ಗುರುವಾರ, ಫೆಬ್ರವರಿ 7, 2019

ಕೊಟ್ಟ ಕುದುರೆಯ ನೆಟ್ಟಗೆ ಏರಲಿ; ಅಕಾಡೆಮಿಕ್ ಕೆಲಸ ನಿರಂತರವಾಗಲಿ :






ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಬರೆಯುವವರ ಸಾಹಿತ್ಯ ಅಕಾಡೆಮಿಗೆ ಒಂದು ಕೋಟಿ ವಾರ್ಷಿಕ ಅನುದಾನ ಸಿಗುತ್ತದೆ. ಊರೂರು ಸುತ್ತಿ ರಾತ್ರಿ ಹಗಲು ಕೆಲಸ ಮಾಡುವ ನಾಟಕ ಅಕಾಡೆಮಿಗೂ ಒಂದು ಕೋಟಿ ಅನುದಾನವನ್ನು ರಾಜ್ಯ ಸರಕಾರ ನೀಡುತ್ತಿದೆ. ಸರಕಾರ ಅನುದಾನವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಹಾಲಿ ಅಧ್ಯಕ್ಷರಾದ ಜೆ.ಲೊಕೇಶರವರು ಹೇಳಿದ್ದು ಪ್ರಜಾವಾಣಿಯಾದಿಯಾಗಿ ಒಂದೆರಡು ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗಿ ಸಂಚಲನವನ್ನು ಸೃಷ್ಟಿಸಿತು..

2019 ಫೆಬ್ರುವರಿ 12ರಂದು ಉಡುಪಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿದ ಹಿನ್ನೆಲೆಯಲ್ಲಿ ಜೆ.ಲೊಕೇಶರವರು ಪೂರ್ವಭಾವಿಯಾಗಿ ಫೆ.6ರಂದು ಉಡುಪಿಯಲ್ಲಿ ಪ್ರೆಸ್‌ಮೀಟ್ ಕರೆದಿದ್ದರು. ಪ್ರಸ್ತುತ ನಾಟಕ ಅಕಾಡೆಮಿಯ ಸಾಧನೆಯ ಕುರಿತು ಮಾತಾಡುತ್ತಲೇ ಮೇಲೆ ತಿಳಿಸಿದ ವಿಷಯವನ್ನೂ ಹೇಳಿದರು. ಅವರು ಹೇಳಿದ ಎಲ್ಲವನ್ನೂ ಬಿಟ್ಟು ಈ ವಿವಾದಾತ್ಮಕ ಹೇಳಿಕೆಯನ್ನೇ ಹೈಲೈಟ್ ಮಾಡಿದ ಪ್ರಜಾವಾಣಿಯು ತನ್ನ ಸ್ಟೇಟ್ ಎಡಿಶನ್ನಿನಲ್ಲಿ ಪ್ರಕಟಿಸಿಬಿಟ್ಟಿತು. ಇತ್ತ ರಂಗಭೂಮಿಯವರು ಹಾಗೂ ಅತ್ತ ಸಾಹಿತ್ಯವಲಯದವರು ಈ ವರದಿಯನ್ನು ಓದಿ ವಿಚಲಿತರಾದದ್ದಂತೂ ಸುಳ್ಳಲ್ಲ.

ಹಿರಿಯರಾದ ವಿಜಯಮ್ಮರಾದಿಯಾಗಿ ಕೆಲವರು ವಾಟ್ಸಾಪ್ ಗ್ರುಪ್‌ನಲ್ಲಿ ತಮ್ಮ ಅಸಮಾಧಾನವನ್ನು ತೋಡಿಕೊಂಡರು. ನಾನೂ ಸಹ ಬೆಳ್ಳಂಬೆಳಿಗ್ಗೆ ಈ ವರದಿ ಓದಿ ತಲ್ಲಣಗೊಂಡೆ. ಮಾನ್ಯ ಅಧ್ಯಕ್ಷರೆ, ಹವಾನಿಯಂತ್ರಣ ಕೊಣೆಯಲ್ಲಿ ಕುಳಿತು ಬರೆಯುವವರ ಸಾಹಿತ್ಯ ಅಕಾಡೆಮಿಗೆ ಒಂದು ಕೋಟಿ  ಅನುದಾನ ಕೊಡಲಾಗುತ್ತದೆ.. ಎಂದು ಪ್ರೆಸ್‌ಮೀಟಲ್ಲಿ ನೀವು ಹೇಳಿದ್ದೀರೆಂದು ಪ್ರಜಾವಾಣಿಯಲ್ಲಿ ವರದಿಯಾಗಿದೆ. ನಾಟಕ ಅಕಾಡೆಮಿಗೆ ಅನುದಾನ ಹೆಚ್ಚಿಸಿ ಎಂದು ನೀವು ಒತ್ತಾಯಿಸುವುದರಲ್ಲಿ ಒಂದು ಅರ್ಥವಿದೆ. ಆದರೆ ಸಾಹಿತ್ಯ ಅಕಾಡೆಮಿಯನ್ನು ವಿನಾಕಾರಣ ಎಳೆದುತಂದು ಹೋಲಿಸಿಕೊಂಡಿದ್ದು ನಿಮ್ಮ ತಪ್ಪು ನಿರ್ಧಾರವಾಗಿದೆ. ಬೆರಳೆಣಿಕೆಯಷ್ಟು ಸಾಹಿತಿಗಳು ಎಸಿ ರೂಮಿನಲ್ಲಿ ಕುಳಿತು ಬರೆದಿರಬಹುದು. ಆದರೆ. ಅಸಂಖ್ಯಾತ ಯುವ ಸಾಹಿತಿ ಲೇಖಕರು ಈಗಲೂ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಒಂದೇ ಒಂದು ಪುಸ್ತಕವನ್ನೂ ಪ್ರಕಟಿಸಲಾಗದಂತಹ ಆರ್ಥಿಕ ಅಸಹಾಯಕತೆಯಲ್ಲಿದ್ದಾರೆ. ಹಲವಾರು ಯುವ ಬರಹಗಾರರು ಸಾಹಿತ್ಯ ರಚನೆ ಕುರಿತು ಸೂಕ್ತ ಮಾರ್ಗದರ್ಶನವಿಲ್ಲದೇ  ಅನಿಸಿದ್ದನ್ನು ಬರೆದುಕೊಳ್ಳುತ್ತಿದ್ದಾರೆ. ಕಲೆಯ ಹಾಗೆಯೇ ಸಾಹಿತ್ಯವೂ ಕೂಡಾ ಜನಸಮುದಾಯದ ಎಚ್ಚರದ ದ್ವನಿಯಾಗಿ ಕೆಲಸ ಮಾಡಬೇಕಾಗಿದೆ. ಸಾಹಿತ್ಯ ಅಕಾಡೆಮಿಗೂ ಇನ್ನಷ್ಟು ಸರಕಾರಿ ಅನುದಾನ ಸಿಗಲಿ. ಅದೇ ರೀತಿ ನಾಟಕ ಅಕಾಡೆಮಿಗೂ ಬೇಕಾದಷ್ಟು ಅನುದಾನ ಬರಲಿ. ಕಲೆ ಹಾಗೂ ಸಾಹಿತ್ಯಗಳು ಜನಸಾಮಾನ್ಯರ ಗಟ್ಟಿ ದ್ವನಿಯಾಗಿ ಬೆಳೆಯುತ್ತಾ ಹೋಗಲಿ ಎನ್ನುವುದು ನಿಮ್ಮ ಆಶಯವಾಗಿರಲಿ ಎಂದು ಜೆ.ಲೊಕೇಶರವರಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿದೆ.

ಮಾನ್ಯ ಅಧ್ಯಕ್ಷರು ತಮ್ಮದೇ ಆದ ರೀತಿಯಲ್ಲಿ ಸಮರ್ಥನೆಗಳನ್ನು ಕೊಟ್ಟರು. ವಾಟ್ಸಾಪ್ ಗ್ರುಪ್‌ನಲ್ಲೂ ಸಹ ನಾನು ಹಾಗೆ ಹೇಳಿಯೇ ಇಲ್ಲಾ, ಪತ್ರಕರ್ತರು ತಿರುಚಿ ಬರೆದಿದ್ದಾರೆ ಎಂದು ರಾಜಕಾರಣಿಗಳ ಹಾಗೆ ಅವಲತ್ತುಕೊಂಡರು. ಇವರು ಏನು ಹೇಳಿದರೋ.. ಪತ್ರಕರ್ತರು ಏನು ಕೇಳಿದರೋ ಗೊತ್ತಿಲ್ಲಾ. ಆದರೆ... ಅಧ್ಯಕ್ಷರು ಹೀಗೆಂದರು ಎಂದು ವರದಿ ಆಗಿದ್ದಂತೂ ಸುಳ್ಳಲ್ಲಾ. ಒಂದೇ ಪತ್ರಿಕೆಯಲ್ಲಿ ವರದಿ ಆಗಿದ್ದರೆ ವರದಿಗಾರನ ತಪ್ಪು ಎಂದು ಹೇಳಬಹುದಾಗಿತ್ತೇನೋ. ಆದರೆ ಎರಡು ಮೂರು ಪತ್ರಿಕೆಗಳಲ್ಲೂ ಇದೇ ರೀತಿಯ ಹೇಳಿಕೆ ಪ್ರಕಟಗೊಂಡಿದ್ದರಿಂದ ಅಧ್ಯಕ್ಷರ ಸಮರ್ಥನೆಯ ಬಗ್ಗೆ ಅನುಮಾನ ಮೂಡುವುದು ಖಚಿತ.



ಅಕಾಡೆಮಿ ಅಧ್ಯಕ್ಷರು ಈ ಮಾತುಗಳನ್ನು ಉದ್ದೇಶಪೂರ್ವಕವಾಗಿ ಹೇಳಿದ್ದಾರೆಂಬುದನ್ನು ನಾ ನಂಬಲಾರೆ. ಮಾತಿನ ಓಘದಲ್ಲಿ ಹಾರಿಕೆ ಹೇಳಿಕೆ ಕೊಟ್ಟಿದ್ದಾರೆ. ಎಲ್ಲಾ ಬಿಟ್ಟು ಪತ್ರಕರ್ತರು ಅದನ್ನೇ ದೊಡ್ಡ ಇಸ್ಯೂ ಮಾಡುತ್ತಾರೆಂಬ ಕಲ್ಪನೆಯೂ ಅವರಿಗಿರಲಿಲ್ಲ. ಆಗಿದ್ದು ಆಗಿ ಹೋಯಿತು. ಆ ನಂತರ ಡ್ಯಾಮೇಜ್ ಕಂಟ್ರೋಲಿಗೆ ಪ್ರಯತ್ನಿಸಿದರಾದರೂ ಅದು ಪ್ರಯೋಜನವಾಗಲಿಲ್ಲ. ಆದರೆ.. ಅವರ ಈ ಹೇಳಿಕೆಯಿಂದಾಗಿ ಒಂದಿಷ್ಟು ಚರ್ಚೆಯಾದರೂ ಶುರುವಾಗಿದ್ದು ಒಳ್ಳೆಯದು. ಅದಕ್ಕೆ ಪೂರಕವಾಗಿ ಕೆಲವು ಸಂಗತಿಗಳನ್ನು ಇಲ್ಲಿ ಉಲ್ಲೇಖಿಸುವ ಪ್ರಯತ್ನ ಮಾಡುತ್ತಿರುವೆ.

1.        ಎಸಿ ರೂಮಲ್ಲಿ ಕುಳಿತು ಬರೆಯುವ ಅದೆಷ್ಟು ಸಾಹಿತಿಗಳು ಈಗಲೂ ಇರಬಹುದು. ಇಷ್ಟಕ್ಕೂ ಎಸಿ ರೂಮು ಅನ್ನೋದು ಈಗ ಮೊದಲಿನಂತೆ ದೊಡ್ಡ ಐಶಾರಾಮಿ ಸವಲತ್ತಾಗಿಯೂ ಉಳಿದಿಲ್ಲ. ಚಿಕ್ಕಪುಟ್ಟ ಕಛೇರಿಗಳಲ್ಲೂ ಎಸಿ ಗಳು ಇದ್ದೇ ಇರುತ್ತವೆ. ಹಾಗೂ ಎಸಿ ರೂಮುಗಳಲ್ಲಿ ಕೂತು ಸಾಹಿತ್ಯ ರಚನೆ ಮಾಡುವುದು ಅಪರಾಧವೇನೂ ಅಲ್ಲವೇ ಅಲ್ಲಾ. ಯಾರು ಏನು ಬರೆದಿದ್ದಾರೆ ಅನ್ನುವುದು ಮುಖ್ಯವೇ ಹೊರತು ಎಲ್ಲಿ ಕುಳಿತು ಬರೆದಿದ್ದಾರೆನ್ನುವುದಂತೂ ಅಲ್ಲವೇ ಅಲ್ಲಾ.

2.     ನಾಟಕ ಅಕಾಡೆಮಿಯ ಕಾರ್ಯಕ್ಷೇತ್ರ ಬಹುದೊಡ್ಡದಾಗಿದೆ. ರಾಜ್ಯಾದ್ಯಂತ ರಂಗಚಟುವಟಿಕೆಗಳನ್ನು ಉತ್ತೇಜಿಸಲು ಈಗ ಕೊಡುತ್ತಿರುವ ಅನುದಾನ ಸಾಲದು. ಅದಕ್ಕಾಗಿ ಇನ್ನೂ ಎರಡು ಪಟ್ಟು ಇಲ್ಲವೇ ಮೂರು ಪಟ್ಟು ಅನುದಾನವನ್ನು ಸರಕಾರ ಕಲೆಯ ಉಳಿವಿಗಾಗಿ ಕೊಡಬೇಕು ಎಂದು ಸರಕಾರಿ ವ್ಯವಸ್ಥೆಯ ಭಾಗವೇ ಆಗಿರುವ ನಾಟಕ ಅಕಾಡೆಮಿಯ ಅಧ್ಯಕ್ಷರು ಒತ್ತಾಯಿಸಿದ್ದರೆ ಅದಕ್ಕೊಂದು ತೂಕ ಬರುತ್ತಿತ್ತು. ಆದರೆ.. ಸಾಹಿತ್ಯ ಅಕಾಡೆಮಿಗೆ ಕೊಡುವಷ್ಟೇ ಅನುದಾನವನ್ನು ನಾಟಕ ಅಕಾಡೆಮಿಗೆ ಕೊಡುವುದು ಸೂಕ್ತವಲ್ಲ ಎನ್ನುವ ರೀತಿಯ ಆಕ್ಷೇಪಣೆಗೆ ಆಕ್ಷೇಪಣೆ ಶುರುವಾಗಿದ್ದು.

3.       ಇಷ್ಟಕ್ಕೂ ರಂಗಕಲೆ ಮತ್ತು ಸಾಹಿತ್ಯ ಇವೆರಡಕ್ಕೂ ಅವಿನಾಭಾವ ಸಂಬಂಧಗಳಿವೆ. ಸಾಹಿತಿಗಳು ರಂಗಭೂಮಿಗೆ ಅನೇಕಾನೇಕ ರೀತಿಯಲ್ಲಿ ಕೊಡುಗೆ ಕೊಟ್ಟಿದ್ದಾರೆ. ರಂಗಭೂಮಿಯವರೂ ಸಹ ಸಾಹಿತ್ಯ ಕೃತಿಗಳನ್ನು ರಂಗಭೂಮಿಗೆ ಅಳವಡಿಸಿ ಜನರಿಗೆ ಮುಟ್ಟಿಸಿದ್ದಾರೆ. ಇಲ್ಲಿ ಯಾರಿಗೆ ಎಷ್ಟು ಅನುದಾನ ಸರಕಾರದಿಂದ ಬರುತ್ತದೆ ಎನ್ನುವುದು ಮುಖ್ಯವಲ್ಲಾ. ಬಂದ ಅನುದಾನವನ್ನು ಎಷ್ಟು ಸಮರ್ಥವಾಗಿ ಪೋಲಾಗದಂತೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎನ್ನುವುದೇ ಮುಖ್ಯ.

4.       ಹಾಗೆ ನೋಡಿದರೆ.. ಸಾಹಿತ್ಯ ಕ್ಷೇತ್ರಕ್ಕೆ ಹೋಲಿಸಿದರೆ ರಂಗಭೂಮಿಯ ವ್ಯಾಪ್ತಿ ಚಿಕ್ಕದೇ ಆಗಿದೆ. ಈಗ ಲಕ್ಷಾಂತರ ಸಂಖ್ಯೆಯಲ್ಲಿ ಅನೇಕ ರೀತಿಯ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡವರು ಕಾರ್ನಾಟಕದಲ್ಲಿದ್ದಾರೆ. ಆದರೆ.. ಕರ್ನಾಟಕವನ್ನೆಲ್ಲಾ ಸುತ್ತಿ ಹುಡುಕಿದರೂ ರಂಗಭೂಮಿಯಲ್ಲಿ ಆಕ್ಟೀವ್ ಆಗಿರುವ ಸಾವಿರ ಕಲಾವಿದರನ್ನು ಹುಡುಕಲೂ ಸಾಧ್ಯವಿಲ್ಲ. ಅಂದರೆ ರಂಗಕರ್ಮಿ ಕಲಾವಿದರುಗಳು ಅಲ್ಪಸಂಖ್ಯಾರಾಗಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು ಬಹುಸಂಖ್ಯಾತರಾಗಿದ್ದಾರೆ. ಅಕಾಡೆಮಿಗೆ ಅನುದಾನವನ್ನು ಆಯಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರ ಸಂಖ್ಯೆಗನುಗುಣವಾಗಿ ಹಂಚಿಕೆ ಮಾಡಿದರೆ ದೊಡ್ಡ ಪಾಲು ಸಾಹಿತ್ಯ ಅಕಾಡೆಮಿಗೆ ಸೇರುತ್ತದೆ. ಎನ್ನುವುದು ಸತ್ಯ.

5.     ಇಲ್ಲಾ.. ಊರೂರು ಸುತ್ತಿ ರಾತ್ರಿ ಹಗಲು ಕೆಲಸ ಮಾಡುವ ನಾಟಕ ಅಕಾಡೆಮಿಗೂ ಒಂದೇ ಕೋಟಿ ಅನುದಾನವನ್ನು ರಾಜ್ಯ ಸರಕಾರ ನೀಡುತ್ತಿದೆಯಲ್ಲಾ ಎಂದು ಅಕಾಡೆಮಿಯ ಅಧ್ಯಕ್ಷರು ತಮ್ಮ ಅಸಮಾಧಾನವನ್ನು ತೊಡಿಕೊಂಡಿದ್ದಾರೆ. ಆದರೆ.. ಊರೂರು ಸುತ್ತಿ ನಾಟಕ ಮಾಡುವವರು  ಅಕಾಡೆಮಿಯವರಂತೂ ಅಲ್ಲವೇ ಅಲ್ಲಾ. ಅಂತಹುದಕ್ಕೆ ಅಕಾಡೆಮಿಯು ಆರ್ಥಿಕ ಸಹಕಾರವನ್ನೂ ಕೊಡುವುದಿಲ್ಲಾ. ರೆಪರ್ಟರಿಗಳು ಹಾಗೂ ಕೆಲವು ರಂಗತಂಡಗಳು ಹೆಚ್ಚಾಗಿ ಆ ಕೆಲಸವನ್ನು ಮಾಡುತ್ತವೆ ಹಾಗೂ ಅದಕ್ಕಾಗಿ ಅವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೆಚ್ಚುವರಿ  ವಾರ್ಷಿಕ ಅನುದಾನವನ್ನೂ ತೆಗೆದುಕೊಳ್ಳುತ್ತವೆ. ಯಾರೂ ತಮ್ಮ ಕೈಯಿಂದ ಹಣ ಖರ್ಚುಮಾಡಿ ಕನಿಷ್ಟ ಲಾಭವೂ ಇಲ್ಲದೇ ಊರಿಂದೂರಿಗೆ ಹೋಗಿ ನಾಟಕ ಮಾಡುವುದಿಲ್ಲಾ. ಅಕಸ್ಮಾತ್ ಮಾಡಿದರೂ ಅದಕ್ಕೆ ಬೇರೆ ಕಾರಣಗಳಿರುತ್ತವೆಂಬುದನ್ನು ಇಲ್ಲಿ ವಿವರಿಸುವುದು ಬೇಕಾಗಿಲ್ಲ.

6.       ಇಷ್ಟಕ್ಕೂ ಈ ಅಕಾಡೆಮಿಗಳ ಕೆಲಸವಾದರೂ ಏನು? ಅಕಾಡೆಮಿಕ್ ಕೆಲಸಗಳು ಎಂದರೆ ಅದ್ದೂರಿ ರಂಗೋತ್ಸವಗಳನ್ನು ಮಾಡುವುದಾಗಲೀ ಇಲ್ಲವೇ ನಾಟಕ ಪ್ರದರ್ಶನಗಳನ್ನು ಆಯೋಜಿಸವುದಾಗಲೀ ಅಲ್ಲವೇ ಅಲ್ಲಾ. ನಾಟಕ ನಿರ್ಮಿಸುವ ರಂಗತಂಡಗಳಿಗೆ ಸಹಾಯಧನ ಕೊಡುವುದೂ ನಾಟಕ ಅಕಾಡೆಮಿಯ ಕಾರ್ಯಯೋಜನೆಯಲ್ಲಾ. ನಾಟಕಗಳಿಗೆ ಪ್ರಾಯೋಜನೆ ಹಾಗೂ ತಂಡಗಳಿಗೆ ಅನುದಾನವನ್ನು ಕನ್ನಡ ಸಂಸ್ಕೃತಿ ಇಲಾಖೆ ಕೊಡಮಾಡುತ್ತದೆ.  ಅಕಾಡೆಮಿಗಳ ನಿಜವಾದ ಕಾಯಕ ದಾಖಲೀಕರಣ ಮತ್ತು ತರಬೇತಿ.

7.        ಹೌದು, ಈ ಎರಡೂ ಕೆಲಸವನ್ನು ಪ್ರಸ್ತುತ ನಾಟಕ ಅಕಾಡೆಮಿಯು ತುಂಬಾ ಕ್ರಿಯಾಶೀಲವಾಗಿ ಮಾಡಿದ್ದಂತೂ ಶ್ಲಾಘನೀಯ. ಕೇವಲ ದಾಖಲೀಕರಣದ ಕೆಲಸಕ್ಕಾಗಿ ಜಯಮಾಲಾರವರು ಇಲಾಖೆಯ ಸಚಿವರಾಗಿದ್ದಾಗ ಅಕಾಡೆಮಿ ಅಧ್ಯಕ್ಷರ ಮನವಿಯ ಮೇರೆಗೆ ಹೆಚ್ಚುವರಿಯಾಗಿ ಹತ್ತು ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಮತ್ತು ರಂಗಭೂಮಿಗೆ ಸಂಬಂಧಿಸಿದಂತೆ ಸಿಕ್ಕ ಮಾಹಿತಿಗಳನ್ನೆಲ್ಲಾ ಡಿಜಟಲೀಕರಣ ಮಾಡುವ ಕೆಲಸ ಅತ್ಯಂತ ನಿಷ್ಟೆಯಿಂದ ನಡೆಯುತ್ತಿದೆ. ಇದಕ್ಕಾಗಿ ಮಾನ್ಯ ಜೆ.ಲೊಕೇಶರವರಿಗೆ ಅಭಿನಂದನೆಗಳನ್ನು ಹೇಳಲೇಬೇಕಿದೆ. ಅದೇ ರೀತಿ ಕರ್ನಾಟಕದಾದ್ಯಂತ ರಂಗತರಬೇತಿ ಶಿಬಿರಗಳನ್ನು ನಾಟಕ ಅಕಾಡೆಮಿ ಆಯೋಜಿಸಿದೆ. ಸಾವಿರಾರು ರಂಗಾಸಕ್ತರು ಈ ರಂಗಕಾರ್ಯಾಗಾರಗಳಲ್ಲಿ ಭಾಗವಹಿಸಿ ರಂಗಾಭಿರುಚಿಯನ್ನು ಬೆಳೆಸಿಕೊಂಡಿದ್ದಾರೆ. ಅದರಲ್ಲಿ ನೂರಾರು ಜನರಾದರೂ ರಂಗಭೂಮಿಗೆ ದಕ್ಕಿದರೆ ಅಕಾಡೆಮಿಯ ಶ್ರಮ ಸಾರ್ಥಕವಾಗುತ್ತದೆ.

8.       ಹಾಗೆಯೇ ಅಕಾಡೆಮಿಕ್ ಅಲ್ಲದ ಹತ್ತಕ್ಕೂ ಹೆಚ್ಚು ರಂಗೋತ್ಸವಗಳನ್ನೂ ಸಹ ಲಕ್ಷಾಂತರ ರೂಪಾಯಿಗಳ ಖರ್ಚಿನಲ್ಲಿ ನಾಟಕ ಅಕಾಡೆಮಿ ಹಮ್ಮಿಕೊಂಡಿದೆ. ಇದು ಪ್ರಶ್ನಾರ್ಹ ನಡೆಯಾಗಿದೆ. ಒಂದೊಂದು ರಂಗೋತ್ಸವಕ್ಕೂ ಎರಡರಿಂದ ಐದು ಲಕ್ಷಗಳಷ್ಟು ಹಣ ಖರ್ಚಾಗುತ್ತದೆ. ಈಗಾಗಲೆ ಸಿದ್ದಗೊಂಡಿರುವ ಮೂರೋ ನಾಲ್ಕೋ ನಾಟಕಗಳನ್ನು ಆಯ್ಕೆ ಮಾಡಿ ಯಾವುದೋ ಒಂದು ಜಿಲ್ಲಾ ಕೇಂದ್ರದಲ್ಲಿ ನಾಟಕೋತ್ಸವವನ್ನು ಆಯೋಜಿಸಲಾಗಿದೆ. ನಾಟಕೋತ್ಸವಗಳನ್ನು ಮಾಡುವುದು ಅಕಾಡೆಮಿಗಳ ಕೆಲಸವೇ ಅಲ್ಲಾ, ಆದರೂ ಮಾಡಲಾಗುತ್ತಿದೆ. ಈ ಉತ್ಸವಗಳಿಗೆ ಖರ್ಚು ಮಾಡಲಾಗುವ ಹಣವನ್ನು ಅಕಾಡೆಮಿಕ್ ಕೆಲಸಗಳಿಗೆ ಬಳಸಿಕೊಂಡರೆ ಹೀಗೆ ಸರಕಾರದ ಮುಂದೆ ಅನುದಾನ ಹೆಚ್ಚಿಸಬೇಕು ಎಂದು ಕೇಳಿಕೊಳ್ಳುವ ಅಗತ್ಯವೇ ಬರುವುದಿಲ್ಲ.

9.       ಹಾಗಂತ ಪ್ರಸ್ತುತ ಅಕಾಡೆಮಿ ಅಕಾಡೆಮಿಕ್ ಕೆಲಸಗಳನ್ನು ಮಾಡಿಯೇ ಇಲ್ಲ ಎನ್ನುವುದೂ ಸತ್ಯಕ್ಕೆ ದೂರವಾದ ಸಂಗತಿ. ವೆಂಕಟಸುಬ್ಬಯ್ಯನವರ ಹೆಸರಲ್ಲಿ ದಾಖಲೀಕರಣ ಕೇಂದ್ರವನ್ನೇ ನಾಟಕ ಅಕಾಡೆಮಿ ಕಛೇರಿಯಲ್ಲಿ ತೆರಯಲಾಗಿದೆ. ಅದಕ್ಕೆ ಬೇಕಾದ ಕಂಪ್ಯೂಟರ್, ಸ್ಕ್ಯಾನರ್ ಇತ್ಯಾದಿ ಪರಿಕರಗಳನ್ನು ಕೊಳ್ಳಲಾಗಿದ್ದು, ಪ್ರತಿನಿತ್ಯ  ಡಾಕ್ಯುಮೆಂಟೇಶನ್ ಕೆಲಸವನ್ನು ನುರಿತ ಇಬ್ಬರು ಮಾಡುತ್ತಲೇ ಬಂದಿದ್ದಾರೆ. ಪ್ರತಿ ವರ್ಷ ನಾಟಕ ರಚನಾ ಸ್ಪರ್ಧೆಯನ್ನು ಏರ್ಪಡಿಸಿ, ಆಯ್ಕೆಗೊಂಡ ಮೂರು ನಾಟಕಗಳಿಗೆ ತಲಾ ನಲವತ್ತು ಸಾವಿರ ಬಹುಮಾನವನ್ನೂ ಕೊಟ್ಟು ಯುವಕರಿಗೆ ನಾಟಕ ಬರೆಯಲು ಪ್ರೇರೇಪಿಸಲಾಗುತ್ತಿದೆ. ತಲಾ ಒಂದು ಲಕ್ಷದಷ್ಟು ಸ್ಕಾಲರ್‌ಶಿಪ್ ಹಣವನ್ನು ನೀಡಿ ರಂಗಭೂಮಿ ಕುರಿತು ಅಧ್ಯಯನ ಪ್ರಬಂಧ ಬರೆಯಲು ಯುವಕರನ್ನು ಪ್ರೋತ್ಸಾಹಿಸಲಾಗುತ್ತಿದೆ. ರಂಗಸಾಧಕರ ಕುರಿತು ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ. ಶತಮಾನವನ್ನು ಪೂರೈಸಿದ ರಂಗಸಾಧಕರ ಕುರಿತು ಶತಮಾನೋತ್ಸವಗಳನ್ನು ಹಮ್ಮಿಕೊಂಡು ಅವರ ಕುರಿತು ಸಾಕ್ಷಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಜಿಲ್ಲೆಗಳ ಮಾಹಿತಿಗಳನ್ನೊಂಡ ಪ್ರತ್ಯೇಕ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ. ಅಪರೂಪಕ್ಕೊಮ್ಮೆ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇವೆಲ್ಲವೂ ಸಹ ಶ್ಲಾಘನೀಯವಾದ ಹಾಗೂ ಅಕಾಡೆಮಿಯೊಂದು ಮಾಡಲೇಬೇಕಾದ ಕೆಲಸಗಳು. ಪ್ರಸ್ತುತ ಅಕಾಡೆಮಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದು ಅಭಿನಂದನೀಯ.

10.      ಆದರೆ.. ಮಾಡಬೇಕಾದ ಬೇಕಾದಷ್ಟು ಅಕಾಡೆಮಿಕ್ ಕೆಲಸಗಳು ಇನ್ನೂ ಬಾಕಿ ಇವೆ. ನಾಟಕ ಅಕಾಡೆಮಿ ಈ ಹಿಂದೆ ಆಗಾಗ ಹೊರತರುತ್ತಿದ್ದ ಸಂವಾದ ಎನ್ನವ ತ್ರೈಮಾಸಿಕ ಪತ್ರಿಕೆಯನ್ನು ಪ್ರಸ್ತುತ ಅಕಾಡೆಮಿಯು ಮುಂದುವರೆಸಬೇಕಿತ್ತು. ಅಕಾಡೆಮಿಯು ಪತ್ರಿಕೆಯನ್ನು ನಿಯಮಿತವಾಗಿ ಹೊರತರುವ ಮೂಲಕ ಪ್ರಸ್ತುತ ರಂಗಭೂಮಿಯ ಚಟುವಟಿಕೆಗಳನ್ನು ಇಂದಿನ ಹಾಗೂ ಮುಂದಿನ ತಲೆಮಾರಿಗಾಗಿ ದಾಖಲಿಸಬೇಕಾಗಿತ್ತು. ಆಗಲಿಲ್ಲ. ಕಾರ್ಮಿಕ ರಂಗಭೂಮಿ ಬಹುತೇಕ ನೆಲಕಚ್ಚಿದೆ. ಆದರೆ.. ಈಗಲೂ ಮೈಕೋ, ಬೆಮೆಲ್, ಬಿಇಎಲ್ ನಂತಹ ಅನೇಕ ಕಾರ್ಖಾನೆಗಳಲ್ಲಿ ರಂಗಾಸಕ್ತರು ಕಲಾವಿದರುಗಳು ಇದ್ದಾರೆ. ಅವರಿಗೆಲ್ಲಾ ಅವರದೇ ಪ್ಯಾಕ್ಟರಿಗಳಲ್ಲಿ ರಂಗತರಬೇತಿ ಶಿಬಿರಗಳನ್ನು ಆಯೋಜಿಸಿ ನಾಟಕಗಳನ್ನು ನಿರ್ಮಿಸಲು ಪ್ರೋತ್ಸಾಹಿಸುವ ಕೆಲಸ ಅಕಾಡೆಮಿಯಿಂದ ಆಗಬೇಕಿದೆ.

11.       ದಾಖಲೀಕರಣಗೊಂಡ ರಂಗಮಾಹಿತಿಗಳನ್ನು ಮುಂದೇನು ಮಾಡುವುದು ಎನ್ನುವುದರ ಬಗ್ಗೆ ಯೋಚನೆ ಮಾಡಬೇಕಿದೆ. ಎಲ್ಲವನ್ನೂ ದಾಖಲಿಸಿ ಅಕಾಡೆಮಿಯ ಗಣಕಯಂತ್ರಗಳಲ್ಲಿ ಶೇಖರಿಸಿಟ್ಟರೆ ಏನು ಪ್ರಯೋಜನ?. ಡಿಜಿಟಲೀಕರಣಗೊಂಡ ದಾಖಲೆಗಳನ್ನು ಕಾಲಘಟ್ಟಗಳನ್ನಾಧರಿಸಿ, ವಿಷಯವಾರು ವಿಭಾಗೀಕರಣ ಮಾಡಿ ಅಕಾಡೆಮಿಯ ವೆಬ್‌ಸೈಟಿನಲ್ಲಿ ಪ್ರಕಟಿಸಬೇಕಿದೆ. ಯಾರಿಗೇ ಆಗಲಿ ರಂಗಭೂಮಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕೆಂದು ವೆಬ್‌ಸೈಟಿನಲ್ಲಿ ಹೋಗಿ ಹುಡುಕಿದರೆ ಸುಲಭವಾಗಿ ದೊರಕುವ ವ್ಯವಸ್ಥೆ ಮಾಡಬೇಕಿದೆ.

12.       ಶಿಕ್ಷಣದಲ್ಲಿ ರಂಗಭೂಮಿಯನ್ನು ಅಳವಡಿಸುವತ್ತ ನಾಟಕ ಅಕಾಡೆಮಿ ಹೆಚ್ಚು ಕೆಲಸ ಮಾಡಬೇಕಾಗಿದೆ. ರಂಗಶಾಲೆಗಳಲ್ಲಿ ಓದಿದವರನ್ನು ಸರಕಾರವು ಸರಕಾರಿ ಶಾಲೆಗಳಿಗೆ ರಂಗಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಬೇಕು ಎನ್ನುವ ಬೇಡಿಕೆ ಮೊದಲಿನಿಂದಲೂ ಇದೆ. ಅದು  ಯಾವಾಗ ನನಸಾಗುತ್ತದೋ ಗೊತ್ತಿಲ್ಲಾ. ಆದರೆ.. ಈಗಾಗಲೇ ಲಕ್ಷಾಂತರ ಜನ ಶಿಕ್ಷಕರು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ನೌಕರಿ ಮಾಡುತ್ತಿದ್ದಾರೆ. ಅದರಲ್ಲಿ ರಂಗಾಸಕ್ತರೂ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಾತಾಡಿ ಕನಿಷ್ಟ ತಾಲ್ಲೂಕು ಕೇಂದ್ರಗಳಲ್ಲಾದರೂ ಶಿಕ್ಷಕರಿಗೆ ರಂಗತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವತ್ತ ಅಕಾಡೆಮಿ ಕಾರ್ಯೋನ್ಮುಖವಾಗಬೇಕಿದೆ. ರಂಗಮುಖೇನ ಶಿಕ್ಷಣವನ್ನು ನೀಡುವ ಕುರಿತು ಹಾಲಿ ಶಿಕ್ಷಕರಿಗೆ ತರಬೇತಿ ಕೊಡಿಸಿದರೆ ಇಂದಿನ ತಲೆಮಾರಿನ ಮಕ್ಕಳಲ್ಲಿ ರಂಗಕಲೆಯತ್ತ ಒಲವನ್ನು ಬೆಳೆಸಬಹುದಾಗಿದೆ. ಇದು ಅಕಾಡೆಮಿ ಮಾಡಬಹುದಾದ ಅತ್ಯಗತ್ಯವಾದ ಕೆಲಸವಾಗಿದೆ.

13.       ರಾಜ್ಯಾದ್ಯಂತ ರಂಗಭೂಮಿಯ ಕುರಿತು ವಿಚಾರ ಸಂಕಿರಣಗಳನ್ನು ವ್ಯಾಪಕವಾಗಿ ಆಯೋಜಿಸಬೇಕಾಗಿದೆ. ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಲು ಸಂಪನ್ಮೂಲ ವ್ಯಕ್ತಿಗಳ ಗೌರವಧನವನ್ನು ಹೊರತು ಪಡಿಸಿ ಅಂತಹ ಹೆಚ್ಚುವರಿ ಖರ್ಚುಗಳೇನೂ ಬರುವುದಿಲ್ಲ. ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಇಲ್ಲವೇ ಕುಲಸಚಿವರುಗಳನ್ನು ಸಂಪರ್ಕಿಸಿ ಪ್ರತಿ ತಿಂಗಳು ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಲು ಪ್ರೇರೇಪಿಸುವ ಕೆಲಸವನ್ನು ನಾಟಕ ಅಕಾಡೆಮಿ ಮಾಡಬೇಕಿದೆ. ಒಂದೊಂದು ವಿಶ್ವವಿದ್ಯಾಲಯದಲ್ಲಿ ವಿಚಾರ ಸಂಕಿರಣವನ್ನು ರೂಪಿಸುವ ಹೊಣೆಯನ್ನು ಒಬ್ಬೊಬ್ಬ ಅಕಾಡೆಮಿ ಸದಸ್ಯರಿಗೆ ವಹಿಸಿಕೊಟ್ಟರೆ ಈ ಕಾರ್ಯ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ.

14.      ಅದೇ ರೀತಿ.. ಕರ್ನಾಟಕದಾದ್ಯಂತ ಕೆಲವಾರು ನಾಟಕ ಶಾಲೆಗಳಿವೆ, ರಂಗಶಿಕ್ಷಣ ಕೇಂದ್ರಗಳಿವೆ, ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗಗಳಿವೆ.. ಇವುಗಳ ನೇತಾರರನ್ನು ಸಂಪರ್ಕಿಸಿ ರಂಗಭೂಮಿಗೆ ಸಂಬಂಧಿಸಿದಂತೆ ವಿಚಾರಸಂಕಿರಣಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುವ ಕಾಯಕವನ್ನು ನಾಟಕ ಅಕಾಡೆಮಿ ಮಾಡಲೇಬೇಕಿದೆ. ರಂಗಸಕ್ತಿಯಿಂದ ಬಂದ ಅನೇಕಾನೇಕ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ವೈಚಾರಿಕ ತಿಳುವಳಿಕೆಯನ್ನು ಕೊಡಬೇಕಿದೆ.

15.       ಇದರ ಜೊತೆಗೆ.. ರಂಗತಂಡಗಳಲ್ಲಿ ನೇಪತ್ಯ ತಜ್ಞರ ಕೊರತೆ ಬೇಕಾದಷ್ಟಿದೆ. ಬೆಂಗಳೂರನ್ನು ಹೊರತು ಪಡಿಸಿ ಬೇರೆ ಜಿಲ್ಲೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೆಳಕಿನ ತಜ್ಞರ ಹಾಗೂ ಪ್ರಸಾಧನ ಪಟುಗಳ ಕೊರತೆ ಸಾಕಷ್ಟಿದೆ. ಮೊದಲು ರಂಗಚಟುವಟಿಕೆಗಳು ಇರುವ ಎಲ್ಲಾ ಜಿಲ್ಲಾ ಕೇಂದ್ರಗಳು ಹಾಗೂ ತಾಲ್ಲೂಕುಗಳಲ್ಲಿ ನೇಪತ್ಯ ತರಬೇತಿ ಶಿಬಿರಗಳನ್ನು ಸ್ಥಳೀಯ ರಂಗತಂಡಗಳ ಸಹಯೋದಲ್ಲಿ ನಾಟಕ ಅಕಾಡೆಮಿ ಆಯೋಜಿಸಬೇಕಿದೆ. ಸಂಪನ್ಮೂಲ ವ್ಯಕ್ತಿಗಳು ಹಾಗೂ ತರಬೇತಿಗೆ ಬೇಕಾದ ಪರಿಕರಗಳ ಖರ್ಚನ್ನು ಮಾತ್ರ ಅಕಾಡೆಮಿ ಭರಿಸಿದರೆ ಸಾಕು ಬಾಕಿ ವ್ಯವಸ್ಥೆಯಗಳನ್ನು ಅಲ್ಲಿರುವ ರಂಗತಂಡಗಳೇ ಮಾಡಿಕೊಳ್ಳುತ್ತವೆ.

16.      ರಂಗೋತ್ಸವಗಳನ್ನು ನಿಲ್ಲಿಸಿದರೆ ಉಳಿಯುವ ಸುಮಾರು ಕಾಲುಕೋಟಿಯಷ್ಟು ಹಣವನ್ನು ಈ ಮೇಲೆ ತಿಳಿಸಿದ ಅಕಾಡೆಮಿಕ್ ಕಾರ್ಯಗಳಿಗೆ ಬಳಸಿದರೆ ರಂಗಚಟುವಟಿಕೆಗಳಿಗೆ ಉತ್ತೇಜನ ಕೊಟ್ಟಂತೆ ಆಗುತ್ತದೆ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಯುವಕರನ್ನು ರಂಗಭೂಮಿಯತ್ತ ಆಕರ್ಷಿಸಿದಂತೆಯೂ ಆಗುತ್ತದೆ. ಇಷ್ಟಕ್ಕೂ ಸರಕಾರ ಈಗ ಕೊಡುವ ಅನುದಾನದ ಹಣ ಸಾಕಾಗದೇ ಹೋದರೆ ಅಕಾಡೆಮಿಕ್ ಕೆಲಸಗಳನ್ನು ಬೇರೆ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿಯೂ ಹಮ್ಮಿಕೊಳ್ಳಬಹುದಾಗಿದೆ.

17        ಹೀಗಾಗಿ.. ಕೊಟ್ಟ ಕುದುರೆಯನೇರಲರಿಯದೇ ಇನ್ನೊಂದು ಕುದುರೆಯನೇರುವ ಸಾಹಸಗಳನ್ನು ಬದಿಗಿಟ್ಟು ಪ್ರಸ್ತುತ ನಾಟಕ ಅಕಾಡೆಮಿಯು ಸರಕಾರದಿಂದ ದೊರಕಿರುವ ಆರ್ಥಿಕ ಸಂಪನ್ಮೂಲದಲ್ಲಿಯೇ ಬಹುಮುಖಿಯಾಗಿ ರಚನಾತ್ಮಕವಾಗಿ ಅಕಾಡೆಮಿಕ್ ಕೆಲಸಗಳನ್ನು ಮಾಡಿ ರಂಗಭೂಮಿಯ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಬಹುದಾಗಿದೆ.

18       ಆ ಅಕಾಡೆಮಿಗೆ ಅಷ್ಟು ಕೊಟ್ಟರು, ಈ ಅಕಾಡೆಮಿಗೆ ಇನ್ನೂ ಕೊಡಬೇಕಾಗಿತ್ತು ಎಂದು ಹೋಲಿಕೆ ಮಾಡುವುದು ಸಮಂಜಸವಾದದ್ದು ಅಲ್ಲವೇ ಅಲ್ಲಾ. ನಾಟಕದ ಕೆಲಸವೆಂದರೇ ಆರ್ಥಿಕ ಅನುಕೂಲತೆಗಳನ್ನೂ ಮೀರಿದ್ದು, ಯಾರು ಎಸಿ ರೂಮಿನಲ್ಲಿ ಕೂತಾದರೂ ಬರೆಯಲಿ ಬಿಡಲಿ ಅದು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದವರ ಸಂಗತಿ. ನಾಟಕ ಅಕಾಡೆಮಿ ರಂಗಭೂಮಿಗೆ ಎಷ್ಟು ರೀತಿಯಲ್ಲಿ ಸಾರ್ಥಕವಾಗಿ ಕೊಡುಗೆ ಕೊಟ್ಟಿದೆ, ಅದೆಷ್ಟು ಯುವಕರಿಗೆ ತರಬೇತಿ ನೀಡಿ, ಮಾರ್ಗದರ್ಶನ ಮಾಡಿ, ರಂಗಭೂಮಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಹಾಗೆ ಮಾಡಿದೆ, ಮಾಡುವ ರಂಗದಾಖಲೀಕರಣವು ಅದೆಷ್ಟು ಜನ ರಂಗಾಸಕ್ತರಿಗೆ ತಲುಪಿದೆ.. ಎನ್ನುವ ನಿಟ್ಟಿನಲ್ಲಿ ಪ್ರಸ್ತುತ ನಾಟಕ ಅಕಾಡೆಮಿಯು ಆಲೋಚಿಸುವುದು ರಂಗಭೂಮಿಯ ಹಿತಾಸಕ್ತಿಯ ದೃಷ್ಟಿಯಿಂದ ಉತ್ತಮವಾದದ್ದು.


-ಶಶಿಕಾಂತ ಯಡಹಳ್ಳಿ    



       


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ