ಶನಿವಾರ, ಫೆಬ್ರವರಿ 2, 2019

ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ :





ಮೂಲಭೂತವಾಗಿ ವೃತಿ ಹಾಗೂ ಹವ್ಯಾಸಿ ಎನ್ನುವ ಕವಲುಗಳನ್ನು ಹೊಂದಿರುವ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಪೂರಕವಾಗಿ ಪತ್ರಿಕೆಗಳು ಮಹತ್ವದ ಕೆಲಸವನ್ನು ಕಾಲಕಾಲಕ್ಕೆ ಮಾಡುತ್ತಲೇ ಬಂದಿವೆ. ಚಲನಚಿತ್ರ ಹಾಗೂ ಟಿವಿಯಂತಹ ಮನರಂಜನಾತ್ಮಕ ದೃಶ್ಯಮಾಧ್ಯಮಗಳ ಹೊಡೆತವನ್ನು ಸಹಿಸಿಕೊಂಡೂ ರಂಗಕಲೆ ಇನ್ನೂ ಜನರ ನಡುವೆ ಪ್ರಚಲಿತದಲ್ಲಿ ಇದೆ ಎನ್ನುವುದಕ್ಕೆ ಪರೋಕ್ಷವಾಗಿ ಅಕ್ಷರ ಮಾಧ್ಯಮಗಳೂ ಕಾರಣವಾಗಿವೆ. 

ಪ್ರೇಕ್ಷಕರನ್ನು ರಂಗಮಂದಿರಗಳಿಗೆ ಬರುವಂತೆ ಮಾಡುವಲ್ಲಿ ಪ್ರಚಾರ ಎನ್ನುವುದು ಅತೀ ಅಗತ್ಯವಾದಂತಹುದು. ಬೆಂಗಳೂರಿನಂತಹ ಮಹಾನಗರಗಳಲ್ಲಿ ಎಲ್ಲಿ ಯಾವಾಗ ಎಂತಾ ನಾಟಕಗಳು ಪ್ರದರ್ಶನಗೊಳ್ಳುತ್ತವೆ ಎನ್ನುವುದರ ಕುರಿತ ಮಾಹಿತಿ ರಂಗಾಸಕ್ತರಿಗೆ ಮೊದಲೇ ತಿಳಿಸುವ ಅಗತ್ಯವಿರುತ್ತದೆ. ಬೆಂಗಳೂರಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚರಿಸುವುದೇ ಹರಸಾಹಸವಾಗಿರುವಾಗ ನಾಟಕವೊಂದನ್ನು ನೋಡಲು ಹೋಗಬೇಕೆನ್ನುವ ರಂಗಾಸಕ್ತ ಪ್ರೇಕ್ಷಕರು ಮೊದಲೇ ಪೂರ್ವನಿರ್ಧಾರ ಮಾಡಿಕೊಂಡು ಸಮಯವನ್ನು ಹೊಂದಾಯಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ನಾಟಕ ಪ್ರದರ್ಶನದ ಪೂರ್ವಭಾವಿಯಾಗಿ ಪತ್ರಿಕೆಗಳಲ್ಲಿ ನಾಟಕದ ಕುರಿತ ವಿವರಗಳು ಬಂದರೆ ರಂಗಾಸಕ್ತ ಪ್ರೇಕ್ಷಕರು ನಿಗದಿತ ಸಮಯಕ್ಕೆ ರಂಗಮಂದಿರಕ್ಕೆ ಬರಲು ಅನುಕೂಲವಾಗುತ್ತದೆ.



ಪ್ರಿವ್ಯೂವ್ : ಪ್ರದರ್ಶನಗೊಳ್ಳುವ ನಾಟಕದ ಸಂಕ್ಷಿಪ್ತ ವಿವರಗಳ ಪ್ರಿವ್ಯೂವ್‌ನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿದರೆ ಪ್ರೇಕ್ಷಕರಿಗೆ ನಾಟಕದ ಆಯ್ಕೆಯ ಬಗ್ಗೆ ಮಾಹಿತಿ ದೊರೆತಂತಾಗುತ್ತದೆ. ಎಪ್ಪತ್ತು ಎಂಬತ್ತರ ದಶಕದಲ್ಲಿ ಈ ರೀತಿಯ ಪ್ರಿವ್ಯೂವ್ ಲೇಖನಗಳು ಬಹುತೇಕ ದಿನಪತ್ರಿಕೆಯ ಭಾಗವಾಗಿರುತ್ತಿದ್ದವು.  ಈಗ ಪ್ರಜಾವಾಣಿ ಪತ್ರಿಕೆಯೊಂದನ್ನು ಹೊರತು ಪಡಿಸಿ ಬೇರೆ ಪತ್ರಿಕೆಯವರು ಈ ರೀತಿಯ ಪ್ರಿವ್ಯೋವ್ ಲೇಖನಗಳನ್ನು ಪ್ರಕಟಿಸುತ್ತಿಲ್ಲ. ಆದರೆ.. ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಮುಖ ದಿನಪತ್ರಿಕೆಗಳಲ್ಲಿ ನಗರದ ಕಾರ್ಯಕ್ರಮ ವಿಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ  ಕುರಿತ ಎರಡು ಮೂರು ಸಾಲಿನ ಸಂಕ್ಷಿಪ್ತ ವಿವರಗಳನ್ನಾದರೂ ಪ್ರಕಟವಾಗುತ್ತಿರುವುದಕ್ಕೆ ರಂಗಭೂಮಿ ಪತ್ರಿಕೋದ್ಯಮಕ್ಕೆ ಆಭಾರಿಯಾಗಿದೆ. ಅಷ್ಟಾದರೂ ಕನಿಷ್ಟ ಮಾಹಿತಿ ರಂಗಾಸಕ್ತರಿಗೆ ತಿಳಿಸುವ ಕೆಲಸವನ್ನಾದರೂ ಪತ್ರಿಕೆಗಳು ಮಾಡುತ್ತಿವೆಯಲ್ಲಾ ಅದೂ ಸಹ ರಂಗಮಂದಿರಕ್ಕೆ ಕೆಲವು ಪ್ರೇಕ್ಷಕರನ್ನು ಕರೆತರಲು ಅನುಕೂಲಕರವಾಗಿದೆ.

ರಿವ್ಯೂವ್ಸ್ : ನಾಟಕವೊಂದು ಪ್ರದರ್ಶನಗೊಂಡನಂತರ ಅದರ ಸಾಧಕ ಬಾಧಕಗಳನ್ನು ಕುರಿತು ಕನ್ಸಟ್ರಕ್ಟಿವ್ ವಿಮರ್ಶೆಗಳು ದಿನಪತ್ರಿಕೆಗಳಲ್ಲಿ ಪ್ರಕಟಗೊಳ್ಳಬೇಕಾದದ್ದು ಪ್ರಯೋಗಶೀಲ ನಾಟಕಗಳ ಬದಲಾವಣೆಯ ದೃಷ್ಟಿಯಿಂದ ಬಹಳಾ ಅನುಕೂಲಕರವಾಗಿದೆ. ಒಂದು ರಂಗಪ್ರಯೋಗದಲ್ಲಾದ ನ್ಯೂನ್ಯತೆಗಳನ್ನು ಮುಂದಿನ ಪ್ರಯೋಗಕ್ಕೆ ತಿದ್ದಿಕೊಳ್ಳುವಂತೆ ಮನದಟ್ಟುಮಾಡುವ ಕೆಲಸವನ್ನು ರಂಗವಿಮರ್ಶೆಗಳು ಮಾಡುತ್ತವೆ. ಒಂದು ನಾಟಕ ಪರಿಪೂರ್ಣವಾಗಬೇಕಾದರೆ ಅದಕ್ಕೆ ಕನ್ನಡಿ ಹಿಡಿದು ತೋರಿಸುವ ವಿಮರ್ಶೆ-ವಿಶ್ಲೇಷಣೆಗಳು ಅತ್ಯಂತ ಅಗತ್ಯವಾಗಿವೆ. ಪ್ರಜಾವಾಣಿಯಲ್ಲಿದ್ದ ವೈಎನ್‌ಕೆ, ಜಿ.ಎನ್.ರಂಗನಾಥರಾವ್, ಬಿ.ವಿ.ವೈಕುಂಟರಾಜುರಂತಹ ರಂಗಾಸಕ್ತ ಲೇಖಕರುಗಳು ಹಲವಾರು ಮಹತ್ವದ ಕನ್ನಡ ನಾಟಕಗಳ ಕುರಿತು ವಸ್ತುನಿಷ್ಟವಾದ ವಿಮರ್ಶೆಗಳನ್ನು ಬರೆದು ಪ್ರಕಟಿಸುತ್ತಿದ್ದರು. ಕಾವೆಂ ರಾಜಗೋಪಾಲ್, ಹಾಸಕೃ, ಡಾ.ವಿಜಯಮ್ಮ, ಹುಣಸವಾಡಿ ರಾಜನ್, ನಾರಾಯಣ ರಾಯಚೂರ್‌ರವರಂತಹ ಕೆಲವಾರು ರಂಗಭೂಮಿ ಹಿತಾಸಕ್ತಿಯನ್ನು ಬಯಸುವವರು ಕಾಲಕಾಲಕ್ಕೆ ಪತ್ರಿಕೆಗಳಲ್ಲಿ ರಂಗವಿಮರ್ಶೆಗಳನ್ನು ಬರೆಯುತ್ತಿದ್ದರು. ಆಗೊಂದು ಕಾಲವಿತ್ತು. ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುವ ವಿದ್ಯಾರ್ಥಿಗಳಂತೆ, ರಂಗತಂಡದವರು ತಮ್ಮ ನಾಟಕದ ಪ್ರದರ್ಶನದ ನಂತರ ಯಾವಾಗ ಅದರ ಕುರಿತು ವಿಮರ್ಶೆ ಪತ್ರಿಕೆಯಲ್ಲಿ ಪ್ರಕಟವಾಗುತ್ತದೋ ಎಂದು ಕುತೂಹಲದಿಂದಾ ಕಾಯುತ್ತಿದ್ದರು. ಪ್ರಜಾವಾಣಿಯಂತಹ ಪತ್ರಿಕೆಯಲ್ಲಿ ರಂಗವಿಮರ್ಶೆ ಪ್ರಕಟವಾದರೆ ತಮ್ಮ ಶ್ರಮ ಸಾರ್ಥಕವೆಂದೇ ರಂಗತಂಡದವರು ಭಾವಿಸುತ್ತಿದ್ದರು. ಆಗ ವಿಮರ್ಶೆ ಬರೆಯುವವರೂ ಯಾವುದೇ ಮುಲಾಜಿಗೆ ಒಳಗಾಗದೇ ವಸ್ತುನಿಷ್ಟವಾಗಿ ಬರೆಯುತ್ತಿದ್ದರು. ರಂಗತಂಡದವರೂ ಆ ವಿಮರ್ಶೆಯನ್ನು ಪರಾಮರ್ಶಿಸಿ ನಾಟಕದೊಳಗಿನ ನ್ಯೂನ್ಯತೆಗಳನ್ನು ಮುಂದಿನ ಪ್ರಯೋಗದಲ್ಲಿ ಸರಿಪಡಿಸಿಕೊಳ್ಳುತ್ತಿದ್ದರು. ಆಗ ಪತ್ರಿಕೆಯಲ್ಲಿ ಪ್ರಕಟಗೊಂಡ ವಿಮರ್ಶೆಯೂ ಸಾರ್ಥಕತೆಯನ್ನು ಪಡೆಯುತ್ತಿತ್ತು. ರಂಗಪ್ರಯೋಗಗಳು ಇನ್ನೂ ಉತ್ತಮಗೊಳ್ಳಲು ಪತ್ರಿಕಾ ವಿಮರ್ಶೆಗಳು ಮಾರ್ಗದರ್ಶಕರಂತೆ ಕೆಲಸ ಮಾಡುತ್ತಿದ್ದವು.
 

ದಾಖಲೆಯ ಕಾಯಕ : ಯಾವುದೇ ನಾಟಕವಿರಲಿ, ಅದು ಪ್ರದರ್ಶನ ಆರಂಭವಾದ ಕ್ಷಣದಲ್ಲಿ ಹುಟ್ಟಿ ಅದು ಮುಗಿದಾಗ ಸಾಯುತ್ತದೆ. ನಾಟಕವೊಂದರ ಪ್ರದರ್ಶನದ ಅವಧಿಯಲ್ಲಿ ಮಾತ್ರ ನಾಟಕಕ್ಕೆ ಅಸ್ತಿತ್ವವಿದ್ದು ನೋಡುವ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುತ್ತದೆ. ಆದರೆ.. ಹೀಗೆ ಪ್ರದರ್ಶನಗೊಳ್ಳುವ ನಾಟಕಗಳ ಕುರಿತ ದಾಖಲೆಗಳನ್ನು ಮಾಡುವ ಕಾಯಕವನ್ನು ಅಕ್ಷರ ಮಾಧ್ಯಮಗಳೇ ಕಾಲಕಾಲಕ್ಕೆ ಮಾಡುತ್ತಾ ಬಂದಿವೆ. ಇಂದಿನ ತಲೆಮಾರಿನ ರಂಗಚಟುವಟಿಕೆಗಳ ಕುರಿತು ಮುಂದಿನ ತಲೆಮಾರಿಗೆ ತಿಳಿಸುವ ಕೆಲಸವನ್ನು ರಂಗದಾಖಲೆಗಳು ಮಾಡುತ್ತವೆ. ರಂಗಭೂಮಿಯ ಕುರಿತು ಅಧ್ಯಯನ ಮಾಡುವವರಿಗೆ, ಲೇಖನ ಬರೆಯುವವರಿಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ರಂಗಭೂಮಿ ಸಂಬಂಧಿತ ವಿವರಗಳು ಆಕರಗಳಾಗುತ್ತವೆ. ತಲೆಮಾರಿನಿಂದ ತಲೆಮಾರಿಗೆ ರಂಗಕಲೆಯ ಕುರಿತ ಮಾಹಿತಿ, ವಿವರಗಳನ್ನು ಸಾಗಿಸುವಲ್ಲಿ ಪತ್ರಿಕೆಗಳ ಪಾತ್ರ ತುಂಬಾ ಹಿರಿದಾಗಿದೆ. ರಂಗಭೂಮಿ ಬೆಳೆದು ಬಂದ ದಾರಿ ಅರಿಯಲು, ರಂಗಕಲೆಯ ಕುರಿತ ಸಿಂಹಾವಲೋಕನ ಮಾಡಲು, ಕಾಲಕಾಲಕ್ಕೆ ರಂಗಭೂಮಿಯಲ್ಲಾಗುವ ಬದಲಾವಣೆಗಳನ್ನು ಗ್ರಹಿಸಲು.. ದೊರೆಯುವ ಅಗತ್ಯ ಆಕರ-ಪರಿಕರಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ರಂಗಬರಹಗಳೂ ಮುಖ್ಯವಾದವುಗಳಾಗಿವೆ. ರಂಗಭೂಮಿಯಲ್ಲಾದ ಸ್ಥಿತ್ಯಂತರಗಳನ್ನು ಗುರುತಿಸಲು, ರಂಗತಂಡಗಳ ಸಾಧನೆಗಳನ್ನು, ರಂಗನಿರ್ದೇಶಕರು, ಕಲಾವಿದರು ಹಾಗೂ ನೇಪತ್ಯ ತಜ್ಞರ ರಂಗಕಾಯಕಗಳನ್ನು ದಾಖಲಿಸಲು ಪತ್ರಿಕೆಗಳ ಸಹಕಾರ ಅತ್ಯಗತ್ಯವಾಗಿದೆ. ಯಾವುದೇ ಪ್ರದರ್ಶನ ಮಾಧ್ಯಮಗಳ ಚಟುವಟಿಕೆಗಳನ್ನು ಇತಿಹಾಸದಲ್ಲಿ ದಾಖಲಿಸಲು ಅಕ್ಷರ ಮಾಧ್ಯಮಗಳು ಬೇಕೇ ಬೇಕು.  ಈಗ ಬಹುಜನರ ನಾಡಿಮಿಡಿತವಾಗಿರುವ ಟಿವಿಯಂತಹ ವಿದ್ಯುನ್ಮಾನ ಮಾಧ್ಯಮಗಳು ರಂಗಭೂಮಿಗೆ ಕೊಡುವ ಮಹತ್ವವಂತೂ ಅತೀ ಕಡಿಮೆ. ನಾಟಕವೊಂದು ಪ್ರದರ್ಶನಗೊಳ್ಳುತ್ತದೆ ಎನ್ನುವುದನ್ನು ಜನರಿಗೆ ತಿಳಿಸುವ ಕೆಲಸವನ್ನು ಅಕ್ಷರ ಮಾಧ್ಯಮಗಳೇ ಮಾಡುತ್ತಾ ಬಂದಿವೆ.

ರಂಗಪತ್ರಿಕೆಗಳು: ರಂಗಭೂಮಿ ಚಟುವಟಿಕೆಗಳನ್ನು ದಾಖಲಿಸುವ ಕೆಲಸವನ್ನು ದಿನ, ವಾರ, ತಿಂಗಳ ಪತ್ರಿಕೆಗಳು ಆಗಾಗ ಮಾಡುತ್ತಲೇ ಬಂದಿವೆಯಾದರೂ ಅವುಗಳಿಗಿರುವ ಇತಿಮಿತಿಗಳು ಅಧಿಕ. ದಿನಪತ್ರಿಕೆಗಳಲ್ಲಂತೂ ಸ್ಥಳಾಭಾವದಿಂದಾಗಿ ಪದಗಳ ಮಿತಿಯಲ್ಲಿ ರಂಗ ಲೇಖನ, ವಿಮರ್ಶೆಗಳನ್ನು ಪ್ರಕಟಿಸಲಾಗುತ್ತದೆ. ಇದರಿಂದಾಗಿ ನಾಟಕವೊಂದರ ಕುರಿತ ಲೇಖನಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಲು ಸಾಧ್ಯವಾಗುವುದಿಲ್ಲ. ರಂಗಕಲೆ ಎನ್ನುವುದು ಅನೇಕ ಕಲೆಗಳ ತವರು. ನಾಟಕವೊಂದರಲ್ಲಿ ರಂಗಕೃತಿ, ರಂಗಪಠ್ಯ, ಕಥೆ, ನಿರ್ದೇಶನ, ಅಭಿನಯ, ಸಂಗೀತ, ನೇಪತ್ಯ.. ಹೀಗೆ ಅನೇಕ ವಿಭಾಗಗಳಿರುತ್ತವೆ. ಅವುಗಳ ಜೊತೆಗೆ ನಾಟಕದ ಆಶಯ ಮತ್ತು  ಆಕೃತಿಯ ಕುರಿತ ವಸ್ತುನಿಷ್ಟ ವಿವರಗಳನ್ನೂ ದಾಖಲಿಸಬೇಕಾಗುತ್ತದೆ. ಆದರೆ.. ಇನ್ನೂರು ಇಲ್ಲವೇ ಮುನ್ನೂರು ಪದಗಳಲ್ಲಿ ಎಲ್ಲಾ ವಿವರಗಳನ್ನು ದಾಖಲಿಸಲಂತೂ ಸಾಧ್ಯವಿಲ್ಲ. ದಿನಪತ್ರಿಕೆಗಳಲ್ಲಿ ಸಾಧ್ಯವಾಗದ್ದನ್ನು ರಂಗಪತ್ರಿಕೆಗಳು ಮಾಡಿವೆ. ರಂಗಪತ್ರಿಕೆಗಳಿಗೆ ಕಿರುಪತ್ರಿಕೆಗಳು ಎಂದು ಕರೆಯುತ್ತಾರೆ. ಆದರೆ.. ರಂಗಭೂಮಿಗಾಗಿಯೇ ಮೀಸಲಿರುವ ರಂಗಪತ್ರಿಕೆಗಳು ದಾಖಲೀಕರಣದ ದೃಷ್ಟಿಕೋನದಿಂದ ಹಿರಿದಾದ ಕೆಲಸವನ್ನು ಮಾಡಿವೆ. ರಂಗಚಟುವಟಿಕೆಗಳನ್ನು ಕಾಲಕಾಲಕ್ಕೆ ದಾಖಲಿಸುತ್ತಲೇ ಬಂದಿವೆ. 1933ರಲ್ಲಿಯೇ ಮೊಟ್ಟ ಮೊದಲ ರಂಗಪತ್ರಿಕೆ ರಂಗಭೂಮಿ ಪ್ರಕಟಗೊಂಡಿತು. ತದನಂತರ ಬೀದಿ, ಮುಕ್ತ, ಮಾತುಕತೆ, ರಂಗತೋರಣ, ಸೂತ್ರದಾರ, ಈ ಮಾಸ ನಾಟಕ, ರಂಗಭೂಮಿ ವಿಶ್ಲೇಷಣೆ, ಸಂಸ.. ಮುಂತಾದ ರಂಗಪತ್ರಿಕೆಗಳು ಮಾಡಿದ ರಂಗದಾಖಲೀಕರಣದ ಕೆಲಸ ಅತೀ ಮಹತ್ವದ್ದಾಗಿದೆ. ಆಯಾ ಕಾಲಘಟ್ಟದ ರಂಗಚಟುವಟಿಕೆಗಳು. ವ್ಯಕ್ತಿಚಿತ್ರಣ, ವ್ಯಕ್ತಿ ಸಂದರ್ಶನ ಹಾಗೂ ಅನೇಕಾನೇಕ ರಂಗಲೇಖನಗಳನ್ನು ಈ ರಂಗಪತ್ರಿಕೆಗಳು ಪ್ರಕಟಿಸಿದ್ದು ರಂಗಚರೀತ್ರೆಯನ್ನು ದಾಖಲೀಕರಿಸಿವೆ.


ರಂಗಭೂಮಿಗೆ  ಕನ್ನಡ ಪತ್ರಿಕೆಗಳು ಸ್ಪಂದಿಸಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ಪ್ರಜಾವಾಣಿ, ಉದಯವಾಣಿ, ವಿಜಯಕರ್ನಾಟಕ, ವಿಜಯವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ... ಮುಂತಾದ ಕನ್ನಡ ದಿನಪತ್ರಿಕೆಗಳು ಮೊದಲಿನಿಂದಲೂ ತಮ್ಮ ಇತಿಮಿತಿಗಳಲ್ಲೇ ರಂಗಭೂಮಿ ಚಟುವಟಿಕೆಗಳ ಕುರಿತು ವರದಿ, ಪ್ರಿವ್ಯೂವ್, ರಿವ್ಯೂವ್‌ಗಳನ್ನು ಪ್ರಕಟಿಸಿ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಸಹಕರಿಸುತ್ತಲೇ ಬಂದಿವೆ. ಆಯಾ ಪತ್ರಿಕೆಗಳಿಗೆ ರಂಗಾಸಕ್ತ ರೂವಾರಿಗಳು ಬಂದಾಗಲೆಲ್ಲಾ ರಂಗಭೂಮಿ ಕುರಿತ ಲೇಖನಗಳಿಗೆ ಮಹತ್ವ ಕೊಡುತ್ತಲೇ ಬಂದಿದ್ದಾರೆ. ಕೆಲವು ಪತ್ರಿಕೆಗಳ ಸಂಪಾದಕರುಗಳು ರಂಗಭೂಮಿ ಹಾಗೂ ರಂಗಕರ್ಮಿಗಳ ಜೊತೆಗೆ ಆತ್ಮೀಯ ಒಡನಾಟವನ್ನೂ ಇಟ್ಟುಕೊಂಡಿದ್ದರು. ಸಿಜಿಕೆ, ಆರ್.ನಾಗೇಶ್, ಜೆ.ಲೋಕೇಶ್, ಎ.ಎಸ್.ಮೂರ್ತಿರವರಂತಹ ರಂಗಕರ್ಮಿಗಳೂ ಸಹ ಪತ್ರಿಕೆಗಳ ಸಂಪಾದಕರುಗಳ ಜೊತೆಗೆ ಸಂಪರ್ಕಗಳನ್ನು ಹೊಂದಿದ್ದರು. ವೈಕುಂಟರಾಜುರವರಂತಹ ಸಂಪಾದಕರು ನಾಟಕಗಳನ್ನೂ ಬರೆದು ರಂಗಭೂಮಿಯನ್ನು ಶ್ರೀಮಂತಗೊಳಿಸಿದರು.  ಆದರೆ.. ಇದೆಲ್ಲಾ ಈಗ ಇತಿಹಾಸಕ್ಕೆ ಸೇರಿದ ಹಳೆಯ ಕಥೆ.. 
      
ಜಾಗತೀಕರಣದ ಪ್ರಭಾವದಿಂದಲೋ, ಅಥವಾ ರಂಗಚಟುವಟಿಕೆಗಳನ್ನು ದಾಖಲಿಸುವುದರಿಂದ ಯಾವ ಆದಾಯವೂ ಬರುವುದಿಲ್ಲವೆಂದೋ.. ಈಗೀಗ ದಿನ ಪತ್ರಿಕೆಗಳೂ ಸಹ ಯಾಕೋ ರಂಗಭೂಮಿಯತ್ತ ದಿವ್ಯ ನಿರ್ಲಕ್ಷವನ್ನು ವಹಿಸುತ್ತಿವೆ. ಇದೂ ಒಂದು ಕಾರಣವಾಗಿ ಮಹಾನಗರದಲ್ಲಿ ರಂಗಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ರಂಗಪತ್ರಿಕೆಗಳೂ ಸಹ ಸಂಪನ್ಮೂಲಗಳ ಕೊರತೆಯಿಂದಾಗಿ ಒಂದೊಂದಾಗಿ ನಿಂತೇ ಹೋಗಿವೆ. ಇದರ ಜೊತೆಗೆ ರಂಗಭೂಮಿಯ ಕುರಿತು ಬರೆಯುವವರೂ ಕಡಿಮೆ, ಬರೆದರೂ ಅದನ್ನು ಪ್ರಕಟಿಸುವ ಪತ್ರಿಕೆಗಳೂ ಅಪರೂಪವಾಗಿವೆ. ಕೆಲವೊಮ್ಮೆ ರಂಗಭೂಮಿಯ ಕುರಿತು ಪ್ರಾಯೋಗಿಕ ಅನುಭವಗಳಿಲ್ಲದ ದಿನಪತ್ರಿಕೆಗಳ ವರದಿಗಾರರೇ ವಿಮರ್ಶೆಯ ಹೆಸರಲ್ಲಿ ನಾಟಕದ ವರದಿಯನ್ನೋ, ಕಥೆಯನ್ನೋ ಬರೆದು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ. ಎಷ್ಟೋ ಸಲ ರಂಗಚಟುವಟಿಕೆಗಳ ಕುರಿತು ತಪ್ಪು ಮಾಹಿತಿಗಳನ್ನು ವರದಿಗಾರರು  ಬರೆದು ಪ್ರಕಟಿಸಿದ್ದೂ ಇದೆ. ಕರ್ನಾಟಕದ ಪ್ರಮುಖ ಪತ್ರಿಕೆಗಳು ಸಿನೆಮಾ ಹಾಗೂ ದೂರದರ್ಶನ ಮಾಧ್ಯಮಗಳಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ರಂಗಭೂಮಿಯತ್ತ ಕೊಡದೇ ಇರುವುದು ರಂಗಕಲೆಯ ದುರಂತವಾಗಿದೆ. ಪತ್ರಿಕೋದ್ಯಮಿಗಳು ಹಾಗೂ ರಂಗಕರ್ಮಿಗಳ ನಡುವೆ ಇದ್ದಂತ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ಸಂಬಂಧ ಈಗ ಸವಕಳಿಯಾಗಿದೆ.

ರಂಗಚಟುವಟಿಕೆಗಳು ಮಹಾನಗರದಲ್ಲಿ ವ್ಯಾಪಕವಾಗಿವೆ.. ಹೊಸ ತಲೆಮಾರಿನ ಯುವಕರು ರಂಗಕ್ರಿಯೆಯಲ್ಲಿ ಆಸಕ್ತಿ ಹೊಂದಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಈ ಹೊಸತಲೆಮಾರಿನವರ ರಂಗಚಟುವಟಿಕೆಗಳು ಪತ್ರಿಕೆಯಲ್ಲಿ ದಾಖಲಾಗುವುದೇ ಅಪರೂಪವಾಗಿವೆ. ಇತ್ತೀಚಿನ ಅಚ್ಚರಿಯ ಸಂಗತಿ ಏನೆಂದರೆ.. ಪ್ರಜಾವಾಣಿಯಂತಹ ಪತ್ರಿಕೆಯ ಪ್ರಸ್ತುತ ಸಂಪಾದಕ ಮಂಡಳಿಯು ಹೊರಗಿನ ರಂಗಬರಹಗಾರರು ಬರೆಯುವ ರಂಗವಿಮರ್ಶೆಗಳಿಗೆ ಅಘೋಷಿತವಾಗಿ ತಡೆಯೊಡ್ಡಿದೆ. ರಂಗಭೂಮಿಯ ಕುರಿತು ಏನಾದರೂ ಬರೆಯಲೇಬೇಕೆಂದರೆ ಆ ಪತ್ರಿಕೆಯಲ್ಲಿ ಕೆಲಸ ಮಾಡುವವರೇ ಬರೆಯಬೇಕಂತೆ. ಯಾರು ಬರೆದರೇನು ಪತ್ರಿಕೆಯಲ್ಲಿ ಪ್ರಕಟವಾದರೆ ಸಾಕಲ್ಲವೇ? ಆದರೆ.. ಹೀಗೆ ರಂಗಭೂಮಿ ಕುರಿತು ಬರೆಯುವ ಈ ತಲೆಮಾರಿನ ಬಹುತೇಕ ವರದಿಗಾರರಿಗೆ ರಂಗಭೂಮಿಯ ಭೂತ, ವರ್ತಮಾನಗಳ ಕುರಿತು ಅರಿವು ಇರುವುದಿಲ್ಲಾ, ಅಧ್ಯಯನಶೀಲತೆಗೆ ಅವರಲ್ಲಿ ಸಮಯವು ಇರುವುದಿಲ್ಲ ಹಾಗೂ ರಂಗಕ್ರಿಯೆಯಲ್ಲಿ ಪ್ರಾಯೋಗಿಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವುದಿಲ್ಲ. ಹೀಗಾಗಿ ನಾಟಕಗಳ ಕುರಿತು ಒಳನೋಟ, ಹೊರದೃಷ್ಟಿಕೋನಗಳಿಲ್ಲದೇ ರಂಗಕಲೆಯೂ ಕೂಡ ಇಲ್ಲಿ ಶುಷ್ಕವರದಿಗಳಾಗಿ, ಕೇವಲ ಮಾಹಿತಿಗಳಾಗಿ ಪ್ರಕಟಗೊಳ್ಳುತ್ತಿವೆ.
   
ಇಂತಹ ಸಂದರ್ಭದಲ್ಲಿ ರಂಗತಂಡದವರು ಈಗ ಸೋಶಿಯಲ್ ಮೀಡಿಯಾಗಳ ಮೂಲಕ ಪ್ರಚಾರವನ್ನು ಮಾಡುವ ಅನಿವಾರ್ಯತೆಗೊಳಗಾಗಿದ್ದಾರೆ. ಫೇಸ್‌ಬುಕ್, ವಾಟ್ಸಾಪ್, ಇನ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲ ತಾಣಗಳು ನಾಟಕಗಳ ಪ್ರಚಾರಕ್ಕೆ ಪರಿಕರಗಳಾಗಿ ಬಳಕೆಯಾಗುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಭಿತ್ರಿಪತ್ರಗಳು, ಪಾಂಪ್ಲೆಟ್ಗಳು, ಆಹ್ವಾನ ಪತ್ರಿಕೆಗಳು, ಆಡಿಯೋ ಹಾಗೂ ವಿಡಿಯೋ ಕ್ಲಿಪ್ಪಿಂಗ್ಸಗಳನ್ನು ವಿನ್ಯಾಸಗೊಳಿಸುವ ರಂಗತಂಡಗಳು ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ರಂಗಾಸಕ್ತರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಾರೆ. ಆದರೆ.. ಇವುಗಳು ವರ್ತಮಾನದ ಸುದ್ದಿಯನ್ನು ತಿಳಿಸುತ್ತವೆಯೇ ಹೊರತು ರಂಗಚರಿತ್ರೆಯಲ್ಲಿ ದಾಖಲಾಗುವುದು ಕಡಿಮೆ. ಯಾಕೆಂದರೆ ಜಾಲತಾಣಗಳಲ್ಲಿರುವ ಮಾಹಿತಿಗಳಿಗೆ ಆಯಸ್ಸು ಕಮ್ಮಿ. ಪತ್ರಿಕೆಗಳಲ್ಲಿ ರಂಗಕ್ರಿಯೆಗಳ ಕುರಿತ ವಿವರಗಳು ಪ್ರಕಟಗೊಂಡರೆ ಅವು ಅಕ್ಷರ ಮಾಧ್ಯಮದಲ್ಲಿ  ದಾಖಲಾಗಿ  ಇಂದಿನ ಹಾಗೂ ಮುಂದಿನ ತಲೆಮಾರಿಗೆ ತಲುಪುತ್ತವೆ. ಆ ಮೂಲಕ ರಂಗಚರಿತ್ರೆಯಲ್ಲಿ ಆಯಾ ಕಾಲದ ರಂಗಕ್ರಿಯೆಗಳು ನಮೂದಾಗುತ್ತಾ ಹೋಗುತ್ತವೆ.

ಸಾಂಸ್ಕೃತಿಕ ಕಾಯಕಗಳನ್ನು ದಾಖಲೀಕರಿಸುವ ನಿಟ್ಟಿನಲ್ಲಿ ಈ ನಾಡಿನ ಸಮಸ್ತ ಪತ್ರಿಕೆಗಳ ರೂವಾರಿಗಳು ಯೋಚಿಸಬೇಕಿದೆ.  ರಂಗಭೂಮಿಯನ್ನು ಉಳಿಸಿ ಬೆಳೆಸುವ ಕಾಳಜಿಯನ್ನು ಪತ್ರಿಕೆಗಳು ಹೊಂದಬೇಕಾಗಿದೆ. ರಂಗಭೂಮಿಯ ಪ್ರಾತಿನಿಧಿಕ ಸಂಸ್ಥೆ ಎನ್ನಲಾಗುವ ಕರ್ನಾಟಕ ನಾಟಕ ಅಕಾಡೆಮಿಯು ಎಲ್ಲಾ ದಿನಪತ್ರಿಕೆಗಳ ಸಂಪಾದಕರುಗಳನ್ನು ಕಾಲಕಾಲಕ್ಕೆ ಬೇಟಿಯಾಗಿ ಇಲ್ಲವೇ ಪತ್ರಬರೆದು ಸಿನೆಮಾ ಚಟುವಟಿಕೆಗಳಿಗೆ ಮೀಸಲಿಟ್ಟಂತೆ ರಂಗಚಟುವಟಿಕೆಗಳಿಗೆ ಕನಿಷ್ಟ ವಾರಕ್ಕೆ ಒಂದರ್ಧ ಪುಟವನ್ನಾದರೂ ಮೀಸಲಿಡಬೇಕೆಂದು ಆಗ್ರಹಿಸಬೇಕಿದೆ. ಬರವಣಿಗೆಯನ್ನು ರೂಢಿಸಿಕೊಂಡ ರಂಗಾಸಕ್ತ ಯುವಕರಿಗಾಗಿ ಹಾಗೂ ಪತ್ರಿಕೆಗಳ ವರದಿಗಾರರಿಗಾಗಿ ನಾಟಕ ಅಕಾಡೆಮಿಯು ರಂಗವಿiರ್ಶಾ ಕಮ್ಮಟಗಳನ್ನು ಆಯೋಜಿಸಿ ತರಬೇತಿಯನ್ನು ಕೊಡುವ ವ್ಯವಸ್ಥೆ ಮಾಡಬೇಕಿದೆ. ರಂಗಭೂಮಿ ಕುರಿತ ವರದಿ, ಮಾಹಿತಿ, ವಿಮರ್ಶೆಗಳನ್ನು ಆಗಾಗ ಪ್ರಕಟಿಸಬೇಕೆಂದು ಪತ್ರಿಕೆಗಳ ಸಂಪಾದಕರ ಮೇಲೆ ಒತ್ತಡ ತರುವ ಕೆಲಸವನ್ನು ಹಿರಿಯ ರಂಗಕರ್ಮಿಗಳು ಮಾಡಬೇಕಿದೆ. ಈ ಹಿಂದೆ ಇದ್ದಂತೆ ರಂಗಭೂಮಿ ಹಾಗೂ ಪತ್ರಿಕೆಗಳ ಅವಿನಾಭಾವ ಸಂಬಂಧ ಮತ್ತೆ ಮುಂದುವರೆಯಬೇಕಿದೆ. ಒಟ್ಟಿನ ಮೇಲೆ ರಂಗಕಲೆ ಉಳಿದು ಬೆಳೆಯಬೇಕಿದೆ. ಇಂದಿನ ಹಾಗೂ ಮುಂದಿನ ತಲೆಮಾರಿನ ರಂಗಾಸಕ್ತರಿಗೆ, ಅಧ್ಯಯನಶೀಲರಿಗೆ ರಂಗಚರಿತ್ರೆಯನ್ನು ತಿಳಿಯುವಂತೆ ಮಾಡಬೇಕಿದೆ. ಇದಕ್ಕೆ ಎಲ್ಲಾ ಪತ್ರಿಕೆಗಳ ಸಹಕಾರ ಅತ್ಯಂತ ಅಗತ್ಯವಾಗಿದೆ.

-ಶಶಿಕಾಂತ ಯಡಹಳ್ಳಿ   


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ