ಶನಿವಾರ, ಫೆಬ್ರವರಿ 9, 2019

ಕೆರೆದು ಮಾಡಿಕೊಂಡ ಗಾಯ..! ಸಾಹಿತ್ಯ ಅಕಾಡೆಮಿಯ ಖಂಡನಾ ನಿರ್ಣಯ.!!

ಅರವಿಂದ ಮಾಲಗತ್ತಿ


"ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಬರೆಯುವವರ ಸಾಹಿತ್ಯ ಅಕಾಡೆಮಿಗೂ ಒಂದು ಕೋಟಿ... ಊರೂರು ಸುತ್ತಿ ರಾತ್ರಿ ಹಗಲು ನಾಟಕದ ಕೆಲಸ ಮಾಡುವ ನಾಟಕ ಅಕಾಡೆಮಿಗೂ ಒಂದೇ ಕೋಟಿ ಅನುದಾನವನ್ನು ಸರಕಾರ ಕೊಡುವುದು ಸರಿಯಲ್ಲಾ.. ನಾಟಕ ಅಕಾಡೆಮಿಯ ಅನುದಾನ ಹೆಚ್ಚಿಸಬೇಕು" ಎಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷರು ಹೇಳಿದರೆಂದು ಪ್ರಜಾವಾಣಿಯಲ್ಲಿ ವರದಿಯಾಗಿದೆ. ಇದನ್ನು ಓದಿದ ರಂಗಭೂಮಿ ಹಾಗೂ ಸಾಹಿತ್ಯವಲಯದವರು ಅಸಮಾಧಾನಗೊಳ್ಳುವುದು ಸಹಜವಾಗಿದೆ. ಸಾಹಿತ್ಯ ಅಕಾಡೆಮಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸರ್ವ ಸದಸ್ಯರ ಸಭೆಯಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷರ ಹೇಳಿಕೆಯ ವಿರುದ್ದ ಅಧೀಕೃತವಾಗಿ ಖಂಡನಾ ನಿರ್ಣಯವನ್ನೂ ಮಾಡಿ ಪತ್ರಿಕೆಗಳಿಗೆ ಕಳುಹಿಸಿ ಕೊಟ್ಟಿದ್ದಾರೆ ಹಾಗೂ ಅದೂ ಸಹ ಒಂದೆರಡು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. 


ಪತ್ರಿಕೆಯಲ್ಲಿ ಬಂದಿದ್ದೆಲ್ಲಾ ಸತ್ಯವೆಂದು ನಂಬುವವರು ಕಲೆ ಹಾಗೂ ಸಾಹಿತ್ಯದ ವಲಯದಲ್ಲಿ ಇನ್ನೂ ಇದ್ದಾರೆಂಬುದೇ ವಿಸ್ಮಯದ ಸಂಗತಿ. ನಾಟಕ ಅಕಾಡೆಮಿ ಅಧ್ಯಕ್ಷರು "ಆ ರೀತಿ ಹೇಳಿಲ್ಲವೆಂದೂ... ತಮ್ಮ ಮಾತುಗಳನ್ನು ತಪ್ಪಾಗಿ ಗ್ರಹಿಸಿದ ಪ್ರಜಾವಾಣಿಯ ವರದಿಗಾರ ತಿರುಚಿದ ವರದಿ ಬರೆದು ಪ್ರಕಟಿಸಿದ್ದಾರೆ" ಎಂದೂ ಈಗಾಗಲೇ ವಾಟ್ಸಾಪ್ ಗ್ರುಪ್ನಲ್ಲಿ ಜೆ.ಲೊಕೇಶರವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಈ ಘಟನೆಗೆ ಸಾಕ್ಷಿಯಾಗಿ ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷರ ಜೊತೆಗೆ ಪಕ್ಕದಲ್ಲೇ ಕುಳಿತಿದ್ದ  ಅಕಾಡೆಮಿಯ ಸದಸ್ಯರಾದ ಬಾಸುಮ ಕೊಡಗುರವರೂ "ಅಧ್ಯಕ್ಷರು ಆ ರೀತಿ ಹೇಳಿಲ್ಲ"ಎಂದೂ ಸಮರ್ಥಿಸಿಕೊಂಡಿದ್ದಾರೆ. ಅಕಸ್ಮಾತ್ ಅವರು ಹಾಗೆ ಹೇಳಿದ್ದೇ ನಿಜವಾಗಿದ್ದರೆ ಉಳಿದ ಎಲ್ಲಾ ಪತ್ರಿಕೆಗಳಲ್ಲೂ ವರದಿಯಾಗಬೇಕಿತ್ತು. ಆದರೆ ಪ್ರಜಾವಾಣಿಯಲ್ಲಿ ಮಾತ್ರ ಬಾಕ್ಸ್ ಐಟಂ ಮಾಡಿ ಸ್ಟೇಟ್ ಎಡಿಶನ್ನಿನಲ್ಲಿ ಸುದ್ದಿ ಮಾಡಿದ್ದರ ಹಿಂದೆ ಬೇರೇನೋ ತಂತ್ರಗಾರಿಕೆ ಇದ್ದಂತಿದೆ. ಯಾಕೆಂದರೆ ಉಡುಪಿ ಜಿಲ್ಲೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಕುರಿತು ಪತ್ರಿಕಾ ಗೋಷ್ಟಿ ನಡೆಸಿದರೆ ಅದು ಕರಾವಳಿ ಪ್ರದೇಶದ ಆವೃತ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಬೇರೆಲ್ಲಾ ಪತ್ರಿಕೆಗಳಲ್ಲೂ ಪ್ರಾದೇಶಿಕ ಸುದ್ದಿಯಾಗಿಯೇ ಪ್ರಶಸ್ತಿ ಸಮಾರಂಭದ ವಿವರಗಳನ್ನು ಪ್ರಕಟಿಸಲಾಗಿದೆ. ಆದರೆ ಪ್ರಜಾವಾಣಿ ಮಾತ್ರ ಪ್ರಾದೇಶಿಕ ಸುದ್ದಿಯನ್ನು ರಾಜ್ಯವ್ಯಾಪಿ ಬಾಕ್ಸ್ ಐಟಂ  ಸುದ್ದಿಯನ್ನಾಗಿಸಿ ಪ್ರಕಟಿಸಿದ್ದರ ಹಿಂದಿನ ಮರ್ಮವೇನು. ಎರಡು ಅಕಾಡೆಮಿಗಳ ನಡುವೆ ವೈಮನಸ್ಸನ್ನು ಬಿತ್ತುವುದಾ? ಅಥವಾ ಇಲ್ಲದ ವಿವಾದವನ್ನು ಸೃಷ್ಟಿಸುವುದಾ? ಗೊತ್ತಿಲ್ಲ. ಇಂತಹ ಸಮಯದಲ್ಲೇ ಈ ವಿಶ್ವಾಸಾರ್ಹ ಪತ್ರಿಕೆ ಎನ್ನುವ ನಂದಿಮಾರ್ಕಿನ ಮೇಲೆ ಅವಿಶ್ವಾಸ ಮೂಡುವುದು. ಅಲ್ಲಿ ಹೇಳಿದ್ದೇ ಒಂದು ಇಲ್ಲಿ ಪ್ರಕಟಿಸಿದ್ದೇ ಒಂದು ಎಂಬುದನ್ನು ಪ್ರತ್ಯಕ್ಷ ಸಾಕ್ಷಿಗಳೂ ದೃಢೀಕರಿಸುತ್ತವೆ.

ಪತ್ರಿಕೆಯಲ್ಲಿ ಬಂದ ವರದಿಯನ್ನೇ ಪರಮ ಸತ್ಯವೆಂದು ನಂಬಿದ  ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದಿಯಾಗಿ ಸರ್ವ ಸದಸ್ಯರುಗಳು ಹಿಂದೆ ಮುಂದೆ ಯೋಚನೆ ಮಾಡದೇ ಖಂಡನಾ ನಿರ್ಣಯವನ್ನು ತೆಗೆದುಕೊಂಡು ಪತ್ರಿಕೆಗಳಿಗೆ ಕಳುಹಿಸಿದ್ದೂ ಖಂಡನಾರ್ಹವೇ ಆಗಿದೆ. ಪತ್ರಿಕೆಯ ವರದಿಗಾರನೊಬ್ಬ ಬೀಸಿದ ಬಲೆಗೆ ಸಾಹಿತ್ಯ ಅಕಾಡೆಮಿಯ ಪಂಡಿತರೂ ಬಿದ್ದಿದ್ದು ವಿಪರ್ಯಾಸ. ಇಷ್ಟಕ್ಕೂ  ನಾಟಕ ಅಕಾಡೆಮಿಯ ಅಧ್ಯಕ್ಷರು ಸ್ವತಃ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅರವಿಂದ ಮಾಲಗತ್ತಿಯವರನ್ನು ಬೇಟಿಯಾಗಿ ತಮ್ಮ ತಿರುಚಿದ ಹೇಳಿಕೆ ಕುರಿತು ಸಮರ್ಥನೆಗಳನ್ನು ಕೊಟ್ಟಿದ್ದಾರೆ. ಅದನ್ನು ಮಾಲಗತ್ತಿಯವರೂ ಒಪ್ಪಿದ್ದಾರೆ... ಆದರೂ ಯಾಕೆ ಅಕಾಡೆಮಿ ಅಧ್ಯಕ್ಷರ ಮೇಲೆ ಖಂಡನಾ ನಿರ್ಣಯದ ಕತ್ತಿಯನ್ನು ಮಾಲಗತ್ತಿಯವರು ಬೀಸಿದರು? ಪತ್ರಿಕಾ ವರದಿಗಾರನಿಗೆ ವಿವೇಚನೆ ಇಲ್ಲವಾದರೆ ಸಾಹಿತ್ಯ ಅಕಾಡೆಮಿಯ ಪ್ರಜ್ಞಾವಂತ ಪಂಡಿತರಿಗಾದರೂ ವಿವೇಚನೆ ಬೇಡವೇ? ಪತ್ರಿಕಾ ಗೋಷ್ಟಿಯಲ್ಲಿ ಭಾಗವಹಿಸಿದ ಇತರರನ್ನು ವಿಚಾರಿಸಿ.. ಹೇಳಿಕೆಯ ಹಿಂದಿನ ಸತ್ತಾಸತ್ಯತೆಗಳನ್ನು ಪರಿಶೀಲಿಸಿ ಖಂಡನಾ ನಿರ್ಣಯವನ್ನು ತೆಗೆದುಕೊಂಡಿದ್ದರೆ ಸಾಹಿತ್ಯ ಅಕಾಡೆಮಿಯ ನಿರ್ಣಯವನ್ನು ಬೆಂಬಲಿಸಬಹುದಾಗಿತ್ತು. ಪತ್ರಿಕಾ ವರದಿಯನ್ನೇ ದಿಟವೆಂದು ನಂಬಿ ಆತುರದಲ್ಲಿ ಪ್ರತಿಕ್ರಿಯಿಸಿದ ಬೇರೆಯವರಂತೆಯೇ ಸಾಹಿತ್ಯ ಅಕಾಡೆಮಿಯೂ ವರದಿಯೊಂದರ ಆಧಾರದ ಮೇಲೆ ಖಂಡನಾ ನಿರ್ಣಯ ತೆಗೆದುಕೊಂಡಿದ್ದು ಅಕ್ಷಮ್ಯ. 

'ಎಸಿ ರೂಮಿನಲ್ಲಿ ಕೂತು ಬರೆಯುವ ಸಾಹಿತಿಗಳು' ಎಂದು ವರದಿಯಾಗಿದ್ದಕ್ಕೆ ಸಾಹಿತ್ಯ ಅಕಾಡೆಮಿಯವರಿಗೆ ಪಿತ್ತ ನೆತ್ತಿಗೇರಿ ಕೆರಳಿರಬಹುದು.. ಕೆರಳಲಿ.. ಆದರೆ ಕಾಕತಾಳೀಯವೋ ಎಂಬಂತೆ ಕರ್ನಾಟಕದ ಸಾಹಿತಿಗಳ ಆಯೋಗವು ದೆಹಲಿಗೆ ಹೋಗಿ ಕರ್ನಾಟಕ ಭವನದ ಎಸಿ ರೂಮಿನಲ್ಲಿ ಪಾರ್ಟಿ ಮಾಡಿ ಮಧ್ಯರಾತ್ರಿ ಕುಡಿದು ಗದ್ದಲಮಾಡಿ ಕನ್ನಡಿಗರ ಮಾನ ಮರ್ಯಾದೆ ತೆಗೆದು ದೇಶವ್ಯಾಪಿ ಸುದ್ದಿಯಾದರಲ್ಲಾ ಇದಕ್ಕೆ ಯಾಕೆ ಸಾಹಿತ್ಯ ಅಕಾಡೆಮಿಯ ಪಂಡಿತ ವಲಯ ಖಂಡನಾ ನಿರ್ಣಯ ತೆಗೆದುಕೊಳ್ಳಬಾರದು?  ಸಾಹಿತ್ಯ ವಲಯದವರೇಕೆ ವಿರೋಧಿಸಬಾರದು? ಹೀಗೆ ಕುಡಿದು ಗದ್ದಲಮಾಡಿದವರು ಪುಡಿ ಸಾಹಿತಿಗಳಾಗಿರದೇ ಕನ್ನಡದ ಹೆಸರುವಾಸಿ ಪ್ರಮುಖ ಸಾಹಿತಿಗಳೇ ಆಗಿದ್ದಾರಲ್ಲಾ  ಅವರ ಹೆಸರುಗಳನ್ನೇಕೆ ವಿಶ್ವಾಸಾರ್ಹ ಪತ್ರಿಕೆಯವರು ಬಾಕ್ಸ್ ಐಟಂ ಮಾಡಿ ಪ್ರಕಟಿಸಲಿಲ್ಲ?

ಯಾಕೆಂದರೆ ಸಾಹಿತಿಗಳು ಏನು ಮಾಡಿದರೂ ನಡೆಯುತ್ತದೆ.. ರಂಗಭೂಮಿಯವರು ಬಾಯಿ ತಪ್ಪಿ ಒಂದು ಮಾತು ಹೇಳಿದರೆ... ಹೇಳದೇ ಇದ್ದರೂ ವರದಿಯಾದರೆ ಅದು ಖಂಡನಾ ನಿರ್ಣಯಕ್ಕೆ ಆಹಾರವಾಗುತ್ತದೆ... ಬಾಕ್ಸ್ ಐಟಂ ಸುದ್ದಿಯಾಗುತ್ತದೆ.. ಇಂತಹ ಸಂದರ್ಭದಲ್ಲಿಯೇ ದಶಕಗಳ ಹಿಂದೆ ಮಂತ್ರಿಯಾಗಿದ್ದ ದಿ.ಬಸವಲಿಂಗಪ್ಪನವರು ಈಗ ಸಾಹಿತಿಗಳಿಂದ ಸೃಷ್ಟಿ ಆಗಿದ್ದೆಲ್ಲಾ 'ಬೂಸಾ' ಸಾಹಿತ್ಯವೆಂದು ಹೇಳಿದ್ದು ನೆನಪಾಗುತ್ತದೆ. ಆಗಲೂ ಆ ಮಂತ್ರಿಯ ವಿರುದ್ದ ಸಾಹಿತಿಗಳ ಗುಂಪುಗಳು ತಿರುಗಿ ಬಿದ್ದಿದ್ದವು. ತಾವು ಸಾರ್ವಕಾಲಿಕ  ಯೋಗ್ಯ ಸಾಹಿತ್ಯವನ್ನು ರಚಿಸಿದ್ದೇವೆ ಎಂದು ಸಾಬೀತು ಪಡಿಸುವ ಯೋಗ್ಯತೆಯೂ ಇಲ್ಲದವರು 'ಬೂಸಾ' ಎಂದಿದ್ದಕ್ಕೆ ಉರಿಯತೊಡಗಿದರು. ಜನಪರ ಹಾಗೂ ಜೀವಪರ ಅಲ್ಲದ ಆತ್ಮರತಿ ಸಾಹಿತ್ಯವನ್ನು ಬೂಸಾ ಸಾಹಿತ್ಯವೆಂದೇ ಪರಿಗಣಿಸುವುದರಲ್ಲಿ ತಪ್ಪೇನಿಲ್ಲ.

ಲೊಕೇಶರವರು ಒಂದು ಅಕಾಡೆಮಿಯ ಅಧ್ಯಕ್ಷರಾಗಿ ಇನ್ನೊಂದು ಅಕಾಡೆಮಿಯನ್ನು ಹೋಲಿಸಿಕೊಂಡು ಮಾತಾಡಿದ್ದೇ ಸತ್ಯವಾದರೆ ಅದೂ ಸಹ ಅಕ್ಷಮ್ಯ. ಅದೇ ರೀತಿ ಸೂಕ್ತ ವಿಚಾರಣೆ ಮಾಡದೇ ಕೇವಲ ವರದಿಯೊಂದನ್ನು ಆಧರಿಸಿ ಸಾಹಿತ್ಯ  ಅಕಾಡೆಮಿ ಅವಸರದಲ್ಲಿ ಖಂಡನಾ ನಿರ್ಣಯವನ್ನು ತೆಗೆದುಕೊಂಡು ಪತ್ರಿಕೆಗಳಿಗೆ ರವಾಣಿಸಿದ್ದೂ ಸಹ ಪ್ರಶ್ನಾರ್ಹ..

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ