲೆ ಕೈಯಾಡಿಸಿ..

(ಕಾಶೀರಾಜ..) ಸಮಾಧಾನ ಮಗಳೇ ಸಮಾಧಾನ. ಬೆಂಕಿಯನ್ನು ಬೆಂಕಿಯಿಂದ ನಂದಿಸಲು ಸಾಧ್ಯವಿಲ್ಲ. ಸಿಟ್ಟಿನಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಮರಳುವುದಿಲ್ಲ. ಇದು ಸಹನೆ ಕಳೆದುಕೊಳ್ಳುವ ಸಮಯವಲ್ಲ. ನಿನಗಿನ್ನೂ ಆ ಭೀಷ್ಮರ ಬಗ್ಗೆ ತಿಳಿದಿಲ್ಲ. ಇಡೀ ಅತಳ ವಿತಳ ಸುತಳ ರಸಾತಳ ಪಾತಾಳ ಲೋಕದಲ್ಲೂ ಅವರಂತಹ ವೀರ ಶೂರ ಧೀರರು ಮತ್ತೊಬ್ಬರಿಲ್ಲಾ ಅಂಬೆ.. ಅವರು ಚಕ್ರವರ್ತಿಗಳು.. ಸಮಸ್ತ ಭೂಮಿಗೆ ಒಡೆಯರು. ಅವರ ಮುಂದೆ ನನ್ನಂತವರು ಪುಡಿ ರಾಜರು. ಮಗಳ ಮೇಲಿನ ಮಮಕಾರಕ್ಕಾಗಿ ನಾನೀಗ ಭೀಷ್ಮರ ಆಗ್ರಹವನ್ನು ಅಲಕ್ಷಿಸಿದ್ದೇ ಆದರೆ ಈ ಇಡೀ ರಾಜ್ಯ ಅವರ ಬೆಂಕಿಯಂತಹ ಸಿಟ್ಟಿಗೆ ಸಿಕ್ಕು ಬೂದಿಯಾಗಬೇಕಾದೀತು. ಒಬ್ಬ ಮಗಳ ಹಠಮಾರಿತನಕ್ಕಾಗಿ ಇಡೀ ರಾಜ್ಯದ ಅವನತಿಗೆ ನಾನು ಕಾರಣನಾಗಲಾರೆ ಅಂಬೆ. ತ್ಯಾಗ.. ಅರಸೊತ್ತಿಗೆ ಅನ್ನುವುದು ತ್ಯಾಗ ಬಲಿದಾನಗಳಿಂದಲೇ ದಕ್ಕುವಂತಹುದು. ಬುಡಕ್ಕೆ ಬೆಂಕಿ ಹತ್ತಿ ಉರಿಯುತ್ತಿರುವಾಗ ವ್ಯರ್ಥ ವಾದಗಳಿಂದ ಏನೂ ಪ್ರಯೋಜನವಾಗುವುದಿಲ್ಲ. ನೀನೀಗ ನಿನ್ನ ಈ ವಯೋವೃದ್ದ ತಂದೆಯ ಮೇಲೆ ಕರುಣೆ ಇಟ್ಟು ಹಸ್ತಿನಾವತಿಗೆ ಹೋಗಲೇಬೇಕು ಮಗಳೆ, ಈ ರಾಜ್ಯದ ಹಿತ ಕಾಪಾಡಲು ನಿನ್ನ ಬದುಕನ್ನು ತ್ಯಾಗ ಮಾಡಲು ಸಿದ್ದಳಾಗಬೇಕು. ಇದರಲ್ಲೇ ಈ ನಾಡಿನ ಹಿತವಿದೆ.. ಈ ಸಿಂಹಾಸನದ ರಕ್ಷಣೆ ಇದೆ. ಬೇರೆ ದಾರಿಯಿಲ್ಲ ಮಗಳೇ ಇಡೀ ಜನಸಮುದಾಯದ ಒಳಿತಿಗಾಗಿ ನಿನ್ನ ಬದುಕನ್ನು ಬಲಿಕೊಡಲು ಸಿದ್ಧಳಾಗು. ಈ ಸಿಂಹಾಸನದ ಆದೇಶಕ್ಕೆ ಬದ್ಧಳಾಗು.. ಹೂ.. ಈಗಲೇ ಹೊರಡು..

(ಅಂಬೆ..) ಹೀಗೆಂದು ಕರ್ಣಕಠೋರವಾಗಿ ನನ್ನ ತಂದೆ.. ಅಲ್ಲಲ್ಲಾ ಅವರೀಗ ನನ್ನ ತಂದೆಯಾಗಿ ಉಳಿದಿರಲಿಲ್ಲ. ರಾಜಾ.. ಕಾಶೀರಾಜ ಆಜ್ಞಾಪಿಸಿದ. ನನಗೆ ಇನ್ನೇನೋ ಹೇಳಬೇಕಿತ್ತು. ಹೇಗಾದರೂ ಮಾಡಿ ತಂದೆಯವರ ಪಾದಗಳಿಗೆ ಬಿದ್ದಾದರೂ ಒಪ್ಪಿಸಬೇಕಾಗಿತ್ತು. ಆದರೆ.. ಆದರೆ.. ಅಷ್ಟರಲ್ಲಿ ಮದವೇರಿದ ಆನೆಯ ಹಾಗೆ ಆತ ಮತ್ತೆ ಒಳನುಗ್ಗಿ ಬಂದ. ಕಡು ಕೋಪದಿಂದ ದುರುದುರು ಉರಿಯುತ್ತಲೇ ಬಂದ ಭೀಷ್ಮ ಒಮ್ಮೆ ಕೆಕ್ಕರಿಸಿ ನನ್ನ ತಂದೆಯತ್ತ ನೋಡಿ ನನ್ನ ಕೈ ಹಿಡಿದವನೇ ದರದರ ಧರಧರ ಎಳೆದುಕೊಂಡು ಹೊರಟ. ನಾನು ಆಕಸ್ಮಿಕ ಆಘಾತಕ್ಕೊಳಗಾಗಿ ಅಪ್ಪಾ.. ನನಗೆ ಹಸ್ತಿನಾವತಿಗೆ ಹೋಗಲು ಮನಸ್ಸಿಲ್ಲಪ್ಪಾ.. ದಯವಿಟ್ಟು ಕಾಪಾಡಿ.. ಅಪ್ಪಾ.. ನಿಮ್ಮ ಕೈ ಮುಗೀತೇನೆ.. ಕಾಲು ಹಿಡೀತೇನೆ.. ನನ್ನನ್ನ ನನ್ನಿಚ್ಚೆ ಇಲ್ಲದ ನರಕಕ್ಕೆ ತಳ್ಳಬೇಡಿ.. ಅಪ್ಪಾ.. ಕೊನೆವರೆಗೂ ನಿಮ್ಮ ಸೇವೆ ಮಾಡಿಕೊಂಡು ಇಲ್ಲೇ ಬಿದ್ದಿರ‍್ತೇನೆ.. ನಿಮ್ಮ ದಮ್ಮಯ್ಯ.. ಇಲ್ಲೇ ಉಳಿಸಿಕೊಳ್ಳಿ.. ಅಪ್ಪಾ.. ಅಪ್ಪಾಜೀ.. ಎಂದು  ಅರ್ತನಾದ ಮಾಡುತ್ತಲೇ ಇದ್ದೆ. (ಕುಸಿದು ಕುಳಿತು ಮತ್ತೆ ಸಾವರಿಸಿಕೊಂಡು ಎದ್ದು ನಿಂತ ಅಂಬೆ)

ಸಿಂಹಾಸನದತ್ತ ಮುಖಮಾಡಿ ನನ್ನ ಕಡೆಗೆ ಬೆನ್ನು ಮಾಡಿ ಕಲ್ಲು ಬಂಡೆಯಂತೆ ನಿಂತಿದ್ದ ನನ್ನಪ್ಪ ನನ್ನ ಕಣ್ಣೀರಿಗೆ ಕರಗಲಿಲ್ಲ, ಮಗಳ ಕೂಗಿಗೆ ಓಗೊಡಲಿಲ್ಲ. ಯಾಕೆಂದರೆ ಆಗ ಆತ ನನ್ನ ತಂದೆಯಾಗಿರಲೇ ಇಲ್ಲಾ. ಕೇವಲ ರಾಜನಾಗಿದ್ದ. ರಾಜ್ಯಾಧಿಕಾರ ಎನ್ನುವುದು ಕರುಳ ಕೂಗಿಗೂ ಕಿವುಡಾಗುವಂತೆ ಮಾಡುತ್ತದೆ ಎಂಬುದು ನನಗಾಗ ಅರ್ಥವಾಯ್ತು. ನನ್ನ ರಂಪಾಟವೆಲ್ಲಾ ವ್ಯರ್ಥವಾಯ್ತು..

ಕಬ್ಬಿಣದ ಇಕ್ಕಳಿನಂತಹ ಬಲಿಷ್ಟ ಕೈಗಳಲ್ಲಿ ಸಿಕ್ಕ ಕೋಮಲ ಪುಷ್ಪದಂತಹ ನನ್ನ ಕೈಗಳು ಬಿಡಿಸಿಕೊಳ್ಳಲು ಹೆಣಗಿ ಸೋತುಹೋದವು. ರಥವನ್ನು ಏರಲು ನಾನು ಪ್ರತಿಭಟಿಸಿದೆ.. ನನ್ನೆಲ್ಲಾ ಉಸಿರು ಬಿಗಿಹಿಡಿದು ಶಕ್ತಿಯನ್ನು ಕೇಂದ್ರೀಕರಿಸಿ ಆತನಿಂದ ಬಿಡಿಸಕೊಂಡು ಓಡಿ ಹೋಗಲು ಪ್ರಯತ್ನಿಸಿದೆ. ಬಲೀಪೀಠಕ್ಕೆ ಬರಲು ನಿರಾಕರಿಸುವ ಕುರಿಯನ್ನು ಹಗ್ಗ ಕಟ್ಟಿ ಎಳೆದುಕೊಂಡು ಹೋಗುವ ಕಟುಕನ ಹಾಗೆ ಆತ ನನ್ನನ್ನು ಎಳೆದೆಳೆದು ತಂದಿದ್ದ. ಮೂಟೆಯೊಂದನ್ನು ಎತ್ತಿ ಬಿಸಾಡುವ ಹಾಗೆ ನನ್ನನ್ನು ಅನಾಮತ್ತಾಗಿ ಎತ್ತಿ ರಥದಲ್ಲಿ ಬಿಸಾಕಿದ. ಈ ಎಲ್ಲಾ ಅನಿರೀಕ್ಷಿತ ಅನಾಹುತಗಳನ್ನು ನೋಡಿ ಹೆದರಿ ಕೂತ ತಂಗಿಯರು ಕಂಗಾಲಾಗಿದ್ದರು. ನನ್ನ ಕೈಗಳನ್ನು ತಮ್ಮ ಕರಗಳಲ್ಲಿ ಹಿಡಿದು ಸಂತೈಸಲು ಆರಂಭಿಸಿದರು. ಭೀಷ್ಮನ ಒಂದು ಹೂಂಕಾರಕ್ಕೆ ರಥಕ್ಕೆ ಕಟ್ಟಿದ ರಾಜಾಶ್ವಗಳು ತಾರಕ ಸ್ವರದಲ್ಲಿ ಹೂಂಕರಿಸಿ ಶರವೇಗದಲ್ಲಿ ಹೊರಟವು. ನಾನು ಅರಮನೆಯತ್ತ ನೋಡುತ್ತಲೇ ಇದ್ದೆ. ಇದ್ದಕ್ಕಿದ್ದಂತೆ ಕವಿದ ಗ್ರಹಣಗತ್ತಲಲ್ಲಿ ಬೆಳಕಿನ ಕಿರಣವೊಂದು ಮೂಡಿ ಬರಬಹುದೇನೋ ಎಂದು ಕಾಯುತ್ತಿದ್ದೆ. ನನ್ನ ತಂದೆ ಓಡಿ ಬಂದು ನನ್ನನ್ನು ಈ ಬಲವಂತದ ಬಂಧನದಿಂದ ಕಾಪಾಡಲೀ ಎಂದು ನನ್ನ ಅಂತರಾತ್ಮ ನಿರೀಕ್ಷಿಸುತ್ತಿತ್ತು. ನನ್ನ ಸಾಲ್ವ ರಾಜಕುಮಾರ ತನ್ನ ಸೈನ್ಯದೊಂದಿಗೆ ಬಂದು ಈ ರಥವನ್ನು ಮುತ್ತಿಗೆ ಹಾಕಿ ನನ್ನನ್ನು ರಕ್ಷಿಸುವನೇನೋ ಎಂದೂ ಮನಸ್ಸು ಕಾತರಿಸಿತು. ಅಂತದ್ದೇನೂ ಅಲ್ಲಿ ನಡೆಯಲೇ ಇಲ್ಲ. ಇನ್ನೊಮ್ಮೆ.. ನನ್ನ ಕೊನೆಯ ಉಸಿರಿರುವವರೆಗೂ ಈ ಅರಮನೆಗೆ ಕಾಲಿಡುವುದಿಲ್ಲಾ, ಮಮಕಾರದ ಲವಲೇಶವೂ ಇಲ್ಲದ ತಂದೆಯ ಮುಖವನ್ನು ಮತ್ತೆ ಈ ಜನ್ಮದಲ್ಲಿ ನೋಡುವುದಿಲ್ಲ ಎಂದು ಮನಸ್ಸಲ್ಲೇ ಪ್ರತಿಜ್ಞೆ ಮಾಡಿದೆ..

ಹೇ.. ಜಗದಂಬೆ.. ಕಾಪಾಡು ತಾಯಿ ಕಾಪಾಡು.. ನಿನ್ನ ಆಶೀರ್ವಾದದಿಂದ ಹುಟ್ಟಿದ ಈ ನಿನ್ನ ಮಗಳನ್ನು ಈ ಸಂಕಷ್ಟದಿಂದ ಪಾರುಮಾಡು ತಾಯಿ ಪಾರುಮಾಡು..  (ಸಾವಕಾಶವಾಗಿ ಕತ್ತಲೆ ಹಿನ್ನೆಲೆಯಲ್ಲಿ ಹಾಡು)
          
ದೃಶ್ಯ 4 : ಹಸ್ತಿನಾವತಿಯ ಅರಮನೆ.

ಯಾರೋ ಎಳೆತಂದು ಬಿಸಾಕಿದವರಂತೆ ಅಂಬೆ ಒಂದು ಸುತ್ತು ಸುತ್ತಿ ಕೆಳಗೆ ಬೀಳುತ್ತಾಳೆ. ಏದುಸಿರನ್ನು ಬಿಡುತ್ತಾ, ಬೆಂಕಿಯಂತಾ ಸಿಟ್ಟನ್ನು ಒಳಗೆ ಅದುಮಿಟ್ಟುಕೊಳ್ಳಲು ಪ್ರಯತ್ನಿಸುತ್ತಾಳೆ. ಕೂತಲ್ಲೇ ಕಾಲೆಳೆದುಕೊಂಡು ಒಂಚೂರು ತೆವಳಿ ಮುಂದಕ್ಕೆ ಕೆಕ್ಕರಿಸಿ ನೋಡುತ್ತಾ ಒಂದು ಸಲ ಜೋರಾಗಿ ಉಗಿಯುತ್ತಾಳೆ.

(ಅಂಬೆ..)  ಥೂ.. ಇದೇನಾ ನಿಮ್ಮ ಸಭ್ಯತೆ.. ಇದೇನಾ ನಿಮ್ಮ ಸಂಸ್ಕೃತಿ? ಬಲ ಇದೆಯೆಂದು ಅಬಲೆಯನ್ನು ಹೀಗೆ ಬಲವಂತವಾಗಿ ಎಳೆತಂದು ಬಿಸಾಕುವುದೇ ನಿಮ್ಮ ಪುರುಷಾರ್ಥಾನಾ..?  ಮತ್ತೆ ಮತ್ತೆ ಹೇಳುತ್ತೇನೆ.. ನಿಮಗೆ ಕೈಮುಗಿದು ಕೇಳುತ್ತೇನೆ.. ನನ್ನನ್ನು ನನ್ನ ಪಾಡಿಗೆ ಹೋಗಲು ಬಿಟ್ಟುಬಿಡು. ನಿಮ್ಮ ತಮ್ಮನಿಗೆ ನನ್ನ ಇಬ್ಬರು ತಂಗಿಯರು ಸಾಕಲ್ಲವೇ. ಇಚ್ಚೆ ಇಲ್ಲದವಳನ್ನು ಹೀಗೆ ತುಚ್ಚವಾಗಿ ಎಳೆತಂದು ಮೆಚ್ಚಿಸಲು ಒತ್ತಾಯಿಸುವುದು ಅಕ್ಷಮ್ಯ. ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ.. ದಮ್ಮಯ್ಯಾ ಎನ್ನುತ್ತೇನೆ.. ನಿಮ್ಮ ಹೆಸರು ಹೇಳಿಕೊಂಡು ಬದುಕುತ್ತೇನೆ. ನನಗೆ ನಿಮ್ಮ ಈ ಯಾವ ಸಾಮ್ರಾಜ್ಯವೂ ಬೇಡಾ. ಇಲ್ಲಿ ಯಾರಿಗೂ ರಾಣಿಯಾಗಿರುವುದೂ ಬೇಡಾ.. ಅಸಲಿಗೆ ನಿಮ್ಮ ಈ ಹಸ್ತಿನಾವತಿಯ ಸಹವಾಸವೇ ಬೇಕಾಗಿಲ್ಲ. ಬಿಟ್ಟುಬಿಡಿ  ನನ್ನನ್ನು.. ಇಲ್ಲಿಂದ ಈಗಲೇ ಹೋಗಲು ಅನುಮತಿ ಕೊಟ್ಟುಬಿಡಿ.. ಎಂದು ನಾನು ಮತ್ತೆ ಮತ್ತೆ ಅಂಗಲಾಚಿದೆ. ಕತ್ತಿಯೊಂದು ಕೈಗಿತ್ತಿದ್ದರೆ ಆತನ ಕತ್ತು ಕತ್ತರಿಸಿ ಅಲ್ಲಿಂದ ಓಡಿ ಹೋಗಬೇಕೆಂದಿದ್ದೆ. ಆದರೆ.. ಆತ ಕತ್ತಿಯನ್ನೇ ಕಣ್ಣಲ್ಲಿ ಇಟ್ಟುಕೊಂಡವನ ಹಾಗೆ ನನ್ನನ್ನು ಬಿರುನೋಟದಿಂದ ಇರಿಯ ತೊಡಗಿದ್ದ. ಹತ್ತಿರ.. ಇನ್ನೂ ಹತ್ತಿರ ಬಂದ. ನನ್ನ ಕತ್ತಿಗೆ ಕೈಹಾಕಿದ.. ಇನ್ನೇನು ಕತ್ತು ಹಿಚುಕಿ ಸಾಯುಸುತ್ತಾನೆಂದುಕೊಂಡಿದ್ದು ಹುಸಿಯಾಯ್ತು. ಒಂದು ಹೆಜ್ಜೆ ಹಿಂದೆ ಸರಿದು..

(ಭೀಷ್ಮ :)  ಬೇಟೆ.. ನಾನು ಗೆದ್ದು ತಂದ ಬೇಟೆ ನೀನು.. ಹಿಡಿದು ತಂದ ಬೇಟೆ ಓಡಿ ಹೋಗುವುದನ್ನು ಯಾವ ಬೇಟೆಗಾರನೂ ಸಹಿಸಲಾರ. ಗೆದ್ದದ್ದನ್ನು ಬಿಟ್ಟುಕೊಟ್ಟು ಬಿಡಲು ಯಾವ ವೀರನೂ ಒಪ್ಪಲಾರ. ನಿನಗೆ ಬೇರೆ ಆಯ್ಕೆಗಳಿಲ್ಲ ಬಾಲೆ. ನಾನು ಹೇಳಿದಂತೆ ಕೇಳುವುದರಲ್ಲಿ ನಿನ್ನ ಒಳಿತಿದೆ. ಏಳು.. ಪುಣ್ಯಸ್ನಾನಾದಿಗಳನ್ನು ಮಾಡಿ ಅಲಂಕರಿಸಿಕೊಂಡು ಸಿದ್ದಳಾಗು. ನನ್ನ ಅನುಜನನ್ನು ವಿವಾಹವಾಗಿ ಪಟ್ಟದರಾಣಿಯಾಗುವಂತೆ. ಹಠಮಾರಿತನ ಹೆಣ್ಣಿನ ಬದುಕಿಗೆ ಶೋಭೆ ತರುವಂತಹುದಲ್ಲ. ಹಿರಿಯರು ಹೇಳಿದವರನ್ನು ಹಿಂದೆ ಮುಂದೆ ನೋಡದೇ, ಮರುಮಾತಾಡದೇ ಮದುವೆಯಾಗಿ ಮಕ್ಕಳನ್ನು ಹೆತ್ತು ಕೊಡುವುದಷ್ಟೇ ಹೆಣ್ಣಾದವಳ ಕರ್ತವ್ಯ. ಪ್ರತಿ ಸ್ತ್ರೀಯರಿಗೂ ಅದರಲ್ಲೇ ಸಾರ್ಥಕತೆ ಇದೆ. ಏಳು ಎದ್ದೇಳು.. ರಾಜಮಾತೆ ಸತ್ಯವತಿ ನಿನಗಾಗಿ ಅಂತಃಪುರದಲ್ಲಿ ಕಾಯುತ್ತಿದ್ದಾರೆ. ಹೋಗಿ ಮೊದಲು ಮಾತ್ರೋಶ್ರಿಯವರ ಆಶೀರ್ವಾದ ಪಡೆದುಕೋ, ಇದರಲ್ಲೇ ನಿನ್ನ ಉಜ್ವಲ ಭವಿಷ್ಯ ಅಡಗಿದೆ. ವ್ಯರ್ಥ ವಾದ ವಿವಾದ ಪ್ರಲಾಪಗಳಲ್ಲಿ ದುರಂತವೇ ಕಾದಿದೆ.. ಏಳು ಅಂಬೆ ಮೇಲಕ್ಕೇಳು.. ನನ್ನ ಕಣ್ಣಲ್ಲಿರುವ ಬೆಂಕಿ ನಿನ್ನೆದೆಗೆ ಸೋಂಕಿ ಬೂದಿಯಾಗುವ ಮೊದಲು ನನ್ನ ಕಣ್ಣೆದುರಿಂದ ದೂರವಾಗು.. ಹೋಗು..

(ಅಂಬೆ..) ಹೀಗೆ ಒಂದು ಕಡೆ ಓಲೈಸುತ್ತಾ.. ಇನ್ನೊಂದು ಕಡೆ ಬೆದರಿಸುತ್ತಾ ಆ ಭೀಷ್ಮ ನನ್ನ ಕಣ್ಣೊಳಗಿನ ಬೆಂಕಿಯನ್ನು ನಂದಿಸಲು ಯತ್ನಿಸಿದ. ಆತ ಏಳು ಏಳು ಎನ್ನುತ್ತಿದ್ದಂತೆ ಸಾವಕಾಶವಾಗಿ ಸಾವರಿಸಿಕೊಂಡು ಮೇಲಕ್ಕೇಳತೊಡಗಿದೆ. ಒತ್ತಡ ಹೇರಿದಷ್ಟು ಪುಟಿಯುವ ಜೀವ ನನ್ನದು. ಆತ ನನ್ನನ್ನು ಮೇಲಕ್ಕೆಬ್ಬಿಸಲು ತನ್ನ ಕಬ್ಬಿಣದ ಕೈಯನ್ನು ಮುಂದೆ ಚಾಚಿದ. ನಾನದನ್ನು ದಿಕ್ಕರಿಸಿ ಎದ್ದು ನಿಂತೆ. ಕೋಪ ನನ್ನ ಕಣ್ಣಲ್ಲಿ ಕೊತಕೊತ ಕುದಿಯತೊಡಗಿತ್ತು. ಆಕ್ರೋಶದಿಂದ ಒಮ್ಮೆ ಕೆಕ್ಕರಿಸಿ ಆತನನ್ನು ದಿಟ್ಟಿಸಿ ನೋಡಿದೆ. ನನ್ನ ನೋಟದ ತೀವ್ರತೆಗೆ ಆ ಭೀಷ್ಮ ಒಂದು ಕ್ಷಣ ಕಕ್ಕಾಬಿಕ್ಕಿಯಾದನಾ? ಗೊತ್ತಿಲ್ಲ. ಬಹುಷಃ ಆತನ ಬದುಕಿನಲ್ಲಿ ಹೆಣ್ಣೊಬ್ಬಳು ಹೀಗೆ ಎದುರು ನಿಂತು ಮಾತಾಡಿದ್ದೇ ಇಲ್ಲವೇನೋ.. ನನ್ನೆಲ್ಲಾ ಬಲವನ್ನು ಪಾದದ ಮೇಲೆ ಹಾಕಿ ನೆಲಕ್ಕೆ ಕಾಲೂರಿ ಗಟ್ಟಿಯಾಗಿ ನಿಂತೆ..

ಯಾಕೆ ಭೀಷ್ಮ.. ನಿಮಗೆ ಹೆಣ್ಣು ಎಂದರೆ ಗೆದ್ದುಕೊಂಡೋ ಇಲ್ಲಾ ಕದ್ದುಕೊಂಡೋ ಬರುವ ಪ್ರಾಣಿಯಲ್ಲವೇ. ನಾವು ಬರೀ ರಕ್ತಮಾಂಸ ಇರುವ ಪ್ರಾಣಿಗಳಲ್ಲಾ.. ನಮಗೂ ನಿಮ್ಮಂತೆಯೇ ಬುದ್ದಿ-ಭಾವಗಳಿವೆ. ನಮ್ಮದೇ ಆದ ಆಸೆ ಬಯಕೆಗಳಿವೆ. ನಮ್ಮ ಬದುಕನ್ನು ನಮ್ಮಿಚ್ಚೆಯಂತೆ ಕಟ್ಟಿಕೊಳ್ಳುವ ಮಹದಾಸೆಗಳಿವೆ. ಕೇವಲ ಗಂಡಸರಾದ ನಿಮ್ಮಿಚ್ಚೆಯೊಂದಿದ್ದರೆ ಸಾಕೆ..? ಹೆಣ್ಣು ಮಕ್ಕಳ ಮನದಿಚ್ಚೆ ಏನೆಂದು ಅರಿತು ನಡೆಯುವ ಕನಿಷ್ಟ ಸೌಜನ್ಯವೂ ದೇಶವಾಳುವ ನಿಮಗಿಲ್ಲವೇ? ನೀನು ನನ್ನನ್ನು ನಿನ್ನ ಪುರುಷಹಂಕಾರದ ಪರಮ ಪಾತಕದಿಂದ ತುಂಡರಿಸಿ ಕೊಂದರೂ ಪರವಾಗಿಲ್ಲಾ, ನಾನು ಸಾಯಲು ಸಿದ್ದಳಿದ್ದೇನೆ. ಆದರೆ.. ಎಂದೂ ಯಾವಕಾರಣಕ್ಕೂ ನನ್ನಿಚ್ಚೆಯ ವಿರುದ್ದ ನಾನು ಹೋಗುವವಳಲ್ಲ. ನಿಮ್ಮ ಪುರುಷ ಕುಲ ಸ್ರೀಯರ ಮೇಲೆ ಹೇರಿದ ಏಕಪಕ್ಷೀಯ ಸಂಪ್ರದಾಯದ ಸಂಕೋಲೆಗಳಿಗೆ ನನ್ನ ಧಿಕ್ಕಾರವಿದೆ. ಬಲ ಇದೆಯೆಂದು ಅಬಲೆಯರ ಮೇಲೆ ನೀವು ತೋರುವ ದಮನಗಳಿಗೆ ನನ್ನ ಧಿಕ್ಕಾರವಿದೆ. ನಾನು ಸಾಯುತ್ತೇನೆಯೇ ಹೊರತು ಸೋಲುವವಳಲ್ಲ. ಆಸೆ ಆಮಿಷ ಬಲವಂತಗಳಿಗೆ ತಲೆಬಾಗುವವಳೂ ಅಲ್ಲಾ. (ಸ್ವಲ್ಪ ಮೆತ್ತಗಾಗಿ ದ್ವನಿ ತಗ್ಗಿಸಿ)

ನೋಡು ವೀರಾಧಿವೀರಾ..  ಈಗಾಗಲೇ ಬೇರೆಯವರ ಸ್ವತ್ತಾಗಿರುವ ನನ್ನ ಮನಸ್ಸನ್ನು ಕಿತ್ತು ಬಲವಂತವಾಗಿ ಇನ್ನೊಬ್ಬರಿಗೆ ಕೊಡಲು ನನ್ನಿಂದಾಗದು. ನಾನು ಈಗಾಗಲೇ ಸಾಲ್ವ ರಾಜಕುಮಾರನನ್ನು ಪ್ರೀತಿಸುತ್ತಿರುವೆ. ನಮ್ಮಿಬ್ಬರ ಮೈಮನಸ್ಸುಗಳು ಒಂದಾಗಿ ಹೋಗಿವೆ. ಮನಸ್ಸೇ ಇಲ್ಲದ ಈ ದೇಹದಿಂದ ನಿನ್ನ ಸಹೋದರ ಏನು ತಾನೇ ಸುಖಿಸಿಯಾನು? ಪ್ರೀತಿ ಎನ್ನುವುದು ಎರಡು ಜೀವಗಳು ಪರಸ್ಪರ ಒಪ್ಪಿಕೊಂಡು ಕೊಡುಕೊಳ್ಳುವ ಆತ್ಮ ಸಂಬಂಧವಲ್ಲವೇ? (ನಿಟ್ಟುಸಿರುಬಿಟ್ಟು) ಓ.. ಮರೆತಿದ್ದೆ, ಆಜನ್ಮ ಬ್ರಹ್ಮಚರ್ಯದ ಭ್ರಮೆಯಲ್ಲಿರುವ ನಿಮಗೆ ಈ ಪ್ರೀತಿ ಪ್ರೇಮದ ಗಂಧಗಾಳಿಯೂ ಸೋಂಕಿರಲಿಕ್ಕಿಲ್ಲ ಅಲ್ಲವೇ? ಪ್ರತಿ ಹೆಣ್ಣಿಗೂ ತನ್ನಿಷ್ಟದ ಸಂಗಾತಿಯನ್ನು ಆಯ್ದುಕೊಂಡು, ತನ್ನ ಕನಸಿನ ದಾಂಪತ್ಯವನ್ನು ಕಟ್ಟಿಕೊಳ್ಳುವುದೂ ಅವಳ ಸ್ವಾತಂತ್ರ್ಯ ಅಲ್ಲವೇ? ಹೆಣ್ಣಿನ ಮೂಲಭೂತ ಹಕ್ಕುಗಳನ್ನು ಹದ್ದುಬಸ್ತಿನಲ್ಲಿಟ್ಟು ನೀವು ಗಂಡಸರು ಏನು ತಾನೇ ಸಾಧಿಸಬಲ್ಲಿರಿ? ಬೇಡ ಭೀಷ್ಮಾ.. ಬೋರ್ಗರಿದು ಹರಿಯುವ ನದಿಯ ನೀರನ್ನು ಹಿಡಿದು ಬಲವಂತವಾಗಿ ತಡೆದು ನಿಲ್ಲಿಸುವ ವ್ಯರ್ಥ ಪ್ರಯತ್ನ ಬೇಡಾ.. ಅದೆಷ್ಟೇ ಅಡೆತಡೆ ಒಡ್ಡಿದರೂ ಒಂದಿಲ್ಲೊಂದು ದಿನ ಸಮಯ ಕಾಯ್ದು ನಿಂತ ನೀರೂ ಸಹ ತನ್ನೆಲ್ಲಾ ಬಲ ಬಳಸಿ ಪ್ರಳಯ ಸೃಷ್ಟಿಸಿ ಕಟ್ಟೆ ಕಟ್ಟಿದವರ ಕೆಳಕ್ಕೆ ಕೆಡವಿ ಪುಡುಗಟ್ಟೀತು ಎಚ್ಚರ. ನಾನೀಗ ಬೇರೆಯೊಬ್ಬರಿಗೆ ನನ್ನ ಸರ್ವಸ್ವವನ್ನೂ ಕೊಟ್ಟುಬಿಟ್ಟಿದ್ದೇನೆ. ಈ ನದಿ ಆ ಸಾಗರ ಸೇರಲು ಅನುವು ಮಾಡಿಕೊಡು. ನುಗ್ಗಿ ಹರಿವ ನದಿಗೆ ಅಡ್ಡಲಾಗಿ ಬಲದಿಂದ ಕಟ್ಟೆ ಕಟ್ಟಿ ನಿಲ್ಲದಿರು. ನನ್ನನ್ನು ನನ್ನ ಪಾಡಿಗೆ ಹೋಗಲು ಬಿಡು.. ಸಾಲ್ವನೇ ನನ್ನ ಬದುಕು.. ಅವನೇ ನನ್ನ ಬಾಳಿನ ಬೆಳಕು. ಬದುಕು ಅಂತಿದ್ದರೆ ಅವನ ಜೊತೆ.. ಇಲ್ಲವಾದರೆ ನನ್ನ ಸಾವಿಗೆ ನೀನೇ ಹೊಣೆ..

ಹೀಗೆ.. ನನ್ನ ಮನದೊಳಗಿನ ಎಲ್ಲವನ್ನೂ ಆತನ ಮುಂದೆ ಮುಚ್ಚು ಮರೆ ಮಾಡದೇ ಬಿಚ್ಚಿಟ್ಟೆ. ಅದನ್ನು ಬಿಟ್ಟು ನನಗೆ ಬೇರೆ ದಾರಿಯೇ ಇರಲಿಲ್ಲ. ಇದ್ದದ್ದನ್ನು ಇದ್ದಂತೆ ಹೇಳಿ ಉಸಿರುಗಟ್ಟುವ ಆ ಅರಮನೆಯ ವಾತಾವರಣದಿಂದ ಹೇಗಾದರೂ ಪಾರಾಗಲೇಬೇಕಿತ್ತು. ಎಷ್ಟು ಸಾಧ್ಯವೋ ಅಷ್ಟು ಬೇಗ ನನ್ನ ಮನದಿನಿಯನನ್ನು ಸೇರಲೇಬೇಕಾಗಿತ್ತು. ಹೇಳುವುದನ್ನೆಲ್ಲಾ ಹೇಳಿ ಆತನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಅಲ್ಲೇನೂ ಪಾಶ್ಚಾತ್ತಾಪ ಎನ್ನುವಂತಹುದೇನೂ ಇರಲಿಲ್ಲ. ಆದರೆ ಅವನ ಪುರುಷಹಂಕಾರದ ವೃಕ್ಷಕ್ಕೆ ಕೊಡಲಿ ಪೆಟ್ಟು ಬಿದ್ದಂತಾ ಅಸಹನೆಯಂತೂ ಎದ್ದು ಕಾಣುತ್ತಿತ್ತು. ನಾನು ಅಂದುಕೊಂಡಿದ್ದನ್ನು ಮಾಡುವವಳು ಎನ್ನುವುದು ಆತನಿಗೆ ಈಗಾಗಲೇ ಮನವರಿಕೆ ಆಗಿತ್ತು. ಅವನಿಗೂ ಬೇರೆ ಆಯ್ಕೆಗಳಿರಲಿಲ್ಲ. ಒಂದು ನನ್ನನ್ನು ಬಿಡುಗಡೆಗೊಳಿಸಬೇಕಿತ್ತು ಇಲ್ಲವೇ ನನ್ನ ಸಾವಿನ ಹೊಣೆ ಹೊರಬೇಕಿತ್ತು. ಎರಡು ಹೆಜ್ಜೆ ಮುಂದೆ ಬಂದ ಆ ಭೀಷ್ಮಾ..

(ಭೀಷ್ಮ...) ನೀನು ಸ್ವಯಂವರದಲ್ಲೇ ಆ ಸಾಲ್ವನ ಸ್ವಾದೀನವಾದ ವಿಷಯ ಹೇಳಿದ್ದರೆ ಸೋತು ಓಡಿ ಹೋಗುತ್ತಿದ್ದ ಆ ರಣಹೇಡಿಯನ್ನು ಹಿಡಿದುತಂದು ನಿನ್ನನ್ನು ಆತನಿಗೆ ಕೊಡುಗೆಯಾಗಿ ಬಿಸಾಡುತ್ತಿದ್ದೆನಲ್ಲಾ. ಈಗಾಗಲೇ ಇನ್ನೊಬ್ಬನಿಗೆ ಬಳಕೆಯಾಗಿರುವ ನೀನು ನಾಯಿ ಮುಟ್ಟಿದ ಮಡಿಕೆ. ವಿವಾಹಪೂರ್ವ ಜಾರತನ ಮಾಡಿದ ನಿನ್ನಂತವಳಿಗೆ ಈ ಪವಿತ್ರ ಹಸ್ತಿನಾವತಿಯಲ್ಲಿ ಸ್ಥಳವಿಲ್ಲ. ಹೊರಟು ಹೋಗು ಅಂಬೆ.. ಯಾವ ನಾಯಿ ನಿನ್ನನ್ನು ಮೂಸಿ ಮಲಿನಮಾಡಿದೆಯೋ ಅಲ್ಲಿಗೇ ಹೊರಟು ಹೋಗು.. ಅಪವಿತ್ರಗೊಂಡ ಅನ್ನವನ್ನು ಯಾರೂ ಪೂಜೆಗೆ ಪ್ರಸಾದವಾಗಿಸಲಾರರು. ಶೀಲಗೆಟ್ಟ ನೀನು ಹಸ್ತಿನಾವತಿಯ ಸೊಸೆ ಆಗಲು ಅನರ್ಹಳು.. ಹೋಗು ಹೊರಟು ಹೋಗು.. ತೊಲಗು ತೊಲಗಿ ಹೋಗು..

(ಅಂಬೆ..) ಹೀಗೆ.. ತಾ ಗೆದ್ದುತಂದ ಬೇಟೆಯೊಂದು ದಕ್ಕದ ಅಸಹನೆಯ ಕುದಿತದಲ್ಲಿ ಆ ಕಲಿಭೀಷ್ಮ ಪಾಷಾಣ ತಿಂದ ಪ್ರಾಣಿಯ ಹಾಗೆ ತಲ್ಲಣಗೊಂಡು ತಾರಕಸ್ವರದಲ್ಲಿ ಅರಚಿದ. ತನ್ನ ಪೌರುಷದ ಮರ್ಮಕ್ಕೆ ಕುತ್ತಾದಂತೆ ಕಿರುಚಿದ. ನನಗೂ ಆತನು ಬಳಸಿದ ಭಾಷೆಯ ಬಗ್ಗೆ ವಿರೋಧಿಸಬೇಕೆನಿಸಿತು. ಗಂಡಸರು ಪ್ರತಿ ರಾತ್ರಿ ಇಚ್ಚೆ ಬಂದವಳ ಜೊತೆ ಲಲ್ಲೆಗರೆದರೆ ಅದು ಶೀಲಹರಣವಾಗದೇ ರಸಿಕತೆಯಾಗಬಹುದಾದರೆ, ಸ್ತ್ರೀಯೊಬ್ಬಳು ತನ್ನ ಮನಸ್ಸನ್ನು ತನ್ನಿಚ್ಚೆ ಬಂದವರಿಗೆ ಕೊಟ್ಟರೆ ಅದು ಜಾರತನ ಹೇಗಾಗುತ್ತದೆ? ಎಂದೆಲ್ಲಾ ಕೇಳಬೇಕೆಂದುಕೊಂಡೆ. ಸ್ತ್ರೀಯನ್ನು ಸಮ್ಮೋಹಿತಗೊಳಿಸಲು ಕೇವಲ ಬಲವೊಂದೇ ಸಾಲದು ಒಲವೂ ಇರಬೇಕೆಂದು ಹೇಳಬೇಕೆಂದುಕೊಂಡೆ. ಆದರೆ.. ತನ್ನ ಮನುಷ್ಯ ಸಹಜ ಭಾವ-ಬಯಕೆಗಳಿಗೆ ಬೆಂಕಿ ಇಟ್ಟು ಬೂದಿಮಾಡಿಕೊಂಡವನ ಮುಂದೆ ಒಲವಿನ ಬಗ್ಗೆ ಅರಿವು ಮೂಡಿಸುವುದು ಅಸಾಧ್ಯವೆಂದರಿತು ಆಡಬೇಕೆಂಬ ಮಾತುಗಳನ್ನೆಲ್ಲಾ ನುಂಗಿಕೊಂಡೆ. ವಾದ ಮಾಡುತ್ತಾ ಭಾವನೆಗಳಿಲ್ಲದ ಆ ಬಂಡೆಗೆ ತಲೆ ಚಚ್ಚಿಕೊಳ್ಳುವುದು ವ್ಯರ್ಥ ಎಂದುಕೊಂಡೆ. ಸಧ್ಯಕ್ಕೆ ಈ ಬಂಧನದಿಂದ ಬಿಡುಗಡೆ ಆಯಿತಲ್ಲಾ ಎನ್ನುವ ಸಂತಸ ಒಂದು ಕಡೆಯಾದರೆ.. ನನ್ನ ನಲ್ಲನ ಜೊತೆಗೂಡುವ ಸದವಕಾಶ ಸಿಕ್ಕಿತಲ್ಲಾ ಎನ್ನುವ ಸಂಭ್ರಮ ಇನ್ನೊಂದು ಕಡೆ. ಒಂದು ಸಲ ಕರುಣೆಯಿಂದ, ಇನ್ನೊಂದು ಸಲ ತಿರಸ್ಕಾರದಿಂದ ಭೀಷ್ಮನನ್ನು ನೋಡಿ ಅಲ್ಲಿಂದ ಹೊರಟೆ.. ಹೊರಟೆ.. ಹೊರಟೇ ಬಿಟ್ಟೆ... (ಕತ್ತಲು ಆವರಿಸುತ್ತದೆ.. ಹಾಡು ಕೇಳಿ ಬರುತ್ತದೆ.. ಬ್ಲಾಕ್ ಔಟ್) (ಹಾಡು : ಕಾಣದ ಕಡಲನೂ ಸೇರಬಲ್ಲೆನೆ ನಾ)

ದೃಶ್ಯ 5 : ಸಾಲ್ವ ರಾಜನ ಉದ್ಯಾನವನ..

(ಅಂಬೆ..) ಶತಮಾನಗಳ ಬಂಧನದಿಂದ ಬಿಡುಗಡೆ ಸಿಕ್ಕಷ್ಟು ಆನಂದದಿಂದ ಕಾಣದ ಕಡಲ ಹಂಬಲಿಸಿ ಬರುವ ಜೀವನದಿಯಂತೆ ಸಿಕ್ಕ ಕುದುರೆಯನೇರಿ ಸಾಲ್ವ ದೇಶಕೆ ಶರವೇಗದಲಿ ಬಂದು ತಲುಪಿದೆ. ಓಹೋ.. ಹಚ್ಚ ಹಸಿರು ಹಾಸಿಹೊದ್ದ, ತರಾವತಿ ಬಣ್ಣಬಣ್ಣದ ಹೂಬಳ್ಳಿಗಳಿಂದ ಅಲಂಕೃತವಾದ ಇದೇ ಸಾಲ್ವನ ಉದ್ಯಾನವನವೆಂದು ತೋರುತ್ತದೆ. ಅಲ್ಲಿ ಯಾರೋ ಅಧಿಕಾರಿಯನ್ನು ಕೇಳಿದ್ದಕ್ಕೆ ನನ್ನ ರಾಜಕುಮಾರ ಉದ್ಯಾನವನದಲ್ಲಿ ಬಹುದಿನಗಳಿಂದ ಉದಾಸೀನನಾಗಿ ಕುಳಿತಿರುತ್ತಾನೆಂಬ ಮಾಹಿತಿ ಸಿಕ್ಕಿತು. ಎಲ್ಲಿ ಎಲ್ಲಿ ನಾನು ಹುಡುಕುತ್ತಿರುವ ಅಂದದ ನಗುಮುಖದ ಚಂದಿರ. ಎಲ್ಲಿ ನನ್ನ ಕತ್ತಲೆಯ ಬದುಕಿನ ಭರವಸೆಯ ಬೆಳಕು.. ಹಾಂ.. ಅಗೋ ಅಲ್ಲಿ ಆ ಪುಷ್ಪ ಮಂದಿರದ ಮೆಟ್ಟಿಲಲ್ಲಿ.. ಆಕಾಶವೇ ತಲೆಯಮೇಲೆ ಬಿದ್ದವನಂತೆ ಚಿಂತಾಕ್ರಾಂತನಾಗಿ ಕುಳಿತಿರುವನಲ್ಲಾ, ಆ ನನ್ನ ನಲ್ಲಾ.. ನನ್ನದೇ ಚಿಂತೆಯಲ್ಲಿ ಅನ್ನಾಹಾರಗಳನ್ನು ತ್ಯಜಿಸಿ ಎಷ್ಟೊಂದು ಸೊರಗಿಹೋಗಿದ್ದಾನೆ. ಈ ಒಲವು ಅಂದರೆ ಹೀಗೇನೇ.. ಸಿಕ್ಕ ಪ್ರೀತಿಯನ್ನು ಕಳೆದುಕೊಂಡವರಿಗೆ ಗೊತ್ತು ವಿರಹದುರಿಯ ಬಾಧೆ. ಈಗ ಹೀಗೆ.. ಸ್ವಲ್ಪವೂ ಸದ್ದಾಗದಂತೆ ಮೆಲ್ಲಗೆ ಹೋಗಿ ಆತನ ಕಣ್ಣುಗಳನ್ನು ಈ ನನ್ನ ಕೋಮಲ ಕರಗಳಿಂದ ಮುಚ್ಚಿ ತೆಗೆಯುತ್ತೇನೆ. ನನ್ನನ್ನು ನೋಡಿದ ಆ ಮೂರ್ತ ಕ್ಷಣದಲ್ಲಿ ಆತ ಅನುಭವಿಸುವ ಅಮೂರ್ತ ಆನಂದವನ್ನು ಕಣ್ತುಂಬಿಕೊಳ್ಳುತ್ತೇನೆ

ಹೀಗೆಂದು ನನ್ನಷ್ಟಕ್ಕೆ ನಾನೇ ಮನಸ್ಸಲ್ಲಿ ಹೇಳಿಕೊಳ್ಳುತ್ತಾ, ಕಳ್ಳ ಬೆಕ್ಕಿನಂತೆ ಹೀಗೆ ಒಂದೊಂದೇ ಒಂದೊಂದೆ ಹೆಜ್ಜೆಗಳನ್ನು ಹಾಕುತ್ತಾ, ಎಲ್ಲವನ್ನೂ ಕಳೆದುಕೊಂಡವನಂತೆ ಕುಳಿತ ಇನಿಯನ ಕಣ್ಣುಗಳನ್ನು ಮುಚ್ಚಿದೆ. ಅಲ್ಲಿ ನಾನಂದುಕೊಂಡಂತೆ ಅಚ್ಚರಿಯಾಗುವಂತಹ ಯಾವುದೂ ಘಟಿಸಲೇ ಇಲ್ಲಾ. ಆತ.. ತನ್ನ ಕೈಗಳಿಂದ ಕಣ್ಣಿಗೆ ಮುಚ್ಚಿದ ನನ್ನ ಕರಗಳನ್ನು ಹಿಡಿದು ಕಿತ್ತು ಪಕ್ಕಕ್ಕೆ ಎಸೆದ. ನನ್ನತ್ತ ತಿರುಗಿ ತಿರಸ್ಕಾರದ ನೋಟ ಬೀರಿದ. ನನ್ನ ಬರುವಿಕೆ ಹಾಗೂ ಅಲ್ಲಿ  ನನ್ನ ಇರುವಿಕೆ ಆತನಿಗೆ ಸಂತಸಕ್ಕಿಂತ ಸಂಕಟವನ್ನುಂಟು ಮಾಡಿದಂತಿತ್ತು. ನನ್ನ ಮೇಲೆ ಹುಸಿಮುನಿಸಿರಬಹುದೆಂದು ಆತನನ್ನು ಅಕ್ಕರೆಯಿಂದ ಮುಟ್ಟಲು ಹೋದೆ. ಪಕ್ಕನೇ ಮೇಲಕ್ಕೆದ್ದವನೇ ಎರಡು ಹೆಜ್ಜೆ ಮುಂದಕ್ಕೆ ಹೋಗಿ ನನ್ನತ್ತ ಬೆನ್ನು ಮಾಡಿ ನಿಂತ. ಮೊದಲೇ ಅವಮಾನಗಳಿಂದ ಜರ್ಜರಿತಳಾದ ನನಗೆ ಅವನ ಆ ಅನಿರೀಕ್ಷಿತ ನಡವಳಿಕೆ ಹೃದಯ ಹಿಂಡುವಂತೆ ಮಾಡಿತು. ಆದರೂ ಸ್ವಲ್ಪ ಸಮಾಧಾನವನ್ನು ತಂದುಕೊಂಡು ನಾನೇ ಮಾತನ್ನು ಆರಂಭಿಸಿದೆ.

ಯಾಕೆ ಆರ್ಯಾ, ಈ ನಿನ್ನ ಪ್ರೇಮ ಕುಸುಮದ ಮೇಲೆ ಇಷ್ಟೊಂದು ಮುನಿಸು. ಸ್ವಯಂವರದಲ್ಲಿ ಆದ ದುರ್ಘಟನೆಯ ನಂತರ ನಿನ್ನ ಹಿಂದೆ ನಾನು ಬರಲಿಲ್ಲವೆಂಬ ಕೋಪಕ್ಕೋ, ಇಲ್ಲವೆ ನಿನ್ನನ್ನು ಸೇರಲು ಬರುವಲ್ಲಿ ಒಂದಿಷ್ಟು ವಿಳಂಬವಾಯಿತೆಂಬ ಆಕ್ರೋಶಕ್ಕೋ.. ಯಾಕೆ ಈ ಕೋಪ.? ನೀನಿಲ್ಲದೇ ನನಗೆ ಬದುಕಿಲ್ಲ ಪ್ರೀಯಾ, ನೀನಲ್ಲದೇ ನನಗೆ ಈ ಜಗದಲ್ಲಿ ಯಾರೂ ಇಲ್ಲಾ.. ಎಲ್ಲರನ್ನೂ ಎಲ್ಲವನ್ನೂ ತ್ಯಜಿಸಿ ತಿರಸ್ಕರಿಸಿ ನೀನೇ ನನ್ನ ಸರ್ವಸ್ವ ಎಂದು ಬಂದಿರುವೆ.  ನಿನಗಾಗಿ ಅಡೆತಡೆಗಳೆಲ್ಲವ ದಾಟಿ ಬಂದ ನನ್ನನ್ನು ಅಪ್ಪಿಕೊಂಡು ಸಂತೈಸುವುದನ್ನು ಬಿಟ್ಟು, ಇಲ್ಲಿ ಹೀಗೆ ಮುಖ ತಿರುಗಿಸಿಕೊಂಡು ನಿಂತಿರುವೆಯಲ್ಲಾ.. ನನ್ನ ರಾಜಕುಮಾರನಿಗೆ ಈ ರೀತಿಯ  ಹಠ ತರವಲ್ಲಾ.. ಬಾ ಇತ್ತ ತಿರುಗು.. ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು.. ನನ್ನ ಈ ನಯನಗಳಲ್ಲಿ ತುಂಬಿರುವ ಅನುರಾಗದ ಆಲಾಪವನ್ನು ಆಲಿಸು. ಬೇಗ ಬಾ ನಿನ್ನ ಬಲಿಷ್ಟ ಬಾಹುಗಳಲ್ಲಿ ನನ್ನನ್ನು ಆಲಂಗಿಸು, ಒಲವಿನ ಅಂತಿಮ ಸುಖದ ಕ್ಷಣಗಳನ್ನು ಆಸ್ವಾದಿಸು.

ಹೀಗೆಂದು ಹೇಳಿ ನನ್ನ ಕಣ್ಣುಗಳನ್ನು ಮುಚ್ಚಿಕೊಂಡು ಎರಡೂ ಕೈಗಳನ್ನು ಚಾಚಿ ನನ್ನ ಪ್ರಿಯತಮನ ಒಂದೇ ಒಂದು ಸ್ಪರ್ಷಕ್ಕಾಗಿ, ಬರದಿಂದ ಬರಗೆಟ್ಟ ಇಳೆ ಮಳೆಗಾಗಿ ಕಾಯುವಂತೆ ನಿರೀಕ್ಷಿಸುತ್ತಾ ನಿಂತೆ. ಕ್ಷಣ ಒಂದಾಯಿತು ಎರಡಾಯಿತು ಹತ್ತಾಯಿತು ಆದರೂ ಆತನ ಉಸಿರ ಬಿಸಿ ಬಂದು ನನ್ನ ತಾಕಲಿಲ್ಲ. ಆತಂಕದಿಂದ ಕಣ್ಣು ಬಿಟ್ಟು ನೋಡಿದರೆ ಆತನೇ ಇರಲಿಲ್ಲ. ಗಾಬರಿಗೊಂಡು ಅತ್ತ ಇತ್ತ ಹುಡುಕಿದೆ. ಹೋ ಅಗೋ ಅಲ್ಲಿ ಆ ಪಾರಿಜಾತದ ಮರದ ಬುಡದಲ್ಲಿ ಒಂದು ಕೈಯನ್ನು ಗಿಡಕ್ಕೆ ಆನಿಸಿ ಇನ್ನೊಂದು ಕೈಯನ್ನು ಸೊಂಟಕ್ಕಿರಿಸಿ ಆಕಾಶ ನೋಡುತ್ತಾ ನಿಂತಿದ್ದಾನೆ. ಹೇಗಾzರ ಮಾಡಿ ಈ ಮೌನ ಮುನಿಯ ಬಾಯಲ್ಲಿ ಮಾತುಗಳನ್ನು ಆಡಿಸಲೇಬೇಕಿತ್ತು. ಅವನತ್ತ ಹತ್ತು ಹೆಜ್ಜೆ ಇಟ್ಟಿದ್ದಷ್ಟೇ, ಯಾವುದೋ ಮುಳ್ಳು ಕಾಲಿಗೆ ಚುಚ್ಚಿತು, ಹೇಗೋ ಸಾವರಿಸಿಕೊಂಡು ಮೇಲೆದ್ದು ಇನ್ನೊಂದು ನಾಲ್ಕು ಹೆಜ್ಜೆ ಕಿತ್ತಿಡುವಷ್ಟರಲ್ಲಿ ಯಾವುದೋ ಕಲ್ಲು ಕಾಲಿಗೆ ತಾಕಿ ಮುಗ್ಗರಿಸಿ ಬಿದ್ದು ಅಯ್ಯೋ ಎಂದು ನೋವಿನಿಂದ ನರಳಿದೆ.

ಅಂದು ಕಾಶೀರಾಜನ ಉದ್ಯಾನವನದಲ್ಲಿ ನನ್ನ ಕಾಲಿಗೆ ಕಡ್ಡಿಯೊಂದು ಗೀರಿದ್ದಕ್ಕೆ ಅಮ್ಮನ ಹಾಗೆ ಅಕ್ಕರೆ ತೋರಿ ಸಂತೈಸಿದ್ದ ಈತ, ಇಂದು ನಾನಿಲ್ಲಿ ಕೆಳಗೆ ಬಿದ್ದು ನೋವಿನಿಂದ ನರಳುತ್ತಿದ್ದರೂ ಏನಾಯಿತೆಂದು ತಿರುಗಿಯೂ ನೋಡುತ್ತಿಲ್ಲವಲ್ಲಾ ಎಂದು ಅತೀವ ಬೇಸರವಾಯಿತು. ಮುಳ್ಳು ಚುಚ್ಚಿದ್ದು ಪಾದಕ್ಕಾದರೂ ಗಾಯವಾಗಿದ್ದು ನೇರವಾಗಿ ನನ್ನ ಹೃದಯಕ್ಕೆ. ಕಲ್ಲು ತಾಗಿದ್ದು ಕಾಲಿಗೆ ಆದರೂ ಏಟು ತಗಿಲಿದ್ದು ಮನಸ್ಸಿಗೆ. ಇನ್ನು ಆತನ ಈ ಕ್ರೌರ್ಯದ ಮೌನವನ್ನು ಸಹಿಸಲು ಸಾಧ್ಯವೇ ಇಲ್ಲವೆನಿಸಿತು. ಕೆಳಗೆ ಬಿದ್ದವಳು ಮೇಲೆದ್ದು ಹೋಗಿ ಆತನ ಕೈಹಿಡಿದೆ. ಆತ ಕೊಸರಿಕೊಂಡ.. ನನ್ನ ಮುಖವನ್ನು ನೋಡಲಿಕ್ಕೂ ಹೇಸರಿಸಿಕೊಂಡ. ನನ್ನ ತಾಳ್ಮೆ ಮಿರಿಮೀರಿತು. ಸಹನೆಯ ಕಟ್ಟೆ ಒಡೆಯಿತು. ನೇರವಾಗಿ ಹೋಗಿ ಆತನ ಎದುರು ನಿಂತುಕೊಂಡು..

ಏನಾಯಿತು ಪ್ರೀಯಾ.. ಯಾಕೆ ಹೀಗೆ ನನ್ನನ್ನು ನಿರಾಕರಿಸುವ ಹಾಗೆ ಆಡುತ್ತಿರುವೆ. ನಾನು ನಿನಗಾಗಿ ಬಹು ದೂರದಿಂದ ಬಂದಿದ್ದು ನಿನಗೆ ಇಷ್ಟವಾಗಲಿಲ್ಲವೇ? ಏನಾಯಿತೆಂದು ಬಾಯಿಬಿಟ್ಟು ಹೇಳು.. ನನ್ನಿಂದ ಯಾವ ಅಪರಾಧವಾಯಿತೆಂದು ತಿಳಿಸು.. ನಿನ್ನ ಈ ಮೌನ ನನ್ನನ್ನು ಕ್ಷಣಕ್ಷಣಕ್ಕೂ ಇರಿದು ಸಾಯಿಸುತ್ತಿದೆ. ನಿನ್ನಲ್ಲಿ ಬೇಡಿಕೊಳ್ಳುತ್ತಿರುವೆ ಮಾತಾಡು.. ಒಲವಿನ ಸೆಲೆಯಂತಿದ್ದ ನನ್ನ ರಾಜಕುಮಾರ ಹೀಗೇಕೆ ಒಲ್ಲದ ಶತ್ರುವಿನಂತೆ ಕಲ್ಲಾಗಿ ನಿಂತಿದ್ದಾನೆಂಬುದನ್ನಾದರೂ ಹೇಳು.. ಮಾತಾಡು ನನ್ನ ದೊರೆ.. ನೋಡಿಲ್ಲಿ.. ನಿನ್ನ ಮಾತುಗಳನ್ನು ಕೇಳಲು ನನ್ನ ಕಿವಿಗಳು ಕಾತರಿಸುತ್ತಿವೆ. ಏನಾದರೂ ಮಾತಾಡು.. ಎನ್ನುತ್ತಾ ನನ್ನ ಎರಡೂ ಕೈಗಳಿಂದ ಆತನ ಎರಡೂ ಭುಜಗಳನ್ನು ಹಿಡಿದು ಅಲ್ಲಾಡಿಸಿಬಿಟ್ಟೆ.. ಆಕಾಶದತ್ತ ದಿಟ್ಟಿಸುತ್ತಿದ್ದವನ ಏಕಾಂತಕ್ಕೆ ಭಂಗಬಂದವನಂತೆ ಎಚ್ಚೆತ್ತುಕೊಂಡ. ನನ್ನ ಕೈಗಳನ್ನು ಎತ್ತಿ ಪಕ್ಕಕ್ಕೆ ತಳ್ಳಿದ. ನನ್ನ ನೋಟವನ್ನು ಎದುರಿಸಲಾಗದೇ ಕಣ್ತಪ್ಪಿಸಿ ಒಂದೆರಡು ಹೆಜ್ಜೆ ಪಕ್ಕಕ್ಕೆ ಹೋಗಿ ನನ್ನತ್ತ ಬೆನ್ನು ತಿರುಗಿಸಿ ನಿಂತು ಒಂದು ಸಲ ಸುದೀರ್ಘವಾಗಿ ನಿಟ್ಟುಸಿರು ಬಿಟ್ಟು..

(ಸಾಲ್ವ..)  ಎಲ್ಲ ಮುಗಿದು ಹೋಗಿರುವಾಗ ಏನೆಂದು ಮಾತಾಡಲಿ ಅಂಬೆ.. ನೀನಿಲ್ಲಿಗೆ ಹೀಗೆ ಹುಡುಕಿಕೊಂಡು ಬರಬಾರದಿತ್ತು. ನನ್ನ ಪೌರುಷಕ್ಕೆ ಆದ ರಣಗಾಯದ ಮೇಲೆ ನಿನ್ನ ಆಗಮನ ಉಪ್ಪು ಸುರಿದಂತಾಯಿತು. ನಿನ್ನಿಂದಾಗಿ ನಾನೀಗ ನನ್ನದೇ ರಾಜ್ಯದಲ್ಲಿ ನಗೆಪಾಟಲಿಗೆ ಈಡಾಗಿದ್ದೇನೆ. ಹಾದಿಬೀದಿಯ ಜನರೆಲ್ಲಾ ನನ್ನನ್ನು ಕೈಲಾಗದ ಹೇಡಿ ಎಂಬಂತೆ ತುಚ್ಚವಾಗಿ ನೋಡುತ್ತಿದ್ದಾರೆ.. ನನ್ನ ಹಿಂದಿಂದೆ ಆಡಿಕೊಂಡು ಅಂಡು ಬಡಿದುಕೊಂಡು ನಗಾಡುತ್ತಿದ್ದಾರೆ. ಹೆಣ್ಣನ್ನು ಗೆದ್ದು ತರುವೆನೆಂದು ಹೋದ ಹುಲಿಯಂತಹ ರಾಜಕುಮಾರ ನಾಯಿಯಂತೆ ಹೊಡೆತ ತಿಂದು ಹಣ್ಣುಗಾಯಾಗಿ ಬಂದಿರುವುದನ್ನು ರಸವತ್ತಾಗಿ ರಸಗವಳದಂತೆ ಜಗದ ಜನರೆಲ್ಲಾ ಆಸ್ವಾದಿಸುತ್ತಿದ್ದಾರೆ. (ನಿಟ್ಟುಸಿರು ಬಿಟ್ಟು)

ಅವಮಾನಾ.. ಎಂತಹ ಘೋರ ಅವಮಾನ. ಹೀಗೆ ತುಂಬಿದ ಸಭೆಯಲ್ಲಿ ಮಾನ ಮರ್ಯಾದೆ ಕಳೆದುಕೊಂಡು ನಾನಿನ್ನೂ ಬದುಕಿದ್ದೇನಲ್ಲಾ ಎಂಬುದೇ ನನಗಿನ್ನು ಜಿಗುಪ್ಸೆಯ ಸಂಗತಿ. ಆಸ್ತಿ ಐಶ್ವರ್ಯ ಸಂಪತ್ತು ಹೋದರೆ ಗಳಿಸಬಹುದು, ರಾಜ್ಯ ಹೋದರೆ ಮತ್ತೆ ಜಯಿಸಬಹುದು. ಅದರೆ.. ಹೋದ ಮರ್ಯಾದೆಯನ್ನು ಮತ್ತೆ ಹೇಗೆ ಮರಳಿ ಪಡೆಯಲು ಸಾಧ್ಯ? ಅಡಿಕೆಗೆ ಹೋದ ಮಾನ ಆನೆ ದಾನ ಕೊಟ್ಟರೂ ಮರಳಿ ಬಂದೀತೆ.. ನನ್ನ ಸಂಪತ್ತೆಲ್ಲವನ್ನೂ ದಾರೆ ಎರೆದು ಕೊಟ್ಟರೂ ಮತ್ತೆ ಮೊದಲಿನಂತೆ ಗೌರವ ನನಗೆ ಸಿಕ್ಕೀತೆ..? ಧಿಕ್ಕಾರ ಇರಲಿ ನನಗೆ.. ಧಿಕ್ಕಾರ ಇರಲಿ ನನ್ನ ಪೌರುಷಕ್ಕೆ. ಸಾಧ್ಯವಿಲ್ಲ.. ಮುಗಿಯಿತು.. ಎಲ್ಲವೂ ಮುಗಿದೇ ಹೋಯಿತು.. ನೀನೀಗ ಆ ಭೀಷ್ಮನ ಸ್ವತ್ತು. ಮತ್ತೊಬ್ಬರು ಗೆದ್ದಿದ್ದನ್ನು ಕದ್ದುತಂದಿಟ್ಟುಕೊಂಡು ಅಳಿದುಳಿದ ಮಾನವನ್ನೂ ಕಳೆದುಕೊಳ್ಳಲು ನಾನು ಸಿದ್ದನಾಗಿಲ್ಲ. ಇಲ್ಲಿಂದ ಆದಷ್ಟು ಬೇಗ ಹೊರಟು ಹೋಗು.. ಮತ್ತೆ ಪ್ರೀತಿ ಪ್ರೇಮದ ಮಾತಾಡಿ ನನ್ನನ್ನು ಕೆರಳಿಸಬೇಡ. ಭಾವನೆಗಳು ಸತ್ತ ಎದೆಯಲ್ಲಿ ಒಲವಿನ ಬೀಜ ಬಿತ್ತುವ ವ್ಯರ್ಥ ಪ್ರಯತ್ನ ಮಾಡಬೇಡ. ಈ ಒಲವು ಅನುರಾಗಗಳಿಗಿಂತಾ ಆಳುವವರಿಗೆ ಮಾನ ಮರ್ಯಾದೆ ಗೌರವಗಳೇ ಮುಖ್ಯ. ಆ ಕುರುಕುಲದ ಭೀಷ್ಮ ಬೇಡವೆಂದು ಬಿಸಾಕಿದ ಭಿಕ್ಷೆ ನನಗೆ ಬೇಕಿಲ್ಲಾ. ತೊಲಗಿ ಹೋಗು ಇಲ್ಲಿಂದ. ನಿನ್ನಿಂದಾಗಿ ಆದ ಅವಮಾನ ಸಹಿಸಲಾಗದು ನನ್ನಿಂದ.. 

(ಅಂಬೆ..) ಹೀಗೆ ಹೇಳುತ್ತಾ ನನ್ನನ್ನು ತಿರಸ್ಕರಿಸಿ, ನನ್ನ ಪ್ರೀತಿಯನ್ನು ನಿರಾಕರಿಸಿ ಅಲ್ಲಿಂದ ಭಾರವಾದ ಹೆಜ್ಜೆ ಹಾಕುತ್ತಾ ಸಾಲ್ವ ಹೊರಟೇ ಬಿಟ್ಟ. ಓಡಿ ಹೋಗಿ ಅವನನ್ನು ತಡೆದು ನಿಲ್ಲಿಸಬೇಕು. ಆತನ ಕಾಲಿಗೆ ಬಿದ್ದು ಪ್ರೇಮ ಭಿಕ್ಷೆಯನ್ನು ಬೇಡಿಕೊಳ್ಳಬೇಕು. ನನಗೊಂದು ಬಾಳು ಕೊಡು ಎಂದು ಗೊಳಾಡಬೇಕು.. ಎಂದು ಒಂದು ಮನಸ್ಸು ಆ ಕ್ಷಣಕ್ಕೆ ಒತ್ತಾಯಿಸಿತಾದರೂ.. ಮರುಗಳಿಗೆಯಲ್ಲಿ ನನ್ನ ಸ್ವಾಭಿಮಾನ ಹೆಡೆಯೆತ್ತಿ ಬುಸುಗುಟ್ಟಿತು. ಎಲ್ಲವನು ಬಿಟ್ಟು ಎಲ್ಲವೂ ಇವನೇ ಎಂದು ನಂಬಿ ಬಂದ ನನ್ನ ಅದಮ್ಯ ವಿಶ್ವಾಸಕ್ಕೆ ವಂಚನೆಯಾಗಿತ್ತು. ನನ್ನ ಕಾಲುಗಳು ಒಂದೇ ಒಂದು ಹೆಜ್ಜೆಯನ್ನೂ ಆತನತ್ತ ಇಡಲು ನಿರಾಕರಿಸಿದವು. ನನ್ನ ಒಲವಿನ ಹಡಗು ಆತನ ಅಹಂಕಾರದ ಕಡಲಲಿ ಮುಳುಗಿಯಾಗಿತ್ತು. 

ಈ ಮಾನ ಮರ್ಯಾದೆ ಗೌರವಗಳು ಈ ಗಂಡಸರಿಗೆ ಮಾತ್ರ ಇದೆಯಾ. ನಮಗೆ ಹೆಣ್ಣುಮಕ್ಕಳಿಗೆ ಅವುಗಳಿಲ್ಲವೇ? ಇವರಿಗೆ ಬೇಕಾದಾಗ ಪ್ರೀತಿ ಪ್ರೇi ಒಲವು ಸುಖ ಸಂತಸಗಳೆಲ್ಲಾ ಸಿಗಬೇಕು. ಬೇಡವೆನಿಸಿದಾಗ ನಿರ್ದಾಕ್ಷಿಣ್ಯವಾಗಿ ಎಲ್ಲವನ್ನೂ ತಿರಸ್ಕರಿಸಿಬಿಡಬೇಕು. ಆಹಾ ಪುರುಷಹಂಕಾರವೇ.. ಅವಮಾನದ ಸುಡುವಗ್ನಿಯಲ್ಲಿ ನೊಂದು, ಗಂಡಸೆಂಬ ಅಹಮಿಕೆಯ ಕೆಂಡದಲಿ ಬೆಂದು, ಹುಡುಕಿ ಬಂದ ಪ್ರೀತಿಯ ಕೊಂದು ಓಡಿಹೋದ ಸಾಲ್ವಾ.. ಇಂದಿಲ್ಲಾ ನಾಳೆ ನಿನ್ನ ಮೇಲೆ ಅನುಕಂಪದಿಂದಾರೂ ಕರುಣೆಯಿಟ್ಟು ಕ್ಷಮಿಸಿಯೇನು.. ಅದರೆ.. ಅದರೆ.. ಕುರುಕುಲತಿಲಕ ಭೀಷ್ಮಾ.. ನಿನ್ನನ್ನು ಮಾತ್ರ ಎಂದೂ ಕ್ಷಮಿಸಲಾರೆ.. ಈ ಸಾಲ್ವನಿಗಾದ ಅವಮಾನಕ್ಕೆ, ನನಗಾದ ಅನ್ಯಾಯಕ್ಕೆ ನೀನೇ ಕಾರಣ. ಹೆಣ್ಣನ್ನು ಬಲದಿಂದ ಗೆದ್ದೆ ಎನ್ನುವ ನಿನ್ನ ಪುರುಷಾರ್ಥಕ್ಕೆ ನೀನು ಬೆಲೆ ತೆರಲೇಬೇಕು. ಪೌರುಷದ ಯಾಗಕ್ಕೆ ಸ್ತ್ರೀಯರನ್ನು ಬಲಿಪಶುಗಳನ್ನಾಗಿಸುವ ನಿನ್ನ ದುರಹಂಕಾರಕ್ಕೆ ಪಶ್ಚಾತ್ತಾಪ ಪಡಲೇಬೇಕು. ನನ್ನ ಬದುಕನ್ನು ನರಕ ಮಾಡಿದ ಭೀಷ್ಮಾ.. ನಿನ್ನ ಅರಮನೆಗೆ ನಿನ್ನನ್ನೇ ಹುಡುಕಿಕೊಂಡು ಈ ಅಂಬೆ ಬರುತ್ತಿದ್ದಾಳೆ.. ಓ ಜಗದಂಬೆ ನಿನ್ನ ಈ ಮಗಳಿಗೆ ಆ ಕಲಿಭೀಷ್ಮನನ್ನು ಎದುರಿಸುವ ಶಕ್ತಿ ಕೊಡು ತಾಯಿ ಶಕ್ತಿಕೊಡು.. (ಎನ್ನುತ್ತಾ ಆವೇಶದಲ್ಲಿ ಹೊರಡುತ್ತಾಳೆ. ವೇದಿಕೆಯ ಮೇಲೆ ಕತ್ತಲು, ಹಿನ್ನೆಲೆಯಲ್ಲಿ ಹಾಡು..)
            
ದೃಶ್ಯ 6 :  ಹಸ್ತಿನಾವತಿಯ ಅರಮನೆ...

ಅಂಬೆ ಬಿರುಗಾಳಿಯಂತೆ ಹಸ್ತಿನಾವತಿಯ ಅರಮನೆಗೆ ನುಗ್ಗುತ್ತಾಳೆ.. ಕಣ್ಣಲ್ಲಿ ಕೆಂಡದಂತಹ ಕೋಪ
(ಅಂಬೆ..) ಎಲ್ಲಿ ಎಲ್ಲಿ ನನ್ನ ಆಸೆ ಕನಸುಗಳಿಗೆ ಕೊಳ್ಳಿಯಿಟ್ಟ ಕುರುಕುಲತಿಲಕ.  ಎಲ್ಲಿರುವೆ ನನ್ನ ಬಂಗಾರದ ಬದುಕನ್ನು ಸ್ವಾರ್ಥದ ಬೆಂಕಿಯಲಿ ಸುಟ್ಟ ಕಲಿಭೀಷ್ಮಾ.. ಓಹೋ.. ತಾವು ಇಲ್ಲಿರುವಿರೋ.. ಏನಿದು ವಿಸ್ಮಯಾ.. ಈ ಅಂಬೆಯನ್ನು ಕಂಡು ಜಗದೇಕವೀರನ ಹಣೆಯ ಮೇಲೆ ಚಿಂತೆಯ ಗೆರೆಗಳು ಮೂಡಿದಂತಿವೆ. ನೀವು ಹೆಣೆದ ಬಲೆಯಿಂದ ತೊಲಗಿ ಹೋದ ಬೇಟೆ ಮತ್ತೆ ಬೇಟೆಗಾರನನ್ನೇ ಹುಡುಕಿ ಬಂದಿದೆಯಲ್ಲಾ ಎಂಬ ಅಚ್ಚರಿಯೇ ವೀರಪುತ್ರಾ. ನನ್ನ ಜೀವಕ್ಕೆ ಜೀವವಾಗಿದ್ದ ಆ ಸಾಲ್ವ ರಾಜಕುಮಾರನೋ ಆ ಸ್ವಯಂವರದಲ್ಲಿ ನಿನ್ನಿಂದ ಆದ ಅವಮಾನದಿಂದ ಜರ್ಜರಿತನಾಗಿ ನನ್ನನ್ನು ತಿರಸ್ಕರಿಸಿಬಿಟ್ಟ. ತುಂಬಿದ ಸಭೆಯಲ್ಲಿ ಹೀನಾಯವಾಗಿ ಒದ್ದು ಅವಮಾನಿಸಿದ ಆ ಭೀಷ್ಮ ಗೆದ್ದು ಹೊತ್ತೊಯ್ದವಳ ಜೊತೆ ನಾನು ಕದ್ದು ಬಾಳ್ವೆ ಮಾಡಲಾರೆ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟ. ಭೀಷ್ಮ ಬಿಸಾಕಿದ ಭಿಕ್ಷೆಯನ್ನು ನಾನೆಂದೂ ಮಹಾಪ್ರಸಾದವೆಂದು ಸ್ವೀಕರಿಸಲಾರೆ ತೊಲಗಿ ಹೋಗು ಎಂದು ಅವಹೇಳನ ಮಾಡಿ ನಿರಾಕರಿಸಿಬಿಟ್ಟ. ನೀವು ಪುರುಷ ಪುಂಗವರು ನಿಮ್ಮ ಪ್ರತಿಷ್ಟೆಗಾಗಿ ಬಡೆದಾಡಿದ್ದಕ್ಕೆ ಬಲಿಪಶುವಾಗಿ ನರಕ ಅನುಭವಿಸಬೇಕಾದವರು ನಾವು ಸ್ತ್ರೀಯರು.  ಹೆತ್ತವರ ಮನೆಗೆ ಎರವಾದ ನಾನು ಮತ್ತೆ ತಂದೆಯವರಲ್ಲಿಗೆ ಹೋಗಲಾರೆ. ಕೊನೆಯ ಉಸಿರಿರುವವರೆಗೂ ಜೊತೆಯಿರುವೆನೆಂದು ಮಾತುಕೊಟ್ಟು ಮುರಿದ ಆ ಸಾಲ್ವನ ದಯೆಯ ದಾಸಿಯಾಗಿಯೂ ಬದುಕಲಾರೆ. ಓಹೋ.. ನನ್ನದೆಂತಹ ದುರಾದೃಷ್ಟದ ಅತಂತ್ರ ಗತಿ, ತ್ರಿಶಂಕು ಸ್ಥಿತಿ. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ..
(ಬಿಕ್ಕಿ ಬಿಕ್ಕಿ ಅಳುವಳು. ಸಾಧ್ಯವಾದರೆ ಇಲ್ಲಿ ದಾಸರ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಹಾಡನ್ನು ಹಿನ್ನೆಲೆಯಲ್ಲಿ ಹಾಕಬೇಕು)

ನನ್ನ ಜೀವನದ ದುರಂತಗಳಿಗೆಲ್ಲಾ ಮೂಲ ಕಾರಣೀಕರ್ತ ನೀನು ಭೀಷ್ಮಾ ನೀನು... ಎಲ್ಲವೂ ನಿನ್ನಿದಂಲೇ ಆಗಿದ್ದು.. ನಿಮ್ಮ ಪೌರುಷ ಪ್ರತಿಷ್ಟೆಗಳ ಪಗಡೆಯಾಟದ ಪಣದಲ್ಲಿ ನಾನು ಕೇವಲ ಆಟದ ಕಾಯಿಯಾಗಿರುವೆ. ಎಲ್ಲಿಯೂ ಸಲ್ಲದವಳಾದ ಈ ಹತಭಾಗ್ಯಳ ಬದುಕನ್ನು ಹಾಳು ಮಾಡಿದ ನೀನೇ ಈಗ ನನಗೊಂದು ಬಾಳು ಕೊಡಬೇಕು. ಎಲ್ಲಿಯೂ ನೆಲೆ ಇಲ್ಲದೇ ನಿಶಾಚರಿಯಾಗಿ ಅಂಡೆಲೆಯುತಿರುವ ನನಗೀಗ ಒಂದು ನೆಲೆಬೇಕು. ನೀನು ನನ್ನನ್ನು.. ಈ ಅಂಬೆಯನ್ನು.. ನೀನು ಸ್ವಯಂವರದಲ್ಲಿ ಗೆದ್ದು ತಂದ ಈ ಉಸಿರಾಡುವ ಗೊಂಬೆಯನ್ನು ವಿವಾಹವಾಗಬೇಕು, ಸ್ವಯಂವರದ ನಿಯಮದ ಪ್ರಕಾರವೇ ಹೇಳುವುದಾದರೆ ಯಾರು ಸ್ವಯಂವರದಲ್ಲಿ ಗೆಲ್ಲುತ್ತಾರೋ ಅವರೇ ವಧುವನ್ನು ವರಿಸಬೇಕಲ್ಲವೇ? ನೀನು ನನ್ನನ್ನು ಗೆದ್ದು ತಂದಿರುವುದೇ ನಿಜವಾಗಿದ್ದಲ್ಲಿ ನೀನೇ ನನ್ನ ಕೈಹಿಡಿಯುವುದು ರಾಜಧರ್ಮ.. ನೀನು ಎಂದೋ ಮಾಡಿದ ಪ್ರತಿಜ್ಞೆಯನ್ನು ಇಂದು ಮುರಿದು ಗೆದ್ದು ತಂದ ವಧುವನ್ನು ಮದುವೆಯಾಗುವುದೇ ನಿಜವಾದ ಕ್ಷತ್ರೀಯ ಧರ್ಮ..

ಹೀಗೆ ನನ್ನೆಲ್ಲಾ ಅಂತರಂಗದ ಆಕ್ರೋಶವನ್ನು ಆ ಭೀಷ್ಮರ ಮುಂದೆ ಅರಿಕೆ ಮಾಡಿಕೊಂಡೆ.  ವಿವಾಹವಾಗಿ ಬದುಕು ಕೊಡು ಎಂದು ಪರಿಪರಿಯಾಗಿ ವಿನಂತಿಸಿಕೊಂಡೆ. ಬೇಟೆಯೇ ಬೇಟೆಗಾರನಿಗೆ ಆಶ್ರಯಕೊಡು ಎಂದು ಬೇಡಿಕೊಳ್ಳುವಂತಹ ಅಸಾಹಯಕತೆಯನ್ನು ಈ ಪುರುಷ ಸಮಾಜ ಸೃಷ್ಟಿಮಾಡಿತ್ತು. ನಾನು ಹೇಳುವುದೆಲ್ಲವನ್ನೂ ಮೌನವಾಗಿಯೇ ಕೇಳಿಸಿಕೊಂಡ ಆತ ನಾಲ್ಕಾರು ಹೆಜ್ಜೆ ಮುಂದೆ ಬಂದು ಹೆಗಲಿನಿಂದ ಕೆಳಕ್ಕೆ ಜಾರಿ ಬೀಳುತ್ತಿದ್ದ ಶಲ್ಯವನ್ನು ಸರಿಪಡಿಸಿಕೊಂಡ. ನಾನು ಅಷ್ಟೊಂದು ಆಕ್ರೋಶಗೊಂಡು ಮಾತಾಡಿದರೂ ಆತನ ಕಣ್ಣಲ್ಲಿ ಕೋಪದ ಬದಲು ಅದೆಂತಹುದೋ ಕರುಣೆ ತುಂಬಿಕೊಂಡಂತಿತ್ತು.

(ಭೀಷ್ಮ..) ಅತಿಯಾದ ಆಕ್ರೋಶ ವಿವೇಕವನ್ನು ಕೊಲ್ಲುತ್ತದೆ ಅಂಬೆ. ಏನು ಯಾವಾಗ ಹೇಗಾಗಬೇಕೆಂದು ನಿರ್ಧರಿಸಲು ನಾವ್ಯಾರು? ಇದೆಲ್ಲಾ ಆ ವಿಧಿಯಾಟ. ನಮ್ಮದಲ್ಲದ ತಪ್ಪಿಗೆ ಬಲಿಯಾಗಿದ್ದು ಕೇವಲ ನೀನು ಮಾತ್ರವಲ್ಲಾ.. ನಾನೂ ಕೂಡಾ. ಪರಿಸ್ಥಿತಿಯ ಒತ್ತಡ ಹಾಗೂ ಅಸ್ಥಿತ್ವದ ಅನಿವಾರ್ಯತೆಗಳಿಗಾಗಿ ನಮ್ಮ ವ್ಯಕ್ತಿತ್ವಗಳನ್ನೇ ಬದಲಾಯಿಸಿಕೊಳ್ಳಬೇಕಾಗುತ್ತದೆ. ನಾನೇನೂ ನಿನ್ನ ಮೇಲಿನ ಮೋಹದಿಂದ ಸ್ವಯಂವರಕ್ಕೆ ಬಂದವನಲ್ಲಾ. ನಿಮ್ಮಲ್ಲಿ ಯಾರನ್ನಾದರೂ ವಿವಾಹವಾಗುವ ಅಭಿಲಾಷೆಯೂ ನನ್ನದಾಗಿರಲಿಲ್ಲ. ನಾನು ನನ್ನ ತಂದೆಯವರಿಗೆ ಮಾತುಕೊಟ್ಟಂತೆ ಈ ಕುರುಕುಲದ ಸಿಂಹಾಸನದ ಹಿತಾಸಕ್ತಿಯನ್ನು ಕಾಪಾಡುವ ಸೇವಕ ಮಾತ್ರ. ರಾಜಮಾತೆಯ ಆದೇಶದಂತೆ ಅವರ ಪುತ್ರನಿಗೆ ವಧುಗಳನ್ನು ಕರೆತರಲು ಕಾಶೀರಾಜ್ಯದ ಸ್ವಯಂವರಕ್ಕೆ ಬರಬೇಕಾಯ್ತು. ಬಲಬಳಸಿ ಹೋರಾಡಿ ನಿಮ್ಮನ್ನು ಗೆದ್ದು ತರಬೇಕಾಯ್ತು. ತಪ್ಪೋ ಸರಿಯೋ ಸಿಂಹಾಸನದ ಹಿತಕಾಪಾಡುವುದೇ ರಾಜಧರ್ಮ. ರಾಜಧರ್ಮನಿಷ್ಟನಾದ ನನಗೆ ಪಾಪ ಪುಣ್ಯ, ಸರಿತಪ್ಪುಗಳು ಲೆಕ್ಕಕ್ಕಿಲ್ಲ.

ಪರಿಸ್ಥಿತಿಯ ಅನಿವಾಂiiತೆಗೆ ಬಲಿಯಾಗಿ ಆಜನ್ಮ ಬ್ರಹ್ಮಚರ್ಯೆಯ ಪ್ರತಿಜ್ಞೆ ಮಾಡಿ ನನ್ನ ತುಂಬಿದ ಯೌವನದ ಬದುಕಿಗೆ ನಾನೇ ಬೆಂಕಿ ಇಟ್ಟುಕೊಂಡು, ಭಾವನೆಗಳನ್ನು ಸುಟ್ಟು ಬೂದಿ ಮಾಡಿಕೊಂಡು, ಸಿಂಹಾಸನ ಕಾಯುವ ಕಾವಲು ನಾಯಿಯಂತೆ ಬದುಕುತ್ತಿರುವೆ. ನನ್ನ ಬದುಕನ್ನು ನಾನೇ ಸುಟ್ಟುಕೊಳ್ಳುತ್ತೇನೆಯೇ ಹೊರತು ಕೊಟ್ಟ ಮಾತನ್ನು ಮುರಿದು ಕುರುಕುಲದ ಇತಿಹಾಸದಲ್ಲಿ ಕೆಟ್ಟವನಾಗಲಾರೆ. ಈ ದೇಹದಲ್ಲಿ ಉಸಿರಿರುವವರೆಗೂ ನಾನು ನನ್ನ ಪ್ರತಿಜ್ಞೆಗೆ ಬದ್ದನಾಗಿರುವೆ.. ನಿನ್ನಂತ ನೂರಾರು ಅಂಬೆಯರು ಬಂದು ಅಂಗಲಾಚಿದರೂ ನನ್ನ ನಿರ್ಧಾರವೆಂದೂ ಬದಲಾಗದು. ಎಲ್ಲಿಯೂ ನಿನಗೆ ತಾವಿಲ್ಲವೆಂದೇಕೆ ತಳಮಳಗೊಳ್ಳುತಿರುವೆ. ಅಂಬೆ.. ನೀನು ಬಯಸಿದರೆ ಈಗಲೂ ವಿಚಿತ್ರವೀರ್ಯನ ಅರಮನೆಯ ಅಂತಃಪುರದ ಅರಸಿಯರಲ್ಲಿ ಒಬ್ಬಳಾಗಿರಬಹುದು. ಈ ಸಾಮ್ರಾಜ್ಯಕ್ಕೆ ವಾರಸುದಾರನನ್ನು ಹೆತ್ತು ಕೊಟ್ಟು ನಿನ್ನ ಸ್ತ್ರೀಧರ್ಮ ನಿಭಾಯಿಸಬಹುದು. ಇದಕ್ಕಿಂತಾ ಹೆಚ್ಚಿಗೆ ನಾನೇನನ್ನೂ ಹೇಳಲಾರೆ.. ಆ ವಿಧಿಯಾಟದ ಮುಂದೆ ನಾನು ನೀನು ಎಲ್ಲರೂ ತೃಣಸಮಾನರು. ಅದು ಆಡಿಸುವ ಹಾಗೆ ಆಡುವುದಷ್ಟೇ ನಮ್ಮ ಕೆಲಸ. ಅರಸಿಯಾಗಲು ಬಯಸಿದರೆ ಅಂತಃಪುರದತ್ತ ನಡೆ. ಇಲ್ಲವಾದರೆ.. ನೀ ಬಯಸಿದಲ್ಲಿ ಹೋಗಲು ನನ್ನ ಅಬ್ಯಂತರವೇನೂ ಇಲ್ಲಾ. ಇಷ್ಟರ ಮೇಲೆ ನಿನ್ನಿಷ್ಟ ನಾನಿನ್ನು ಹೊರಡುವೆ.. ಎಂದು ಹೇಳಿ ಹಿಂತಿರುಗಿ ನೋಡದೇ ಭೀಷ್ಮ ಹೊರಟೇ ಬಿಟ್ಟ. ನನ್ನ ಕೊಟ್ಟ ಕೊನೆಯ ಆಸೆಗೂ ಬೆಂಕಿ ಇಟ್ಟ. ನನಗೆ ಹುಚ್ಚು ಹಿಡಿದಂತಾಯಿತು. ತಲೆಯಲ್ಲಿ ನಗಾರಿಯ ಸದ್ದು ಬಾರಿಸಿದಂತಾಯಿತು. ಕಾಲುಗಳು ತಮ್ಮಷ್ಟಕ್ಕೆ ತಾವೇ ಚಲಿಸತೊಡಗಿದವು. (ಹೀಗೆಂದು ಹೇಳಿ ಹುಚ್ಚಿಯಂತೆ ತಲೆಯನ್ನು ಗಿರಗಿರ ತಿರುಗಿಸುತ್ತಾ ರುದ್ರ ನೃತ್ಯ ಮಾಡಲು ತೊಡಗುತ್ತಾಳೆ. ಆಮೇಲೆ ಒಂದು ಕಂಬದ ಹತ್ತಿರ ಹೋಗಿ

ಜನ್ಮದಾತಾ.. ನನಗೆ ನನ್ನಿಷ್ಟವಾದವನೊಂದಿಗೆ ಮದುವೆ ಮಾಡಿಕೊಳ್ಳಲು ಅನುಮತಿ ಕೊಡು.. ನನ್ನಿಚ್ಚೆಯಂತೆ ಬದುಕಲು ಅವಕಾಶಕೊಡು, ಒಂದೇ ಒಂದು ಅವಕಾಶ ಕೊಡು ತಂದೆ.. ನಿಮಗೆ ಕೈಮುಗಿವೆ.. ನಿಮ್ಮ ಕಾಲು ಹಿಡಿವೆ.. ಭೀಷ್ಮನ ಜೊತೆಗೆ ಬಲವಂತವಾಗಿ ಕಳುಹಿಸಬೇಡಾ.. ನನ್ನ ಕನಸುಗಳನ್ನು ನಾಶಮಾಡಬೇಡಾ.. ಅಪ್ಪಾ.. ಅಪ್ಪಾಜಿ.. ಜನ್ಮಕೊಟ್ಟ ನೀವೇ ನನ್ನ ಕೈಬಿಟ್ಟರೆ ನನಗಿನ್ಯಾರು ಗತಿ. ಕಾಪಾಡು ತಂದೆ.. ನಿನ್ನನ್ನೇ ನಂಬಿ ಬಂದೆ.. (ಕೆರಳಿ ನಿಂತು) ಓಹೋ ನೀವು ನನ್ನ ತಂದೆಯಾಗುವುದಕ್ಕೂ ಮೊದಲು ರಾಜನಲ್ಲವೇ. ನಿಮಗೆ ರಾಜಧರ್ಮ ಮುಖ್ಯವಲ್ಲವೆ.. ಮಾಡಿ ಮಾಡಿ ನಿಮ್ಮ ಕರುಳ ಕುಡಿಯ ಕನಸುಗಳ ಗೋರಿಗಳ ಮೇಲೆ ರಾಜ್ಯಭಾರ ಮಾಡಿ.. ಹೋಗಿ  ರಾಜ್ಯಭಾರ ಮಾಡಿ..
(ಮತ್ತೆ ನಗಾರಿ ಸದ್ದು. ಮತ್ತೆ ಕುಣಿತ. ಮತ್ತೊಂದು ಕಂಬದ ಹತ್ತಿರ ಬಂದು)

ಓಹೋ ನನ್ನ ಪ್ರಿಯತಮಾ,, ಸಾಲ್ವ ರಾಜಕುಮಾರಾ.. ನನ್ನ ಬದುಕಿನ ಬೆಳಕು ನೀನು, ನನ್ನ ಬಯಕೆಗಳ ಬುತ್ತಿ ನೀನು, ನೀನಾದರೂ ನನ್ನವನಾಗು. ಇಬ್ಬರೂ ಸೇರಿ, ಆಸೆಗಳ ಕುದುರೆಯನೇರಿ ಆಕಾಶಕ್ಕೆ ಹಾರೋಣವಂತೆ.. ಬಾ ನನ್ನ ಮನಸಿನ ದೊರೆಯೇ,, ಬಾ ನನ್ನ ಕನಸಿನ ಸಿರಿಯೇ.. ಬಾ ನನ್ನ ಆಲಂಗಿಸು, ಸಂಕಷ್ಟದಲ್ಲಿರುವ ನನ್ನ ತಲೆಸವರಿ ಸಂತೈಸು. ಯಾಕೆ ಯಾಕೆ ಹೀಗೆ ನನ್ನನ್ನು ದೂರತಳ್ಳುವೆ.. ನಾನೇನು ತಪ್ಪು ಮಾಡಿರುವೆ.. ಪ್ರೇಮಿಯಾಗುತ್ತೇನೆ ಎಂದವನು ಈಗ ಹೀಗೆ ಸ್ವಪ್ರತಿಷ್ಟೆಯ ಪರಾಕಾಷ್ಟೆಯಾಗಿರುವೆ. ಒಲವನರಸಿ ಬಂದ ನಿನ್ನ ಮನದರಸಿಯನ್ನು ಯಾಕೆ ಹೀಗೆ ಅವಮಾನಿಸಿ ನಿರಾಕರಿಸುವೆ.. ನಿನಗೂ ಪುರುಷಹಂಕಾರವೇ.. ಎಲ್ಲ ಬಿಟ್ಟು ನೀನೇ ಎಲ್ಲವೆಂದು ನಂಬಿ ಬಂದಿರುವ ಪ್ರೀತಿಯನ್ನು ತಿರಸ್ಕರಿಸಿ ಹೊರಟು ಹೋದೆಯಾ.. ಹೊರಟೇ ಹೋದೆಯಾ.. ಹೋಗು ಹೋಗು.. ಹೊರಟು ಹೋಗು.. ಪ್ರೇಮದ ಗುಂಗಿನಲ್ಲಿರುವವಳ ಹಂಗು ತೊರೆದು ಹೊರಟು ಹೋಗು..
(ಮತ್ತೆ ನಗಾರಿ ಸದ್ದು.. ಮತ್ತೆ ರುದ್ರ ನರ್ತನ, ಮತ್ತೊಂದು ಕಂಬದ ಬಳಿ ಬಂದು)

ಓ.. ವೀರಾಧಿವೀರ ಭೀಷ್ಮಾ.. ಸ್ವಯಂವರದಲ್ಲಿ ಶೂರತ್ವ ತೋರಿ ನನ್ನನ್ನು ಗೆದ್ದುತಂದವ ನೀನು. ನಿನಗೆ ಈ ಭೂಮಂಡಲದಲ್ಲಿ ಯಾರಾದರೂ ಸರಿಸಮನಾದವರು ಇರುವರೇನು? ಯಾವತ್ತೋ ಯಾರಿಗಾಗಿಯೋ ಮಾಡಿದ ಪ್ರತಿಜ್ಞೆಯನ್ನು ಮರೆತುಬಿಡು. ನಿನ್ನಿಂದಾಗಿ ಎಲ್ಲರಿಂದ ಪರಿತ್ಯಕ್ತಳಾದ ನನಗೊಂದು ಬಾಳುಕೊಡು. ನೋಡು ನನ್ನನ್ನೊಮ್ಮೆ ನೋಡು.. ಯೌವನ ಸೌಂದರ್ಯ ಯಾವುದಕ್ಕೂ ನನ್ನಲ್ಲಿ ಕೊರತೆಯಿಲ್ಲಾ.. ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು..  ಮನುಜ ಸಹಜ ಭಾವ-ಬಯಕೆಗಳೆಲ್ಲವ ಬರಿದಾಗಿಸಿಕೊಂಡ ನಿನ್ನ ಬದುಕು ನಿಸರ್ಗಕ್ಕೆ ವಿರುದ್ಧವಾದದ್ದು. ಬಾ ನನ್ನ ಭಾವ ನಿನ್ನ ಬಲ ಎರಡೂ ಒಂದಾಗಿಸೋಣ.. ಬಾ ವೀರನೇ ನನ್ನ ಕೈಹಿಡಿದು ಮುನ್ನಡೆಸು.. ಬಾ ಕುರುಕುಲದ ಕಲಿಯೇ ಪ್ರಕೃತಿ ಪುರುಷ ಸಂಮಿಲನದಲ್ಲಿ ಜೀವನದ ಸಾರ್ಥಕತೆ ಇದೆ. ಆಗುವುದಿಲ್ಲವಾ..? ಸಾಧ್ಯವೇ ಇಲ್ಲವಾ? ಮನುಷ್ಯ ಪ್ರೇಮಕ್ಕಿಂತಾ ನಿನ್ನ ಒಣಪ್ರತಿಷ್ಟೆ, ವ್ಯರ್ಥ ಪ್ರತಿಜ್ಞೆಯೇ ನಿನಗೆ ಮುಖ್ಯವಾಯಿತಾ. ಒಲಿದು ಬಂದ ಒಲವಿಗೆ ಬೆನ್ನುತಿರುಗಿಸಿ ಹೊರಟ ನೀನ್ಯಾವ ಸೀಮೆ ಗಂಡಸು..  ಹೋಗು ಹೋಗು.. ಇಲ್ಲಿಂದ ತೊಲಗಿ ಹೋಗು..
(ಮತ್ತೆ ನಗಾರಿ ಸದ್ದು.. ಮತ್ತೆ ರುದ್ರ ನರ್ತನ ಮಾಡುತ್ತಾ ಅಂಬೆ ಕುಸಿದು ಬೀಳುವಳು.. ಮತ್ತೆ ಚೇತರಿಸಿಕೊಂಡು..)

ಪರಿತ್ಯಕ್ತೆ.. ನಾನೀಗೆ ಎಲ್ಲರಿಂದ ಪರಿತ್ಯಕ್ತೆ, ಎಲ್ಲದರಿಂದ ಪರಿತ್ಯಕ್ತೆ.. ನಾನೇನು ಅಪರಾಧ ಮಾಡಿದೆನೆಂದು ನನಗಿಂತಹ ಶಿಕ್ಷೆ. ನನಗಾಗಿ ನಾನು ಬದುಕುತ್ತೇನೆಂಬುದು ತಪ್ಪೆ? ಬದುಕಿನಾದ್ಯಂತ ಜೊತೆ ಬಾಳಬೇಕಾದ ಸಂಗಾತಿಯನ್ನು ನಾನೇ ಆಯ್ಕೆ ಮಾಡಿಕೊಳ್ಳುತ್ತೇನೆಂದು ನಿರ್ಧರಿಸಿದ್ದು ನನ್ನ ತಪ್ಪೇ? ನಾನೇನು ಇವರ ರಾಜ್ಯ ಕೋಶಗಳಲ್ಲಿ ಪಾಲು ಕೇಳಿದ್ದೇನಾ? ರಾಜಕುಮಾರನಂತೆ ರಾಜಕುಮಾರಿಯಾದ ನನಗೂ ರಾಜ್ಯಾಧಿಕಾರ ಕೊಡಬೇಕು ಎಂದು ಹಕ್ಕೋತ್ತಾಂii ಮಾಡಿದ್ದೇನಾ? ನಾನು ಕೇಳಿದ್ದು ಒಂದೇ ಒಂದು. ಅದು ನನ್ನ ಸಂಗಾತಿಯ ಆಯ್ಕೆಯ ಸ್ವಾತಂತ್ರ್ಯ. ನನ್ನ ಬದುಕನ್ನು ನಾನು ರೂಪಿಸಿಕೊಳ್ಳುವ ಸ್ವಾತಂತ್ರ್ಯ. ಗಂಡು  ಹೆಣ್ಣಿನ ನಡುವೆ ನವೀರಾಗಿ ಅರಳುವ ಪ್ರೇಮ ಸಂಬಂಧಗಳ ನಡುವೆ ಈ ಆಳುವ ಶಕ್ತಿಗಳು ಅಳತೆಮೀರಿ ಅಡೆತಡೆಗಳನ್ನು ಒಡ್ಡುತ್ತಿವೆ. ಅಂದರೆ.. ಅಂದರೆ ಶಿಕ್ಷೆ ಆಗಬೇಕಾದದ್ದು ಈಗ ಯಾರಿಗೆ..? 

ಇಚ್ಚೆ ಇರಲಿ ಇಲ್ಲದಿರಲಿ.. ಈ ಹೆತ್ತವರು ಒತ್ತಾಯಿಸಿದವರನ್ನು ಇಚ್ಚೆಗೆ ವಿರುದ್ಧವಾಗಿ ವಿವಾಹವಾಗಿ ಆಜನ್ಮ ಪರ್ಯಂತ ಪತಿ ಹಾಗೂ ಆತನ ಪರಿವಾರದ ಆದೇಶಗಳನ್ನು ಪ್ರಶ್ನಿಸದೇ ಚಾಚೂ ತಪ್ಪದೇ ಅನುಸರಿಸಿಕೊಂಡು ನಾಲ್ಕು ಗೋಡೆಗಳ ನಡುವೆ ಬದುಕನ್ನು ಸವೆಸಿದ ಸ್ತ್ರೀಯರಿಗೆ ಪತಿವ್ರತೆ,  ಆದರ್ಶ ಪತ್ನಿ, ಸದ್ಗುಣೆ, ಸುಶೀಲೆ, ಶೀಲವಂತೆ.. ಎನ್ನುವ ಭ್ರಮೆಯ ಬಿರುದಾವಳಿಗಳನ್ನು ಈ ಗಂಡಸರ ಲೋಕ ಕೊಟ್ಟು, ಹೆಣ್ಣು ಕುಲವನ್ನೇ ಗುಲಾಮರನ್ನಾಗಿಸಿಕೊಳ್ಳುವುದರ ಹಿಂದೆ ಪುರುಷಪ್ರಧಾನ ವ್ಯವಸ್ಥೆಯ ಶಡ್ಯಂತ್ರವಿದೆ. ಸ್ವಾತಂತ್ರ್ಯ ಸ್ವಾಭಿಮಾನ ಎಂದು ನನ್ನಂತಹ ಯಾವುದಾದರೂ ಸ್ತ್ರೀ ಈ ಗಂಡಸರು ಹಾಕಿದ ಗೆರೆಯನ್ನು ಸ್ವಲ್ಪ ದಾಟಿ ಧಿಕ್ಕರಿಸಿದಳೋ, ಆಗ ಅವಳಿಗೆ ಕುಲಟೆ, ಕುಲಕಂಟಕಿ, ಜಾರಿಣಿ, ಸ್ವೇಚ್ಚಾಚಾರಿ, ಅವಿಧೇಯಳು ಎಂದೆಲ್ಲಾ ಹತ್ತು ಹಲವಾರು ಗುಣವಿಶೇಷಣಗಳನ್ನು ಬಳಸಿ ನಿಂದಿಸಿ ತುಚ್ಚೀಕರಿಸಿ ಹೆಣ್ಣಿನ ವ್ಯಕ್ತಿತ್ವವನ್ನೇ ಸರ್ವನಾಶಗೊಳಿಸುವ ಹುನ್ನಾರಗಳ ಹಿಂದೆ ಸ್ತ್ರೀಯರನ್ನು ಸಂಪ್ರದಾಯದ ಬಲೆಯೊಳಗೆ ಕಟ್ಟಿಹಾಕುವ ಗಂಡುಕುಲದ ಕುತಂತ್ರಗಾರಿಕೆ ಇದೆ.

ಜಾಣತನ ಮತ್ತು ನಯವಂಚನೆಯ ಮಾತುಗಳಿಂದ ಮಹಿಳೆಯರನ್ನು ಮೋಡಿಗೊಳಗಾಗಿಸುತ್ತಲೇ ಬಂದಿದೆ ಈ ಗಂಡು ಜಗತ್ತು. ಇದನ್ನು ಸ್ವಾಭಿಮಾನಿಯಾದ ಪ್ರತಿಯೊಬ್ಬ ಸ್ತ್ರೀ ದಿಕ್ಕರಿಸಲೇಬೇಕು. ಲಿಂಗತಾರತಮ್ಯದ ವಿರುದ್ಧ ಪ್ರತಿಭಟಿಸಲೇಬೇಕು. ಇದು ಇಂದಿಗೆ ಆಗದೇ ಇರಬಹುದು. ಇಂದಿಲ್ಲಾ ನಾಳೆ.. ನಾಳೆ ಇಲ್ಲವಾದರೆ ಮುಂದೆಂದೋ ಕಾಲದ ನಡೆಯಲ್ಲಿ ಎಚ್ಚೆತ್ತುಕೊಂಡ ನನ್ನ ಸ್ತ್ರೀಕುಲ ಈ ಸನಾತನ ಸಂಪ್ರದಾಯದ ಸಂಕೋಲೆಗಳನ್ನು ಬೇರು ಸಮೇತ ಕಿತ್ತುಹಾಕುತ್ತದೆ. ಎಲ್ಲಿ ನೋಡಿದಲ್ಲೆಲ್ಲಾ ತಮ್ಮ ಸ್ವಾಭಿಮಾನಿ ಬದುಕಿಗಾಗಿ ನೂರಾರು ಸಾವಿರಾರು ಲಕ್ಷಾಂತರ ಕೋಟ್ಯಾಂತರ ಅಂಬೆಯರು ಸನಾತನ ವೃಕ್ಷದ ರೆಂಬೆಕೊಂಬೆಗಳನ್ನು ಕತ್ತರಿಸಿ ಹಾಕುತ್ತಾರೆ. ಹೆಣ್ಣುಗಳನ್ನು ಶೋಷಿಸುವ ಗಂಡಸರು ಸ್ತ್ರೀಯರಿಗೆ ಸಮಾನತೆ, ಸ್ವಾತಂತ್ರ್ಯ ಹಾಗೂ ಗೌರವ ಕೊಟ್ಟು ಸಹಬಾಳ್ವೆ ಮಾಡಬೇಕು, ಇಲ್ಲವೇ ಸ್ತ್ರೀಯರ ಬಂಡಾಯಕ್ಕೆ ಬಲಿಯಾಗಿ ಸರ್ವನಾಶವಾಗಬೇಕು. ಅದುವೇ ಆ ಜಗದಂಬೆಯ ಶಕ್ತಿ, ಆಗಲೇ ಈ ಅಂಬೆಗೆ ಮುಕ್ತಿ.

ಇಂದಿಲ್ಲಾ ನಾಳೆ ಮಹಿಳೆಯರು ಪುರುಷರು ಹಾಕಿದ ಸಾಂಪ್ರದಾಯಿಕ ಸಂಕೋಲೆಗಳಿಂದ ಎಚ್ಚೆತ್ತುಕೊಳ್ಳುತ್ತಾರೆ. ತಮ್ಮ ಸ್ವಾತಂತ್ರ್ಯ ಸ್ವಾಭಿಮಾನ ಘನತೆ ಗೌರವಕ್ಕಾಗಿ ಸಿಡಿದೇಳುತ್ತಾರೆ.  ಆಗ ಈ ದುರಹಂಕಾರಿ ಪುರುಷ ಪುಂಗವರು ಪಶ್ಚಾತ್ತಾಪ ಪಡುವುದರಲ್ಲಿ ಸಂದೇಹವೇ ಇಲ್ಲಾ.  ಹೆಣ್ಣು ನಿರಂತರ ಹರಿಯುವ ನದಿ..  ಸ್ವಚ್ಚಂದವಾಗಿ ತನ್ನಿಚ್ಚೆಯಂತೆ ಹರಿವ ನದಿಯನ್ನು ಎಷ್ಟು ಕಾಲ ಬಂಧಿಸಿಡಲು ಸಾಧ್ಯ? ಒಂದಿಲ್ಲ ಒಂದು ದಿನ ಅಡ್ಡವಾಗಿ ಕಟ್ಟಿದ ಎಲ್ಲ ಕಟ್ಟೆ.. ಆಣೆಕಟ್ಟೆಗಳು ನದಿಯ ಆಕ್ರೋಶಕ್ಕೆ ಪುಡಿಪುಡಿಯಾಗಲೇಬೇಕು. ಯಾವಾಗಲೂ ಕಾಲ ಹೀಗೆಯೇ ಇರುವುದಿಲ್ಲ. ಅಗಣಿತ ಅಂಬೆಯರು ಮುಂದಿನ ಭವಿಷ್ಯದ ಕಾಲಮಾನದಲ್ಲಿ ಹುಟ್ಟಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾರೆ. ತಮ್ಮ ಅಸ್ಮಿತೆಗಾಗಿ ಅಂಬೆಯ ಹೋರಾಟವನ್ನು ಮುಂದುವರೆಸುತ್ತಾರೆ. ನಾನು ಕೇವಲ ಸ್ತ್ರೀಕುಲದ ಸ್ವಾಭಿಮಾನದ ಪ್ರತೀಕ, ಮಹಿಳೆಯರ ವಿಮೋಚನೆಯ ಸಂಕೇತ. ನಾನು ಹಚ್ಚಿದ ಸ್ವಾಭಿಮಾನ ಸ್ವಾತಂತ್ರ್ಯದ ಕಿಚ್ಚು ಬರುವ ಭವಿಷ್ಯದ ದಿನಗಳಲ್ಲಿ ಬೆಂಕಿಯಾಗಿ ಉರಿಯುತ್ತದೆ. ಆ ದಗದಗಿಸುವ ಉರಿಯಲ್ಲಿ ಈ ಪುರುಷಾಧಿಕಾರ ಸುಟ್ಟು ಬೂದಿಯಾಗುತ್ತದೆ. ಪುರುಷಹಂಕಾರ ಶಿಥಿಲಗೊಂಡು ಛಿದ್ರವಾಗುತ್ತದೆ. ಇದು ಸತ್ಯ, ಇದೇ ಸತ್ಯ.. ನಮಗೆ ಲಿಂಗಸಮಾನತೆ ಬೇಕಿದೆ. ಎಷ್ಟೇ ಶತಮಾನವಾದರೂ ಸರಿ ಅಲ್ಲಿವರೆಗೂ ಕಾಯುತ್ತೇವೆ.. ನಮಗೂ ಒಂದು ಕಾಲ ಬರುವವರೆಗೂ ಅಸ್ಮಿತೆಗಾಗಿ ನಿರಂತರವಾಗಿ ಹೋರಾಡುತ್ತೇವೆ. ಹೋರಾಟವೇ ಹೆಣ್ಣಿನ ಬದುಕು.. ಇಂದಿಲ್ಲಾ ನಾಳೆ ಕಾಣಲೇಬೇಕು ಸ್ವಾಭಿಮಾನ ಸ್ವಾತಂತ್ರ್ಯದ ಬೆಳಕು.. ಇದು ಈ ಅಂಬೆ ಆ ಜಗದಂಬೆಯ ಸಂಕಲ್ಪ.. ಸಮಾನತೆಯೊಂದೇ ಮನುಕುಲದ ಕಾಯಕಲ್ಪ..
  
ಈ ಜಗದಗಲ ತಮ್ಮ ಸ್ವಾರ್ಥ ಪ್ರತಿಷ್ಟೆಗಾಗಿ ಹೆಣ್ಣುಮಕ್ಕಳ ಭವಿಷ್ಯವನ್ನೇ ಬಲಿಕೊಡುವ ಕಾಶೀರಾಜನಂತವರು ಹಲವರಿದ್ದಾರೆ, ಯಾವುದೋ ನೆಪದಲ್ಲಿ ಕೊಟ್ಟ ಮಾತನ್ನು ಮೀರಿ ನಂಬಿದವಳ ವಿಶ್ವಾಸಕ್ಕೆ ದ್ರೋಹ ಬಗೆಯುವ ಸಾಲ್ವನಂತವರೋ ಹೆಜ್ಜೆಹೆಜ್ಜೆಗೂ ಸಿಕ್ಕುತ್ತಾರೆ. ಹೆಣ್ಣನ್ನು ಗೆದ್ದು  ಎಳೆತಂದು ಪಳಗಿಸುವ ಪ್ರಾಣಿಯೆಂದು ತಿಳಿದ ಭೀಷ್ಮನಂತಹ ಪುರುಷ ಪ್ರತಿಷ್ಠೆಯ ಪಿಂಡಗಳು ಬ್ರಹ್ಮಾಂಡದ ತುಂಬಾ ತುಂಬಿದ್ದಾರೆ. ಇಂತವರೆಲ್ಲರ ನಡುವೆ ಸ್ತ್ರೀ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳುವುದಾದರೂ ಹೇಗೆ? ತನ್ನಿಚ್ಚೆ ಬಂದವರ ಜೊತೆ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ? ಇದೊಂದು ಸ್ವಪ್ರತಿಷ್ಟೆಯ ಗಂಡಸರು ಹೆಣೆದ ಚಕ್ರವ್ಯೂಹ. ಈ ವ್ಯೂಹವನ್ನು ಬೇಧಿಸುವಲ್ಲಿ ಈ ಅಂಬೆ ಸೋತಿರಬಹುದು. ಆದರೆ.. ಕಾಲನ ಕೋಟೆಯಲ್ಲಿ ಬರೀ ಕತ್ತಲೆಯಿಲ್ಲ. ಹುಡುಕಿದರೆ ಬೆಳಕಿನ ಕಿರಣ ಮೂಡುವುದರಲ್ಲಿ ಸಂದೇಹವಿಲ್ಲ. ನಾವು ಶತಮಾನಗಳಿಂದ ಅಂಧಕಾರದ ಕೋಣೆಯಲ್ಲಿ ಸಂಪ್ರದಾಯದ ಕಟ್ಟಲೆಗಳ ಬಲೆಯಲ್ಲಿ ಬಂಧಿಸಲ್ಪಟ್ಟ ಸ್ತ್ರೀಯರು. ಇಂದಲ್ಲಾ ನಾಳೆ ಸಿಡಿದೇಳುತ್ತೇವೆ. ಸ್ತ್ರೀಕುಲದ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕಾಗಿ ಮಾನಪ್ರಾಣ ಲೆಕ್ಕಿಸದೇ ಹೋರಾಡುತ್ತೇವೆ.

ಈ ಬಂಡಾಯದ ಆರಂಭ ಈಗ ಈ ಅಂಬೆಯಿಂದ ಶುರುವಾಗಿದೆ. ಅಂಬೆ ಹಚ್ಚಿದ ಸ್ವಾವಲಂಬನೆಯ ಕಿಡಿಯನ್ನು ಬೆಂಕಿಯಾಗಿಸಿ ಮೈಮನಗಳಿಗೆ ಸುತ್ತಲಾದ ಸಂಕೋಲೆಗಳನ್ನು ಸುಟ್ಟು ಹಾಕಿ ಜಗಕೆ ಸಮಾನತೆಯ ಬೆಳಕಾಗುವ ಜವಾಬ್ದಾರಿ ಮನುಕುಲದ ಸೃಷ್ಟಿಕರ್ತರಾದ ಮಾತೆಯರ ಮೇಲಿದೆ. ಬಿರುಗಾಳಿಯ ದಾಳಿಯ ವಿರುದ್ಧ ಹೋರಾಡುತ್ತಲೇ ನನ್ನನ್ನು ಸುಟ್ಟುಕೊಂಡು ಮುಂದಿನ ಪೀಳಿಗೆಗೆ ಸ್ವಾಭಿಮಾನದ ಬೆಳಕು ಕೊಡುವ ನನ್ನ ಪ್ರಯತ್ನ ಇಲ್ಲಿಗೆ ಮುಗಿಯಿತು. ಎಣ್ಣೆ ಮುಗಿದಿದೆ, ಬತ್ತಿ ತೀರಿದೆ, ಬೆಳಕು ಮಂಕಾಗುತಿದೆ. (ಹಣತೆಯೊಂದನ್ನು ತೆಗೆದುಕೊಂಡು ವೇದಿಕೆಯ ಮುಂಭಾಗದಲ್ಲಿರುವ ಹಲವಾರು ಹಣತೆಯನ್ನು ಅಂಬೆ ಬೆಳಗುತ್ತಾ..) ಸುತ್ತಲೂ ಮುತ್ತಿರುವ ಕತ್ತಲೆ ಕಳೆಯುವ ಕಾಯಕದಲ್ಲಿ ಉರಿದುರಿದು ಆರಿಹೋಗುವ ಮುನ್ನ ಇನ್ನೊಂದಿಷ್ಟು ಸ್ವಾಭಿಮಾನಿ ಹಣತೆಗಳನ್ನು ಬೆಳಗುತ್ತೇನೆ. ಇನ್ನೇನಿದ್ದರೂ ನನ್ನ ಆಶಯದ ಬೆಳಕನ್ನು ಜಗದಗಲ ಬೆಳಗುವ ಹೊಣೆಗಾರಿಕೆಯನ್ನು ನಿಮಗೆ ವರ್ಗಾಯಿಸುತ್ತಿರುವೆ. ನಾನು ಸೋತಿದ್ದೇನೆ ಆದರೆ ಸತ್ತಿಲ್ಲಾ. ಸ್ತ್ರೀಕುಲ ಇರುವವರೆಗೂ ಪ್ರತಿಭಟನೆಯ ರೂಪದಲ್ಲಿ ಅವರ ಮನದಲ್ಲಿದ್ದೇ ಇರುತ್ತೇನೆ. ನಾನಿನ್ನು ಬರುತ್ತೇನೆ..

ಅಮ್ಮಾ ಜಗದಂಬೆ.. ಅಂಬಾಭವಾನಿ ನನ್ನ ತಂದೆಗೆ ರಾಜಕಾರಣ, ಸಾಲ್ವನಿಗೆ ಅವಮಾನದ ಪ್ರತಿಕಾರ, ಭೀಷ್ಮನಿಗೆ ಪ್ರತಿಜ್ಞೆ.. ಈ ಪುರುಷರ ಚದುರಂಗದಾಟದ ಕಾಯಿ ನಾನು. ನನ್ನಿಚ್ಚೆಯಂತೆ ಬದುಕುವ ಸ್ವಾತಂತ್ರ್ಯವೂ ನನಗಿಲ್ಲಾ ತಾಯಿ. ಇಲ್ಲಿ ಹೀಗೆ ಕಳಂಕಿತಳಾಗಿ, ತುಳಿತಕ್ಕೊಳಗಾಗಿ, ಗುಲಾಮಳಾಗಿ ಬದುಕುವ ಆಸೆ ನನಗಿಲ್ಲಾ ಮಾತೆ.. ನಿನ್ನ ಪಾದಕ್ಕೆ ಸೇರಿಸಿಕೋ.. ನಾನಿನ್ನು ನಿನ್ನ ಮಡಿಲು ಸೇರುತ್ತೇನೆ. ಕಾಲಕಾಲಾಂತರದಲ್ಲಿ ಮತ್ತೆ ಮತ್ತೆ ಹುಟ್ಟಿ ಬರುತ್ತೇನೆ... ಸ್ತ್ರೀಯರ ಸ್ವಾಭಿಮಾನದ ದ್ವನಿಯಾಗಿ ಆವರಿಸುತ್ತೇನೆ. ಅವತರಿಸುತ್ತೇನೆ.. ಅ..ವ..ತ..ರಿ..ಸು..ತ್ತೇ..ನೆ..  (ಅಂಬೆಯ ಕೈಯಲ್ಲಿರುವ ದೀಪ ಆರುತ್ತದೆ. ವೇದಿಕೆಯ ಮೇಲೆ ಕತ್ತಲಾವರಿಸುತ್ತದೆ. ವೇದಿಕೆಯ ಮುಂದಿನ ಹಣತೆಗಳು ಮಾತ್ರ ಬೆಳಗುತ್ತಿರುತ್ತವೆ. ಇಲ್ಲಿಗೆ ನಾಟಕ ಅಂತ್ಯವಾಗುತ್ತದೆ. ಹಿನ್ನೆಲೆಯಲ್ಲಿ ಹಾಡು)

*        *        *        *        *        *        *

  -ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ