ಬುಧವಾರ, ಜುಲೈ 22, 2015

“ರೈತರ ಆತ್ಮಹತ್ಯೆ ಮತ್ತು ಕನ್ನಡ ರಂಗಭೂಮಿ”




ಕನ್ನಡ ರಂಗಭೂಮಿ ಸಮಾಜದ ಎಲ್ಲಾ ಆಯಾಮಗಳಿಗೂ ಕಾಲಕಾಲಕ್ಕೆ ಸ್ಪಂದಿಸುತ್ತಲೇ ಬಂದಿದೆ. ಅದರೆ ಅದ್ಯಾಕೋ ಅನ್ನದಾತರಾದ ರೈತರ ಸಮಸ್ಯೆಗಳಿಗೆ ಹಾಗೂ ಯಾತನೆಗಳಿಗೆ ಒಂದಿಷ್ಟು ವಿಮುಖವಾಗಿದೆ. ಕೆಲವಾರು ನಾಟಕಗಳಲ್ಲಿ ಸಾಂದರ್ಭಿಕವಾಗಿ ರೈತರ ಬದುಕು ಬವಣೆಗಳ ಕುರಿತು ಪ್ರಸ್ತಾಪಿಸಲಾಗಿದೆಯಾದರೂ ರೈತರ ಸೋಲಿಗೆ ಸಾವಿಗೆ ಕಾರಣ ಹಾಗೂ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಹೇಳುವಂತಹ ನಾಟಕಗಳಂತೂ ಅಪರೂಪ.... ಬಹುಷಃ ರೈತರ ನೋವುಸಾವಿಗೆ ಮಿಡಿದು ಅದಕ್ಕೆ ಕಾರಣೀಕರ್ತವಾದ ಶೋಷಕ ವ್ಯವಸ್ಥೆಯನ್ನು ಬೆತ್ತಲುಗೊಳಿಸಿದ ಸಾರ್ವಕಾಲಿಕ ನಾಟಕ ಏನಾದರೂ ಇದ್ದರೆ ಅದು ಕುವೆಂಪುರವರ ಧನ್ವಂತರಿ ಚಿಕಿತ್ಸೆ ರಂಗಪ್ರಯೋಗ. ಇದೂ ಕೂಡಾ ನಾಟಕವಾಗಿಯೇ ರಚಿತವಾಗಿಲ್ಲ. ಕುವೆಂಪುರವರು ಬರೆದ ಸಣ್ಣ ಕಥೆಯಾಗಿದ್ದು ಅದನ್ನು 1976 ರಲ್ಲಿ ಡಾ.ವಿಜಯಾರವರು ರಂಗರೂಪವಾಗಿಸಿ ಕನ್ನಡ ರಂಗಭೂಮಿಗೆ ದೊಡ್ಡ ಕೊಡುಗೆ ನೀಡಿದರು.
                  
ಆಳುವ ವ್ಯವಸ್ಥೆಯ ಅವಿವೇಕದ ಪರಮಾವಧಿಯಿಂದಾಗಿ ರೈತರು ಬದುಕುವ ದಾರಿಕಾಣದೇ ದಿಕ್ಕೆಟ್ಟು ಸಾಲದ ಸುಳಿಗೆ ಸಿಕ್ಕು ಸಾವಿನ ಮನೆಯತ್ತ ಸಾಲುಗಟ್ಟಿ ಹೋಗುತ್ತಿರುವ ಪ್ರಸ್ತುತ ಆಘಾತಕಾರಿ ಸನ್ನಿವೇಶದಲ್ಲಿ  ಧನ್ವಂತರಿ ಚಿಕಿತ್ಸೆ ನಾಟಕ ಆಗಿನಕಿಂತಲೂ ಈಗ ಅತ್ಯಂತ ಹೆಚ್ಚು ಪ್ರಸ್ತುತವಾಗಿದೆ. ಅನ್ನದಾತರ ನಿಕೃಷ್ಟ ಸ್ಥಿತಿಯನ್ನು ಹೇಳುತ್ತಲೇ ನಾಗರೀಕ ಸಮಾಜದ ನ್ಯೂನ್ಯತೆಗಳನ್ನು ನಾಟಕ ತೆರೆದಿಡುತ್ತದೆ. ಕುವೆಂಪುರವರು ಅಲೌಖಿಕ ಪ್ರತಿಮೆಯ ಮೂಲಕ ಲೌಕಿಕ ದುರಂತ ಘಟನೆಯೊಂದನ್ನು ಹೇಳುವ ಮೂಲಕ ರೈತರ ಸಮಸ್ಯೆಗೆ ಸಾರ್ವಕಾಲಿಕ ಸ್ಪಂದನೆಯನ್ನು ತೋರಿದ್ದಾರೆ. ರೈತರ ಎದೆಯ ಮೇಲೆ ಇಡೀ ಶೋಷಕ ಸಮಾಜವೇ ಕುಳಿತು ಅದು ಹೇಗೆ ಅಟ್ಟಹಾಸಗೈಯುತ್ತಿದೆ. ಪುರೋಹಿತಶಾಹಿಗಳು ರೈತಾಪಿ ಜನರನ್ನು ಬಳಸಿಕೊಂಡು ಅದು ಹೇಗೆ ಸುಲಿಗೆ ಸಾಮ್ರಾಜ್ಯ ಪ್ರತಿಷ್ಠಾಪಿಸಿಕೊಂಡಿದ್ದಾರೆ ಎನ್ನುವುದನ್ನು ಧನ್ವಂತರಿ ಚಿಕಿತ್ಸೆ ಚಿಕಿತ್ಸಕ ದೃಷ್ಟಿಕೋನದಲ್ಲಿ ಪ್ರಸ್ತುತಗೊಳಿಸಿದೆ.

ಹೃದಯ ಕಲಕುವ ಅರ್ತನಾದವೊಂದು ವಿಶ್ವಾಮಿತ್ರ, ಪರಶುರಾಮರಂತಹ ಕಠಿನ ಮನಸ್ಸಿನವರನ್ನೂ ಕಲಕಿ ಗಡಗಡ ನಡುಗಿಸುತ್ತದೆ. ಅರ್ತನಾದದ ಮೂಲ ಹುಡುಕಿಕೊಂಡು ಭೂಲೋಕಕ್ಕೆ ಬಂದ ದೇವರ್ಷಿಗಳು ಬ್ರಹತ್ ಸೌಧಗಳಲ್ಲಿ, ಹೊಟೇಲು ಸಿನೆಮಾ ಮಂದಿರಗಳಲ್ಲಿ ಹುಡುಕಿದಷ್ಟೂ ಭಯಂಕರ ನೋವಿನ ದ್ವನಿ ಹೆಚ್ಚಾಗುತ್ತಲೇ ಹೋಗುತ್ತದೆ. ಸುಖ ಲೋಲುಪರಾದ ಶ್ರೀಮಂತರ ವೈಭವೋಪಿತ ಬದುಕು ಹಾಗೂ ಪುರೋಹಿತರ ಸುಲಿಗೆ ಸಾಮ್ರಾಜ್ಯದ ಅತಿರೇಕಗಳನ್ನು ಕಂಡು ಬೆರಗಾದ ದೇವರ್ಷಿಗಳು ಕೊನೆಗೂ ನರಳುವ ನೋವಿನ ದ್ವನಿಯನ್ನು ಜೋಪಡಿಯೊಂದರಲ್ಲಿ ಕಂಡುಹಿಡಿಯುತ್ತಾರೆ. ಅಲ್ಲಿ ನರಳುತ್ತಾ ಬಿದ್ದಿರುವ ರೈತನನ್ನು ಕಂಡು ತಲ್ಲಣಗೊಳ್ಳುತ್ತಾರೆ. ಬ್ರಹತ್ ಸೌಧಗಳು, ನಗರೀಕರಣದ ವಿಕ್ಷಿಪ್ತತೆಗಳುಶ್ರೀಮಂತ ವರ್ಗದ ಆಡಂಬರ ಜೀವನದ ಭಾರಗಳು... ರೈತನ ಎದೆಯ ಮೇಲೆ ಹೇರಲ್ಪಟ್ಟಿವೆ. ಹೀಗೆ ಆಧುನಿಕ ಅವ್ಯವಸ್ಥೆಯ ಹೊರಲಾರದ ಭಾರವನ್ನು ತನ್ನೆದೆಯಮೇಲೆ ಹೊತ್ತು ಮೇಲೇಳಲಾರದೇ ನರಳುತ್ತಿರುವ ಅನ್ನದಾತನ ದುರಂತ ಪರಿಸ್ಥಿತಿಯನ್ನು ನೋಡಿ ದೇವರ್ಷಿಗಳೇ ತಳಮಳಗೊಳ್ಳುತ್ತಾರೆ. ಕೊನೆಗೆ ದೇವರ್ಷಿ ವಿಶ್ವಾಮಿತ್ರರು ರೈತನ ರೋಗನಿವಾರಣೆಗೆ ದೇವಲೋಕದ ವೈದ್ಯ ಧನ್ವಂತರಿಯನ್ನೇ ಕರೆಸುತ್ತಾರಾದರೂ ಆತನಿಂದಲೂ ಚಿಕಿತ್ಸೆ ಸಾಧ್ಯವಾಗದೇ ಅಸಹಾಯಕನಾಗುತ್ತಾನೆ.

ಡಾ.ವಿಜಯಾರವರು
ಕುವೆಂಪುರವರ ಕಥೆಯಲ್ಲಿ ಇಡೀ ಶೋಷಕ ವ್ಯವಸ್ಥೆ ಬಗ್ಗೆಯೇ ಆಕ್ರೋಶ ವ್ಯಕ್ತವಾಗುತ್ತದೆ. ವಿಶ್ವಾಮಿತ್ರ ಪ್ರಳಯವನ್ನು ಸೃಷ್ಟಿಸಿ ಮತ್ತೆ ರೈತಾಪಿ ದುಡಿಯುವ ಜನರ ಪರವಾಗಿ ಭೂಮಿಯನ್ನು ಮರುಸೃಷ್ಟಿ ಮಾಡಲು ಬಯಸುತ್ತಾನೆ. ಆದರೆ.. ಡಾ.ವಿಜಯಾರವರು ಕುವೆಂಪುರವರ ಅನುಮತಿಯನ್ನು ಪಡೆದು ನಾಟಕದಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿದರು. ಕೊಟ್ಟ ಕೊನೆಗೆ ರೈತನೇ ಎದ್ದು ಪಂಜು ಹಿಡಿದು ಶೋಷಕ ವ್ಯವಸ್ಥೆಗೆ ಪ್ರತಿಭಟನೆಯನ್ನು ತೋರಿಸುತ್ತಾ ತನ್ನ ವಿಮೋಚನೆಯತ್ತ ಸಾಗುತ್ತಾನೆ.... ವಿಜಯಾರವರು ಕೊಟ್ಟ ಅಂತ್ಯ ವಾಸ್ತವಿಕವೂ ಹಾಗೂ ಸಮರ್ಥನೀಯವೂ ಆಗಿತ್ತು. ವಿಶ್ವಾಮಿತ್ರನಂತೆ ಇಡೀ ವ್ಯವಸ್ಥೆಯನ್ನು ಕೊನೆಗಾಣಿಸಿ ಮತ್ತೆ ಮರುಸೃಷ್ಟಿ ಮಾಡಲಂತೂ ಈಗ ಸಾಧ್ಯವಿಲ್ಲ. ನಮ್ಮ ಸ್ವಾರ್ಥಿಯಾದ ದಲ್ಲಾಳಿ ಆಳುವ ವರ್ಗಗಳಿಂದ ರೈತಾಪಿ ಜನರ ಉದ್ಧರವನ್ನಂತೂ ನಿರೀಕ್ಷಿಸುವಂತಿಲ್ಲ. ಯಾವಾಗ ರೈತಾಪಿ ದುಡಿಯುವ ಜನರೇ ನಮ್ಮ ಮೇಲಾಗುವ ಅನ್ಯಾಯವನ್ನು ಹಾಗೂ ಅಸಮಾನತೆಯನ್ನು ವಿರೋಧಿಸಿ ಒಂದಾಗಿ ವಿರೋಚಿತ ಹೋರಾಟದ ಮೂಲಕ ಸುಸ್ಥಿರ ಬದುಕನ್ನು ರೂಪಿಸಿಕೊಳ್ಳುತ್ತಾರೋ ಅಲ್ಲಿವರೆಗೂ ರೈತರ ಸಮಸ್ಯೆಗಳಿಗೆ ಖಾಯಂ ಪರಿಹಾರ ಎನ್ನುವುದು ಇಲ್ಲವೇ ಇಲ್ಲ.

ಕುವೆಂಪುರವರ ಧನ್ವಂತರಿ  ಚಿಕಿತ್ಸೆ ಕೇವಲ ಕಾಲ್ಪನಿಕ ಕಥೆಯಾಗಿರಬಹುದು, ಆದರೆ ರೈತರ ದುರಂತ ಸ್ಥಿತಿಯನ್ನು ನೋಡಿದರೆ ವಾಸ್ತವದ ಅನಾವರಣವನ್ನೇ ಕಥೆ ರೂಪಕವಾಗಿ ಕಟ್ಟಿಕೊಟ್ಟಿದೆ. ದಲ್ಲಾಳಿಗಳು, ವ್ಯಾಪಾರಸ್ತರು, ಬಂಡವಾಳಶಾಹಿಗಳು, ಬೀಜ, ಗೊಬ್ಬರ ಕೀಟನಾಶಕ ಮಾರುವ ಕಾರ್ಪೋರೇಟ್ ಕಂಪನಿಗಳು ರೈತರ ಬದುಕಿನ ಮೇಲೆ ತಮ್ಮೆಲ್ಲಾ ಲಾಭದ ಭಾರವನ್ನು ಹೇರಿ ಕುಳಿತಿವೆ. ಇವರೆಲ್ಲರ ಲೂಟಿಕೋರತನಕ್ಕೆ ರೈತರೇ ಬಲಿಪಶುವಾಗಿದ್ದಾರೆ. ಆಳುವ ಎಲ್ಲಾ ನಮೂನಿಯ ಸರಕಾರಗಳೂ ಸಹ ರೈತನ ಹೆಸರಿನಲ್ಲಿ ರೈತರನ್ನೇ ಶೋಷಿಸುತ್ತಾ ಬಂದಿವೆಯೇ ಹೊರತು ರೈತಾಪಿ ಜನಗಳ ಉದ್ಧಾರವನ್ನಲ್ಲ. ಆದರೆ ರೈತರ ನೋವು, ಸಮಸ್ಯೆ, ಅರ್ತನಾದವನ್ನು ಕೇಳಿ ಸೂಕ್ತ ಪರಿಹಾರಕ್ಕಾಗಿ ಈಗ ಯಾವುದೇ ವಿಶ್ವಾಮಿತ್ರ-ಪರುಶುರಾಮರು ಬರುವುದಿಲ್ಲ. ರೈತಾಪಿ ಜನಗಳೇ ಸಂಘಟಿತರಾಗಿ ತಮ್ಮ ಶೋಷಣೆಗೆ ನಿಜವಾದ ಕಾರಣ ಹಾಗೂ ಕಾರಣೀಕರ್ತರನ್ನು ಗುರುತಿಸಿ ಶೋಷಣೆಯ ವಿರುದ್ಧ ಒಂದಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಮಾರ್ಗವೊಂದೇ ಅವರ ವಿಮೋಚನೆಗೆ ಇರುವ ದಾರಿ ಎಂಬುದನ್ನು ಡಾ.ವಿಜಯಾರವರ ರಂಗರೂಪದ ಧನ್ವಂತರಿ  ಚಿಕಿತ್ಸೆ ಅನಾವರಣಗೊಳಿಸುತ್ತದೆ.
 
ಬಿ.ಸುರೇಶರವರು 'ಪತ್ರಕರ್ತರ ಪರಿಷತ್ತಿನ ಪತ್ರಕರ್ತರಿಗೆ 'ಧನ್ವಂತರಿ ಚಿಕಿತ್ಸೆ'
ನಾಟಕವನ್ನು ನಿರ್ದೇಶಿಸಿದ್ದರು. ಈ  ನಾಟಕದ ಅಪರೂಪದ ಚಿತ್ರ ಇದು.
ಎಡಗಡೆಯಿಂದ ಪ್ರಕಾಶ ರೈ, ಎ.ಎಂ.ಪ್ರಕಾಶ್ ಹಾಗೂ ಸುಧೀಂದ್ರ ಕುಲಕರ್ಣಿ

1977 ರಲ್ಲಿ ಮೊದಲ ಬಾರಿಗೆ .ಎಸ್.ಮೂರ್ತಿಯವರ ನೇತೃತ್ವದ ಚಿತ್ರಾ ಕಲಾವಿದರು ತಂಡ ಡಾ. ಚಂದ್ರಶೇಖರ ಕಂಬಾರರ ನಿರ್ದೇಶನದಲ್ಲಿ ಧನ್ವಂತರಿ ಚಿಕಿತ್ಸೆ ನಾಟಕವನ್ನು ಪ್ರದರ್ಶಿಸಲಾಯಿತು. ಸ್ವತಃ .ಎಸ್.ಮೂರ್ತಿಯವರೇ ಇದರಲ್ಲಿ ನಟಿಸಿದ್ದರು. ಚಾಮರಾಜಪೇಟೆಯಲ್ಲಿರುವ ಬೆಂಗಳೂರು ಹೈಸ್ಕೂಲ್ ಮೈದಾನದಲ್ಲಿ ನಾಟಕದ ಮೊದಲ ಪ್ರಯೋಗ ಪ್ರದರ್ಶನಗೊಂಡಿತು. ನಂತರ 1983ರಲ್ಲಿ ಬರಗಾಲದಿಂದ ರೈತರು ಬಸವಳಿದಿದ್ದಾಗ ಬಿ.ಸುರೇಶರವರು ಬಿಹೆಚಇಎಲ್ ಕಾರ್ಖಾನೆಯ ಕಲಾವಿದರಿಗೆ ನಾಟಕವನ್ನು ನಿರ್ದೇಶಿಸಿ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮಾಡಿಸಿದ್ದರು. ಮತ್ತೆ 1985 ರಲ್ಲಿ  ಪತ್ರಕರ್ತರ ಪರಿಷತ್ತು ಧನ್ವಂತರಿ ಚಿಕಿತ್ಸೆ ನಾಟಕವನ್ನು ಬಿ.ಸುರೇಶರವರ ನಿರ್ದೇಶನದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಯೋಗಿಸಿತ್ತು. ನಾಟಕ ನೋಡಲು ಇಡೀ ರಂಗಭೂಮಿ ಹಾಗೂ ಸಿನೆಮಾರಂಗದ ಪ್ರಖ್ಯಾತರ ದಂಡೇ ಕಲಾಕ್ಷೇತ್ರಕ್ಕೆ ಬಂದಿತ್ತು. ನಾಟಕದ ವಿಶೇಷತೆ ಏನೆಂದರೆ ಪ್ರಕಾಶ್ರೈ ರವರನ್ನು ಹೊರತು ಪಡಿಸಿ ನಾಟಕದಲ್ಲಿ ಅಭಿನಯಿಸಿದವರೆಲ್ಲಾ ಪತ್ರಕರ್ತರೇ ಆಗಿದ್ದರು. ನಾಟಕ ಪ್ರದರ್ಶನದಲ್ಲಿ ಪ್ರಕಾಶ್ ರೈರವರ ಅಭಿನಯ ಪ್ರತಿಭೆಯನ್ನು ನೋಡಿ ಬೆರಗಾದ ರಾಜೇಂದ್ರಸಿಂಗ್ ಬಾಬುರವರು ತಮ್ಮ ಮುತ್ತಿನಹಾರ ಸಿನೆಮಾದಲ್ಲಿ ನಟಿಸುವ ಅವಕಾಶ ಕೊಟ್ಟಿದ್ದರಿಂದ ಮುಂದೆ ಸಿನೆಮಾ ರಂಗಕ್ಕೆ ಪ್ರಕಾಶ್ ರೈ ಬಹುದೊಡ್ಡ ಕೊಡುಗೆಯಾದರು.

ಬಿ.ಸುರೇಶ್ ರವರ ನಿರ್ದೇಶನದ 'ಧನ್ವಂತರಿ ಚಿಕಿತ್ಸೆ' ನಾಟಕದ ದೃಶ್ಯ
ಆಮೇಲೆ ಪ್ರಯೋಗರಂಗ ರಂಗತಂಡ ಧನ್ವಂತರಿ ಚಿಕಿತ್ಸೆಯನ್ನು 1979 ರಲ್ಲಿ ವೈ.ಎಸ್.ವಿ ದತ್ತಾರವರ ನಿರ್ದೇಶನದಲ್ಲಿ ರಂಗನಾಟಕವಾಗಿ ಪ್ರದರ್ಶಿಸಿತು. ತದನಂತರ ಪ್ರಯೋಗರಂಗದ ನಾಗರಾಜಮೂರ್ತಿಯವರು ನಾಟಕವನ್ನು ತಮ್ಮ ತಂಡಕ್ಕೆ ಮರು ನಿರ್ದೇಶಿಸಿ ಕೆಲವಾರು ಪ್ರಯೋಗಗಳನ್ನು ಮಾಡಿ ರೈತರ ನರಕಸದೃಶ ಬದುಕನ್ನು ರಂಗದಂಗಳದಲ್ಲಿ ಅನಾವರಣಗೊಳಿಸಿದರು. ಹಾಗೆಯೇ 2008 ರಲ್ಲಿ ಪ್ರಸಾದ್ ರಕ್ಷಿತಿರವರು 'ಧನ್ವಂತರಿ ಚಿಕಿತ್ಸೆ' ನಾಟಕವನ್ನು ಸಕಲೇಶಪುರ ತಾಲೂಕಿನ ಬೆಳ್ಳಿಕೆರೆ ಗ್ರಾಮದ 'ಜೈ ಕರ್ನಾಟಕ ಸಂಘ' ದ ಕಲಾವಿದರಿಗೆ ನಿರ್ದೇಶಿಸಿದ್ದರು.. ಇತ್ತೀಚೆಗೆ ಬಿ.ಸುರೇಶರವರು ರೈತನೊಬ್ಬನ ಸಾವಿನ ನಂತರ ಆತನ ಪತ್ನಿ ಪರಿಹಾರಕ್ಕಾಗಿ ಪರದಾಡಿ, ದುಷ್ಟ ವ್ಯವಸ್ಥೆಯ ಸುಳಿಗೆ ಸಿಕ್ಕು ತನ್ನ ಬದುಕನ್ನೇ ಹೇಗೆ ಹಾಳುಮಾಡಿಕೊಂಡು ದುರಂತಕ್ಕೊಳಗಾಗಬೇಕಾಯಿತು ಎನ್ನುವುದನ್ನು ತಮ್ಮ ಗಿರಿಜಾ ಕಲ್ಯಾಣ ನಾಟಕದಲ್ಲಿ ಬರೆದು ತೋರಿಸಿದ್ದು, ನಾಟಕವನ್ನು ಬಿ.ಜಯಶ್ರೀ, ಮಾಲತೇಶ್ ಬಡಿಗೇರ್, ಹಿಂದಿಯಲ್ಲಿ ಎಂ.ಎಸ್.ಸತ್ಯು ಮೊದಲಾದವರು ನಿರ್ದೇಶಿಸಿದ್ದಾರೆ. ಹಾಗೆಯೇ ಹಾಸನದ ಪತ್ರಕರ್ತರಾದ ಕೃ.ನಾ.ಮೂರ್ತಿಯವರುಬಿದ್ದಿದೆ ಬೆಂಕಿಎನ್ನುವ ಹೆಸರಲ್ಲಿ ರೈತರ ಸಮಸ್ಯೆ ಕುರಿತು ನಾಟಕವನ್ನು ರಚಿಸಿದ್ದರು. ..ಸುಬ್ಬರಾಯರೂ ಸಹನೇಗಿಲಯೋಗಿಎನ್ನುವ ನಾಟಕವನ್ನು ಬರೆದಿದ್ದರು. ಕೆ.ವಿ.ಅಕ್ಷರರವರೂ ಸಹ ರೈತರ ಕುರಿತು ಒಂದು ನಾಟಕ ರಚಿಸಿದ್ದಾರೆ.  ವೃತ್ತಿ ನಾಟಕ ಕಂಪನಿಗಳೂ ಸಹ ಕೆಲವೊಮ್ಮೆ ತಮ್ಮ ನಾಟಕಗಳಲ್ಲಿ ರೈತರ ಬಡತನ ಹಾಗೂ ಶ್ರೀಮಂತರ ಅಟ್ಟಹಾಸಗಳ ನಡುವಿನ ಸಂಘರ್ಷ ಕುರಿತು ತಮ್ಮ ಕೆಲವು ನಾಟಕಗಳಲ್ಲಿ ತೋರಿಸಿವೆಯಾದರೂ ಅವು ಸೀಮಿತವಾಗಿವೆ.

ಪ್ರಸಾದ್ ರಕ್ಷಿದಿರವರ ನಿರ್ದೇಶನದ 'ಧನ್ವಂತರಿ ಚಿಕಿತ್ಸೆ' ನಾಟಕದ ದೃಶ್ಯ

ರೈತರ ಸಮಸ್ಯೆಗಳಿಗೆ ರಂಗನಾಟಕಗಳಿಗಿಂತಲೂ ಹೆಚ್ಚು ಸ್ಪಂದಿಸಿದ್ದು ಬೀದಿನಾಟಕಗಳು... ಇಪ್ಟಾ, ಸಮುದಾಯ ಹಾಗೂ ಅವಿಷ್ಕಾರದಂತಹ ಸೈದ್ದಾಂತಿಕ ಹಿನ್ನಲೆಯುಳ್ಳ ಸಂಘಟನೆಗಳು ರೈತರ ಸಮಸ್ಯೆ ಮತ್ತು ಸಾವಿನ ಹಿನ್ನೆಲೆಯಲ್ಲಿ ಹಲವಾರು ಬೀದಿನಾಟಕಗಳನ್ನು ಊರು ಕೇರಿ ಬೀದಿಗಳಲ್ಲಿ ಪ್ರದರ್ಶಿಸಿದ್ದಾರೆ. ಡಾ.ಸಿದ್ದನಗೌಡ ಪಾಟೀಲರ ಪರಿಹಾರ ಬೀದಿನಾಟಕ ರೈತರ ಆತ್ಮಹತ್ಯೆಗೆ ಕಾರಣಗಳನ್ನು ಹಾಗೂ ರೈತರಿಗೆ ಕೊಡುವ ಪರಿಹಾರವನ್ನು ಆಳುವ ವರ್ಗದ ದಲ್ಲಾಳಿಗಳೇ ಕಬಳಿಸುವುದನ್ನು ಪರಿಣಾಮಕಾರಿಯಾಗಿ ತೋರಿಸುತ್ತದೆ. ಇಪ್ಟಾ ಸಾಂಸ್ಕೃತಿಕ ಸಂಘಟನೆ ಬೀದಿನಾಟಕವನ್ನು ರಾಜ್ಯಾದ್ಯಂತ ಪ್ರದರ್ಶಿಸಿದೆ. ಇದಲ್ಲದೇ ಕಾಲಕಾಲಕ್ಕೆ ರೈತರ ಬದುಕು ಹಾಗೂ ಬವಣೆಗೆ ಇಪ್ಟಾ ತನ್ನ ಬೀದಿ ನಾಟಕ ಹಾಗೂ ಹಾಡುಗಳ ಮೂಲಕ ಸ್ಪಂದಿಸುತ್ತಲೇ ಬಂದಿದೆ. ಅದೇ ರೀತಿ ಸಮುದಾಯ ಸಂಘಟನೆ ಸಹ ಕುವೆಂಪುರವರ ಧನ್ವಂತರಿ ಚಿಕಿತ್ಸೆ ಕಥೆಯನ್ನಾಧರಿಸಿದ ಬೀದಿನಾಟಕವನ್ನು 2012 ರಲ್ಲಿ ಶಶಿಧರ್ ಭಾರೀಘಾಟರವರ ನಿರ್ದೇಶನದಲ್ಲಿ ಪ್ರದರ್ಶಿಸಿತು. ಹಾಗೆಯೇ "ಅವಿಷ್ಕಾರಸಾಂಸ್ಕೃತಿಕ ಸಂಘಟನೆಯು ಸಹ ರೈತರ ಆತ್ಮಹತ್ಯೆಗೆ ತೀವ್ರವಾಗಿ ಸ್ಪಂದಿಸಿತು. 2000 ನೇ ಇಸ್ವಿಯಲ್ಲಿ ರಾಜ್ಯದಲ್ಲಿ ಮೊದಲ ಬಾರಿ ಬಳ್ಳಾರಿಯ ಕುಡಿತನಿ ಗ್ರಾಮದಲ್ಲಿ ಸುಬ್ಬಣ್ಣ ಎನ್ನುವ ರೈತ ತೊಗರಿಬೆಳೆ ಬೆಳೆದು ನಷ್ಟಹೊಂದಿ ಆತ್ಮಹತ್ಯೆ ಮಾಡಿಕೊಂಡಾಗ iಣ್ಣಾದ ಮಣ್ಣಿನ ಮಕ್ಕಳು ಎನ್ನುವ ಬೀದಿ ನಾಟಕವನ್ನು ಗುಲಬರ್ಗಾ ಹಾಗೂ ಯಾದಗಿರಿ ಜಾತಾ ಮೂಲಕ ಎಪ್ಪತ್ತಕ್ಕೂ ಹಳ್ಳಿಗಳಲ್ಲಿ ಅವಿಷ್ಕಾರದ ಕಲಾವಿದರು ಪ್ರದರ್ಶಿಸಿ ಜನಜಾಗ್ರತಿಯನ್ನುಂಟುಮಾಡಿದರು. ಬೀದಿನಾಟಕವನ್ನು ಡಾ.ಬಿ.ಆರ್.ಮಂಜುನಾಥರವರು ರಚಿಸಿದ್ದು ಪ್ರಕಾಶ್ ಅರಸುರವರು ನಿರ್ದೇಶಿಸಿದ್ದರು. ನಂತರವೂ ಸಹ iಣ್ಣಾದ ಮಣ್ಣಿನ ಮಕ್ಕಳು ನಾಟಕವನ್ನುಅವಿಷ್ಕಾರಸಂಘಟನೆಯು ಸಾಂದರ್ಭಿಕವಾಗಿ ಪ್ರದರ್ಶಿಸುತ್ತಲೇ ಬಂದಿದೆ.   2010ರಲ್ಲಿ .ಎಸ್.ಮೂರ್ತಿಯವರು ಬರೆದ ಕಲಬೆರಕೆ ಎನ್ನುವ ಬೀದಿನಾಟಕವನ್ನು ಅಭಿನಯ ತರಂಗಕ್ಕೆ ಗೌರಿ ದತ್ತುರವರು ನಿರ್ದೇಶಿಸಿದ್ದರು. ನಕಲಿ ಬೀಜಗಳು ಹಾಗೂ ಸಾಲದ ಭಾರದಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ದುರಂತಗಾತೆಯನ್ನು ಕಲಬೆರಕೆಯಲ್ಲಿ ತೋರಿಸಲಾಗಿದೆ. ಬೆಂಗಳೂರಿನ ಸುತ್ತಮುತ್ತಲ ಹಲವಾರು ಹಳ್ಳಿಗಳಲ್ಲಿ ಬೀದಿನಾಟಕವನ್ನು ಪ್ರದರ್ಶಿಸಲಾಗಿತ್ತು.

ಅವಿಷ್ಕಾರ ಸಾಂಸ್ಕೃತಿಕ ಸಂಘಟನೆಯ ಬೀದಿನಾಟಕ 'ಮಣ್ಣಾದ ಮಣ್ಣಿನ ಮಕ್ಕಳು'

 ಆದರೂ... ಸಾಲದು..., ರೈತಾಪಿ ಜನರು ಎಲ್ಲರಿಂದಲೂ ನಿರ್ಲಕ್ಷಿತರಾಗುತ್ತಲೇ ಬಂದಿದ್ದಾರೆ. ಸಮಾಜದ ಬಹುತೇಕ ಸಮಸ್ಯೆಗಳಿಗೆ ಸ್ಪಂದಿಸುವ ರಂಗಭೂಮಿ ಸಹ ರೈತರ ದುರಂತ ಬದುಕಿನ ಕಥೆಗಳನ್ನು ರಂಗಮಾಧ್ಯಮದ ಮೂಲಕ ತೋರಿಸುತ್ತಾ ಇನ್ನೂ ಹೆಚ್ಚು ಹೆಚ್ಚು ನಾಟಕಗಳನ್ನು ಮಾಡಬೇಕಿದೆ. ಒಂದು ಕಡೆ ರೈತರನ್ನು ಎಚ್ಚರಿಸುವ ಹಾಗೂ ಇನ್ನೊಂದು ಕಡೆ ರೈತವಿರೋಧಿ ವ್ಯವಸ್ಥೆಯ ಹುನ್ನಾರಗಳನ್ನು ಬೆತ್ತಲೆಗೊಳಿಸುವ ಕೆಲಸವನ್ನು ರಂಗನಾಟಕಗಳು ಹಾಗೂ ಬೀದಿನಾಟಕಗಳು ಮಾಡಬೇಕಿವೆ. ನೀನಾಸಂ, ಶಿವಸಂಚಾರ, ಜಮುರಾ, ಜನುಮನದಾಟ, ಆಟಮಾಟ ದಂತಹ ಹಲವಾರು ರಂಗರೆಪರ್ಟರಿಗಳು ಪ್ರತಿ ವರ್ಷ ಒಂದಾದರೂ ರೈತಪರ ನಾಟಕವನ್ನು ನಿರ್ಮಿಸಿ ಪ್ರದರ್ಶಿಸಿ ರಂಗಮಾಧ್ಯಮದ ಮೂಲಕ ರೈತಾಪಿ ಜನರಲ್ಲಿ ಧೈರ್ಯವನ್ನು ತುಂಬಬೇಕಾಗಿದೆ.. ರೈತವಿರೋಧಿ ಶಕ್ತಿಗಳ ಕುತಂತ್ರವನ್ನು ಬಯಲುಗೊಳಿಸಿಬೇಕಿದೆಹಾಗೆಯೇ ಹಾದರ ಹಾಗೂ ಕಾಮವನ್ನು ವಿವಿಧ ಆಯಾಮಗಳಲ್ಲಿ ವ್ಯಾಖ್ಯಾನಿಸಿ ನಾಟಕ ಬರೆದು ಪ್ರಸಿದ್ದಿ ಪದವಿ ಪ್ರಶಸ್ತಿ ಪಡೆದ ಕೆಲವಾರು ಪ್ರಸಿದ್ಧ ನಾಟಕಕಾರರು ಅನ್ನದಾತನ ಅವಸಾನದ ಕಾರಣ ಪರಿಣಾಮಗಳ ಕುರಿತು ಆಲೋಚಿಸಿ ನಾಟಕ ರಚಿಸಬೇಕಾಗಿದೆ.. ರೈತನ ಸಮಸ್ಯೆ ಹಾಗೂ ಸಾವುಗಳಿಗೆ ನಾಟಕಕಾರರು, ರಂಗನಿರ್ದೇಶಕರು, ರಂಗ ಸಂಘಟಕರು ಹಾಗೂ ರಂಗತಂಡಗಳು ನಾಟಕಗಳ ಮೂಲಕ ತೀವ್ರವಾಗಿ ಸ್ಪಂದಿಸಬೇಕಾಗಿದೆ. ಹಾಗೂ ಅನ್ನದಾತ ಬೆಳೆದ ಅನ್ನವನ್ನು ತಿಂದುಂಡು ಬೆಳೆದ ಎಲ್ಲಾ ರಂಗಕರ್ಮಿಗಳು ರೈತನ ಅನ್ನದ ಋಣವನ್ನು ರಂಗಮಾಧ್ಯಮದ ಮೂಲಕ ತೀರಿಸುವ ಪ್ರಯತ್ನವನ್ನು ಮಾಡಬೇಕಿದೆ. ಯಾಕೆಂದರೆ ಎಲ್ಲಾ ಮಾಧ್ಯಮಗಳಿಗಿಂತಲೂ ರಂಗಮಾಧ್ಯಮ ಎನ್ನುವುದು ನೋಡುಗರ ಮೇಲೆ ನೇರ ಹಾಗೂ ಗಾಢವಾದ ಪರಿಣಾಮವನ್ನು ಬೀರುವಂತಹುದಾಗಿದೆ. ರಂಗಮಾಧ್ಯಮವು ರೈತರ ನೋವು ದುರಂತಗಳಿಗೆ ಸ್ಪಂದಿಸದೇ ಹೋದರೆ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಂತಾಗುತ್ತದೆ. ನಿಟ್ಟಿನಲ್ಲಿ ಎಲ್ಲಾ ರಂಗತಂಡಗಳು, ರಂಗ ರೆಪರ್ಟರಿಗಳು, ಸಾಂಸ್ಕೃತಿಕ ಸಂಘಟನೆಗಳು, ರಂಗಕರ್ಮಿಗಳು ಆಲೋಚಿಸಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ಕೆಲಸವನ್ನು ಮಾಡುವ ಮೂಲಕ ಋಣಮುಕ್ತರಾಗಬೇಕಿದೆ. ಎಲ್ಲರಿಗೂ ಅನ್ನಕೊಡುವ ಅನ್ನದಾತನ ಬದುಕು ನೆಮ್ಮದಿಯಾಗಿರುವಂತಹ ವ್ಯವಸ್ಥೆಯೊಂದರ ನಿರ್ಮಾಣಕ್ಕೆ ರಂಗಭೂಮಿಯೂ ಒಳಗೊಂಡಂತೆ ಎಲ್ಲರೂ ಅವರವರ ಮಾಧ್ಯಮಗಳ ಮೂಲಕ ಪ್ರಯತ್ನಿಸಬೇಕಿದೆ....

ರೈತರ ಆಕ್ರಂದನಕ್ಕೆ ಕಿವಿಯಾಗುವ ವಿಶ್ವಾಮಿತ್ರರು, ಚಿಕಿತ್ಸೆ ನೀಡುವ ಧನ್ವಂತರಿಗಳು ಬೇಕಾಗಿದ್ದಾರೆ.... ರೈತರ ಸಹಾಯಕ್ಕೆ ಯಾರೂ ಬರದಿದ್ದರೆ ಧನ್ವಂತರಿ ಚಿಕಿತ್ಸೆ ನಾಟಕದ ಕ್ಲೈಮ್ಯಾಕ್ಸಿನಲ್ಲಾದಂತೆ ರೈತರೇ ನರಳುವುದನ್ನು ಬಿಟ್ಟು ಕೈಯಲ್ಲಿ ಉರಿವ ಪಂಜನ್ನು ಹಿಡಿದು ರೈತಾಪಿ ಜನಗಳ ವಿಮೋಚನೆಗೆ ಸಂಘಟಿತರಾಗಿ ಹೋರಾಡಲೇಬೇಕಿದೆ. ರೈತನಿಗೆ ಚಿಕಿತ್ಸೆ ಕೊಡಲು ಬಂದ ಧನ್ವಂತರಿಯೇ ಅಸಹಾಯಕನಾದಾಗ ವಿಶ್ವಾಮಿತ್ರ ರೈತವಿರೋಧಿ ವ್ಯವಸ್ಥೆಯನ್ನೇ ವಿನಾಶಗೊಳಿಸಿ ಹೊಸ ವ್ಯವಸ್ಥೆ ರೂಪಿಸಲು ಪ್ರಯತ್ನಿಸುತ್ತಾನೆ. ಈಗ ರೈತಾಪಿ ಜನರೇ ವಿಶ್ವಾಮಿತ್ರರಾಗಬೇಕಿದೆ. ಅಸಮಾನ ವ್ಯವಸ್ಥೆಯನ್ನು ತಮ್ಮ ಪ್ರತಿಭಟನಾಶಕ್ತಿಯಿಂದ ಬದಲಾಯಿಸಬೇಕಿದೆ. ಇದು ಬಿಟ್ಟು ಬೇರೆ ದಾರಿಯಿಲ್ಲ. ಅಲ್ಲಿವರೆಗೂ ಸಾವಲ್ಲಿ ಪರಿಹಾರ ಕಂಡುಕೊಳ್ಳುವ ಬದಲು ತನ್ನ ಸ್ಥಿತಿಗೆ ಕಾರಣವಾದವರ ವಿರುದ್ಧ ಪ್ರತಿಭಟಿಸುವ ದಾರಿ ಕಂಡುಕೊಳ್ಳಬೇಕಿದೆ. ಪ್ರಾಣಕ್ಕಿಂತ ಮಾನ ಮುಖ್ಯ ಎಂದು ಪ್ರಾಣಕಳೆದುಕೊಳ್ಳಬಯಸುವ ರೈತರು ಎಲ್ಲದಕ್ಕಿಂತಲೂ ಸ್ವಾಭಿಮಾನದ ಬದುಕು ಮುಖ್ಯ ಎಂದುಕೊಂಡು ಅದಕ್ಕಾಗಿ ಸಂಘಟಿತ ಹೋರಾಟಕ್ಕಿಳಿಯುವ ಮೂಲಕ ತನ್ನ ಹಕ್ಕನ್ನು ಪಡೆದುಕೊಳ್ಳುವುದು ಆದ್ಯತೆಯಾಗಬೇಕಿದೆ. ಇದಕ್ಕೆ ಪೂರಕವಾಗಿ ರಂಗಭೂಮಿ ನಾಟಕಗಳ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ......   

                              -ಶಶಿಕಾಂತ ಯಡಹಳ್ಳಿ  

ಬಿ.ಸುರೇಶ್ ರವರ ನಿರ್ದೇಶನದ 'ಧನ್ವಂತರಿ ಚಿಕಿತ್ಸೆ' ನಾಟಕದ ದೃಶ್ಯ


ಡಾ.ಚಂದ್ರಶೇಖರ ಕಂಬಾರರು ಚಿತ್ರಾ ಕಲಾವಿದರಿಗೆ ನಿರ್ದೇಶಿಸಿದ ಧನ್ವಂತರಿ ಚಿಕಿತ್ಸೆ' ನಾಟಕದ ದೃಶ್ಯ 

ಅವಿಷ್ಕಾರ' ಅಭಿನಯಿಸಿದ ಬೀದಿನಾಟಕ 'ಮಣ್ಣಾದ ಮಣ್ಣಿನ ಮಕ್ಕಳು' ನಾಟಕದ ದೃಶ್ಯ

 
                



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ